Wednesday, 29 July 2015

ಶಿಕ್ಷಕರ ಅರ್ಹತಾ ಪರೀಕ್ಷೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ) : ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಹಾಜರಾಗುವ ಅಭ್ಯರ್ಥಿಗಳಿಗೆ ವಿಷಯ ತಜ್ಞರಿಂದ ಆಯಾ ತಾಲೂಕು ಮಟ್ಟದ ಬಿ.ಆರ್.ಸಿ. ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
     ತರಬೇತಿ ಕಾರ್ಯಕ್ರಮವು ಆಗಸ್ಟ್ 17 ರಿಂದ ಆಯಾ ತಾಲೂಕು ಮಟ್ಟದ ಬಿ.ಆರ್.ಸಿ. ಕೇಂದ್ರದಲ್ಲಿ ಪ್ರಾರಂಭವಾಗಲಿದೆ.  ಶಿಕ್ಷಕರ ಅರ್ಹತಾ ಪರೀಕ್ಷೆ ಸೆಪ್ಟಂಬರ್ 27 ರಂದು ಜರುಗಲಿದ್ದು, ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಆಯಾ ತಾಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಸ್ಟ್ 12 ರ ಒಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸುವಾಗಿ ಪಾವತಿಸಬೇಕಾದ ಶುಲ್ಕ ಮಹಿಳೆ, ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 150, ಇತರರಿಗೆ ರೂ. 300.   ಶುಲ್ಕವನ್ನು ಡಿ.ಡಿ. ಮೂಲಕ ಕಾರ್ಯದರ್ಶಿ, ಹೆಚ್‍ಕೆಆರ್‍ಡಿಬಿ ಕಲಬುರಗಿ ಇವರ ಹೆಸರಿನಲ್ಲಿ ಪಡೆದು, ಅರ್ಜಿಯೊಂದಿಗೆ ಸಲ್ಲಿಸಬೇಕು.  ಕಲಂ 371(ಜೆ) ಅನ್ವಯದ ದೃಢೀಕರಣ ಪತ್ರವನ್ನು ಬಿ.ಆರ್.ಸಿ. ಇವರಿಗೆ ನೀಡಬೇಕು.  ತಕ್ಷಣ ಲಭ್ಯವಿಲ್ಲದಿದ್ದಲ್ಲಿ, ಒಂದು ವಾರದ ಕಾಲಾವಕಾಶ ನೀಡಲಾಗುವುದು.  ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು.  ತರಬೇತಿ ಪ್ರವೇಶಕ್ಕೆ ಅರ್ಹರಾದವರ ಹೆಸರುಗಳನ್ನು ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಆಗಸ್ಟ್ 14 ರಂದು ಪ್ರಕಟಿಸಲಾಗುವುದು.  ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಆಯಾ ಬಿಆರ್‍ಸಿ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment