Friday, 31 July 2015

ಜಿಲ್ಲೆಯಲ್ಲಿ ಬರ ಪರಿಸ್ಥಿತಿ : ಸಾಲ ವಸೂಲಾತಿ ಕೈಗೊಳ್ಳದಂತೆ ಡಿ.ಸಿ. ಸೂಚನೆ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ಉಂಟಾಗುವ ಸಾದ್ಯತೆಗಳಿವೆ.  ಬೆಳೆ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ಪಡೆದಿರುವ ಸಾಲವನ್ನು ಸೆಪ್ಟಂಬರ್ ಅಂತ್ಯದವರೆಗೆ ವಸೂಲಿ ಮಾಡುವುದಾಗಲಿ, ಆಸ್ತಿ ಜಪ್ತಿ ಮಾಡುವುದಾಗಲಿ ಅಥವಾ ಮುಟ್ಟುಗೋಲು ಹಾಕಿಕೊಳ್ಳುವುದಾಗಲಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು, ಮಳೆ, ಬೆಳೆ ಹಾಗೂ ಸ್ಥಿತಿ-ಗತಿಗಳ ಬಗ್ಗೆ ಪರಾಮರ್ಶೆ ನಡೆಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಕಳೆದ ಮೇ ಹಾಗೂ ಜುಲೈ ತಿಂಗಳಿನಲ್ಲಿ ಒಟ್ಟು 182. 40 ಮಿ.ಮೀ. ವಾಡಿಕೆ ಮಳೆಯ ಬದಲಿಗೆ ಕೇವಲ 106. 70 ಮಿ.ಮೀ. ಮಾತ್ರ ಮಳೆಯಾಗಿದೆ.  ಇದರಿಂದಾಗಿ ಶೇ. 42 ರಷ್ಟು ಮಳೆಯ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ.  ರೈತರು ಕೃಷಿ ಚಟುವಟಿಕೆ ಕಾರ್ಯಗಳಿಗೆ ಹಾಗೂ ಬೆಳೆ ಸಾಲ ಪಡೆದಿರುವುದನ್ನು ಸೆಪ್ಟಂಬರ್ ಕೊನೆಯ ವಾರದವರೆಗೂ ವಸೂಲಿ ಮಾಡಬಾರದು.  ಅಲ್ಲದೆ ಬ್ಯಾಂಕ್‍ಗಳು, ಅಂತಹವರ ಆಸ್ತಿ ಜಪ್ತಿ ಮಾಡುವುದಾಗಲಿ ಅಥವಾ ಮುಟ್ಟು ಹಾಕಿಕೊಳ್ಳುವುದಾಗಲಿ ಮಾಡುವಂತಿಲ್ಲ.  ಈ ಕುರಿತು ಜಿಲ್ಲೆಯ ಎಲ್ಲ ಬ್ಯಾಂಕ್‍ಗಳಿಗೆ ಕೂಡಲೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿರುವುದರಿಂದ, ಗ್ರಾಮೀಣ ಪ್ರದೇಶಗಳ ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಅವಶ್ಯಕತೆಗೆ ತಕ್ಕಂತೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡುವುದು, ಅಥವಾ ಈಗಾಗಲೆ ಇರುವಂತಹ ತೊಟ್ಟಿಗಳು ಕೆಟ್ಟಿದ್ದಲ್ಲಿ, ಅಂತಹವುಗಳನ್ನು ದುರಸ್ತಿಗೊಳಿಸಿ, ಸುಸ್ಥಿತಿಯಲ್ಲಿ ಇಟ್ಟು, ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.  ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಮುಂಗಾರು ಮಳೆಯ ಕೊರತೆ ಉಂಟಾಗಿರುವುದರಿಂದ, ಜಿಲ್ಲೆಯಲ್ಲಿನ ಮೇವು ಲಭ್ಯತೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಂಭವನೀಯ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಪಶುಸಂಗೊಪನಾ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರನಾಯಕ್ ಅವರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ, ಜಂಟಿಕೃಷಿ ನಿರ್ದೇಶಕ ರಾಮದಾಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಎಲ್ಲ ತಾಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಜಲ ಸಂಪನ್ಮೂಲ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ) : ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಆಗಸ್ಟ್ 03 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ 11 ಗಂಟೆಗೆ ಯಲಬುರ್ಗಾ ತಾಲೂಕು ವೀರಾಪುರ ಗ್ರಾಮಕ್ಕೆ ಆಗಮಿಸಿ, ಹಿರೇಹಳ್ಳ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ವೀರಾಪುರ, ಮುತ್ತಾಳ, ಮತ್ತು ಶಿರೂರು ಗ್ರಾಮಗಳ ಪುನರ್ವಸತಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಜರುಗುವ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು.  ಸಚಿವರು ಅದೇ ದಿನ ಮಧ್ಯಾಹ್ನ 02 ಗಂಟೆಗೆ ವಿಜಯಪುರಕ್ಕೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಆಡಳಿತಾಧಿಕಾರಿಗಳ ನೇಮಕ

ಕೊಪ್ಪಳ ಜು. 31 (ಕರ್ನಾಟಕ ವಾರ್ತೆ) : ನೂತನವಾಗಿ ರಚನೆಯಾಗಿರುವ ಗಂಗಾವತಿ ತಾಲೂಕಿನ ಕಾರಟಗಿ ಪುರಸಭೆಗೆ ಆಡಳಿತಾಧಿಕಾರಿಯನ್ನಾಗಿ ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಹಾಗೂ ಕನಕಗಿರಿ ಪಟ್ಟಣ ಪಂಚಾಯತಿಗೆ ಆಡಳಿತಾಧಿಕಾರಿಯಾಗಿ ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆವರು ಆದೇಶ ಹೊರಡಿಸಿದ್ದಾರೆ.
     ಗ್ರಾಮ ಪಂಚಾಯತಿಯಾಗಿದ್ದ ಕಾರಟಗಿಯನ್ನು ಇತ್ತೀಚೆಗೆ ಸರ್ಕಾರ ಪುರಸಭೆಯನ್ನಾಗಿ ಹಾಗೂ ಕನಕಗಿರಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಿದೆ.  ನೂತನವಾಗಿ ರಚನೆಯಾಗಿರುವ ಕಾರಟಗಿ ಪುರಸಭೆಗೆ ಸರ್ಕಾರದ ಸೂಚನೆಯಂತೆ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರನ್ನು ಹಾಗೂ ಕನಕಗಿರಿ ಪಟ್ಟಣ ಪಂಚಾಯತಿಗೆ ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಅವರನ್ನು ಜು. 31 ರಿಂದ ಅನ್ವಯವಾಗುವಂತೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೇಮಕ ಮಾಡಿದ್ದಾರೆ.

ಆಗಸ್ಟ್.01 ರಂದು ವಿಷಯ ವಿಶ್ಲೇಷಣೆ ಕಾರ್ಯಾಗಾರ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ) : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2014-15ನೇ ಸಾಲಿನ ಬ್ಲಾಕ್‍ವಾರು ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆ ಕಾರ್ಯಾಗಾರವನ್ನು ಆಗಸ್ಟ್.01 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
     ವಿಶ್ಲೇಷಣೆ ಕಾರ್ಯಾಗಾರವನ್ನು ಆಗಸ್ಟ್.01 ರಂದು ಬೆಳಿಗ್ಗೆ 09 ಗಂಟೆಗೆ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಏರ್ಪಡಿಸಲಾಗಿದ್ದು,   ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೇ ಕಾರ್ಯಾಗಾರಕ್ಕೆ ಬರುವಾಗ ತಮ್ಮ ಶಾಲೆಯ 2015 ರ ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸಲು ಸಿದ್ಧಪಡಿಸಲಾದ ಕ್ರಿಯಾ ಯೋಜನೆಯನ್ನು ತಪ್ಪದೇ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಣಕನಾಳ ಗ್ರಾಮದಲ್ಲಿ ರೋಜಗಾರ ದಿವಸ್ ಆಚರಣೆ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಣಕನಾಳ ಗ್ರಾಮದಲ್ಲಿ ಜು.30 ರಂದು ರೋಜಗಾರ್ ದಿವಸವನ್ನು ಆಚರಿಸಲಾಯಿತು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಗಾವತಿ ತಾಲೂಕಾ ಐಇಸಿ ಸಂಯೋಜಕ ಕೃಷ್ಣ ನಾಯಕ ಮಾತನಾಡಿ, ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 100 ದಿನಗಳ ಉದ್ಯೋಗ ನೀಡುವ ನಿಟ್ಟಿನಲ್ಲಿ ಜನರಿಂದ ಕೆಲಸಕ್ಕೆ ಬೇಡಿಕೆ ಪಡೆಯುವುದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ರೋಜಗಾರ್ ದಿವಸದ ಮುಖ್ಯ ಉದ್ದೇಶವಾಗಿದೆ. ಅಲ್ಲದೇ, ಯೋಜನೆಯ ಸೌಲಭ್ಯ ಅವಕಾಶ ಮತ್ತು ಅನುಷ್ಠಾನ ಕಾರ್ಯವಿಧಾನಗಳ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಅಗತ್ಯತೆ ಇರುವ ಕಾರಣ ತಿಂಗಳಲ್ಲಿ ಒಂದು ಗುರುವಾರದಂದು ರೋಜಗಾರ ದಿವಸವನ್ನು ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದಲ್ಲಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
     ಸುಳೇಕಲ್ ಗ್ರಾಮ ಪಂಚಾಯತ್‍ನ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 160 ಕೂಲಿ ಕಾರ್ಮಿಕರಿಂದ ನಮೂನೆ-06 ರ ಮೂಲಕ ಬೇಡಿಕೆಗಳನ್ನು ಪಡೆದು, ಅವರಿಗೆ ಅರಣ್ಯೀಕರಣ ಕೆಲಸವನ್ನು ನೀಡಲಾಯಿತು. ಅಲ್ಲದೇ, ಉದ್ಯೋಗ ಚೀಟಿ ಹೊಂದಿರದ ಕುಟುಂಬದವರು ನೋಂದಣಿಗಾಗಿ ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ವಂಕಲಕುಂಟಿ, ಹನುಮಂತಪ್ಪ ಗುಬ್ಬಿ, ಸವಿತಾ ಮಲ್ಲಯ್ಯಸ್ವಾಮಿ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾಯಕಬಂಧುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. 

ಯುವ ಬರಹಗಾರರ ಚೊಚ್ಚಲ ಕೃತಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ, ಜು.31 (ಕರ್ನಾಟಕ ವಾರ್ತೆ) : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2014ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ  ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿಟಿಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ  ನೇರವಾಗಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ, ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ ಅಥವಾ ಸಂಗತಿಗಳು ಪ್ರಸ್ತಾಪವಾಗಿರಬಾರದು. ಅರ್ಜಿದಾರರು 18 ರಿಂದ 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ವಯಸ್ಸಿನ ದಾಖಲಾತಿ ಬಗ್ಗೆ ಎಸ್.ಎಸ್.ಎಲ್.ಸಿ. ಅಥವಾ ಅಧಿಕೃತ ಜನ್ಮದಾಖಲಾತಿ ಪ್ರಮಾಣ ಪತ್ರದೊಂದಿಗೆ, ಇದುವರೆಗೂ ಎಲ್ಲಿಯೂ ಚೊಚ್ಚಲ ಕೃತಿ ಪ್ರಕಟವಾಗದೇ ಇರುವ ಬಗ್ಗೆ ಸ್ವಯಂ ದೃಢೀಕರಣ ಪತ್ರದೊಂದಿಗೆ ತಾವು ರಚಿಸಿರುವ ಚೊಚ್ಚಲ ಕೃತಿಯನ್ನು ಬೆರಳಚ್ಚು ಅಥವಾ ಡಿಟಿಪಿ ಮಾಡಿಸಿ ತಮ್ಮ ಸ್ವ-ವಿವರಗಳೊಂದಿಗೆ ಅರ್ಜಿಗಳನ್ನು ಆ.22 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು ದೂರವಾಣಿ ಸಂಖ್ಯೆ: 080-22484516, 080-22017704 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 29 July 2015

ಕೊಪ್ಪಳ : ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳದಲ್ಲಿ ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯುತ್ ಶಿಲ್ಪಿ ವೃತ್ತಿ ತರಬೇತಿಗೆ ಆನ್‍ಲೈನ್ ಪ್ರವೇಶ ಪಡೆದು, ಉಳಿದ ಸ್ಥಾನಗಳಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರದ ಮೇಲೆ ನಡೆಸಲಾಗುತ್ತಿರುವ ಕ್ಯಾಷುವಲ್ ರೌಂಡ್ ಪ್ರವೇಶ ಪ್ರಕ್ರಿಯೆ ಇದಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಿ ಯಾವುದೇ ವೃತ್ತಿಯಲ್ಲಿ ಸ್ಥಾನ ಪಡೆಯದೇ ಇರುವವರು ಸಹ ಪುನಃ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಕೊಪ್ಪಳ ನಗರದ ಈ ಸಂಸ್ಥೆಯಿಂದ  ಪಡೆಯಬಹುದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಜು.30 ಕೊನೆ ದಿನಾಂಕವಾಗಿದೆ.
     ಲಭ್ಯವಿರುವ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಹಂಚಿಕೆ ಸಂಬಂಧವಾಗಿ ಜು.31 ರಂದು ಸಮಾಲೋಚನೆ ನಡೆಸುವುದರಿಂದ ಎಲ್ಲ ಅಭ್ಯರ್ಥಿಗಳು ಅಂದು ಬೆಳಿಗ್ಗೆ 09 ಗಂಟೆಗೆ ಸಂಸ್ಥೆ ಆವರಣದಲ್ಲಿ ಹಾಜರಿರಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರು,  ದೂರವಾಣಿ ಸಂಖ್ಯೆ: 08539-221367 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿವೇತನ : ಸ್ವಯಂ ಘೋಷಿತ ದಾಖಲೆಗಳನ್ನು ಸಲ್ಲಿಸಲು ಸೂಚನೆ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಾಗ  ಸ್ವಯಂ ಘೋಷಿತ ದಾಖಲೆಗಳನ್ನು ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ್ ಸೂಚಿಸಿದ್ದಾರೆ.
     ಇಲಾಖೆಯಿಂದ ನೀಡಲಾಗುವ ಪ್ರಸಕ್ತ ಸಾಲಿನ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು, ಮತ್ತು ಪಾರ್ಸಿ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ತಹಶೀಲ್ದಾರರು ನೀಡುವ ಆದಾಯ ಪ್ರಮಾಣ ಪತ್ರ ಅಥವಾ ಪಡಿತರ ಚೀಟಿಯ ನಕಲು ಪ್ರತಿಯನ್ನು ಸಲ್ಲಿಸುವ ಅಗತ್ಯತೆ ಇಲ್ಲ. ಬದಲಾಗಿ ಸ್ವಯಂ ಘೋಷಿತ ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ. ಅಂದರೆ ಅರ್ಜಿಯೊಂದಿಗೆ ಸ್ವಯಂ ಘೋಷಿತ  ಪ್ರಮಾಣ ಪತ್ರ(ಧಾರ್ಮಿಕ), ಸ್ವಯಂ ದೃಢೀಕೃತ ಹಿಂದಿನ ತರಗತಿಯ ಅಂಕಪಟ್ಟಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಪ್ರತಿಯನ್ನು ಕಛೇರಿಯ ವೆಬ್‍ಸೈಟ್‍ನಿಂದ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ವೆಬ್‍ಸೈಟ್:  www.gokdom.kar.nic.in ನ್ನು ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

‘ಜನ-ಮನ’ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ: ಸಿದ್ಧತೆ ಕೈಗೊಳ್ಳಲು ಆರ್.ಆರ್. ಜನ್ನು ಸೂಚನೆ


ಕೊಪ್ಪಳ ಜು. 29 (ಕರ್ನಾಟಕ ವಾರ್ತೆ): ಸರ್ಕಾರ ಜಾರಿಗೊಳಿಸಿರುವ ಹಲವು ಜನಪರ ಯೋಜನೆಗಳ ಬಗ್ಗೆ ಫಲಾನುಭವಿಗಳ ಅನಿಸಿಕೆ ಅಭಿಪ್ರಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಫಲಾನುಭವಿಗಳೊಂದಿಗೆ ನಡೆಸುವ ‘ಜನ-ಮನ’ ಸಂವಾದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ‘ಜನ-ಮನ’ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ ನಡೆಸುವ ಕಾರ್ಯಕ್ರಮದ ಸಿದ್ಧತೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.     ರಾಜ್ಯದ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ‘ಜನ-ಮನ’ ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.  ಕಾರ್ಯಕ್ರಮದ ದಿನಾಂಕವನ್ನು ಸಚಿವರೊಂದಿಗೆ ಸಮಾಲೋಚಿಸಿ ಶೀಘ್ರ ನಿಗದಿಪಡಿಸಲಾಗುವುದು.  ಪ್ರಸ್ತುತ ಸರ್ಕಾರ ಹಲವಾರು  ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ, ಶಾದಿ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಕೃಷಿ ಭಾಗ್ಯ ಹೀಗೆ ಅನೇಕ ಜನಪರ ಯೋಜನೆಗಳು ಜಾರಿಗೊಂಡಿವೆ.  ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಸಲುವಾಗಿ ಜನ-ಮನ ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ.  ಸಂವಾದ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕೊಪ್ಪಳಕ್ಕೆ ಕರೆತರುವ ಜವಾಬ್ದಾರಿ ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ.  ಅನ್ನಭಾಗ್ಯ- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕ್ಷೀರಭಾಗ್ಯ- ಸಾರ್ವಜನಿಕ ಶಿಕ್ಷಣ ಇಲಾಖೆ, ಋಣಮುಕ್ತ (ಸಾಲಮನ್ನಾ)- ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಡಾ. ಅಂಬೇಡ್ಕರ್ ಪ.ಜಾತಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪ.ವರ್ಗಗಳ ಅಭಿವೃದ್ಧಿ ನಿಗಮ, ಮನಸ್ವಿನಿ-ಮೈತ್ರಿ- ಕಂದಾಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ- ಪಶುಸಂಗೋಪನೆ, ಕೃಷಿಭಾಗ್ಯ- ಕೃಷಿ ಇಲಾಖೆ, ವಸತಿ ಭಾಗ್ಯ- ಜಿಲ್ಲಾ ಪಂಚಾಯತಿ ಇಲಾಖೆಗಳು ಸಂಬಂಧಪಟ್ಟ ಫಲಾನುಭವಿಗಳನ್ನು ಕೊಪ್ಪಳಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು.  ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮುತುವರ್ಜಿ ವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು.  ಆಯಾ ಇಲಾಖಾ ಅಧಿಕಾರಿಗಳಿಗೆ ವಹಿಸಿಕೊಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮಾತನಾಡಿ, ಸಂವಾದ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು.  ಫಲಾನುಭವಿಗಳನ್ನು ಸಂವಾದ ಕಾರ್ಯಕ್ರಮಕ್ಕೆ ಕರೆ ತರುವ ವ್ಯವಸ್ಥೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಜನ-ಮನ ಸಂವಾದ ಕಾರ್ಯಕ್ರಮದ ಕುರಿತು ಸಭೆಗೆ ವಿವರಣೆ ನೀಡಿದರು.  ಸಭೆಯಲ್ಲಿ ಡಿವೈಎಸ್‍ಪಿ ರಾಜೀವ್, ಆಹಾರ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬೂ, ಜಂಟಿಕೃಷಿ ನಿರ್ದೇಶಕ ರಾಮದಾಸ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಭಾಸ್ಕರನಾಯಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ ಸೇರಿದಂತೆ ಎಲ್ಲಾ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ- ಡಾ. ಸುರೇಶ್ ಇಟ್ನಾಳ್

ಕೊಪ್ಪಳ ಜು. 29 (ಕವಾ): ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಬುಧವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.
     ಬರುವ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು.  ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಧ್ವಜಾರೋಹಣ ನೆರವೇರಿಸುವರು.  ಶಾಲಾ ಮಕ್ಕಳು, ಎನ್.ಸಿ.ಸಿ., ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಆಕರ್ಷಕ ಪಥಸಂಚಲನ, ಅಲ್ಲದೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕಾರ್ಯಕ್ರಮಗಳು ನೆರವೇರಲಿವೆ. ಅಂದು ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಗರದ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಲಾಗುವುದು ಎಂದರು. 
     ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಬಾರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರ ಸಿದ್ಧಪಡಿಸಬೇಕು.  ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ಸೇರಿದಂತೆ ಎಲ್ಲ ಅಧಿಕಾರಿ, ನೌಕರರು ತಪ್ಪದೆ ಭಾಗವಹಿಸಬೇಕು.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಪ್ರಮುಖ ಬೀದಿ, ಸರ್ಕಾರದ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಂಡು ಹಬ್ಬದ ವಾತಾವರಣ ನಿರ್ಮಿಸುವಂತಾಗಬೇಕು.  ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳಿಗೆ ಈ ಬಾರಿ ಬೆಳಿಗ್ಗೆಯೇ ಆಯಾ ಶಾಲಾ ಮುಖ್ಯಸ್ಥರು ತಪ್ಪದೆ ಸಿಹಿ ತಿಂಡಿಯ ಜೊತೆಗೆ ಹಾಲು ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಮುಖ್ಯಮಂತ್ರಿಗಳಿಂದ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು.  ಆಯಾ ಇಲಾಖೆಗಳಿಗೆ ವಹಿಸಿಕೊಟ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ  ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು.  ನಗರದ ಎಲ್ಲ ಖಾಸಗಿ ಶಾಲೆಯ ಮಕ್ಕಳು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು.  ಇದಕ್ಕಾಗಿ ನಗರ ಸಾರಿಗೆ ಬಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರಾದ ಶಿವಾನಂದ ಹೊದ್ಲೂರ್ ಮತ್ತು ನಾಗರಾಜ ಬಳ್ಳಾರಿ ಅವರು ಮನವಿ ಮಾಡಿಕೊಂಡರು.
      ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲು ಅನುಕೂಲವಾಗುವಂತೆ ಸಹಾಯಕ ಆಯುಕ್ತ ಮಂಜುನಾಥ್ ಅಧ್ಯಕ್ಷತೆಯಲ್ಲಿ ವೇದಿಕೆ ಸಮಿತಿ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಸಮಿತಿ,   ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನೇತೃತ್ವದ ಸ್ತಬ್ಧಚಿತ್ರ ಸಮಿತಿ ರಚಿಸಲಾಯಿತು.  ಪಥ ಸಂಚಲನದಲ್ಲಿ ಶಿಸ್ತುಬದ್ಧ ಕವಾಯತು ನಡೆಸಲು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು   ಸಭೆಯಲ್ಲಿ ನಿರ್ಧರಿಸಲಾಯಿತು. 
     ಸಭೆಯಲ್ಲಿ ಡಿವೈಎಸ್‍ಪಿ ರಾಜೀವ್, ಜಿಲ್ಲಾ ನೊಂದಣಾಧಿಕಾರಿ ಅಶೋಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಶಿಕ್ಷಕರ ಅರ್ಹತಾ ಪರೀಕ್ಷೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ) : ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಹಾಜರಾಗುವ ಅಭ್ಯರ್ಥಿಗಳಿಗೆ ವಿಷಯ ತಜ್ಞರಿಂದ ಆಯಾ ತಾಲೂಕು ಮಟ್ಟದ ಬಿ.ಆರ್.ಸಿ. ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
     ತರಬೇತಿ ಕಾರ್ಯಕ್ರಮವು ಆಗಸ್ಟ್ 17 ರಿಂದ ಆಯಾ ತಾಲೂಕು ಮಟ್ಟದ ಬಿ.ಆರ್.ಸಿ. ಕೇಂದ್ರದಲ್ಲಿ ಪ್ರಾರಂಭವಾಗಲಿದೆ.  ಶಿಕ್ಷಕರ ಅರ್ಹತಾ ಪರೀಕ್ಷೆ ಸೆಪ್ಟಂಬರ್ 27 ರಂದು ಜರುಗಲಿದ್ದು, ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಆಯಾ ತಾಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಸ್ಟ್ 12 ರ ಒಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸುವಾಗಿ ಪಾವತಿಸಬೇಕಾದ ಶುಲ್ಕ ಮಹಿಳೆ, ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 150, ಇತರರಿಗೆ ರೂ. 300.   ಶುಲ್ಕವನ್ನು ಡಿ.ಡಿ. ಮೂಲಕ ಕಾರ್ಯದರ್ಶಿ, ಹೆಚ್‍ಕೆಆರ್‍ಡಿಬಿ ಕಲಬುರಗಿ ಇವರ ಹೆಸರಿನಲ್ಲಿ ಪಡೆದು, ಅರ್ಜಿಯೊಂದಿಗೆ ಸಲ್ಲಿಸಬೇಕು.  ಕಲಂ 371(ಜೆ) ಅನ್ವಯದ ದೃಢೀಕರಣ ಪತ್ರವನ್ನು ಬಿ.ಆರ್.ಸಿ. ಇವರಿಗೆ ನೀಡಬೇಕು.  ತಕ್ಷಣ ಲಭ್ಯವಿಲ್ಲದಿದ್ದಲ್ಲಿ, ಒಂದು ವಾರದ ಕಾಲಾವಕಾಶ ನೀಡಲಾಗುವುದು.  ಪ.ಜಾತಿ, ಪ.ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು.  ತರಬೇತಿ ಪ್ರವೇಶಕ್ಕೆ ಅರ್ಹರಾದವರ ಹೆಸರುಗಳನ್ನು ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಆಗಸ್ಟ್ 14 ರಂದು ಪ್ರಕಟಿಸಲಾಗುವುದು.  ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಆಯಾ ಬಿಆರ್‍ಸಿ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಖಾಲಿ ಇರುವ 04 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 31 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
     ಗಂಗಾವತಿ ನಗರದ ವಕೀಲ್ ಗೇಟ್, ಅಗಡಿ ಸಂಗಣ್ಣ ಕ್ಯಾಂಪ್, ಇಲಾಯಿ ಕಾಲೋನಿ, 11 ನೇ ವಾರ್ಡ್, 12 ನೇ ವಾರ್ಡ್, 06ನೇ ವಾರ್ಡ್, 3ನೇ ವಾರ್ಡ್, 27ನೇ ವಾರ್ಡ್, 28ನೇ ವಾರ್ಡ್(2ನೇ ಕೇಂದ್ರ), 28ನೇ ವಾರ್ಡ್(05ನೇ ಕೇಂದ್ರ), ಬಸಾಪಟ್ಟಣ ವಲಯದ ಬಸಾಪಟ್ಟಣ 5ನೇ ವಾರ್ಡ್, ದಾಸನಾಳ, ಹೊಸಬೆಣಕಲ್, ಈಳಿಗನೂರು, ಕಕ್ಕರಗೋಳ, ಬೆನ್ನೂರು(3ನೇ ಕೇಂದ್ರ), ದೇವಿ ನಗರ, ಹೊಸಳ್ಳಿ, ಹೊಸ ಅಯೋಧ್ಯ(3ನೇ ಕೇಂದ್ರ), ಹೊಸ ಅಯೋಧ್ಯ (2ನೇ ಕೇಂದ್ರ), ಮರಕುಂಬಿ, ಕೇಸರಹಟ್ಟಿ, ತಾಂಬ್ರಪಲ್ಲಿ ಕ್ಯಾಂಪ್, ಮುಸ್ಟೂರು-3ನೇ ಕೇಂದ್ರ, ಹೆಬ್ಬಾಳ ಕ್ಯಾಂಪ್, ವಡ್ರಟ್ಟಿ ಕ್ಯಾಂಪ್-1ನೇ ಕೇಂದ್ರ, ಸಾಣಾಪುರ-01 ನೇ ಮತ್ತು 02 ನೇ ಕೇಂದ್ರ, ಹೇರೂರು, ವಡ್ರಟ್ಟಿ ಕ್ಯಾಂಪ್-2ನೇ ಕೇಂದ್ರದಲ್ಲಿ ಖಾಲಿ ಇರುವ ಒಟ್ಟು 31 ಅಂಗನವಾಡಿ ಸಹಾಯಕಿಯ ಹುದ್ದೆಗಳಿಗೆ ಹಾಗೂ ಮುಕ್ಕುಂಪಾ (3ನೇ ಕೇಂದ್ರ), ವೆಂಕಟಗಿರಿ, ಕೋಟಯ್ಯ ಕ್ಯಾಂಪ್, ಬಸವನದುರ್ಗಾ ಗ್ರಾಮಗಳಲ್ಲಿ ಖಾಲಿ ಇರುವ ಒಟ್ಟು 04 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಜು.31 ಕೊನೆ ದಿನಾಂಕವಾಗಿದ್ದು, ಮೀಸಲಾತಿ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯಾಲಯ, ಗಂಗಾವತಿ ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 

ಡಾ. ಅಬ್ದುಲ್ ಕಲಾಂ ನಿಧನ : ಸಚಿವ ಶಿವರಾಜ ತಂಗಡಗಿ ಸಂತಾಪ

ಕೊಪ್ಪಳ, ಜು.29 (ಕರ್ನಾಟಕ ವಾರ್ತೆ) : ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅವರ ನಿಧನಕ್ಕೆ   ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
      ಡಾ. ಅಬ್ದುಲ್ ಕಲಾಂ ಅವರು ರಾಮೇಶ್ವರದ ಬಡ ಬೆಸ್ತ ಕುಟುಂಬದಲ್ಲಿ ಜನಿಸಿದರೂ, ಪ್ರಾಮಾಣಿಕತೆ ಹಾಗೂ ಕಾಯಕ ಯೋಗದಿಂದ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಗೆ ಗೌರವ ತಂದವರು.  ಕೊನೆಯ ಉಸಿರು ಇರುವವರೆಗೂ ಮಕ್ಕಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಉಪನ್ಯಾಸ ನೀಡುವ ಮೂಲಕ ವ್ಯಕ್ತಿತ್ವದಿಂದ ದೊಡ್ಡತನ ಮೆರೆದರು.  ಡಾ. ಕಲಾಂ ರವರು ಎಲ್ಲಾ ವರ್ಗದವರ ಪ್ರೀತಿಗೆ ಪಾತ್ರರಾಗಿ ದೇಶಪ್ರೇಮಿ ಹಾಗೂ ಶಿಕ್ಷಣ ಪ್ರೇಮಿಯಾಗಿದ್ದರು.  ಇವರ ನಿಧನದಿಂದ ಶಿಕ್ಷಣ ಕ್ಷೇತ್ರ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಜ್ಯೋತಿ ಸಂಜೀವಿನಿ : ಆ. 03 ರಂದು ಸರ್ಕಾರಿ ನೌಕರರಿಗೆ ಕಾರ್ಯಗಾರ

ಕೊಪ್ಪಳ ಜು. 29 (ಕರ್ನಾಟಕ ವಾರ್ತೆ) : ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡುವ ‘ಜ್ಯೋತಿ ಸಂಜೀವಿನಿ’ ಯೋಜನೆ ಕುರಿತು ಸರ್ಕಾರಿ ನೌಕರರಿಗೆ ಮಾಹಿತಿ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಆ. 03 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೊರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದೆ.
     ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವಲಂಬಿತ ಕುಟುಂಬದ ಸದಸ್ಯರಿಗೆ 7 ಮಾರಣಾಂತಿಕ ಖಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಭೀಕರ ಅಪಘಾತ, ಸುಟ್ಟಗಾಯ, ಮೂತ್ರಪಿಂಡ ಖಾಯಿಲೆಗಳು ಹಾಗೂ ನವಜಾತ ಶಿಶುಗಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ರಾಜ್ಯ ಮತ್ತು ಹೊರ ರಾಜ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆ ದೊರೆಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ 2015 ರ ಜನವರಿ 20 ರಿಂದ ರಾಜ್ಯದಲ್ಲಿ ಜಾರಿಗೆ ತಂದಿದೆ.  ಈ ಯೋಜನೆ ಕುರಿತಂತೆ ಸರ್ಕಾರಿ ನೌಕರರಿಗೆ ಸಮರ್ಪಕ ಮಾಹಿತಿ ನೀಡುವುದು ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಗಸ್ಟ್ 03 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳದ ಜಿಲ್ಲಾಡಳಿತ ಭವನ ಆಡಿಟೊರಿಯಂ ಹಾಲ್‍ನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.  ಕಾರ್ಯಗಾರದಲ್ಲಿ ಯೋಜನೆಯ ಹೊಣೆ ಹೊತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಬೆಂಗಳೂರು ಇಲ್ಲಿನ ಯೋಜನಾ ವ್ಯವಸ್ಥಾಪಕಿ ಡಾ. ಸುಧಾ ಚಂದ್ರಶೇಖರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾಹಿತಿ ನೀಡುವರು.  ಈ ಕಾರ್ಯಗಾರದಲ್ಲಿ ಎಲ್ಲ ಸರ್ಕಾರಿ ನೌಕರರು ಭಾಗವಹಿಸಿ, ಸದುಪಯೋಗ ಪಡೆದುಕೊಳ್ಳಬೇಕು ಎಂದು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 28 July 2015

ಡಾ. ಅಬ್ದುಲ್ ಕಲಾಂ ನಿಧನ : ಸಂಸದ ಸಂಗಣ್ಣ ಕರಡಿ ಸಂತಾಪ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ) : ಹೃದಯಾಘಾತದಿಂದ ಸೋಮವಾರ ನಿಧನರಾದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಗಲುವಿಕೆಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ತೀವ್ರ ಸಂತಾಪ ಸೂಚಿಸಿದ್ದಾರೆ.
     ಅಬ್ದುಲ್ ಕಲಾಂ ಅವರು ವಿಶ್ವಮಟ್ಟದಲ್ಲಿ ಭಾರತದ ಘನತೆ ಗೌರವಗಳನ್ನು ಬೆಳಗಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕೊನೆ ಉಸಿರಿರುವವರೆಗೂ ಮಕ್ಕಳು ಹಾಗೂ ಯುವಕರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಉತ್ಸಾಹ ತುಂಬಿ ಅವರ ಬದುಕಿಗೆ ಬೆಳಕನ್ನು ತುಂಬುವ ಕೆಲಸ ಮಾಡಿರುವ ಅವರು ಮಹಾನ್ ಮಾನವತಾವಾದಿಯಾಗಿದ್ದಾರೆ. ಅಲ್ಲದೇ, ಇವರು ದೇಶದ ರಾಷ್ಟ್ರಪತಿಗಳಾಗಿ ಕೆಲಸ ಮಾಡಿರುವ ದಿನಗಳು ನಮ್ಮೆಲ್ಲರಿಗೂ ಅವಿಸ್ಮರಣೀಯವಾಗಿವೆ. ಅಂತಹ ಮಹಾನ್ ಚೇತನ, ಅಪ್ರತಿಮ ವಿಜ್ಞಾನಿ ಹಾಗೂ ದೇಶಭಕ್ತನನ್ನು ಕಳೆದುಕೊಂಡಿರುವ ಭಾರತ ದೇಶ ಬಡವಾದಂತಾಗಿದೆ ಎಂದು ಸಂಗಣ್ಣ ಕರಡಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಐಟಿಐ : ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ):  ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಯಲಬುರ್ಗಾ ತಾಲೂಕಿನ ಕುಕನೂರು, ಯಲಬುರ್ಗಾ(ಮ), ಮಂಗಳೂರು ಗ್ರಾಮ, ತಳಕಲ್, ಮುಧೋಳ ಪಟ್ಟಣ ಹಾಗೂ ಯಡ್ಡೋಣಿ ಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವೃತ್ತಿಗಳಿಗೆ ಆನ್‍ಲೈನ್ ಪ್ರವೇಶ ಪಡೆದು ಉಳಿದ ಸ್ಥಾನಗಳಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರದ ಮೇಲೆ ನಡೆಸಲಾಗುತ್ತಿರುವ ಕ್ಯಾಸುವಲ್ ರೌಂಡ್ ಪ್ರಕ್ರಿಯೆ ಇದಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಿ ಯಾವುದೇ ವೃತ್ತಿಯಲ್ಲಿ ಸ್ಥಾನ ಪಡೆಯದೇ ಇರುವವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಈ ಮೇಲೆ ತಿಳಿಸಿದ ಸಂಸ್ಥೆಗಳಲ್ಲಿ ಪಡೆಯಬಹುದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಜು.30 ಕೊನೆ ದಿನಾಂಕವಾಗಿದೆ.
     ಆಯಾ ಸಂಸ್ಥೆಗಳಲ್ಲಿ ಲಭ್ಯವಿರುವ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಹಂಚಿಕೆ ಸಂಬಂಧವಾಗಿ ಆಯಾ ಸಂಸ್ಥೆಗಳಲ್ಲಿ ಜು.31 ರಂದು ಬೆಳಿಗ್ಗೆ 09 ಗಂಟೆಗೆ ಸಮಾಲೋಚನೆ ನಡೆಸುವುದರಿಂದ ಎಲ್ಲ ಅಭ್ಯರ್ಥಿಗಳು ಅಂದು ಆಯಾ ಸಂಸ್ಥೆ ಆವರಣದಲ್ಲಿ ಹಾಜರಿರುವಂತೆ ಕುಕನೂರು ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್.01 ರಿಂದ ಕಲಬುರಗಿಯಲ್ಲಿ ಸೇನಾ ನೇಮಕಾತಿ ರ್ಯಾಲಿ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ) : ಭಾರತೀಯ ಭೂಸೇನೆಯ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್ ಮತ್ತು ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗಾಗಿ ಆಗಸ್ಟ್.01 ರಿಂದ 08 ರವರೆಗೆ ಕಲಬುರಗಿ ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ಏರ್ಪಡಿಸಲಾಗಿದೆ.
     ಆ.01 ರಂದು ನಡೆಯಲಿರುವ ರ್ಯಾಲಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಆ.02 ರಂದು ಬೀದರ್, ಕಲಬುರಗಿ, ಹಾಗೂ ಕೊಪ್ಪಳ ಜಿಲ್ಲೆ, ಆ.03 ರಂದು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕ, ಆ.04 ರಂದು ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲ ತಾಲೂಕ, ಆ.05 ರಂದು ಬೆಳಗಾವಿ ಜಿಲ್ಲೆಯ ಅಥಣಿ, ಹುಕ್ಕೆರಿ ತಾಲೂಕ, ಆ.06 ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಚಿಕ್ಕೋಡಿ ತಾಲೂಕ, ಆ.07 ರಂದು ಗೋಕಾಕ್, ರಾಮದುರ್ಗ ತಾಲೂಕ, ಆ.08 ರಂದು ರಾಯಭಾಗ ಮತ್ತು ಕಿತ್ತೂರು ತಾಲೂಕಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
     ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಸೇರಬಯಸುವ ಅಭ್ಯರ್ಥಿಯು ಶೇಕಡಾ 45 ಪ್ರತಿಶತ ಅಂಕಗಳೊಂದಿಗೆ 10 ನೇ ತರಗತಿ ಉತ್ತೀರ್ಣರಾಗಿರಬೇಕು. 17.1/2 ಯಿಂದ 21 ವರ್ಷದೊಳಗಿನ ವಯೋಮಿತಿ (01.08.1994 ರಿಂದ 01-02-1998 ರೊಳಗೆ ಜನಿಸಿರಬೇಕು), 166 ಸೆ.ಮೀ ಎತ್ತರದ ನಿಲುವು ಹೊಂದಿರಬೇಕು. ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೆ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. 17 ರಿಂದ 23 ವರ್ಷದೊಳಗಿನ ವಯೋಮಿತಿ (01-08-1994 ರಿಂದ 01-02-1998 ರೊಳಗೆ ಜನಿಸಿರಬೇಕು), 165 ಸೆ.ಮೀ ಎತ್ತರದ ನಿಲುವು ಹೊಂದಿರಬೇಕು. ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗೆ ಯಾವುದೇ ಪಿಯುಸಿಯಲ್ಲಿ ಶೇಕಡಾ 50 ಪ್ರತಿಶತ ಅಂಕ ಪಡೆದಿರಬೇಕು. 17 ರಿಂದ 23 ವರ್ಷದೊಳಗಿನ ವಯೋಮಿತಿ (01-08-1994 ರಿಂದ 01-02-1998 ರೊಳಗೆ ಜನಿಸಿರಬೇಕು), 162 ಸೆ.ಮೀ ಎತ್ತರ ಹೊಂದಿರಬೇಕು ಹಾಗೂ ಈ ಮೇಲಿನ ಹುದ್ದೆಗಳಿಗೆ ಪ್ರವೇಶ ಬಯಸುವವರು 50 ಕೆ.ಜಿ ತೂಕ ಹಾಗೂ 77 ರಿಂದ 82 ಸೆ.ಮೀ ಎದೆ ಸುತ್ತಳತೆ ಹೊಂದಿರಬೇಕು. ಅಭ್ಯರ್ಥಿಗಳು 1.6 ಕಿ.ಮೀ ದೂರವನ್ನು 6 ನಿಮಿಷದಲ್ಲಿ ಓಡಬೇಕು. ಕನಿಷ್ಟ 06 ರಿಂದ 10 ಫುಲ್ ಅಪ್ಸ್ ತೆಗೆಯಬೇಕು. ಜಿಗ್-ಜಾಗ್ ಸಮತೋಲನ ನಡಿಗೆ ನಡೆಯಬೇಕು. 9 ಅಡಿ ತೆಗ್ಗು ಜಿಗಿಯಲು ಶಕ್ತರಿರಬೇಕು. 
     ಈ ಅರ್ಹತೆಗಳನ್ನು ಹೊಂದಿದ್ದು, ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ತಿಗಳು 10ನೇ ತರಗತಿ, ಪಿಯು.ಸಿ, ಐಟಿಐ, ಕ್ರೀಡೆ, ಎನ್.ಸಿ.ಸಿ ಇವುಗಳ ಮೂಲ ಹಾಗೂ 2 ದೃಢೀಕೃತ ನಕಲು ಪ್ರತಿಗಳೊಂದಿಗೆ, 12 ಪಾಸ್‍ಪೋರ್ಟ್ ಅಳತೆಯ ಕಲರ್ ಭಾವಚಿತ್ರ,   ರಹವಾಸಿ ಪ್ರಮಾಣ ಪತ್ರ ಹಾಗೂ ನಡತೆ ಪ್ರಮಾಣ ಪತ್ರಗಳನ್ನು ಆಂಗ್ಲಭಾಷೆಯಲ್ಲಿ ತರಬೇಕು.  
     ರ್ಯಾಲಿಯು ಬೆಳಿಗ್ಗೆ ಬೇಗನೆ ಆರಂಭವಾಗುವುದರಿಂದ ಹಿಂದಿನ ದಿನ ಮಧ್ಯಾಹ್ನ 02 ಗಂಟೆಗೆ ಅಭ್ಯರ್ಥಿಗಳು ಮೈದನದ ಹತ್ತಿರ ಇರಬೇಕು. ಇದಕ್ಕೆ ಯಾವುದೇ ಪ್ರಯಾಣ ವೆಚ್ಚ ಇನ್ನಿತರ ವೆಚ್ಚ ನೀಡಲಾಗುವುದಿಲ್ಲ. ಅಲ್ಲದೆ ಈ ಹುದ್ದೆಗಳಿಗೆ ಯಾವುದೇ ಅರ್ಜಿ ನಮೂನೆಯ ಅವಶ್ಯಕತೆ ಇರುವುದಿಲ್ಲ.
     ಹೆಚ್ಚಿನ ಮಾಹಿತಿಗಾಗಿ ಕೆಲಸದ ದಿನದಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದೂರವಾಣಿ ಸಂಖ್ಯೆ : 08539-220859 ಮೊಬೈಲ್ : 9449310423 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಳವಂಡಿ ಐಟಿಐ : ಖಾಲಿ ಉಳಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಅಳವಂಡಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ವಿವಿಧ ವೃತ್ತಿ ತರಬೇತಿ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಅಳವಂಡಿಯಲ್ಲಿ ಜೋಡಣೆ ಮತ್ತು ವಿದ್ಯುತ್ ಶಿಲ್ಪಿ ವೃತ್ತಿ ತರಬೇತಿಗೆ ಆನ್‍ಲೈನ್ ಪ್ರವೇಶ ಪಡೆದು ಉಳಿದ ಸ್ಥಾನಗಳಿಗೆ ಮೆರಿಟ್ ಕಂ ರಿಸರ್ವೇಶನ್ ಆಧಾರದ ಮೇಲೆ ನಡೆಸಲಾಗುತ್ತಿರುವ ಕ್ಯಾಸುವಲ್ ರೌಂಡ್ ಪ್ರವೇಶ ಪ್ರಕ್ರಿಯೆ ಇದಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಹಾಗೂ ಅರ್ಜಿ ಸಲ್ಲಿಸಿ ಯಾವುದೇ ವೃತ್ತಿಯಲ್ಲಿ ಸ್ಥಾನ ಪಡೆಯದೇ ಇರುವವರು ಸಹ ಪುನಃ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳನ್ನು ಅಳವಂಡಿಯ ಐಟಿಐ ಸಂಸ್ಥೆಯಿಂದ  ಪಡೆಯಬಹುದಾಗಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಜು.30 ಕೊನೆ ದಿನಾಂಕವಾಗಿದೆ.
     ಆಯಾ ಸಂಸ್ಥೆಗಳಲ್ಲಿ ಲಭ್ಯವಿರುವ ವೃತ್ತಿಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಹಂಚಿಕೆ ಸಂಬಂಧವಾಗಿ ಆಯಾ ಸಂಸ್ಥೆಗಳಲ್ಲಿ ಜು.31 ರಂದು ಸಮಾಲೋಚನೆ ನಡೆಸುವುದರಿಂದ ಎಲ್ಲ ಅಭ್ಯರ್ಥಿಗಳು ಅಂದು ಬೆಳಿಗ್ಗೆ 09 ಗಂಟೆಗೆ ಆಯಾ ಸಂಸ್ಥೆ ಆವರಣದಲ್ಲಿ ಹಾಜರಿರುವಂತೆ ಪ್ರಕಟಣೆ ತಿಳಿಸಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಒಂಬುಡ್ಸ್‍ಮನ್ ಮಾಹಿತಿ ಬರೆಸಲು ಸೂಚನೆ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ಗೋಡೆಯ ಮೇಲೆ ಒಂಬುಡ್ಸ್‍ಮನ್ ಹೆಸರು, ಕಛೇರಿಯ ವಿಳಾಸ ಮತ್ತು ಫೋನ್ ನಂಬರ್ ಇತ್ಯಾದಿ ಮಾಹಿತಿಯನ್ನು ಕಡ್ಡಾಯವಾಗಿ ಬರೆಸುವಂತೆ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್‍ಮನ್ ಬಿ.ವೈ. ಮಾದಿನೂರ ಸೂಚನೆ ನೀಡಿದ್ದಾರೆ.
     ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಗಟ್ಟಲು, ಜನರಿಗೆ ಅನುಕೂಲತೆಯನ್ನು ಒದಗಿಸಲು, ಅವರ ಸಮಸ್ಯೆಯನ್ನು ಹಂಚಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂಬುಡ್ಸ್‍ಮನ್ ಕಾರ್ಯಾಲಯವನ್ನು ಜಾರಿಗೆ ತಂದಿವೆ. ಆದರೆ  ಒಂಬುಡ್ಸ್‍ಮನ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ಇಲ್ಲದಿರುವುದರಿಂದ ಒಂಬುಡ್ಸ್‍ಮನ್ ಕಾರ್ಯಾಲಯಕ್ಕೆ ದೂರುಗಳ ಸ್ವೀಕೃತಿ ಕಡಿಮೆಯಾಗಲು ಕಾರಣವಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಉದ್ಯೋಗಖಾತ್ರಿ ಯೋಜನೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಒಂಬುಡ್ಸ್‍ಮನ್ ಕಾರ್ಯಾಲಯಕ್ಕೆ ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕಟ್ಟಡದ ಮುಂಭಾಗದ ಗೋಡೆಗಳ ಮೇಲೆ, ಸಾರ್ವಜನಿಕರಿಗೆ ನಿಚ್ಛಳವಾಗಿ ಕಾಣುವಂತೆ ಗೋಡೆ ಬರಹದ ಮೂಲಕ ಒಂಬುಡ್ಸ್‍ಮನ್, ಜಿಲ್ಲಾ ಪಂಚಾಯತಿ, ಜಿಲ್ಲಾ ಆಡಳಿತ ಭವನ, ಮೊಬೈಲ್ ಸಂ: 9886246048, ದೂರವಾಣಿ ಸಂ: 08539-225048 ಎನ್ನುವ ಮಾಹಿತಿಯನ್ನು ಜು.31 ರೊಳಗಾಗಿ ಬರೆಸಬೇಕು.  ಸಾರ್ವಜನಿಕರು, ಉದ್ಯೋಗಖಾತ್ರಿ ಯೋಜನೆಯಲ್ಲಿನ ಯಾವುದೇ ದೂರುಗಳನ್ನು ಒಂಬುಡ್ಸ್‍ಮನ್ ಅವರಿಗೆ ಸಲ್ಲಿಸಬಹುದು ಎಂದು ಬಿ.ವೈ. ಮಾದಿನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಅಬ್ದುಲ್ ಕಲಾಂ ನಿಧನ : ಕಿನ್ನಾಳದಲ್ಲಿ ಶ್ರದ್ಧಾಂಜಲಿ ಸಭೆ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ): ಮಹಾನ್ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು  ನಿಧನರಾದ ಪ್ರಯುಕ್ತ ತಾಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಸಂತಾಪ ಸೂಚಕ ಸಭೆ ನಡೆಸಲಾಯಿತು.
     ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ್, ವಿಶ್ವದ ಮಹಾನ್ ವಿಜ್ಞಾನಿ, ತತ್ವಜ್ಞಾನಿ, ಕವಿ, ಪ್ರಾಧ್ಯಾಪಕ, ಮಾತೃಹೃದಯಿ ಅಬ್ದುಲ್ ಕಲಾಂ ಅವರ ಅಗಲುವಿಕೆಯಿಂದ ಭಾರತ ದೇಶ ಬಡವಾಗಿದೆ. ಭಾರತದ 11 ನೇ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿದ್ದ ಕಲಾಂ ಅವರು, ಇಡೀ ನಾಡಿಗೆ ಶಿಕ್ಷಕರಾಗಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡುವಲ್ಲಿ ಶ್ರಮಿಸಿದ್ದರು. ತಮ್ಮ ಜೀವನದುದ್ದಕ್ಕೂ ಶ್ರಮವರಿಯದವರಂತೆ ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ ದುಡಿದರು. ಇಂಥಹ ಮಹಾನ್ ನಾಯಕನ ಆದರ್ಶಗಳನ್ನು ನಮ್ಮ ಜೀವನದಲ್ಲೂ  ಅಳವಡಿಸಿಕೊಳ್ಳುವ ಮೂಲಕ ಅವರನ್ನು ನಮ್ಮೊಂದಿಗೆ ಇರುವಂತೆ ನೋಡಿಕೊಳ್ಳೋಣ ಎಂದು ಹೇಳಿದರು.
     ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬನ್ನಿಕೊಪ್ಪ, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಮೇಟಿ, ಸದಸ್ಯ ಬಸವರಾಜ ಚಿಲವಾಡಗಿ, ಬಸಯ್ಯ ಕೆಂಬೋಡಿಮಠ ಸೇರಿದಂತೆ ಪಂಚಾಯಿತಿ ಸರ್ವ ಸದಸ್ಯರು  ಹಾಗೂ ಸಿಬ್ಬಂದಿ ಉಪಸ್ತಿತರಿದ್ದರು.

ಕೌಶಲ್ಯ ಅಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.28 (ಕರ್ನಾಟಕ ವಾರ್ತೆ) : ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಪ್ರಸಕ್ತ ಸಾಲಿನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಎಲೆಕ್ಟ್ರಿಕಲ್ ಹೌಸ್‍ಹೋಲ್ಡ್ ರಿಪೇರಿ (30 ದಿನಗಳು)  ಸ್ವಯಂ ಉದ್ಯೋಗ ತರಬೇತಿಗೆ ಅರ್ಜಿದಾರರು ಕನಿಷ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು. ವೆಲ್ಡಿಂಗ್ (30 ದಿನಗಳು) ವೇಜ್ ಎಂಪ್ಲಾಯ್‍ಮೆಂಟ್ ತರಬೇತಿಗೆ ಕನಿಷ್ಟ ಐ.ಟಿ.ಐ ವಿದ್ಯಾರ್ಹತೆ ಹಾಗೂ ಫ್ಯಾಷನ್ ಡಿಸೈನಿಂಗ್ ತರಬೇತಿಗೆ 8ನೇ ತರಗತಿ ಕನಿಷ್ಟ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿದೆ. ಫ್ಯಾಷನ್ ಡಿಸೈನಿಂಗ್ ತರಬೇತಿಯನಗನು ಮಹಿಳೆಯರಿಗೆ ಮಾತ್ರ ನೀಡಲಾಗುವುದು.
     ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಇವರ ಕಛೇರಿಗೆ ಆಗಸ್ಟ್.14 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆ.ಭೀಮಪ್ಪ, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ ಹಾಗೂ ಎಂ.ಡಿ.ಚಿನಿವಾಲರ, ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಇವರನ್ನು ಕಛೇರಿ ವೇಳೆಯಲ್ಲಿ ಹಾಗೂ ದೂರವಾಣಿ ಸಂಖ್ಯೆ : 08539-231548 ನ್ನು ಸಂಪರ್ಕಿಸಬಹುದಾಗಿದೆ.

Monday, 27 July 2015

ಕುರಿ ಮತ್ತು ಮೇಕೆಗಳಿಗೆ ಲಸಿಕಾ ಕಾರ್ಯಕ್ರಮ

ಕೊಪ್ಪಳ, ಜು.27 (ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಕೊಪ್ಪಳ ಜಿಲ್ಲೆಯ ಕುರಿ ಮತ್ತು ಮೇಕೆಗಳಿಗೆ ಪಿಪಿಆರ್ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
     ಪ್ರಸಕ್ತ ಸಾಲಿನ ಮೊದಲನೆ ಸುತ್ತಿನ ಪಿಪಿಆರ್ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಈ ಹಿಂದಿನ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ ಬಿಟ್ಟುಹೋದ ಹಾಗೂ ನಂತರ ಹೊಸದಾಗಿ ಹುಟ್ಟಿದ (ಮೂರು ತಿಂಗಳಿಗೆ ಮೇಲ್ಪಟ್ಟು ಒಟ್ಟು ಸಂಖ್ಯೆಯ ಶೇ. 30 ರಷ್ಟು) ಕುರಿ ಮತ್ತು ಮೇಕೆಗಳಿಗೆ ಪಿಪಿಆರ್ ಲಸಿಕೆ ನೀಡಲಾಗುವುದು.  ಲಸಿಕೆಯು ಸಮೀಪದ ಪಶು ವೈದ್ಯ ಸಂಸ್ಥೆಗಳಲ್ಲಿ ಲಭ್ಯವಿದ್ದು, ಕುರಿ ಮತ್ತು ಮೇಕೆ ಸಾಕಾಣಿಕೆದಾರರು ಈ ಲಸಿಕಾ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಮದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಭಾಸ್ಕರನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ : ಹಂದಿಗಳನ್ನು ನಗರದಿಂದ ಹೊರಸಾಗಿಸಲು ಜು. 31 ರ ಗಡುವು

ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಂದಿಗಳನ್ನು ನಗರದಿಂದ ಜು. 31 ರೊಳಗಾಗಿ ಹೊರ ಸಾಗಿಸುವಂತೆ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಅವರು ಹಂದಿ ಸಾಕಾಣಿಕೆದಾರರಿಗೆ ಸೂಚನೆ ನೀಡಿದ್ದಾರೆ.
     ಕೊಪ್ಪಳ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಕಳೆದ ಜು. 24 ರಂದು ಕೊಪ್ಪಳದಲ್ಲಿ ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಏಳು ದಿನಗಳ ಒಳಗಾಗಿ ಹಂದಿಗಳನ್ನು ಹೊರಸಾಗಿಸುವುದಾಗಿ ಮುಚ್ಚಳಿಕೆ ಪತ್ರವನ್ನು ಹಂದಿ ಸಾಕಾಣಿಕೆದಾರರಿಂದ ಬರೆಯಿಸಿಕೊಂಡು, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.  ಕರ್ನಾಟಕ ಪುರಸಭೆಗಳ ಕಾಯ್ದೆ 1964 ಕಲಂ 223 ರಂತೆ ಹಂದಿಗಳನ್ನು ನಾಶಪಡಿಸಲು ಅಥವಾ ವಿಲೇವಾರಿ ಮಾಡಲು ನಗರಸಭೆಗೆ ಸಂಪೂರ್ಣ ಅಧಿಕಾರವಿರುತ್ತದೆ.  ಅದರನ್ವಯ ಜು. 31 ರ ಒಳಗಾಗಿ ಹಂದಿಗಳನ್ನು ನಗರದಿಂದ ಹೊರ ಸಾಗಿಸದಿದ್ದಲ್ಲಿ, ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು.  ಈ ರೀತಿಯಿಂದ ಉಂಟಾಗುವ ಯಾವುದೇ ನಷ್ಟ ಪರಿಹಾರಕ್ಕೆ ಸಂಬಂಧಿಸಿದವರು ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ.  ಹಂದಿಗಳ ಮಾಲೀಕರು ಕೂಡಲೆ ಹಂದಿಗಳನ್ನು ನಗರದಿಂದ ಹೊರ ಸಾಗಿಸಲು ಇದು ಕೊನೆಯ ಎಚ್ಚರಿಕೆ ಆಗಿರುತ್ತದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ದೇವದಾಸಿಯರಿಗೆ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ ಜು. 27 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ ಪುನರ್ವಸತಿ ಯೋಜನೆಯಡಿ ಜಿಲ್ಲೆಯ ಮಾಜಿ ದೇವದಾಸಿಯರಿಗೆ ಆದಾಯ ಉತ್ಪನ್ನಕರ ಚಟುವಟಿಕೆ ಕೈಗೊಳ್ಳಲು ಪ್ರೋತ್ಸಾಹ ಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದೆ.
       1993-94 ನೇ ಹಾಗೂ 2007-08 ರ ಮರು ಸಮೀಕ್ಷೆಯಲ್ಲಿ ಸೇರ್ಪಡೆಯಾಗಿರುವ ಮಾಜಿ ದೇವದಾಸಿ ಮಹಿಳೆಯರಿಗೆ  ಆರ್ಥಿಕ ಸ್ವಾವಲಂಬನೆಗಾಗಿ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಮಾಜಿ ದೇವದಾಸಿ ಮಹಿಳೆಯರಾಗಿರಬೇಕು.  ಬ್ಯಾಂಕ್ ಖಾತೆ ಹೊಂದಿದ್ದು, ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿರಬಾರದು.  ಯಾವುದೇ ಕಾನೂನಿನ ವಿವಾದಗಳಿಗೆ/ವ್ಯಾಜ್ಯಗಳಿಗೆ ಒಳಪಟ್ಟಿರಬಾರದು.  ಈಗಾಗಲೆ ಈ ಸೌಲಭ್ಯ ಪಡೆದ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸುವಂತಿಲ್ಲ.  ಅರ್ಹ ಮಹಿಳೆಯರು ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕು ಯೋಜನಾ ಅನುಷ್ಠಾನಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿಳಾಸ ದೃಢೀಕರಣ ಪತ್ರ, ಬ್ಯಾಂಕ್ ಖಾತೆ ಪ್ರತಿಯನ್ನು ಲಗತ್ತಿಸಿ ಆಯಾ ತಾಲೂಕು ಅನುಷ್ಠಾನಾಧಿಕಾರಿಗಳ ಕಚೇರಿಗೆ ಆಗಸ್ಟ್ 11 ರೊಳಗೆ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ ತಾಲೂಕು ಅನುಷ್ಠಾನಾಧಿಕಾರಿಗಳು, ಕೊಪ್ಪಳ- 9538628359, ಗಂಗಾವತಿ- 9880518498, ಕುಷ್ಟಗಿ- 9686148933, ಯಲಬುರ್ಗಾ- 9686072296 ಇವರನ್ನು ಸಂಪರ್ಕಿಸುವಂತೆ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳಪೆ ಗುಣಮಟ್ಟದ ಔಷಧ ಪತ್ತೆ : ಎಚ್ಚರಿಕೆಯ ಸೂಚನೆ

ಕೊಪ್ಪಳ, ಜು. 27 (ಕರ್ನಾಟಕ ವಾರ್ತೆ): ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಈ ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು  ಕೊಪ್ಪಳ ಸಹಾಯಕ ಔಷಧ ನಿಯಂತ್ರಕ ರೇಣುಕಸ್ವಾಮಿ ಅವರು ತಿಳಿಸಿದ್ದಾರೆ.
     ಔಷಧಿ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ವಿವರ ಇಂತಿದೆ.  ಪ್ಯಾರಾಸೆಟಮಾಲ್ ಪ್ಯಾರಾರಿಕ್ಸ್ 650, ಬ್ಯಾಚ್ ಸಂ: ಜಿಟಿ-741, ಝೀ ಲ್ಯಾಬೊರೆಟರೀಸ್ ಲಿಮಿಟೆಡ್, ಸಾಹಿಬ್- 173025.  ಅಗರಾಲ್ ಎಮಲ್ಷನ್, ಬ್ಯಾಚ್ ನಂ. 420-091030, ಮೆ: ಪಿಫೈಜ್ಹರ್ ಲಿಮಿಟೆಡ್, ಪುಣೆ.  ಲಿವೋಜಿನ್, ಬ್ಯಾಚ್ ಸಂ. ಎಂ.ಟಿ. 13ಎಲ್23, ಮೆ: ಮಾರ್ಟಿನ್ ಅಂಡ್ ಬ್ರೌನ್ ಬಯೋ ಸೈನ್ಸ್, ಸೋಲನ್ (ಹಿಮಾಚಲ ಪ್ರದೇಶ್), ಪವೊಡಿನ್ ಐಯೋಡಿನ್ ಸಲ್ಯೂಷನ್.  ಬ್ಯಾಚ್ ಸಂ. 011, ಮೆ: ಮೆಡಿಸ್ಮಿತ್ ಫಾರ್ಮ ಲ್ಯಾಬ್, ಕುವೆಂಪು ನಗರ, ಬೆಂಗಳೂರು.  ವೊಮಿಯೋನ್ ಸಿರಪ್, ಬ್ಯಾಚ್ ಸಂ. ಐಪಿವಿ 131201, ಮೆ: ಮೆರಿನೊ ಲ್ಯಾಬರೇಟರಿಸ್ ಪ್ರೈ.ಲಿ. ಪ್ರಶಾಂತನಗರ, ಹೈದ್ರಾಬಾದ್.  ವೆರಾಲ್ 650 ಡಿಟಿ. ಬ್ಯಾಚ್ ಸಂ. ವಿಆರ್‍ಎಲ್-103, ಮೆ: ಎಂಬಯೋಟಿಕ್ ಲ್ಯಾಬೊರೆಟರಿಸ್ ಪ್ರೈ.ಲಿ. ಕುಂಬಳಗೋಡು, ಬೆಂಗಳೂರು.  ಸಿಫಡ್ರಾಕ್ಸಿಲ್ ಡಿಟಿ 125.  ಬ್ಯಾಚ್ ಸಂ. ಸಿಎಫ್‍ಕೆ 80, ಮೆ: ಮಹೇಂದ್ರ ಲ್ಯಾಬ್ಸ್ ಪ್ರೈ.ಲಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು.
     ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ  ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು 08539-221501 ಗಮನಕ್ಕೆ ತರುವಂತೆ   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Saturday, 25 July 2015

ದುಡುಕಿನ ನಿರ್ಧಾರ ಬೇಡ, ರೈತರ ಹಿತಕಾಯಲು ಸರ್ಕಾರ ಬದ್ಧ- ಶಿವರಾಜ್ ತಂಗಡಗಿ ಸಾಂತ್ವನ


ಕೊಪ್ಪಳ, ಜು.25 (ಕರ್ನಾಟಕ ವಾರ್ತೆ): ರೈತರ ಹಿತ ಕಾಯಲು ಸರ್ಕಾರ ಬದ್ಧವಿದ್ದು, ಯಾವುದೇ ಕಾರಣಕ್ಕೂ ರೈತರು  ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಸಾಂತ್ವನದ ಜೊತೆಗೆ ಆತ್ಮಸ್ಥೈರ್ಯದ ಮಾತುಗಳನ್ನಾಡಿದರು.
     ಗಂಗಾವತಿ ತಾಲೂಕು ಗೂಗಿಬಂಡಿ ಕ್ಯಾಂಪ್ (ಬಸವನದುರ್ಗ ಕ್ಯಾಂಪ್) ನಲ್ಲಿ ಶುಕ್ರವಾರದಂದು ಆತ್ಮಹತ್ಯೆಗೆ ಶರಣಾದ ರೈತ ನೆಕ್ಕಂಟಿ ಶ್ರೀನಿವಾಸ ಅವರ ಮನೆಗೆ ಶನಿವಾರದಂದು ಸಚಿವರು ಭೇಟಿ ನೀಡಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು.
     ಮೃತ ರೈತನ ಪತ್ನಿ ಜಾನಕಿ ಹಾಗೂ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಆತ್ಮಸ್ಥೈರ್ಯ ತುಂಬಿದ ಸಚಿವರು, ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ಪರಿಹಾರವಾಗಿ 20 ಸಾವಿರ ರೂ.ಗಳ ಚೆಕ್ ಹಾಗೂ ವಯಕ್ತಿಕವಾಗಿ 25 ಸಾವಿರ ರೂ.ಗಳ ಪರಿಹಾರ ಧನ ನೀಡಿದರು.  ಮೃತ ರೈತರ ಕುಟುಂಬಕ್ಕೆ ನೀಡಲಾಗುವ ಪರಿಹಾರದ ಮೊತ್ತವನ್ನು ಸರ್ಕಾರ 01 ಲಕ್ಷ ರೂ.ಗಳಿಂದ 02 ಲಕ್ಷ ರೂ. ಗಳಿಗೆ ಹೆಚ್ಚಿಸಿದ್ದು, ಜಿಲ್ಲಾ ಮಟ್ಟದ ಸಮಿತಿಯು ಮೃತ ರೈತರಿಗೆ ಸಂಬಂಧಪಟ್ಟಂತೆ ವರದಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಪರಿಹಾರ ನೀಡಿಕೆ ಕುರಿತಂತೆ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರೈತರ ಹಿತವನ್ನು ಕಾಯಲು ನಮ್ಮ ಸರ್ಕಾರ ಬದ್ಧವಿದೆ.  ಯಾವುದೇ ಕಾರಣಕ್ಕೂ ರೈತರು ಧೃತಿಗೆಡುವ ಅಗತ್ಯವಿಲ್ಲ.  ಆತುರದಿಂದ ರೈತರು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು.  ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ, ರೈತರು ತಮ್ಮ ಕುಟುಂಬ, ಪತ್ನಿ, ಮಕ್ಕಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ವಹಿಸಿ ಆತ್ಮಸ್ಥೈರ್ಯ ತುಂಬುವಂತಹ ಕೆಲಸವಾಗಬೇಕು.  ಸಾಲ ನೀಡಿರುವ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಅಥವಾ ಇನ್ನಿತರೆ ಯಾವುದೇ ಬ್ಯಾಂಕುಗಳು, ಸಾಲವನ್ನು ಮರುಪಾವತಿಸದ ರೈತರಿಗೆ ಸದ್ಯ ಯಾವುದೇ ನೋಟೀಸ್ ನೀಡುವುದಾಗಲಿ, ವಸೂಲಿಗೆ ಕ್ರಮ ಕೈಗೊಳ್ಳುವುದಾಗಲಿ ಮಾಡದಂತೆ ಸೂಚನೆ ನೀಡಲಾಗಿದೆ.  ಜಿಲ್ಲೆಯಲ್ಲಿ ಸದ್ಯ ಸಂಭವಿಸಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಜಮೀನನ್ನು ಗುತ್ತಿಗೆ ಪಡೆದು, ಸಾಗುವಳಿ ಮಾಡುತ್ತಿದ್ದ ಇಬ್ಬರು ರೈತರಿದ್ದು,  ಗುತ್ತಿಗೆ ಪಡೆದು, ಸಾಗುವಳಿ ಮಾಡುತ್ತಿದ್ದ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಪರಿಹಾರ ನೀಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.  ಈ ಕುರಿತಂತೆ ಈಗಾಗಲೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.  ರೈತರ ಆತ್ಮಹತ್ಯೆಗೆ ಪರಿಹಾರ ನೀಡುವ ಮಾರ್ಗಸೂಚಿ ಹಾಗೂ ನಿಯಮಾವಳಿಯನ್ನು ಕೇಂದ್ರ ಸರ್ಕಾರವೇ ರೂಪಿಸಿದ್ದು, ಇದರ ತಿದ್ದುಪಡಿಯನ್ನೂ ಸಹ ಕೇಂದ್ರ ಸರ್ಕಾರವೇ ಕೈಗೊಳ್ಳಬೇಕಿದೆ.  ಕಾನೂನು ಹಾಗೂ ತಾಂತ್ರಿಕ ತೊಂದರೆಗಳನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಉಂಟಾದ ಅಕಾಲಿಕ ಆಲಿಕಲ್ಲು ಮಳೆಗೆ ಬೆಳೆ ಹಾನಿ ಅನುಭವಿಸಿದ ರೈತರಿಗೆ ಈಗಾಗಲೆ ಪರಿಹಾರ ವಿತರಣೆ ಮಾಡಲಾಗಿದೆ.  ಇದುವರೆಗೂ ಬ್ಯಾಂಕ್ ಖಾತೆ ಸಂಖ್ಯೆ ಸಲ್ಲಿಸದವರು ಅಥವಾ ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆ ನೀಡಿರುವ ರೈತರ ಪರಿಹಾರ ಮೊತ್ತ ವಿತರಣೆಯಲ್ಲಿ ಮಾತ್ರ ವಿಳಂಬವಾಗಿದೆ.  ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಬಾರದ ಕಾರಣ ಬರದ ಸ್ಥಿತಿ ನಿರ್ಮಾಣವಾಗುತ್ತಿದೆ.  ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಕುರಿತಂತೆ ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆಯು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಹವಾಮಾನ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೆ ಎರಡು ಬಾರಿ ಸಭೆ ನಡೆಸಿದ್ದು, ಬರ ಪೀಡಿತ ತಾಲೂಕುಗಳ ವಿವರವನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸಲಿದೆ.  ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಾನುವಾರುಗಳನ್ನು ರಕ್ಷಿಸುವ ಸಲುವಾಗಿ ಗೋಶಾಲೆ ಪ್ರಾರಂಭಿಸಬೇಕೆನ್ನುವ ಬಗ್ಗೆ ಮನವಿಗಳು ಬರುತ್ತಿವೆ.  ಶೀಘ್ರದಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
     ಜಿಲ್ಲಾ ಪಂಚಾಯತಿ ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗುಳೇ ಹೋಗದಿರಲು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮನವಿ

ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೆ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿಗಳು ಪ್ರಾರಂಭವಾಗಿದ್ದು, ಜನರು ಗುಳೇ ಹೋಗದೆ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಮನವಿ ಮಾಡಿಕೊಂಡಿದ್ದಾರೆ.
     ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಆಧಾರಿತ ಕಾಮಗಾರಿಗಳು ಹಾಗೂ ರೈತರ ವಯಕ್ತಿಕ ಕಾಮಗಾರಿಗಳಿಗೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ನೀಡಲಾಗಿದೆ.  ಪ್ರಸಕ್ತ ಆರ್ಥಿಕ ವರ್ಷದಲ್ಲಿ 1 ಕುಟುಂಬಕ್ಕೆ 100 ಮಾನವ ದಿನಗಳಿಗೆ ಕೂಲಿ ಕೆಲಸ ನೀಡಲಾಗುವುದು.  ದಿನವೊಂದಕ್ಕೆ ರೂ. 204 ಗಳ ಕೂಲಿ ನೀಡಲಾಗುತ್ತಿದೆ.  ಜನರು ಆಯಾ ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ, ನಮೂನೆ 6 ರಲ್ಲಿ ಅರ್ಜಿ, ಜೊತೆಗೆ ಪ್ರತಿಯೊಬ್ಬ ಸದಸ್ಯರ ಪ್ರತ್ಯೇಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.  ಈ ರೀತಿ ಸಲ್ಲಿಸಿದವರಿಗೆ 15 ದಿನಗಳ ಒಳಗೆ ಕೂಲಿ ಕೆಲಸ ನೀಡಲಾಗುವುದು.  ಸಾರ್ವಜನಿಕರು ಗುಳೆ ಹೋಗದೆ, ಸರ್ಕಾರಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು : ಎಚ್ಚರ ವಹಿಸಲು ಸೂಚನೆ

ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗಳಲ್ಲಿ ಕುಡಿಯುವ ಸಲುವಾಗಿ ನೀರನ್ನು ಈಗಾಗಲೆ ಹರಿಸಲಾಗಿದ್ದು, ಕೊಪ್ಪಳ ಮತ್ತು ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಹಾದುಹೋಗುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗಳ ಬಳಿ ದನಕರುಗಳನ್ನು ಬಿಡದಂತೆ ಅಥವಾ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ವಡ್ಡರಹಟ್ಟಿ ಕ್ಯಾಂಪ್ ಕಾರ್ಯನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.
           ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಡಿಯಲ್ಲಿ ವಿತರಣಾ ಕಾಲುವೆ ಸಂಖೈ 1.00 ರಿಂದ 33.00 ರ  ವರೆಗಿನ ವಿತರಣಾ ಕಾಲುವೆಗಳು ಬರುತ್ತಿದ್ದು, ಕೊಪ್ಪಳ ತಾಲ್ಲೂಕಿನ ಹಾಗೂ ಗಂಗಾವತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಅಕ್ಕ ಪಕ್ಕದಲ್ಲಿ ಹಾದುಹೋಗುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗಳಲ್ಲಿ ಸದರಿ ಗ್ರಾಮದ ದನಕರುಗಳನ್ನು ಬಿಡಬಾರದು ಹಾಗೂ ಮಹಿಳೆಯರು ಅಥವಾ ಸಾರ್ವಜನಿಕರು ಬಟ್ಟೆ ತೊಳೆಯಲು ತೆರಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವಡ್ಡರಹಟ್ಟಿ ಕ್ಯಾಂಪ್ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿ

ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ  ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿಯನ್ನು ಭಾಗ್ಯನಗರದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
     ಈ ಕಾರ್ಯಕ್ರಮದಲ್ಲಿ  ಸ್ತ್ರೀಶಕ್ತಿ ಮಹಿಳೆಯರಿಗೆ ತೋಟಗಾರಿಕಾ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ತರಬೇತಿಯ ಜೊತೆಗೆ, ವಿವಿಧ ಸಂಸ್ಕರಣ ಪದಾರ್ಥಗಳ ಪ್ರಾತ್ಯಕ್ಷಿತೆ ಮಾಡಲಾಯಿತು.  ಕವಿತ ಉಳ್ಳಿಕಾಶಿ, ವಿಷಯ ತಜ್ಞರು, ಗೃಹ ವಿಜ್ಞಾನ ಇವರು ತರಬೇತಿಯ ಮಹತ್ವ ತಿಳಿಸುತ್ತಾ ಎಲ್ಲಾ ಮಹಿಳೆಯರಿಗೆ ಇದರ ಪ್ರಯೋಜನ ಪಡೆಯಲು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮ, ಮಹಿಳಾ ಸ್ವ-ಉದ್ಯೋಗ ಮಾರ್ಗದರ್ಶನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಹಿರೇಮನಿ,   ಇವರು ತರಬೇತಿಯಲ್ಲಿ ಹಾಜರಿದ್ದು ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು.

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ

ಕೊಪ್ಪಳ ಜುಲೈ 25 (ಕರ್ನಾಟಕ ವಾರ್ತೆ):  ಪೊಲೀಸ್ ಅಧಿಕಾರಿಗಳ/ ಸಿಬ್ಬಂದಿಗಳ   ವಿರುದ್ಧ  ದೂರುಗಳ ವಿಚಾರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವನ್ನು ಸರ್ಕಾರ ರಚಿಸಿದ್ದು, ಈಗಾಗಲೆ   ದೂರು ಪ್ರಾಧಿಕಾರ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ತಿಳಿಸಿದ್ದಾರೆ.
ಯಾವುದೇ ಸಾರ್ವಜನಿಕ ಸದಸ್ಯನ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಪೊಲೀಸ್ ವಶದಲ್ಲಿದ್ದಾಗ ಮರಣ, ಐ.ಪಿ.ಸಿ. ಸೆಕ್ಷನ್ 320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಅಥವಾ ವಶದಲ್ಲಿರಿಸಿಕೊಳ್ಳುವುದನ್ನು ದುರ್ನಡತೆಯ ಕುರಿತು ವಿಚಾರಣೆ ಮಾಡಲಿದೆ.
     ವಿಭಾಗೀಯ ಆಯುಕ್ತರು ಜಿಲ್ಲಾ ಮಟ್ಟದ ಪ್ರಾಧಿಕಾರದ  ಅಧ್ಯಕ್ಷರಾಗಿದ್ದು, ಸದಸ್ಯರುಗಳಾಗಿ ಕಲಬುರ್ಗಿಯ ಎಸ್.ಜಿ. ವಾಲಿ, ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತರು,  ಕೊಪ್ಪಳದ ನಿವೃತ್ತ ಪ್ರಾಂಶುಪಾಲ ಸಿ.ವಿ. ಜಡಿಯವರ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.  ಡಿವೈಎಸ್‍ಪಿ ಮತ್ತು ಕೆಳಹಂತದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧದ ದೂರು ಅರ್ಜಿಗಳನ್ನು ಸಾರ್ವಜನಿಕರು, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಅಶೋಕ ವೃತ್ತ ಹತ್ತಿರ, ಕೊಪ್ಪಳ ಇವರಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ ಆಶ್ರಯ ಯೋಜನೆ : ವಂತಿಕೆ ಹಣ ಭರಿಸಲು ಅವಧಿ ವಿಸ್ತರಣೆ

ಕೊಪ್ಪಳ, ಜು.25 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ವ್ಯಾಪ್ತಿಯ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ವಂತಿಕೆ ಹಣವನ್ನು ಭರಿಸಲು ಜು.27 ರಿಂದ ಆಗಸ್ಟ್.05 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದರ್ ತಿಳಿಸಿದ್ದಾರೆ.
     ನಗರ ಆಶ್ರಯ ಯೋಜನೆ ಅಡಿಯಲ್ಲಿ 2000 ಈಗಾಗಲೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಫಲಾನುಭವಿಗಳಿಂದ ರೂ.30,000 ವಂತಿಕೆ ಹಣವನ್ನು ಭರಿಸುವಂತೆ  15 ದಿನಗಳ ಕಾಲಾವಕಾಶ ನೀಡಿ ಈ ಹಿಂದೆ ಕೋರಲಾಗಿತ್ತು. ಆದರೆ ಈವರೆಗೂ ಕೆಲವೇ ಜನರು ಮಾತ್ರ ವಂತಿಕೆ ಹಣವನ್ನು ಭರಿಸಿದ್ದಾರೆ. ವಂತಿಕೆ ಹಣವನ್ನು ಭರಿಸದೇ ಉಳಿದುಕೊಂಡಿರುವ ಫಲಾನುಭವಿಗಳಿಗೆ ಈಗ ಮತ್ತೊಮ್ಮೆ ಕಾಲಾವಕಾಶವನ್ನು ನೀಡಲಾಗಿದ್ದು, ವಂತಿಗೆ ಹಣವನ್ನು ಆಗಸ್ಟ್. 05 ರೊಳಗಾಗಿ ಡಿ.ಡಿ ಮೂಲಕ ಭರಿಸಬಹುದಾಗಿದೆ. ನಿಗದಿಪಡಿಸಿದ ಕಾಲಾವಧಿಯ ಒಳಗಾಗಿ ವಂತಿಕೆ ಹಣವನ್ನು ಭರಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಪ್ರವಾಸ : ಕುಂದು, ಕೊರತೆ ದೂರು ಆಹ್ವಾನ

ಕೊಪ್ಪಳ, ಜು.25 (ಕರ್ನಾಟಕ ವಾರ್ತೆ) : ಕೊಪ್ಪಳ ಲೋಕಾಯುಕ್ತ ಡಿವೈಎಸ್‍ಪಿ ಅವರು ಜು.27 ಮತ್ತು ಜು.28 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
     ಲೋಕಾಯುಕ್ತ ಡಿವೈಎಸ್‍ಪಿ ಅವರು ಜು.27 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿ ಪ್ರವಾಸಿ ಮಂದಿರದಲ್ಲಿ, ಜು.28 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ 02 ಗಂಟೆಯಿಂದ ಸಂಜೆ 04 ರವರೆಗೆ ಯಲಬುರ್ಗಾದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ.
      ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದಾಗಿದೆ.  ಅಲ್ಲದೇ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ 1 ಮತ್ತು 2 ಲಭ್ಯವಿದ್ದು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ. ದೂರವಾಣಿ ಸಂಖ್ಯೆ : 08539-220200, 08539-220533 ಗಳಿಗೆ ಸಂಪರ್ಕಿಸಬಹು ಎಂದು ಪ್ರಕಟಣೆ ತಿಳಿಸಿದೆ.

ತುಂಗಭದ್ರ ಎಡದಂಡೆ ಮುಖ್ಯ ಕಾಲುವೆ : ಆಗಸ್ಟ್.05 ರವರೆಗೆ ನಿಷೇಧಾಜ್ಞೆ ಜಾರಿ

ಕೊಪ್ಪಳ, ಜು.25 (ಕರ್ನಾಟಕ ವಾರ್ತೆ): ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯ ಮೈಲ್ 0 ರಿಂದ 74 ರವರೆಗೆ ಜು.25 ರಿಂದ ಭಾರತೀಯ ದಂಡ ಪ್ರಕ್ರಿಯೆ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.
     ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಅಡಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 33 ವಿತರಣಾ ಕಾಲುವೆಗಳು ಬರುತ್ತವೆ. ಈ ವಿತರಣಾ ಕಾಲುವೆಗಳ ಹತ್ತಿರ ರೈತರು ಗುಂಪು ಗುಂಪಾಗಿ ಬಂದು ವಿತರಣಾ ಕಾಲುವೆ ಗೇಟುಗಳನ್ನು ಮನಬಂದಂತೆ ತೆರೆದು ನೀರನ್ನು ಹರಿಸಿಕೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ವಿತರಣಾ ಕಾಲುವೆಯ ತೂಬುಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಅಲ್ಲದೆ ಮುಖ್ಯಕಾಲುವೆ ಉದ್ದಕ್ಕೂ ಕಾನೂನು ಭಂಗವಾಗಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವ ಇರುವುದರಿಂದ ಮುಂಜಾಗೃತ ಕ್ರಮವಾಗಿ ತುಂಗಭದ್ರಾ ಎಡದಂಡೆ ಕಾಲುವೆ 0.00 ಕಿ.ಮೀ ನಿಂದ 74 ಕಿ.ಮೀ ರವರೆಗೆ ಮುಖ್ಯ ಕಾಲುವೆಯ ಎಡ ಮತ್ತು ಬಲದಡಗಳಿಂದ 100 ಮೀಟರ್ ಅಂತರದ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಜು.25 ರಿಂದ ಆಗಸ್ಟ್.05 ರವರೆಗೆ ದಂಡ ಪ್ರಕ್ರಿಯೆ ಸಂಹಿತೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
     ಈ ನಿಷೇಧಾಜ್ಞೆಯನ್ವಯ ಎಡ ಮತ್ತು ಬಲ ದಂಡೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಎರಡು ಅಥವಾ ಮೂರಕ್ಕಿಂತ ಹೆಚ್ಚು ಜನ ಓಡಾಡುವಂತಿಲ್ಲ. ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅನಾಮಧೇಯ ಮೃತ ದೇಹ ಪತ್ತೆ : ಗುರುತು ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ಜು.25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಿಣಗೇರಾದಲ್ಲಿ 35 ರಿಂದ 40 ವರ್ಷದೊಳಗಿನ ಅನಾಮಧೇಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಗುರುತು ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ ರಾಮಪ್ಪ ಮನವಿ ಮಾಡಿದ್ದಾರೆ.
     ಗಿಣಿಗೇರಾ ಗ್ರಾಮದ ಮೇನ್‍ರೋಡ್ ಪಕ್ಕದ ಕಾಯಿಗಡ್ಡಿ ಅಂಗಡಿಯ ಮುಂದೆ ಜು. 24 ರಂದು ಅನಾಮಧೇಯ ಮೃತ ದೇಹ ಪತ್ತೆಯಾಗಿದೆ.  ಈ ಅಪರಿಚಿತ ಮೃತನ ವಯಸ್ಸು ಸುಮಾರು 35 ರಿಂದ 40 ವರ್ಷಗಳಿದ್ದು, ಮೃತನ ಸಾವಿನಲ್ಲಿ ಸಂಶಯವಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
     ಮೃತ ವ್ಯಕ್ತಿಯ ಚಹರೆ ಇಂತಿದೆ.  ಮೃತ ವ್ಯಕ್ತಿಯು ಅಂಗವಿಕಲನಾಗಿದ್ದು, ಎಡಕಾಲಿನ ಪಾದ ಹೊರಳಿದೆ.  ಎತ್ತರ: 5 ಫೀಟ್ 6 ಇಂಚು, ಮಧ್ಯಮ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು-ಬಿಳಿ ತಲೆಕೂದಲು, ಕಪ್ಪು-ಬಿಳಿ ಬಣ್ಣದ ಗಡ್ಡ ಹೊಂದಿದ್ದು, ಒಂದು ಕಂದು ಬಣ್ಣದ ಅಂಡರವೇಯರ್ ಧರಿಸಿರುತ್ತಾನೆ. ಈ ಚಹರೆಯುಳ್ಳ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಕೊಪ್ಪಳ, ಕೊಪ್ಪಳ ಕಂಟ್ರೋಲ್ ರೂಂ, ನಂ: 08539-230100 ಮತ್ತು 230222, ಕೊಪ್ಪಳ ನಗರ ಪೊಲೀಸ್ ಠಾಣೆ ಪಿಎಸ್‍ಐ, ಮೊ.ಸಂ: 9480803746 ಮತ್ತು ನಗರ ಪೊಲೀಸ್ ಠಾಣೆ ಕೊಪ್ಪಳ ದೂರವಾಣಿ ಸಂಖ್ಯೆ : 08539-221333 ಕ್ಕೆ ತಿಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಅಂಗನವಾಡಿಯಲ್ಲಿ ನೇಮಕಾತಿ : ಅಂಗವಿಕಲ ಗುರುತಿನ ಚೀಟಿ ದುರುಪಯೋಗಕ್ಕೆ ಎಚ್ಚರಿಕೆ

ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಂಗವಿಕಲರ ಮೀಸಲಾತಿ ಪಡೆಯಲು ಪ್ರಮಾಣ ಪತ್ರದ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಎಚ್ಚರಿಕೆ ನೀಡಿದ್ದಾರೆ.
     ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.  ನೇಮಕಾತಿಗೆ ಸಂಬಂಧಿಸಿದ ಅರ್ಜಿ/ಪ್ರಮಾಣ ಪತ್ರಗಳನ್ನು ಪರಿಶೀಲಿಸಿದಾಗ, ಅಂಗವಿಕಲರಲ್ಲಿ ಎರಡು ರೀತಿಯ ಪ್ರಮಾಣಪತ್ರ/ಗುರುತಿನ ಚೀಟಿ ಅಂದರೆ ಶೇ. 75 ರಷ್ಟು ಅಂಗವಿಕಲತೆ ಹಾಗೂ ಶೇ. 60 ಕ್ಕಿಂತ ಕಡಿಮೆ ಅಂಗವಿಕಲತೆ ಇರುವ ಗುರುತಿನ ಚೀಟಿ ಇರಿಸಿಕೊಂಡು, ಸಂದರ್ಭಕ್ಕೆ ತಕ್ಕಂತೆ ಗುರುತಿನ ಚೀಟಿ ಉಪಯೋಗಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ತಿಳಿದುಬಂದಿದೆ.  ಇದು ಕಾನೂನು ಬಾಹಿರವಾಗಿದ್ದು, ದಂಡನೆಗೆ ಅರ್ಹವಾಗಿರುತ್ತದೆ.  ಅಂಗವಿಕಲರು ನಿಜವಾದ ಅಂಗವಿಕಲರ ಒಂದು ಗುರುತಿನ ಚೀಟಿ/ ಪ್ರಮಾಣ ಪತ್ರವನ್ನು ಇಟ್ಟುಕೊಂಡು, ಮತ್ತೊಂದನ್ನು ಅಂಗವಿಕಲರ ಕಲ್ಯಾಣಾಧಿಕಾರಿಗಳು, ಕೊಪ್ಪಳ ಇವರಿಗೆ ಆಗಸ್ಟ್ 10 ರ ಒಳಗಾಗಿ ಹಿಂದಿರುಗಿಸಬೇಕು.  ತಪ್ಪಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Friday, 24 July 2015

ರಾಜ್ಯಮಟ್ಟದ ತರಬೇತಿ ಶಿಬಿರ : ಅರ್ಜಿ ಆಹ್ವಾನ

ಕೊಪ್ಪಳ, ಜು.23 (ಕರ್ನಾಟಕ ವಾರ್ತೆ): ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ತರಕಾರಿ ಮತ್ತು ಪುಷ್ಪ ಬೆಳೆಗಳ ಬೇಸಾಯ ಕ್ರಮಗಳ ಕುರಿತು ಮೂರು ದಿನಗಳ ರಾಜ್ಯಮಟ್ಟದ ತರಬೇತಿ ಶಿಬಿರವನ್ನು ಆಗಸ್ಟ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
         ವಿವಿಧ ತರಕಾರಿ ಮತ್ತು ಪುಷ್ಪ ಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಕೊಯ್ಲೋತ್ತರ ಹಾಗೂ ಸಂಸ್ಕರಣಾ ಕ್ರಮಗಳು, ಮಾರುಕಟ್ಟೆ ವಿಧಾನಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು.  ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಭಾಗವಹಿಸಲಿಚ್ಛಿಸುವ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಆಗಸ್ಟ್.08 ರೊಳಗಾಗಿ ಕೇಂದ್ರದಲ್ಲಿ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ- 587103. ಮೊಬೈಲ್: 9482630790 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಜು.25 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
     ಸಚಿವರು ಜು.25 ರಂದು ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ. 

ಡಿಪ್ಲೋಮಾ ಪ್ರವೇಶಕ್ಕೆ : ಅರ್ಜಿ ಆಹ್ವಾನ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಖಾಲಿ ಉಳಿದಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ಅನುಗುಣವಾದ ಪ್ರಥಮ ಸೆಮಿಸ್ಟರ್‍ನ ವಿವಿಧ ಕೋರ್ಸುಗಳ ಡಿಪ್ಲೋಮಾ ಪ್ರವೇಶಕ್ಕಾಗಿ ಆಫ್-ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
     ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ರಾಜ್ಯದ  State Bank of Mysore  ಯಾವುದೇ ಶಾಖೆಗಳಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಚಾಲ್ತಿ ಖಾತೆ ಸಂಖ್ಯೆ: 64097386381 ಅಥವಾ  Sate Bank of Hyderabad  ನ ಯಾವುದೇ ಶಾಖೆಗಳಲ್ಲಿನ ಖಾತೆ  ED-KEA-DCET-2015 Application Fee Collection Account No. 62417732180 ಗೆ ಪಾವತಿಸಿ, ಬ್ಯಾಂಕ್ ಚಲನ್ ನ್ನು ಪಡೆದು, ಸರ್ಕಾರಿ ಪಾಟಿಟೆಕ್ನಿಕ್, ಕೊಪ್ಪಳ ಸಂಸ್ಥೆಯಲ್ಲಿ ಸಲ್ಲಿಸಿ, ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಗಳನ್ನು ಜು.25 ರಿಂದ ಜು.30 ರ ಮಧ್ಯಾಹ್ನ 2.00 ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕವನ್ನು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.100/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.50/- ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತೋಟಗಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರ : ಅರ್ಜಿ ಆಹ್ವಾನ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ರೈತಮಕ್ಕಳಿಗೆ ಒಂದು ತಿಂಗಳ ತೋಟಗಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಆಸಕ್ತ ರೈತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಶಿಬಿರವು ಆಗಸ್ಟ್ 01 ರಿಂದ ಆಗಸ್ಟ್ 31 ರವರೆಗೆ ಒಂದು ತಿಂಗಳ ಕಾಲ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಪಾಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು 18 ರಿಂದ 33 ವರ್ಷದೊಳಗಿನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು 18 ರಿಂದ 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ನಿಗದಿತ ಅರ್ಜಿ ನಮೂನೆಗಳನ್ನು  ತೋಟಗಾರಿಕಾ ಉಪನಿರ್ದೇಶಕರ ಕಛೇರಿ, ಕೊಪ್ಪಳದಲ್ಲಿ ಜು.22 ರಿಂದ 27 ರವರೆಗೆ ಉಚಿತವಾಗಿ ಪಡೆಯಬಹುದಾಗಿದೆ.
     ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜು.27 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಮೂಲ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಜಮೀನು ಹೊಂದಿರುವ ಬಗ್ಗೆ ಪಹಣಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ವಂಶವೃಕ್ಷ ದೃಢೀಕರಣ ಇತ್ಯಾದಿ ದಾಖಲಾತಿಗಳೊಂದಿಗೆ ಜು.29 ರಂದು ಮುಂಜಾನೆ 11 ಗಂಟೆಗೆ ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ ಜರುಗುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ : ಆಯ್ಕೆ ಪಟ್ಟಿ ಪ್ರಕಟ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ಪ್ರಧಾನ ಮಂತ್ರಿಗಳ ಶಿಷ್ಯವೇತನ ಪಡೆಯಲು ಪ್ರಸಕ್ತ ಸಾಲಿಗೆ ಅರ್ಜಿ ಸಲ್ಲಿಸಿದ್ದ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರ ಮಕ್ಕಳ ಆಯ್ಕೆಪಟ್ಟಿ (ಮೆರಿಟ್ ಲಿಸ್ಟ್)ಯನ್ನು ಕೇಂದ್ರೀಯ ಸೈನಿಕ ಮಂಡಳಿಯ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.
        ಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು, ನವೀಕೃತ ಅರ್ಜಿಗಳನ್ನು ಇನ್ನು ಮುಂದೆ ನವದೆಹಲಿಯ ಕೇಂದ್ರೀಯ ಸೈನಿಕ ಮಂಡಳಿಗೆ ನೇರವಾಗಿ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಕ್ಷಣಾ ಮಂತ್ರಾಲಯದ ದೂರವಾಣಿ ಸಂಖ್ಯೆ: 011-26715250, 011-26192361, ಇ-ಮೇಲ್:  jppmssksb-mod@gov.in ನಿಂದ ಪಡೆಯಬಹುದಾಗಿದೆ ಅಥವಾ ಉಪನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ, ದೂರವಾಣಿ ಸಂಖ್ಯೆ: 08354-235434 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

8ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಡೆಹರಾಡೂನ್‍ನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನ 8ನೇ ತರಗತಿ ಪ್ರವೇಶ ಪರೀಕ್ಷೆಗೆ ಕರ್ನಾಟಕದ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಜುಲೈ 2016ನೇ ಅಧಿವೇಶನಕ್ಕಾಗಿ ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 01 ಮತ್ತು 02 ರಂದು ಅರ್ಹತಾ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು, ದೂರವಾಣಿ ಸಂಖ್ಯೆ: 080-25589459 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹೊಯ್ಸಳ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಇತರರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ 06 ರಿಂದ 15 ವರ್ಷದೊಳಗಿನ ಬಾಲಕರು ಹೊಯ್ಸಳ ಪ್ರಶಸ್ತಿಗೆ ಮತ್ತು ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ಬಾಲಕಿಯರು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಾಲಕ, ಬಾಲಕಿಯ ಧೈರ್ಯ, ಸಾಹಸ ಪ್ರಕರಣವು  2014 ರ ಅಗಸ್ಟ್ ನಿಂದ 2015 ರ ಜುಲೈ ತಿಂಗಳೊಳಗೆ ಜರುಗಿರಬೇಕು. ಅಲ್ಲದೇ, ಪ್ರಶಸ್ತಿಗಾಗಿ ಪ್ರತಿಭೆಯನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಈ ಬಗ್ಗೆ ದಿನಪತ್ರಿಕೆಗಳ ಪ್ರಕಟಣೆಯ ತುಣುಕುಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಆಗಸ್ಟ್ 10 ರೊಳಗಾಗಿ   ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ : ಬಿಡಾಡಿ ದನಗಳ ಬಹಿರಂಗ ಹರಾಜು

ಕೊಪ್ಪಳ, ಜು.24 (ಕರ್ನಾಟಕ ವಾರ್ತೆ): ಕೊಪ್ಪಳ ನಗರದ ರಸ್ತೆ, ಬೀದಿ ಮತ್ತು ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿರುವ ಹಾಗೂ ಅಪಾಯ ತಂದೊಡ್ಡುತ್ತಿರುವ ಬಿಡಾಡಿ ದನಗಳನ್ನು ಜು.31 ರಂದು ಕಂಡಲ್ಲಿಯೇ ಬಹಿರಂಗ ಹರಾಜು ಹಾಕಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ತಿಳಿಸಿದ್ದಾರೆ.
     ಕೊಪ್ಪಳ ನಗರಸಭಾ ವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಹಾವಳಿ ಬಗ್ಗೆ ಅವುಗಳ ಮಾಲೀಕರಿಗೆ ಈಗಾಗಲೇ ಸಾಕಷ್ಟು ಬಾರಿ ಪ್ರಕಟಣೆ ಮೂಲಕ ಎಚ್ಚರಿಸಲಾಗಿತ್ತು ಮತ್ತು ಎಚ್ಚರಿಕೆಗೆ ಸ್ಪಂದಿಸದಿದ್ದರಿಂದ ಅವುಗಳನ್ನು ಬಂಧಿಸಿ ಗೋಶಾಲೆಗೆ ವರ್ಗಾಯಿಸಲಾಗಿತ್ತು. ಆದರೆ ದನಗಳು ತಮ್ಮವೆಂದು ವಾದ ಮಾಡಿದ ಕೆಲವರು ವ್ಯಾಜ್ಯವನ್ನು ಪೊಲೀಸ್ ಠಾಣೆವರೆಗೂ ಕೊಂಡೊಯ್ದರು. ಇನ್ನು ಕೆಲವರು ಗೋಶಾಲೆಯವರೊಂದಿಗೆ ಜಗಳವಾಡಿ, ವರ್ಗಾಯಿಸಿದ ದನಗಳನ್ನು ತೆಗೆದುಕೊಂಡು ಹೋದರು. ಬಳಿಕ ಎರಡು ತಿಂಗಳ ಕಾಲ ಸುಮ್ಮನಿದ್ದ ದನಗಳ ಮಾಲೀಕರು ಮತ್ತದೇ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಪುನಃ ದನಗಳನ್ನು ರಸ್ತೆಗೆ ಬಿಟ್ಟಿದ್ದಾರೆ.
     ಇದರಿಂದಾಗಿ ನಗರದ ರಸ್ತೆ, ಬೀದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಈ ಬಿಡಾಡಿ ದನಗಳು ಇತ್ತೀಚಿಗೆ ನಗರದ ಕುಷ್ಟಗಿ ರಸ್ತೆಯಲ್ಲಿ ಒಂದು ಮಗುವಿಗೆ ಹಾಗೂ ನಗರಸಭೆ ಎದುರು ಒಬ್ಬ ಮನುಷ್ಯನಿಗೆ ಪ್ರಾಣಾಪಾಯ ತಂದೊಡ್ಡಿದ್ದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.  ಅಲ್ಲದೇ ನಗರ ಸುಂದರೀಕರಣ ದೃಷ್ಠಿಯಿಂದ ರಸ್ತೆ ವಿಭಜಕಗಳಲ್ಲಿ ಹಾಕಿರುವ ಗಿಡಗಳನ್ನು ಸಹ ಕಿತ್ತು ತಿನ್ನುತ್ತಿವೆ. ಕರ್ನಾಟಕ ಪುರಸಭೆ ಕಾಯ್ದೆ 1964 ಕಲಂ 239 ರನ್ವಯ ಸಾರ್ವಜನಿಕ ಬೀದಿ ಅಥವಾ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿ ಅಥವಾ ಅಪಾಯ ಉಂಟುಮಾಡುವ ಜಾನುವಾರುಗಳಿಗೆ ಹಾಗೂ ರಕ್ಷಕನಿಲ್ಲದೇ ಜಾನುವಾರುಗಳನ್ನು ಬಿಡಾಡಿಯಾಗಿ ಬಿಟ್ಟು ಉಪದ್ರವವನ್ನುಂಟು ಮಾಡುವವರು ದಂಡನೆಗೆ ಅರ್ಹರಾಗಿರುತ್ತಾರೆ.
     ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಬಿಡಾಡಿ ದನಗಳ ಮಾಲೀಕರಿಗೆ ಕೊನೆಯ ಎಚ್ಚರಿಕೆ ನೀಡಲಾಗುತ್ತಿದ್ದು, ಮೂರು ದಿನಗಳಲ್ಲಿ ತಮ್ಮ ದನಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ಜು.31 ರಂದು ಬೆಳಿಗ್ಗೆ 12 ಗಂಟೆಗೆ ಬಿಡಾಡಿ ದನಗಳನ್ನು ಕಂಡಲ್ಲಿಯೇ ಬಹಿರಂಗ ಹರಾಜು ಹಾಕಲಾಗುವುದು ಎಂದು ತಿಳಿಸಿರುವ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ಅವರು, ನಂತರ ಎದುರಾಗುವ ಕ್ಲೇಮು ಅಥವಾ ನಷ್ಟಗಳಿಗೆ ಕೊಪ್ಪಳ ನಗರಸಭೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. 

Thursday, 23 July 2015

ಜು. 25 ರಿಂದ ತುಂಗಭದ್ರಾ ಕಾಲುವೆಗಳಿಗೆ ನೀರು : ಸಲಹಾ ಸಮಿತಿ ಸಭೆ ನಿರ್ಧಾರ

ಕೊಪ್ಪಳ ಜು. 22 (ಕ.ವಾ): ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಜು. 25 ರಿಂದಲೇ ನೀರು ಹರಿಸಲು ಗುರುವಾರದಂದು ಬೆಂಗಳೂರಿನ ವಿಕಾಸಸೌಧಲ್ಲಿ ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧಾರ ಕೈಗೊಂಡಿದೆ.
     ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಕಾಶಸೌಧದಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 
     ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯಗಳು ಇಂತಿವೆ.  ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ಜು. 25 ರಿಂದ ಆಗಸ್ಟ್ 10 ರವರೆಗೆ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಸಲುವಾಗಿ 3200 ಕ್ಯೂಸೆಕ್‍ನಂತೆ ನೀರಿ ಹರಿಸಲಾಗುವುದರಿಂದ, ಈ ವ್ಯಾಪ್ತಿಯ ಎಲ್ಲ ರೈತರು ಸಹಕರಿಸಬೇಕು.  ಎಡದಂಡೆ ಮುಖ್ಯ ಕಾಲುವೆಗೆ ಜು. 25 ರಿಂದ ನವೆಂಬರ್ 30 ರವರೆಗೆ ಸರಾಸರಿ 3200 ಕ್ಯೂಸೆಕ್‍ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ನೀರು ಪೂರೈಕೆ ಮಾಡಲಾಗುವುದು.  ತುಂಗಭದ್ರಾ ಬಲದಂಡೆ ಕೆಲಮಟ್ಟದ ಕಾಲುವೆಗೆ ಸರಾಸರಿ 600 ಕ್ಯೂಸೆಕ್‍ನಂತೆ ಹಾಗೂ ತುಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಸರಾಸರಿ  1000 ಕ್ಯೂಸೆಕ್‍ನಂತೆ ಜು. 25 ರಿಂದ ನವೆಂಬರ್ 30 ರವರೆಗೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಬಿಡಲಾಗುವುದು.  ರಾಯ ಬಸವಣ್ಣ ಕಾಲುವೆಗೆ ಜೂನ್ 01 ರಿಂದ ಡಿಸೆಂಬರ್ 10 ರವರೆಗೆ ಸರಾಸರಿ 180 ಕ್ಯೂಸೆಕ್‍ನಂತೆ ಅಥವಾ ನೀರಿನ ಲಭ್ಯತೆಗೆ ಅನುಗುಣವಾಗಿ.  ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜುಲೈ 25 ರಿಂದ ನವೆಂಬರ್ 30 ರವರೆಗೆ ಸರಾಸರಿ 16 ಕ್ಯೂಸೆಕ್‍ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ನೀರಿ ಹರಿಸಲಾಗುವುದು.  ಈಗಾಗಲೆ ಬಳ್ಳಾರಿ ನಗರಕ್ಕೆ ಎಲ್.ಎಲ್.ಸಿ. ಮೂಲಕ 0. 01 ಟಿಎಂಸಿ ನೀರನ್ನು ಹಾಗೂ ಸಿಂಧನೂರು ಮತ್ತು ಗಂಗಾವತಿ ಪಟ್ಟಣಗಳಿಗೆ ನದಿ ಮೂಲಕ 0. 500 ಟಿಎಂಸಿ ನೀರನ್ನು ಕುಡಿಯುವ ಸಲುವಾಗಿ ಜುಲೈ ಮಧ್ಯಂತರ ಅವಧಿಯಲ್ಲಿ ಹರಿಸಲಾಗಿದ್ದು, ಈ ರೀತಿ ಕೈಗೊಂಡ ಕ್ರಮವನ್ನು ಸಭೆ ಸ್ವೀಕರಿಸಿತು.
     ಸಭೆಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷ ವಸಂತಕುಮಾರ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್, ಶಾಸಕರುಗಳಾದ ಹಂಪಯ್ಯ ನಾಯಕ್, ಶಿವರಾಜ ಪಾಟೀಲ್, ತಿಪ್ಪರಾಜು, ಪ್ರತಾಪಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ, ನಾಗರಾಜು, ವಿಧಾನಪರಿಷತ್ ಸದಸ್ಯರುಗಳಾದ ಭೋಸರಾಜ್, ಹಾಲಪ್ಪ ಆಚಾರ್, ಮೃತ್ಯುಂಜಯ್ಯ ಜಿನಗ, ತುಂಗಭದ್ರಾ ಯೋಜನಾ ವೃತ್ತದ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ ಗುಂಗಿ, ಅಧೀಕ್ಷಕ ಅಭಿಯಂತರ ಭೋಜಾನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದುಷ್ಕøತ್ಯಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಅತ್ಯವಶ್ಯಕ : ಬಿ.ದಶರಥ


ಕೊಪ್ಪಳ, ಜು.23 (ಕರ್ನಾಟಕ ವಾರ್ತೆ): ಸಮಾಜದಲ್ಲಿ ನಡೆಯುತ್ತಿರುವ ದುಷ್ಕøತ್ಯಗಳನ್ನು ಗಮನಿಸಿದಾಗ ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅಭಿಪ್ರಾಯಪಟ್ಟರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಸಾಕ್ಷಿದಾರರ ಮೊಗಸಾಲೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಹೆಣ್ಣು ಮಗು ರಕ್ಷಿಸಿ, ಭ್ರೂಣ ಹತ್ಯೆ ತಡೆಯಿರಿ ಎಂಬ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಸಮಾಜದಲ್ಲಿನ ಮೌಢ್ಯತೆ ಹಾಗೂ ಮೂಢನಂಬಿಕೆಗಳಿಂದಾಗಿ ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ.  ಅರಬ್ ರಾಷ್ಟ್ರಗಳಲ್ಲಿ ಭಾರತೀಯ ಮೂಲದ ಹೆಣ್ಣು ಮಕ್ಕಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ, ಒಂಟೆ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇಂತಹ ದುಷ್ಕøತ್ಯಗಳನ್ನು ನೋಡಿದಾಗ ಜಾಗತಿಕ ಮಟ್ಟದಲ್ಲಿಯೂ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದು ಯಾರಿಗೂ ಅನಿಸದೇ ಇರದು. ಈ ನಿಟ್ಟಿನಲ್ಲಿ   ಪ್ರಸಕ್ತ ತಿಂಗಳು ಹೆಣ್ಣು ಮಗು ರಕ್ಷಿಸಿ, ಭ್ರೂಣ ಹತ್ಯೆ ತಡೆಯಿರಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಈ ಹಿಂದೆ ದೇಶದ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಓಡಾಡುವುದು ದುಸ್ಥರವಾಗಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲದಿರುವುದು ಸಮಾಧಾನಕರ. ಐ.ಟಿ, ಬಿ.ಟಿ ಯಂತಹ ಬೃಹತ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಅಪರಾತ್ರಿಯಲ್ಲಿ ಕೂಡಾ ನಿರಾಳವಾಗಿ ಓಡಾಡುತ್ತಿದ್ದಾರೆ. ಅಲ್ಲದೇ ಇಂದು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಿರುವ ಮಹಿಳೆಯರು, ಕೂಲಿಯಿಂದ ಹಿಡಿದು ವಿಮಾನ ಚಾಲನೆಯವರೆಗೆ ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಗುರುತಿಸಿಕೊಂಡಿದ್ದಾರೆ. ಆದರೂ ಕೂಡಾ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವುದು ವಿಪರ್ಯಾಸ. ಆದ್ದರಿಂದ ನಾವೆಲ್ಲರೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಕೈಜೋಡಿಸೋಣ ಎಂದು ಬಿ. ದಶರಥ್ ಅವರು ಕರೆ ನೀಡಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಿ.ಪಿ.ವಸಂತ ಪ್ರೇಮಾ, ಸಮಾಜದಲ್ಲಿ ಲಿಂಗಾನುಪಾತ ಕುಸಿಯಲು ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವಾಗಿದೆ. 1000 ಪುರುಷರಿಗೆ 983 ಮಹಿಳಾ ಲಿಂಗಾನುಪಾತ ಹೊಂದಿರುವ ಕೊಪ್ಪಳ ಜಿಲ್ಲೆಯು ಕೂಡಾ ಇದಕ್ಕೆ ಹೊರತಾಗಿಲ್ಲ. ತಿರಸ್ಕøತ ಮಕ್ಕಳಲ್ಲಿಯೂ ಸಹ ಲಿಂಗಾನುಪಾತ ಅಸ್ವಸ್ಥವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಕ್ಷಿಸಲಾಗಿರುವ 20 ತಿರಸ್ಕøತ ಮಕ್ಕಳಲ್ಲಿ 09 ಗಂಡು ಮಕ್ಕಳಿದ್ದರೆ. 11 ಹೆಣ್ಣು ಮಕ್ಕಳಿವೆ. ಸರ್ಕಾರ ಹೆಣ್ಣು ಭ್ರೂಣ ಹತ್ಯೆ ತೊಲಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡಾ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಅಲ್ಲದೇ, ಹೆಣ್ಣು ಅಬಲೆ ಎಂದು ಭಾವಿಸಿ, ಸಮಾಜದಿಂದ ಆಕೆಯನ್ನು ತಿರಸ್ಕರಿಸುತ್ತಿರುವುದು ಹೆಚ್ಚುತ್ತಿದೆ.  ಹೆಣ್ಣುಮಕ್ಕಳು ದೈಹಿಕ ದಬ್ಬಾಳಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆಯಂತಹ ಆತ್ಮ ರಕ್ಷಣೆ ಕಲೆಯನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಒಂದು ಗಂಡಿಗಿಂತ ಒಂದು ಹೆಣ್ಣು ವಿದ್ಯಾವಂತೆಯಾದರೆ ಸಮಾಜದಲ್ಲಿ ದ್ವಿಗುಣ ಬದಲಾವಣೆ ಕಾಣುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
     ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ ಮಾತನಾಡಿ, ಭಾರತ ಈಗಲೂ ಪುರುಷ ಪ್ರಧಾನ ರಾಷ್ಟ್ರವಾಗಿರುವುದರಿಂದ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖಗೊಂಡಿದೆ. ಗರ್ಭದಲ್ಲಿನ ಮಗುವಿನ ಆರೋಗ್ಯ ಪರೀಕ್ಷಿಸುವ ದೃಷ್ಠಿಯಿಂದ ಸ್ಕ್ಯಾನಿಂಗ್ ಯಂತ್ರವನ್ನು ಕಂಡು ಹಿಡಿಯಲಾಯಿತು. ಆದರೆ ಇಂದು ಯಂತ್ರವನ್ನು ಲಿಂಗಪತ್ತೆ ಮಾಡಲು ಉಪಯೋಗಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ  ಸರ್ಕಾರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಹಲವಾರು ಕಾನೂನು ಕ್ರಮಗಳನ್ನು ಕೈಗೊಂಡಿದೆ. ಭ್ರೂಣ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿಸಿದ್ದು ಸಾಬೀತಾದಲ್ಲಿ ಕಾನೂನು ಪ್ರಕಾರ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ, ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ್, ಯುನಿಸೆಫ್‍ನ ತರಬೇತಿ ಸಂಯೋಜಕ ಹರೀಶ ಜೋಗಿ, ವಕೀಲ ಭೀಮಸೇನ್ ಜೋಶಿ ಸೇರಿದಂತೆ ಹಲವಾರು  ಉಪಸ್ಥಿತರಿದ್ದರು.

ಮಾರ್ಗಸೂಚಿ ದರಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ

ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಕೊಪ್ಪಳ ತಾಲೂಕಿನ ಸ್ಥಿರಾಸ್ತಿಗಳಿಗೆ ಮಾರುಕಟ್ಟೆ ಮೌಲ್ಯದ ಪರಿಷ್ಕøತ ಮಾರ್ಗಸೂಚಿ ದರಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
     ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯನ್ನು ಪ್ರಸಕ್ತ ಸಾಲಿನಲ್ಲಿ ಪರಿಷ್ಕರಿಸಲು ಕೇಂದ್ರೀಯ ಮೌಲ್ಯಮಾಪನ ಸಮಿತಿಯ ಕೊಪ್ಪಳ ಉಪಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ದರಗಳನ್ನು ಆಧಾರವಾಗಿಟ್ಟುಕೊಂಡು ಪ್ರಸಕ್ತ ವಾಸ್ತವಿಕತೆಯನ್ನು ಪರಿಶೀಲಿಸಿ ಅವಶ್ಯವಿರುವ ಪ್ರದೇಶಗಳಿಗೆ ಮಾರ್ಗಸೂಚಿಯನ್ನು ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಈ ಕುರಿತಂತೆ ಸಾರ್ವಜನಿಕರ ಮಾಹಿತಿಗಾಗಿ ತಾಲೂಕಿನ ಸ್ವಸ್ಥಿರಾಸ್ತಿಗಳ ಪರಿಷ್ಕøತ ಮಾರ್ಗಸೂಚಿ ದರಪಟ್ಟಿಯನ್ನು ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದೆ.  ಮಾರ್ಗಸೂಚಿ ದರಪಟ್ಟಿ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಲಿಖಿತ ರೂಪದಲ್ಲಿ 15 ದಿನಗಳೊಳಗಾಗಿ  ಕೊಪ್ಪಳ ಉಪನೊಂದಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೊಪ್ಪಳ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರ ಕಾಡ್ ಸಂಖ್ಯೆ ಸಲ್ಲಿಸಲು ಸೂಚನೆ

ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ಸಾಮಾಜಿಕ ಭದ್ರತೆ ಯೋಜನೆ ಅಡಿ ವಿವಿಧ ಮಾಶಾಸನಗಳನ್ನು ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಮಾಶಾಸನಗಳಿಗೆ ಆಧಾರ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ.
     ಈಗಾಗಲೆ ಆಧಾರ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿದ ಫಲಾನುಭವಿಗಳನ್ನು ಹೊರತುಪಡಿಸಿ, ಇದುವರೆಗೂ ಸಲ್ಲಿಸದೇ ಇರುವ ನಗರಸಭೆ ವ್ಯಾಪ್ತಿಯ ಫಲಾನುಭವಿಗಳು, ಕೂಡಲೇ ತಮ್ಮ ಆಧಾರ ಸಂಖ್ಯೆಯನ್ನು ತಮ್ಮ ವಾರ್ಡಿನ ಬಿಲ್ ಕಲೆಕ್ಟರ್ ಅವರಿಗೆ  ಹಾಗೂ ಗ್ರಾಮ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳು ಆಯಾ ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಸಹಾಯಕರಿಗೆ ನೀಡುವಂತೆ ಕೊಪ್ಪಳ ಗ್ರೇಡ್-2 ತಹಶೀಲ್ದಾರ ಯು. ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.26 ರಂದು ಸನ್ಮಾನ ಸಮಾರಂಭ

ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸರ್ಕಾರಿ ಡಿ-ಗ್ರುಪ್ ನೌಕರರ ಕೇಂದ್ರ ಸಂಘದ ಕೊಪ್ಪಳ ಘಟಕದ ವತಿಯಿಂದ ವಯೋ ನಿವೃತ್ತಿ ಹೊಂದಿದ ಸಂಘದ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ಜು.26 ರಂದು ಬೆಳಿಗ್ಗೆ 9.30 ಗಂಟೆಗೆ ಕೊಪ್ಪಳ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
     ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಕೊಪ್ಪಳ ಘಟಕದ ಅಧ್ಯಕ್ಷ ಹನುಮಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಟಿಐ ಸೀಟುಗಳ ಹರಾಜು ಪ್ರಕ್ರಿಯೆ : ಅರ್ಜಿ ಆಹ್ವಾನ

ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಮ್.ಸಿ ಯೋಜನೆಯಡಿಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್‍ಶಿಲ್ಪಿ ವೃತ್ತಿ ವಿಭಾಗದ ತಲಾ 05 ಸೀಟುಗಳನ್ನು ಹರಾಜು ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಹರಾಜಿನಲ್ಲಿ ಭಾಗವಹಿಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜು.30 ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಹಾಗೂ ಹರಾಜು ಕೈಗೊಳ್ಳುವ ದಿನಾಂಕವಾಗಿದೆ. 100 ರೂ ಪ್ರವೇಶ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಖಾಲಿ ಇರುವ ಸೀಟುಗಳಿಗನುಗುಣವಾಗಿ ಪ್ರವೇಶ ಅರ್ಜಿಗಳು ನಿಗದಿತ ಅವಧಿಯೊಳಗಾಗಿ ಬಾರದಿದ್ದಲ್ಲಿ ಹರಾಜು ಕೈಗೊಳ್ಳುವ ದಿನಾಂಕ ಮುಂದೂಡಲಾಗುವುದು. ಹರಾಜಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಹರಾಜಿನ ದಿನದಂದು ಹರಾಜಿನ ಮೊತ್ತದ ಜೊತೆಗೆ ಮೊದಲನೆಯ ವರ್ಷದ ಬೋಧನಾ ಶುಲ್ಕ 2200 ರೂ.ಗಳನ್ನು ತುಂಬಬೇಕು ಹಾಗೂ ಎರಡನೇಯ ವರ್ಷದ ಬೋಧನಾ ಶುಲ್ಕವನ್ನು ಜು.31 ರೊಳಗಾಗಿ ಭರಿಸಬೇಕು. ಹರಾಜು ಪ್ರಕ್ರಿಯೆಯಲ್ಲಿ ಐ.ಎಮ್.ಸಿ ಸೊಸೈಟಿ ನಿರ್ಣಯವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತರಬೇತಿ ಅಧಿಕಾರಿಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಂಗಳೂರು, ತಾ||ಯಲಬುರ್ಗಾ, ಜಿ||ಕೊಪ್ಪಳ, ಮೊಬೈಲ್: 9880993744 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಐ.ಎಮ್.ಸಿ ಕೋಟಾದಡಿ ಐಟಿಐ ಪ್ರವೇಶ : ಅರ್ಜಿ ಆಹ್ವಾನ

ಕೊಪ್ಪಳ, ಜು.22 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಮ್.ಸಿ ಕೋಟಾದಡಿಯಲ್ಲಿ ಜೋಡಣೆಗಾರ ಮತ್ತು ವಿದ್ಯುತ್‍ಶಿಲ್ಪಿ ವೃತ್ತಿ ವಿಭಾಗದ ತಲಾ 05 ಸೀಟುಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಫಾರಂ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಜವಾಹರ ರೋಡ್, ಕೊಪ್ಪಳ, ದೂರವಾಣಿ ಸಂಖ್ಯೆ: 08539-221367 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Wednesday, 22 July 2015

ಮೈಸೂರು ಸಿಲ್ಕ್ ಸೀರೆ ಗುಣಮಟ್ಟದಲ್ಲಿ ವಿಶ್ವಾಸಾರ್ಹತೆ - ಆರ್.ಆರ್. ಜನ್ನು


 ಕೊಪ್ಪಳ ಜು. 22 (ಕ.ವಾ): ಗುಣಮಟ್ಟ ಹಾಗೂ ಉತ್ತಮ ವಿನ್ಯಾಸಕ್ಕೆ ಪ್ರಸಿದ್ಧಿಯಾಗಿರುವ ಮೈಸೂರು ಸಿಲ್ಕ್ ಸೀರೆಗಳು ಗುಣಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು, ವಿದೇಶಗಳಲ್ಲೂ ವ್ಯಾಪಕ ಬೇಡಿಕೆಯನ್ನು ಪಡೆದುಕೊಂಡಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.

    ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ಜಿಲ್ಲೆಯ ಗಂಗಾವತಿ ನಗರದ ಸರೋಜಮ್ಮ ಕಲ್ಯಾಣಮಂಟಪದಲ್ಲಿ  ಬುಧವಾರ ಏರ್ಪಡಿಸಲಾದ  ಜು. 27 ರವರೆಗೆ ಆರು ದಿನಗಳ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಗೆ ಕುಟುಂಬ ಸಮೇತ ಆಗಮಿಸಿದ್ದ ಆರ್.ಆರ್. ಜನ್ನು ಅವರು ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದರು.

     ಈ ಹಿಂದೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದರಿಂದ ಮೈಸೂರು ಸಿಲ್ಕ್ ಸೀರೆ ವಹಿವಾಟಿನ ಬಗ್ಗೆ ಮಾಹಿತಿ ಹೊಂದಿದ್ದೇನೆ.  ಮೈಸೂರು ಸಿಲ್ಕ್ ಸೀರೆ ಉತ್ತಮ ಗುಣಮಟ್ಟಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು, ಅದರ ಜೊತೆಗೆ ಪ್ರತಿ ತಿಂಗಳೂ ವಿವಿಧ ಆಕರ್ಷಕ ವಿನ್ಯಾಸಗಳನ್ನು ರೂಪಿಸುವ ಮೂಲಕ, ವ್ಯಾಪಕ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.  ವಿದೇಶಗಳಿಂದ ಅತ್ಯಾಧುನಿಕ ಯಂತ್ರವನ್ನು ಖರೀದಿಸಲಾಗುತ್ತಿದ್ದು, ರೇಷ್ಮೆ ಸೀರೆ ಹಾಗೂ ವಸ್ತ್ರಗಳ ಗುಣಮಟ್ಟವನ್ನು ಹಾಗೂ ಆಕರ್ಷಕ ವಿನ್ಯಾಸವನ್ನು ರೂಪಿಸಲು ಈ ಯಂತ್ರದಿಂದ ಸಾಧ್ಯವಾಗಿದೆ.   ಮೈಸೂರು ಸಿಲ್ಕ್ ಸೀರೆಗಳು ಇತ್ತೀಚೆಗೆ ಹೊಸ ಹೊಸ ಡಿಸೈನ್‍ನಲ್ಲಿ ತಯಾರಿಸಲಾಗುತ್ತಿದ್ದು, ಬರುವ ವರಮಹಾಲಕ್ಷ್ಮಿ ಹಾಗೂ ಗೌರಿ ಗಣೇಶ ಹಬ್ಬದ ನಿಮಿತ್ಯ ಗಂಗಾವತಿ ನಗರದಲ್ಲಿ ಜು. 27 ರವರೆಗೆ ಮಾರಾಟ ಮೇಳ ಏರ್ಪಡಿಸಲಾಗಿದ್ದು, ಕಳೆದ ವರ್ಷ ನಿಗಮದ ವತಿಯಿಂದ ಗಂಗಾವತಿಯಲ್ಲಿ ಏರ್ಪಡಿಸಲಾದ ಮಾರಾಟ ಮೇಳದಲ್ಲಿ 32 ಲಕ್ಷ ರೂ. ಗಳ ವಹಿವಾಟು ಆಗಿದ್ದು, ಈ ಬಾರಿಯೂ ಉತ್ತಮ ವಹಿವಾಟಿನ ನಿರೀಕ್ಷೆ ಇದೆ.  ರೇಷ್ಮೆ ಸೀರೆ ಕೊಳ್ಳಲು ಬಯಸುವ ಆಸಕ್ತರು, ಉತ್ತಮ ಗುಣಮಟ್ಟ ಹೊಂದಿರುವ ಮೈಸೂರು ಸಿಲ್ಕ್ ಸೀರೆಗಳನ್ನೇ ಖರೀದಿಸಲು ಮುಂದಾಗಬೇಕು  ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
     ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾರಾಟ ವ್ಯವಸ್ಥಾಪಕ ಫಿಲೋಮನ್ ರಾಜ್ ಅವರು ಮಾತನಾಡಿ, ಬೇಡಿಕೆ ಆಧಾರದಲ್ಲಿ, ಗ್ರಾಹಕರು ಬಯಸುವ ಡಿಸೈನ್‍ಗಳ ಸೀರೆಗಳನ್ನು ಅತ್ಯಂತ ತ್ವರಿತವಾಗಿ ತಯಾರಿಸಿ ನೀಡಲು ಸಾಧ್ಯವಾಗುವಂತೆ ನಿಗಮವು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಿ, ಅಳವಡಿಸಿದೆ.  ಕಳೆದ ವರ್ಷ ನಿಗಮವು ಒಟ್ಟು 146 ಕೋಟಿ ರೂ. ಗಳ ವಹಿವಾಟು ನಡೆಸಿದೆ. ಉತ್ತಮ ಗುಣಮಟ್ಟ ಹಾಗೂ ನವೀನ ಮಾದರಿಯ ಡಿಸೈನ್‍ಗಳನ್ನು ರೂಪಿಸಿ, ಗ್ರಾಹಕರು ಮೆಚ್ಚುವ ರೀತಿಯಲ್ಲಿ ಸೀರೆಗಳನ್ನು ಪೂರೈಸಿದ್ದರಿಂದ, ವಹಿವಾಟು ಈ ಹಿಂದಿನ ವರ್ಷಕ್ಕಿಂತ ಶೇ. 15 ರಷ್ಟು ಹೆಚ್ಚಳವಾಗಿದೆ.  ಸರ್ಕಾರಿ ನೌಕರರು ಕಂತುಗಳ ಆಧಾರದಲ್ಲಿ ರೇಷ್ಮೆ ಸೀರೆ ಖರೀದಿಸಲು ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
     ಕೊಪ್ಪಳ ತಹಸಿಲ್ದಾರ್ ವೆಂಕನಗೌಡ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ನಿಗಮದ ಮಾರಾಟ ವಿಭಾಗದ ಇತರೆ ಅಧಿಕಾರಿ, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ವಿವಿಧ ಹೊಸ ಮಾದರಿಯ ರೇಷ್ಮೆ ಸೀರಿಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.  ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕುಟುಂಬ ಸಮೇತ, ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಆಗಮಿಸಿ
ದ್ದರು.

ರಾಜ್ಯ ಪ್ರಶಸ್ತಿ : ನಾಮ ನಿರ್ದೇಶನಗಳ ಆಹ್ವಾನ

ಕೊಪ್ಪಳ, ಜು.21 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿ ಹಾಗೂ ಸಂಸ್ಥೆಗಳಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
      ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದಕ್ಕೆ ಅರ್ಹರಿದ್ದು, ಆಯ್ಕೆಯಾದವರಿಗೆ ತಲಾ 25,000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ 1.00 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯಂದು ಕೊಡಮಾಡಿ ಗೌರವಿಸಲಾಗುವುದು. ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆಯಬಹುದಾಗಿದೆ. ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ, ಆಗಸ್ಟ್ 14 ರೊಳಗಾಗಿ ಈ   ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕಿ ಉಳಿದ ಸೀಟುಗಳ ಭರ್ತಿ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಜು.21 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಜಿಲ್ಲೆಯ ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪ್ರಕ್ರಿಯೆ (ಎಕ್ಸ್‍ಟೆಂಡೆಡ್ ರೌಂಡ್) ನಂತರ ಉಳಿದ ಸೀಟುಗಳನ್ನು ಭರ್ತಿಗೊಳಿಸಲು ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಪ್ರವೇಶಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     14 ವರ್ಷ ಮೇಲ್ಪಟ್ಟ ವಯೋಮಿತಿಯ 8ನೇ ತರಗತಿ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಜೆ.ಒ.ಸಿ, ಡಿಪ್ಲೋಮಾ ದಲ್ಲಿ ಉತ್ತೀರ್ಣರಾದ ಆಸಕ್ತ ಅಭ್ಯರ್ಥಿಗಳು ರಾಜ್ಯದ 258 ಸರ್ಕಾರಿ ಮತ್ತು 196 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಿ.ಟಿ.ಎಸ್ ಯೋಜನೆಯಡಿಯಲ್ಲಿ ಉಳಿದಿರುವ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಎಂ.ಡಿ.ಟಿ.ಎಸ್, ಎಲ್.ಎಂ.ವಿ ವೃತ್ತಿಗಳಿಗೆ ಕನಿಷ್ಠ 18 ವಯೋಮಿತಿ ಹಾಗೂ ಎಮ್.ಡಿ.ಟಿ.ಎಸ್ (ಹೆಚ್.ಎಮ್.ವಿ) ವೃತ್ತಿಗೆ ಕನಿಷ್ಠ 21 ವರ್ಷಗಳ ವಯೋಮಿತಿ ಹೊಂದಿರುವುದು ಕಡ್ಡಾಯವಾಗಿದೆ. ಉಳಿದ ಸೀಟುಗಳಿಗೆ ಪ್ರವೇಶ ಪಡೆಯಲಿಚ್ಛಿಸುವವರು ಇಲಾಖೆಯ ವೆಬ್‍ಸೈಟ್  www.emptrg.kar.nic.in ಅಥವಾ  www.det-kar.com/admission-2015 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಜು.24 ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಈಗಾಗಲೇ ಆನ್‍ಲೈನ್ ಪ್ರವೇಶಾತಿಗೆ ಅರ್ಜಿ ಸಲ್ಲಿಸಿರುವವರು ಪುನಃ ಹೊಸದಾಗಿ ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಆದರೆ, ಕಡ್ಡಾಯವಾಗಿ ಪ್ರಿಪೆರೆನ್ಸ್ ಆ್ಯಡಿಂಗ್ ಮಾಡಿಕೊಂಡು ಸಬ್‍ಮಿಟ್ ಮಾಡಬೇಕಾಗುತ್ತದೆ ಹಾಗೂ ವೆಬ್‍ಸೈಟ್‍ನಲ್ಲಿ ಸ್ಟೇಟಸ್ ಪರಿಶೀಲಿಸಿ, ಖಾತರಿಪಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊಬೈಲ್ ರಿಪೇರಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.21 (ಕರ್ನಾಟಕ ವಾರ್ತೆ): ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಯುವಕರಿಗೆ 30 ದಿನಗಳ ಉಚಿತ ಮೊಬೈಲ್ ರಿಪೇರಿ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲು ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರಬೇಕು. 18 ರಿಂದ 40 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಗಸ್ಟ್ 06 ಅರ್ಜಿಗಳನ್ನು ವಿತರಿಸುವ ಹಾಗೂ ಸ್ವೀಕರಿಸುವ ಕೊನೆ ದಿನಾಂಕವಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ, ಆಶೋಕ ಸರ್ಕಲ್ ಹತ್ತಿರ, ಕೊಪ್ಪಳ, ದೂರವಾಣಿ ಸಂಖ್ಯೆ: 08539-231038 ಇವರಿಗೆ ಸಲ್ಲಿಸಬಹುದು. ಆಗಸ್ಟ್.07 ರಂದು ಬೆಳಿಗ್ಗೆ 10.30 ಗಂಟೆಗೆ ಸಂಸ್ಥೆಯಲ್ಲಿ ಸಂದರ್ಶನ ನಡೆಯಲಿದ್ದು, ಆಗಸ್ಟ್.10 ರಿಂದ ತರಬೇತಿ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಹಾಗೂ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆ

ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ):  ಪೊಲೀಸ್ ಅಧಿಕಾರಿಗಳ/ ಸಿಬ್ಬಂದಿಗಳ   ವಿರುದ್ಧ  ದೂರುಗಳ ವಿಚಾರಣೆಗಾಗಿ ರಾಜ್ಯಮಟ್ಟದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ಬಹಳಷ್ಟು ಜಿಲ್ಲೆಗಳಲ್ಲಿ ದೂರು ಪ್ರಾಧಿಕಾರ ಕಾರ್ಯಾರಂಭ ಮಾಡಿರುತ್ತದೆ.  
ಯಾವುದೇ ಸಾರ್ವಜನಿಕ ಸದಸ್ಯನ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಪೊಲೀಸ್ ವಶದಲ್ಲಿದ್ದಾಗ ಮರಣ, ಐ.ಪಿ.ಸಿ. ಸೆಕ್ಷನ್ 320 ರಲ್ಲಿ ತಿಳಿಸಲಾದಂತಹ ಗಂಭೀರ ಗಾಯ, ಮಾನಭಂಗ ಅಥವಾ ಮಾನಭಂಗಕ್ಕೆ ಯತ್ನ ಅಥವಾ ಕಾನೂನು ಪ್ರಕಾರವಲ್ಲದ ಬಂಧನ ಅಥವಾ ವಶದಲ್ಲಿರಿಸಿಕೊಳ್ಳುವುದನ್ನು  ದುರ್ನಡತೆಯ  ವ್ಯಾಖ್ಯಾನಕ್ಕೆ ಸೇರಿಸಲಾಗಿದೆ.    
ರಾಜ್ಯ ಮಟ್ಟದ ಪ್ರಾಧಿಕಾರವು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದ ನಿವೃತ್ತ  ನಾಗರಿಕ ಸೇವಾ  ಅಧಿಕಾರಿ, ನಾಗರಿಕ ಸಮಾಜದಿಂದ ಬಂದ ಒಬ್ಬ ವ್ಯಕ್ತಿ, ಹಾಗೂ ಡಿ.ಐ.ಜಿ.ಪಿ. ಹುದ್ದೆಗಿಂತ ಕಡಿಮೆ ಇಲ್ಲದ ಓರ್ವ ಮಹಿಳಾ ಐ.ಪಿ.ಎಸ್. ಅಧಿಕಾರಿ ಸದಸ್ಯರಾಗಿ ಹಾಗೂ ಹೆಚ್ಚುವರಿ ಪೊಲೀಸ್ ಮಾಹಾ ನಿರ್ದೇಶಕರು(ಕುಂದು ಕೊರತೆ) ಎಕ್ಸ್‍ಆಫಿಷಿಯೋ ಸದಸ್ಯರಾಗಿ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಹೊಂದಿರುತ್ತದೆ. ಈ ರಾಜ್ಯಮಟ್ಟದ ಪ್ರಾಧಿಕಾರವು ಹೆಚ್ಚುವರಿ  ಪೊಲೀಸ್ ಅಧೀಕ್ಷಕರು ಸೇರಿದಂತೆ ಪೊಲೀಸ್ ಅಧೀಕ್ಷಕರು ಮತ್ತು ಮೇಲ್ಪಟ್ಟ ಅಧಿಕಾರಿಗಳ ಮೇಲಿನ ತೀವ್ರತರವಾದ ದುರ್ನಡತೆಯ ದೂರುಗಳ ಬಗ್ಗೆ ವಿಚಾರಣೆ ಮಾಡಲಿದೆ.
ಜಿಲ್ಲಾ ಮಟ್ಟದ ಪ್ರಾಧಿಕಾರವು ವಿಭಾಗೀಯ ಆಯುಕ್ತರನ್ನು ಅಧ್ಯಕ್ಷರನ್ನಾಗಿ,  ಸರ್ಕಾರದ  ಜಂಟಿ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದ ನಿವೃತ್ತ ನಾಗರಿಕ ಸೇವಾ ಅಧಿಕಾರಿ, ನಾಗರಿಕ ಸಮಾಜದಿಂದ ಓರ್ವ ವ್ಯಕ್ತಿಯನ್ನು ಸದಸ್ಯರನ್ನಾಗಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಎಕ್ಸ್ ಅಫಿಷಿಯೋ ಸದಸ್ಯ ಮತ್ತು ಸದಸ್ಯ ಕಾರ್ಯದರ್ಶಿಯನ್ನಾಗಿ ಹೊಂದಿರುತ್ತದೆ. ಈ ಪ್ರಾಧಿಕಾರವು ಡಿವೈಎಸ್‍ಪಿ ಮತ್ತು ಕೆಳಹಂತದ ಅಧಿಕಾರಿ/ಸಿಬ್ಬಂದಿಗಳ ತೀವ್ರತರನಾದ ದುರ್ನಡತೆಯ ದೂರಿನ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಪೊಲೀಸ್ ಡಿ.ಜಿ. ಮತ್ತು ಐ.ಜಿ.ಪಿ. ಕಚೇರಿ ಪ್ರಕಟಣೆ ತಿಳಿಸಿದೆ.

ಹೆಣ್ಣು ಮಗು ರಕ್ಷಿಸಿ- ಕಾನೂನು ಅರಿವು ಕಾರ್ಯಕ್ರಮ

ಕೊಪ್ಪಳ ಜು. 22 (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ‘ಹೆಣ್ಣು ಮಗು ರಕ್ಷಿಸಿ, ಭ್ರೂಣ ಹತ್ಯೆ ತಡೆಯಿರಿ’ ಕುರಿತ ಕಾನೂನು ಅರಿವು ಕಾರ್ಯಕ್ರಮ ಜು. 23 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ನಡೆಯಲಿದೆ.
     ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಅಧ್ಯಕ್ಷತೆ ವಹಿಸಲಿದ್ದು, ಕಿರಿಯ ಸಿವಿಲ್ ನ್ಯಾಯಾಧೀಶರಾದ ಕವಿತಾ ಶಿವರಾಯ ಉಂಡೋಡಿ, ಜಿಲ್ಲಾ ಸರ್ಕಾರಿ ವಕೀಲ ಬಿ. ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಮಾಲಿಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕಾರ್ಯಕ್ರಮದ ಅಂಗವಾಗಿ ವಕೀಲ ಭೀಮಸೇನ್ ಜೋಶಿ ಅವರು ಸ್ತ್ರೀ ಭ್ರೂಣ ಹತ್ಯೆ ಕಾಯ್ದೆ ಕುರಿತು ಮತ್ತು ಯುನಿಸೆಫ್‍ನ ತರಬೇತಿ ಸಂಯೋಜಕ ಹರೀಶ ಜೋಗಿ ಅವರು ಸಾಮಾಜಿಕ ಹಾಗೂ ಕಾನೂನು ಅಡಿ ಹೆಣ್ಣು ಮಗುವಿನ ರಕ್ಷಣೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

ಈರುಳ್ಳಿ ಬೆಳೆಗೆ ಮಜ್ಜಿಗೆ ರೋಗ : ನಿರ್ವಹಣೆಗೆ ರೈತರಿಗೆ ಸಲಹೆಗಳು

ಕೊಪ್ಪಳ ಜು. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕೆಲವೆಡೆ ಈರುಳ್ಳಿ (ಉಳ್ಳಾಗಡ್ಡಿ) ಬೆಳೆಗೆ     ಎಲೆ ತಿನ್ನುವ ಹಸಿರು ಹುಳದ ಜೊತೆಗೆ ಮಜ್ಜಿಗೆ ರೋಗ ಕಾಣಿಸಿಕೊಂಡಿದ್ದು, ಇದರ ನಿಯಂತ್ರಣಕ್ಕಾಗಿ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
ಬೇವಿನ ಹಿಂಡಿಯನ್ನು ಯಥೇಚ್ಚವಾಗಿ ಬಳಸುವುದರಿಂದ ಎಲೆ ತಿನ್ನುವ, ಗಡ್ಡೆ ಕೊರೆಯುವ ಮತ್ತು ರಸಹೀರುವ ಕೀಟಗಳನ್ನು ಹತೋಟಿಯಲ್ಲಿಡಬಹುದಾಗಿದೆ. ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕಾಗಿ ಬೇವಿನ ಕಷಾಯ ಬಳಸಬಹುದಾಗಿದೆ. ನೇರಳೆ ಮಚ್ಚೆ ರೋಗ ಎಂಬ ಮಜ್ಜಿಗೆ ರೋಗಕ್ಕೆ 2 ಗ್ರಾಂ. ಮ್ಯಾಂಕೋಜೆಬ್ 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗ, ಕೀಟಗಳ ಹಾವಳಿ ಹೆಚ್ಚಾದಾಗ ಲ್ಯಾಂಬ್ಡಾ ಸಿಯೊಲೋಥ್ರೀನ್ ಶೇ.5 ಇ.ಸಿ. 1 ಮೀ.ಲೀ. 1 ಲೀ. ನೀರಿಗೆ ಬೆರೆಸಿ ಅದರ ಜೊತೆಗೆ ಮ್ಯಾಂಕೊ ಜೆಬ್ ಮತ್ತು ಕಾರ್ಬೆಂಡೆಜಿಮ್  ರಾಸಾಯನಿಕಗಳನ್ನು ಹೊಂದಿದ ಸಂಯುಕ್ತ ಶಿಲೀಂದ್ರ ನಾಶಕವನ್ನು 1ಗ್ರಾಂ./ಲೀ. ನೀರಿಗೆ ಬೆರೆಸಿ ಸಿಂಪಡಿಸಿ ನಿಯಂತ್ರಿಸಬಹುದು.
    ನಾಟಿ ಮಾಡಿದ 60-70 ದಿನಗಳಲ್ಲಿ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಎಕರೆಗೆ 25 ಕಿ.ಗ್ರಾಂ. ಬಳಸಬೇಕು. ಸೂಕ್ತ ಕಳೆನಾಶಕ ಬಳಸಿ ಕಳೆ ನಿಯಂತ್ರಣ ಮಾಡಿ, ನಾಟಿ ಮಾಡಿದ 70 ದಿನಗಳ ನಂತರ  ಮಾಲಿಕ ಹೈಡ್ರಾಜೈಡ್ 500 ಪಿ.ಪಿ.ಎಂ. ಬಳಸುವ ಮೂಲಕ ಮತ್ತು ಕೊಯ್ಲು ಮಾಡುವ 15 ದಿನಗಳ ಮುಂಚೆ ನೀರು ಕೊಡುವುದನ್ನು ನಿಲ್ಲಿಸುವ ಮೂಲಕ ಉತ್ತಮ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದಾಗಿದೆ.  ಕಟಾವು ಮಾಡುವಾಗ ಒಂದು ಇಂಚು ದೇಟನ್ನು  ಬಿಟ್ಟು ಕಟಾವು ಮಾಡಿ  ಹೊಲದಲ್ಲಿಯೇ 15 ದಿನಗಳಕಾಲ ಒಣಗಿಸಬೇಕು. ನಂತರ ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸಬೇಕು. ಇದರಿಂದ ಒಳ್ಳೆಯ ಆದಾಯ ನಿರೀಕ್ಷಿಸಬಹುದು.
ಪ್ರಸ್ತುತ ಮುಂಗಾರು ಮಳೆ ಕೊರತೆ ಕಂಡುಬಂದಿದ್ದು, ಬರದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ರೈತರು ಅಲ್ಪಾವಧಿ ಬೆಳೆಗಳು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತರಕಾರಿಗಳನ್ನು ಬೆಳೆದು ನಷ್ಟ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿ ಶ್ರಾವಣ ಮಾಸದಿಂದ ಸಾಲು ಸಾಲಾಗಿ ಹಬ್ಬಗಳು ಬರುವುದರಿಂದ ಪುಷ್ಪಗಳ ಬೇಡಿಕೆ ಹೆಚ್ಚಾಗಲಿದ್ದು, ಚೆಂಡು ಹೂ, ಗಲಾಟೆ ಹೂ, ಸೇವಂತಿಗೆ ಹೂ ಮುಂತಾದ ಅಲ್ಪಾವಧಿ ಹೂಗಳನ್ನು ಬೆಳೆದು ಆದಾಯ ಪಡೆಯಬಹುದು.  ರೈತರು ಇಂತಹ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಪರ್ಯಾಯ ಬೆಳೆಗಳನ್ನು ಬೆಳೆಯುವುದರ ಮೂಲಕ  ನಷ್ಟ ಅಗುವುದನ್ನು ತಪ್ಪಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಗಳನ್ನಾಗಲಿ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳವನ್ನಾಗಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Monday, 20 July 2015

ಮನೋವಿಜ್ಞಾನದಿಂದ ಮಾನಸಿಕ ಒತ್ತಡ ನಿರ್ವಹಣೆ ಸಾಧ್ಯ : ಕೃಷ್ಣ ಡಿ.ಉದಪುಡಿಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಮನುಷ್ಯನ ದಿನನಿತ್ಯದ ಜಂಜಾಟಗಳ ಮಾನಸಿಕ ಒತ್ತಡವನ್ನು ಮನೋವಿಜ್ಞಾನ ಬಳಕೆಯ ವಿಧಾನದಿಂದ ನಿರ್ವಹಣೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮಾನಸಿಕ ದೃಢತೆ ಪಡೆಯುವಂತೆ ಮಾಡುವ ಉದ್ದೇಶದಿಂದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ.ಡಿ.ಉದಪುಡಿ ತಿಳಿಸಿದರು. 

         ಜಿಲ್ಲಾ ಪಂಚಾಯತಿ, ಯುನಿಸೆಫ್ ಹಾಗೂ 6th ಸೆನ್ಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಜು.20 ಮತ್ತು 21 ರಂದು ಎರಡು ದಿನಗಳ ಕಾಲ ನಗರದ ಬಿ.ಎಸ್. ಪವಾರ್ ಹೊಟೆಲ್‍ನಲ್ಲಿ ಸೋಮವಾರದಿಂದ ಏರ್ಪಡಿಸಲಾಗಿರುವ ಬದಲಾವಣೆ ನಿರ್ವಹಣೆ ಹಾಗೂ ನಾಯಕತ್ವದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
              ಸದಾ ಒಂದಿಲ್ಲೊಂದು ಸಾರ್ವಜನಿಕ ಜಂಜಾಟ ಹಾಗೂ ಒತ್ತಡಗಳಲ್ಲಿ ಸಿಲುಕಿ ಮಾನಸಿಕ ನೆಮ್ಮದಿಯಿಂದ ವಂಚಿತಗೊಳ್ಳುತ್ತಿರುವ ಚುನಾಯಿತ ಪ್ರತಿನಿಧಿಗಳು, ಮನೋವಿಜ್ಞಾನದ ಬಳಕೆಯ ವಿಧಾನದಿಂದ ಮಾನಸಿಕ ದೃಢತೆಯ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿದೆ.  ಹಿಂದುಳಿದ ಜಿಲ್ಲೆಯಾದ ಕೊಪ್ಪಳದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಉತ್ತಮವಾಗಿ ಹಾಗೂ ಕ್ಷಿಪ್ರಗತಿಯಲ್ಲಿ ಅನುಷ್ಠಾನಗೊಳಿಸಲು ಈ ತರಬೇತಿ ಕಾರ್ಯಾಗಾರವು ಅತ್ಯುಪಯುಕ್ತವಾಗಿದೆ. ಈ ತರಬೇತಿಯು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಭಾಗಿತ್ವ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಪಂಚಾಯಿತಿಯ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನ ಎಲ್ಲಾ ಸದಸ್ಯರು   ತರಬೇತಿಯ ಸದುಪಯೋಗ ಪಡೆದುಕೊಂಡು, ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  ಈಗಾಗಲೇ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂರು ಗುಂಪುಗಳಿಗೆ ತರಬೇತಿ ನೀಡಲಾಗಿದೆ.  ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೂ ಸಹ ಈ ತರಬೇತಿಯನ್ನು ವಿಸ್ತರಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷ್ಣ ಉದಪುಡಿ ಅವರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಯತ್ನದಿಂದಾಗಿ ಇಂದು ಈ ತರಬೆತಿಯು ಕಾರ್ಯರೂಪ ಪಡೆದುಕೊಂಡಿದೆ. ಈ ಹಿಂದೆ ಇದೇ ತರಬೇತಿ ಪಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ಕಂಡು ಬಂದಿದ್ದು, ಈ ಕಾರಣದಿಂದಾಗಿಯೇ ಈ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ವಿಸ್ತರಿಸಲಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 
     ಬೆಂಗಳೂರಿನ 6th ಸೆನ್ಸ್ ಸಂಸ್ಥೆಯ ತರಬೇತುದಾರ ಡಾ|| ಅಬ್ರಹಾಂ ರೂಬಿ ಮಾತನಾಡಿ, ಬದಲಾವಣೆ ನಿರ್ವಹಣೆ ಹಾಗೂ ನಾಯಕತ್ವದ ತರಬೇತಿಯು ಮನೋವಿಜ್ಞಾನಕ್ಕೆ ಸಂಬಂಧಪಟ್ಟ ವೈಜ್ಞಾನಿಕ ತರಬೇತಿಯಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ ತಮ್ಮ ಸಂಪೂರ್ಣ ಸಾಮಥ್ರ್ಯವನ್ನು ಬಳಸುವ ಕೌಶಲ್ಯವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ನಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಲ್ಲಿ ಮನೋವಿಜ್ಞಾನವು ಅತ್ಯಂತ ಸಹಕಾರಿಯಾಗಿದ್ದು, ಅದನ್ನು ನಮ್ಮ ಏಳ್ಗೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಈ ತರಬೇತಿಯ ಮೂಲಕ ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದರು.
     ತರಬೇತಿ ಕಾರ್ಯಗಾರದಲ್ಲಿ ಜಿಲ್ಲಾ ಪಂಚಯತಿಯ ಸದಸ್ಯರುಗಳು, ವಿವಿಧ ತಾಲೂಕಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರುಗಳು, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಯುನಿಸೆಫ್‍ನ ರಾಜ್ಯಮಟ್ಟದ ಅಧಿಕಾರಿ ರಾಮಸ್ವಾಮಿ ಕೃಷ್ಣನ್, ಕೊಪ್ಪಳ ಯುನಿಸೆಫ್‍ನ ಹರೀಶ ಜೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜು. 22 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಕೊಪ್ಪಳ ಜು. 20 (ಕರ್ನಾಟಕ ವಾರ್ತೆ) : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಬರಲಿರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ಗೌರಿ-ಗಣೇಶ ಹಬ್ಬ ನಿಮಿತ್ಯ, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜು. 22 ರಿಂದ 27 ರವರೆಗೆ ಆರು ದಿನಗಳ ಕಾಲ ಗಂಗಾವತಿ-ಆನೆಗೊಂದಿ ರಸ್ತೆಯಲ್ಲಿನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ.
     ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಜು. 22 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೆರವೇರಿಸುವರು.  
     ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ನಾಲ್ಕನೇ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು,  ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಮಾರಾಟ ಮೇಳ ನಡೆಯಲಿದೆ. ಜು. 22 ರಿಂದ 27 ರವರೆಗೆ ಪ್ರತಿದಿನ ಬೆಳಗ್ಗೆ 10.00ರಿಂದ ಸಂಜೆ 8.00 ಗಂಟೆಯವರೆಗೆ  ಆರು ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮಾರಾಟ ನಡೆಯಲಿದೆ.   ವಿಶೇಷವಾಗಿ ಈ ಬಾರಿ ನಿಗಮವು ಎಲ್ಲಾ ಉತ್ಪನ್ನಗಳ ಮೇಲೆ ಶೇ. 25 ರ ರಿಯಾಯಿತಿ ನೀಡಲಿದೆ.  ವರಮಹಾಲಕ್ಷ್ಮಿ ಪೂಜೆ ಹಬ್ಬದ ಹಾಗೂ ಗೌರಿ-ಗಣೇಶ ಹಬ್ಬದ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದೆ.        
         ಸಾಂಪ್ರದಾಯಿಕ ರೀತಿಯಲ್ಲದೆ, ಕೆ.ಎಸ್.ಐ.ಸಿ.ಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ “ಕ್ರೇಪ್ ಡಿ ಚೈನ್” ಸೀರೆಗಳನ್ನು, “ಕಸೂತಿ” ಎಂಬ್ರಾಯಿಡರಿ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈಯ್ಸ್, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ.   ಇದಲ್ಲದೆ  ನವನವೀನ “ವಿವಾಹ ಸಂಗ್ರಹ”  ಸೀರೆಗಳನ್ನು  ಪರಿಚಯಿಸಲಾಗಿದೆ   ಹಾಗೂ ಕೆ.ಎಸ್.ಐ.ಸಿ.ಯು ಇತ್ತೀಚೆಗೆ ಇ-ಜಕಾರ್ಡ್ ಮಗ್ಗಗಳನ್ನು ಅಳವಡಿಸಿದ್ದು 15 ರಿಂದ 20 ನವನವೀನ ವಿನ್ಯಾಸಗಳ ಸೀರೆಗಳನ್ನು ಉತ್ಪಾದಿಸಿ ಗ್ರಾಹಕರುಗಳಿಗೆ ಪರಿಚಯಿಸಿದೆ.  ಕಸೂತಿ ಮೈಸೂರ್ ಸಿಲ್ಕ್ ಸೀರೆಗಳು ಬಹಳ ಮನಮೋಹಕ ಮತ್ತು ಇವುಗಳ ಸೌಂದರ್ಯ ಕಣ್ಸೆಳೆಯುತ್ತದೆ.  ಹಿಂದಿನ ಅರಸರು ನಿರ್ಮಿಸಿ ಸಂರಕ್ಷಿಸಲ್ಪಟ್ಟಿದ್ದು,  ಸಾಂಪ್ರದಾಯಕ ಶಿಲ್ಪ ವಿನ್ಯಾಸಗಳಿಂದ ಸ್ಫೂರ್ತಿಗೊಂಡ ಮಹಿಳಾ ಕೆಲಸಗಾರರ ಸೂಜಿಯ ಮೊನೆಯಿಂದ ನಿರ್ಮಿಸಲ್ಪಟ್ಟ ಕಸೂತಿ ಕುಸುರಿ ಕೆಲಸ ಮತ್ತು ಮೋಟಿಫ್‍ಗಳಿಂದ ಕೂಡಿವೆ.  ಕಸೂತಿ ಕುಸುರಿ ಕೆಲಸವು ಉತ್ತರ ಕರ್ನಾಟಕವು ಸೆರೆಹಿಡಿದ ಅತ್ಯಂತ ಸೂಕ್ಷ್ಮ ವಿವರಗಳ ವಿಸ್ತೀರ್ಣ ಮತ್ತು ಮೋಟಿಫ್‍ಗಳ ಸರಳ ಸ್ಟಿಕ್ಕರ್‍ಗಳನ್ನು ಒಳಗೊಂಡಿರುತ್ತದೆ
         ಸಾರ್ವಜನಿಕರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಕಟಣೆ ತಿಳಿಸಿದೆ.

ಹೆಸರು ಬೆಳೆಯಲ್ಲಿ ಬುರುಗು ತಿಗಣೆ ಬಾಧೆ : ನಿರ್ವಹಣೆಗೆ ರೈತರಿಗೆ ಸಲಹೆ


ಕೊಪ್ಪಳ ಜು. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕೆಲವೆಡೆ ಹೆಸರು ಬೆಳೆಗೆ ಬುರುಗು ತಿಗಣೆ (ಸ್ಪಿಟಲ್ ಬಗ್) ಬಾಧೆ ಕಾಣಿಸಿಕೊಂಡಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ.
     ಕೊಪ್ಪಳ ಜಿಲ್ಲೆಯ ಕವಲೂರು, ಗುಡಿಗೇರಿ, ಬನ್ನಿಕೊಪ್ಪ, ಅಳವಂಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಪೀಡೆಯು ಇತ್ತೀಚಿಗೆ ಕಾಣಿಸಿಕೊಂಡಿದೆ.  ಬುರುಗು ತಿಗಣೆಯ ಮರಿ ಹುಳುಗಳು ಗಿಡದ ರಸ ಹೀರುವುದರಿಂದ ಹುಳುಗಳ ಸುತ್ತಲು ಬುರುಗು ಅಥವಾ ನೊರೆಯಿಂದ ಕೂಡಿರುತ್ತದೆ. ಈ ಪೀಡೆಗೆ ಸುಮಾರು 37 ಆಶ್ರಿತ ಸಸ್ಯಗಳಿವೆ ಎಂದು ವರದಿಯಾಗಿದೆ.  2012ರಿಂದ ಇತ್ತೀಚಿಗೆ ಕರ್ನಾಟಕದ ಹೆಸರು ಬೆಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಶೇ. 25-30 ರಷ್ಟು ಬೆಳೆಗೆ ಹಾನಿಯುಂಟು ಮಾಡುತ್ತದೆ.
ಲಕ್ಷಣಗಳು :  ಎಲೆ ಮತ್ತು ಕಾಯಿಗಳ ಕೋನಗಳಲ್ಲಿ ನೊರೆ ಅಥವಾ ಬುರುಗಿನಂತಹ ಅಂಟು ಪದಾರ್ಥ ಕಾಣಿಸಿಕೊಳ್ಳುತ್ತದೆ. ಶೇ. 75 ರಷ್ಟು ಹಾನಿಯು ಎಳೆಯ ಕಾಯಿಗಳ ಗುಂಪುಗಳ ಬುಡದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾನಿಯು ಹೆಚ್ಚಾದಂತೆ ಕಾಯಿಗಳು ಉದುರಿ ಇಳುವರಿಯಲ್ಲಿ ನಷ್ಟವಾಗುತ್ತದೆ.
ನಿರ್ವಹಣಾ ಕ್ರಮಗಳು : ಪೀೀಡೆ ಬಾಧಿತ ಗಿಡಗಳನ್ನು ಕಿತ್ತು ನಾಶ ಪಡಿಸಬೇಕು.  ಪ್ರತಿ ಲೀ. ನೀರಿಗೆ 1 ಗ್ರಾಂ ಅಸಿಫೇಟ್ ಅಥವಾ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 2 ಮಿ.ಲೀ ಕ್ಲೋರ್‍ಪೈರಿಫಾಸ್ 20 ಇ.ಸಿ ಬೆರೆಸಿ ಬುರುಗು ಅಥವಾ ನೊರೆ ತೊಯ್ಯುವಂತೆ ಸಿಂಪರಣೆ ಮಾಡಬೇಕು.
       ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್   (9845194328) ಇವರನ್ನು ಸಂಪರ್ಕಿಸಬೇಕು ಎಂದು ಕೊಪ್ಪಳದ ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ (9480696319) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ ವಿಶ್ಲೇಷಣೆ ಕಾರ್ಯಾಗಾರ : ಜು. 24 ಕ್ಕೆ ಮುಂದೂಡಿಕೆ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜು.21 ರಂದು   ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ 2014-15ನೇ ಸಾಲಿನ ಬ್ಲಾಕ್‍ವಾರು ಎಸ್.ಎಸ್.ಎಲ್.ಸಿ ಫಲಿತಾಂಶದ ವಿಶ್ಲೇಷಣೆ ಕಾರ್ಯಾಗಾರವನ್ನು ಜು.24 ಕ್ಕೆ ಮುಂದೂಡಲಾಗಿದೆ.
        ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಅಲ್ಲದೇ ಕಾರ್ಯಾಗಾರಕ್ಕೆ ಬರುವಾಗ ತಮ್ಮ ಶಾಲೆಯ 2015 ರ ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಪಡಿಸಲು ಸಿದ್ಧಪಡಿಸಲಾದ ಕ್ರಿಯಾ ಯೋಜನೆಯನ್ನು ತಪ್ಪದೇ ತರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ತಿಂಗಳಲ್ಲಿ 6,61,000 ರೂ, ದಂಡ ವಸೂಲು

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಕಾನೂನು ಮಾಪನಶಾಸ್ತ್ರ ಇಲಾಖೆ ಹುಬ್ಬಳ್ಳಿಯ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಸಂಚಾರಿ ದಳ-03 ಇವರಿಂದ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ ವಿವಿದೆಡೆ ದಾಳಿ ನಡೆಸಿ, ಜೂನ್-2015 ರ ತ್ರೈಮಾಸಿಕ ಅಂತ್ಯದವರೆಗೆ ಒಟ್ಟು 6,61,000 ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ.
     ಜೂನ್-2015 ರ ತ್ರೈಮಾಸಿಕ ಅಂತ್ಯದವರೆಗೆ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 461 ಅಂಗಡಿ ಮತ್ತು ಸಂಸ್ಥೆಗಳನ್ನು ತಪಾಸಣೆ ಮಾಡಲಾಗಿದ್ದು, ಒಟ್ಟು 62 ತೂಕ, ಅಳತೆ ಹಾಗೂ 28 ಪೊಟ್ಟಣ ಸಾಮಗ್ರಿ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಪ್ರಕರಣಗಳಿಂದ ಒಟ್ಟು 6,61,000 ರೂ. ದಂಡ (ಅಭಿಸಂಧಾನ ಶುಲ್ಕ) ವಸೂಲು ಮಾಡಲಾಗಿದೆ ಎಂದು ಸಂಚಾರಿ ದಳ-03, ಹುಬ್ಬಳ್ಳಿ ಕಛೇರಿಯ ಸಹಾಯಕ ನಿಯಂತ್ರಕ ಮಧುಕರ ಆರ್.ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕಿ ಉಳಿದ ಸೀಟುಗಳ ಭರ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೂರು ಸುತ್ತುಗಳ ಪ್ರವೇಶ ಪ್ರಕ್ರಿಯೆ ನಂತರ ಬಾಕಿ ಉಳಿದ ಸೀಟುಗಳನ್ನು ಭರ್ತಿಗೊಳಿಸಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಎನ್.ಸಿ.ವಿ.ಟಿ) ಹಾಗೂ ಅಳವಂಡಿ (ಎಸ್.ಸಿ.ವಿ.ಟಿ)ಯಲ್ಲಿ ಬಾಕಿ ಉಳಿದ ವೃತ್ತಿ ಸೀಟುಗಳಿಗೆ ಪ್ರವೇಶ ಪಡೆಯಲಿಚ್ಛಿಸುವವರು ಇಲಾಖೆಯ ವೆಬ್‍ಸೈಟ್  www.det-kar.com/admission-2015 ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಜು.24 ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜು.24 ರಂದು 05 ಗಂಟೆಯೊಳಗಾಗಿ ಮೂಲ ದಾಖಲಾತಿಗಳನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪರಿಶೀಲನೆ ಮಾಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಕರ್ಸಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಜವಾಹರ ರಸ್ತೆ, ಎಸ್.ಬಿ.ಹೆಚ್ ಬ್ಯಾಂಕ್ ಎದುರುಗಡೆ, ಕೊಪ್ಪಳ, ದೂರವಾಣಿ ಸಂಖ್ಯೆ: 08539-221367 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿನ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸ್ವೀಕರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
     ಪ್ರಸಕ್ತ ಸಾಲಿನಲ್ಲಿ ನಿಗಮವು ಅನುಷ್ಟಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿತ್ತು ಹಾಗೂ ಜೂ.30 ಅರ್ಜಿ ಸ್ವೀಕರಿಸುವ ಕೊನೆ ದಿನಾಂಕವಾಗಿ ನಿಗದಿಪಡಿಸಲಾಗಿತ್ತು. ಆದರೆ ಈಗ ಅರ್ಜಿ ಸ್ವೀಕರಿಸುವ ದಿನಾಂಕವನ್ನು ಜೂ.30 ರಿಂದ ಜು.25 ರವರಗೆ ವಿಸ್ತರಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಯೋಜನೆ : ಅಲೆಮಾರಿ ಜನಾಂಗದವರಿಂದ ಅರ್ಜಿ ಆಹ್ವಾನ

ಕೊಪ್ಪಳ, ಜು.20 (ಕರ್ನಾಟಕ ವಾರ್ತೆ): ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಪ್ಪಳ ಇವರಿಂದ ಕರ್ನಾಟಕ ರಾಜ್ಯದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿಯು ಒದಗಿಸಿದ ಅನುದಾನದಲ್ಲಿ ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸೌಲಭ್ಯ ಒದಗಿಸಲು ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿರುವ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ನಿಗಮವು ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳಾದ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆಗಳಿಗೆ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಾದ ಬೈರಾಗಿ(ಬಾವ), ಬಾಲ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ-ಜೋಶಿ-ಗೋಂಧಳಿ, ಚಾರ, ಚಿತ್ರಕತಿ-ಜೋಶಿ, ಧೋಲಿ, ದವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೋಂಧಳಿ, ಹೆಳವ, ಜೋಗಿ, ಕೆಲ್‍ಕರಿ, ಕೋಲ್‍ಹಾಟಿ, ನಂದಿವಾಲ-ಜೋಶಿ-ಘೋಂದಳಿ, ಫುಲ್-ಮಲ್ಲಿ, ನಾಥಪಂಥಿ-ಡೌರಿ-ಗೋಸಾವಿ, ನಿರ್‍ಶಿಕಾರಿ, ಪಂಗುಲ್, ಜೋಶಿ(ಸಾದಾ ಜೋಶಿ), ಸನ್‍ಸಿಯ, ಸರನಿಯ, ತಿರುಮಲಿ, ವ್ಶೆಡು, ವಾಸುದೇವ್, ವಡಿ, ವಗ್ರಿ, ವಿರ್, ಬಜನಿಯ, ಶಿಕ್ಕಲ್‍ಗಾರ, ಗೊಲ್ಲ, ಕಿಳ್ಳಕ್ಯಾತಸ್, ಸರೋಡಿ, ದುರ್ಗಾಮುರ್ಗಾ (ಬುರ್‍ಬುರ್‍ಚ್), ಹಾವಗಾರ್(ಹಾವಾಡಿಗರ್), ಪಿಚಲಗುಂಟಲ, ಮಸನಿಯ ಯೋಗಿ, ಬೆಸ್ತರ್, ಬುಂದ ಬೆಸ್ತ, ಕಟಬು, ಕಾಶಿಕಪ್‍ಡಿ, ದೊಂಬಿದಾಸ ಮತ್ತು ಬೈಲ್‍ಪತ್ತಾರ್ ಸಮುದಾಯಗಳಿಗೆ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ.
      ನಿಗದಿತ ಅರ್ಜಿ ನಮೂನೆಗಳನ್ನು  ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾಡಳಿತ ಭವನ, ಹೊಸಪೇಟೆ ರಸ್ತೆ, ಕೊಪ್ಪಳ ದೂ. ಸಂಖ್ಯೆ: 08539-221847 ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಜು.30 ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ ಬಂದತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಸಕ್ತ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.  ಯೋಜನೆಗಳ ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‍ಸೈಟ್ :  www.karnataka.gov.in/dbcdc ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

Friday, 17 July 2015

ಪ್ರವಾಸೋದ್ಯಮದ ಬೆಳವಣಿಗೆಗೆ ಸಂಗೀತ, ಕಲೆ, ಸಂಸ್ಕøತಿ ಪೂರಕ: ಆರ್.ಆರ್.ಜನ್ನು


ಕೊಪ್ಪಳ, ಜು.17 (ಕರ್ನಾಟಕ ವಾರ್ತೆ): ಪ್ರವಾಸೋದ್ಯಮದ ಬೆಳವಣಿಗೆಗೆ ಅಲ್ಲಿನ ಸಂಗೀತ, ಕಲೆ, ಸಾಂಸ್ಕøತಿಕ ಕಾರ್ಯಕ್ರಮಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸವಲತ್ತುಗಳನ್ನು ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಲಹೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 2013-14 ನೇ ಸಾಲಿನ ಪ.ಜಾತಿ ಮತ್ತು ಪ.ಪಂಗಡದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸಂಗೀತ ಉಪಕರಣ ವಿತರಣೆ ಮಾಡುವ ಯೋಜನೆಯಡಿ, ಸೌಲಭ್ಯ ಮಂಜೂರಾದವರಿಗೆ ಸಂಗೀತ ಉಪಕರಣ ವಿತರಣೆ ಮಾಡಿ ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಸಂಗೀತಾಸಕ್ತ ನಿರುದ್ಯೋಗಿ ಯುವಜನತೆಗೆ ಸಂಗೀತ ಉಪಕರಣ ವಿತರಣೆ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆ.  ಪ್ರವಾಸೋದ್ಯಮದಲ್ಲಿ ಸಂಗೀತ, ಕಲೆ, ಸಂಸ್ಕøತಿ ಬೆಳೆಸುವ ಉದ್ದೇಶದಿಂದ ಇಂತಹ ಯೋಜನೆಗಳು ಮಹತ್ವ ಪೂರ್ಣವಾಗಿದ್ದು, ಇಂತಹ ಯೋಜನೆಗಳನ್ನು ಜಿಲ್ಲೆಯ ಅರ್ಹ ಹಾಗೂ ಪ್ರತಿಭಾವಂತ ಯುವಕರು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಲಹೆ ನೀಡಿದರು.
          ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಲಿಂಗ ಎಸ್.ತಾಳಕೇರಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಸಿದ್ದೇಶ ಎಸ್. ಕಂಬಾಳಿಮಠ ಉಪಸ್ಥಿತರಿದ್ದರು.  ಯೋಜನೆಯಡಿ ಮಂಜೂರಾದ ಸಂಗೀತ ಉಪಕರಣಗಳನ್ನು ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. 

ಸಂಗೀತ ನೃತ್ಯ ಅಕಾಡೆಮಿ : ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಜು.17 (ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಪ್ರಸಕ್ತ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಸೇರಿದಂತೆ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು,  ಆಯ್ಕೆಯಾದ ಅಭ್ಯರ್ಥಿಗಳಿಗೆ 10,000 ರೂ.ಗಳನ್ನು ಶಿಷ್ಯ ವೇತನವಾಗಿ ನೀಡಲಾಗುವುದು. ಅರ್ಜಿಗಳನ್ನು ಬೆಂಗಳೂರಿನ ಅಕಾಡೆಮಿಯ ಕಛೇರಿ ಹಾಗೂ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಅರ್ಜಿಯ ಜೊತೆ ಇತ್ತೀಚಿನ ಪಠ್ಯಕ್ರಮವನ್ನು ನೀಡಲಾಗಿದ್ದು, ಅಂಚೆ ಮೂಲಕ ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಛಿಸುವವರು 10 ರೂ.ಗಳ ಸ್ಟ್ಯಾಂಪ್ ಹಚ್ಚಿದ ಸ್ವವಿಳಾಸವುಳ್ಳ ಲಕೋಟೆಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560 002 ಇಲ್ಲಿಗೆ ಕಳುಹಿಸಿಕೊಡಬಹುದು. ಅಲ್ಲದೆ ಅರ್ಜಿಗಳನ್ನು ಅಕಾಡೆಮಿಯ ಅಂತರ್ಜಾಲ ತಾಣ : www.karnatakasangeethanrithyaacademy.org ಅಥವಾ ಈಮೇಲ್ ವಿಳಾಸ : karnatakasangeeta@gmail.com ಮೂಲಕ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸಿಕೊಡಲು ಆಗಸ್ಟ್.14 ಕೊನೆ ದಿನಾಂಕವಾಗಿದೆ ಎಂದು ಕರ್ನಾಟಕ ಸಂಗೀತ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ವಸತಿ ನಿಲಯ : ದಾಖಲಾತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ, ಜು.17 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯು    ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಹೊಸದಾಗಿ ಮಂಜೂರಾಗಿರುವ 100 ಸಂಖ್ಯಾ ಬಲದ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರವೇಶಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಹರಿರುವ ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದವರಾಗಿರಬೇಕು. ಸಮಾಜ ಕಲ್ಯಾಣ ಇಲಾಖೆಯ ಎಸ್.ಎಸ್.ಎಲ್.ಸಿ ಯಲ್ಲಿನ ವಿದ್ಯಾರ್ಥಿ ವೇತನದ ನೊಂದಣಿ ಸಂಖ್ಯೆಯನ್ನು ಹೊಂದಿರಬೇಕು. ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಖಾತೆಯನ್ನು ಹೊಂದಿರಬೇಕು. ಸ್ಥಳೀಯರಾಗಿರದೇ, 10 ಕಿ.ಮೀ ಅಂತರದಿಂದ ಕಾಲೇಜುಗಳಿಗೆ ಬರುತ್ತಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.
     ಅರ್ಜಿ ನಮೂನೆಯನ್ನು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಕುಷ್ಟಗಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಅಂಕಪಟ್ಟಿ, ವಾಸಸ್ಥಳ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರ, ವಿದ್ಯಾರ್ಥಿ ವೇತನದ ಐ.ಡಿ ಸಂಖ್ಯೆ, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಝರಾಕ್ಸ್ ಪ್ರತಿ, ಆಧಾರ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಕಲು ಪ್ರತಿಗಳನ್ನು ಲಗತ್ತಿಸಿ, ಜು.30 ರೊಳಗಾಗಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಕುಷ್ಟಗಿ, ದೂರವಾಣಿ ಸಂಖ್ಯೆ 08536-267462 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು  ಪ್ರಕಟಣೆ ತಿಳಿಸಿದೆ.