Tuesday, 30 June 2015

ಪರಿಸರ ಸ್ವಚ್ಛತೆಯಿಂದ ರೋಗವಾಹಕಗಳ ನಿಯಂತ್ರಣ ಸಾಧ್ಯ : ಆರ್.ಆರ್. ಜನ್ನು

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ) : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ರೋಗಗಳು ಹಾಗೂ ರೋಗವಾಹಕಗಳ ನಿಯಂತ್ರಣ ಸಾಧ್ಯ. ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ತಿಳಿಸಿದರು. 
     ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-2015 ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಸೊಳ್ಳೆಗಳ ಸಂತತಿ ಹೆಚ್ಚಲು ವಾತಾವರಣ ಇದೀಗ ಪೂರಕವಾಗಿದೆ. ರೋಗವಾಹಕಗಳಾಗಿರುವ ಸೊಳ್ಳೆಗಳಿಂದಾಗಿ ಮಾರಣಾಂತಿಕ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ.   ರೋಗವಾಹಕಗಳ ತಡೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಮುಖ್ಯವಾಗಿ ಶಾಲಾ, ಕಾಲೇಜು ಹಾಗೂ ಹಾಸ್ಟೆಲ್‍ಗಳಲ್ಲಿ ನೀರಿನ ಮೂಲಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ನೀರು ನಿಲ್ಲುವಂತಹ ಸ್ಥಳಗಳನ್ನು ಗುರುತಿಸಿ, ತೆಗ್ಗುಗಳನ್ನು ಮುಚ್ಚಲು ಅಗತ್ಯ ಕ್ರಮ ವಹಿಸಬೇಕು.  ಪರಿಸರ ನೈರ್ಮಲ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು, ನಗರ, ಸ್ಥಳೀಯ ಸಂಸ್ಥೆಗಳು ಮುತುವರ್ಜಿ ವಹಿಸಬೇಕು.  ಸಾರ್ವಜನಿಕರೂ ಸಹ ಇದರಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ||ಎಂ.ಎಂ.ಕಟ್ಟಿಮನಿ ಮಾತನಾಡಿ, 2015 ರಲ್ಲಿ ಜಿಲ್ಲಾದ್ಯಂತ ಒಟ್ಟು 15 -ಡೆಂಗ್ಯೂ ಪ್ರಕರಣಗಳು, 143- ಮಲೇರಿಯಾ ಪ್ರಕರಣಗಳು, 12- ಚಿಕುಂಗುನ್ಯಾ  ಪ್ರಕರಣಗಳು ಪರೀಕ್ಷಾ ನಂತರ ಖಚಿತಪಟ್ಟಿವೆ.  ಇವೆಲ್ಲವೂ ರೋಗವಾಹಕಗಳಿಂದ ಉಂಟಾಗಿದ್ದು, ಆದರೆ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ.  ತೆರೆದ ನೀರಿನ ತೊಟ್ಟಿಗಳು, ಒಡೆದ ಟೈರ್‍ಗಳು, ಹೂವಿನ ಕುಂಡಗಳು, ತೆಂಗಿನ ಕಾಯಿ ಚಿಪ್ಪುಗಳು, ಅನುಪಯುಕ್ತ ವಸ್ತುಗಳು, ಬಳಸದೇ ಇರುವ ಬಾವಿಗಳು, ಕಾಲುವೆ ಇತ್ಯಾದಿಗಳು ಸೊಳ್ಳೆಗಳ ಉತ್ಪತ್ತಿಗೆ ಮೂಲ ಕಾರಣವಾಗಿವೆ. ಆದ್ದರಿಂದ ಸಾರ್ವಜನಿಕರು ಎಲ್ಲ ಬಗೆಯ ನೀರಿನ ತೊಟ್ಟಿ, ಡ್ರಂ, ಬ್ಯಾರೆಲ್, ಏರ್‍ಕೂಲರ್‍ಗಳನ್ನು ವಾರಕ್ಕೊಮ್ಮೆ ಖಾಲಿ ಮತ್ತು ಸ್ವಚ್ಛ ಮಾಡಿ ಒಣಗಿಸಿ, ಪುನಃ ನೀರು ತುಂಬಿ ತೊಟ್ಟಿಗಳಲ್ಲಿ ಸೊಳ್ಳೆಗಳು ನುಸುಳದಂತೆ ಮುಚ್ಚಳಿಕೆಯನ್ನು ಭದ್ರವಾಗಿ ಮುಚ್ಚಬೇಕು. ಮನೆಯ ಸುತ್ತ ಬಯಲಿನಲ್ಲಿ ಮತ್ತು ಮಾಳಿಗೆಯ ಮೇಲೆ ಟೈರ್, ಟ್ಯೂಬ್, ಒಡೆದ ಬಕೆಟ್, ಎಳೆನೀರು ಚಿಪ್ಪು, ಮರದ ಪೊಟರೆ, ಹೂವಿನ ಕುಂಡ, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಅಭಾವವಿದ್ದ ಸಂದರ್ಭದಲ್ಲಿ ಶೇಖರಿಸಲ್ಪಟ್ಟ ನೀರನ್ನು ಸರಿಯಾಗಿ ಸೋಸಿ, ಸ್ವಚ್ಛಗೊಳಿಸಿ ಶೇಖರಿಸಿಟ್ಟು ಬಳಸಬೇಕು. ನೂತನ ಕಟ್ಟಡ ಕಟ್ಟುವವರು ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿ ಮನೆಯ ಹತ್ತಿರ ಬಂದಾಗ ಜ್ವರ ಪೀಡಿತರ ರಕ್ತ ಲೇಪನ ನೀಡಿ ಸಹಕರಿಸಬೇಕು, ಬೆಳಿಗ್ಗೆ ಮತ್ತು ಸಂಜೆ ವೇಳೆ, ಸೊಳ್ಳೆಗಳ ಚಟುವಟಿಕೆ ಹೆಚ್ಚಾಗಿರುವುದರಿಂದ ಆ ಸಮಯದಲ್ಲಿ ಆದಷ್ಟು ಮೈತುಂಬ ಬಟ್ಟೆ ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ತಪ್ಪದೇ ಉಪಯೋಗಿಸಬೇಕು. ಅಲ್ಲದೇ ರೋಗವಾಹಕಗಳಿಂದ ಸಾರ್ವಜನಿಕರನ್ನು ರಕ್ಷಿಸಲು, ಅರಿವು ಮೂಡಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. 
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ ಬಾಸೂರು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್, ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜುಲೈ.01 ರಿಂದ ಡಿಜಿಟಲ್ ಲಾಕರ್ ಸಿಸ್ಟಂ ಜಾರಿಗೆ

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ) : ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಮ್ಮ ವೈಯಕ್ತಿಕ ದಾಖಲೆಗಳನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಡಿಜಿಟಲ್ ಲಾಕರ್‍ನಲ್ಲಿ ಸಂಗ್ರಹಿಸಿ ಇಡಬಹುದಾದ ಡಿಜಿಟಲ್ ಲಾಕರ್ ಸಿಸ್ಟಂ ಜು. 01 ರಿಂದ ಜಾರಿಗೆ ಬರಲಿದೆ.
      ಇದಕ್ಕಾಗಿ ಡಿಜಿಟಲ್ ಇಂಡಿಯಾ ಸಪ್ತಾಹವನ್ನು ಜು. 01 ರಿಂದ 07 ರವರೆಗೆ ಆಚರಿಸಲಾಗುತ್ತಿದೆ.  ಭಾರತ ಸರ್ಕಾರದ ಪ್ರಧಾನಮಂತ್ರಿಗಳು ಜು.01 ರಂದು ಇದರ ಉದ್ಘಾಟನೆ ನೆರವೇರಿಸಲಿದ್ದು, ಕಾರ್ಯಕ್ರಮದ ನೇರಪ್ರಸಾರವನ್ನು ಎನ್.ಐ.ಸಿ ಸಹಯೋಗದೊಂದಿಗೆ ಜು.01 ರಂದು ಸಂಜೆ 04 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ಡಿಜಿಟಲ್ ಲಾಕರ್ ಸಿಸ್ಟಂ ಭಾರತ ಸರ್ಕಾರದ ಯೋಜನೆಯಾಗಿದ್ದು, ಇದನ್ನು ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಹೊಂದುವ ಸಲುವಾಗಿ ಪ್ರಧಾನ ಮಂತ್ರಿಗಳು ಈ ಯೋಜನೆಯನ್ನು ಜು.01 ರಂದು ಜಾರಿಗೆ ತರಲಿದ್ದಾರೆ.  ಜುಲೈ.01 ರಿಂದ 07 ರವರೆಗೆ ಡಿಜಿಟಲ್ ಇಂಡಿಯಾ ಸಪ್ತಾಹ (ವೀಕ್) ಆಚರಿಸಲಾಗುತ್ತಿದೆ.  ಈ ಯೋಜನೆಯಡಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳು ಮತ್ತು ಇನ್ನಿತರೆ ಅಮೂಲ್ಯ ದಾಖಲೆಗಳನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಡಿಜಿಟಲ್ ಲಾಕರ್‍ನಲ್ಲಿ ಸಂಗ್ರಹಿಸಿಡಬಹುದಾಗಿದೆ. ಅಲ್ಲದೇ ಡಿಜಿಟಲ್ ಲಾಕರ್ ಹೊಂದಿದವರಿಗೆ ಯೂಸರ್ ನೇಮ್ ಮತ್ತು ಪಾಸ್‍ವರ್ಡ್ ನೀಡಲಾಗುವುದು. ಯಾವುದೇ ಸರ್ಕಾರಿ ಕೆಲಸಕ್ಕಾಗಿ ಅವಶ್ಯವಿರುವ ದಾಖಲೆಗಳನ್ನು ನೀಡುವಾಗ ಕೇವಲ ಪಾಸ್ ಕೋಡ್ ಮಾತ್ರ ನೀಡಬಹುದಾಗಿದೆ. ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರವನ್ನು ಎನ್.ಐ.ಸಿ ಸಹಯೋಗದೊಂದಿಗೆ ಜು.01 ರಂದು ಸಂಜೆ 04 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದು, ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ : ವೇಳಾಪಟ್ಟಿ ಪ್ರಕಟ

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ್‍ನ ವೇಳಾಪಟ್ಟಿ ಪ್ರಕಟಗೊಂಡಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು : ವರ್ಗಾವಣೆ ಬಯಸುವ ಪ್ರಾಥಮಿಕ ಶಾಲಾ ಶಿಕ್ಷಕರು ಜುಲೈ.02 ರಿಂದ ಜು.11 ರವರೆಗೆ ಅರ್ಜಿ ಸಲಿಸಬಹುದಾಗಿದ್ದು, ಜು.13 ರೊಳಗಾಗಿ ಸ್ವೀಕೃತಿ ಪಡೆಯಬೇಕು. ಆನ್‍ಲೈನ್ ಅರ್ಜಿಗಳು  ಮತ್ತು ಮಾಹಿತಿ ಧೃಢೀಕರಣ ಮತ್ತು ಅನುಮೋದನೆ ಕಾರ್ಯ ಜು.02 ರಿಂದ ಜು.15 ರವರೆಗೆ ನಡೆಯಲಿದೆ. ಜು.17 ರಂದು ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಜು.20 ರಂದು ಕೋರಿಕೆ ವರ್ಗಾವಣೆ (ಘಟಕದ ಹೊರಗೆ, ಒಳಗೆ) ತಾತ್ಕಾಲಿಕ ಪ್ರಕಟಣೆ ಬಿಡುಗಡೆ. ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಜು.23 ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಜು.17 ರಿಂದ ಜು.22 ರವರೆಗೆ ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಆಗಸ್ಟ್ 05 ರಂದು ಪರಸ್ಪರ ವರ್ಗಾವಣೆ ಅಂತಿಮ ಪಟ್ಟಿ ಹಾಗೂ ಖಾಲಿ ಹುದ್ದೆಗಳನ್ನು ಪ್ರಕಟಿಲಾಗುವುದು. ಆ.07 ರಂದು ಪರಸ್ಪರ ವರ್ಗಾವಣೆ ಘಟಕದ ಒಳಗೆ ಕೌನ್ಸೆಲಿಂಗ್ ವರ್ಗಾವಣೆ, ಆ.12 ರಂದು ಪರಸ್ಪರ ವರ್ಗಾವಣೆ ಘಟಕದ ಹೊರಗೆ ಕೌನ್ಸೆಲಿಂಗ್ ವರ್ಗಾವಣೆ ನಡೆಯಲಿದೆ. ಆ.17 ರಂದು ಕೋರಿಕೆ ವರ್ಗಾವಣೆಯ ಘಟಕದ ಒಳಗೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಆ.19 ರಿಂದ ಆ.22 ರವರೆಗೆ ಘಟಕದ ಒಳಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ. ಆ.26 ರಂದು ಕೋರಿಕೆ ವರ್ಗಾವಣೆಯ ಘಟಕದ ಹೊರಗೆ ಅಂತಿಮ ಪಟ್ಟಿ  ಪ್ರಕಟಗೊಳ್ಳಲಿದ್ದು, ಆ.28 ರಿಂದ ಸೆ.15 ರವರೆಗೆ  ಘಟಕದ ಹೊರಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರು : ವರ್ಗಾವಣೆ ಬಯಸುವ ಪ್ರೌಢ ಶಾಲಾ ಶಿಕ್ಷಕರು ಜುಲೈ.02 ರಿಂದ ಜು.11 ರವರೆಗೆ ಅರ್ಜಿ ಸಲಿಸಬಹುದಾಗಿದ್ದು, ಜು.13 ರೊಳಗಾಗಿ ಸ್ವೀಕೃತಿ ಪಡೆಯಬೇಕು. ಆನ್‍ಲೈನ್ ಅರ್ಜಿಗಳು  ಮತ್ತು ಮಾಹಿತಿ ಧೃಢೀಕರಣ ಮತ್ತು ಅನುಮೋದನೆ ಕಾರ್ಯ ಜು.02 ರಿಂದ ಜು.15 ರವರೆಗೆ ನಡೆಯಲಿದೆ. ಜು.17 ರಂದು ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಜು.20 ರಂದು ಕೋರಿಕೆ ವರ್ಗಾವಣೆ (ಘಟಕದ ಹೊರಗೆ, ಒಳಗೆ) ತಾತ್ಕಾಲಿಕ ಪ್ರಕಟಣೆ ಬಿಡುಗಡೆ. ಕೋರಿಕೆ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಜು.23 ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ಜು.17 ರಿಂದ ಜು.22 ರವರೆಗೆ ಪರಸ್ಪರ ವರ್ಗಾವಣೆಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಆಗಸ್ಟ್ 05 ರಂದು ಪರಸ್ಪರ ವರ್ಗಾವಣೆ ಅಂತಿಮ ಪಟ್ಟಿ ಹಾಗೂ ಖಾಲಿ ಹುದ್ದೆಗಳನ್ನು ಪ್ರಕಟಿಲಾಗುವುದು. ಆ.10 ರಂದು ಪರಸ್ಪರ ವರ್ಗಾವಣೆ ಘಟಕದ ಒಳಗೆ ಕೌನ್ಸೆಲಿಂಗ್ ವರ್ಗಾವಣೆ, ಆ.14 ರಂದು ಪರಸ್ಪರ ವರ್ಗಾವಣೆ ಘಟಕದ ಹೊರಗೆ ಕೌನ್ಸೆಲಿಂಗ್ ವರ್ಗಾವಣೆ ನಡೆಯಲಿದೆ. ಆ.17 ರಂದು ಕೋರಿಕೆ ವರ್ಗಾವಣೆಯ ಘಟಕದ ಒಳಗೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಆ.23 ರಿಂದ ಆ.25 ರವರೆಗೆ ಘಟಕದ ಒಳಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ. ಆ.26 ರಂದು ಕೋರಿಕೆ ವರ್ಗಾವಣೆಯ ಘಟಕದ ಹೊರಗೆ ಅಂತಿಮ ಪಟ್ಟಿ  ಪ್ರಕಟಗೊಳ್ಳಲಿದ್ದು, ಸೆ.07 ರಿಂದ ಸೆ.15 ರವರೆಗೆ ಘಟಕದ ಹೊರಗಿನ ವರ್ಗಾವಣೆಯ ಕೌನ್ಸೆಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರ್ಗಿಯ ಅಪರ ಆಯುಕ್ತ ರಾಧಾಕೃಷ್ಣರಾವ್ ಮದನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ) : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಸಕ್ತ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಪರೀಕ್ಷಾ ಅರ್ಜಿ ಹಾಗೂ ನಿಯಮಾವಳಿಗಳನ್ನು 10 ರೂ. ಶುಲ್ಕ ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಜುಲೈ.01 ರಿಂದ ಪಡೆಯಬಹುದಾಗಿದೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ 15 ರೂ. ಮನಿಯಾರ್ಡರ್ ಮಾಡಿ, ಅರ್ಜಿಯನ್ನು ಅಂಚೆ ಮೂಲಕ ಪಡೆಯಬಹುದಾಗಿದೆ. ಅಲ್ಲದೇ ಪರೀಕ್ಷಾ ಅರ್ಜಿಗಳನ್ನು ಪರಿಷತ್ತಿನ ವೆಬ್‍ಸೈಟ್ ತಿತಿತಿ.ಞಚಿsಚಿಠಿಚಿ.iಟಿ ಮೂಲಕ ಸಹ ಪಡೆದುಕೊಳ್ಳಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿಗಳನ್ನು ಪಡೆದುಕೊಳ್ಳುವವರು ಪರೀಕ್ಷಾ ಶುಲ್ಕದೊಂದಿಗೆ 10 ರೂ. ಅರ್ಜಿ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕು. 2015 ರ ಡಿಸೆಂಬರ್ ಕೊನೆಯ ವಾರದಲ್ಲಿ ಪರೀಕ್ಷೆಗಳು ನಡೆಯಲಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ನಂತರ ಸೆಪ್ಟೆಂಬರ್ 15 ರವರೆಗೆ ದಂಡ ಶುಲ್ಕ 50 ರೂ. ಯನ್ನು ಹೆಚ್ಚುವರಿಯಾಗಿ ನೀಡಿಯೂ ಸಹ ಅರ್ಜಿ ಸಲ್ಲಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18, ದೂರವಾಣಿ ಸಂಖ್ಯೆ : 080-26623584 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಹಾಯಧನದಡಿ ಮೇವು ಕತ್ತರಿಸುವ ಯಂತ್ರ : ಅರ್ಜಿ ಆಹ್ವಾನ

ಕೊಪ್ಪಳ, ಜೂ.30 (ಕರ್ನಾಟಕ ವಾರ್ತೆ) : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆರ್.ಕೆ.ವಿ.ವೈ ಯೋಜನೆಯ ತ್ವರಿತ ಮೇವು ಅಭಿವೃದ್ಧಿ ಕಾರ್ಯಕ್ರಮದಡಿ ಶೇಕಡಾ 25 ರಷ್ಟು ಸಹಾಯಧನ ಮಿತಿಗೊಳಪಟ್ಟು ವಿವಿಧ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳನ್ನು ನೀಡಲಾಗುತ್ತಿದ್ದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವಿವಿಧ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳನ್ನು ಸರ್ಕಾರದ ಆದೇಶದಂತೆ ಶೇಕಡಾ 25 ಅಥವಾ ರೂ. 6250 ನಷ್ಟು ಸಹಾಯಧನ ಮಿತಿಗೊಳಪಟ್ಟು ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ರೈತರು, ಸಂಘ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
     01, 02 ಮತ್ತು 03 ಹೆಚ್.ಪಿ ಸಾಮಥ್ರ್ಯದ (ಸಿಂಗಲ್ ಫೇಸ್ ಮೋಟಾರು) ಮೇವು ಕತ್ತರಿಸುವ ಯಂತ್ರಗಳಿಗೆ ಕ್ರಮವಾಗಿ ರೂ. 17,000, ರೂ. 21,800 ಮತ್ತು 27,200 ರೂ. ದರ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಹತ್ತಿರದ ಪಶುವೈದ್ಯ ಸಂಸ್ಥೆ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 29 June 2015

ಪಡಿತರ : ಗೋಧಿ ಬದಲು ಅಕ್ಕಿ ಹಂಚಿಕೆ

ಕೊಪ್ಪಳ, ಜೂ.29 (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರದಿಂದ ಗೋಧಿ ಪೂರೈಕೆಯಲ್ಲಿ ಕೊರತೆಯಾದ ಕಾರಣದಿಂದ ಜುಲೈ ತಿಂಗಳಿಗೆ  ಪಡಿತರ ಗೋಧಿ ಬದಲಿಗೆ ಅಕ್ಕಿ ಹಂಚಿಕೆ ಮಾಡಲಾಗಿದೆ.
     ಜಿಲ್ಲೆಯ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಅಂತ್ಯೋದಯ ಕಾರ್ಡಿಗೆ 29 ಕೆ.ಜಿ ಅಕ್ಕಿ, 06 ಕೆ.ಜಿ ಗೋದಿ ವಿತರಿಸಲಾಗುತ್ತಿತ್ತು. ಬಿಪಿಎಲ್ ಕಾರ್ಡುದಾರರಿಗೆ ಕುಟುಂಬದ ಒಬ್ಬ ಸದಸ್ಯರಿಗೆ 03 ಕೆ.ಜಿ ಅಕ್ಕಿ, 02 ಕೆ.ಜಿ ಗೋಧಿ ಪೂರೈಸಲಾಗುತ್ತಿತ್ತು. ಆದರೆ, ಜುಲೈ ತಿಂಗಳಿಗೆ ಕೇಂದ್ರ ಸಕಾರದಿಂದ ಗೋಧಿ ಪೂರೈಕೆಯಲ್ಲಿ ಕೊರತೆಯಾದ ಕಾರಣ ಗೋಧಿಯ ಬದಲಾಗಿ ಅಕ್ಕಿಯನ್ನು ವಿತರಿಸಲು ಕ್ರಮವಹಿಸುವಂತೆ ಆಹಾರ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಅದರಂತೆ ಅಂತ್ಯೋದಯ ಕಾರ್ಡುದಾರರಿಗೆ 35 ಕೆ.ಜಿ ಅಕ್ಕಿ, ಬಿಪಿಎಲ್ ಕಾರ್ಡುದಾರರಿಗೆ ಕುಟುಂಬದ ಪ್ರತಿ ಸದಸ್ಯರಿಗೆ 05 ಕೆ.ಜಿ ಅಕ್ಕಿ ನಂತೆ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು ಬದಲಾವಣೆಯನ್ನು ಗಮನಿಸಿ, ತಮ್ಮ ಪಡಿತರ ಚೀಟಿಗೆ ಲಭ್ಯವಿರುವ ದಾಸ್ತಾನನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನಗರ ಆಶ್ರಯ : ವಂತಿಕೆ ಹಣ ಭರಿಸಲು ಸೂಚನೆ

ಕೊಪ್ಪಳ, ಜೂ.29 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆ ವ್ಯಾಪ್ತಿಯ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ವಂತಿಕೆ ಹಣವನ್ನು ಭರಿಸಲು ಜು. 10 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ತಿಳಿಸಿದ್ದಾರೆ.
     ನಗರ ಆಶ್ರಯ ಯೋಜನೆ ಅಡಿಯಲ್ಲಿ 2000 ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಫಲಾನುಭವಿಗಳು ರೂ.30,000 ವಂತಿಕೆ ಹಣವನ್ನು ಭರಿಸುವಂತೆ  15 ದಿನಗಳ ಕಾಲಾವಕಾಶ ನೀಡಿ ಈ ಹಿಂದೆ ಪ್ರಕಟಣೆ ನೀಡಲಾಗಿತ್ತು. ಆದರೆ ಈವರೆಗೂ ಕೆಲವೇ ಜನರು ಮಾತ್ರ ವಂತಿಕೆ ಹಣವನ್ನು ಭರಿಸಿದ್ದಾರೆ. ವಂತಿಕೆ ಹಣವನ್ನು ಭರಿಸದೇ ಉಳಿದುಕೊಂಡಿರುವ ಫಲಾನುಭವಿಗಳಿಗೆ ಈಗ ಮತ್ತೊಮ್ಮೆ ಕಾಲಾವಕಾಶವನ್ನು ನೀಡಲಾಗಿದ್ದು, ವಂತಿಗೆ ಹಣವನ್ನು   ಜುಲೈ.10 ರೊಳಗಾಗಿ ಡಿ.ಡಿ ಮೂಲಕ ಭರಿಸಬಹುದಾಗಿದೆ. ನಿಗದಿಪಡಿಸಿದ ಕಾಲಾವಧಿಯ ಒಳಗಾಗಿ ವಂತಿಕೆ ಹಣವನ್ನು ಭರಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪರೀಕ್ಷಾ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟು ಸಂಕೇತ ಸಂಖ್ಯೆ ಹೊಂದಿರುವ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಶಿಕ್ಷಕರಿಂದ (ಶಾಲೆಗಳಿಂದ) ಬೋಧಿಸಿರುವ ಅಭ್ಯರ್ಥಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಂದ, ಮಂಡಳಿಯು ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ಮೂಲಕ ಅಕ್ಟೋಬರ್/ನವೆಂಬರ್‍ನಲ್ಲಿ ನಡೆಯಲಿರುವ ಶಾಸ್ತ್ರೀಯ ಸಂಗೀತ (ಕರ್ನಾಟಕ/ಹಿಂದೂಸ್ತಾನಿ), ಭರತನಾಟ್ಯ/ಕೂಚುಪುಡಿ/ಕಥಕ್ ಮತ್ತು ತಾಳವಾದ್ಯ (ಕರ್ನಾಟಕ/ಹಿಂದೂಸ್ತಾನಿ) ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಇದೇ  2015 ರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಕಿರಿಯ ದರ್ಜೆ, ಹಿರಿಯ ದರ್ಜೆ, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳನ್ನು ನಡೆಸಲಾಗುವುದು.  ಪರೀಕ್ಷಾ ಕೇಂದ್ರದಲ್ಲಿ   ಅರ್ಜಿ ವಿತರಣೆ ಜು. 01 ರಿಂದ ಪ್ರಾರಂಭವಾಗಲಿದೆ.  ಅರ್ಜಿ ಸ್ವೀಕರಿಸಲು ಜು. 20 ಕೊನೆಯ ದಿನಾಂಕ.  ದಂಡ ಸಹಿತ ಅರ್ಜಿ ಸ್ವೀಕರಿಸಲು ಜು. 25 ಕೊನೆಯ ದಿನಾಂಕವಾಗಿದೆ.  ಹೆಚ್ಚಿನ ವಿವರಗಳನ್ನು ಉಪಪ್ರಾಂಶುಪಾಲರು, ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಕೊಪ್ಪಳ ಇವರಿಂದ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಅನರ್ಹರು ಬಿಪಿಎಲ್ ಪಡಿತರ ಚೀಟಿ ಹಿಂದಿರುಗಿಸಲು ಸೂಚನೆ

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರು ತಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ಜು. 30 ರ ಒಳಗಾಗಿ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದ್ದಾರೆ.
      ಜಿಲ್ಲೆಯಲ್ಲಿ ಕೆಲ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಲ್ಲದಿದ್ದರೂ, ಇಲಾಖೆಗೆ ತಪ್ಪು ಮಾಹಿತಿಗಳನ್ನು ನೀಡಿ, ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದರೆ, ಅಂತಹವರು ತಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ಜು. 30 ರ ಒಳಗಾಗಿ ಹಿಂದಿರುಗಿಸಬೇಕು.  ನಂತರದಲ್ಲಿ ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ಅನರ್ಹರು ಪಡಿತರ ಚೀಟಿಗಳನ್ನು ಹೊಂದಿರುವುದು ಪತ್ತೆಯಾದಲ್ಲಿ, ಅಂತಹವರ ವಿರುದ್ಧ ಐಪಿಸಿ, ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಅನಧಿಕೃತ ಪಡಿತರ ಚೀಟಿಗಳನ್ನು ಹೊಂದಿದ ನಿಯಂತ್ರಣಾದೇಶ 1977 ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಇಂತಹ ಕಾನೂನು ಕ್ರಮಗಳಿಗೆ ಅವಕಾಶ ನೀಡದೆ, ಅನರ್ಹರು ತಮ್ಮ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧಪಟ್ಟ ತಾಲೂಕು ಕಚೇರಿಗಳಿಗೆ ಜು. 30 ರ ಒಳಗಾಗಿ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆ : ಪಡಿತರ ಚೀಟಿ ವಿತರಣೆ ವಿಳಂಬ

ಕೊಪ್ಪಳ ಜೂ. 29 (ಕರ್ನಾಟಕ ವಾರ್ತೆ) : ಆಹಾರ ದತ್ತಾಂಶದ ಸರ್ವರ್‍ನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪಡಿತರ ಚೀಟಿ ಮುದ್ರಿಸಿ, ವಿತರಣೆ ಮಾಡುವುದು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
     ಆಹಾರ ದತ್ತಾಂಶದ ಸರ್ವರ್‍ನಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಪಡಿತರ ಚೀಟಿ ಮುದ್ರಿಸಿ ವಿತರಣೆ ಮಾಡುವುದು ಸಾಧ್ಯವಾಗುತ್ತಿಲ್ಲ.  ಈ ತಾಂತ್ರಿಕ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರವನ್ನು (ಎನ್‍ಐಸಿ) ಕೋರಲಾಗಿದೆ.  ಸರ್ವರ್ ಸಮಸ್ಯೆ ನಿವಾರಣೆಯಾದ ನಂತರ ಅರ್ಹ ಫಲಾನುಭವಿಗಳ ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರ ಲಾಗಿನ್‍ನಲ್ಲಿ ಅನುಮೋದನೆ ಮಾಡಿಸಿ, ವಿತರಿಸುವ ಕ್ರಮ ಕೈಗೊಳ್ಳಲಾಗುವುದು.  ಸಾರ್ವಜನಿಕರು ಸಹಕರಿಸವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲ ಮನವಿ ಮಾಡಿಕೊಂಡಿದ್ದಾರೆ.

Thursday, 25 June 2015

ಕೊಪ್ಪಳದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಕೃಷಿ ಹಾಗೂ ಕೃಷಿ ಸಂಭಂದಿತ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಕೊಳ್ಳಲಾಗಿರುವ ಕೃಷಿ ಅಭಿಯಾನ-2015 ಕಾರ್ಯಕ್ರಮ ಕೊಪ್ಪಳದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಏರ್ಪಡಿಸಲಾಯಿತು.
 ಕೊಪ್ಪಳ ತಾ.ಪಂ. ಅಧ್ಯಕ್ಷೆ ಬಾನು ಚಾಂದ್‍ಸಾಬ್ ಕಾರ್ಯಕ್ರಮದ ಉದ್ಘಾಟನ ನೆರವೇರಿಸಿದರು.  ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಕೃಷಿ ಅಭಿಯಾನದ ಉದ್ದೇಶವನ್ನು ವಿವರಿಸಿದರು.  ಜಂಟಿಕೃಷಿ ನಿರ್ದೇಶಕ ವಿರೇಶ್ ಹುನಗುಂದ ಅವರು ಕೃಷಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.  ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಸ್ತರಣಾ ಮುಂದಾಳು ಎಂ.ಬಿ. ಪಾಟೀಲ ಹಾಗೂ  ಯೂಸೂಪ್ ಖಾನ್, ಕೃಷಿ ವಿಜ್ಞಾನಿ ಜ್ಯೋತಿ ಆರ್ ಇವರು ರೈತರಿಗೆ ಸುಧಾರಿತ ಬೇಸಾಯ ಕ್ರಮಗಳು, ಸಸ್ಯ ಸಂರಕ್ಷಣೆ ಕ್ರಮಗಳು ಹಾಗೂ ತೋಟಗಾರಿಕೆ ಬೆಳಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕೃಷಿ ಸಂಭಂದಿತ ಇಲಾಖೆಗಳ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ವಿ.ಹೆಚ್. ಹೂಗಾರ ಉಪಸ್ಥಿತರಿದ್ದರು.

ಶೌಚಾಲಯ ಬಳಕೆ ಜಾಗೃತಿಗೆ ಹೆಚ್ಚಿನ ಒತ್ತು ನೀಡಿ- ಸಂಗಣ್ಣ ಕರಡಿ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಸಾಧನೆ ತೋರಿರುವುದು ಶ್ಲಾಘನೀಯವಾಗಿದೆ.  ಆದರೆ ಶೌಚಾಲಯ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎನ್ನುವ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.  ಗ್ರ್ರಾಮೀಣರಲ್ಲಿ ಶೌಚಾಲಯ ಬಳಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸ್ವಚ್ಛ ಭಾರತ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಕಳೆದ 2013-14 ನೇ ಸಾಲಿನಲ್ಲಿ 54051 ಹಾಗೂ 2014-15 ನೇ ಸಾಲಿನಲ್ಲಿ 48031 ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಜಿಲ್ಲೆ ಇಡೀ ರಾಜ್ಯದಲ್ಲಿ ಉತ್ತಮ ಸಾಧನೆ ತೋರಿರುವುದು ಸ್ವಾಗತಾರ್ಹವಾಗಿದೆ.  ಆದರೆ ಈಗಾಗಲೆ ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ.  ಶೌಚಾಲಯಗಳ ನಿರ್ಮಾಣದ ನಂತರವೂ ಈ ರೀತಿಯ ಪರಿಸ್ಥಿತಿ ಉದ್ಭವವಾದಲ್ಲಿ, ಇಡೀ ಯೋಜನೆಯ ಉದ್ದೇಶ ವಿಫಲವಾಗುವ ಸಾಧ್ಯತೆ ಇದೆ.  ಶೌಚಾಲಯಗಳ ಸಮರ್ಪಕ ಬಳಕೆಯ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ಹಾನಿ ವರದಿ ಸಮರ್ಪಕವಾಗಿಲ್ಲ : ಕಳೆದೆರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಕೇವಲ 698 ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ.  ಅದರಲ್ಲೂ ಮಾವು, ಬಾಳೆ, ಪಪ್ಪಾಯ ಮುಂತಾದ ಬೆಳೆಗಳಿಗೆ ಹೆಚ್ಚಿನ ನಷ್ಟವಾಗಿದ್ದು, ಬೆಳೆ ಹಾನಿ ಕುರಿತು ತೋಟಗಾರಿಕೆ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸದೆ, ವರದಿ ಸಲ್ಲಿಸಿದ ಪರಿಣಾಮ, ನಷ್ಟ ಅನುಭವಿಸಿದ ರೈತರಿಗೆ ಅನ್ಯಾಯವಾಗಿದೆ.  ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದರು.
ಬಿತ್ತನೆ ಬೀಜ ಬಗ್ಗೆ ಎಚ್ಚರವಹಿಸಿ : ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಉತ್ತಮ ಗುಣಮಟ್ಟದ ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ, ಬೀಜ ಖರೀದಿಸುತ್ತಿದ್ದಾರೆ.  ಆದರೆ ಯಲಬುರ್ಗಾ ತಾಲೂಕು ಹಿರೇಮ್ಯಾಗೇರಿಯಲ್ಲಿ ರೈತರು ರೈತ ಸಂಪರ್ಕ ಕೇಂದ್ರದ ಮೂಲಕ ಖರೀದಿಸಿದ ಬಿತ್ತನೆ ಬೀಜ, ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರು ಸಲ್ಲಿಸಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕೂಡಲೆ ಈ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಬೇಕು.  ಒಂದು ವೇಳೆ ಬಿತ್ತನೆ ಬೀಜ ಕಳಪೆ ಗುಣಮಟ್ಟದ್ದಾಗಿದ್ದಲ್ಲಿ, ಕೂಡಲೆ ಅದನ್ನು ಹಿಂಪಡೆದು, ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.  ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು, ಬಿತ್ತನೆ ಬೀಜದ ಗುಣಮಟ್ಟ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದು ಎಂದರು.
ಅಪೌಷ್ಠಿಕತೆ ನಿವಾರಣೆ : ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೂರೈಕೆ ಮಾಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತು.  ಆದರೆ ಇದುವರೆಗೂ ವರದಿಯನ್ನು ಸಲ್ಲಿಸಿಲ್ಲ.  ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ವಿವರಣೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸಂಸದರು ಸೂಚಿಸಿದರು.  ಇದಕ್ಕೆ ಉತ್ತರಿಸಿದ ಉಪನಿರ್ದೇಶಕಿ ವಸಂತಪ್ರೇಮಾ ಅವರು, ಪೂರಕ ಪೌಷ್ಠಿಕ ಆಹಾರ ಗುಣಮಟ್ಟದ ಬಗ್ಗೆ ಈಗಾಗಲೆ ಕಲಬುರ್ಗಿ ಆಹಾರ ಪ್ರಯೋಗಾಲಯದಿಂದ, ಗುಣಮಟ್ಟ ತೃಪ್ತಿಕರ ಎಂದು ವರದಿ ಬಂದಿದೆ.  ಜಿಲ್ಲೆಯಲ್ಲಿ 3197 ತೀವ್ರ ಅಪೌಷ್ಠಿಕ ಮಕ್ಕಳು ಎಂದು ಗುರುತಿಸಲಾಗಿತ್ತು.  ಇದೀಗ 920 ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, ಇನ್ನುಳಿದ 2277 ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಾಗೃತ ಸಮಿತಿ ಸದಸ್ಯರುಗಳಾದ ಮನೊಹರ್, ಶೋಭಾ, ವಿಜಯಕುಮಾರ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜೂ.29 ರಂದು ಸಮನ್ವಯ ಸಮಿತಿ ಸಭೆ

ಕೊಪ್ಪಳ, ಜೂ.25 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕುರಿತಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯನ್ನು ಜೂ.29 ರಂದು ಮಧ್ಯಾಹ್ನ 03 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಜಿಲ್ಲೆಯಲ್ಲಿನ ರೋಗವಾಹಕ ಆಶ್ರಿತ ರೋಗಗಳ ಪರಾಮರ್ಷೆ, ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಸಭೆಗೆ ಹಾಜರಾಗುವಂತೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ. 26 ರಂದು ಕೊಪ್ಪಳಕ್ಕೆ ಲೋಕಾಯುಕ್ತ ಎಸ್‍ಪಿ ಪ್ರವಾಸ : ಕುಂದು, ಕೊರತೆ ದೂರು ಆಹ್ವಾನ

ಕೊಪ್ಪಳ, ಜೂ.25 (ಕರ್ನಾಟಕ ವಾರ್ತೆ) : ಕೊಪ್ಪಳ-ರಾಯಚೂರು ಲೋಕಾಯುಕ್ತ ಎಸ್‍ಪಿ ವಿ.ವಿ. ಕುಂಬಾರ್ ಅವರು ಜೂ. 26 ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಕುಂದುಕೊರತೆ, ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಲೋಕಾಯುಕ್ತ ಎಸ್‍ಪಿ ವಿ.ವಿ. ಕುಂಬಾರ್ ಅವರು ಅಂದು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದುಕೊರತೆ, ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವರು.  ಲೋಕಾಯುಕ್ತ ಡಿವೈಎಸ್‍ಪಿ ವೆಂಕನಗೌಡ ಎನ್. ಪಾಟೀಲ್ ಅವರು ಸಹ ಉಪಸ್ಥಿತರಿರುವರು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ನೀಡಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂ. 1 ಮತ್ತು 2 ಅನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539-220200 ಅಥವಾ 220533 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕಾಟ್ರಳ್ಳಿ ಗ್ರಾಮದಲ್ಲಿ ಬಿ.ಟಿ ಹತ್ತಿ ಬೇಸಾಯ ತರಬೇತಿ

ಕೊಪ್ಪಳ ಜೂ. 25 (ಕರ್ನಾಟಕ ವಾರ್ತೆ): ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ರೈತರಿಗೆ ಬಿ.ಟಿ ಹತ್ತಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಯಿತು.
      ವಿಸ್ತರಣಾ ಮುಂದಾಳು ಡಾ. ಎಂ.ಬಿ ಪಾಟೀಲ ಅವರು, ಬಿಟಿ ಹತ್ತಿ ಬೇಸಾಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ವಾತಾವರಣದಲ್ಲಿನ ಏರುಪೇರು, ನೀರಿನ ಸೂಕ್ತ ಬಳಕೆ, ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
     ಬೇಸಾಯ ಕ್ರಮಗಳು ಮತ್ತು ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಬೇಸಾಯ ಶಾಸ್ತ್ರ ತಜ್ಞ ಯೂಸುಫಲಿ ನಿಂಬರಗಿ ವಿವರಿಸಿದರು. ವಿಷಯ ತಜ್ಞ ರೋಹಿತ್ ಕೆ.ಎ ಹಾಗೂ ಸುಧಾಕರ್ ಟಿ ಸಹ ಭಾಗವಹಿಸಿ ಮಾಹಿತಿ ನೀಡಿದರು.  ತರಬೇತಿಯಲ್ಲಿ ರೈತರಾದ ದಳಪತಿ, ರಾಚಯ್ಯ ಶಾಂತವೀರಯ್ಯ ಮತ್ತು ಗ್ರಾಮದ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾರುತೆಪ್ಪ ಡಂಬಳ ಅವರ ಹತ್ತಿ ಹೊಲಕ್ಕೆ ಡಾ. ಎಂ.ಬಿ ಪಾಟೀಲ ಮತ್ತು ಸಿಬ್ಬಂದಿ ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿ, ರೈತರಿಗೆ ಮಾಹಿತಿ ನೀಡಿದರು.

Wednesday, 24 June 2015

ಫಲಾನುಭವಿಗಳೊಂದಿಗೆ ಸಿಎಂ ಸಂವಾದ : ಮೈಸೂರಿಗೆ ಕೊಪ್ಪಳದ ಫಲಾನುಭವಿಗಳು

ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ  ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಈ ಸದುದ್ದೇಶ ಈಡೇರಿದೆಯೇ ಇಲ್ಲವೇ, ಸರ್ಕಾರದಿಂದ ಜನರ ನಿರೀಕ್ಷೆ ಏನು ಎಂಬುದರ ಬಗ್ಗೆ ಫಲಾನುಭವಿಗಳಿಂದಲೇ ಅಭಿಪ್ರಾಯ ಪಡೆಯಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಜೂ. 27 ರಂದು ಮೈಸೂರಿನಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದು, ‘ಜನ-ಮನ’ ಸಂವಾದ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ 06 ಫಲಾನುಭವಿಗಳು ತೆರಳಲಿದ್ದಾರೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಡೀ ಕಾರ್ಯಕ್ರಮದ ಆಯೋಜನೆಯ ಹೊಣೆ ವಹಿಸಿಕೊಂಡಿದ್ದು, ಸಂವಾದ ಕಾರ್ಯಕ್ರಮವು ಜೂ. 27 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ನಡೆಯಲಿದೆ.  ಸರ್ಕಾರ ಎರಡು ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ.  ಈ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳು ಜಾರಿಗೊಂಡಿವೆ.  ಇನ್ನೂ ಹಲವು ಯೋಜನೆಗಳು ಜಾರಿಗೊಳ್ಳುವ ದಿಸೆಯಲ್ಲಿವೆ.  ಅನ್ನಭಾಗ್ಯ, ಕ್ಷೀರಭಾಗ್ಯ, ಋಣಮುಕ್ತ, ರಾಜೀವ್ ಆರೋಗ್ಯ ಭಾಗ್ಯ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಮನಸ್ವಿನಿ, ಮೈತ್ರಿ, ವಸತಿ ಭಾಗ್ಯ, ಕೃಷಿ ಭಾಗ್ಯ ಹೀಗೆ ಅನೇಕ ಯೋಜನೆಗಳು ಬಡ ಜನರ ಪಾಲಿನ ಭಾಗ್ಯವಾಗಿ ಪರಿಣಮಿಸಿವೆ.  ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಕಲಚೇತನರು, ಲಿಂಗ ಅಲ್ಪಸಂಖ್ಯಾತರು, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರು ಹೀಗೆ ಎಲ್ಲ ವರ್ಗದ ಜನರಿಗೂ ಸರ್ಕಾರ ಹತ್ತು ಹಲವು ಸೌಲಭ್ಯಗಳನ್ನು ಕೊಡಮಾಡಿದೆ.  ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಬೇಕು ಎನ್ನುವುದು ಸರ್ಕಾರದ ಆಶಯ.  ಇಂತಹ ಜನಪರ ಕಾಳಜಿಯಿಂದಾಗಿ ಇಂದು ರಾಜ್ಯದಲ್ಲಿ ಸರಿ ಸುಮಾರು 4. 5 ಕೋಟಿಗೂ ಹೆಚ್ಚು ಜನರು ಸರ್ಕಾರದಿಂದ ಒಂದಲ್ಲ, ಒಂದು ರೀತಿಯಲ್ಲಿ ಪ್ರಯೋಜನ ಪಡೆದುಕೊಂಡಿದ್ದಾರೆ. 
     ಸರ್ಕಾರವೇ ರೂಪುಗೊಳಿಸಿ, ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರನ್ನು ನಿರೀಕ್ಷೆಯಂತೆ ತಲುಪುತ್ತಿವೆಯೇ.  ಸರ್ಕಾರದ ಮೂಲ ಉದ್ದೇಶ ಈಡೇರಿದೆಯೇ.  ಅಭಿವೃದ್ಧಿಪರ ಯೋಜನೆಗಳನ್ನು ಇನ್ನಷ್ಟು ಜನರಿಗೆ ಹೇಗೆ ತಲುಪಿಸಬಹುದು.  ಅಥವಾ ಹೇಗೆ ಮತ್ತಷ್ಟು ಪರಿಣಾಮಕಾರಿಯನ್ನಾಗಿಸಬಹುದು.  ಸಾರ್ವಜನಿಕರು ಸರ್ಕಾರದಿಂದ ನಿರೀಕ್ಷಿಸುವುದು ಏನು.  ಹೀಗೆ ಯೋಜನೆಗಳ ಜಾರಿಯ ನಂತರ ಅನೇಕ ಪ್ರಶ್ನೆಗಳು ಮೂಡುತ್ತವೆ.  ಇವುಗಳಿಗೆ ಉತ್ತರವನ್ನು ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.  ಈ ದಿಸೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇದೇ ಜೂ. 27 ರಂದು ಬೆ. 11 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳೇ ಫಲಾನುಭವಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ರಾಜ್ಯದ ಎಲ್ಲ 30 ಜಿಲ್ಲೆಗಳಿಂದಲೂ, ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಕೊಪ್ಪಳ ಜಿಲ್ಲೆಯಿಂದಲೂ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ 06 ಜನ ಫಲಾನುಭವಿಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ.  ಈ ಅಪರೂಪದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇರಕಲ್ಲಗಡದಲ್ಲಿ ಕೃಷಿ ಅಭಿಯಾನ

ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಕೃಷಿ ಹಾಗೂ ಕೃಷಿ ಸಂಭಂದಿತ ಇಲಾಖೆಗಳ ಸಹಭಾಗಿತ್ವದಲ್ಲಿ ಕೃಷಿ ಅಭಿಯಾನ-2015 ಕಾರ್ಯಕ್ರಮವನ್ನು ಇರಕಲ್ಲಗಡ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಜೂ. 24 ರಿಂದ 25 ರವರೆಗೆ ಎರಡು ದಿನಗಳ ಕಾಲ ಕೃಷಿ ಮಾಹಿತಿ ರಥ ಇರಕಲ್ಲಗಡ ಹೋಬಳಿಯಲ್ಲಿ ಸಂಚರಿಸಲಿದೆ.
ಇರಕಲ್ಲಗಡ ಹೋಬಳಿಯ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಪ್ರಗತಿಪರ ರೈತ ಮಂಗಳೇಶಪ್ಪ ಮೆತಗಲ್, ಬೀರಪ್ಪ ಹಾಸಗಲ್ ಮತ್ತು ಗೋಪರಪ್ಪ, ಇವರು ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿದರು.
ಸಹಾಯಕ ಕೃಷಿ ಅಧಿಕಾರಿ ರಾಮಚಂದ್ರ ಜೋಷಿ ಅವರು, ಸರ್ಕಾರದಿಂದ ರೈತರಿಗೆ ಸಹಾಯಧನದಲ್ಲಿ ಕೃಷಿ ಪರಿಕರಗಳು ಲಭ್ಯತೆ, ಹೊಸ ಕೃಷಿ ತಂತ್ರಜ್ಞಾನವನ್ನು ಹೊಲದಲ್ಲಿ ಅಳವಡಿಕೆ, ಕೃಷಿ ಯಂತ್ರೋಪಕರಣಗಳ ಬಳಕೆ, ಇಂತಹ ಅನೇಕ ಯೋಜನೆಗಳನ್ನು ಹೊತ್ತ ಕೃಷಿ ಮಾಹಿತಿ ರಥಕ್ಕೆ ಇಂದು ಚಾಲನೆ ನೀಡಲಾಗಿದೆ.  ರೈತರು ಇದರ ಸದಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆ ಹೊಂದಬೇಕು. ಇಲಾಖೆ ಯೋಜನೆಗಳನ್ನು ಹಂಗಾಮು ಮತ್ತು ಅವಶ್ಯಕತೆಗನುವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
     ಕೃಷಿ ಅಧಿಕಾರಿ ಮಹ್ಮದ್ ಗೇಸುದರಾಜ, ಸಹಾಯಕ ಕೃಷಿ ಅಧಿಕಾರಿಗಳಾದ  ಯು.ಎಸ್. ಹಳ್ಳದ ಮತ್ತು ಎಂ.ಎಲ್ ಹಣಮ ರವರು ಉಪಸ್ಥಿತರಿದ್ದರು.

ಹೆಸರು ಬೆಳೆಗೆ ಹಳದಿ ನಂಜಾಣು ರೋಗ ನಿರ್ವಹಣೆ ಕಷ್ಟಕರ- ಡಾ. ಎಂ.ಬಿ. ಪಾಟೀಲ

ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹೆಸರು ಬೆಳೆಗೆ ಹಳದಿ ಮೊಸ್ಸಾಯಿಕ್ ಎಂಬ ನಂಜಾಣು ರೋಗ ವ್ಯಾಪಕವಾಗಿ ಕಂಡುಬಂದಿದ್ದು, ಈಗ ಅದನ್ನು ನಿಯಂತ್ರಿಸಲು ಅಸಾಧ್ಯವೆಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಎಂ.ಬಿ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.  ಇತ್ತಿಚಿಗೆ ಯಲಬುರ್ಗಾ ತಾಲೂಕಿನ ಬಳೂಟಗಿ, ಹೊಸಳ್ಳಿ, ಧಮ್ಮೂರು ಮತ್ತು ಬಸಾಪೂರ ಗ್ರಾಮದ ಹೊಲಗಳಿಗೆ ಡಾ. ಎಂ.ಬಿ ಪಾಟೀಲ ಮತ್ತು ಕೀಟಶಾಸ್ತ್ರ ತಜ್ಞರಾದ ರೋಹಿತ್ ಭೇಟಿ ನೀಡಿ ಪರಿಶೀಲಿಸಿದರು. ಈಗ ಬಿತ್ತನೆಯಾದ ಹೆಸರು ಬೆಳೆಗೆ ಮುಂಬರುವ ಕೀಟ ಮತ್ತು ರೋಗಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ.
     ಬಾಡುತ್ತಿರುವ ಮತ್ತು ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು.  ಪ್ರತೀ ಲೀ. ನೀರಿಗೆ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಮಿ.ಲೀ ಥಯಾಮಿಥಾಕ್ಸಾಮ್ 25 ಡಬ್ಲ್ಯೂಜಿ ಅಥವಾ 1.7 ಮಿ.ಲೀ ಡೈಮೆಥೋಯೇಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.  ಬಿಳಿ ನೊಣದ ನಿಯಂತ್ರಣಕ್ಕಾಗಿ ಟ್ರಯೊಜೊಫಾಸ್ 1.25 ಮಿ.ಲೀ ಪ್ರತೀ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.  ಎಲೆ ತಿನ್ನುವ ಹಾಗು ಕಾಯಿ ಕೊರಕದ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 0.5 ಮಿ. ಲೀ ಫೆನವಲರೇಟ್ 20 ಇಸಿ ಅಥವಾ 2 ಮಿ. ಲೀ ಕ್ವಿನಾಲ್‍ಫಾಸ್ 25 ಇಸಿ ಬೆರೆಸಿ ಸಿಂಪರಿಸಬೇಕು.  ಬೂದಿರೋಗ ಕಂಡುಬಂದರೆ 0.5 ಮಿ.ಲೀ ಪ್ರೊಪಿಕೋನಾಜೋಲ್ ಅಥವಾ 3.0 ಗ್ರಾಂ ನೀರಿನಲ್ಲಿ ಕರಗುವ ಶೇ. 80 ರ ಗಂಧಕ ಅಥವಾ 1 ಗ್ರಾಂ ಕಾರ್ಬನ್‍ಡೈಜಿಮ್ 50 ಡಬ್ಯೂಪಿನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಜೈನೆಬ್ 75 ಡಬ್ಯೂಪಿ ಅಥವಾ ಮೆಂಕೋಜೆಬ್ 75 ಡಬ್ಯೂಪಿ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಯೂಪಿ ಬೆರೆಸಿ ಸಿಂಪಡಿಸಬೇಕು. ಬಿತ್ತುವಾಗ ಪ್ರತಿ ಕಿ. ಗ್ರಾಂ ಬಿತ್ತನೆ ಬೀಜಕ್ಕೆ 10 ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂದ್ರನಾಶಕವನ್ನು ಲೇಪಿಸಿ ಬಿತ್ತಬೇಕು ಹೂ ಬಿಡುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 1 ಮಿ ಲೀ ಹೆಕ್ಸಾಕೋನಾಜೋಲ್ 5 ಇಸಿ ಬೆರೆಸಿ ಸಿಂಪರಣೆ ಮಾಡುವುದರಿಂದ ಸರ್ಕಾಸ್ಪೋರ ಎಲೆ ಚುಕ್ಕೆ ರೋಗ ನಿಯಂತ್ರಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ ರೋಹಿತ್ ಕೆ.ಎ-9845194328 ಅಥವಾ ವಿಸ್ತರಣಾ ಮುಂದಾಳು-ಡಾ|| ಎಂ. ಬಿ. ಪಾಟಿ¯ -9480696319 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಉದ್ಯೋಗಿನಿ ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಆಸಕ್ತ ಮಹಿಳೆಯರಿಗೆ ಆರ್ಥಿಕ ಸೌಲಭ್ಯ ಮಂಜೂರಾತಿಗಾಗಿ   ಅರ್ಜಿ ಆಹ್ವಾನಿಸಲಾಗಿದೆ.
     ಈ ಯೋಜನೆಯಡಿ ಮಹಿಳಾ ಅಭ್ಯರ್ಥಿಗಳು ಯಾವುದೇ ಆರ್ಥಿಕ ಚಟುವಟಿಕೆ ಕೈಗೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 18 ರಿಂದ 45 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಕುಟುಂಬದ ವಾರ್ಷಿಕ ವರಮಾನ 40,000 ರೂ. ಮೀರಿರಬಾರದು. ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ 3 ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ ಗುರುತಿನ ಚೀಟಿ, ಪಡಿತರ ಚೀಟಿ, ಯೋಜನಾ ವರದಿಗಳನ್ನು ಲಗತ್ತಿಸಿ ಜುಲೈ. 08 ರೊಳಗಾಗಿ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ.04 ಕ್ಕೆ ಕೊಪ್ಪಳ ತಾ.ಪಂ ಸಾಮಾನ್ಯ ಸಭೆ

ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಪಂಚಾಯತಿಯ ಸಾಮಾನ್ಯ ಸಭೆಯನ್ನು ಜುಲೈ.04 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ತಾಲೂಕಾ ಪಂಚಾಯತಿ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಮತ್ತು ಅನುಷ್ಟಾನಾಧಿಕಾರಿಗಳು ಜೂ.2015 ರ ಅಂತ್ಯದ ತಮ್ಮ ಇಲಾಖಾ ಪ್ರಗತಿ ವರದಿಯನ್ನು ಜುಲೈ.01 ರೊಳಗಾಗಿ ಕಾರ್ಯಾಲಯಕ್ಕೆ ಸಲ್ಲಿಸುವಂತೆ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಬಸವ ವಸತಿ ಯೋಜನೆ : ಆಯ್ಕೆ ಪದ್ಧತಿಯಲ್ಲಿ ಬದಲಾವಣೆ

ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಸರ್ಕಾರದ ಸೂಚನೆಯಂತೆ ಗ್ರಾಮೀಣ ಪ್ರದೇಶದಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ಬಸವ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳ ಆಯ್ಕೆ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
     ಪ್ರಸ್ತುತ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ರಾಜ್ಯ ಸರ್ಕಾರದ ಯೋಜನೆಗಳಾದ ಬಸವವಸತಿ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಸಭೆಯ ಮುಖಾಂತರ ಅರ್ಹ ವಸತಿ ರಹಿತರ ಪಟ್ಟಿಯಿಂದ ಆಯ್ಕೆ ಮಾಡಲಾಗುತ್ತಿದೆ. ಬಳಿಕ ಅದನ್ನು ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಜಾಗೃತ ಸಮಿತಿಯ ಮೂಲಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗುತ್ತಿದೆ.  ವಸತಿ ಯೋಜನೆಯಡಿ ಗ್ರಾಮೀಣ  ಪ್ರದೇಶದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಸರ್ಕಾರವು ನಿಗದಿಪಡಿಸಿದ ಗುರಿಗಿಂತ ಅರ್ಹ ವಸತಿ ರಹಿತರು ಅಧಿಕವಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ.
     ಫಲಾನುಭವಿಗಳನ್ನು ಆಯ್ಕೆ ಮಾಡುವುದಕ್ಕಿಂತ ಮುಂಚಿತವಾಗಿ ವಸತಿ ರಹಿತ ಪಟ್ಟಿಯಲ್ಲಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ ಮತ್ತು ನಿವೇಶನ ಹೊಂದಿರುವ ಬಗ್ಗೆ ಇತ್ಯಾದಿ ದಾಖಲಾತಿಗಳನ್ನು ಪಡೆದುಕೊಂಡು ನಂತರ ನಿಗದಿಪಡಿಸಿದ ಗುರಿಗೆ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಬೇಕು. ಒಂದು ವೇಳೆ ವರ್ಗವಾರು ನಿಗದಿಪಡಿಸಿದ ಗುರಿಗಿಂತ ಅರ್ಹ ವಸತಿ ರಹಿತರು ಅಧಿಕವಾಗಿದ್ದಲ್ಲಿ ಗುರಿಗೆ ಅನುಗುಣವಾಗಿ ಲಭ್ಯವಿರುವ ಅರ್ಹ ವಸತಿ ರಹಿತ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ನಿಯಮಾನುಸಾರ ಆಯ್ಕೆ ಮಾಡಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ನಿಖರತೆ ಹೊಂದುವ ಸಲುವಾಗಿ ಈ ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಿಸಬೇಕು. ಈ ಬದಲಾವಣೆಗಳನ್ನು ಎಲ್ಲಾ ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಯ್ಕೆಗೊಂಡ ಫಲಾನುಭವಿಗಳ ಪಟ್ಟಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಗಳು ಆಯಾ ಗ್ರಾಮದಲ್ಲಿ ಪ್ರಚುರಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪಿಯುಸಿ ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಕೊಪ್ಪಳ, ಜೂ.24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ 06 ಪರೀಕ್ಷಾ ಕೇಂದ್ರಗಳಲ್ಲಿ ಜೂ.25 ರಿಂದ ಜುಲೈ.04 ರವರೆಗೆ ನಡೆಯಲಿರುವ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಗಳನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.   
     ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಗಳು ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಯಲಬುರ್ಗಾದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಷ್ಟಗಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಗಂಗಾವತಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಎಸ್.ಎಂ.ಎನ್.ಎಂ ಬಾಲಕಿಯರ ಪದವಿ ಪೂರ್ವ ಕಾಲೇಜು ಸೇರಿದಂತೆ ಜಿಲ್ಲೆಯ ಒಟ್ಟು 06 ಪರೀಕ್ಷಾ ಕೇಂದ್ರಗಳಲ್ಲಿ ಜೂ.25 ರಿಂದ ಜುಲೈ.04 ರವರೆಗೆ ಬೆಳಿಗ್ಗೆ 08 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನಡೆಯಲಿವೆ. ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1983 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
     ನಿಷೇಧಾಜ್ಞೆಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಝೆರಾಕ್ಸ್, ಟೈಪಿಂಗ್‍ಗೆ ನಿರ್ಬಂಧ ವಿಧಿಸಲಾಗಿದೆ ಅಲ್ಲದೆ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.  ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು  ಆದೇಶದಲ್ಲಿ ತಿಳಿಸಿದ್ದಾರೆ.

Tuesday, 23 June 2015

ಪಿಯುಸಿ ಪೂರಕ ಪರೀಕ್ಷೆಗೆ ವ್ಯವಸ್ಥಿತ ಸಿದ್ಧತೆ ಕೈಗೊಳ್ಳಿ- ಕೃಷ್ಣ ಉದಪುಡಿ


ಕೊಪ್ಪಳ, ಜೂ.23 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜೂ.25 ರಿಂದ ಜುಲೈ.04 ರವರೆಗೆ ನಡೆಯಲಿದ್ದು, ಪೂರಕ ಪರೀಕ್ಷೆಯನ್ನು ದೋಷಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯತ ಸಮಿತಿ ಕೊಠಡಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈ ಬಾರಿ ಒಟ್ಟು 4270 ವಿದ್ಯಾರ್ಥಿಗಳು ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು 06 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ಸೂಕ್ಷ್ಮ ಪ್ರಕ್ರಿಯೆಯಾಗಿರುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯಕವಾಗಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನಗಳ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರಯತ್ನದೆಡೆಗೆ ಸೆಳೆಯಬೇಕು. ಪರೀಕ್ಷೆ ಸಂದರ್ಭದಲ್ಲಿ ಆಯಾ ವಿಷಯದ ಉಪನ್ಯಾಸಕರನ್ನು ಅಥವಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬಾರದು. ಮಾಧ್ಯಮದವರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಡಿಯೋ ಅಥವಾ ಫೋಟೋ ಪಡೆಯಲು ಮಾತ್ರ ಅವಕಾಶ ನೀಡಬಹುದು. ಪರೀಕ್ಷೆ ಪ್ರಾರಂಭದ ನಂತರ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿಲ್ಲ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು, ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಅಲ್ಲದೆ, ಸೂಕ್ತ ಪೊಲೀಸ್ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ವ್ಯವಸ್ಥೆ ಇಲ್ಲದೇ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ದೋಷಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪೂರಕ ಪರೀಕ್ಷೆಗಳ ಕುರಿತು ಸಭೆಗೆ ವಿವರಣೆ ನೀಡಿ, 2603-ಬಾಲಕರು, 1667-ಬಾಲಕಿಯರು ಸೇರಿದಂತೆ ಒಟ್ಟು 4270 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಬರೆಯಲಿದ್ದಾರೆ. ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಬಾಲಕಿಯರ ಸ.ಪ.ಪೂ. ಕಾಲೇಜು, ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು, ಕುಷ್ಟಗಿಯ ಸರ್ಕಾರಿ ಬಾಲಕರ ಪ.ಪೂ.ಕಾಲೇಜು, ಗಂಗಾವತಿಯ ಬಾಲಕರ ಸ.ಪ.ಪೂ. ಕಾಲೇಜು.  ಎಸ್.ಎಂ.ಎನ್.ಎಮ್ ಬಾಲಕಿಯರ ಸ.ಪ.ಪೂ. ಕಾಲೇಜು ಸೇರಿ ಜಿಲ್ಲಾದ್ಯಂತ ಒಟ್ಟು 06 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಖಜಾನೆ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ವೇಳಾ ಪಟ್ಟಿ

ಕೊಪ್ಪಳ, ಜೂ.23 (ಕರ್ನಾಟಕ ವಾರ್ತೆ) : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಇದೇ ಜೂ.25 ರಿಂದ ಜುಲೈ.04 ರವರಗೆ ಕೊಪ್ಪಳ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಯನ್ನು ಆಯೋಜಿಸಲಾಗಿದ್ದು, ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. 
     ಜೂ.25 ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ಜೂ.26 ರಂದು ಅರ್ಥಶಾಸ್ತ್ರ, ಗಣಿತ, ತರ್ಕಶಾಸ್ತ್ರ, ಗೃಹವಿಜ್ಞಾನ, ಜೂ.27 ರಂದು ಇಂಗ್ಲೀಷ್, ಜೂ.29 ರಂದು ಬಿಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಶಿಕ್ಷಣ, ಐಚ್ಛಿಕ ಕನ್ನಡ, ಜೂ.30 ರಂದು ಕನ್ನಡ, ಮರಾಠಿ, ಅರೇಬಿಕ್, ಜುಲೈ.01 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಜು.02 ರಂದು ಇತಿಹಾಸ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಜು.03 ರಂದು ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಹಾಗೂ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ಜು.04 ರಂದು ಹಿಂದಿ, ಸಂಸ್ಕøತ ಮತ್ತು ಉರ್ದು ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಜೂ.29 ರಂದು ಯೋಜನಾ ಸ್ಥಾಯಿ ಸಮಿತಿ ಸಭೆ

ಕೊಪ್ಪಳ, ಜೂ.23 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತ್‍ನ ಯೋಜನಾ ಮತ್ತು ಸ್ಥಾಯಿ ಸಮಿತಿ ಸಭೆಯನ್ನು ಜೂ.29 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತ್‍ನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
     ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅಮರೇಶ ಕುಳಗಿ ಸಭೆಯ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ 2014-15ನೇ ಹಾಗೂ 2015-16 ನೇ ಸಾಲಿನ ಹಣಕಾಸಿನ ವಿವರಗಳು, ಹೊಸ ಆಯೋಜನೆಗಳ ಅನುಷ್ಟಾನ ಕುರಿತು ಚರ್ಚೆ ನಡೆಯಲಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರಗತಿ ವರದಿಯೊಂದಿಗೆ ಸಭೆಗೆ ಹಾಜರಾಗುವಂತೆ ಹಾಗೂ ತಮ್ಮ ಇಲಾಖೆಯ ಪ್ರಗತಿ ವರದಿಯ 10 ಪ್ರತಿಗಳನ್ನು ಜಿ.ಪಂ. ಕಛೇರಿಗೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.24 ರಂದು ಕೊಪ್ಪಳ ನಗರದಲ್ಲಿ ನೀರು ಪೂರೈಕೆ ಇಲ್ಲ

ಕೊಪ್ಪಳ, ಜೂ.23 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದ ನೀರು ಪೂರೈಕೆ ಪೈಪ್‍ಲೈನ್ ದುರಸ್ತಿ ಹಾಗೂ ವಿದ್ಯುತ್ ಲೈನ್‍ಗಳ ದುರಸ್ತಿ ಹಿನ್ನೆಲೆಯಲ್ಲಿ ಜೂ.24 ರಂದು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ತಿಳಿಸಿದ್ದಾರೆ.
     ಕೊಪ್ಪಳ ನಗರಕ್ಕೆ ನೀರು ಸರಬರಾಜಾಗುವ ಕಾತರಕಿ ಗ್ರಾಮದ ಮುಖ್ಯ ಪೈಪ್‍ಲೈನ್‍ನಲ್ಲಿ ಲೀಕೇಜ್ ಇದ್ದು, ಅದನ್ನು ವೆಲ್ಡಿಂಗ್ ಮಾಡಿಸಬೇಕಾಗಿದೆ ಹಾಗೂ ಮಳೆ ಗಾಳಿಯಿಂದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ಲೈನ್ ಸರಿಪಡಿಸಬೇಕಾಗಿರುವುದರಿಂದ ಜೂ.24 ರಂದು ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ರಮೇಶ ಪಟ್ಟೇದ್ ಪ್ರಕಟಣೆಯಲ್ಲಿ ಕೋರಿದ್ದಾರೆ. 

Monday, 22 June 2015

ಕೃಷಿ ಮಾಹಿತಿ ರಥಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಭಾಗಿತ್ವದಲ್ಲಿ ಜೂ. 22 ರಿಂದ 24 ರವರೆಗೆ ಕೊಪ್ಪಳ ತಾಲೂಕಿನಲ್ಲಿ ಆಯೋಜಿಸಲಾಗಿರುವ ಕೃಷಿ ಅಭಿಯಾನದಡಿ ಕಾರ್ಯಕ್ರಮದ ಕೃಷಿ ಮಾಹಿತಿ ರಥಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳದ ಕೃಷಿ ಇಲಾಖೆ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
     ನಂತರ ಮಾತನಾಡಿದ ಅವರು, ರೈತರ ಹಿತಕಾಯಲು ಸರ್ಕಾರ ಕೃಷಿಭಾಗ್ಯ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಉಪಕರಣಗಳನ್ನು ಪೂರೈಸುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.  ಈ ಯೋಜನೆಗಳನ್ನು ಸಾಮಾನ್ಯ ರೈತರಿಗೂ ತಲುಪಿಸಬೇಕಾದ್ದು ಕೃಷಿ ಇಲಾಖೆಯ ಜವಾಬ್ದಾರಿಯಾಗಿದೆ. ಎಲ್ಲ ರೈತರಿಗೂ ಯೋಜನೆಯ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಇದೀಗ ಹಮ್ಮಿಕೊಂಡಿರುವ ಕೃಷಿ ಅಭಿಯಾನ ಉತ್ತಮ ಬೆಳವಣಿಗೆಯಾಗಿದ್ದು ಕೃಷಿ ಮಾಹಿತಿ ರಥ ಸಂಚಾರದ ಉದ್ದೇಶ ಈಡೇರಲಿ.  ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೇಕಾದ ಬೀಜ ಮತ್ತು ಇತರೆ ಕೃಷಿ ಪರಿಕರಗಳ ದಾಸ್ತಾನು ಮಾಡಲಾಗಿದ್ದು, ಬೀಜ ಮತ್ತು ರಸಗೊಬ್ಬರದ ಕೊರತೆ ಇರುವುದಿಲ್ಲ.  ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಆಶಾಭಾವನೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ವ್ಯಕ್ತಪಡಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅವರು ಮಾತನಾಡಿ, ಪ್ರತಿ ಹೋಬಳಿಯಲ್ಲಿ ಕೃಷಿ ಮಾಹಿತಿ ರಥ 3 ದಿನಗಳ ಕಾಲ ಸಂಚರಿಸಲಿದ್ದು, ಮೊದಲ ಎರಡು ದಿನ  ಗ್ರಾಮಗಳಲ್ಲಿ ಸಂಚರಿಸಿ ರೈತರಿಗೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದು, ಮೂರನೇ ದಿನ ಹೋಬಳಿ ಕೇಂದ್ರಸ್ಥಾನದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಿ ಹೋಬಳಿಯ ಎಲ್ಲಾ ರೈತರಿಗೆ ಮಾಹಿತಿ ನೀಡಲಾಗುವುದು.  ರೈತರ ಆರ್ಥಿಕ ಆರೋಗ್ಯ ಹೆಚ್ಚಿನ ಪ್ರಮಾಣದಲ್ಲಿ ಸುಧಾರಣೆಯಾಗಬೇಕಾದಲ್ಲಿ ಇಲಾಖೆ ಯೋಜನೆಗಳನ್ನು ಹಂಗಾಮು ಮತ್ತು ಅವಶ್ಯಕತೆಗನುವಾಗಿ ಅಳವಡಿಸಿಕೊಳ್ಳಬೇಕು ಎಂದರು.
          ಉಪ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾಗ್ಯನಗರ ಗ್ರಾ.ಪಂ. ಆಡಳಿತಾಧಿಕಾರಿಯಾಗಿ ಕೃಷ್ಣಮೂರ್ತಿ ಅಧಿಕಾರ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಭಾಗ್ಯನಗರ ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯಾಗಿ ಕೊಪ್ಪಳ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ಸೋಮವಾರದಂದು ಅಧಿಕಾರ ವಹಿಸಿಕೊಂಡರು.
     ಭಾಗ್ಯನಗರ ಗ್ರಾಮ ಪಂಚಾಯತಿಯ ಪದಾವಧಿಯು ಜೂ. 16 ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯತಿಯ ಆಡಳಿತಾಧಿಕಾರಿಯನ್ನಾಗಿ ಕೊಪ್ಪಳ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರು ಸೋಮವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ : ಅರ್ಜಿ ಆಹ್ವಾನ

ಕೊಪ್ಪಳ, ಜೂ. 22  (ಕರ್ನಾಟಕ ವಾರ್ತೆ) : ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ  ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಡಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     2015 ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯದ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ.15 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‍ಸೈಟ್  www.backwardclasses.kar.nic.in  ನಿಂದ ಪಡೆಯಬಹುದು. ಅಥವಾ ಕಛೇರಿ ದೂರವಾಣಿ ಸಂಖ್ಯೆ : 080-44554444, ಮೊಬೈಲ್ ಸಂಖ್ಯೆ: 9480818013, 9480818010 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು  ಪ್ರಕಟಣೆ ತಿಳಿಸಿದೆ.

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : 83 ವಿದ್ಯಾರ್ಥಿಗಳು ಗೈರು

ಕೊಪ್ಪಳ, ಜೂ.22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಸೋಮವಾರದಂದು ನಡೆದ ಹಿಂದಿ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು 622 ವಿದ್ಯಾರ್ಥಿಗಳ ಪೈಕಿ, 539 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 83 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಹಿಂದಿ ವಿಷಯಕ್ಕೆ ಬಾಲಕರು-387, ಬಾಲಕಿಯರು-235, ಸೇರಿದಂತೆ ಒಟ್ಟು 622 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ ಬಾಲಕರು-330, ಬಾಲಕಿಯರು-209 ಸೇರಿದಂತೆ ಒಟ್ಟು 539 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 57-ಬಾಲಕರು, 26-ಬಾಲಕಿಯರು ಸೇರಿದಂತೆ ಒಟ್ಟು 83 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ-42, ಗಂಗಾವತಿ-26, ಕುಷ್ಟಗಿ-3 ಮತ್ತು ಯಲಬುರ್ಗಾ ತಾಲೂಕಿನಲ್ಲಿ 12, ಒಟ್ಟು 83 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದಿನಾಟಕ ಮತ್ತು ಜಾನಪದ ಕಲಾ ತಂಡಗಳ ಆಯ್ಕೆ

ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಟಕ ಮತ್ತು ಜಾನಪದ ಸಂಗೀತದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ಸೋಮವಾರದಂದು ಜಿಲ್ಲಾ ಆಡಳಿತ ಭವನದ ಆವರಣದಲ್ಲಿ ಜರುಗಿತು.
     ಕಲಾ ತಂಡಗಳ ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ ಬಾಸೂರ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕೃಷಿ ಇಲಾಖೆ ಅಧಿಕಾರಿ ಬಸವರಾಜ್ ಇದ್ದರು.  ತಾಲೂಕು ವೈದ್ಯಾಧಿಕಾರಿ ಡಾ. ದಾನರೆಡ್ಡಿ ಉಪಸ್ಥಿತರಿದ್ದರು.  ಜಿಲ್ಲೆಯ ವಿವಿಧೆಡೆಗಳಿಂದ 06 ಬೀದಿ ನಾಟಕ ತಂಡಗಳು ಮತ್ತು 06 ಜಾನಪದ ಸಂಗೀತ ಕಲಾ ತಂಡಗಳು ಆಯ್ಕೆ ಸ್ಪರ್ಧೆಯಲ್ಲಿದ್ದವು.

Saturday, 20 June 2015

ತಂತ್ರಜ್ಞರು, ಕಲಾವಿದರ ನೇಮಕ : ಅರ್ಜಿ ಆಹ್ವಾನ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಕಲಬುರಗಿಯ ರಂಗಾಯಣಕ್ಕೆ ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕಲಬುರಗಿ ರಂಗಾಯಣಕ್ಕೆ 03 ಜನ ತಂತ್ರಜ್ಞರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ತಂತ್ರಜ್ಞರು ಸಂಗೀತ, ಧ್ವನಿ-ಬೆಳಕು, ರಂಗ ಸಜ್ಜಿಕೆ, ಪರಿಕರ ಇತ್ಯಾದಿ ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಭಾಷೆಯನ್ನು ಕನಿಷ್ಟ ಓದುವ, ಬರೆಯುವ, ಗ್ರಹಿಸುವ ಸಾಮಥ್ಯವನ್ನು ಹೊಂದಿರಬೇಕು. ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು. ಈ ನೇಮಕವು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಗರಿಷ್ಟ 3 ವರ್ಷಗಳ ಅವಧಿಯದ್ದಾಗಿದೆ. ತಂತ್ರಜ್ಞರಿಗೆ ಸಂಚಿತ ವೇತನ ಮಾಸಿಕ 20,000 ರೂ.ಗಳನ್ನು ನೀಡಲಾಗುವುದು.  ಇತರ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ.   ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ ಮತ್ತು ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ.
     ಕಲಾವಿದರ ನೇಮಕಕ್ಕೆ ಸಂಬಂಧಿಸಿದಂತೆ 12 ಜನ ಕಲಾವಿದರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುವುದು. 12 ಜನ ಕಲಾವಿದರಲ್ಲಿ ಕನಿಷ್ಟ 04 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿದ್ದು, 04 ಹುದ್ದೆಗಳನ್ನು ಪ.ಜಾತಿ ಮತ್ತು ಪ.ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ. ಅಲ್ಲದೇ ಕನಿಷ್ಟ ಶೇ. 50 ರಷ್ಟು ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡಲಾಗುದು. ಕಲಾವಿದರಿಗೆ ಪ್ರಥಮ ವರ್ಷದಲ್ಲಿ ಸಂಚಿತ ವೇತನವಾಗಿ ಮಾಸಿಕ 12,000 ರೂ., ಎರಡನೇ ವರ್ಷದಲ್ಲಿ 14,000 ರೂ., ಮೂರನೇ ವರ್ಷದಲ್ಲಿ 16,000 ರೂ.ಗಳನ್ನು ನೀಡಲಾಗುವುದು. ಇತರ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ಕಲಾವಿದರ ವಯಸ್ಸು ಗರಿಷ್ಟ 25 ವರ್ಷಗಳನ್ನು ಮೀರಿರಬಾರದು. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗಶಿಕ್ಷಣ ಪಡೆದ ಪದವಿ ಕಲಾವಿದರಿಗೆ ಆದ್ಯತೆ ನೀಡಲಾಗುವುದು(ವಯೋಮಿತಿಯನ್ನು 5 ವರ್ಷ ಸಡಿಲಿಸಲಾಗುವುದು). ಕಲಾವಿದರನ್ನು ರಂಗಾಯಣಗಳ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸುವ ಉಪಸಮಿತಿಯು ಆಯ್ಕೆ ಮಾಡುತ್ತದೆ. ಸಂವಿಧಾನದ 371(ಜೆ) ಕಲಂನ ಅಡಿಯಲ್ಲಿ ಮೀಸಲಾತಿ ಬಯಸಿದಲ್ಲಿ ಸಕ್ಷಮ ಪ್ರಾಧಿಕಾರ ನೀಡುವ ಸಂಬಂಧಿತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
     ಅರ್ಜಿ ಸಲ್ಲಿಸಲಿಚ್ಛಿಸುವವರು ಬಿಳಿ ಹಾಳೆಯ ಮೇಲೆ ಸ್ವ-ವಿವರಗಳನ್ನು ಬರೆದು, ಜೂ.27 ರ ಸಂಜೆ 5 ಗಂಟೆ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ/ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ ಶಹಬಾದ್ ವರ್ತುಲ ರಸ್ತೆ, ಕಲಬುರಗಿ-585105 ಈ ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇಮೇಲ್ :   kannadaculture.glb@gmail.com ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08472-227734 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡ : ಆಸಕ್ತರಿಂದ ಅರ್ಜಿ ಆಹ್ವಾನ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ತಾಲೂಕಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕೊಪ್ಪಳ-02 ಮತ್ತು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕೊಪ್ಪಳ-03 ವಸತಿ ನಿಲಯಗಳಿಗೆ ಕೊಪ್ಪಳ ನಗರದಲ್ಲಿ 100 ವಿದ್ಯಾರ್ಥಿಗಳು ವಾಸಿಸುವಂತಹ ಬಾಡಿಗೆ ಕಟ್ಟಡವು ಬೇಕಾಗಿದ್ದು, ಕಟ್ಟಡವನ್ನು ಬಾಡಿಗೆ ರೂಪದಲ್ಲಿ ನೀಡಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಕೊಪ್ಪಳ, ದೂರವಾಣಿ ಸಂಖ್ಯೆ : 08539-220590 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಕಳಪೆ ಗುಣಮಟ್ಟದ ಔಷಧ ಪತ್ತೆ : ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ

ಕೊಪ್ಪಳ, ಜೂ.20 (ಕರ್ನಾಟಕ ವಾರ್ತೆ): ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ವಿವಿಧ ಔಷಧಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ. ಸಾರ್ವಜನಿಕರು ಈ ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ಅವರು ತಿಳಿಸಿದ್ದಾರೆ.
     ಸೆಪ್ಡಾಕ್ಸ್-200, ಸೆಫ್ಟೊಡೊಕ್ಸೈಮ್ ಪ್ರೊಕ್ಸೆಟಿಲ್ ಟ್ಯಾಬ್ಲೆಟ್ಸ್ ಐ.ಪಿ 200 ಎಂಜಿ, ಬ್ಯಾಚ್ ಸಂಖ್ಯೆ: ಎಸ್‍ಪಿ2-1401, ತಯಾರಕರು: ಮೆ||ವ್ಯಾಕ್ಸ್‍ಮ್ಯಾನ್ ಸೆಲ್‍ಮ್ಯಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ,  ಅನಂತಪುರ-515 004. ರಾಪ್ಪಿನ್-20, ರಬೆಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐಪಿ, ಬ್ಯಾಚ್ ಸಂಖ್ಯೆ: ಎಲ್‍ಆರ್‍ಟಿ-399, ತಯಾರಕರು: ಮೆ||ವಿಲಿನ್ ಬಯೋಮೆಡ್ ಲಿ, ಖಾಸ್ರಾ   ರೂರ್ಕಿ-247 667, ಉತ್ತರಕಾಂಡ್. ಆನ್ಟೆಸ್, ಬ್ಯಾಚ್ ಸಂಖ್ಯೆ: ಡಬ್ಲ್ಯೂಎಪಿ-1405, ತಯಾರಕರು: ಮೆ||ಅಲ್ಫ ಪ್ರಾಡಕ್ಟ್ಸ್, ಹಿಮಾಚಲ ಪ್ರದೇಶ. ಒಮೆಪ್ರಜೋಲ್ ಕ್ಯಾಪ್ಸೂಲ್ಸ್ ಐಪಿ 20 ಎಂಜಿ, ಬ್ಯಾಚ್ ಸಂಖ್ಯೆ: 5701114, ತಯಾರಕರು: ಮೆ||ಕರ್ನಾಟಕ ಆಂಟಿಬಯೋಟಿಕ್ಸ್ & ಫಾರ್ಮಾಸ್ಯುಟಿಕಲ್ಸ್ ಲಿ, ಬೆಂಗಳೂರು. ಕೊಪೊಡೆಕ್ಸ್-50 ಡಿಟಿ, ಬ್ಯಾಚ್ ಸಂಖ್ಯೆ: ಬಿಎಲ್‍ಟಿ-108, ತಯಾರಕರು: ಮೆ||ಅಫ್ರೈನ್ ಫಾರ್ಮುಲೇಶನ್ಸ್ ಪ್ರೈ.ಲಿ, ಹಿಮಾಚಲ ಪ್ರದೇಶ. ಸೆಪ್‍ಫಾರ್-200, ಸೆಫ್ಟೊಡೋಕ್ಸೈಮ್ ಪ್ರೊಕ್ಸೆಟಿಲ್ ಟ್ಯಾಬ್ಲೆಟ್ಸ್ 200 ಎಂಜಿ ಐಪಿ, ಬ್ಯಾಚ್ ಸಂಖ್ಯೆ: 10550, ತಯಾರಕರು: ಮೆ||ಹೆಲ್ತ್ ಕೇರ್ ಫಾರ್ಮುಲೇಶನ್ಸ್ ಪ್ರೈ.ಲಿ, ಬರೋಡ-390 019. ಎಮ್-ಟೋನ್ ಟ್ಯಾಬ್ಲೆಟ್ಸ್, ಮೆಟ್ರೊನಿಡಜೋಲ್ & ಫ್ಯುರಜೋಲಿಡಾನ್ ಟ್ಯಾಬ್ಲೆಟ್ಸ್, ಬ್ಯಾಚ್ ಸಂಖ್ಯೆ: ಎಮ್‍ಟಿ-73, ತಯಾರಕರು: ಮೆ||ಮಹೇಂದ್ರ ಲ್ಯಾಬ್ಸ್ ಪ್ರೈ ಲಿ, ಬೆಂಗಳೂರು. ಯೆಸ್ಟಾಪ್ 40 ಟ್ಯಾಬ್ಲೆಟ್ಸ್, ಪಾಂಟೊಪ್ರಜೋಲ್ ಟ್ಯಾಬ್ಲೆಟ್ಸ್ 40 ಎಂಜಿ, ಬ್ಯಾಚ್ ಸಂಖ್ಯೆ: ಎಟಿ1404753, ತಯಾರಕರು:  ಮೆ||ಅಕ್ಯುರ ಕೇರ್ ಫಾರ್ಮಾಸ್ಯುಟಿಕಲ್ಸ್ ಪ್ರೈ ಲಿ, ಹಿಮಾಚಲ ಪ್ರದೇಶ.
     ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಈ ಮೇಲಿನ ಔಷಧಗಳನ್ನು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ  ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ರಾಜ್ಯ ಔಷಧ ನಿಯಂತ್ರಕ ರಘುರಾಮ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಯೋಜನೆ : ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕೊಪ್ಪಳ, ಜೂ.20 (ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಟ್ಯಾಕ್ಸಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸುವ ಸಂಬಂಧ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಪ್ರಸಕ್ತ ಸಾಲಿನ ಪ್ರವಾಸಿ ಟ್ಯಾಕ್ಸಿ ವಿತರಿಸುವ ಸಂಬಂಧ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅರ್ಹ ಮತ್ತು ಅನರ್ಹರಿಂದ ಕೂಡಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದಂತಹ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು 27 ರ ಒಳಗಾಗಿ ತಮ್ಮ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಸಮರ್ಥಿಸುವಂತಹ ಮೂಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು ಕೊಪ್ಪಳ, ಉಪವಿಭಾಗಾಧಿಕಾರಿಗಳು ಅಥವಾ ಸಹಾಯಕ ನಿರ್ದೇಶಕರು, ಪ್ರವಾಸೋಧ್ಯಮ ಇಲಾಖೆ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ. ಈ ಹಿಂದೆ ಸಲ್ಲಿಸಿದ ದಾಖಲಾತಿಗಳ ನಕಲು ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗದಿತ ಅವದಿ ಮುಗಿದ ನಂತರ ಬಂದ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬ್ಯೂಟಿ ಪಾರ್ಲರ್ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜೂ.20 (ಕರ್ನಾಟಕ ವಾರ್ತೆ) : ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಕೊಪ್ಪಳ ಜಿಲ್ಲೆಯ ಯುವತಿಯರಿಗೆ 30 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಕೊಪ್ಪಳ ಜಿಲ್ಲೆಯ ನಿವಾಸಿಯಾಗಿರಬೇಕು. 18 ರಿಂದ 40 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಕನಿಷ್ಠ ಎಂಟನೇ ತರಗತಿ ಉತ್ತೀರ್ಣರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಶಿಬಿರವು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು. ಅರ್ಜಿಗಳನ್ನು ಜೂ.30 ರಿಂದ ಸಂಸ್ಥೆಯಲ್ಲಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ-583 231, ದೂರವಾಣಿ ಸಂಖ್ಯೆ : 08539-231038 ಇವರಿಗೆ ಜೂ.30 ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜುಲೈ.01 ರಂದು ಬೆಳಿಗ್ಗೆ 10.30 ಗಂಟೆಗೆ ಸಂದರ್ಶನ ನಡೆಯಲಿದ್ದು, ಜುಲೈ.02 ರಿಂದ ತರಬೇತಿ ತರಗತಿಗಳು ಪ್ರಾರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿ.ಯು ಪೂರಕ ಪರೀಕ್ಷೆ : ಪೂರ್ವಾಭಾವಿ ಸಭೆ

ಕೊಪ್ಪಳ, ಜೂ.20 (ಕರ್ನಾಟಕ ವಾರ್ತೆ) : ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆಗಳು ಜೂ.25 ರಿಂದ ಜುಲೈ 04 ರವರಗೆ ಜಿಲ್ಲೆಯ 06 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಪೂರ್ವಾಭಾವಿ ಸಭೆಯನ್ನು ಜೂ.23 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ ಸಮಿತಿ ಕೊಠಡಿಯಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಯಾಂತ್ರೀಕರಣ ಯೋಜನೆ : ರೈತರಿಗೆ ಸೂಚನೆ

ಕೊಪ್ಪಳ, ಜೂ.20 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯ ಸವಲತ್ತು ಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಆಯಾ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.
     ಕೃಷಿ ಯಾಂತ್ರೀಕರಣ ಯೋಜನೆಯು 2015 ರ ಏಪ್ರಿಲ್ 01 ರ ನಂತರ ಖರೀದಿಸಿದ ಕೃಷಿ ಯಂತ್ರೋಪಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಕೃಷಿ ಯಂತ್ರೋಪಕರಣಗಳನ್ನು ರೈತರು ಸಹಾಯಧನ ಸೌಲಭ್ಯದಡಿ ಪಡೆಯಲು ಅರ್ಜಿಯನ್ನು ಸಲ್ಲಿಸಿ, ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇಲಾಖೆಯ ಗಮನಕ್ಕೆ ತರದೇ, ಪೂರ್ವಾನುಮತಿ ಪಡೆಯದೇ ರೈತರು ಸ್ವಂತವಾಗಿ ಖರೀದಿಸಿದ ಉಪಕರಣಗಳಿಗೆ ಇಲಾಖೆಯಿಂದ ಮಾನ್ಯತೆ ನೀಡಲಾಗುವುದಿಲ್ಲ. ಯೋಜನೆಯ ಲಾಭ ಪಡೆಯ ಬಯಸುವ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಬಂಧಿಸಿದ ಪಹಣಿ, ಹಿಡುವಳಿ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗುರುತಿನ ಪತ್ರ, ಭಾವಚಿತ್ರ ಬ್ಯಾಂಕ್ ಖಾತೆ ಸಂಖ್ಯೆ, 20 ರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರದ ಮಖ್ಯಸ್ಥರಿಗೆ ಅರ್ಜಿ ಸಲ್ಲಿಸಬೇಕು.
      ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೃಷಿ ಯಂತ್ರೋಪಕರಣಗಳ ಹಾಗೂ ಕೃಷಿ ಸಂಸ್ಕರಣಾ ಮಾದರಿಗಳಿಗೆ ನಿಗದಿಪಡಿಸಿದ ಎಲ್-1 ದರದ ಶೇ.50 ರಷ್ಟು ಧನಸಹಾಯ ನೀಡಲಾಗುವುದು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗೆ ಮೀಸಲಿಟ್ಟ ಅನುದಾನವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗದ ರೈತರಿಗೆ ಕನಿಷ್ಟ ದರದ ಆಧಾರದ ಮೇಲೆ ಶೇ.90 ಅಥವಾ ಗರಿಷ್ಟ 1.00 ಲಕ್ಷ ರೂ.ಗಳ ವರೆಗೆ ಸಹಾಯಧನವನ್ನು   ಒದಗಿಸಲಾಗುವುದು.
     ಡಿಸೇಲ್ ಅಥವಾ ಸೀಮೆಎಣ್ಣೆ ಪಂಪ್‍ಸೆಟ್‍ಗಳಿಗೆ ಘಟಕದ ಕನಿಷ್ಟ ದರದ ಶೇ.90 ರಷ್ಟು ಅಥವಾ ಗರಿಷ್ಟ 20,000 ರೂ.ಗಳ ವರೆಗೆ ಸಹಾಯಧನ ನೀಡಲಾಗುವುದು. ಅನುದಾನದ ಲಭ್ಯತೆ ನೋಡಿಕೊಂಡು ಒಬ್ಬರಿಗೆ ಒಂದಕ್ಕಿಂತ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗುವುದು. ಒಬ್ಬ ರೈತ ಒಂದು ಉಪಕರಣವನ್ನು ಸಹಾಯಧನದಡಿ ಪಡೆದ ನಂತರ ಅದೇ ಉಪಕರಣವನ್ನು 3 ವರ್ಷಗಳವರೆಗೆ ಸಹಾಯಧನದಡಿ ಪಡೆಯಲು ಅವಕಾಶವಿರುವುದಿಲ್ಲ. ರೈತ ಫಲಾನುಭವಿಗಳಿಗೆ ಎರಡು ಲಕ್ಷದವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು ಮಾತ್ರ ಈ ಯೋಜನೆಯಡಿ ನೀಡಲು ಅವಕಾಶವಿದೆ. ಸಾಮಾನ್ಯ ರೈತ ಫಲಾನುಭವಿಗಳಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು.
     ಕೃಷಿ ಯಂತ್ರೋಪಕರಣಗಳ ದರವು 5 ಲಕ್ಷ ರೂ.ಗಳ ವರೆಗೆ ಇದ್ದಲ್ಲಿ, ಅಂತಹ ಉಪಕರಣಗಳನ್ನು ಕಾನೂನಿನನ್ವಯ ನೊಂದಾಯಿತ ರೈತ ಗುಂಪುಗಳಿಗೆ ಮಾತ್ರ ನೀಡಲಾಗುವುದು. 
     ಕೆಲವು ಸಂದರ್ಭಗಳಲ್ಲಿ ಹೊಸದಾಗಿ ಗುಂಪುಗಳನ್ನು ರಚನೆ ಮಾಡಿಕೊಂಡಿದ್ದಲ್ಲಿ ಗುಂಪು ರಚನೆಯಾಗಿ ಕನಿಷ್ಟ 6 ತಿಂಗಳಾಗಿರಬೇಕು ಹಾಗೂ ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಗುಂಪು ಅಥವಾ ಸಂಘದ ಹಣಕಾಸಿನ ಪರಿಸ್ಥಿತಿ ಉತ್ತಮ ಹಾಗೂ ಪಾರದರ್ಶಕವಾಗಿರಬೇಕು. ಸಂಘವು ವಾಣಿಜ್ಯ ಬ್ಯಾಂಕುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿ ಉತ್ತಮ ವಹಿವಾಟು ನಡೆಸುತ್ತಿರುವ ಗುಂಪುಗಳಿಗೆ ಮಾತ್ರ ಕೃಷಿ ಯಂತ್ರೋಪಕಣಗಳನ್ನು ಸಹಾಯಧನ ಕಾರ್ಯಕ್ರಮದಡಿ ವಿತರಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 19 June 2015

ಉನ್ನತ ವ್ಯಾಸಂಗಕ್ಕೆ ಸಹಾಯಧನ : ಅರ್ಜಿ ಆಹ್ವಾನ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿ.ಹೆಚ್.ಡಿ, ಸಂಶೋಧನೆ ಕೈಗೊಳ್ಳುವ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ, ಹಾಗೂ 3ಬಿ ಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ.15 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್‍ಸೈಟ್  www.backwardclasses.kar.nic.in ನಿಂದ ಪಡೆಯಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ :080-44554444 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ : ಜಂಟಿ ಬ್ಯಾಂಕ್ ಖಾತೆ ತೆರೆಯಲು ಸೂಚನೆ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) :ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪಾಲಕರು/ಪೋಷಕರ ಹೆಸರಿನಲ್ಲಿ ಜಂಟಿಯಾಗಿ ಖಾತೆ ತೆರೆಯುವಂತೆ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.
     ಹಿಂದುಳಿದ ವರ್ಗಗಳಾದ ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಹಾಗೂ ಪ್ರವರ್ಗ-2ಎ, 3ಎ, 3ಬಿ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ.44,500 ಕ್ಕಿಂತ ಕಡಿಮೆ ಆದಾಯ ಹೊಂದಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರಸಕ್ತ ಸಾಲಿನಿಂದ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳ, ಪಾಲಕರು/ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ತಾಯಿ, ತಂದೆ ಅಥವಾ ಪೋಷಕರ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯಲು ಸೂಚನೆ ನೀಡಲಾಗಿತ್ತು. ಅದರಂತೆ ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡ್, ಖಾತೆ ಸಂಖ್ಯೆ, ಇರುವ ಪಾಸ್ ಪುಸ್ತಕದ ಮೊದಲ ಪುಟದ ಝರಾಕ್ಸ್ ಪ್ರತಿ, ಆಧಾರ ಕಾರ್ಡ್ ನಕಲು ಪ್ರತಿ, ಹಾಗೂ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಕಲು ಪ್ರತಿಗಳನ್ನು ಕೂಡಲೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕು. ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ದಾಖಲೆಗಳೊಂದಿಗೆ ಆಯಾ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ದಾವಣಗೆರೆ ದೊಡ್ಡಬಾತಿಯ ಶ್ರೀಮೈತ್ರಿ ಅಸೋಶಿಯೇಷನ್ (ರಿ) ಸ್ವಯಂ ಸೇವಾ ಸಂಸ್ಥೆಯು ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ  ನಡೆಸುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಡಾ||ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಶ್ರೀ ಮೈತ್ರಿ ಅಸೋಶಿಯೇಷನ್ (ರಿ) ಸ್ವಯಂ ಸೇವಾ ಸಂಸ್ಥೆಯ ಈ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಪಿ.ಯು.ಸಿ, ಐ.ಟಿ.ಐ, ಪದವಿ, ಡಿಪ್ಲೋಮಾ, ಎಂಜನೀಯರಿಂಗ್ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯಿರುತ್ತದೆ. ಅರ್ಜಿ ಹಾಗೂ ಇತರೆ ಹೆಚ್ಚಿನ ಮಾಹಿತಿಗಾಗಿ ಜಯಲಕ್ಷ್ಮಿ, ಮೇಲ್ವಿಚಾರಕರು, ಮೊ.9095094686 ಇವರನ್ನು ಜೂ.30 ರೊಳಗಾಗಿ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿಸಾನ್ ಕಾಲ್ ಸೆಂಟರ್ : ಪಶುಪಾಲಕರಿಗೂ ಸೇವೆ ವಿಸ್ತರಣೆ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಭಾರತ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ಆರಂಭಿಸಲಾಗಿರುವ ಕಿಸಾನ್ ಕಾಲ್ ಸೆಂಟರ್‍ನ ಟೋಲ್ ಫ್ರೀ (ಉಚಿತ ಸಹಾಯವಾಣಿ) ಸಂಖ್ಯೆ 1800-180-1551 ಸಹಾಯವಾಣಿಯ ಸದುಪಯೋಗವನ್ನು ಇನ್ನು ಮುಂದೆ ಪಶುಪಾಲಕರು ಕೂಡಾ ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 
     ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈಗಾಗಲೇ ಕಿಸಾನ್ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಕಿಸಾನ್ ಕಾಲ್ ಸೆಂಟರ್‍ನ ಟೋಲ್ ಫ್ರೀ ದೂರವಾಣಿ ಸಂಖ್ಯೆ : 1800-180-1551 ಕ್ಕೆ ಪಶುಪಾಲಕರು ಸಹ ಕರೆ ಮಾಡಿ ಪಶು ಸಂಗೋಪನೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ. ರೈತರು ಕಾಲ್ ಸೆಂಟರ್‍ಗೆ ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಟೋಲ್ ಫ್ರೀ ಸಂಖ್ಯೆಗೆ ದೂರವಾಣಿ ಕರೆ ಮಾಡಿ ಪಶು ಸಂಗೋಪನೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ರೈತರಿಗೆ ಎಸ್.ಎಂ.ಎಸ್ ಮೂಲಕ ಅವಶ್ಯಕ ಮಾಹಿತಿಯನ್ನು ನೀಡಲು ಕಿಸಾನ್ ಕಾಲ್ ಸೆಂಟರ್‍ನಲ್ಲಿ ಅವಕಾಶವಿದ್ದು, ಪಶುಸಂಗೋಪನಾ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಪಶುಪಾಲಕರು ಮೊಬೈಲ್ ದೂರವಾಣಿ ಹೊಂದಿದ್ದಲ್ಲಿ ಆಯಾ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಿಂದ ಅವಶ್ಯಕವಾದ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ರವಾನಿಸಬಹುದಾಗಿದೆ. ಇದಕ್ಕಾಗಿ ರೈತರು ದಾಖಲಾತಿ ಮಾಡಿಸುವುದು ಅವಶ್ಯಕವಾಗಿದೆ. ರೈತರು ಇಲಾಖೆಯ ವೆಬ್ ಪೋರ್ಟಲ್  http://farmar.gov.in/Advs/WebRegistration/WebReg.aspx ಮುಖಾಂತರ, ತಮ್ಮ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರ (ಸಿ.ಎಸ್.ಎಸ್)ದಲ್ಲಿ ನಿಗದಿಪಡಿಸಿರುವ 3 ರೂ. ಶುಲ್ಕವನ್ನು ನೀಡಿ, ತಮ್ಮ ಹೆಸರು, ದೂರವಾಣಿ ಸಂಖ್ಯೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯದ ಹೆಸರಿನ ಮಾಹಿತಿ ನೀಡಿ, ದಾಖಲಾತಿ ಮಾಡಿಸಿಕೊಳ್ಳಬಹುದಾಗಿದೆ ಅಥವಾ ಮೊಬೈಲ್ ಸಂಖ್ಯೆ : 9212357123 ಅಥವಾ 51969 ಗೆ ಎಸ್.ಎಮ್.ಎಸ್ ಮೂಲಕವು ಸಹ ರೈತರು ಮಾಹಿತಿಯನ್ನು ದಾಖಲಾತಿ ಮಾಡಿಕೊಳ್ಳಬಹುದಾಗಿದೆ. ರೈತರು ಕಿಸಾನ್ ಕಾಲ್ ಸೆಂಟರ್‍ನ ಟೋಲ್ ಫ್ರೀ ಸಂಖ್ಯೆ: 1800-180-1551 ಗೆ ಕರೆ ಮಾಡಿದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯು ರೈತರಿಂದ ಮಾಹಿತಿಯನ್ನು ಪಡೆದು ದಾಖಲಾತಿ ಮಾಡಿಕೊಳ್ಳುತ್ತಾರೆ.
     ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಒಟ್ಟಾರೆಯಾಗಿ ರೈತರ ಮಾಹಿತಿಯನ್ನು  www.farmer.gov.in ವೆಬ್‍ಸೈಟ್‍ಗೆ ಲಾಗ್ ಇನ್ ಆಗಿ  >kisan SMS=>Bulk Registration ಗೆ ಆಯಾ ಇಲಾಖೆಯವರು ರೈತರ ದಾಖಲಾತಿ ಮಾಡಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿ ಅಥವಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. ಕೊಪ್ಪಳ: 08539-220023, ಗಂಗಾವತಿ: 08533-271324, ಕುಷ್ಟಗಿ:08536-267104 ಮತ್ತು ಯಲಬುರ್ಗಾ-08534-220457 ಗೆ ಕರೆ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : 180 ವಿದ್ಯಾರ್ಥಿಗಳು ಗೈರು

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಶುಕ್ರವಾರದಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ ಜಿಲ್ಲಾದ್ಯಂತ ದಾಖಲಾಗಿದ್ದ ಒಟ್ಟು 2944 ವಿದ್ಯಾರ್ಥಿಗಳ ಪೈಕಿ, 2741 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 180 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯಕ್ಕೆ ಬಾಲಕರು-1769, ಬಾಲಕಿಯರು-1175, ಸೇರಿದಂತೆ ಒಟ್ಟು 2944 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ ಬಾಲಕರು-1644, ಬಾಲಕಿಯರು-1097 ಸೇರಿದಂತೆ ಒಟ್ಟು 2741 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 107-ಬಾಲಕರು, 73-ಬಾಲಕಿಯರು ಸೇರಿದಂತೆ ಒಟ್ಟು 180 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ-70, ಗಂಗಾವತಿ-59, ಕುಷ್ಟಗಿ-16 ಮತ್ತು ಯಲಬುರ್ಗಾ ತಾಲೂಕಿನಲ್ಲಿ 35, ಒಟ್ಟು 180 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಕಾರ ಸಂಘಗಳಲ್ಲಿ ಉಚಿತ ಸದಸ್ಯತ್ವ ಯೋಜನೆ : ಸಾರ್ವಜನಿಕರಿಗೆ ಸೂಚನೆ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಸಹಕಾರ ಇಲಾಖೆ ವತಿಯಿಂದ ಬಿಪಿಎಲ್ ಕುಟುಂಬಕ್ಕೆ ಸೇರಿದ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ  ವಿಕಲಚೇತನರಿಗೆ ಸಹಕಾರ ಸಂಘಗಳಲ್ಲಿ ಉಚಿತವಾಗಿ ಸದಸ್ಯತ್ವ ನೋಂದಾಯಿಸುವ ಯೋಜನೆ ಜಾರಿಗೊಳಿಸಿದ್ದು, ಆಸಕ್ತ ಅರ್ಹರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
     ಸಹಕಾರ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯರನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸರ್ಕಾರದ ಸಹಾಯಧನ ಯೋಜನೆಯಡಿಯಲ್ಲಿ ಉಚಿತವಾಗಿ ಸದಸ್ಯರನ್ನಾಗಿ ನೋಂದಾಯಿಸಲು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆಯರು, ವಿಕಲಚೇತನರನ್ನು ವಿವಿಧ ವರ್ಗದ ಸಹಕಾರ ಸಂಘಗಳಲ್ಲಿ ಸರ್ಕಾರದ ಸಹಾಯಧನ ಯೋಜನೆಯಡಿಯಲ್ಲಿ ಉಚಿತವಾಗಿ ಸದಸ್ಯರನ್ನಾಗಿ ನೋಂದಾಯಿಸಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ. ಅದರನ್ವಯ ಕೊಪ್ಪಳ ಜಿಲ್ಲೆಗೆ  ಗುರಿ ನಿಗದಿಪಡಿಸಲಾಗಿದೆ.
     ಕೊಪ್ಪಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ-2000 ಜನರನ್ನು ಉಚಿತವಾಗಿ ಸದಸ್ಯರನ್ನಾಗಿ ನೋಂದಾಯಿಸುವ ಗುರಿ ನಿಗದಿಪಡಿಸಲಾಗಿದೆ.  ಅದೇ ರೀತಿ  ಪರಿಶಿಷ್ಟ ಪಂಗಡ-1000,  ಹಿಂದುಳಿದ ವರ್ಗ-3000, ಮಹಿಳೆಯರು-5700, ವಿಕಲಚೇತನರು-600, ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್) -7880 ಜನರನ್ನು ಸಹಕಾರಿ ಸಂಘಗಳಲ್ಲಿ ಉಚಿತವಾಗಿ ಸದಸ್ಯತ್ವ ದೊರಕಿಸಲು ಗುರಿ ನಿಗದಿಪಡಿಸಲಾಗಿದೆ.  ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಒಟ್ಟು 99. 63 ಲಕ್ಷ ರೂ.ಗಳ ಆರ್ಥಿಕ ಗುರಿಯನ್ನು ಜಿಲ್ಲೆಗೆ ನಿಗದಿಪಡಿಸಿದೆ.
     ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯದೇ ಇರುವ  ಬಿಪಿಎಲ್ ಕುಟುಂಬ, ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ, ಮಹಿಳೆಯರು ಹಾಗೂ  ವಿಕಲಚೇತನರು ಕೂಡಲೇ ಆಯಾ ಗ್ರಾಮ, ಪಟ್ಟಣ ಅಥವಾ ಸಮೀಪದ ಸಹಕಾರ ಸಂಘಗಳನ್ನು ಸಂಪರ್ಕಿಸಿ, ಸರ್ಕಾರದ ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಕೆ. ಸಿದ್ನೆಕೊಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08532-221109 ಅಥವಾ 08539-221601 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಸಂಘ, ಸಂಸ್ಥೆಗಳಿಗೆ ಧನ ಸಹಾಯ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕೊಪ್ಪಳ, ಜೂ.19 (ಕರ್ನಾಟಕ ವಾರ್ತೆ) : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕೊಪ್ಪಳ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳಿಗೆ ಧನ ಸಹಾಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
     ಇಲಾಖೆಯಿಂದ ಅಸಂಘಟಿತ ಕಲಾವಿದರಿಗೆ ವಾದ್ಯ ಪರಿಕರ, ವೇಷಭೂಷಣ ಖರೀದಿಗಾಗಿ, ಚಿತ್ರಕಲೆ, ಶಿಲ್ಪ ಕಲಾವಿದರ ಕೃತಿಗಳ ಪ್ರದರ್ಶನಕ್ಕಾಗಿ ಧನ ಸಹಾಯ ನೀಡಲು ಪ್ರಥಮ ಬಾರಿಗೆ ಆನ್‍ಲೈನ್ ಮೂಕ ಅರ್ಜಿ ಆಹ್ವಾನಿಸಲಾಗಿದ್ದು, ಧನ ಸಹಾಯದ ಅರ್ಜಿ ನಮೂನೆ ಮತ್ತು ಇತರೆ ನಿಯಮಾವಳಿಗಳ ವಿವರವಾದ ಮಾಹಿತಿಯನ್ನು ಇಲಾಖೆಯ ವೆಬ್‍ಸೈಟ್ :  www.kannadasiri.co.in  ನಲ್ಲಿ ಪಡೆಯಬಹುದಾಗಿದೆ. ಅರ್ಹ ಮತ್ತು ಆಸಕ್ತ ಸಂಘ ಸಂಸ್ಥೆಗಳು, ಕಲಾವಿದರು ತಮ್ಮ ಅರ್ಜಿಗಳನ್ನು ಅವಶ್ಯಕ ದಾಖಲೆಗಳೊಂದಿಗೆ ಜುಲೈ.15 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೊಟ್ರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Thursday, 18 June 2015

ಕೊಪ್ಪಳ : ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 51 ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ವರ್ಗೀಕರಣ ಮತ್ತು ಮೀಸಲಾತಿ ಅನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
     ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಒಟ್ಟು 40 ಹುದ್ದೆಗಳನ್ನು ಮೀಸಲಿರಿಸಲಾಗಿದ್ದು, ಹೈದ್ರಾಬಾದ್ ಕರ್ನಾಟಕ ಪ್ರದೇಶದವರಿಗೆ ಹೊರತುಪಡಿಸಿ ಇತರೆ ಪ್ರದೇಶದವರಿಗೆ ಒಟ್ಟು 11 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ವಯೋಮಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-01 ರ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ.   ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 18 ರಿಂದ 38 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ 18 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.  ಅರ್ಜಿ ಸಲ್ಲಿಸಲು ಪಿ.ಯು.ಸಿ ಪರೀಕ್ಷೆ ಅಥವಾ ಸಿ.ಬಿ.ಎಸ್.ಸಿ ಅಥವಾ ಐ.ಸಿ.ಎಸ್.ಸಿ ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.  ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-01 ರ ಅಭ್ಯರ್ಥಿಗಳಿಗೆ 200 ರೂ. ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 400 ರೂ. ನಿಗದಿಪಡಿಸಿದೆ. ಅರ್ಜಿಗಳನ್ನು ಜೂ.22 ರ ನಂತರ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಜುಲೈ 21 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಆನ್‍ಲೈನ್ ಅರ್ಜಿ, ಮೀಸಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‍ಸೈಟ್  http://koppal-va.kar.nic.in ಗೆ ಭೇಟಿ ನೀಡಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ 08539-221690 ನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.  

ಜೂ.19 ರಂದು ಕಾನೂನು ಅರಿವು-ನೆರವು ವಿದ್ಯಾ ಪ್ರಸಾರ ಕಾರ್ಯಕ್ರಮ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸರ್ಕಾರಿ ಪ್ರೌಢ ಶಾಲೆ ಬನ್ನಿಕಟ್ಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು-ನೆರವು ಹಾಗೂ ವಿದ್ಯಾ ಪ್ರಸಾರ ಕಾರ್ಯಕ್ರಮ ಜೂ.19 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬನ್ನಿಕಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.
     ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ, ತಹಶೀಲ್ದಾರ ಪುಟ್ಟರಾಮಯ್ಯ, ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಆರ್.ಬಿ. ಪಾನಘಂಟಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ್, ಮುಖ್ಯೋಪಾಧ್ಯಾಯ ಕರಿಬಸಪ್ಪ ಎಸ್.ಪಲ್ಲೇದ್, ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ವಕೀಲ ವ್ಹಿ.ಎಮ್. ಭೂಸನೂರಮಠ- ಆಸಿಡ್ ದಾಳಿಗೆ ತುತ್ತಾದಂತಹ ವ್ಯಕ್ತಿಗಳ ಪರಿಹಾರದ ಕುರಿತು ಹಾಗೂ ವಕೀಲ ಎಂ.ಹನುಮಂತರಾವ್-ಜೀವಕ್ಕಾಗಿ ಜಲ-ಹನಿ-ಹನಿ-ನೀರು ಉಳಿಸುವ ಕುರಿತು ಉಪನ್ಯಾಸ ನೀಡುವರು.  ಆಸಿಡ್ ದಾಳಿಗೆ ತುತ್ತಾದಂತಹ ವ್ಯಕ್ತಿಗಳಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಮತ್ತು ಮೂರು ಲಕ್ಷ ರೂ.ಗಳವರೆಗೆ ಪರಿಹಾರ ಧನ ಕೊಡಿಸುವಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೆರವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಸ್ಥಳೀಯ ತಾಲೂಕಾ ಕಾನೂನು ಸೇವಾ ಸಮಿತಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ : ನಿರ್ವಹಣಾ ಕ್ರಮಗಳು

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಹತ್ತಿ ಬೆಳೆಯಲ್ಲಿ ಎಲೆ ಕೆಂಪಾಗುವಿಕೆ ರೋಗ ಕಾಣಿಸಿಕೊಂಡಿದ್ದು, ಕೃಷಿ ಇಲಾಖೆಯು ಇದನ್ನು ತಡೆಯಲು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದೆ.
     ಹತ್ತಿಯಲ್ಲಿ ಎಲೆ ಕೆಂಪಾಗುವಿಕೆಯಿಂದ ಇಳುವರಿಯ ಮಟ್ಟದಲ್ಲಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹತ್ತಿ ಬೆಳೆಯು ಎರಡೂವರೆಯಿಂದ ಮೂರು ತಿಂಗಳ ಅವಧಿಯಲ್ಲಿದ್ದು, ಗಿಡಗಳ ಎಲೆಗಳು ಅಲ್ಲಲ್ಲಿ ಅಥವಾ ಭಾಗಶಃ ಪೂರ್ತಿಯಾಗಿ ಕೆಂಪಾಗುವುದು ಕಂಡು ಬಂದಿದೆ. ಇದು ಸಸ್ಯ ಶರೀರ ಕ್ರಿಯೆಯ ನ್ಯೂನತೆಯಾಗಿದ್ದು, ಇಳುವರಿಯ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ. ರೈತರ ಹೊಲಗಳಲ್ಲಿ ಹೂವಾಡುವ ಅಥವಾ ಕಾಯಿ ಕಟ್ಟುವ ಹಂತದಲ್ಲಿ ಎಲೆ ಕೆಂಪಾಗುವಿಕೆ ತೀವ್ರತೆ ಬಹಳಷ್ಟು ಕಂಡು ಬಂದಿದೆ.
ಎಲೆ ಕೆಂಪಾಗುವಿಕೆಗೆ ಕಾರಣಗಳು : ವಾತಾವರಣದಲ್ಲಿ 2-3 ದಿವಸ ಅಂದರೆ ಸತತವಾಗಿ ರಾತ್ರಿ ಮತ್ತು ಹಗಲಿನಲ್ಲಿ ಉಷ್ಣಾಂಶದ ವ್ಯತ್ಯಾಸ 20 ಡಿಗ್ರಿ ಸೆಂಟಿಗ್ರೇಡ್‍ಗಿಂತ ಹೆಚ್ಚಾದಾಗ ಹತ್ತಿ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಏಕೆಂದರೆ ಹತ್ತಿಯ ಗಿಡಗಳು ಮಣ್ಣನಲ್ಲಿರುವ ಸಸ್ಯ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಎಲೆಯಲ್ಲಿನ ಸಾರಜನಕದ ಪ್ರಮಾಣ ಶೇ.2.0 ಕ್ಕಿಂತ ಮತ್ತು ಮ್ಯಾಗ್ನೇಷಿಯಂ ಪ್ರಮಾಣ ಶೇ.0.5 ಕ್ಕಿಂತ ಕಡಿಮೆಯಾದಾಗ ಎಲೆ ಕೆಂಪಾಗುವಿಕೆ ಪ್ರಮಾಣ ಹೆಚ್ಚುತ್ತದೆ. ಎಲೆಯಲ್ಲಿ ಕಡಿಮೆ ಪ್ರಮಾಣದ ರಂಜಕ, ಪೊಟ್ಯಾಶ್ (ಕ್ಲೋರೋಫಿಲ್) ಇರುವಂತಹ ಸಂದರ್ಭದಲ್ಲಿ ಕೂಡಾ ಎಲೆ ಕೆಂಪಾಗುವಿಕೆಯು ಕಾಣಿಸಿಕೊಳ್ಳುತ್ತದೆ. ಕೆಂಪಾದ ಎಲೆಗಳಲ್ಲಿ ಅಂತೋಸೈನಿಸ್ ಅನ್ನುವ ರಾಸಾಯನಿಕವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಎಲೆಗಳ ಮೇಲೆ ರಸ ಹೀರುವ ಕೀಟಗಳಿಂದ (ಮುಖ್ಯವಾಗಿ ಹಸಿರು ಜಿಗಿ ಹುಳು) ಆಗುವ ಹಾನಿಯು ಕೂಡಾ ಎಲೆ ಕೆಂಪಾಗುವಿಕೆ ರೋಗದ ಹಾಗೆ ಕಾಣಿಸುತ್ತದೆ.
ಎಲೆ ಕೆಂಪಾಗುವಿಕೆ ಲಕ್ಷಣಗಳು : ಎಲೆ ಕೆಂಪಾಗುವಿಕೆಯ ಮುಖ್ಯವಾದ ಲಕ್ಷಣಗಳೆಂದರೆ ಮೊದಲ ಹಂತದಲ್ಲಿ ಎಲೆಯ ಅಂಚಿನಲ್ಲಿ ಅಲ್ಲಲ್ಲಿ ಅಥವಾ ಸತತವಾಗಿ ಕೆಂಪಾಗುವುದನ್ನು ನೋಡಬಹುದು. ಇದು ಮುಂದುವರೆದಂತೆ ಕೆಂಪಾಗುವಿಕೆಯ ಅಂಶವು ನಂತರ ಕೂಡಿಕೊಂಡು ಇಡೀ ಎಲೆಗಳು ಕೆಂಪಾಗುತ್ತವೆ. ತದನಂತರ, ಕೆಂಪಾದ ಎಲೆಗಳು ಒಣಗಿ ಕೆಳಗೆ ಬೀಳುತ್ತವೆ. ಇದಲ್ಲದೇ ಎಲೆಗಳು ಕೆಂಪಾಗಿದ್ದಾಗ ಗಿಡದ ಮೇಲೆ ಇರುವ ಹೂವು ಮೊಗ್ಗು ಮತ್ತು ಕಾಯಿಗಳು ಕೆಳಗೆ ಉದುರುತ್ತವೆ. ಕೆಲವು ಸಂದರ್ಭದಲ್ಲಿ ಕಾಯಿಗಳು ಅಪಕ್ವವಾಗಿ ಒಡೆಯುವುದನ್ನು ಕೂಡಾ ನೋಡಬಹುದಾಗಿದೆ.
ನಿರ್ವಹಣೆಗೆ ಸಲಹೆ : ಹತ್ತಿ ಬೆಳೆಗೆ ಹೂವಾಡುವ, ಕಾಯಿ ಕಟ್ಟುವ ಮತ್ತು ಕಾಯಿ ಬಲಿಯುವ ಹಂತಗಳಲ್ಲಿ ಶೇ.1.0 ರಷ್ಟು ಮ್ಯಾಗ್ನೇಷಿಯಂ ಸಲ್ಫೇಟ್‍ನ (10 ಗ್ರಾಂ/ಲೀಟರ್) ಜೊತೆಯಲ್ಲಿ ಶೆ.1.0 ರ 19:19:19 ಸಾರಜನಕ, ರಂಜಕ, ಪೊಟಾಷಿಯಂ ದ್ರಾವಣ (10 ಗ್ರಾಂ/ಲೀಟರ್ ನೀರಿನಲ್ಲಿ). ಶೇ.2.0 ರ ಪೊಟ್ಯಾಷಿಯಂ ನೈಟ್ರೇಟ್‍ನ (20 ಗ್ರಾಂ/ಲೀಟರ್ ನೀರಿನಲ್ಲಿ) ದ್ರಾವಣ ಜೊತೆಗೆ 1.0 ರ ಮೆಗ್ನಿಷಿಯಂ ಸಲ್ಫೆಟ್‍ನ (10 ಗ್ರಾಂ / ಲೀಟರ್ ನೀರಿನಲ್ಲಿ) ಬೆಳೆಯ ಮೇಲೆ ಸಿಂಪರಣೆ ಮಾಡುವುದರಿಂದ ಎಲೆ ಕೆಂಪಾಗುವಿಕೆಯನ್ನು ಹತೋಟಿಗೆ ತರಬಹುದಾಗಿದೆ.
     ಮೇಲಿನ ಪೋಷಕಾಂಶಗಳು ಲಭ್ಯತೆ ಇರಲಾರದ ಸಂದರ್ಭದಲ್ಲಿ ಶೇ.2.0 ರ ಡಿ.ಎ.ಪಿ (20 ಗ್ರಾಂ/ಲೀಟರ್ ನೀರಿನಲ್ಲಿ) ಅಥವಾ ಶೇ.2.0 ರ ಯೂರಿಯಾ (20ಗ್ರಾಂ/ಲೀಟರ್ ನೀರಿನಲ್ಲಿ) ಅಥವಾ ಶೇ.2.0 ಡಿ.ಎ.ಪಿ (20ಗ್ರಾಂ/ಲೀಟರ್ ನೀರಿನಲ್ಲಿ) ಅಥವಾ ಶೆ.1.0 ರ ಮೆಗ್ನಿಷಿಯಂ ಸಲ್ಫೆಟ್‍ನ (10ಗ್ರಾಂ/ಲೀಟರ್ ನೀರಿನಲ್ಲಿ) ನ್ನು 2 ರಿಂದ 3 ಬಾರಿ ಹೂವಾಡುವ ಹಂತದಿಂದ ಕಾಯಿಕಟ್ಟುವ ಹಂತದಲ್ಲಿ ಸಿಂಪರಣೆ ಮಾಡುವುದರಿಂದ ಎಲೆ ಕೆಂಪಾಗುವುದನ್ನು ತಡೆಗಟ್ಟಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರು ಅಥವಾ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಳನಾಡು ಮೀನುಗಾರಿಕೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಮೀನುಗಾರಿಕೆ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿ.ಆರ್. ಪ್ರಾಜೆಕ್ಟ್‍ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಒಳನಾಡು ಮೀನುಗಾರಿಕೆ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
     ಒಳನಾಡು ಮೀನುಗಾರಿಕೆ ತರಬೇತಿಯಲ್ಲಿ ಪುರುಷರಿಗೆ ಮಾತ್ರ ಅವಕಾಶವಿದ್ದು, ನಗರ ಅಥವಾ ಗ್ರಾಮೀಣ ಪ್ರದೇಶದ ಸುಮಾರು 40  ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು, ಪ್ರತಿ ಅಭ್ಯರ್ಥಿಗೆ ಮಾಸಿಕ 2,000 ರೂ.ಗಳ ಶಿಷ್ಯ ವೇತನ ನೀಡಲಾಗುವುದು. ಅಭ್ಯರ್ಥಿಯು ತರಬೇತಿಯ ಮಧ್ಯದಲ್ಲಿ ಬಿಟ್ಟು ಹೋದಲ್ಲಿ ಅಂತವರಿಂದ ಇಲಾಖೆಯಿಂದ ಕೊಡಲ್ಪಟ್ಟ ಶಿಷ್ಯವೇತನವನ್ನು ಅವರ ಸ್ವಂತ ಜವಾಬ್ದಾರಿಯಿಂದ ವಸೂಲು ಮಾಡಲಾಗುವುದು.  ಮೀನು ಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಣೆ, ಬಲೆ ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನು ಉತ್ಪಾದನೆ, ಪಾಲನೆ, ಇತ್ತೀಚಿನ ಬೆಳವಣಿಗೆಗಳು ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
     ಜುಲೈ.15 ರಿಂದ ತರಬೇತಿಯು ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು 18 ರಿಂದ 40 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಹತ್ತನೇ ತರಗತಿವರೆಗೆ (ಪಾಸ್ ಅಥವಾ ಫೇಲ್) ಓದಿರಬೇಕು. ಕೊಪ್ಪಳ, ಬೀದರ್, ಗುಲ್ಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ವಿಜಯಪುರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಗದಗ, ದಾವಣಗೆರೆ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಅಥವಾ ಬಾಗಲಕೋಟೆ ಜಿಲ್ಲೆಯವರಾಗಿರಬೇಕು. ತರಬೇತಿ ಅವಧಿಯಲ್ಲಿ ಇಲಾಖೆಯು ಒದಗಿಸುವ ಉಚಿತ ವಸತಿ ಗೃಹದಲ್ಲಿ ಕಡ್ಡಾಯವಾಗಿ ತಂಗಲೇಬೇಕು. ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು ಮೀನುಗಾರಿಕೆ ಹಾಗೂ ಸಹಕಾರ ಸಂಘ ಇತ್ಯಾದಿ ಸದಸ್ಯರಿಗೆ ಆದ್ಯತೆ ನೀಡಲಾಗುವುದು. ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು.  ಅರ್ಜಿ ನಮೂನೆಗಳನ್ನು ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಛೇರಿಗಳಲ್ಲಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು  ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ. ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ ಇವರಿಗೆ ಜುಲೈ.10 ರೊಳಗಾಗಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮುಂಗಾರು ಹಂಗಾಮಿಗೆ ಮುಂಜಾಗೃತಾ ಕ್ರಮಗಳು : ರೈತರಿಗೆ ಸಲಹೆ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ 2015 ರ ಏಪ್ರೀಲ್ 12 ರಂದು ಸುರಿದ ಆಲಿಕಲ್ಲು ಮಳೆಗೆ ಹಾನಿಗೊಳಗಾದ ಭತ್ತದ ಪ್ರದೇಶದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.
     ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಬಿದ್ದಂತಹ ಆಲಿಕಲ್ಲು ಮಳೆಯಿಂದಾಗಿ ಸುಮಾರು 26,500 ಹೆಕ್ಟರ್ ಭತ್ತದ ಬೆಳೆ ಹಾನಿಗೀಡಾಗಿದೆ. ಇದರಿಂದಾಗಿ ಕೊಯ್ಲಿಗೆ ಬಂದತಹ ಭತ್ತದ ಕಾಳು ಉದುರಿ ಮಣ್ಣು ಪಾಲಾಗಿದೆ. ರೈತರು ಬೇಸಿಗೆಯ ಹಂಗಾಮಿನಲ್ಲಿ ಕಾವೇರಿ ಸೋನಾ, ಆರ್‍ಎನ್‍ಆರ್, ಗಂಗಾವತಿ ಸೋನಾ ತಳಿಯನ್ನು ಬೆಳೆಯುವುದು ವಾಡಿಕೆ. ಅದೇರೀತಿ ಮುಂಗಾರು ಹಂಗಾಮಿನಲ್ಲಿ ಸೋನಾಮಸೂರಿ ತಳಿ ಬೆಳೆಯುವುದು ರೂಢಿಯಲ್ಲಿದೆ. ಆಲಿಕಲ್ಲು ಮಳೆಯಿಂದ ಉದುರಿದ ಬೇಸಿಗೆ ಭತ್ತದ ಬೆಳೆಯ ಬೀಜಗಳು ಸುಮಾರು ದಿನಗಳು ಸುಪ್ತಾವಸ್ಥೆಯಲ್ಲಿರುತ್ತವೆ. ನಂತರ ಅವು ಮಳೆ ಅಥವಾ ಕಾಲುವೆ ನೀರು ಹರಿದಾಗ ಮೊಳಕೆ ಒಡೆಯುತ್ತವೆ, ಅಲ್ಲದೆ ಮುಂಗಾರು ಹಂಗಾಮಿನಲ್ಲಿ ಬೆಳೆಯುವಂತಹ ತಳಿಯಲ್ಲಿ ಕಲಬೆರಕೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಗುಣಮಟ್ಟ ಕುಸಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಮುಂಗಾರು ಹಂಗಾಮಿನ ಸೋನಾ ಮಸೂರಿ ಭತ್ತದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಈ ಕೆಳಗಿನ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.
ನಿರ್ವಹಣಾ ಕ್ರಮ : ಮುಂಗಾರಿನಲ್ಲಿ ಮಳೆ ಬಿದ್ದಾಗ ಹಿಂಗಾರಿ/ಬೇಸಿಗೆ ಬೆಳೆಯಿಂದ ಬಿದ್ದಂತಹ ಬೀಜಗಳು ಮೊಳಕೆ ಒಡೆಯುತ್ತವೆ. ಮೊಳಕೆಯೊಡೆದ ಸುಮಾರು 5 ರಿಂದ 6 ದಿನಗಳ ನಂತರ ಗ್ಲೈಫೋಸೇಟ್ ಶೆ.71 (ಹರಳು) ಪ್ರತಿ ಲೀಟರ್ ನೀರಿಗೆ 6 ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಅಥವಾ ಗ್ಲೈಫೋಸೇಟ್ 41ಎಸ್ ಎಲ್ ಕಳೆ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಹತ್ತು ಮಿ.ಲೀ ಹಾಗೂ 20 ಗ್ರಾಂ ಯೂರಿಯಾ ಅಥವಾ 6 ಗ್ರಾಂ ಅಮೋನಿಯಾ ಸಲ್ಫೇಟ್‍ನ್ನು ಸಿಂಪರಣೆ ಮಾಡಬೇಕು ಅಥವಾ ಭೂಮಿಯನ್ನು ಎರಡು ಬಾರಿ ಹರಗಬೇಕು. ನಂತರ ಸಸಿಗಳನ್ನು ಒಣಗಲು ಬಿಡಬೇಕು. ನೀರಿನ ಅನುಕೂಲತೆ ಇರುವ ರೈತರು ಒಮ್ಮೆ ನೀರನ್ನು ಹಾಯಿಸಿ ಬೀಜ ಮೊಳಕೆ ಬರುವಂತೆ ಮಾಡಿ ನಂತರದಲ್ಲಿ ಮೇಲೆ ತಿಳಿಸಿದಂತೆ ನಿವಾರಣೆ ಮಾಡಬೇಕು. ಈ ರೀತಿ ಮಾಡುವುದರಿಂದ ಮುಂಗಾರು ಹಂಗಾಮಿನ ಭತ್ತದಲ್ಲಿ ಕಲಬೆರಕೆ ಆಗುವುದನ್ನು ತಡೆಗಟ್ಟಿ, ಭತ್ತದ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ.
ಕಳೆನಾಶಕಗಳ ಬಳಕೆ: ಗ್ಲೈಫೋಸೇಟ್ ಕಳೆನಾಶಕ ಸಿಂಪರಣಾ ಸಮಯದಲ್ಲಿ ಭೂಮಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು. ಗ್ಲೈಫೋಸೇಟ್ ಕಳೆನಾಶಕ ಕೇವಲ ಹಸಿರು ಎಲೆಗಳ ಮುಖಾಂತರ ಚಲಿಸಿ, ನಂತರ ಪರಿಣಾಮ ಬೀರುವುದರಿಂದ ಇದನ್ನು ಹಸಿರು ಸಸಿಗಳ ಮೇಲೆ ಸಿಂಪರಣೆ ಮಾಡಬೇಕು. ಈ ಕಳೆ ನಾಶಕಗಳನ್ನು ಬಳಸುವಾಗ ಡಬ್ಲ್ಯೂಎಫ್‍ಎನ್ 40 ಅಥವಾ ವಿ.ಎಲ್.ವಿ 200 ನಾಝಲ್‍ನ್ನು ಕೈಚಾಲಿತ ಸಿಂಪರಣೆ ಪಂಪಿಗೆ ಹಾಕಿ ಸಿಂಪರಣೆ ಮಾಡಬೇಕು. ಗ್ಲೈಫೋಸೇಟ್ ಸಿಂಪರಣೆಯು ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ಗ್ಲೈಫೋಸೇಟ್ ಸಿಂಪರಣೆ ಮಾಡಿದ 15 ರಿಂದ 20 ದಿನಗಳ ನಂತರ ಯಾವುದೇ ಬೆಳೆಯನ್ನು ಬೆಳೆಯಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|| ಬಿ.ಜಿ.ಮಸ್ತಾನರೆಡ್ಡಿ- 08533-271030, ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ (ಬೇಸಾಯ ಶಾಸ್ತ್ರ) ಡಾ|| ರೂಪಶ್ರೀ ಡಿ.ಹೆಚ್-08533-272518, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ||ಕಾಂತರಾಜು- 08533-272518 ಅಥವಾ ಗಂಗಾವತಿ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜೂ.21 ರಂದು ಕೊಪ್ಪಳದಲ್ಲಿ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಆರ್.ಇ ಫೌಂಡೇಷನ್ ಬ್ರಹ್ಮಕುಮಾರಿ ತಪೋವನ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜೂ.21 ರಂದು ಬೆಳಿಗ್ಗೆ 07 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾರ್ವಜನಿಕ ಮೈದಾನದಲ್ಲಿ ನಡೆಯಲಿದೆ.
     ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು. ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರು, ನಗರಸಭೆ ಅಧ್ಯಕ್ಷೆ ಬಸವ್ವ ಹಳ್ಳಿಗುಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾಲೂಕಾ ಪಂಚಾಯತ ಅಧ್ಯಕ್ಷೆ ಬಾನು ಚಾಂದ್‍ಸಾಬ್ ಗಜೇಂದ್ರಗಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ, ಆಯುಷ್ ನಿರ್ದೇಶನಾಲಯದ ನಿರ್ದೇಶಕ ವಿಜಯಕುಮಾರ ಗೋಗಿ, ಆಯುಷ್ ಇಲಾಖೆಯ ಉಪನಿರ್ದೇಶಕ ಡಾ|| ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
     ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ, ಭಿತ್ತಿಚಿತ್ರಗಳೊಂದಿಗೆ ಪಥಸಂಚಲನ, ಯೋಗದಿಂದ ಆರೋಗ್ಯ ಸಂರಕ್ಷಣೆ ಮತ್ತು ಆರೋಗ್ಯ ವರ್ಧನೆ ಎಂಬ ವಿಷಯದ ಕುರಿತು ಉಪನ್ಯಾಸ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಜೂ.18 (ಕರ್ನಾಟಕ ವಾರ್ತೆ) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು  ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಕೊಡಮಾಡುವ ರಾಷ್ಟ್ರ ಪ್ರಶಸ್ತಿಗಾಗಿ  ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
     ಭಾರತದಲ್ಲಿ ನೆಲೆಸಿರುವ ಮತ್ತು ಕಲೆ, ಸಾಂಸ್ಕøತಿಕ ಯಾವುದೇ ಕ್ಷೇತ್ರಗಳಲ್ಲಿ ನಾವಿನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 09 ರಿಂದ 16 ವರ್ಷದೊಳಗಿನ ಅಂದರೆ 1999 ಆಗಸ್ಟ್ 01 ಹಾಗೂ ನಂತರ ಹುಟ್ಟಿದ ಮಕ್ಕಳು 2015 ನೇ ಸಾಲಿನ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
     ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ 20,000 ರೂ.ಗಳ ನಗದು, 10,000 ರೂ. ಮೌಲ್ಯದ ಪುಸ್ತಕ ವೋಚರ್ ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ (ಪ್ರತಿ ರಾಜ್ಯಕ್ಕೆ ಒಂದು ಬೆಳ್ಳಿ ಪದಕ) 10,000 ರೂ. ನಗದು 3,000 ರೂ. ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
     ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರಬೇಕು. ಮಕ್ಕಳ ಸಾಧನೆಯನ್ನು ಅಸಾಧಾರಣವೆಂದು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ಧೃಢೀಕರಿಸಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆದು, ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ, ಜುಲೈ.04 ರೊಳಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

Wednesday, 17 June 2015

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : 219 ವಿದ್ಯಾರ್ಥಿಗಳು ಗೈರು

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಬುಧವಾರದಂದು ನಡೆದ ವಿಜ್ಞಾನ ಪರೀಕ್ಷೆಗೆ ದಾಖಲಾಗಿದ್ದ ಒಟ್ಟು 3288 ವಿದ್ಯಾರ್ಥಿಗಳ ಪೈಕಿ, 3068 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 219 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ವಿಜ್ಞಾನ ವಿಷಯಕ್ಕೆ ಬಾಲಕರು-2021, ಬಾಲಕಿಯರು- 1267, ಸೇರಿದಂತೆ ಒಟ್ಟು 3288 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ ಬಾಲಕರು- 1882, ಬಾಲಕಿಯರು- 1186 ಸೇರಿದಂತೆ ಒಟ್ಟು 3068 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 139-ಬಾಲಕರು, 80- ಬಾಲಕಿಯರು ಗೈರು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ-84, ಗಂಗಾವತಿ-77, ಕುಷ್ಟಗಿ-21 ಮತ್ತು ಯಲಬುರ್ಗಾ ತಾಲೂಕಿನಲ್ಲಿ 37, ಒಟ್ಟು 219 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ವೀಕ್ಷಕ ಹುದ್ದೆ : ಅರ್ಜಿ ಆಹ್ವಾನ

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಗೊಳಪಡುವ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ವಿಭಾಗಗಳ ಒಟ್ಟು 17 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಚಿಸುವವರು ಅಧಿಸೂಚನೆಯ ದಿನಾಂಕದೊಳಗೆ 10 ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಯು 2015 ರ ಜೂ.08 ಕ್ಕೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಅರ್ಜಿಯನ್ನು ಆನ್‍ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು. ಆನ್‍ಲೈನ್ ಅರ್ಜಿ, ಅಧಿಸೂಚನೆಗಳನ್ನು ಇಲಾಖೆಯ ವೆಬ್‍ಸೈಟ್  www.aranya.gov.in ನಿಂದ ಪಡೆಯಬಹುದಾಗಿದ್ದು, ಅರ್ಜಿಯನ್ನು ತುಂಬಲು ಸಹಾಯಕವಾಗುವ ಸೂಚನೆಗಳನ್ನು ಇಲಾಖಾ ವೆಬ್‍ಸೈಟನಲ್ಲಿ ನೀಡಲಾಗಿದೆ. ಆನ್‍ಲೈನ್ ಮೂಲಕ ಅರ್ಜಿಯನ್ನು ಜುಲೈ 14 ರ ಮಧ್ಯಾಹ್ನ 2.30 ರವರೆಗೆ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್ www.aranya.gov.in ಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.25 ರಂದು ಜಿಲ್ಲಾಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಜೂ.25 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
     ಕೊಪ್ಪಳ ಸಂಸದ  ಸಂಗಣ್ಣ ಕರಡಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಕೇಂದ್ರ ಯೋಜನೆಗಳು ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ. 

ಹಿರಿಯ ನಾಗರಿಕರ ಕಲ್ಯಾಣ : ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ) : ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ಮತ್ತು ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ, ಕ್ರೀಡೆ, ಹಿರಿಯ ನಾಗರಿಕರ ಕ್ಷೇತ್ರ ಹಾಗೂ ಸಮಾಜ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸುತ್ತಿರುವ ಹಿರಿಯ ನಾಗರಿಕರಿಗೆ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯೊಂದಕ್ಕೆ 01 ಪ್ರಶಸ್ತಿ ಸೇರಿದಂತೆ ಒಟ್ಟು 07 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯ ನಾಗರಿಕರು ಮತ್ತು  ಮತ್ತು ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.
     ಅರ್ಜಿ ನಮೂನೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು, ದ್ವಿಪ್ರತಿಯಲ್ಲಿ ಜುಲೈ20 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 08539-220596 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾರಿಕೋದ್ಯಮಿಗಳಿಗೆ ಸಾಲ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ) : ಕೈಗಾರಿಕಾ ವಾಣಿಜ್ಯ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಅತಿ ಸಣ್ಣ ಕೈಗಾರಿಕೆ ಹಾಗೂ ಸೇವಾ ಘಟಕಗಳನ್ನು ಪ್ರಾರಂಭಿಸಲು ಮತ್ತು ಸಾಫ್ಟ್ ಸೀಡ್ ಕ್ಯಾಪಿಟಲ್ ಸಾಲ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಅತಿ ಸಣ್ಣ ಕೈಗಾರಿಕೆ ಹಾಗೂ ಸೇವಾ ಘಟಕಗಳನ್ನು ಪ್ರಾರಂಭಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ಸಾಲ ಸೌಲಭ್ಯ ನೀಡುತ್ತಿದ್ದು, ಗರಿಷ್ಟ 5  ಲಕ್ಷ ರೂ.ಗಳ ಯೋಜನಾ ವೆಚ್ಚಕ್ಕೆ ಶೇ.60 ರಷ್ಟು ಸಹಾಯಧನವನ್ನು ನೀಡಲು ಉದ್ದೇಶಿಸಿದೆ. ಫಲಾನುಭವಿಗಳು ಶೇ.25 ರಷ್ಟು ವಂತಿಗೆ ಭರಿಸಬೇಕಾಗುತ್ತದೆ.
ಸಾಫ್ಟ್ ಸೀಡ್ ಕ್ಯಾಪಿಟಲ್ ಸಾಲ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೈಗಾರಿಕೋದ್ಯಮಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲವನ್ನು ಪಡೆಯುವಾಗ ಶೇ.25 ರಷ್ಟು ಫಲಾನುಭವಿಗಳ ವಂತಿಗೆಯನ್ನು ನೀಡಬೇಕಾಗಿರುತ್ತದೆ. ಇದನ್ನು ನಿವಾರಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮುಖಾಂತರ ಫಲಾನುಭವಿಗಳ ವಂತಿಗೆಯ ಶೇ 50 ರಷ್ಟು, ಗರಿಷ್ಟ ರೂ. 25 ಲಕ್ಷ ಬಡ್ಡಿ ರಹಿತ ಸಾಫ್ಟ್ ಸೀಡ್ ಕ್ಯಾಪಿಟಲ್ ಸಾಲವನ್ನು ನೀಡಲು ಉದ್ದೇಶಿಸಿದೆ.
     ಸಾಲ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ- 08539-231548 ಅಥವಾ ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರ, ಕೊಪ್ಪಳ-9481664401 ಅಥವಾ  ಕೈಗಾರಿಕಾ ಉತ್ತೇಜನಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ-9880457917 ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿ ವೇತನ ಮಂಜೂರಾತಿ : ಅರ್ಜಿ ಆಹ್ವಾನ

ಕೊಪ್ಪಳ, ಜೂ.17 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಪ್ರಸಕ್ತ ಸಾಲಿಗೆ 01 ರಿಂದ 10 ನೇ  ತರಗತಿಯವರೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿ ಪಡೆಯಲು  ಅರ್ಜಿ ಆಹ್ವಾನಿಸಲಾಗಿದೆ.   
     ಎಲ್ಲಾ ಸರ್ಕಾರಿ, ಅನುದಾನಿತ, ಅನುದಾರಹಿತ, ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ಒಂದನೆಯ ತರಗತಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಅರ್ಜಿಯನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ಕೊನೆ ದಿನಾಂಕವಾಗಿದೆ. 2 ರಿಂದ 10ನೇ ತರಗತಿಯ ನವೀಕರಣ ವಿದ್ಯಾರ್ಥಿಗಳು ಅನುಬಂಧ-01 ರಲ್ಲಿ ಹಾಗೂ ವರ್ಗಾವಣೆಯಾಗಿ ಬಂದ ವಿದ್ಯಾರ್ಥಿಗಳು ಅಥವಾ ಇದುವರಗೂ ಆನ್‍ಲೈನ್‍ನಲ್ಲಿ ಅರ್ಜಿ ಹಾಕಲಾರದಂತಹ ವಿದ್ಯಾರ್ಥಿಗಳು ಅನುಬಂಧ -02 ರಲ್ಲಿ ಮಾಹಿತಿಯನ್ನು ಇಂಗ್ಲೀಷ್‍ನಲ್ಲಿ ತುಂಬಿ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬೇಕು. ಅನುಬಂಧ ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪಡೆಯಬಹುದಾಗಿದೆ. ನಿಗದಿತ ಅವಧಿಯಲ್ಲಿ ಸಲ್ಲಿಸದೇ ಇರುವ ಶಾಲೆಗಳ ಪ.ಜಾತಿ ಮತ್ತು ಪ.ವರ್ಗ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಂಜೂರಾತಿಯಾಗದಿದ್ದ ಪಕ್ಷದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಗುರುಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತರಕಾರಿ ಬೆಳೆ ಬೇಸಾಯ : ರೈತರಿಗೆ ಸಲಹೆಗಳು

ಕೊಪ್ಪಳ ಜೂ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಮುಂಗಾರು ಆರಂಭಗೊಂಡಿದ್ದು, ತರಕಾರಿ ಬೆಳೆಗಳನ್ನು ಬೆಳೆಯುವ ರೈತರಿಗೆ ತೋಟಗಾರಿಕೆ ಇಲಾಖೆ ಸಲಹೆಗಳನ್ನು ನೀಡಿದೆ.
     ಜಿಲ್ಲೆಯಲ್ಲಿ ಇದೀಗ ತಾನೆ ಮುಂಗಾರು ಮಳೆ ಆರಂಭಗೊಂಡಿದ್ದು, ಬಿಸಿಲಿನ ತಾಪಮಾನ ಕಡಿಮೆಯಾಗಿದ್ದು, ರೈತರು ಬೇಸಾಯಕ್ಕಾಗಿ ಭೂಮಿ ಸಿದ್ದೆತೆ ಮಾಡಿಕೊಳ್ಳುತ್ತಿದ್ದ್ದಾರೆ.
     ತರಕಾರಿ ಬೆಳೆಗಳಾದ  ಈರುಳ್ಳಿ, ಟೂಮೆಟೋ, ಮಣಿಸಿನಕಾಯಿ ಮಂತಾದವುಗಳನ್ನು ಇನ್ನು ಬಿತ್ತುವ ಕಾರ್ಯ ಆರಂಭಗೂಳ್ಳಿಲಿದೆ. ಯಾವುದೇ ಬೆಳೆಯಾಗಲಿ,  ಉತ್ತಮ  ತಳಿಯ ಆಯ್ಕೆ ಮುಖ್ಯ. ಕೇವಲ ಇಳುವರಿ ಹೆಚ್ಚಿಸುವುದೇ ಅಲ್ಲದೆ, ರೋಗ ನಿರೋಧಕ ಶಕ್ತಿ ಹೂಂದಿದ ತಳಿಗಳ ಆಯ್ಕೆ ಮುಖ್ಯ.  ಬಿತ್ತುವ  ಮೊದಲು ಬೀಜೋಪಚಾರ ಅತ್ಯಂತ ಮುಖ್ಯ. ಮಕ್ಕಳಿಗೆ ಪೋಲಿಯೋ ಲಸಿಕೆಯಂತೆ ಬೀಜಕ್ಕೆ ಬಿತ್ತನೆ ಮೊದಲು ಕೀಟನಾಶಕ / ಶಿಲೀಂದ್ರನಾಶಗಳಿಂದ ಉಪಚರಿಸುವುದು ಅತೀ ಮುಖ್ಯ. ಇದರಿಂದಾಗಿ ಅನೇಕ ರೋಗ ಹಾಗೂ ಕೀಟಗಳಿಂದ ಬೆಳೆಗಳನ್ನು ಆರಂಭ ಹಂತದಲ್ಲಿ ರಕ್ಷಿಸಬಹುದು. ಯಾವ, ಯಾವ ಬೆಳೆಗಳಿಗೆ ಯಾವ  ರಾಸಾಯನಿಕದಿಂದ ಬೀಜೋಪಚಾರ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ಸಲಹಗಳನ್ನು ನೀಡಲಾಗಿದೆ.
ಟೊಮೆಟೊ ಮತ್ತು ಬದನೆ : ಸಸಿ ಮಡಿಯಲ್ಲಿ ಬೀಜ ಬಿತ್ತುವಾಗ 1 ಕಿ.ಗ್ರಾಂ. ಬೀಜವನ್ನು 2 ಗ್ರಾಂ. ಪಾದರಸ ಸಂಯುಕ್ತ ವಸ್ತು ಅಥವಾ ಥೈರಮ್ ಎಂಬ  ಶಿಲೀಂದ್ರ ನಾಶಕದೊಂದಿಗೆ ಉಪಚರಿಸಿ ನೆರಳಲ್ಲಿ ಒಣಗಿಸಬೇಕು. ಇವೆರಡರ ಬದಲಾಗಿ 50 ಗ್ರಾಂ. ಟ್ರೈಕೊಡರ್ಮಾ ಸಬಟಿಲಿಸ್‍ನ್ನು ಬಳಸಬಹುದಾಗಿದೆ.  ಮುಖ್ಯ ಕ್ಷೇತ್ರದಲ್ಲಾದರೆ, 1 ಕಿ. ಗ್ರಾಂ. ಬೀಜಕ್ಕೆ 6 ಗ್ರಾಂ. ಮೆಟಾಲಾಕ್ಷಿಲ್ ಎಮ್. ಜೆಡ್ ನಂತರ 6ಗ್ರಾಂ. ಟ್ರೈಕೊಡರ್ಮಾ ಜೀವಾಣುವಿನಿಂದ ಉಪಚರಿಸಬೇಕು. ಇದರಿಂದಾಗಿ ಅನೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ.
ಮೆಣಸಿನಕಾಯಿ : ಬಿತ್ತನೆ ಬೀಜವನ್ನು 1 ಕಿ. ಗ್ರಾಂ. ಬೀಜಕ್ಕೆ 200 ಗ್ರಾಂ. ಅಜೊಸ್ಪಿರಿಲ್ಲಮ್ ಜೈವಿಕ              ಗೊಬ್ಬರದಿಂದ ಉಪಚರಿಸಬೇಕು. ಅದರಂತೆ ನಾಟಿ ಮಾಡುವ ಸಸಿಗಳನ್ನು ಪ್ರತಿ 1 ಲೀ. ನೀರಿನಲ್ಲಿ 400 ಗ್ರಾಂ. ಅಜೊಸ್ಪಿರಿಲ್ಲಮ್  ಬೆರೆಸಿದ ದ್ರಾವಣದಲ್ಲಿ ಅದ್ದಿ ನೆರಳಲ್ಲಿ ಒಣಗಿಸಿ ನಾಟಿ ಮಾಡಬೇಕು. ಇದರಿಂದಾಗಿ ಸಾರಜನಕಯುಕ್ತ ರಸಾಯನಿಕ ಗೊಬ್ಬರಗಳ ಪ್ರಮಾಣ ಕಡಿಮೆಗೊಳಿಸಬಹುದು. ಮೆಣಸಿನಕಾಯಿಯಲ್ಲಿ ರಸ ಹೀರುವ ಕೀಟಗಳ ಕಾಟ ಜಾಸ್ತಿ ಇರುವುದರಿಂದ 450 ಗ್ರಾಂ. ಬಿತ್ತನೆ ಬೀಜವನ್ನು  9 ಮಿ.ಲೀ.  ಗೌಚೊ ( ಇಮಿಡಾಕ್ಲೊಪ್ರಿಡ್) ದ್ರಾವಣದಿಂದ ಲೇಪಿಸಿ ನಂತರ 2 ಗ್ರಾಂ. ಪಾದರಸದ ಸಂಯುಕ್ತ ದ್ರಾವಣದಲ್ಲಾಗಲಿ ಅಥವಾ 2 ಗ್ರಾಂ. ಥೈರಮ್ ನಿಂದಾಗಲೀ ಉಪಚರಿಸಿ ಬಿತ್ತಬೇಕು.  ಬಿತ್ತುವ ಮೊದಲು ಸಸಿ ಮಡಿಗಳನ್ನು 1ಲೀ. ನೀರಿಗೆ 3 ಗ್ರಾಂ. ಕ್ಯಾಪ್ಟಾನ ಎಂಬ ಶಿಲೀಂದ್ರನಾಶಕದಿಂದ ನೆನೆಸಬೇಕು. ಈ ರೀತಿಯಾಗಿ ಎರಡೂ ವಿಧಗಳಿಂದ ಬೆಳೆಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸಬಹುದು.
ಎಲೆಕೋಸು :  (ಕೊಳ ಕ್ರಾಪ್ಸ್) ಜಾತಿಗೆ ಸೇರಿದ ಈ ತರಕಾರಿಯ ಬೀಜಗಳನ್ನು 1 ಗ್ರಾಂ. ಪಾದರಸ ಕ್ಲೋರೈಡ್ ದ್ರಾವಣದ ಜೊತೆಗೆ 100 ಮಿ.ಗ್ರಾಂ. ಸ್ಟ್ರೆಪ್ಟೋಮೈಸಿನ್ ಸಲ್ಫೇಟನ್ನು 1 ಲೀ. ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ ಪ್ರತಿ ಹೆಕ್ಟೇರಿಗೆ ಬೇಕಾಗುವ ಬೀಜವನ್ನು ಉಪಚರಿಸಿ (30 ನಿಮಿಷಗಳ ವರೆಗೆ) ನೆರಳಿನಲ್ಲಿ ಒಣಗಿಸಿ ನಂತರ ಬಿತ್ತಬೇಕು.
         ತರಕಾರಿ ಬೆಳೆಗಳ ಬಿತ್ತನೆ ಅಥವಾ ನಾಟಿ ಮಾಡುವ ಮುಂಚೆ ಸಸಿ ಮಡಿಗಳನ್ನೂ ಕೂಡ ಕ್ಯಾಪ್ಟಾನ ಎಂಬ ಶಿಲೀಂದ್ರನಾಶಕದಿಂದ ನೆನೆಸಬೇಕು.  ಕೆಲವೊಂದು ತರಕಾರಿ ಬೀಜಗಳನ್ನು 8 ರಿಂದ 10 ಗಂಟೆಗಳವರೆಗೆ ನೀರಿನಲ್ಲಿ  ಅಥವಾ ಮಜ್ಜಿಗೆಯಲ್ಲಿ ನೆನೆಸಿ ನಂತರ ಮೇಲೆ ತಿಳಿಸಿದಂತೆ  ಬೀಜೋಪಚಾರ ಮಾಡಿ ಬಿತ್ತುವುದರಿಂದ ಶೇ. 50 ರಷ್ಟು ರಾಸಾಯನಿಕಗಳ ಬಳಕೆ ಕಡಿಮೆ ಮಾಡಬಹುದು ಮತ್ತು ಬೀಜ ಮೊಳಕೆ ಒಡೆಯಲು ಇದು ಸಹಕಾರಿಯಾಗಲಿದೆ.  ಸಸಿಗಳನ್ನು ಮುಖ್ಯ ಕ್ಷೇತ್ರದಲ್ಲಿ ನಾಟಿ ಮಾಡುವ ಮುಂಚೆ ಕ್ರಮವಾಗಿ  ಸೂಕ್ತವಾದ ಕೀಟನಾಶಕ ದ್ರಾವಣ, ನಂತರ ಜೈವಿಕ ಗೊಬ್ಬರ ದ್ರಾವಣ, ಕೊನೆಯದಾಗಿ ಶಿಲೀಂದ್ರನಾಶಕದೊಂದಿಗೆ ಉಪಚರಿಸಿ ನಾಟಿ ಮಾಡಬೇಕು.
     ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ-9482672039 ಅಥವಾ ಪ್ರಶಾಂತ್ ನಾಯಕ್, ತಾಂತ್ರಿಕ ವಿಭಾಗ-9036837029 ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ. ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.  

Tuesday, 16 June 2015

ಅಮೃತ ಯೋಜನೆಯಡಿ ಹೈನುರಾಸು ಖರೀದಿ: ಅರ್ಜಿ ಆಹ್ವಾನ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ) : ರಾಯಚೂರು, ಬಳ್ಳಾರಿ, ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಇವರಿಂದ ರಾಜ್ಯ ಸರ್ಕಾರದ ಅಮೃತ ಯೋಜನೆಯಡಿ ಹೈನು ರಾಸು ಖರೀದಿ ಕಾರ್ಯಕ್ರಮಕ್ಕಾಗಿ ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘದ ಮಹಿಳಾ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯ-19 (ವಿಧವೆಯಯರು), ವಿಶೇಷ ಘಟಕ ಯೋಜನೆ-10 ಮತ್ತು ಗಿರಿಜನ ಉಪಯೋಜನೆ-05 ಸೇರಿದಂತೆ ಒಟ್ಟು 34 ಮಹಿಳಾ ಫಲಾನುಭವಿಗಳಿಗೆ ಹೈನುಗಾರಿಕೆ ಮೂಲಕ ಆರ್ಥಿಕ ಸಹಾಯ ಒದಗಿಸಲು ಉದ್ದೇಶಿಸಲಾಗಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಮೃತ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಎರಡು ರಾಸುಗಳನ್ನು ಖರೀಸಲು 25,000 ರೂ. ಅನುದಾನ ನೀಡಲಾಗುವುದು ಮತ್ತು ಉಳಿದ 75,000 ರೂ. ಗಳನ್ನು ಬ್ಯಾಂಕ್ ಸಾಲ ಅಥವಾ ಸ್ವಂತ ಅಂಚಿನ ಹಣ ಭರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75,000 ರೂ ಅನುದಾನ ಮತ್ತು 25,000 ರೂ. ಬ್ಯಾಂಕ್‍ಸಾಲ ಅಥವಾ ಅಂಚಿನ ಹಣ ಭರಿಸಬೇಕಾಗುತ್ತದೆ.  ಅರ್ಜಿ ಸಲ್ಲಿಸಲು ಜೂ.30 ಕೊನೆ ದಿನಾಂಕವಾಗಿದ್ದು, ಅರ್ಜಿಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ವ್ಯವಸ್ಥಾಪಕರು (ಶೇ) ಗಂಗಾವತಿ, ಮೊ-9591999556 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

12 ನೇ ತರಗತಿ : ಜವಾಹರ ನವೋದಯ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ) : ಈಚೆಗೆ ಪ್ರಕಟಗೊಂಡ 12ನೇ ತರಗತಿಗಳ (ಸಿ.ಬಿ.ಎಸ್.ಸಿ ಪಠ್ಯಕ್ರಮ) ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನ ಜವಾಹರ ನವೋದಯ ವಿದ್ಯಾಲಯ ಶೇ. 100 ರಷ್ಟು ಫಲಿತಾಂಶ ದಾಖಲಿಸಿದೆ.
     12ನೇ ತರಗತಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಬಂದಿದ್ದು,   ವಿದ್ಯಾರ್ಥಿನಿ  ಗಾಯತ್ರಿ ಶೇಕಡಾ 97 ರಷ್ಟು ಅಂಕ ಪಡೆದು ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲಿಯೇ ಪ್ರಥಮ ಸ್ಥಾನ ಗಳಿಸಿದ್ದಾಳೆ ಮತ್ತು ಇಂಗ್ಲಿಷ್‍ನಲ್ಲಿ 99 ಅಂಕಗಳಿಸಿದ್ದು, ಇದು ಸಿ.ಬಿ.ಎಸ್.ಸಿ ಯಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ಅತಿ ಹೆಚ್ಚು ಅಂಕವಾಗಿದೆ.  ಲಕ್ಷ್ಮಣ ಯಲ್ಲಪ್ಪ ಎಂಬ ವಿದ್ಯಾರ್ಥಿ ಶೇ. 94.80 ಅಂಕ ಗಳಿಸಿ 2ನೇ ಸ್ಥಾನ ಪಡೆದರೆ, ಮಹೇಶಗೌಡ 94.20 ಅಂಕ ಗಳಿಸಿ 3ನೇ ಸ್ಥಾನ ಪಡೆದಿದ್ದಾನೆ.
     12ನೇ ತರಗತಿ ವಿಜ್ಞಾನ ವಿಭಾಗದಲ್ಲಿಯೂ ಕೂಡಾ ಶೇ. 100 ರಷ್ಟು ಫಲಿತಾಂಶ ಬಂದಿದ್ದು,  ಗೌರಾಂಬಿಕಾ ಶೇಕಡಾ 92.6 ರಷ್ಟು ಅಂಕ ಗಳಿಸಿ ವಿದ್ಯಾಲಯಕ್ಕೆ ಮೊದಲಿಗಳಾಗಿದ್ದಾಳೆ.  ಮಧುಶ್ರಿ ಶೇ. 92.2 ರಷ್ಟು ಅಂಕ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದರೆ, ವಿನಾಯಕ ವಡಿಗೇರಿ ಶೇ. 90.20 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದಿದ್ದಾನೆ.  ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಸಾಧನೆಗೈದಿದ್ದು, ವಿದ್ಯಾರ್ಥಿಗಳ ಈ  ಸಾಧನೆಗೆ ವಿದ್ಯಾಲಯದ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಲಬುರ್ಗಾ : ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಜೂ. 30 ಕೊನೆಯ ದಿನ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ) : ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ನಿರುದ್ಯೋಗಿಗಳಿಗೆ ವಿವಿಧ ತರಬೇತಿ ಹಾಗೂ ಸ್ವಯಂ ಉದ್ಯೋಗಕ್ಕಾಗಿ ಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ. 30 ಕೊನೆಯ ದಿನವಾಗಿದೆ.
       ಯಲಬುರ್ಗಾ ಪಟ್ಟಣ ಪಂಚಾಯತಿಯಿಂದ ರಚಿಸಿರುವ ಗುಂಪುಗಳಿಗೆ ಮಾತ್ರ ಗುಂಪು ಸಾಲಕ್ಕಾಗಿ ಶೇ. 7 ಕ್ಕೆ ಮೇಲ್ಪಟ್ಟು ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಬಡ್ಡಿ ಸಹಾಯಧನ ಲಭ್ಯವಿದೆ.  ಹೊಸದಾಗಿ ಗುಂಪುಗಳನ್ನು ರಚಿಸಲು ಇದೀಗ ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯ ನಿರುದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದ್ವಿ ಪ್ರತಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ದಾಖಲೆ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ 1 ಭಾವಚಿತ್ರ ದಾಖಲೆಗಳನ್ನು ಲಗತ್ತಿಸಿ, ಜೂ. 30 ರೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ ಯಲಬುರ್ಗಾ ಇವರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. 

ಕಸಾಪ : ವಿವಿಧ ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ) : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಪುಸ್ತಕಗಳಿಗೆ ಕಸಾಪ ದಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿ ಕೊಡಮಾಡಲು ಅರ್ಜಿ ಆಹ್ವಾನಿಸಲಾಗಿದೆ. 
       ಶ್ರೀ ದೇವೇದ್ರಕೀರ್ತಿ ದತ್ತಿ ಪ್ರಶಸ್ತಿ : ಜೈನಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಗ್ರಂಥವೊಂದಕ್ಕೆ 2014-15ನೇ ಸಾಲಿಗೆ ರೂ.6,000/- ಗಳ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2014 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಜೈನಧರ್ಮದ ಇತಿಹಾಸ, ಸಾಹಿತ್ಯ ಸಂಸ್ಕøತಿ ಹಾಗೂ ಕಲೆ, ಸಂಶೋಧನಾ ಗ್ರಂಥ, ಗ್ರಂಥ ಸಂಪಾದನೆ, ಪ್ರಾಚೀನ ಗ್ರಂಥಗಳು ಹಾಗೂ ಅನುವಾದಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕವನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು.
ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ :  2014-2015ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಸಣ್ಣಕತೆ ಕೃತಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ಕನ್ನಡ ಮಹಿಳಾ ಬರಹಗಾರರ ವಿವಿಧ ಪ್ರಕಾರಗಳ ಪುಸ್ತಕಗಳಿಗೆ ಪ್ರಶಸ್ತಿ ನೀಡಲಾಗುವುದು. ಮಹಿಳಾ ಸಾಹಿತಿಗಳಿಗೆ ಮಾತ್ರ ಮೀಸಲಾಗಿರುವ 2013-14ನೇ ಸಾಲಿನ ಪ್ರಶಸ್ತಿಯನ್ನು ಆರು ವರ್ಷಗಳ ಅವಧಿಯಲ್ಲಿ (2009 ನೇ ಜನವರಿ ತಿಂಗಳಿಂದ 2014ನೇ ಡಿಸೆಂಬರ್ ತಿಂಗಳವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟವಾದ ಕಾವ್ಯ ಕೃತಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ :  2014-15 ರಲ್ಲಿ ಪ್ರಕಟವಾದ ಕಾದಂಬರಿ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ.5,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್.ಬಸವರಾಜು ದತ್ತಿ) :  2014-15ನೇ ಸಾಲಿನ ಯಾವುದೇ ಪ್ರಕಾರದ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ.5,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ : ಕನ್ನಡದಲ್ಲಿ ಪ್ರಕಟಣೆಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2014-15ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ.
ವಿ.ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ : 2014-15 ರಲ್ಲಿ ಪ್ರಕಟವಾದ ವೀರಶೈವ ಸಾಹಿತ್ಯ ಸಂಶೋಧನಾತ್ಮಕ ಕೃತಿಗಳು ಎಂಬ ಪ್ರಕಾರಕ್ಕೆ ರೂ.10 ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : 2014-15 ರಲ್ಲಿ ರಲ್ಲಿ ಪ್ರಕಟವಾದ ಶ್ರೇಷ್ಠ ಕಾದಂಬರಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
     ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಕಳುಹಿಸಬೇಕು. ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಒಂದಕ್ಕಿಂತ ಹೆಚ್ಚು ಪುಸ್ತಕಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿಕೆ ಮಾಡಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ. ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಜುಲೈ.13 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18, ದೂರವಾಣಿ ಸಂಖ್ಯೆ : 080-26623584 ನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಅವರು ಪ್ರಕಟಣೆ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ   ಸಚಿವ ಶಿವರಾಜ ಎಸ್. ತಂಗಡಗಿ ಅವರು ಜೂ 17 ಮತ್ತು 18 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಜೂ.17 ರಂದು ಬೆಳಿಗ್ಗೆ 10 ಗಂಟೆಗೆ ಕಾರಟಗಿಯ ನಾಗನಕಲ್ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಮಾಡುವರು. ಜೂ.18 ರಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು ಎಂದು  ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಸಚಿವ ಆರ್.ವಿ. ದೇಶಪಾಂಡೆ ಅವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ ಜೂ. 16 (ಕರ್ನಾಟಕ ವಾರ್ತೆ): ರಾಜ್ಯ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಜೂ. 17 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ 9-30 ಗಂಟೆಗೆ ಕಾರಟಗಿಗೆ ಆಗಮಿಸುವರು, ನಂತರ ನಾಗನಕಲ್‍ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಮತ್ತು ಹೆಚ್ಚುವರಿ ಕೊಠಡಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು.  ಮಧ್ಯಾಹ್ನ 12 ಗಂಟೆಗೆ ತಳಕಲ್‍ಗೆ ಆಗಮಿಸಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಭೇಟಿ ಮಾಡುವರು.  ಸಚಿವರು ಅದೇ ದಿನ ಮಧ್ಯಾಹ್ನ 12-30 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ : 179 ವಿದ್ಯಾರ್ಥಿಗಳು ಗೈರು

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಮಂಗಳವಾರದಂದು ನಡೆದ ಕನ್ನಡ ವಿಷಯ ಪರೀಕ್ಷೆಗೆ ದಾಖಲಾಗಿದ್ದ 2119 ವಿದ್ಯಾರ್ಥಿಗಳ ಪೈಕಿ, 1940 ವಿದ್ಯಾರ್ಥಿಗಳು ಹಾಜರಾಗಿದ್ದು, 179 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಮತ್ತು ಯಾವುದೇ ಡಿಬಾರ್ ಪ್ರಕರಣಗಳು ದಾಖಲಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ಕನ್ನಡ ವಿಷಯಕ್ಕೆ ಬಾಲಕರು-1463, ಬಾಲಕಿಯರು- 656, ಸೇರಿದಂತೆ ಒಟ್ಟು 2119 ವಿದ್ಯಾರ್ಥಿಗಳು ದಾಖಲಾಗಿದ್ದರು.  ಈ ಪೈಕಿ ಬಾಲಕರು- 1345, ಬಾಲಕಿಯರು- 595 ಸೇರಿದಂತೆ ಒಟ್ಟು 1940 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 118-ಬಾಲಕರು, 61- ಬಾಲಕಿಯರು ಗೈರು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ 77, ಗಂಗಾವತಿ- 54, ಕುಷ್ಟಗಿ-20 ಮತ್ತು ಯಲಬುರ್ಗಾ ತಾಲೂಕಿನಲ್ಲಿ 28, ಒಟ್ಟು 179 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾರಿಕಾ ನೀತಿ : ಯೋಜನೆಗಳ ಸದುಪಯೋಗಕ್ಕೆ ಮನವಿ

ಕೊಪ್ಪಳ, ಜೂ.16 (ಕರ್ನಾಟಕ ವಾರ್ತೆ) : ಕರ್ನಾಟಕ ಸರ್ಕಾರವು 2014-19 ನೇ ಸಾಲಿಗೆ ಕೈಗಾರಿಕಾ ನೀತಿಯನ್ನು ಪ್ರಕಟಿಸಿದ್ದು, ಸಹಾಯಧನವನ್ನು ಕೈಗಾರಿಕೆಗಳು ಉತ್ಪನ್ನ ಪ್ರಾರಂಭಿಸಿದ ದಿನದಿಂದ ಒಂದು ವರ್ಷದೊಳಗಾಗಿ ಮಂಜೂರಾತಿ ಪಡೆದುಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.
     ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಮತ್ತು ಸ್ವಯಂ ಉದ್ಯೋಗಿಯಾಗಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರವು 2014 ರಿಂದ 2019 ರವರೆಗೆ ಇರುವಂತೆ ಕೈಗಾರಿಕಾ ನೀತಿಯನ್ನು ಪ್ರಕಟಿಸಿದೆ. ಕೈಗಾರಿಕಾ ನೀತಿಯನ್ವಯ 2014 ರ ಅಕ್ಟೋಬರ್ 01 ರಿಂದ ಅನ್ವಯವಾಗುವಂತೆ ಕೈಗಾರಿಕಾ ಘಟಕಗಳಿಗೆ ಸರ್ಕಾರದಿಂದ ಉತ್ತೇಜನ ಮತ್ತು ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ನೀತಿಯಲ್ಲಿ ಹೈದ್ರಾಬಾದ್-ಕರ್ನಾಟಕದ ಎಲ್ಲಾ ಜಿಲ್ಲೆಗಳ ತಾಲೂಕುಗಳಲ್ಲಿ ಅತೀ ಹಿಂದುಳಿದ ತಾಲೂಕುಗಳನ್ನು ವಲಯ-01 ರಲ್ಲಿ ಮತ್ತು ಹಿಂದುಳಿದ ತಾಲೂಕುಗಳನ್ನು ವಲಯ-2 ರಲ್ಲಿ ವಿಂಗಡಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳನ್ನು ವಲಯ-01 ರಲ್ಲಿ ಮತ್ತು ಕೊಪ್ಪಳ ಮತ್ತು ಗಂಗಾವತಿ ತಾಲೂಕುಗಳನ್ನು ವಲಯ-02 ರಲ್ಲಿ ವಿಂಗಡಿಸಲಾಗಿದೆ. ಕೈಗಾರಿಕಾ ಘಟಕಗಳಿಗೆ ಹೂಡುವ ಸ್ಥಿರ ಬಂಡವಾಳದ ಮೇಲೆ ವಲಯ-01 ರಲ್ಲಿ ಸ್ಥಾಪಿತವಾಗುವ ಅತೀ ಸಣ್ಣ ಘಟಕಗಳಿಗೆ ಶೇ.30 ರಿಂದ 40 ರವರೆಗೆ, ಸಣ್ಣ ಪ್ರಮಾಣದ ಘಟಕಗಳಿಗೆ ಶೇ.25 ರಿಂದ 35 ರವರೆಗೆ.  55 ಲಕ್ಷ ರೂ. ಗಳಿಂದ 65 ಲಕ್ಷದವರೆಗೆ ಕನಿಷ್ಟ 25 ಜನರಿಗೆ ಉದ್ಯೋಗ ನೀಡುವ ಮಧ್ಯಮ ಪ್ರಮಾಣದ ಘಟಕಗಳಿಗೆ ಹಾಗೂ ವಲಯ-2 ರಲ್ಲಿ ಸ್ಥಾಪಿತವಾಗುವ ಅತಿ ಸಣ್ಣ ಕೈಗಾರಿಕಾ ಘಟಕಗಳಿಗೆ ಶೇ. 25 ರಿಂದ 35, ಸಣ್ಣ ಪ್ರಮಾಣ ಕೈಗಾರಿಕಾ ಘಟಕಗಳಿಗೆ ಶೇ. 20 ರಿಂದ 30 ರವರೆಗೆ ಮತ್ತು ರೂ. 50 ಲಕ್ಷದಿಂದ 60 ಲಕ್ಷದವರೆಗೆ ಕನಿಷ್ಟ 25 ಜನರಿಗೆ ಉದ್ಯೋಗ ನೀಡುವ ಮಧ್ಯಮ ಪ್ರಮಾಣದ ಘಟಕಗಳಿಗೆ ಸಹಾಯಧನ ನೀಡಲಾಗುವುದು.
      ಎಸ್.ಸಿ, ಎಸ್.ಟಿ, ಮಹಿಳಾ, ಅಲ್ಪಸಂಖ್ಯಾತ, ಓಬಿಸಿ ಯಲ್ಲಿ 1ನೇ ವರ್ಗ ಮತ್ತು 2ಎ ವರ್ಗದವರೆಗೆ ಈ ನೀತಿಯಡಿ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಶೇ. 100 ರಷ್ಟು ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗುವುದು. ಭೂಮಿಯನ್ನು ಕೈಗಾರಿಕಾ ಸಲುವಾಗಿ ಪರಿವರ್ತಿಸುವುದಾಗಿ ವೆಚ್ಚ ಭರಣ ಮಾಡಿರುವ ಶುಲ್ಕವನ್ನು ಶೇ.100 ರಷ್ಟು ಮರುಪಾವತಿ ಮಾಡಲಾಗುವುದು. ಯಂತ್ರೋಪಕರಣಗಳ ಮೇಲೆ ವಿಧಿಸುವ ಶೇ.2 ರಷ್ಟು ಪ್ರವೇಶ ತೆರಿಗೆಗೆ 03 ವರ್ಷಗಳವರೆಗೆ ವಿನಾಯಿತಿ ನೀಡಲಾಗುವುದು.  ಕಚ್ಚಾ ಸಾಮಗ್ರಿಗಳ ಮೇಲಿರುವ ಪ್ರವೇಶ ತೆರಿಗೆ ಶೇ.100 ರಷ್ಟು  5 ರಿಂದ 6 ವರ್ಷಗಳವರೆಗೆ ವಿನಾಯಿತಿ ನೀಡಲಾಗುವುದು. ಈ.ಟಿ.ಪಿ ಸಹಾಯಧನ ಶೇ.50 ರಿಂದ 75 ರಷ್ಟು (ತ್ಯಾಜ್ಯ ಸಂಸ್ಕರಣೆ ಸ್ಥಾಪನೆಗೆ) ಗರಿಷ್ಟ 50 ರಿಂದ 100 ಲಕ್ಷ ರೂ.ಗಳವರೆಗೆ ಸಹಾಯಧನ ನೀಡಲಾಗುವುದು. ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಶೇ.5 ರಿಂದ ಶೇ7 ರಷ್ಟು ಬಡ್ಡಿ ಸಹಾಯಧನ (6 ರಿಂದ7 ವರ್ಷಗಳವರೆಗೆ) ನೀಡಲಾಗುವುದು. ಶೇಕಡಾ 100 ರಷ್ಟು ವಿದ್ಯುತ್ ತೆರಿಗೆ ವಿನಾಯಿತಿ ನೀಡಲಾಗುವುದು.


Apmc Cess Certificate 10 years as per Intergrated Agri Policy 2011.
     ಕೈಗಾರಿಕಾ ನೀತಿಯ ಪ್ರಯೋಜನ ಪಡೆಯಲಿಚ್ಛಿಸುವ ಆಸಕ್ತ ಕೈಗಾರಿಕೋದ್ಯಮಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ : 08539-231548, ಮೊ.9481664401 ಅಥವಾ  ಕೈಗಾರಿಕಾ ಉತ್ತೇಜನಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ಮೊ.9880457917 ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 15 June 2015

ಪೌಷ್ಠಿಕತೆ ಕಾಯ್ದುಕೊಳ್ಳಲು ಸಮತೋಲಿತ ಆಹಾರ ಸೇವಿಸಿ

ಕೊಪ್ಪಳ ಜೂ. 15 (ಕರ್ನಾಟಕ ವಾರ್ತೆ):ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರ ಸಹಯೋಗದಲ್ಲಿ ಮಹಿಳೆಯರಿಗೆ ಗರ್ಭಿಣಿ ಮತ್ತು ಬಾಣಂತಿಯರ ಸಮತೋಲನ ಆಹಾರದ ಬಗ್ಗೆ ತರಬೇತಿ ಹಾಗೂ ಆಹಾರ ಪ್ರಾತ್ಯಕ್ಷತೆ ಕಾರ್ಯಕ್ರಮ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. 
       ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ ಅವರು, ತಾಯಂದಿರ ಷೋಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮಹಿಳೆಯರಿಗೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಭನೆಗೆ ಕರೆ ನೀಡಿದ ಅವರು, ನಮ್ಮ ಮನೆಯ ಅಂಗಳದಲ್ಲಿ ನಮ್ಮ ಆಹಾರ ಎಂಬ ಯುಕ್ತಿಯಂತೆ ಕುಟುಂಬಕ್ಕೆ ಬೇಕಾಗುವ ಆಹಾರವನ್ನು ನಾವೇ ಬೆಳೆದು ಸ್ವಾವಲಂಬಿಯಾಗಲು ತಿಳಿಸಿದರು. 
      ಗೃಹ ವಿಜ್ಞಾನದ ವಿಷಯ ತಜ್ಞೆ ಕವಿತ ಯ. ಉಳ್ಳಿಕಾಶಿ ಅವರು, ಗರ್ಭಿಣಿ-ಬಾಣಂತಿಯರಲ್ಲಿ ಉಂಟಾಗುವ ಷೋಷಕಾಂಶ ಕೊರತೆಗಳು ಹಾಗೂ ಅವುಗಳ ನಿರ್ವಹಣೆ ಹಾಗೂ ಸಮತೋಲನ ಆಹಾರದ ಬಗ್ಗೆ ತಿಳಿಸಿದರು.    ದಿನನಿತ್ಯ ಸಿಗುವ ಆಹಾರದಿಂದ ತಯಾರಿಸಬಹುದಾದ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷತೆಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.    ಸುಮಂಗಲ ಸಜ್ಜನ, ಮೇಲ್ವಿಚಾರಕಿ ಇವರು ಇಲಾಖೆಯ ಸೌಲಭ್ಯ ಬಗ್ಗೆ ತಿಳಿಸಿದರು.  ವಿಜಯಕುಮಾರ ರೆಡ್ಡಿ, ಪ್ರಗತಿಪರ ರೈತರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.