Wednesday, 29 April 2015

ಕೃಷಿ ಭಾಗ್ಯ : ಮೊದಲು ಬಂದವರಿಗೆ ಮೊದಲ ಆದ್ಯತೆ

ಕೊಪ್ಪಳ, ಏ.29 (ಕರ್ನಾಟಕ ವಾರ್ತೆ): ಕೃಷಿಭಾಗ್ಯ ಯೋಜನೆಯಡಿ 2014-15 ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.05 ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬಹುದಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ. 
     ಕೃಷಿ ಭಾಗ್ಯ ಯೋಜನೆಯಡಿ 2014-15ನೇ ಸಾಲಿಗಾಗಿ ಕೊಪ್ಪಳ ಜಿಲ್ಲೆಯಲ್ಲಿ 9428 ಅರ್ಜಿಗಳು ಸ್ವೀಕೃತಗೊಂಡಿವೆ. 2014-15ನೇ ಹಾಗೂ ಪ್ರಸಕ್ತ ಸಾಲಿನ ಗುರಿಯಂತೆ ಪ್ರತಿ ತಾಲೂಕಿಗೆ 400 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ರೈತರಿಗೆ ಕಾರ್ಯಾದೇಶ ನೀಡಲಾಗುವುದು.  ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರು ಮೇ.05 ರೊಳಗಾಗಿ ಪಹಣಿ, ಗುರುತಿನ ಚೀಟಿ ಅಥವಾ ಅರ್ಜಿ ಸ್ವೀಕೃತಿ ಪತ್ರದೊಂದಿಗೆ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬೇಕು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.   ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ.
Post a Comment