Thursday, 30 April 2015

ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ : ಮೇ. 1 ರಂದು ಕೊಪ್ಪಳದಲ್ಲಿ ಚಾಲನೆ


ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ, ಗೋಧಿ ವಿತರಿಸುವ ಕಾರ್ಯಕ್ರಮಕ್ಕೆ ಮೇ. 01 ರಂದು ಬೆಳಿಗ್ಗೆ 11-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಚಾಲನೆ ನೀಡಲಿದ್ದಾರೆ.
     ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗನುಗುಣವಾಗಿ ಯಾವುದೇ ಪರಿಮಿತಿ ಇಲ್ಲದೆ ಪ್ರತಿಯೊಬ್ಬ ಸದಸ್ಯನಿಗೆ ಉಚಿತವಾಗಿ 5 ಕೆ.ಜಿ ಆಹಾರಧಾನ್ಯ (ಅಕ್ಕಿ 3 ಕೆ.ಜಿ + ಗೋಧಿ 2 ಕೆ.ಜಿ) ಗಳನ್ನು ನೀಡುವ ಯೋಜನೆ,  ಅಲ್ಲದೆ ಪ್ರತಿ ಪಡಿತರ ಕಾರ್ಡಿಗೆ  ರೂ: 2/- ದರದಲ್ಲಿ ಅಯೋಡಿನ್‍ಯುಕ್ತ ಉಪ್ಪು, ಹಾಗೂ ರೂ: 25/- ರಂತೆ 1 ಲೀಟರ್ ತಾಳೆ ಎಣ್ಣೆಯನ್ನು ವಿತರಿಸುವ ಯೋಜನೆಗೆ ಮೇ. 01 ರಂದು ಜಾರಿಗೆ ಬರಲಿದೆ.  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂದು  ಬೆಳಿಗ್ಗೆ 11-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದೆ.  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಮೇ. 01 ರಿಂದ 03 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಮೇ. 01 ರಂದು ಬೆಳಿಗ್ಗೆ ಕಾರಟಗಿಯಿಂದ ಹೊರಟು ಬೆ. 11-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ-ಗೋಧಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.  ತರುವಾಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೆಚ್.ಕೆ.ಆರ್.ಡಿ.ಬಿ. ಕುರಿತು ಸಭೆ ನಡೆಸುವರು.  ಮಧ್ಯಾಹ್ನ 1-45 ಗಂಟೆಗೆ ಕನಕಗಿರಿಗೆ ತೆರಳಿ ಮದುವೆ ಸಮಾರಂಭ ಹಾಗೂ ಇತರೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಸಂಜೆ 5-30 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ಮೇ. 02 ರಂದು ಬೆ. 11 ಗಂಟೆಗೆ ಕಾರಟಗಿಯಲ್ಲಿ ರಾಜೀವ್‍ಗಾಂಧಿ ಸಬ್‍ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತು ಸಭೆ ನಡೆಸುವರು.  ನಂತರ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ಮೇ. 03 ರಂದು ಕಾರಟಗಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ, ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ : ನ್ಯಾಯಬೆಲೆ ಅಂಗಡಿಗಳಲ್ಲಿ ನೋಂದಣಿ

ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಬಿಪಿಎಲ್ ಕುಟುಂಬಗಳಿಗೆ ವೈದ್ಯಕೀಯ ವೆಚ್ಚ ಭರಿಸುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಾಗಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ 30 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಅವರು ಹೇಳಿದರು.
     ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷಿ ಯೋಜನೆಯಾಗಿರುವ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ಕೊಪ್ಪಳ ನಗರಸಭೆ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಬಿಪಿಎಲ್ ಕಾರ್ಡುದಾರರ ನೋಂದಣಿ ಪ್ರಕ್ರಿಯೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ವರ್ಷಕ್ಕೆ 30 ಸಾವಿರ ವರೆಗಿನ ವೈದ್ಯಕೀಯ ವೆಚ್ಚವನ್ನು ಯೋಜನೆಯಿಂದ ಭರಿಸುವ ಸೌಲಭ್ಯವಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆಯಬೇಕು ಎಂದರು.
     ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಅವರು, ಪ್ರತಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ 30 ರೂ. ಶುಲ್ಕ ಪಾವತಿಸಿ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಸದಸ್ಯರಾಗಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.  ಈ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬಕ್ಕೆ ವಾರ್ಷಿಕ 30 ಸಾವಿರ ವರೆಗಿನ ವೈದ್ಯಕೀಯ ವೆಚ್ಚ ಭರಿಸುವ ಸೌಲಭ್ಯವಿದೆ.  ಕೊಪ್ಪಳದ ಎಲ್ಲ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
     ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳುಗಿಡಿ ಸೇರಿದಂತೆ ಹಲವು ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Wednesday, 29 April 2015

ಅನ್ನಭಾಗ್ಯ : ಮೇ. 01 ರಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ-ಗೋಧಿ

ಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ಅನ್ನಭಾಗ್ಯ ಯೋಜನೆಯಡಿ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಉಚಿತವಾಗಿ ಅಕ್ಕಿ-ಗೋಧಿ ವಿತರಿಸುವ ಯೋಜನೆ ಮೇ. 01 ರಿಂದ ಜಾರಿಗೆ ಬರಲಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.
     ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯನ್ನು 2013ನೇ ಜುಲೈ 10 ನೇ ತಾರೀಖಿನಿಂದ ಜಾರಿಗೆ ತಂದು ಅಂತ್ಯೋದಯ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಅತೀ ಕಡಿಮೆ ದರ ಅಂದರೆ 1/- ರೂಪಾಯಿಗೆ ಒಂದು ಕೆ.ಜಿ ಅಕ್ಕಿ, ಗೋಧಿಯನ್ನು ಗರಿಷ್ಟ 30 ಕೆ.ಜಿ ವರೆಗೆ ಆಹಾರಧಾನ್ಯ ವಿತರಿಸಲಾಗುತಿತ್ತು.  ಇದೀಗ ರಾಜ್ಯ ಸರ್ಕಾರವು 2015-16 ನೇ ವರ್ಷದ ಆಯವ್ಯಯದಲ್ಲಿ ಘೋಷಿಸಿರುವಂತೆ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಗನುಗುಣವಾಗಿ ಯಾವುದೇ ಪರಿಮಿತಿ ಇಲ್ಲದೆ ಪ್ರತಿಯೊಬ್ಬ ಸದಸ್ಯನಿಗೆ ಉಚಿತವಾಗಿ 5 ಕೆ.ಜಿ ಆಹಾರಧಾನ್ಯ (ಅಕ್ಕಿ 3 ಕೆ.ಜಿ + ಗೋಧಿ 2 ಕೆ.ಜಿ) ಗಳನ್ನು ನೀಡುವ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಮೇ. 01 ರಿಂದ ಜಾರಿಗೆ ಬರಲಿದೆ.  ಅಲ್ಲದೆ ಪ್ರತಿ ಪಡಿತರ ಕಾರ್ಡಿಗೆ  ರೂ: 2/- ದರದಲ್ಲಿ ಅಯೋಡಿನ್‍ಯುಕ್ತ ಉಪ್ಪು, ಹಾಗೂ ರೂ: 25/- ರಂತೆ 1 ಲೀಟರ್ ತಾಳೆ ಎಣ್ಣೆಯನ್ನು ವಿತರಿಸುವ ಯೋಜನೆಯೂ ಸಹ ಮೇ. 01 ರಿಂದಲೇ ಜಾರಿಗೆ ಬರಲಿದೆ.
      ಎಪಿಎಲ್ ಪಡಿತರ ಚೀಟಿದಾರರಿಗೆ, ರಿಯಾಯಿತಿ ದರದಲ್ಲಿ ಆಹಾರಧಾನ್ಯ ನೀಡುವ ಯೋಜನೆ ಜೂನ್ ತಿಂಗಳಿನಿಂದ ಜಾರಿಗೆ ಬರಲಿದ್ದು, ಪ್ರತಿ ಕೆ.ಜಿ ಅಕ್ಕಿಗೆ ರೂ: 15/- ರಂತೆ ಮತ್ತು ಗೋಧಿಗೆ ರೂ: 10/- ರಂತೆ, ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ ( 3 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಗೋಧಿ) ಒಬ್ಬರಿಗಿಂತ ಹೆಚ್ಚಿನ ಸದಸ್ಯರಿಗೆ ಎಪಿಎಲ್ ಕಾರ್ಡುದಾರರಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಗೋಧಿ ಆಹಾರಧಾನ್ಯವನ್ನು 2015 ರ ಜೂನ್ ತಿಂಗಳಿನಿಂದ ವಿತರಿಸಲಾಗುವುದು. ಜಿಲ್ಲೆಯ ಎಲ್ಲ ಪಡಿತರ ಚೀಟಿ ಫಲಾನುಭವಿಗಳು ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕುಟುಂಬದ ಗಣತಿಯಾಗಿಲ್ಲವೆ ? : ಕೂಡಲೆ ಕರೆ ಮಾಡಿ

ಕೊಪ್ಪಳ, ಏ.29 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣಿತಿ ಕಾರ್ಯ ಅಂತಿಮ ಹಂತ ತಲುಪಿದ್ದು, ಇದುವರೆಗೂ ಗಣತಿಯಾಗದಿರುವ ಯಾವುದೇ ಕುಟುಂಬಗಳು ಇದ್ದಲ್ಲಿ, ಕೂಡಲೆ ದೂರವಾಣಿ ಸಂ: 08539-220381 ಗೆ ಕರೆ ಮಾಡಿ ತಿಳಿಸುವಂತೆ ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ ಮನವಿ ಮಾಡಿದ್ದಾರೆ.
     ಕೊಪ್ಪಳ ತಾಲೂಕಿನಲ್ಲಿ ಕಳೆದ ಏ.11 ರಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದ್ದು ಏ. 30 ಕ್ಕೆ ಮುಕ್ತಾಯಗೊಳ್ಳಲಿದೆ.  ಈಗಾಗಲೆ ಗಣತಿ ಕಾರ್ಯ ಅಂತಿಮ ಹಂತ ತಲುಪಿದ್ದು,   ಈ ಗಣತಿ ಕಾರ್ಯದಲ್ಲಿ ಯಾವುದೇ ಕುಟುಂಬಗಳು ಬಿಟ್ಟು ಹೋಗಿದ್ದಲ್ಲಿ, ಬೇರೆ ಊರುಗಳಿಗೆ ಹೋಗಿದ್ದಲ್ಲಿ ಅಥವಾ ತೋಟದ ಮನೆ, ಕೋಳಿ ಫಾರಂ, ಇಟ್ಟಂಗಿ ಬಟ್ಟಿ ಮುಂತಾದ ಕಡೆಗಳಲ್ಲಿ ವಾಸಿಸುತ್ತಿದ್ದು, ಗಣತಿ ಆಗದೇ ಇದ್ದ ಪಕ್ಷದಲ್ಲಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ತಹಶೀಲ್ದಾರ ಕಾರ್ಯಾಲಯ, ಕೊಪ್ಪಳ, ದೂರವಾಣಿ ಸಂಖ್ಯೆ 08539-220381 ಗೆ ಕರೆಮಾಡಿ ತಿಳಿಸಿದಲ್ಲಿ, ಗಣತಿಗೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳು  ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕುರಿತು ಡಂಗುರ ಸಾರುವ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು.
     ಸಮೀಕ್ಷೆ ಕಾರ್ಯ ಕೈಗೊಂಡಿರುವ ಗಣತಿದಾರರು ಹಾಗೂ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯ ಬ್ಲಾಕುಗಳಲ್ಲಿ ಯಾವುದೇ ಮನೆಗಳು ಬಿಟ್ಟು ಹೋಗದಂತೆ ಗಣತಿ ನಡೆಸಿ, ವಿಳಂಬ ಮಾಡದೆ ಸಕಾಲಕ್ಕೆ ಮಾಹಿತಿ ನೀಡಬೇಕು  ಎಂದು ಕೊಪ್ಪಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಕರಡಿ ಆಡಿಸುವ ಕುಟುಂಬಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ

ಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ಕರಡಿ ಆಡಿಸುವವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 12 ಜನರಿಗೆ ನೀಡಲಾದ ತಲಾ 25 ಸಾವಿರ ರೂ.ಗಳ ಸಾಲ ಸೌಲಭ್ಯದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಬುಧವಾರದಂದು ವಿತರಣೆ ಮಾಡಿದರು.
     ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ. ಹುನಗುಂದ ಅವರು ಕೆಲ ತಿಂಗಳುಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿ, ಕರಡಿ ಆಡಿಸುವ ಕುಟುಂಬಗಳ ಸ್ಥಿತಿ-ಗತಿ ಬಗ್ಗೆ ಪರಿಶೀಲನೆ ನಡೆಸಿದ್ದರು.  ಅಖಿಲ ಕರ್ನಾಟಕ ಕರಡಿ ಆಟಗಾರರ ಪರಿಹಾರ ಹೋರಾಟ ಸಮಿತಿ, ಮಂಗಳಾಪುರ ಇವರು ಸಹ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ, ಕುಟುಂಬದ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತ್ತು.  ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ, ಕರಡಿ ಆಡಿಸುವ ಕುಟುಂಬಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸಾಲ ಸೌಲಭ್ಯ ಕಲ್ಪಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.  ಇದೀಗ ಕರಡಿ ಆಡಿಸುತ್ತ ಜೀವನ ಸಾಗಿಸುತ್ತಿದ್ದ, ಜಿಲ್ಲೆಯ ಮಂಗಳಾಪುರ ಗ್ರಾಮದ 12 ಜನರಿಗೆ ತಲಾ 25 ಸಾವಿರ ರೂ. ಗಳ ಸಾಲ ಸೌಲಭ್ಯವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮಂಜೂರು ಮಾಡಿದೆ. 25 ಸಾವಿರ ರೂ. ಗಳ ಸಾಲ ಸೌಲಭ್ಯದಲ್ಲಿ ಶೇ. 25 ರಷ್ಟು ಅಂದರೆ 6250 ರೂ. ಸಹಾಯಧನವಾಗಿದ್ದು, ಉಳಿದ ಶೇ. 75 ರಷ್ಟು ಅಂದರೆ 18750 ರೂ. ಸಾಲದ ಮೊತ್ತವಾಗಿದ್ದು, ಇದನ್ನು ಶೇ. 4 ರ ಬಡ್ಡಿದರದಲ್ಲಿ 2 ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡಬೇಕಿದೆ.  ಸಾಲದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಫಲಾನುಭವಿಗಳಿಗೆ ವಿತರಣೆ ಮಾಡಿದರು.  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಝಾಕಿರ್ ಹುಸೇನ್, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ರಾಜಾಬಕ್ಷಿ ಇದ್ದರು.

ಕೊಪ್ಪಳ : ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

ಕೊಪ್ಪಳ, ಏ.29 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರಸಕ್ತ ಸಾಲಿಗಾಗಿ  ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
   ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಕನಿಷ್ಟ 7ನೇ ತರಗತಿ ತೇರ್ಗಡೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಯಾವುದೇ ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬಾರದು. ಈಗಾಗಲೇ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರು.  ಭರ್ತಿ ಮಾಡಿದ ನಿಗಿದಿತ ಅರ್ಜಿ ನಮೂನೆಯ ಜೊತೆ ಜಾತಿ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲಾತಿ ಪ್ರಮಾಣಪತ್ರ, ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣಪತ್ರ ಹಾಗೂ ಧೃಢೀಕರಣದ ನಕಲುಗಳನ್ನು ಲಗತ್ತಿಸಿ, ಮೇ. 23 ರೊಳಗಾಗಿ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ.  ಪ್ರವರ್ಗವಾರು ಮೀಸಲಾತಿ ಅನ್ವಯ 20 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೃಷಿ ಭಾಗ್ಯ : ಮೊದಲು ಬಂದವರಿಗೆ ಮೊದಲ ಆದ್ಯತೆ

ಕೊಪ್ಪಳ, ಏ.29 (ಕರ್ನಾಟಕ ವಾರ್ತೆ): ಕೃಷಿಭಾಗ್ಯ ಯೋಜನೆಯಡಿ 2014-15 ಸಾಲಿಗಾಗಿ ಅರ್ಜಿ ಸಲ್ಲಿಸಿರುವ ರೈತರು ಮೇ.05 ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬಹುದಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಸೂಚನೆ ನೀಡಿದ್ದಾರೆ. 
     ಕೃಷಿ ಭಾಗ್ಯ ಯೋಜನೆಯಡಿ 2014-15ನೇ ಸಾಲಿಗಾಗಿ ಕೊಪ್ಪಳ ಜಿಲ್ಲೆಯಲ್ಲಿ 9428 ಅರ್ಜಿಗಳು ಸ್ವೀಕೃತಗೊಂಡಿವೆ. 2014-15ನೇ ಹಾಗೂ ಪ್ರಸಕ್ತ ಸಾಲಿನ ಗುರಿಯಂತೆ ಪ್ರತಿ ತಾಲೂಕಿಗೆ 400 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶವಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ರೈತರಿಗೆ ಕಾರ್ಯಾದೇಶ ನೀಡಲಾಗುವುದು.  ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರು ಮೇ.05 ರೊಳಗಾಗಿ ಪಹಣಿ, ಗುರುತಿನ ಚೀಟಿ ಅಥವಾ ಅರ್ಜಿ ಸ್ವೀಕೃತಿ ಪತ್ರದೊಂದಿಗೆ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಕಾರ್ಯಾದೇಶ ಪಡೆಯಬೇಕು ಎಂದು ಕೊಪ್ಪಳದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.   ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ.

ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ ಏ.29 (ಕರ್ನಾಟಕ ವಾರ್ತೆ): ಜಿಲ್ಲೆಯ ಕೊಪ್ಪಳ ತಾಲೂಕಿನ ಕೆಂಚನಡೋಣಿ ಗ್ರಾಮದ ಬಳಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಬಾಲಾಜಿ ಕಾರಬಾರಿ (20) ಎಂಬಾತನಿಗೆ ಪೋಕ್ಸೊ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಸಪ್ಪಣ್ಣವರ್ ತೀರ್ಪು ನೀಡಿದ್ದಾರೆ.
     ಕಳೆದ 2014 ರ ಮೇ. 06 ರಂದು ಕೆಂಚನಡೋಣಿ ಗ್ರಾಮದ ಹೊಲವೊಂದರಲ್ಲಿ ಬಾಲಾಜಿ ಕಾರಬಾರಿ (20), ಸುರೇಶ ಕಾರಬಾರಿ (17) ಹಾಗೂ ನಿಂಗಪ್ಪ ಕಾರಬಾರಿ (17) ಆರೋಪಿಗಳು 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದಿದ್ದರು.  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪ್ರಕರಣ ಕುರಿತು ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಆರೋಪಿ ಬಾಲಾಜಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಕಲಂ 376 (2), (1), 376 (ಎ), 376 (ಡಿ), 302 ಹಾಗೂ ಪೋಕ್ಸೋ ಕಾಯ್ದೆಯಡಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
     ಉಳಿದ ಇಬ್ಬರು ಆರೋಪಿಗಳ ವಿಚಾರಣೆ ಬಾಲಾಪರಾಧ ನ್ಯಾಯಾಲಯದಲ್ಲಿಯಾಗಿದ್ದು, ಇವರಿಗೂ ಸಹ ಬಾಲಾಪರಾಧ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗಿದೆ.  ಕೊಪ್ಪಳದ ವಿಶೇಷ ಸಾರ್ವಜನಿಕ ಅಭಿಯೋಜಕ (ಪೋಕ್ಸೊ) ಸಿ.ಎಸ್. ಮುಟಗಿ ಅವರು ಅಭಿಯೋಜನದ ಪರವಾಗಿ ವಾದ ಮಂಡಿಸಿದ್ದರು.

Tuesday, 28 April 2015

ಕುಡಿಯುವ ನೀರಿನ ಟ್ಯಾಂಕ್‍ಗಳಿಗೆ ತಪ್ಪದೆ ಕ್ಲೋರಿನೇಷನ್ ಮಾಡಿಸಿ : ಕೃಷ್ಣ ಉದಪುಡಿ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ) : ಜಿಲ್ಲೆಯ ಎಲ್ಲಾ ಗ್ರಾಮಗಳ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛವಾಗಿ ತೊಳೆದು, ತಪ್ಪದೆ ಕ್ಲೋರಿನೇಷನ್ ಮಾಡಿಸಬೇಕು ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮ ಕುರಿತು ಜಿಲ್ಲಾ ಪಂಚಾಯತ್‍ನ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ.  ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಜನರನ್ನು ಬಾಧಿಸುವ ಕಾಲರಾ, ಕಾಮಾಲೆ, ವಿಷಮಶೀತ ಜ್ವರ, ಅತಿಸಾರ ಭೇದಿ ಮುಂತಾದ ರೋಗಗಳ ಮೂಲ ನೀರು ಆಗಿರುವುದರಿಂದ, ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛವಾಗಿ ತೊಳೆದು ಕ್ಲೋರಿನೇಷನ್ ಮಾಡಿಸಬೇಕು. ಹಳ್ಳಿಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಮೂಲಗಳು ಶುದ್ಧವಾಗಿದ್ದರೂ, ಪೈಪ್‍ಲೈನ್ ಸೋರಿಕೆ, ಚರಂಡಿಯ ಪಕ್ಕದಲ್ಲಿಯೇ ಕುಡಿಯುವ ನೀರಿನ ಸಂಪರ್ಕ ಪಡೆಯುವುದರಿಂದ ರೋಗ ಹರಡಲು ಸುಲಭ ಮಾರ್ಗವಾಗಿದೆ.  ಪೈಪ್‍ಲೈನ್ ಸೋರಿಕೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಉದಪುಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಕ್ಕಳ ಆರೋಗ್ಯ : ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಮಕ್ಕಳ ಅನಾರೋಗ್ಯ ಪ್ರಕರಣಗಳು ಹೆಚ್ಚಾಗಿವೆ. ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿರುವ ನೀರಿನ ತೊಟ್ಟಿ, ಬಿಸಿಯೂಟದ ಅಡುಗೆ ಕೋಣೆ, ಆಹಾರ ಸಾಮಗ್ರಿ ಇತ್ಯಾದಿಗಳನ್ನು ಸ್ವಚ್ಛವಾಗಿಡುವಲ್ಲಿ ಹೆಚ್ಚಿನ ಗಮನಹರಿಸಬೇಕಾಗಿದೆ.  ಇದರ ಜೊತೆಗೆ ಅಡುಗೆ ಮಾಡುವವರ ವೈಯಕ್ತಿಕ ಸ್ವಚ್ಛತೆಯ ಬಗ್ಗೆಯೂ ನಿಗಾ ವಹಿಸಬೇಕು.   ಶಾಲೆಯ ಸುತ್ತಲೂ ನೈರ್ಮಲ್ಯತೆ ಕಾಪಾಡಲು ಹೆಚ್ಚಿನ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂದರು. 
ನಾಯಿ ಕಡಿತ : ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು,  ಈ ವರ್ಷ ಜಿಲ್ಲೆಯಲ್ಲಿ 1532 ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಒಟ್ಟು 5678 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಾಯಿಗಳ ಉಪಟಳ ಹೆಚ್ಚಾಗಲು ಮಾಂಸದಂಗಡಿಗಳು ಕಾರಣವಾಗಿದ್ದು, ಅನುಪಯುಕ್ತ ಮಾಂಸವನ್ನು ಎಲ್ಲೆಂದರಲ್ಲಿ ಎಸೆಯದಂತೆ ಮಾಂಸದಂಗಡಿಗಳ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸೊಳ್ಳೆಗಳ ನಿಯಂತ್ರಣ : ಸೊಳ್ಳೆಗಳ ಮೂಲಕ ಹರಡುವ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯ ರೋಗಗಳ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಪ್ರಮುಖವಾಗಿದ್ದು, ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಮನೆಗಳಲ್ಲಿ ನೀರಿನ ಸಂಗ್ರಹಗಾರಗಳನ್ನು ತೆರೆದಿಡದೆ, ಸೂಕ್ತವಾಗಿ ಮುಚ್ಚಲು ಮತ್ತು ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕೃಷ್ಣ ಡಿ.ಉದಪುಡಿ ಅವರು ತಿಳಿಸಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಂ.ಎಂ. ಕಟ್ಟಿಮನಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಹೆಚ್1 ಎನ್1 ರೋಗದ 5 ಪ್ರಕರಣಗಳು ಖಚಿತಪಟ್ಟಿದ್ದು, ಗಂಗಾವತಿ ತಾಲೂಕಿನಲ್ಲಿ ಒಂದು ಮರಣ ಪ್ರಕರಣ ವರದಿಯಾಗಿದೆ.  ಉಳಿದಂತೆ ಈ ವರ್ಷ 724-ಟೈಫಾಯ್ಡ್, 43- ಹಾವುಕಡಿತ ಪ್ರಕರಣ ದಾಖಲಾಗಿದೆ ಎಂದರು.
ಸಭೆಯಲ್ಲಿ  ತಾಲೂಕಾ ವೈದ್ಯಾಧಿಕಾರಿ ಡಾ|| ಎಸ್.ಬಿ. ದಾನರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಹನುಮಸಾಗರದಲ್ಲಿ ಗ್ರಾಮದೇವತೆ ಜಾತ್ರೆ : ಪ್ರಾಣಿ ಬಲಿ ನಿಷೇಧ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ಏ.29 ರವರೆಗೆ ನಡೆಯಲಿದ್ದು, ಜಾತ್ರಾ ಆವರಣದೊಳಗೆ ಅಥವಾ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಆದೇಶ ಹೊರಡಿಸಿದ್ದಾರೆ.
     ಕರ್ನಾಟಕ ಪ್ರಾಣಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯಮಗಳ ಪ್ರಕಾರ ದೇವಸ್ಥಾನಗಳಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ.  ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 1973ರ ಸಿ.ಆರ್.ಪಿ ಸೆಕ್ಷನ್ 144(1) ಮತ್ತು (3)ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಕುಷ್ಟಗಿ ತಾಲೂಕಿನ ಹನುಮಸಾಗರದ ಗ್ರಾಮದೇವತೆ ಜಾತ್ರೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಏ.29 ರವರೆಗೆ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದು, ಕುರಿ, ಆಡು, ಕೋಳಿ ಇತ್ಯಾದಿ ಪ್ರಾಣಿಗಳನ್ನು ತೆಗೆದುಕೊಂಡು ಬರುವುದನ್ನು ಮತ್ತು ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.

ಹೊಲಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ) : ಯಲಬುರ್ಗಾ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಪ್ರಸಕ್ತ ಸಾಲಿಗಾಗಿ  ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
   ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಕನಿಷ್ಟ 7ನೇ ತರಗತಿ ತೇರ್ಗಡೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಯಾವುದೇ ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬಾರದು. ಈಗಾಗಲೇ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರು.  ಭರ್ತಿ ಮಾಡಿದ ನಿಗಿದಿತ ಅರ್ಜಿ ನಮೂನೆಯ ಜೊತೆ ಜಾತಿ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲಾತಿ ಪ್ರಮಾಣಪತ್ರ, ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣಪತ್ರ ಹಾಗೂ ಧೃಢೀಕರಣದ ನಕಲುಗಳನ್ನು ಲಗತ್ತಿಸಿ, ಮೇ.12 ರೊಳಗಾಗಿ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಯಲಬುರ್ಗಾದಲ್ಲಿ ಸಲ್ಲಿಸಬಹುದಾಗಿದೆ.  ಪ್ರವರ್ಗವಾರು ಮೀಸಲಾತಿ ಅನ್ವಯ 20 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ನಿಗದಿತ ಅವಧಿಯ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ವಿವಿಧ ಯೋಜನೆಗಳು : ಅರ್ಜಿ ಆಹ್ವಾನ


ಕೊಪ್ಪಳ, ಏ.28 (ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, 2015-16 ನೇ ಸಾಲಿಗಾಗಿ ಸ್ವಾವಲಂಬನ ಸಾಲದ ಯೋಜನೆ, ಅರಿವು ಸಾಲ ಯೋಜನೆ, ಶ್ರಮಶಕ್ತಿ, (ಮೈಕ್ರೋ) ಸಣ್ಣ ಸಾಲ ಮತ್ತು ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ನಿವೇಶನ ಖರೀದಿ ಮತ್ತು ಗೃಹಸಾಲದ ಮೇಳಿನ ಬಡ್ಡಿ ಸಹಾಯಧನ ಯೋಜನೆ, ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಯಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿ ಸಲ್ಲಿಸಲಿಚ್ಛಿಸುವವರು ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಭೌದ್ಧರು, ಸಿಖ್ಖರು, ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು.  ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ.81,000/- ಮತ್ತು ನಗರ ಪ್ರದೇಶದವರಿಗೆ ರೂ.1,03,000/- ಮೀರಬಾರದು. ಅರಿವು ಯೋಜನೆಯಡಿಯಲ್ಲಿ ಮಾತ್ರ ಕುಟುಂಬದ ವಾರ್ಷಿಕ ಆದಾಯ ರೂ.4,50,000/- ಮೀರಬಾರದು.  ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.  ವಿಳಾಸದ ಧೃಢೀಕರಣಕ್ಕಾಗಿ ಆಧಾರ್(ಯುಐಡಿ) ಪ್ರತಿಯನ್ನು ಸಲ್ಲಿಸಬೇಕು. ಈ ಹಿಂದೆ ನಿಗಮದ ಸೌಲಭ್ಯವನ್ನು ಪಡೆದವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಈ ಯೋಜನೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಇದ್ದು, ಅಂಗವಿಕಲರಿಗೆ ಶೇಕಡಾ 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
     ಸಾಲದ ಅರ್ಜಿ ನಮೂನೆಯನ್ನು ನಿಗಮದ ವೆಬ್‍ಸೈಟ್   www.kmdc.kar.nic.in ಅಥವಾ  http://kmdc.karnataka.gov.in ಮೂಲಕ ಪಡೆಯಬಹುದಾಗಿದೆ.  ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಗೆ ಮೇ.15 ರೊಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂ: 08539-225008 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Friday, 24 April 2015

ಮೇ. 5 ರಿಂದ ಹುಲಿಗೆಮ್ಮ ದೇವಿ ಜಾತ್ರೆ : ಸ್ವಚ್ಛತೆಗೆ ಆದ್ಯತೆ ನೀಡಲು ಡಿ.ಸಿ. ಆರ್.ಆರ್.ಜನ್ನು ಸೂಚನೆ

ಕೊಪ್ಪಳ, ಏ.24 (ಕರ್ನಾಟಕ ವಾರ್ತೆ) : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ 5 ರಿಂದ ಪ್ರಾರಂಭವಾಗಲಿದ್ದು,  ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಗೃಹ ಕಛೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ  ಪೂರ್ವಭಾವಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಹುಲಿಗೆಮ್ಮ ದೇವಿಯ ಜಾತ್ರೆಯು ಮೇ.05 ರಿಂದ 15 ರವರೆಗೆ ಜರುಗಲಿದ್ದು, ಪ್ರತಿ ವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ನಡೆಯಲಿದೆ. ಮೇ. 12 ರಂದು ಸಂಜೆ 5.30 ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.   ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು. ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ ನಿಟ್ಟಿನಲ್ಲಿ ಹುಲಿಗಿ ಗ್ರಾಮದಲ್ಲಿ ಒಟ್ಟು 04 ಕಡೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲು, ಸೂಕ್ತ ಸ್ಥಳ ಗುರುತಿಸಿ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ನೈರ್ಮಲ್ಯತೆ ಕಾಪಾಡುವ ದೃಷ್ಠಿಯಿಂದ  ಪಾರ್ಕಿಂಗ್ ಸ್ಥಳಗಳು ಸೇರಿದಂತೆ ದೇವಸ್ಥಾನದ ನಾಲ್ಕು ದಿಕ್ಕುಗಳಿಗೂ ಒಟ್ಟು 350 ಶೌಚಾಲಯ ಹಾಗೂ ಸ್ನಾನ ಗೃಹಗಳ ವ್ಯವಸ್ಥೆ ಮಾಡಬೇಕು.  ಈ ಬಾರಿ ಜಾತ್ರೆಯಲ್ಲಿ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಬೇಕು.  ಈ ಹಿಂದಿನ ಜಾತ್ರೆಗಳ ಸಂದರ್ಭದಲ್ಲಿ ಸ್ವಚ್ಛತೆಗೆ ಹಲವು ಕ್ರಮ ಕೈಗೊಂಡಿದ್ದರೂ, ಪರಿಣಾಮಕಾರಿಯಾಗಿ ಆಗಿರಲಿಲ್ಲ.  ಈ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರಾ ಸಂದರ್ಭದಲ್ಲಿ ಸಾರ್ವಜನಿಕರು ನೈರ್ಮಲ್ಯತೆಯನ್ನು ಕಾಪಾಡಬೇಕು.  ತಪ್ಪಿದಲ್ಲಿ ಅಂತಹವರಿಗೆ 250 ರೂ.ಗಳ ದಂಡ ವಿಧಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಈ ಕುರಿತ ಮಾಹಿತಿ ಫಲಕಗಳನ್ನು ನಾನಾ ಕಡೆಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು.  ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಹೊಸಪೇಟೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಗ್ರಾಮದ ಪ್ರಮುಖರು, ಸಾರ್ವಜನಿಕರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿಬಲಿ ನಿಷೇಧ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಮನವಿ ಮಾಡಿಕೊಂಡರು. 
       ಜಾತ್ರೆಯ ಸಂದರ್ಭದಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಅವರು ಮನವಿ ಮಾಡಿಕೊಂಡರು.
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಡಿ.ವೈ.ಎಸ್.ಪಿ ರಾಜೀವ್ ಎಂ., ಮುನಿರಾಬಾದ್ ಜೆಸ್ಕಾಂ ಕಛೇರಿಯ ವೀರೇಶ್, ಕೊಪ್ಪಳ ನಗರಸಭೆ ಆಯುಕ್ತ ರಮೇಶ್ ಪಟ್ಟೇದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀಕಾಂತ ಬಾಸೂರು, ಹುಲಿಗಿ ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಡಾ. ಗುರುಲಿಂಗಯ್ಯ ಅವರಿಂದ ಪರಿಶೀಲನೆ


ಕೊಪ್ಪಳ, ಏಪ್ರಿಲ್ 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಏ. 11 ರಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ. ಗುರುಲಿಂಗಯ್ಯ ಅವರು ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಶುಕ್ರವಾರದಂದು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
     ತಾಲೂಕಿನ ಹಲಗೇರಿ, ಯಲಬುರ್ಗಾ ತಾಲೂಕು ಇಟಗಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ವಿವಿಧ ಜನವಸತಿ ಪ್ರದೇಶಗಳಲ್ಲಿ ಜರುಗುತ್ತಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಸಮೀಕ್ಷೆ ಉತ್ತಮವಾಗಿ ಜರುಗುತ್ತಿದ್ದು, ಸಣ್ಣ ಪುಟ್ಟ ಗೊಂದಲಗಳನ್ನು ಇದೀಗ ನಿವಾರಿಸಲಾಗಿದೆ.  ಕೆಲವು ಮೇಲ್ವಿಚಾರಕರು ಪರೀಕ್ಷೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ, ಸಮೀಕ್ಷಾ ಕರ್ತವ್ಯಕ್ಕೆ ಮರಳಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೀಗ ಭರದಿಂದ ಸಾಗಿದೆ.  ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ.  ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಪ್ರಚಾರ ಕಾರ್ಯಕ್ರಮ ಪರಿಣಾಮಕಾರಿಯಾಗಿದೆ.  ಸಾರ್ವಜನಿಕರಿಂದ ಸಮೀಕ್ಷೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಡಾ. ಗುರುಲಿಂಗಯ್ಯ ತಿಳಿಸಿದರು.
     ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Saturday, 18 April 2015

ಸಾಮಾಜಿಕ ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ- ಬಿ. ಪೀರಬಾಷ

ಕೊಪ್ಪಳ ಏ. 18 : ಸಾಮಾಜಿಕ ಹಾಗೂ ಆರ್ಥಿಕ  ಸಮಾನತೆ ಇಲ್ಲದ  ಯಾವುದೇ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂದು ಸಾಹಿತಿ ಬಿ.ಪೀರಬಾಷ ಅಭಿಪ್ರಾಯ ವ್ಯಕ್ತಪಡಿಸಿದರು.
      ಹೊಸಪೇಟೆ ಆಕಾಶವಾಣಿ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ  ಅವರ 124 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
      ಅಂಬೇಡ್ಕರರು ಜಗತ್ತಿನ ಶ್ರೇಷ್ಠ ಚಿಂತಕರಾಗಿದ್ದರು.ಭಾರತದಲ್ಲಿ ಬುದ್ಧಿಜೀವಿಗಳ, ಚಿಂತಕರ ಪರಂಪರೆ ದೊಡ್ಡ ಸಂಖ್ಯೆಯಲ್ಲಿದೆ. ಅದು ಬುದ್ಧನಿಂದ ಆರಂಭಗೊಂಡು ಬಸವಣ್ಣ, ಗಾಂಧೀಜಿಯೊಡನೆ ಮುಂದುವರೆದು ಅಂಬೇಡ್ಕರರವರೆಗೆ ಬೆಳೆದಿದೆ. ಅಂಬೇಡ್ಕರ ಸಮಾನತೆ-ಸಹೋದರತ್ವದ ಧ್ವನಿಯಾಗಿದ್ದರು. ಪ್ರಜಾಪ್ರಭುತ್ವದಂತಹ ಮೌಲ್ಯ ಪ್ರತಿಷ್ಠಾಪಿಸಿದರು.ಅವರು ಕೇವಲ ದಲಿತರ ಪರವಾಗಿ ಮಾತ್ರ ಇದ್ದರು ಎಂದುಕೊಂಡರೆ ಅದು ದೊಡ್ಡ ತಪ್ಪು.  ತುಳಿತಕ್ಕೊಳಗಾದ ಸಮುದಾಯಗಳಲ್ಲಿ ಅದುಮಿ ಹಿಡಿದ ಸ್ಪ್ರಿಂಗಿನಂತಹ ಶಕ್ತಿ ಇರುತ್ತದೆ. ದಲಿತರು ಆ ಶಕ್ತಿ ಬಳಸಿಕೊಂಡು ಪುಟಿದೇಳಬೇಕು ಎಂದು ಬಿ.ಪೀರಬಾಷ ಹೇಳಿದರು.
     ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ  ಕೆ.ವೆಂಕಟೇಶ ಮಾತನಾಡಿ, ಅಂಬೇಡ್ಕರರು ಈ ದೇಶದ ಎಲ್ಲ 130 ಕೋಟಿ ಜನರಿಗಾಗಿ ಸಂವಿಧಾನ ಬರೆದಿದ್ದಾರೆ.  ಭಾರತ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಅವರು ಮಾದರಿಯಾಗಿದ್ದಾರೆ.ಸಂವಿಧಾನದ ಮೂಲಕ ಸಮಾನತೆ ಸಾಧಿಸುವ ಸದವಕಾಶ ಒದಗಿಸಿಕೊಟ್ಟಿದ್ದಾರೆ ಎಂದರು.
ಆಕಾಶವಾಣಿಯ  ನಿರ್ದೇಶಕ ಕೆ.ಅರುಣಪ್ರಭಾಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಪ.ಜಾ./ ಪ.ಪಂ. ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.  ಕಾರ್ಯಕ್ರಮ ನಿರ್ವಾಹಕರಾದ ಡಾ.ಅನುರಾಧ ಕಟ್ಟಿ,ಅರುಣ ನಾಯಕ,ಬಿ.ಸಿದ್ದಣ್ಣ,ತಾಂತ್ರಿಕ ವಿಭಾಗದ ಟಿ.ರತ್ನವೇಲು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಆಕಾಶವಾಣಿ ಎಸ್ಸಿ/ಎಸ್‍ಟಿ ನೌಕರರ ಸಂಘದ ಅಧ್ಯಕ್ಷ ವಿ.ರಾಮಾಂಜನೇಯಲು ಸ್ವಾಗತಿಸಿದರು.ಪ್ರಸಾರ ನಿರ್ವಾಹಕ ಮಂಜುನಾಥ ಡಿ.ಡೊಳ್ಳಿನ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಕೆ.ಶಾಂತಲಾ ನಿರೂಪಿಸಿದರು.

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ, ಏ.18 (ಕರ್ನಾಟಕ ವಾರ್ತೆ) : ಕೊಪ್ಪಳ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಜಿಲ್ಲೆಯ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 2015-16ನೇ ಸಾಲಿನಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಪರಿಶಿಷ್ಟ ಜಾತಿ ಅಭ್ಯರ್ಥಿಗಳು ನಿಗಮದ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ / ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸಫಾಯಿ ಕರ್ಮಚಾರಿ ಪುನರ್ವಸತಿ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ/ಸಾಮೂಹಿಕ ನೀರಾವರಿ ಯೋಜನೆ/ ಏತ ನೀರಾವರಿ ಯೋಜನೆ, ಮೈಕ್ರೋ ಕ್ರೇಡಿಟ್/ಮಹಿಳಾ ಅಭಿವೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್/ಕಿರುಸಾಲ ಯೋಜನೆಗಳಡಿ ಸಾಲ ಪಡೆಯಬಹುದಾಗಿದೆ.
     ಅರ್ಜಿ ಸಲ್ಲಿಸಲು ಮೇ.15 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ||ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕೊಠಡಿ ಸಂಖ್ಯೆ 109, ಜಿಲ್ಲಾಡಳಿತ ಭವನ, ಕೊಪ್ಪಳ. ದೂರವಾಣಿ ಸಂಖ್ಯೆ: 08539-221176 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ಪ್ರವಾಸ : ಕುಂದು, ಕೊರತೆ ದೂರು ಆಹ್ವಾನ

ಕೊಪ್ಪಳ, ಏ.18 (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ವಿ.ವಿ. ಕುಂಬಾರ ಹಾಗೂ ಲೋಕಾಯುಕ್ತ ಪೋಲೀಸ್ ಉಪಾಧೀಕ್ಷಕ ಎಂ.ಎಚ್.ಚಿಕ್ಕರೆಡ್ಡಿ ಅವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಏ.20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ.
       ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದಾಗಿದ್ದು, ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ 1 ಮತ್ತು 2 ಲಭ್ಯವಿದ್ದು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ. ದೂರವಾಣಿ ಸಂಖ್ಯೆ : 08539-220533, 08539-220200 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಪೆನ್ಸಿಲ್ ಬಳಸಿ ಗಣತಿ ಮಾಡಬೇಡಿ- ಡಿಸಿ ಆರ್.ಆರ್. ಜನ್ನು ಸೂಚನೆ

ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಗಣತಿದಾರರು ಪೆನ್ಸಿಲ್ ಬಳಸಿ, ಗಣತಿ ನಮೂನೆ ಭರ್ತಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದ್ದಾರೆ.
     ಗಣತಿದಾರರು ನಮೂನೆಯನ್ನು ಪೆನ್ಸಿಲ್ ನಿಂದ ಭರ್ತಿ ಮಾಡಿ, ಅದೇ ನಮೂನೆಗೆ ಗಣತಿ ಮಾಡಿದ ಮನೆಯ ಯಜಮಾನರ ಸಹಿ ಪಡೆಯುತ್ತಿದ್ದಾರೆಂಬುದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಗಮನಕ್ಕೆ ಬಂದಿರುತ್ತದೆ.  ಗಣತಿದಾರರು ಸಮೀಕ್ಷೆಗೆ ಬಳಸುವ ನಮೂನೆಯಲ್ಲಿ ಯಾವುದೇ ಭಾಗವನ್ನು ಪೆನ್ಸಿಲ್ ಉಪಯೋಗಿಸಿ ಭರ್ತಿ ಮಾಡಬಾರದು.  ಈಗಾಗಲೆ ಕೆಲವು ಮನೆಗಳನ್ನು ಈ ರೀತಿ ಮಾಡಿದ್ದಲ್ಲಿ, ಪುನಃ ಗಣತಿ ಮಾಡುವಂತೆ ಸೂಚನೆ ನೀಡಲಾಗಿದೆ.  ಗಣತಿ ಮಾಡಲಾಗುವ ಕುಟುಂಬದ ಯಜಮಾನರು, ಗಣತಿ ನಮೂನೆಯನ್ನು ಪೆನ್ ನಿಂದ ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ನಮೂನೆಗೆ ಸಹಿ ಮಾಡಬೇಕು.  ಒಂದು ವೇಳೆ ಯಾವುದೇ ಗಣತಿದಾರರು ಪೆನ್ಸಿಲ್‍ನಿಂದ ಗಣತಿ ನಮೂನೆಯನ್ನು ಬರೆಯುತ್ತಿದ್ದಲ್ಲಿ, ಕೂಡಲೆ ಸಂಬಂಧಪಟ್ಟ ತಾಲೂಕಿನ ತಹಸಿಲ್ದಾರರಿಗೆ ಅಥವಾ ಆಯಾ ನಗರ/ಪಟ್ಟಣ ನಗರಸಭೆ/ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದವರಿಗೆ ವಿವಿಧ ಯೋಜನೆ : ಅರ್ಜಿ ಆಹ್ವಾನ

ಕೊಪ್ಪಳ, ಏ.18 (ಕರ್ನಾಟಕ ವಾರ್ತೆ) : ಕೊಪ್ಪಳದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ವಿವಿಧ ಯೋಜನೆಗಳಡಿ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 2015-16ನೇ ಸಾಲಿನಲ್ಲಿ ಸಾಲ ಸೌಲಭ್ಯ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ನಿಗಮದ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ, ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆ, ಮೈಕ್ರೋ ಕ್ರೇಡಿಟ್ ಕಿರುಸಾಲ ಯೋಜನೆ, ಹಾಗೂ ಭೂ ಒಡೆತನ ಯೋಜನೆಗಳಡಿ ಸಾಲ ಪಡೆಯಬಹುದಾಗಿದೆ.
     ಅರ್ಜಿ ಸಲ್ಲಿಸಲು ಮೇ.15 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಠಡಿ ಸಂಖ್ಯೆ 109, ಜಿಲ್ಲಾಡಳಿತ ಭವನ, ಕೊಪ್ಪಳ. ದೂರವಾಣಿ ಸಂಖ್ಯೆ: 08539-221176 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಏ.20 ರಿಂದ ಕಾನೂನು ಸಾಕ್ಷರತಾ ಸಂಚಾರಿ ವಾಹನದ ಪ್ರವಾಸ

ಕೊಪ್ಪಳ, ಏ.18 (ಕರ್ನಾಟಕ ವಾರ್ತೆ) : ಬೆಂಗಳೂರಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆರಂಭಿಸಲಾಗಿರುವ ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನವು ಏ.20 ರಂದು ಜಿಲ್ಲೆಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 09.30 ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಸಪ್ಪನ್ನವರ ಅವರು ವಾಹನಕ್ಕೆ ಚಾಲನೆ ನೀಡುವರು. 
     ಈ ವಾಹನವು ಏ.20 ರಿಂದ 22 ರವರೆಗೆ ಜಿಲ್ಲೆಯ ವಿವಿದೆಡೆಗಳಲ್ಲಿ ಸಂಚರಿಸಿ, ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮದ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ. ಏ.20 ರಂದು ಬೆಳಿಗ್ಗೆ 10 ಗಂಟೆಗೆ ಚುಕನಕಲ್ ಗ್ರಾಮದಲ್ಲಿ, ಅದೇ ದಿನ ಮದ್ಯಾಹ್ನ 3 ಗಂಟೆಗೆ ಹೂವಿನಾಳ, ಸಂಜೆ 6 ಗಂಟೆಗೆ ಎಂ.ಹೊಸಳ್ಳಿ. ಏ.21 ರಂದು  ಬೆಳಿಗ್ಗೆ 10 ಗಂಟೆಗೆ ಹಲಗೇರಿ, ಮದ್ಯಾಹ್ನ 2 ಗಂಟೆಗೆ ಹಣವಾಳ, ಸಂಜೆ 6 ಗಂಟೆಗೆ ಹಂದ್ರಾಳ ಗ್ರಾಮದಲ್ಲಿ ಹಾಗೂ ಏ.22 ರಂದು ಬೆಳಿಗ್ಗೆ 10 ಗಂಟೆಗೆ ಕೋಳೂರು ಮದ್ಯಾಹ್ನ 2 ಗಂಟೆಗೆ ಕೊಪ್ಪಳ ಎಸ್.ಸಿ/ಎಸ್.ಟಿ ಮಹಿಳಾ ವಸತಿ ನಿಲಯದಲ್ಲಿ ಹಾಗೂ ಸಂಜೆ 7 ಗಂಟೆಗೆ ಚಿಲವಾಡಗಿ ಗ್ರಾಮದಲ್ಲಿ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಪ್ರಕಟಣೆ ತಿಳಿಸಿದೆ.

ಬ್ಯಾಂಕಿಂಗ್ ಪರೀಕ್ಷೆ ಅಧ್ಯಯನ ಪುಸ್ತಕ ಮಾರಾಟಕ್ಕೆ ಲಭ್ಯ

ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ವು ಹೊರತಂದಿರುವ ಬ್ಯಾಂಕಿಂಗ್ ಪರೀಕ್ಷಾ ಅಧ್ಯಯನ ಪುಸ್ತಕ 336 ಪುಟದ ‘ಮುಕ್ತಭಂಡಾರ’ವನ್ನು ಹೊರತಂದಿರುತ್ತದೆ.  ವಿವಿ ಕುಲಪತಿಗಳ ಆದೇಶದಂತೆ 300 ರೂ. ದರ ನಿಗದಿಪಡಿಸಲಾಗಿದೆ. 
      ಪುಸ್ತಕಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಕಛೇರಿ ವೇಳೆಯಲ್ಲಿ ಕೊಳ್ಳಬಹುದು ಎಂದು ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಣಸಿನಕಾಯಿ ಬೆಳೆ ಉತ್ತಮ ಇಳುವರಿಗಾಗಿ ರೈತರಿಗೆ ಸಲಹೆಗಳು

ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಮೆಣಸಿನಕಾಯಿ ಬೆಳೆ ರೈತರಿಗೆ ಉತ್ತಮ ಲಾಭದಾಯಕ ಬೆಳೆಯಾಗಿದ್ದು, ಉತ್ತಮ ಇಳುವರಿಗಾಗಿ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಮೆಣಸಿನಕಾಯಿ ಬೆಳೆ ಬೇಸಾಯಕ್ಕೆ ಪ್ರತಿ ಎಕರೆಗೆ  ಉತ್ತಮ ತಳಿಗಳ ಬೀಜ 160 ಗ್ರಾಂ. ಅಥವಾ ಹೈಬ್ರಿಡ್ ಬೀಜ 100 ಗ್ರಾಂ, ಕೊಟ್ಟಿಗೆ ಗೊಬ್ಬರ (10 ಟನ್), ಎರೆಹುಳು ಗೊಬ್ಬರ (1 ಟನ್), ಬೇವಿನ ಹಿಂಡಿ (2.5 ಕ್ವಿಂಟಾಲ್), ರಾಸಾಯನಿಕ ಗೊಬ್ಬರ (ಕೆಜಿ) -ಸಾರಜನಕ-60 ಕೆ.ಜಿ. : ರಂಜಕ-30 P.É.ಜಿ : ಪೊಟ್ಯಾಷ್-30 ಕೆ.ಜಿ. ಬಳಸಬೇಕು.  ಸಸಿ ತಯಾರಿಕೆ ಮಾಡುವಾಗ  ಒಂದು ಎಕರೆ ಪ್ರದೇಶಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 7.5 ಮೀ ಉದ್ದ, 1.2 ಮೀ. ಅಗಲ ಮತ್ತು 10 ಸೆಂ.ಮೀ. ಎತ್ತರದ ಸುಮಾರು 6 ಸಸಿ ಮಡಿಗಳನ್ನು ತಯಾರಿಸಬೇಕು. ಪ್ರತಿ ಮಡಿಗೆ 30 ಕೆ.ಜಿಯಷ್ಟು ಕೊಟ್ಟಿಗೆ ಗೊಬ್ಬರ, ಅರ್ಧ ಕೆ.ಜಿ. ಯಷ್ಟು 15:15:15 ಸಂಯುಕ್ತ ರಸಗೊಬ್ಬರ ಮತ್ತು 25 ಗ್ರಾಂ ಕಾರ್ಬೋಫ್ಯುರಾನ್ ಹರಳುಗಳನ್ನು ಬೆರೆಸಿ 5 ಸೆಂ.ಮೀ. ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಬೇಕು. 4-5 ವಾರದ ಸಸಿಗಳು ನಾಟಿ ಮಾಡುವುದು ಸೂಕ್ತವಾಗಿದೆ.  ನಾಟಿ ಮಾಡುವ ಸಂದರ್ಭದಲ್ಲಿ  ಕಪ್ಪು ಮಣ್ಣಿನಲ್ಲಿ 90 * 90 ಸೆಂ.ಮೀ. ಮತ್ತು ಕೆಂಪು ಮಣ್ಣಿನಲ್ಲಿ 75 * 75 ಸೆಂ.ಮೀ. ಅಂತರದ ಸಾಲುಗಳನ್ನು ನಿರ್ಮಿಸಿ ಪ್ರತಿ ಗುಣಿಗೆ ಎರಡು ಬೊಗಸೆ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಬೇಕು. ನಾಟಿ ಮಾಡುವ ಪೂರ್ವ ಪ್ರತಿ ಎಕರೆಗೆ 2.5 ಕ್ವಿಂಟಾಲ್ ಬೇವಿನ ಹಿಂಡಿ ಹಾಗೂ 1 ಟನ್ ಎರೆಹುಳು ಗೊಬ್ಬರ ಹಾಕುವುದರಿಂದ ರಸ ಹೀರುವ ಕೀಟಗಳ ಬಾಧೆ ಕಡಿಮೆಯಾಗಿ ಮುಟುರು ರೋಗ ಹತೋಟಿಯಾಗುವುದು. ನಾಟಿ ಮಾಡಿದ ಒಂದು ವಾರದ ನಂತರ ಶಿಫಾರಸ್ಸು ಮಾಡಿದ ಅರ್ಧದಷ್ಟು ಸಾರಜನಕ ಹಾಗೂ ಪೂರ್ತಿ ರಂಜಕ ಮತ್ತು ಪೊಟ್ಯಾಷ್ ಗೊಬರ ಹಾಕಬೇಕು.  ಉಳಿದರ್ಧ ಸಾರಜನಕವನ್ನು ನಾಟಿ ಮಾಡಿದ 6 ವಾರಗಳಲ್ಲಿ ಮಣ್ಣಿನ ತೇವಾಂಶ ಸಾಕಷ್ಟು ಇದ್ದಾಗ ಕೊಡಬೇಕು. ಕಳೆ ನಿಯಂತ್ರಣಕ್ಕಾಗಿ  ರಾಸಾಯನಿಕ ಕಳೆ ನಿಯಂತ್ರಕಗಳಾದ ಅಲಾಕ್ಲೋರ್ (1 ಲೀ./ಎಕರೆಗೆ) ಅಥವಾ ಪೆಂಡಿಮಿಥಾಲಿನ್ (400 ಮಿ.ಲೀ/ಎಕರೆಗೆ) 350 ಲೀ. ನೀರಿನಲ್ಲಿ ಬೆರೆಸಿ ನಾಟಿ ಮಾಡುವ ಮುನ್ನ ಸಿಂಪಡಿಸಬೇಕು.
       ನೀರು ನಿರ್ವಹಣೆಗೆ  ಮಣ್ಣು ಹಾಗೂ ಹವಾಗುಣವನ್ನಾಧರಿಸಿ 5-7 ದಿವಸಗಳಿಗೊಮ್ಮೆ ನೀರು ಹಾಯಿಸಿ ಕಪ್ಪು ಮಣ್ಣಿನಲ್ಲಿ 12-15 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಮೆಣಸಿನಕಾಯಿ ಹೂ ಬಿಡುವ ಹಂತದಲ್ಲಿರುವಾಗ ಪ್ಲಾನೋಫಿಕ್ಸ್ (ಎನ್.ಎ.ಎ.) ಅನ್ನು ಪ್ರತೀ ಲೀ ನೀರಿಗೆ 50 ಎಮ್.ಜಿ. ದ್ರಾವಣ ತಯಾರಿಸಿ ಹೆಚ್ಚು ಹೂವಿರುವ ಸಮಯದಲ್ಲಿ ಎರಡು ಸಲ 15 ದಿನಗಳ ಅಂತರದಲ್ಲಿ ಸಿಂಪಡಿಸುವದರಿಂದ ಹೂ ಉದುರುವುದು ಕಡಿಮೆಯಾಗಿ ಇಳುವರಿ ಹೆಚ್ಚುತ್ತದೆ.

ಕೀಟ ನಿರ್ವಹಣಾ ಕ್ರಮಗಳು:  ರಸಹೀರುವ ಕೀಟಗಳ ನಿರ್ವಹಣೆಗಾಗಿ ಸಸಿಮಡಿಯಲ್ಲಿ ಬೀಜವನ್ನು ಬಿತ್ತನೆಗೆ ಮುಂಚೆ ಪ್ರತಿ ಕೆ.ಜಿ. ಬೀಜಕ್ಕೆ 5 ಮಿ.ಲೀ. ಇಮಿಡಾಕ್ಲೋಪ್ರಿಡ್ 600 ಎಫ್.ಎಸ್. ದಿಂದ ಬೀಜೋಪಚಾರ ಮಾಡಿ ಬಿತ್ತಬೇಕು.  ನಾಟಿ ಮಾಡುವ ಸಮಯದಲ್ಲಿ ಸಸಿಗಳನ್ನು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.25 ಮಿ.ಲೀ. ಪ್ರತಿ ಲೀ. ನೀರಿನ ದ್ರಾವಣದಲ್ಲಿ ಐದು ನಿಮಿಷಗಳವರೆಗೆ ನೆನೆಸಿ ನಾಟಿ ಮಾಡಬೇಕು.  ಮೆಣಸಿನ ಗಿಡದ ಸಸಿಗಳನ್ನು ನಾಟಿ ಮಾಡುವಾಗ ಆಫ್ರಿಕನ್ ಟಾಲ್ ಚೆಂಡು ಹೂ ಸಸಿಗಳನ್ನು ಮೆಣಸಿನ ಗಿಡಗಳ ಪ್ರತಿ 16 ಸಾಲಿಗೆ ಒಂದು ಸಾಲಿನಂತೆ ಬಲೆ ಬೆಳೆಯಾಗಿ ಬೆಳೆಯಬೇಕು ಹಾಗೂ ಚೆಂಡು ಹೂಗಳು ಅರಳಿದಂತೆ ಕಿತ್ತು ತೆಗೆಯುತ್ತಿರಬೇಕು.  ಸಿಂಪರಣೆ ಮಾಡಬೇಕಾದಲ್ಲಿ ನಾಟಿ ಮಾಡಿದ 5ನೇ ವಾರಕ್ಕೆ 4.0 ಮಿ.ಲೀ ಬೇವು ಮೂಲದ ಕೀಟನಾಶಕ, 6ನೇ ವಾರಕ್ಕೆ 0.5 ಗ್ರಾಂ. ಡೈಪೆಂಥಿಯುರಾನ್ 50 ಡಬ್ಲ್ಯೂ.ಪಿ., 11ನೇ ವಾರಕ್ಕೆ 2 ಮಿ.ಲೀ. ಪ್ರೊಫೆನೋಫಾಸ್ 50 ಇ.ಸಿ. ಮತ್ತು 14ನೇ ವಾರಕ್ಕೆ 4 ಮಿ.ಲೀ. ಬೇವಿನ ಮೂಲದ ಕೀಟನಾಶಕವನ್ನು ಪ್ರತಿ ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ಸಮಗ್ರ ರೋಗ ನಿಯಂತ್ರಣ ಕ್ರಮಗಳು:  ಏರು ಸಸಿ ಮಡಿಯನ್ನು ಬೇಸಿಗೆಯಲ್ಲಿ ತಯಾರು ಮಾಡಿ, ತಿಪ್ಪೆಗೊಬ್ಬರ ಹಾಕಿ ಚೆನ್ನಾಗಿ ನೀರು ಹಾಕಿ ಪ್ಲಾಸ್ಟಿಕ್‍ನಿಂದ ಗಾಳಿಯಾಡದಂತೆ 45 ರಿಂದ 50 ದಿನ ಮುಚ್ಚಿ ಇಡುವುದರಿಂದ ಮಣ್ಣಿನಲ್ಲಿ ಸಸಿ ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರಗಳನ್ನು ನಾಶಮಾಡಬಹುದು.  ಬೀಜಗಳಿಗೆ 2 ಗ್ರಾಂ ಕಾರ್ಬೆಂಡಾಜಿಮ್ ಅಥವಾ 2 ಗ್ರಾಂ. ಕ್ಯಾಪ್ಟಾನ್ ಅಥವಾ 2 ಗ್ರಾಂ. ರಿಡಾಮಿಲ್ ಎಂ.ಜೆಡ್ ಮತ್ತು 4 ಗ್ರಾಂ. ಟ್ರೈಕೋಡರ್ಮಾ ಜೈವಿಕ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೀಜದ ಜೊತೆಗಿರುವ ರೋಗಾಣುಗಳನ್ನು ಹಾಗೂ ಮಣ್ಣಿನಿಂದ ಬರುವ ರೋಗಾಣುಗಳನ್ನು ನಿಯಂತ್ರಿಸಬಹುದು.  ಸಸಿ ಮಡಿಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸಸಿ ಕೊಳೆ ರೋಗವನ್ನು ನಿಯಂತ್ರಿಸಬಹುದು. ಸಸಿ ಸಾಯುವ ರೋಗ ಹೆಚ್ಚಾದಲ್ಲಿ 2 ಗ್ರಾಂ ರಿಡೊಮಿಲ್ ಎಂ.ಜೆಡ್ ಪ್ರತಿ ಲೀಟರ್ ನೀರಿಗೆ ಹಾಕಿ ಸಸಿ ಸಾಯುವ ಹಾಗು ಅದರ ಸುತ್ತಲಿನ ಸಸಿಗಳಿಗೆ ಹಾಕುವುದರಿಂದ ರೋಗ ನಿಯಂತ್ರಣವಾಗುವುದು..  ಬೂದಿರೋಗದ ನಿಯಂತ್ರಣಕ್ಕಾಗಿ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾರ್ಬೆನ್‍ಡಜಿಮ್ ಅಥವಾ 1 ಗ್ರಾಂ ಬೆನೊಮಿಲ್ ಅಥವಾ 1 ಗ್ರಾಂ ಟ್ರೈಡೆಮೆಫಾನ್ ಅಥವಾ 1 ಮಿ.ಲೀ. ಪ್ರೊಪಿಕೋನಾಜೋಲ್ ಪ್ರತಿ ಲೀಟರ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.  ಚಿಬ್ಬರೋಗ ಅಥವಾ ತುದಿ ಸಾಯುವ ಮತ್ತು ಹಣ್ಣು ಕೊಳೆಯುವ ರೋಗದ ನಿಯಂತ್ರಣಕ್ಕಾಗಿ 1 ಗ್ರಾಂ ಕಾರ್ಬೆಂಡಾಜಿಮ್ ಅಥವಾ 1 ಗ್ರಾಂ ಬೆನೋಮಿಲ್ ಅಥವಾ 1 ಮಿ.ಲೀ. ಹೆಕ್ಸಾಕೋನಾಜೋಲ್ ಪ್ರತಿ ಲೀಟರ ನೀರಿಗೆ ಹಾಕಿ ಸಿಂಪಡಿಸಬೇಕಲು.  ಎಲೆ ಚುಕ್ಕೆ ರೋಗಗಳ ನಿಯಂತ್ರಣಕ್ಕಾಗಿ 2.5 ಗ್ರಾಂ. ಮೆಂಕೋಜೆಬ್ ಅಥವಾ 3.0 ಗ್ರಾಂ ತಾಮ್ರದ ಆಕ್ಸಿಕ್ಲೊರೈಡ್ ಪ್ರತಿ ಲೀಟರ ನೀರಿಗೆ ಹಾಕಿ ಸಿಂಪಡಿಸಬೇಕು.
          ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ಸುಧಾಕರ್ ಟಿ (9916180756), ಎಮ್. ಬಿ ಪಾಟೀಲ (9448690684), ರೋಹಿತ್ ಕೆ.ಎ (9845194328)  ಮತ್ತು ಯೂಸುಫ್‍ಅಲಿ ನಿಂಬರಗಿ (7899600134), ರವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.

Friday, 17 April 2015

ಬೆಳೆ ಹಾನಿ ಪರಿಹಾರ : ಸರ್ವೆ ಅಂತಿಮ ವರದಿ ನಂತರ ವಿಶೇಷ ಪ್ಯಾಕೇಜ್ ಬಗ್ಗೆ ನಿರ್ಧಾರ- ಸಿಎಂ


ಕೊಪ್ಪಳ, ಏ.17 (ಕರ್ನಾಟಕ ವಾರ್ತೆ) : ಕಳೆದ ಏ. 12 ರಿಂದ 15 ರವರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ವೆ ಅಂತಿಮ ವರದಿ ಬಂದ ನಂತರ ವಿಶೇಷ ಪ್ಯಾಕೇಜ್ ನೀಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾದ ಭತ್ತ, ತೋಟಗಾರಿಕೆ ಬೆಳೆ ಹಾನಿ ಕುರಿತಂತೆ ಶುಕ್ರವಾರದಂದು ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಗಂಗಾವತಿಯ ಎಪಿಎಂಸಿ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

     ಕಳೆದ ಐದಾರು ದಿನಗಳಲ್ಲಿ ಆಲಿಕಲ್ಲು ಸಹಿತ ಸುರಿದ ಅಕಾಲಿಕ ಭಾರಿ ಮಳೆಯಿಂದಾಗಿ ಕೊಪ್ಪಳ, ಬಳ್ಳಾರಿ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಬೆಳೆ ಹಾನಿ ಅಲ್ಲದೆ ಜೀವ ಹಾನಿ ಉಂಟಾಗಿದೆ.  ಅದರಲ್ಲೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಭತ್ತದ ಬೆಳೆ ಹೆಚ್ಚು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಗಂಗಾವತಿ, ಸಿಂಧನೂರು, ಮಾನ್ವಿ ಹಾಗೂ ಶಿರಗುಪ್ಪ ತಾಲೂಕುಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ವೀಕ್ಷಣೆ ಮಾಡಲಾಗಿದೆ.  ಅಲ್ಲದೆ ಇಲ್ಲಿನ ಬಸಾಪಟ್ಟಣ, ವಡ್ಡರಹಟ್ಟಿ, ಶ್ರೀರಾಮನಗರ ಗ್ರಾಮಗಳ ಹಾನಿಗೊಳಗಾದ ಭತ್ತದ ಗದ್ದೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.  ಅಧಿಕಾರಿಗಳು ಸದ್ಯ ನೀಡಿರುವ ವರದಿಯಂತೆ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟಾರೆ 56112 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದ್ದರೆ, 1450 ಹೆ. ತೋಟಗಾರಿಕೆ ಹಾನಿ ಉಂಟಾಗಿದೆ.  14 ಜೀವ ಹಾನಿ ಸಂಭವಿಸಿದ್ದು, 70 ಜಾನುವಾರುಗಳು ಸಾವನ್ನಪ್ಪಿವೆ.  774 ಮನೆಗಳಿಗೆ ಹಾನಿಯಾಗಿದೆ.  ಕೃಷಿ ಬೆಳೆಯ ಪೈಕಿ ಭತ್ತದ ಬೆಳೆ ಹೆಚ್ಚು ನಷ್ಟವಾಗಿದ್ದು, ತೋಟಗಾರಿಕೆಯಲ್ಲಿ ದ್ರಾಕ್ಷಿ, ಮಾವು, ಕಬ್ಬು ಬೆಳೆಗಳು ಹಾಳಾಗಿವೆ.  ಜೀವ ಹಾನಿಗೆ ಈ ಹಿಂದೆ 1. 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು ಇದೀಗ ಪರಿಹಾರ ಮೊತ್ತವನ್ನು 4 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.  ಬೆಳೆ ಹಾನಿಗೆ ಸಂಬಂಧಿಸಿದಂತೆ ಪ್ರತಿ ಹೆಕ್ಟೇರ್‍ಗೆ 9 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು.  ನೂತನ ಮಾರ್ಗಸೂಚಿಯನ್ವಯ ಇದನ್ನು 13500 ರೂ.ಗೆ ಹೆಚ್ಚಿಸಲಾಗಿದೆ.  ಅದೇ ರೀತಿ ತೋಟಗಾರಿಕೆ ಬೆಳೆಗೆ 12 ಸಾವಿರ ರೂ. ನಿಂದ 18 ಸಾವಿರ ರೂ. ಗೆ ಪರಿಹಾರ ಮೊತ್ತ ಏರಿಕೆಯಾಗಿದೆ.  ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.  ರೈತರು ಬೆಳೆ ಹಾನಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.  ಇನ್ನು 2-3 ದಿನಗಳ ಒಳಗಾಗಿ ಸರ್ವೆ ಕಾರ್ಯದ ಅಂತಿಮ ವರದಿ ಬರಲಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು, ಬೆಳೆ ಹಾನಿಗೆ ಪರಿಹಾರ ವಿತರಣೆ ಕುರಿತಂತೆ ವಿಶೇಷ ಪ್ಯಾಕೇಜ್ ನೀಡುವ ಕುರಿತು ಅಥವಾ ಹೆಚ್ಚಿನ ಪರಿಹಾರ ನೀಡುವ ಕುರಿತು ಸೂಕ್ತ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.  ಗುತ್ತಿಗೆ ಆಧಾರದಲ್ಲಿ ಬೇಸಾಯ ಮಾಡಿ, ಭಾರಿ ಮಳೆಯಿಂದ ನಷ್ಟ ಅನುಭವಿಸಿರುವ ರೈತರನ್ನೂ ಸಹ ಪರಿಹಾರ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.  ಜೀವ ಹಾನಿ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ವಿತರಣೆ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.


     ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ಎನ್.ಎಸ್. ಭೋಸರಾಜ್, ಪ್ರತಾಪಗೌಡ ಪಾಟೀಲ್, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜು ನಾಗಪ್ಪ, ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಎಸ್‍ಪಿ ಡಾ. ಪಿ. ರಾಜಾ, ರಾಯಚೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

     ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಗಾವತಿ ತಾಲೂಕಿನ ಬಸಾಪಟ್ಟಣ, ಹೊಸಕೇರಾ, ಶ್ರೀರಾಮನಗರ ಮೊದಲಾದ ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾದ ಬಗ್ಗೆ ಕ್ಷೇತ್ರಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಸವಣ್ಣ- ಭಗೀರಥ ಜಯಂತಿ ಅರ್ಥಪೂರ್ಣ ಆಚರಣೆ- ಸುರೇಶ್ ಇಟ್ನಾಳ್


ಕೊಪ್ಪಳ ಏ. 17 (ಕರ್ನಾಟಕ ವಾರ್ತೆ) : ಇದೇ ಏ. 21 ರಂದು ಬಸವೇಶ್ವರರ ಜಯಂತಿ ಹಾಗೂ ಏ. 25 ರಂದು ಭಗೀರಥ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಹೇಳಿದರು. 
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಬಸವೇಶ್ವರ ಹಾಗೂ ಭಗೀರಥ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಬಸವೇಶ್ವರ ಜಯಂತಿ ಉತ್ಸವವನ್ನು ಏ.21 ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ಸರಕಾರ 50 ಸಾವಿರ ರೂ. ಹಾಗೂ ತಾಲೂಕು ಕೇಂದ್ರದಲ್ಲಿ ಆಚರಿಸಲು 25 ಸಾವಿರ ರೂ. ಬಿಡುಗಡೆ ಮಾಡಿದೆ. ಜಯಂತಿ  ನಿಮಿತ್ತ  ಬಸವೇಶ್ವರ ಅವರ  ಭಾವಚಿತ್ರಗಳ ಮೆರವಣಿಗೆ ಕೋಟೆ ರಸ್ತೆಯ ಶ್ರೀಮಹೇಶ್ವರ ದೇವಸ್ಥಾನದಿಂದ ಜವಾಹರ ರಸ್ತೆ ಮೂಲಕ ಶ್ರೀಗವಿಮಠದ ಆವರಣದವರೆಗೆ ಆಯೋಜಿಸಲಾಗುವುದು. ಮೆರವಣಿಗೆ ಸಂಜೆ 4 ಗಂಟೆಗೆ ನಡೆಯಲಿದ್ದು, ಸಂಜೆ 6 ಗಂಟೆಗೆ ಶ್ರೀಗವಿಮಠದ ಆವರಣದಲ್ಲಿ ಸಮಾರಂಭ ನಡೆಯಲಿದೆ.  ಮೆರವಣಿಗೆಯಲ್ಲಿ ವೀರಗಾಸೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆ ಆಕರ್ಷಕಗೊಳಿಸಲಿವೆ. ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ನಾನಾ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.  ಮೆರವಣಿಗೆ ಹಾಗೂ ಸಮಾರಂಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲ್ಗೊಳ್ಳಬೇಕು.   ನಗರದ ಪ್ರಮುಖ ವೃತ್ತಗಳಿಗೆ ದೀಪ ಅಲಂಕಾರ ಹಾಗೂ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್,  ಕುಡಿವ ನೀರಿನ ವ್ಯವಸ್ಥೆ, ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಬಸವ ಜಯಂತ್ಯೋವ ಸಮಿತಿಯ ಬಸವರಾಜ ಬೊಳ್ಳಳ್ಳಿ, ನಗರಸಭೆ ಪೌರಾಯುಕ್ತ ರಮೇಶ್ ಪಟೇದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ,  ತಹಸೀಲ್ದಾರ್ ಪುಟ್ಟರಾಮಯ್ಯ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಿಕಿ ಡಿ.ಪಿ.ವಸಂತ ಪ್ರೇಮಾ, ಜೆಸ್ಕಾಂ ಇಇ ಪತ್ತಾರ, ಮುಖಂಡರಾದ ಗವಿಸಿದ್ಧಪ್ಪ ಕೊಪ್ಪಳ, ಪಂಪಾಪತಿ ಹೊನ್ನಳಿ, ಶಿವಾನಂದ ಹೊದ್ಲೂರು, ಬಸಯ್ಯ ಸಸಿಮಠ, ಬಸವರಾಜಪ್ಪ ಎಂಜಿನಿಯರ್, ಬಸವರಾಜ ಸಜ್ಜನ್, ಡಾ.ಶಾಮಸುಂದರ, ವಿಠ್ಠಪ್ಪ ಗೊರಂಟ್ಲಿ, ಬಸವರಾಜ ಶೀಲವಂತರ, ವಿಶ್ವನಾಥ ನಿಲೋಗಲ್, ರಾಜೇಶ್ ಸಸಿಮಠ ಇತರರು ಇದ್ದರು.
---------
ಭಗೀರಥ ಮಹರ್ಷಿ ಜಯಂತಿ : ಭಗೀರಥ ಮಹರ್ಷಿ ಜಯಂತಿ ಆಚರಿಸಲು ಸರಕಾರ ಆದೇಶ ನೀಡಿದ್ದು, ಏ.25 ರಂದು ಜಿಲ್ಲಾ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ ಹೇಳಿದರು.
      ಇದೇ ಮೊದಲ ಬಾರಿಗೆ ಸರಕಾರದಿಂದ ಭಗೀರಥ ಮಹರ್ಷಿ ಜಯಂತಿ ಆಚರಿಸಲು ಆದೇಶ ನೀಡಿದೆ.  ಏ.25 ರಂದು ಜಯಂತಿ ಆಚರಿಸಲಾಗುತ್ತಿದೆ.  ಅಂದು ಬೆಳಗ್ಗೆ 8 ಗಂಟೆಗೆ ಸಿರಸಪ್ಪಯ್ಯನ ಮಠದಿಂದ ಮೆರವಣಿಗೆ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಜಯಂತ್ಯೋತ್ಸವ ಸಮಾರಂಭ ಜರುಗಲಿದೆ. ಉಪನ್ಯಾಸಕರಾಗಿ ಹನುಮಾಕ್ಷಿ ಗೋಗಿ ಆಗಮಿಸಲಿದ್ದು, ಮೆರವಣಿಗೆಗೆ ಹಲವು ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆ ಆಕರ್ಷಕಗೊಳಿಸಲಿವೆ. ಸಮಾಜ ಬಾಂಧವರು, ಸಾರ್ವಜನಿಕರು ಮೆರವಣಿಗೆ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
       ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ, ಗಣ್ಯರಾದ ಮರ್ದಾನಪ್ಪ, ವೆಂಕೋಬ ಮರಳಿ, ಯಂಕಪ್ಪ ಕಟ್ಟಿಮನಿ, ಯಮನೂರಪ್ಪ, ಶಿವಣ್ಣ, ಯಮನೂರಪ್ಪ ಹುಳೂರಿ, ರಾಮಲಿಂಗಪ್ಪ, ತಿಪ್ಪಣ್ಣ, ವೆಂಕಟೇಶ ಮಾನಹಳ್ಳಿ, ಶರಣಪ್ಪ ಕಟ್ಟಿಮನಿ, ಎಚ್.ಬಿ.ಪಾಟೀಲ್, ಕನಕಪ್ಪ ಮುಂಡರಗಿ, ಶರಣಪ್ಪ ಮುಂತಾದವರು ಭಾಗವಹಿಸಿದರು.

Thursday, 16 April 2015

ಮಳೆಯಿಂದ ಬೆಳೆ ಹಾನಿ : ಸಮರ್ಪಕ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ- ಕೃಷ್ಣ ಭೈರೇಗೌಡಕೊಪ್ಪಳ ಏ. 16 (ಕರ್ನಾಟಕ ವಾರ್ತೆ): ಕಳೆದ ಏ. 12 ಮತ್ತು 13 ರಂದು ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾಗಿರುವ ಬೆಳೆ, ಮನೆ ಹಾಗೂ ಇತರೆ ಹಾನಿಯ ಕುರಿತು ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
     ಮಳೆಯಿಂದ ಹಾನಿಗೊಳಗಾಗಿರುವ ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಿದ್ದಿಕೇರಿ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
     ಗಂಗಾವತಿ ತಾಲೂಕಿನ ಸಾಣಾಪುರ, ಮಲ್ಲಾಪುರ, ಸಂಗಾಪುರ, ಸಿದ್ದಿಕೇರಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  11 ಮಿ.ಮೀ. ವಾಡಿಕೆಯ ಬದಲಿಗೆ 52 ಮಿ.ಮೀ. ಮಳೆ ಸುರಿದಿದೆ.   ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದ್ದರಿಂದ ತೀವ್ರ ಹಾನಿ ಸಂಭವಿಸಿದೆ.  ಈಗಾಗಲೆ ಅಧಿಕಾರಿಗಳು ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಸರ್ವೆ ಕಾರ್ಯವನ್ನು ಪ್ರಾರಂಭಿಸಿದ್ದು, ಇನ್ನೆರಡು ದಿನಗಳ ಒಳಗಾಗಿ ಸರ್ವೆ ಕಾರ್ಯ ಪೂರ್ಣವಾಗಲಿದೆ.  ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಈಗಾಗಲೆ ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಜಿಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಪ್ರಾಥಮಿಕ ಹಂತದ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 200 ಕೋಟಿ ರೂ. ನಷ್ಟ ಸಂಭವಿಸಿದೆ.  ಸರ್ವೆ ಪೂರ್ತಿ ಆದ ಮೇಲೆ ಅಂತಿಮ ವರದಿ ಪರಿಶೀಲಿಸಿದ ನಂತರ, ಹಾನಿಯ ಅಂದಾಜು ನಿಖರವಾಗಿ ಗೊತ್ತಾಗಲಿದೆ.  ಮಳೆಯಿಂದ 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದ್ದು, ಮನೆ ಹಾನಿಗೆ ಸಂಬಂಧಿಸಿದ ಪರಿಹಾರ ವಿತರಣೆ ಕಾರ್ಯವನ್ನು ನಾಳೆಯಿಂದಲೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರವನ್ನು ಅಂದರೆ ಆಹಾರ ಒದಗಿಸುವ ವ್ಯವಸ್ಥೆ ಕೈಗೊಳ್ಳಲು ಸಹ ತಿಳಿಸಲಾಗಿದೆ.  ಬೆಳೆ ಹಾನಿ ಅನುಭವಿಸಿರುವ ರೈತರು ಹೆಚ್ಚಿನ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ.  ಮುಖ್ಯಮಂತ್ರಿಗಳು ಏ. 17 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಲಿದ್ದು, ಅದೇ ದಿನದಂದು ಬೆಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು.  ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.  ಕೇಂದ್ರ ಸರ್ಕಾರ ಸ್ಪಂದಿಸದಿದ್ದಲ್ಲಿ, ವಿಶೇಷ ನಿಯೋಗ ಹೋಗಲು ಕ್ರಮ ಕೈಗೊಳ್ಳಲಾಗುವುದು.  ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ, ಇದರ ಬಗ್ಗೆಯೂ ಸಹ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೆ ಶೇ. 70 ರಷ್ಟು ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಳೆಯಿಂದ ಬೆಳೆ ಹಾನಿ ವೀಕ್ಷಿಸಲು ಏ.17 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ

ಕೊಪ್ಪಳ, ಏ.16 (ಕರ್ನಾಟಕ ವಾರ್ತೆ) : ಕಳೆದ ಏ. 12 ಮತ್ತು 13 ರಂದು ಕೊಪ್ಪಳ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾಗಿರುವ ಬೆಳೆ ಹಾನಿಯನ್ನು ಖುದ್ದು ವೀಕ್ಷಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ. 17 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದಾರೆ.
     ಅಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಹೊರಟು, ಬೆ. 10 ಗಂಟೆಗೆ ಗಿಣಿಗೇರಾ ಬಳಿಯ ಎಂಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು.  ನಂತರ ಹೆಲಿಕಾಪ್ಟರ್ ಮೂಲಕ ಗಂಗಾವತಿ ತಾಲೂಕಿನಲ್ಲಿ ಮಳೆಯಿಂದಾಗಿ ಕೃಷಿ ಬೆಳೆ ಹಾನಿಯಾಗಿರುವ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸುವರು.  ಬೆ. 11-30 ಗಂಟೆಗೆ ಗಂಗಾವತಿಯ ಎಪಿಎಂಸಿ ಹೆಲಿಪ್ಯಾಡ್‍ಗೆ ಆಗಮಿಸುವರು. ತರುವಾಯ ಗಂಗಾವತಿ ತಾಲೂಕಿನಲ್ಲಿ ಮಳೆಯಿಂದಾಗಿ ಕೃಷಿ ಬೆಳೆ ಹಾನಿಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.  ಮಧ್ಯಾಹ್ನ 2 ಗಂಟೆಗೆ ಗಂಗಾವತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು ನಂತರ ಪತ್ರಿಕಾಗೋಷ್ಠಿ ನಡೆಸುವರು.  ಮಧ್ಯಾಹ್ನ 2-45 ಗಂಟೆಗೆ ಹೆಲಿಕಾಪ್ಟರ್ ಮೂಲಕ ಗಿಣಿಗೇರಾ ಬಳಿಯ ಎಂಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವರು.  ಮುಖ್ಯಮಂತ್ರಿಗಳು ಅದೇ ದಿನ ಮಧ್ಯಾಹ್ನ 3-45 ಗಂಟೆಗೆ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಏಪ್ರಿಲ್ ತಿಂಗಳ ಪಡಿತರ ಧಾನ್ಯ ಬಿಡುಗಡೆ

ಕೊಪ್ಪಳ, ಏ. 16 (ಕರ್ನಾಟಕ ವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಏಪ್ರಿಲ್ ತಿಂಗಳಿಗಾಗಿ ಆಹಾರಧಾನ್ಯ, ಸೀಮೆಎಣ್ಣೆ ಮತ್ತು ಸಕ್ಕರೆ ಬಿಡುಗಡೆ ಮಾಡಿದೆ.
ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಕೆ.ಜಿ.ಗೆ ರೂ. 1 ರಂತೆ 29 ಕೆ.ಜಿ ಅಕ್ಕಿ ಮತ್ತು ರೂ. 1 ರಂತೆ 6 ಕೆ.ಜಿ ಗೋಧಿ ಹಾಗೂ ರೂ.13.50 ರಂತೆ 1 ಕೆ.ಜಿ ಸಕ್ಕರೆ ಬಿಡುಗಡೆ ಮಾಡಲಾಗಿದೆ.  ಬಿಪಿಎಲ್ ಪಡಿತರದಾರರಿಗೆ ಏಕ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ರೂ. 1 ರಂತೆ 6 ಕೆ.ಜಿ ಅಕ್ಕಿ, 4 ಕೆ.ಜಿ. ಗೋಧಿ, 01 ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ.  ದ್ವಿ ಸದಸ್ಯರಿಗೆ 14 ಕೆ.ಜಿ ಅಕ್ಕಿ, 6 ಕೆ.ಜಿ. ಗೋಧಿ, 1 ಕೆ.ಜಿ. ಸಕ್ಕರೆ.  ತ್ರಿ ಸದಸ್ಯ ಮತ್ತು ಮೇಲ್ಪಟ್ಟವರಿಗೆ 20 ಕೆ.ಜಿ ಅಕ್ಕಿ, 10 ಕೆ.ಜಿ. ಗೋಧಿ ಹಾಗೂ 1 ಕೆ.ಜಿ ಸಕ್ಕರೆ ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಸದಸ್ಯರಿಗೆ 3 ಲೀ. ಸೀಮೆಎಣ್ಣೆ, 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ಅಂತಹವರಿಗೆ 5 ಲೀಟರ್.  ಬಿಪಿಎಲ್ ಅನಿಲ ರಹಿತ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಜನ ಸದಸ್ಯರಿದ್ದಲ್ಲಿ 3 ಲೀಟರ್ ಹಾಗೂ 3 ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ 05 ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.    ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರದಾರರಿಗೆ 02 ಲೀ. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.  ಸೀಮೆಎಣ್ಣೆ ದರ ಪ್ರತಿ ಲೀಟರ್‍ಗೆ ರೂ.18.00 ರಂತೆ ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

ನಗರ ಆಶ್ರಯ ಯೋಜನೆ : ವಂತಿಗೆ ಹಣ ಭರಿಸಲು ಸೂಚನೆ

ಕೊಪ್ಪಳ, ಏ.16 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದಲ್ಲಿ ನಗರ ಆಶ್ರಯ ಯೋಜನೆಯಡಿ ಆಯ್ಕೆಯಾಗಿರುವ 2000 ಅರ್ಹ ಫಲಾನುಭವಿಗಳು ತಲಾ 30,000 ರೂ. ವಂತಿಗೆ ಹಣವನ್ನು   ಪಾವತಿಸಬೇಕು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ತಿಳಿಸಿದ್ದಾರೆ.
     ನಗರ ಆಶ್ರಯ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಕೊಪ್ಪಳ ನಗರಸಭೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಆಯ್ಕೆಯಾದ ಅರ್ಹ ಫಲಾನುಭವಿಗಳು ನಗರಸಭೆಯ ಸೂಚನಾ ಫಲಕದಲ್ಲಿ ಲಗತ್ತಿಸಲಾಗಿರುವ ಆಯ್ಕೆಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಂಡು 30,000 ರೂ. ವಂತಿಗೆ ಹಣವನ್ನು 15 ದಿನಗಳೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಡಿ.ಡಿ ಮೂಲಕ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದಲ್ಲಿ ಶೇ. 5 ತೆರಿಗೆ ರಿಯಾಯಿತಿ

ಕೊಪ್ಪಳ, ಏ.16 (ಕರ್ನಾಟಕ ವಾರ್ತೆ) : ಕೊಪ್ಪಳ ನಗರಸಭೆಯ ಆಸ್ತಿ ತೆರಿಗೆದಾರರು 2015-16ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.30 ರೊಳಗಾಗಿ ಪಾವತಿಸಿದಲ್ಲಿ ಶೇಕಡಾ 5 ರಷ್ಟು ತೆರಿಗೆ ರಿಯಾಯಿತಿ ಪಡೆಯಬಹುದಾಗಿದೆ.
     ಈಗಾಗಲೇ ಸಾಕಷ್ಟು ಜನ ತೆರಿಗೆದಾರರು ಪ್ರತಿನಿತ್ಯ ನಗರಸಭೆಯಲ್ಲಿ ತೆರಿಗೆ ಭರಿಸಿ ಈ ರಿಯಾಯಿತಿ ಪಡೆದುಕೊಳ್ಳುತ್ತಿದ್ದು, ಈ ಅವಕಾಶವನ್ನು ನಗರದ ಎಲ್ಲಾ ತೆರಿಗೆದಾರರು ಸದುಪಯೋಗ ಮಾಡಿಕೊಳ್ಳಬೇಕು. ಅದೇ ರೀತಿ ನಳದ ಜೋಡಣೆ ಹೊಂದಿರುವವರು ಪ್ರತಿ ತಿಂಗಳು 5 ನೇ ತಾರೀಖಿನೊಳಗಾಗಿ ನೀರಿನ ಕರ ಪಾವತಿಸಿ, ದಂಡದಿಂದ ಮುಕ್ತರಾಗಬಹುದಾಗಿದೆ.
ನಗರಸಭೆಯ ಪರವಾನಿಗೆ/ಲೈಸನ್ಸ್ ಇಲ್ಲದೇ ಉದ್ಯಮ ನಡೆಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಲೈಸನ್ಸ್ ಹೊಂದದೇ ಇರುವವರು, ಲೈಸೆನ್ಸ್ ನವೀಕರಿಸಿಕೊಳ್ಳಬೇಕಾದವರು ಕೂಡಲೆ ಲೈಸನ್ಸ್ ಪಡೆದುಕೊಂಡು ನಗರದ ಅಭಿವೃದ್ಧಿಗೆ ಸಹಕರಿಸಬೇಕು  ಎಂದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

ಏ.17 ರಂದು ಕೊಪ್ಪಳದಲ್ಲಿ ಗ್ರಾಹಕರ ಜಾಗೃತಿ ಕಾರ್ಯಾಗಾರ

ಕೊಪ್ಪಳ, ಏ.16 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರುಗಳ ಸಹಯೋಗದೊಂದಿಗೆ ಗ್ರಾಹಕರ ಜಾಗೃತಿ ಕಾರ್ಯಾಗಾರ ಏ.17 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ಜಿಲ್ಲಾಧಿಕಾರಿ ಆರ್.ಆರ್. ಜನ್ನು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ||ಸುರೇಶ ಇಟ್ನಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ, ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ಆರ್. ಬಂಡಾಚಾರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ ಅವರು ಗ್ರಾಹಕರ ಜಾಗೃತಿ ಆಂದೋಲನದಲ್ಲಿ ಗ್ರಾಹಕರ ಹಿತ ರಕ್ಷಣಾ ಕಾಯ್ದೆ-1986 ಒಂದು ಮೈಲುಗಲ್ಲು  ವಿಷಯ ಕುರಿತು, ವಕೀಲ ವ್ಹಿ.ಎಂ.ಭೂಸನೂರಮಠ ಅವರು ಗ್ರಾಹಕರ ವೇದಿಕೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗಗಳಿಂದ ಗ್ರಾಹಕರ ಪರವಾಗಿ ಬಂದಿರುವ ಮಹತ್ವದ ತೀರ್ಪುಗಳು ವಿಷಯದ ಕುರಿತು. ಅಳವಂಡಿಯ ಸಾವಿತ್ರಿ ಮುಜುಮದಾರ ಅವರು ಗ್ರಾಹಕರ ಜಾಗೃತಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ ವಿಷಯದ ಕುರಿತು. ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಉಮೇಶ ಅವರು ಆಹಾರ ಕಲಬೆರಕೆ ತಡೆಗಟ್ಟುವ ವಿಧಾನಗಳು ಮತ್ತು ಕಲಬೆರಕೆಯಲ್ಲಿ ತೊಡಗಿದವರಿಗೆ ಕಾನೂನನ್ವಯ ವಿಧಿಸಬಹುದಾದ ಶಿಕ್ಷೆಗಳು ಎಂಬ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವರು.

Wednesday, 15 April 2015

ಏ.25 ರಂದು ಹೌಸಿಂಗ್ ಬೋರ್ಡ್ ಮನೆ, ನಿವೇಶನಗಳ ಹಂಚಿಕೆ- ಎಸ್.ಜಿ. ನಂಜಯ್ಯನಮಠ

ಕೊಪ್ಪಳ, ಏ.15 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿಯಿಂದ ಕೊಪ್ಪಳದ ಗಣೇಶ ನಗರ ಹಾಗೂ ಕೆಹೆಚ್‍ಬಿ ಕಾಲೋನಿಯಲ್ಲಿ ಹಂಚಿಕೆ ಮಾಡದೇ ಇರುವ ವಿವಿಧ ಅಳತೆಯ 95 ಮನೆಗಳು ಹಾಗೂ 94 ನಿವೇಶನಗಳನ್ನು ಏ.25 ರಂದು ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದ್ದಾರೆ.
     ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇನ್ನೂ ಹಂಚಿಕೆ ಮಾಡದೇ ಇರುವ ನವನಗರದಲ್ಲಿರುವ 12 ಮನೆಗಳು ಹಾಗೂ 14 ನಿವೇಶನಗಳು ಖಾಲಿ ಇದ್ದು, ಬಹು ದಿನಗಳಿಂದ ಯಾವುದೇ ಕ್ರಮ ಆಗಿಲ್ಲ. ಇದೇ ರೀತಿ ಗಂಗಾವತಿಯಲ್ಲಿ 7 ನಿವೇಶನಗಳು, ಕಾರಟಗಿಯಲ್ಲಿ 9 ನಿವೇಶನಗಳು ಖಾಲಿ ಇದ್ದು, ಇವುಗಳನ್ನು ಕೂಡಾ ಒಂದು ತಿಂಗಳ ಒಳಗಾಗಿ ಸೂಕ್ತ ಕ್ರಮ ಕೈಗೊಂಡು, ಕಾನೂನು ರೀತ್ಯ ಜನತೆಗೆ ತಲುಪಿಸಲಾಗುವುದು.
     ಕೊಪ್ಪಳ ನಗರದ ಡಿ.ಸಿ ಕಛೇರಿ ಹಿಂಭಾಗದಲ್ಲಿರುವ 631 ವಿವಿಧ ರೀತಿಯ ನಿವೇಶನಗಳಿಗೆ  ರಸ್ತೆ ಸಮಸ್ಯೆ ಇದ್ದು, ಹೊಸದಾಗಿ ನಿರ್ಮಿಸಲಾಗುವ 208 ಎಕರೆ ಪ್ರದೇಶದಲ್ಲಿ ರಸ್ತೆಗೆ ಸ್ಥಳ ದೊರಕಿಸಲಾಗುವುದು. ಈಗಾಗಲೆ 208 ಎಕರೆಯಲ್ಲಿ ನಿರ್ಮಿಸಲಾಗುವ ಬಡಾವಣೆ ಪ್ರಕ್ರಿಯೆಗೆ 6(1) ನೋಟಿಫಿಕೇಶನ್ ಮುಗಿದಿದ್ದು, ಶೀಘ್ರದಲ್ಲಿಯೇ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರ್ಶ ವಿದ್ಯಾಲಯ : 6ನೇ ತರಗತಿ ಆಯ್ಕೆಪಟ್ಟಿ ಪ್ರಕಟ

ಕೊಪ್ಪಳ, ಏ.15 (ಕರ್ನಾಟಕ ವಾರ್ತೆ) : ಕೊಪ್ಪಳದ ಆದರ್ಶ ವಿದ್ಯಾಲಯದ 2015-16ನೇ ಸಾಲಿನ 6ನೇ ತರಗತಿ (ಆಂಗ್ಲ ಮಾಧ್ಯಮ-ರಾಜ್ಯ ಪಠ್ಯಕ್ರಮ) ಪ್ರವೇಶಕ್ಕಾಗಿ ಆಯ್ಕೆಯಾದ 80 ವಿದ್ಯಾರ್ಥಿಗಳ ಆಯ್ಕೆಪಟ್ಟಿಯನ್ನು ಕೊಪ್ಪಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಬೆಂಕಿನಗರದ ಆದರ್ಶ ವಿದ್ಯಾಲಯದಲ್ಲಿ ಪ್ರಕಟಿಸಲಾಗಿದೆ. ಅಲ್ಲದೇ ಇಲಾಖಾ ವೆಬ್‍ಸೈಟ್ www.schooleducation.kar.nic.in ನಲ್ಲೂ ವೀಕ್ಷಿಸಬಹುದಾಗಿದೆ.
     ಆಯ್ಕೆಯಾದ ಅಭ್ಯರ್ಥಿಗಳು ಪ್ರವೇಶ ಪಡೆಯಲು ಮೂಲ ದಾಖಲೆಗಳೊಂದಿಗೆ ಜೂನ್ 01 ರಿಂದ 15 ರವರೆಗೆ ಕಛೇರಿ ವೇಳೆಯಲ್ಲಿ ಆದರ್ಶ ವಿದ್ಯಾಲಯ, ಬೆಂಕಿನಗರ, ಕೊಪ್ಪಳ ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಂತೇಶ ಕೆ. ಮುಖ್ಯ ಗುರುಗಳು, ಆದರ್ಶ ವಿದ್ಯಾಲಯ, ಕೊಪ್ಪಳ, ಮೊ.9739909367 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಉಚಿತ ಕಬ್ಬು ಬೇಸಾಯ ತರಬೇತಿ ಶಿಬಿರ

ಕೊಪ್ಪಳ, ಏ.15 (ಕರ್ನಾಟಕ ವಾರ್ತೆ) : ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಕಬ್ಬು ಬೇಸಾಯ ಪದ್ಧತಿಗಳ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಇದೇ ಏಪ್ರಿಲ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
     ಕಬ್ಬು ಬೆಳೆಯ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಸವಳು/ಜವಳು ಭೂಮಿ ನಿರ್ವಹಣೆ, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ಶಿಬಿರದಲ್ಲಿ ಮಾಹಿತಿ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಏ.25 ರೊಳಗಾಗಿ ನೊಂದಾಯಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ -587103 ಮೊ.9482630790 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tuesday, 14 April 2015

ಭಾರಿ ಮಳೆಯಿಂದ ಬೆಳೆ ಹಾನಿ- ಏ. 17 ರೊಳಗೆ ಸಮಗ್ರ ವರದಿ ಸಲ್ಲಿಸಿ : ಶಿವರಾಜ್ ತಂಗಡಗಿ

ಕೊಪ್ಪಳ ಏ. 14 (ಕರ್ನಾಟಕ ವಾರ್ತೆ): ಇದೇ ಏ. 12 ಮತ್ತು 13 ರಂದು ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಬೆಳೆ, ಮನೆ, ಜಾನುವಾರು ಹಾನಿ ಕುರಿತು ಸರ್ವೆ ನಡೆಸಿ, ಏ. 17 ರ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಹಾನಿ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕಳೆದ ಏ. 12 ಮತ್ತು 13 ರಂದು ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಗಂಗಾವತಿ ತಾಲೂಕಿನಲ್ಲಿ ಬಹುತೇಕ ಭತ್ತದ ಬೆಳೆ ನೆಲಕಚ್ಚಿದೆ.  ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ ಸುಮಾರು 27 ಸಾವಿರ ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದ್ದು, ಅಂದಾಜು 169. 47 ಕೋಟಿ ರೂ. ಹಾನಿಯಾಗಿದೆ.  694 ಎಕರೆ ತೋಟಗಾರಿಕೆ ಬೆಳೆ ಹಾನಿಯಿಂದ 31. 4 ಲಕ್ಷ ರೂ. ನಷ್ಟ ಸಂಭವಿಸಿದೆ.  12 ಕುರಿಗಳು, 10 ಆಡುಗಳು ಸಾವನ್ನಪ್ಪಿದ್ದರಿಂದ 1. 24 ಲಕ್ಷ ರೂ. ಹಾನಿಯಾಗಿದೆ.  1 ಪಕ್ಕಾ ಮನೆ ಬಿದ್ದಿದ್ದು, 589 ಕಚ್ಚಾ ಮನೆಗಳು ಹಾನಿಗೊಳಗಾಗಿವೆ.  ಇದು ಕೇವಲ ಪ್ರಾಥಮಿಕ ಸರ್ವೆ ವರದಿಯಾಗಿದ್ದು, ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.  ಹಾನಿ ಅನುಭವಿಸಿದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಕೃಷಿ ಮತ್ತು ಕಂದಾಯ ಅಧಿಕಾರಿಗಳನ್ನೊಳಗೊಂಡ ತಂಡದಿಂದ ತ್ವರಿತವಾಗಿ ಸರ್ವೆ ಕಾರ್ಯ ನಡೆಸಿ, ಜಿಲ್ಲೆಯಲ್ಲಿ ಉಂಟಾಗಿರುವ ಕೃಷಿ ಬೆಳೆ, ತೋಟಗಾರಿಕೆ, ಜಾನುವಾರು ಹಾನಿ ಕುರಿತಂತೆ ಸಮಗ್ರ ವರದಿಯನ್ನು ಏ. 17 ರೊಳಗಾಗಿ ಸಲ್ಲಿಸಬೇಕು.  ಮನೆ, ರಸ್ತೆಗಳ ಹಾನಿ ಕುರಿತು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರ್ವೆ ನಡೆಸಿ ವರದಿ ಸಲ್ಲಿಸಬೇಕು.  ಮನೆ ಹಾನಿ ಅನುಭವಿಸಿರುವವರಿಗೆ ಪರಿಹಾರ ವಿತರಣೆ ಪ್ರಾರಂಭವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ವಿಮೆ ವಿವರ ಸಲ್ಲಿಸಿ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಭತ್ತ ನೆಲಕಚ್ಚಿದ್ದು, ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಬೆಳೆ ಸಾಲ ಪಡೆಯುವಾಗ ರೈತರು ಬೆಳೆ ವಿಮೆಗೆ ಪ್ರೀಮಿಯಂ ಕಟ್ಟಿರುತ್ತಾರೆ.  ಬೆಳೆ ಸಾಲ ಪಡೆಯುವ ರೈತರು, ಬೆಳೆ ಹಾನಿ ಆದಲ್ಲಿ, ಆರ್ಥಿಕ ಭದ್ರತೆಗಾಗಿಯೇ ಬೆಳೆ ವಿಮೆ ಮಾಡಿಸಿರುತ್ತಾರೆ.  ಸಮಯಕ್ಕೆ ಸರಿಯಾಗಿ ವಿಮೆ ಪರಿಹಾರ ರೈತರಿಗೆ ತಲುಪದಿದ್ದಲ್ಲಿ, ವಿಮೆ ಮಾಡಿಸಿ ಏನು ಲಾಭ ಎಂದು ಪ್ರಶ್ನಿಸಿದ ಸಚಿವರು, ಇದೀಗ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿದ್ದು, ರೈತರಿಗೆ ಸಂಬಂಧಪಟ್ಟ ವಿಮಾ ಕಂಪನಿಯಿಂದ ವಿಮಾ ಪರಿಹಾರ ಮೊತ್ತ ಪಾವತಿಯಾಗಬೇಕಿದೆ.  ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳ ಮೂಲಕ ಬೆಳೆ ಸಾಲ ಪಡೆದ ರೈತರ ಸಂಖ್ಯೆ, ಪ್ರೀಮಿಯಂ ಪಾವತಿಸಿದ ಮೊತ್ತದ ಸಮಗ್ರ ವಿವರವನ್ನು ಸಿದ್ಧಪಡಿಸಿ ಸಲ್ಲಿಸಬೇಕು.  ಏ. 18 ರಂದು ಕೊಪ್ಪಳದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ಏರ್ಪಡಿಸಲಾಗಿದ್ದು, ಸಭೆಗೆ ಸಂಬಂಧಪಟ್ಟ ವಿಮಾ ಕಂಪನಿ, ಸಹಕಾರ ಇಲಾಖೆ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಹಾಜರಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಹೆಚ್ಚಿನ ಪರಿಹಾರಕ್ಕೆ ಯತ್ನ : ಭಾರಿ ಮಳೆಯಿಂದ ಬೆಳೆ ಹಾನಿ ಅನುಭವಿಸಿರುವ ರೈತರಿಗೆ, ಭತ್ತದ ಬೆಳೆಗೆ ಹೆಕ್ಟೇರ್‍ಗೆ 9 ಸಾವಿರ ರೂ. ಪರಿಹಾರ ನೀಡಲು ನಿಯಮಗಳಲ್ಲಿ ಅವಕಾಶವಿದೆ.  ಆದರೆ ರೈತರು ಪ್ರತಿ ಎಕರೆಗೆ 25 ರಿಂದ 30 ಸಾವಿರ ರೂ. ವೆಚ್ಚ ಮಾಡಿದ್ದಾರೆ.  ಈಗಾಗಲೆ ಜಿಲ್ಲೆಯಲ್ಲಿ ಉಂಟಾದ ಹಾನಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಸಮಗ್ರ ವರದಿಯನ್ನು ಶೀಘ್ರ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.  ಮುಖ್ಯಮಂತ್ರಿಗಳು, ಕೃಷಿ ಮತ್ತು ಕಂದಾಯ ಸಚಿವರೊಂದಿಗೆ ಚರ್ಚಿಸಿ, ಹೆಚ್ಚಿನ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ಕೃಷಿ, ತೋಟಗಾರಿಕೆ, ಸಹಕಾರ, ಕಂದಾಯ, ಪಂಚಾಯತಿ ರಾಜ್ ಮತ್ತು ಇಂಜಿನಿಯರಿಂಗ್, ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Monday, 13 April 2015

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಮಾಹಿತಿ ನೀಡೋಣ- ಪ್ರಗತಿ ಪಡೆಯೋಣ


ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ:ದೂರು ದುಮ್ಮಾನಗಳ ಪರಿಹಾರಕ್ಕೆ ಕಾಲ್‍ಸೆಂಟರ್ ಸ್ಥಾಪನೆ

ಕೊಪ್ಪಳ, ಏಪ್ರಿಲ್ 13:  ರಾಜ್ಯಾದ್ಯಂತ ಏಪ್ರಿಲ್ 11 ರಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ದೂರು/ಅಹವಾಲುಗಳಿದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಲು ಹೊಸದಾಗಿ ಕಾಲ್‍ಸೆಂಟರ್‍ನ್ನು ಸ್ಥಾಪಿಸಲಾಗಿದೆ.
     ಕಾಲ್‍ಸೆಂಟರ್ ಸಂಖ್ಯೆ 080-44554444 ಆಗಿದ್ದು, ಈ ಕುರಿತು ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿದೆ. ಈ ಕಾಲ್ ಸೆಂಟರ್ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತದೆ.

ತೋಟಗಾರಿಕೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಏ. 13 (ಕರ್ನಾಟಕ ವಾರ್ತೆ) : ತೋಟಗಾರಿಕೆ ಇಲಾಖೆಯು ಮುನಿರಾಬಾದ್ ನಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹತ್ತು ತಿಂಗಳ ತೋಟಗಾರಿಕೆ ತರಬೇತಿಗಾಗಿ ಆಸಕ್ತ ರೈತ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
     ತರಬೇತಿಯು ಮೇ. 02 ರಿಂದ ಆರಂಭವಾಗಲಿದೆ.  ತರಬೇತಿಗಾಗಿ ಪ.ಜಾತಿ- 03, ಪ.ಪಂಗಡ-01 ಹಾಗೂ ಇತರೆ ವರ್ಗದ 16 ಅಭ್ಯರ್ಥಿಗಳಿಗೆ ಅವಕಾಶವಿದೆ.  ವಯೋಮಿತಿ  ಪ.ಜಾತಿ ಮತ್ತು ಪ.ಪಂಗಡದವರಿಗೆ ಕನಿಷ್ಟ 18 , ಗರಿಷ್ಟ 33 ವರ್ಷ.  ಇತರೆ ವರ್ಗದವರಿಗೆ ಕನಿಷ್ಟ 18, ಗರಿಷ್ಟ 30 ವರ್ಷಗಳು.  ಅರ್ಜಿ ಸಲ್ಲಿಸಲು ಕನ್ನಡ ವಿಷಯದೊಂದಿಗೆ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು.  ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ, ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಅಲ್ಲದೆ ಸ್ವಂತ ಸಾಗುವಳಿ ಮಾಡುತ್ತಿರಬೇಕು.  ಈ ಕುರಿತಂತೆ ಪಹಣಿ ನೀಡುವುದು ಕಡ್ಡಾಯ.  ಅರ್ಜಿ ಶುಲ್ಕ ಪ.ಜಾತಿ/ಪ.ಪಂಗಡದವರಿಗೆ ರೂ. 15, ಇತರರಿಗೆ ರೂ. 30.  ಅರ್ಜಿ ಶುಲ್ಕವನ್ನು ಪೋಸ್ಟಲ್ ಆರ್ಡರ್ ಅಥವಾ ಡಿಡಿ ಯನ್ನು ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ ಇವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆ ಲಗತ್ತಿಸಬೇಕು.  ನಿಗದಿತ ಅರ್ಜಿ ನಮೂನೆಯನ್ನು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಕೊಪ್ಪಳ ಇವರಿಂದ ಪಡೆಯಬಹುದು.  ಅಥವಾ  www.horticulture.kar.nic.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.  ಭರ್ತಿ ಮಾಡಿದ ಅರ್ಜಿಯನ್ನು ಏ. 25 ರ ಒಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಏ. 28 ರಂದು ಬೆಳಿಗ್ಗೆ 11 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕಚೇರಿ, ಕೊಪ್ಪಳ ಇಲ್ಲಿ ಸಂದರ್ಶನ ನಡೆಸಲಾಗುವುದು.  ಅಭ್ಯರ್ಥಿಗಳು ಎಲ್ಲ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.  ಇದಕ್ಕಾಗಿ ಪÀ್ರತ್ಯೇಕ ಸಂದರ್ಶನ ಪತ್ರ ಕಳುಹಿಸಲಾಗುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಸಮಾಜ ವಿಜ್ಞಾನ ಪರೀಕ್ಷೆ : 16687 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರದಂದು ಜರುಗಿದ ಎಸ್‍ಎಸ್‍ಎಲ್‍ಸಿ  ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ 16687 ವಿದ್ಯಾರ್ಥಿಗಳು ಹಾಜರಾಗಿದ್ದು, 813 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
     ಜಿಲ್ಲೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ದಾಖಲಾತಿಯಾಗಿದ್ದ 17239 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 16467 ಹಾಗೂ 261 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 220 ಅಭ್ಯರ್ಥಿಗಳು ಹಾಜರಾಗಿದ್ದಾರೆ. 772 ರೆಗ್ಯುಲರ್ ಹಾಗೂ 41 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು 813 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.  ಜಿಲ್ಲೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರು ಸಮಸ್ಯೆ : ಸಹಾಯವಾಣಿ ಪ್ರಾರಂಭ


ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ, ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಪಂಚಾಯತಿ ಹಾಗೂ ಆಯಾ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
     ಕೊಪ್ಪಳ ಜಿಲ್ಲಾ ಪಂಚಾಯತಿ ಸಹಾಯವಾಣಿ ಸಂಖ್ಯೆ- 08539-221207.  ತಾಲೂಕು ಪಂಚಾಯತಿ ಕಚೇರಿಗಳಲ್ಲಿಯೂ ಸಹಾಯವಾಣಿ ಪ್ರಾರಂಭಿಸಿದ್ದು, ಕೊಪ್ಪಳ ತಾಲೂಕಾ ಪಂಚಾಯತಿ- 08539- 220399, ಗಂಗಾವತಿ- 08533-230230, ಕುಷ್ಟಗಿ- 08536-267028 ಹಾಗೂ ಯಲಬುರ್ಗಾ- 08534-220136.  ಸಹಾಯವಾಣಿ ಕೇಂದ್ರಗಳು ಪ್ರತಿ ದಿನ 12 ತಾಸುಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಕುಡಿಯುವ ನೀರಿನ ತೊಂದರೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹಾಯವಾಣಿ ಸಂಖೈಗೆ ಕರೆ ಮಾಡಿ, ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ

ಕೊಪ್ಪಳ ಏ. 13 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕುರಿತಾಗಿ ಬೀದಿ ನಾಟಕ ಕಾರ್ಯಕ್ರಮ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
       ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶೇಖರಗೌಡ ರವರು ಜಿಲ್ಲೆಯಲ್ಲಿ ಮಕ್ಕಳ ಮೇಲೆನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ಜನರಲ್ಲಿ ಕಾಯ್ದೆಗಳ ಬಗ್ಗೆ ಜಾಗೃತಿಯಿಲ್ಲದಿರುವುದು ಪ್ರಮುಖ ಕಾರಣವಾಗಿದೆ.    ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿಯನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು ಇದು ಉಚಿತ ಕರೆಯಾಗಿರುತ್ತದೆ. ಸಂಕಷ್ಟಕ್ಕೆ ಸಿಲುಕಿದ ಮಕ್ಕಳು ಅಥವಾ ದೌರ್ಜನ್ಯಕ್ಕೊಳಗಾದ ಮಕ್ಕಳು ಕಂಡಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಮಾಹಿತಿಯನ್ನು ನೀಡಿದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಅತಂಹ ಮಗುವಿಗೆ ಅಗತ್ಯ ಪುರ್ನವಸತಿಯನ್ನು ಕಲ್ಪಸಲಾಗುತ್ತದೆಂದು ವಿವರಿಸಿದರು. 
       ನಂತರ ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಸಂರಕ್ಷಣಾ ಕಾಯ್ದೆಯ ಬಗ್ಗೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ರಂಗಚೇತನಾ ಸಾಂಸ್ಕøತಿಕ ಕಲಾ ತಂಡದಿಂದ ಬೀದಿ ನಾಟಕವನ್ನು ಪ್ರಸ್ತುತಪಡಿಸಲಾಯಿತು.

Sunday, 12 April 2015

ಆನೆಗೊಂದಿ ಉತ್ಸವ: ಜನಮನ ಸೂರೆಗೊಂಡ ಲೇಸರ್ ಶೋ

ಕೊಪ್ಪಳ ಏ. 12 (ಕ.ವಾ):  ಆನೆಗೊಂದಿ ಉತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಏರ್ಪಡಿಸಲಾದ ಲೇಸರ್ ಶೋ ಪ್ರದರ್ಶನ ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.


      ಉತ್ಸವದ ಸವಿಯನ್ನು ಸವಿಯಲು ನೆರೆದಿದ್ದ ಜನರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ವಸತಿ ಭಾಗ್ಯ ಸೇರಿದಂತೆ ಹಲವು ಶ್ರೇಯೋಭಿವೃದ್ಧಿ ಯೋಜನೆಗಳ ಕುರಿತಂತೆ ಪ್ರದರ್ಶನಗೊಂಡ ಲೇಸರ್ ಶೋ ನೋಡುಗರ ಮನಸೂರೆಗೊಂಡಿತು.  ಸುವರ್ಣ ಕರ್ನಾಟಕ ಲೇಸರ್ ಶೋ ಸಪ್ತ ವರ್ಣಗಳಲ್ಲಿ ಕನ್ನಡ ನಾಡು ನುಡಿ ಹಾಗೂ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನು ಅನಾವರಣಗೊಳಿಸಿತು.  ಆಂಗ್ಲರ ಆಳ್ವಿಕೆ, ಈ ಪ್ರದೇಶವನ್ನು ಆಳಿದ ಕದಂಬ, ವಿಜಯನಗರ, ಹೊಯ್ಸಳ, ಚಾಲುಕ್ಯ ಮುಂತಾದ ಸಾಮ್ರಾಜ್ಯದ ದೊರೆಗಳು, ಸ್ವಾತಂತ್ರ್ಯ ಚಳುವಳಿ, ಕರ್ನಾಟಕದ ಏಕೀಕರಣ, ರಾಜ್ಯದ ಸಾಂಸ್ಕøತಿಕ ಪರಂಪರೆ, ಸಂಗೀತ, ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿಗ್ಗಜರು, ರಾಜ್ಯದ ಏಕೀಕರಣ ನಂತರ ಅಭಿವೃದ್ಧಿಯ ಬೆಳವಣಿಗೆಯಲ್ಲಿನ ವಿವಿಧ ಮಜಲುಗಳನ್ನು ಸಪ್ತ ವರ್ಣಗಳ ರೇಖೆಗಳ ಮೂಲಕ ಲೇಸರ್ ಶೋ ಅನಾವರಣಗೊಳಿಸಿತು.  


 
       ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳು, ರಾಷ್ಟ್ರಕವಿ ಕುವೆಂಪು ಅವರಿಂದ ಈವರೆಗಿನ ಆಧುನಿಕ ಸಾಹಿತ್ಯದ ಖ್ಯಾತ ಸಾಹಿತಿಗಳು.  ರಾಜ್ಯವು ಕೃಷಿ, ಐಟಿಬಿಟಿ, ತಾಂತ್ರಿಕತೆ, ಕೈಗಾರಿಕೆ, ನೀರಾವರಿ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಹಿರಿಮೆಯನ್ನು ಲೇಸರ್ ಪ್ರದರ್ಶನದ ಮೂಲಕ ಪ್ರತಿಬಿಂಬಿಸಲಾಯಿತು. ಸುಮಾರು 30 ನಿಮಿಷಗಳ ಕಾಲ ಜರುಗಿದ ಲೇಸರ್ ಶೋ ಪ್ರದರ್ಶನ ಕಾರ್ಯಕ್ರಮ ಎಲ್ಲ ನೋಡುಗರ ಮೈಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. 

Saturday, 11 April 2015

ಆನೆಗೊಂದಿ ಉತ್ಸವ-2015 ರ ಉದ್ಘಾಟನೆ

ಆನೆಗೊಂದಿ ಉತ್ಸವ-2015 ರ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ  ಶಿವರಾಜ ತಂಗಡಗಿ ಅವರು ನೆರವೇರಿಸಿದರು.  ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರಹಿಟ್ನಾಳ, ದೊಡ್ಡನಗೌಡ ಪಾಟೀಲ, ಮುಂತಾದವರು ಭಾಗವಹಿಸಿದ್ದರು.ಏ. 14 ರಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಉದ್ಘಾಟನೆ ಸಮಾರಂಭ


ಕೊಪ್ಪಳ ಏ. 11 (ಕರ್ನಾಟಕ ವಾರ್ತೆ): ರಾಯಚೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ನೂತನ ಕಟ್ಟಡ ಮತ್ತು ರೈತರ ತರಬೇತಿ ನಿಲಯದ ಉದ್ಘಾಟನಾ ಸಮಾರಂಭ ಹಾಗೂ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಏ. 14 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ತಾಲೂಕು ಪಂಚಾಯತ ಆವರಣದಲ್ಲಿ ನಡೆಯಲಿದೆ.
      ನೂತನ ಕಟ್ಟಡದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ನೆರವೇರಿಸುವರು. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ,  ಶಾಸಕರುಗಳಾದ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ಇಕ್ಬಾಲ್ ಅನ್ಸಾರಿ, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್ ಅವರು ಭಾಗವಹಿಸುವರು.  ಈಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಸೇರಿದಂತೆ ರಾಯಚೂರು ಕೃಷಿ ವಿವಿ ಹಿರಿಯ ಅಧಿಕಾರಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು.
     ಈ ಸಂದರ್ಭದಲ್ಲಿ ಕೃಷಿಯ ಕೆಲವು ಮಾದರಿ ತಾಕುಗಳ ಪ್ರದರ್ಶನ ಹಾಗೂ ಮಣ್ಣಿನ ಆರೋಗ್ಯ ಕಾರ್ಡ್‍ಗಳ ವಿತರಣೆಯನ್ನು ಆಯೋಜಿಸಲಾಗಿದೆ.  ಜಿಲ್ಲೆಯ ಎಲ್ಲ ರೈತ ಬಾಂಧವರು ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡೆದು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೇಂದ್ರದ ವಿಸ್ತರಣಾ ಮುಂದಾಳು ವಿ. ಆರ್. ಜೋಷಿ ರವರು ಮನವಿ ಮಾಡಿದ್ದಾರೆ.

ಆನೆಗೊಂದಿ ಉತ್ಸವ : ಸುಸಜ್ಜಿತ ಮಾಧ್ಯಮ ಕೇಂದ್ರ ಉದ್ಘಾಟಿಸಿದ ಇಕ್ಬಾಲ್ ಅನ್ಸಾರಿ
ಕೊಪ್ಪಳ ಏ. 11 (ಕರ್ನಾಟಕ ವಾರ್ತೆ):   ಆನೆಗೊಂದಿ ಉತ್ಸವದ ನಿಮಿತ್ಯ ಸುದ್ದಿಯನ್ನು ತ್ವರಿತವಾಗಿ ಮಾಧ್ಯಮಗಳ ಮೂಲಕ ಬಿತ್ತರವಾಗುವಂತೆ ಮಾಡುವ ನಿಟ್ಟಿನಲ್ಲಿ ಶ್ರೀಕೃಷ್ಣದೇವರಾಯ ವೇದಿಕೆಯ ಬಳಿ ಸ್ಥಾಪಿಸಲಾಗಿರುವ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಶನಿವಾರದಂದು ಉದ್ಘಾಟಿಸಿದರು.
     ಐತಿಹಾಸಿಕ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನಗೊಂದಿಯಲ್ಲಿ ಗತವೈಭವನ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಏ. 11 ಮತ್ತು 12 ರಂದು ವಿಜೃಣಭಣೆಯಿಂದ ಆಚರಿಸಲಾಗುತ್ತಿದೆ.  ಉತ್ಸವದ ಅಂಗವಾಗಿ ಜಾನಪದ ಕಲಾತಂಡಗಳಿಂದ ವೈಭವದ ಮೆರವಣಿಗೆ, ಖ್ಯಾತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿದ್ದು, ಕಾರ್ಯಕ್ರಮಗಳ ಸುದ್ದಿಯನ್ನು ತ್ವರಿತಗತಿಯಲ್ಲಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವಂತೆ ಮಾಡಲು ಈ ಬಾರಿ ಆನೆಗೊಂದಿ ಉತ್ಸವದ ಮುಖ್ಯವೇದಿಕೆಯಾಗಿರುವ ಶ್ರೀಕೃಷ್ಣದೇವರಾಯ ವೇದಿಕೆ ಬಳಿ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.  ಮಾಧ್ಯಮ ಕೇಂದ್ರದಲ್ಲಿ ಸುಮಾರು 25 ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದ್ದು, ಎಲ್ಲ ಕಂಪ್ಯೂಟರ್‍ಗಳಿಗೆ ಉತ್ತಮ ವೇಗದ ಇಂಟರ್‍ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.  ಮಾಧ್ಯಮ ಕೇಂದ್ರಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದ್ದು, ಮಾಧ್ಯಮ ಕೇಂದ್ರದ ಉದ್ಘಾಟನೆ ನೆರವೇರಿಸಿದ ಶಾಸಕ ಇಕ್ಬಾಲ್ ಅನ್ಸಾರಿ ಅವರು ಮಾಧ್ಯಮ ಕೇಂದ್ರದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  


     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನ್ಸಾರಿ ಅವರು, ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ತಪ್ಪದೆ ವಿಜೃಂಭಣೆಯಿಂದ ನೆರವೇರಿಸಲು, ಶಾಶ್ವತ ವೇದಿಕೆ, ಮಾಧ್ಯಮ ಕೇಂದ್ರ, ಗ್ರೀನ್ ರೂಂ ಮುಂತಾದ ಅಗತ್ಯ ಸೌಲಭ್ಯಗಳನ್ನು ಶಾಶ್ವತವಾಗಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಅನುದಾನವನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಥವಾ ಸರ್ಕಾರದಿಂದ ಅನುದಾನ ಪಡೆದು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.  ಆನೆಗೊಂದಿ ಉತ್ಸವದ ಅಂಗವಾಗಿ ಎನ್.ಐ.ಸಿ. ವತಿಯಿಂದ ರೂಪಿಸಲಾದ ವೆಬ್‍ಸೈಟ್‍ಗೆ ಶಾಸಕ ಅನ್ಸಾರಿ ಅವರು ಚಾಲನೆ ನೀಡಿದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಗಂಗಾವತಿ ನಗರಸಭೆ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಣ್ಯರಾದ ಲಲಿತಾರಾಣಿ ಶ್ರೀರಂಗದೇವರಾಯಲು ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೊಪ್ಪಳ ಶಾಸಕರ ಮನೆಯಲ್ಲಿ ಚಾಲನೆ


ಕೊಪ್ಪಳ ಏ. 11 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏ. 11 ರಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ರಮಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ತಮ್ಮ ಕುಟುಂಬದ ಮಾಹಿತಿಯನ್ನು ಗಣತಿದಾರರಿಗೆ ನೀಡುವ ಮೂಲಕ ಚಾಲನೆ ನೀಡಿದರು.
     ಸಾಮಾಜಿಕ ಸಮಾನತೆಯ ಅನುಷ್ಠಾನಕ್ಕಾಗಿ 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ರಮಕ್ಕೆ ಕೊಪ್ಪಳದ ಶಾಸಕರ ಮನೆಯಲ್ಲಿ ಚಾಲನೆ ನೀಡಲಾಯಿತು.  ಗಣತಿದಾರರು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರ ಕುಟುಂಬದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಬಗ್ಗೆ ಪ್ರಶ್ನಾವಳಿಗಳ ಮೂಲಕ ಶಾಸಕರಿಂದ ಮಾಹಿತಿ ಸಂಗ್ರಹಿಸಲಾಯಿತು.  ನಗರಸಭೆ ಪೌರಯುಕ್ತ ರಮೇಶ್ ಪಟ್ಟೇದಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Friday, 10 April 2015

ಏ. 14 ರಂದು ಕೊಪ್ಪಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಿನಾಚರಣೆ


ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು 124 ನೇ ಜನ್ಮದಿನೋತ್ಸವ ಕಾರ್ಯಕ್ರಮ ಏ. 14 ರಂದು ಕೊಪ್ಪಳದಲ್ಲಿ ಜರುಗಲಿದೆ.
     ಅಂದು ಬೆಳಿಗ್ಗೆ 7-30 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಮೆರವಣಿಗೆಯು ಕೊಪ್ಪಳ ತಹಸಿಲ್ದಾರರ ಕಚೇರಿ ಆವರಣದಿಂದ ಹೊರಟು, ಅಂಬೇಡ್ಕರ್ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಬರಲಿದೆ.  ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಬಳ್ಳಾರಿ ವಿ.ಎಸ್.ಕೆ. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಶಾಂತ್‍ನಾಯ್ಕ ಅವರು ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡುವರು.

ಆನೆಗೊಂದಿ ಉತ್ಸವ : ಏ. 12 ರಂದು ಕವಿಗೋಷ್ಠಿ

ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವದ ಅಂಗವಾಗಿ ಏ. 12 ರಂದು ಬೆಳಿಗ್ಗೆ 11 ಗಂಟೆಗೆ ಆನೆಗೊಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ವಿದ್ಯಾರಣ್ಯ ವೇದಿಕೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
      ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸುವರು.  ಗಂಗಾವತಿ ತಾಲೂಕು ಕಸಾಪ ಅಧ್ಯಕ್ಷ ಅಜಮೀರ್ ನಂದಾಪುರ ಅಧ್ಯಕ್ಷತೆ ವಹಿಸಲಿದ್ದು, ಯಲಬುರ್ಗಾದ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕವಿಗೋಷ್ಠಿಯಲ್ಲಿ ಗಂಗಾವತಿಯ ಮಹೆಬೂಬ್ ಮುಲ್ಲಾ, ಅರಳಿ ನಾಗಭೂಷಣ ಇಸ್ಲಾಂಪುರ, ವಡ್ಡರಹಟ್ಟಿಯ ಆಶಾ ಕುಲಕರ್ಣಿ, ಭಾಗ್ಯನಗರದ ಅಕ್ಬರ ಕಾಲಿಮಿರ್ಚಿ, ಕುಷ್ಟಗಿಯ ಶ್ರೀಶೈಲ ತಾಂದಳೆ, ಅಳವಂಡಿಯ ಸಾವಿತ್ರಿ ಮುಜುಂದಾರ್, ಹನುಮಸಾಗರದ ಚಂದಪ್ಪ ಹಕ್ಕಿ, ಭಾಗ್ಯನಗರದ ವೀರಣ್ಣ ವಾಲಿ, ಗಂಗಾವತಿಯ ವಾಣಿಶ್ರೀ ಪಾಟೀಲ್, ನರ್ಮದಾ ಆರ್. ಕುಲಕರ್ಣಿ, ಕೊಪ್ಪಳದ ಪುಷ್ಪಲತಾ ಏಳುಬಾವಿ, ಎಸ್.ಎಂ. ಕಂಬಾಳಿಮಠ, ಮಂಗಳೂರಿನ ಕಳಕೇಶ ಬಳಿಗಾರ, ಹನುಮಂತಪ್ಪ ಉಪ್ಪಾರ, ಶಾಂತ ಕುಡಗುಂಟಿ, ಗಂಗಾವತಿಯ ಶಿವಕುಮಾರ ಮಾಲಿಪಾಟೀಲ್, ತಾವರಗೇರಾದ ಸುಶೀಲಾ ತಾಳಿಕೋಟೆ, ಕನಕಗಿರಿಯ ದುರ್ಗಾದಾಸ್ ಯಾದವ್, ಗಂಗಾವತಿಯ ಜಾಜಿ ದೇವೇಂದ್ರಪ್ಪ, ಶರಶ್ಚಂದ್ರ ರಾನಡೆ, ಕೊಪ್ಪಳದ ಶಿ.ಕಾ. ಬಡಿಗೇರ ಅವರು ಕವಿತೆಗಳನ್ನು ವಾಚನ ಮಾಡುವರು.

ಆನೆಗೊಂದಿ ಉತ್ಸವ : ಏ. 12 ರ ಸಾಂಸ್ಕøತಿಕ ಕಾರ್ಯಕ್ರಮಗಳು

ಕೊಪ್ಪಳ ಏ. 10 (ಕ.ವಾ) : ಆನೆಗೊಂದಿ ಉತ್ಸವದ ಅಂಗವಾಗಿ ಏ. 12 ರಂದು ಮುಖ್ಯ ವೇದಿಕೆಯಾದ ’ಶ್ರೀ ಕೃಷ್ಣದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ‘ವಿದ್ಯಾರಣ್ಯ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.
‘ಶ್ರೀ ಕೃಷ್ಣದೇವರಾಯ ವೇದಿಕೆ” ಯಲ್ಲಿನ ಕಾರ್ಯಕ್ರಮಗಳು:  ಸಂಜೆ  ಸಮಾರೋಪ ಸಮಾರಂಭದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ.  ಸಂಜೆ 5 ಗಂಟೆಗೆ ಗಂಗಾವತಿಯ ಪ್ರತಿಮಾ ಬೊಮ್ಮಲಾಪುರ ಅವರಿಂದ ಸಿತಾರ ವಾದನ, ಹನುಮಂತರಾವ್ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಕುಷ್ಟಗಿಯ ವಾ.ಹ. ಯಕ್ಕರನಾಳ ಅವರಿಂದ ಜಾನಪದ ಗೀತೆ.  ಹುಲಿಹೈದರ ಆಂಜನೇಯ ಗದ್ದಿ ಅವರಿಂದ ಹಿಂದೂಸ್ಥಾನಿ ಗಾಯನ.  ಬೆಂಗಳೂರಿನ ಜಿಲ್ಲಾ ನಾಗರೀಕರ ವೇದಿಕೆ ತಂಡದಿಂದ ನೃತ್ಯ ರೂಪಕ.  ಕೊಪ್ಪಳದ ಸಿ.ವಿ. ಜಡಿಯವರ್ ತಂಡದಿಂದ ಜಾನಪದ ಗೀತೆಗಳು.  ತಳಕಲ್‍ನ ನಾದ ನೃತ್ಯ ಕಲಾ ಶಾಲೆ ಇವರಿಂದ ಭರತನಾಟ್ಯ.  ಗಂಗಾವತಿಯ ಬಸವ ಕೀರ್ತಿ ಅವರಿಂದ ಗಝಲ್ ಗೀತೆಗಾಯನ.  ಬಳ್ಳಾರಿಯ ನಾಡೋಜ ಸುಭದ್ರಮ್ಮ ಮುಸ್ಟೂರು ಅವರಿಂದ ರಂಗಗೀತೆಗಳು.  ಕೋಲಾರ ಜಿಲ್ಲೆಯ ನೂಪುರ ಡ್ಯಾನ್ಸ್ ಅಕಾಡೆಮಿ ತಂಡದಿಂದ ಕೂಚುಪುಡಿ ನೃತ್ಯ.  ಅಂದ್ರಾಳ ಸಂಜಯ ವಿರ್ಶವನಾಥ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ.  ಕುಷ್ಟಗಿಯ ಎಸ್.ಎಸ್. ಹಿರೇಮಠ ಅವರಿಂದ ತಬಲಾ ಸೋಲೋ.  ಬೆಂಗಳೂರಿನ ನರ್ತನಂ ಈವೆಂಟ್ಸ್ ಅವರಿಂದ ಶಾಸ್ತ್ರೀಯ ನೃತ್ಯ ವೈಭವ.  ಬಳ್ಳಾರಿ ಸೂರ್ಯಕಲಾ ಅಕಾಡೆಮಿ ತಂಡದಿಂದ ನೃತ್ಯ ಪ್ರದರ್ಶನ.  ಕುಷ್ಟಗಿಯ ದುರುಗಪ್ಪ ಹಿರೇಮನಿ ಅವರಿಂದ ಭಾವಗೀತೆಗಳು.  ಗಂಗಾವತಿಯ ನಟರಾಜ ನೃತ್ಯ ಕಲಾ ಸಂಸ್ಥೆ ಅವರಿಂದ ನೃತ್ಯ ಪ್ರದರ್ಶನ.  ಗಂಗಾವತಿಯ ಪ್ರಮೋದಿನಿ ಅನಿಲಕುಮಾರ ಜಾಕ್ರಿ ಅವರಿಂದ ಜಾನಪದ ಗೀತೆಗಳ ಗಾಯನ.  ಜೂನಿಯರ್ ಉಪೇಂದ್ರ ಮತ್ತು ತಂಡದವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ.  ವೀರೇಶ್ ಹಿಟ್ನಾಳ ಅವರಿಂದ ಹಾರ್ಮೋನಿಯಂ ಸೋಲೋ.  ಶ್ರೀಶೈಲ ಬಡಿಗೇರ ಅವರಿಂದ ಭಾವಗೀತೆಗಳು.  ಗಂಗಾವತಿಯ ಸುರೈಯಾ ಬೇಗಂ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ.  ಯುವರಾಜ ಹಂಚಿನಾಳ ಅವರಿಂದ ವಚನ ಗಾಯನ.  ಕುಷ್ಟಗಿ ಚನ್ನಪ್ಪ ಬಾವಿಮನಿ ಅವರಿಂದ ಜಾನಪದ ಗೀತೆಗಳು ಮತ್ತು ಬಹದ್ದೂರಬಂಡಿ ಮೆಹಬೂಬ್ ಕಿಲ್ಲೆದಾರ್ ಅವರಿಂದ ಲಾವಣಿ ಪದಗಳು ಕಾರ್ಯಕ್ರಮಗಳು ಜರುಗಲಿವೆ.
ವಿದ್ಯಾರಣ್ಯ ವೇದಿಕೆಯ (ಸರ್ಕಾರಿ ಹಿ.ಪ್ರಾ.ಶಾಲೆ ಆವರಣ) ಕಾರ್ಯಕ್ರಮಗಳು : ಏ. 12 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಮಂಗಳೂರು ಹನುಮಂತಪ್ಪ ಭಜಂತ್ರಿ ಅವರಿಂದ ಕ್ಲಾರಿಯೋನೆಟ್ ವಾದನ.  ಕೊಪ್ಪಳದ ಶಕುಂತಲಾ ಬಿನ್ನಾಳ ಅವರಿಂದ ಸುಗಮ ಸಂಗೀತ.  ಗಂಗಾವತಿ ಸಿಂಚನ ನಾಗರೀಕರ ತಂಡದಿಂದ ಭರತನಾಟ್ಯ.  ಕಲಬುರಗಿ ಗುರುಶಂಕರಯ್ಯ ಸ್ಥಾವರಮಠ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ.  ಹನುಮಸಾಗರ ವೆಂಕಟೇಶ್ ಅವರಿಂದ ಜಾನಪದ ಗೀತೆಗಳು.  ಹನುಮಸಾಗರ ಮಾರುತಿ ಬಿನ್ನಾಳ ಅವರಿಂದ ದಾಸರ ಪದಗಳು.  ಹುಲಗಿ ಮುಕಾಬುಲ್ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ಪ್ರದರ್ಶನ.  ಕೊಪ್ಪಳದ ಗೌಡೇಶ ಪವಾರ್ ಅವರಿಂದ ಸುಗಮ ಸಂಗೀತ.  ತೆಗ್ಗಿಹಾಳ ರಾಮಣ್ಣ ಚೌಡ್ಕಿ ಅವರಿಂದ ಚೌಡ್ಕಿ ಪದಗಳು.  ತಾವರಗೇರ ತಿಪ್ಪಣ್ಣ ಅಂಬಾಜಿ ಅವರಿಂದ ಗೊಂದಲಿಗರ ಕುಣಿತ.  ಕಾರಟಗಿ ಸಂಜನಾ ಧನರಾಜ್ ಸುಂಕದ್ ತಂಡದಿಂದ ಭರತನಾಟ್ಯ.  ಕವಲೂರ ಬಸವರಾಜ ಹೆಸರೂರ ಅವರಿಂದ ರಂಗಗೀತೆಗಳು.  ಗಂಗಾವತಿ ಪ್ರತಿಭಾ ಗೋನಾಳರಿಂದ ಸುಗಮ ಸಂಗೀತ.  ಮಂಜುಳಾ ಅವರಿಂದ ಜಾನಪದ ಗೀತೆಗಳು.  ಸ್ವಾತಿ ಅವರಿಂದ ಭರತನಾಟ್ಯ.  ಸುಮಿತ್ರಾ ಅಗಳಕೇರಿ ತಂಡದಿಂದ ಗೀಗೀ ಪದಗಳು.  ಭಗ್ಯನಗರ ಸುಭಾಶ್ ಕಲಾಲ್ ತಂಡದಿಂದ ಜಾನಪದ ನೃತ್ಯ.  ಕುಷ್ಟಗಿ ಜ್ಯೋತಿ ಮಹಿಳಾ ಸಾಂಸ್ಕøತಿಕ ಸಂಘದಿಂದ ಸಂಪ್ರದಾಯ ಪದಗಳು.  ಕಿನ್ನಾಳ ಗಂಗಾಧರ ಅರಳಿಕಟ್ಟಿ ಅವರಿಂದ ಸುಗಮ ಸಂಗೀತ.  ಕಿನ್ನಾಳ ಲಚ್ಚಪ್ಪ ಹಳೇಪೇಟೆ ಅವರಿಂದ ದಾಸರ ಪದಗಳು.  ನಾಗರಾಳ ಬಸವರಾಜ ಗಂಗನಾಳ ಅವರಿಂದ ಬಯಲಾಟ ಪದಗಳು.  ಬಳ್ಳಾರಿ ಯಲ್ಲನಗೌಡ ಶಂಕರಬಂಡೆ ತಂಡದಿಂದ ತತ್ವಪದಗಳು.  ಗಂಗಾವತಿ ಕಿಷನ್‍ರಾವ್ ತಂಡದಿಂದ ಬುಲ್‍ಬುಲ್ ತರಂಗ ವಾದನ.  ಗಂಗಾವತಿ ಸ್ವಾತಿ ಐಲಿ ಅವರಿಂದ ನೃತ್ಯ ಪ್ರದರ್ಶನ.  ಯರೇಹಂಚಿನಾಳದ ಹನುಮಂತ ನರೇಗಲ್ ಅವರಿಂದ ಭಾವಗೀತೆಗಳು.  ಭಾಗ್ಯನಗರದ ದೀಕ್ಷಾ ಹೆಗಡೆ ತಂಡದಿಂದ ಸಮೂಹ ನೃತ್ಯ-ಭರತನಾಟ್ಯ.  ಗಂಗಾವತಿ ದೇವಾನಂದ ಚೌವ್ಹಾಣ ಅವರಿಂದ ಸುಗಮ ಸಂಗೀತ ಮತ್ತು ಹೊರತಟ್ನಾಳದ ಗಾಳೆಪ್ಪ ಅವರಿಂದ ಜಾನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.

ಆನೆಗೊಂದಿ ಉತ್ಸವ : ಏ. 12 ರಂದು ಸಮಾರೋಪ ಸಮಾರಂಭ

ಕೊಪ್ಪಳ ಏ. 10 (ಕ.ವಾ) : ಆನೆಗೊಂದಿ ಉತ್ಸವ-2015 ರ ಸಮಾರೋಪ ಸಮಾರಂಭ ಏ. 12 ರಂದು ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಜರುಗಲಿದ್ದು, ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಘನ ಉಪಸ್ಥಿತಿ ವಹಿಸುವರು.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸಮಾರೋಪ ಭಾಷಣ ಮಾಡಲಿದ್ದು, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ವಿಜಯನಗರದ ಅರಸು ಮನೆತನದವರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನವೀನ್‍ರಾಜ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಆನೆಗೊಂದಿ ಉತ್ಸವದ ಸಮಾರೋಪದ ಅಂಗವಾಗಿ ಅಂದು ಸಿಡಿಮದ್ದು ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.

ಎಸ್‍ಎಸ್‍ಎಲ್‍ಸಿ ಹಿಂದಿ ಪರೀಕ್ಷೆ : 16495 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರದಂದು ಜರುಗಿದ ಎಸ್‍ಎಸ್‍ಎಲ್‍ಸಿ ಹಿಂದಿ ವಿಷಯದ ಪರೀಕ್ಷೆಗೆ 16495 ವಿದ್ಯಾರ್ಥಿಗಳು ಹಾಜರಾಗಿದ್ದು, 780 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
     ಜಿಲ್ಲೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಹಿಂದಿ ವಿಷಯದ ಪರೀಕ್ಷೆಗೆ ದಾಖಲಾತಿಯಾಗಿದ್ದ 17218 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 16451 ಹಾಗೂ 57 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 44 ಅಭ್ಯರ್ಥಿಗಳು ಹಾಜರಾಗಿದ್ದಾರೆ. 767 ರೆಗ್ಯುಲರ್ ಹಾಗೂ 13 ಪುನರಾವರ್ತಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು 780 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.  ಜಿಲ್ಲೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಸ್ ಟೆಕ್ನಾಲಜಿ ಪಾರ್ಕ್‍ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಕೊಪ್ಪಳ, ಏ.10 (ಕರ್ನಾಟಕ ವಾರ್ತೆ) : ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇವರಿಂದ ನವಲಿ-ಸೋಮನಾಳ ಗ್ರಾಮಗಳ ಬಳಿ ನಿರ್ಮಾಣವಾಗುತ್ತಿರುವ ರೈಸ್ ಟೆಕ್ನಾಲಜಿ ಪಾರ್ಕ್‍ನಲ್ಲಿ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಸಮಾರಂಭ ಏ.11 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
     ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ   ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಆರೋಗ್ಯ  ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ ಸಾಲೋಣಿ, ಗಂಗಾವತಿ ತಾಲೂಕಾ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಉಪಾಧ್ಯಕ್ಷ ಶರಣಪ್ಪ ಸಾಹುಕಾರ, ನವಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿರಾಜು ಭಜಂತ್ರಿ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಡಾ||ಮುದ್ದು ಮೋಹನ್, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರಪ್ಪ ಗುಂಜಳ್ಳಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಜ್ಯೋತಿ ಎನ್.ಬಿಲ್ಗಾರ್, ಹೇಮಾವತಿ ಗುಳದಾಳ, ವೀರೇಶ ಸಮಗಂಡಿ, ತಾಲೂಕಾ ಪಂಚಾಯಿತಿ ಸದಸ್ಯರಾದ ಜೂಲೆಪ್ಪ ನಾಯ್ಕ, ಸಿದ್ದಪ್ಪ ಭೋವಿ, ಗಂಗಮ್ಮ ಎಸ್.ಹಿರೇಮಠ, ಹಿರೇಬಸಪ್ಪ ಸಜ್ಜನ್, ಹಿರೇ ಹನುಮಂತಪ್ಪ ಡಂಬರ, ವಿಜಯಲಕ್ಷ್ಮೀ ನಾಗೇಶ್ವರರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಬಿ.ಶರಣಯ್ಯ ಸ್ವಾಮಿ, ಸಂಜೀವಮ್ಮ ಭೋವಿ, ಗೌರಮ್ಮ ತಳವಾರ, ಸರಸಮ್ಮ ಭೋವಿ, ಆದೆಪ್ಪ ಉಪ್ಪಾರ, ಶರಣಪ್ಪ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಡಾ. ಜಿ. ಶರಶ್ಚಂದ್ರ ರಾನಡೆ ಅವರು ತಿಳಿಸಿದ್ದಾರೆ.

ಆನೆಗೊಂದಿ ಉತ್ಸವ : ಏ. 11 ರ ಸಾಂಸ್ಕøತಿಕ ಕಾರ್ಯಕ್ರಮಗಳು

ಕೊಪ್ಪಳ ಏ. 11 (ಕ.ವಾ) : ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಭವ್ಯ ಇತಿಹಾಸವನ್ನು ಮೆಲುಕು ಹಾಕುವ ರೀತಿಯಲ್ಲಿ ಈ ಬಾರಿ ಅದ್ಧೂರಿ ಆನೆಗೊಂದಿ ಉತ್ಸವವನ್ನು ಏ. 11 ಮತ್ತು 12 ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಏರ್ಪಡಿಸಲಾಗಿದೆ.
     ಏ. 11 ರಂದು ಸಂಜೆ 5 ಗಂಟೆಗೆ ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಾಗಿರುವ ‘ಶ್ರೀ ಕೃಷ್ಣದೇವರಾಯ ವೇದಿಕೆ’ಯಲ್ಲಿ ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.  ಏ. 11 ರಂದು ಮುಖ್ಯ ವೇದಿಕೆ ’ಶ್ರೀ ಕೃಷ್ಣದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ‘ವಿದ್ಯಾರಣ್ಯ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಇಂತಿದೆ.
‘ಶ್ರೀ ಕೃಷ್ಣದೇವರಾಯ ವೇದಿಕೆ” ಯಲ್ಲಿನ ಕಾರ್ಯಕ್ರಮಗಳು:
     ಸಂಜೆ 5 ರಿಂದ 7 ಗಂಟೆ ವರೆಗೆ ಉತ್ಸವದ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು, ನಂತರ ಗಂಗಾವತಿಯ ರಘುನಾಥ ಬದಿ ಅವರಿಂದ ಕೊಳಲುವಾದನ, ಕೊಪ್ಪಳದ ಸದಾಶಿವಪಾಟೀಲ್ ರಿಂದ ಸುಗಮ ಸಂಗೀತ, ಕುಷ್ಟಗಿ ಶರಣಪ್ಪ ವಡಿಗೇರಿ ರಿಂದ ಜಾನಪದ ಗೀತೆ, ಗಂಗಾವತಿಯ ದೊಡ್ಡಯ್ಯ ವೀರಯ್ಯ ಕಲ್ಲೂರ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ರಾಯಚೂರು ಅಂಬಯ್ಯ ನುಲಿ ಅವರಿಂದ ವಚನಗಾಯನ, ಬೆಂಗಳೂರು ಶಾಂತಿರಾವ್ ಅವರಿಂದ ವೀಣಾವಾದನ, ನೂಪುರನಾದ-ನಿಕೇತನ ತಂಡದಿಂದ ಭರತನಾಟ್ಯ, ಆನೆಗೊಂದಿ ಕುಮಾರಿ ಚಂಪಕಮಾಲ ರಿಂದ ಸುಗಮ ಸಂಗೀತ, ಗಂಗಾವತಿಯ ಮಾಸ್ ನೃತ್ಯ ಕಲಾ ಸಂಘದಿಂದ ನೃತ್ಯ ಪ್ರದರ್ಶನ, ಮರಿಯಮ್ಮನಹಳ್ಳಿ ಮಂಜವ್ವ ಜೋಗತಿ ಮತ್ತು ತಂಡದಿಂದ ಜೋಗತಿ ನೃತ್ಯ ಪ್ರದರ್ಶನ, ಕೊಪ್ಪಳದ ಮಹೇಶ್ವರಿ ನೀರಜಾ ತಂಡದಿಂದ ನೃತ್ಯ ಪ್ರದರ್ಶನ, ಬೆಂಗಳೂರು ಸುಮಾ ವಿಜಯ್ ಮತ್ತು ತಂಡದಿಂದ ಭಾರತೀಯ ನೃತ್ಯ ವೈವಿಧ್ಯ, ಭಾಗ್ಯನಗರದ ಅಂಬಿಕಾ ಉಪ್ಪಾರ ರಿಂದ ಭಾವಗೀತೆಗಳು, ಹುಲಿಹೈದರ್ ತಾಂಡಾದ ಮಂಜುಳಾ ತಂಡದಿಂದ ಲಂಬಾಣಿ ನೃತ್ಯ, ಗಂಗಾವತಿ ಮೇಘನಾ ಪರಗಿ ರಿಂದ ಜಾನಪದ ಗೀತೆಗಳು, ಯಲಬುರ್ಗಾ ಜೀವನ್‍ಸಾಬ್ ಬಿನ್ನಾಳರಿಂದ ಜಾನಪದ ಗೀತೆಗಳ ಗಾಯನ, ಚಲನಚಿತ್ರ ನಟ ಪ್ರೇಮ್ ಮತ್ತು ಚಲನಚಿತ್ರ ಹಿನ್ನೆಲೆಗಾಯಕಿ ಚೈತ್ರ ಮತ್ತು ಸಂಗಡಿಗರಿಂದ ಸಂಗೀತ ರಸ ಸಂಜೆ.  ಕಾರಟಗಿಯ ಶಾರದಾ ನೃತ್ಯ ಕಲಾನಿಕೇತನ ತಂಡದಿಂದ ದೇಶಭಕ್ತಿ ನೃತ್ಯ.  ಗಂಗಾವತಿಯ ಜಲೀಲ್ ಪಾಷಾರಿಂದ ತಬಲಾ ಸೋಲೋ, ಗಂಗಾವತಿಯ ನರಸಿಂಹಜೋಷಿ, ಕಾರಟಗಿಯ ಕೋಗಳಿ ಕೊಟ್ರೇಶ ಅವರಿಂದ ಹಾಸ್ಯ ರಸಾಯನ ಕಾರ್ಯಕ್ರಮ.  ಪರಶುರಾಮ್ ದೊಡ್ಡಮನಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ.  ವಿಜಯಪುರದ ಯಲ್ಲಪ್ಪ ಬಸಪ್ಪ ಕೋಟಗುಂಡಿ ರಿಂದ ಸುಗಮ ಸಂಗೀತ.  ನಾಗರಾಜ ಶಾವಿ ಅವರಿಂದ ಕೊಳಲುವಾದನ.  ಗಂಗಾವತಿಯ ಶಿಲ್ಪಾ ಎಂ. ಅವರಿಂದ ಭಾವಗೀತೆ.  ಆನೆಗೊಂದಿಯ ತೇಜಸ್ವಿನಿ ಅವರಿಂದ ಭರತನಾಟ್ಯ ಹಾಗೂ ಹಿರೇಜಂತಕಲ್‍ನ ಕೆ. ಮಾರೆಪ್ಪ ಅವರಿಂದ ವಯಲಿನ್ ವಾದನ ಕಾರ್ಯಕ್ರಮ ಜರುಗಲಿದೆ.  ಉದ್ಘಾಟನ ಸಮಾರಂಭದ ನಾಡಗೀತೆ ಮತ್ತು ರೈತಗೀತೆಯನ್ನು ಗಂಗಾವತಿಯ ಶ್ರೀ ಗಾನಯೋಗಿ ಗುರುಪಂಚಾಕ್ಷರ ಸಂಗೀತ ವಿದ್ಯಾಸಂಸ್ಥೆಯ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. 
ವಿದ್ಯಾರಣ್ಯ ವೇದಿಕೆಯ (ಸರ್ಕಾರಿ ಹಿ.ಪ್ರಾ.ಶಾಲೆ ಆವರಣ) ಕಾರ್ಯಕ್ರಮಗಳು : ಏ. 11 ರಂದು ಸಂಜೆ 7 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಗಂಗಾವತಿಯ ಎ. ಮಂಜುಳಾ ಉಮೇಶ ರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ.  ಆನೆಗೊಂದಿ ಚಂದ್ರಕಲಾ ಭೂಮಿ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ.  ಕೊಪ್ಪಳದ ರಿದಂ ಡ್ಯಾನ್ಸ್ ಅಕಾಡೆಮಿ ಅವರಿಂದ ಶಿವತಾಂಡವ ನೃತ್ಯ.  ಭಾಗ್ಯನಗರದ ಪರಶುರಾಮ ಬಣ್ಣದ ಅವರಿಂದ ಸುಗಮ ಸಂಗೀತ.  ಚಾಮಲಾಪುರದ ಮರಿಯಪ್ಪ ಮತ್ತು ತಂಡದಿಂದ ಜಾನಪದ ಗೀತೆಗಳ ಗಾಯನ.  ಕೊಪ್ಪಳದ ಅಭಿನವ ಸಂಗೀತ ಸೇವಾಸಂಸ್ಥೆ ಅವರಿಂದ ನೃತ್ಯ ಪ್ರದರ್ಶನ.  ಹಿರೇಜಂತಕಲ್‍ನ ರಜನಿ ಆರತಿ ಮತ್ತು ತಂಡದಿಂದ ವಚನ ಗಾಯನ.  ಗಂಗಾವತಿಯ ಕರ್ನಾಟಕ ವಿಕಲಚೇತನರ ಒಕ್ಕೂಟ ತಂಡದಿಂದ ಭಾವಗೀತೆಗಳು.  ಗಂಗಾವತಿಯ ಶಿವಪ್ಪ ಹುಳ್ಳಿ ವಡ್ಡರಹಟ್ಟಿ ಅವರಿಂದ ಸುಗಮ ಸಂಗೀತ.  ಗಂಗಾವತಿ ಸದಾನಂದ ಸೇಟ್ ಎಸ್.ಜೆ. ಅವರಿಂದ ದಾಸರ ಪದ.  ಗುಂಡೂರು ಹುಸೇನ್‍ಸಾಬ್ ರಿಂದ ರಂಗಗೀತೆಗಳು.  ಭಾಗ್ಯನಗರದ ಟ್ಯಾಲೆಂಟೆಡ್ ಡ್ಯಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ಪ್ರದರ್ಶನ.  ಹುಲಗಿಯ ಶೃತಿ ಹ್ಯಾಟಿ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ. ರಾಮಣ್ಣ ಮಾದಿನೂರು ಅವರಿಂದ ಭಜನಾ ಪದಗಳು.  ಕೃಷ್ಣಪ್ಪ ಕುಕನೂರು ಅವರಿಂದ ಸುಗಮ ಸಂಗೀತ.  ಮುಂಡರಗಿ ವೀರಪ್ಪ ಮಾಸ್ತರ್ ಅವರಿಂದ ರಂಗ ಗೀತೆ.  ಆನೆಗೊಂದಿಯ ಸಂಗೀತ ಸಾಗರ ಕಲಾತಂಡದಿಂದ ಭಾವಗೀತೆ.  ಮೋರನಾಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ್ ಅವರಿಂದ ತೊಗಲುಗೊಂಬೆ ಪ್ರದರ್ಶನ (ರಾಮಾಯಣ) ಕಾರ್ಯಕ್ರಮಗಳು ಜರುಗಲಿವೆ.

ಏ.11 ರಂದು ಆನೆಗೊಂದಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆ

ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಏ. 11 ಮತ್ತು 12 ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿರುವ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭ ಏ. 11 ರಂದು ಸಂಜೆ 5 ಗಂಟೆಗೆ ಆನೆಗೊಂದಿ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿರುವ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ಜರುಗಲಿದೆ.
     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆನೆಗೊಂದಿ ಉತ್ಸವದ ಉದ್ಘಾಟನೆ ನೆರವೇರಿಸುವರು.  ಕರ್ನಾಟಕ ವಿಧಾನಸಭೆಯ ಸಭಾಪತಿ ಕಾಗೋಡು ತಿಮ್ಮಪ್ಪ ಅವರ ಘನ ಉಪಸ್ಥಿತಿಯಲ್ಲಿ ಜರುಗುವ ಈ ಸಮಾರಂಭದ ಅಧ್ಯಕ್ಷತೆಯನ್ನು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ವಹಿಸುವರು.  ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನ ನೆರವೇರಿಸುವರು.  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.  ಮುಖ್ಯ ಅತಿಥಿಗಳಾಗಿ ಮೂಲಭೂತ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಹಜ್ ಸಚಿವ ರೋಷನ್ ಬೇಗ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ತುಂಗಭದ್ರಾ ಕಾಡಾ ಅಧ್ಯಕ್ಷ ಎ. ವಸಂತಕುಮಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್‍ಕುಮಾರ್, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ. ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಜಿ.ಪಂ. ಸದಸ್ಯೆ ವಿಜಯಲಕ್ಷ್ಮೀ ರಾಮಕೃಷ್ಣ, ತಾ.ಪಂ. ಸದಸ್ಯೆ ರಾಜೇಶ್ವರಿ ಸುರೇಶ್, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಅವರು ಭಾಗವಹಿಸುವರು.  ವಿಜಯನಗರದ ಅರಸು ಮನೆತನದವರಾದ ಶ್ರೀರಂಗದೇವರಾಯಲು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಆನೆಗೊಂದಿ ಉತ್ಸವಕ್ಕೆ ಕ್ಷಣಗಣನೆ: ಗತವೈಭವ ನೆನಪಿಸುವ ಮುಖ್ಯ ವೇದಿಕೆ


ಕೊಪ್ಪಳ ಏ. 10 (ಕರ್ನಾಟಕ ವಾರ್ತೆ): ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಉತ್ಸವ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 
     ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಎನಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಏ. 11 ಮತ್ತು 12 ರಂದು ಆನೆಗೊಂದಿ ಉತ್ಸವ ಆಚರಣೆಯ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮದ ರಂಗನಾಥಸ್ವಾಮಿ ಜಾತ್ರೋತ್ಸವವು ಗ್ರಾಮಸ್ಥರ ಸಂತಸವನ್ನು ಇಮ್ಮಡಿಗೊಳಿಸಿದೆ.  ಆನೆಗೊಂದಿ ಉತ್ಸವಕ್ಕಾಗಿ ಗ್ರಾಮದ ಹೊರವಲಯದಲ್ಲಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ಮುಖ್ಯ ವೇದಿಕೆಗೆ ಶ್ರೀಕೃಷ್ಣದೇವರಾಯ ವೇದಿಕೆ ಎಂದು ಹೆಸರಿಡಲಾಗಿದೆ.  ವೇದಿಕೆಯನ್ನು ಆನೆಗೊಂದಿ ಕೋಟೆಯ ಮುಖ್ಯದ್ವಾರದ ಪ್ರತಿರೂಪದಿಂದ ಅಲಂಕರಿಸಲಾಗಿದ್ದು, ವೇದಿಕೆಯ ಹಿಂಭಾಗದಲ್ಲಿನ ಪ್ರಕೃತಿ ನಿರ್ಮಿತ ಬಂಡೆ, ಕಲ್ಲು-ಗುಡ್ಡ ವೇದಿಕೆಯ ಸರಳ ಸೌಂದರ್ಯವನ್ನು ಆಕರ್ಷಕಗೊಳಿಸಿದೆ.  ವೇದಿಕೆ ಹಿಂಭಾಗದ ಕಲ್ಲು-ಬಂಡೆಗಳಿಗೆ ವರ್ಣಮಯ ದೀಪಾಲಂಕಾರಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.  ವೇದಿಕೆಯ ಪಕ್ಕದಲ್ಲಿಯೇ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಿದ್ದತೆ ಅಂತಿಮ ಹಂತ ತಲುಪಿದೆ.  ಶ್ರೀಕೃಷ್ಣದೇವರಾಯ ವೇದಿಕೆಯ ಮುಂಭಾಗದಲ್ಲಿ ಗಣ್ಯರು, ಮಾಧ್ಯಮದವರು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಈಗಾಗಲೆ ಪೂರ್ಣಗೊಳಿಸಲಾಗಿದೆ.  ಮುಖ್ಯ ವೇದಿಕೆಯ ಬಲಭಾಗದಲ್ಲಿ ವಸ್ತುಪ್ರದರ್ಶನ ಮಳಿಗೆಯನ್ನು ತೆರೆಯಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಹ ಮಳಿಗೆಗಳ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದೆ.  ವೇದಿಕೆ ಪ್ರವೇಶ ಆವರಣದ ಮೈದಾನದಲ್ಲಿ ಕುಸ್ತಿ ಪಂದ್ಯಗಳು ಸೇರಿದಂತೆ ವಿವಿಧ ಕ್ರೀಡಾಕೂಟಕ್ಕೆ ಮೈದಾನವನ್ನು ಸಿದ್ಧಪಡಿಸಲಾಗಿದ್ದು, ಏ. 12 ರಂದು ಕ್ರೀಡಾಕೂಟಗಳು ಪ್ರಾರಂಭವಾಗಲಿದೆ. 
      ಆನೆಗೊಂದಿ ಗ್ರಾಮದ ಶಾಲಾ ಆವರಣದಲ್ಲಿ ಉತ್ಸವದ ಅಂಗವಾಗಿ ಸಮಾನಾಂತರ ವೇದಿಕೆಯನ್ನು ನಿರ್ಮಿಸಲಾಗಿದ್ದು, ಇದಕ್ಕೆ ವಿದ್ಯಾರಣ್ಯ ವೇದಿಕೆ ಎಂದು ಹೆಸರಿಡಲಾಗಿದೆ.  ಆನೆಗೊಂದಿ ಉತ್ಸವವನ್ನು ಈ ಬಾರಿ ಜನೋತ್ಸವವನ್ನಾಗಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಎಲ್ಲ ವ್ಯವಸ್ಥೆ ಕೈಗೊಂಡಿದ್ದು, ಎಲ್ಲ ಸಾರ್ವಜನಿಕರು ಉತ್ಸವಕ್ಕೆ ಆಗಮಿಸಿ, ಉತ್ಸವದ ರಸದೌತಣ ಸವಿಯಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮನವಿ ಮಾಡಿಕೊಂಡಿದ್ದಾರೆ.

Wednesday, 8 April 2015

ಆನೆಗೊಂದಿ ಉತ್ಸವ : ಮೆರವಣಿಗೆಗೆ ಆನೆ ಅಂಬಾರಿಯೇ ಇರಲಿ- ಶಿವರಾಜ್ ತಂಗಡಗಿಕೊಪ್ಪಳ ಏ. 08 (ಕರ್ನಾಟಕ ವಾರ್ತೆ) : ಆನೆಗೊಂದಿ ಉತ್ಸವದ ಅಂಗವಾಗಿ ಇದೇ ಏ. 11 ರಂದು ಆನೆಗೊಂದಿಯಲ್ಲಿ ಏರ್ಪಡಿಸಲಾಗುವ ವೈಭವದ ಮೆರವಣಿಗೆಗೆ ಆನೆ ಅಂಬಾರಿಯನ್ನೇ ವ್ಯವಸ್ಥೆಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಆನೆಗೊಂದಿ ಉತ್ಸವ ಸಿದ್ಧತೆ ಕುರಿತಂತೆ ಗಂಗಾವತಿ ತಾಲೂಕು ಆನೆಗೊಂದಿ ಗ್ರಾಮದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಆನೆಗೊಂದಿ ಉತ್ಸವದ ಮೆರವಣಿಗೆಗೆ ಆನೆ ಅಂಬಾರಿಯನ್ನೇ ವ್ಯವಸ್ಥೆಗೊಳಿಸಬೇಕು. ಉತ್ಸವ ಕುರಿತಂತೆ ಕಳೆದ ವಾರ ಆನೆಗೊಂದಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮೆರವಣಿಗೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಆನೆ ಅಂಬಾರಿಯ ಬದಲಿಗೆ ಕುದುರೆ ಸಾರೋಟ್ ಬಳಸಲು ನಿರ್ಧಾರ ಕೈಗೊಳ್ಳಲಾಗಿತ್ತು.  ಆದರೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಮೆರವಣಿಗೆಗೆ ಆನೆ ಅಂಬಾರಿಯನ್ನೇ ಬಳಸುವಂತೆ ಮನವಿ ಮಾಡಿಕೊಂಡಿದ್ದಾರೆ.  ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಉಪಸಂರಕ್ಷಣಾಧಿಕಾರಿಗಳು, ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿರುತ್ತದೆ.  ಅಲ್ಲದೆ ಮೆರವಣಿಗೆ ಸಾಗಿ ಬರುವ ದಾರಿಯು ಡಾಂಬರ್ ರಸ್ತೆಯಾಗಿದ್ದು, ಆನೆಯ ಕಾಲಿಗೆ ಹೆಚ್ಚಿನ ಬಿಸಿ ತಾಗುವುದರಿಂದ, ರೊಚ್ಚಿಗೇಳುವ ಸಾಧ್ಯತೆ ಇದೆ ಎಂದರು.  ರಸ್ತೆಗೆ ಟ್ಯಾಂಕರ್ ಮೂಲಕ ನೀರು ಹಾಕಿ, ತಂಪಾಗಲು ಸೂಕ್ತ ವ್ಯವಸ್ಥೆ ಕೈಗೊಂಡು, ಆನೆ ಅಂಬಾರಿಗೆ ವ್ಯವಸ್ಥೆ ಮಾಡುವಂತೆ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರೇಮ್ ಮತ್ತು ಚೈತ್ರಾ ಕಾರ್ಯಕ್ರಮ : ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಲ್ಲಿ  ಏ. 11 ರಂದು ಚಲನಚಿತ್ರ ತಂಡವಾಗಿರುವ ಪ್ರೇಮ್ ಮತ್ತು ಚೈತ್ರಾ ಅವರ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದೆ.  ಏ. 12 ರಂದು ಜೂನಿಯರ್ ಉಪೇಂದ್ರ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.  ಉಳಿದಂತೆ ಮುಖ್ಯವೇದಿಕೆ ಮತ್ತು ಸಮಾನಾಂತರ ವೇದಿಕೆಗಳಿಗೆ ರಾಜ್ಯ ಮಟ್ಟದ ಕಲಾವಿದರು, ನೆರೆಹೊರೆ ಜಿಲ್ಲೆಯ ಕಲಾವಿದರು, ಸ್ಥಳೀಯರು ಸೇರಿದಂತೆ ಒಟ್ಟು 96 ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.  ಇದರಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ತಿಳಿಸಿದರು.  ಉತ್ಸವದ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಕಲಾವಿದರಿಗೆ ಕಾರ್ಯಕ್ರಮ ನೀಡಲು ಶೀಘ್ರ ಮಾಹಿತಿ ಹಾಗೂ ಆಹ್ವಾನ ನೀಡುವಂತೆ ಸಚಿವರು ಸೂಚಿಸಿದರು.
ಕ್ರೀಡಾಕೂಟ : ಉತ್ಸವ ಸಂದರ್ಭದಲ್ಲಿ ಏ. 12 ರಂದು ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದ್ದು, ಪುರುಷರಿಗೆ ಏ. 12 ರಂದು ಬೆ. 7-30 ಗಂಟೆಗೆ ದುರ್ಗಾ ದೇವಿ ದೇವಸ್ಥಾನದ ಪ್ರವೇಶದ್ವಾರದಿಂದ ಮ್ಯಾರಥಾನ್ ಓಟ, ಮುಖ್ಯವೇದಿಕೆ ಬಳಿ ಕುಸ್ತಿ ಅಖಾಡ ನಿರ್ಮಿಸಿ, ಕುಸ್ತಿ ಹಾಗೂ ಭಾರ ಎತ್ತಿ ಬಸ್ಕಿ ಹೊಡೆಯುವ ಸ್ಪರ್ಧೆ ಆಯೋಜಿಸಲಾಗುವುದು.  ಅಲ್ಲದೆ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ.  ಮಹಿಳೆಯರಿಗೆ ಏ. 12 ರಂದು ಹನುಮನಹಳ್ಳಿಯಿಂದ ಮ್ಯಾರಥಾನ್ ಓಟ, ರಂಗನಾಥಸ್ವಾಮಿ ದೇವಾಲಯ ಆವರಣದಲ್ಲಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದರು.
ಉಚಿತ ಬಸ್ ವ್ಯವಸ್ಥೆ : ಆನೆಗೊಂದಿ ಉತ್ಸವಕ್ಕೆ ಗಂಗಾವತಿಯಿಂದ ಆನೆಗೊಂದಿಗೆ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಆನೆಗೊಂದಿಗೆ ಉಚಿತವಾಗಿ ಪ್ರಯಾಣಿಸಲು ಸಾರ್ವಜನಿಕರಿಗೆ 02 ಬಸ್‍ಗಳನ್ನು ವ್ಯವಸ್ಥೆಗೊಳಿಸಬೇಕು.  ಇದಕ್ಕಾಗಿ ಸಾರಿಗೆ ಸಂಸ್ಥೆಯೊಂದಿಗೆ ದೈನಂದಿನ ಒಪ್ಪಂದದ ಆಧಾರದ ಮೇಲೆ ಬಸ್ ಸೇವೆ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. 
         ಆನೆಗೊಂದಿ ಉತ್ಸವ ಆಚರಣೆ ಸಂಬಂಧಿಸಿದಂತೆ ರಚಿಸಲಾಗಿರುವ 17 ಉಪಸಮಿತಿಗಳು ಕೈಗೊಂಡಿರುವ ಸಿದ್ಧತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. 
         ಸಭೆಯಲ್ಲಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ್, ನಗರಸಭೆ ಅಧ್ಯಕ್ಷ ವೆಂಕಟೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಡಿವೈಎಸ್‍ಪಿ ವಿನ್ಸೆಂಟ್ ಶಾಂತಕುಮಾರ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.