Tuesday, 31 March 2015

ಏ. 8 ರಿಂದ ಧಾರವಾಡದಲ್ಲಿ ರಾಜ್ಯಮಟ್ಟದ ಮಹಿಳಾ ವಿಜ್ಞಾನ ಸಮಾವೇಶ

ಕೊಪ್ಪಳ ಏ. 01 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ``ಮಹಿಳೆ ಮತ್ತು ವಿಜ್ಞಾನ’’ ಯೋಜನೆಯಡಿ   ರಾಜ್ಯಮಟ್ಟದ ಮಹಿಳಾ ವಿಜ್ಞಾನ ಸಮಾವೇಶ  ಏ. 08 ಮತ್ತು 09 ರಂದು ಎರಡು ದಿನಗಳ ಕಾಲ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಂಟಿ ಸಹಯೋಗದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
      ಪ್ರಸ್ತುತ ರಾಜ್ಯಮಟ್ಟದ ಮಹಿಳಾ ವಿಜ್ಞಾನ ಸಮಾವೇಶದಲ್ಲಿ ಪ್ರತಿ ಜಿಲ್ಲೆಯಿಂದ ತಲಾ ಇಬ್ಬರಂತೆ ಆಯ್ದ ಮಹಿಳಾ ಕಾರ್ಯಕರ್ತರು, ಸ್ತ್ರೀ ಶಕ್ತಿ ಕಾರ್ಯಕರ್ತರು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಹಾಗು ಆಯ್ದ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು (ಅಂದಾಜು 125 ಜನ) ಭಾಗವಹಿಸಲಿದ್ದಾರೆ. ಇದಲ್ಲದೆ ಮಹಿಳಾ ವಿಜ್ಞಾನಿಗಳು, ವಿಜ್ಞಾನ ಸಂವಹನಕಾರರು, ಶಿಕ್ಷಣ ತಜ್ಞರು, ಪತ್ರಕರ್ತರೂ ಸಹ ಸಮಾವೇಶದಲ್ಲಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.   ಸಮಾವೇಶದ ಉದ್ಘಾಟನಾ ಕಾರ್ಯಕ್ರಮವನ್ನು ಏ. 08 ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.  ಸಮಾವೇಶವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ರವರು ಉದ್ಘಾಟಿಸಲಿದ್ದು, ಪ್ರಾದೇಶಿಕ ಕೇಂದ್ರದ ನಿರ್ದೇಶಕÀ ಡಾ. ಉದಯ ರಾಯ್ಕರ್ ಹಾಗೂ ಕರಾವಿಪ ಖಜಾಂಚಿ ಗಿರೀಶ್ ಕಡ್ಲೇವಾಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜ್ಞಾನ ಪರಿಷತ್ತಿನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎಸ್.ವಿ. ಸಂಕನೂರ ರವರು ವಹಿಸುವರು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಏ. 02 ರಂದು ಕೊಪ್ಪಳದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಕೊಪ್ಪಳ ಏ. 01 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಏ. 02 ರಂದು ಬೆಳಿಗ್ಗೆ 8 ಗಂಟೆಗೆ ಕೊಪ್ಪಳದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ.
          ಕಾರ್ಯಕ್ರಮಕ್ಕೆ ನಿವೃತ್ತ ಸಶಸ್ತ್ರ ಆರಕ್ಷಕ ಉಪನಿರೀಕ್ಷಕ ಶೇಷಾಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ವಂದನೆ ಸ್ವೀಕರಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ತಿಳಿಸಿದ್ದಾರೆ.

ಏ. 04 ರಂದು ಚಂದ್ರಗ್ರಹಣ : ಹುಲಿಗೆಮ್ಮ ದೇವಿ ದರ್ಶನ ಇಲ್ಲ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ) : ಇದೇ ಏಪ್ರಿಲ್ 04 ಶನಿವಾರದಂದು ದವನದ ಹುಣ್ಣಿಮೆ ಇದ್ದು, ಇದೇ ದಿನದಂದು ಚಂದ್ರಗ್ರಹಣ ಇರುವುದರಿಂದ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ 11.00 ಗಂಟೆಯಿಂದ 7.30 ರವರೆಗೆ ದೇವಿಯ ದರ್ಶನ ಇರುವುದಿಲ್ಲ.  ಭಕ್ತಾದಿಗಳು ಸಹಕರಿಸುವಂತೆ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 

ಪರೀಕ್ಷಾರ್ಥ ರೈಲು ಸಂಚಾರ : ಸಂಸದರಿಂದ ಅಭಿನಂದನೆ

ಕೊಪ್ಪಳ ಮಾ. 31 : ಮುನಿರಾಬಾದ್-ಮೆಹಬೂಬ್‍ನಗರ ನೂತನ ರೈಲು ಮಾರ್ಗದಲ್ಲಿ ಬರುವ ಕೊಪ್ಪಳ ತಾಲೂಕು ಗಿಣಿಗೇರಾದಿಂದ ಜಬ್ಬಲಗುಡ್ಡ ವರೆಗಿನ ಸುಮಾರು 14. 5 ಕಿ.ಮೀ. ನೂತನ ರೈಲು ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ರೈಲಿನ ಯಶಸ್ವಿ ಸಂಚಾರ ನಡೆಸಿದ್ದಕ್ಕಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ರೈಲ್ವೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾಜಿಕ ಅಸಮತೋಲನ ನಿವಾರಣೆಗೆ ಸಮೀಕ್ಷೆ ಸಹಕಾರಿ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ಹಲವು ಭಾಷೆ, ಸಂಸ್ಕøತಿಗಳನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಿರುವ ರಾಷ್ಟ್ರವಾಗಿದೆ. ಭಾರತ ಮಾತೆಯ ಹೆಮ್ಮೆಯ ಪುತ್ರಿಯಾಗಿರುವ ಕರ್ನಾಟಕ ರಾಜ್ಯವೂ ಸಹ ವಿವಿಧ ಸಂಸ್ಕøತಿ, ಭಾಷೆ, ಪ್ರಾದೇಶಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.  ಈ ರಾಜ್ಯದಲ್ಲಿ ಹಲವಾರು ಭಾಷೆಗಳನ್ನಾಡುವವರು, ವಿವಿಧ ಜಾತಿ, ಧರ್ಮದವರು ನೆಮ್ಮದಿಯಿಂದ ನೆಲೆಸಿದ್ದಾರೆ. 
     ಎಲ್ಲ ಜಾತಿ, ಜನಾಂಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯ ನಿಜಕ್ಕೂ ಅದ್ಭುತ ಸಾಧನೆಯನ್ನೇ ತೋರಿದೆ.  ರಾಜ್ಯದಲ್ಲಿ ನೆಲೆಕಂಡಿರುವ ಹಲವಾರು ವರ್ಗದವರ, ನಾನಾ ಭಾಷಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಬಗ್ಗೆ ಸಮಗ್ರ, ನೈಜ ಹಾಗೂ ನಿಖರ ಮಾಹಿತಿಯನ್ನು ಸಂಗ್ರಹಿಸಲು ಇದೀಗ ರಾಜ್ಯ ಸರ್ಕಾರ ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಏ. 11 ರಿಂದ 30 ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಸಮೀಕ್ಷೆ ನಡೆಯಲಿದೆ.
ಸಮೀಕ್ಷೆ ಏಕೆ ಬೇಕು ? : ಭಾರತ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿವಾರು ಜನಗಣತಿ 1872 ರಲ್ಲಿ ನಡೆದಿದೆ.  ಅಲ್ಲದೆ 1881 ರಲ್ಲಿ ಸಮೀಕ್ಷೆ ಅತ್ಯಂತ ವೈಜ್ಞಾನಿಕವಾಗಿ ಜರುಗಿದೆ.  ಆಗಿನಿಂದ 1931 ರವರೆಗೂ ಇದೇ ರೀತಿ ಗಣತಿ ಕಾರ್ಯ ನಡೆದಿದೆ.  1931 ರ ನಂತರ ಇದುವರೆಗೂ ಹಿಂದುಳಿದ ವರ್ಗವಾರು, ಜಾತಿವಾರು ಸಮೀಕ್ಷಾ ಕಾರ್ಯ ವೈಜ್ಞಾನಿಕವಾಗಿ ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ನಡೆದಿಲ್ಲ.  ಇದರಿಂದಾಗಿ ಯಾವುದೇ ಹಿಂದುಳಿದ ವರ್ಗಗಳ ಸಂಖ್ಯೆ ಹಾಗೂ ಸ್ಥಿತಿ-ಗತಿಗಳು ಅಂದಾಜು ಆಧಾರದಲ್ಲಿಯೇ ಮಾಡಲಾಗುತ್ತಿದೆ.  ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ವಾಸ್ತವಿಕ ಮತ್ತು ಬಹಳಷ್ಟು ಸಂಕೀರ್ಣವಾಗಿದೆ.  ಪ್ರಜಾಪ್ರಭುತ್ವ ಆಧಾರಿತ ನಮ್ಮ ಸಂವಿಧಾನವು ಸಮಾಜದಲ್ಲಿ ಜಾತಿ, ವರ್ಗಗಳ ಮಧ್ಯೆ ಸಮಾನತೆಯನ್ನು ಸಾರುತ್ತದೆ.  ಈ ನಿಟ್ಟಿನಲ್ಲಿ ಎಲ್ಲ ಸಮಾಜದ ಹಿತಕಾಯಲು ಪೂರಕವಾದ ಯೋಜನೆಗಳ ಮೂಲಕ ಅಭಿವೃದ್ಧಿ ಪಡಿಸಲು ಸರ್ಕಾರ ಶ್ರಮಿಸುತ್ತಿದೆ.  ಈ ಅಭಿವೃದ್ಧಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕಾಗಿದೆ.  ಆದರೆ ಯೋಜನೆಗಳನ್ನು ತಲುಪಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ಸಮಾಜ, ಜಾತಿ, ವರ್ಗದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ನಿಖರ ಮತ್ತು ವೈಜ್ಞಾನಿಕವಾಗಿ ಅರಿಯಲು ಇಂತಹ ಸಮೀಕ್ಷೆಗಳು ಅತ್ಯಂತ ಅವಶ್ಯವಾಗಿದೆ.  
ಸಮೀಕ್ಷೆ ನಡೆದು ಬಂದ ದಾರಿ : ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು, ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಗತಿಗಳ ಅಧ್ಯಯನ ಮಾಡಬೇಕಿದೆ.  ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶ ಕಲ್ಪಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಚಿಂತನೆಯಿಂದ 1918 ರಲ್ಲಿಯೇ ಮಿಲ್ಲರ್ಸ್ ಸಮಿತಿಯನ್ನು ನೇಮಕ ಮಾಡಲಾಯಿತು.  1960 ರಲ್ಲಿ ಡಾ. ಆರ್. ನಾಗನಗೌಡ ಅವರ ನೇತೃತ್ವದ ಮೈಸೂರು ಹಿಂದುಳಿದ ವರ್ಗಗಳ ಕಮಿಟಿ ರಚನೆಯಾಗಿತ್ತು.  ತದನಂತರ ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿ-ಗತಿಗಳು ಮತ್ತು ಸಮಸ್ಯೆಗಳನ್ನು ಅಧ್ಯಯನ ಮಾಡುವ ಸಲುವಾಗಿ ಎಲ್.ಜಿ. ಹಾವನೂರು (1972-75), ಟಿ. ವೆಂಕಟಸ್ವಾಮಿ (1983-86), ಜಸ್ಟೀಸ್ ಓ. ಚಿನ್ನಪ್ಪರೆಡ್ಡಿ (1988-90), ಕುದೂರು ನಾರಾಯಣ ರೈ (1994-95), ಪ್ರೊ. ರವಿವರ್ಮ ಕುಮಾರ್ (1997-2000), ಎಸ್. ಮುನಿರಾಜು (2001-03), ಎಸ್. ಸಿದ್ದಗಂಗಯ್ಯ (2003-06), ಡಾ. ಸಿ.ಎಸ್. ದ್ವಾರಕಾನಾಥ್ (2007-10), ಎನ್. ಶಂಕ್ರಪ್ಪ (2011-13) ಇವರುಗಳ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದೆ.  ಸದ್ಯ ಹೆಚ್. ಕಾಂತರಾಜ್ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತದ್ದು, ಮಹತ್ವಕಾಂಕ್ಷಿ ಸಮೀಕ್ಷೆಗೆ ಮುಂದಡಿ ಇಟ್ಟಿದ್ದಾರೆ.  ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕ ಮತ್ತು ವಾಸ್ತವಿಕತೆಯ ಮಾಹಿತಿ ಪಡೆದುಕೊಂಡು, ಅವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುವ ಕಾರ್ಯ ಆಯೋಗ ನಿರ್ವಹಿಸುತ್ತದೆ.  1931 ರ ಜನಗಣತಿ ನಂತರ ನಡೆಸಿರುವ ಯಾವುದೇ ಜನಗಣತಿಯ ದಾಖಲೆಗಳಿಂದ ಜಾತಿ ಅಥವಾ ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ.  ಇದರಿಂದಾಗಿ ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳಿಗೆ ಕಷ್ಟಕರವಾಗಿದೆ.  ಎಲ್ಲ ಸಮುದಾಯಗಳ ಈಗಿನ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಮತ್ತು ಗಣತಿಯಲ್ಲಿ ಹೊರಹೊಮ್ಮುವ ಅಂಶಗಳ ಆಧಾರದಲ್ಲಿ, ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ, ಅವರ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿರುತ್ತದೆ.  ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಾತಿ, ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಯನ್ನು ಏ. 11 ರಿಂದ 30 ರವರೆಗೆ ನಡೆಸಲು ಆಯೋಗ ಮತ್ತು ಸರ್ಕಾರ ನಿರ್ಧರಿಸಿದೆ.
     ಇದೇ ಏಪ್ರಿಲ್ 11 ರಿಂದ ಸಮೀಕ್ಷೆಗಾಗಿ ಮನೆ, ಮನೆಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ತಮ್ಮ ಸ್ಥಿತಿಗತಿಗಳ ಬಗ್ಗೆ ಆಯಾ ಕುಟುಂಬದ ಮುಖ್ಯಸ್ಥರು, ವಾಸ್ತವಿಕ, ನಿಖರವಾದ ಮತ್ತು ನೈಜ ಮಾಹಿತಿ ನೀಡಿ ಸಹಕರಿಸಬೇಕಿದೆ.  ಆಧಾರ್ ಕಾರ್ಡ್ ದಾಖಲೆ ಹಾಗೂ ಮತದಾರರ ಗುರುತಿನ ಚೀಟಿ ದಾಖಲೆಯನ್ನು ಸಿದ್ಧವಾಗಿಟ್ಟುಕೊಂಡು, ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಹಕರಿಸಬೇಕು ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು.

ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆಗೆ ಮೈಸೂರಿನಲ್ಲಿ ತರಬೇತಿ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮುಂದಿನ ಮೇ ತಿಂಗಳ ಕೊನೆಯ ವಾರದಲ್ಲಿ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
     ತರಬೇತಿಯಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಸಾಮಾನ್ಯ ಅಧ್ಯಯನ ವಿಷಯಗಳಿಗೆ ಆದ್ಯತೆ ನೀಡಲಾಗುವುದು. ದಾಖಲಾತಿ ಅವಧಿಯನ್ನು  ಏ. 10 ರವರೆÀಗೆ ವಿಸ್ತರಿಸಲಾಗಿದ್ದು, ಆಸಕ್ತರು ಈ ದಿನಾಂಕಗೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು  ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 0821-2515944 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬೇಸಿಗೆಯಲ್ಲಿ ಬೆಳಗಿನ ಸಮಯಕ್ಕೆ ಸರ್ಕಾರಿ ಕಚೇರಿಗಳು

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ) ; ಬೇಸಿಗೆಯ ಮಾಸಗಳಲ್ಲಿ ಗುಲಬರ್ಗಾ ವಿಭಾಗದ ಎಲ್ಲ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಬೆಳಿಗ್ಗೆ 08 ರಿಂದ ಮಧ್ಯಾಹ್ನ 1-30 ರವರೆಗೆ ನಿಗದಿಪಡಿಸಲಾಗಿದೆ.
     ಬೇಸಿಗೆಯ ಅವಧಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ  ಕೊಪ್ಪಳ ಜಿಲ್ಲೆಯೂ ಸೇರಿದಂತೆ ಗುಲಬರ್ಗಾ ವಿಭಾಗ ಎಲ್ಲ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಏ. 01 ರಿಂದ ಅನ್ವಯವಾಗುವಂತೆ ಬೆಳಿಗ್ಗೆ 08 ಗಂಟೆಯಿಂದ ಮಧ್ಯಾಹ್ನ 1-30 ರವರೆಗೆ ಕಾರ್ಯನಿರ್ವಹಿಸಲಿವೆ.  ಒಂದು ವೇಳೆ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾದಲ್ಲಿ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ಅಂದರೆ ಎಂದಿನಂತೆ ಕಚೇರಿಗಳು ಕಾರ್ಯ ನಿರ್ವಹಿಸಲಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಎ. ಗಾಯತ್ರಿ ಅವರು ಅಧಿಕೃತ ಜ್ಞಾಪನದಲ್ಲಿ ತಿಳಿಸಿದ್ದಾರೆ.

ಖಜಾನೆ-2 ಯೋಜನೆ : ಅಗತ್ಯ ಮಾಹಿತಿ ಒದಗಿಸಲು ಖಜಾನೆ ಇಲಾಖೆ ಸೂಚನೆ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಖಜಾನೆ ಇಲಾಖೆಯೊಂದಿಗಿನ ಎಲ್ಲ ಬಗೆಯ ಬಿಲ್ಲುಗಳ ಸಲ್ಲಿಕೆ, ಚೆಕ್ ವಿತರಣೆ ಕುರಿತ ಎಲ್ಲ ವ್ಯವಹಾರಗಳನ್ನು ಸಂಪೂರ್ಣ ಗಣಕೀಕರಣ ವ್ಯವಸ್ಥೆಯಲ್ಲಿ ಕೈಗೊಳ್ಳುವ ಖಜಾನೆ-2 ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮಾಹಿತಿಯನ್ನು ಕೂಡಲೆ ಸಲ್ಲಿಸುವಂತೆ ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ್ ಸೂಚನೆ ನೀಡಿದ್ದಾರೆ.
     ಖಜಾನೆ-2 ಯೋಜನೆಯಡಿ ಎಲ್ಲ ಇಲಾಖೆಗಳ ಬಟವಾಡೆ ಮತ್ತು ಹಣ ಸೆಳೆಯುವ ಅಧಿಕಾರಿಗಳು ಬಿಲ್ಲುಗಳನ್ನು ಕಂಪ್ಯೂಟರ್ ಮೂಲಕವೇ ತಯಾರಿಸಿ, ಆನ್‍ಲೈನ್ ಮೂಲಕವೇ ಖಜಾನೆಗೆ ಸಲ್ಲಿಸುವ ಯೋಜನೆ ಇದಾಗಿದೆ.  ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಮ್ಮ ಕಚೇರಿ ಮುಖ್ಯಸ್ಥರು, ವಿಷಯ ನಿರ್ವಾಹಕರು, ಅಧೀಕ್ಷಕರು, ಬಿಲ್ಲುಗಳನ್ನು ಖಜಾನೆಗೆ ತಂದುಕೊಡುವ ಸಿಬ್ಬಂದಿಗಳ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಕೂಡಲೆ ಜಿಲ್ಲಾ ಖಜಾನೆಗೆ ಸಲ್ಲಿಸಬೇಕು.  ನಿಗದಿತ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಖಜಾನೆ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರು : ಜಿಲ್ಲೆಯ ಸ್ಥಿತಿ-ಗತಿ ಸಮಗ್ರ ವರದಿ ಸಲ್ಲಿಸಲು ಡಿ.ಸಿ. ಆರ್.ಆರ್. ಜನ್ನು ಸೂಚನೆ

ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಕುರಿತಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಸ್ಥಿತಿ-ಗತಿಗಳ ಸಮಗ್ರ ಮಾಹಿತಿಯನ್ನು ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿ-ಗತಿಗಳ ಬಗ್ಗೆ ಪರಿಸ್ಥಿತಿ ಪರಾಮರ್ಶಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಈಗಾಗಲೆ ಬೇಸಿಗೆ ಕಾಲದ ಪ್ರವೇಶವಾಗಿದ್ದು, ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾಧ್ಯತೆಗಳಿರುತ್ತವೆ.  ಬೇಸಿಗೆ ಸಂದರ್ಭದಲ್ಲಿ ಯಾವುದೇ ಗ್ರಾಮ ಅಥವಾ ನಗರಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.  ಸದ್ಯ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಮೂಲಗಳು, ಬೋರ್‍ವೆಲ್, ಕೈಪಂಪು, ಕುಡಿಯುವ ನೀರಿನ ಘಟಕ, ಕೆರೆ ಇತ್ಯಾದಿ ಮೂಲಗಳಿಂದ ನೀರು ಪೂರೈಕೆಯಾಗುತ್ತಿದ್ದಲ್ಲಿ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಸಮಗ್ರ ವರದಿ ಸಲ್ಲಿಸಬೇಕು.  ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಸಹಜವಾಗಿ ಕುಸಿಯುವ ಸಾಧ್ಯತೆ ಇದ್ದು, ಬೋರ್‍ವೆಲ್‍ಗಳ ಮೂಲಕ ನೀರು ಪೂರೈಕೆ ಮಾಡುತ್ತಿರುವೆಡೆ, ನೀರಿನ ಮಟ್ಟ ಕಡಿಮೆಯಾಗುವ ಸಂಭವ ಇರುತ್ತದೆ.  ಕೈಪಂಪುಗಳು ಸಹ ಕೆಲವೆಡೆ ಕೆಟ್ಟುಹೋಗಿದ್ದು, ದುರಸ್ತಿ ಮಾಡಿಸುವುದು ಅಗತ್ಯವಾಗಿರುತ್ತದೆ.  ಕೆರೆ ಅಥವಾ ಇತರೆ ಮೂಲಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಲ್ಲಿ, ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿರುವುದರಿಂದ, ಇವೆಲ್ಲವುಗಳನ್ನು ಅಧಿಕಾರಿಗಳು ಖುದ್ದು ಪರಾಮರ್ಶಿಸಿ, ಗ್ರಾಮ,ನಗರ, ಪಟ್ಟಣ ಪ್ರದೇಶವಾರು ಪ್ರಸ್ತುತ ಸ್ಥಿತಿ-ಗತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿಕೊಳ್ಳಬೇಕು.  ಸಮಸ್ಯಾತ್ಮಕ ಗ್ರಾಮ ಹಾಗೂ ಪ್ರದೇಶಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ, ಅಲ್ಲಿ ಬೇಸಿಗೆಯಲ್ಲಿ ನೀರು ಪೂರೈಸಲು ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆ ಯೋಜನೆ ಸಿದ್ಧಪಡಿಸಬೇಕು.  ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.  ಒಟ್ಟಾರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಗ್ರಾಮ, ಪಟ್ಟಣ, ನಗರವಾರು ಸದ್ಯದ ಸ್ಥಿತಿ-ಗತಿ ಹಾಗೂ ಸಮಸ್ಯಾತ್ಮಕ ಪ್ರದೇಶಗಳಿಗೆ ನೀರು ಪೂರೈಕೆಗೆ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳು, ಅಗತ್ಯವಿರುವ ಅನುದಾನ ಮತ್ತಿತರ ಸಮಗ್ರ ವರದಿ ಹಾಗೂ ಯೋಜನೆಯನ್ನು ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದೆ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.
 

ಆನೆಗೊಂದಿ ಉತ್ಸವ : ತ್ವರಿತ ಸಿದ್ಧತೆ ಕೈಗೊಳ್ಳಲು ಡಿ.ಸಿ. ಆರ್.ಆರ್. ಜನ್ನು ಸೂಚನೆ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಏ. 11 ಮತ್ತು 12 ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ, ಉತ್ಸವದ ಉಪಸಮಿತಿಗಳ ಅಧಿಕಾರಿಗಳು, ಉತ್ಸವದ ಸಿದ್ಧತೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದರು.
     ಆನೆಗೊಂದಿ ಉತ್ಸವ ಆಚರಣೆ ಸಂಬಂಧ ಗಂಗಾವತಿ ತಾಲೂಕು ಆನೆಗೊಂದಿಯ ಸರ್ಕಾರಿ ಶಾಲಾ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಆನೆಗೊಂದಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ವೇದಿಕೆ, ಸಾಂಸ್ಕøತಿಕ, ಮೆರವಣಿಗೆ, ಆಹಾರ, ಭದ್ರತೆ, ಆರೋಗ್ಯ, ಸಾರಿಗೆ, ಮಾಧ್ಯಮ ಸೇರಿದಂತೆ ಒಟು 17 ಉಪಸಮಿತಿಗಳನ್ನು ರಚಿಸಲಾಗಿದೆ.   ಉತ್ಸವಕ್ಕಾಗಿ ಈ ಬಾರಿ ಆನೆಗೊಂದಿ ಹೊರವಲಯದಲ್ಲಿ ಮುಖ್ಯ ವೇದಿಕೆ ಹಾಗೂ ಆನೆಗೊಂದಿ ಗ್ರಾಮದ ಶಾಲಾ ಆವರಣದಲ್ಲಿ ಒಂದು ವೇದಿಕೆ ಹೀಗೆ ಒಟ್ಟು ಎರಡು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.  ಮುಖ್ಯ ವೇದಿಕೆಯ ಬಳಿ ನೆಲವನ್ನು ಸಮತಟ್ಟುಗೊಳಿಸುವುದು, ವೇದಿಕೆ ಕಟ್ಟೆಯನ್ನು ದುರಸ್ತಿಗೊಳಿಸುವುದು, ಮುಖ್ಯ ವೇದಿಕೆ ಹಿಂಭಾಗದ ಬಂಡೆ-ಕಲ್ಲುಗಳಿಗೆ ದೀಪಾಲಂಕಾರ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ತ್ವರಿತಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಏ. 11 ರಂದು ಆನೆಗೊಂದಿ ಶ್ರೀ ರಂಗನಾಥ ಸ್ವಾಮಿ ದೇವರ ಜಾತ್ರೋತ್ಸವವೂ ಇದೆ. ಅಂದು ಬೆಳಿಗ್ಗೆ 9 ಗಂಟೆಗೆ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಿಸಲಾಗುವುದು.   ಆನೆಗೊಂದಿ ಪ್ರವೇಶದ್ವಾರ ಹಾಗೂ ರಂಗನಾಥ  ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪುಷ್ಪಾಲಂಕಾರ ಕೈಗೊಳ್ಳಲು ಸಿದ್ಧತೆ ನಡೆಸುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಏ. 12 ರಂದು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಯುವಜನ ಸೇವಾ ಕ್ರೀಡಾಧಿಕಾರಿಗಳಿಗೆ ಸೂಚನೆ ನೀಡಿದರು. ಎರಡೂ ವೇದಿಕೆಗಳ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರ ಆಯ್ಕೆ ಮತ್ತು ಮೆರವಣಿಗೆಗೆ ಕಲಾ ತಂಡಗಳ ಆಯ್ಕೆಯನ್ನು ಶೀಘ್ರ ಪೂರ್ಣಗೊಳಿಸಬೇಕು.  ಸೆಲೆಬ್ರಿಟಿ ಕಲಾವಿದರ ಆಯ್ಕೆಯನ್ನು ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧರಿಸುವಂತೆ ಜಿ.ಪಂ. ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಉತ್ಸವವನ್ನು ಜನೋತ್ಸವವನ್ನಾಗಿಸುವ ನಿಟ್ಟಿನಲ್ಲಿ, ಕ್ರೀಡಾಕೂಟಗಳು, ರಂಗೋಲಿ ಸ್ಪರ್ಧೆ, ವಿಜೃಂಭಣೆಯ ಸಾಂಸ್ಕøತಿಕ ಕಲಾತಂಡಗಳ ಮೆರವಣಿಗೆ, ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಆರ್. ಜನ್ನು ಅವರು ಹೇಳಿದರು.
       ಆನೆಗೊಂದಿ ಉತ್ಸವ ನಿಮಿತ್ಯ ಏ. 11 ಮತ್ತು 12 ರಂದು ಜಿಲ್ಲೆಯ  ಎಲ್ಲ ತಾಲೂಕು ಕೇಂದ್ರಗಳಿಂದ, ಅಲ್ಲದೆ ಸುತ್ತಮುತ್ತಲ ಗ್ರಾಮಗಳಿಂದ ಆನೆಗೊಂದಿಗೆ ವಿಶೇಷ ಬಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಈಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಹಾವೇರಿ   ಅವರಿಗೆ ಸೂಚನೆ ನೀಡಿದರು.  
     ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ,  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Saturday, 28 March 2015

ಹಿರೇಸಿಂದೋಗಿಯಲ್ಲಿ ಬಯೋ ಕಾಂಪೋಸ್ಟಿಂಗ್‍ನ ಪ್ರಾತ್ಯಕ್ಷಿಕೆ

ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರಿಂದ ಕೊಪ್ಪಳ ತಾಲ್ಲೂಕಿನ ಹಿರೇ ಸಿಂಧೋಗಿ ಗ್ರಾಮದಲ್ಲಿ ಬಯೋ ಕಾಂಪೋಸ್ಟಿಂಗ್‍ನ (ಜೈವಿಕ ಮಿಶ್ರಗೊಬ್ಬರ) ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಗುಜರಾತ್-ಎಕೋ ಸಂಸ್ಥೆಯ “ಬಯೋಕಾಂಪೋಸ್ಟರ್“ನ್ನು ಬಳಸಿ ಬಸವರಾಜ ಹೂಗಾರ ರವರ ಕೊಟ್ಟಿಗೆ ಗುಂಡಿಯಲ್ಲಿ ಮಿಶ್ರಣದ ಬಳಕೆಯನ್ನು ರೈತರಿಗೆ ಪ್ರಯೋಗಾತ್ಮಕವಾಗಿ ತೋರಿಸಲಾಯಿತು.
        ಹಿರೇಸಿಂಧೋಗಿ ಗ್ರಾಮದ ರೈತರಿಗೆ ಜೈವಿಕ ಗೊಬ್ಬರದ ಮಹತ್ವ ಮತ್ತು ಕೊಟ್ಟಿಗೆ ಗೊಬ್ಬರದ ಶುಚಿತ್ವ, ಸ್ವಚ್ಛತೆ ಬಗ್ಗೆ ಮಾಹಿತಿ ನೀಡಲಾಯಿತು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಸ್ತರಣಾ ಮುಂದಾಳುಗಳಾದ ಡಾ. ವಿ.ಆರ್.ಜೋಶಿ ಮತ್ತು ವಿಜ್ಞಾನಿಗಳಾದ ಡಾ. ಎಂ.ಬಿ. ಪಾಟೀಲ, ಡಾ. ಯೂಸುಫ್‍ಅಲಿ ನಿಂಬರಗಿ, ರೋಹಿತ್ ಕೆ.ಎ, ಡಾ. ಶೇಷಗಿರಿ,   ನಾಗರತ್ನ, ಸಹಾಯಕ ಕೃಷಿ ನಿರ್ದೇಶಕರು. ವೆಂಕಟರಮಣ ಹೆಗಡೆ, ಶ್ರಮಜೀವಿ ಅಗ್ರಿ ಫಿಲ್ಮ್, ಬೆಂಗಳೂರು ಹಾಗೂ ರೈತರಾದ ಬಸವರಾಜ ಹೂಗಾರ ಉಪಸ್ಥಿತರಿದ್ದರು.   ಇದೇ ಸಂದರ್ಭದಲ್ಲಿ ಬಸವರಾಜ ಹೂಗಾರರು ತಮ್ಮ ಅನುಭವಗಳೊಂದಿಗೆ ಗ್ರಾಮದ ರೈತರಿಗೆ ಬಯೋ ಕಾಂಪೋಸ್ಟಿನ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು ಹಾಗೂ ಸಹಕರಿಸಿದಂತಹ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳಿಗೆ ವಂದಿಸಿದರು.

ನೆರಳು ಪರದೆ ಘಟಕಗಳಿಗೆ ರೈತರಿಂದ ಅರ್ಜಿ ಆಹ್ವಾನ

ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ) : ತೋಟಗಾರಿಕೆ ಇಲಾಖೆಯಿಂದ 2015-16ನೇ ಸಾಲಿನ ಕೃಷಿಭಾಗ್ಯ ಯೋಜನೆಯಡಿ ನೆರಳು ಪರದೆ (ಪಾಲಿಹೌಸ್) ಘಟಕಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
       ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿ ಅಥವಾ ತಾಲೂಕಿನ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏ.15 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಎಸ್‍ಪಿ ಪ್ರವಾಸ : ಕುಂದು ಕೊರತೆ ದೂರು ಆಹ್ವಾನ

ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ) : ಕೊಪ್ಪಳ-ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿ.ವಿ. ಕುಂಬಾರ ಹಾಗೂ  ಕೊಪ್ಪಳ ಲೋಕಾಯುಕ್ತ ಡಿವೈಎಸ್‍ಪಿ ಎಂ.ಎಚ್. ಚಿಕ್ಕರೆಡ್ಡಿ ಅವರು ಮಾ.31 ರಂದು ಗಂಗಾವತಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು ಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಆಲಿಸಲಿದ್ದಾರೆ.
     ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ.01 ಮತ್ತು 02 ಸ್ಥಳದಲ್ಲಿಯೇ ಪಡೆಯಬಹುದಾಗಿದೆ.  ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆರಕ್ಷಕ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಕೊಪ್ಪಳ, ದೂರವಾಣಿ ಸಂಖ್ಯೆ : 08539-220200, 08539-220533 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನರ್ಸಿಂಗ್ ಅಸಿಸ್ಟಂಟ್ ಹುದ್ದೆ : ಸಿ.ಬಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟ


ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ) : ಸೋಲ್ಜರ್ ಟೆಕ್ನಿಕಲ್ (ನರ್ಸಿಂಗ್ ಅಸಿಸ್ಟೆಂಟ್) ಹುದ್ದೆಗಳಿಗಾಗಿ ಬೆಂಗಳೂರಿನ ಹೆಡ್‍ಕ್ವಾರ್ಟ್‍ರ್ಸ್ ರಿಕ್ರೂಟಿಂಗ್ ಝೋನ್‍ನಲ್ಲಿ ಫೆ.26 ರಂದು ನಡೆದ ಕಂಪ್ಯೂಟರ್ ಬೇಸ್ಡ್ ಎಂಟ್ರೆನ್ಸ್ ಟೆಸ್ಟ್ (ಸಿಬಿಇಟಿ) ಪರೀಕ್ಷೆಯ ಫಲಿತಾಂಶ ಮಾ.26 ರಂದು  ಪ್ರಕಟಗೊಂಡಿದೆ.
     ಒಟ್ಟು 18 ಪರಿಕ್ಷಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ಉತ್ತೀರ್ಣಗೊಂಡವರ ಮಾಹಿತಿ ಈ ಕೆಳಗಿನಂತಿದೆ.
BAN/BEL/NA/260215/50002, BAN/BEL/NA/260215/50003,
BAN/BEL/NA/260215/50008, BAN/BEL/NA/260215/50011,
BAN/BEL/NA/260215/50012, BAN/BEL/NA/260215/50016,
BAN/BEL/NA/260215/50017, BAN/BEL/NA/260215/50019,
BAN/BEL/NA/260215/50020, BAN/BEL/NA/260215/50022,
BAN/BEL/NA/260215/50023, BAN/BEL/NA/260215/50024,

BAN/BEL/NA/260215/50026, BAN/BEL/NA/260215/50027,
BAN/BEL/NA/260215/50028, BAN/BEL/NA/260215/50031,    
BAN/BEL/NA/260215/50035, BAN/BEL/NA/260215/50039.

     ಉತ್ತೀರ್ಣಗೊಂಡ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರ್ಮಿ ರಿಕ್ರೂಯಿಟಿಂಗ್ ಆಫೀಸ್, ಬೆಳಗಾವಿ-590016, ದೂರವಾಣಿ ಸಂಖ್ಯೆ : 0831-2465550 ಅಥವಾ 080-25599290 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ನಿಷೇದಾಜ್ಞೆ ಜಾರಿ

ಕೊಪ್ಪಳ, ಮಾ.27 (ಕರ್ನಾಟಕ ವಾರ್ತೆ): ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾ.30 ರಿಂದ ಏ.13 ರವರೆಗೆ ಜಿಲ್ಲೆಯ 62 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗಳು ಸುಗಮವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಮಾ.30 ರಿಂದ ಏ.13 ರವರೆಗೆ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಭಾರತೀಯ ದಂಡ ಸಂಹಿತೆ ಕಲಂ 144 ರ ಅನ್ವಯ ನಿಷೇಧಾಜ್ಞೆಯನ್ನು ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
     ಇದರನ್ವಯ ನಿಷೇಧಿತ ವ್ಯಾಪ್ತಿಯಲ್ಲಿ ಪರೀಕ್ಷಾ ಸಮಯದಲ್ಲಿ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದ ಕೇಂದ್ರಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು  ಯಾವುದೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುವುದು ನಿಷೇಧಿಸಲಾಗಿದೆ. ಮದುವೆ, ಶವ ಸಂಸ್ಕಾರ, ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ನಿಷೇಧಾಜ್ಞೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆ : ಜಿಲ್ಲಾ ಜಾಗೃತ ದಳ ರಚನೆ

ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಮಾ.30 ರಿಂದ ಏ.13 ರವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಜಾಗೃತ ದಳವನ್ನು ನೇಮಕ ಮಾಡಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.  
     ಜಿಲ್ಲಾದ್ಯಂತ ಒಟ್ಟು ಎಂಟು ಜಾಗೃತ ದಳ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿಯೂ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
     ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯಸ್ಥರಾಗಿರುವ ದಳದಲ್ಲಿ ಕೊಪ್ಪಳದ ಉ. ನಿ. ಕಛೇರಿಯ ವಿಷಯ ಪರಿವೀಕ್ಷಕ ರಾಮಣ್ಣ ಪತ್ತಾರ ಹಾಗೂ ಸ.ಶಿ.ಅ ಎ.ಪಿ.ಸಿ(ಪ್ರಭಾರಿ) ಶರಣಪ್ಪ ಬಳಿಗಾರ ಇವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮುಖ್ಯಸ್ಥರಾಗಿರುವ ದಳದಲ್ಲಿ ತಾಲೂಕ ಪಂಚಾಯಿತಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಅಶೋಕ ಕುಲಕರ್ಣಿ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಪ್ರೌಢ ಶಾಲೆಯ ಸವಿತಾ ಬೋರಟ್ಟಿ ಇವರು ಸದಸ್ಯರಾಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ದಳದಲ್ಲಿ ಉ. ನಿ. ಕಛೇರಿಯ ವಿಷಯ ಪರಿವೀಕ್ಷಕ ಎಮ್.ಎಸ್.ಬಡದಾನಿ ಹಾಗೂ ಸರಕರಿ ಪದವಿ ಪೂರ್ವ ಕಾಲೇಜಿನ ಸ.ಶಿ ಬಸವರಾಜ ಪೋಲಿಸ್ ಪಾಟೀಲ್ ಸದಸ್ಯರಾಗಿದ್ದಾರೆ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ದಳದಲ್ಲಿ ಸರಕಾರಿ ಪ್ರೌಢ ಶಾಲೆಯ ಬನ್ನಿಕಟ್ಟಿಯ ರಾಮರಡ್ಡಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲೆಯ ಶಕುಂತಲಾ ಅಂಗಡಿ ಸದ್ಯರಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರ ದಳದಲ್ಲಿ ಕಿನ್ನಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಮಂಜುನಾಥ ಕಟ್ಟಿ ಮತ್ತು ಅಳವಂಡಿ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಸುಮನ್ ಅವರು ಸದಸ್ಯರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮುಖ್ಯಸ್ಥರಾಗಿರುವ ದಳದಲ್ಲಿ ಸರಕಾರಿ ಪ್ರೌಢ ಶಾಲೆ ಕುದರಿಮೋತಿಯ ಬಸವರಾಜ ಪಟ್ಟೆದ್ ಮತ್ತು ಉ.ನಿ ಕಛೇರಿಯ ವಿಷಯ ಪರಿವೀಕ್ಷಕ ರಾವತ್ ನವಾಜ್ ಖಾನಂ ಅವರು ಸದಸ್ಯರಾಗಿದ್ದಾರೆ. ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳ ದಳದಲ್ಲಿ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ವಿಜಯಕುಮಾರ ಅವರು ಸದಸ್ಯರಾಗಿದ್ದಾರೆ. ಜಿಲ್ಲಾ ಪಂಚಾಯತ್ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳು ಮುಖ್ಯಸ್ಥರಾಗಿರುವ ತಂಡದಲ್ಲಿ ಮುಕ್ಕುಂಪಿ ಪ್ರೌಢ ಶಾಲೆಯ ಅಶೋಕ ಗೌಡ ಮತ್ತು ಸರಕಾರಿ ಪ್ರೌಢ ಶಾಲೆ ವಟಪರ್ವಿಯ ದೀಪಕ್ ಎಂ.ನಾಯಕ್ ಅವರು ಸದಸ್ಯರಾಗಿ ನೇಮಿಸಲಾಗಿದೆ ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.02 ರಂದು ಕೊಪ್ಪಳದಲ್ಲಿ ಜಿಲ್ಲಾ ಕುರಿಗಾರರ ಜಾಗೃತ ಸಮಾವೇಶ

ಕೊಪ್ಪಳ, ಮಾ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ,. ಬೆಂಗಳುರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ಕುರಿಗಾರರ ಜಾಗೃತ ಸಮಾವೇಶ ಮತ್ತು ತಾಂತ್ರಿಕ ಕಾರ್ಯಾಗಾರ ಏ.02 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.
     ಕುರಿಗಾರರ ಜಾಗೃತ ಸಮಾವೇಶ ಮತ್ತು ಕಾರ್ಯಗಾರ ಸಂದರ್ಭದಲ್ಲಿ ವಿಷಯ ತಜ್ಞರಿಂದ ಕುರಿ ಮತ್ತು ಮೇಕೆಗಳ ವೈಜ್ಞಾನಿಕ ಸಾಕಾಣಿಕೆ, ಮೇವು ಬೆಳೆಗಳ ಮಹತ್ವ ಮತ್ತು ಮೇವು ಅಭಿವೃದ್ಧಿ, ಕುರಿ-ಮೇಕೆಗಳಿಗೆ ಬರುವ ಕಾಯಿಲೆ ಮತ್ತು ಹತೋಟಿ ಹಾಗೂ ಕುರಿಗಾರರ ವಿಮೆ ಅಲ್ಲದೆ ನಿಗಮದ ವಿವಿಧ ಯೋಜನೆಗಳ ಅನುಷ್ಠಾನ ಕುರಿತಂತೆ ಮಾಹಿತಿ ನೀಡಲಾಗುವುದು.
     ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ದ ಅಧ್ಯಕ್ಷ ಪಂಡಿತರಾವ್ ಚಿದ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಲಿದ್ದು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ್, ಅಮರನಾಥ್ ಪಾಟೀಲ್, ಶರಣಪ್ಪ ಮಟ್ಟೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ||ಕೆ.ಎಂ.ಮಹ್ಮದ್ ಜಫ್ರುಲ್ಲಾ ಖಾನ್, ತಾಲೂಕಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಪಿ.ರಾಜಾ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಡಾ. ಬಿ.ಎಸ್.ಜಂಬಗಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Thursday, 26 March 2015

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮ : ಕೃಷ್ಣ ಉದಪುಡಿ

ಕೊಪ್ಪಳ, ಮಾ.26 (ಕರ್ನಾಟಕ ವಾರ್ತೆ) : ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ನೀರಿನ ತೊಂದರೆ ಕಂಡುಬಂದಲ್ಲಿ ಕೂಡಲೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವುದು ಅಥವಾ ಎಸ್‍ಎಂಎಸ್ ಕಳುಹಿಸುವ ಮೂಲಕ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದ್ದಾರೆ.
     ಈಗಾಗಲೇ ಬಿರು ಬೇಸಿಗೆ ಕಾಲ ಆರಂಭವಾಗಿದ್ದು, ನೀರಿನ ಬೇಡಿಕೆ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಕುಡಿಯುವ ನೀರಿನ ಸೆಲೆ ಕಡಿಮೆಯಾಗುತ್ತಿದೆ. ಇದನ್ನು ಮನಗಂಡಿರುವ ಕೊಪ್ಪಳ ಜಿಲ್ಲಾ ಪಂಚಾಯತಿ,  ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ನೀರು ಪೋಲಾಗದಂತೆ ಸರಬರಾಜು ಮಾಡಲು ಜಿಲ್ಲಾ ಮಟ್ಟದಿಂದ ಕ್ರಮ ಕೈಗೊಳ್ಳುತ್ತಿದೆ.
     ಬೇಸಿಗೆ ಸಂದರ್ಭದಲ್ಲಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮೀಣ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ.  ತುರ್ತು ಕುಡಿಯುವ ನೀರು ಸರಬರಾಜಿಗಾಗಿ ಈಗಾಗಲೆ ಸರ್ಕಾರ ಪ್ರತಿ ವಿಧಾನಸಾಭಾ ಕ್ಷೇತ್ರಕ್ಕೆ 45 ಲಕ್ಷ ರೂ. ಗಳಂತೆ ಅನುದಾನ ಬಿಡುಗಡೆ ಮಾಡಿದೆ.  ಈ ಅನುದಾನವನ್ನು ತುರ್ತು ಕುಡಿಯುವ ನೀರು ಒದಗಿಸಲು ಸಮರ್ಪಕವಾಗಿ ಉಪಯೋಗಿಸಿ, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.  ಕುಡಿಯುವ ನೀರು ಪೂರೈಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ.   ಕುಡಿಯುವ ನೀರಿನ ಸಮಸ್ಯೆ ಉಂಟಾದ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಬೋರ್‍ವೆಲ್‍ನಿಂದ ಬಾಡಿಗೆ ಸ್ವರೂಪದಲ್ಲಿ ನೀರು ಪಡೆದು, ತುರ್ತು ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
      ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಪಿಡಿಓಗಳು ತಾಳ್ಮೆಯಿಂದ ಸಾರ್ವಜನಿಕರ ನೀರಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕು ಹಾಗೂ ಅಧೀನ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ತಕ್ಷಣವೇ ಸಮಸ್ಯೆಯನ್ನು ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ.
     ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದಲ್ಲಿ ದೂರವಾಣಿ ಮೂಲಕ ಮಾಹಿತಿ ನೀಡಬಹುದಾಗಿದೆ.  ದೂರವಾಣಿ ಸಂಖ್ಯೆಗಳ ವಿವರ ಇಂತಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಕೊಪ್ಪಳ-9480871000 ಉಪಕಾರ್ಯದರ್ಶಿ-9480871001, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ವಿಭಾಗ, ಕೊಪ್ಪಳ-9448518037, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೊಪ್ಪಳ-9448556275, ಯಲಬುರ್ಗಾ -9448214251, ಕುಷ್ಟಗಿ-9448336456, ಗಂಗಾವತಿ -9731566173, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕೊಪ್ಪಳ-9480871105, ಯಲಬುರ್ಗಾ-9480871115, ಕುಷ್ಟಗಿ-9480871110, ಗಂಗಾವತಿ-7406537540, 
     ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ದೂರವಾಣಿ ಕರೆಗೆ ಸ್ಪಂದಿಸದೇ ಇದ್ದ ಪಕ್ಷದಲ್ಲಿ, ಅಥವಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಅನಿವಾರ್ಯ ಕಾರಣದಿಂದ   ಕರೆಯನ್ನು ಸ್ವೀಕರಿಸದಿದ್ದರೆ, ಕೂಡಲೇ ತಮ್ಮ ಗ್ರಾಮದ ಹೆಸರು ಹಾಗೂ ನೀರಿನ ಸಮಸ್ಯೆಯನ್ನು ನಮೂದಿಸಿ 9480871000 ಹಾಗೂ 9480871001 ಕ್ಕೆ ಎಸ್.ಎಮ್.ಎಸ್ ಸಂದೇಶ ಕಳುಹಿಸಿದಲ್ಲಿ, ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಾಗುವುದು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಮಾ.29 ರಂದು ಗ್ರಾಮೀಣ ನೀರು ಸಂಗ್ರಹ ಘಟಕಗಳ ಸ್ವಚ್ಛತೆಗೆ ಅಭಿಯಾನ

ಕೊಪ್ಪಳ, ಮಾ.26 (ಕರ್ನಾಟಕ ವಾರ್ತೆ) : ಬೇಸಿಗೆಯಲ್ಲಿ ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಬಗೆಯ ನೀರು ಸಂಗ್ರಹ ಘಟಕಗಳನ್ನು ಸ್ವಚ್ಛಗೊಳಿಸಲು ಮಾ. 29 ರಂದು ಒಂದು ದಿನದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಎಲ್ಲ ಸಾರ್ವಜನಿಕರು ಅಭಿಯಾನದ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.
     ಬೇಸಿಗೆ ದಿನಗಳು ಆರಂಭವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸುವುದು ಅವಶ್ಯವಿರುತ್ತದೆ. ಇದಕ್ಕಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ವತಿಯಿಂದ ಮಾ.29 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೆ ನೀರು ಸರಬರಾಜು ಮಾಡುವ ಹಾಗೂ ಸಂಗ್ರಹ ಮಾಡುತ್ತಿರುವ ಎಲ್ಲಾ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.   ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಕುಡಿಯುವ ನೀರಿನ ಸಂಗ್ರಹಗಾರಗಳು ಹಾಗೂ ಮನೆಗಳಲ್ಲಿರುವ ನೀರಿನ ತೊಟ್ಟಿ/ಸಂಪು/ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಅಭಿಯಾನದ ಉಪಯುಕ್ತತೆ ಬಗ್ಗೆ ಎಲ್ಲ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರುವಂತೆ ಈಗಾಗಲೆ ಸೂಚನೆ ನೀಡಲಾಗಿದೆ.  ಸರ್ವರೂ ಈ ವಿಶೇಷ ಆಂದೋಲನದಲ್ಲಿ ಭಾಗವಹಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಬೇಕು ಹಾಗೂ ಅಭಿಯಾನದಲ್ಲಿ ಗ್ರಾಮ ಮಟ್ಟದ ಸಿಬ್ಬಂದಿಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಕ್ರೀಡಾ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

ಕೊಪ್ಪಳ, ಮಾ.26 (ಕರ್ನಾಟಕ ವಾರ್ತೆ) : ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಾಧ್ಯಮಿಕ/ಪ್ರೌಢ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಪ್ರತಿಭಾವಂತ ಕ್ರೀಡಾ ವಿದ್ಯಾರ್ಥಿಗಳಿಗೆ 2014ನೇ ಸಾಲಿನ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿದಾರರು 2014 ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢ ಶಾಲೆಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಿಂದ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು 2014 ರ ಜ. 01 ರಿಂದ ಡಿ. 31 ರವರೆಗೆ ನಡೆಸಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದವರ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವುದು.
     ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಡೆಸಿದ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟ ಹಾಗೂ ಮಹಿಳಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಗ್ರಾಮೀಣ/ಮಹಿಳಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಲ್ಲಿ ಅಥವಾ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ.
     ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ಕ್ರೀಡಾ ವಿದ್ಯಾರ್ಥಿ ವೇತನ ವಾರ್ಷಿಕ ರೂ.10,000/- ಮಾತ್ರ ಪಡೆಯಬಹುದಾಗಿದೆ. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ಏ.25 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 08539-201400 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪಿಯುಸಿ ಇಂಗ್ಲೀಷ್ ಪರೀಕ್ಷೆ : 8410 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗುರುವಾರದಂದು ನಡೆದ ಇಂಗ್ಲೀಷ್ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ 8410 ವಿದ್ಯಾರ್ಥಿಗಳು ಹಾಜರಾಗಿದ್ದು, 472 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ.
     ಪಿಯುಸಿ ಪರೀಕ್ಷೆಯ ಇಂಗ್ಲೀಷ್ ವಿಷಯ ಪರೀಕ್ಷೆ ತೆಗೆದುಕೊಂಡಿರುವ 8882 ವಿದ್ಯಾರ್ಥಿಗಳ ಪೈಕಿ 8410 ವಿದ್ಯಾರ್ಥಿಗಳು ಹಾಜರಾಗಿದ್ದು, 472 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 2865 ವಿದ್ಯಾರ್ಥಿಗಳ ಪೈಕಿ 2740 ವಿದ್ಯಾರ್ಥಿಗಳು ಹಾಜರಾಗಿದ್ದು, 125 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 3419 ವಿದ್ಯಾರ್ಥಿಗಳ ಪೈಕಿ 3265 ವಿದ್ಯಾರ್ಥಿಗಳು ಹಾಜರಿದ್ದು, 154 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 1319 ವಿದ್ಯಾರ್ಥಿಗಳ ಪೈಕಿ 1235 ಹಾಜರಿದ್ದು, 84 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 1279 ವಿದ್ಯಾರ್ಥಿಗಳ ಪೈಕಿ 1170 ವಿದ್ಯಾರ್ಥಿಗಳು ಹಾಜರಾಗಿದ್ದು, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ : ಮಾ. 29 ರಂದು ಹಿರಿಯ ಸಿವಿಲ್ ನ್ಯಾಯಾಲಯ ಉದ್ಘಾಟನೆ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಕುಷ್ಟಗಿ ಪಟ್ಟಣದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಮಾ. 29 ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.
     ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಾಲಯ ಮತ್ತು ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್. ಸುಜಾತಾ ಅವರು ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕುಷ್ಟಗಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಮಾಹಿತಿ ವಿವರ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11 ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಕುಟುಂಬಗಳಿಂದ ಒಟ್ಟು 55 ಅಂಶಗಳ ಪ್ರಶ್ನಾವಳಿಗೆ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಲಿದ್ದು, ನಿಖರ ಹಾಗೂ ನೈಜ ಮಾಹಿತಿಯನ್ನು ಗಣತಿದಾರರಿಗೆ ನೀಡುವ ಮೂಲಕ ಸಹಕರಿಸಬೇಕಾದ ಮಹತ್ವದ ಹೊಣೆಗಾರಿಕೆ ಸಾರ್ವಜನಿಕರ ಮೇಲಿದೆ.
     ಸಮೀಕ್ಷೆ ಪ್ರಶ್ನಾವಳಿಯ ಭಾಗ-1 ರಲ್ಲಿ ಪ್ರತಿ ಕುಟುಂಬದ ಮುಖ್ಯಸ್ಥ ಹಾಗೂ ಸದಸ್ಯರ ವೈಯಕ್ತಿಕ ವಿವರಗಳನ್ನು  ಹಾಗೂ ಭಾಗ-2 ರಲ್ಲಿ ಕುಟುಂಬದ ಸಮಗ್ರ ವಿವರಗಳನ್ನು ದಾಖಲಿಸಲಾಗುತ್ತದೆ.
     ವರ್ತಮಾನದಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮುಖ್ಯಸ್ಥರ ಹಾಗೂ ಆ ಕುಟುಂಬದ ಹೆಸರು ಮುಖ್ಯಸ್ಥರೊಂದಿಗೆ ಸಂಬಂಧ, ಲಿಂಗ, ಧರ್ಮ, ಜಾತಿ ಮತ್ತು ಉಪಜಾತಿ, ಜಾತಿಗೆ ಪರ್ಯಾಯ ಹೆಸರುಗಳಿದ್ದಲ್ಲಿ ಅದನ್ನು ದಾಖಲಿಸಿಕೊಂಡು, ನಂತರ ವಯಸ್ಸು, ಮಾತೃಭಾಷೆ, ಆಧಾರ ಕಾರ್ಡ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಅಂಗವಿಕಲರಿದ್ದಲ್ಲಿ ಅದರ ವಿವರ, ವೈವಾಹಿಕ ಸ್ಥಾನಮಾನ, ವಿವಾಹವಾದ ಸಮಯದ ವಯಸ್ಸು, ಶಾಲೆಗೆ ಸೇರುವ ವಯಸ್ಸು, ಯಾವ ಶಾಲೆ, ವಿದ್ಯಾಭ್ಯಾಸದ ವಿವರ, ಶಾಲೆ ಬಿಟ್ಟಾಗಿನ ತರಗತಿ, ಶಾಲೆ ಬಿಟ್ಟಾಗಿನ ವಯಸ್ಸು, ಶಾಲೆ ಬಿಡಲು ಕಾರಣ, 17 ರಿಂದ 40 ವಯೋಮಿತಿಯಲ್ಲಿರುವವರು ಶಿಕ್ಷಣ ಮುಂದುವರೆಸದಿರಲು ಕಾರಣ, ಅನಕ್ಷರಸ್ಥರಾಗಿದ್ದರೆ ಕಾರಣ, ಕೆಲಸ ಮಾಡುತ್ತಿರುವ ಕುರಿತು ಸರಕಾರಿ ಅಥವಾ ಖಾಸಗೀ ಸೇವೆ, ಸದ್ಯದ ಉದ್ಯೋಗ, ವ್ಯಾಪಾರ, ಕುಟುಂಬದ ಕುಲ ಕಸುಬು, ಅದು ಮುಂದುವರೆದಿದೆಯೇ. ಆ ಕಸುಬಿನಿಂದ ಖಾಯಿಲೆಗಳು ಬಂದಿದ್ದರೆ ಅದರ ವಿವರ. ದಿನಗೂಲಿ ಕೆಲಸಗಾರರ ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ವಿವರ. ಬ್ಯಾಂಕ್ ಅಕೌಂಟ್ ಹೊಂದಿದ್ದಾರೆಯೇ, ಇಲ್ಲವೆ?. ಮೀಸಲಾತಿಯಡಿ ಪಡೆದ ಶೈಕ್ಷಣಿಕ ಮತ್ತು ಉದ್ಯೋಗ ಸೌಲಭ್ಯಗಳು ಜಾತಿ ಪ್ರಮಾಣ ಹೊಂದಿದ್ದಾರೆಯೇ, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರೇ, ಜನಪ್ರತಿನಿಧಿಗಳಾಗಿದ್ದಲ್ಲಿ ವಿವರ. ನಿಗಮ, ಮಂಡಳಿ, ಸಹಕಾರಿ, ಸರಕಾರೇತರ ಸಂಘ ಸಂಸ್ಥೆಗಳಲ್ಲಿ ಸದಸ್ಯ ಅಥವಾ ಪದಾಧಿಕಾರಿಯಾಗಿದ್ದಲ್ಲಿ ಹೀಗೆ, ಕ್ರಮ ಸಂಖ್ಯೆ 01 ರಿಂದ 39 ರವರೆಗೆ ಒಟ್ಟು 39 ಅಂಶಗಳ ವಿವರಗಳನ್ನು ಗಣತಿದಾರರು ಕೇಳುವರು.  ಸಾರ್ವಜನಿಕರು ನೀಡುವ ಉತ್ತರವನ್ನು  ಸಂಬಂಧಿತ ಸಂಕೇತಾಕ್ಷರಗಳ (ಕೋಡ್ ಸಂಖ್ಯೆ) ಮೂಲಕ ಪ್ರಥಮ ಭಾಗದ ಮಾಹಿತಿ ಸಂಗ್ರಹಿಸಲಾಗುತ್ತದೆ.
     ಕುಟುಂಬವು ಹೊಂದಿರುವ ಜಮೀನು, ಸಾಲ, ಕೃಷಿ ಸಂಬಂಧಿತ ಚಟುವಟಿಕೆಗಳು, ಜಾನುವಾರುಗಳು, ಸ್ಥಿರಾಸ್ಥಿ, ಚರಾಸ್ಥಿ, ಸರಕಾರದಿಂದ ಪಡೆದ ಸೌಲತ್ತುಗಳು, ಪಡಿತರ ಚೀಟಿ ಸಂಖ್ಯೆ, ನೆಲೆಸಿರುವ ಸ್ಥಳ ವಿವರ, ವಾಸದ ಮನೆ, ಮಾಲೀಕತ್ವದ ಸ್ವರೂಪ, ವಾಸದ ಮನೆಯ ಎಂತಹುದು, ಅದರ ಉಪಯೋಗ, ನಿವೇಶನ ಹೊಂದಿರುವ ಕುಡಿಯುವ ನೀರಿನ ಮೂಲ, ಶೌಚಾಲಯದ ವ್ಯವಸ್ಥೆ, ಅಡುಗೆ ಮಾಡಲು ಬಳಸುವ ಇಂಧನ, ದೀಪದ ಮೂಲ, ಹೀಗೆ 2ನೇ ಭಾಗದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಒಟ್ಟು 16 ಪ್ರಶ್ನಾವಳಿಯನ್ನು ಅಂದರೆ, ಸಮೀಕ್ಷೆ ಸಂಗ್ರಹಿಸುವ ನಮೂನೆಯಲ್ಲಿ ಕ್ರಮಸಂಖ್ಯೆ 40 ರಿಂದ 55 ರವರೆಗಿನ ವಿವರಗಳನ್ನು ಕುಟುಂಬದ ಮುಖ್ಯಸ್ಥರು ಒದಗಿಸುವ ದಾಖಲೆ ಹಾಗೂ ಹೇಳಿಕೆಗಳನ್ನು ಆಧರಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ.
     ಈ ಸಮೀಕ್ಷೆಯಲ್ಲಿ ವಿವರ ತುಂಬುವುದರಲ್ಲಿ ಇರುವ ಪ್ರಮುಖ ಅಂಶವೆಂದರೆ, ಸಂಕೇತಾಕ್ಷರಗಳ ಬಳಕೆ.  ಕುಟುಂಬದ ಮುಖ್ಯಸ್ಥರ, ಸದಸ್ಯರ ಹೆಸರುಗಳನ್ನು ಮಾತ್ರ ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಸಂಖ್ಯೆ, ಜಮೀನು ವಿವರ, ಇವುಗಳನ್ನು ಹೊರತುಪಡಿಸಿ ಒಟ್ಟಾರೆ ಉಳಿದ ಎಲ್ಲಾ ವಿವರಗಳಿಗೆ ಆಯಾ ಮಾಹಿತಿಗೆ ಸಂಬಂಧಿಸಿದಂತೆ ಸರಿ ಹೊಂದುವ ಸಂಕೇತಾಕ್ಷರ ಜೊತೆಗೆ ಹೌದು ಅಥವಾ ಇಲ್ಲ ಎನ್ನುವ ರೂಪದಲ್ಲಿ ವಿವರ ದಾಖಲಿಕೆ ಒಂದು ವಿಶೇಷವಾಗಿದೆ.  ಇದರಿಂದ ದತ್ತಾಂಶ ಸಂಗ್ರಹಣೆ ಸುಲಭವಾಗುದರ ಜೊತೆಗೆ ಸಮಯ ಉಳಿಕೆಯಾಗಲಿದೆ. 
     ವೃದ್ಧಾಶ್ರಮ, ಅನಾಥಾಶ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರ, ಅಲೆಮಾರಿ ಕುಟುಂಬಗಳನ್ನು ವಸತಿ ರಹಿತ ಕುಟುಂಬಗಳೆಂದು ಪರಿಗಣಿಸಿ, ಸಮೀಕ್ಷೆ ಜರುಗಿಸಬೇಕು ಎಂದು ಈಗಾಗಲೆ ಗಣತಿದಾರರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.
      ಯಾವುದೇ ಗಣತಿದಾರರು ಯಾವುದೇ ಮನೆಯನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದ್ದು, ಏ. 11 ರಿಂದ 30 ರವರೆಗಿನ ಅವಧಿಯಲ್ಲಿ ಒಂದು ವೇಳೆ ಯಾವುದೇ ಕುಟುಂಬ ಅಥವಾ ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಸಂಗ್ರಹಿಸದಿರುವ ಬಗ್ಗೆ ದೂರುಗಳಿದ್ದಲ್ಲಿ, ಕೂಡಲೆ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಮಾಹಿತಿ ನೀಡಬಹುದಾಗಿದೆ.  ಸಾರ್ವಜನಿಕರು ಗಣತಿದಾರರಿಗೆ ನೈಜ ಮತ್ತು ನಿಖರ ಮಾಹಿತಿಯನ್ನು ನೀಡಿ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು.  ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ಈ ಮೂಲಕ ನೆರವಾಗಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.

ಲೈಂಗಿಕ ಅಪರಾಧ ತಡೆಗಿರುವ ಪೋಕ್ಸೊ ಕಾಯ್ದೆ ಬಗ್ಗೆ ಅರಿವು ಮೂಡಿಸಿ- ಡಾ. ಪಿ. ರಾಜಾ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ):  ಮಕ್ಕಳು ಹಾಗೂ ಮಹಿಳೆಯರ  ಮೇಲಿನ ಲೈಂಗಿಕ ಅಪರಾಧಕ್ಕೆ ಕಠಿಣ ಶಿಕ್ಷೆ ನೀಡಲು ಅವಕಾಶವಿರುವ ಪೋಕ್ಸೋ ಕಾಯ್ದೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಹೇಳಿದರು.
     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಯಂದಿರ ಚಾವಡಿ ರಚನೆ ಹಾಗೂ ಕಾರ್ಯಗಳ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ.   ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಮಕ್ಕಳು ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಅಂದರೆ ಅಪೌಷ್ಠಿಕತೆ ನಿವಾರಣೆ, ಗರ್ಭಿಣಿಯರ ಆರೋಗ್ಯ, ಬಾಲ್ಯ ವಿವಾಹ ನಿಷೇಧ ಹೀಗೆ ಹಲವಾರು  ಯೋಜನೆಗಳಿಗೆ ದೇಶದ ಬೇರು ಮಟ್ಟದಲ್ಲಿ ಅಂದರೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರನ್ನು ಅವಲಂಬಿಸಿರುವುದರಿಂದ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅಭಿಪ್ರಾಯಪಟ್ಟರು.
       ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು, ಬದುಕಿನ ಬಗ್ಗೆ ತಿಳುವಳಿಕೆ ಮೂಡುವ ಮುನ್ನವೆ ಲೈಂಗಿಕ ದೌರ್ಜನ್ಯಕ್ಕೆ ಅಪ್ರಾಪ್ತೆಯರು ಒಳಗಾಗುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.   ಲೈಂಗಿಕ ದೌರ್ಜನ್ಯವೆಸಗುವ ಅಪರಾಧಕ್ಕೆ ಇಂದು ಕಠಿಣ ಕಾನೂನುಗಳು ಜಾರಿಯಾಗಿವೆ.  ಆದರೆ ಇಂತಹ ಕಠಿಣ ಕಾನೂನಿನ ಕುರಿತು  ಸಮಾಜದಲ್ಲಿ ಮಾಹಿತಿ ಇಲ್ಲದಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.  ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೋಕ್ಸೋ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ-2012) ಕಾಯಿದೆ ಪ್ರಬಲ ಅಸ್ತ್ರವಾಗಿದೆ.  ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸುವುದರಿಂದ, ಇಂತಹ ಕಾಯ್ದೆ ಬಗ್ಗೆ ಸಾರ್ವಜನಿಕರು ಹಾಗೂ ಕಿಶೋರಿಯರಿಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಪುರುಷ ಮತ್ತು ಮಹಿಳೆಯರ ಲಿಂಗಾನುಪಾತ 1000ಕ್ಕೆ 974 ಇದೆ.  ಭ್ರೂಣ ಹತ್ಯೆ ತಡೆಗಟ್ಟಲು ಕಠಿಣ ಕಾನೂನು ಜಾರಿಯಲ್ಲಿದೆ.  ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತಾಯಂದಿರ ಚಾವಡಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.  ಗ್ರಾಮ ಮಟ್ಟದಲ್ಲಿ ಸಮಿತಿಯ ತಿಂಗಳಿಗೊಮ್ಮೆ ಸಭೆ ಸೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಆಗಬೇಕಿರುವ ಕೆಲಸ ಕಾರ್ಯಗಳು ಹಾಗೂ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಬೇಕಿದೆ ಎಂದರು. 
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.  ಕಾರ್ಯಾಗಾರದ ಅಂಗವಾಗಿ  ಪೊಲೀಸ್ ತರಬೇತುದಾರ  ಸೋಮಶೇಖರ ಅವರು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ ಅವರು ಮಕ್ಕಳಿಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಘಟಕದಿಂದ ಲಭ್ಯವಿರುವ ಸೇವೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕಿಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸದುದ್ದೇಶದ ಬಗ್ಗೆ ಅರಿವು ಮೂಡಿಸಲು ಕರೆ


ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ರಾಜ್ಯದ ಎಲ್ಲ ವರ್ಗದ ಜನರ ಸ್ಥಿತಿ-ಗತಿಗಳ ಮಾಹಿತಿ ಪಡೆದು, ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೊಳಿಸಲು ಸಹಕಾರಿಯಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸದುದ್ದೇಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಬೇಕು ಎಂದು ಸಮೀಕ್ಷೆಯ ಜಿಲ್ಲಾ ಸಂಪನ್ಮೂಲ ಅಧಿಕಾರಿ ಸಿ.ವಿ. ಜಡಿಯವರ್ ಅವರು ಕರೆ ನೀಡಿದರು.
      ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
     ದೇಶದ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಜನಗಣತಿ ಕಾರ್ಯಕ್ರಮ ಹೇಗೆ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸಲಿದೆಯೋ,  ಅದೇ ರೀತಿ ಬರುವ ಏ. 11 ರಿಂದ 30 ರವರೆಗೆ ಕರ್ನಾಟಕ ರಾಜ್ಯಾದ್ಯಂತ ಜರುಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಹತ್ವ ಹೊಂದಿದೆ.  1931 ರಲ್ಲಿ ರಾಜ್ಯದಲ್ಲಿ ಇಂತಹ ಸಮೀಕ್ಷೆ ಜರುಗಿತ್ತು.  ನಂತರ ಇದುವರೆಗೂ ಸಮೀಕ್ಷೆ ಕಾರ್ಯ ನಡೆದಿಲ್ಲ.  ಇದೀಗ 84 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮಹತ್ವಪೂರ್ಣ ಸಮೀಕ್ಷೆಯನ್ನು ರಾಜ್ಯದಲ್ಲಿ ನಡೆಸಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮುಂದಾಗಿರುವುದು ಸ್ವಾಗತಾರ್ಹ ವಿಷಯವಾಗಿದೆ. ಪ್ರತಿಯೊಂದು ಕುಟುಂಬದ, ಪ್ರತಿಯೊಂದು ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ-ಗತಿಯ ಬಗ್ಗೆ ಸಮೀಕ್ಷೆಯಲ್ಲಿ ಗಣತಿದಾರರು ವರದಿ ಸಂಗ್ರಹಿಸಲಿದ್ದಾರೆ.  ಇದಕ್ಕಾಗಿ ಗಣತಿದಾರರು ಪ್ರತಿ ಮನೆ, ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕ್ರೋಢೀಕರಿಸುವರು.  ಗಣತಿದಾರರು ಸಮೀಕ್ಷೆಗಾಗಿ ಮನೆಗೆ ಬಂದಾಗ, ಸಾರ್ವಜನಿಕರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ದಾಖಲೆಯನ್ನು ತೋರಿಸಿ, ಗಣತಿದಾರರಿಗೆ ಕುಟುಂಬದ ಸಮಗ್ರ ನೈಜ ಮಾಹಿತಿಯನ್ನು ನೀಡಿ ಸಹಕರಿಸಬೇಕು.  ಈ ಸಮೀಕ್ಷೆಯು ಎಲ್ಲ ವರ್ಗದ ಹಿತಕಾಯಲು, ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಸಹಕಾರಿಯಾಗಲಿದೆ.  ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರೊಂದಿಗೆ ಹೆಚ್ಚಿನ ನಿಕಟವರ್ತಿಗಳಾಗಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಯಶಸ್ವಿಯಾಗಿಸಲು ಶ್ರಮಿಸಬೇಕಾದ ಅಗತ್ಯವಿದೆ.  ಸಮೀಕ್ಷೆಯ ಸದುದ್ದೇಶ ಹಾಗೂ ಗಣತಿದಾರರಿಗೆ ಮಾಹಿತಿ ಹಾಗೂ ದಾಖಲೆ ನೀಡುವ ಬಗೆಯನ್ನು ಸಾರ್ವಜನಿಕರಿಗೆ ತಿಳಿ ಹೇಳುವ ಮೂಲಕ ಸಮೀಕ್ಷೆ ಸುಗಮವಾಗಿ ನಡೆಯಲು ಸಹಕಾರ ನೀಡಬೇಕು ಎಂದು ಸಮೀಕ್ಷೆಯ ಜಿಲ್ಲಾ ಸಂಪನ್ಮೂಲ ಅಧಿಕಾರಿ ಸಿ.ವಿ. ಜಡಿಯವರ್ ಅವರು ಮನವಿ ಮಾಡಿಕೊಂಡರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕಿಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೊಪ್ಪಳ : ಕೃಷಿ ಭಾಗ್ಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂದೂಡಿಕೆ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳನ್ನು  ಆಯ್ಕೆ ಮಾಡಲು ಮಾ. 27 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಆಯ್ಕೆ ನಡೆಸುವ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 25 March 2015

ಸರಳ ಸಾಹಿತ್ಯದ ವಚನಗಳ ಮೂಲಕ ಜನಪದ ಮಾತುಗಳಿಗೆ ಶಕ್ತಿ ತುಂಬಿದವರು ದೇವರದಾಸಿಮಯ್ಯ- ವಿಠ್ಠಪ್ಪ ಗೋರಂಟ್ಲಿ

 
ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ಜನಪದ ಸಾಹಿತ್ಯ ಕಣ್ಮರೆಯಾಗುವ ಕಾಲಘಟ್ಟದಲ್ಲಿ, ಸರಳ ಸಾಹಿತ್ಯದ ವಚನಗಳನ್ನು ರಚಿಸಿ, ಜನಪದ ಮಾತುಗಳಿಗೆ ಶಕ್ತಿ ತುಂಬಿದವರು ದೇವರ ದಾಸಿಮಯ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತ್ಯೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕಾರಿ ಭಾಗವಹಿಸಿ ಮಾತನಾಡಿದರು.


     ಸಾಹಿತ್ಯಿಕ ಕ್ರಾಂತಿಗೆ ಮೂಲ ಪುರುಷ ದೇವರ ದಾಸಿಮಯ್ಯನವರು.  ಜನಪದ ಸಾಹಿತ್ಯ ಕಣ್ಮರೆಯಾಗುವ ಕಾಲಘಟ್ಟದಲ್ಲಿ, ದೇವರ ದಾಸಿಮಯ್ಯನವರು, ಸರಳ ಸಾಹಿತ್ಯದಲ್ಲಿ ವಚನಗಳನ್ನು ರಚಿಸಿ, ಜನಪದ ಮಾತುಗಳಿಗೆ ಶಕ್ತಿ ತುಂಬಿದರು. ಸಾಹಿತ್ಯ ಸರಸ್ವತಿಯನ್ನು ಜನಸಾಮಾನ್ಯರ ಭಾಷೆಯಾದ ಸರಳ ಕನ್ನಡದ ವಚನ ಸಿಂಹಾಸನಕ್ಕೆ ಏರಿಸಿ ಕುಳ್ಳಿರಿಸಿದ ಶ್ರೇಯಸ್ಸು ದೇವರ ದಾಸಿಮಯ್ಯನವರಿಗೆ ಸಲ್ಲಬೇಕು.  ತಮ್ಮ ವಚನಗಳಲ್ಲಿ ವೇದ, ಉಪನಿಷತ್ತುಗಳನ್ನು ಅಳವಡಿಸಿಕೊಂಡಿರುವ ದೇವರ ದಾಸಿಮಯ್ಯನವರು ರಾಮಲಿಂಗ ಎನ್ನುವುದನ್ನೇ ರಾಮನಾಥ ಎಂಬುದಾಗಿ ಅಂಕಿತನಾಮವನ್ನು ಇಟ್ಟುಕೊಂಡಿರುವುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ನೇಕಾರ ಜನಾಂಗದ ಮೂಲ ಪುರುಷರಾಗಿರುವ ಅವರು, ನೇಕಾರ ವೃತ್ತಿ ಪವಿತ್ರವಾದುದು,  ನೇಕಾರರು ಕುಶಲಕರ್ಮಿಗಳಾಗಿದ್ದು ಶ್ರಮಜೀವಿಗಳು ಎಂಬುದಾಗಿ ವಚನಗಳಲ್ಲಿ ಬಣ್ಣಿಸಿದ್ದಾರೆ.  ಜೇಡ ತನ್ನ ಜೊಲ್ಲನ್ನು ಬಳಸಿ, ಬಲೆ ಹೆಣೆದು ಅದರಲ್ಲಿಯೇ ತನ್ನ ಬದುಕು ರೂಪಿಸಿಕೊಳ್ಳುತ್ತದೆ.  ಇದೇ ಸಿದ್ಧಾಂತ ನೇಕಾರಿಕೆಯಲ್ಲಿ ನೂಲನ್ನು ತೆಗೆದು ನೇಕಾರಿಕೆ ವೃತ್ತಿಯ ಮೂಲಕ ಬದುಕನ್ನು ಕಟ್ಟಿಕೊಳ್ಳುತ್ತಾರೆ.  ಹೀಗಾಗಿ ಜೇಡರ ದಾಸಿಮಯ್ಯ ಎಂಬ ಹೆಸರು ನೇಕಾರಿಕೆ ವೃತ್ತಿಯ ದ್ಯೋತಕವಾಗಿರುವ ಸಾಧ್ಯತೆ ಇದೆ.  ವಚನಕಾರರು ಯಾರೂ ಸಹ ಮಠಗಳನ್ನು ಕಟ್ಟಲಿಲ್ಲ, ಅಲ್ಲಿದ್ದದ್ದು ಅನುಭವ ಮಂಟಪ ಮಾತ್ರ. ಮಾನಸಿಕ ಸುಸ್ಥಿತಿ ಕಾಯ್ದುಕೊಳ್ಳಲು ಶರಣರ ತತ್ವ ಸಂದೇಶಗಳು ಸಹಕಾರಿಯಾಗಿವೆ ಎಂಬುದಾಗಿ ವಿಠ್ಠಪ್ಪ ಗೋರಂಟ್ಲಿ ಅವರು ಅಭಿಪ್ರಾಯಪಟ್ಟರು.
     ಕಾರ್ಯಕ್ರಮದ ಉದ್ಘಾಟನೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ ಅವರು ನೆರವೇರಿಸಿದರು.  ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಣ್ಯರಾದ ವೀರಣ್ಣ ಬಡಿಗೇರ್, ನಾಗರಾಜ ಬಳ್ಳಾರಿ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಸಮಾರಂಭಕ್ಕೂ ಮುನ್ನ ದೇವರದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆ ನಗರದ ಗೌರಿಶಂಕರ ದೇವಸ್ಥಾನದಿಂದ ಪ್ರಾರಂಭಗೊಂಡು, ಸಾಹಿತ್ಯ ಭವನದವರೆಗೂ ಸಾಗಿ ಬಂದಿತು.  ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

ಕೊಪ್ಪಳ : ಮಾ. 27 ರಂದು ಲಾಟರಿ ಮೂಲಕ ಕೃಷಿ ಭಾಗ್ಯ ಫಲಾನುಭವಿಗಳ ಆಯ್ಕೆ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳನ್ನು ಮಾ. 27 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
     ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ 2014-15 ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೊಪ್ಪಳ ತಾಲ್ಲೂಕಿನ ರೈತರಿಗೆ ಸಹಾಯಧನ ನೀಡುವ ಕುರಿತಂತೆ ರೈತರಿಂದ ಅರ್ಜಿ ಸ್ವೀಕರಿಸುವ ಕಾರ್ಯ ಈಗಾಗಲೆ ಮುಕ್ತಾಯಗೊಂಡಿದ್ದು, ನಿಗದಿತ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುತ್ತವೆ. ಈಗಾಗಲೇ ಮೊದಲನೆ ಹಂತದ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು. 2015-16 ಸಾಲಿಗಾಗಿ ಮಾರ್ಗಸೂಚಿಗಳನ್ವಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕಾಗಿರುತ್ತದೆ.  ಲಾಟರಿ ಪ್ರಕ್ರಿಯೆಯನ್ನು ಕೊಪ್ಪಳ ಶಾಸಕರು ಮತ್ತು ಇತರೆ ಜನಪ್ರತಿನಿಧಿಗಳು ಹಾಗೂ ರೈತರ ಸಮುಖದಲ್ಲಿ ಮಾ. 27 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕೊಪ್ಪಳ ತಾಲೂಕಾ ಪಂಚಾಯತ ಸಭಾಭವನದಲ್ಲಿ ಆಯೋಜಿಸಲಾಗಿದೆ. ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುಮತಿ

ಕೊಪ್ಪಳ, ಮಾ.25 (ಕರ್ನಾಟಕ ವಾರ್ತೆ) : ಹೈದ್ರಾಬಾದ್ ನ ಜಾಮೀಯಾ ನಿಜಾಮಿಯಾ ಅರೇಬಿಕ್ ಯುನಿವೆರ್ಸಿಟಿ 2014-15 ನೇ ಸಾಲಿನಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಧಾರ್ಮಿಕ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಿದೆ.
        ಇನ್ನು ಮುಂದೆ ಉರ್ದು ಬರೆಯಲು ಓದಲು ಬಾರದ ಮುಸ್ಲಿಂ ಬಾಂಧವರು ಇಮಾಮತ್, ಮುಲ್ಲಾ, ಮೋಜನ್, ಖಿತಾಬತ್, ನಾಇಬೆ, ಖಜಾಅತ್, ಗಸ್ಸಾಲ್ ಗಳಂತಹ ಧಾರ್ಮಿಕ ವಿಷಯಗಳ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆದು ಪದವಿ ಪಡೆಯಬಹುದಾಗಿದೆ. ಇಂತಹ ಪದವಿಗಳಿಗೆ ಜಾಮೀಯಾ ನಿಜಾಮಿಯಾ ಅರೆಬಿಕ್ ಯುನಿವೆರ್ಸಿಟಿಯಿಂದ ಮಾನ್ಯತೆ ದೊರೆಯಲಿರುವುದು ಸಂತೋಷದ ವಿಚಾರವಾಗಿದೆ. ಕರ್ನಾಟಕದ ಸಮಸ್ತ ಮುಸ್ಲಿಂ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ 9964445107 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.06 ರಿಂದ ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಯುವಜನ ಮೇಳ

ಕೊಪ್ಪಳ, ಮಾ.25 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2014-15ನೇ ಸಾಲಿನ ವಿಭಾಗ ಮಟ್ಟದ ಯುವಜನ ಮೇಳವನ್ನು ಏ.06 ಮತ್ತು 07 ರಂದು ಕಲಬುರ್ಗಿಯಲ್ಲಿ ಆಯೋಜಿಸಿದೆ.
     ಕಲಬುರ್ಗಿಯ ಸಿದ್ದೇಶ್ವರ ಡಿವೈನ್ ಪ್ಯಾಲೆಸ್‍ನಲ್ಲಿ ಏ.06 ರಂದು ಮೇಳವು ಉದ್ಘಾಟನೆಗೊಳ್ಳಲಿದ್ದು, ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಆಯ್ಕೆಯಾದ ಸ್ಪರ್ಧಾಳುಗಳು ಅಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಸಂಘಟಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಕಳೆದ ಫೆ.07 ರಂದು  ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ, ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಈ ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಜಿಲ್ಲೆಯಿಂದ ಭಾಗವಹಿಸಲು ಅರ್ಹರು.  ಯುವಜನ ಮೇಳದಲ್ಲಿ ಭಾಗವಹಿಸುವವರಿಗೆ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ಪರ್ಧಾಳುಗಳು ಹಾಸಿಗೆ, ಹೊದಿಕೆ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬೇಕು. ಭಾಗವಹಿಸುವ ಸ್ಪರ್ಧಾಳುಗಳಿಗೆ ಕೊಪ್ಪಳ ಜಿಲ್ಲೆ ಕೇಂದ್ರ ಸ್ಥಾನದಿಂದ ಕಲಬುರ್ಗಿಯ ಸಂಘಟನೆ ನಡೆಯುವ ಸ್ಥಳದವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆ ನೀಡಲಾಗುವುದು.
     ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ-08539-201400 ಹಾಗೂ ಕಛೇರಿ ಸಿಬ್ಬಂದಿ ಕೆ.ಎಂ.ಪಾಟೀಲ್- 9945555320 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬೇಸಿಗೆ ಜೋಳದ ಬೆಳೆಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳು : ರೈತರಿಗೆ ಸಲಹೆ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ) : ಬೇಸಿಗೆ ಜೋಳದ ಬೆಳೆಯಲ್ಲಿ ರೋಗ ನಿರ್ವಹಣೆ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
        ಜನವರಿ ತಿಂಗಳ ಮಧ್ಯದಿಂದ ಜೂನ್ ಕೊನೆವರೆಗೂ ಜೋಳ ಬೆಳೆಗೆ ಸುಳಿ ನೊಣದ ಬಾಧೆ ಕಡಿಮೆ ಇರುತ್ತದೆ. ಬಿತ್ತನೆ ತಡವಾದಲ್ಲಿ ಎಕರೆಗೆ ಒಂದು ಕಿ. ಗ್ರಾಂ ಹೆಚ್ಚು ಬೀಜವನ್ನು ಬಿತ್ತನೆಗೆ ಬಳಸಬೇಕು. ಸುಳಿ ಬಿದ್ದ ಸಸಿಗಳನ್ನು ಕಿತ್ತು ಎಕರೆವಾರು ಸಸಿಗಳ ಸಂಖ್ಯೆ ಕಾಪಾಡಬೇಕು.  ಪ್ರತಿ ಕಿ. ಗ್ರಾಂ ಬೀಜಕ್ಕೆ 5 ಮಿ. ಲೀ ಕ್ಲೋರ್‍ಪೈರಿಫಾಸ್ 20 ಇಸಿ ನೀರಿನೊಂದಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಅಥವಾ ಜುಲೈನಿಂದ ಫೆಬ್ರುವರಿವರೆಗೆ ಬಿತ್ತಿದ ಬೆಳೆಗೆ ಹೆಕ್ಟೇರಿಗೆ 30 ಕಿ.ಗ್ರಾಂ ಶೇ. 3 ರ ಕಾರ್ಬೋ ಫ್ಯುರಾನ್ ಅಥವಾ 40 ಕಿ. ಗ್ರಾಂ ಶೇ. 10 ರ ಫೋರೇಟ್ ಹರಳನ್ನು ಬಿತ್ತನೆಗೆ ಮೊದಲು ಸಾಲುಗಳಲ್ಲಿ ಹಾಕಿ ಬಿತ್ತನೆ ಮಾಡಬೇಕು.  ಸುಳಿ ತಿಗಣೆಗಳ ನಿಯಂತ್ರಣಕ್ಕಾಗಿ ಪ್ರತಿ ಕಿ ಗ್ರಾಂ ಬೀಜಕ್ಕೆ 2 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲುಎಸ್ ದಿಂದ ಬೀಜೋಪಚಾರ ಮಾಡಬೇಕು. ಅಥವಾ ಬಿತ್ತನೆ ಮಾಡಿದ 25 ದಿನಗಳ ನಂತರ 2 ಮಿ. ಲೀ ಸೈಪರಮೆತ್ರಿನ್ 10 ಇಸಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಕ್ಟೇರಿಗೆ 375 ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ. 
       ಕಾಂಡಕೊರೆಯುವ ಹುಳುಗಳು ಕಂಡುಬಂದರೆ ಪ್ರತೀ ಹೆಕ್ಟೇರಿಗೆ 7.5 ಕಿ. ಗ್ರಾಂ ನಂತೆ ಕಾರ್ಬೋಫ್ಯುರಾನ್ ಶೇ. 3 ರ ಹರಳು ಅಥವಾ ಕಾರ್ಬರಿಲ್ ಶೇ. 4 ಹರಳು ಅಥವಾ ಲಿಂಡೇನ್ ಶೇ. 1ರ ಹರಳನ್ನು ಸುಳಿಯಲ್ಲಿ ಹಾಕಬೇಕು.  ಕಳಿತ ಪಾಷಾಣವನ್ನು ಹೆಕ್ಟೇರಿಗೆ 50 ಕಿ. ಗ್ರಾಂ ದಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಸೈನಿಕ (ಲದ್ದಿ ಹುಳು) ಹುಳುಗಳಿಗೆ ಎರಚಬೇಕು. ಪಾಷಾಣ ತಯಾರಿಸುವ ವಿಧಾನ: 4 ಕಿ. ಗ್ರಾಂ ಬೆಲ್ಲ 250 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್ ಎಲ್ 5-8 ಲೀಟರ್ ನೀರು ಹಾಗೂ 50 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ 48 ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು.  ಹೇನುಗಳಿಗಾಗಿ ಪ್ರತಿ ಲೀಟರ್ ನೀರಿಗೆ ಶೇ. 5ರ ಹುಲುಗಲ ಅಥವಾ ಕರಿಲಕ್ಕಿ ಸೊಪ್ಪಿನ ಕಷಾಯ ಅಥವಾ ಬೇವಿನ ಎಲೆ ಕಷಾಯ ದ್ರಾವಣವನ್ನು ಸಿಂಪಡಿಸಬೇಕು. ಹೆಕ್ಟೇರಿಗೆ 350 ಲೀ ಸಿಂಪರಣಾ ದ್ರಾವಣ ಬಳಸಬೇಕು.  ಜೇಡರ ನುಸಿಗಾಗಿ 2.5 ಮಿ. ಲೀ ಡೈಕೊಫಾಲ್ 18.5 ಇಸಿ. ಅಥವಾ 3 ಮಿ. ಲೀ ಫಾರ್ಮೊಥಿಯಾನ್ 25 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಕ್ವಿನಾಲ್‍ಫಾಸ್ ಶೇ. 1.5 ರ ಪುಡಿಯನ್ನು ಮಿಡತೆ ಮರಿಗಳು ಕಂಡ ತಕ್ಷಣ ಹೆಕ್ಟೇರಿಗೆ 25-30 ಕಿ. ಗ್ರಾಂ ಧೂಳೀಕರಿಸಬೇಕು.  2 ಗ್ರಾಂ ಕಾರ್ಬಾರಿಲ್ ಶೇ. 50 ಅಥವಾ 2 ಮಿ. ಲೀ ಮೆಲಾಥಿಯಾನ್ 50 ಇಸಿ. ರಷ್ಟು ತೆನೆಗಳು ಹೊರ ಬಂದಾಗ ಸಿಂಪಡಿಸಬೇಕು. ಹೆಕ್ಟರಿಗೆ 670 ಲೀ. ಸಿಂಪರಣಾ ದ್ರಾವಣ ಬಳಸಿ ಇದೇ ಸಿಂಪರಣೆಯನ್ನು ಮತ್ತೇ 4-6 ದಿನಗಳಲ್ಲಿ ಕೈಗೊಳ್ಳಬೇಕು. ಅಥವಾ ತೆನೆಗಳ ಮೇಲೆ ಹೆಕ್ಟೇರಿಗೆ 20 ಕಿ. ಗ್ರಾಂ ಮೆಲಾಥಿಯಾನ್ ಶೇ. 5ರ ಪುಡಿ ಅಥವಾ 20 ಕಿ. ಗ್ರಾಂ ಕಾರ್ಬಾರಿಲ್ ಶೇ. 10 ರ ಪುಡಿ ಅಥವಾ ಫೋಸಲೋನ್ ಶೇ. 4ರ ಪುಡಿಯನ್ನು ತೆನೆ ತಿಗಣೆ ಹಾಗೂ ಬೆಂಕಿಹುಳು ಕಾಣಿಸಿಕೊಂಡಾಗ ಧೂಳೀಕರಿಸಬೇಕು. ಪುಡಿಯನ್ನು ಮತ್ತೊಮ್ಮೆ 4-6 ದಿನಗಳ ಅಂತರದಲ್ಲಿ ಧೂಳೀಕರಿಸಬೇಕು.
         ಕಾಡಿಗೆ ರೋಗಕ್ಕೆ ಒಂದು ಕಿ. ಗ್ರಾಂ ಬೀಜಕ್ಕೆ 2 ಗ್ರಾಂ. ಗಂಧಕ ಅಥವಾ ಕ್ಯಾಪ್ಟನ್ 80 ಡಬ್ಯೂಪಿ ಅಥವಾ ಥೈರಾಮ್ 75 ಡಬ್ಯೂಪಿ ಲೇಪನ ಮಾಡಿ ಬಿತ್ತನೆ ಮಾಡಬೇಕು. ಕೊಯ್ಲುಮಾಡುವ ಮೊದಲು ಕಾಡಿಗೆ ರೋಗ ಪೀಡಿತ ತೆನೆಗಳನ್ನು ಗುರುತಿಸಿ ಆಯ್ದು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.  ಕೆಳಗಿನ ಎಲೆಗಳಲ್ಲಿ ತುಕ್ಕು ರೋಗ ಕಂಡ ಕೂಡಲೇ ಮ್ಯಾಂಕೊಜೆಬ್ 75 ಡಬ್ಯೂಪಿ 2 ಗ್ರಾಂ 1 ಲೀಟರ್ ನೀರಿನಲ್ಲಿ ಬೆರೆಸಿ ಒಂದು ವಾರದ ಅಂತರದಲ್ಲಿ ಮೂರು ಸಲ ಸಿಂಪರಣೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು.  3 ಗ್ರಾಂ ಮೆಟಲಾಕ್ಸಿಲ್ ಎಮ್‍ಝಡ್ 72 ಡಬ್ಲ್ಯುಪಿ ಶಿಲೀಂದ್ರನಾಶಕವನ್ನು 1 ಕಿ. ಗ್ರಾಂ ಬೀಜಕ್ಕೆ ಲೇಪಿಸಿ ಬಿತ್ತುವುದರಿಂದ ಕೇದಿಗೆ ರೋಗವು ನಿಯಂತ್ರಣವಾಗುವುದು.
         ರೋಗ ನಿರೋಧಕ ತಳಿ ಡಿಎಸ್‍ವಿ-4 ನ್ನು ಉಪಯೋಗಿಸುವುದರಿಂದ ಕಾಳಿನ ಕಪ್ಪು ಬೂಷ್ಟಿನ ರೋಗ ಮತ್ತು ಕಪ್ಪು ಕಾಂಡಕೊಳೆ ನಿಯಂತ್ರಿಸಬಹುದು. ಪ್ರತಿ ಕಿ. ಗ್ರಾಂ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮದಿಂದ ಬೀಜೋಪಚಾರ ಮಾಡಬೇಕು ಈ ಉಪಚಾರವನ್ನು ಮಾಡಿದಲ್ಲಿ ಶಿಫಾರಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಹಾಕುವದು ಅವಶ್ಯ.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞ ರೋಹಿತ್ ಕೆ. ಎ (9845194328), ಎಮ್. ಬಿ ಪಾಟೀಲ (9448690684) ಮತ್ತು ಸುಧಾಕರ್ ಟಿ (9916180756) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪಿಯುಸಿ ಪರೀಕ್ಷೆ : ಓರ್ವ ವಿದ್ಯಾರ್ಥಿ ಡಿಬಾರ್

ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬುಧವಾರದಂದು ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಸಮಾಜಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ  4578 ವಿದ್ಯಾರ್ಥಿಗಳು ಹಾಜರಾಗಿದ್ದು,  308 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಅಲ್ಲದೆ  ಓರ್ವ ವಿದ್ಯಾರ್ಥಿ ಡಿಬಾರ್ ಆಗಿದ್ದಾನೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಪಿಯುಸಿ ಪರೀಕ್ಷೆಯ ಸಮಾಜಶಾಸ್ತ್ರ ವಿಷಯ ಪರೀಕ್ಷೆ ತೆಗೆದುಕೊಂಡಿರುವ 4592 ವಿದ್ಯಾರ್ಥಿಗಳ ಪೈಕಿ 4296 ವಿದ್ಯಾರ್ಥಿಗಳು ಹಾಜರಾಗಿದ್ದು, 296 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 1305 ವಿದ್ಯಾರ್ಥಿಗಳ ಪೈಕಿ 1234 ವಿದ್ಯಾರ್ಥಿಗಳು ಹಾಜರಾಗಿದ್ದು, 71 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 1434 ವಿದ್ಯಾರ್ಥಿಗಳ ಪೈಕಿ 1361 ವಿದ್ಯಾರ್ಥಿಗಳು ಹಾಜರಿದ್ದು, 73 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 1033 ವಿದ್ಯಾರ್ಥಿಗಳ ಪೈಕಿ 964 ಹಾಜರಿದ್ದು, 69 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 820 ವಿದ್ಯಾರ್ಥಿಗಳ ಪೈಕಿ 737 ವಿದ್ಯಾರ್ಥಿಗಳು ಹಾಜರಾಗಿದ್ದು, 83 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಕೊಪ್ಪಳದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಸಮಾಜಶಾಸ್ತ್ರ ವಿಷಯ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
     ಸಂಖ್ಯಾಶಾಸ್ತ್ರ ವಿಷಯ ಪರೀಕ್ಷೆ ತೆಗೆದುಕೊಂಡಿರುವ 294 ವಿದ್ಯಾರ್ಥಿಗಳ ಪೈಕಿ 282 ವಿದ್ಯಾರ್ಥಿಗಳು ಹಾಜರಾಗಿದ್ದು, 12 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 156 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ಹಾಜರಾಗಿದ್ದು, 07 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 138 ವಿದ್ಯಾರ್ಥಿಗಳ ಪೈಕಿ 133 ವಿದ್ಯಾರ್ಥಿಗಳು ಹಾಜರಿದ್ದು, 05 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ  ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ : 1478. 97 ಕೋಟಿ ರೂ. ಗಳ ವಾರ್ಷಿಕ ಸಾಲ ಯೋಜನೆ ಬಿಡುಗಡೆ

ಕೊಪ್ಪಳ ಮಾ. 25 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಜಿಲ್ಲಾ ಲೀಡ್ ಬ್ಯಾಂಕ್‍ನಿಂದ 2015-16 ನೇ ಸಾಲಿಗಾಗಿ 1478. 97 ಕೋಟಿ ರೂ. ಮೊತ್ತದ ವಾರ್ಷಿಕ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಬುಧವಾರದಂದು ಬಿಡುಗಡೆ ಮಾಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಲೀಡ್ ಬ್ಯಾಂಕ್ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಡುಗಡೆ ಮಾಡಿದರು. 
     ಜಿಲ್ಲಾ ಲೀಡ್ ಬ್ಯಾಂಕಿನ 2015-16 ನೇ ಸಾಲಿನ ವಾರ್ಷಿಕ ಸಾಲ ಯೋಜನೆಯ ಬಗ್ಗೆ ಮಾಹಿತಿ ನೀಡಿದ, ಸ್ಟೇಟ್‍ಬ್ಯಾಂಕ್ ಆಫ್ ಹೈದ್ರಾಬಾದ್ ಬಳ್ಳಾರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಬೀದ್ ಹುಸೇನ್ ಅವರು, 2015-16 ನೇ ಸಾಲಿಗೆ ಒಟ್ಟು 1478. 97 ಕೋಟಿ ರೂ. ಗಳಿಗೆ ವಾರ್ಷಿಕ ಸಾಲ ಯೋಜನೆ ರೂಪಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ 305. 01 ಕೊಟಿ ರೂ. ಅಂದರೆ ಶೇ. 26 ರಷ್ಟು ಹೆಚ್ಚಾಗಿದೆ.  1478. 97 ಕೋಟಿ ರೂ. ಗಳ ಪೈಕಿ ಕೃಷಿ ಕ್ಷೇತ್ರಕ್ಕೆ ಸಿಂಹಪಾಲು ನೀಡಲಾಗಿದ್ದು, ಕೃಷಿ ಅಲ್ಪಾವಧಿ ಸಾಲಕ್ಕೆ 595. 70 ಕೋಟಿ, ದೀರ್ಘಾವಧಿ ಸಾಲಕ್ಕೆ 355. 16 ಕೋಟಿ ರೂ. ನಿಗದಿಪಡಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಳೆದ ಸಾಲಿಗಿಂತ ಈ ಬಾರಿ ಶೇ. 18. 63 ರಷ್ಟು ಕೃಷಿ ಕ್ಷೇತ್ರಕ್ಕೆ ಹೆಚ್ಚಳ ಮಾಡಲಾಗಿದ್ದು, ಈ ಬಾರಿ ಒಟ್ಟು 950. 86 ಕೋಟಿ ರೂ. ನಿಗದಿಪಡಿಸಲಾಗಿದೆ. ಸರ್ಕಾರದ ನೂತನ ಕೈಗಾರಿಕಾ ನೀತಿ ಜಾರಿಯಿಂದಾಗಿ, ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗುವ ಸಾಧ್ಯತೆಗಳಿದ್ದು, ಈ ಕ್ಷೇತ್ರಕ್ಕೆ 183. 88 ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಉಳಿದಂತೆ ಗೃಹ ನಿರ್ಮಾಣ, ಶಿಕ್ಷಣ, ನಾನಾ ಆರ್ಥಿಕ ಚಟುವಟಿಕೆಗಳೂ ಸೇರಿದಂತೆ ಸೇವಾ ವಲಯಕ್ಕೆ 344. 23 ಕೋಟಿ ರೂ. ನಿಗದಿಪಡಿಸಿದೆ.  ಕೊಪ್ಪಳ ತಾಲೂಕಿಗಾಗಿ ಕೃಷಿ ಅಲ್ಪಾವಧಿ ಸಾಲಕ್ಕೆ 123. 73 ಕೋಟಿ ರೂ., ದೀರ್ಘಾವಧಿ ಸಾಲಕ್ಕೆ 79. 63 ಕೋಟಿ.  ಕೈಗಾರಿಕೆ ವಲಯ- 78. 76 ಕೊಟಿ.  ಸೇವಾ ವಲಯ- 147. 12 ಕೋಟಿ ರೂ. ಸೇರಿದಂತೆ 429. 24 ಕೋಟಿ ರೂ. ನಿಗದಿಪಡಿಸಲಾಗಿದೆ.  ಗಂಗಾವತಿ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ 369. 67 ಕೋಟಿ ರೂ., ದೀರ್ಘಾವಧಿ ಸಾಲಕ್ಕೆ 231. 21 ಕೋಟಿ.  ಕೈಗಾರಿಕೆ ವಲಯ- 93. 61 ಕೊಟಿ.  ಸೇವಾ ವಲಯ- 145. 22 ಕೋಟಿ ರೂ. ಸೇರಿದಂತೆ 839. 71 ಕೋಟಿ ರೂ. ನಿಗದಿಪಡಿಸಲಾಗಿದೆ.  ಕುಷ್ಟಗಿ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ 44. 88 ಕೋಟಿ ರೂ., ದೀರ್ಘಾವಧಿ ಸಾಲಕ್ಕೆ 29. 72 ಕೋಟಿ.  ಕೈಗಾರಿಕೆ ವಲಯ- 8. 09 ಕೊಟಿ.  ಸೇವಾ ವಲಯ- 29. 78 ಕೋಟಿ ರೂ. ಸೇರಿದಂತೆ 112. 47 ಕೋಟಿ ರೂ. ನಿಗದಿಪಡಿಸಲಾಗಿದೆ.  ಯಲಬುರ್ಗಾ ತಾಲೂಕಿಗೆ ಕೃಷಿ ಅಲ್ಪಾವಧಿ ಸಾಲಕ್ಕೆ 57. 42 ಕೋಟಿ ರೂ., ದೀರ್ಘಾವಧಿ ಸಾಲಕ್ಕೆ 14. 60 ಕೋಟಿ.  ಕೈಗಾರಿಕೆ ವಲಯ- 3. 42 ಕೊಟಿ.  ಸೇವಾ ವಲಯ- 22. 11 ಕೋಟಿ ರೂ. ಸೇರಿದಂತೆ 97. 55 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.
       ರಿಸರ್ವ್ ಬ್ಯಾಂಕ್ ಬೆಂಗಳೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿ. ಶ್ರೀನಿವಾಸ, ನಬಾರ್ಡ್ ಬೆಂಗಳೂರಿನ ಡೆವಲಪ್‍ಮೆಂಟ್ ಮ್ಯಾನೇಜರ್ ಟಿ. ಸುಧೀರ್, ಬಳ್ಳಾರಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಢಾಣಕ ಶಿರೂರ ಉಪಸ್ಥಿತರಿದ್ದರು.  

ಸಾಮಾಜಿಕ ಸಮಾನತೆಗಾಗಿ ಸರ್ವರ ಸಮೀಕ್ಷೆ : ಸಾರ್ವಜನಿಕರ ಸಹಕಾರಕ್ಕೆ ಹೆಚ್. ಕಾಂತರಾಜ್ ಮನವಿ


ಕೊಪ್ಪಳ. ಮಾ. 25 (ಕರ್ನಾಟಕ ವಾರ್ತೆ): ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ರಾಜ್ಯದ ಇತಿಹಾಸದಲ್ಲಿ 84 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಏ. 11 ರಿಂದ 30 ರವರೆಗೆ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು,  ಇದರ ಯಶಸ್ವಿಗೆ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು ಅವರು ಹೇಳಿದರು.

     ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಜಿಲ್ಲೆಯಲ್ಲಿನ ಸಿದ್ಧತೆಗಳನ್ನು ಪರಾಮರ್ಶಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದ್ದು, ಸರ್ಕಾರ ಜನರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ.  ಕೆಲವರು ಜಾತಿ ಗಣತಿಯೇ ಇದರ ಪ್ರಮುಖ ಉದ್ದೇಶವೆಂಬುದಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ.  ಆದರೆ ಸಮೀಕ್ಷೆಯು ಕೇವಲ ಜಾತಿ ವಿಷಯವನ್ನೇ ಆದ್ಯತಾ ವಿಷಯವನ್ನಾಗಿಸಿಲ್ಲ.  ಬದಲಿಗೆ ಜನರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸಂಗ್ರಹಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.  ಗಣತಿ ಪತ್ರದ ನಮೂನೆಯಲ್ಲಿ ಒಟ್ಟು 55 ಪ್ರಶ್ನಾವಳಿಯಿದ್ದು, ಇದರಲ್ಲಿ 39 ಪ್ರಶ್ನೆಗಳು ವ್ಯಕ್ತಿಗತ ಪ್ರಶ್ನೆಗಳಾಗಿವೆ.  ಸಮೀಕ್ಷಾ ಸಂದರ್ಭದಲ್ಲಿ ಜಾತಿ, ಧರ್ಮಗಳ ಬಗ್ಗೆ ಇಂತಹದೇ ರೀತಿಯಲ್ಲಿ ಬರೆದುಕೊಳ್ಳಬೇಕು ಎಂದು ಗಣತಿದಾರರ ಮೇಲಾಗಲಿ ಅಥವಾ ಇದೇ ರೀತಿಯಲ್ಲಿ ಬರೆಯಿಸಬೇಕು ಎಂದು ಸಾರ್ವಜನಿಕರ ಮೇಲಾಗಲಿ, ಯಾವುದೇ ಸಂಘಟನೆಗಳು, ಸಂಘ-ಸಂಸ್ಥೆಗಳು, ಒತ್ತಡ ಹೇರುವಂತಿಲ್ಲ.  ಸಮೀಕ್ಷಾ ಕಾರ್ಯದ ಯಶಸ್ವಿಯಲ್ಲಿ ಗಣತಿದಾರರ ಪಾತ್ರ ಬಹು ಮುಖ್ಯವಾಗಿದ್ದು, ಇದರಲ್ಲಿ ಮುಖ್ಯವಾಗಿ  ಯಾವುದೇ ಮನೆಯನ್ನು ಬಿಡದಂತೆ ಸಮೀಕ್ಷೆ ಕೈಗೊಳ್ಳಬೇಕು.  ಒಂದು ವೇಳೆ ಯಾವುದೇ ಮನೆ ಗಣತಿಯಿಂದ ಬಿಟ್ಟು ಹೋಗಿರುವ ಬಗ್ಗೆ ದೂರುಗಳಿದ್ದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು.  ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವರು.  ಇದಕ್ಕೆ ಆಸ್ಪದ ನೀಡದಂತೆ ಗಣತಿದಾರರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.  ಮಾಹಿತಿ ಪಡೆಯುವಾಗ ಗಣತಿದಾರರು ಸಾರ್ವಜನಿಕರೊಂದಿಗೆ ಮಾಹಿತಿಯ ಖಚಿತತೆ ಬಗ್ಗೆ ಯಾವುದೇ ವಾಗ್ವಾದ ಮಾಡದಂತೆ, ಸಮಯಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು.  ಗಣತಿದಾರರ ವರ್ತನೆ ಹಾಗೂ ನಡತೆಯೂ ಸಹ ಸಮೀಕ್ಷೆಯ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಸಾರ್ವಜನಿಕರು ಗಣತಿ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ದಾಖಲೆಯನ್ನು ತೋರಿಸಿ, ಗಣತಿದಾರರಿಗೆ ಸಹಕರಿಸಬೇಕು.  ಒಟ್ಟಾರೆಯಾಗಿ, ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯು ಸಾರ್ವಜನಿಕರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ನೆರವಾಗಲಿರುವುದರಿಂದ, ಎಲ್ಲ ಸಾರ್ವಜನಿಕರು, ತಮ್ಮ ಮನೆಗೆ ಬರುವ ಗಣತಿದಾರರಿಗೆ ಸೂಕ್ತ ಹಾಗೂ ನಿಖರ ಮಾಹಿತಿಯನ್ನು ನೀಡಿ ಸಹಕರಿಸಬೇಕು.  ವಿವಿಧ ಜಾತಿ, ಸಮುದಾಯ, ಸಂಘ-ಸಂಸ್ಥೆಗಳು ಸಮೀಕ್ಷಾ ಕಾರ್ಯದ ಉಪಯುಕ್ತತೆ ಮತ್ತು ಅಗತ್ಯತೆ ಕುರಿತಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿ ಸರಿಯಾಗಿ ಮಾಹಿತಿ ನೀಡಲು ಪ್ರೇರೇಪಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು ಅವರು ಮನವಿ ಮಾಡಿಕೊಂಡರು.
     ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರು, ಸಮೀಕ್ಷಾ ಕಾರ್ಯದ ಸಿದ್ಧತೆಗಳ ಬಗ್ಗೆ ವಿವರಗಳನ್ನು ನೀಡಿ, ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ 2719 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.   ಇದರಲ್ಲಿ 2327 ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ಹಾಗೂ 392 ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ.  ಪ್ರತಿ 120 ರಿಂದ 150 ಮನೆಗಳಿಗೆ ಒಂದು ಬ್ಲಾಕ್‍ನಂತೆ ಜಿಲ್ಲೆಯಲ್ಲಿ 2467 ಬ್ಲಾಕ್‍ಗಳನ್ನು ಮಾಡಲಾಗಿದೆ.  ಸಮೀಕ್ಷಾ ಕಾರ್ಯ ಕುರಿತಂತೆ ಈಗಾಗಲೆ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಈಗಾಗಲೆ ಎರಡು ಹಂತಗಳ ತರಬೇತಿ ನೀಡಲಾಗಿದ್ದು, ಇದೇ ತಿಂಗಳಾಂತ್ಯಕ್ಕೆ ಅಂತಿಮ ತರಬೇತಿ ನೀಡಲಾಗುವುದು.  ತರಬೇತಿಗೆ ಜಿಲ್ಲೆಯಲ್ಲಿ ಒಟ್ಟು 28 ಮಾಸ್ಟರ್ ಟ್ರೈನರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.  ಸಮೀಕ್ಷೆಯ ವಿಧಾನ ಅರಿಯಲು ಜಿಲ್ಲೆಯ ನಾಲ್ಕೂ ತಾಲೂಕುಗಳ ತಲಾ ಒಂದು ಬ್ಲಾಕ್‍ನಲ್ಲಿ ಪ್ರಾಯೋಗಿಕ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗಿದ್ದು, ಇದರ ವರದಿಯ ಆಧಾರದಲ್ಲಿ ಅಂತಿಮ ತರಬೇತಿ ಸಂದರ್ಭದಲ್ಲಿ ಗಣತಿದಾರರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವ್ಯಾಪಕ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ, ವಿಶೇಷ ಮಾದರಿಯ ವಾಹನವನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ ಜಾಗೃತಿ ವಾಹನದ ಮೂಲಕ ಏ. 01 ರಿಂದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಕಾರ್ಯ ನಡಸಲಾಗುವುದು. ಜೊತೆಗೆ ಕರ ಪತ್ರ, ಕೇಬಲ್ ನೆಟ್‍ವರ್ಕ್, ರೇಡಿಯೋ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ.  ಜಿಲ್ಲಾ ಮಟ್ಟದಲ್ಲಿ ಎಲ್ಲ ಸಮುದಾಯದ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರೇರೇಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ವಿವರಿಸಿದರು.
     ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರುಗಳಾದ ಶರಣಪ್ಪ ಮಾನೆಗಾರ, ಲಿಂಗಪ್ಪ, ಡಾ. ಎಂ. ಗುರುಲಿಂಗಯ್ಯ, ಜಿ.ಡಿ. ಗೋಪಾಲ್, ಎನ್.ಪಿ. ಧರ್ಮರಾಜು, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಸಮೀಕ್ಷೆಯ ಸಂಪನ್ಮೂಲ ಅಧಿಕಾರಿ ಸಿ.ವಿ. ಜಡಿಯವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಕಾರಿಗಳು, ಸಮೀಕ್ಷೆಗೆ ನೇಮಕಗೊಂಡ ಚಾರ್ಜ್ ಅಧಿಕಾರಿಗಳು ಭಾಗವಹಿಸಿದ್ದರು.
 

Tuesday, 24 March 2015

ಸ್ವ-ಉದ್ಯೋಗ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಮಾ.24 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಹಳಿಯಾಳ ಇವರು ಏಪ್ರಿಲ್ ತಿಂಗಳಿನಲ್ಲಿ ವಿವಿಧ ಸ್ವ-ಉದ್ಯೋಗ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.
     ಪುರುಷರಿಗಾಗಿ ಏ.15 ರಿಂದ ಮೇ.14 ರವರೆಗೆ 30 ದಿನಗಳ ವಸ್ತ್ರ ವಿನ್ಯಾಸ ತರಬೇತಿ ಹಾಗೂ ಟ್ರ್ಯಾಕ್ಟರ್ ರಿಪೇರಿ ತರಬೇತಿಗಳನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, 18 ರಿಂದ 45 ವರ್ಷದೊಳಗಿನ ಆಸಕ್ತ, ಅರ್ಹ, ನಿರುದ್ಯೋಗಿ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು.   ಅರ್ಜಿ ಸಲ್ಲಿಸಲಿಚ್ಚಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ತಮ್ಮ ಸ್ವವಿವರವುಳ್ಳ ಮಾಹಿತಿಯ ಜೊತೆ ಪಡೆಯಲಿಚ್ಚಿಸುವ ತರಬೇತಿಯ ಹೆಸರನ್ನು ಬಿಳಿ ಹಾಳೆಯಲ್ಲಿ ಬರೆದು ನಿರ್ದೇಶಕರು, ದೇಶಪಾಂಡೆ ರುಡ್‍ಸೆಟ್ ಸಂಸ್ಥೆ(ರಿ), ದಾಂಡೇಲಿ ರಸ್ತೆ, ಹಳಿಯಾಳ-581329 ಇವರಿಗೆ ಶೀಘ್ರವಾಗಿ ಸಲ್ಲಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08284-220807, 9482188780, 9483485489 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಟ್ನಾಳ್‍ನಲ್ಲಿ ವಿಶೇಷ ಉಪನ್ಯಾಸ ಮಾಲಿಕೆ ಯಶಸ್ವಿ

ಕೊಪ್ಪಳ, ಮಾ.24 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕು ಹಿಟ್ನಾಳ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಂತರಿಕ ಗುಣಮಟ್ಟ ಭರವಸೆ ಕೋಶ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
     ಪ್ರೊ.ಶಂಭುಲಿಂಗ ಚಿಗರಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಗವಿಸಿದ್ದಪ್ಪ ಮುತ್ತಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದಿಂದ ‘ವಚನಗಳಲ್ಲಿ ವೈಚಾರಿಕತೆ ಮತ್ತು ಪ್ರಸ್ತುತ ಅನ್ವಯ’ ವಿಷಯದ ಮೇಲೆ ಉಪನ್ಯಾಸ ನೀಡಿದ ಡಾ.ಮೃತ್ಯುಂಜಯ ರುಮಾಲೆ ಅವರು, ದೈವತ್ವವನ್ನು ವಚನಕಾರರು ತಿರಸ್ಕರಿಸದೇ, ಸುಧಾರಿಸುವ ಕೆಲಸವನ್ನು ಮಾಡಿದರು. ಇದಕ್ಕೆ ಉದಾಹರಣೆ ಎಂಬಂತೆ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್ ಕಾಲಗಳಲ್ಲಿ ನಿಂತ ತಾತ, ಮಗ, ಮೊಮ್ಮಗನ ಮೂಲಕ ಪರಂಪರೆಯನ್ನು ಬೆಳೆಸುವ ರೀತಿಯಲ್ಲಿ ವಿಷಯವನ್ನು ಅನ್ವಯಿಸಿದರು ಎಂದು ಹೇಳಿದರು.
     ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ನಾಗವೇಣಿ, ಆಂಜನೇಯ ಗುಜ್ಜಲ್ ಹಾಗೂ ಇತರರು ಇದ್ದರು.

ಮಾ.26 ರಂದು ತಾಯಂದಿರ ಚಾವಡಿ ರಚನೆ ತರಬೇತಿ ಕಾರ್ಯಾಗಾರ

ಕೊಪ್ಪಳ, ಮಾ.24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಯಂದಿರ ಚಾವಡಿ ರಚನೆ ಹಾಗೂ ಕಾರ್ಯಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರಿಗೆ ಮಾ. 26 ರಂದು ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
       ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಸಪ್ಪಣ್ಣನವರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಪಿ.ರಾಜಾ, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ ಅವರು  ತಾಯಂದಿರ ಚಾವಡಿಯ ರಚನೆ ಮತ್ತು ಕಾರ್ಯಗಳ ಕುರಿತು. ಪೊಲೀಸ್ ತರಬೇತುದಾರ  ಸೋಮಶೇಖರ ಅವರು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ ಅವರು ಮಕ್ಕಳಿಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಘಟಕದಿಂದ ಲಭ್ಯವಿರುವ ಸೇವೆಗಳ ಕುರಿತು ವಿಶೇಷ ಉಪನ್ಯಾಸ ನೀಡುವರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ- ಕೃಷ್ಣ ಉದಪುಡಿ

ಕೊಪ್ಪಳ ಮಾ. 24 (ಕ.ವಾ): ಜಿಲ್ಲೆಯಲ್ಲಿ ಮಾ. 30 ರಿಂದ ಏ. 13 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಸರ್ಕಾರಿ ಶಾಲೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡಲೆ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರನ್ವಯ ಪರೀಕ್ಷಾ ಕೇಂದ್ರಗಳಾಗಿರುವ ಸರ್ಕಾರಿ ಶಾಲೆಗಳಲ್ಲಿ ಸಂಚಿತ ನಿಧಿಯಲ್ಲಿನ ಅನುದಾನವನ್ನು ಬಳಸಿಕೊಂಡು ಕೂಡಲೆ ಸಿಸಿ ಕ್ಯಾಮೆರಾ ಅಳವಡಿಸಬೇಕು.  ಅನುದಾನದ ಕೊರತೆಯಾದಲ್ಲಿ, ಡಿಡಿಪಿಐ ಮೂಲಕ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.  ಪರೀಕ್ಷಾ ಕೇಂದ್ರಗಳಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾ. 30 ರ ಒಳಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳಿಸಬೇಕು.  ತಪ್ಪಿದಲ್ಲಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು.  ಈ ಬಾರಿ ಒಟ್ಟು 18121 ವಿದ್ಯಾರ್ಥಿಗಳು   ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು 62 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು.  ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಪರೀಕ್ಷಾಭಯ ಹೋಗಲಾಡಿಸಬೇಕು.  ಪರೀಕ್ಷಾ ಕೊಠಡಿಯೊಳಗೆ ಮಾಧ್ಯಮದವರಿಗೆ ಪ್ರವೇಶ ನೀಡುವಂತಿಲ್ಲ ಆದರೆ ಪರೀಕ್ಷಾ ಕೇಂದ್ರದ ಹೊರಗಿನ ಫೋಟೋ ಅಥವಾ ಚಿತ್ರೀಕರಣ ನಡೆಸಬಹುದು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್‍ಗೆ ಕ್ರಮ ಕೈಗೊಳ್ಳಬೇಕು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.  ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಕೊಡುವುದು ಅಥವಾ ಸಹಕರಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು 17101 ರೆಗ್ಯುಲರ್ ವಿದ್ಯಾರ್ಥಿಗಳು, 586 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 434 ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ  18121 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 20, ಗಂಗಾವತಿ-21, ಕುಷ್ಟಗಿ-09 ಮತ್ತು ಯಲಬುರ್ಗಾ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟು 62 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಪರೀಕ್ಷಾ ನಕಲು ತಡೆಗೆ ರಾಜ್ಯ ಮಟ್ಟದಿಂದ ಜಾಗೃತ ದಳ ಆಗಮಿಸಲಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ರಚಿಸಲಾಗಿದೆ.  ಜಿಲ್ಲೆಯಲ್ಲಿ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರವನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಇಲ್ಲಿಗೆ ಹೆಚ್ಚುವರಿಯಾಗಿ ಸ್ಥಾನಿಕ ಜಾಗೃತ ದಳವನ್ನು ನೇಮಿಸಲಾಗುವುದು.  ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ರವಾನೆಗಾಗಿ ಒಟ್ಟು 22 ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಎಲ್ಲ ಮಾರ್ಗಗಳಿಗೆ ಪ್ರತ್ಯೇಕ ವಾಹನ ಬಳಸಲಾಗುವುದು.  ವಿದ್ಯಾರ್ಥಿಗಳು ಮೊಬೈಲ್ ಅಥವಾ ಕ್ಯಾಲುಕುಲೇಟರ್ ಅನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲಎಂದರು.
     ಸಭೆಯಲ್ಲಿ ಡಿವೈಎಸ್‍ಪಿ ರಾಜೀವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಖಜಾನೆ ಇಲಾಖೆ ಅಧಿಕಾರಿ ಕಳ್ಳೇರ್,  ಸೇರಿದಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು.

ವಿಜೃಂಭಣೆಯಿಂದ ಜಗಜೀವನರಾಮ್, ಅಂಬೇಡ್ಕರ್ ಜಯಂತಿ ಆಚರಣೆ- ಆರ್.ಆರ್. ಜನ್ನು

ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ) : ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು
     ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
     ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆಯನ್ನು ಏಪ್ರಿಲ್ 05 ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಏ. 14 ರಂದು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು.  ಅಲ್ಲದೆ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮವನ್ನು ಏ. 05 ರಂದೇ ಜಗಜೀವನರಾಜ್ ಜಯಂತಿಯೊಂದಿಗೆ ಆಚರಿಸಲಾಗುವುದು.  ಆಯಾ ದಿನಗಳಂದು ಬೆಳಿಗ್ಗೆ ಮಹನೀಯರ ಭಾವಚಿತ್ರಗಳ ಸಹಿತ, ಡೊಳ್ಳು ಕುಣಿತ, ಜಾಂಜ್ ಮೇಳ ಮುಂತಾದ ಜಾನಪದ ತಂಡಗಳೊಂದಿಗೆ ಕೊಪ್ಪಳ ತಹಸಿಲ್ದಾರರ ಕಚೇರಿಯಿಂದ ಮೆರವಣಿಗೆ ಹೊರಡಿಸಲಾಗುವುದು. ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಜಿಲ್ಲೆಯ ಸಂಸದರು, ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುವುದು.  ಜಗಜೀವನರಾಮ್ ಜಯಂತಿ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸ ನೀಡಲು ಹಂಪಿ ಕನ್ನಡ ವಿ.ವಿ.ಯ ಬಿ.ಎಂ. ಪುಟ್ಟಯ್ಯ, ಜಿ.ಬಿ. ನಂದನ್ ಅಥವಾ ಲಿಂಗಯ್ಯ  ಅವರ ಪೈಕಿ ಒಬ್ಬರನ್ನು ಲಭ್ಯತೆಯ ಆಧಾರದಲ್ಲಿ ಆಹ್ವಾನಿಸಲಾಗುವುದು.  ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಬ್ಬರೂ ಮಹನೀಯರ ಜನ್ಮದಿನಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಸೂಚಿಸಲಾಗುವುದು.  ಅದೇ ರೀತಿ ಎಲ್ಲ ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಸಮಾರಂಭಗಳಲ್ಲಿ ಭಾಗವಹಿಸಲು ವ್ಯವಸ್ಥೆಗೊಳಿಸಲಾಗುವುದು.  ಮಹನೀಯರುಗಳ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು. ಸಮಾಜದ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರೆ ನೀಡಿದರು.
      ಜಯಂತಿಯ ಅಂಗವಾಗಿ ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಕೈಗೊಳ್ಳಬೇಕು.  ಮೆರವಣಿಗೆ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು.  ಕಾರ್ಯಕ್ರಮಗಳ ಯಶಸ್ವಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಮಾತನಾಡಿ, ಬಾಬು ಜಗಜೀವನರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಜಿಲ್ಲಾ ಮಟ್ಟಕ್ಕೆ ತಲಾ 25 ಸಾವಿರ ಹಾಗೂ ತಾಲೂಕು ಮಟ್ಟಕ್ಕೆ  5 ಸಾವಿರ ರೂ. ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.
     ಕೊಪ್ಪಳ ನಗರದಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕಾಗಿ ಇದ್ದಂತಹ ನಿವೇಶನದ ಸಮಸ್ಯೆ ಇದೀಗ ಬಗೆಹರಿದಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭಾ ಅವರು ಸಭೆಗೆ ಮಾಹಿತಿ ನೀಡಿದರು.  
       ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ದೇವನೂರ ಮಹಾದೇವ ಹಾಗೂ ಸಿದ್ದಲಿಂಗಯ್ಯ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
       ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
     ಸಭೆಯಲ್ಲಿ  ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ,  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರಾದ ಶಿವನಾಂದ ಹೊದ್ಲೂರ, ವಿಠ್ಠಪ್ಪ ಗೋರಂಟ್ಲಿ, ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳಾದ ಡಾ. ಜ್ಞಾನಸುಂದರ್, ಹಾಲೇಶ್ ಕಂದಾರಿ, ಗವಿಸಿದ್ದಪ್ಪ ಕಂದಾರಿ, ಸಿದ್ದಪ್ಪ ಹೊಸಮನಿ, ಹನುಮೇಶ್ ಕಡೇಮನಿ, ಗಾಳೆಪ್ಪ ಪೂಜಾರ್, ಪ್ರಭು ಬೋಚನಹಳ್ಳಿ, ಚನ್ನಬಸಪ್ಪ ಹೊಳೆಯಪ್ಪನವರ್, ಓಬಳೇಶ, ಲಕ್ಷ್ಮಣ ಮಾದಿನೂರ, ದುರ್ಗಪ್ಪ ಅಲ್ಲಾನಗರ, ರಮೇಶ್ ಚೌಡ್ಕಿ ಸೇರಿದಂತೆ ಹಲವಾರು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಮಾ. 25 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜ ಅವರು ಅಂದು ಬೆಳಿಗ್ಗೆ 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಮಧ್ಯಾಹ್ನ 3 ಗಂಟೆಗೆ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಳ್ಳಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಸಾಂಖ್ಯಿಕ ಸಮಗ್ರಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ನಂತರ ಸಂಜೆ 4-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸುವರು.  ಆಯೋಗದ ಅಧ್ಯಕ್ಷರು ಅದೇ ದಿನ ಸಂಜೆ 6 ಗಂಟೆಗೆ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು.

ಪಿಯುಸಿ ಜೀವಶಾಸ್ತ್ರ ಪರೀಕ್ಷೆ : 819 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳವಾರದಂದು ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಜೀವಶಾಸ್ತ್ರ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ 819 ವಿದ್ಯಾರ್ಥಿಗಳು ಹಾಜರಾಗಿದ್ದು, 44 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಪಿಯುಸಿ ಪರೀಕ್ಷೆಯ ಜೀವಶಾಸ್ತ್ರ ವಿಷಯ ಪರೀಕ್ಷೆ ತೆಗೆದುಕೊಂಡಿರುವ 863 ವಿದ್ಯಾರ್ಥಿಗಳ ಪೈಕಿ 819 ವಿದ್ಯಾರ್ಥಿಗಳು ಹಾಜರಾಗಿದ್ದು, 44 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 392 ವಿದ್ಯಾರ್ಥಿಗಳ ಪೈಕಿ 374 ವಿದ್ಯಾರ್ಥಿಗಳು ಹಾಜರಾಗಿದ್ದು, 18 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 115 ವಿದ್ಯಾರ್ಥಿಗಳ ಪೈಕಿ 113 ವಿದ್ಯಾರ್ಥಿಗಳು ಹಾಜರಿದ್ದು, 02 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 24 ವಿದ್ಯಾರ್ಥಿಗಳ ಪೈಕಿ 18 ಹಾಜರಿದ್ದು, 06 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 99 ವಿದ್ಯಾರ್ಥಿಗಳ ಪೈಕಿ 89 ವಿದ್ಯಾರ್ಥಿಗಳು ಹಾಜರಾಗಿದ್ದು, 10 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ, ಮಾ.24 (ಕರ್ನಾಟಕವಾರ್ತೆ) : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ರಾಂಪೂರ ಗ್ರಾಮದ ಮಹೇಶ ಕುಮಾರ್(16) ಎಂಬ ಬಾಲಕನು 2015 ರ ಜ.07 ರಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಕಾಣೆಯಾಗಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೋಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಕಾಣೆಯಾದ ಬಾಲಕನ ವಿವರ ಇಂತಿದೆ ಹೆಸರು : ಮಹೇಶ ಕುಮಾರ್ ಗೋರೆಬಾಳ, ವಯಸ್ಸು : 16 ವರ್ಷ, ತಾಯಿ ಹೆಸರು ನೀಲಮ್ಮ ಗೋರೆಬಾಳ ಅವರ ಮಗನಾದ ಜಾತಿ : ಲಿಂಗಾಯತ ಲಿಂಗ : ಪುರುಷ, ಎತ್ತರ : 135.00 ಸೆಂ, ಮೀ, ಕಪ್ಪು ಗುಂಗುರು ಕೂದಲು, ಬೆಳ್ಳನೇ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಕಾಲೇಜಿಗೆ ಹೋಗುವಾಘ ಒಂದು ನೀಲಿ ಬಣ್ಣದ ಟೀ ಶರ್ಟು ಮತ್ತು ಒಂದು ನೀಲಿ ಬಣ್ಣದ ಪ್ಯಾಂಟು ಧರಿಸಿದ್ದ, ಪ್ರಥಮ ಪಿ.ಯು.ಸಿ ಓದುತ್ತಿರುವ ಈತ, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈ  ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ದೊರಕಿದಲ್ಲಿ ತಾವರಗೇರಾ ಪೋಲೀಸ್ ಠಾಣೆಯ ದೂರವಾಣಿ ಸಂಖ್ಯೆ : 08536-275322 ಅಥವಾ ಕುಷ್ಟಗಿ ಪೋಲೀಸ್ ಠಾಣೆಯ 08536 267033 ಈ ದೂರವಾಣಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾ. 25 ರಂದು ಕೊಪ್ಪಳ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಾಲ ಯೋಜನೆ ಬಿಡುಗಡೆ

ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ) : ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭ ಮಾ. 25 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಎಸ್‍ಬಿಹೆಚ್ ಬೆಂಗಳೂರಿನ ಜನರಲ್ ಮ್ಯಾನೇಜರ್ ಬಿ.ಕೆ. ಶಿವರಾಮ, ರಿಸರ್ವ್ ಬ್ಯಾಂಕ್ ಬೆಂಗಳೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿ. ಶ್ರೀನಿವಾಸ, ನಬಾರ್ಡ್ ಬೆಂಗಳೂರಿನ ಡೆವಲಪ್‍ಮೆಂಟ್ ಮ್ಯಾನೇಜರ್ ಟಿ. ಸುಧೀರ್, ಎಸ್‍ಬಿಹೆಚ್ ಬಳ್ಳಾರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅಬೀದ್ ಹುಸೇನ್ ಅವರು ಭಾಗವಹಿಸುವರು ಎಂದು ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ಢಾಣಕ ಶಿರೂರ ಅವರು ತಿಳಿಸಿದ್ದಾರೆ.

Monday, 23 March 2015

ಯಶಸ್ವಿನಿ ಯೋಜನೆ : ಹೆಸರು ನೊಂದಾಯಿಸಲು ಸೂಚನೆ

ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ) : ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಾದ ಯಶಸ್ವಿನಿ ಯೋಜನೆಯಡಿ 2015-16 ನೇ ಸಾಲಿಗೆ ಫಲಾನುಭವಿಗಳ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಸಹಕಾರಿ ಸಂಸ್ಥೆಗಳಲ್ಲಿ ಆರಂಭವಾಗಿದ್ದು, ಮೇ.31 ರವರೆಗೆ ಕಾಲಾವಕಾಶ ಒದಗಿಸಲಾಗಿದೆ.
     ಗ್ರಾಮೀಣ ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ವಾರ್ಷಿಕ ವಂತಿಗೆಯನ್ನು ರೂ. 250/-  ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ರೂ. 50/- ನಿಗದಿಪಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ದಿನಾಂಕ 28-02-2015 ಕ್ಕಿಂತಲೂ ಮೊದಲು ಗ್ರಾಮೀಣ ಸಹಕಾರಿ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುವ ವ್ಯಕ್ತಿಗಳು, ಮೂರು ತಿಂಗಳ ಹಿಂದೆ ರಚನೆಯಾದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ಸಂಘಟಿಸಲ್ಪಟ್ಟಿರುವ, ಗ್ರಾಮೀಣ ಪ್ರದೇಶದಲ್ಲಿರುವ ಸ್ವಸಹಾಯ ಗುಂಪು ಮತ್ತು ಅವರ ಕುಟುಂಬದ ಅರ್ಹ ಸದಸ್ಯರು ಪ್ರತ್ಯೇಕವಾಗಿ ವಂತಿಗೆ ಹಣ ಪಾವತಿ ಮಾಡುವ ಮೂಲಕ ಯೋಜನೆಯ ವ್ಯಾಪ್ತಿಗೆ ಒಳಪಡಬಹುದಾಗಿದೆ.
     ಯಶಸ್ವಿನಿ ಯೋಜನೆಯನ್ನು 2015-16ನೇ ಸಾಲಿಗೆ ನಗರ ಸಹಕಾರಿಗಳಿಗೂ ಮತ್ತು ಅವರ ಕುಟುಂಬವರ್ಗದವರಿಗೂ ವಿಸ್ತರಿಸಲಾಗಿದ್ದು, ವಾರ್ಷಿಕ ವಂತಿಗೆ ರೂ. 710/- ನಿಗದಿಪಡಿಸಲಾಗಿದೆ.  ನಗರವಾಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ. 510/- ನಿಗದಿಪಡಿಸಲಾಗಿದೆ. ನಗರ ಪ್ರದೇಶದ ಯಾವುದೇ ತರಹದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ ನೊಂದಣಿಯಾಗುವ ದಿನಾಂಕ್ಕೆ 3 ತಿಂಗಳು ಕಳೆದಿದ್ದರೆ ಅಂತಹ ಸಹಕಾರ ಸಂಘದ ಸದಸ್ಯರು ಮತ್ತು ಕುಟುಂಬವರ್ಗದವರಿಗೆ ನಿಗದಿಪಡಿಸಲಾಗಿರುವ ವಂತಿಗೆಯನ್ನು ಪ್ರತ್ಯೇಕವಾಗಿ   ಪಾವತಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
     ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆ ಹಾಗೂ ಸಮೀಪದ ಸಹಕಾರ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

ಪಿಯುಸಿ ಪರೀಕ್ಷೆ : ಇಬ್ಬರು ವಿದ್ಯಾರ್ಥಿಗಳು ಡಿಬಾರ್

ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರದಂದು ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಇತಿಹಾಸ ಮತ್ತು ಗಣಕ ವಿಜ್ಞಾನ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ 6609 ವಿದ್ಯಾರ್ಥಿಗಳು ಹಾಜರಾಗಿದ್ದು,  378 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಅಲ್ಲದೆ  ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಪಿಯುಸಿ ಪರೀಕ್ಷೆಯ ಇತಿಹಾಸ ವಿಷಯ ಪರೀಕ್ಷೆ ತೆಗೆದುಕೊಂಡಿರುವ 6665 ವಿದ್ಯಾರ್ಥಿಗಳ ಪೈಕಿ 6291 ವಿದ್ಯಾರ್ಥಿಗಳು ಹಾಜರಾಗಿದ್ದು, 374 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 2260 ವಿದ್ಯಾರ್ಥಿಗಳ ಪೈಕಿ 2158 ವಿದ್ಯಾರ್ಥಿಗಳು ಹಾಜರಾಗಿದ್ದು, 102 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 2251 ವಿದ್ಯಾರ್ಥಿಗಳ ಪೈಕಿ 2146 ವಿದ್ಯಾರ್ಥಿಗಳು ಹಾಜರಿದ್ದು, 105 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 1128 ವಿದ್ಯಾರ್ಥಿಗಳ ಪೈಕಿ 1057 ಹಾಜರಿದ್ದು, 71 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 1026 ವಿದ್ಯಾರ್ಥಿಗಳ ಪೈಕಿ 930 ವಿದ್ಯಾರ್ಥಿಗಳು ಹಾಜರಾಗಿದ್ದು, 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಗಂಗಾವತಿಯ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಇತಿಹಾಸ ವಿಷಯ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
     ಗಣಕ ವಿಜ್ಞಾನ ವಿಷಯ ಪರೀಕ್ಷೆ ತೆಗೆದುಕೊಂಡಿರುವ 322 ವಿದ್ಯಾರ್ಥಿಗಳ ಪೈಕಿ 318 ವಿದ್ಯಾರ್ಥಿಗಳು ಹಾಜರಾಗಿದ್ದು, 04 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 16 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 196 ವಿದ್ಯಾರ್ಥಿಗಳ ಪೈಕಿ 193 ವಿದ್ಯಾರ್ಥಿಗಳು ಹಾಜರಿದ್ದು, 04 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕು ಶ್ರೀರಾಮನಗರದ ಎಕೆಆರ್‍ಡಿ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗಣಕ ವಿಜ್ಞಾನ ವಿಷಯ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಗಜೀವನರಾಮ್, ಅಂಬೇಡ್ಕರ್ ಜಯಂತಿ : ಮಾ.24 ರಂದು ಪೂರ್ವಾಭಾವಿ ಸಭೆ

ಕೊಪ್ಪಳ, ಮಾ.23 (ಕರ್ನಾಟಕ ವಾರ್ತೆ) : ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನರಾಮ್ ರವರ 108ನೇ ಹಾಗೂ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರ 124ನೇ ಜನ್ಮ ದಿನಾಚರಣೆಯನ್ನು ಬರುವ ಏಪ್ರಿಲ್ ತಿಂಗಳಿನಲ್ಲಿ ಆಚರಿಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆ ಮಾ.24 ರಂದು ಮಧ್ಯಾಹ್ನ 12 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ವಹಿಸುವರು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶುಭಾ ಅವರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮಾ. 25 ರಂದು ದೇವರ ದಾಸಿಮಯ್ಯ ಜಯಂತಿ

ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಆದ್ಯ ವಚನಕಾರ, ನೇಕಾರ ಸಂತ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾ. 25 ರಂದು ಕೊಪ್ಪಳದಲ್ಲಿ ನಡೆಯಲಿದೆ.
     ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಲಿದ್ದು, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೈಯ್ಯದ್ ಜುಲ್ಲು ಖಾದರ್ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.

Friday, 20 March 2015

ಭಾರತೀಯ ವಾಯುಪಡೆ ಗ್ರೂಪ್-ಎಕ್ಸ್ ಮತ್ತು ಗ್ರೂಪ್-ವೈ ಹುದ್ದೆಗಳ ಆಯ್ಕೆಗೆ ರ್ಯಾಲಿ


ಕೊಪ್ಪಳ, ಮಾ.20 (ಕರ್ನಾಟಕ ವಾರ್ತೆ): ಭಾರತೀಯ ವಾಯುಪಡೆಯು ಕೊಪ್ಪಳ ಜಿಲ್ಲೆಯ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಗ್ರೂಪ್ ಎಕ್ಸ್ (ಟೆಕ್ನಿಕಲ್) ಹುದ್ದೆಗೆ ಮಾ. 24 ಮತ್ತು ಗ್ರೂಪ್-‘ವೈ’ (ಆಟೋ ಟೆಕ್, ಜಿಟಿಐ ಮತ್ತು ಐಎಎಫ್) ಹುದ್ದೆಗಳಿಗೆ ಮಾ. 26 ರಂದು  ಅಯ್ಕೆ ಮಾಡಲು ಬೆಳಗಾವಿಯ ಪಿ.ಬಿ ರಸ್ತೆಯಲ್ಲಿರುವ ಕುಮಾರ ಗಂದರ್ವ ಹಾಲ್‍ನಲ್ಲಿ ರ್ಯಾಲಿ ಆಯೋಜಿಸಿದೆ.
     ಗ್ರೂಪ್- ಎಕ್ಸ್ ಹುದ್ದೆಗೆ ಫಿಸಿಕ್ಸ್, ಮ್ಯಾಥ್ಯ್ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಕನಿಷ್ಟ ಶೇ. 50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು ಹಾಗೂ ಇಂಗ್ಲೀಷ್‍ನಲ್ಲಿ ಕನಿಷ್ಟ ಶೇ. 50 ಪಡೆದಿರಬೇಕು ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸುಟ್ರುಮೆಂಟೇಷನ್ ಟೆಕ್ನಾಲಜಿ, ಇನ್‍ಫಾರ್‍ಮೇಷನ್ ಟೆಕ್ನಾಲಜಿ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸರಕಾರಿ ಅನುಮೋದಿತ ಪಾಲಿಟೆಕ್ನಿಕ್‍ನಿಂದ 3 ವರ್ಷದ ಡಿಪ್ಲೋಮಾದಲ್ಲಿ ಒಟ್ಟಾರೆ ಕನಿಷ್ಟ ಶೇ. 50 ಅಂಕ ಪಡೆದು ಉತ್ತೀರ್ಣರಾಗಿರಬೇಕು. ಡಿಪ್ಲೋಮಾ, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯ ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50 ಅಂಕ ಪಡೆದು ಉತ್ತೀರ್ಣರಾಗಿರಬೇಕು. 
      ಗ್ರೂಪ್-ವೈ ಹುದ್ದೆಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಕನಿಷ್ಟ ಶೇ. 50 ರಷ್ಟು ಅಂಕಗಳನ್ನು ಹಾಗೂ ಇಂಗ್ಲೀಷ್‍ನಲ್ಲಿ ಕನಿಷ್ಟ ಶೇ. 50 ಪಡೆದು ಉತ್ತೀರ್ಣರಾಗಿರಬೇಕು. ಅಥವಾ ರಾಜ್ಯ/ ಕೇಂದ್ರ ಶೈಕ್ಷಣಿಕ ಮಂಡಳಿಗಳಿಂದ ಅನುಮೋದಿಸಲ್ಪಟ್ಟಿರುವ ಎರಡು ವರ್ಷದ ವೊಕೇಷನಲ್ ಕೋರ್ಸ್‍ನಲ್ಲಿ ಒಟ್ಟಾರೆ ಶೇಕಡಾ 50 ಅಂಕಗಳನ್ನು ಹಾಗೂ ಇಂಗ್ಲೀಷ್‍ನಲ್ಲಿ ಶೇಕಡಾ 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ದಿ: 01-08-1995 ರಿಂದ 30-11-1998 ರ ಅವಧಿಯಲ್ಲಿ ಜನಿಸಿರಬೇಕು.  ಆಸಕ್ತ, ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆಗಳ ಮೂಲ ಅಂಕಪಟ್ಟಿ ಹಾಗೂ ಎಲ್ಲಾ ಪ್ರಮಾಣಪತ್ರಗಳ ನಾಲ್ಕು ಸ್ವಯಂ ಧೃಢೀಕೃತ ಪ್ರತಿಗಳು ಮತ್ತು ಪಾಸ್‍ಪೋರ್ಟ್ ಅಳತೆಯ, ಬಣ್ಣದ ಇತ್ತೀಚಿನ 7 ಭಾವಚಿತ್ರಗಳೊಂದಿದೆ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್‍ಸೈಟ್  www.indianairforce.nic.in ನಿಂದ ಪಡೆಯಬಹುದಾಗಿದೆ ಅಥವಾ 7 ಏರ್‍ಮನ್ ಸೆಲೆಕ್ಷನ್ ಸೆಂಟರ್, ನಂ. 01 ಕಬ್ಬನ್ ರೋಡ್, ಬೆಂಗಳೂರು-01  (ದೂರವಾಣಿ ಸಂಖ್ಯೆ – 080-25592199, ಇ-ಮೇಲ್:  co7asc@dataone.in ಇವರನ್ನು ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ವಚ್ಛ ಭಾರತ ಅಭಿಯಾನ- ಸಂಪನ್ಮೂಲ ವ್ಯಕ್ತಿಯಾಗಿ ಕೊಪ್ಪಳ ಜಿ.ಪಂ. ಸಿಇಓ ಕೃಷ್ಣ ಉದಪುಡಿ


ಕೊಪ್ಪಳ, ಮಾ.20 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ದೆಹಲಿಯಲ್ಲಿ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ ತರಬೇತಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಿದರು.
     ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆ ಅತಿ ಹೆಚ್ಚು ಶೌಚಾಲಯ ನಿರ್ಮಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಗಮನ ಸೆಳೆದಿದೆ.  ಅಲ್ಲದೆ ಇಡೀ ರಾಜ್ಯದಲ್ಲಿಯೇ  ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳು ಜಿಲ್ಲೆಯಿಂದಲೇ ಆಯ್ಕೆಯಾಗಿದ್ದು, ಜಿಲ್ಲೆಯ ಸಾಧನೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ.  ಕೇಂದ್ರ ಸರ್ಕಾರ 2019 ರ ಅಕ್ಟೋಬರ್ 02 ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗ
 ಳನ್ನು ಆಯೋಜಿಸಿದ್ದು, ಕೊಪ್ಪಳ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಜೊತೆಗೆ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಅಭಿಯಾನದ ಯಶಸ್ವಿಗೆ ಸಹಕಾರ ತೋರಿದ್ದು, ಶೌಚಾಲಯ ನಿರ್ಮಾಣದ ಅಭಿಯಾನದಲ್ಲಿ ಜನಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ.  ಸಾರ್ವಜನಿಕರ ಮನವೊಲಿಸಿ, ಶೌಚಾಲಯ ನಿರ್ಮಿಸಲು ಪ್ರೇರೇಪಣೆ ನೀಡುವುದು ಜೊತೆಗೆ, ಶೌಚಾಲಯ ಬಳಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಯಶಸ್ವಿಯ ಹಾದಿಯನ್ನು ದೇಶದ ಇತರೆ ಭಾಗಗಳಿಗೂ ತಲುಪಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ದೆಹಲಿಯಲ್ಲಿ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳಗೆ ತರಬೇತಿಯನ್ನು ಶುಕ್ರವಾರ ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದಿಂದ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ರಾಜಸ್ಥಾನದ ಪಾಲಿ ಜಿಲ್ಲೆಯ ಜಿಲ್ಲಾಧಿಕಾರಿ ರೋಹಿತ್ ಗುಪ್ತ ಹಾಗೂ ಛತ್ತೀಸ್‍ಗಢ ರಾಜ್ಯದ ರಾಯಪುರ ಜಿಲ್ಲೆಯ ಆಯುಕ್ತ ಅಶೋಕ್ ಅಗರ್‍ವಾಲ್ ಅವರನ್ನು ಆಯ್ಕೆ ಮಾಡಿದೆ.  ಈ ತರಬೇತಿ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ 30 ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು.


ಗ್ಯಾಸ್ ಸಿಲಿಂಡರ್ : ಮಾ. 31 ರೊಳಗೆ ಆಧಾರ್, ಬ್ಯಾಂಕ್ ಖಾತೆ ಜೋಡಣೆಗೆ ಸೂಚನೆ

ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಮಾ. 31 ರೊಳಗಾಗಿ ತಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ದಾಖಲೆಗಳನ್ನು ಸಲ್ಲಿಸುವಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರು ಸೂಚನೆ ನೀಡಿದ್ದಾರೆ.
     ಕೊಪ್ಪಳ ನಗರದ ಗವಿಮಠ ರಸ್ತೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ನಿರ್ವಹಣೆ ಮಾಡಲಾಗುತ್ತಿರುವ ಗ್ಯಾಸ್ ಏಜೆನ್ಸಿಯಲ್ಲಿ ಇದುವರೆಗೂ 1570 ಗ್ರಾಹಕರು ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ದಾಖಲೆಯನ್ನು ಸಲ್ಲಿಸಿರುವುದಿಲ್ಲ.  ದಾಖಲೆಗಳನ್ನು ಸಲ್ಲಿಸಲು ಮಾ. 31 ಕೊನೆಯ ದಿನಾಂಕವಾಗಿದ್ದು, ಎಲ್ಲ ಗ್ರಾಹಕರು ಬ್ಯಾಂಕ್ ಖಾತೆ ಮತ್ತು ಆಧಾರ್ ದಾಖಲೆಗಳನ್ನು ಕೂಡಲೆ ಗ್ಯಾಸ್ ಏಜೆನ್ಸಿ ಶೋರೂಂ ಗೆ ಮತ್ತು ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಗ್ರಾಹಕರ ಐಡಿ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ನೀಡಿ ಲಿಂಕ್ ಮಾಡಿಸಿಕೊಳ್ಳಬೇಕು.  ತಪ್ಪಿದಲ್ಲಿ ಸಬ್ಸಿಡಿ ಮೊತ್ತ ಪಡೆಯಲು ಅರ್ಹರಾಗುವುದಿಲ್ಲ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಸುಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನೆಗೊಂದಿ ಉತ್ಸವಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೂಚನೆ


ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವವನ್ನು ಏ. 11 ಮತ್ತು 12 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ಈಗಾಗಲೆ ನಿರ್ಧರಿಸಲಾಗಿದ್ದು, ಉತ್ಸವ ಆಚರಣೆಗೆ ಕೂಡಲೆ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಆನೆಗೊಂದಿ ಉತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಆನೆಗೊಂದಿ ಉತ್ಸವವನ್ನು ಏ. 11 ಮತ್ತು 12 ರಂದು ವಿಜೃಂಭಣೆಯಿಂದ ಆಚರಿಸಲು ಈಗಾಗಲೆ ದಿನಾಂಕ ನಿಗದಿಪಡಿಸಲಾಗಿದ್ದು, ಉತ್ಸವ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಕೂಡಲೆ ಪ್ರಾರಂಭಿಸಬೇಕು.  ಉತ್ಸವ ಆಚರಣೆಗೆ ಎರಡು ವೇದಿಕೆಗಳನ್ನು ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಆನೆಗೊಂದಿ ಗ್ರಾಮದ ಹೊರವಲಯದಲ್ಲಿ ಒಂದು ಮುಖ್ಯ ವೇದಿಕೆ ಹಾಗೂ ಗ್ರಾಮದ ಶಾಲಾ ಆವರಣದಲ್ಲಿ ಇನ್ನೊಂದು ವೇದಿಕೆಯನ್ನು ನಿರ್ಮಿಸಬೇಕು.  ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೇ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದ್ದು, ಕನಕಗಿರಿ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರನ್ನು ಹೊರತುಪಡಿಸಿ, ಇತರೆ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬೇಕು.  ವೇದಿಕೆ ನಿರ್ಮಾಣ, ಗ್ರಾಮದ ಸ್ವಚ್ಛತೆ, ಮಳಿಗೆಗಳ ನಿರ್ಮಾಣ, ಮಾಧ್ಯಮ ಕೇಂದ್ರ ಸ್ಥಾಪನೆ ಸೇರಿದಂತೆ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಕೂಡಲೆ ಟೆಂಡರ್ ಕರೆಯಲು ಕ್ರಮ ಜರುಗಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಏ. 11 ರಂದು ಆನೆಗೊಂದಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಕಾರ್ಯಕ್ರಮಗಳು ಜರುಗುವುದರಿಂದ, ಅಂದು ಬೆಳಿಗ್ಗೆ ಮೆರವಣಿಗೆ ಕಾರ್ಯಕ್ರಮ ಹಾಗೂ ಸಂಜೆ ವೇದಿಕೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.  ಮೆರವಣಿಗೆಗೆ ವಿವಿಧ ಕಲಾ ತಂಡಗಳ ಆಯ್ಕೆಗೆ ಕೂಡಲೆ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.  ಏ. 12 ರಂದು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು.  ಉತ್ಸವ ದಿನಗಳಲ್ಲಿ ಎಲ್ಲ ತಾಲೂಕುಗಳಿಂದಲೂ ನಿರಂತರವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು.  ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಉತ್ಸವದ ಯಶಸ್ವಿಗೆ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅಧಿಕಾರಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜಾ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಏ.07 ರಿಂದ ಜಿಲ್ಲಾದ್ಯಂತ ‘ಮಿಷನ್ ಇಂದ್ರಧನುಷ್’ ವಿಶೇಷ ಲಸಿಕಾ ಕಾರ್ಯಕ್ರಮ


ಕೊಪ್ಪಳ, ಮಾ.18 (ಕರ್ನಾಟಕ ವಾರ್ತೆ) : ದೇಶದ ಮಕ್ಕಳನ್ನು ಕಾಡುವ 7 ಪ್ರಾಣಘಾತುಕ  ರೋಗಗಳ ನಿರ್ಮೂಲನೆಗೆ 02 ವರ್ಷದೊಳಗಿನ ಮಕ್ಕಳಿಗೆ ಏ. 7 ರಿಂದ ‘ಮಿಷನ್ ಇಂದ್ರಧನುಷ್’ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಿದ್ಧತೆಗಳನ್ನು ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಗಂಟಲು ಮಾರಿ, ಪೋಲಿಯೋ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ರೋಗಗಳನ್ನು ತಡೆಗಟ್ಟಲು ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಏ. 07 ರಿಂದ ಒಂದು ವಾರ ಕಾಲ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಈ ವಿಶೇಷ ಲಸಿಕಾ ಕಾರ್ಯಕ್ರಮದಡಿ 02 ವರ್ಷದೊಳಗಿನ ಮಕ್ಕಳಿಗೆ ಮಾರಕ ರೋಗಗಳನ್ನು ತಡೆಗಟ್ಟಬಹುದಾದ ಲಸಿಕೆಯನ್ನು ಹಾಕಬೇಕು.  ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಜಿಲ್ಲೆಯ ಯಾವುದೇ ಮಗು ಈ ವಿಶೇಷ ಲಸಿಕೆ ಕಾರ್ಯಕ್ರಮದಿಂದ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಮಾತನಾಡಿ, ಭಾರತದಲ್ಲಿ ಪ್ರತಿವರ್ಷ ಜನಿಸುವ  2.7 ಕೋಟಿ ಮಕ್ಕಳಲ್ಲಿ, ವಿವಿಧ ಖಾಯಿಲೆಗಳಿಂದಾಗಿ ಪ್ರತಿ ವರ್ಷ 18. 3 ಲಕ್ಷ ಮಕ್ಕಳು ತಮ್ಮ 5 ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮುನ್ನವೇ ಸಾವನ್ನಪ್ಪುತ್ತವೆ. ವಿವಿಧ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಭಾರತದಲ್ಲಿ ಹೆಚ್ಚು. ಈ ಪ್ರಮಾಣವನ್ನು ಕಡಿಮೆಗೊಳಿಸಲು ಭಾರತ ಸರಕಾರ ಮಿಷನ್ ಇಂದ್ರ ಧನುಷ್ ಎಂಬ ಹೆಸರಿನೊಂದಿಗೆ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  2014 ರ ಡಿಸೆಂಬರ್ 25 ರಂದು ಈ ಯೋಜನೆಯನ್ನು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರಂಭಿಸಿದೆ. ಆದರೆ ಇಲ್ಲಿಯವರೆಗೂ ಕೇವಲ ಶೇಕಡಾ 65  ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. 2020 ರೊಳಗಾಗಿ ಈ ಪ್ರಮಾಣವನ್ನು ಶೇಕಡಾ 90ಕ್ಕೆ ಹೆಚ್ಚಿಸುವುದು ಮಿಷನ್ ಇಂದ್ರಧನುಷ್‍ನ ಗುರಿಯಾಗಿದೆ. ಗಂಟಲು ಮಾರಿ, ಪೋಲಿಯೋ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ರೋಗಗಳು ಹೆಚ್ಚಾಗಿ 5 ವರ್ಷದ ಕೆಳಗಿರುವ ಮಕ್ಕಳನ್ನು ಬಾಧಿಸುತ್ತವೆ.  ಈ ನಿಟ್ಟಿನಲ್ಲಿ ಎರಡು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ರೋಗಗಳ ತಡೆ ಲಸಿಕೆಯನ್ನು ಹಾಕಲಾಗುತ್ತಿದೆ.  ಈ ಯೋಜನೆಯನ್ನು ದೇಶದಾದ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈಗಾಗಲೇ ಡಬ್ಲ್ಯೂಹೆಚ್‍ಒ, ಯುನಿಸೆಫ್ ಹಾಗೂ ರೋಟರಿ ಸಂಸ್ಥೆಗಳು ಸಹಾಯಹಸ್ತ ನೀಡಿವೆ.  ಈ 7 ರೋಗಗಳಿಗೆ ಒಂದೊಂದು ಬಣ್ಣ ನೀಡಲಾಗಿದ್ದು, ಆ 7 ಬಣ್ಣಗಳು ಕೂಡಿದಾಗ ಮೂಡುವ ಕಾಮನ ಬಿಲ್ಲಿನ ಹೆಸರನ್ನು ಈ ಯೋಜನೆಗೆ ಹೆಸರಿಸಲಾಗಿದೆ. ಅಂತೆಯೇ ಏ.7 ರಿಂದ ಜಿಲ್ಲಾದ್ಯಂತ ಕಾರ್ಯಾರಂಭ ಮಾಡಲಿರುವ ಈ ಯೋಜನೆಯು ಏ.14 ರವರೆಗೆ 7 ದಿನಗಳ ಕಾಲ ಹಾಗೂ ಜುಲೈ ತಿಂಗಳವರೆಗೆ ಒಟ್ಟು ನಾಲ್ಕು ತಿಂಗಳ ಕಾಲ ಹಮ್ಮಿಕೊಂಡು ಎಲ್ಲ ಮಕ್ಕಳನ್ನು ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ ಎಂದರು.
       ಸಭೆಯಲ್ಲಿ ರೋಟರಿ ಸಂಸ್ಥೆಯ ಡಾ. ಕೆ.ಜಿ. ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಸೇರಿದಂತೆ ಡಾ. ಶ್ರೀಧರ್, ಡಾ. ಮೂಲಿಮನಿ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

ಯುಗಾದಿ : ಹುಲಿಗಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು

ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ):  ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮಾ. 21 ರಂದು ಮನ್ಮಥನಾಮ ಸಂವತ್ಸರದ ಪ್ರಾರಂಭದ ದಿನವಾದ ಯುಗಾದಿಯ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
     ಅಂದು ಬೆಳಿಗ್ಗೆ ಶ್ರೀ ದೇವಿಗೆ ಬಂಗಾರದ ಮುಕುಟ ಅಲಂಕಾರದೊಂದಿಗೆ  ವಿಶೇಷ ಪೂಜೆ, ನೈವೇದ್ಯ ಪ್ರಸಾದ. ಪಂಚಾಮೃತ ಅಭಿಷೇಕ ಮಾಡಲಾಗುವುದು. ಸಾಯಂಕಾಲ 6-00 ಗಂಟೆಗೆ ಶ್ರೀ ಮನ್ಮಥನಾಮ ಸಂವತ್ಸರದ ನೂತನ ಪಂಚಾಂಗ ಪಠಣ. ರಾತ್ರಿ 7.00ಕ್ಕೆ ಶ್ರೀ.ನಾಗರಾಜ ಪತ್ತಾರ್, ಆಕಾಶವಾಣಿ ಕಲಾವಿದರು ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗುವುದು. ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಗುವುದು.  ಸಕಲ ಭಕ್ತಾದಿಗಳು, ಹುಲಿಗಿ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 26 ರಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ : ಅರ್ಜಿ ಆಹ್ವಾನ

ಕೊಪ್ಪಳ, ಮಾ.20 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಕೊಪ್ಪಳದ ಶಾದಿಮಹಲ್ ನಲ್ಲಿ ಮಾ. 26 ರಿಂದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಏರ್ಪಡಿಸಲಾಗಿದ್ದು, ಆಸಕ್ತ ಮಹಿಳಾ ಉದ್ದಿಮೆದಾರರು ಹಾಗೂ ಸ್ತ್ರೀ ಶಕ್ತಿ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಮಹಿಳಾ ಉದ್ದಿಮೆದಾರರು ಹಾಗೂ ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಠಿಯಿಂದ ಕೊಪ್ಪಳದ ಶಾದಿ ಮಹಲ್‍ನಲ್ಲಿ ಏರ್ಪಡಿಸಲಾಗಿರುವ ಜಿಲ್ಲಾ ಮಾರಾಟ ಮೇಳವು ಮಾ.26 ರಿಂದ 28 ರವರೆಗೆ ನಡೆಯಲಿದೆ. ಆಸಕ್ತರು ಮಾ.25 ರೊಳಗಾಗಿ ಉಪನಿರ್ದೇಶಕರು, ಮಹಿಳಾ ಮತ್ತ ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳದಲ್ಲಿ  ಹೆಸರು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸುಧಾ ಎಂ, ಚಿದ್ರಿ- 9449640996 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಮಾ. 24 ರಂದು ಪೂರ್ವಭಾವಿ ಸಭೆ

ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ಮಾ. 30 ರಿಂದ ಏ. 13 ರವರೆಗೆ ಜರುಗಲಿದ್ದು, ಈ ಕುರಿತು ಸಿದ್ಧತೆಗಳನ್ನು ಕೈಗೊಳ್ಳಲು ಪೂರ್ವಭಾವಿ ಸಭೆ ಮಾ. 24 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ವಹಿಸುವರು.  ಸಭೆಗೆ ಜಿಲ್ಲಾ ಜಾಗೃತ ದಳ ತಂಡದವರು, ವೈದ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಪರೀಕ್ಷೆಯ ತಾಲೂಕು ನೋಡಲ್ ಅಧಿಕಾರಿಗಳು ಹಾಜರಾಗಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

ಪಿಯುಸಿ ಭೌತಶಾಸ್ತ್ರ, ಶಿಕ್ಷಣ ಪರೀಕ್ಷೆ : 2186 ವಿದ್ಯಾರ್ಥಿಗಳು ಹಾಜರು

ಕೊಪ್ಪಳ ಮಾ. 19 (ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶುಕ್ರವಾರದಂದು ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಭೌತಶಾಸ್ತ್ರ ಮತ್ತು ಶಿಕ್ಷಣ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ 2186 ವಿದ್ಯಾರ್ಥಿಗಳು ಹಾಜರಾಗಿದ್ದು,  127 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಪಿಯುಸಿ ಪರೀಕ್ಷೆಯ ಭೌತಶಾಸ್ತ್ರ ವಿಷಯ ಪರೀಕ್ಷೆ ತೆಗೆದುಕೊಂಡಿರುವ 1014 ವಿದ್ಯಾರ್ಥಿಗಳ ಪೈಕಿ 957 ವಿದ್ಯಾರ್ಥಿಗಳು ಹಾಜರಾಗಿದ್ದು, 57 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 443 ವಿದ್ಯಾರ್ಥಿಗಳ ಪೈಕಿ 423 ವಿದ್ಯಾರ್ಥಿಗಳು ಹಾಜರಾಗಿದ್ದು, 20 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 442 ವಿದ್ಯಾರ್ಥಿಗಳ ಪೈಕಿ 423 ವಿದ್ಯಾರ್ಥಿಗಳು ಹಾಜರಿದ್ದು, 19 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 37 ವಿದ್ಯಾರ್ಥಿಗಳ ಪೈಕಿ 30 ಹಾಜರಿದ್ದು, 07 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 92 ವಿದ್ಯಾರ್ಥಿಗಳ ಪೈಕಿ 81 ವಿದ್ಯಾರ್ಥಿಗಳು ಹಾಜರಾಗಿದ್ದು, 11 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
     ಶಿಕ್ಷಣ ವಿಷಯ ಪರೀಕ್ಷೆ ತೆಗೆದುಕೊಂಡಿರುವ 1299 ವಿದ್ಯಾರ್ಥಿಗಳ ಪೈಕಿ 1229 ವಿದ್ಯಾರ್ಥಿಗಳು ಹಾಜರಾಗಿದ್ದು, 70 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ 501 ವಿದ್ಯಾರ್ಥಿಗಳ ಪೈಕಿ 479 ವಿದ್ಯಾರ್ಥಿಗಳು ಹಾಜರಾಗಿದ್ದು, 22 ವಿದ್ಯಾರ್ಥಿಗಳು ಗೈರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ 115 ವಿದ್ಯಾರ್ಥಿಗಳ ಪೈಕಿ 111 ವಿದ್ಯಾರ್ಥಿಗಳು ಹಾಜರಿದ್ದು, 04 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ 381 ವಿದ್ಯಾರ್ಥಿಗಳ ಪೈಕಿ 353 ಹಾಜರಿದ್ದು, 28 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ 302 ವಿದ್ಯಾರ್ಥಿಗಳ ಪೈಕಿ 286 ವಿದ್ಯಾರ್ಥಿಗಳು ಹಾಜರಾಗಿದ್ದು, 16 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು  ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.