Saturday, 28 February 2015

ಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥ


ಕೊಪ್ಪಳ,ಫೆ.28 (ಕರ್ನಾಟಕ ವಾರ್ತೆ): ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ  ಮೇಲೆ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಆತಂಕ ವ್ಯಕ್ತಪಡಿಸಿದರು.
      ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪೋಕ್ಸೋ ಕಾಯ್ದೆ ಕುರಿತ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
       ಬದುಕಿನ ಬಗ್ಗೆ ತಿಳುವಳಿಕೆ ಮೂಡುವ ಮುನ್ನವೇ ಸಣ್ಣ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಸುತ್ತುವವರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.    ಲೈಂಗಿಕ ದೌರ್ಜನ್ಯವೆಸಗುವ ಅಪರಾಧಕ್ಕೆ ಇಂದು ಕಠಿಣ ಕಾನೂನುಗಳು ಜಾರಿಯಾಗಿವೆ.  ಆದರೆ ಇಂತಹ ಕಠಿಣ ಕಾನೂನಿನ ಕುರಿತು  ಸಮಾಜದಲ್ಲಿ ಮಾಹಿತಿ ಇಲ್ಲದಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಇನ್ನು ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಸಮಾಜವೇ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಶಾಲೆಗೆ ಹೋದ ಮಗು ವಾಪಾಸ್ ಮನೆಗೆ ಬರುವವರೆಗೂ ಪಾಲಕರು ಆತಂಕದಲ್ಲಿಯೇ ಕಾಲ ಕಳೆಯುವ ಸ್ಥಿತಿ ಇದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೋಕ್ಸೋ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ-2012) ಕಾಯಿದೆ ಪ್ರಬಲ ಅಸ್ತ್ರವಾಗಿದೆ.  ಇಂತಹ ಕಾಯ್ದೆ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಹೇಳಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಮಾತನಾಡಿ, ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಎಲ್ಲ ಶಾಲೆಯವರು, ತಮ್ಮ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಾಹನ ಚಾಲಕರು, ವಿಳಾಸ, ಮೊಬೈಲ್ ಸಂಖ್ಯೆ, ಮಕ್ಕಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.  ಅಲ್ಲದೆ ಪ್ರತಿ ಶಾಲೆಯಲ್ಲೂ ಐವರು ಸದಸ್ಯರ ಮಕ್ಕಳ ಸುರಕ್ಷಾ ಸಮಿತಿ ರಚಿಸಲು ಆದೇಶ ನೀಡಿದೆ.  ಜಿಲ್ಲೆಯಲ್ಲಿರುವ 352 ಖಾಸಗಿ ಶಾಲೆಗಳ ಪೈಕಿ 80 ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮಾರ್ಚ್ ವೇಳೆಗೆ ಇನ್ನೂ 100 ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
     ಕೊಪ್ಪಳ ಡಿವೈಎಸ್‍ಪಿ ರಾಜೀವ್ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ.  ಮಕ್ಕಳು, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೆಲವೊಮ್ಮೆ ಬೆಳಕಿಗೇ ಬರುವುದಿಲ್ಲ.  ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಇದಕ್ಕೆ ಸಮಾಜ, ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ.  ತಪ್ಪಿತಸ್ಥರನ್ನು ಕಾನೂನಿನ ವ್ಯಾಪ್ತಿಗೆ ತರದಿದ್ದಲ್ಲಿ, ಅಪರಾಧ ಪ್ರವೃತ್ತಿ ಮುಂದುವರೆಸಲು ಸಮಾಜವೇ ಉತ್ತೇಜನ ನೀಡಿದಂತಾಗುತ್ತದೆ ಎಂದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸಮಾಜದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ. ಶುಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕಾರ್ಯಾಗಾರದ ಅಂಗವಾಗಿ ಮಕ್ಕಳ ವಿಶೇಷ ಘಟಕದ ಜಿಲ್ಲಾ ಪೋಲೀಸ್ ತರಬೇತುದಾರ ಸೋಮಶೇಖರ-ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ -2012 ಬಗ್ಗೆ ಹಾಗೂ ವಕೀಲ ಹನುಮಂತರಾವ್-ಪೋಕ್ಸೋ ಕಾಯ್ದೆ-2012 ಅಡಿ ಕಾನೂನಿನೊಂದಿಗೆ ಸಂಪರ್ಕ ಹಾಗೂ ಸಂಘರ್ಷಕ್ಕೊಳಗಾದ ಮಕ್ಕಳ ಪ್ರಕರಣಗಳ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ-ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ ಕುರಿತು ಹಾಗೂ ಯುನಿಸೆಫ್ ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಕ್ಕಳ ಸಂರಕ್ಷಣಾ ಯೋಜನೆಯ ಯಶೋಗಾಥೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
Post a Comment