Saturday, 28 February 2015

ಬೇಸಿಗೆ ಹತ್ತಿ ಬೆಳೆ ಉತ್ಪಾದನೆ ಮತ್ತು ಸಂರಕ್ಷಣಾ ಕ್ರಮಗಳು : ರೈತರಿಗೆ ಸಲಹೆ

ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಕ್ಷೇತ್ರದಲ್ಲಿ ಈಗ ಬಿ.ಟಿ ಹತ್ತಿ ಬಿತ್ತನೆ ಪ್ರಾರಂಭಗೊಂಡಿದ್ದು ರೈತರು ಸೂಕ್ತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಉಪಯುಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
    ಹತ್ತಿ ಬೆಳೆ ಬೆಳೆಯಲು ನೀರು ಬಸಿದು ಹೋಗುವ ಕೆಂಪು ಮಣ್ಣು ಮತ್ತು ಆಳವಾದ ಕಪ್ಪು ಮಣ್ಣು ಸೂಕ್ತವಾಗಿದ್ದು,  ಹತ್ತಿ ಬೀಜವು ಮಾರುಕಟ್ಟೆಯಲ್ಲಿ 570 ಗ್ರಾಂ ಪ್ಯಾಕೇಟ್‍ನಲ್ಲಿ ದೊರೆಯುತ್ತದೆ. ಇದರಲ್ಲಿ ಎರಡು ಪ್ಯಾಕೇಟ್‍ಗಳಿದ್ದು 450 ಗ್ರಾಂ ಬೀಜ ಹಾಗೂ 120 ಗ್ರಾಂ ಅದೇ ತಳಿಯ ಬಿ.ಟಿ ಅಂಶವಿಲ್ಲದ ಬೀಜ ಇರುತ್ತದೆ. ಬಿ.ಟಿ ಅಂಶವಿಲ್ಲದ ಬೀಜವನ್ನು ಹೊಲದ ಸುತ್ತಲೂ ಬಿತ್ತನೆ ಮಾಡುವುದು ಕಡ್ಡಾಯ. ಭಾರತ ಸರ್ಕಾರದ ವಂಶವಾಹಿನಿ ತಂತ್ರಜ್ಞಾನದ ಅನುಮೋದನೆ ಸಮಿತಿಯು ಶೇ. 20 ರಷ್ಟು ಪ್ರದೇಶದಲ್ಲಿ ಬಿ.ಟಿ ರಹಿತ ಹತ್ತಿ ಬಿತ್ತನೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಬೇಸಾಯ ಕ್ರಮದಿಂದ ಕಾಯಿಕೊರಕ ಕೀಟವು ನಿರೋಧಕತೆ ಬೆಳಸಿಕೊಳ್ಳುವುದನ್ನು ತಪ್ಪಿಸಬಹುದು. 
ಬೀಜೋಪಚಾರ ಮತ್ತು ಬಿತ್ತನೆ: ಬಿತ್ತನೆ ಬೀಜವನ್ನು ಅಜಟೋಬ್ಯಾಕ್ಟರ್  ಅಥವಾ ಅಜೋಸ್ವೈರಿಲಂ (200 ಗ್ರಾಂ/ಎಕರೆಗೆ) ಹಾಗೂ ರಂಜಕ ಕರಗಿಸುವ ಅಣುಜೀವಿ (200ಗ್ರಾಂ/ಎಕರೆಗೆ) ಗೊಬ್ಬರದೊಡನೆ ಉಪಚರಿಸಿ ಬಿತ್ತನೆ ಮಾಡಬೇಕು. ಈ ಕ್ರಮದಿಂದ ಸಾರಜನಕ ಹಾಗೂ ರಂಜಕ ಸಹಜವಾಗಿ ದೊರಕುವುದರಿಂದ ರಸಾಯನಿಕ ಗೊಬ್ಬರದ ಪ್ರಮಾಣವನ್ನು ಕಡಿಮೆಗೊಳಿಸಬಹುದು.  ಎಕರೆಗೆ 4  ರಿಂದ 6 ಟನ್‍ನಷ್ಟು ಕೊಟ್ಟಿಗೆ  ಗೊಬ್ಬರವನ್ನು ಬಿತ್ತುವ ಎರಡು  ವಾರ ಮೊದಲು ಭೂಮಿಗೆ ಸೇರಿಸಬೇಕು.  ಬಿ.ಟಿ. ಹೈಬ್ರಿಡ್ ಹತ್ತಿ ಬೆಳೆಗೆ ಬೇಸಿಗೆ ಅಥವಾ ನೀರಾವರಿ ಹಂಗಾಮಿಗೆ ಫೆಬ್ರವರಿ ಮತ್ತು ಮಾರ್ಚ್ ಸೂಕ್ತ ಕಾಲವಾಗಿದೆ.  ರಾಸಾಯನಿಕ ಗೊಬ್ಬರ ಬಳಸಬೇಕಿದ್ದಲ್ಲಿ, 60:30:30 ಕೆ.ಜಿ ಪ್ರತಿ ಎಕರೆಗೆ ಸಾರಜನಕ, ರಂಜಕ ಹಾಗೂ ಪೋಟ್ಯಾಷ್, ಬಿತ್ತನೆ ಸಮಯದಲ್ಲಿ ಶೇ.25 ರಷ್ಟು ಸಾರಜನಕ ಮತ್ತು ಪೋಟ್ಯಾಷ ಹಾಗೂ ಪೂರ್ತಿ ಪ್ರಮಾಣದ ರಂಜಕ ಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇ. 50 ರ ಸಾರಜನಕ ಮತ್ತು ಪೋಟ್ಯಾಷನ್ನು ಬಿತ್ತಿದ 30 ದಿನಗಳ ನಂತರ ಹಾಗೂ ಇನ್ನುಳಿದ ಶೇ. 25 ರ ಸಾರಜನಕ ಮತ್ತು ಪೋಟ್ಯಾಷನ್ನು ಬಿತ್ತಿದ 60 ದಿನಗಳ ನಂತರ ಗೊಬ್ಬರಗಳನ್ನು ಹಾಕಬೇಕು.  ಬಿತ್ತನೆಯಾದ 80 ದಿನಗಳ ನಂತರ 20 ದಿನಗಳಿಗೊಮ್ಮೆ ಎರಡುಬಾರಿ ಶೇ. 2 ಡಿಎಪಿ ಅಥವಾ ಯೂರಿಯಾ ಅಥವಾ ಶೇ. 1 ಪೊಟ್ಯಾಷಿಮ್ ನೈಟ್ರೈಟ್‍ನ್ನು ಸಿಂಪರಣೆ ಮಾಡಬೇಕು.  ಹತ್ತಿ ಎಲೆ ಕೆಂಪಾಗುವಿಕೆ ತಡೆಗಟ್ಟಲು 10 ಕೆ.ಜಿ ಪ್ರತಿ ಎಕರೆಗೆ ಕೊಟ್ಟಿಗೆ ಗೊಬ್ಬರದೊಂದಿಗೆ ಅಥವಾ ಬಿತ್ತುವ ಸಮಯದಲ್ಲಿ ನಿಡುವುದು ಮತ್ತು ಶೇ. 1 ಮೆಗ್ನಿಷಿಯಂ ಸಲ್ಫೇಟ್‍ನ್ನು ಮತ್ತು 19:19:19 ಕೂಡಿಸಿ ಬಿತ್ತಿದ 55-60,  80-85 ಮತ್ತು 105-110 ದಿವಸದ ನಂತರ ಸಿಂಪಡಿಸಬೇಕು, ಅಥವಾ ಶೇ. 2 ಡಿಎಪಿ ಅಥವಾ ಯೂರಿಯಾನ್ನು ಸಿಂಡಿಸಬಹದು.  ಹತ್ತಿ ಬೆಳೆಯಲ್ಲಿ 45 ಹಾಗೂ 65 ದಿಗಳಲ್ಲಿ ಮೊಗ್ಗು ಹಾಗೂ ಹೂ ಉದುರುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ ಪ್ಲಾನೋಫಿಕ್ಸ್‍ನ್ನು ಸೇರಿಸಿ ಸಿಂಪಡಿಸಬೇಕು.
ಅಂತರ ಬೇಸಾಯ ಹಾಗೂ ಕಳೆನಿಯಂತ್ರಣ : ಬಿತ್ತಿದ 30 ದಿನಗಳ ನಂತರ 3-4 ಬಾರಿ 15 ದಿನಗಳ ಅಂತರದಲ್ಲಿ ಆಳವಾಗಿ ಎಡೆ ಹೊಡೆಯುವುದರಿಂದ ಕಳೆಗಳನ್ನು ನಿಯಂತ್ರಿಸಬಹುದಲ್ಲದೇ ಭೂಮಿಯ ತೇವಾಶಂವನ್ನು  ಕಾಪಾಡಿಕೊಳ್ಳಬಹುದು. ಬಿತ್ತಿದ 60 ದಿನಗಳವರೆಗೆ ಕಳೆಗಳನ್ನು ಪೂರ್ತಿಯಾಗಿ ಹತೋಟಿಯಲ್ಲಿಡುವುದು ಅವಶ್ಯ. ಬಿತಿÀ್ತದ ದಿನ ಅಥವಾ  ಮರುದಿನ ಪ್ರತಿ ಹೆಕ್ಟೇರಿಗೆ 1250 ಗ್ರಾಂ ಡೈಯುರಾನ್ (ಶೇ. 80) ಅಥವಾ 5 ಲೀ. ಪೆಂಡಿಮಿಥಾÀಲಿನ್ (ಶೇ. 30) ಕಳೆನಾಶಕವನ್ನು 1000 ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಸಿಂಪರಣೆಯ ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶ ಇರಬೇಕು. ಸಿಂಪರಣೆಯ ನಂತರ ಒಂದು ಸಲ ಎಡೆಕುಂಟೆ ಮತ್ತು ಒಂದು ಸಲ ಕೈಗಳೆಯನ್ನು ಬಿತ್ತಿದ 60 ದಿವಸಗಳ ಒಳಗಾಗಿ ಮಾಡಿದರೆ ಕಳೆಗಳನ್ನು ಪೂರ್ತಿಯಾಗಿ ಹತೋಟಿಯಲ್ಲಿಡಬಹುದು.  ಮಣ್ಣು ಹಾಗೂ ಹವಮಾನಕ್ಕನುಗುಣವಾಗಿ ಮರಳು ಮಿಶ್ರಿತ ಮಣ್ಣಿನಲ್ಲಿ 10 ರಿಂದ 15 ದಿನಗಳಿಗೊಮ್ಮೆ ಮತ್ತು ಕಪ್ಪು ಮಣ್ಣಿನಲ್ಲಿ 20 ರಿಂದ 30 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಅಥವಾ ಬಿತ್ತನೆ ಮಾಡುವಾಗ, ಹೂ ಬಿಡುವುದಕ್ಕೆ ಮೊದಲು 2 ಬಾರಿ ಮತ್ತು ಹೂ ಬಿಟ್ಟ ನಂತರ ನಾಲ್ಕು ಬಾರಿ ತಪ್ಪದೇ ನೀರು ಹಾಯಿಸಬೇಕು. ಆಳವಾದ ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ‘ಸಾಲು ಬಿಟ್ಟು ಸಾಲು’ ಸರದಿಯಾಗಿ ನೀರು ಹಾಯಿಸುವುದು ಸೂಕ್ತ. ಕಪ್ಪು ಮಣ್ಣಿನ ಪ್ರದೇಶದಲ್ಲಿ ನೀರು ಇಂಗದೆ ಇದ್ದಾಗ ಬಿಸಿಗಾಲುವೆಗಳನ್ನು ತೆಗೆಯುವುದು ಅವಶ್ಯ. ಹತ್ತಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಹೆಚ್ಚು ನೀರು ಕೊಡುವುದರಿಂದ ಗಿಡಗಳ ಬೆಳವಣಿಗೆ ಹೆಚ್ಚಾಗಿ ಕೀಟನಾಶಕಗಳ ಸಮರ್ಪಕ ಬಳಕೆ ಸಾಧ್ಯವಾಗದೇ ಕೀಟದ ಹಾವಳಿ ಹೆಚ್ಚಾಗುವುದು. ಆದ್ದರಿಂದ ಸಮರ್ಪಕ ನೀರು ನಿರ್ವಹಣೆ ಅತೀ ಮುಖ್ಯವಾಗಿದೆ.
ಸಸ್ಯ ಸಂರಕ್ಷಣಾ ಕ್ರಮಗಳು : ಬಿತ್ತನೆಯನ್ನು ಮೇ 15 ರೊಳಗೆ ಮಾಡುವುದರಿಂದ ಕೀಟಗಳ ಬಾಧೆಯನ್ನು ಕಡಿಮೆ ಮಾಡಬಹುದು.  ಬೀಜವನ್ನು ಶಿಲೀಂದ್ರ ನಾಶಕಗಳಿಂದ ಅಥವಾ ಕೀಟನಾಶಕಗಳಿಂದ (ಪ್ರತಿ ಕೆಜಿ ಬೀಜಕ್ಕೆ ಕಾರ್ಬೆಂಡೈಜಿಂ 2 ಗ್ರಾಂ ಅಥವಾ ಟ್ರೈಕೋಡಮ್ 4 ಗ್ರಾಂ) ಉಪಚರಿಸಬೇಕು. ಮಾರುಕಟ್ಟೆಯಲ್ಲಿ  ಬೀಜೋಪಚಾರ ಮಾಡಿರುವ ಬೀಜಗಳು ಸಹ ಲಭ್ಯವಿರುತ್ತದೆ.
•    ಅಲ್ಪಾವಧಿ ಕಾಳು ಬೆಳೆಗಳಾದ ಹೆಸರು, ಉದ್ದು, ಅಲಸಂಧಿ, ಬೆಳೆಗಳೆನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಅದಾಯ, ಇಳುವರಿ ಮತ್ತು ಭೂಮಿಯ ಫಲವತ್ತತೆಯಲ್ಲಿ ಸ್ಥಿರತೆ ಹಾಗೂ ಕೀಟಬಾಧೆ ಯನ್ನು ಕಾಪಾಡಿಕೊಳ್ಳಬಹುದು.
•    ಒಂದು ಸಾಲು ಬೆಂಡೆಯನ್ನು ಪ್ರತೀ 20 ಸಾಲು ಹತ್ತಿಯ ನಂತರ ಹಾಗು ಬದುವಿನಗುಂಟ ಬಿತ್ತಬೇಕು. ಬೆಂಡೆಯ ಕಾಂಡದ ಮೇಲೆ ಮುಂಜಾನೆ ಹೊತ್ತಿನಲ್ಲಿ ಕಂಡುಬರುವ ಮೂತಿ ಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಬೆಂಡಿಕಾಯಿಗಳನ್ನು ವಾರಕ್ಕೊಮ್ಮೆ ಹರಿಯುವುದು ಕಾಯಿಕೊರಕಗಳ ನಿಯಂತ್ರಣಕ್ಕೆ ಅವಶ್ಯ.
•    ಬಿ. ಟಿ ಹತ್ತಿಯ ಬೆಳೆಯ ಬದುವಿನಗುಂಟ ಗೋವಿನಜೋಳ ಅಥವಾ ಅಲಸಂದೆ ಬೆಳೆಯುವುದರಿಂದ ಪರಭಕ್ಷಕ ಕೀಟಗಳ ಸಂಖ್ಯೆಯನ್ನು ವೃದ್ದಿಸುವುದರೊಂದಿಗೆ ಸಂರಕ್ಷಣೆ ಮಾಡಬಹುದು.
•    25 ದಿವಸ ಚೆಂಡು ಹೂವಿನ ಸಸಿಗಳನ್ನು ಅಥವಾ ಬೇಗ ಮಾಗುವ ತೊಗರಿಯನ್ನು ಹೊಲದ ಸುತ್ತಲೂ ಹತ್ತಿ ಹೂ ಬಿಡುವ ಸಮಯದಲ್ಲಿ ನೆಡಬೇಕು/ಬಿತ್ತಬೇಕು. ಇವುಗಳ ಮೇಲೆ ಇರುವ ತತ್ತಿಗಳನು ನಾಶಮಾಡಲು ತಪ್ಪದೇ ಕೀಟನಾಶಕಗಳನ್ನು ಬಳಸಬೇಕು.
•    ಮೊದಲ ಹಂತದಲ್ಲಿ ಬರುವ ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಬೀಜೋಪಚಾರ ಮಾಡಿದ ಬಿ.ಟಿ ಹತ್ತಿಯ ಬೀಜಗಳನ್ನು ಬಳಸುವುದರಿಂದ 30-40 ದಿನಗಳವರೆಗೆ ಯಾವುದೇ ಕೀಟಬಾದೆ ಕಂಡುಬರುವುದಿಲ್ಲ. ಒಂದು ವೇಳೆ ರಸ ಹೀರುವ ಕೀಟಗಳ ಸಂಖ್ಯೆ ಹೆಚ್ಚಾದರೆ ಬೇವಿನ ಬೀಜದ ಕಷಾಯ 5 % ಅಥವಾ ಕೀಟನಾಶಕಗಳಾದ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್ ಎಲ್ ಅಥವಾ 0.1 ಗ್ರಾ ಪಿಪ್ರೋನಿಲ್ 80 ಡÀಬ್ಲ್ಯೂ ಜಿ ಅಥವಾ 1.5 ಮಿ ಲೀ ಆಕ್ಷಿಡೆಮೆಟಾನ್ ಮೀಥೈಲ್ 25 ಇ.ಸಿ ಅಥವಾ 0.2 ಗ್ರಾಂ ಥೈಯಮಿಥಾಕ್ಸಾಮ್ 25 ಡಬ್ಲ್ಯೂ ಪಿ ಅಥವಾ 0.2 ಗ್ರಾಂ ಅಸಿಟಾಮಿಪ್ರಿಡ್ 20 ಎಸ್ ಪಿ ಪ್ರತೀ ಲೀ ನೀರಿಗೆ ಬೆರೆಸಿ ಹೆಕ್ಟೇರಿಗೆ 400 -500 ದ್ರಾವಣಾ ಸಿಂಪಡಿಸಬೇಕು.
•    ಬೆಳೆಯ ಮೊದಲನೆ ಹಂತದಲ್ಲಿ (60 ದಿನಗಳವರೆಗೆ) ಕೀಟನಾಶಕಗಳನ್ನು ಸಿಂಪಡಿಸಲು ಕೈ ಚಾಲಿತ ಪಂಪುಗಳನ್ನು ನಂತರ ಪವರ್ ಸ್ಪ್ರೆಯರ್‍ಗಳನ್ನು ಬಳಸುವುದು ಸೂಕ್ತ. ಬೇರೆ ಬೇರೆ ಕೀಟನಾಶಕಗಳನ್ನು ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಪರಣೆ ಮಾಡಬಾರದು. ಇದರಿಂದ ಕೀಟಗಳು ಕೀಟನಾಶಕ ನಿರೋದಕ ಶಕ್ತಿಯನ್ನು ಬೆಳೆಸಿಕೊಳ್ಳತ್ತವೆ.
•    ಮಿರಿಡ್ ತಿಗಣೆಗಳು ಮತ್ತು ಮಿಡ್ಜ್ ನೊಣಗಳು ಕಂಡು ಬಂದಾಗ 1 ಗ್ರಾಂ ಅಸಿಫೇಟ್ 70 ಎಸ್ ಪಿ ಪ್ರತೀ ಲೀ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.
•    ಬಿಳಿನೊಣಗಳ ನಿರ್ವಹಣೆಗಾಗಿ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆ ಎತ್ತರಕ್ಕೆ ಪ್ರತೀ ಹೆಕ್ಟೇರಿಗೆ 45 ರಂತೆ ನೆಡಬೇಕು. ತೀವ್ರವಾದಲ್ಲಿ ಟ್ರಯಜೊಫಾಸ್ 40 ಇ ಸಿ 1.5 ಮಿ ಲೀ ಪ್ರತೀ ಲೀ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.
•    ಮೈಟ್ (ನುಸಿ) ಗಾಗಿ 3 ಗಾಂ್ರ ನೀರಿನಲ್ಲಿ ಕರಗುವ ಗಂದಕ ಅಥವಾ 2.5 ಮಿ ಲೀ ಡೈಕೊಫಾಲ್ 18.5 ಇ ಸಿ ಬೆರಿಸಿ ಸಿಂಪರಣೆ ಮಾಡಬೇಕು.
•    ಸಸಿ ಒಣಗುವ ರೋಗ ಕಂಡು ಬಂದರೆ ಪ್ರತೀ ಲೀ ನೀರಿಗೆ 2 ಗ್ರಾ ಥೈರಮ್ 75 ಡಬ್ಲ್ಯೂ ಪಿ ಶಿಲೀಂದ್ರನಾಶಕ ಬೆರೆಸಿ ರೋಗ ಪೀಡಿತ ಸಸಿಗಳ ಸುತ್ತಲೂ ಮಣ್ಣಿನಲ್ಲಿ ಸೇರಿಸಬೇಕು.
•    ಕಂದು ಎಲೆ ಚುಕ್ಕೆ ರೋಗ ನಿರ್ವಹಣೆಗೆ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯೂ ಪಿ 3 ಗ್ರಾಂ ಅಥವಾ ಮ್ಯಾಂಕೊಜೆಬ್ 75 ಡಬ್ಲ್ಯೂ ಪಿ 2 ಗ್ರಾಂ ಪ್ರತೀ ಲೀ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇಲ್ಲಿನ ವಿಜ್ಞಾನಿಗಳಾದ ಡಾ. ಎಮ್.ಬಿ. ಪಾಟೀಲ (9448690684), ಯುಸುಫಲಿ ಅ ನಿಂಬರಗಿ (7899600134), ರೋಹಿತ್.ಕೆ.ಎ. (9845194328) ಮತ್ತು ಸುಧಾಕರ್.ಟಿ. (9916180756) ರವರನ್ನು ಸಂಪರ್ಕಿಸಬೇಕು ಎಂದು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.
Post a Comment