Friday, 27 February 2015

ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಹಿರಿಯ ನಾಗರಿಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಇಂದಿನ ಯುವ ಪೀಳಿಗೆ, ಹಿರಿಯರನ್ನು ಗೌರವಿಸಿ, ಅವರ ಅನುಭವಾಮೃತ ಪಡೆಯಲು ಯತ್ನಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈತ್ರಿ ಅಸೋಸಿಯೇಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಇಂದಿನ ದಿನಮಾನದಲ್ಲಿ ಮಕ್ಕಳು, ತಂದೆ-ತಾಯಿಗಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ, ಅವರನ್ನು ಕಡೆಗಣಿಸುತ್ತಿರುವುದು ಹಿರಿಯ ನಾಗರಿಕರು ಮನೆ ತೊರೆಯುತ್ತಿರುವುದಕ್ಕೆ ಕಾರಣವಾಗುತ್ತಿದೆ. ಇಂದು ಬಹುತೇಕ ಹಿರಿಯ ನಾಗರಿಕರು ಮನಃಶಾಂತಿಗಾಗಿ ಅನಾಥಾಶ್ರಮ ಸೇರುತ್ತಿದ್ದಾರೆ ಎಂದರೆ ಅದು ದೇಶೀಯ ಸಂಸ್ಕøತಿಯ ಅವನತಿಯಲ್ಲದೆ ಮತ್ತೇನು ಅಲ್ಲ.      ಹಿರಿಯರನ್ನು ಗೌರವಿಸಿದರೆ ಸಾಲದು, ಅವರ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಒದಗಿಸಲು ನಾವೂ ಕೂಡಾ ಶ್ರಮಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಅಭಿಪ್ರಾಯಪಟ್ಟರು.
     ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ, ಜಿಲ್ಲಾ ಸರಕಾರಿ ವಕೀಲ ಬಿ.ಶರಣಪ್ಪ, ಕಾರ್ಯದರ್ಶಿ ರಾಜಶೇಖರ ಮಾಲಿಪಾಟೀಲ, ಮೈತ್ರಿ ಅಸೋಸಿಯೇಷನ್‍ನ ಅಧ್ಯಕ್ಷ ಪ್ರವೀಣ, ಕೊಪ್ಪಳ ಹಿರಿಯ ನಾಗರಿಕರ ಮತ್ತು ಅಂಗವಿಕರ ಯೋಜನಾಧಿಕಾರಿ ಜಗದೀಶ, ಹಿರಿಯ ವಕೀಲ ಕೆ. ಸತ್ಯನಾರಾಯಣ ರಾವ್ ಹಾಗೂ ಇತರೆ ಗಣ್ಯರು ಇದ್ದರು.
Post a Comment