Saturday, 28 February 2015

ಕೊಪ್ಪಳ : ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‍ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ

ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‍ನಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
     ಮುನಿರಾಬಾದ್-ಮೆಹಬೂಬ್‍ನಗರ ರೈಲ್ವೆ ಕಾಮಗಾರಿಗಾಗಿ ಬಜೆಟ್‍ನಲ್ಲಿ ಕ್ಯಾಪಿಟಲ್- 35 ಕೋಟಿ ರೂ. ಹಾಗೂ ಇಬಿಆರ್ (ಎಕ್ಸ್‍ಟ್ರಾ ಬಜೆಟ್ ರಿಸೋರ್ಸ್) ನಲ್ಲಿ ರೂ. 150 ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಗದಗ-ವಾಡಿ ರೈಲ್ವೆ ಯೋಜನೆಗೆ ಬಜೆಟ್‍ನಲ್ಲಿ ಕ್ಯಾಪಿಟಲ್- 20 ಕೋಟಿ ರೂ. ಹಾಗೂ ಇಬಿಆರ್ (ಎಕ್ಸ್‍ಟ್ರಾ ಬಜೆಟ್ ರಿಸೋರ್ಸ್) ನಲ್ಲಿ ರೂ. 100 ಕೋಟಿ ರೂ. ಹಂಚಿಕೆ ಮಾಡಲಾಗಿದೆ.  ಹೊಸಪೇಟೆ-ಕೊಪ್ಪಳ-ಹುಬ್ಬಳ್ಳಿ ಡಬಲ್ ಲೈನಿಂಗ್ ಕಾಮಗಾರಿಗಾಗಿ ಕ್ಯಾಪಿಟಲ್‍ನಡಿ 250 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ಹೆಚ್ಚುವರಿ ಅನುದಾನದ ತುರ್ತು ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಹ ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಫೆ.28 (ಕರ್ನಾಟಕ ವಾರ್ತೆ) : ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಬಹುವಲಯವಾರು ಅಭಿವೃದ್ಧಿ ಯೋಜನೆಯಡಿ (ಎಂ.ಎಸ್.ಡಿ.ಪಿ)   ಅಲ್ಪಸಂಖ್ಯಾತರಿಗೆ  ಉದ್ಯೋಗ ಕಲ್ಪಿಸುವ ವಿವಿಧ ಕೋರ್ಸುಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ.
     ಕೊಪ್ಪಳ ನಗರದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬುದ್ಧ ಮತ್ತು ಪಾರ್ಸಿ ಜನಾಂಗದ ಯುವಕ, ಯುವತಿಯರಿಗೆ  ಉದ್ಯೋಗಾವಕಾಶ ಅಥವಾ ಸ್ವಯಂ ಉದ್ಯೋಗ ಕಲ್ಪಿಸುವಂತಹ ಹಾಗೂ ಸ್ಥಳೀಯ ಕಲೆ ಮತ್ತು ಕೌಶಲ್ಯತೆ ಹೊಂದುವ ತರಬೇತಿಗಳನ್ನು ಕೊಪ್ಪಳದ ಶ್ರೀ ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮೂಲಕ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಫ್ಯಾಷನ್ ಡಿಸೈನಿಂಗ್, ಡ್ರೈವರ್ ಕಮ್ ಮೆಕ್ಯಾನಿಕ್, ಬೇಸಿಕ್ ಇಲೆಕ್ಟ್ರಿಕಲ್ ಟ್ರೈನಿಂಗ್ ಹಾಗೂ ಎಂಬ್ರಾಯಿಡರಿ ಕುರಿತು ತರಬೇತಿ ನೀಡಲಾಗುವುದು.  ಅರ್ಜಿ ಸಲ್ಲಿಸಲು ಇಚ್ಛಿಸುವವರು ಕೊಪ್ಪಳ ನಗರದ ನಿವಾಸಿಯಾಗಿರಬೇಕು. ತಹಶೀಲ್ದಾರರಿಂದ ಪಡೆದ ಜಾತಿ, ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಹಾಗೂ 18 ರಿಂದ 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಅರ್ಜಿ ನಮೂನೆಯನ್ನು ಕೊಪ್ಪಳದ ಶ್ರೀ ಅಮರೇಶ್ವರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಮಿಲೇನಿಯಂ ಕಾಲೇಜು ಆವರಣ, ಗದಗ ರಸ್ತೆ, ಕೊಪ್ಪಳ ಇವರಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ 05 ರೊಳಗೆ ಸಂಸ್ಥೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಅಸಾಧಾರಣ ಪ್ರತಿಭೆಯ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
     ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅಸಾಧಾರಣ ಸಾಧನೆ ಮಾಡಿರುವ 4 ರಿಂದ 15 ವರ್ಷದೊಳಗಿನ (01-08-1999 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2014ನೇ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು) ಸಾಧನೆ ಮಾಡಿದ ಅರ್ಹ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.   ಕಲೆ, ಕ್ರೀಡೆ, ಶಿಕ್ಷಣ ಹಾಗೂ ಸಂಸ್ಕøತಿಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣ ಎಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರ ಪತ್ರಾಂಕಿತ ಅಧಿಕಾರಿಗಳಿಂದ ಧೃಢಿಕರಿಸಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸಲು ಮಾರ್ಚ್ 07 ಕೊನೆ ದಿನವಾಗಿದ್ದು, ನಿಗದಿತ ಅರ್ಜಿಯನ್ನು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಮಾರ್ಚ್ 07 ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥ


ಕೊಪ್ಪಳ,ಫೆ.28 (ಕರ್ನಾಟಕ ವಾರ್ತೆ): ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ  ಮೇಲೆ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಆತಂಕ ವ್ಯಕ್ತಪಡಿಸಿದರು.
      ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪೋಕ್ಸೋ ಕಾಯ್ದೆ ಕುರಿತ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
       ಬದುಕಿನ ಬಗ್ಗೆ ತಿಳುವಳಿಕೆ ಮೂಡುವ ಮುನ್ನವೇ ಸಣ್ಣ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಸುತ್ತುವವರಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ.    ಲೈಂಗಿಕ ದೌರ್ಜನ್ಯವೆಸಗುವ ಅಪರಾಧಕ್ಕೆ ಇಂದು ಕಠಿಣ ಕಾನೂನುಗಳು ಜಾರಿಯಾಗಿವೆ.  ಆದರೆ ಇಂತಹ ಕಠಿಣ ಕಾನೂನಿನ ಕುರಿತು  ಸಮಾಜದಲ್ಲಿ ಮಾಹಿತಿ ಇಲ್ಲದಿರುವುದು ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಇನ್ನು ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಸಮಾಜವೇ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಶಾಲೆಗೆ ಹೋದ ಮಗು ವಾಪಾಸ್ ಮನೆಗೆ ಬರುವವರೆಗೂ ಪಾಲಕರು ಆತಂಕದಲ್ಲಿಯೇ ಕಾಲ ಕಳೆಯುವ ಸ್ಥಿತಿ ಇದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೋಕ್ಸೋ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ-2012) ಕಾಯಿದೆ ಪ್ರಬಲ ಅಸ್ತ್ರವಾಗಿದೆ.  ಇಂತಹ ಕಾಯ್ದೆ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಹೇಳಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಮಾತನಾಡಿ, ಮಕ್ಕಳ ಮೇಲಿನ ಯಾವುದೇ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಎಲ್ಲ ಶಾಲೆಯವರು, ತಮ್ಮ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಾಹನ ಚಾಲಕರು, ವಿಳಾಸ, ಮೊಬೈಲ್ ಸಂಖ್ಯೆ, ಮಕ್ಕಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಮೀಪದ ಪೊಲೀಸ್ ಠಾಣೆಗೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.  ಅಲ್ಲದೆ ಪ್ರತಿ ಶಾಲೆಯಲ್ಲೂ ಐವರು ಸದಸ್ಯರ ಮಕ್ಕಳ ಸುರಕ್ಷಾ ಸಮಿತಿ ರಚಿಸಲು ಆದೇಶ ನೀಡಿದೆ.  ಜಿಲ್ಲೆಯಲ್ಲಿರುವ 352 ಖಾಸಗಿ ಶಾಲೆಗಳ ಪೈಕಿ 80 ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮಾರ್ಚ್ ವೇಳೆಗೆ ಇನ್ನೂ 100 ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
     ಕೊಪ್ಪಳ ಡಿವೈಎಸ್‍ಪಿ ರಾಜೀವ್ ಅವರು ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ.  ಮಕ್ಕಳು, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೆಲವೊಮ್ಮೆ ಬೆಳಕಿಗೇ ಬರುವುದಿಲ್ಲ.  ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಇದಕ್ಕೆ ಸಮಾಜ, ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ.  ತಪ್ಪಿತಸ್ಥರನ್ನು ಕಾನೂನಿನ ವ್ಯಾಪ್ತಿಗೆ ತರದಿದ್ದಲ್ಲಿ, ಅಪರಾಧ ಪ್ರವೃತ್ತಿ ಮುಂದುವರೆಸಲು ಸಮಾಜವೇ ಉತ್ತೇಜನ ನೀಡಿದಂತಾಗುತ್ತದೆ ಎಂದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸಮಾಜದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ. ಶುಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕಾರ್ಯಾಗಾರದ ಅಂಗವಾಗಿ ಮಕ್ಕಳ ವಿಶೇಷ ಘಟಕದ ಜಿಲ್ಲಾ ಪೋಲೀಸ್ ತರಬೇತುದಾರ ಸೋಮಶೇಖರ-ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ -2012 ಬಗ್ಗೆ ಹಾಗೂ ವಕೀಲ ಹನುಮಂತರಾವ್-ಪೋಕ್ಸೋ ಕಾಯ್ದೆ-2012 ಅಡಿ ಕಾನೂನಿನೊಂದಿಗೆ ಸಂಪರ್ಕ ಹಾಗೂ ಸಂಘರ್ಷಕ್ಕೊಳಗಾದ ಮಕ್ಕಳ ಪ್ರಕರಣಗಳ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ-ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ ಕುರಿತು ಹಾಗೂ ಯುನಿಸೆಫ್ ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಕ್ಕಳ ಸಂರಕ್ಷಣಾ ಯೋಜನೆಯ ಯಶೋಗಾಥೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ದೇವದಾಸಿ ಮಹಿಳೆಯರಿಗೆ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮ

ಕೊಪ್ಪಳ,ಫೆ.28(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಗ್ರಾಮ ಪಂಚಾಯತಿ ಹಿರೇಸಿಂದೋಗಿ ಇವರುಗಳ ಸಂಯುಕ್ತಾಶ್ರಯದಲ್ಲಿ, ಮಾಜಿ ದೇವದಾಸಿ ಮಹಿಳೆಯರಿಗಾಗಿ ವಿಶೇಷ ಕಾನೂನು ಅರಿವು- ನೆರವು ಕಾರ್ಯಕ್ರಮ ಮಾ. 01 ರಂದು ಬೆಳಿಗ್ಗೆ 10-30 ಗಂಟೆಗೆ ತಾಲೂಕಿನ ಹಿರೇಸಿಂದೋಗಿಯ ರಾಮುಲು ಕಾಲೋನಿಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ.
       ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ ಮಾದಿನೂರು ಅಧ್ಯಕ್ಷತೆ ವಹಿಸಲಿದ್ದಾರೆ.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ   ವಸಂತಪ್ರೇಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ, ಕಾರ್ಯದರ್ಶಿ ರಾಜಶೇಖರ ಮಾಲಿಪಾಟೀಲ, ಜಿಲ್ಲಾ ಸರಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಮರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಸುಧಾ ಎಂ.ಚಿದ್ರಿ, ಜಿ.ಪಂ. ಸದಸ್ಯೆ ಭಾಗೀರಥಿ ಮಾಲಿಪಾಟೀಲ್, ತಾ.ಪಂ. ಸದಸ್ಯೆ ಹುಲಿಗೆಮ್ಮ ಗದ್ದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಕೀಲರಾದ ಹನುಮಂತರಾವ್-ಮಹಿಳಾ ಕಾನೂನು ಹಾಗೂ ದೇವದಾಸಿ ಸಮರ್ಪಣಾ ನಿಷೇಧ ತಿದ್ದುಪಡಿ ಅಧಿನಿಯಮ 2009 ರ ವಿಶ್ಲೇಷಣೆ ಕುರಿತು, ಯೋಜನಾ ಅನುಷ್ಟಾನಾಧಿಕಾರಿ ದಾದಾಸಾಹೇಬ್ ಹಿರೇಮನಿ-ದೇವದಾಸಿ ಪದ್ಧತಿ ನಿರ್ಮೂಲನೆ ಕುರಿತು ಹಾಗೂ ವಕೀಲ ಶಶಿಕಾಂತ್ ಕಲಾಲ್-ಹೆಣ್ಣು ಮಕ್ಕಳ ಸಂರಕ್ಷಣೆ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುವರು.

ತೋಟಗಾರಿಕೆ ತರಬೇತಿ : ಮಾ. 02 ರಂದು ಹಾಜರಾಗಲು ಸೂಚನೆ

ಕೊಪ್ಪಳ ಫೆ. 28 (ಕ.ವಾ) : ತೋಟಗಾರಿಕೆ ಇಲಾಖೆಯು ಗದುಗಿನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಒಂದು ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಗಾಗಿ ಕೊಪ್ಪಳ ಜಿಲ್ಲೆಗಳಿಗೆ 13 ಅಭ್ಯರ್ಥಿಗಳ ಗುರಿಯನ್ನು ನಿಗದಿಪಡಿಸಿದೆ.  ಇದರಲ್ಲಿ ಸಾಮಾನ್ಯ-10, ಪ.ಜಾತಿ-02 ಮತ್ತು ಪ.ಪಂಗಡ-01 ಗುರಿ ನಿಗದಿ ಇದೆ.  ಅರ್ಜಿ ಸಲ್ಲಿಸಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು,  ವಯೋಮಿತಿ ಪ.ಜಾತಿ/ಪ.ಪಂಗಡದವರಿಗೆ 18 ರಿಂದ 35.  ಸಾಮಾನ್ಯ ಮತ್ತು ಇತರರಿಗೆ 18ರಿಂದ 33 ವರ್ಷ.  ಅಭ್ಯರ್ಥಿಯ ತಂದೆ/ತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.  ಈ ಕುರಿತು ಗ್ರಾಮಲೆಕ್ಕಿಗರಿಂದ ವಂಶವೃಕ್ಷ ದೃಢೀಕರಣ ಪತ್ರ ಸಲ್ಲಿಸಬೇಕು.  ಆಸಕ್ತರು ಮಾ. 02 ರಂದು ಬೆ. 10 ಗಂಟೆಗೆ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539-231530 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಬೇಸಿಗೆ ಹತ್ತಿ ಬೆಳೆ ಉತ್ಪಾದನೆ ಮತ್ತು ಸಂರಕ್ಷಣಾ ಕ್ರಮಗಳು : ರೈತರಿಗೆ ಸಲಹೆ

ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಕ್ಷೇತ್ರದಲ್ಲಿ ಈಗ ಬಿ.ಟಿ ಹತ್ತಿ ಬಿತ್ತನೆ ಪ್ರಾರಂಭಗೊಂಡಿದ್ದು ರೈತರು ಸೂಕ್ತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಲು ಉಪಯುಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
    ಹತ್ತಿ ಬೆಳೆ ಬೆಳೆಯಲು ನೀರು ಬಸಿದು ಹೋಗುವ ಕೆಂಪು ಮಣ್ಣು ಮತ್ತು ಆಳವಾದ ಕಪ್ಪು ಮಣ್ಣು ಸೂಕ್ತವಾಗಿದ್ದು,  ಹತ್ತಿ ಬೀಜವು ಮಾರುಕಟ್ಟೆಯಲ್ಲಿ 570 ಗ್ರಾಂ ಪ್ಯಾಕೇಟ್‍ನಲ್ಲಿ ದೊರೆಯುತ್ತದೆ. ಇದರಲ್ಲಿ ಎರಡು ಪ್ಯಾಕೇಟ್‍ಗಳಿದ್ದು 450 ಗ್ರಾಂ ಬೀಜ ಹಾಗೂ 120 ಗ್ರಾಂ ಅದೇ ತಳಿಯ ಬಿ.ಟಿ ಅಂಶವಿಲ್ಲದ ಬೀಜ ಇರುತ್ತದೆ. ಬಿ.ಟಿ ಅಂಶವಿಲ್ಲದ ಬೀಜವನ್ನು ಹೊಲದ ಸುತ್ತಲೂ ಬಿತ್ತನೆ ಮಾಡುವುದು ಕಡ್ಡಾಯ. ಭಾರತ ಸರ್ಕಾರದ ವಂಶವಾಹಿನಿ ತಂತ್ರಜ್ಞಾನದ ಅನುಮೋದನೆ ಸಮಿತಿಯು ಶೇ. 20 ರಷ್ಟು ಪ್ರದೇಶದಲ್ಲಿ ಬಿ.ಟಿ ರಹಿತ ಹತ್ತಿ ಬಿತ್ತನೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಬೇಸಾಯ ಕ್ರಮದಿಂದ ಕಾಯಿಕೊರಕ ಕೀಟವು ನಿರೋಧಕತೆ ಬೆಳಸಿಕೊಳ್ಳುವುದನ್ನು ತಪ್ಪಿಸಬಹುದು. 
ಬೀಜೋಪಚಾರ ಮತ್ತು ಬಿತ್ತನೆ: ಬಿತ್ತನೆ ಬೀಜವನ್ನು ಅಜಟೋಬ್ಯಾಕ್ಟರ್  ಅಥವಾ ಅಜೋಸ್ವೈರಿಲಂ (200 ಗ್ರಾಂ/ಎಕರೆಗೆ) ಹಾಗೂ ರಂಜಕ ಕರಗಿಸುವ ಅಣುಜೀವಿ (200ಗ್ರಾಂ/ಎಕರೆಗೆ) ಗೊಬ್ಬರದೊಡನೆ ಉಪಚರಿಸಿ ಬಿತ್ತನೆ ಮಾಡಬೇಕು. ಈ ಕ್ರಮದಿಂದ ಸಾರಜನಕ ಹಾಗೂ ರಂಜಕ ಸಹಜವಾಗಿ ದೊರಕುವುದರಿಂದ ರಸಾಯನಿಕ ಗೊಬ್ಬರದ ಪ್ರಮಾಣವನ್ನು ಕಡಿಮೆಗೊಳಿಸಬಹುದು.  ಎಕರೆಗೆ 4  ರಿಂದ 6 ಟನ್‍ನಷ್ಟು ಕೊಟ್ಟಿಗೆ  ಗೊಬ್ಬರವನ್ನು ಬಿತ್ತುವ ಎರಡು  ವಾರ ಮೊದಲು ಭೂಮಿಗೆ ಸೇರಿಸಬೇಕು.  ಬಿ.ಟಿ. ಹೈಬ್ರಿಡ್ ಹತ್ತಿ ಬೆಳೆಗೆ ಬೇಸಿಗೆ ಅಥವಾ ನೀರಾವರಿ ಹಂಗಾಮಿಗೆ ಫೆಬ್ರವರಿ ಮತ್ತು ಮಾರ್ಚ್ ಸೂಕ್ತ ಕಾಲವಾಗಿದೆ.  ರಾಸಾಯನಿಕ ಗೊಬ್ಬರ ಬಳಸಬೇಕಿದ್ದಲ್ಲಿ, 60:30:30 ಕೆ.ಜಿ ಪ್ರತಿ ಎಕರೆಗೆ ಸಾರಜನಕ, ರಂಜಕ ಹಾಗೂ ಪೋಟ್ಯಾಷ್, ಬಿತ್ತನೆ ಸಮಯದಲ್ಲಿ ಶೇ.25 ರಷ್ಟು ಸಾರಜನಕ ಮತ್ತು ಪೋಟ್ಯಾಷ ಹಾಗೂ ಪೂರ್ತಿ ಪ್ರಮಾಣದ ರಂಜಕ ಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇ. 50 ರ ಸಾರಜನಕ ಮತ್ತು ಪೋಟ್ಯಾಷನ್ನು ಬಿತ್ತಿದ 30 ದಿನಗಳ ನಂತರ ಹಾಗೂ ಇನ್ನುಳಿದ ಶೇ. 25 ರ ಸಾರಜನಕ ಮತ್ತು ಪೋಟ್ಯಾಷನ್ನು ಬಿತ್ತಿದ 60 ದಿನಗಳ ನಂತರ ಗೊಬ್ಬರಗಳನ್ನು ಹಾಕಬೇಕು.  ಬಿತ್ತನೆಯಾದ 80 ದಿನಗಳ ನಂತರ 20 ದಿನಗಳಿಗೊಮ್ಮೆ ಎರಡುಬಾರಿ ಶೇ. 2 ಡಿಎಪಿ ಅಥವಾ ಯೂರಿಯಾ ಅಥವಾ ಶೇ. 1 ಪೊಟ್ಯಾಷಿಮ್ ನೈಟ್ರೈಟ್‍ನ್ನು ಸಿಂಪರಣೆ ಮಾಡಬೇಕು.  ಹತ್ತಿ ಎಲೆ ಕೆಂಪಾಗುವಿಕೆ ತಡೆಗಟ್ಟಲು 10 ಕೆ.ಜಿ ಪ್ರತಿ ಎಕರೆಗೆ ಕೊಟ್ಟಿಗೆ ಗೊಬ್ಬರದೊಂದಿಗೆ ಅಥವಾ ಬಿತ್ತುವ ಸಮಯದಲ್ಲಿ ನಿಡುವುದು ಮತ್ತು ಶೇ. 1 ಮೆಗ್ನಿಷಿಯಂ ಸಲ್ಫೇಟ್‍ನ್ನು ಮತ್ತು 19:19:19 ಕೂಡಿಸಿ ಬಿತ್ತಿದ 55-60,  80-85 ಮತ್ತು 105-110 ದಿವಸದ ನಂತರ ಸಿಂಪಡಿಸಬೇಕು, ಅಥವಾ ಶೇ. 2 ಡಿಎಪಿ ಅಥವಾ ಯೂರಿಯಾನ್ನು ಸಿಂಡಿಸಬಹದು.  ಹತ್ತಿ ಬೆಳೆಯಲ್ಲಿ 45 ಹಾಗೂ 65 ದಿಗಳಲ್ಲಿ ಮೊಗ್ಗು ಹಾಗೂ ಹೂ ಉದುರುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ ಪ್ಲಾನೋಫಿಕ್ಸ್‍ನ್ನು ಸೇರಿಸಿ ಸಿಂಪಡಿಸಬೇಕು.
ಅಂತರ ಬೇಸಾಯ ಹಾಗೂ ಕಳೆನಿಯಂತ್ರಣ : ಬಿತ್ತಿದ 30 ದಿನಗಳ ನಂತರ 3-4 ಬಾರಿ 15 ದಿನಗಳ ಅಂತರದಲ್ಲಿ ಆಳವಾಗಿ ಎಡೆ ಹೊಡೆಯುವುದರಿಂದ ಕಳೆಗಳನ್ನು ನಿಯಂತ್ರಿಸಬಹುದಲ್ಲದೇ ಭೂಮಿಯ ತೇವಾಶಂವನ್ನು  ಕಾಪಾಡಿಕೊಳ್ಳಬಹುದು. ಬಿತ್ತಿದ 60 ದಿನಗಳವರೆಗೆ ಕಳೆಗಳನ್ನು ಪೂರ್ತಿಯಾಗಿ ಹತೋಟಿಯಲ್ಲಿಡುವುದು ಅವಶ್ಯ. ಬಿತಿÀ್ತದ ದಿನ ಅಥವಾ  ಮರುದಿನ ಪ್ರತಿ ಹೆಕ್ಟೇರಿಗೆ 1250 ಗ್ರಾಂ ಡೈಯುರಾನ್ (ಶೇ. 80) ಅಥವಾ 5 ಲೀ. ಪೆಂಡಿಮಿಥಾÀಲಿನ್ (ಶೇ. 30) ಕಳೆನಾಶಕವನ್ನು 1000 ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಸಿಂಪರಣೆಯ ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶ ಇರಬೇಕು. ಸಿಂಪರಣೆಯ ನಂತರ ಒಂದು ಸಲ ಎಡೆಕುಂಟೆ ಮತ್ತು ಒಂದು ಸಲ ಕೈಗಳೆಯನ್ನು ಬಿತ್ತಿದ 60 ದಿವಸಗಳ ಒಳಗಾಗಿ ಮಾಡಿದರೆ ಕಳೆಗಳನ್ನು ಪೂರ್ತಿಯಾಗಿ ಹತೋಟಿಯಲ್ಲಿಡಬಹುದು.  ಮಣ್ಣು ಹಾಗೂ ಹವಮಾನಕ್ಕನುಗುಣವಾಗಿ ಮರಳು ಮಿಶ್ರಿತ ಮಣ್ಣಿನಲ್ಲಿ 10 ರಿಂದ 15 ದಿನಗಳಿಗೊಮ್ಮೆ ಮತ್ತು ಕಪ್ಪು ಮಣ್ಣಿನಲ್ಲಿ 20 ರಿಂದ 30 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಅಥವಾ ಬಿತ್ತನೆ ಮಾಡುವಾಗ, ಹೂ ಬಿಡುವುದಕ್ಕೆ ಮೊದಲು 2 ಬಾರಿ ಮತ್ತು ಹೂ ಬಿಟ್ಟ ನಂತರ ನಾಲ್ಕು ಬಾರಿ ತಪ್ಪದೇ ನೀರು ಹಾಯಿಸಬೇಕು. ಆಳವಾದ ಕಪ್ಪು ಮಣ್ಣಿನ ಪ್ರದೇಶಗಳಲ್ಲಿ ‘ಸಾಲು ಬಿಟ್ಟು ಸಾಲು’ ಸರದಿಯಾಗಿ ನೀರು ಹಾಯಿಸುವುದು ಸೂಕ್ತ. ಕಪ್ಪು ಮಣ್ಣಿನ ಪ್ರದೇಶದಲ್ಲಿ ನೀರು ಇಂಗದೆ ಇದ್ದಾಗ ಬಿಸಿಗಾಲುವೆಗಳನ್ನು ತೆಗೆಯುವುದು ಅವಶ್ಯ. ಹತ್ತಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಹೆಚ್ಚು ನೀರು ಕೊಡುವುದರಿಂದ ಗಿಡಗಳ ಬೆಳವಣಿಗೆ ಹೆಚ್ಚಾಗಿ ಕೀಟನಾಶಕಗಳ ಸಮರ್ಪಕ ಬಳಕೆ ಸಾಧ್ಯವಾಗದೇ ಕೀಟದ ಹಾವಳಿ ಹೆಚ್ಚಾಗುವುದು. ಆದ್ದರಿಂದ ಸಮರ್ಪಕ ನೀರು ನಿರ್ವಹಣೆ ಅತೀ ಮುಖ್ಯವಾಗಿದೆ.
ಸಸ್ಯ ಸಂರಕ್ಷಣಾ ಕ್ರಮಗಳು : ಬಿತ್ತನೆಯನ್ನು ಮೇ 15 ರೊಳಗೆ ಮಾಡುವುದರಿಂದ ಕೀಟಗಳ ಬಾಧೆಯನ್ನು ಕಡಿಮೆ ಮಾಡಬಹುದು.  ಬೀಜವನ್ನು ಶಿಲೀಂದ್ರ ನಾಶಕಗಳಿಂದ ಅಥವಾ ಕೀಟನಾಶಕಗಳಿಂದ (ಪ್ರತಿ ಕೆಜಿ ಬೀಜಕ್ಕೆ ಕಾರ್ಬೆಂಡೈಜಿಂ 2 ಗ್ರಾಂ ಅಥವಾ ಟ್ರೈಕೋಡಮ್ 4 ಗ್ರಾಂ) ಉಪಚರಿಸಬೇಕು. ಮಾರುಕಟ್ಟೆಯಲ್ಲಿ  ಬೀಜೋಪಚಾರ ಮಾಡಿರುವ ಬೀಜಗಳು ಸಹ ಲಭ್ಯವಿರುತ್ತದೆ.
•    ಅಲ್ಪಾವಧಿ ಕಾಳು ಬೆಳೆಗಳಾದ ಹೆಸರು, ಉದ್ದು, ಅಲಸಂಧಿ, ಬೆಳೆಗಳೆನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಅದಾಯ, ಇಳುವರಿ ಮತ್ತು ಭೂಮಿಯ ಫಲವತ್ತತೆಯಲ್ಲಿ ಸ್ಥಿರತೆ ಹಾಗೂ ಕೀಟಬಾಧೆ ಯನ್ನು ಕಾಪಾಡಿಕೊಳ್ಳಬಹುದು.
•    ಒಂದು ಸಾಲು ಬೆಂಡೆಯನ್ನು ಪ್ರತೀ 20 ಸಾಲು ಹತ್ತಿಯ ನಂತರ ಹಾಗು ಬದುವಿನಗುಂಟ ಬಿತ್ತಬೇಕು. ಬೆಂಡೆಯ ಕಾಂಡದ ಮೇಲೆ ಮುಂಜಾನೆ ಹೊತ್ತಿನಲ್ಲಿ ಕಂಡುಬರುವ ಮೂತಿ ಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಬೆಂಡಿಕಾಯಿಗಳನ್ನು ವಾರಕ್ಕೊಮ್ಮೆ ಹರಿಯುವುದು ಕಾಯಿಕೊರಕಗಳ ನಿಯಂತ್ರಣಕ್ಕೆ ಅವಶ್ಯ.
•    ಬಿ. ಟಿ ಹತ್ತಿಯ ಬೆಳೆಯ ಬದುವಿನಗುಂಟ ಗೋವಿನಜೋಳ ಅಥವಾ ಅಲಸಂದೆ ಬೆಳೆಯುವುದರಿಂದ ಪರಭಕ್ಷಕ ಕೀಟಗಳ ಸಂಖ್ಯೆಯನ್ನು ವೃದ್ದಿಸುವುದರೊಂದಿಗೆ ಸಂರಕ್ಷಣೆ ಮಾಡಬಹುದು.
•    25 ದಿವಸ ಚೆಂಡು ಹೂವಿನ ಸಸಿಗಳನ್ನು ಅಥವಾ ಬೇಗ ಮಾಗುವ ತೊಗರಿಯನ್ನು ಹೊಲದ ಸುತ್ತಲೂ ಹತ್ತಿ ಹೂ ಬಿಡುವ ಸಮಯದಲ್ಲಿ ನೆಡಬೇಕು/ಬಿತ್ತಬೇಕು. ಇವುಗಳ ಮೇಲೆ ಇರುವ ತತ್ತಿಗಳನು ನಾಶಮಾಡಲು ತಪ್ಪದೇ ಕೀಟನಾಶಕಗಳನ್ನು ಬಳಸಬೇಕು.
•    ಮೊದಲ ಹಂತದಲ್ಲಿ ಬರುವ ರಸ ಹೀರುವ ಕೀಟಗಳ ನಿಯಂತ್ರಣಕ್ಕಾಗಿ ಬೀಜೋಪಚಾರ ಮಾಡಿದ ಬಿ.ಟಿ ಹತ್ತಿಯ ಬೀಜಗಳನ್ನು ಬಳಸುವುದರಿಂದ 30-40 ದಿನಗಳವರೆಗೆ ಯಾವುದೇ ಕೀಟಬಾದೆ ಕಂಡುಬರುವುದಿಲ್ಲ. ಒಂದು ವೇಳೆ ರಸ ಹೀರುವ ಕೀಟಗಳ ಸಂಖ್ಯೆ ಹೆಚ್ಚಾದರೆ ಬೇವಿನ ಬೀಜದ ಕಷಾಯ 5 % ಅಥವಾ ಕೀಟನಾಶಕಗಳಾದ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್ ಎಲ್ ಅಥವಾ 0.1 ಗ್ರಾ ಪಿಪ್ರೋನಿಲ್ 80 ಡÀಬ್ಲ್ಯೂ ಜಿ ಅಥವಾ 1.5 ಮಿ ಲೀ ಆಕ್ಷಿಡೆಮೆಟಾನ್ ಮೀಥೈಲ್ 25 ಇ.ಸಿ ಅಥವಾ 0.2 ಗ್ರಾಂ ಥೈಯಮಿಥಾಕ್ಸಾಮ್ 25 ಡಬ್ಲ್ಯೂ ಪಿ ಅಥವಾ 0.2 ಗ್ರಾಂ ಅಸಿಟಾಮಿಪ್ರಿಡ್ 20 ಎಸ್ ಪಿ ಪ್ರತೀ ಲೀ ನೀರಿಗೆ ಬೆರೆಸಿ ಹೆಕ್ಟೇರಿಗೆ 400 -500 ದ್ರಾವಣಾ ಸಿಂಪಡಿಸಬೇಕು.
•    ಬೆಳೆಯ ಮೊದಲನೆ ಹಂತದಲ್ಲಿ (60 ದಿನಗಳವರೆಗೆ) ಕೀಟನಾಶಕಗಳನ್ನು ಸಿಂಪಡಿಸಲು ಕೈ ಚಾಲಿತ ಪಂಪುಗಳನ್ನು ನಂತರ ಪವರ್ ಸ್ಪ್ರೆಯರ್‍ಗಳನ್ನು ಬಳಸುವುದು ಸೂಕ್ತ. ಬೇರೆ ಬೇರೆ ಕೀಟನಾಶಕಗಳನ್ನು ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಪರಣೆ ಮಾಡಬಾರದು. ಇದರಿಂದ ಕೀಟಗಳು ಕೀಟನಾಶಕ ನಿರೋದಕ ಶಕ್ತಿಯನ್ನು ಬೆಳೆಸಿಕೊಳ್ಳತ್ತವೆ.
•    ಮಿರಿಡ್ ತಿಗಣೆಗಳು ಮತ್ತು ಮಿಡ್ಜ್ ನೊಣಗಳು ಕಂಡು ಬಂದಾಗ 1 ಗ್ರಾಂ ಅಸಿಫೇಟ್ 70 ಎಸ್ ಪಿ ಪ್ರತೀ ಲೀ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.
•    ಬಿಳಿನೊಣಗಳ ನಿರ್ವಹಣೆಗಾಗಿ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆ ಎತ್ತರಕ್ಕೆ ಪ್ರತೀ ಹೆಕ್ಟೇರಿಗೆ 45 ರಂತೆ ನೆಡಬೇಕು. ತೀವ್ರವಾದಲ್ಲಿ ಟ್ರಯಜೊಫಾಸ್ 40 ಇ ಸಿ 1.5 ಮಿ ಲೀ ಪ್ರತೀ ಲೀ ನೀರಿಗೆ ಬೆರಿಸಿ ಸಿಂಪರಣೆ ಮಾಡಬೇಕು.
•    ಮೈಟ್ (ನುಸಿ) ಗಾಗಿ 3 ಗಾಂ್ರ ನೀರಿನಲ್ಲಿ ಕರಗುವ ಗಂದಕ ಅಥವಾ 2.5 ಮಿ ಲೀ ಡೈಕೊಫಾಲ್ 18.5 ಇ ಸಿ ಬೆರಿಸಿ ಸಿಂಪರಣೆ ಮಾಡಬೇಕು.
•    ಸಸಿ ಒಣಗುವ ರೋಗ ಕಂಡು ಬಂದರೆ ಪ್ರತೀ ಲೀ ನೀರಿಗೆ 2 ಗ್ರಾ ಥೈರಮ್ 75 ಡಬ್ಲ್ಯೂ ಪಿ ಶಿಲೀಂದ್ರನಾಶಕ ಬೆರೆಸಿ ರೋಗ ಪೀಡಿತ ಸಸಿಗಳ ಸುತ್ತಲೂ ಮಣ್ಣಿನಲ್ಲಿ ಸೇರಿಸಬೇಕು.
•    ಕಂದು ಎಲೆ ಚುಕ್ಕೆ ರೋಗ ನಿರ್ವಹಣೆಗೆ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯೂ ಪಿ 3 ಗ್ರಾಂ ಅಥವಾ ಮ್ಯಾಂಕೊಜೆಬ್ 75 ಡಬ್ಲ್ಯೂ ಪಿ 2 ಗ್ರಾಂ ಪ್ರತೀ ಲೀ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇಲ್ಲಿನ ವಿಜ್ಞಾನಿಗಳಾದ ಡಾ. ಎಮ್.ಬಿ. ಪಾಟೀಲ (9448690684), ಯುಸುಫಲಿ ಅ ನಿಂಬರಗಿ (7899600134), ರೋಹಿತ್.ಕೆ.ಎ. (9845194328) ಮತ್ತು ಸುಧಾಕರ್.ಟಿ. (9916180756) ರವರನ್ನು ಸಂಪರ್ಕಿಸಬೇಕು ಎಂದು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.

Friday, 27 February 2015

ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಹಿರಿಯ ನಾಗರಿಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಇಂದಿನ ಯುವ ಪೀಳಿಗೆ, ಹಿರಿಯರನ್ನು ಗೌರವಿಸಿ, ಅವರ ಅನುಭವಾಮೃತ ಪಡೆಯಲು ಯತ್ನಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈತ್ರಿ ಅಸೋಸಿಯೇಷನ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಶುಕ್ರವಾರ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಇಂದಿನ ದಿನಮಾನದಲ್ಲಿ ಮಕ್ಕಳು, ತಂದೆ-ತಾಯಿಗಳ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ, ಅವರನ್ನು ಕಡೆಗಣಿಸುತ್ತಿರುವುದು ಹಿರಿಯ ನಾಗರಿಕರು ಮನೆ ತೊರೆಯುತ್ತಿರುವುದಕ್ಕೆ ಕಾರಣವಾಗುತ್ತಿದೆ. ಇಂದು ಬಹುತೇಕ ಹಿರಿಯ ನಾಗರಿಕರು ಮನಃಶಾಂತಿಗಾಗಿ ಅನಾಥಾಶ್ರಮ ಸೇರುತ್ತಿದ್ದಾರೆ ಎಂದರೆ ಅದು ದೇಶೀಯ ಸಂಸ್ಕøತಿಯ ಅವನತಿಯಲ್ಲದೆ ಮತ್ತೇನು ಅಲ್ಲ.      ಹಿರಿಯರನ್ನು ಗೌರವಿಸಿದರೆ ಸಾಲದು, ಅವರ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಒದಗಿಸಲು ನಾವೂ ಕೂಡಾ ಶ್ರಮಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅವರು ಅಭಿಪ್ರಾಯಪಟ್ಟರು.
     ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ, ಜಿಲ್ಲಾ ಸರಕಾರಿ ವಕೀಲ ಬಿ.ಶರಣಪ್ಪ, ಕಾರ್ಯದರ್ಶಿ ರಾಜಶೇಖರ ಮಾಲಿಪಾಟೀಲ, ಮೈತ್ರಿ ಅಸೋಸಿಯೇಷನ್‍ನ ಅಧ್ಯಕ್ಷ ಪ್ರವೀಣ, ಕೊಪ್ಪಳ ಹಿರಿಯ ನಾಗರಿಕರ ಮತ್ತು ಅಂಗವಿಕರ ಯೋಜನಾಧಿಕಾರಿ ಜಗದೀಶ, ಹಿರಿಯ ವಕೀಲ ಕೆ. ಸತ್ಯನಾರಾಯಣ ರಾವ್ ಹಾಗೂ ಇತರೆ ಗಣ್ಯರು ಇದ್ದರು.

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಸಲ್ಲಿಕೆಗೆ ಮಾ. 10 ಕೊನೆಯ ದಿನ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಕೃಷಿ ಇಲಾಖೆಯ ಆತ್ಮ ಯೋಜನೆ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಹಾಗೂ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಮಾ. 10 ಕೊನೆಯ ದಿನವಾಗಿದೆ.
     ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಡಿ ಉತ್ತಮ ಸಾಧನೆಗೈದ ಪ್ರಗತಿಪರ ರೈತರಿಗೆ ನೀಡಲಾಗುವ ಈ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯಿಂದ 10 ಪ್ರಗತಿಪರ ರೈತರನ್ನು ಹಾಗೂ ಜಿಲ್ಲೆಯ ಪ್ರತಿ ತಾಲೂಕಿನ ಐದು ಪ್ರಗತಿಪರ ರೈತರನ್ನು  ಆಯ್ಕೆ ಮಾಡಲಾಗುವುದು. ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯುವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಲ್ಲಿ ಸಾಧನೆಗೈದ ರೈತರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳು ಲಭ್ಯವಿದ್ದು, ರೈತರು ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 10 ರ ಸಾಯಂಕಾಲ 5.30 ರೊಳಗಾಗಿ ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬೇಕು ಎಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ : ಮಾ. 02 ರಂದು ಕೊಪ್ಪಳದಲ್ಲಿ ಸಭೆ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಏ. 11 ರಿಂದ 30 ರವರೆಗೆ ಕೈಗೊಳ್ಳಲಿದ್ದು, ಈ ಕುರಿತಂತೆ ವಿವಿಧ ಜಾತಿ, ಸಮುದಾಯ, ಸಂಘ ಸಂಸ್ಥೆಗಳ ಸಭೆಯನ್ನು ಮಾ. 02 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಮೀಕ್ಷೆ ಕೈಗೊಳ್ಳುವ ವಿಷಯದ ಕುರಿತು ಸಾರ್ವಜನಿಕರ ಅವಗಾಹನೆಗೆ ತರುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ವಹಿಸುವರು.  ಸಭೆಗೆ ಆಸಕ್ತ ಸಂಘ-ಸಂಸ್ಥೆಗಳು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಎನ್.ಇ.ಜಿ.ಪಿ-ಎ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಪ್ಪಂದದ ಆಧಾರದ ಮೇಲೆ 06 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು, ವಿದ್ಯಾರ್ಹತೆ, ಅನುಭವ, ವೇತನ ವಿವರ ಹಾಗೂ ಅರ್ಜಿ ನಮೂನೆಗಳನ್ನು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಅಥವಾ ರೈತ ಮಿತ್ರ ವೆಬ್‍ಸೈಟ್‍ನಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆ ದಿನವಾಗಿದ್ದು, ಮಾರ್ಚ್ 17ರ ಬೆಳಿಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.
     ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ದೂರವಾಣಿ ಸಂಖ್ಯೆ: 08539-221633 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಣ್ಣು ಬೆಳೆಗಳ ತರಬೇತಿ ಶಿಬಿರ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದ ವತಿಯಿಂದ ಹಣ್ಣು ಬೆಳೆಗಳ ಬಗ್ಗೆ ಮೂರು ದಿನಗಳ ಉಚಿತ ತರಬೇತಿ ಶಿಬಿರವನ್ನು  ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ.
     ಹಣ್ಣು ಬೆಳೆಗಳ ಅಧಿಕ ಇಳುವರಿಗೆ ಅನಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ಮಾರ್ಚ್ 10 ರೊಳಗಾಗಿ  ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103, ಮೊಬೈಲ್: 9482630790 ಇವರಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಮಕ್ಕಳ ರಕ್ಷಣಾ ಕಾಯ್ದೆ-2012 (ಪೋಕ್ಸೋ) ಕುರಿತು ಒಂದು ದಿನದ ಕಾರ್ಯಾಗಾರ

ಕೊಪ್ಪಳ, ಫೆ.27 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣಾ ಕಾಯ್ದೆ-2012 (ಪೋಕ್ಸೋ) ಬಗ್ಗೆ ಒಂದು ದಿನದ ಕಾರ್ಯಾಗಾರ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಮ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ಕೊಪ್ಪಳದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ ದಶರಥ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ||ಪಿ.ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ ತುಕಾರಾಮರಾವ್, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಮಕ್ಕಳ ವಿಶೇಷ ಘಟಕದ ಜಿಲ್ಲಾ ಪೋಲೀಸ್ ತರಬೇತುದಾರ ಸೋಮಶೇಖರ-ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ -2012 ಬಗ್ಗೆ ಹಾಗೂ ವಕೀಲ ಹನುಮಂತರಾವ್-ಪೋಕ್ಸೋ ಕಾಯ್ದೆ-2012 ಅಡಿ ಕಾನೂನಿನೊಂದಿಗೆ ಸಂಪರ್ಕ ಹಾಗೂ ಸಂಘರ್ಷಕ್ಕೊಳಗಾದ ಮಕ್ಕಳ ಪ್ರಕರಣಗಳ ಕುರಿತು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ-ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯವೈಖರಿ ಕುರಿತು ಹಾಗೂ ಯುನಿಸೆಫ್ ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಕ್ಕಳ ಸಂರಕ್ಷಣಾ ಯೋಜನೆಯ ಯಶೋಗಾಥೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾಗಿ ಈರಪ್ಪ ಕಂಬಳಿ ನೇಮಕ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ಈರಪ್ಪ ಕಂಬಳಿ ಅವರನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
      ಈರಪ್ಪ ಕಂಬಳಿ ಅವರು ಕೊಪ್ಪಳ ಜಿಲ್ಲೆ ಯಲಬುರ್ಗಾದವರಾಗಿದ್ದು, ಭಾಷಾಂತರ ನಿರ್ದೇಶನಾಲಯದಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  ಇದೀಗ ಅವರಿಗೆ ಸ್ಥಾನಪನ್ನ ಬಡ್ತಿ ನೀಡಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವೆಗಳು) ಅಧೀನ ಕಾರ್ಯದರ್ಶಿ ಡಾ. ಎಲ್. ಗೀತಾ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಜಿ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ ಮಾ. 7 ಕ್ಕೆ ಮುಂದೂಡಿಕೆ

ಕೊಪ್ಪಳ ಫೆ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಮಾ. 07 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಜಿ.ಪಂ. ತ್ರೈಮಾಸಿಕ ಕೆಡಿಪಿ ಸಭೆಯನ್ನು ಮಾ. 02 ರಂದು ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು.  ಆದರೆ ಇದೀಗ ಸಭೆಯನ್ನು ಮಾ. 07 ಕ್ಕೆ ಮುಂದೂಡಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ವಹಿಸುವರು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

Thursday, 26 February 2015

ಏ. 11, 12 ರಂದು ವಿಜೃಂಭಣೆಯಿಂದ ಆನೆಗೊಂದಿ ಉತ್ಸವ ಆಚರಣೆ : ಇಕ್ಬಾಲ್ ಅನ್ಸಾರಿ

ಕೊಪ್ಪಳ ಫೆ. 26 (ಕರ್ನಾಟಕ ವಾರ್ತೆ): ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಬರುವ ಏ. 11 ಮತ್ತು 12 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.
     ಆನೆಗೊಂದಿ ಉತ್ಸವ ಆಚರಣೆ ಸಂಬಂಧ ಗಂಗಾವತಿಯ ಐ.ಎಂ.ಎ ಸಭಾಂಗಣದಲ್ಲಿ  ಗುರುವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಆನೆಗೊಂದಿ ಉತ್ಸವವನ್ನು ಕಳೆದ ವರ್ಷ ಆಚರಿಸಬೇಕಾಗಿತ್ತು.  ಆದರೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಕಾರಣ ಆಚರಿಸಲು ಸಾಧ್ಯವಾಗಲಿಲ್ಲ.  ಈ ಬಾರಿ ಆನೆಗೊಂದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.  ವಿದ್ಯಾರ್ಥಿಗಳ ಪರೀಕ್ಷೆ, ಚುನಾವಣೆ ನೀತಿ ಸಂಹಿತೆ ಸೇರಿದಂತೆ ಎಲ್ಲ ನಿಟ್ಟಿನಲ್ಲಿ ಆಲೋಚಿಸಿ, ಏ. 11, 12 ರಂದು ಉತ್ಸವ ಆಚರಿಸಲು ದಿನಾಂಕ ನಿಗದಿಪಡಿಸಲಾಗಿದೆ.  ಏ. 11 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.  ಒಂದು ವೇಳೆ ಗ್ರಾ.ಪಂ. ಚುನಾವಣೆಯ ನೀತಿ ಸಂಹಿತೆ ಜಾರಿಯಾದರೂ ಸಹ ಉತ್ಸವವನ್ನು ರದ್ದು ಮಾಡುವುದಾಗಲಿ, ಮುಂದೂಡುವುದಾಗಲಿ ಮಾಡುವುದಿಲ್ಲ. ಜನಪ್ರತಿನಿಧಿಗಳು ವೇದಿಕೆಗೆ ತೆರಳದೆ, ಅಧಿಕಾರಿಗಳ ನೇತೃತ್ವದಲ್ಲೇ ವಿಜೃಂಭಣೆಯಿಂದ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗುವುದು.  ಏ. 11 ರಂದು ಆನೆಗೊಂದಿಯ ಶ್ರೀ ರಂಗನಾಥ ಸ್ವಾಮಿ ಜಾತ್ರೋತ್ಸವ ಇದ್ದು, ಅಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲಿದೆ. ಉತ್ಸವದ ಅಂಗವಾಗಿ ಅಂದು ಬೆಳಿಗ್ಗೆ ಅದ್ಧೂರಿ ಮೆರವಣಿಗೆ ಜರುಗಲಿದ್ದು, ಸಂಜೆ 6 ಗಂಟೆಗೆ ಆನೆಗೊಂದಿ ಬಳಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಆನೆಗೊಂದಿ ಉತ್ಸವದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.  ಜನರಿಗೆ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಉತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಒಳ್ಳೆಯ ಅವಕಾಶ ಲಭ್ಯವಾಗಲಿದೆ.  ಏ. 12 ರಂದು ಕಬಡ್ಡಿ, ಕುಸ್ತಿ ಮುಂತಾದ ಕ್ರೀಡಾಕೂಟಗಳು, ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು.  ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.  ಉತ್ಸವ ಆಚರಣೆಗೆ ಸರ್ಕಾರ ಈಗಾಗಲೆ 60 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.  ಉತ್ಸವ ಸಂದರ್ಭದಲ್ಲಿ ಆನೆಗೊಂದಿಯ ಮುಖ್ಯದ್ವಾರ, ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ, ಸಾರ್ವಜನಿಕರ ಅನುಕೂಲಕ್ಕಾಗಿ ಹೈಮಾಸ್ಟ್ ದೀಪದ ವ್ಯವಸ್ಥೆ, ಚಿಂತಾಮಣಿ ಮಠ, ದುರ್ಗಾ ದೇವಸ್ಥಾನ ಸೇರಿದಂತೆ ಐತಿಹಾಸಿಕ ಸ್ಥಳಗಳಿಗೆ ವಿದ್ಯುತ್ ದೀಪಾಲಾಂಕಾರ.  ಕೊಪ್ಪಳ, ಹುಲಿಗಿ, ಗಂಗಾವತಿಯಿಂದ ವಿಶೇಷ ಬಸ್ ವ್ಯವಸ್ಥೆ, ಆನೆಗೊಂದಿ ರಸ್ತೆ ಸುಧಾರಣೆ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
     ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ  ಸಿದ್ಧತೆಗಳನ್ನು ಕೈಗೊಳ್ಳಲು ಸಾಕಷ್ಟು ಕಾಲಾವಕಾಶ ಇರುವುದರಿಂದ, ಸಮರ್ಪಕ ಸಿದ್ಧತೆ ಕೈಗೊಳ್ಳಲಾಗುವುದು.  ನೆರೆಹೊರೆಯ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಖ್ಯಾತ ಕಲಾವಿದರನ್ನು ಆಹ್ವಾನಿಸಲಾಗುವುದು.  ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಿ, ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗುವುದು ಎಂದರು.
     ಆನೆಗೊಂದಿ ಉತ್ಸವ ಹಂಪಿ ಉತ್ಸವದಷ್ಟೇ ವಿಜೃಂಭಣೆಯಿಂದ ಜರುಗಬೇಕು, ಸ್ಥಳೀಯ ಕಲಾವಿದರಿಗೆ, ಸಾಹಿತಿಗಳಿಗೆ, ಕವಿಗಳಿಗೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ, ಊಟದ ವ್ಯವಸ್ಥೆ ಕಲ್ಪಿಸಬೇಕು.  ಆನೆಗೊಂದಿ ಶಿಲ್ಪ ಕಲೆಗೆ ಖ್ಯಾತಿ ಹೊಂದಿದ್ದು, ಉತ್ಸವ ಸಂದರ್ಭದಲ್ಲಿ ಶಿಲ್ಪ ಕಲೆ ಶಿಬಿರ ಏರ್ಪಡಿಸಬೇಕು.  ಗ್ರಾಮದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.  ಐತಿಹಾಸಿಕ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಈ ಹಿಂದಿನ ಉತ್ಸವಗಳಲ್ಲಿ ಆದ ಲೋಪದೋಷಗಳು ಪುನರಾವರ್ತನೆಯಾಗದಂತೆ ಉತ್ಸವ ಅದ್ಧೂರಿಯಾಗಿ ಆಚರಣೆಯಾಬೇಕು ಎಂದು ಹಲವು ಗಣ್ಯರು, ಸಂಘಟನೆಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
     ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹನುಮಂತಪ್ಪ ನಾಯಕ್, ತಾ.ಪಂ. ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷ ರಾಜೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ,   ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ತಹಸಿಲ್ದಾರ್ ವೆಂಕನಗೌಡ ಪಾಟೀಲ್, ಡಿವೈಎಸ್‍ಪಿ ವಿನ್ಸಂಟ್ ಶಾಂತಕುಮಾರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಜಿ.ಪಂ. ಸದಸ್ಯ ವಿಜಯಲಕ್ಷ್ಮಿ ರಾಮಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ಅಜ್ಮೀರ್ ನಂದಾಪುರ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಾಧ್ಯಮದವರು ಅಲ್ಲದೆ ಸಾರ್ವಜನಿಕರು ಭಾಗವಹಿಸಿ, ಉತ್ಸವದ ಯಶಸ್ವಿಗೆ ಉಪಯುಕ್ತ ಸಲಹೆ ಸೂಚನೆ ನೀಡಿದರು.

ಫೆ.27 ರಂದು ಕಾನೂನು ಅರಿವು-ನೆರವು ಕಾರ್ಯಕ್ರಮ

ಕೊಪ್ಪಳ, ಫೆ.26 (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈತ್ರಿ ಅಸೋಸಿಯೇಷನ್ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮ ಫೆ.27 ರ ಸಂಜೆ 4 ಗಂಟೆಗೆ ಕೊಪ್ಪಳ ನಗರದ ಜಿಲ್ಲಾ ಕೋರ್ಟ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ನಡೆಯಲಿದೆ.
     ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ದಶರಥ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ, ಜಿಲ್ಲಾ ಸರಕಾರಿ ವಕೀಲ ಬಿ.ಶರಣಪ್ಪ, ಕಾರ್ಯದರ್ಶಿ ರಾಜಶೇಖರ ಮಾಲಿಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಮರಾವ್, ಮೈತ್ರಿ ಅಸೋಸಿಯೇಷನ್‍ನ ಅಧ್ಯಕ್ಷ ಪ್ರವೀಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಕೊಪ್ಪಳ ಹಿರಿಯ ನಾಗರಿಕರ ಮತ್ತು ಅಂಗವಿಕರ ಯೋಜನಾಧಿಕಾರಿ ಜಗದೀಶ ಅವರು ಅಂಗವಿಕಲಚೇತನರಿಗೆ ಹಕ್ಕುಗಳ ಮತ್ತು ಸೌಲಭ್ಯಗಳ ಕುರಿತು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ ಅವರು ಹಿರಿಯ ನಾಗರಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡುವರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಫೆ. 26 (ಕರ್ನಾಟಕ ವಾರ್ತೆ): ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯ್ಕ ಅವರು ಮಾ. 04 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ನಿಗಮದ ಅಧ್ಯಕ್ಷರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 12 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ಮಧ್ಯಾಹ್ನ 2 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುವರು.  ನಂತರ ಮಧ್ಯಾಹ್ನ 3-30 ಗಂಟೆಗೆ ಬಂಜಾರ ಸಮುದಾಯದವರು ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಆಚರಿಸುವ ಹೋಳಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಂದು ಕೊಪ್ಪಳದಲ್ಲಿ ವಾಸ್ತವ್ಯ ಮಾಡುವರು.  ಮಾ. 05 ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

Wednesday, 25 February 2015

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ, ಫೆ.25 (ಕರ್ನಾಟಕ ವಾರ್ತೆ): ಕೃಷಿ ಇಲಾಖೆಯ ಆತ್ಮ ಯೋಜನೆ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಹಾಗೂ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
     ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಡಿ ಉತ್ತಮ ಸಾಧನೆಗೈದ ಪ್ರಗತಿಪರ ರೈತರಿಗೆ ನೀಡಲಾಗುವ ಈ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯಿಂದ 10 ಪ್ರಗತಿಪರ ರೈತರನ್ನು (ತಲಾ 25,000/-ರಂತೆ) ಹಾಗೂ ಜಿಲ್ಲೆಯ ಪ್ರತಿ ತಾಲೂಕಿನ ಐದು ಪ್ರಗತಿಪರ ರೈತರನ್ನು (ತಲಾ 10,000/-ರಂತೆ) ಆಯ್ಕೆ ಮಾಡಲಾಗುವುದು. ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯುವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆಗಳಲ್ಲಿ ಸಾಧನೆಗೈದ ರೈತರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
     ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳು ಲಭ್ಯವಿದ್ದು, ರೈತರು ಭರ್ತಿ ಮಾಡಿದ ಅರ್ಜಿಗಳನ್ನು ಮಾರ್ಚ್ 03 ರ ಸಾಯಂಕಾಲ 5.30 ರೊಳಗಾಗಿ ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರು ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಲಕಮುಖಿ : ದೈಹಿಕ ಶಿಕ್ಷಕ ಮತ್ತು ಪರಿಚಾರಕ ಅಮಾನತು

ಕೊಪ್ಪಳ ಫೆ. 25 (ಕರ್ನಾಟಕ ವಾರ್ತೆ): ಮಕ್ಕಳ ಜೊತೆ ಅಸಭ್ಯ ವರ್ತನೆ ಹಾಗೂ ಕರ್ತವ್ಯಲೋಪ ಆರೋಪದ ಮೇಲೆ ಕೊಪ್ಪಳ ತಾಲೂಕಿನ ಚಿಲಿಮುಖಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ವೆಂಕೋಬಪ್ಪ ಇಲ್ಲೂರು ಅವರನ್ನು ಹಾಗೂ ಮಕ್ಕಳಿಂದ ಕೆಲಸ ಮಾಡಿಸಿದ ಆರೋಪಕ್ಕಾಗಿ ಶಾಲೆಯ ಪರಿಚಾರಕ ರಾಮಪ್ಪ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಶ್ಯಾಮಸುಂದರ್ ಆದೇಶ ಹೊರಡಿಸಿದ್ದಾರೆ.
     ಚಿಲಕಮುಖಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಹಾಗೂ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ, ಪರಿಶೀಲಿಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಿಡಿಪಿಐ ಅವರು ಸೂಚನೆ ನೀಡಿದ್ದರು.  ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಡಿಡಿಪಿಐ ಶ್ಯಾಮಸುಂದರ್ ಅವರು ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಇಲ್ಲಿನ ದೈಹಿಕ ಶಿಕ್ಷಕ ವೆಂಕೋಬಪ್ಪ ಇಲ್ಲೂರ ಅವರು ಶಾಲೆಗೆ ಸರಿಯಾಗಿ ಬಾರದಿರುವುದು, ಆಟೋಪಕರಣಗಳ ಸಾಮಗ್ರಿಗಳನ್ನು ಮಕ್ಕಳಿಗೆ ಒದಗಿಸದಿರುವುದು ಅಲ್ಲದೆ ಶಾಲೆಯ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ವೆಂಕೋಬಪ್ಪ ಇಲ್ಲೂರ ಅವರನ್ನು ಅಮಾನತುಗೊಳಿಸಲಾಗಿದೆ.  ಅದೇ ರೀತಿ ಇಲ್ಲಿನ ಪರಿಚಾರಕ ರಾಮಪ್ಪ, ತರಗತಿಗಳ ಕಸಗುಡಿಸುವುದು, ಕಿಟಕಿ ಹಾಕುವುದು, ಗಂಟೆ ಬಾರಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿ, ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಪ್ರಯುಕ್ತ ಪರಿಚಾರಕ ರಾಮಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕೊಪ್ಪಳ ತಾ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ

ಕೊಪ್ಪಳ ಫೆ. 25 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಾ ಪಂಚಾಯತಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಮಾ. 03 ರಂದು ಕೊಪ್ಪಳ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ವಹಿಸುವರು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಮಾ. 02 ರಂದು ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆ.ಡಿ.ಪಿ. ಸಭೆ

ಕೊಪ್ಪಳ ಫೆ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಮಾ. 02 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ವಹಿಸುವರು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

Saturday, 21 February 2015

ಕನಕಗಿರಿ ಉತ್ಸವ : ಮದ್ಯಪಾನ ನಿಷೇಧಾಜ್ಞೆ ಜಾರಿ

ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯಲ್ಲಿ ಕನಕಗಿರಿ ಉತ್ಸವವನ್ನು ಫೆ. 23 ಮತ್ತು 24 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಉತ್ಸವ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಶಾಂತಿ ಪಾಲನೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಕನಕಗಿರಿ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
     ನಿಷೇಧಾಜ್ಞೆಯು ಫೆ. 23 ರಂದು ಬೆಳಿಗ್ಗೆ 6 ಗಂಟೆಯಿಂದ ಫೆ. 25 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.  ಇದರನ್ವಯ ನಿಷೇಧಿತ ಅವಧಿಯಲ್ಲಿ ಎಲ್ಲ ಬಗೆಯ ಮದ್ಯಪಾನ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಆನೆಗೊಂದಿ ಉತ್ಸವ : ಫೆ. 26 ರಂದು ಪೂರ್ವಭಾವಿ ಸಭೆ


ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಆನೆಗೊಂದಿ ಉತ್ಸವ ಆಚರಣೆ ನಿಮಿತ್ಯ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಫೆ. 26 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಯ ತಾಲೂಕು ಪಂಚಾಯತಿ ಮಂಥನ ಸಭಾಂಗಣದಲ್ಲಿ ನಡೆಯಲಿದೆ.  ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ವಹಿಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತ ಎಸ್‍ಪಿ ಅವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ಕೊಪ್ಪಳ, ರಾಯಚೂರು ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಸ್.ಬಿ. ಪಾಟೀಲ್ ಅವರು ಫೆ. 25 ರಂದು ಗಂಗಾವತಿ ಮತ್ತು ಫೆ. 26 ರಂದು ಯಲಬುರ್ಗಾ ಹಾಗೂ ಕುಷ್ಟಗಿಯಲ್ಲಿ ಪ್ರವಾಸ ಕಾಯಕ್ರಮ ಹಮ್ಮಿಕೊಂಡಿದ್ದಾರೆ.
     ಲೋಕಾಯುಕ್ತ ಎಸ್‍ಪಿ ಅವರು ಫೆ. 25 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿ ಪ್ರವಾಸ ಮಂದಿರದಲ್ಲಿ ಹಾಗೂ ಫೆ. 26 ರಂದು ಬೆಳಿಗ್ಗೆ 11 ಗಂಟೆಗೆ ಯಲಬುರ್ಗಾ ಮತ್ತು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಿ, ಅಹವಾಲು ಆಲಿಸುವರು.  ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ನೀಡಿ, ಸದುಪಯೋಗ ಪಡೆದುಕೊಳ್ಳಬಹುದಾಗಿದೆ.  ದೂರು ಸಲ್ಲಿಸಲು ಅಗತ್ಯವಿರುವ ಪ್ರಪತ್ರ 1 ಮತ್ತು 2 ಸ್ಥಳದಲ್ಲೇ ಲಭ್ಯವಿರುತ್ತವೆ.  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08539-220533, 220200 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Friday, 20 February 2015

ಕನಕಗಿರಿ ಉತ್ಸವ- ಸಚಿವ ಶಿವರಾಜ ತಂಗಡಗಿ ಅವರಿಂದ ಲೋಗೋ ಬಿಡುಗಡೆ

ಕೊಪ್ಪಳ, ಫೆ. 20 (ಕರ್ನಾಟಕ ವಾರ್ತೆ): ಕನಕಗಿರಿ ಉತ್ಸವ ಆಚರಣೆ ಸಂಬಂಧ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಕನಕಗಿರಿ ಉತ್ಸವದ ಅಧಿಕೃತ ಲೋಗೋವನ್ನು ಕನಕಗಿರಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.
     ಈ ಬಾರಿಯ ಕನಕಗಿರಿ ಉತ್ಸವ ಫೆ. 23 ಮತ್ತು 24 ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಕನಕಗಿರಿ ಉತ್ಸವ-2015 ರ ಲೋಗೋ, ಕನಕಾಚಲಪತಿ ದೇವಸ್ಥಾನ, ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಮೂರ್ತಿಯನ್ನೊಳಗೊಂಡಂತೆ ಅತ್ಯಂತ ಆಕರ್ಷಕವಾಗಿದೆ.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‍ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಕನಕಗಿರಿ ಉತ್ಸವ : ಫೆ. 21 ರಿಂದ ಕ್ರೀಡಾಕೂಟಗಳು ಪ್ರಾರಂಭ- ಶಿವರಾಜ ತಂಗಡಗಿ

ಕೊಪ್ಪಳ ಫೆ. 20 (ಕರ್ನಾಟಕ ವಾರ್ತೆ): ಈ ಬಾರಿಯ ಕನಕಗಿರಿ ಉತ್ಸವ ಫೆ. 23 ಮತ್ತು 24 ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಇದಕ್ಕೆ ಪೂರಕವಾಗಿ ಗ್ರಾಮೀಣ ಕ್ರೀಡಾಕೂಟಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆ. 21 ರಿಂದಲೇ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
     ಕನಕಗಿರಿಯಲ್ಲಿ ಕನಕಗಿರಿ ಉತ್ಸವ ನಿಮಿತ್ಯ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕನಕಗಿರಿ ಉತ್ಸವದ ಅಂಗವಾಗಿ ವಿವಿಧ ಕ್ರೀಡಾಕೂಟಗಳು ಫೆ. 21 ರಿಂದಲೇ ಪ್ರಾರಂಭವಾಗಲಿದ್ದು,  ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಇದೇ ಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಫೆ. 21 ರಂದು ಸಂಜೆ 4 ಗಂಟೆಗೆ ವಾಲಿಬಾಲ್ ಮತ್ತು ಫೆ. 22 ರಂದು ಸಂಜೆ ಕಬಡ್ಡಿ ಪಂದ್ಯಾವಳಿಯನ್ನು ಪುರುಷರಿಗೆ ಮತ್ತು ಮಹಿಳೆಯರಿಗೆ ಆಯೋಜಿಸಲಾಗಿದೆ.  ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ.  ಮಹಿಳೆಯರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.  ರಂಗೋಲಿ ಸ್ಪರ್ಧೆ ಫೆ. 23 ರಂದು ಬೆಳಿಗ್ಗೆ 8-30 ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಕುಸ್ತಿ ಪಂದ್ಯಗಳು ಫೆ. 24 ರಂದು ಬೆಳಿಗ್ಗೆ 9 ರಿಂದ ನಡೆಯಲಿದೆ.  ರಾಜ್ಯದ ಇತರೆ ಭಾಗಗಳಿಂದ ಬರುವ ಕ್ರೀಡಾಪಟುಗಳಿಗೆ ಸಮರ್ಪಕ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು.  ಕ್ರೀಡಾ ಕೂಟದ ಯಶಸ್ವಿಗೆ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
     ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‍ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕನಕಗಿರಿ ಉತ್ಸವ : ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು- ಶಿವರಾಜ ತಂಗಡಗಿ

ಕೊಪ್ಪಳ ಫೆ. 20 (ಕರ್ನಾಟಕ ವಾರ್ತೆ): ವಿಜಯನಗರ ಸಾಮ್ರಾಜ್ಯದ ವೈಭವವನ್ನು ಬಿಂಬಿಸುವ ರೀತಿಯಲ್ಲಿ ಕನಕಗಿರಿ ಉತ್ಸವ ಫೆ. 23 ಮತ್ತು 24 ರಂದು ಕನಕಗಿರಿಯಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಉತ್ಸವ ಅಂಗವಾಗಿ ಕವಿಗೋಷ್ಠಿ, ಕೃಷಿ ಉತ್ಸವ, ಫಲಪುಷ್ಪ ಪ್ರದರ್ಶನ, ವಿವಿಧ ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.

     ಕನಕಗಿರಿಯಲ್ಲಿ ಕನಕಗಿರಿ ಉತ್ಸವ ನಿಮಿತ್ಯ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕನಕಗಿರಿ ಉತ್ಸವದ ಅಂಗವಾಗಿ ಖ್ಯಾತ ಚಲನಚಿತ್ರ ನಟ ದರ್ಶನ್, ಸುದೀಪ್, ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಕಾರ್ಯಕ್ರಮ, ಸೇರಿದಂತೆ ಹಲವು ಖ್ಯಾತನಾಮ ನಟ, ನಟಿಯರು, ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಸಂಗೀತದ ರಸದೌತಣವನ್ನು ಉಣಬಡಿಸಲಿದ್ದಾರೆ.  ಫೆ. 23 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದು, ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಸೇರಿದಂತೆ ಹಲವು ಸಚಿವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಫೆ. 24 ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ.  ಉತ್ಸವದ ಅಂಗವಾಗಿ ಫೆ. 23 ರಂದು ಬೆಳಿಗ್ಗೆ 8-30 ಗಂಟೆಗೆ ಕನಕಗಿರಿಯ ಅಗಸಿ ಬಳಿಯಿಂದ ರಾಜಬೀದಿ, ಬಸ್‍ಸ್ಟ್ಯಾಂಡ್ ಮೂಲಕ ಪ್ರಮುಖ ವೇದಿಕೆಯವರೆಗೆ ಹಲವು ಜಾನಪದ, ಸಾಂಸ್ಕøತಿಕ ಕಲಾವಿದರನ್ನೊಳಗೊಂಡ ತಂಡಗಳು ಪಾಲ್ಗೊಂಡು ಭವ್ಯ ಮೆರವಣಿ ನಡೆಸಿಕೊಡಲಿದ್ದಾರೆ.  ಕನಕಾಚಲಪತಿ ದೇವಸ್ಥಾನದ ಬಳಿ ಕವಿಗೋಷ್ಠಿಯನ್ನು ಆಯೋಜಿಸಲಾಗುವುದು.   ಉತ್ಸವಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಎಲ್ಲ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು.  ಉತ್ಸವಕ್ಕೆ ಉಡಚಪ್ಪ ನಾಯಕರ ವಂಶಸ್ಥರನ್ನು ಆಹ್ವಾನಿಸಿ ಸನ್ಮಾನಿಸಲಾಗುವುದು.  ಉತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧ ತಾಲೂಕು, ಗ್ರಾಮಗಳಿಂದ   ಸಾರ್ವಜನಿಕರು ಬಂದು ಹೋಗಲು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದರು.
     ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಸದಸ್ಯ ವೀರೇಶ್ ಸಮಗಂಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‍ಪಿ ವಿನ್ಸಂಟ್ ಶಾಂತಕುಮಾರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಊರಿನ ಗಣ್ಯರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 
     ಸಭೆಗೂ ಪೂರ್ವದಲ್ಲಿ ಕನಕಗಿರಿ ಉತ್ಸವ ನಡೆಸಲು ನಿರ್ಮಿಸಲಾಗುತ್ತಿರುವ ಪ್ರಮುಖ ವೇದಿಕೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಸಚಿವರು ಪರಿಶೀಲಿಸಿದರು.
ಎಸ್‍ಎಫ್‍ಸಿ ಅನುದಾನದಡಿ ಅಡುಗೆ ಅನಿಲ ಸಂಪರ್ಕ: ಅರ್ಜಿ ಆಹ್ವಾನ

ಕೊಪ್ಪಳ, ಫೆ.20 (ಕರ್ನಾಟಕ ವಾರ್ತೆ): ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ ಕಾರ್ಯಾಲಯವು 2011-12ನೇ ಸಾಲಿನ ಬಾಕಿ ಉಳಿದ ಎಸ್‍ಎಫ್‍ಸಿ ಶೇಕಡಾ 22.75 ಯೋಜನೆಯ ಅನುದಾನದಡಿ ಅಡುಗೆ ಅನಿಲ ಸಂಪರ್ಕ ನೀಡಲು ಅರ್ಜಿ ಆಹ್ವಾನಿಸಿದೆ.
     ಈ ಸೌಲಭ್ಯ ಪಡೆಯಲಿಚ್ಛಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಸ್ವಂತ ಆಸ್ತಿ ಹೊಂದಿರುವುದಕ್ಕೆ ಖಾತಾ ನಕಲು ಲಗತ್ತಿಸಿ ಸಲ್ಲಿಸಬೇಕು.  ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಫೆ. 25 ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಪಕ್ಕಾಮನೆಗೆ ಸಹಾಯಧನ : ಅರ್ಜಿ ಆಹ್ವಾನ

ಕೊಪ್ಪಳ, ಫೆ.20 (ಕರ್ನಾಟಕ ವಾರ್ತೆ): ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತಿ ಕಾರ್ಯಾಲಯವು 2007-08 ರಿಂದ 2010-11ನೇ ಸಾಲಿನ ಬಾಕಿ ಉಳಿದ ಎಸ್‍ಎಫ್‍ಸಿ ಶೇಕಡಾ 22.75 ಯೋಜನೆಯ ಅನುದಾನದಡಿ ಪಕ್ಕಾಮನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
      ಈ ಸೌಲಭ್ಯ ಪಡೆಯಲಿಚ್ಛಿಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಸ್ವಂತ ಆಸ್ತಿ ಹೊಂದಿರುವುದಕ್ಕೆ ಖಾತಾ ನಕಲು ಲಗತ್ತಿಸಿ ಸಲ್ಲಿಸಬೇಕು.  ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಫೆ. 25 ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜಿ.ಪಂ. ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ

ಕೊಪ್ಪಳ ಫೆ. 20(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿಗಳ ಮೂರನೆ ಅವಧಿಗೆ ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
     ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ವೀರೇಶ್ ನಾಗಪ್ಪ ಸಾಲೋಣಿ ಅವರು ಆಯ್ಕೆಯಾಗಿದ್ದು, ಪರಸಪ್ಪ ಕತ್ತಿ ಅವರು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅರವಿಂದಗೌಡ ಪಾಟೀಲ್ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.


Thursday, 19 February 2015

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ, ಫೆ.19 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಫೆ. 20 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಕನಕಗಿರಿಗೆ ಆಗಮಿಸುವರು.  ನಂತರ ಕನಕಗಿರಿ ಉತ್ಸವ ಸಿದ್ಧತೆ ಕುರಿತಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸುವರು.  ಸಚಿವರು ಅದೇ ದಿನ ರಾತ್ರಿ 8 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಗ್ರಾಮಸಡಕ್ ಯೋಜನೆ : ಗುಣಮಟ್ಟ ನಿಯಂತ್ರಕರಿಂದ ಕಾಮಗಾರಿ ಪರಿವೀಕ್ಷಣೆ

ಕೊಪ್ಪಳ, ಫೆ.19 (ಕರ್ನಾಟಕ ವಾರ್ತೆ): ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ 02ನೇ ಹಂತದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ರಾಷ್ಟ್ರೀಯ ಗುಣ ನಿಯಂತ್ರಣಾಧಿಕಾರಿ ಎಸ್.ಸಿ. ಜೈನ್ ಅವರು ಫೆ. 21 ರಿಂದ ಪರಿವೀಕ್ಷಣೆ ನಡೆಸಲಿದ್ದಾರೆ.
     ಕೊಪ್ಪಳ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 2ನೇ ಹಂತದ ಕಾಮಗಾರಿಗಳನ್ನು ನ್ಯಾಷನಲ್ ಕ್ವಾಲಿಟಿ ಮೇನ್‍ಟೇನೆನ್ಸ್ (ಎನ್.ಕ್ಯೂ.ಎಂ)ನ ರಾಷ್ಟ್ರೀಯ ಗುಣ ನಿಯಂತ್ರಣ ಅಧಿಕಾರಿ ಎಸ್.ಸಿ ಜೈನ ಅವರು ಫೆ.21 ರಿಂದ ಫೆ.24 ರವರೆಗೆ ನಾಲ್ಕು ದಿನಗಳ ಕಾಲ ಪರಿವೀಕ್ಷಣೆ ನಡೆಸಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ 08539 230269 ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕೊಪ್ಪಳ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿಮಾನಿ ಪ್ರಶಸ್ತಿ-2014 : ಪತ್ರಕರ್ತರಿಂದ ಅರ್ಜಿ ಆಹ್ವಾನ

ಕೊಪ್ಪಳ, ಫೆ.19 (ಕರ್ನಾಟಕ ವಾರ್ತೆ) : ಕರ್ನಾಟಕ ಮಾಧ್ಯಮ ಅಕಾಡೆಮಿಯು ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ/ವರದಿ ಬರೆದ ಪತ್ರಕರ್ತರಿಗೆ ಕೊಡಮಾಡುವ ಅಭಿಮಾನಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
     ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ/ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಒಂದು ಲಕ್ಷ ರೂ.ಗಳ ದತ್ತಿ ಸ್ಥಾಪಿಸಿದೆ. ಈ ದತ್ತಿಯಿಂದ ಪ್ರತಿವರ್ಷ ಕೊಡಮಾಡುವ ಅಭಿಮಾನಿ ಪ್ರಶಸ್ತಿಗಾಗಿ 2014ನೇ ಸಾಲಿನಲ್ಲಿ (2014ರ ಜನವರಿ-ಡಿಸೆಂಬರ್‍ವರೆಗೆ) ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ, ವರದಿಗಳು ಪ್ರಕಟಗೊಂಡಿರಬೇಕು.  ಅರ್ಜಿ ಸಲ್ಲಿಸಲು ಇಚ್ಛಿಸುವ ಪತ್ರಕರ್ತರು ತಮ್ಮ ಸ್ವವಿವರಗಳನ್ನು ಬಿಳಿ ಹಾಳೆಯಲ್ಲಿ ಬರೆದು, ಅಭಿಮಾನಿ ಪ್ರಶಸ್ತಿ-2014 ಎಂದು ದಾಖಲಿಸಿ, ಅದರ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಪಟ್ಟ ಒಂದು ಲೇಖನವನ್ನು ಮಾತ್ರ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರರ್ಕರು ಬರೆದಿರುವ ವರದಿ, ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶವಿದ್ದು, ಲೇಖನ, ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ಧೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
     ಲೇಖನ, ವರದಿಗಳನ್ನು ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-2014 ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ||ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560001. ಈ ವಿಳಾಸಕ್ಕೆ ಫೆ.28 ರೊಳಗಾಗಿ ಕಳುಹಿಸಬಹುದಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಎಸ್. ಶಂಕರಪ್ಪ ತಿಳಿಸಿದ್ದಾರೆ.

ಮೈಸೂರು ದಿಗಂತ ಪ್ರಶಸ್ತಿ-2014 : ಅರ್ಜಿ ಆಹ್ವಾನ

ಕೊಪ್ಪಳ, ಫೆ.19 (ಕರ್ನಾಟಕ ವಾರ್ತೆ) : ಕರ್ನಾಟಕ ಮಾಧ್ಯಮ ಅಕಾಡೆಮಿಯು ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ/ವರದಿ ಬರೆದ ಪತ್ರಕರ್ತರಿಗೆ ಕೊಡಮಾಡುವ ಮೈಸೂರು ದಿಗಂತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
     ಮೈಸೂರಿನ ‘ಮೈಸೂರು ದಿಗಂತ’ ಪತ್ರಿಕಾ ಸಂಸ್ಥೆಯು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಒಂದು ಲಕ್ಷ ರೂ.ಗಳ ದತ್ತಿ ಸ್ಥಾಪಿಸಿದೆ.  ಈ ದತ್ತಿಯಿಂದ ಪ್ರತಿವರ್ಷ ಕೊಡಮಾಡುವ ಮೈಸೂರು ದಿಗಂತ ಪ್ರಶಸ್ತಿಗಾಗಿ 2014ನೇ ಸಾಲಿನಲ್ಲಿ (2014ರ ಜನವರಿ-ಡಿಸೆಂಬರ್‍ವರೆಗೆ) ಪ್ರಕಟವಾಗಿರುವ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ, ವರದಿಯೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ ಪತ್ರಕರ್ತರು ತಮ್ಮ ಸ್ವವಿವರಗಳನ್ನು ಬಿಳಿ ಹಾಳೆಯಲ್ಲಿ ಬರೆದು, ಮೈಸೂರು ದಿಗಂತ ಪ್ರಶಸ್ತಿ-2014 ಎಂದು ದಾಖಲಿಸಿ, ಅದರ ಜೊತೆಗೆ ಮಾನವೀಯ ಸಮಸ್ಯೆಗಳಿಗೆ ಸಂಬಂಧಪಟ್ಟ ಒಂದು ಲೇಖನವನ್ನು ಮಾತ್ರ ಕಳುಹಿಸಬೇಕು. ಕನ್ನಡ ದೈನಿಕ-ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರರ್ಕರು ಬರೆದಿರುವ ವರದಿ, ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶವಿದ್ದು, ಲೇಖನ, ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ಧೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.
     ಲೇಖನ ವರದಿಗಳನ್ನು ಫೆ.28 ರೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಅಭಿಮಾನಿ ಪ್ರಶಸ್ತಿ-2014 ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ||ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560001. ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಛತ್ರಪತಿ ಶಿವಾಜಿ ಮತ್ತು ಸರ್ವಜ್ಞರು ಮಹಾನ್ ಸಾಧಕರು - ಸಂಗಣ್ಣ ಕರಡಿ


ಕೊಪ್ಪಳ,ಫೆ.19 (ಕರ್ನಾಟಕ ವಾರ್ತೆ): ಸ್ವರಾಜ್ಯ ಕಲ್ಪನೆಯ ರೂವಾರಿಯಾದ ಛತ್ರಪತಿ ಶಿವಾಜಿ ಹಾಗೂ ಜ್ಞಾನದ ಕಣಜ ಕವಿ ಸರ್ವಜ್ಞರು ಇಬ್ಬರೂ ಮಹಾನ್ ಸಾಧಕರು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.
     ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞರ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


     ಛತ್ರಪತಿ ಶಿವಾಜಿ ಮಹಾರಾಜರು ಅಂದಿನ ದಿನಮಾನದ ಶ್ರೇಷ್ಠ ರಾಜಕೀಯ ಚತುರನಾಗಿದ್ದರಲ್ಲದೆ, ಉತ್ತಮ ಆಡಳಿತಗಾರರೂ ಆಗಿದ್ದರು.  ಚಿಕ್ಕಂದಿನಿಂದಲೇ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ, ಗುಲಾಮಗಿರಿಯನ್ನು ದ್ವೇಷಿಸಿ, ಸ್ವಾಭಿಮಾನಿಯಾಗಿ ಬದುಕುವ ಮಹತ್ವವನ್ನು ಸಾರಿದ್ದರು.  ಸರ್ವಧರ್ಮ ಪ್ರೇಮಿಯಾಗಿದ್ದ ಶಿವಾಜಿ, ಮಹಿಳೆಯರಿಗೆ ಗೌರವ ನೀಡುವ ವ್ಯಕ್ತಿತ್ವ ಹೊಂದಿದ್ದರು.  ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ, ಆತನ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಳು.  ತನ್ನ ಹೋರಾಟ ಪ್ರವೃತ್ತಿಯಿಂದಲೇ ಸಾಮ್ರಾಜ್ಯ ಕಟ್ಟಿದ ಶಿವಾಜಿ, ಮೂಲಭೂತ ಹಕ್ಕನ್ನು ಹೋರಾಟದಿಂದಲೇ ಪಡೆಯುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು.  ‘ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಬಲ್ಲದ ವಿಷಯವಿಲ್ಲ’ ಎಂಬ ನುಡಿ, ಸರ್ವಜ್ಞರ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ.  ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕವಿ ಸರ್ವಜ್ಞರು.  ಇಂತಹ ಮಹನೀಯರ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಲ್ಲದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಪತನದ ನಂತರ, ತೀವ್ರಗೊಂಡಿದ್ದ ಅರಾಜಕತೆಯನ್ನು ಶಿವಾಜಿಯು ಹತ್ತಿಕ್ಕುವ ಮೂಲಕ ಶಾಂತಿ ನೆಲೆಸಲು ಯತ್ನಿಸಿದರು.  ಅಪ್ರತಿಮ ದೇಶಭಕ್ತನಾಗಿದ್ದ ಶಿವಾಜಿ, ಧರ್ಮ, ಸಂಸ್ಕøತಿಯ ರಕ್ಷಕರಾಗಿದ್ದರು.  ತ್ರಿಪದಿಗಳ ಮೂಲಕ ಸಮಾಜಕ್ಕೆ ಜ್ಞಾನ ಮತ್ತು ವಾಸ್ತವಿಕ ಅಂಶಗಳನ್ನು ಆಡುಭಾಷೆಯ ಮೂಲಕ ಸಂದೇಶ ನೀಡಿದ ಸರ್ವಜ್ಞರು ಮಹಾನ್ ಸಾಧಕರು.  ಸರ್ವಜ್ಞರ ಆಶಯದಂತೆ ಎಲ್ಲರೂ ಶಿಕ್ಷಣವನ್ನು ಪಡೆದು, ಜಿಲ್ಲೆಯನ್ನು ಶೈಕ್ಷಣಿಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೊಡೆದು ಹಾಕಲು ಶ್ರಮಿಸೋಣ ಎಂದರು.  ಅಲ್ಲದೆ ಕೊಪ್ಪಳ ನಗರದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆ ಹಾಗೂ ಮರಾಠ ಸಮುದಾಯ ಭವನ ನಿರ್ಮಿಸಬೇಕು ಎನ್ನುವ ಮರಾಠ ಸಮಾಜ ಬಾಂಧವರ ಮನವಿಗೆ ಸ್ಪಂದಿಸಿ, ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಯತ್ನಿಸುವ ಭರವಸೆ ನೀಡಿದರು.
     ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಎಂ.ಎಂ. ಕಂಬಾಳಿಮಠ ಅವರು, ಶಿವಾಜಿಯು ಧಾರ್ಮಿಕ ಸಮಾನತೆ, ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಮಾಡಿದ್ದರು.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಶ್ರೇಷ್ಠ ರಣಕಲಿ ಶಿವಾಜಿ ಮಹಾರಾಜರು.  ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ.  ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿವಾಜಿಯೇ ಮಾದರಿ.  ಆತನ ಆಡಳಿತದಲ್ಲಿ ಕಂದಾಯ ಹಾಗೂ ತೆರಿಗೆ ನೀತಿ ಬಹಳಷ್ಟು ಸರಳ ಹಾಗೂ ಜನಸ್ನೇಹಿಯಾಗಿತ್ತು ಎಂದರು.


     ತ್ರಿಪದಿ ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸುಮತಿ ಹಿರೇಮಠ ಅವರು, ಯಾವ ವಿಶ್ವವಿದ್ಯಾಲಯಗಳೂ ಇಲ್ಲದ ಆ ಕಾಲದಲ್ಲಿ ತ್ರಿಪದಿಗಳ ಮೂಲಕ ಸರ್ವರಿಗೂ ಸರ್ವ ಬಗೆಯ ಜ್ಞಾನವನ್ನು ಸರ್ವಜ್ಞರು ಉಣಬಡಿಸಿದರು.  ಸಾಮಾಜಿಕ ಸವಾಲುಗಳಿಗೆ ಸಾಹಿತ್ಯ ಮೂಲಕ ಉತ್ತರ ಕೊಟ್ಟರು.  16ನೇ ಶತನಾನದಲ್ಲಿ, ಜನರ ಆಡು ಮಾತಿನಲ್ಲಿ ಸರ್ವಜ್ಞರ ವಚನಗಳು ನಲಿದಾಡುತ್ತಿದ್ದವು. ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಸಾಮಥ್ರ್ಯ ಸರ್ವಜ್ಞರ ವಚನಗಳಲ್ಲಿದೆ.  ಸಾಹಿತ್ಯದ ಅಪೂರ್ವ ಸಾಧನೆ ಹಾಗೂ ಸಮಾಜಕ್ಕೆ ಸರ್ವಜ್ಞರ ಕೊಡುಗೆ ಅಪಾರವಾಗಿದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಗಣ್ಯರಾದ ರಾಮಣ್ಣ ಹದ್ದಿನ, ಬಾಳಪ್ಪ ಬಾರಕೇರ, ನಾಗರಾಜ ಬಡಿಗೇರ, ನಿರ್ಮಲ, ಮಾರುತಿ ನಿಕ್ಕಂ ಸೇರಿದಂತೆ ಹಲವರು ಭಾಗವಹಿಸಿದ್ದರು.  ಕೊಟ್ರಪ್ಪ ಚೋರನೂರ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು. ಸದಾಶಿವ ಪಾಟೀಲ ಪ್ರಾರ್ಥಿಸಿದರು. 
     ಶಿವಾಜಿ ಮತ್ತು ಸರ್ವಜ್ಞರ ಜಯಂತಿ ಅಂಗವಾಗಿ ಉಭಯ ಮಹನೀಯರ ಭಾವಚಿತ್ರದೊಂದಿಗಿನ ಮೆರವಣಿಗೆ ಸಾಹಿತ್ಯ ಭವನದಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ನೆರವೇರಿತು.  ಹಲವು ಜಾನಪದ ಮತ್ತು ಸಾಂಸ್ಕøತಿಕ ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.

Wednesday, 18 February 2015

ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ ಮಾ. 15 ಕ್ಕೆ ಮುಂದೂಡಿಕೆ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಲಬುರಗಿಯಲ್ಲಿ ಆಯೋಜಿಸಿದ್ದ ವಿಭಾಗ ಮಟ್ಟದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 15 ಕ್ಕೆ ಮುಂದೂಡಲಾಗಿದೆ.
     ಪ್ರಾಧಿಕಾರವು ಕಲಬುರಗಿ ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭವನ್ನು ಫೆ. 21 ರಂದು ಬೆಳಿಗ್ಗೆ 10-30 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲು ದಿನಾಂಕವನ್ನು ನಿಗದಿಪಡಿಸಿತ್ತು.  ಆದರೆ ಆ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಗಳು ಪ್ರಾರಂಭಗೊಳ್ಳಲಿರುವುದರಿಂದ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ. 15 ಕ್ಕೆ ಮುಂದೂಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 21 ರಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಫೆ. 21 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯ ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ಅವರು ವಹಿಸುವರು.  ಸಭೆಯಲ್ಲಿ ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಹಾಜರಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ತಿಳಿಸಿದ್ದಾರೆ.

ಕನಕಗಿರಿ ಉತ್ಸವ : ಮುಕ್ತ ವಿವಿಧ ಪಂದ್ಯಾವಳಿಗೆ ಆಹ್ವಾನ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಕನಕಗಿರಿ ಉತ್ಸವ-2015 ರ ಅಂಗವಾಗಿ ಈ ಬಾರಿ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಕ್ರೀಡೆಗಳ ಮುಕ್ತ ಪಂದ್ಯಾವಳಿಗೆ ಪುರುಷ ಮತ್ತು ಮಹಿಳೆಯರ ಆಸಕ್ತ ತಂಡಗಳನ್ನು ಆಹ್ವಾನಿಸಲಾಗಿದೆ.
     ಕನಕಗಿರಿ ಉತ್ಸವ ಫೆ. 23 ಮತ್ತು 24 ರಂದು ಎರಡು ದಿನಗಳ ಕಾಲ ಕನಕಗಿರಿಯಲ್ಲಿ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಪಂದ್ಯಾವಳಿಯನ್ನು ಫೆ. 21 ಮತ್ತು 22 ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.  ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗಿದೆ.  ಮಹಿಳೆಯರಿಗೆ ವಾಲಿಬಾಲ್, ಕಬಡ್ಡಿ, ಮಲ್ಲಕಂಬ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
     ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಗಳು ಫೆ. 21 ಮತ್ತು 22 ರಂದು ಕನಕಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನಡಿ ನಡೆಯಲಿವೆ.  ರಂಗೋಲಿ ಸ್ಪರ್ಧೆ ಪೆ. 23 ರಂದು ಬೆಳಿಗ್ಗೆ 8-30 ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜಿನಲ್ಲಿ ಹಾಗೂ ಕುಸ್ತಿ ಪಂದ್ಯಗಳು ಫೆ. 24 ರಂದು ಬೆಳಿಗ್ಗೆ 9 ರಿಂದ ನಡೆಯಲಿದೆ.  ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 25 ಸಾವಿರ ರೂ., ದ್ವಿತೀಯ- 20 ಸಾವಿರ, ತೃತೀಯ- 15 ಸಾವಿರ, ಚತುರ್ಥ- 12 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  ಮಲ್ಲಕಂಬ ಪ್ರದರ್ಶನ ಮಾಡುವ ಪುರುಷರ ಮತ್ತು ಮಹಿಳೆಯರ 05 ತಂಡಗಳಿಗೆ ತಲಾ 5 ಸಾವಿರ ರೂ. ನಗದು ಬಹುಮಾನ ವಿತರಿಸಲಾಗುವುದು.  ಮಹಿಳೆಯರಿಗಾಗಿ ನಡೆಯುವ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ 04 ಸಾವಿರ ರೂ., ದ್ವಿತೀಯ- 03 ಸಾವಿರ, ತೃತೀಯ- 02 ಸಾವಿರ, ಚತುರ್ಥ- 01 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.   ಪುರುಷರಿಗಾಗಿ ಏರ್ಪಡಿಸಲಾಗಿರುವ ಕುಸ್ತಿ ಪಂದ್ಯಗಳಲ್ಲಿ 57 ಕೆ.ಜಿ. ವಿಭಾಗ, 61 ಕೆ.ಜಿ., 65 ಕೆ.ಜಿ., 70 ಕೆ.ಜಿ, 74 ಕೆ.ಜಿ. ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು.  57 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 04 ಸಾವಿರ ರೂ., ದ್ವಿತೀಯ- 03 ಸಾವಿರ, ತೃತೀಯ ಹಾಗೂ ಚತುರ್ಥ- 02 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  61 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 05 ಸಾವಿರ ರೂ., ದ್ವಿತೀಯ- 04 ಸಾವಿರ,  ತೃತೀಯ ಹಾಗೂ ಚತುರ್ಥ- 03 ಸಾವಿರ ರೂ. ನಗದು ಬಹುಮಾನ.  65 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 06 ಸಾವಿರ ರೂ., ದ್ವಿತೀಯ- 05 ಸಾವಿರ,  ತೃತೀಯ ಹಾಗೂ ಚತುರ್ಥ- 04 ಸಾವಿರ ರೂ. ನಗದು ಬಹುಮಾನ.  70 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 08 ಸಾವಿರ ರೂ., ದ್ವಿತೀಯ- 06 ಸಾವಿರ,  ತೃತೀಯ ಹಾಗೂ ಚತುರ್ಥ- 05 ಸಾವಿರ ರೂ. ನಗದು ಬಹುಮಾನ.  74 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 10 ಸಾವಿರ ರೂ., ದ್ವಿತೀಯ- 08 ಸಾವಿರ,  ತೃತೀಯ ಹಾಗೂ ಚತುರ್ಥ- 06 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.  75 ಕೆ.ಜಿ. ಮೇಲ್ಪಟ್ಟ ಕುಸ್ತಿಪಟುಗಳ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಗಧೆ, ಕನಕಗಿರಿ ಕೇಸರಿ ಬಿರುದಾಂಕಿತ ಬೆಲ್ಟ್ ಹಾಗೂ ಪೇಟಾದೊಂದಿಗೆ ಗೌರವಿಸಲಾಗುವುದು.
     ಕ್ರೀಡಾಕೂಟದಲ್ಲಿ ಭಾಗವಹಸಿಸುವ ಕ್ರೀಡಾಪಟುಗಳಿಗೆ ಫೆ. 21 ರಿಂದ 24 ರವರೆಗೆ ಊಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಗಿದೆ.  ರಂಗೋಲಿ ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವವರು ಫೆ. 23 ರಂದು ಬೆಳಿಗ್ಗೆ 8-30 ಗಂಟೆಗೆ ಕನಕಗಿರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವರದಿ ಮಾಡಿಕೊಳ್ಳಬೇಕು.  ಆಸಕ್ತ ಕ್ರೀಡಾ ಪಟುಗಳು ಫೆ. 19 ರ ಒಳಗಾಗಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಶಾಮೀದ್ ಪಾಷಾ- 94814440683.  ಸಿ.ಎ. ಪಾಟೀಲ್- 9342387935.  ಯತಿರಾಜು- 9448633146.  ತಿಪ್ಪೆಸ್ವಾಮಿ- 9008363670. ರಾಮಕೃಷ್ಣಯ್ಯ-9972801505 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಫೆ.19 ರಂದು ಕೊಪ್ಪಳದಲ್ಲಿ ಶಿವಾಜಿ, ಸರ್ವಜ್ಞರ ಜಯಂತಿ ಸಮಾರಂಭ

ಕೊಪ್ಪಳ,ಫೆ.18(ಕರ್ನಾಟಕ ಸರಕಾರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಫೆ.19 ರಂದು ಬೆಳಿಗ್ಗೆ 9-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ  ಹಾಗೂ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಕಾರ್ಯಕ್ರಮ ನಡೆಯಲಿದೆ.
     ಸಣ್ಣ ನೀರಾವರಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಶಾಸಕ ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ್, ಅಮರನಾಥ ಪಾಟೀಲ್ ಸೇರಿದಂತೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ, ತಾಲೂಕಾ ಪಂಚಾಯತ ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ, ನಗರಾಭಿವೃದ್ಧಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ ಅನಿಲ್‍ಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
     ಸಮಾರಂಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಕೊಪ್ಪಳದ ವಿಶ್ರಾಂತ ಸಹಾಯಕ ಪ್ರಾಧ್ಯಾಪಕ ಪ್ರೊ. ಎಂ.ಎಂ.ಕಂಬಾಳಿಮಠ ಹಾಗೂ ತ್ರಿಪದಿ ಕವಿ ಸರ್ವಜ್ಞರ ಕುರಿತು ಕಾತರಕಿ ಗುಡ್ಲಾನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ||ಸುಮತಿ ಹಿರೇಮಠ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯ ಭವನದಲ್ಲಿ ನಡೆಯಲಿರುವ ಈ ವೇದಿಕೆ ಕಾರ್ಯಕ್ರಮದ ಬಳಿಕ ಅಂದು ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಿಂದ ಜವಾಹರ ರಸ್ತೆ ಮುಖಾಂತರ ತುಳಜಾ ಭವಾನಿ ದೇವಸ್ಥಾನದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಪಾಲಕರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ,ಫೆ.18(ಕರ್ನಾಟಕ ವಾರ್ತೆ): ಗಂಗಾವತಿಯ ಜಯನಗರದ ಬಾಲಕನೋರ್ವನ ಪಾಲಕರ ಪತ್ತೆಗೆ ಸಹಕರಿಸುವಂತೆ ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಬಾಲಕರ ಬಾಲ ಮಂದಿರಕ್ಕೆ ದಾಖಲಾಗಿದ್ದ ಉಲ್ಲಾಸ (12) ತಂದೆ ದುರುಗಪ್ಪ ಚಲುವಾದಿ ಎಂಬ ಬಾಲಕನನ್ನು ಕೊಪ್ಪಳದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬಾಲಕನನ್ನು ಸದ್ಯ ಕೊಪ್ಪಳದ ಬಾಲಕರ ಸರ್ಕಾರಿ ಬಾಲಮಂದಿರದಲಿ ದಾಖಲು ಮಾಡಲಾಗಿದೆ. ಬಾಲಕನ ಎತ್ತರ 132 ಸೆಂ.ಮೀ ಕೆಂಪನೆಯ ಮೈಬಣ್ಣ ತೆಳ್ಳನೆಯ ಮೈಕಟ್ಟು, ಕೋಲುಮುಖ  ಹೊಂದಿದ್ದಾನೆ.  ಬಾಲಕ ತಿಳಿಸಿದ ವಿಳಾಸವಾಗಿರುವ ಜಯನಗರ, ಗಂಗಾವತಿ (ಉರ್ಫ್ ಶಿವಾಜಿನಗರದ ದಾವಣಗೇರೆ ) ಸ್ಥಳದಲ್ಲಿ ಬಾಲಕನ ಪೋಷಕರು/ಪಾಲಕರು ಪತ್ತೆಗಾಗಿ ಹೋದ ಸಂದರ್ಭದಲ್ಲಿ, ಪೋಷಕರು ಆ ಸ್ಥಳದಲ್ಲಿ ಇಲ್ಲದಿರುವುದು ಕಂಡುಬಂದಿರುತ್ತದೆ.  ಬಾಲಕನ ಪೋಷಕರ ಪತ್ತೆಯಾದಲ್ಲಿ : ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಕೊಪ್ಪಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ, ಸರಕಾರಿ ಬಾಲಕರ ಬಾಲ ಮಂದಿರ ಕೊಪ್ಪಳ, ರೋಟರಿ ಕ್ಲಬ್ ಬಿಲ್ಡಿಂಗ್, ಭಾಗ್ಯನಗರ ರಸ್ತೆ ಕೊಪ್ಪಳ ದೂರವಾಣಿ ಸಂಖ್ಯೆ -08539-200755, 9743425259, 6932447589, 08539-225030, 9972524215 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಬಾಲಕರ ಸರ್ಕಾರಿ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಫೆ. 22 ರಿಂದ ಎರಡನೆ ಹಂತದ ಪಲ್ಸ್ ಪೋಲಿಯೋ - ಡಾ. ಶ್ರೀಕಾಂತ್ ಬಾಸೂರ

ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ)- ಜಿಲ್ಲೆಯಲ್ಲಿ ಫೆ. 22 ರಿಂದ 25 ರವರೆಗೆ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಎರಡನೆ ಹಂತದ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲೆಯ 199284 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಹೇಳಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಬುಧವಾರ ಏರ್ಪಡಿಸಲಾಗಿದ್ದ ಎರಡನೆ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಕಳೆದ ಜ. 18 ರಿಂದ 21 ರವರೆಗೆ 04 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.  ಶೇ. 101. 74 ರಷ್ಟು ಉತ್ತಮ ಸಾಧನೆ ಮಾಡಲಾಗಿದೆ.  ಇದೀಗ ಫೆ. 22 ರಿಂದ ಎರಡನೆ ಹಂತದ ಪಲ್ಸ್‍ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 05 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು.  ಜಿಲ್ಲೆಯ 199284  ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.  ಆ ಪೈಕಿ 168032 ಮಕ್ಕಳು ಗ್ರಾಮಾಂತರ ಪ್ರದೇಶದವರಾಗಿದ್ದು, 31252 ಮಕ್ಕಳು ನಗರ ಪ್ರದೇಶದವರಾಗಿದ್ದಾರೆ.  ಮಕ್ಕಳಿಗೆ ಪೋಲಿಯೋ ಹನಿ ನೀಡುವ ಸಲುವಾಗಿ ಒಟ್ಟು 288151   ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.  ಈ ಪೈಕಿ ಗ್ರಾಮೀಣ ಪ್ರದೇಶದ 239943 ಮನೆಗಳು ಹಾಗೂ ನಗರ ಮತ್ತು ಪಟ್ಟಣ ಪ್ರದೇಶದ 48208 ಮನೆಗಳ ಭೇಟಿಗೆ ಗುರಿ ಹೊಂದಲಾಗಿದೆ.  ಫೆ 22 ರಂದು  ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಒಟ್ಟು 1768 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಫೆ. 23 ರಿಂದ 25 ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಉಳಿಕೆ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು.  ಬಸ್ ನಿಲ್ದಾಣ, ರೈಲು ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ವಿಶೇಷ ಬೂತ್‍ಗಳನ್ನು ಸ್ಥಾಪಿಸಿ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು.  ಅಲ್ಲದೆ ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ, ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿರುವ ಕಾರ್ಮಿಕರ ಮಕ್ಕಳಿಗೂ ಸಹ ಪೋಲಿಯೋ ಲಸಿಕೆ ನೀಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ. 22 ಭಾನುವಾರ ಇದ್ದರೂ ಕೂಡ ಅಂದು ಎಂದಿನಂತೆ ಶಾಲೆಗಳು ಕಾರ್ಯನಿರ್ವಹಿಸಬೇಕು.  ಎಲ್ಲ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಿದ್ದು, ಕರ್ತವ್ಯ ನಿರ್ವಹಿಸುವಂತೆ ಆದೇಶಿಸಲಾಗಿದೆ.  ಪಾಲಕರು 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು.  ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪುಗಳು, ಲಯನ್ಸ್, ರೋಟರಿ, ಇನ್ನರ್ ವ್ಹೀಲ್ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು.  ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತು ಗ್ರಾಮಗಳಲ್ಲಿ ಡಂಗುರ ಸಾರುವುದು, ಮಕ್ಕಳಿಂದ ಪ್ರಬಾತ ಫೇರಿ, ಜಾಥಾ ಏರ್ಪಡಿಸುವುದು ಹಾಗೂ ಘೋಷಣೆಗಳನ್ನು ಕೂಗುವ ಮೂಲಕ ಹೆಚ್ಚಿನ ಪ್ರಚಾರ ಒದಗಿಸಬೇಕು.  ಜೆಸ್ಕಾಂ ನವರು ಪೋಲಿಯೋ ಲಸಿಕೆಯ ದಾಸ್ತಾನು ಮತ್ತು ವಿತರಣೆಗೆ ಅನುಕೂಲವಾಗುವಂತೆ ಫೆ. 20 ರಿಂದ 26 ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು.  ಒಟ್ಟಾರೆಯಾಗಿ ಜಿಲ್ಲೆಯ ಯಾವುದೇ ಪ್ರದೇಶದಲ್ಲಿನ 5 ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಹೇಳಿದರು.
       ಬಳ್ಳಾರಿ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಆರ್.ಎಸ್. ಶ್ರೀಧರ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ: ರಮೇಶ್ ಮೂಲಿಮನಿ, ಡಿಡಿಪಿಐ ಶ್ಯಾಮಸುಂದರ್,  ತಹಸಿಲ್ದಾರ್ ಪುಟ್ಟರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರೋಟರಿ, ಇನ್ನರ್ ವ್ಹೀಲ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಫೆ. 19 ರಂದು ಶಿವಾಜಿ ಹಾಗೂ ಸರ್ವಜ್ಞರ ಜಯಂತಿ : ಭಾಗವಹಿಸಲು ಸೂಚನೆ

ಕೊಪ್ಪಳ,ಫೆ.18(ಕರ್ನಾಟಕ ವಾರ್ತೆ): ಸರ್ಕಾರದ ವತಿಯಿಂದ ಏರ್ಪಡಿಸಲಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಕವಿ ಸರ್ವಜ್ಞರ ಜಯಂತಿ ಆಚರಣೆ ಕಾರ್ಯಕ್ರಮ ಫೆ.19 ರಂದು ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿದೆ.
     ಮಹನೀಯರ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ 9-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದೆ.  ಸಮಾರಂಭದ ನಂತರ ಬೆಳಿಗ್ಗೆ 11 ಗಂಟೆಗೆ  ಸಾಹಿತ್ಯ ಭವನದಿಂದ ಜವಾಹರ ರಸ್ತೆ, ಗಡಿಯಾರ ಕಂಬ ಮಾರ್ಗದ ಮೂಲಕ ತುಳಜಾ ಭವಾನಿ ದೇವಸ್ಥಾನದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.   ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ||ಸುರೇಶ ಇಟ್ನಾಳ ಸೂಚನೆ ನೀಡಿದ್ದಾರೆ.

Tuesday, 17 February 2015

ಬೇಸಿಗೆಯ ನೀರಿನ ಸಮಸ್ಯೆಗೆ ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಿ- ವಿನಯಕುಮಾರ್ ಸೊರಕೆ

ಕೊಪ್ಪಳ ಫೆ. 17 (ಕರ್ನಾಟಕ ವಾರ್ತೆ): ಬೇಸಿಗೆ ಕಾಲದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯ ಯಾವುದೇ ವ್ಯತ್ಯಯವಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರ/ಪಟ್ಟಣ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಬೇಸಿಗೆ ಕಾಲ ಸಮೀಪಿಸುತ್ತಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕು.  ಸದ್ಯ ಕೊಪ್ಪಳ ನಗರದಲ್ಲಿ ವಾರಕ್ಕೊಮ್ಮೆ, ಗಂಗಾವತಿ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.  ಕೊಪ್ಪಳ ನಗರದಲ್ಲಿ ಸದ್ಯ ಜಾರಿಯಲ್ಲಿರುವ 24 * 7 ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದು, ನಗರದಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕ್ ಕುಸಿತ ಪ್ರಕರಣದಿಂದ ಯೋಜನೆಗೆ ಇನ್ನಷ್ಟು ಹಿನ್ನಡೆಯಾಗಿದೆ.  ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗದಂತೆ, ಈಗಿರುವ ಬೋರ್‍ವೆಲ್‍ಗಳಿಗೆ ಮೋಟಾರ್ ಅಳವಡಿಸಿ, ನೀರು ವಿತರಣೆ ಪೈಪ್‍ಲೈನ್‍ಗೆ ಸಂಪರ್ಕ ಕಲ್ಪಿಸಿಕೊಡಬೇಕು.  ಕೊಪ್ಪಳ ನಗರದಲ್ಲಿ ಸದ್ಯ ಇರುವ ಪೈಪ್‍ಲೈನ್ ಬಹಳಷ್ಟು ಸೋರಿಕೆ ಇರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಸೋರಿಕೆಯನ್ನು ಸರಿಪಡಿಸಿಕೊಳ್ಳಬೇಕು.  ಟ್ಯಾಂಕರ್‍ಗಳ ಮೂಲಕ ಪೂರೈಕೆ ಮಾಡುವುದಕ್ಕೂ ಸಿದ್ಧವಾಗಿರಬೇಕು.  ತುಂಗಭದ್ರಾ ಜಲಾಶಯದ ಹಿನ್ನೀರಿನ ಬಳಿಯ ಜಾಕ್‍ವೆಲ್ ಬಳಿ ನೀರು ಲಭ್ಯವಾಗದಿರುವುದರಿಂದ, ಮರಳು ಚೀಲಗಳ ಮೂಲಕ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು.  ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬರುವ ಬೇಸಿಗೆಯಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ, 15 ದಿನಗಳ ಒಳಗಾಗಿ ಸಲ್ಲಿಸಬೇಕು.  ಕೊಪ್ಪಳ ನಗರಕ್ಕೆ ಒಂದು ರಿಂಗ್‍ರೋಡ್ ಅತ್ಯವಶ್ಯಕವಾಗಿದ್ದು, ಕೂಡಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು.  ಕೊಪ್ಪಳ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಇಲಾಖೆ ಕೋರಿದ್ದು, ಈ ಬಗ್ಗೆಯೂ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಯುಜಿಡಿ ಕಾಮಗಾರಿ ತ್ವರಿತಗೊಳಿಸಿ : ಕೊಪ್ಪಳ ನಗರದಲ್ಲಿ ನಡೆದಿರುವ ಯುಜಿಡಿ ಕಾಮಗಾರಿ ಬಹಳಷ್ಟು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ.  2011 ರಲ್ಲಿ ಪ್ರಾರಂಭಗೊಂಡಿರುವ ಯುಜಿಡಿ ಕಾಮಗಾರಿಗೆ ಹಲವು ಬಾರಿ ಕಾಲಮಿತಿಯನ್ನು ವಿಸ್ತರಿಸಿದ್ದರೂ ಪ್ರಯೋಜನವಾಗುತ್ತಿಲ್ಲ.  ಈಗಾಗಲೆ 19 ಕೋಟಿ ರೂ.ಗಳ ಬಿಲ್ ಪಾವತಿ ಮಾಡಲಾಗಿದೆ.  ಯುಜಿಡಿ ಕಾಮಗಾರಿಗಳಿಂದಾಗಿ ಕೊಪ್ಪಳ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಇದುವರೆಗೂ ರಸ್ತೆಗಳ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಾರಂಭವಾಗಿಲ್ಲದಿರುವ ಬಗ್ಗೆ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.  ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ಕೊಪ್ಪಳ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರ ಸುಗಮಗೊಳಿಸಬೇಕು.  ಯುಜಿಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾಕಷ್ಟು ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕರ ವಸೂಲಾತಿಗೆ ವೇಗ ನೀಡಿ : ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ, ನೀರಿನ ಕರ ವಸೂಲಾತಿ ಅಲ್ಲದೆ ಜಾಹೀರಾತು ಫಲಕಗಳಿಗೆ ಶುಲ್ಕವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ಆಸಕ್ತಿ ತೋರದ ಕಾರಣ, ಸ್ಥಳೀಯ ಸಂಸ್ಥೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಪನ್ಮೂಲ ಕ್ರೋಢೀಕರಣವಾಗುತ್ತಿಲ್ಲ.  ಆಸ್ತಿ ತೆರಿಗೆ ಹಾಗೂ ನೀರಿನ ಕರ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಇದು ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ನೀರು ಪೂರೈಕೆ ವ್ಯವಸ್ಥೆ ಸುಧಾರಿಸಲು ಇದು ಅಗತ್ಯವಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರೋತ್ಥಾನ ಕಾಮಗಾರಿ : ನಗರೋತ್ಥಾನ ಯೋಜನೆಯ ಎರಡನೆ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 55 ಕಾಮಗಾರಿಗಳನ್ನು ಕೈಗೊಳ್ಳಬೇಕಿದ್ದು, ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.  ಇದುವರೆಗೂ 46 ಕಾಮಗಾರಿಗಳು ಪ್ರಗತಿಯಲ್ಲಿವೆ. ಯೋಜನೆಗೆ ಈಗಾಗಲೆ 1575. 56 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಕೊಪ್ಪಳ ನಗರದಲ್ಲಿ 27 ಕಾಮಗಾರಿಗಳ ಪೈಕಿ 23 ಪ್ರಗತಿಯಲ್ಲಿವೆ. 01 ಕಾಮಗಾರಿ ಪೂರ್ಣಗೊಂಡಿದೆ.  ಗಂಗಾವತಿಯಲ್ಲಿ 10 ರ ಪೈಕಿ 9 ಪ್ರಗತಿಯಲ್ಲಿವೆ.  ಕುಷ್ಟಗಿಯಲ್ಲಿ 8 ರ ಪೈಕಿ 7 ಹಾಗೂ ಯಲಬುರ್ಗಾದಲ್ಲಿ 10 ರ ಪೈಕಿ 7 ಕಾಮಗಾರಿಗಳು ಪ್ರಗತಿಯಲ್ಲಿವೆ.  ಈ ಆರ್ಥಿಕ ವರ್ಷದೊಳಗೆ  ನಗರೋತ್ಥಾನ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ, ಸಂಪೂರ್ಣ ಅನುದಾನ ವಿನಿಯೋಗವಾಗದಿದ್ದಲ್ಲಿ, ಯೋಜನೆಯ 3 ನೇ ಹಂತದ ಕಾಮಗಾರಿಗಳಿಗೆ ಮಂಜೂರಾತಿ ದೊರೆಯುವುದಿಲ್ಲವಾದ್ದರಿಂದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.
     ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುಲಬರ್ಗಾ ವಿಭಾಗದ ಮುಖ್ಯ ಇಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ ನಗರಸಭೆ, ಪುರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
     ಪ್ರಗತಿಪರಿಶೀಲನಾ ಸಭೆಗೂ ಪೂರ್ವದಲ್ಲಿ, ಸಚಿವರು ಕೊಪ್ಪಳ ನಗರದ ಎನ್.ಜಿ.ಓ. ಕಾಲೋನಿಯಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕ್ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಅಲ್ಲದೆ ನಗರದ ಬೇಂದ್ರೆ ನಗರ, ಗವಿಶ್ರೀ ನಗರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ನೀರಿನ ಟ್ಯಾಂಕ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡರು.

Monday, 16 February 2015

ಫೆ.26 ರಂದು ತಾಲೂಕಾ ಪಂಚಾಯತ್ ಸಾಮಾನ್ಯ ಸಭೆ

ಕೊಪ್ಪಳ, ಫೆ.16 (ಕರ್ನಾಟಕ ವಾರ್ತೆ) : ಕೊಪ್ಪಳ ತಾಲೂಕಾ ಪಂಚಾಯತ್ ಸಾಮಾನ್ಯ ಸಭೆ ಫೆ.26 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
      ತಾಲೂಕಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ ಸಭೆಯ ಅಧ್ಯಕ್ಷತೆ ವಹಿಸಲಿದ್ದು,   ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೆ ಹಾಜರಾಗಬೇಕು. ಅನುಷ್ಟಾನಾಧಿಕಾರಿಗಳು ಜನವರಿ 2015 ರ ಅಂತ್ಯದ ತಮ್ಮ ಇಲಾಖಾ ಪ್ರಗತಿ ವರದಿಯನ್ನು ಫೆ.20 ರೊಳಗಾಗಿ   ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು ಎಂದು   ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಎರಡನೆ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ : ಪೂರ್ವಭಾವಿ ಸಭೆ

ಕೊಪ್ಪಳ, ಫೆ.16(ಕರ್ನಾಟಕ ವಾರ್ತೆ): ಇದೇ ಫೆ.22 ರಿಂದ ಫೆ25 ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯಾದ್ಯಂತ ನಡೆಯಲಿರುವ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್‍ಪೋಲಿಯೋ ಲಸಿಕಾ ಕಾರ್ಯಕ್ರಮದ ಸಿದ್ಧತೆಗಾಗಿ ಪೂರ್ವಭಾವಿ ಸಭೆ ಫೆ.18 ರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.
     ಜಿಲ್ಲಾಧಿಕಾರಿ ಆರ್.ಆರ್ ಜನ್ನು ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ ತಿಳಿಸಿದ್ದಾರೆ.

ಫೆ. 21 ರಂದು ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ

ಕೊಪ್ಪಳ, ಫೆ.16 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಆಸ್ಪತ್ರೆಯ ವತಿಯಿಂದ ಫೆ. 21 ರಂದು ಸ್ವಚ್ಛತಾ ಅಭಿಯಾನ ನಡೆಯಲಿದೆ.
     ಭಾರತದ ಪ್ರಧಾನ ಮಂತ್ರಿಗಳು ಚಾಲನೆ ನೀಡಿರುವ ಸ್ವಚ್ಛ ಭಾರತ ಅಭಿಯಾನದಡಿ ಸ್ವಸ್ಥ ಭಾರತವನ್ನಾಗಿಸುವ ನಿಟ್ಟಿನಲ್ಲಿ, ಫೆ.21 ರಂದು ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಒಳಗೆ ಹಾಗೂ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಈ ಕಾರ್ಯಕ್ರಮದಲ್ಲಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಫೆ.21 ರಂದು ನಡೆಯಲಿರುವ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಾಹಸ ಕ್ರೀಡಾ ತರಬೇತಿ ಶಿಬಿರ : ಹೆಸರು ನೊಂದಾಯಿಸಲು ಸೂಚನೆ

ಕೊಪ್ಪಳ, ಫೆ.16 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಎಸ್.ಸಿ-ಎಸ್.ಟಿ ಅಭ್ಯರ್ಥಿಗಳಿಗೆ ಸಾಹಸ ಕ್ರೀಡಾ ತರಬೇತಿಗಳಾದ ಭೂ ಸಾಹಸ ಹಾಗೂ ಜಲ ಸಾಹಸ ತರಬೇತಿ ಶಿಬಿರವನ್ನು ಫೆ. 20 ರಿಂದ ಮಾ. 15 ರವರೆಗೆ ಆಯೋಜಿಸಿದೆ.
     ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದಲ್ಲಿ ನಡೆಯಲಿರುವ ಈ ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿ ಶಿಬಿರಗಳು ಉಚಿತವಾಗಿರುತ್ತವೆ. ಭೂಸಾಹಸ ತರಬೇತಿ ಶಿಬಿರವನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕೇಂದ್ರದಲ್ಲಿ ಫೆ.20 ರಿಂದ ಮಾ.15 ರವರೆಗೆ ಆಯೋಜಿಸಲಾಗಿದ್ದು, ಜಲಸಾಹಸ ತರಬೇತಿ ಶಿಬಿರವನ್ನು ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಕೇಂದ್ರದಲ್ಲಿ ಫೆ.20 ರಿಂದ ಮಾ.15 ರವರೆಗೆ ಏರ್ಪಡಿಸಲಾಗಿದೆ.
     ಶಿಬಿರದಲ್ಲಿ ಪಾಲ್ಗೊಳ್ಳಲು 10 ನೇ ತರಗತಿ ಪಾಸಾಗಿರಬೇಕು. 18 ರಿಂದ 35 ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಆರೋಗ್ಯ ಮತ್ತು ಉತ್ತಮ ದೇಹಧಾಡ್ರ್ಯ ಹೊಂದಿರಬೇಕು. ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರಲ್ಲಿ ತಮ್ಮ ಹೆಸರು ನೊಂದಾಯಿಸಲು ಸೂಚಿಸಿದೆ.  ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ದೂರವಾಣಿ ಸಂಖ್ಯೆ : 08539-201400 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ

ಕೊಪ್ಪಳ,ಫೆ.16(ಕರ್ನಾಟಕವಾರ್ತೆ): ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.
         ಗ್ಲೈನೆಕ್ಸ್-ಎಮ್2 ಟ್ಯಾಬ್ಲೆಟ್ಸ್(ಗ್ಲಿಮೆಪಿರೈಡ್ ಮತ್ತು ಮೆಟ್ ಫಾರ್ಮಿನ್ ಹೈಡ್ರೋ ಕ್ಲೋರೈಡ್ ಟ್ಯಾಬ್ಲೆಟ್ಸ್), ಬ್ಯಾಚ್ ಸಂಖ್ಯೆ-ಎಬಿಟಿ-1791, ತಯಾರಕರು ಮೆ|| ಎಎಸ್‍ಎ ಬಯೋಟೆಕ್ ಪ್ಲಾಟ್ ನಂ.124, ಹೆಚ್‍ಪಿಎಸ್‍ಐಡಿಸಿ, ಇಂಡಸ್ಟ್ರಿಯಲ್ ಏರಿಯ, ಬಡ್ಡಿ, ಸೋಲಾನ್. ಕ್ಯಾಂಡಿಸನ್ ಮೆಡಿಕೇಟೆಡ್ ಸೋಪ್, ಬ್ಯಾಚ್ ಸಂಖ್ಯೆ-ಎಸ್-13284, ತಯಾರಕರು ಮೆ||ಎಸ್‍ಆರ್‍ಎಸ್ ಇಂಡಸ್ಟ್ರೀಸ್, ಹರಿದ್ವಾರ, ಉತ್ತರಾಖಂಡ. ಡೈಕ್ಲೊವೆರಾನ್(ಡೈಕ್ಲೊಫೆನಾಕ್ ಸೋಡಿಯಂ ಇಂಜೆಕ್ಷನ್ ಐಪಿ), ಬ್ಯಾಚ್ ಸಂಖ್ಯೆ-ವಿ6030, ತಯಾರಕರು  ಮೆ|| ಅಲ್ಪಾ ಲ್ಯಾಬೋರೇಟರೀಸ್ ಲಿ., ಪಿಗ್ದಂಬರ್.  ಜೆಂಟಾಮಿನ್ ಇಂಜೆಕ್ಷನ್ ಐ.ಪಿ, ಜೆಂಟಾವೆಟ್, ಬ್ಯಾಚ್ ಸಂಖ್ಯೆ-ಸಿ4072, ತಯಾರಕರು-ಮೆ||ಕಾನ್ಸೆಪ್ಟ್ ಫಾರ್ಮಾಸುಟಿಕಲ್ಸ್ ಲಿ., ಔರಂಗಾಬಾದ್. ಸಾಫ್ಟಸ್ ಮ್ಯಾಕ್ಸ್, ಬ್ಯಾಚ್ ಸಂಖ್ಯೆ-ಪಿಎಸ್-156, ತಯಾರಕರು ಮೆ|| ಆಫಿ ಪೇರೆಂಟೆರಲ್ಸ್, ವಿಲೇಜ್ ಗುಲ್ಲೇರವಾಲ, ಪೋ.ಬಡ್ಡಿ ಡಿಸ್ಟ್ರಿಕ್ಟ್, ಸೋಲಾನ್.  ಟೆಲ್ಮಿಸಾರ್‍ಟ್ಯಾನ್ ಟ್ಯಾಬ್ಲೆಟ್ಸ್ ಐ.ಪಿ (ಕ್ಸೈಟೆಲ್ 20), ಬ್ಯಾಚ್ ಸಂಖ್ಯೆ- ಆರ್‍ಆರ್‍ಟಿ-1597, ತಯಾರಕರು ಮೆ|| ರೋಸ್ ರಾಬಿನ್ಸ್ ಬಯೋಟೆಕ್ ವಿ.ಪಿ.ಒ ಬರೋಗ್, ಸೋಲಾನ್-173212(ಹಿಮಾಚಲ ಪ್ರದೇಶ). ಪ್ಯಾಂನ್ಟೊಪ್ರಜೋಲ್ಸ್ ಟ್ಯಾಬ್ಲೆಟ್ಸ್ ಐ.ಪಿ(ಸ್ಕೊಜೋಲ್) ಬ್ಯಾಚ್ ಸಂಖ್ಯೆ-ಟಿ-7590, ತಯಾರಕರು ಮೆ|| ಪಿಡಿಸಿ ಹೆಲ್ತ್ ಕೇರ್, ಸಿರ್ಮೋರ್. ರಬೆಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ (ರ್ಯಾಬ್ಸಟೋಮ್), ಬ್ಯಾಚ್ ನಂಬರ್-002, ಮೆ|| ರೋಸಿಯೆಟ್ ಮೆಡಿಕೇರ್ ವಿಲೇಜ್, ಆಂಜಿ, ಸೋಲಾನ್. ಮೋಟ-ಲೆ (ಮೋಟೆಲುಕಾಸ್ಟ್ & ಲೆವೊಸೆಟ್ರಿಜೈನ್ ಡಿಹೈಡ್ರೊಕ್ಲೊರೈಡ್ ಟ್ಯಾಬ್ಲೆಟ್ಸ್), ಬ್ಯಾಚ್ ಸಂಖ್ಯೆ- ಎಸ್‍ವಿಟಿ 1442, ತಯಾರಕರು ಮೆ||ಎಸ್‍ವಿಆರ್ ಹೆಲ್ತ್ ಕೇರ್, ಸಿರ್‍ಮೋರ್, ಹಿಮಾಚಲ ಪ್ರದೇಶ. ಟಿನಿಡಜೋಲ್ ಟ್ಯಾಬ್ಲೆಟ್ ಐ.ಪಿ 500 ಎಮ್‍ಜಿ, ಬ್ಯಾಚ್ ಸಂಖ್ಯೆ-ಟಿಝಡ್‍ಎಲ್-108, ತಯಾರಕರು ಮೆ|| ಮಿನೋಫಾರ್ಮ ಲ್ಯಾಬೋರೇಟೊರೀಸ್ ಪ್ರೈ.ಲಿ., ಹೈದ್ರಾಬಾದ್. ಸೆನ್ಸೆಸ್-ಫೋರ್ಟೆ (ಡೆಕ್ಸಟ್ರೊಮೆತೊಪ್ಯಾನ್ ಹೆಚ್‍ಬಿಆರ್, ಫೆನಿಲೆಫ್ರೈನ್ ಹೆಚ್‍ಸಿಎಲ್, ಸೆಟ್ರಿಜೈನ್ ಪ್ಯಾರಾಸಿಟಮೋಲ್ & ಕಫ್ಫೈನ್ ಅನ್‍ಹೈಡ್ರೊಸ್ ಟ್ಯಾಬ್ಲೆಟ್ಸ್), ಬ್ಯಾಚ್ ಸಂಖ್ಯೆ- 8508, ತಯಾರಕರು ಮೆ|| ಎಮ್‍ಡಿಸಿ ಫಾರ್ಮಸ್ಯುಟಿಕಲ್ಸ್ ಲಿ., ಬಡ್ಡಿ-173 205. ವಿನಾಕ್ ಜೆಲ್ (ಡೈಕ್ಲೊಫೆನಾಕ್ ಡೈಈಥೈಲ್ ಅಮೋನಿಯಮ್ ಜೆಲ್), ಬ್ಯಾಚ್ ಸಂಖ್ಯೆ-47, ತಯಾರಕರು ಮೆ|| ವಿನ್ರೆಕ್ಸ್ ಫಾರ್ಮಾಸುಟಿಕಲ್ಸ್ ಲಿ., ಓಂಗೊಲೆ-523 002. ಡೆಫ್‍ಸಿಯಾನ್ ಡೆಫ್ಲಜಕೋರ್ಟ್ ಟ್ಯಾಬ್ಲೆಟ್ಸ್ 6 ಎಂಜಿ, ಬ್ಯಾಚ್ ಸಂಖ್ಯೆ-ಸಿಡಿಡಿಇಎಫ್403, ತಯಾರಕರು ಮೆ|| ಸಿಯಾನ್ ಹೆಲ್ತ್‍ಕೇರ್ ಪ್ರೈ ಲಿ., ಹರಿದ್ವಾರ, ಉತ್ತರಾಖಂಡ.
        ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- 08539-221501 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಫೆ.19 ರಿಂದ ರಸ್ತೆ ಸಂಚಾರ ಗಣತಿ

ಕೊಪ್ಪಳ,ಫೆ.16(ಕರ್ನಾಟಕ ವಾರ್ತೆ):ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಏರ್ಪಡಿಸುವ 2015ನೇ ಸಾಲಿನ ರಸ್ತೆ ಸಂಚಾರ ಗಣತಿಯು ಫೆ.19 ರಿಂದ ಫೆ.26 ರವರೆಗೆ ಏಳು ದಿನಗಳ ಕಾಲ ನಡೆಯಲಿದೆ.
       ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಪ್ರತಿ 5 ವರ್ಷಕ್ಕೊಮ್ಮೆ ಏಳು ದಿನಗಳವರೆಗೆ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಈ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ಹಾಗೂ ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ.  ಪ್ರಸ್ತುತ ವರ್ಷದಲ್ಲಿ ಫೆ.19 ರ ಬೆಳಿಗ್ಗೆ 6 ಗಂಟೆಯಿಂದ ಫೆ.26 ರ ಬೆಳಿಗ್ಗೆ 6 ಗಂಟೆಯವರೆಗೆ ಒಟ್ಟು ಏಳು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಗಣತಿ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ. ಕಾರಣ ಎಲ್ಲಾ ವಾಹನ ಚಾಲಕರು ಸಹಕರಿಸುವಂತೆ ಕೊಪ್ಪಳ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ನೇಮಕ ಪರೀಕ್ಷೆಗೆ ತರಬೇತಿ : ನೋಂದಣಿಗೆ ಸೂಚನೆ

ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಬರುವ ಮೇ ತಿಂಗಳಿನಲ್ಲಿ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
      ತರಬೇತಿಯಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಸಾಮಾನ್ಯ ಅಧ್ಯಯನ ವಿಷಯಗಳಿಗೆ ಆದ್ಯತೆ ನೀಡಲಾಗುವುದು.  ಆಸಕ್ತರು ದಿನಾಂಕ: 26-02-2015ರ ಒಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹೆಚ್ಚಿನ ವಿವರಗಳಿಗೆ 0821-2515944 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾನಿಲಯದ ಪ್ರಭಾರ ಕುಲಸಚಿವರಾದ ಪ್ರೊ. ಎಲ್. ರಾಜಶೇಖರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾ ಶಾಲೆ ಪ್ರವೇಶಕ್ಕೆ ಆಯ್ಕೆ : ವಿದ್ಯಾರ್ಥಿಗಳಿಗೆ ಸೂಚನೆ


ಕೊಪ್ಪಳ ಫೆ. 16 (ಕ.ವಾ): ಕೊಪ್ಪಳ ಜಿಲ್ಲಾ ಕ್ರೀಡಾ ಶಾಲೆ/ ಕ್ರೀಡಾ ನಿಲಯಕ್ಕೆ 2015-16 ನೇ ಸಾಲಿಗೆ 5 ನೇ ತರಗತಿಗೆ ಪ್ರವೇಶ ನೀಡಲು ಬಾಲಕ/ಬಾಲಕಿಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆಯಾ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.
     ಕೊಪ್ಪಳ ಜಿಲ್ಲಾ ಕ್ರೀಡಾಶಾಲೆ/ಕ್ರೀಡಾ ನಿಲಯಕ್ಕೆ ಕ್ರೀಡಾ ಪಟುಗಳನ್ನು ವ್ಹಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡೆಗೆ ಆಯ್ಕೆ ಮಾಡಲಾಗುತ್ತಿದ್ದು, ಭಾಗವಹಿಸುವ ಕ್ರೀಡಾಪಟುಗಳು ದಿ: 01-06-2015 ಕ್ಕೆ 11 ವರ್ಷದವರಾಗಿರಬೇಕು.  4 ನೇ ತರಗತಿ ಉತ್ತೀರ್ಣರಾಗಿರಬೇಕು.   ಕನಿಷ್ಟ ಎತ್ತರ 145 ಸೆಂ.ಮೀ. ಇರಬೇಕು.  ಆಯ್ಕೆ ಪ್ರಕ್ರಿಯೆ ಫೆ. 19 ರಂದು ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ.  ಫೆ. 28 ರಂದು ಕುಷ್ಟಗಿ.  ಮಾ. 06 ರಂದು ಯಲಬುರ್ಗಾ ಮತ್ತು ಮಾ. 08 ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ರಿಂದ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ನಡೆಯಲಿದೆ.  ಹೆಚ್ಚಿನ ಮಾಹಿತಿಗಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ- 08539-201400 ಅಥವಾ ಸಿ.ಎ. ಪಾಟೀಲ್, ವಾಲಿಬಾಲ್ ತರಬೇತುದಾರರು ಮೊ.ಸಂ.9342387935 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Friday, 13 February 2015

ಕನಕಗಿರಿ ಉತ್ಸವದಲ್ಲಿ ವಸ್ತು ಪ್ರದರ್ಶನ ಮಳಿಗೆ : ಹೆಸರು ನೋಂದಣಿಗೆ ಸೂಚನೆ

ಕೊಪ್ಪಳ, ಫೆ.12 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಕನಗಿರಿಯಲ್ಲಿ ಫೆ.23 ಮತ್ತು 24ರಂದು ನಡೆಯಲಿರುವ ಕನಕಗಿರಿ ಉತ್ಸವದಲ್ಲಿ ಮಳಿಗೆಗಳನ್ನು ಸ್ಥಾಪಿಸಿ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
        ಕನಕಗಿರಿ ಉತ್ಸವ ಸಂದರ್ಭದಲ್ಲಿ ಕನಕಗಿರಿಯಲ್ಲಿ ಮಳಿಗೆಗಳನ್ನು ಸ್ಥಾಪಿಸಿ, ಪ್ರತಿ ಜಿಲ್ಲೆಯಿಂದ ವೈಶಿಷ್ಠ್ಯಪೂರ್ಣ ವಸ್ತಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲು ಹಾಗೂ ಛಾಯಾ ಚಿತ್ರಗ್ರಾಹಕರ ಛಾಯಾಚಿತ್ರ ಪ್ರದರ್ಶನ ಆಯೋಜಿಸಲು ಉದ್ದೇಶಿಸಲಾಗಿದೆ.  ಈ ಹಿನ್ನೆಲೆಯಲ್ಲಿ ವೈಶಿಷ್ಟ್ಯ ಪೂರ್ಣ ವಸ್ತುಪ್ರದರ್ಶನ, ಮಾರಾಟ ಮೇಳ ಅಥವಾ ಛಾಯಾಚಿತ್ರ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಫೆ. 17 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಕೊಪ್ಪಳ ಇವರಲ್ಲಿ ನೊಂದಾಯಿಸಬೇಕು ಎಂದು ಕನಕಗಿರಿ ಉತ್ಸವದ ವಸ್ತು ಪ್ರದರ್ಶನ ಸಮಿತಿಯ ಅಧ್ಯಕ್ಷರು ಆಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 19 ರಂದು ವಿಜೃಂಭಣೆಯಿಂದ ಶಿವಾಜಿ ಹಾಗೂ ಸರ್ವಜ್ಞ ಜಯಂತಿ ಆಚರಣೆ

ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ) : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿ ಆಚರಣೆಯನ್ನು  ಸರ್ಕಾರಿ ಕಾರ್ಯಕ್ರಮವನ್ನಾಗಿ ಫೆ. 19 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.

     ಶಿವಾಜಿ ಹಾಗೂ ಕವಿ ಸರ್ವಜ್ಞರ ಜಯಂತಿ ಆಚರಣೆ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಭಾರತದಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಹುಟ್ಟುಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಇದೇ ವರ್ಷದಿಂದ ಮೊದಲ ಬಾರಿಗೆ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಫೆ. 19 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು.  ಶಿವಾಜಿ ಹಾಗೂ ಸರ್ವಜ್ಞರ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9-30 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು,  ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.  ಛತ್ರಪತಿ ಶಿವಾಜಿ ಮಹಾರಾಜರ ಕುರಿತಂತೆ ಕೊಪ್ಪಳದ ನಿವೃತ್ತ ಪ್ರಾಚಾರ್ಯ ಅಲ್ಲಮಪ್ರಭು ಬೆಟ್ಟದೂರ ಅವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು.  ಸಮಾರಂಭದ ನಂತರ ಸಾಹಿತ್ಯ ಭವನದಿಂದ ಉಭಯ ಮಹನೀಯರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಿ, ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ತುಳಜಾಭವಾನಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುವುದು.  ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ. ಹಲವು ಮಹನೀಯರ ಜಯಂತಿ ಕಾರ್ಯಕ್ರಮಗಳಿಗೆ ಸರ್ಕಾರಿ ರಜೆ ಇಲ್ಲದಿರುವುದರಿಂದ, ಮೆರವಣಿಗೆ ಹಾಗೂ ಸಮಾರಂಭದಲ್ಲಿ ಪಾಲ್ಗೊಂಡು, ನಂತರ ಕಚೇರಿಗೆ ಹಾಜರಾಗಲು ವಿಳಂಬವಾಗುತ್ತಿದ್ದು, ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವ ಎಲ್ಲ ಜಯಂತಿ ಕಾರ್ಯಕ್ರಮಗಳಲ್ಲಿ ಬೆಳಿಗ್ಗೆ 9-30 ಗಂಟೆಗೆ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಿ, ಸಮಾರಂಭದ ನಂತರ ಸಾಹಿತ್ಯ ಭವನದಿಂದ ಮೆರವಣಿಗೆ ಪ್ರಾರಂಭಿಸಲಾಗುವುದು.  ಎಲ್ಲ ಅಧಿಕಾರಿಗಳು ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು, ನಂತರ ಕಚೇರಿ ಕರ್ತವ್ಯಕ್ಕೆ ಎಂದಿನಂತೆ ಹಾಜರಾಗಬೇಕು  ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಶಿವಾಜಿ ಹಾಗೂ ಸರ್ವಜ್ಞರ ಜಯಂತಿಯಂದು, ಮೆರವಣಿಗೆ ಸಾಗಿ ಬರುವ ಮಾರ್ಗದ ರಸ್ತೆಗಳನ್ನು ಸ್ವಚ್ಛಗೊಳಿಸಬೇಕು.  ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಹಾಗೂ ಸಾಹಿತ್ಯ ಭವನದಲ್ಲಿ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆಗೊಳಿಸಬೇಕು.   ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಲು ಸೂಕ್ತ ಸಂಪನ್ಮೂಲ ವ್ಯಕ್ತಿಯನ್ನು ಆಯ್ಕೆಗೊಳಿಸಿ, ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರಿಗೆ ಸೂಚನೆ ನೀಡಲಾಯಿತು.
     ಸಭೆಯಲ್ಲಿ  ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ  ವಿವಿಧ ಸಮಾಜಗಳ ಮುಖಂಡರುಗಳಾದ ಶಿವಾನಂದ ಹೊದ್ಲೂರ್, ಮಾರುತಿ ನಿಕ್ಕಂ, ನಾಗೇಶ ಬಡಿಗೇರ, ಗವಿಸಿದ್ದಪ್ಪ ಪವಾರ್, ವಿಷ್ಣು ಕಾರಟಗಿ, ಹನುಮಂತು, ನಾಗರಾಜ ಗೋಪಾಳಿ, ಮಲ್ಲಪ್ಪ ಮುರಡಿ ಮುಂತಾದ ಗಣ್ಯರು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಹವಾಗುಣ ಬದಲಾವಣೆ : ಫೆ. 20 ರಂದು ಬಳ್ಳಾರಿಯಲ್ಲಿ ಭಾಗಿದಾರರ ಸಮಾಲೋಚನಾ ಸಭೆ

ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹವಾಗುಣ ಬದಲಾವಣೆ ಕುರಿತಂತೆ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಭಾಗೀದಾರರಿಗೆ ಸೀಮಿತಗೊಂಡಂತೆ ಫೆ. 20 ರಂದು ಬೆಳಿಗ್ಗೆ 10-30 ಗಂಟೆಗೆ ಬಳ್ಳಾರಿ ಕಂಟೋನ್‍ಮೆಂಟ್ ಬಳಿಯ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್‍ನಲ್ಲಿ ಭಾಗಿದಾರರ ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದು, ಆಸಕ್ತ ಸಾರ್ವಜನಿಕರು ಇದರಲ್ಲಿ ಭಾಗಿಯಾಗಿ ಸಲಹೆ, ಮಾಹಿತಿ ನೀಡಬಹುದಾಗಿದೆ.
     ಮಾನವನ ಹಲವಾರು ಚಟುವಟಿಕೆಗಳಿಂದಾಗಿ ಹವಾಮಾನದ ಬದಲಾವಣೆಗೆ ಕಾರಣವಾಗುತ್ತಿದೆ, ಈ ವಿಷಯ ಕುರಿತಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಕ್ರಿಯಾ ಯೋಜನೆ ರೂಪಿಸುತ್ತಿವೆ.  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆಗಳನ್ನು ಈಗಾಗಲೇ ನಡೆಸಲಾಗಿದ್ದು, ಸದರಿ ಸಭೆಗಳಲ್ಲಿ ಭಾಗವಹಿಸಿದ ವಿವಿಧ ಭಾಗೀದಾರರ ಅಭಿಪ್ರಾಯಗಳನ್ನು ಪಡೆದು ಸಂಗ್ರಹಿಸಲಾಗಿರುತ್ತದೆ, ಇಂತಹ ಸಭೆಗಳನ್ನು ನಡೆಸುವ ಮೂಲ ಉದ್ದೇಶ ರಾಜ್ಯ ಸರ್ಕಾರವು ಹೊರಡಿಸಿರುವ ಹವಾಗುಣ ಬದಲಾವಣೆ ಕ್ರಿಯಾಯೋಜನೆಗೆ ಪೂರಕವಾಗುವಂತೆ ರಾಜ್ಯದ ಅಭಿವೃದ್ಧಿಯ  ಅಗತ್ಯತೆಯನ್ನು ಪರಿಗಣಿಸಿ ಕೊಡುಗೆಯನ್ನು ನೀಡುವುದಾಗಿರುತ್ತದೆ.  ಈ ನಿಟ್ಟಿನಲ್ಲಿ ವಿವಿಧ ವಿಷಯಗಳಾದ ಜಲ ಮತ್ತು ನೈರ್ಮಲ್ಯ, ಭೂಮಿಯ ಉಪಯೋಗ ಮತ್ತು ಯೋಜನೆಗಳು, ತ್ಯಾಜ್ಯ ವಸ್ತುಗಳ ನಿರ್ವಹಣೆ, ವಾಯು ಗುಣಮಟ್ಟ, ಸಾರಿಗೆ, ಕೈಗಾರಿಕೆಗಳು, ಶಕ್ತಿ, ವ್ಯವಸಾಯ ಮತ್ತು ತೋಟಗಾರಿಕೆ, ಅರಣ್ಯ ಮತ್ತು ಜೀವ ವೈವಿಧ್ಯ, ನಗರೀಕರಣ ಕುರಿತಾಗಿ ಸಾರ್ವಜನಿಕರು ಪೂರಕ ಮಾಹಿತಿಗಳನ್ನು ಸಮಾಲೋಚನಾ ಸಭೆಯಲ್ಲಿ ನೀಡಬಹುದಾಗಿದೆ.  ಭಾಗೀದಾರರ ಸಮಾಲೋಚನೆ ಹಾಗೂ ಆಂತರಿಕ ಅಧ್ಯಯನದ ಆಧಾರದ ಮೇಲೆ ವಿಸ್ತಾರವಾದ ವರದಿಯನ್ನು ತಯಾರಿಸಿ, ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಹವಾಗುಣ ಬದಲಾವಣೆಯ ವಿಚಾರವನ್ನು ರಾಜ್ಯ ಸರ್ಕಾರ ತಯಾರಿಸುವ ಯೋಜನಾ ವರದಿಯಲ್ಲಿ ಸೇರಿಸಿ ಸಾರ್ವಜನಿಕರ ಭಾಗಿತ್ವದ ಬಗ್ಗೆ ಮನವರಿಕೆ ಮಾಡುವ ಉದ್ದೇಶವಿದೆ.  ಮಾಲಿನ್ಯದ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ಹಾಗೂ ಹಸಿರು ಮನೆ ಅನಿಲ ( Green House Gases) ಹೊರ ಸೂಸುವಿಕೆಯನ್ನು ಶಮನಗೊಳಿಸಲು ಭಾಗೀದಾರರು ತಮ್ಮ ಅನಿಸಿಕೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆಯೋಜಿಸಿರುವ ಸಮಾಲೋಚನೆ ಸಭೆಗೆ ಮುಂಚಿತವಾಗಿ ಇ-ಮೇಲ್ ವಿಳಾಸಗಳಾದ  seobly@kspcb.gov.in, bellary@kspcb.gov.in, ceo@kspcb.gov.in, corpcell@kspcb.gov.in ಗಳಿಗೆ ರವಾನಿಸಬಹುದಾಗಿದೆ.
     ಸಮಾಲೋಚನೆ ಸಭೆಯಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವವರು, ಮೇಲೆ ತಿಳಿಸಿದ ಇ-ಮೇಲ್ ವಿಳಾಸಗಳಿಗೆ ಮುಂಚಿತವಾಗಿ ನೋಂದಾಯಿಸಿಕೊಂಡರೆ ಅವರ ಅನಿಸಿಕೆಗಳನ್ನು ಸಮಾಲೋಚನಾ ಸಭೆಯಲ್ಲಿ ಮೌಖಿಕವಾಗಿ ಮಂಡಿಸಲು ಆದ್ಯತೆಯ ಮೇರೆಗೆ ಅವಕಾಶ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀ.ಗೋಪಾಲಕೃಷ್ಣ.ಬಿ. ಸಣತಂಗಿ, ಹಿರಿಯ ಪರಿಸರ ಅಧಿಕಾರಿಗಳು(ಪ್ರಭಾರ), ವಲಯ ಕಛೇರಿ, ಬಳ್ಳಾರಿ ಇವರ ದೂರವಾಣಿ ಸಂಖ್ಯೆ:9900145500 ಮುಖಾಂತರ ಸಂಪರ್ಕಿಸಬಹುದು ಎಂದು ಕೊಪ್ಪಳ ಪರಿಸರ ಅಧಿಕಾರಿ ಬಿ. ರುದ್ರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ. 16 ರಿಂದ ಯಲಬುರ್ಗಾದಲ್ಲಿ ಯೋಗ, ಆರೋಗ್ಯ ಪ್ರಶಿಕ್ಷಣ ಶಿಬಿರ

ಕೊಪ್ಪಳ, ಫೆ.13 (ಕರ್ನಾಟಕ ವಾರ್ತೆ) : ಜಿಲ್ಲಾ ಆಡಳಿತ ಭವನ, ಜಿಲ್ಲಾ ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭೀಮ ಜ್ಯೋತಿ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸೇವಾ ಸಂಸ್ಥೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಬುದ್ಧ, ಬಸವ, ಅಂಬೇಡ್ಕರ್ ಸಮುದಾಯ ಭವನದಲ್ಲಿ ಫೆ.16 ರಿಂದ ಫೆ.21 ರವರೆಗೆ ವಸತಿ ಸಹಿತ ಯೋಗ, ಆರೋಗ್ಯ, ಪ್ರಶಿಕ್ಷಣ ತರಬೇತಿ ಶಿಬಿರ ಆಯೋಜಿಸಲಾಗಿದೆ.
     ಫೆ.16 ರಂದು ನಡೆಯಲಿರುವ ಶಿಬಿರದ ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ನೆರವೇರಿಸುವರು. ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಲಿದ್ದು, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ,   ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಉಪಾಧ್ಯಕ್ಷ ವಿನಯ ಕುಮಾರ ಎಂ. ಮೇಲಿನಮನಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ತಾಲೂಕ ಪಂಚಾಯತ ಅಧ್ಯಕ್ಷೆ ಮಹಾದೇವಿ ಕಂಬಳಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಭಾಗೀರಥಿ ಜೋಗಿನ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
     ಬೆಂಗಳೂರಿನ ಆಯುಷ್ ನಿರ್ದೇಶನಾಲಯದ ನಿರ್ದೇಶಕ ವಿಜಯಕುಮಾರ ಗೋಗಿ,   ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ||ಪಿ.ರಾಜಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಬೆಂಗಳೂರಿನ ಆಯುಷ್ (ಯುನಾನಿ) ಇಲಾಖೆಯ ಉಪನಿರ್ದೇಶಕಿ ಡಾ||ರಫಿಯಾ ಬೇಗಂ, ಉಪನಿರ್ದೇಶಕ ಡಾ||ಸತೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ||ಶ್ರೀಕಾಂತ ಬಾಸೂರ, ಡಿ.ಡಿ.ಪಿ.ಐ. ಡಾ|| ಶ್ಯಾಮಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಎಂ.ಎಸ್ ಹಾಗೂ ಇತರರು ವಿಶೇಷ ಆಹ್ವಾನಿತರಾಗಿ ಅಗಮಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಆಯುಷ್ ಅಧಿಕಾರಿ ಡಾ|| ಬಸಪ್ಪ ವಾಲಿಕಾರ ತಿಳಿಸಿದ್ದಾರೆ.

ಅನ್ಯ ಇಲಾಖೆ ಸೇವೆಯ ಶಿಕ್ಷಕರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಜಿ.ಪಂ. ಅಧ್ಯಕ್ಷರ ಸೂಚನೆ


ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ): ಅನ್ಯ ಇಲಾಖೆ ಸೇವೆಯಲ್ಲಿರುವ ಶಿಕ್ಷಕರನ್ನು ಕೂಡಲೆ ಆ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಶಿಕ್ಷಕರ ಹುದ್ದೆಯ ಕರ್ತವ್ಯಕ್ಕೆ ಮರಳುವಂತೆ ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿ.ಪಂ. ಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಜಿಲ್ಲೆಯಲ್ಲಿ ಈಗಾಗಲೆ ಶಿಕ್ಷಕರ ಕೊರತೆ ಹೆಚ್ಚಾಗಿದ್ದು, ಶಿಕ್ಷಣ ಇಲಾಖೆಯಿಂದ ಅನ್ಯ ಇಲಾಖೆ ಸೇವೆಗೆ ನಿಯೋಜನೆ ಮೇಲೆ ತೆರಳಿರುವ ಶಿಕ್ಷಕರನ್ನು ಕೂಡಲೆ ಆ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಮಾತೃ ಇಲಾಖೆಗೆ ಮರಳುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಹಲವು ಬಾರಿ ಸೂಚನೆ ನೀಡಲಾಗಿದ್ದರೂ, ಇದುವರೆಗೂ ಕ್ರಮ ಕೈಗೊಳ್ಳದ ಡಿಡಿಪಿಐ ಅವರ ಕ್ರಮಕ್ಕೆ ಜಿ.ಪಂ. ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ತಕ್ಷಣವೇ ಅಂತಹ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಶಿಕ್ಷಕ ಹುದ್ದೆಯ ಕರ್ತವ್ಯಕ್ಕೆ ಮರಳಲು ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಇಂದೇ ಆದೇಶ ಹೊರಡಿಸಲಾಗುವುದು ಎಂದರು.
ಕುಡಿಯುವ ನೀರು : ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ರಾಜೀವ್ ಗಾಂಧಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರ ಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷರು, ಕೆಡಿಪಿ ನಂತಹ ಮಹತ್ವದ ಸಭೆಗಳಿಗೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು.  ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಈ ರೀತಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.  ಜಿಲ್ಲೆಯಲ್ಲಿ ಜಾರಿಯಲ್ಲಿರುವ ಎಲ್ಲ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾಮಗಾರಿಗಳು ತ್ವರಿತಗೊಳ್ಳಬೇಕು.  ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು.  ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ನೀರಿನ ಟ್ಯಾಂಕ್‍ಗಳನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸದೇ ಇರುವುದರಿಂದ, ಪಾಚಿ ಕಟ್ಟಿಕೊಂಡು, ಬೇಸಿಗೆಯಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆಗಳಿವೆ.  ಕೂಡಲೆ ಎಲ್ಲ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು.  ಶಿಥಿಲಾವಸ್ಥೆಯಲ್ಲಿರುವ ನೀರನ ಮೇಲ್ತೊಟ್ಟಿಗಳನ್ನು ಗುರುತಿಸಿ, ಅಂತಹವುಗಳನ್ನು ದುರಸ್ತಿಗೊಳಿಸಿ ಉಳಿಸಿಕೊಳ್ಳಬೇಕೆ ಅಥವಾ ನೆಲಸಮಗೊಳಿ, ಬೇರೆ ಟ್ಯಾಂಕ್ ನಿರ್ಮಿಸಬೇಕೆ ಎನ್ನುವುದರ ಬಗ್ಗೆ ಮಾಸಾಂತ್ಯದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರು, ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸುಮಾರು 39 ನೀರಿನ ಟ್ಯಾಂಕ್‍ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಈಗಾಗಲೆ 3 ಟ್ಯಾಂಕ್‍ಗಳನ್ನು ಕೆಡವಿ ಹಾಕಲಾಗಿದೆ.  ಉಳಿದವುಗಳ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಪ್ಪೆ ರೋಗದಿಂದ ಜಾನುವಾರು ಮೃತಪಟ್ಟಿಲ್ಲ : ತಾಲೂಕಿನ ಕೂಕನಪಳ್ಳಿ ಬಳಿ ಇತ್ತೀಚೆಗೆ ಚಪ್ಪೆರೋಗದಿಂದ ಸುಮಾರು 8 ಜಾನುವಾರುಗಳು ಮೃತಪಟ್ಟಿವೆ ಎಂಬುದಾಗಿ ಮಾಧ್ಯಮಗಳಲ್ಲಿ ವರಿದಯಾಗಿದ್ದು, ಆದರೆ ಮೃತ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಜಾನುವಾರುಗಳು ಚಪ್ಪೆ ರೋಗದಿಂದ ಮೃತಪಟ್ಟಿಲ್ಲ. ಬಹುಶಃ ಜೋಳದ ಚಿಗುರು ಅಥವಾ ವಿಷಯುಕ್ತ ಆಹಾರ ತಿಂದು ಮೃತಪಟ್ಟಿರುವ ಸಾಧ್ಯತೆ ಹೆಚ್ಚು.  ಆದಾಗ್ಯೂ ಮೃತ ಜಾನುವಾರುಗಳ ಮಾದರಿಯನ್ನು ಬಳ್ಳಾರಿಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ.  ಈ ಕುರಿತಂತೆ ರೈತರಿಗೆ ಸೂಕ್ತ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.  ಪಶುಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಕುರಿ ಮತ್ತು ಮೇಕೆ ಮೃತಪಟ್ಟಾಗ ಮರಣೋತ್ತರ ಪರೀಕ್ಷೆ ನಡೆಸುವಲ್ಲಿ ತೊಂದರೆ ಆಗುತ್ತಿದೆ.  ಕುರಿಗಾರರಿಗೆ ಮೃತ ಕುರಿ/ಮೇಕೆಯನ್ನು ಪಶು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಲಾಗುತ್ತಿದೆಯೇ ಹೊರತು, ಕುರಿಗಾರರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರ ನಾಯಕ್ ಅವರು ಸಭೆಗೆ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಆಯಾ ಇಲಾಖೆಗಳ ಪ್ರಗತಿ ವರದಿಯನ್ನು ಸಭೆಗೆ ವಿವರಿಸಿದರು.

ಹೆಚ್1 ಎನ್1 ಬಗ್ಗೆ ಜನರಲ್ಲಿ ಆತಂಕ ಬೇಡ : ಡಾ. ಕಟ್ಟಿಮನಿ

ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಇನ್‍ಪ್ಲೊಯೆಂಜಾ ಹೆಚ್1 ಎನ್1 ರೋಗ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಕೊಪ್ಪಳ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲ. ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎನ್. ಕಟ್ಟಿಮನಿ ಅವರು ಹೇಳಿದರು. 
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹೆಚ್1 ಎನ್1 (ಹಂದಿಜ್ವರ) ರೋಗ ಹರಡುವಿಕೆ, ಮುಂಜಾಗ್ರತಾ ಕ್ರಮ ಹಾಗೂ ಚಿಕಿತ್ಸೆ ಕುರಿತಂತೆ ಶುಕ್ರವಾರದಂದು ಏರ್ಪಡಿಸಲಾಗಿದ್ದ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
     ಇನ್‍ಪ್ಲೊಯೆಂಜಾ ಎ (ಹೆಚ್1 ಎನ್1) ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇನ್‍ಫ್ಲೂಯೆಂಜಾ ಎಂಬ ವೈರಸ್‍ನಿಂದ ಬರುತ್ತದೆ.  ಇನ್‍ಫ್ಲೂಯೆಂಜಾ ಎಂದರೆ ವೈರಸ್‍ನಿಂದ ಹರಡುವ ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗ ಎಂಬುದಾಗಿದೆ.  ಹಂದಿ ಮಾಂಸ ತಿನ್ನುವುದರಿಂದ ಮಾತ್ರ ಈ ರೋಗ ಬರುತ್ತದೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ.  ಆದರೆ ಈ ರೋಗವು ರೋಗಪೀಡಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ವಾತಾವರಣದಲ್ಲಿ ವೈರಸ್ ಹರಡಿ, ಇತರರಿಗೆ ಸೋಂಕು ತಗಲುತ್ತದೆ.  ( H1 N1 ) ಹೆಚ್1 ಎನ್1, ವೈರಸ್ ದೇಹವನ್ನು ಪ್ರವೇಶಿಸಿ ರೋಗ ಲಕ್ಷಣಗಳು ಕಾಣಿಸುವ ಅವಧಿ ತುಂಬಾ ಕಡಿಮೆ ಆಗಿದ್ದು, ಸೋಂಕು ತಗುಲಿದ ಕೇವಲ 18 ರಿಂದ 76 ಗಂಟೆಯಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.   ಏಕಾ ಏಕಿ ಜ್ವರ, ತಲೆನೋವು, ಮೈಕೈನೋವು, ಮೂಗು ಸೋರಿಕೆ, ಸುಸ್ತು ಗಂಟಲು ಕೆರೆತ ಮತ್ತು ತೀವ್ರ ತರಹದ ಉಸಿರಾಟ ತೊಂದರೆ ಅದರ ಜೊತೆಯಲ್ಲಿ ವಾಂತಿ ಭೇದಿಯ ಆಗಬಹುದು. ಸಾಮಾನ್ಯವಾಗಿ 18 ತಿಂಗಳ ಒಳಗಿನ  ಮಕ್ಕಳು ಮತ್ತು ವೃದ್ಧರಲ್ಲಿ ಹಾಗೂ ಹೃದಯರೋಗ, ಸಕ್ಕರೆ ಖಾಯಿಲೆ, ಹೆಚ್‍ಐವಿ ಯಿಂದ ಬಳಲುತ್ತಿರುವವರಲ್ಲಿ ತೀವ್ರ ಸ್ವರೂಪದ ಉಸಿರಾಟ ಮಂಡಲದ ರೋಗವನ್ನು  ಉಂಟು ಮಾಡಿ ಸಾವು ಸಂಭವಿಸುವ ಸಾಧ್ಯತೆಗಳಿವೆ. ರೋಗ ಬಂದಾಗ ಚಿಕಿತ್ಸೆಗೆ ಪರದಾಡುವ ಬದಲು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.  ಮುಂಜಾಗ್ರತಾ ಕ್ರಮವಾಗಿ, ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದಾಗಲಿ ಅಥವಾ ಟಿಶ್ಯೂ ಕಾಗದದಿಂದಾಗಲಿ ಮುಚ್ಚಿಕೊಳ್ಳಬೇಕು. ಮೂಗು ಕಣ್ಣು, ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಆಗಾಗ್ಗೆ ಚೆನ್ನಾಗಿ ತೊಳೆದುಕೊಳ್ಳಬೇಕು. ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ಆದಷ್ಟು ತಡೆಗಟ್ಟುವುದು ಒಳ್ಳೆಯದು.  ಕೆಮ್ಮು, ನೆಗಡಿ, ಸೀನು ಮತ್ತು ಜ್ವರದಂತಹ ಸೋಂಕಿನ ಚಿಹ್ನೆಯಿರುವ ಜನರಿಂದ ಕನಿಷ್ಠ ಒಂದು ಮಾರು ದೂರವಿರುವುದು ಸೂಕ್ತ.  ಚೆನ್ನಾಗಿ ನಿದ್ರೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಬೇಕು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಒಳ್ಳೆಯದು. ಧಾರಾಳವಾಗಿ ನೀರು ಕುಡಿಯುವುದು ಮತ್ತು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ ಎಂದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.  ಸಭೆಯಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಹೆಚ್1 ಎನ್1 ರೋಗ ಕುರಿತು ಮಾಹಿತಿ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಫೆ. 14 ರಿಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
      ಸಚಿವರು ಫೆ. 14 ರಂದು ಬಳ್ಳಾರಿಯಿಂದ ಹೊರಟು ಸಂಜೆ 5 ಗಂಟೆಗೆ ಜಿಲ್ಲೆಯ ಕಾರಟಗಿಗೆ ಆಗಮಿಸುವರು.  ಸಾರ್ವಜನಿಕ ಕುಂದುಕೊರತೆ, ಅಹವಾಲು ವಿಚಾರಣೆ ನಡೆಸಿ, ವಾಸ್ತವ್ಯ ಮಾಡುವರು.  ಫೆ. 15 ರಂದು ಬೆಳಿಗ್ಗೆ 11 ಗಂಟೆಗೆ ಕಾರಟಗಿಯಿಂದ ಸಿಂಧನೂರಿಗೆ ತೆರಳಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ನಂತರ ಇಳಕಲ್‍ಗೆ ತೆರಳಿ ವಾಸ್ತವ್ಯ ಮಾಡುವರು.  ಫೆ. 16 ರಂದು ಮಧ್ಯಾಹ್ನ 1 ಗಂಟೆಗೆ ಕಾರಟಗಿಗೆ ಆಗಮಿಸಿ ಸಾರ್ವಜನಿಕ ಕುಂದುಕೊರತೆ, ಅಹವಾಲು ವಿಚಾರಣೆ ನಡೆಸಿ ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕೋಳಿ ಸಾಕಾಣಿಕೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಫೆ.13 (ಕರ್ನಾಟಕ ವಾರ್ತೆ) : ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ವತಿಯಿಂದ ಸ್ವ-ಉದ್ಯೋಗ ಆಧಾರಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
        ತರಬೇತಿಯು ಮಾರ್ಚ್ 02 ರಿಂದ ಪ್ರಾರಂಭವಾಗಲಿದ್ದು, 6 ದಿನಗಳ ಕಾಲ ನಡೆಯಲಿದೆ. ಈ ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, 18 ರಿಂದ 45 ವರ್ಷ ವಯಸ್ಸಿನೊಳಗಿನ ನಿರುದ್ಯೋಗಿ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ವಿಷಯದಲ್ಲಿ ಪ್ರಾಥಮಿಕ ಜ್ಞಾನ ಮುಂತಾದ ವಿವರಗಳನ್ನೊಳಗೊಂಡ ಮಾಹಿತಿಯನ್ನು ಫೋನ್ ಮೂಲಕ ವಿವರ ನೀಡಿ ತರಬೇತಿಗೆ ಆಯ್ಕೆಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಪರ್ಧಾತ್ಮಕ ಕಾಲೇಜು ರಂಗೋತ್ಸವ : ಫಲಿತಾಂಶ ಪ್ರಕಟ

ಕೊಪ್ಪಳ, ಫೆ.13 (ಕರ್ನಾಟಕ ವಾರ್ತೆ) : ಕೊಪ್ಪಳ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ   ಕೊಪ್ಪಳದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಕಾಲೇಜು ರಂಗೋತ್ಸವದ ಫಲಿತಾಂಶ ಪ್ರಕಟಿಸಲಾಗಿದೆ.
     ಕಾಲೇಜು ರಂಗೋತ್ಸವದ ನಾಟಕ ಸ್ಪರ್ಧೆ ವಿಭಾಗದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿತ್ತೂರು ರಾಣಿ ಚೆನ್ನಮ್ಮ ನಾಟಕವು ಪ್ರಥಮ ಸ್ಥಾನವನ್ನು ಹಾಗೂ ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಮರು ಸೃಷ್ಟಿ ನಾಟಕವು ದ್ವಿತೀಯ ಸ್ಥಾನ ಗಳಿಸಿದೆ. ಈ ಎರಡು ತಂಡಗಳು ಮುಂದೆ ವಿಭಾಗ ಮಟ್ಟದ ನಾಟಕ ಸ್ಪರ್ಧೆಗಳಿಗೆ ಅರ್ಹತೆ ಗಳಿಸಿವೆ.  ಜಾನಪದ ಕಲಾ ತಂಡ ವಿಭಾಗದ ಸ್ಪರ್ಧೆಯಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವು ಪ್ರಥಮ ಸ್ಥಾನ ಹಾಗೂ ಕೊಪ್ಪಳದ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ತಂಡವು ದ್ವಿತೀಯ ಸ್ಥಾನ ಗಳಿಸಿ, ಮುಂದೆ ವಿಭಾಗ ಮಟ್ಟದಲ್ಲಿ ನಡೆಯುವ ಜಾನಪದ ತಂಡಗಳ ಕಲಾ ಪ್ರದರ್ಶನದ ಸ್ಪರ್ಧೆಗೆ ಅರ್ಹತೆ ಪಡೆದಿವೆ. ಈ ತಂಡಗಳಿಗೆ ಕೊಪ್ಪಳದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಭಿನಂದನೆಗಳನ್ನು ಸಲ್ಲಿಸಿದ್ದು, ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಈ ವಿಜೇತ ತಂಡಗಳು ಇಲಾಖೆಯನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ತರಬೇತಿ

ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ): ಕೃಷಿ ಭಾಗ್ಯ ಯೋಜನೆಯಡಿ ರೈತರು ಪಾಲಿಹೌಸ್ ನಿರ್ಮಿಸಿಕೊಳ್ಳುವ ಮೂಲಕ ಸಂರಕ್ಷಿತ ಬೇಸಾಯ ಯೋಜನೆಯನ್ನು ಅಳವಡಿಸಿಕೊಂಡು, ಉತ್ತಮ ಲಾಭ ಪಡೆಯಬಹುದಾಗಿದೆ ಎಂದು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಹರ್ಷವರ್ಧನ ಅವರು ಹೇಳಿದರು.

      ಕೊಪ್ಪಳದ ಕಿನ್ನಾಳ ರಸ್ತೆಯ ರೈತರ ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಾಣದ ಉಪಯುಕ್ತತೆ ಕುರಿತಂತೆ ರೈತರಿಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
   ಪಾಲಿಹೌಸ್‍ನಲ್ಲಿ ಗುಲಾಬಿ ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು,  ಬಯಲು ಜಮೀನಿನಲ್ಲಿ ಗುಲಾಬಿ ಉತ್ತಮ ನಿರ್ವಹಣೆ ಮಾಡಿದರೆ ಎಕರೆಗೆ ಕೇವಲ ಒಂದು ಲಕ್ಷ ಹೂಗಳ ಇಳುವರಿ ಪಡೆಯಬಹುದು. ಆದರೆ ಪಾಲಿಹೌಸ್ ನಿರ್ಮಿಸಿಕೊಂಡಲ್ಲಿ ಕೇವಲ 10 ಗುಂಟೆಯಲ್ಲಿ 2 ಲಕ್ಷಕ್ಕೂ ಮೇಲ್ಪಟ್ಟು ಹೂ ಗಳ ಇಳುವರಿ ಪಡೆಯಬಹುದು.  ಆದ್ದರಿಂದ ಪಾಲಿಹೌಸ್ ತಾಂತ್ರಿಕತೆಯಿಂದಾಗಿ ಎರಡರಷ್ಟು ಆದಾಯವನ್ನು ಮತ್ತು ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು ಎಂದರು.


   ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರೈತರು ಸಂರಕ್ಷಿತ ಬೇಸಾಯ ಯೋಜನೆ ಅಡಿ ಪಾಲಿಹೌಸ್ ನಿರ್ಮಿಸಿಕೊಂಡು ಗುಣಮಟ್ಟದ ಉತ್ಪನ್ನ ಪಡೆದು ಹೆಚ್ಚಿನ ಲಾಭಗಳಿಸಬೇಕೆಂದು ತಿಳಿಸಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶೈಲೇಂದ್ರ ಬಿರಾದಾರ ರವರು ಮಾತನಾಡಿ ಕೃಷಿ ಭಾಗ್ಯ ಯೋಜನೆಯಡಿ ಪಾಲಿ ಹೌಸ್ ನಿರ್ಮಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದ್ದು, ಆಯ್ಕೆಯಾದ ಫಲಾನುಭವಿಗಳು ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ ಕರೆ ನೀಡಿದರು.  ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ, ಪಾಲಿಹೌಸ್ ನಿರ್ಮಾಣ ಕುರಿತಂತೆ ತಾಂತ್ರಿಕ ಮಾಹಿತಿ ನೀಡಿದರು. ಕೃಷಿ ವಿಸ್ತರಣಾ ಘಟಕದ ಡಾ. ಯುಸೂಫ್ ಅಲಿ, ಕೃಷ ಭಾಗ್ಯ ಯೋಜನೆಯಡಿ ಪಡೆಯಬಹುದಾದ ಇತರೆ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು.    
ಕೇಂದ್ರ ಸ್ಥಾನಿಕ ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ, ಸಹಾಯಕ ತೋಟಗಾರಿಕೆ ಅಧಿಕಾರಿ   ಪಾಲಾಕ್ಷಪ್ಪ ಮತ್ತು ತೋಟಗಾರಿಕೆ ಸಹಾಯಕರುಗಳಾದ ವಿರುಪಾಕ್ಷ, ಮಲ್ಲಿಕಾರ್ಜುನ ಬಂಡಿ, ವೆಂಕಟೇಶ ದೇಸಾಯಿ, ಪ್ರಗತಿಪರ ರೈತರಾದ ವಿಜಯಕುಮಾರ ಚವಡಿ, ಗಾಳೆಪ್ಪ ಸುಣಗಾರ, ಅಲ್ಲದೇ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾದ 30 ಕ್ಕೂ ಹೆಚ್ಚು ಜನ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.