Saturday, 31 January 2015

ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು : ಸಿ.ವಿ. ಜಡಿಯವರ್


ಕೊಪ್ಪಳ ಜ.31(ಕರ್ನಾಟಕ ವಾರ್ತೆ): ದೇಶದ ನಿಜವಾದ ಸಂಪತ್ತು ಯುವಜನತೆ. ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣರಾಬೇಕು ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವರು ಯುವಕರಿಗೆ ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಕ್ಕಳ ಸಹಾಯವಾಣಿ 1098, ಇವರ ಸಂಯುಕ್ತ ಆಶ್ರಯದಲ್ಲಿ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಹಾಗೂ ಜನಜಾಗೃತಿ ಕುರಿತ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದ್ದು ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಅವಧಿಯಲ್ಲಿ ದುಶ್ಚಟಗಳಿಂದ ದೂರವಿದ್ದು ನಿರಂತರ ಅಧ್ಯಯನ ನಡೆಸಿದರೆ ಗುರಿ ತಲುಪಬಹುದು. ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವಿ.ಹೆಚ್. ಮಂಡಸೊಪ್ಪಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಮೂರು ತತ್ವಗಳಾದ ಕೆಟ್ಟದನ್ನು ಕೇಳಬಾರದು, ಕೆಟ್ಟದನ್ನು ಮಾತನಾಡಬಾರದು, ಕೆಟ್ಟದ್ದನ್ನು ನೋಡಬಾರದು ಎನ್ನುವ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಗುಟ್ಕಾ ಸೇವನೆ ಮೊದಲಾದ ಕೆಟ್ಟ ಚಟಗಳಿಗೆ ಬಲಿಯಾಗದಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ವಾರ್ತಾ ಇಲಾಖೆಯ ಎಂ. ಅವಿನಾಶ್, ಉಪನ್ಯಾಸಕರಾದ ರಂಗಮ್ಮ ಹೆಚ್.ಕೆ., ಜಮುನಾ, ಎಂ.ಎಫ್.ಸೂಡಿ, ನಾಗಲಿಂಗಪ್ಪ ಖಂಡ್ರಿ, ಬಸವರಾಜ ಹಂದ್ರಾಳ, ವಿನಯ್, ಶ್ಯಾಮಶಾವಿ, ವಿದ್ಯಾದರ ಉಪಸ್ಥಿತರಿದ್ದರು. ರಾಜಶೇಖರ ಪಾಟೀಲ್ ಸ್ವಾಗತಿಸಿದರು, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಲ್‍ವಿಆರ್ ಪ್ರಸಾದರವರು ಮಕ್ಕಳ ಸಹಾಯವಾಣಿ-1098 ಕಾರ್ಯವೈಖರಿ ಕುರಿತು ವಿವರಿಸಿದರು, ಅಶ್ವೀನಿ ಭಾವಿಕಟ್ಟಿ ಪ್ರಾರ್ಥಿಸಿದರು, ಮಕ್ಕಳ ಸಹಾಯವಾಣಿ-1098 ತಂಡದ ಸದಸ್ಯ ಶಾಂತಕುಮಾರ ಗೌರಿಪುರ ಕಾರ್ಯಕ್ರಮವನ್ನು ನಿರೂಪಿಸಿದರು.

ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ 07 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕೊಪ್ಪಳ ಜ. 31 (ಕರ್ನಾಟಕ ವಾರ್ತೆ): ಕಳೆದ ಒಂದು ವರ್ಷದ ಹಿಂದೆ ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಬಳಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
     ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಶರಣಪ್ಪ ಎಂಬಾತನೆ ಶಿಕ್ಷೆಗೆ ಒಳಗಾದ ಆರೋಪಿ.  ಕಳೆದ 2014 ರ ಜನವರಿ 03 ರಂದು ಲಿಂಗನಬಂಡಿ ಗ್ರಾಮದಿಂದ ಹಿರೇಅರಳಿಹಳ್ಳಿ ಗ್ರಾಮದ ಪ್ರೌಢಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಆರೋಪಿ ಶರಣಪ್ಪ, ತಾನು ಮದುವೆಯಾಗುವುದಾಗಿ ನಂಬಿಸಿ, ತನ್ನ ಟಂಟಂ ವಾಹನದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಊರುಗಳಿಗೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದ.  ಈ ಕುರಿತಂತೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.  ಪ್ರಕರಣದ ತನಿಖೆ ನಡೆಸಿದ ಯಲಬುರ್ಗಾ ಪಿಎಸ್‍ಐ ನಾಗರಾಜ ಕಮ್ಮಾರ ಅವರು  ನ್ಯಾಯಾಲಯಕ್ಕೆ ಆರೋಪಿ ವಿರುದ್ಧದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ ಎಸ್ ಸಪ್ಪನ್ನವರ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಕಲಂ 363 ರ ಅಡಿ ಮಾಡಿದ ಅಪರಾಧಕ್ಕೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ. ದಂಡ.  ಕಲಂ 366 ರಡಿ ಅಪರಾಧಕ್ಕಾಗಿ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ. ದಂಡ.  ಕಲಂ 376 ರ ಅಡಿ ಮಾಡಿದ ಅಪರಾಧಕ್ಕೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ. ದಂಡ. ಹಾಗೂ ಪೋಕ್ಸೊ ಕಾಯ್ದೆಯಡಿ ಮಾಡಿದ ಅಪರಾಧಕ್ಕೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.  ಕೊಪ್ಪಳದ ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕ ಸಿ.ಎಸ್. ಮುಟಗಿ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

ವಿವಿಧ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಜ.31(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿಗಳನ್ನು ಫೆ.02 ರಿಂದ ಎಲ್ಲಾ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ, ತಾಲೂಕ ಸಮಾಜ ಕಲ್ಯಾಣ, ಹಿಂದುಳಿದ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದು. ಸಂಬಂಧಪಟ್ಟ ವಸತಿ ಶಾಲಾ ಪ್ರವೇಶ ಪರೀಕ್ಷಾ ಅರ್ಜಿ ಸ್ವೀಕೃತಿ ಕೇಂದ್ರದ ಪ್ರಾಂಶುಪಾಲರಿಗೆ ಭರ್ತಿ ಮಾಡಿ ಮತ್ತು ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಸೂಚಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ಫೆ.25 ರೊಳಗಾಗಿ ಸಲ್ಲಿಸಬಹುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಫೆ.09 ರಂದು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಕಾರ್ಯಾಗಾರ

ಕೊಪ್ಪಳ ಜ.31(ಕರ್ನಾಟಕ ವಾರ್ತೆ):  ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಕೊಪ್ಪಳ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಫೆ.09 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
     ಕೊಪ್ಪಳ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಜರುಗುವ ಈ ಕಾರ್ಯಾಗಾರದಲ್ಲಿ ಪಿಡಿಓ ಗಳು, ಕರವಸೂಲಿಗಾರರು, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎ.ಎನ್.ಎಂ.ಗಳು, ಆಶಾ ಕಾರ್ಯಕರ್ತೆಯರು ಹಾಗೂ ನಗರಸಭೆಯ ಕಂದಾಯ ನಿರೀಕ್ಷಕರು ಹಾಗೂ ಆರೋಗ್ಯ ನಿರೀಕ್ಷಕರು ಭಾಗವಹಿಸಲಿದ್ದಾರೆ.  ಯೋಜನೆಯನ್ನು ತಾಲೂಕಿನಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗರಿಷ್ಟ 5 ಜನ ಕುಟುಂಬದ ಸದಸ್ಯರು ಒಳಗೊಂಡಂತಂಹ ಕುಟುಂಬಗಳಿಗೆ ನೋಂದಣಿ ಮಾಡಿಸಲು ಈಗಾಗಲೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ತಹಶೀಲ್ದಾರರು ತಿಳಿಸಿದ್ದಾರೆ.

ಒಣಬೇಸಾಯ ಕೃಷಿಕರ ಆರ್ಥಿಕ ಸಬಲತೆಗೆ ಸರ್ಕಾರ ಬದ್ಧ- ಕೃಷ್ಣ ಭೈರೇಗೌಡ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಮಳೆಯನ್ನೇ ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಸ್ಥಿತಿ ಕಷ್ಟದಾಯಕವಾಗಿದ್ದು, ಒಣಬೇಸಾಯ ಆಧಾರಿತ ರೈತರ ಆರ್ಥಿಕ ಸಬಲತೆಗೆ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಇನ್ನೂ ಹೆಚ್ಚಿನ ನೆರವು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

     ಕೊಪ್ಪಳ ತಾಲೂಕು ಹಾಸಗಲ್ ಗ್ರಾಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಹಾಗೂ ರೈತರೊಂದಿಗೆ ಶನಿವಾರದಂದು ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


     ರಾಜ್ಯದಲ್ಲಿ ಶೇ. 70 ರಷ್ಟು ಮಳೆ ಆಶ್ರಿತ ಬೇಸಾಯ ಮಾಡುವ ರೈತರಿದ್ದಾರೆ.  ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಇತ್ಯಾದಿ ಕೃಷಿ ಸಾಮಗ್ರಿಗಳನ್ನು ಸರ್ಕಾರ ನೀಡುತ್ತದೆ.  ಆದರೆ ಸಮಯಕ್ಕೆ ಸರಿಯಾಗಿ ಮಳೆ ಆಗದಿದ್ದಲ್ಲಿ, ಸರ್ಕಾರ ಹಾಗೂ ರೈತರ ಶ್ರಮ ವ್ಯರ್ಥವಾಗಲಿದೆ.  ಇಂತಹ ಸ್ಥಿತಿಗತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಕೃಷಿ ಮತ್ತು ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ, ಒಣಬೇಸಾಯ ಆಧಾರಿತ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.  ಮಳೆಗಾಲದಲ್ಲಿ ಜಮೀನಿನಲ್ಲಿ ಬಿದ್ದಂತಹ ಮಳೆ ನೀರು ವ್ಯರ್ಥವಾಗಬಾರದು.  ಹನಿ, ಹನಿ ನೀರನ್ನೂ ಸಂರಕ್ಷಿಸಿ, ಉಪಯುಕ್ತಗೊಳಿಸುವ ಬದ್ಧತೆಯನ್ನು ಎಲ್ಲರೂ ತೋರಬೇಕಿದೆ.  ಈ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಗರಿಷ್ಠ 1. 84 ಲಕ್ಷ ರೂ. ವೆಚ್ಚದಲ್ಲಿ ಕೃಷಿ ಹೊಂಡ, ತಾಡಪತ್ರಿ, ಡೀಸೆಲ್ ಪಂಪ್‍ಸೆಟ್, ಸ್ಪ್ರಿಂಕ್ಲರ್ ವ್ಯವಸ್ಥೆ, ಸಿಮೆಂಟ್ ಪೈಪ್, ಕೃಷಿ ಬೆಳೆಪದ್ಧತಿ ಸೌಕರ್ಯವನ್ನು ಒದಗಿಸಲಿದೆ.  ಇದರಲ್ಲಿ ರೈತರು ಕೇವಲ 40 ಸಾವಿರ ರೂ. ಮಾತ್ರ ಭರಿಸಬೇಕಾಗುತ್ತದೆ.  ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಗುಣವಾಗಿ ಕೃಷಿ ಹೊಂಡದ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ.  ಮಳೆಗಾಲದ ಸಂದರ್ಭದಲ್ಲಿ ಒಮ್ಮೆ ಕೃಷಿ ಹೊಂಡ ಭರ್ತಿಯಾದಲ್ಲಿ, ರೈತರು ಉತ್ತಮ ಬೆಳೆ ಬೆಳೆಯುವುದರ ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದಾಗಿದೆ.  ಶೇ. 70ರಷ್ಟು ಇರುವ ಒಣಬೇಸಾಯ ರೈತರು ಅಭಿವೃದ್ಧಿಯಾದಲ್ಲಿ ಕೃಷಿ ವಲಯವೇ ಅಭಿವೃದ್ಧಿಯಾದಂತೆ ಆಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.


ಕೃಷಿಭಾಗ್ಯ ಮಾದರಿಯಾಗಲಿದೆ : ಒಣ ಬೇಸಾಯ ಆಧಾರಿತ ರೈತರ ಹಿತಕಾಯುವ ಸಲುವಾಗಿ ಜಾರಿಗೆ ತಂದಿರುವ ಕೃಷಿ ಭಾಗ್ಯ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳು ಇದೇ ವರ್ಷದ ಮೊದಲ ಹಂತ ಫಲಾನುಭವಿಗಳಾಗಿದ್ದು, ಯೋಜನೆಯ ಸದುಪಯೋಗ ಪಡೆದುಕೊಂಡು ಶ್ರಮವಹಿಸುವ ರೈತರು ಇತರೆ ರೈತರಿಗೆ ಮಾದರಿಯಾಗಲಿದ್ದು, ಕೃಷಿ ಭಾಗ್ಯ ಯೋಜನೆಯು ಕೂಡ ಮಾದರಿ ಯೋಜನೆಯಾಗಲಿದೆ ಎಂದು ಸಚಿವರು ಹೇಳಿದರು.
ಪ್ರತಿ ತಾಲೂಕಿಗೆ 200 ಹೆಚ್ಚುವರಿ ಫಲಾನುಭವಿಗಳು : ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು 840 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.  ರಾಜ್ಯದ ಒಟ್ಟು 107 ತಾಲೂಕುಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಯೋಜನೆಗಾಗಿ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗಿವೆ.
ಬರುವ ಫೆಬ್ರವರಿ ತಿಂಗಳಿನಲ್ಲಿ ಪ್ರತಿ ತಾಲೂಕಿಗೆ ಹೆಚ್ಚುವರಿ 200 ಫಲಾನುಭವಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ಮಳೆಗಾಲ ಆರಂಭವಾಗುವುದರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಭೈರೇಗೌಡ ಅವರು ಹೇಳಿದರು.
           ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೃಷಿಯಲ್ಲಿ ರೈತರ ಭವಿಷ್ಯ ಅಡಗಿದೆ.  ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ಯೋಜನೆಯ ಲಾಭ ದೊರಕುವಂತೆ ಮಾಡಲು, ಮುಂದಿನ ಬಜೆಟ್‍ನಲ್ಲಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.   

      ರಾಯಚೂರು ಕೃಷಿ ವಿವಿ ಕುಲಪತಿ ಡಾ. ಪಿ.ಎಂ. ಸಾಲಿಮಠ, ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರದ ನಿರ್ದೇಶಕ ಕೆ.ಪಿ. ವಿಶ್ವನಾಥ್, ಜಿ.ಪಂ. ಸದಸ್ಯರುಗಳಾದ ಅಶೋಕ್ ತೋಟದ, ಜನಾರ್ಧನ ಹುಲಿಗಿ, ಜಂಟಿಕೃಷಿ ನಿರ್ದೇಶಕ ಹುನಗುಂದ ಸೇರಿದಂತೆ ಹಲವು ಅಧಿಕಾರಿಗಳು,ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.    

ಬೆಳಗಾವಿಯಲ್ಲಿ ಫೆ.20 ರಿಂದ ಭಾರತೀಯ ಸೇನಾ ಭರ್ತಿ ರ್ಯಾಲಿ

ಕೊಪ್ಪಳ,ಜ.31(ಕರ್ನಾಟಕ ವಾರ್ತೆ): ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಾದ ಸೊಲ್ಡೀಯರ್ ಜನರಲ್ ಡ್ಯೂಟಿ, ಸೋಲ್ಡೀಯರ್ ಟೆಕ್ನಿಕಲ್ ಹಾಗೂ ಸೋಲ್ಡೀಯರ್ ಕ್ಲರ್ಕ್/ಸ್ಟೋರ್ ಕೀಫರ್ ಹುದ್ದೆಗಳ ಭರ್ತಿಗಾಗಿ ನೇಮಕಾತಿ ರ್ಯಾಲಿಯನ್ನು ಫೆ.20 ರಿಂದ 23 ರವರೆಗೆ ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯ ಮೈದಾನದಲ್ಲಿ ಏರ್ಪಡಿಸಲಾಗಿದೆ.
             ಫೆ.20 ರಂದು ಸೋಲ್ಡೀಯರ್ ಕ್ಲರ್ಕ್/ಸ್ಟೋರ್ ಕೀಫರ್ ಹುದ್ದೆಗಳಿಗೆ (17 ರಿಂದ 23 ವರ್ಷ, ಫೆ.20 1992 ರಿಂದ ಆ.20 1997 ರೊಳಗೆ ಜನಿಸಿರಬೇಕು) ನೇಮಕಾತಿ ಜರುಗಲಿದ್ದು ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು, ಸೋಲ್ಡೀಯರ್ ಟೆಕ್ನಿಕಲ್ ಹುದ್ದೆಗೆ (17 ರಿಂದ 21 ವರ್ಷ, ಫೆ.20 1994 ರಿಂದ ಆ.20 1997 ರೊಳಗೆ ಜನಿಸಿರಬೇಕು) ಬೀದರ, ಗುಲ್ಬರ್ಗಾ, ಕೊಪ್ಪಳ, ರಾಯಚೂರು, ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಫೆ.21 ರಂದು ಸೊಲ್ಡೀಯರ್ ಜನರಲ್ ಡ್ಯೂಟಿ ಹುದ್ದೆಗೆ (17 ರಿಂದ 21 ವರ್ಷ, ಫೆ.20 1994 ರಿಂದ ಆ.20 1997 ರೊಳಗೆ ಜನಿಸಿರಬೇಕು) ನೇಮಕಾತಿ ಜರುಗಲಿದ್ದು, ಬೀದರ, ಗುಲ್ಬರ್ಗಾ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಗೋಕಾಕ್ ತಾಲೂಕುಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಫೆ.22 ರಂದು ಸೊಲ್ಡೀಯರ್ ಜನರಲ್ ಡ್ಯೂಟಿ ಹುದ್ದೆಗೆ (17 ರಿಂದ 21 ವರ್ಷ, ಫೆ.20 1994 ರಿಂದ ಆ.20 1997 ರೊಳಗೆ ಜನಿಸಿರಬೇಕು) ನೇಮಕಾತಿ ಜರುಗಲಿದ್ದು ಅಂದು ಬೆಳಗಾವಿ ಜಿಲ್ಲೆಯ ಖಾನಾಪುರ, ರಾಯಬಾಗ, ಬೆಳಗಾವಿ, ಸವದತ್ತಿ ತಾಲೂಕುಗಳ ಅಭ್ಯರ್ಥಿಗಳು ಭಾಗವಹಿಸಬಹುದು. ಫೆ.23 ರಂದು ಸೊಲ್ಡೀಯರ್ ಜನರಲ್ ಡ್ಯೂಟಿ ಹುದ್ದೆಗೆ (17 ರಿಂದ 21 ವರ್ಷ, ಫೆ.20 1994 ರಿಂದ ಆ.20 1997 ರೊಳಗೆ ಜನಿಸಿರಬೇಕು) ನೇಮಕಾತಿ ಜರುಗಲಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರ, ಅಥಣಿ, ಚಿಕ್ಕೋಡಿ ಹಾಗೂ ರಾಮದುರ್ಗ ತಾಲೂಕುಗಳ ಅಭ್ಯರ್ಥಿಗಳು ಭಾಗವಹಿಸಬಹುದು.
              ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 21 ವರ್ಷದೊಳಗಿರಬೇಕು. ಈ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಐಟಿಐ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳನ್ನು ದೈಹಿಕ ಸಾಮಥ್ರ್ಯ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. 12 ಕಲರ್ ಫೋಟೋ, ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಆರ್ಮಿ ರಿಕ್ರೂಯಿಟಿಂಗ್ ಆಫೀಸ್ ಫಾರ್ಟ್, ಬೆಳಗಾವಿ-590016 ಕ್ಕೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು 0831-2465550 ಅಥವಾ  www.zrobangalore.gov.in ಅಥವಾ 080-25599290 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳಾಪುರ : ಫೆ.03 ರಿಂದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ

ಕೊಪ್ಪಳ,ಜ.31(ಕರ್ನಾಟಕ ವಾರ್ತೆ): ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು, ಸರ್ಕಾರಿ ಪಾಲಿಟೆಕ್ನಿಕ್ ಕೊಪ್ಪಳ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಫೆ.03 ರಿಂದ 09 ರವರೆಗೆ ಮಂಗಳಾಪುರ ಗ್ರಾಮದಲ್ಲಿ ಜರುಗಲಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಜಿ.ಪಂ.ಸದಸ್ಯೆ ಭಾಗೀರಥಿ ಶಂಕರಗೌಡ ಪಾಟೀಲ್ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎ.ಆರ್.ಶಿವಕುಮಾರ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ದೇವಪ್ಪ ಗುಡ್ಲಾನೂರು, ಕೋಳೂರು ಗ್ರಾ.ಪಂ.ಅಧ್ಯಕ್ಷೆ ಯಲ್ಲಮ್ಮ ದೇವಪ್ಪ ವಾಲಿಕಾರ,  ಗ್ರಾ.ಪಂ.ಸದಸ್ಯರಾದ ದೌಲತ್‍ಸಾಬ ಹಸನಸಾಬ ಮುಜಾವರ, ಜೆನಾಬೀ ಅಮೀನಸಾಬ ಕರಡಿ, ಮಹ್ಮದ್ ಹುಸೇನ್ ಬಾಷಸಾಬ ಅಳವಂಡಿ ಅವರು ಪಾಲ್ಗೊಳ್ಳುವರು.
    ಫೆ.04 ರಂದು ಸಂಜೆ 3.30 ಕ್ಕೆ  ರಾಷ್ಟ್ರೀಯ ಸೇವಾ ಯೋಜನೆ ಮಹತ್ವದ ಕುರಿತು ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕ ಬಸವರಾಜ ಪೂಜಾರ ಅವರು ಉಪನ್ಯಾಸ ನೀಡುವರು. ಫೆ.05 ರಂದು ಸಂಜೆ 3.30 ಕ್ಕೆ ಸ್ವಾಮಿ ವಿವೇಕಾನಂದರ ಸಂದೇಶಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಎನ್‍ಎಸ್‍ಎಸ್ ಅಧಿಕಾರಿಯಾದ ಶರಣಬಸಪ್ಪ ಬಿಳೆಎಲಿ ಅವರಿಂದ, ಫೆ.06 ರಂದು ಸಂಜೆ 3.30 ಕ್ಕೆ ಕೊಪ್ಪಳದಲ್ಲಿರುವ ಅಶೋಕ ಶಿಲಾಶಾಸನ ಕುರಿತು ಶ್ರೀ ಗವಿಸಿದ್ದೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಎಂ.ಕಂಬಾಳಿಮಠ ಅವರಿಂದ, ಫೆ.07 ರಂದು ಯುವಕರ ಮನಸ್ಸಿನಲ್ಲಿರುವ ದುಗುಡಗಳು ಮತ್ತು ಪರಿಹಾರ ಕುರಿತು ನಂದಿನಗರದ ಶಿಕ್ಷಕಿ, ಸಮೃದ್ಧಿ ವಿಜಯಲಕ್ಷ್ಮಿ ಕೊಟಗಿ ಅವರಿಂದ, ಫೆ.08 ರಂದು ಸಾಹಿತ್ಯ ಹಾಗೂ ವಿದ್ಯಾರ್ಥಿಗಳು ಕುರಿತು ನಿವೃತ್ತ ಪ್ರಾಚಾರ್ಯ ಡಾ.ಮಹಾಂತೇಶ ಮಲ್ಲನಗೌಡ್ರ ಅವರು ಉಪನ್ಯಾಸ ನೀಡುವರು.
ಫೆ.09 ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎ.ಆರ್.ಶಿವಕುಮಾರ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಉಮಾಪತಿ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಹೆಚ್.ಯು.ತಳವಾರ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಆಡಳಿತಾಧಿಕಾರಿ ಟಿ.ಟಿ.ಪೂಜಾರ, ಯುವಜನ ಸೇವಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನೆ ಕೋಶದ ರಾಜ್ಯ ಸಂಪರ್ಕಾಧಿಕಾರಿ ಡಾ|| ಗಣನಾಥ ಎಕ್ಕಾರ್, ಭಾರತ ಸರಕಾರದ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂಥೀಯ ಕೇಂದ್ರದ ಸಹಾಯಕ ಕಾರ್ಯಕ್ರಮ ಸಲಹೆಗಾರ ಎ.ಎನ್.ಪೂಜಾರ, ರಾಷ್ಟ್ರೀಯ ಸೇವಾ ಯೋಜನೆಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಾರ್ಯಕ್ರಮ ಸಂಯೋಜನಾಧಿಕಾರಿ ಉಮಾಪತಿ ಅವರು ಪಾಲ್ಗೊಳ್ಳುವರು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎ.ಆರ್.ಶಿವಕುಮಾರ ಅವರು ತಿಳಿಸಿದ್ದಾರೆ.

Friday, 30 January 2015

ದುಶ್ಚಟಗಳಿಂದ ಯುವಪೀಳಿಗೆ ದೂರವಿರಲಿ - ಜೆ.ಪಿ. ಬೆನ್ನೂರ


ಕೊಪ್ಪಳ ಜ. 30 (ಕರ್ನಾಟಕ ವಾರ್ತೆ) :  ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಇರಕಲ್ಲಗಡ ಸರ್ಕಾರಿ ಪ.ಪೂ. ಕಾಲೇಜು ಉಪನ್ಯಾಸಕ ಜೆ.ಪಿ. ಬೆನ್ನೂರ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಕ್ಕಳ ಸಹಾಯವಾಣಿ 1098,  ಇವರ ಸಂಯುಕ್ತ ಆಶ್ರಯದಲ್ಲಿ ಇರಕಲ್ಲಗಡದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಹಾಗೂ ಜನಜಾಗೃತಿ ಕುರಿತ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


     ದುಶ್ಚಟಗಳು ಸಮಾಜದ ಶಾಂತಿಭಂಗ, ಅನಾರೋಗ್ಯಕ್ಕೆ ಕಾರಣವಾಗುವುದರಿಂದ, ಯುವಜನತೆ ಮಾದಕ ಲೋಕದಿಂದ ದೂರವಾಗಿ, ಸತ್ಸಂಗ ಕಾರ್ಯಗಳಲ್ಲಿ ಸಕ್ರಿಯರಾಗಬೇಕು. ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ. ಸಮಾಜದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಜೀವನ ಶೈಲಿ ಮಾನಸಿಕ ಒತ್ತಡ, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ.  ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ರೋಗಗಳಿಗೆ ಒಳಗಾಗುತ್ತಿದ್ದಾರೆ.  ಇದಕ್ಕೆ ಪರಿಹಾರವೆಂದರೆ ಸಜ್ಜನರ ಸಹವಾಸ ಮತ್ತು ಮದ್ಯ, ಮಾದಕಗಳ ಬಗ್ಗೆ ತಿರಸ್ಕಾರ ಮನೋಭಾವ ಬೆಳೆಸಿಕೊಳ್ಳುವುದಾಗಿದೆ ಎಂದರು.
     ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದ ಸಿ.ವಿ. ಜಡಿಯವರ್ ಅವರು, ‘ಮಾನವ ಜನ್ಮ ದೊಡ್ಡದು, ಇದನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ’ ಎಂಬ ದಾಸರ ವಾಣಿಯಂತೆ ಶರಣರು, ಸಂತರು, ದಾರ್ಶನಿಕರ ಮಾರ್ಗ ಅನುಸರಿಸುವದರಿಂದ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ.  ಒಳ್ಳೆಯ ಹವ್ಯಾಸಗಳು ಸಾವನ್ನು ದೂರಕ್ಕೆ ದೂಡಿದರೆ, ದುಶ್ಚಟಗಳು ಸಾವನ್ನು ಹತ್ತಿರ ತರುತ್ತವೆ.   ದುಶ್ಚಟಗಳಿಂದ ದೂರವಿರಬೇಕು ಎಂದರೆ, ಕ್ರೀಡೆಗಳಂತಹ ಉತ್ತಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
      ಸರ್ವೋದಯ ಸಂಸ್ಥೆ ಜಿಲ್ಲಾ ಸಂಚಾಲಕ ಶರಣಪ್ಪ ತೆಮ್ಮಿನಾಳ ಅವರು ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಸಹಾಯವಾಣಿ-1098 ಕುರಿತು ಮಾತನಾಡಿ, ರಾಜ್ಯದ ಕೊಪ್ಪಳ ಜಿಲ್ಲೆಯೂ ಸೇರಿದಂತೆ 17 ಜಿಲ್ಲೆಳಲ್ಲಿ ಮಕ್ಕಳ ಸಹಾಯವಾಣಿ- 1098 ಕಾರ್ಯ ನಿರ್ವಹಿಸುತ್ತಿದ್ದು, ಶೋಷಣೆಗೆ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗೆ ನೆರವು ಕಲ್ಪಿಸಲು ನೆರವಾಗುವಂತೆ ಮನವಿ ಮಾಡಿದರು.
     ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜಶೇಖರ ಅಂಗಡಿ, ಖಾಜಾಬಿ, ಶರಣಪ್ಪ ತೊಣಸಿಹಾಳ ಅವರು ಉಪಸ್ಥಿತರಿದ್ದರು.  ಜಿ. ಮಿಯಾಸಾಬ್ ಸ್ವಾಗತಿಸಿದರು, ಶರಣಪ್ಪ ವಂದಿಸಿದರು, ಆರ್.ಎಸ್. ಸರಗಣಾಚಾರ್ ಕಾರ್ಯಕ್ರಮ ನಿರೂಪಿಸಿದರು.  ಅನ್ನಪೂರ್ಣ ಪ್ರಾರ್ಥನೆಗೈದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾರುಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಶುಕ್ರವಾರದಂದು ಕೊಪ್ಪಳ ತಾಲೂಕು ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿ, ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


     ಮುಖ್ಯಮಂತ್ರಿಗಳು ಶುಕ್ರವಾರದಂದು ಕುಷ್ಟಗಿಯಲ್ಲಿನ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದರು.  ಹಾಸ್ಟೆಲ್ ಭೇಟಿ ಕುರಿತು ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮ ಇರಲಿಲ್ಲವಾದರೂ, ಕುಷ್ಟಗಿಯಲ್ಲಿನ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಕೊಪ್ಪಳ ಮಾರ್ಗವಾಗಿ ಎಂಎಸ್‍ಪಿಎಲ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಟಣಕನಕಲ್ ಬಳಿ ರಸ್ತೆಯ ಪಕ್ಕದಲ್ಲೇ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದರು.  ಮುಖ್ಯಮಂತ್ರಿಗಳ ದಿಢೀರ್ ಭೇಟಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ರೋಚಕ ಅನುಭವ ಒಂದೆಡೆಯಾದರೆ, ಸ್ವಯಂ ಮುಖ್ಯಮಂತ್ರಿಗಳೇ ನಮ್ಮನ್ನು ಭೇಟಿಯಾಗಲು ಬಂದರಲ್ಲ ಎಂಬ ಸಂತಸ ಇನ್ನೊಂದು ಕಡೆ.  ವಿದ್ಯಾರ್ಥಿಗಳೊಂದಿಗೆ ಸಂತಸದಿಂದ ಬೆರೆತ ಮುಖ್ಯಮಂತ್ರಿಗಳು,  ವಸತಿಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟೋಪಹಾರ, ವಸತಿ ವ್ಯವಸ್ಥೆ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಬಗ್ಗೆ ವಿಚಾರಣೆ ನಡೆಸಿದರು.  ವಸತಿ ಶಾಲೆಯಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿರುವ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ವಸತಿ ಶಾಲೆಯ ವಾತಾವರಣ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಜಿಲ್ಲಾ ಬಿಸಿಎಂ ಅಧಿಕಾರಿ ಬಿ. ಕಲ್ಲೇಶ್ ಅವರಿಂದ, ವಸತಿ ಶಾಲೆಯ ಕಳೆದ ವರ್ಷದ ಎಸ್‍ಎಸ್‍ಎಲ್‍ಸಿ ಫಲಿತಾಂಶದ ವಿವರ ಪಡೆದ ಮುಖ್ಯಮಂತ್ರಿಗಳು, ಹಾಸ್ಟೆಲ್‍ನಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾದ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು.  ಕಳೆದ ವರ್ಷ ಇದೇ ಹಾಸ್ಟೆಲ್‍ನ ವಿದ್ಯಾರ್ಥಿ ಶೇ. 95 ಅಂಕ ಪಡೆದು ಉತ್ತೀರ್ಣರಾಗಿದ್ದನ್ನು ಕೇಳಿ, ಸಂತಸಗೊಂಡ ಮುಖ್ಯಮಂತ್ರಿಗಳು, ಎಲ್ಲ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.
     ರಾಜ್ಯ ಸಹಕಾರ ಸಚಿವ ಮಹದೇವ ಪ್ರಸಾದ್, ಆಹಾರ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ

ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜ. 30 ರಂದು
ಕೊಪ್ಪಳ ತಾಲೂಕು ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

Thursday, 29 January 2015

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರ ಜ. 30 ರ ಪ್ರವಾಸ ಕಾರ್ಯಕ್ರಮ ವಿವರ ಇಂತಿದೆ.
     ಸಚಿವರು ಅಂದು ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಬೆಳಿಗ್ಗೆ 9-20 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸುವರು.  ನಂತರ ಮುಖ್ಯಮಂತ್ರಿಗಳೊಂದಿಗೆ ಕುಷ್ಟಗಿಗೆ ತೆರಳಿ, ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವರು.  ಬೆಳಿಗ್ಗೆ 11.15 ಗಂಟೆಗೆ ಕುಷ್ಟಗಿಯಿಂದ ಹೊರಟು ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸಿ, ಮುಖ್ಯಮಂತ್ರಿಗಳೊಂದಿಗೆ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.  

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 29 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜ. 30 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.    
     ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಹೊರಟು, ಬೆಳಿಗ್ಗೆ 9-20 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ (ಎಂಎಸ್‍ಪಿಎಲ್ ವಿಮಾ ನಿಲ್ದಾಣ) ಆಗಮಿಸುವರು.  ನಂತರ ರಸ್ತೆ ಮೂಲಕ ಕುಷ್ಟಗಿಗೆ ತೆರಳಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವರು.  ಬೆಳಿಗ್ಗೆ 11-15 ಗಂಟೆಗೆ ಕುಷ್ಟಗಿಯಿಂದ ಹೊರಟು ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸಿ, ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.  

ಉಚಿತ ಕೋಳಿ ಸಾಕಾಣಿಕೆ ತರಬೇತಿ ಶಿಬಿರ

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟ ಇವರು ಕೋಳಿ ಸಾಕಾಣಿಕೆ ಬಗ್ಗೆ ಜನವರಿ-ಫೆಬ್ರುವರಿ ತಿಂಗಳಿನಲ್ಲಿ ಮೂರು ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
ಕೋಳಿ ಸಾಕಾಣಿಕೆಯಲ್ಲಿ ಅಧಿಕ ಉತ್ಪಾದನೆಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ  ತರಬೇತಿ ನೀಡಲಾಗುವುದು.  ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಫೆ.14 ರೊಳಗಾಗಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್‍ಮಿಲ್ ಆವರಣ, ಗದ್ದನಕೇರಿ ರೋಡ, ಬಾಗಲಕೋಟ-587103 ದೂರವಾಣಿ ಸಂಖ್ಯೆ: 08354-244028-244048, ಮೊ.9482630790 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಮೈಲಾರಲಿಂಗಸ್ವಾಮಿ ವಾರ್ಷಿಕ ಜಾತ್ರೆ : ವಿವಿಧ ಕಾರ್ಯಕ್ರಮಗಳು

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗಸ್ವಾಮಿಯ ವಾರ್ಷಿಕ ಜಾತ್ರೆಯ ಅಂಗವಾಗಿ ಕಾರ್ಣಿಕೋತ್ಸವ, ಸರಪಳಿ, ಪವಾಡ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
    ಜಾತ್ರೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಹಾಗೂ ವಿವಿಧ ರಾಜ್ಯಗಳಿಂದ ಸುಮಾರು 08 ರಿಂದ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ.  ಜಾತ್ರೆಯ ಅಂಗವಾಗಿ ಜ.26 ರಂದು ರಥಸಪ್ತಮಿ ಶ್ರೀ ಮಾರ್ತಾಂಡ ಭೈರವನ ಡೆಂಕನಮುರಡಿ ಆರೋಹಣ, ಕಡುಬಿನ ಕಾಳಗ, ಫೆ.03 ರಂದು ಭಾರತ ಹುಣ್ಣಿಮೆ, ಫೆ.04 ರಂದು ಧ್ವಜಾರೋಹಣ, ತ್ರಿಶೂಲ ಪೂಜೆ, ಫೆ.05 ರಂದು ಶ್ರೀ ಸ್ವಾಮಿಯ ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ ಹಾಗೂ ಸಂಜೆ 5.30 ಕ್ಕೆ ಕಾರ್ಣಿಕೋತ್ಸವ, ಫೆ.06 ಕ್ಕೆ ಮೈಲಾರಲಿಂಗ ಸ್ವಾಮಿಯ ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಕಂಚಿವೀರರಿಂದ ಪವಾಡ ಮತ್ತು ಗೊರವರಿಂದ ಸರಪಳಿ ಪವಾಡ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ರಿಯಾಯತಿ ಕನ್ನಡ ಪುಸ್ತಕ ಮಾರಾಟ ಮೇಳ

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚಾಮರಾಜನಗರ ಜಿಲ್ಲೆಯ ಪೇಟೆಶಾಲೆ ಮೈದಾನದಲ್ಲಿ ಫೆ.11 ರಿಂದ 15 ರವರೆಗೆ ಒಟ್ಟು ಐದು ದಿನಗಳ ಕಾಲ ರಿಯಾಯತಿ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
    ಈ ಪುಸ್ತಕ ಮೇಳದಲ್ಲಿ ಪ್ರಕಾಶನ ಸಂಸ್ಥೆಗಳು/ಪ್ರದರ್ಶಕರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ.1,500/- ಗಳ ಬಾಡಿಗೆ ಹಾಗೂ ರೂ.1,000/- ಗಳ ಭದ್ರತಾ ಠೇವಣಿ ನಿಗದಿಪಡಿಸಲಾಗಿದ್ದು, ಬಾಡಿಗೆ ಹಾಗೂ ಠೇವಣಿಯ ಡಿ.ಡಿ.ಯನ್ನು ಪ್ರತ್ಯೇಕವಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸಬಹುದು. ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಪ್ರದರ್ಶಕರು ನಿಗದಿತ ಅರ್ಜಿ ನಮೂನೆಯನ್ನು  ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಛೇರಿಯಲ್ಲಿ ಅಥವಾ ಪ್ರಾಧಿಕಾರದ ವೆಬ್‍ಸೈಟ್  www.kannadapusthakapradhikara.com  ನಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಫೆ.03 ರ ಸಂಜೆ 5.30 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ದೂರವಾಣಿ ಸಂಖ್ಯೆ: 080-22484516/22107704 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹೈ-ಕ ಸ್ಥಳೀಯ ವೃಂದ ರಚನೆ : ಅಭಿಮತ ಪತ್ರ ಸಲ್ಲಿಸಲು ಸೂಚನೆ

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲಂ 371(ಜೆ) ಅನ್ವಯ ವಿಶೇಷ ಮೀಸಲಾತಿ ಒದಗಿಸಲಾಗಿದ್ದು, ಇದರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕಾತಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಸಿ-ಗ್ರೂಪ್ ಹುದ್ದೆಗಳಲ್ಲಿ ಇರುವವರು, ಪ್ರಾದೇಶಿಕ ಸ್ಥಳೀಯ ವೃಂದ ಮತ್ತು ಉಳಿದ ಮೂಲ ವೃಂದಕ್ಕೆ ಸೇರಲು ಇಚ್ಛಿಸುವ ಅರ್ಹರು ತಮ್ಮ ಅಭಿಮತ ಪತ್ರವನ್ನು 45 ದಿನಗಳ ಒಳಗಾಗಿ ಸಲ್ಲಿಸಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಅವರು ತಿಳಿಸಿದ್ದಾರೆ.
       ಕರ್ನಾಟಕ ಸಾರ್ವಜನಿಕ ಉದ್ಯೋಗ ನಿಯಮಗಳು 2013 ರ ಅಧ್ಯಾಯ 4 ರ ನಿಯಮ 6 ರಂತೆ ಸ್ಥಳೀಯ ವ್ಯಕ್ತಿಗಳ ಮಾನದಂಡವನ್ನು ಪೂರೈಸುವ ಮತ್ತು ಆ ವೃಂದವನ್ನು ಸೇರಲು ಇಚ್ಚಿಸುವ ಅಧಿಕಾರಿ/ನೌಕರರು ಅನುಬಂಧ-ಸಿ ಯಲ್ಲಿ ನಿರ್ದಿಷ್ಠವಾದ ನಮೂನೆಯಲ್ಲಿ 45 ದಿನದೊಳಗಾಗಿ ಆಯ್ಕೆ ಮಾಡಿಕೊಳ್ಳಲು ಅಭಿಮತ ಪತ್ರವನ್ನು ಸಕ್ಷಮ ಪ್ರಾಧಿಕಾರದ ಮೂಲಕ ಸಲ್ಲಿಸಬೇಕು.  ಗ್ರೂಪ್- ಸಿ ಹುದ್ದೆಗಳವಾರು ಹೈ-ಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಹುದ್ದೆಗಳಲ್ಲಿ ಶೇ. 80 ರಷ್ಟು ಹುದ್ದೆಗಳನ್ನು ಪ್ರಾದೇಶಿಕ ಸ್ಥಳೀಯ ವೃಂದಕ್ಕೆ ಮೀಸಲಿರುತ್ತದೆ.  ಹೈ-ಕ ಪ್ರದೇಶಕ್ಕೆ ನೇಮಕಾತಿ ಮೀಸಲಾತಿಯಡಿ ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ ನಿಯಮಗಳ ಅನ್ವಯ,   ಪ್ರಾದೇಶಿಕ ಸ್ಥಳೀಯ ವೃಂದ ಅಥವಾ ಉಳಿದ ಮೂಲ ವೃಂದಕ್ಕೆ ಸೇರಲು ಇಚ್ಚಿಸುವವರು ತಮ್ಮ ಅಭಿಮತ ಪತ್ರವನ್ನು ಅನುಬಂಧ-ಸಿ ಯಲ್ಲಿ 45 ದಿನಗಳ ಒಳಗಾಗಿ ನೀಡಬೇಕು.  ಈ ರೀತಿಯ ಸ್ಥಳೀಯ ಮೂಲ ವೃಂದ ಇಲ್ಲವೇ ಉಳಿದ ಮೂಲ ವೃಂದಕ್ಕೆ ಸೇರಲಿಚ್ಚಿಸುವ ನೌಕರರಿಗೆ ಸೇವಾ ಅವಧಿಯಲ್ಲಿ ಪ್ರಸ್ತುತ ಒಂದು ಬಾರಿಗೆ ಮಾತ್ರ ಅವಕಾಶವಿರುತ್ತದೆ.  ಅಂತಹವರು 45 ದಿನಗಳೊಳಗಾಗಿ ಕಡ್ಡಾಯವಾಗಿ ತಮ್ಮ ಅಭಿಮತ ಪತ್ರವನ್ನು ಸಲ್ಲಿಸಬೇಕು. ನಂತರ ಬಂದ ಮನವಿಗಳನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲ. ಅಧಿಕಾರಿ/ನೌಕರರು ನಿಗದಿತ ಅವಧಿಯಲ್ಲಿ ಅಭಿಮತ ಪತ್ರವನ್ನು ಸಲ್ಲಿಸದಿದ್ದಲ್ಲಿ ಸ್ಥಳೀಯ ವೃಂದವನ್ನು ಸೇರಲು ಇಚ್ಚೆ ಹೊಂದಿಲ್ಲವೆಂದು ಪರಿಗಣಿಸಲಾಗುವುದು. ನಂತರ ಕಾರ್ಯನಿರತ ಅಧಿಕಾರಿ/ನೌಕರರ ವೃಂದವಾರು ಪ್ರತ್ಯೇಕವಾಗಿ ಅಂದರೆ ಪ್ರಾದೇಶಿಕ ಸ್ಥಳೀಯ ಮೂಲ ವೃಂದ ಹಾಗೂ ಉಳಿದ ಮೂಲ ವೃಂದಗಳಿಗೆ ವ್ಯಕ್ತಿಗಳ ಹಂಚಿಕೆ ಮಾಡಿ, ಅಂತಿಮ ಅಧಿಸೂಚನೆ ಜಾರಿಗೊಳಿಸಲಾಗುವುದು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಜ.31 ರಂದು ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ 2014-15 ರ ಪ್ರಶಸ್ತಿ ಪ್ರದಾನ ಸಮಾರಂಭ ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಜ.31 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ದಶರಥ ಅವರು ನೆರವೇರಿಸುವರು. ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ್ ಅವರು ಪಾಲ್ಗೊಳ್ಳುವರು ಎಂದು ಪರಿಸರ ಅಧಿಕಾರಿ ಬಿ.ರುದ್ರೇಶ ಅವರು ತಿಳಿಸಿದ್ದಾರೆ.

ಟಿಇಟಿ ಅರ್ಹತಾ ಪ್ರಮಾಣ ಪತ್ರ ಪಡೆದುಕೊಳ್ಳಲು ಸೂಚನೆ

ಕೊಪ್ಪಳ ಜ.29(ಕರ್ನಾಟಕ ವಾರ್ತೆ): ಕಳೆದ ಜೂ. 22 ರಂದು ನಡೆಸಲಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳ ಅರ್ಹತಾ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದ್ದು, ಕೊಪ್ಪಳ ಡಿಡಿಪಿಐ ಅವರ ಕಚೇರಿಯಿಂದ ಪಡೆದುಕೊಳ್ಳಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.
     ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಳೆದ ಜೂನ್-22 ರಂದು ನಡೆಸಲಾದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳ ಅರ್ಹತಾ ಪ್ರಮಾಣ ಪತ್ರಗಳು ಕೊಪ್ಪಳ ಉಪನಿರ್ದೇಶಕರ ಕಛೇರಿಗೆ ಬಂದಿದ್ದು, ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕಛೇರಿಯ ಅವಧಿಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಿ ಪ್ರಮಾಣ ಪತ್ರಗಳನ್ನು ಪಡೆಯಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 28 January 2015

ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಸಹಾಯಕ ಔಷಧ ನಿಯಂತ್ರಕರಾದ ಹೆಚ್.ಎಂ. ರೇಣುಕಾಸ್ವಾಮಿ ಅವರು ತಿಳಿಸಿದ್ದಾರೆ.
ಕ್ಲಾವಿಜೆಟ್-625, ಅಮಾಕ್ಸಿಸಿಲಿನ್ ಹಾಗೂ ಪೊಟಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಜಿಪಿಬಿ-13510, ಮೆ|| ಗ್ನೋಸಿಸ್ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ., ಹಿಮಾಚಲ ಪ್ರದೇಶ. ಪೈರ (ಪ್ಯಾರಸಿಟಮೋಲ್ ಟ್ಯಾಬ್ಲೆಟ್ಸ್ ಐಪಿ 500 ಎಮ್‍ಜಿ), 1401, ಮೆ|| ವಿನ್‍ಕೊಟೆಮ್ ಫಾರ್ಮಾಸ್ಯುಟಿಕಲ್ಸ್, ಉಜ್ಜೈನ್. ಅಸೆಕ್ಲೊಫಾಸ್ಟ್-ಪಿ (ಅಸೆಕ್ಲೋಫೆನಾಕ್ ಅಂಡ್ ಅಸೆಟಮಿನೊಫೆನ್ ಟ್ಯಾಬ್ಲೆಟ್ಸ್), ಡಿ3045, ಮೆ|| ವಿಟಾನೆ ಫಾರ್ಮಾಸ್ಯುಟಿಕಲ್ಸ್ ಪ್ರೈ.ಲಿ. ಹೈದರಾಬಾದ್.  ಹೆಲ್‍ಸಿಪ್ರೊ-250 (ಸಿಪ್ರೊಫ್ಲೋಕ್ಸಾಸಿನ್ ಟ್ಯಾಬ್ಲೆಟ್ಸ್ ಐಪಿ), ಎಂಎಸ್‍ಟಿ-13420, ಮೆ|| ಸೀ ಫಾರ್ಮಾಸ್ಯುಟಿಕಲ್ಸ್ ಸೂರಜ್‍ಪುರ. ಸೆಫಾಲೆಕ್ಸ್-500 (ಸೆಫಾಲೆಕ್ಸಿನ್ ಕ್ಯಾಪ್ಸೂಲ್ಸ್ ಐ.ಪಿ.) 500 ಎಂ.ಜಿ, 1303, ಮೆ|| ಅಕೇಶಿಯ ಬಯೋಟೆಕ್ ಲಿ.,  ಉತ್ತರಖಂಡ್.  ನಾರ್‍ಕಿನ್-ಟಿಜೆಡ್ (ನಾರ್‍ಫ್ಲೊಕ್ಸಾಸಿನ್ ಹಾಗೂ ಟಿನಿಡಾಜೋಲ್ ಟ್ಯಾಬ್ಲೆಟ್ಸ್), ಟಿ-1308209, ಮೆ|| ಇಂಡ್ಕಸ್ ಬಯೋಟೆಕ್ ಇಂಡಿಯ ವಿಲ್. ಹಿಮಾಚಲ ಪ್ರದೇಶ. ಮೆಟ್‍ಫಾರ್ಮಿನ್ ಟ್ಯಾಬ್ಲೆಟ್ಟ್ ಐಪಿ 500 ಎಂಜಿ, ಎಂಎಫ್-111, ಮೆ|| ಮಿನೊಫಾರ್ಮ ಲ್ಯಾಬೊರೇಟೊರೀಸ್ ಪ್ರೈ.ಲಿ., ಫರ್ನಾಮಿಟ್ಟ. ಅಸೆಕ್ಲೊಫೆನಾಕ್ ಪ್ಯಾರಸಿಟಮೊಲ್ ಹಾಗೂ ಕ್ಲೊರ್‍ಜೊಕ್ಸಾ ಜೋನ್ ಟ್ಯಾಬ್ಲೆಟ್ಸ್ (ಟ್ರೊಯ್‍ಫೆನಾಕ್ ಎಂಆರ್) ಎಟಿ-00120, ಮೆ|| ಅಲಿಯಾನ್ಸ್ ಬಯೋಟೆಕ್, ಹಿಮಾಚಲ ಪ್ರದೇಶ. ಪಾಸ್ಪೇಟ್ ಎನೆಮ ಬಿಪಿ (ಎನೆಮ ಬಿಪಿ), 1401, ಮೆ|| ಹರ್ಷ ಹೆಲ್ತ್ ಕೇರ್ 100-101.  ಬಿ-ಸೆಫ್ ಡಿಎಸ್ ಸೆಫಿಕ್ಸೈಮ್ ಓರಲ್ ಸಸ್ಪೆನ್‍ಷನ್ ಐಪಿ), ಜೆಕೆಎಲ್-1417, ಮೆ|| ಜಪ್ಸಿ ಕೆಎಮ್ ಫಾರ್ಮಾಸ್ಯುಟಿಕಲ್ಸ್, ಹಿಮಾಚಲ ಪ್ರದೇಶ. (ಅನ್‍ರೋಸ್) ರೊಸುವಸ್ಟಟಿನ್ ಟ್ಯಾಬ್ಲೆಟ್ಸ್ ಐಪಿ, ಎಹೆಚ್‍ಟಿ1407005, ಮೆ|| ಆನ್‍ತೆಮ್ ಸೆಲ್ಯುಶನ್ಸ್ (ಇಂಡಿಯಾ) ಲಿ., ಉತ್ತರಾಖಂಡ್, ಸೈಕ್ಲೊಹಾಟ್ ಟ್ಯಾಬ್ಲೆಟ್ಸ್, 1713, ಮೆ|| ಜೆನಿಫೆರ್ ಫಾರ್ಮಾಸ್ಯುಟಿಕಲ್ಸ್ ದಾರ್ ಮಧ್ಯಪ್ರದೇಶ.
ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- 08539-221501 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪ. ಜಾತಿ ಮತ್ತು ಪ. ಪಂಗಡ ವರ್ಗದ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸ ತೋಟಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಸೌಲಭ್ಯವಿರುತ್ತದೆ. ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಪಕ್ಷಿ/ಕೀಟ ನಿರೋಧಕ ಬಲೆ, ಪ್ಲಾಸ್ಟಿಕ್ ಮಲ್ಚಿಂಗ್, ಪ್ಯಾಕ್ ಹೌಸ್, ವೈಯಕ್ತಿಕ/ಸಮುದಾಯ ನೀರು ಸಂಗ್ರಹಣಾ ಘಟಕ, ಯಾಂತ್ರಿಕರಣ, ಹಸಿರು ಮನೆ, ನೆರಳು ಪರದೆ, ಜೀವಸಾರ ಘಟಕ ಮತ್ತು ಎರೆಹುಳು ಗೊಬ್ಬರ ಘಟಕ ಗಳಿಗೆ ಸಹಾಯಧನ ನೀಡಲು ಅನುದಾನ ಲಭ್ಯವಿರುತ್ತದೆ.  ಪ. ಜಾತಿ ವರ್ಗದ ರೈತರ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಸೌಲಭ್ಯ ಅಳವಡಿಸಲು ಮೊದಲ 2.00 ಹೆಕ್ಟರ್ ಪ್ರದೇಶಕ್ಕೆ ಶೇ.90 ರಷ್ಟು ನಂತರದ 3.00 ಹೇಕ್ಟರ್‍ಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು.  ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಯಾಂತ್ರೀಕರಣ ಹಾಗೂ ಬಾಳೆ ಬೆಳೆ ನಿಖರ ಬೇಸಾಯ ಕಾರ್ಯಕ್ರಮದಡಿ ಸಹಾಯಧನ ನೀಡಲು ಅನುದಾನ ಲಭ್ಯವಿರುತ್ತದೆ. ಸಹಾಯಧನವನ್ನು ಜಿಲ್ಲೆಗೆ/ತಾಲೂಕಿಗೆ ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿಗಳಿಗನ್ವಯ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸಂಪರ್ಕಿಸಬೇಕಾದ ತಾಲ್ಲೂಕು ಕಛೇರಿ ದೂರವಾಣಿ ಸಂಖ್ಯೆಗಳು ಕೊಪ್ಪಳ : 08539-231304, ಗಂಗಾವತಿ: 08533-230358, ಕುಷ್ಟಗಿ : 08536-267498 ಹಾಗೂ ಯಲಬುರ್ಗಾ: 08534-220429. ಮತ್ತು ಕೇಂದ್ರ ಕಛೇರಿ ಕೊಪ್ಪಳ-08539-231530 ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ಸಚಿವರೊಂದಿಗೆ ಸಂವಾದ : ರೈತರು ಪಾಲ್ಗೊಳ್ಳಲು ಮನವಿ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಜ. 31 ರಂದು ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ತಾಲೂಕು ಹಾಸಗಲ್ ಗ್ರಾಮಕ್ಕೆ ಭೇಟಿ ನೀಡಿ ಕೃಷಿ ಭಾಗ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಂತರ ರೈತರೊಂದಿಗೆ ಸಂವಾದ ನಡೆಸುವರು.   ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳದ ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಜ. 31 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅಂದು ಬೆಳಿಗ್ಗೆ ಹಂಪಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ಬೆಳಿಗ್ಗೆ 10-30 ಗಂಟೆಗೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮಕ್ಕೆ ತೆರಳಿ ಕೃಷಿ ಭಾಗ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಅಲ್ಲದೆ ರೈತರೊಂದಿಗೆ ಸಂವಾದ ನಡೆಸುವರು.  11-30 ಗಂಟೆಗೆ ಬಸವನಬಾಗೇವಾಡಿ ತಾಲೂಕಿನ ಬೀರಲದಿನ್ನಿ ಗ್ರಾಮಕ್ಕೆ ಪ್ರಯಾಣ ಬೆಳೆಸುವರು ಎಂದು ಕೃಷಿ ಸಚಿವರ ವಿಶೇಷಾಧಿಕಾರಿಗಳು ತಿಳಿಸಿದ್ದಾರೆ.

ರೈತ ಸಂಜೀವಿನಿ : ಪರಿಹಾರ ಚೆಕ್ ವಿತರಣೆ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಗಂಗಾವತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿ ರೈತ ಯಮನಪ್ಪ ಹುಲಿಹೈದರ್ ಅವರಿಗೆ 75 ಸಾವಿರ ರೂ.ಗಳ ಪರಿಹಾರ ಚೆಕ್ ಅನ್ನು ವಿತರಿಸಲಾಯಿತು.
     ಗಂಗಾವತಿ ತಾಲೂಕು ಹುಲಿಹೈದರ್ ಗ್ರಾಮದ ರೈತ ಯಮನಪ್ಪ ಅವರ ಪುತ್ರಿ ಬಾಳಮ್ಮ (17) ಹೊಲದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡುವಾಗ ಕ್ರಿಮಿನಾಶಕ ಆಕಸ್ಮಿಕವಾಗಿ ದೇಹವನ್ನು ಸೇರಿದ್ದರಿಂದ ಮೃತಪಟ್ಟಿದ್ದಳು.  ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿ ಇದಕ್ಕೆ ಪರಿಹಾರ ವಿತರಣೆಗೆ ಅವಕಾಶವಿದ್ದು, ಈ ಯೋಜನೆಯಡಿ ಪರಿಹಾರ ಮೊತ್ತವಾಗಿ ರೂ.75000/- ಗಳ ಚೆಕ್ಕನ್ನು ಎಪಿಎಂಸಿ ಕಾರ್ಯದರ್ಶಿ ಜಿ. ಶರಶ್ಚಂದ್ರ ರಾನಡೆ ಮೃತ ಬಾಲಕಿಯ ತಂದೆ ಯಮನಪ್ಪ ಅವರಿಗೆ ವಿತರಿಸಿದರು.  ಈ ಸಂದರ್ಭದಲ್ಲಿ ಸಮಿತಿಯ ಸಹಾಯಕ ಕಾರ್ಯದರ್ಶಿ ಜವಳಿ ಸಿದ್ದಪ್ಪ, ಮಾರುಕಟ್ಟೆ ಮೇಲ್ವಿಚಾರಕ ಅಮರಯ್ಯಸ್ವಾಮಿ ಉಪಸ್ಥಿತರಿದ್ದರು.

ಆಧಾರ/ಎಪಿಕ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಸಲ್ಲಿಸಲು ಸೂಚನೆ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರು ತಮ್ಮ ಕುಟುಂಬದ 21 ವರ್ಷ ವಯಸ್ಸು ಮೇಲ್ಪಟ್ಟ ಸದಸ್ಯರ ಚುನಾವಣಾ ಗುರುತಿನ ಚೀಟಿ (ಎಪಿಕ್) ಸಂಖ್ಯೆ ಮತ್ತು ಆಧಾರ್ ಕಾರ್ಡ್ ಹೊಂದಿರುವ ಸದಸ್ಯರ ಆಧಾರ ಸಂಖ್ಯೆಯ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ಎಸ್.ಎಂ.ಎಸ್. ಮೂಲಕ ಕಳುಹಿಸಿದ್ದರೂ ಸಹ, ಪುನಃ ಆಧಾರ್ ಮತ್ತು ಎಪಿಕ್ ಸಂಖ್ಯೆಗಳನ್ನು ನೀಡುವುದು ಕಡ್ಡಾಯವಾಗಿರುತ್ತದೆ.  ಪಡಿತರ ಚೀಟಿದಾರರು ಫೆಬ್ರುವರಿ ತಿಂಗಳಿನ ಪಡಿತರ ಆಹಾರಧಾನ್ಯ ಪಡೆಯುವ ಸಂದರ್ಭದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯ ಮಾಹಿತಿಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ತಪ್ಪದೆ ಸಲ್ಲಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿ.ಪಂ.-ತಾ.ಪಂ. ಉಪಚುನಾವಣೆ : ಮಧ್ಯ ಮಾರಾಟ ನಿಷೇದಾಜ್ಞೆ ಜಾರಿ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಉಪಚುನಾವಣೆಗಳ ಸಂಬಂಧ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯಪಾನ, ಮದ್ಯ ಮಾರಾಟ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.
    ಗಂಗಾವತಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಕನಕಗಿರಿ ಕ್ಷೇತ್ರದಲ್ಲಿ ಹಾಗೂ ಕುಷ್ಟಗಿ ತಾಲ್ಲೂಕಿನ ತಾಲ್ಲೂಕು ಪಂಚಾಯತಿ ಯರಗೇರಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ನಿಮಿತ್ಯ ಜ.31 ರ ಬೆಳಿಗ್ಗೆ 6 ಗಂಟೆಯಿಂದ ಫೆ.02 ರಂದು ಬೆಳಿಗ್ಗೆ 6 ಗಂಟೆಯವರೆಗೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ  ಮತ ಎಣಿಕೆ ನಿಮಿತ್ಯ  ಫೆ.03 ರ ಸಾಯಂಕಾಲ 6 ಗಂಟೆಯಿಂದ ಫೆ.05 ರ ಬೆಳಿಗ್ಗೆ 6 ಗಂಟೆಯವರೆಗೆ ಗಂಗಾವತಿ ನಗರ ಹಾಗೂ ಕುಷ್ಟಗಿ ಪಟ್ಟಣದಲ್ಲಿ ಎಲ್ಲಾ ವೈನ್‍ಶಾಪ್, ಬಾರ್‍ಗಳು, ಸಗಟು ಮತ್ತು ಚಿಲ್ಲರೆ ಮಧ್ಯ ಮಾರಾಟ ನಿಷೇಧಿಸಿ, ಪಾನ ನಿಷೇಧ ದಿನ ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
    ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು, ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು   ಆದೇಶದಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೂ ಎಟಿಎಂ ಕಾರ್ಡ್ : ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಿಂದ ಜ. 29 ರಂದು ವಿನೂತನ ಯೋಜನೆ ಜಾರಿ

ಕೊಪ್ಪಳ ಜ. 28 (ಕರ್ನಾಟಕ ವಾರ್ತೆ): ವಿದ್ಯಾರ್ಥಿ ದೆಸೆಯಲ್ಲಿಯೇ ಹಣ ಉಳಿತಾಯ ಮಾಡುವುದಲ್ಲದೆ, ಬ್ಯಾಂಕಿಂಗ್ ವ್ಯವಹಾರದ ಅರಿವು ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಿಂದ ವಿದ್ಯಾರ್ಥಿಗಳಿಗೆ ಎಟಿಎಂ ಕಾರ್ಡ್ ವಿತರಿಸುವ ‘ಜೂನಿಯರ್ ಡೆಬಿಟ್ ಕಾರ್ಡ್’ ಯೋಜನೆ ಜ. 29 ರಂದು ಜಾರಿಗೆ ಬರಲಿದೆ.
     ಭಾರತ ಸರ್ಕಾರ ಹಾಗೂ ಭಾರತೀಯ ರಿಜರ್ವ್ ಬ್ಯಾಂಕಿನ ಯೋಜನೆ ಅನುಗುಣವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ 10 ರಿಂದ 18 ವರ್ಷದೊಳಗಿನ ಶಾಲಾ, ಕಾಲೇಜು ಮಕ್ಕಳಿಗೆ ಬ್ಯಾಂಕ್ ಎಟಿಎಂ ಕಾರ್ಡ್ ವಿತರಿಸಲಿದ್ದು, ಜ. 29 ರಂದು ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಜೂನಿಯರ್ ಡೆಬಿಟ್ ಕಾರ್ಡ್ ವಿತರಣೆ ಮಾಡಲಿದೆ.  10 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆದು, ಪ್ರಗತಿ ಕೃಷ್ಣಾ ರೂಪೇ ಜೂನಿಯರ್ ಎಟಿಎಂ ಕಾರ್ಡ್‍ಗಳನ್ನು ಪಡೆಯಬಹುದಾಗಿದೆ.
ಉಪಯುಕ್ತತೆ : ನೂತನ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ಹಣ ಉಳಿತಾಯದ ಮನೋಭಾವ ಬೆಳೆಯುವುದಲ್ಲದೆ, ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಅರಿವು ಹೊಂದಲು ಸಹಕಾರಿಯಾಗಲಿದೆ.  ಶಾಲಾ ಮಕ್ಕಳು ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ ವೇತನ, ಬಹುಮಾನ ಮೊತ್ತ, ಇತರೆ ನೆರವಿನ ಮೊತ್ತವನ್ನು ಜಮಾ ಮಾಡಲು ಅಥವಾ ಯಾವುದೇ ಬ್ಯಾಂಕಿನ ಎಟಿಎಂ ಗಳಲ್ಲಿ ಹಣ ಪಡೆಯಲು ಅನುಕೂಲವಾಗಲಿದೆ. ಎಟಿಎಂ ಕಾರ್ಡ್ ಬಳಸಿ, ಯಾವುದೇ ಎಟಿಎಂ ಮೂಲಕ ದಿನಕ್ಕೆ ಗರಿಷ್ಠ  5 ಸಾವಿರ ರೂ. ಹಣ ಪಡೆಯಬಹುದಾಗಿದ್ದು, ಹಣವಿಲ್ಲದ ಖರೀದಿಗಳನ್ನು ಆಯ್ದ ಅಂಗಡಿಗಳಲ್ಲಿ ಕಾರ್ಡ್ ಸ್ವೈಪ್ ಮಾಡುವ ಮೂಲಕ ಗರಿಷ್ಠ 2 ಸಾವಿರ ಮೊತ್ತದ ಸಾಮಗ್ರಿ ಖರೀದಿಸಲು ಅವಕಾಶವಿದೆ.  ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಹಣದ ನೆರವು ಪಡೆಯಲು ಉತ್ತಮ ವ್ಯವಸ್ಥೆ, ಹಣ ಕಳ್ಳತನದ ಭಯ ಇರುವುದಿಲ್ಲ.  18 ವರ್ಷ ಮೀರಿದ ನಂತರ ಖಾತೆಯನ್ನು ಸಾಮಾನ್ಯ ಖಾತೆಯಾಗಿ ಸುಲಭದಲ್ಲಿ ಬದಲಿಸಬಹುದಾಗಿದೆ.
ಪೋಷಕರಿಗೆ ಎಸ್‍ಎಂಎಸ್ : ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಪಾಲಕರು/ಪೋಷಕರ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವುದರಿಂದ, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯಲ್ಲಿ ನಡೆಯುವ ವ್ಯವಹಾರದ ಬಗ್ಗೆ ಪಾಲಕರು/ಪೋಷಕರ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶ ರವಾನೆಯಾಗಲಿದ್ದು, ಖಾತೆಯ ಮೇಲೆ ಪಾಲಕರು ನಿಗಾ ವಹಿಸಲು ಅನುಕೂಲವಿದೆ.
ಖಾತೆ ತೆರಯಲು ಬೇಕಾದ ದಾಖಲೆ : ಶಾಲಾ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ಈ ಯೋಜನೆಯಡಿ ಬ್ಯಾಂಕ್ ಖಾತೆ ತೆರಯಲು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಯಾವುದೇ ಶಾಖೆಯಲ್ಲಿ ನಿಗದಿತ ನಮೂನೆಯನ್ನು ಭರ್ತಿ ಮಾಡಿ, ಮಾದರಿ ಸಹಿಯ ಕಾರ್ಡ್ ಹಾಗೂ ಪಾಸ್‍ಪೋರ್ಟ್ ಅಳತೆಯ ಫೋಟೋಗಳು, ಬ್ಯಾಂಕ್ ಖಾತೆ ತೆರೆಯಲು ಪಾಲಕರು/ಪೋಷಕರ ಸಮ್ಮತಿ ಪತ್ರ ಹಾಗೂ ಅವರ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿ.  ಶಾಲೆ/ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲಾ, ಕಾಲೇಜಿನ ಮುಖ್ಯಸ್ಥರಿಂದ ಪ್ರಮಾಣಪತ್ರ.
     ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಈ ಯೋಜನೆಯಡಿ ಜ. 29 ರಂದು ಸುಮಾರು 5 ಸಾವಿರ ಕಾರ್ಡುಗಳನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಇದರ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಪ್ರಗತಿ ಕೃಷ್ಣಾ ಬ್ಯಾಂಕಿನ ಕೊಪ್ಪಳ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಯೋಜನೆ : ಅರ್ಜಿದಾರರ ಪಟ್ಟಿ ಪ್ರಕಟ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯಿಂದ 2013-14ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಒದಗಿಸುವ ಸಂಬಂಧ ಬಂದಿರುವ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿ ಕ್ರಮಬದ್ಧ ಮತ್ತು ಕ್ರಮಬದ್ಧವಿಲ್ಲದ ಅರ್ಜಿಗಳ ವಿವರವಾದ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
    ಈ ವಿಷಯವಾಗಿ ನ್ಯೂನ್ಯತೆ ಹೊಂದಿರುವ ಅರ್ಜಿದಾರರು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಫೆ.04 ರ ಒಳಗಾಗಿ ಲಿಖಿತ ರೂಪದಲ್ಲಿ ಮೂಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳು ಕೊಪ್ಪಳ ಹಾಗೂ ಉಪವಿಭಾಗಾಧಿಕಾರಿಗಳು ಕೊಪ್ಪಳ ಇವರಿಗೆ ಸಲ್ಲಿಸಬಹುದು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಬೀದಿನಾಟಕ ಕಲಾತಂಡಗಳಿಂದ ಅರ್ಜಿ ಆಹ್ವಾನ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಸಂಜೀವಿನಿ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿನಾಟಕ ಮತ್ತು ಕಲಾಜಾಥ ಹಮ್ಮಿಕೊಳ್ಳಲು ಅರ್ಹ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕಲಾತಂಡದಲ್ಲಿ ಕನಿಷ್ಟ 8 ಕಲಾವಿದರಿದ್ದು, ಅದರಲ್ಲಿ 3-4 ಮಹಿಳಾ ಕಲಾವಿದರಿರುವ ತಂಡಕ್ಕೆ ಆದ್ಯತೆ ನೀಡಲಾಗುವುದು. ತಂಡಗಳ ಆಯ್ಕೆಯನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು. ಆಯ್ಕೆಗಾಗಿ ತಂಡಗಳು ತಮ್ಮ ಸ್ವಂತ ಖರ್ಚಿನಲ್ಲಿ ಕಛೇರಿಗೆ ಹಾಜರಾಗಿ ಪ್ರತಿಭೆ ಪ್ರದರ್ಶಿಸಬೇಕು. ಕಲಾ ತಂಡವು ಜಿಲ್ಲಾ ನೋಂದಣಿ ಕಛೇರಿಯಲ್ಲಿ ನೋಂದಣಿಯಾಗಿ ಸುಮಾರು 3 ವರ್ಷಗಳಾಗಿರಬೇಕು. ಈ ಕುರಿತು ಪ್ರಮಾಣ ಪತ್ರ ಲಗತ್ತಿಸಬೇಕು. ಕಲಾ ತಂಡವು ಬೀದಿನಾಟಕ/ಕಲಾಜಾಥವನ್ನು ಸರ್ಕಾರದ ವಿವಿಧ ಇಲಾಖೆಗಳಡಿ ಸುಮಾರು 10 ಕಾರ್ಯಕ್ರಮ ನೀಡಿರುವ ಕುರಿತು ದಾಖಲೆಗಳನ್ನು ಸಲ್ಲಿಸಬೇಕು. ಕಲಾ ತಂಡದಲ್ಲಿರುವ ಸದಸ್ಯರ ವಿದ್ಯಾರ್ಹತೆ ಕನಿಷ್ಠ ಎಸ್.ಎಸ್.ಎಲ್.ಸಿ. ಉತ್ತೀರ್ಣ ಹೊಂದಿರಬೇಕು.  ಇದಕ್ಕೆ ಪೂರಕವಾಗಿ ಪಟ್ಟಿ ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿ  ಲಗತ್ತಿಸಬೇಕು. ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಂ. ಶಾಖೆಯಲ್ಲಿ ಪಡೆಯಬಹುದಾಗಿದೆ.  ಆಸಕ್ತ ಕಲಾತಂಡದವರು ತಮ್ಮ ಅರ್ಜಿಯನ್ನು ಫೆ.03 ರೊಳಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ ಇವರಿಗೆ ಸಲ್ಲಿಸಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

100001ನೇ ಶೌಚಾಲಯ ಉದ್ಘಾಟನೆ : ಫೆ.01 ರಂದು ಪೂರ್ವಭಾವಿ ಸಭೆ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಸ್ವಚ್ಛಭಾರತ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 101 ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲು ಹಾಗೂ 100001 ನೇ ಶೌಚಾಲಯದ ಉದ್ಘಾಟನೆಗೆ ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಫೆ.01 ರಂದು ಸಾಯಂಕಾಲ 4 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಪೂರ್ವಭಾವಿ ಸಭೆ ಹಾಗೂ ಕಾರ್ಯಾಗಾರ ಏರ್ಪಡಿಸಲಾಗಿದೆ.
    ಸಭೆಯ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಅವರು ವಹಿಸುವರು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ತಿಳಿಸಿದ್ದಾರೆ.

ಜ.31 ರಂದು ಗಂಗಾವತಿಯಲ್ಲಿ ಯುವಸೌರಭ ಕಾರ್ಯಕ್ರಮ

ಕೊಪ್ಪಳ ಜ.28(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಯುವ ಸೌರಭ’ ಕಾರ್ಯಕ್ರಮವನ್ನು ಜ.31 ರಂದು ಸಂಜೆ 5 ಗಂಟೆಗೆ ಗಂಗಾವತಿಯ ನೀಲಕಂಠೇಶ್ವರ ವೃತ್ತದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಇಕ್ಬಾಲ್ ಅನ್ಸಾರಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ್, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ನಾಗಪ್ಪ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ.ಅಧ್ಯಕ್ಷೆ ಈರಮ್ಮ ಮುದಿಯಪ್ಪ, ತಾ.ಪಂ. ಉಪಾಧ್ಯಕ್ಷ ಶರಣಪ್ಪ ಸಾಹುಕಾರ, ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ, ಉಪಾಧ್ಯಕ್ಷ ಶರಣಪ್ಪ ಹುಡೇಜಾಲಿ, ತಹಶೀಲ್ದಾರ್ ವೆಂಕನಗೌಡ ಪಾಟೀಲ್, ಡಿವೈಎಸ್‍ಪಿ ವಿನ್ಸೆಂಟ್ ಶಾಂತಕುಮಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎನ್.ಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬಾರಿಕರ್ ಅವರು ಭಾಗವಹಿಸುವರು.
ಶಿವಪ್ಪ ಬಸವಂತಪ್ಪ ಅಳವಂಡಿ ಅವರು ಸುಗಮ ಸಂಗೀತ ನಡೆಸುವರು. ಚಂದ್ರಮ್ಮ ಮತ್ತು ತಂಡ ಹಾಗೂ ನೀಲಮ್ಮ ತಂಡ ಕಂಪ್ಲಿ ಇವರಿಂದ ಜಾನಪದ ಕಲಾ ಪ್ರದರ್ಶನಗಳು ಜರುಗಲಿವೆ. ಯುವರಾಜ ಹಿರೇಮಠ ಮತ್ತು ತಂಡ ಹಂಚಿನಾಳ-ಜಾನಪದ ಗೀತೆಗಳು, ಸಾಯಿರಾ ಮತ್ತು ತಂಡ ಬಳ್ಳಾರಿ-ಸಮೂಹ ನೃತ್ಯ, ಹೆಚ್.ಅಶ್ವೀನಿ ಮತ್ತು ತಂಡ ಗಂಗಾವತಿ-ಭರತನಾಟ್ಯ, ಶಕುಂತಲಾ ಬಿನ್ನಾಳ ಕೊಪ್ಪಳ-ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಜಲೀಲಪಾಷಾ ಮುದ್ದಾಬಳ್ಳಿ ಗಂಗಾವತಿ-ಹಿಂದೂಸ್ತಾನಿ ವಾದ್ಯ ಸಂಗೀತ, ತಬಲಾ ಸೋಲೋ, ಎಂ.ಸಂತೋಷ ಮುಧೋಳ-ಕಥಾ ಕೀರ್ತನ, ಮಹಮ್ಮದ್ ಫಜಲ್ ಮತ್ತು ತಂಡದಿಂದ ಬೆಳಕಿನೆಡೆಗೆ-ನಾಟಕ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಅವರು ತಿಳಿಸಿದ್ದಾರೆ.

Tuesday, 27 January 2015

ವ್ಯಕ್ತಿ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಈಚನಾಳ ಗ್ರಾಮದ ಬೀರಪ್ಪ ತಂದೆ ಶಂಕ್ರಪ್ಪ ಪೊಲೀಸ್ ಗೌಡರ (38) ಎಂಬ ವ್ಯಕ್ತಿ ಜ. 22 ರಂದು ಕುಷ್ಟಗಿ ತಾಲೂಕು ತಾವರಗೇರಾದಿಂದ ಕಾಣೆಯಾಗಿದ್ದು, ಈತನ ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
ಬೀರಪ್ಪ, ಉಡುಪಿ ಬಳಿಯ ಮಲ್ಪೆಗೆ ಕೆಲಸಕ್ಕೆಂದು ಹೋಗಿ, ಎರಡು ತಿಂಗಳ ನಂತರ ಕುಟುಂಬದ ಇತರರನ್ನು ಮಲ್ಪೆಗೆ ದುಡಿಯಲು ಕರೆಸಿಕೊಂಡಿದ್ದ.  ಜ. 22 ರಂದು ತಮ್ಮ ಕುಟುಂಬದವರೊಂದಿಗೆ ವಾಪಸ್ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವಾಗ, ಮಾರ್ಗದಲ್ಲಿ ತಾವರಗೇರಾದ  ಹೋಟೆಲ್‍ಗೆ ಹೋಗಿ ಟಿಫನ್ ಮಾಡಿ ಬರುತ್ತೇನೆ ಎಂದು ಹೇಳಿ ಹೋದವನು ಎಲ್ಲಿಯೋ ಕಾಣೆಯಾಗಿರುತ್ತಾನೆ.  ಈತನ ಚಹರೆ ವಿವರ ಇಂತಿದೆ. ಬೀರಪ್ಪ ತಂದೆ ಶಂಕ್ರಪ್ಪ ಪೊಲೀಸ್ ಗೌಡರ (38) ಸಾ|| ಈಚನಾಳ, ತಾ|| ಗಂಗಾವತಿ ಜಿ|| ಕೊಪ್ಪಳ, ಜಾತಿ: ಕುರುಬರು, ಉದ್ಯೋಗ: ಕೂಲಿ ಕೆಲಸ, ಎತ್ತರ 5’ 4’ , ಕನ್ನಡ ಭಾಷೆ ಮಾತನಾಡುತ್ತಾನೆ. ಮೈಮೇಲೆ ಬಿಳಿ ಬಣ್ಣದ ಅಡ್ಡಗೆರೆಯುಳ್ಳ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕೊರಳಲ್ಲಿ ರೇಷ್ಮೆ ದಾರದಲ್ಲಿ ರುದ್ರಕ್ಷಿ ಧರಿಸಿರುತ್ತಾನೆ. ಬಲಗೈ ಮೇಲೆ ಹನುಮಂತ ದೇವರ ಹಚ್ಚೆ ಗುರುತು ಇರುತ್ತದೆ. ಎಡಗೈ ಮೇಲೆ ಹನುಮಂತ ದೇವರ ಹಚ್ಚೆ ಮತ್ತು ಶಿವಣ್ಣ ಎನ್ನುವ ಹೆಸರಿನ ಹಚ್ಚೆ ಹಾಕಿಸಿದ್ದಿದೆ.  ಈ ಚಹರೆಯುಳ್ಳ ವ್ಯಕ್ತಿಯ ಯಾವುದೇ  ಮಾಹಿತಿ ಕಂಡಲ್ಲಿ ಕೂಡಲೇ ತಾವರಗೇರಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ ನೀಡಬೇಕು.  ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಎಸ್.ಪಿ. ಮೊ.9480803701, ದೂ.ಸಂ: 08539-230111, ಗಂಗಾವತಿ ಡಿ.ಎಸ್.ಪಿ. ಮೊ.9480803721, ದೂ.ಸಂಖ್ಯೆ: 08536-230853, ಕುಷ್ಟಗಿ ಸಿಪಿಐ ಮೊ.9480803732, ದೂ.ಸಂಖ್ಯೆ: 08539-267033, ತಾವರಗೇರಾ ಪಿ.ಎಸ್.ಐ. ಮೊ.9480803758, ದೂ.ಸಂಖ್ಯೆ: 08536-275322 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಡಾ. ಸರೋಜಿನಿ ಮಹಿಷಿ ನಿಧನ : ಕಸಾಪದಿಂದ ಸಂತಾಪ ಸಭೆ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಸಿ ಹಾಗೂ ಡಿ ದರ್ಜೆ ನೌಕರರಿಗೆ ಶೇ.70 ರಿಂದ 80 ಮೀಸಲಾತಿ ಇರಬೇಕು ಎಂದು ಶಿಫಾರಸು ಮಾಡಿದ ಸರೋಜಿನಿ ಮಹಷಿ ಅವರ ನಿಧನ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದು ನ್ಯಾಯವಾದಿ ಕೆ. ಸತ್ಯನಾರಾಯಣರಾವ್ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಕಸಾಪ ವತಿಯಿಂದ ಮಹಿಷಿರವರ ನಿಧನದ ಬಗ್ಗೆ ಸಂತಾಪ ಸಭೆ ಏರ್ಪಡಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಮಹಿಷಿ ಅವರು ಬಹುಭಾಷಾ ಪಂಡಿತರು ಶ್ರೇಷ್ಠ ವಾಗ್ಮಿಗಳಾಗಿದ್ದು,   ಪ್ರಾಮಾಣಿಕ ರಾಜಕಾರಣಕ್ಕೆ ಮತ್ತೊಂದು ಹೆಸರು ಆಗಿದ್ದರು ಎಂದರು.
       ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎಚ್.ಎಸ್.ಪಾಟೀಲ್, ಅನಸೂಯಾ ಜಾಗೀರದಾರ ಇನ್ನೀತರರು ಮಾತನಾಡಿ, ಅವರ ನಡೆ-ನುಡಿಗಳ ಬಗ್ಗೆ ಪ್ರಸ್ತಾಪಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟು-ಸಾವುಗಳ ಮಧ್ಯದಲ್ಲಿರುವ ಬದುಕನ್ನು ಸುಂದರಗೊಳಿಸಿಕೊಳ್ಳಲು ಕಠಿಣವಾದ ಪರಿಶ್ರಮ ಹಾಗೂ ತಾಳ್ಮೆ ಬೇಕು ಅಂತಹ ಗುಣಗಳನ್ನು ಮಹಿಷಿ ಹೊಂದಿದ್ದರು ಎಂದು ತಿಳಿಸಿದರು.  ಯಲಬುರ್ಗಾ ತಾ.ಪಂ. ಮಾಜಿ ಅಧ್ಯಕ್ಷ ಈರಣ್ಣ ಹಳ್ಳಿಕೇರಿ, ಶ್ರೀಕಾಂತ ಪಾಟೀಲ್ ತರಲಕಟ್ಟಿ, ಕೆ.ಜಿ. ವಿವೇಕಿ ಇನ್ನಿತರರು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಕ್ಬರ್ ಸಿ ಕಾಲಿಮಿರ್ಚಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ಪಂಚಾಯತಿಗಳಿಗೆ ನೇಮಕಾತಿ: ವದಂತಿಗಳಿಗೆ ಕಿವಿಗೊಡದಿರಲು ಸೂಚನೆ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಜಿಲ್ಲೆಯ  ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ವಾಟರ್‍ಮನ್, ಜವಾನ, ಸ್ವಚ್ಛತೆಗಾರರ ನೇಮಕಾತಿಯು ನಿಯಮಾನುಸಾರ ಜಿಲ್ಲಾ ಪಂಚಾಯತಿಯ ಪೂರ್ವಾನುಮೋದನೆಯೊಂದಿಗೆ ನಡೆಸಲಾಗುತ್ತಿದ್ದು, ಸುಳ್ಳು ವದಂತಿಗಳಿಗೆ ಅಥವಾ ಗೊಂದಲಗಳಿಗೆ ಕಿವಿಗೊಡದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದ್ದಾರೆ.
     ಪ್ರತಿ ಗ್ರಾಮ ಪಂಚಾಯತಿಯಲ್ಲಿ   ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ವಾಟರ್‍ಮನ್, ಜವಾನ, ಸ್ವಚ್ಛತೆಗಾರರ ತಲಾ ಒಂದರಂತೆ ಒಟ್ಟು ಐದು ಹುದ್ದೆಗಳಿಗೆ ಈಗಾಗಲೇ ಕಳೆದ 2014 ರ ನ.22 ರಂದು ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆಯನ್ನು ನೀಡಲಾಗಿರುತ್ತದೆ.  ಅಲ್ಲದೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ಆಕ್ಷೇಪಣೆ/ದೂರುಗಳಿದ್ದಲ್ಲಿ ನೇರವಾಗಿ ಜಿ.ಪಂ. ಹಾಗೂ ತಾ.ಪಂ. ಮೂಲಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಸುಮಾರು ದೂರುಗಳು/ಆಕ್ಷೇಪಣೆಗಳ ಸ್ವೀಕೃತಿಯ ನಂತರ, ಜಿ.ಪಂ. ಪೂರ್ವಾನುಮೋದನೆಯಿಂದ ಕೈಬಿಟ್ಟು ಹೋಗಿರುವ ಸಿಬ್ಬಂದಿಗಳಿಗೆ ಪುನಃ ಮತ್ತೊಮ್ಮೆ ಅಂತಿಮವಾಗಿ ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆ ನೀಡಲಾಗುತ್ತಿದೆ.  ಈ ಪೂರ್ವಾನುಮೋದನೆಗೆ ನಿಯಮಾನುಸಾರವಾಗಿ ಗ್ರಾಮ ಪಂಚಾಯತಿ ಠರಾವು, ನಿಗದಿತ ವಿದ್ಯಾರ್ಹತೆ, ನಿರಂತರ ಸೇವೆ, ನಿಗದಿತ ನೇಮಕಾತಿಯು, ನಿಯಮಾನುಸಾರ ಇದ್ದಲ್ಲಿ ಮಾತ್ರ ಪರಿಗಣಿಸಲಾಗುತ್ತಿದೆ.  ಇದನ್ನು ಹೊರತುಪಡಿಸಿ, ಬೇರಾವುದೇ ರೀತಿಯಲ್ಲಿ ಗ್ರಾ.ಪಂ. ಮಾಡಿಕೊಂಡಿರುವ ನೇಮಕಾತಿಗೆ ಜಿಲ್ಲಾ ಪಂಚಾಯತಿಯಿಂದ ಪೂರ್ವಾನುಮೋದನೆ ನೀಡಲಾಗುವುದಿಲ್ಲ. ಈಗಾಗಲೇ ಮಂಡಲ ಪಂಚಾಯತ್‍ದಿಂದ ನೇಮಕ ಹೊಂದಿದ ಅಥವಾ ಈಗಾಗಲೇ ಜಿಲ್ಲಾ ಪೂರ್ವಾನುಮೋದನೆ ಹೊಂದಿದ ಸಿಬ್ಬಂದಿಗಳಿದ್ದಲ್ಲಿ ಪುನಃ ಅದೇ ಹುದ್ದೆಗೆ ಪೂರ್ವಾನುಮೋದನೆಗೆ ಅವಕಾಶವಿರುವುದಿಲ್ಲ.  
    ಈ ಕುರಿತು ಸುಳ್ಳು ವದಂತಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ಇದರಲ್ಲಿ ಯಾವುದೇ ಗೊಂದಲಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ಕೊಪ್ಪಳ : ದೂ.ಸಂಖ್ಯೆ: 08539-220002, ಉಪಕಾರ್ಯದರ್ಶಿಗಳು ಜಿ.ಪಂ, ಕೊಪ್ಪಳ : 08539- 220237. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಕೊಪ್ಪಳ : 08539-220399,   ಕುಷ್ಟಗಿ : 08536-267028,   ಯಲಬುರ್ಗಾ : 08533-220136, ಗಂಗಾವತಿ : 08533-220230 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ಡಿ.ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯ ಜ್ಞಾನ ಪ್ರತಿಭಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆ


ಕೊಪ್ಪಳ ಜ. 27 (ಕರ್ನಾಟಕ ವಾರ್ತೆ): ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಬೆಂಗಳೂರಿನ ಶಿಕ್ಷಣ ಸದನದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ರಾಜ್ಯ ಮಟ್ಟದ ಸಾಮಾನ್ಯ ಜ್ಞಾನ ಪ್ರತಿಭಾ ಸ್ಪರ್ಧೆಯಲ್ಲಿ ಕೊಪ್ಪಳದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಗ್ರೀಷ್ಮಾ ವಿ.ಪಿ. ಉತ್ತಮ ಸಾಧನೆಗೈದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
     ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ನಡೆಸಲಾಗುವ ಸಾಮಾನ್ಯ ಜ್ಞಾನ ಪ್ರತಿಭಾ ರಾಜ್ಯ ಮಟ್ಟದ ಸ್ಪರ್ಧೆಗೆ ಕೊಪ್ಪಳದ ಶಿವಶಾಂತವೀರ ಪಬ್ಲಿಕ್ ಶಾಲೆಯ ಅನುಶ್ರೀ, ಸಹನಾ, ಹೃಷಿಕೇಶ್, ಆದರ್ಶ, ಬಸವರಾಜ್, ಗುರುಪ್ರಸಾದ್, ಆಕಾಶ್ ಜೆ. ಪಾಟೀಲ್, ಗ್ರೀಷ್ಮಾ ಹಾಗೂ ಅಂಜಲಿ ಸೇರಿದಂತೆ ಒಟ್ಟು 09 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.  ಕಳೆದ ಜ. 24 ರಂದು ಬೆಂಗಳೂರಿನ ಶಿಕ್ಷಣ ಸದನದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗ್ರೀಷ್ಮಾ ವಿದ್ಯಾರ್ಥಿನಿ ಉತ್ತಮ ಸಾಧನೆ ತೋರಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಳೆ.  ವಿದ್ಯಾರ್ಥಿನಿಗೆ ಗವಿಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವದಿಸಿದ್ದು, ಬಾಲಕಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರಾದ ಕೆ. ರೋಜ್ ಮೇರಿ, ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ರಂಗ ಉತ್ಸವ : ಅರ್ಜಿ ಆಹ್ವಾನ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಕಾಲೇಜು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಆತ್ಮಸ್ಥೈರ್ಯ ತುಂಬಲು ಕಾಲೇಜು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ರಂಗೋತ್ಸವವನ್ನು ಏರ್ಪಡಿಸಲು ಉದ್ದೇಶಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಜ. 31 ರವರೆಗೆ ವಿಸ್ತರಿಸಲಾಗಿದೆ.
ಸ್ಪರ್ಧಾತ್ಮಕ ರಂಗೋತ್ಸವವು ಮೂರು ಹಂತಗಳದ್ದಾಗಿದ್ದು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರಥಮ ಹಂತವಾಗಿ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಫೆ.9 ರಿಂದ 12 ರ ಒಳಗೆ ನಾಟಕೋತ್ಸವವನ್ನು ಏರ್ಪಡಿಸಲಾಗುವುದು. ಜಿಲ್ಲಾ ಮಟ್ಟದ ನಾಟಕ ಹಾಗೂ ಜಾನಪದ ಉತ್ಸವದಲ್ಲಿ ಪಾಲ್ಗೊಂಡ ತಂಡಗಳಲ್ಲಿ ತಲಾ 02 ನಾಟಕ ತಂಡ ಮತ್ತು 02 ಜಾನಪದ ತಂಡಗಳನ್ನು ವಿಭಾಗೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಒಂದು ಕಾಲೇಜಿಗೆ ಒಂದು ಜಾನಪದ ಮತ್ತು ಒಂದು ನಾಟಕಕ್ಕೆ ಮಾತ್ರ ಅವಕಾಶವಿದೆ.  ಜಾನಪದ ಪ್ರಕಾರಗಳಲ್ಲಿ ಡೊಳ್ಳು, ಕಂಸಾಳೆ, ತಮಟೆ, ಕೋಲಾಟ, ಜಗ್ಗಲಿಗೆ ಇತ್ಯಾದಿಯಂತಹ, ಪ್ರದರ್ಶನ ಜಾನಪದ ಕಲೆಗಳಾಗಿರಬೇಕು.  ಪ್ರತಿ ಕಾಲೇಜಿನಿಂದ 15 ನಾಟಕ ಕಲಾವಿದರು ಮತ್ತು ಜಾನಪದ ಕಲಾವಿದರು ಸೇರಿದಂತೆ ಗರಿಷ್ಠ 30 ಜನ ಕಲಾವಿದರು ಭಾಗವಹಿಸಬಹುದು.  ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಕೊಪ್ಪಳದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜ. 31 ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳಿಗೆ 08539-221417 ಕ್ಕೆ ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ : ನೀರು ಪೂರೈಕೆಯಲ್ಲಿ ವ್ಯತ್ಯಯ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಕೊಪ್ಪಳ ನಗರದಲ್ಲಿ ಜ. 28 ಮತ್ತು 29 ರಂದು ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
     ನಗರಸಭೆಯಿಂದ ಕೊಪ್ಪಳ ನಗರಕ್ಕೆ ನೀರು ಸರಬರಾಜು ಆಗುವ 450 ಎಂ.ಎಂ. ಮುಖ್ಯ ಪೈಪ್‍ಲೈನ್ ಅನ್ನು ಸಿಂಧೋಗಿ ಗ್ರಾಮದ ಹತ್ತಿರವಿರುವ ಚಿನ್ನಾಳ ಹಳ್ಳದಲ್ಲಿ ಜೋಡಣೆ ಮಾಡಬೇಕಾಗಿದ್ದು, ಜ.28 ಹಾಗೂ .29 ರಂದು ಒಟ್ಟು ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ಮನವಿ ಮಾಡಿದ್ದಾರೆ.

ಕೈಗಾರಿಕಾ ನೀತಿ: ರಿಯಾಯತಿ ಪಡೆಯಲು ಸೂಚನೆ

ಕೊಪ್ಪಳ ಜ.27(ಕರ್ನಾಟಕ ವಾರ್ತೆ): ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಕೈಗಾರಿಕೆಗಳನ್ನು ಅಭಿವೃದ್ದಿಪಡಿಸಲು 2009-14ನೇ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದೆ. ಈ ಕೈಗಾರಿಕಾ ನೀತಿಯಡಿ ಸೆಕ್ಷನ್ 109 ರಡಿ ಭೂಮಿ ಖರೀದಿ ಮಾಡಲು ಸ್ಟ್ಯಾಂಪ್ ಶುಲ್ಕ ವಿನಾಯಿತಿ, ಪ್ರವೇಶ ತೆರಿಗೆ ವಿನಾಯಿತಿ, ಸಹಾಯಧನ, ವಿದ್ಯುತ್ ತೆರಿಗೆ ವಿನಾಯಿತಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಅರ್ಹ ಕೈಗಾರಿಕಾ ಮತ್ತು ಸೇವಾ ಘಟಕಗಳು ಈ ಉತ್ತೇಜನ ಮತ್ತು ರಿಯಾಯತಿಗಳನ್ನು ಪಡೆಯಬಹುದಾಗಿದೆ.  ಕೈಗಾರಿಕಾ ನೀತಿಯು ಮಾರ್ಚ-2015 ರಂದು ಮುಕ್ತಾಯಗೊಳ್ಳುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ.  ಸಹಾಯಕ ನಿರ್ದೇಶಕ ಕೆ.ಭೀಮಪ್ಪ-9481664401, ಕೈಗಾರಿಕಾ ಉತ್ತೇಜನಾಧಿಕಾರಿ ಎಸ್.ಎಂ.ಚವ್ಹಾಣ-9880457917 ಇವರನ್ನು  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Sunday, 25 January 2015

ಕೊಪ್ಪಳ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು

ಕೊಪ್ಪಳ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು 66ನೇ ಗಣರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಶ್ರೀ ಶಿವರಾಜ ತಂಗಡಗಿ ಅವರು ಪ್ರದಾನ ಮಾಡಿದರು.
ಪ್ರಶಸ್ತಿ ಪಡೆದುಕೊಂಡ ಶ್ರೀ ಶ್ರೀನಿವಾಸ ಜೋಷಿ- ಸಂಸದರ ಆಪ್ತ ಸಹಾಯಕರು, ಶರತ್ಚಂದ್ರ ರಾನಡೆ- ಎಪಿಎಂಸಿ ಕಾರ್ಯದರ್ಶಿ, ಗಂಗಾವತಿ ಹಾಗೂ ಶರಣಯ್ಯ ಸ್ವಾಮಿ, ಪಿಡಿಓ, ಕಲ್ ತಾವರಗೇರಾ, ಕೊಪ್ಪಳ ತಾಲೂಕು. ಇವರಿಗೆ ಅಭಿನಂದನೆಗಳು.

66ನೇ ಗಣರಾಜ್ಯೋತ್ಸವ ಸಮಾರಂಭದ ಫೋಟೋಗಳು

66ನೇ ಗಣರಾಜ್ಯೋತ್ಸವ ಸಮಾರಂಭದ ಫೋಟೋಗಳು


ಯುವ ಜನತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು- ಡಾ. ಪಿ. ರಾಜಾ


ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಭಾರತ ದೇಶ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಂದಿನ ಯುವ ಜನತೆಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು.  ಹೆಚ್ಚು ಹೆಚ್ಚು ಯುವಕರು ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಅಭಿಪ್ರಾಯಪಟ್ಟರು.

     ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


     ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಯುವಕರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಬರಬೇಕು.  ಹೆಚ್ಚು, ಹೆಚ್ಚು ಯುವಕರು ರಾಜಕೀಯ ಕ್ಷೇತ್ರಕ್ಕೆ ಬರುವಂತಾಗಬೇಕು.  ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಕಳೆದ 2011 ರಿಂದ ಆಚರಿಸಲಾಗುತ್ತಿದೆ.  ಅರ್ಹ ಯುವಜನತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು.  ಚುನಾವಣೆ ಸಂದರ್ಭದಲ್ಲಿ ಎಲ್ಲ ಮತದಾರರು ತಪ್ಪದೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ರಾಜ್ಯದಲ್ಲಿ 4. 70 ಕೋಟಿ ಮತದಾರರಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 67 ರಷ್ಟು ಮಾತ್ರ ಮತದಾನವಾಗಿದೆ.  ರಾಷ್ಟ್ರ ಮಟ್ಟದ ಮತದಾನ ಪ್ರಮಾಣವನ್ನು ಹೋಲಿಸಿದಾಗ, ರಾಜ್ಯದಲ್ಲಿ ನಡೆದ ಮತದಾನ ಪ್ರಮಾಣ ಕಡಿಮೆ ಇದೆ.  ಮತದಾರರು ತಮ್ಮ ಮತದಾನದ ಕರ್ತವ್ಯವನ್ನು ಮೊದಲು ನಿರ್ವಹಿಸಬೇಕು.  ನಂತರವೇ ನಾವು ಜನಪ್ರತಿಧಿಗಳಲ್ಲಿ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ನೈತಿಕತೆ ಇರುತ್ತದೆ.  ಚುನಾವಣೆಗಳಲ್ಲಿ ಮತದಾರರು ಯಾವುದೇ ಜಾತಿ, ಮತಗಳ ಪ್ರಭಾವಕ್ಕೆ ಒಳಗಾಗದೆ, ಹಣ ಇನ್ನಿತರೆ ಆಮಿಷಕ್ಕೆ ಒಳಗಾಗದೆ, ಸೂಕ್ತ ವ್ಯಕ್ತಿಯನ್ನು ಆರಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಅವರು ಯುವ ಮತದಾರರಿಗೆ ಕರೆ ನೀಡಿದರು.     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮಾತನಾಡಿ, ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜ. 25 ಅನ್ನು 2011 ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.  ಚುನಾವಣೆಗಳಲ್ಲಿ ಮತದಾನ ಪ್ರಕ್ರಿಯೆಯಿಂದ ಮತದಾರ ವಿಮುಖನಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಚುನಾವಣಾ ಆಯೋಗ, ದೇಶದ ಮತದಾರರು ಹಾಗೂ ಯುವಕರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಯಿತು.  1911 ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನಾಳುತ್ತಿದ್ದ ಬ್ರಿಟೀಷರು ದೇಶದ ಜನಸಂಖ್ಯೆಯ ಶೇ. 11 ರಷ್ಟು ಜನರಿಗೆ ಮಾತ್ರ ಅವರ ಸಿರಿವಂತಿಕೆಯನ್ನು ಮಾನದಂಡವನ್ನಾಗಿಸಿಕೊಂಡು, ಮತದಾನದ ಹಕ್ಕು ನೀಡಿತ್ತು.  ಇಂದಿನ ನಮ್ಮ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರೆ, ಇದರಲ್ಲಿ ಯಾವುದೇ ಲಿಂಗ ಭೇದ ಅಥವಾ ತಾರತಮ್ಯಕ್ಕೆ ಅವಕಾಶವಿಲ್ಲ.  ಜಿಲ್ಲೆಯಲ್ಲಿ ಈಗಾಗಲೆ ಶೇ. 98. 12 ರಷ್ಟು ಮತದಾರರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಪೂರ್ಣಗೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದೆ.  18 ವರ್ಷ ಮೇಲ್ಪಟ್ಟ ಯಾರೇ ಆದರೂ ತಪ್ಪದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿ ಎಂದು ಕರೆ ನೀಡಿದರು.
     ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ನಾಯಕ್ ಅವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿದ ಕೂಡಲೆ, ಯುವ ಮತದಾರರು ಮಹತ್ವದ ಜವಾಬ್ದಾರಿ ಪಡೆದಿದ್ದೇವೆ ಎನ್ನುವುದನ್ನು ಮರೆಯಬಾರದು.  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸುವುದು ಸುಲಭವಾದರೂ, ಇದಕ್ಕಿಂದ ಉತ್ತಮ ವ್ಯವಸ್ಥೆ ಏನು ಎಂಬುದಕ್ಕೆ ಸೂಕ್ತ ಉತ್ತರ ನೀಡಲಾಗುವುದಿಲ್ಲ.  2011 ರಲ್ಲಿ ದೇಶದಲ್ಲಿ 43 ಕೋಟಿ ಯುವ ಮತದಾರರಿದ್ದರೆ, 2015 ರಲ್ಲಿ 46 ಕೋಟಿ ದಾಟಿದೆ.  ಇದಕ್ಕಾಗಿಯೇ ನಮ್ಮ ದೇಶವನ್ನು ಯುವ ಭಾರತ ಎನ್ನಲಾಗುತ್ತಿದ್ದು, ಯುವಶಕ್ತಿ ರಾಜಕೀಯ ಪ್ರವೇಶಿಸಬೇಕು.  ಮಾಧ್ಯಮಗಳೂ ಸಹ ರಾಜಕೀಯ ಸಮಾಜೀಕರಣಗೊಳಿಸಲು ಶ್ರಮಿಸಿದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚು ಬಲ ಸಿಗಲಿದೆ ಎಂದರು.
     ಕೊಪ್ಪಳದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ನೂತನ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ, ತಹಸಿಲ್ದಾರ್ ಪುಟ್ಟರಾಮಯ್ಯ ಉಪಸ್ಥಿತರಿದ್ದರು.  ಚುನಾವಣಾ ತಹಸಿಲ್ದಾರ್ ಮಲ್ಲಿಕಾರ್ಜುನ ಜಾನೆಕಲ್ ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  ನೂತನವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.

ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್ ರಾವ್ ಫೆ. 05 ರಂದು ಕೊಪ್ಪಳಕ್ಕೆ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಡಾ. ವೈ. ಭಾಸ್ಕರ್ ರಾವ್ ಅವರು ಫೆ. 5 ಮತ್ತು 06 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರೊಂದಿಗೆ ಅಪರ ನಿಬಂಧಕರಾದ ಎ.ಆರ್. ದೇಶಪಾಂಡೆ ಅವರು  ಕೊಪ್ಪಳಕ್ಕೆ ಆಗಮಿಸಲಿದ್ದಾರೆ.
     ಲೋಕಾಯುಕ್ತ ನ್ಯಾಯಮೂರ್ತಿಗಳು ಫೆ. 05 ರಂದು ಸಂಜೆ ಯಾದಗಿರಿಯಿಂದ ಹೊರಟು ರಾತ್ರಿ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.  ಫೆ. 06 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಲೋಕಾಯುಕ್ತ ಬಾಕಿ ಕಡತಗಳ ವಿಚಾರಣೆ ಹಾಗೂ ದೂರುಗಳ ವಿಚಾರಣೆ ಕೈಗೊಳ್ಳುವರು.  ಲೋಕಾಯುಕ್ತ ನ್ಯಾಯಮುರ್ತಿಗಳು ಅದೇ ದಿನ ಸಂಜೆ 06 ಗಂಟೆಗೆ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು.

ಕೂಕನಪಳ್ಳಿಯಲ್ಲಿ ಜ. 26 ರಂದು ಸಾಂಸ್ಕøತಿಕ ಕಾರ್ಯಕ್ರಮ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯವರ ಪ.ಜಾತಿ ಪ್ರಾಯೋಜಿತ ಕಾರ್ಯಕ್ರಮದಡಿ ಸಾಂಸ್ಕøತಿಕ ಕಾರ್ಯಕ್ರಮ ಜ. 26 ರಂದು ಸಂಜೆ 6 ಗಂಟೆಗೆ ತಾಲೂಕಿನ ಕೂಕನಪಳ್ಳಿಯ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ.
     ಕೂಕನಪಳ್ಳಿಯ ಬಸಯ್ಯ ತಾತನವರು ಸಾನಿಧ್ಯ ವಹಿಸಲಿದ್ದು, ಸಂಸದ ಸಂಗಣ್ಣ ಕರಡಿ ಜ್ಯೋತಿ ಬೆಳಗಿಸುವರು.  ಜಿ.ಪಂ. ಸದಸ್ಯೆ ಕಸ್ತೂರಮ್ಮ ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದು, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅಧ್ಯಕ್ಷತೆ ವಹಿಸುವರು.  ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ತಾ.ಪಂ. ಸದಸ್ಯರು, ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಚಂದ್ರಪ್ಪ ಹೆಚ್. ಕಲಾ ತಂಡದವರಿಂದ ಜಾನಪದ ಗೀತೆಗಳ ಕಾರ್ಯಕ್ರಮ ನೆರವೇರಲಿದೆ.

ಸರ್ಕಾರದ ವಿಶೇಷ ಪ್ರತಿನಿಧಿ ಅಪ್ಪಾಜಿ ನಾಡಗೌಡರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 25 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಜ. 30 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಅಪ್ಪಾಜಿ ನಾಡಗೌಡ ಅವರು ಅಂದು ಬೆಳಿಗ್ಗೆ 9-30 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.  ನಂತರ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ಮಧ್ಯಾಹ್ನ 11 ಗಂಟೆಗೆ ಮುದ್ದೆಬಿಹಾಳಕ್ಕೆ ಪ್ರಯಾಣ ಬೆಳೆಸುವರು ಎಂದು ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Saturday, 24 January 2015

ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಿ- ದಾಕ್ಷಾಯಿಣಿ ಬಸವರಾಜ್


 ಕೊಪ್ಪಳ ಜ. 24 (ಕರ್ನಾಟಕ ವಾರ್ತೆ): ಪ್ರತಿಯೊಂದು ಮಕ್ಕಳಲ್ಲೂ ಒಂದಿಲ್ಲ ಒಂದು ಪ್ರತಿಭೆ ಅಡಗಿದ್ದು, ಸೂಕ್ತ ಸಮಯದಲ್ಲಿ ಅದನ್ನು ಗುರುತಿಸಿ, ಪ್ರತಿಭೆ ಅನಾವರಣಕ್ಕೆ ಸಮರ್ಪಕ ವೇದಿಕೆ ಕಲ್ಪಿಸಿಕೊಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ್ ಅವರು ಕರೆನೀಡಿದರು.

     ಕರ್ನಾಟಕ ಬಾಲವಿಕಾಸ ಅಕಾಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯಭವನದಲ್ಲಿ ಶನಿವಾರ ಏರ್ಪಡಿಸಲಾದ ಜಿಲ್ಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಪ್ರತಿಯೊಂದು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ.  ಅದು ಕಲೆ, ಸಾಹಿತ್ಯ ಅಥವಾ ಸಂಸ್ಕøತಿಯಂತಹ ವಿವಿಧ ಪ್ರಕಾರದಲ್ಲಿ ಇರುವ ಸಾಧ್ಯತೆಗಳಿದ್ದು, ಇಂತಹ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ದೊರೆಯುವಂತೆ ಮಾಡುವ ಹೊಣೆಗಾರಿಕೆ ಕೇವಲ ಮಕ್ಕಳ ಪಾಲಕರಿಗಷ್ಟೇ ಅಲ್ಲ ಶಿಕ್ಷಕರು, ನಾಗರಿಕರು ಹಾಗೂ ಸಂಘ ಸಂಸ್ಥೆಗಳ ಮೇಲಿದೆ.  ಪ್ರತಿಭೆಗಳನ್ನು ಗ್ರಾಮೀಣ  ಮಟ್ಟದಿಂದ ತಾಲೂಕು, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಕರೆತರುವ ಕಾರ್ಯದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಹತ್ವದ ಪಾತ್ರ ವಹಿಸಲಿದೆ.  ಗ್ರಾಮೀಣ ಮಕ್ಕಳಲ್ಲಿನ ಕಲೆ ಗುರುತಿಸುವುದು ಹಾಗೂ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಅಕಾಡೆಮಿ ಹಮ್ಮಿಕೊಂಡಿದೆ.  ಜೊತೆಗೆ ಮಕ್ಕಳಲ್ಲಿ ಉನ್ನತ ಪರೀಕ್ಷೆಗಳ ಬಗ್ಗೆ ಹೊಂದಿರುವ ಭಯವನ್ನು ಹೋಗಲಾಡಿಸಿ, ಸುಗಮವಾಗಿ ಪರೀಕ್ಷೆಯನ್ನು ಎದುರಿಸಲು ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.  ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ಎರಡು ಸಾವಿರ ರೂ.ಗಳ ಅನುದಾನ ನೀಡಲು ಕ್ರಮ ಕೈಗೊಂಡಿದೆ ಅಲ್ಲದೆ ಪ್ರತಿ ಜಿಲ್ಲೆಯಲ್ಲೂ ಅಕಾಡೆಮಿಗೆ ಸದಸ್ಯರನ್ನು ನೇಮಿಸುವ ಪ್ರಕ್ರಿಯೆಗೆ ಅಕಾಡೆಮಿ ಚಾಲನೆ ನೀಡಿದೆ. ಮಕ್ಕಳಿಗೆ ಕೇವಲ ವಿದ್ಯೆ ಕಲಿಸಿದರಷ್ಟೇ ಸಾಲದು, ಉತ್ತಮ ನಡೆ, ನುಡಿ ಜೊತೆಗೆ ಒಳ್ಳೆಯ ಸಂಸ್ಕಾರ ಕಲಿಸುವತ್ತ ಪಾಲಕರು, ಶಿಕ್ಷಕರು ಗಮನ ಹರಿಸಬೇಕು.  ಮಕ್ಕಳ ಉತ್ತಮ ಕಲೆಗೆ ಪ್ರೋತ್ಸಾಹ ಹಾಗೂ ಪ್ರಶಂಸೆಗಳು ಟಾನಿಕ್ ಇದ್ದಹಾಗೆ, ಆದರೆ ಇತರೆ ಮಕ್ಕಳೊಂದಿಗೆ ಹೋಲಿಸಿ, ಅವರನ್ನು ನಿಂದಿಸುವಂತಹ ಕಾರ್ಯ ಆಗಬಾರದು ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷೆ ದಾಕ್ಷಾಯಿಣಿ ಬಸವರಾಜ್ ಅವರು ಹೇಳಿದರು.


     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ  ಅವರು ಈ ಸಂದರ್ಭದಲ್ಲಿ ಮಾತನಾಡಿ, ಇಂದಿನ ಮಕ್ಕಳೆ ಭವ್ಯ ಭಾರತದ ಸಂಪತ್ತು.  ಮಕ್ಕಳಲ್ಲಿ ಒಳ್ಳೆಯ ಪ್ರತಿಭೆ ಇರುತ್ತದೆ.  ಆದರೆ ಇದಕ್ಕೆ ಪೂರಕವಾಗುವಂತಹ ಪರಿಸರ ನಿರ್ಮಾಣವಾಗಬೇಕು.  ವಿವೇಕಾನಂದರು, ಸುಭಾಶ್ಚಂದ್ರಭೋಸ್, ಅಬ್ದುಲ್ ಕಲಾಂ ನಂತಹ ಮಹನೀಯರಾಗುವ ಪ್ರತಿಭೆಗಳು ಅನೇಕ ಮಕ್ಕಳಲ್ಲಿವೆ, ಆದರೆ, ಸಕಾಲದಲ್ಲಿ, ಸೂಕ್ತ ರೀತಯಲ್ಲಿ ನಮ್ಮ ಸಮಾಜ ಗುರುತಿಸುವಲ್ಲಿ ವಿಫಲವಾಗುತ್ತಿದೆಯೇನೋ ಎನಿಸುತ್ತದೆ.  ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ವಾಗಿದ್ದು, ಮಕ್ಕಳ ಮನಸ್ಸಿನ ಮೇಲೆ ಹೊರೆಯಾಗದಂತೆ, ಎಚ್ಚರಿಕೆಯಿಂದ, ಅವರ ಮನಸ್ಸು ಹಾಗೂ ಕಲೆ ಅರಳುವಂತೆ ನೋಡಿಕೊಳ್ಳುವ ಹೊಣೆ ಸಮಾಜ, ಶಿಕ್ಷಕವೃಂದ ಹಾಗೂ ಪಾಲಕರ ಮೇಲಿದೆ ಎಂದರು.

     ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಸಾವಿತ್ರಿ ಮುಜುಂದಾರ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯೆ ಅರುಣಾ, ಗಣ್ಯರಾದ ಶಿವಾನಂದ ಹೊದ್ಲೂರ, ಗವಿಸಿದ್ದಪ್ಪ, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಸ್ವಾಗತಿಸಿದರು, ಮುನಿರಾಜು ಅವರು ವಂದಿಸಿದರು.  ಜಿಲ್ಲಾ ಮಕ್ಕಳ ಹಬ್ಬ ಅಂಗವಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಕ್ಕಳ ಸಾಂಸ್ಕøತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ಹೊರತಟ್ನಾಳ ಗ್ರಾಮದ ಶಾಲಾ ಮಕ್ಕಳಿಂದ ಡೊಳ್ಳು ಕುಣಿತ, ತೇಜಸ್ವಿನಿ ಅಳವಂಡಿ ಅವರಿಂದ ಭರತನಾಟ್ಯ, ಮೈನಳ್ಳಿ ಗ್ರಾಮದ ಮಕ್ಕಳಿಂದ ಜಾನಪದ ನೃತ್ಯ ಹಾಗೂ ಜಂಪ್‍ರೋಪ್ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

ಜ. 25 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಜ. 25 ರಂದು ಬೆ. 11 ಗಂಟೆಗೆ ಕೊಪ್ಪಳದ ಸಾಹಿತ್ಯ ನಡೆಯಲಿದೆ.
     ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪಾಲ್ಗೊಳ್ಳುವರು.  ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರಭುರಾಜ ಕೆ. ನಾಯಕ್ ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡುವರು.  ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧನೆ, ಹೊಸ ಮತದಾರರಿಗೆ ಗುರುತಿನ ಕಾರ್ಡ್ ವಿತರಣೆ ಹಾಗೂ ವಿವಿಧ ಕ್ರೀಡೆ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ತಿಳಿಸಿದ್ದಾರೆ.

ಮತದಾರರ ಜಾಗೃತಿ : ಆನ್‍ಲೈನ್ ಸ್ಪರ್ಧೆ ಫಲಿತಾಂಶ ಪ್ರಕಟ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಮಾಹಿತಿ ಸೂಚನಾ ಕೇಂದ್ರ (ಎನ್.ಐ.ಸಿ) ಇವರ ಸಹಯೋಗದಲ್ಲಿ ಮತದಾರರ ಜಾಗೃತಿಗಾಗಿ ಆಯೋಜಿಸಲಾಗಿದ್ದ ಆನ್‍ಲೈನ್ ಕ್ವಿಜ್ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
     ಗಂಗಾವತಿ ತಾಲೂಕು ವಡ್ಡರಹಟ್ಟಿಯ ಲತೀಫ್ ಮೌಲಾಹುಸೇನ್ ಮುನ್ಷಿ ಅವರು 30 ಪ್ರಶ್ನೆಗಳಿಗೆ 29 ಸರಿ ಉತ್ತರಗಳನ್ನು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದು 1500 ರೂ. ಬಹುಮಾನ ಗೆದ್ದಿದ್ದಾರೆ.  ಗಂಗಾವತಿಯ ಮರಿದೇವ ಶಿವನೀಲಪ್ಪ ಹಾಗೂ ಕೊಪ್ಪಳ ತಾಲೂಕು ಕಾತರಕಿ-ಗುಡ್ಲಾನೂರ ಗ್ರಾಮದ ಶೇಖರನಾಯಕ್ ಲಮಾಣಿ ಅವರು ತಲಾ 28 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ದ್ವಿತೀಯ ಹಾಗೂ ತೃತೀಯ ಬಹುಮಾನದ ಮೊತ್ತ 1500 ಗಳನ್ನು ಸಮನಾಗಿ ಅಂದರೆ ತಲಾ 750 ರೂ. ಗಳನ್ನು ಹಂಚಿಕೊಂಡಿದ್ದಾರೆ.  ಕೊಪ್ಪಳದ ಎನ್‍ಐಸಿಯ ವೆಬ್‍ಸೈಟ್ ಮೂಲಕ ಮತದಾರರ ಜಾಗೃತಿಗೆ ಕ್ವಿಜ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಒಟ್ಟು 483 ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಸ್ಪರ್ಧೆ ವಿಜೇತರಿಗೆ ಜ. 25 ರಂದು ಸಾಹಿತ್ಯ ಭವನದಲ್ಲಿ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಜ. 24 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಜ. 25 ಮತತು 26 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಜ. 25 ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸಿ ವಾಸ್ತವ್ಯ ಮಾಡುವರು.  ಜ. 26 ರಂದು ಬೆಳಿಗ್ಗೆ 8-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ 66ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಚಿವರು ಮಧ್ಯಾಹ್ನ 3 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Friday, 23 January 2015

ಜ. 26 ರಂದು ಕೊಪ್ಪಳದಲ್ಲಿ 66ನೇ ಗಣರಾಜ್ಯೋತ್ಸವ ಸಮಾರಂಭ

ಕೊಪ್ಪಳ ಜ. 23 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ 66ನೇ ಗಣರಾಜ್ಯೋತ್ಸವ ಸಮಾರಂಭ ಜ. 26 ರಂದು   ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.
                ಅಂದು ಬೆಳಿಗ್ಗೆ 8 ಗಂಟೆಗೆ ತಹಸಿಲ್ದಾರರ ಕಚೇರಿ ಆವರಣದಿಂದ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಪ್ರಾರಂಭವಾಗಿ, ಅಶೋಕ ವೃತ್ತ, ಬಸ್ ನಿಲ್ದಾಣ ಮಾರ್ಗದಿಂದ ಜಿಲ್ಲಾ ಕ್ರೀಡಾಂಗಣ ತಲುಪಲಿದೆ.  ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.  ನಂತರ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್‍ಸಿಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ಗೃಹ ರಕ್ಷಕ ದಳಗಳಿಂದ ಪಥ ಸಂಚಲನ ಮತ್ತು ಗೌರವ ರಕ್ಷೆ ಸ್ವೀಕಾರ ನೆರವೇರಲಿದೆ.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ನಗರಸಭೆ ಅಧ್ಯಕ್ಷರು, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನಿಲ್‍ಕುಮಾರ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜಾ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಳ್ಳುವರು.  ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ನಡೆಯಲಿದೆ.  ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಅಂದು ಸಂಜೆ 6 ಗಂಟೆಗೆ ನಗರದ ಸಾರ್ವಜನಿಕ ಮೈದಾನದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ.


ಲೋಕಾಯುಕ್ತ ಡಿವೈಎಸ್‍ಪಿ ಅವರ ಪ್ರವಾಸ : ಸಾರ್ವಜನಿಕ ಕುಂದುಕೊರತೆ ದೂರು ಆಹ್ವಾನ

ಕೊಪ್ಪಳ ಜ.23(ಕರ್ನಾಟಕ ವಾರ್ತೆ): ಕೊಪ್ಪಳ ಲೋಕಾಯುಕ್ತ ಡಿವೈಎಸ್‍ಪಿ ಎಂ.ಹೆಚ್. ಚಿಕ್ಕರೆಡ್ಡಿ ಅವರು ಜ.30 ರಂದು ಗಂಗಾವತಿ ಹಾಗೂ ಜ.31 ರಂದು ಯಲಬುರ್ಗಾ ದಲ್ಲಿ ಪ್ರವಾಸ ಕೈಕೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ.
     ಲೋಕಾಯುಕ್ತ ಡಿವೈಎಸ್‍ಪಿ ಅವರು ಜ.30 ರಂದು ಬೆಳಿಗ್ಗೆ 11-00 ರಿಂದ ಗಂಗಾವತಿಯ ಪ್ರವಾಸಿ ಮಂದಿರದಲ್ಲಿ ಹಾಗೂ ಜ.31 ರಂದು ಬೆಳಿಗ್ಗೆ 11-00 ರಿಂದ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ.  ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ1 ಮತ್ತು 2 ನಮೂನೆಯನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರು ಕೊಪ್ಪಳ ದೂರವಾಣಿ ಸಂಖ್ಯೆ : 08539 220533 ಅಥವಾ 08539-220200 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜ.27 ರಂದು ವಿಕಲಚೇತನರ ಕುಂದುಕೊರತೆ ಸಮಿತಿ ಸಭೆ

ಕೊಪ್ಪಳ ಜ.23(ಕರ್ನಾಟಕ ವಾರ್ತೆ):  ಜಿಲ್ಲೆಯಲ್ಲಿ ಅಂಗವಿಕಲರ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಂಗವಿಕಲರ ಕುಂದುಕೊರತೆಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಉದ್ದೇಶದಿಂದ  ಜಿಲ್ಲಾ ಮಟ್ಟದ ಕುಂದುಕೊರತೆಗಳ ನಿವಾರಣಾ ಸಭೆ ಜ.27 ರಂದು ಬೆ.11 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ.
     ಸಭೆಯಲ್ಲಿ ಜಿಲ್ಲೆಯ ಎಲ್ಲಾ ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಗಳಲ್ಲಿ ಅಂಗವಿಕಲರಿಗೆ ಮೀಸಲಿರಿಸಿದ ಶೇ.3 ರ ಅನುದಾನದ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

Thursday, 22 January 2015

ಗೆಜೆಟೆಡ್ ಪ್ರೊಬೆಷನರ್ಸ್ 440 ಹುದ್ದೆಗಳ ನೇಮಕಾತಿಗೆ KPSC ಯಿಂದ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-02-2015

ಸಂಪೂರ್ಣ ಮಾಹಿತಿಗಾಗಿ www.kpsc.kar.nic.in  ವೀಕ್ಷಿಸಿ
 http://www.kpsc.kar.nic.in/GP2014.htm

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಪ್ರಕಾಶಕರ ನೋಂದಣಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ ಜ.22(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರವು  ಪ್ರಕಟಿತ ಪುಸ್ತಕಗಳ ಹಾಗೂ ಪುಸ್ತಕ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಕಾಶಕರ ನೋಂದಣಿಗಾಗಿ ಅರ್ಜಿ ಆಹ್ವಾನಿಸಿದೆ.
           ರಾಜ್ಯದಲ್ಲಿ ನೂರಾರು ಪ್ರಕಾಶಕರು ಇದ್ದು, ದಿನವಹಿ ಹತ್ತಾರು ಪುಸ್ತಕಗಳ ಪ್ರಕಟಣೆಯಾಗುತ್ತಿದೆ. ರಾಜ್ಯದಲ್ಲಿ ಪ್ರಕಟಿತ ಪುಸ್ತಕಗಳ ಹಾಗೂ ಪುಸ್ತಕ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾದಲ್ಲಿ  ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ದೃಷ್ಟಿಕೋನದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಾಶಕರ ನೋಂದಣಿ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ದಿಸೆಯಲ್ಲಿ ರಾಜ್ಯದೆಲ್ಲೆಡೆ ಇರುವ ಪ್ರಕಾಶಕರು ತಮ್ಮ ಹೆಸರು/ ವಿವರಗಳು ಮತ್ತು ತಮ್ಮಿಂದ ಈವರೆಗೆ ಪ್ರಕಟಿತವಾಗಿರುವ ಎಲ್ಲಾ ಪುಸ್ತಕಗಳ ಶೀರ್ಷಿಕೆ, ಪುಟ ಸಂಖ್ಯೆ, ಬೆಲೆ, ರಿಯಾಯಿತಿ ದರ ಇತ್ಯಾದಿಗಳ ವಿವರಗಳು, ಪ್ರಕಾಶನದ ಮುಖ್ಯಸ್ಥರು/ಮಾಲೀಕರು ಅಥವಾ ಆಡಳಿತಾಧಿಕಾರಿಗಳ ಎರಡು ಇತ್ತೀಚಿನ ಸ್ಟಾಂಪ್ ಸೈಜ್ ಭಾವಚಿತ್ರದೊಂದಿಗೆ ಅರ್ಜಿಗಳನ್ನು ಫೆ.18 ರೊಳಗಾಗಿ ಆಡಳಿತಾಧಿಕಾಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಸಲ್ಲಿಸಬಹುದಾಗಿದೆ.
       ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಸಹಾಯಕ  ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ  www.kannadapusthakapradhikara.com  ನಿಂದ ಪಡೆಯಬಹುದು. ವಿವರಗಳನ್ನು ಪ್ರಾಧಿಕಾರದ ಇ-ಮೇಲ್ ವಿಳಾಸ  kannadappradhikara@gmail.com   ಕ್ಕೆ ಡಿ.ಟಿ.ಪಿ. ಮಾಡಿ ಕಳುಹಿಸಿ, ನಂತರ ಭಾವಚಿತ್ರದೊಂದಿಗೆ ಅರ್ಜಿಯನ್ನು ಅಂಚೆ ಮೂಲಕ ರವಾನಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗೆ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು_ದೂರವಾಣಿ ಸಂಖ್ಯೆ:080-22484516/22017704-ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫೆ.14 ರಂದು ಕೊಪ್ಪಳದಲ್ಲಿ ಮೆಗಾ ಲೋಕ್ ಅದಾಲತ್

ಕೊಪ್ಪಳ ಜ.22(ಕರ್ನಾಟಕ ವಾರ್ತೆ): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜಿ ಸಂಧಾನದ ಮೂಲಕ ನ್ಯಾಯಾಲಯದಲ್ಲಿರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅನುಕೂಲವಾಗುವಂತೆ ಫೆ. 14 ರಂದು ಕೊಪ್ಪಳದ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್ ಆಯೋಜಿಸಲಾಗಿದೆ.
     ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ ಬ್ಯಾಂಕ್ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು ಚಕ್‍ಬೌನ್ಸ್ (ಎನ್‍ಐ.138 ಆ್ಯಕ್ಟ್) ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮುಖಾಂತರ ಇತ್ಯರ್ಥಗೊಳಿಸಲು ಉದ್ದೇಶಿಸಿದ್ದು,  ನ್ಯಾಯಾಲಯದಲ್ಲಿ ಬಾಕಿ ಇರುವ ಬ್ಯಾಂಕ್ ಪ್ರಕರಣಗಳು ಹಾಗೂ ಚಕ್‍ಬೌನ್ಸ್ (ಎನ್‍ಐ.138 ಆ್ಯಕ್ಟ್) ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು.  ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ. ಅಲ್ಲದೆ  ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.  ಕಡಿಮೆ ಖರ್ಚು, ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶವಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರ್ಶ ವಿದ್ಯಾಲಯ : 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಕೊಪ್ಪಳ ಜ.22(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕೊಪ್ಪಳದ ಆದರ್ಶ ವಿದ್ಯಾಲಯದಲ್ಲಿ (ಆರ್‍ಎಂಎಸ್)   6ನೇ ತರಗತಿ (ವಸತಿ ರಹಿತ ಆಂಗ್ಲ ಮಾಧ್ಯಮ-ರಾಜ್ಯ ಪಠ್ಯ ಕ್ರಮ) ಪ್ರವೇಶಕ್ಕಾಗಿ ಪ್ರಸ್ತುತ 5ನೇ ತರಗತಿ ಓದುತ್ತಿರುವ ಕೊಪ್ಪಳ ತಾಲ್ಲೂಕಿನ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ನಮೂನೆಯನ್ನು ಜ.29 ರಿಂದ ಫೆ.07 ರವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕೊಪ್ಪಳ ಹಾಗೂ ಆದರ್ಶ ವಿದ್ಯಾಲಯ ಕೊಪ್ಪಳದಲ್ಲಿ ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್  www.ssakarnataka.gov.in ನಲ್ಲಿ ಅಥವಾ ಆದರ್ಶ ವಿದ್ಯಾಲಯದ ಮುಖ್ಯಗುರು ಮಹಾಂತೇಶ ಕೆ. ಮೊ.9739909367 ಕ್ಕೆ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆ.07 ರೊಳಗಾಗಿ ಸಲ್ಲಿಸಬೇಕು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.24 ರಂದು ಜಿಲ್ಲಾ ಮಕ್ಕಳ ಹಬ್ಬ ಕಾರ್ಯಕ್ರಮ

ಕೊಪ್ಪಳ ಜ.22(ಕರ್ನಾಟಕ ವಾರ್ತೆ): ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಕ್ಕಳ ಹಬ್ಬ ಸಮಾರಂಭ ಜ.24 ರಂದು ಬೆಳಿಗ್ಗೆ 11 ಗಂಟೆಗೆ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ್, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ನಾಗಪ್ಪ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ದ್ರಾಕ್ಷಾಯಿಣಿ ಬಸವರಾಜ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಧಾರವಾಡ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಎಸ್.ಪೋಳ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ, ಜಿಲ್ಲಾ ಬಾಲವಿಕಾಸ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಶ್ರೀನಿವಾಸ ಚಿತ್ರಗಾರ, ಅರುಣಾ ನರೇಂದ್ರ ಪಾಟೀಲ್ ಸೇರಿದಂತೆ ಅನೇಕರು ಪಾಲ್ಗೊಳ್ಳುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಡಿ.ಪಿ. ವಸಂತ ಪ್ರೇಮ ಅವರು ತಿಳಿಸಿದ್ದಾರೆ.

Wednesday, 21 January 2015

ವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದವರು ಅಂಬಿಗರ ಚೌಡಯ್ಯ - ಕೆ. ರಾಘವೇಂದ್ರ ಹಿಟ್ನಾಳ್


ಕೊಪ್ಪಳ ಜ.21(ಕರ್ನಾಟಕ ವಾರ್ತೆ): ವಚನಗಳ ಮೂಲಕ ಸಮಾಜದಲ್ಲಿ ಮನೆಮಾಡಿದ್ದ ಕೆಟ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯ ಅವರು.  ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು.  ಕಾಯಕ ನಿಷ್ಠೆಯನ್ನು ಎಲ್ಲ ವರ್ಗದವರು ಸಮನಾಗಿ ಗೌರವಿಸಬೇಕು  ಎಂಬ ತತ್ವವನ್ನು ತಮ್ಮ ವಚನಗಳಲ್ಲಿ ಬಿಂಬಿಸುವ ಮೂಲಕ ವಿಶ್ವ ಸಾಹಿತ್ಯ ಲೋಕಕ್ಕೆ ಹೊಂಬೆಳಕನ್ನು ಮೂಡಿಸಿದರು.  ಇವರ ವಚನಗಳಲ್ಲಿ ನಿಜ ಶರಣರ ಗಂಭೀರತೆಯ ಜೊತೆಗೆ ಸಮಾಜ ಸುಧಾರಣೆಯ ತೀಕ್ಷ್ಣತೆ ತುಂಬಿಕೊಂಡಿದೆ.  ಸಮಾಜದಲ್ಲಿನ ನ್ಯೂನತೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಸಮಾನತೆಗೆ ಶ್ರಮಿಸಿದವರು ಅಂಬಿಗರ ಚೌಡಯ್ಯ ಅವರು. ಹಸಿದವನಿಗೆ ಅನ್ನವನಿಕ್ಕುವ ಮೂಲಕ ಕೈಲಾಸ ಕಾಣಬೇಕು ಎಂಬ ಶರಣರ ತತ್ವದಂತೆ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು.  ಬಡವರು ಸಂತೃಪ್ತ ಜೀವನ ನಡೆಸುವಂತೆ ಮಾಡಿದೆ. ಗಂಗಾಮತ ಸಮುದಾಯ ಈಗಲೂ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು.  ಕೊಪ್ಪಳದಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.

     ವಿಶೇಷ ಉಪನ್ಯಾಸ ನೀಡಿದ  ಬಾಗಲಕೋಟೆ ಕಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶಾಸ್ತ್ರಿಯವರು, ಅಂಬಿಗರ ಚೌಡಯ್ಯ ಅವರು ಮಾನವ ಕಲ್ಯಾಣದ ಹರಿಕಾರರಾಗಿದ್ದರು.  12 ನೇ ಶತಮಾನ ಎಂಬುದು, ಇಡೀ ವಿಶ್ವವೇ ಕಂಡ ಅದ್ಭುತ ಶತಮಾನ.  ಮೌಢ್ಯತೆಯಿಂದ ಕಂಗಾಲಾಗಿದ್ದ ಸಮಾಜಕ್ಕೆ ಹೊಸ ಸಂಚಲನ ಮೂಡಿಸಿದ ಬಹುತೇಕ ವಚನಕಾರರು ಇದೇ ಶತಮಾನದಲ್ಲಿ ಬಂದವರು. ಮುಖಸ್ತುತಿ ಹಾಗೂ ಹೊಗಳುವಿಕೆಯನ್ನು ಗದಿಗಿಟ್ಟು ನಿಷ್ಠುರವಾಗಿ ವಾದಿಸಿದವರು ನಿಜಶರಣ ಅಂಬಿಗರ ಚೌಡಯ್ಯನವರು. ಸಮಾಜದಲ್ಲಿ ಮನೆಮಾಡಿದ್ದ ಮೂಢನಂಬಿಕೆಗಳು, ಕಂದಾಚಾರಗಳನ್ನು ನಿರ್ಮೂಲನೆ ಮಾಡಲು ಅನೇಕ ಮಹನೀಯರು ಜನ್ಮತಳೆದು ಸಮಾಜ ಸುಧಾರಿಸಿದ್ದಾರೆ.  ಗಂಗಾ ಮತ ಜನಾಂಗವು ದ್ವಾಪರ ಯುಗದಲ್ಲಿಯೇ ಅಸ್ತಿತ್ವದಲ್ಲಿತ್ತು.  ದ್ವಾಪರ ಯುಗದಿಂದ ಕಲಿಯುಗಕ್ಕೆ ಈ ಸಮುದಾಯದ ಕೈಂಕರ್ಯ ಮುಂದುವರೆದಿದೆ ಅಷ್ಟೆ.  ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿದಾಗ ಸಮಾಜ ಸುಧಾರಣೆ, ಶಾಂತಿ ಸ್ಥಾಪನೆಗೆ ಬಸವಣ್ಣ, ಅಂಬಿಗರ ಚೌಡಯ್ಯನಂತಹ ಅನೇಕ ಮಹನೀಯರು ಅವತರಿಸಿದ್ದಾರೆ.  ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು ಎಂದರು.

     ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು ಸಮಾರಂಭ ಕುರಿತು ಮಾತನಾಡಿದರು.  ಜಿಲಾಧಿಕಾರಿ ಆರ್.ಆರ್. ಜನ್ನು, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ, ಗಣ್ಯರಾದ ಯಮನಪ್ಪ ಕಬ್ಬೇರ, ಬಾಳಪ್ಪ ಬಾರಕೇರ, ಕಪ್ಪತಪ್ಪ ಸೇರಿದಂತೆ ನಗರಸಭೆಯ ವಿವಿಧ ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸ್ವಾಗತಿಸಿದರು, ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  ಎಸ್‍ಎಸ್‍ಎಲ್‍ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವಿಧ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

     ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.

ಕೊಪ್ಪಳದಲ್ಲಿ ಏ. 01 ರಿಂದ ಆದಾಯ ತೆರಿಗೆ ಕಚೇರಿ ಪ್ರಾರಂಭ – ಆಯುಕ್ತ ಗಣೇಶನ್ಕೊಪ್ಪಳ ಜ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಬರುವ ಏ. 01 ರಿಂದ ಆದಾಯ ತೆರಿಗೆ ಇಲಾಖೆ ಕಚೇರಿ ಪ್ರಾರಂಭವಾಗಲಿದ್ದು,  ಈ ಕುರಿತ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆ ಗುಲಬರ್ಗಾ ವಿಭಾಗದ ಆಯುಕ್ತ ಗಣೇಶನ್ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ, ಬಳ್ಳಾರಿಯ ಟಿ ಡಿ ಎಸ್ ವಿಭಾಗದ ವತಿಯಿಂದ ಟಿಡಿಎಸ್ ಆದಾಯ ತೆರಿಗೆ ಕುರಿತಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆ ಹೊಸದಾಗಿ ರಚನೆಯಾದ ಜಿಲ್ಲೆಯಾಗಿದ್ದು, ಇಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿ ಇಲ್ಲ.  ಸದ್ಯ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಿಂದಲೇ ಕೊಪ್ಪಳ ಜಿಲ್ಲೆಯ ನಿರ್ವಹಣೆ ಮಾಡಲಾಗುತ್ತಿದೆ.  ಇದೀಗ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯ ಇಲಾಖೆಯ ಕಚೇರಿ ಪ್ರಾರಂಭಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಬರುವ ಏ. 01 ರಿಂದ ಕೊಪ್ಪಳದಲ್ಲಿ ಕಚೇರಿ ಕಾರ್ಯಾರಂಭವಾಗುವ ಸಾಧ್ಯತೆ ಇದೆ.  ಸುಮಾರು 14 ಲಕ್ಷ ಜನಸಂಖ್ಯೆ ಹೊಂದಿರುವ ಕೊಪ್ಪಳ ಜಿಲ್ಲೆಯಿಂದ ವರ್ಷಕ್ಕೆ ಸುಮಾರು 7 ರಿಂದ 10 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದು, ಬಳ್ಳಾರಿ ವಲಯದ ತೆರಿಗೆ ಸಂಗ್ರಹಣೆಯಲ್ಲಿ ಕೊಪ್ಪಳ ಬಹುದೊಡ್ಡ ಕೊಡುಗೆ ನೀಡುತ್ತಿದೆ.  ಕೊಪ್ಪಳ ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ, ಆದಾಯ ತೆರಿಗೆ ಸಂಗ್ರಹದಲ್ಲಿ ವಿಭಾಗ ಮಟ್ಟದಲ್ಲಿ ಮುಂಚೂಣಿಯಲ್ಲಿದೆ.  ಆದಾಯ ತೆರಿಗೆ ಕಡಿತಗೊಳಿಸಿ, ಟಿಡಿಎಸ್ ಸಲ್ಲಿಸುವುದು ಹಾಗೂ ಇಲಾಖೆಗೆ ರಿಟನ್ರ್ಸ್ ಸಲ್ಲಿಸುವುದು ಮುಂತಾದ ಪ್ರಕ್ರಿಯೆಗಳನ್ನು ಇದೀಗ ಬಹಳಷ್ಟು ಸರಳಗಳಿಸಲಾಗಿದ್ದರೂ, ಇನ್ನೂ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಗೊಂದಲಗಳಿರುವುದು ಕಂಡುಬರುತ್ತಿದೆ.  ದೇಶದ ತೆರಿಗೆ ಸಂಗ್ರಹಣೆಯಲ್ಲಿ ಶೇ. 50 ರಷ್ಟು ತೆರಿಗೆ ಸಂಗ್ರಹವು ಟಿಡಿಎಸ್ ಮೂಲಕವೇ ಸಲ್ಲಿಕೆಯಾಗುತ್ತಿದೆ.  ಈ ದಿಸೆಯಲ್ಲಿ ಟಿಡಿಎಸ್ ಸಲ್ಲಿಕೆ ಪ್ರಕ್ರಿಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿ ನೀಡುವ ಕಾರ್ಯಾಗಾರಗಳನ್ನು ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.  ತೆರಿಗೆ ಪಾವತಿದಾರರು ನಿಗದಿತ ಸಮಯದಲ್ಲಿ ತೆರಿಗೆ ಪಾವತಿಸುವುದರಿಂದ ಮಾತ್ರ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ ಗಣೇಶನ್ ಅಭಿಪ್ರಾಯಪಟ್ಟರು.
     ಆದಾಯ ತೆರಿಗೆ ಇಲಾಖೆ ಬಳ್ಳಾರಿ ವಲಯದ ಜಂಟಿ ಆಯುಕ್ತ ವಿ.ಜಿ. ಇರಕಲ್ ಅವರು ಮಾತನಾಡಿ, ಬಳ್ಳಾರಿ ವಲಯದ ತೆರಿಗೆ ಸಂಗ್ರಹಣೆ ಈ ವರ್ಷ ಒಂದು ಸಾವಿರ ಕೋಟಿಯ ಗಡಿ ದಾಟಿದೆ.  ಸಂಗ್ರಹಣೆ ಪ್ರಕ್ರಿಯೆಯು ದೇಶದ ಆರ್ಥಿಕ ಭದ್ರತೆಗೆ ಪೂರಕವಾಗಿ ಸಲ್ಲಿಸುವಂತಹ ಸೇವೆಯಾಗಿದೆ.  ಸರ್ಕಾರಿ ವ್ಯವಸ್ಥೆಯ ವ್ಯವಹಾರಗಳಲ್ಲಿ ತೆರಿಗೆ ಕಡಿತಗೊಳಿಸಿ, ತೆರಿಗೆ ಇಲಾಖೆ ಖಾತೆಗೆ ಸಲ್ಲಿಸುವ ಪ್ರಕ್ರಿಯೆ ನಿಯಮಬದ್ಧವಾಗಿ ನಡೆಯಬೇಕಿದೆ.  ಕೆಲವೊಮ್ಮೆ ತಪ್ಪುಗಳಾಗುವುದು ಸಹಜವಾದರೂ, ಉದ್ದೇಶಪೂರ್ವಕವಾಗಿ ಅಥವಾ ಪದೇ ಪದೇ ತಪ್ಪುಗಳಾದಾಗ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ.  ತೆರಿಗೆ ಕಡಿತ ವಿವರವನ್ನು ಟಿಡಿಎಸ್ ಸಲ್ಲಿಕೆ ವ್ಯವಸ್ಥೆಯಲ್ಲಿ ಈಗ ಬಹಳಷ್ಟು ಸುಧಾರಣೆಗಳಾಗಿದ್ದು, ಎಲ್ಲವನ್ನು ಸರಳಗೊಳಿಸಿ, ಗಣಕೀಕೃತಗೊಳಿಸಲಾಗಿದೆ.  ಆನ್‍ಲೈನ್‍ನಲ್ಲಿಯೇ ಎಲ್ಲವನ್ನೂ ನಿರ್ವಹಿಸುವಂತಹ ವ್ಯವಸ್ಥೆಯನ್ನು ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿದ್ದು, ಎಲ್ಲ ಇಲಾಖೆ ಅಧಿಕಾರಿಗಳು, ತಮ್ಮ ಕಚೇರಿಗಳಲ್ಲಿ ಟಿಡಿಎಸ್ ಸಲ್ಲಿಕೆ, ರಿಟನ್ರ್ಸ್ ಸಲ್ಲಿಕೆ ಕುರಿತ ಯಾವುದೇ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ವೆಬ್‍ಸೈಟ್ ಮೂಲಕ ಆಗಾಗ್ಗೆ ಹೊರಡಿಸುವ ಸೂಚನೆಗಳನ್ನು ಪಾಲಿಸಬೇಕು ಎಂದರು.
     ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಸೌರಭ್ ನಾಯಕ್, ಬಾಲಕೃಷ್ಣ, ಕೆ.ಆರ್. ನಾರಾಯಣನ್ ಸೇರಿದಂತೆ ಟಿಡಿಎಸ್ ವಿಭಾಗದ ಅಧಿಕಾರಿ ಪಾಂಡುರಂಗ ಅವರು ಉಪಸ್ಥಿತರಿದ್ದರು.  ತರಬೇತಿ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು, ಬ್ಯಾಂಕ್, ಅಂಚೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Tuesday, 20 January 2015

ಜ.22 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಕೊಪ್ಪಳ ಜ.20(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕಂಪಸಾಗರ ಮತ್ತು ಕೆರೆಹಳ್ಳಿ ಗ್ರಾಮದ 110/33/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಜ.22 ರಂದು ಬೆ.10 ರಿಂದ ಸಾ.6.30 ರವರೆಗೆ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಜೆಸ್ಕಾಂ ನೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
     ಜೆಸ್ಕಾಂನ ಸಿ ಅಂಡ್ ಎಂ.ವಿಭಾಗದ ವತಿಯಿಂದ ಕಂಪಸಾಗರ ಮತ್ತು ಕೆರೆಹಳ್ಳಿ ಗ್ರಾಮದ 110/33/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಜ.22 ರಂದು ಹೊಸ 33 ಕೆವಿ ವಿದ್ಯುತ್ ಮಾರ್ಗದ ನಿರ್ವಹಣಾ/ಚಾಲನಾ ಕೆಲಸ ಕೈಗೊಂಡಿರುವುದರಿಂದ ಈ ಕಾರ್ಯವ್ಯಾಪ್ತಿಯಲ್ಲಿ ಬರುವ ಕಂಪಸಾಗರ, ಹಿಟ್ನಾಳ, ಅಗಳಕೇರಾ, ಶಿವಪುರ, ಹೊಸಬಂಡಿಹರ್ಲಾಪುರ, ಹಳೆಬಂಡಿಹರ್ಲಾಪುರ, ಮಹ್ಮದನಗರ, ನಾರಾಯಣಪೇಟೆ, ಶಹಾಪುರ, ಬೇವಿನಹಳ್ಳಿ, ಕೆರೆಹಳ್ಳಿ, ಬೂದಗುಂಪಾ, ಇಂದರಗಿ, ಜಬ್ಬಲಗುಡ್ಡ, ಇಂದಿರಾನಗರ, ಇಂದಿರಾನಗರ ತಾಂಡಾ, ನಾಗೇಶನಹಳ್ಳಿ, ಚಂದ್ರಗಿರಿ, ಸುಲ್ತಾನಪುರ, ಹಳೆಕುಮುಟಾ ಮುಂತಾದ ಗ್ರಾಮಗಳಲ್ಲಿ ಬೆ.10 ರಿಂದ ಸಾ.6.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಕೊಪ್ಪಳ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಜ.28 ರಿಂದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ : ಭಾಗವಹಿಸಲು ಸೂಚನೆ

ಕೊಪ್ಪಳ ಜ.20(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ಮಂಡ್ಯ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜ.28 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಅರ್ಹ ಸರ್ಕಾರಿ ನೌಕರರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಥ್ಲೇಟಿಕ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದವರು, ಮಾತ್ರ ಭಾಗವಹಿಸಬಹುದು. ಕ್ರೀಡಾ ಪಟುಗಳು ಜ.27 ರ ಸಂಜೆ 6.00 ಗಂಟೆಯೊಳಗೆ ಕ್ರೀಡಾ ಕೂಟ ಸಂಘಟಕರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. 45 ವರ್ಷ ಮೇಲ್ಪಟ್ಟ ಸ್ಪರ್ದಾಳುಗಳು ಕಡ್ಡಾಯವಾಗಿ ತಮ್ಮ ಜನ್ಮದಿನಾಂಕ ಪ್ರಮಾಣ ಪತ್ರ ಮತ್ತು ವೈದ್ಯಕೀಯ ದೈಹಿಕ ಸಾಮಥ್ರ್ಯದ ಧೃಡೀಕರಣ ಪತ್ರವನ್ನು ಸ್ಪರ್ಧೆ ನಡೆಯುವ ಸಂದರ್ಭದಲ್ಲಿ ಸಂಘಟಕರಿಗೆ ನೀಡಬೇಕು. ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ನೊಂದಣಿ ಪುಸ್ತಕದಲ್ಲಿ ನೊಂದಣಿ ಮಾಡಿ ಊಟದ ಕೂಪನಗಳನ್ನು ಪಡೆಯಬೇಕು.
ಹಾಕಿ ಮತ್ತು ಕ್ರಿಕೆಟ್ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಜ.27 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇರವಾಗಿ ಭಾಗವಹಿಸಿ ಹೆಸರು ನೋಂದಾಯಿಸಬಹುದು. ಕ್ರಿಕೆಟ್‍ನಲ್ಲಿ ಲೆದರಬಾಲ್ ಉಪಯೋಗಿಸುವುದರಿಂದ ಹೆಲ್ಮೆಟ್, ಬ್ಯಾಟಿಂಗ್ ಲೆಗ್‍ಗಾರ್ಡ, ಹ್ಯಾಂಡಗ್ಲೋಸ್, ಆಡ್ಮಿಮಿನಲ್ ಗಾರ್ಡ, ಕೀಪಿಂಗ್ ಗ್ಲೋಸ್ ಮತ್ತು ಪ್ಯಾಡ್, ಲೆದರಬಾಲ್‍ಗಳನ್ನು ಸ್ಪರ್ದಾಳುಗಳೇ ತರಬೇಕು. ಯಾವುದೇ ಕಾರಣಕ್ಕೂ ಸಂಘಟಿಕರಿಂದ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆ ದೂರವಾಣಿ ಸಂಖ್ಯೆ :08539-201400, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ್ ಆರ್ ಜುಮ್ಮನ್ನವರ ಮೊ.ಸಂ :9880670925, 9916332365 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ಅವರು ತಿಳಿಸಿದ್ದಾರೆ.

ಕೆರೆಹಳ್ಳಿ 33 ಕೆವಿ ವಿದ್ಯುತ್ ಮಾರ್ಗ ಚಾಲನೆ : ಎಚ್ಚರಿಕೆ

ಕೊಪ್ಪಳ ಜ.20(ಕರ್ನಾಟಕ ವಾರ್ತೆ):  ಕೊಪ್ಪಳ ತಾಲೂಕಿನ ಕೆರೆಹಳ್ಳಿ ವಿದ್ಯುತ್ ಉಪಕೇಂದ್ರದಿಂದ ಮೆ: ಡೂಡ್ಲ ಡೈರಿ, ಇಂದ್ರಾನಗರದವರೆಗೂ ಹೊಸದಾಗಿ ನಿರ್ಮಿಸಲಾಗಿರುವ 33 ಕೆ.ವಿ. ವಿದ್ಯುತ್ ಮಾರ್ಗವನ್ನು ಜ.22 ರ ಮಧ್ಯಾಹ್ನ ಯಾವುದೇ ಸಮಯದಲ್ಲಿ ಚಾಲನೆ ಮಾಡಲಾಗುತ್ತಿದ್ದು, ಈ ವ್ಯಾಪ್ತಿಯ ಸಾರ್ವಜನಿಕರು ವಿದ್ಯುತ್ ಮಾರ್ಗವನ್ನು ಮುಟ್ಟುವುದಾಗಲಿ, ಹತ್ತುವುದಾಗಲಿ, ಜನ-ಜಾನುವಾರುಗಳನ್ನು ಕಟ್ಟುವುದಾಗಲೀ ಮಾಡಬಾರದು ಎಂದು ಕೊಪ್ಪಳ ಜೆಸ್ಕಾಂನ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಬಿಗರ ಚೌಡಯ್ಯ ಜಯಂತಿ : ಸೂಚನೆ

ಕೊಪ್ಪಳ ಜ.20(ಕರ್ನಾಟಕ ವಾರ್ತೆ): ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಜ.21 ರಂದು ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಸಿರಸಪ್ಪಯ್ಯನ ಮಠದಿಂದ ಮೆರವಣಿಗೆ ಹಾಗೂ ಮ.12.30 ಕ್ಕೆ ಸಾಹಿತ್ಯ ಭವನದಲ್ಲಿ ಸಮಾರಂಭ ಜರುಗಲಿದ್ದು, ಎಲ್ಲಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ: ಸುರೇಶ ಇಟ್ನಾಳ ಅವರು ತಿಳಿಸಿದ್ದಾರೆ.

ವಾಹನ ಚಾಲನಾ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಜ. 20 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಹಳಿಯಾಳ ಇವರ ವತಿಯಿಂದ ಸ್ವಉದ್ಯೋಗ ಆಧಾರಿತ ಲಘು ವಾಹನ ಚಾಲನಾ ತರಬೇತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಜ. 27 ರಿಂದ ತರಬೇತಿ ಪ್ರಾರಂಭವಾಗಲಿದ್ದು, ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.  ಆಸಕ್ತ 18 ರಿಂದ 45 ವರ್ಷದೊಳಗಿನವರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.  ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ, ಪಡೆಯಲಿಚ್ಛಿಸುವ ತರಬೇತಿ, ವಿದ್ಯಾರ್ಹತೆ, ತರಬೇತಿಯ ವಿಷಯದಲ್ಲಿ ಹೊಂದಿರುವ ಪ್ರಾಥಮಿಕ ಜ್ಞಾನದ ವಿವರಗಳನ್ನೊಳಗೊಂಡ ಮಾಹಿತಿಯನ್ನು ಫೋನ್ ಮೂಲಕ ನೀಡಿ, ತರಬೇತಿಗೆ ಆಯ್ಕೆಯಾಗಬಹುದು.  ಹೆಚ್ಚಿನ ಮಾಹಿತಿಗೆ ಸಂಸ್ಥೆಯ ದೂರವಾಣಿ ಸಂ: 08284-220807 ಅಥವಾ ಮೊ- 9483485489 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಜ್ ಯಾತ್ರೆ: ಅರ್ಜಿ ಆಹ್ವಾನ

ಕೊಪ್ಪಳ ಜ.20(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಹಜ್ ಯಾತ್ರೆ ಮಾಡಬಯಸುವವರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ನಮೂನೆ ಕೊಪ್ಪಳದ ವಕ್ಫ್ ಸಲಹಾ ಸಮಿತಿ ಕಚೇರಿಯಲ್ಲಿ ಲಭ್ಯವಿರುತ್ತದೆ.
      ಕರ್ನಾಟಕ ರಾಜ್ಯ ಹಜ್ ಕಮಿಟಿ ಬೆಂಗಳೂರು ಇವರ ಸೂಚನೆ ಮೇರೆಗೆ ಹಜ್ ಯಾತ್ರೆಗೆ ತೆರಳಲು ಬಯಸುವವರು  ಅರ್ಜಿ ನಮೂನೆಯನ್ನು  www.hajcommittee.com ವೆಬ್‍ಸೈಟ್  ಮುಖಾಂತರ ಅಥವಾ ನೇರವಾಗಿ ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ, ಕೊಪ್ಪಳ ಇವರಿಂದ ಉಚಿತವಾಗಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಫೆ.20 ರವರೆಗೆ ಅವಕಾಶವಿದ್ದು, ಮುಸ್ಲಿಂ ಸಮಾಜದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.04 ರಿಂದ ಉಡುಪಿಯಲ್ಲಿ ಸೇನಾ ನೇಮಕಾತಿ ರ್ಯಾಲಿ

ಕೊಪ್ಪಳ ಜ.20(ಕರ್ನಾಟಕ ವಾರ್ತೆ): ಬೆಂಗಳೂರಿನ ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯದ ಆಶ್ರಯದಲ್ಲಿ ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ಭಾರತೀಯ ಸೈನ್ಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪುರುಷ ಅಭ್ಯರ್ಥಿಗಳಿಗೆ ಸೇನಾ ಭರ್ತಿ ರ್ಯಾಲಿಯನ್ನು ಫೆಬ್ರುವರಿ 4 ರಿಂದ 8 ರವರೆಗೆ ಉಡುಪಿಯ ಅಜ್ಜರ್‍ಕಾಡ್‍ದಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
      ಫೆ.04 ರಂದು ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ. ಹುದ್ದೆಗಳಿಗೆ ರ್ಯಾಲಿ ನಡೆಯಲಿದ್ದು, ಅಂದು ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆ.05 ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆ.06 ರಂದು  ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆ.07 ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಫೆ.08 ರಂದು ಸಿಪಾಯಿ ಜಿ.ಡಿ., ಸಿಪಾಯಿ ಟೆಕ್ನಿಕಲ್, ಸಿಪಾಯಿ ಎನ್‍ಎ/ಎನ್‍ಎ ವಿಇಟಿ ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಅಂದು ಗದಗ, ಹಾವೇರಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹಾಗೂ ಅಂದು ಮಾಜಿ ಸೈನಿಕರಿಗೆ (ಡಿ.ಎಸ್.ಸಿ.) ಭೂಸೇನೆ, ವಾಯುಸೇನೆ, ಜಲಸೇನೆ, ಸಿಪಾಯಿ ಜಿ.ಡಿ. ಹುದ್ದೆಗಾಗಿ ನೇಮಕಾತಿ ರ್ಯಾಲಿ ನಡೆಯಲಿದ್ದು ಮಾಜಿ ಸೈನಿಕರಿಗಾಗಿ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಹಾಜರಾಗಬಹುದು.
ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ. ಹುದ್ದೆಗೆ ಪಿಯುಸಿಯಲ್ಲಿ 50% ಅಂಕ ಪಡೆದಿರಬೇಕು. ಸಿಪಾಯಿ ಜಿಡಿ ಹುದ್ದೆಗೆ 10ನೇ ತರಗತಿಯಲ್ಲಿ 45% ಅಂಕ ಪಡೆದಿರಬೇಕು. ಸಿಪಾಯಿ ಟೆಕ್ನಿಕಲ್ ಹುದ್ದೆಗೆ ಪಿಯುಸಿಯಲ್ಲಿ 45% ಅಂಕ ಪಡೆದಿರಬೇಕು. ಸಿಪಾಯಿ ಎನ್‍ಎ/ಎನ್‍ಎವಿಇಟಿ ಹುದ್ದೆಗೆ ಪಿಯುಸಿಯಲ್ಲಿ 45% ಅಂಕ ಪಡೆದಿರಬೇಕು.
ಸಿಪಾಯಿ, ಕ್ಲಾರ್ಕ್/ಎಸ್.ಕೆ.ಟಿ./ಸಿಪಾಯಿ ಟೆಕ್ನಿಕಲ್/ಸಿಪಾಯಿ ಎನ್‍ಎ/ಎನ್‍ಎ ವಿಇಟಿ/ ಹುದ್ದೆಗಳಿಗಾಗಿ 17 ರಿಂದ 23 ವರ್ಷದೊಳಗೆ ಇರಬೇಕು. (4-2-1992 ರಿಂದ 4-8-1997 ರೊಳಗೆ ಜನಿಸಿರಬೇಕು). ಸಿಪಾಯಿ ಜಿ.ಡಿ. ಹುದ್ದೆಗೆ 17 ರಿಂದ 21 ವರ್ಷ (4-2-1994 ರಿಂದ 4-8-1997 ರೊಳಗೆ ಜನಿಸಿರಬೇಕು). ಮಾಜಿ ಸೈನಿಕರಿಗೆ (ಡಿ.ಎಸ್.ಸಿ.) ಭೂಸೇನೆ, ವಾಯುಸೇನೆ, ಜಲಸೇನೆ, ಸಿಪಾಯಿ ಜಿ.ಡಿ. ಹುದ್ದೆಗೆ 48 ವರುಷ ಆಯ್ಕೆ ದಿನಾಂಕಕ್ಕೆ (1967 ಫೆ.04 ರ  ಮೊದಲು ಹುಟ್ಟಿರಬಾರದು).
ಸಿಪಾಯಿ ಜಿ.ಡಿ. ಹುದ್ದೆಗೆ ದೈಹಿಕ ಪರೀಕ್ಷೆಗೆ ಸಂಬಂಧಿಸಿದಂತೆ 1.6 ಕಿ.ಮೀ. ದೂರವನ್ನು 6 ನಿಮಿಷದಲ್ಲಿ ಓಡಬೇಕು. ಪುಲ್ ಅಪ್ಸ : ಕನಿಷ್ಟ 6, ಗರಿಷ್ಟ 10 ತೆಗೆಯಬೇಕು. ಬ್ಯಾಲನ್ಸ: ಜಿಗ್ ಜಾಗ್‍ನಲ್ಲಿ ಪಾಸಾಗಬೇಕು. 9 ಅಡಿ ಜಿಗಿಯಬೇಕು. ಸಿಪಾಯಿ ಜಿ.ಡಿ., ಸಿಪಾಯಿ ಟ್ರೇಡ್ಸ್‍ಮೆನ್ ಹುದ್ದೆಗೆ 166 ಸೆಂ.ಮೀ. ಎತ್ತರ, ಸಿಪಾಯಿ ಟೆಕ್ನಿಕಲ್/ಎನ್.ಎ ಹುದ್ದೆಗೆ 165 ಸೆಂ.ಮೀ. ಎತ್ತರ, ಸಿಪಾಯಿ ಗುಮಾಸ್ತ/ಟೆಕ್ನಿಕಲ್ ಹುದ್ದೆಗೆ 162 ಸೆಂ.ಮೀ. ಎತ್ತರ, ಮೂರು ಹುದ್ದೆಗಳಿಗೆ 77/82 ಸೆಂ.ಮೀ. ಹೊಂದಿರಬೇಕು. ಸಿಪಾಯಿ ಟ್ರೇಡ್ಸ್‍ಮೆನ್ ಹುದ್ದೆಗೆ 76/81 ಸೆಂ.ಮೀ. ಹೊಂದಿರಬೇಕು. ಎಲ್ಲ ಹುದ್ದೆಗಳಿಗೆ 50 ಕೆ.ಜಿ. ತೂಕ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ತಮ್ಮ 10ನೇ ತರಗತಿ, ಪಿಯುಸಿ, ಐಟಿಐ, ಉನ್ನತ ಶಿಕ್ಷಣದ ಮೂಲಪ್ರತಿ ಹಾಗೂ 2 ದೃಢೀಕೃತ ನಕಲು ಪ್ರತಿಗಳನ್ನು ಹೊಂದಿರಬೇಕು. ಜೊತೆಗೆ 15 ಪಾಸಪೊರ್ಟ ಅಳತೆಯ ಕಲರ್ ಭಾವಚಿತ್ರಗಳನ್ನು ಹೊಂದಿರಬೇಕು. ಈ ರ್ಯಾಲಿಯು ಬೆಳಿಗ್ಗೆ ಬೇಗನೆ ಪ್ರಾರಂಭವಾಗುವುದರಿಂದ ಹಿಂದಿನ ದಿನ ಅಂದರೆ ಫೆ.04 ರಂದು ಅಭ್ಯರ್ಥಿಗಳು ಮೈದಾನದ ಹತ್ತಿರ ಇರಬೇಕು. ಅಲ್ಲದೇ ಇದಕ್ಕೆ ಯಾವುದೇ ಪ್ರಯಾಣ ವೆಚ್ಚ ಇನ್ನಿತರ ವೆಚ್ಚ ನೀಡಲಾಗುವುದಿಲ್ಲ. ಈ ಹುದ್ದೆಗೆ ಯಾವುದೇ ಅರ್ಜಿ ನಮೂನೆ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳು ವಾಸವಾಗಿರುವ ಸ್ಥಳದ ರಹವಾಸಿ ಪ್ರಮಾಣ ಪತ್ರ ಹಾಗೂ ನಡತೆಯ ಪ್ರಮಾಣ ಪತ್ರ ಕಡ್ಡಾಯವಾಗಿ ಆಂಗ್ಲಭಾಷೆಯಲ್ಲಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಸೇನಾ ಭರ್ತಿ ಕಾರ್ಯಾಲಯ ಮಂಗಳೂರು ದೂರವಾಣಿ ಸಂಖ್ಯೆ: 0824-2458376 ಹಾಗೂ ನೇಮಕಾತಿ ವಲಯ ಬೆಂಗಳೂರು ದೂರವಾಣಿ ಸಂಖ್ಯೆ: 080-25596517, ಬೆಳಗಾವಿ ದೂರವಾಣಿ ಸಂಖ್ಯೆ: 0831-2465550 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Monday, 19 January 2015

ಹುಬ್ಬಳ್ಳಿ-ವಿಜಯವಾಡ ರೈಲು ಪ್ರತಿನಿತ್ಯ ಸಂಚಾರ

ಕೊಪ್ಪಳ ಜ.19(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಮಾರ್ಗವಾಗಿ ವಾರಕ್ಕೆ ಮೂರು ದಿನ ಓಡುತ್ತಿದ್ದ ಹುಬ್ಬಳ್ಳಿ-ವಿಜಯವಾಡ ಎಕ್ಸಪ್ರೆಸ್ ರೈಲು ಜ. 26 ರಿಂದ ಪ್ರತಿನಿತ್ಯ ಸಂಚರಿಸಲಿದೆ.
     ಕಳೆದ ಬಜೆಟ್‍ನಲ್ಲಿ ಘೋಷಿಸಿದಂತೆ ಇದೀಗ ಹುಬ್ಬಳ್ಳಿ-ವಿಜಯವಾಡ ಮಾರ್ಗದ ರೈಲು ಇದೇ ಜ.26 ರಿಂದ ಪ್ರತಿನಿತ್ಯವು ಬದಲಾದ ಸಮಯದಲ್ಲಿ ಕೊಪ್ಪಳ ಮಾರ್ಗವಾಗಿ ಸಂಚರಿಸಲಿದೆ. ರೈಲ್ವೆ ಇಲಾಖೆಯು ಈ ಕುರಿತಂತೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು  ವಿಜಯವಾಡದಿಂದ ರಾತ್ರಿ 7-45 ಕ್ಕೆ ಹೊರಡುವ ರೈಲು ಗಾಡಿ ಸಂಖ್ಯೆ: 17225 ರೈಲು ಬೆಳಿಗ್ಗೆ 5-40 ಕ್ಕೆ ಗುಂತಕಲ್, 6-53 ಕ್ಕೆ ಬಳ್ಳಾರಿ, 7-30 ಕ್ಕೆ ತೋರಣಗಲ್, 8-15 ಕ್ಕೆ ಹೊಸಪೇಟೆ, 8-35 ಕ್ಕೆ ಮುನಿರಾಬಾದ್, 8-55 ಕ್ಕೆ ಕೊಪ್ಪಳ, 10-08 ಕ್ಕೆ ಗದಗ, 10-25 ಕ್ಕೆ ಅಣ್ಣಿಗೇರಿ ಮೂಲಕ ಬೆಳಿಗ್ಗೆ 11-20 ಕ್ಕೆ ಹುಬ್ಬಳ್ಳಿ ತಲುಪಲಿದೆ.  ಪ್ರತಿನಿತ್ಯ ಮಧ್ಯಾಹ್ನ 1-30 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17226  ರೈಲು, ಮಧ್ಯಾಹ್ನ 2 ಗಂಟೆಗೆ ಅಣ್ಣಿಗೇರಿ, 2-25 ಕ್ಕೆ ಗದಗ, 3-30 ಕ್ಕೆ ಕೊಪ್ಪಳ, 3-53 ಕ್ಕೆ ಮುನಿರಾಬಾದ್, 04-05 ಕ್ಕೆ ಹೊಸಪೇಟೆ, 04-45 ಕ್ಕೆ ತೋರಟಗಲ್, 05-25 ಕ್ಕೆ ಬಳ್ಳಾರಿ, 06-35 ಕ್ಕೆ ಗುಂತಕಲ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 05-15 ಕ್ಕೆ ವಿಜಯವಾಡ ತಲುಪಲಿದೆ.   ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿರುವ ಸಂಸದ ಸಂಗಣ್ಣ ಕರಡಿ ಅವರು, ರೈಲ್ವೆ ಇಲಾಖೆಯ ಸಹಕಾರಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಹೊಸ ಗ್ರಾಮ ಪಂಚಾಯತಿಗಳ ರಚನೆಗೆ ಕರಡು ಅಧಿಸೂಚನೆ ಪ್ರಕಟ : ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ ಜ. 19 (ಕರ್ನಾಟಕ ವಾರ್ತೆ): ಸರ್ಕಾರದ ಸೂಚನೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ಹೊಸ ಗ್ರಾಮ ಪಂಚಾಯತಿಗಳ ರಚನೆಗಾಗಿ ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣೆ, ವಿಭಜನೆ ಕುರಿತಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಹೊಸದಾಗಿ 04 ಗ್ರಾ.ಪಂ. ಗಳನ್ನು ರಚಿಸಲಾಗುತ್ತಿದ್ದು, ಅದೇ ರೀತಿ ಗಂಗಾವತಿ- 06, ಯಲಬುರ್ಗಾ- 04 ಮತ್ತು ಕುಷ್ಟಗಿ ತಾಲೂಕಿನಲ್ಲಿ 09 ಗ್ರಾ.ಪಂ. ಸೇರಿದಂತೆ ಒಟ್ಟು 23 ನೂತನ ಗ್ರಾ.ಪಂ ಗಳ ರಚನೆಯಾಗಲಿದೆ. ತಾಲೂಕುವಾರು ಬಾಧಿತ ಗ್ರಾಮ ಪಂಚಾಯತಿ ಮತ್ತು ಹೊಸದಾಗಿ ರಚಿಸಲಾಗುವ ಗ್ರಾಮ ಪಂಚಾಯತಿಗಳ ಹೆಸರು ಹಾಗೂ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರ ಇಂತಿದೆ.
ಕೊಪ್ಪಳ ತಾಲೂಕು : ಗಿಣಿಗೇರಾ (ಬಾಧಿತ)- ಗಿಣಿಗೇರಾ, ಕನಕಾಪುರ.  ಹಾಲವರ್ತಿ (ಹೊಸದು)- ಹಾಲವರ್ತಿ, ಬಸಾಪುರ, ಕಿಡದಾಳ, ಕುಟಗನಳ್ಳಿ.  ಕುಣಿಕೇರಿ (ಬಾಧಿತ)- ಕುಣಿಕೇರಿ, ಲಾಚನಕೇರಿ.  ಮಾದಿನೂರು (ಬಾಧಿತ)- ಮಾದಿನೂರು, ದೇವಲಾಪುರ, ಮುದ್ಲಾಪುರ.  ಕಲಕೇರಾ (ಹೊಸದು)- ಕಲಕೇರಾ, ಬುಡಶೆಟ್ನಾಳ, ಹಟ್ಟಿ, ತಾಳಕನಕಾಪುರ.  ಲೇಬಗೇರಾ (ಬಾಧಿತ)- ಲೇಬಗೇರಾ, ಭೀಮನೂರು, ಹನುಮನಹಳ್ಳಿ, ಕಾಮನೂರು, ಸಂಗಾಪುರ.  ಹಿಟ್ನಾಳ (ಬಾಧಿತ)- ಹಿಟ್ನಾಳ, ಕಂಪಸಾಗರ.  ಬೇವಿನಹಳ್ಳಿ (ಹೊಸದು)- ಬೇವಿನಹಳ್ಳಿ, ಶಹಪುರ, ಲಿಂಗದಹಳ್ಳಿ, ರುದ್ರಾಪುರ.  ಅಗಳಕೇರಾ (ಬಾಧಿತ)- ಅಗಳಕೇರಾ, ಬುಳ್ಳಾಪುರ.  ಗುಳದಳ್ಳಿ (ಬಾಧಿತ)- ಗುಳದಳ್ಳಿ, ಗಬ್ಬೂರು, ಕೆರೆಹಳ್ಳಿ.  ಇಂದರಗಿ (ಬಾಧಿತ)- ಇಂದರಗಿ.  ವಣಬಳ್ಳಾರಿ (ಹೊಸದು)- ವಣಬಳ್ಳಾರಿ, ಅರಿಶಿನಕೇರಿ, ಮೆಗಲ್, ಜಿನ್ನಾಪುರ.  ಹಾಸಗಲ್ (ಬಾಧಿತ)- ಹಾಸಗಲ್, ಚಿಕ್ಕಸುಳಿಕೇರಿ, ಚಿಲಕಮುಖಿ, ಗೋಸಲದೊಡ್ಡಿ, ಹಿರೇಸುಳಿಕೇರಿ, ಹೊಸೂರು, ಸಿಡಗನಹಳ್ಳಿ.  ಇರಕಲ್ಲಗಡ (ಬಾಧಿತ)- ಇರಕಲ್ಲಗಡ, ಚಾಮಲಾಪುರ, ಹನುಮಹಟ್ಟಿ, ಕೊಡದಾಳ, ವಡ್ಡರಹಟ್ಟಿ, ಯಲಮಗೇರಾ.
ಗಂಗಾವತಿ ತಾಲೂಕು : ಚಿಕ್ಕಡಂಕನಕಲ್ (ಬಾಧಿತ)- ಚಿಕ್ಕಡಂಕನಕಲ್, ಚಿರ್ಚನಗುಡ್ಡ, ಹಿರೇಡಂಕನಕಲ್, ಜೀರಾಳ (ಹೊಸದು)- ಜೀರಾಳ, ಜೀರಾಳ ಕಲ್ಗುಡಿ.  ಢಣಾಪುರ (ಬಾಧಿತ)- ಢಣಾಪುರ, ಹೆಬ್ಬಾಳ.  ಜಂಗಮರ ಕಲ್ಗುಡಿ (ಹೊಸದು)- ಜಂಗಮರ ಕಲ್ಗುಡಿ.  ಸಿದ್ದಾಪುರ (ಬಾಧಿತ)- ಸಿದ್ದಾಪುರ, ಕೃಷ್ಣಾಪುರ.  ಬರಗೂರು (ಹೊಸದು)- ಬರಗೂರು, ಕೊಟ್ನೇಕಲ್, ಕುಂಟೋಜಿ.  ಮುಸ್ಟೂರು (ಬಾಧಿತ)- ಮುಸ್ಟೂರು.  ಬೇವಿನಾಳ (ಬಾಧಿತ)- ಬೇವಿನಾಳ, ಪನ್ನಾಪುರ.  ಮೈಲಾಪುರ (ಹೊಸದು)- ಮೈಲಾಪುರ, ಗುಡೂರು, ಸೋಮನಾಳ.  ಚಳ್ಳೂರು (ಬಾಧಿತ)- ಚಳ್ಳೂರು.  ಆನೆಗುಂದಿ (ಬಾಧಿತ)- ಆನೆಗುಂದಿ ಬಸವನದುರ್ಗ, ಕೃಷ್ಣಾಪುರ ಡಗ್ಗಿ(ಡಿ).  ಸಾಣಾಪುರ (ಹೊಸದು)- ಸಾನಾಪುರ, ತಿಮಲಾಪುರ, ಅಂಜನಹಳ್ಳಿ, ವಿರುಪಾಪುರಗಡ್ಡಿ, ಹನುಮನಹಳ್ಳಿ, ಚಿಕ್ಕರಾಂಪೂರ, ಕರಿಯಮ್ಮನಗಡ್ಡಿ.  ಸಂಗಾಪುರ (ಬಾಧಿತ)- ಸಂಗಾಪುರ, ರಾಮದುರ್ಗ, ರಾಜಾಪುರ (ಡಿ), ಸಿಂಗನಗುಂಡ, ವಿಪ್ರ.  ಗೌರಿಪುರ (ಬಾಧಿತ)- ಗೌರಿಪುರ, ದೇವಲಾಪುರ, ಚಿಕ್ಕವಡ್ರಕಲ್, ಅಡವಿಭಾವಿ.  ಬಸರಿಹಾಳ (ಹೊಸದು)- ಬಸರಿಹಾಳ, ಹುಲಸನಹಳ್ಳಿ, ಸೋಮಸಾಗರ, ಬೈಲಕ್ಕಂಪುರ.  ಹುಲಿಹೈದರ (ಬಾಧಿತ)- ಹುಲಿಹೈದರ, ಹನುಮನಾಳ, ಕನಕಾಪುರ, ಲಾಯದುಣಸಿ, ವರ್ಣಖೇಡಾ, ಹೊಸಗುಡ್ಡ.
ಯಲಬುರ್ಗಾ ತಾಲೂಕು : ಬಂಡಿ (ಬಾಧಿತ)- ಬಂಡಿ, ಬಸಾಪುರ, ಬೂನಕೊಪ್ಪ, ಹಗೇದಾಳ, ಜೂಲಕಟ್ಟಿ, ಕಡಬಲಕಟ್ಟಿ.  ತುಮ್ಮರಗುದ್ದಿ (ಹೊಸದು)- ತುಮ್ಮರಗುದ್ದಿ, ಮಾರನಾಳ, ದಮ್ಮೂರು.  ಗೆದಿಗೇರಿ (ಬಾಧಿತ)- ಗೆದಿಗೇರಿ, ವೀರಾಪುರ, ಹನಮಾಪುರ, ಹುಲೇಗುಡ್ಡ, ಲಗಳೂರ, ಮದ್ಲೂರ, ತಲ್ಲೂರ.  ವಜ್ರಬಂಡಿ (ಬಾಧಿತ)- ವಜ್ರಬಂಡಿ, ಚಿಕ್ಕಬನ್ನಿಗೋಳ, ಜಿ.ಜರಕುಂಟಿ, ಕೋನಸಾಗರ, ಸಾಲಭಾವಿ.  ಕುದರಿಮೋತಿ (ಬಾಧಿತ)- ಕುದರಿಮೋತಿ, ಭಯರನಾಯಕನಹಳ್ಳಿ, ಚೆಂಡಿನಾಳ.  ನೆಲಜೇರಿ (ಹೊಸದು)- ನೆಲಜೇರಿ, ವಟಪರ್ವಿ, ಮ್ಯಾದನೇರಿ.  ಬೇವೂರು (ಬಾಧಿತ)- ಬೇವೂರು, ಕೋಳಿಹಾಳ.  ತಾಳಕೇರಿ (ಬಾಧಿತ)- ತಾಳಕೇರಿ, ಕಲ್ಲಭಾವಿ, ಮರಕಟ್.  ಬೋದೂರ (ಹೊಸದು)- ಬೋದೂರ, ಗುಳೆ, ಚೌಡಾಪುರ, ಗುಂಟಮಡು, ಶಿಡ್ಲಭಾವಿ, ವನಜಭಾವಿ, ಚಿಕ್ಕಮನ್ನಾಪುರ.  ಮಾಟಲದಿನ್ನಿ (ಬಾಧಿತ)- ಮಾಟಲದಿನ್ನಿ, ಎನ್.ಜರಕುಂಟಿ, ಪುಟಗಮರಿ, ಯಡ್ಡೋಣಿ, ಬುಡಕುಂಟಿ.  ಗಾಣಧಾಳ (ಬಾಧಿತ)- ಗಾಣಧಾಳ, ಹಿರೇವಡ್ರಕಲ್, ಕಟಗಿಹಳ್ಳಿ, ತಿಪ್ಪನಾಳ.  ಶಿರೂರ (ಬಾಧಿತ)- ಶಿರೂರ, ಬೆದವಟ್ಟಿ, ಚಂಡೂರು, ಯಡಿಯಾಪುರ, ಅರಕೇರಿ.  ಹಿರೇಬೀಡನಾಳ (ಬಾಧಿತ)- ಹಿರೇಬಿಡನಾಳ, ಚಿಕ್ಕಬೀಡನಾಳ, ಕದ್ರಳ್ಳಿ, ಮುತ್ತಾಳ, ಹೊನ್ನುಣಸಿ.  ಬೆಣಕಲ್ (ಬಾಧಿತ)- ಬೆಣಕಲ್, ವೀರಾಪುರ.  ಮಸಬಹಂಚಿನಾಳ (ಹೊಸದು)- ಮಸಬಹಂಚಿನಾಳ, ನಿಟ್ಟಾಲಿ, ಗಾವರಾಳ, ಗೊರ್ಲೆಕೊಪ್ಪ.  ಇಟಗಿ (ಬಾಧಿತ)- ಇಟಗಿ, ಮನ್ನಾಪುರ.  ಭಾನಾಪುರ (ಬಾಧಿತ)- ಭಾನಾಪುರ, ಚಿತ್ತಾಪುರ, ಕೋಮಲಾಪುರ, ಲಕಮಾಪುರ, ತಳಬಾಳ. 
ಕುಷ್ಟಗಿ ತಾಲೂಕು : ಹಿರೇಬನ್ನಿಗೋಳ (ಬಾಧಿತ)- ಹಿರೇಬನ್ನಿಗೋಳ, ಚಿಕ್ಕನಂದಿಹಾಳ, ಯಲಬುರ್ತಿ.  ಕೊರಡಕೇರಾ (ಬಾಧಿತ)- ಕೊರಡಕೇರಾ, ಬ್ಯಾಲಿಹಾಳ, ಗೊರವರಬೆಂಚಮಟ್ಟಿ, ಮದಲಗಟ್ಟಿ, ಶಾಖಾಪುರ.  ಹಿರೇನಂದಿಹಾಳ (ಹೊಸದು)- ಹಿರೇನಂದಿಹಾಳ, ದೊಣ್ಣೆಗುಡ್ಡ, ಬಿಸನಾಳ, ಕನಕೊಪ್ಪ, ಬಿಂಗಿಕೊಪ್ಪ (ಬೇ), ಪರಸಾಪುರ.  ಕಾಟಾಪುರ (ಬಾಧಿತ)- ಕಾಟಾಪುರ, ಬಂಡರಗಲ್ಲ.  ಅಂಟರಠಾಣ (ಹೊಸದು)- ಅಂಟರಠಾಣ, ಹುಚನೂರ, ತುರಕನೂರ (ಬೇ), ಕಡೂರ, ಕಲ್ಲಗೋನಾಳ, ತತ್ತಕುಂಟಿ (ಬೇ), ಪುರತಗೇರಿ, ಯರಿಗೋನಾಳ.  ಹೂಲಗೇರಾ (ಬಾಧಿತ)- ಹೂಲಗೇರಾ, ಹೊನಮಟ್ಟಿ (ಬೇ).  ದೋಟಿಹಾಳ (ಬಾಧಿತ)- ದೋಟಿಹಾಳ, ಮಾಟೂರ, ತೊನಸಿಹಾಳ.  ಕೇಸೂರ (ಹೊಸದು)- ಕೇಸೂರ, ಉಪ್ಪಾರಬಸಾಪುರ, ಹೆಸರೂರ, ಕಲಕೇರಿ, ನಡುವಲಕೊಪ್ಪ, ಕಡೇಕೊಪ್ಪ.  ಕ್ಯಾದಿಗುಪ್ಪ (ಬಾಧಿತ)- ಕ್ಯಾದಿಗುಪ್ಪ, ಗೋತಗಿ, ಮೆಣಸಗೇರಾ, ತಿಮ್ಮನಹಟ್ಟಿ.  ಮೆಣೆದಾಳ (ಬಾಧಿತ)- ಮೆಣೆದಾಳ, ಚಿಕ್ಕತೆಮ್ಮಿನಾಳ, ಬಚನಾಳ, ಹಿರೇಮುಕರ್ತಿನಾಳ, ಹುಲಿಯಾಪುರ, ಮುಕ್ತಾರಾಂಪುರ, ಚಿಕ್ಕಮುಕರ್ತಿನಾಳ.  ಲಿಂಗದಳ್ಳಿ (ಹೊಸದು)- ಲಿಂಗದಳ್ಳಿ, ಗುಡ್ಡದಹನುಮಸಾಗರ, ಹೊಮ್ಮಿನಾಳ, ಹೊನಗಡ್ಡಿ, ಸಿದ್ದಾಪುರ, ವಿರುಪಾಪುರ.  ಸಂಗನಾಳ (ಬಾಧಿತ)- ಸಂಗನಾಳ, ಗಂಗನಾಳ, ಹಡಗಲಿ, ಹಿರೇತೆಮ್ಮಿನಾಳ, ಕನ್ನಾಳ, ಮೆತ್ತಿನಾಳ, ಪುರ.  ಕಂದಕೂರ (ಬಾಧಿತ)- ಕಂದಕೂರ, ಉಮಳಿ ಕುರಬನಾಳ, ನೆರೆಬೆಂಚಿ.  ಗುಮಗೇರಾ (ಹೊಸದು)- ಗುಂಗೇರಾ, ನಾಗರಾಳ, ಗಂಗನಾಳ, ಮುಕ್ತಾಗುಡದೂರ.  ಬಿಜಕಲ್ (ಬಾಧಿತ)- ಬಿಜಕಲ್, ಮಜರಾಬಸಾಪುರ, ಕೆ. ಗೋನಾಳ, ಕೆ. ಹೊಸೂರ, ಕೌಲಬೋದೂರ, ಮಣ್ಣಕಲಕೇರಿ, ಟೆಂಗುಂಟಿ, ಟಕ್ಕಳಕಿ.  ಮಾಲಗಿತ್ತಿ (ಬಾಧಿತ)- ಮಾಲಗಿತ್ತಿ, ಕಡಿವಾಲ, ಅಕ್ಕೇರಿ, ಪಟ್ಟಲಚಿಂತಿ.  ಹನಮನಾಳ (ಬಾಧಿತ)- ಹನಮನಾಳ, ಎಂ. ಕುರುಬನಾಳ.  ಬಿಳೇಕಲ್ (ಹೊಸದು)- ಬಿಳೇಕಲ್, ಕೊಡತಗೇರಾ, ರಂಗಾಪುರ.  ಜಾಗೀರಗುಡದೂರ (ಬಾಧಿತ)- ಜಾಗೀರಗುಡದೂರ, ಕೋನಾಪುರ, ಪರಮನಹಟ್ಟಿ, ಗುಡ್ಡದದೇವಲಾಪುರ.  ತಿಮರಿಕೊಪ್ಪ (ಹೊಸದು)- ತುಮರಿಕೊಪ್ಪ, ಪರಸಾಪುರ, ತಿಮ್ಮನಹಟ್ಟಿ, ಬಾದಿಮನಾಳ, ಗೊರಬಿಹಾಳ, ವೆಂಕಟಾಪುರ.  ಹಿರೇಗೊಣ್ಣಾಗರ (ಬಾಧಿತ)- ಹಿರೇಗೊಣ್ಣಾಗರ, ಮೂಗನೂರ, ಮಜರಾನರಸಾಪುರ.  ಯರಗೇರಾ (ಬಾಧಿತ)- ಯರಗೇರಾ, ಚಂದ್ರಗಿರಿ, ಗುಡದೂರಕಲ್, ಮದನಾಳ, ಮಾವಿನ ಇಟಗಿ.  ಹಾಬಲಕಟ್ಟಿ (ಹೊಸದು)- ಹಾಬಲಕಟ್ಟಿ, ವಾರಿಕಲ್, ಚಿಕ್ಕಗೊಣ್ಣಾಗರ, ಮಾಸ್ತಿಕಟ್ಟಿ, ಗಡಚಿಂತಿ.  ಮುದೇನೂರ (ಬಾಧಿತ)- ಮುದೇನೂರ, ಬನಹಟ್ಟಿ ಕೆ, ಬೆಂಚಮಟ್ಟಿ, ಕೂಡ್ಲೂರು, ಮಾದಾಪುರ, ತೆಗ್ಗಿಹಾಳ.  ಶಿರಗುಂಪಿ (ಹೊಸದು)- ಶಿರಗುಂಪಿ, ಜಾಲಿಹಾಳ, ಬಳೂಟಗಿ, ಮೇಗೂರು, ರ್ಯಾವಣಕಿ.
      ಕರಡು ಅಧಿಸೂಚನೆಯಲ್ಲಿ ಹೊಸ ಗ್ರಾಮ ಪಂಚಾಯತಿಗಳ ರಚನೆ, ಪುನರ್ ವಿಂಗಡಣೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವರಗಳನ್ನು ನೀಡಲಾಗಿದ್ದು, ಇದರಿಂದ ಬಾಧಿತರಾಗಬಹುದಾದ ಯಾವುದೇ ವ್ಯಕ್ತಿಗಳು ಸಲಹೆ ಅಥವಾ ಆಕ್ಷೇಪಣೆಯನ್ನು ಜ. 29 ರ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರಡು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.