Thursday, 31 December 2015

ಜಿಲ್ಲಾ ಉಸ್ತುವಾರಿ ಸಚಿವರಿಂದ ಹೊಸ ವರುಷದ ಶುಭಾಷಯ

ಕೊಪ್ಪಳ ಡಿ. 31 (ಕರ್ನಾಟಕ ವಾರ್ತೆ): ನೂತನ ವರ್ಷ 2016 ನಾಡಿನ ಜನತೆಗೆ ಶುಭವನ್ನು ತಂದು, ಉತ್ತಮ ಮಳೆ-ಬೆಳೆಯೊಂದಿಗೆ ಸಮೃದ್ಧಿಯನ್ನು ತರಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಶುಭಾಷಯ ಕೋರಿದ್ದಾರೆ.

ಜಾಹೀರಾತುಗಳು ಯುವಜನತೆಯ ಹಾದಿ ತಪ್ಪಿಸುತ್ತಿವೆ : ಶ್ರೀಕಾಂತ್ ಸಜ್ಜನ್


ಕೊಪ್ಪಳ, ಡಿ.31 (ಕರ್ನಾಟಕ ವಾರ್ತೆ) : ಮದ್ಯ, ಮಾದಕ ವಸ್ತುಗಳನ್ನು ವೈಭವೀಕರಿಸುವ ಮೂಲಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳು ಯುವ ಜನತೆಯ ದಾರಿ ತಪ್ಪಿಸುತ್ತಿವೆ ಎಂದು ಗುಳಗಣ್ಣನವರ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಸಜ್ಜನ್ ಅವರು ಹೇಳಿದರು.
     ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ 1098) ಸಂಸ್ಥೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಲಗೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹಲಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಪ್ರಸ್ತುತ ದಿನಮಾನಗಳಲ್ಲಿ ಚಲನಚಿತ್ರಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮದ್ಯ ಮಾದಕಗಳನ್ನು ವೈಭವೀಕರಿಸಲಾಗುತ್ತಿದೆ. ಪರಿವರ್ತನೆ, ಬದಲಾವಣೆ ಬಯಸುವ ಮನಸ್ಸನ್ನು ಹೊಂದಿರುವ ಯುವ ಜನತೆಯನ್ನೇ ಗುರಿಯಾಗಿರಿಸಿಕೊಂಡು ಮದ್ಯ, ಮಾದಕಗಳ ಕಂಪನಿಗಳು ತಮ್ಮ ಉತ್ಪನ್ನಗಳ ವ್ಯಾಪಾರಕ್ಕಾಗಿ ಆಕರ್ಷಕ ಪ್ಯಾಕಿಂಗ್ ಹಾಗೂ ಜಾಹೀರಾತುಗಳ ಮೂಲಕ ಆಕರ್ಷಿಸುತ್ತಿವೆ. ಪಾಶ್ಚಿಮಾತ್ಯ ಸಂಸ್ಕøತಿಯ ಪ್ರತೀಕವಾಗಿರುವ ಇಂತಹ ಮದ್ಯ ಮಾದಕವಸ್ತುಗಳನ್ನು ನೇರವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವ ಜನತೆ ಮಾಯಾಜಾಲಕ್ಕೆ ನೂಕಲ್ಪಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.  ಇಂದಿನ ಜನತೆ ವ್ಯಸನಗಳಿಗೆ ಹೆಚ್ಚು ಹಣ ವ್ಯಯಿಸುತ್ತಿರುವುದರಿಂದ ಜೀವನ ಮೌಲ್ಯ ಕುಸಿತ ಕಾಣುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
     ಭಾರತವು ಮದ್ಯ ಮಾದಕಗಳ ಅಂತರಾಷ್ಟ್ರೀಯ ಮಾರುಕಟ್ಟೆಯಾಗಿ ತೆರೆದುಕೊಳ್ಳುತ್ತಿದೆ. ದೇಶದಲ್ಲಿ ಸುಮಾರು 40 ರಿಂದ 50 ಕೋಟಿ ಜನ ಮದ್ಯ ಮಾದಕ ವ್ಯಸನಗಳಿದ್ದಾರೆ ಎಂದು ಅಂದಾಜಿಸಲಾಗಿದೆ.   ಪ್ರಾಣಿಗಳು ಕೂಡಾ ತಮ್ಮ ದೇಹಕ್ಕೆ ಹೊಂದದ ವಸ್ತುಗಳನ್ನು ಮುಟ್ಟುವುದಿಲ್ಲ. ಆದರೆ 84 ಲಕ್ಷ ಜೀವರಾಶಿಯಲ್ಲಿ ಉತ್ತಮನೆನಿಸಿಕೊಂಡಿರುವ ಮನುಷ್ಯ ಮಾತ್ರ ತನ್ನ ದೇಹಕ್ಕೆ ಹೊಂದದ ಮದ್ಯ, ಮಾದಕಗಳ ಮೇಲೆ ಅವಲಂಬಿತನಾಗಿರುವುದು ವಿಪರ್ಯಾಸವಾಗಿದೆ.
     ದೇಶದ ಯುವ ಜನತೆ ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆ ಮೈಗೂಡಿಸಿಕೊಂಡು, ಶ್ರಮದಾಯಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮದ್ಯ, ಮಾದಕ ವಸ್ತುಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕು ಎಂದು ಕರೆ ನೀಡಿದ ಅವರು,  ಈ ನಿಟ್ಟಿನಲ್ಲಿ ಸರ್ಕಾರ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಗಳಂತಹ ಸೇವಾ ಮನೋಭಾವನೆ ಬೆಳೆಸುವ ಕಾರ್ಯಕ್ರಮಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಹೈಸ್ಕೂಲು, ಕಾಲೇಜು ಮಟ್ಟದಲ್ಲಿಯೇ ವಿದ್ಯಾಥಿಗಳನ್ನು ಉತ್ತಮ ಮಾರ್ಗದಲ್ಲಿ ನಡೆಸಲು ಸಾಕಷ್ಟು ಶ್ರಮ ವಹಿಸುತ್ತಿದೆ ಎಂದು ತಿಳಿಸಿದರು.
     ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಕ್ಕಳ ಸಹಾಯವಾಣಿ 1098 ನ ಸಂಯೋಜಕ ಎಲ್.ವಿ.ಆರ್.ಪ್ರಸಾದ್ ಅವರು ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ 1098 ನ್ನು ಆರಂಭಿಸಲಾಗಿದೆ.  ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದ್ದು,  ಕರೆ ಮಾಡಿದ 60 ನಿಮಿಷದೊಳಗಾಗಿ ಸಂಕಷ್ಟಕ್ಕೊಳಗಾದ ಮಗುವನ್ನು ರಕ್ಷಿಸಿ, ಅಗತ್ಯ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದರು.
     ಹಲಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಂಶುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ. ಅವಿನಾಶ, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಸವರಾಜ್ ಗುಳೇದ್, ಕಾಲೇಜಿನ ಉಪನ್ಯಾಸಕ ಹೆಚ್.ಎಸ್.ಬಾರಕೇರ, ಉಮೇಶ ಅಬ್ಬಿಗೇರಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ವಿರೇಶ್ ಸ್ವಾಗತಿಸಿದರು, ಸುಮತಿ ನಿರೂಪಿಸಿದರು. ಎಲ್.ವಿ.ಆರ್ ಪ್ರಸಾದ್ ವಂದನಾರ್ಪಣೆ ಸಲ್ಲಿಸಿದರು.

ಪ್ರಗತಿ ಮಾಹಿತಿ- ಕೊಪ್ಪಳ ಜಿಲ್ಲೆಯಲ್ಲಿ ವಿಶೇಷ ಪ್ರಚಾರ ಕಾರ್ಯಕ್ರಮ ಪ್ರಾರಂಭ

ಕೊಪ್ಪಳ, ಡಿ.31 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಮುಟ್ಟಿಸುವ ಉದ್ದೇಶದಿಂದ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ಸಂಚಾರಿ ವಾಹನಗಳ ಮೂಲಕ ‘ಪ್ರಗತಿ ಮಾಹಿತಿ’ ವಿಶೇಷ ಪ್ರಚಾರ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೆ ಪ್ರಾರಂಭಿಸಿದೆ.
     ಜನ ಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಬಗ್ಗೆ ಜನರಲ್ಲಿ ಅರಿವನ್ನು ಉಂಟು ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಧುನಿಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ನೀಡುವ ‘ಪ್ರಗತಿ ಮಾಹಿತಿ’ ವಿಶೇಷ ಪ್ರಚಾರಾಂದೋಲನವನ್ನು ಕೊಪ್ಪಳ ಜಿಲ್ಲೆಯಲ್ಲಿ ಗುರುವಾರದಂದು ಪ್ರಾರಂಭಿಸಲಾಗಿದ್ದು, 08 ದಿನಗಳ ಕಾಲ, ವಿಶೇಷ ಪ್ರಚಾರಾಂದೋಲನ ನಡೆಯಲಿದೆ.  ಪ್ರಗತಿ ಮಾಹಿತಿ ಕಾರ್ಯಕ್ರಮದ ಅಡಿಯಲ್ಲಿ ಸಂಚಾರಿ ವಾಹನಗಳಲ್ಲಿ ಪ್ರಚಾರ ಮಾಡುವ ರೀತಿಯಲ್ಲಿ ಬೃಹತ್ ಎಲ್‍ಇಡಿ ಪರದೆ ಹೊಂದಿರುವ ವಿಶೇಷ ವಾಹನದ ಮೂಲಕ ಜಿಲ್ಲೆಯ ಗ್ರಾಮಗಳಲ್ಲಿ ದಿನಕ್ಕೆ 05 ಗ್ರಾಮಗಳಂತೆ ಒಟ್ಟು 08 ದಿನಗಳ ಸಂಚರಿಸಿ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಳ್ಳಲಾಗುತ್ತಿದೆ.  ವಿಶೇಷ ಪ್ರಚಾರ ವಾಹನವು ಗುರುವಾರದಂದು ಕುಣಿಕೇರಿ, ಹಿರೇಬಗನಾಳ, ಗಿಣಿಗೇರಾ, ಬೇವಿನಾಳ ಮತ್ತು ಹಿಟ್ನಾಳ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡಿದ್ದು, ಹೊಸ ವರ್ಷದ ದಿನವಾದ ಜ. 01 ರಂದು ಕೊಪ್ಪಳ ತಾಲೂಕಿನ ಹೊಸಳ್ಳಿ, ಹುಲಿಗಿ, ಶಿವಪುರ, ಅಗಳಕೇರಾ, ಹೊಸಬಂಡಿಹರ್ಲಾಪುರ, ಜ. 02 ರಂದು ಗಂಗಾವತಿ ತಾಲೂಕಿನ ಸಾಣಾಪುರ, ಆನೆಗೊಂದಿ,  ಮಲ್ಲಾಪುರ, ಸಂಗಾಪುರ, ಜಂಗಮರ ಕಲ್ಗುಡಿ.  ಜ. 03 ರಂದು ಢಣಾಪುರ, ಮರಳಿ, ಶ್ರೀರಾಮನಗರ, ಸಿದ್ದಾಪುರ, ಮರ್ಲಾನಹಳ್ಳಿ.  ಜ. 06 ರಂದು ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ, ದೋಟಿಹಾಳ, ಬಿಜಕಲ್, ಗುಮಗೇರಾ, ಕಂದಕೂರ.  ಜ. 07 ರಂದು ತಳುವಗೇರಾ, ಚಳಗೇರಾ, ಯರಗೇರಾ, ತುಮರಿಕೊಪ್ಪ, ಹಿರೇಗೊನ್ನಾಗರ.  ಜ. 08 ರಂದು ಯಲಬುರ್ಗಾ ತಾಲೂಕಿನ ಬಳೂಟಗಿ, ಹೊಸಳ್ಳಿ, ಕರಮುಡಿ, ಹಿರೇಮ್ಯಾಗೇರಿ, ಮುಧೋಳ.  ಜ. 09 ರಂದು ಗೆದಗೇರಿ, ಚಿಕ್ಕಮ್ಯಾಗೇರಿ, ರ್ಯಾವಣಕಿ, ಮಂಗಳೂರು ಮತ್ತು ಕುದರಿಮೋತಿ ಗ್ರಾಮಗಳಲ್ಲಿ ಸಂಚರಿಸಿ ವಿಶೇಷ ಪ್ರಚಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ತಿಳಿಸಿದ್ದಾರೆ.

Wednesday, 30 December 2015

ತುಂಗಭದ್ರಾ : ಹಿಂಗಾರು ಹಂಗಾಮಿನ ಬೆಳೆಗಳಿಗೆ ನೀರಿಲ್ಲ

ಕೊಪ್ಪಳ, ಡಿ.30 (ಕರ್ನಾಟಕ ವಾರ್ತೆ) : ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣವು ಕಡಿಮೆಯಾಗಿರುವುದರಿಂದ ಹಿಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎರಡನೇ ಕಾಲುವೆ ವಿಭಾಗ ವಡ್ಡರಹಟ್ಟಿ ಕ್ಯಾಂಪ್, ಕಾರ್ಯಪಾಲಕ ಅಭಿಯಂತರ ರಮೇಶ ಎಸ್.ವಲ್ಯಾಪುರ ಅವರು ತಿಳಿಸಿದ್ದಾರೆ.
     ಬೆಂಗಳೂರಿನ ವಿಕಾಸ ಸೌಧದಲ್ಲಿ ನ.16 ರಂದು ರಂದು ನಡೆದ ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 102ನೇ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣವು ಕಡಿಮೆ ಆಗಿರುವುದರಿಂದ 2016ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರು ಹರಿಸಲಾಗುವುದಿಲ್ಲ ಹಾಗೂ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಕುಡಿಯುವ ನೀರನ್ನು ಕಾಯ್ದಿರಿಸಿ, ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಲಭ್ಯತೆ ಅನುಸಾರ ನೀರು ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎರಡನೇ ಕಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಮೇಶ ಎಸ್.ವಲ್ಯಾಪುರ ಅವರು ರೈತ ಬಾಂಧವರಲ್ಲಿ ವಿನಂತಿ ಮಾಡಿದ್ದಾರೆ.

ಜ.5 ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ

ಕೊಪ್ಪಳ, ಡಿ.30 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಪಂಚಾಯತ್‍ನ  ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಜ.05 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ತಮ್ಮ ಇಲಾಖೆಯ 2015ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಭೌತಿಕ ಗುರಿ ಮತ್ತು ಸಾಧನೆಗಳ ಪ್ರಗತಿ ವರದಿಗಳನ್ನು ಜ.01 ರೊಳಗಾಗಿ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಮತ್ತು ವೈಯಕ್ತಿಕ ಫಲಾನುಭವಿಗಳ ಪಟ್ಟಿ ಇದ್ದಲ್ಲಿ ಅದನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು. ಅಲ್ಲದೆ, ಎಲ್ಲ ವಿವರವಾದ ಮಾಹಿತಿಯೊಂದಿಗೆ ಸಮಯಕ್ಕೆ ಸರಿಯಾಗಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ಡಿ.30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಜಯಶ್ರೀ ಗಂಡ ಸಂಗಯ್ಯ ಹಿರೇಮಠ (28) ಎಂಬ ಮಹಿಳೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಮಹಿಳೆಯು ಕಳೆದ ಸುಮಾರು 8 ರಿಂದ 9 ತಿಂಗಳ ಹಿಂದೆ  ತನ್ನ ಇಚ್ಛೆಯಂತೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತಂತೆ ಕುಷ್ಟಗಿ, ಗಂಗಾವತಿ, ಕೊಪ್ಪಳ ಸೇರಿದಂತೆ ಸಂಬಂಧಿಕರಿರುವೆಡೆಯಲ್ಲ ಇಲ್ಲಿಯವರೆಗೂ ಹುಡುಕಾಡಿದರು ಮಹಿಳೆಯ ಬಗ್ಗೆ ಸುಳಿವು ಸಿಕ್ಕಿಲ್ಲ.  
     ಕಾಣೆಯಾದ ಮಹಿಳೆಯ ವಿವರ ಈ ಕೆಳಗಿನಂತಿದೆ: ಹೆಸರು: ಜಯಶ್ರೀ ಗಂಡ ಸಂಗಯ್ಯ ಹಿರೇಮಠ, ವಯಸ್ಸು: 28, ಸಾ|| ಕೆ.ಬೋದೂರು, ತಾ||ಕುಷ್ಟಗಿ, ಜಿ||ಕೊಪ್ಪಳ, ತಾಯಿ: ಈರಮ್ಮ ಸಂಗನಬಸಯ್ಯ ಹಿರೇಮಠ, ಎತ್ತರ: 5 ಫೀಟು, ವಿದ್ಯಾರ್ಹತೆ: 7ನೇ ತರಗತಿ, ಕನ್ನಡ ಭಾಷೆ ಮಾತನಾಡುತ್ತಾಳೆ, ದಪ್ಪನೆಯ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ, ಮನೆಯಿಂದ ಹೊರಡುವಾಗ ಒಂದು ಗುಲಾಬಿ ಬಣ್ಣದ ನೈಟಿ ತೊಟ್ಟಿರುತ್ತಾಳೆ.
ಈ ಮೇಲ್ಕಂಡ ಚಹರೆಯುಳ್ಳ ಮಹಿಳೆಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಅಥವಾ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 08536-267033, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: 08539-230222 ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 29 December 2015

ಜ. 01 ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ - ಡಿ.ಸಿ. ಕನಗವಲ್ಲಿ

ಕೊಪ್ಪಳ ಡಿ. 29 (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿ ಜನವರಿ 01 ರಿಂದ ಗಂಗಾವತಿ ಮತ್ತು ಕಾರಟಗಿಯ ಎಪಿಎಂಸಿ ಆವರಣ ಸೇರಿದಂತೆ ಒಟ್ಟು ಎರಡು ಕಡೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ  ಭತ್ತ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರನ್ವಯ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.  ಪ್ರತಿ ಕ್ವಿಂಟಾಲ್ ಭತ್ತ (ಸಾಮಾನ್ಯ) ಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 1410 ರೂ. ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ನೀಡುವ ಪ್ರೋತ್ಸಾಹಧನ 100 ರೂ. ಸೇರಿದಂತೆ ಒಟ್ಟು 1510 ರೂ. ಗಳಂತೆ.  ಮತ್ತು ಭತ್ತ (ಗ್ರೇಡ್-ಎ) ಕ್ಕೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ರೂ. 1450 ರಂತೆ ನಿಗದಿಪಡಿಸಿದ್ದು, ಈ ದರದಂತೆ ಖರೀದಿ ಮಾಡಲಾಗುವುದು.   ಸದ್ಯ ಜಿಲ್ಲೆಯಲ್ಲಿ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ.  ಒಂದು ವೇಳೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತ ಕಂಡಲ್ಲಿ, ರೈತರು ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.  ಅದೇ ರೀತಿ ಮಾಲ್ದಂಡಿ ಜೋಳಕ್ಕೆ ಪ್ರತಿ ಕ್ವಿಂಟಾಲ್‍ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 1590 ರೂ. ಹಾಗೂ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ನೀಡುವ ಪ್ರೋತ್ಸಾಹಧನ 510 ರೂ. ಸೇರಿದಂತೆ ಒಟ್ಟು 2100 ರೂ. ಗಳಂತೆ, ಬೆಂಬಲ ಬೆಲೆಯಲ್ಲಿ ಮಾಲ್ದಂಡಿ ಜೋಳ ಖರೀದಿ ಮಾಡಲಾಗುವುದು.  ಕೊಪ್ಪಳ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.
     ರೈತರಿಂದ ಖರೀದಿಸಿದ ಭತ್ತ ದಾಸ್ತಾನು ಮಾಡಲು ಅಗತ್ಯ ಗೋದಾಮು ವ್ಯವಸ್ಥೆ ಕೈಗೊಳ್ಳಬೇಕು.  ಖರೀದಿಸಿದ ಮೊತ್ತವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಆರ್‍ಟಿಜಿಎಸ್ ಮೂಲಕ ನೇರವಾಗಿ ಜಮಾ ಮಾಡಬೇಕು.  ಎಫ್‍ಎಕ್ಯೂ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‍ಗಳನ್ನು ಖರೀದಿ ಕೇಂದ್ರಕ್ಕೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಭತ್ತವನ್ನು ಬೆಳೆಯುವ ವಿಸ್ತೀರ್ಣ 39920 ಹೆಕ್ಟೇರ್ ಆಗಿದ್ದು, ಸುಮಾರು 1. 71 ಲಕ್ಷ ಟನ್ ಭತ್ತದ ಬೆಳೆ ಇಳುವರಿಯಾಗಿರುವ ಸಾಧ್ಯತೆ ಇದೆ.  ಅದೇ ರೀತಿ ಮಾಲ್ದಂಡಿ ಜೋಳ ಜಿಲ್ಲೆಯಲ್ಲಿ 25630 ಹೆ. ವಿಸ್ತೀರ್ಣದಲ್ಲಿದ್ದು, 14117 ಟನ್ ಜೋಳ ಉತ್ಪಾದನೆಯ ನಿರೀಕ್ಷೆ ಇದೆ ಎಂದರು.
    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಕೃಷಿ ಮಾರುಕಟ್ಟೆ ಇಲಾಖೆ ಸಹಾಯಕ ನಿದೇಶಕ ಹನುಮಂತಪ್ಪ, ಉಗ್ರಾಣ ನಿಗಮದ ವ್ಯವಸ್ಥಾಪಕ ಪ್ರಕಾಶ್, ಸೇರಿದಂತೆ ತಾಲೂಕುಗಳ ತಹಸಿಲ್ದಾರರು, ಸಹಾಯಕ ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಚಿತ ವೃತ್ತಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ, ಡಿ.29 (ಕರ್ನಾಟಕ ವಾರ್ತೆ) : ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ಸಮುದಾಯ ಅಭಿವೃದ್ಧಿ ಯೋಜನೆಯಡಿ ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಕೊಪ್ಪಳ ನಗರದ ಆಸಕ್ತ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೊಪ್ಪಳ ನಗರದಲ್ಲಿ ಬೇಸಿಕ್ ಕಂಪ್ಯೂಟರ್, ಟ್ಯಾಲಿ ಹಾಗೂ ಟೈಲರಿಂಗ್, ಫ್ಯಾಷನ್ ಡಿಸೈನಿಂಗ್ (ಮಹಿಳೆಯರಿಗೆ ಮಾತ್ರ) ಕೋರ್ಸುಗಳಿಗೆ ತರಬೇತಿ ನೀಡಲಾಗುವುದು. ಆಸಕ್ತರು ಡಿ.29 ರಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, 2016ರ ಜ.04 ರೊಳಗಾಗಿ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಪಾಲಿಟೆಕ್ನಿಕ್ ಕಾಲೇಜ್, ದದೇಗಲ್ ಹತ್ತಿರ, ಕೊಪ್ಪಳ ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿರುವ ಖಾದಿ ಗ್ರಾಮೋದ್ರೋಗ ಕಛೇರಿ ಬಳಿ ಇರುವ ಸಿಡಿಟಿಪಿ ತರಬೇತಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. 
      ಈ ತರಬೇತಿಯು 2016ರ ಜ.05 ರಿಂದ ಆರಂಭಗೊಳ್ಳಲಿದ್ದು, ತರಬೇತಿಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಜ.05 ರಂದು ಬೆಳಿಗ್ಗೆ 11.30 ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದ ಹತ್ತಿರವಿರುವ (ನಗರಸಭೆ ಎದುರು) ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಜರುಗುವ ಸಂದರ್ಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಚಾರ್ಯ ಎ.ಆರ್. ಶಿವಕುಮಾರ ಅವರು ತಿಳಿಸಿದ್ದಾರೆ.

ಕುವೆಂಪು ಅವರ ಕೃತಿಗಳಲ್ಲಿ ಮಾನವೀಯತೆಯ ಸಂದೇಶವಿದೆ- ಡಾ. ತ್ಯಾಗರಾಜನ್


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಬಹುತೇಕ ಕೃತಿಗಳಲ್ಲಿ ಮಾನವೀಯತೆಯ ಸಂದೇಶ ಅಡಗಿದೆ.  ಕುವೆಂಪು ಅವರ ಜನ್ಮ ದಿನಾಚರಣೆಯನ್ನು ವಿಶ್ವ ಮಾನವ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಕುಣಿಕೇರಿ ರಸ್ತೆಯಲ್ಲಿರುವ ಕುವೆಂಪು ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ವಿಶ್ವ ಮಾನವ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


     ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ವಿಶ್ವ ಮಾನವ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿರುವುದು ಅರ್ಥಪೂರ್ಣವಾಗಿದೆ.  ಕುವೆಂಪು ಅವರ ಕೃತಿ ಹಾಗೂ ಕವನಗಳನ್ನು ಅವಲೋಕಿಸಿದಾಗ, ಮಾನವೀಯತೆಯ ಸಂದೇಶ   ಅಡಗಿರುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.  ಕುವೆಂಪು ಅವರ ಆದರ್ಶ ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್ ಅವರು ಹೇಳಿದರು.
      ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕುವೆಂಪು ಪ್ರೌಢಶಾಲೆಯ ಇತಿಹಾಸ ಶಿಕ್ಷಕಿ ಸುಜಾತಾ ಚಿಮ್ಮನಪಲ್ಲಿ ಅವರು,  ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಬಹುತೇಕ ಪಾತ್ರಗಳು ವಾಲ್ಮೀಕಿ ಅವರ ಮೂಲ ರಾಮಾಯಣಕ್ಕಿಂತಲೂ ಹೆಚ್ಚು ಜೀವಂತಿಕೆಯ ಅನುಭವ ನೀಡುತ್ತವೆ.    ಮೂಲ ವಾಲ್ಮೀಕಿ ರಾಮಾಯಣದಲ್ಲಿದ್ದ ವಾಮ ಪಾತ್ರಗಳಿಗೆ ಇಲ್ಲಿ ಸುಂದರ ರೂಪ ಕೊಟ್ಟು ಯುಗಧರ್ಮಕ್ಕೆ ಬದಲಿಸಿದ್ದಾರೆ.  ಕುವೆಂಪು ಅವರು, ಯಾವುದೇ ಜಾತಿ, ಮತಗಳ ಪ್ರಭಾವಕ್ಕೆ ಒಳಗಾಗದೆ, ಸರ್ವ ಜನಾಂಗಕ್ಕೂ ಅನ್ವಯವಾಗುವ ರೀತಿಯಲ್ಲಿ ಉತ್ತಮ ಕೃತಿ, ಕವನಗಳನ್ನು ರಚಿಸಿ ಕವಿಋಷಿಗಳಾಗಿ ಬೆಳೆದರು.   ಕನ್ನಡದ ಕೀರ್ತಿಯನ್ನು ಸಾಹಿತ್ಯ ಲೋಕದಲ್ಲಿ ಬೆಳಗುವಂತೆ ಮಾಡಿದವರು ಕುವೆಂಪು ರವರು ಎಂದು ಬಣ್ಣಿಸಿದರು.
     ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಮಾತನಾಡಿ, ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ.  ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ.  ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ವಿದ್ಯೆಯ ಮತ್ತು ಶಿಕ್ಷಕರ ಕರ್ತವ್ಯವಾಗಬೇಕು ಎನ್ನುವ ಮಹತ್ವದ ಸಂದೇಶವನ್ನು ಶಿಕ್ಷಕ ಬಳಗಕ್ಕೆ ಕುವೆಂಪು ಅವರು ನೀಡಿದ್ದಾರೆ. ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಕಡಿಮೆಯಾಗುತ್ತಿದೆ.  ಕುವೆಂಪು ಅವರ ಕೃತಿಗಳನ್ನು ಓದಿದಾಗ, ಕನ್ನಡ ಭಾಷೆಯ ಶ್ರೀಮಂತಿಕೆಯ ಅರಿವು ನಮಗಾಗುತ್ತದೆ.   ಆಧುನಿಕ ಯುಗದಲ್ಲಿ ಮೊಬೈಲ್, ಸಾಮಾಜಿಕ ತಾಣಗಳ ವೀಕ್ಷಣೆಯಲ್ಲೇ ಮಗ್ನರಾಗಿರುವ ಮಕ್ಕಳು ಪುಸ್ತಕಗಳತ್ತ ಆಸಕ್ತಿ ವಹಿಸಬೇಕು ಎಂದು ಹೇಳಿದರು.
     ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ದೈಹಿಕ ಶಿಕ್ಷಣ ಅಧೀಕ್ಷಕ ಸುದರ್ಶನ್, ಪ್ರಾಚಾರ್ಯ ಶರಣಪ್ಪ, ಸರ್ವಶಿಕ್ಷಣ ಅಭಿಯಾನ ಸಮನ್ವಯಾಧಿಕಾರಿ ವೆಂಕಟೇಶ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್. ಪತ್ತಾರ್, ಕುವೆಂಪು ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪರಶುರಾಮು, ಮುಖ್ಯ ಶಿಕ್ಷಕ ಕಳಕಪ್ಪ, ಶಿವಾನಂದ ಹೊದ್ಲೂರು ಉಪಸ್ಥಿತರಿದ್ದರು.  ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಅಧಿಕಾರಿಗಳು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.  ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಡಿ. 31 ರೊಳಗೆ ಕೇಬಲ್ ಡಿಜಿಟೈಜೇಶನ್ ಕಡ್ಡಾಯ : ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲ

ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇದೇ ಡಿ. 31 ರ ನಂತರ ಅನಲಾಗ್ ಸಿಸ್ಟಂ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದ್ದು, ಕೇಬಲ್ ಟಿ.ವಿ. ಗ್ರಾಹಕರು  ಡಿಸೆಂಬರ್ 31 ರೊಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳಲೇಬೇಕಿದೆ.  ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವ ಅವಕಾಶವಿಲ್ಲ ಎಂದು ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿಗಳು ಮಂಗಳವಾರದಂದು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.
     ಕೇಬಲ್ ಡಿಜಿಟೈಜೇಶನ್‍ಗೆ ಡಿ. 31 ಕೊನೆಯ ದಿನಾಂಕವಾಗಿದ್ದು, ಅವಧಿ ವಿಸ್ತರಣೆ ಮಾಡುವಂತೆ ಕೇಬಲ್ ಆಪರೇಟರ್ಸ್‍ಗಳ ಸಂಘಟನೆಗಳು ಮನವಿಯನ್ನು ಸಲ್ಲಿಸಿದ್ದವು.  ಆದರೆ ಅವಧಿ ವಿಸ್ತರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ.  ಯಾವುದೇ ಕಾರಣಕ್ಕೂ ಅವಧಿ ವಿಸ್ತರಿಸಲು ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಡಿ. 29 ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಡಿ. 31 ರ ನಂತರ ಸದ್ಯ ಇರುವ ಅನಲಾಗ್ ಮೋಡ್ ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ.  ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಆದೇಶದನ್ವಯ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್‍ಗೊಳಿಸಬೇಕು.  ಈಗಾಗಲೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ.  ಇದರ ಅನ್ವಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೇಬಲ್ ಟಿ.ವಿ. ವೀಕ್ಷಕರು ಸದ್ಯ ಅನಲಾಗ್ ಮೋಡ್‍ನಲ್ಲಿರುವ ಪ್ರಸಾರ ವ್ಯವಸ್ಥೆಯನ್ನು 2015 ರ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಡಿಜಿಟೈಜೇಶನ್‍ಗೆ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಈಗಾಗಲೆ ಸೂಚನೆ ನೀಡಲಾಗಿದೆ.  ಅದೇ ರೀತಿ ಗ್ರಾಮೀಣ ಪ್ರದೇಶದ ಕೇಬಲ್ ಟಿ.ವಿ. ವೀಕ್ಷಕರು 2016 ರ ಡಿಸೆಂಬರ್ 31 ರ ಒಳಗಾಗಿ ಡಿಜಿಟೈಜೇಶನ್‍ಗೊಳಿಸಬೇಕು.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್ಸ್‍ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್ಸ್‍ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು. ಕೇಬಲ್ ಗ್ರಾಹಕರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು, ಡಿ. 31 ರ ಒಳಗಾಗಿ ಅನುಷ್ಠಾನಗೊಳಿಸಲೇಬೇಕಿದೆ.  ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು.  ಡಿಸೆಂಬರ್ 31 ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು.   ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್ಸ್‍ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ ಅಳವಡಿಸುವ ಮೂಲಕ ಕಡ್ಡಾಯವಾಗಿ ಡಿಜಿಟೈಜೇಶನ್ ಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸುವುದಗತ್ಯ- ಶ್ಯಾಮಸುಂದರ್


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ದೇಶದ ಭವಿಷ್ಯದ ಜನನಾಯಕರು ರೂಪುಗೊಳ್ಳುವುದು ಶಾಲೆಗಳಲ್ಲಿಯೇ ಆಗಿರುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಗತ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಹೇಳಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

     ಇತ್ತೀಚಿನ ದಿನಗಳಲ್ಲಿ ಹೆಚ್ಚು, ಹೆಚ್ಚು ಯುವಜನರು ರಾಜಕೀಯ ಪ್ರವೇಶ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.   ಭವ್ಯ ಹಾಗೂ ಬಲಿಷ್ಟ ಭಾರತವನ್ನು ಕಟ್ಟಲು, ದಕ್ಷ ಹಾಗೂ ಪ್ರಾಮಾಣಿಕ ಯುವ ಪೀಳಿಗೆ ನಿರ್ಮಾಣವಾಗುವುದು ಸಹ ಶಾಲೆಗಳಲ್ಲಿಯೇ ಆಗಿರುವುದರಿಂದ, ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ, ಅಗಲದ ಅರಿವು ಮೂಡಿಸುವ ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿಯೇ ಪ್ರಾರಂಭವಾಗಬೇಕು. ಜನರಿಂದ ಶಾಸಕರು ಹೇಗೆ ಆಯ್ಕೆಯಾಗುತ್ತಾರೆ ? ಸಂಸತ್‍ನಲ್ಲಿ ಅವರ ಕಾರ್ಯಗಳೇನು ? ವಿರೋಧ ಪಕ್ಷದ ನಾಯಕರ ಕರ್ತವ್ಯಗಳೇನು ? ಸಿಎಂ ಜವಾಬ್ದಾರಿಗಳೇನು ? ರಾಜ್ಯದ ಸಮಸ್ಯೆಯನ್ನು ಸದನದಲ್ಲಿ ಹೇಗೆ ಚರ್ಚಿಸಬೇಕು? ಎನ್ನುವ ಕುರಿತು ವಿದ್ಯಾರ್ಥಿಗಳಿಗೆ ಪರಿಕಲ್ಪನೆ ಮೂಡಿಸಲು ಶಿಕ್ಷಣ ಇಲಾಖೆಯಿಂದ ಯುವ ಸಂಸತ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ.  ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ನಾಯಕತ್ವ ಅಥವಾ ಮುಂದಾಳತ್ವ ವಹಿಸಿಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ.  ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.  ಇದರಿಂದ ಪ್ರಚಲಿತ ವಿದ್ಯಮಾನಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಹೇಳಿದರು.
     ಉದ್ಘಾಟನಾ ಸಮಾರಂಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶಗೌಡ, ಶಿಕ್ಷಣ ಸಂಯೋಜಕ ಎಸ್.ಬಿ. ಕುರಿ, ವಿಷಯ ಶಿಕ್ಷಕರಾದ ಎಂ.ಎಸ್.ಬಡದಾನಿ, ಗುರು ಬಸವರಾಜ, ಆರ್.ಎಸ್. ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 04 ತಂಡಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿದವು.  ರೈತರ ಆತ್ಮಹತ್ಯೆ ಪ್ರಕರಣಗಳು,  ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನಡೆದ ಹೋರಾಟ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧಿಗಳ ಕೊರತೆ ಸರ್ಕಾರಿ ಬಸ್ ದರ ಹೆಚ್ಚಳ, ಅಕ್ರಮ ಮದ್ಯ ಮಾರಾಟ ಹಾಗೂ ಸರಗಳ್ಳತನದ ಹಾವಳಿ ಕುರಿತು ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ನಡೆಸಿದ ಕಲಾಪ ವೈಖರಿ ಗಮನಸೆಳೆಯಿತು.

Monday, 28 December 2015

ರಾಜ್ಯ ಹೆದ್ದಾರಿಯಲ್ಲಿ ಸ್ಥಳೀಯ ವಾಹನಗಳ ಟೋಲ್ ಸಂಗ್ರಹ ವಿವರ ನೀಡಲು ಡಿ.ಸಿ. ಸೂಚನೆ


ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‍ಡಿಸಿಎಲ್) ವತಿಯಿಂದ ಗಂಗಾವತಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಟೋಲ್ ಸಂಗ್ರಹ ಕೇಂದ್ರಗಳಲ್ಲಿ, ಸ್ಥಳೀಯ ವಾಹನಗಳಿಂದ ಸಂಗ್ರಹಿಸಿರುವ ಟೋಲ್ ಶುಲ್ಕದ ವಿವರ ಹಾಗೂ ಅಂತಹ ವಾಹನಗಳ ಓಡಾಟದ ಪ್ರಮಾಣದ ಮಾಹಿತಿಯನ್ನು ಶೀಘ್ರ ಒದಗಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೆ.ಆರ್.ಡಿ.ಸಿ.ಎಲ್. ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಗಂಗಾವತಿ ಹಾಗೂ ಕಾರಟಗಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ರಸ್ತೆ ಬಳಕೆ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಗಂಗಾವತಿ ಹಾಗೂ ಕಾರಟಗಿ ಮಾರ್ಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ನಿಗಮ ಹಾಗೂ ರಾಜ್ಯ ಸರ್ಕಾರದ ನಡುವೆ ಆಗಿರುವ ಒಪ್ಪಂದದಂತೆ ರಸ್ತೆ ಬಳಕೆ ಶುಲ್ಕವನ್ನು ಕಳೆದ ಸೆಪ್ಟಂಬರ್ 27 ರಿಂದ ಸಂಗ್ರಹಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಎರಡು ಕಡೆ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ.  ಸ್ಥಳೀಯ ವಾಹನಗಳು ದಿನನಿತ್ಯ ಓಡಾಡುತ್ತಿದ್ದು, ಟೋಲ್ ಶುಲ್ಕ ಪಾವತಿಸುವುದು ಕಷ್ಟಕರವಾಗಿದೆ.  ಇದರಿಂದ ಸ್ಥಳಿಕರಿಗೆ ಅನ್ಯಾಯವಾಗುತ್ತಿದೆ ಎಂಬುದಾಗಿ ಅಲ್ಲಿನ ಸ್ಥಳಿಕರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.  ಎರಡೂ ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಈವರೆಗೆ  ವೈಟ್ ಬೋರ್ಡ್ ಹೊಂದಿರುವ ಸ್ಥಳೀಯ ವಾಹನಗಳ ಓಡಾಟ, ಕಮರ್ಷಿಯಲ್ ಅಂದರೆ ಹಳದಿ ಬೋರ್ಡ್ ವಾಹನಗಳ ಓಡಾಟದ ವಿವರ ಹಾಗೂ ಇಂತಹ ವಾಹನಗಳಿಂದ ಸಂಗ್ರಹಿಸಲಾಗಿರುವ ರಸ್ತೆ ಬಳಕೆ ಶುಲ್ಕದ ವಿವರವುಳ್ಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಶೀಘ್ರ ಸಲ್ಲಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. 
     ಕೃಷಿ ಉತ್ಪನ್ನ ಸಾಮಗ್ರಿ ಸಾಗಾಣಿಕೆ ಮಾಡುವ  ಟ್ರ್ಯಾಕ್ಟರ್‍ಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲು 2012 ರಲ್ಲಿ ಅಧಿಸೂಚನೆಯಲ್ಲಿ ತಿಳಿಸಿದ್ದು, 2015 ರಲ್ಲಿ ಹೊರಡಿಸಲಾಗಿರುವ ಮತ್ತೊಂದು ಅಧಿಸೂಚನೆಯಲ್ಲಿ ಕೃಷಿ ಉತ್ಪನ್ನ ಸಾಮಗ್ರಿ ಸಾಗಾಣಿಕೆ ಮಾಡುವ ವಾಹನಗಳಿಗೆ ಸಂಬಂಧಿಸಿದಂತೆ ಗೊಂದಲ ಏರ್ಪಟ್ಟಿದೆ.  ಹೀಗಾಗಿ ಕೃಷಿ ಉತ್ಪನ್ನ ಸಾಮಗ್ರಿ ಸಾಗಾಣಿಕೆ ಮಾಡುವ ವಾಹನಗಳಿಗೆ ವಿನಾಯಿತಿ ನೀಡುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ಪಡೆಯಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಹಾಗೂ ಗಂಗಾವತಿ ತಾಲೂಕಿನ ಸಾರ್ವಜನಿಕರು, ಸ್ಥಳೀಯ ವಾಹನಗಳಿಗೆ ರಸ್ತೆ ಬಳಕೆ ಶುಲ್ಕದಿಂದ ವಿನಾಯಿತಿ ನೀಡಬೇಕು.  ಈ ಕುರಿತು ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಟೋಲ್ ಸಂಗ್ರಹ ಕುರಿತಂತೆ ನಿಗಮ ಮತ್ತು ಸರ್ಕಾರದ ನಡುವೆ ಕರಾರು ಒಪ್ಪಂದವಾಗಿದ್ದು, ಈ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳುವುದು ಜಿಲ್ಲಾಡಳಿತ ವ್ಯಾಪ್ತಿಗೆ ಬರುವುದಿಲ್ಲ.  ತಮ್ಮ ಮನವಿಯನ್ನು ಸಭೆಯ ನಡಾವಳಿಯೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
     ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಅವರು ಮಾತನಾಡಿ, ಸ್ಥಳೀಯ ಬಿಳಿ ಬೋರ್ಡ್ ಹೊಂದಿರುವ ಲಘು ವಾಹನಗಳಿಗೆ ರಸ್ತೆ ಬಳಕೆ ಶುಲ್ಕವನ್ನು ತಿಂಗಳಿಗೆ ಅನಿಯಮಿತ ಸಂಚಾರದಂತೆ ರೂ. 270 ರ ರಿಯಾಯಿತಿ ದರ ನಿಗದಿಪಡಿಸಲಾಗಿದೆ.  ಕಮರ್ಷಿಯಲ್ ವಾಹನಗಳಿಗೆ ನಿಗದಿತ ದರದಂತೆ ರಸ್ತೆ ಬಳಕೆ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ.  ಸಾರ್ವಜನಿಕರಿಗೆ ಉತ್ತಮ ರಸ್ತೆ ಕಲ್ಪಿಸಿಕೊಟ್ಟು, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ನಿಗಮದ ಉದ್ದೇಶವಾಗಿದೆ.  ನಿಯಮ ಬಾಹಿರವಾಗಿ ಯಾವುದೇ ಟೋಲ್ ಸಂಗ್ರಹ ಮಾಡುತ್ತಿಲ್ಲ ಎಂದರು.
     ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್ ಮಲ್ಲಿಕಾರ್ಜುನ ಹೆಚ್.ಆರ್., ಟೋಲ್ ಕೇಂದ್ರಗಳ ಜನರಲ್ ಮ್ಯಾನೇಜರ್ ವಂಶಿ ಚಂದ್ರಶೇಖರ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ನೆಕ್ಕಂಟಿ ಸೂರಿಬಾಬು, ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಡಿ.29 ರಂದು ವಿಶ್ವ ಮಾನವ ದಿನ : ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚನೆ

ಕೊಪ್ಪಳ, ಡಿ.28 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನ ಆಚರಣೆ ಕಾರ್ಯಕ್ರಮ ಡಿ.29 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುಣಿಕೇರಿ ರಸ್ತೆಯಲ್ಲಿರುವ ಕುವೆಂಪು ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
     ಸರ್ಕಾರವು ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಇದೇ ಪ್ರಥಮ ಬಾರಿಗೆ ‘ವಿಶ್ವ ಮಾನವ ದಿನ’ವನ್ನಾಗಿ ಆಚರಣೆ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿ ವರ್ಗದೊಂದಿಗೆ ಕಾರ್ಯಕ್ರಮದಲ್ಲಿ ಹಾಜರಾಗುವಂತೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಅಂಗವಿಕಲರ ಕ್ಯಾಂಪ್

ಕೊಪ್ಪಳ, ಡಿ.28 (ಕರ್ನಾಟಕ ವಾರ್ತೆ) : ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಪ್ರತಿ ತಿಂಗಳ ಮೊದಲನೆ ಹಾಗೂ ಎರಡನೆ ಬುಧವಾರದಂದು ಕೊಪ್ಪಳದ ಜಿಲ್ಲಾ (ಬೋಧನಾ) ಆಸ್ಪತ್ರೆಯಲ್ಲಿ ಅಂಗವಿಕಲರ ಕ್ಯಾಂಪ್ ಆಯೋಜಿಸಲಾಗುವುದು ಎಂದು ಕಿಮ್ಸ್ ಮುಖ್ಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
     ಪ್ರತಿ ತಿಂಗಳ ಮೊದಲನೇ ಹಾಗೂ ಎರಡನೇ ಬುಧವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಈ ಅಂಗವಿಕಲರ ಕ್ಯಾಂಪ್ ನಡೆಯಲಿದ್ದು, ಕ್ಯಾಂಪಿನಲ್ಲಿ ಅಂಗವಿಕಲರಿಗೆ ವೈದ್ಯ ಪ್ರಮಾಣ ಪತ್ರ ವಿತರಿಸುವ ಕಾರ್ಯ ನಡೆಯಲಿದೆ.  ಅಂಗವಿಕಲರು ಈ ಕ್ಯಾಂಪಿನ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 29 ರಂದು ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ

ಕೊಪ್ಪಳ ಡಿ. 28 (ಕರ್ನಾಟಕ ವಾರ್ತೆ): ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಡಿ. 29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
     ಬೆಂಗಳೂರಿನ ಸಂಸದೀಯ ವ್ಯವಹಾರಗಳ ಇಲಾಖೆ ಶಾಖಾಧಿಕಾರಿ ಡಿ.ಬಿ. ಜನಾರ್ಧನ್ ಅವರು ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುವರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ತಿಳಿಸಿದ್ದಾರೆ.

Sunday, 27 December 2015

ರಾಯಚೂರು-ಕೊಪ್ಪಳ ವಿಧಾನಪರಿಷತ್ ಚುನಾವಣೆ : ಮತದಾನದ ಅಂತಿಮ ವಿವರ

ರಾಯಚೂರು-ಕೊಪ್ಪಳ ವಿಧಾನಪರಿಷತ್ ಚುನಾವಣೆ : ಮತದಾನದ ಅಂತಿಮ ವಿವರ

ವಿಧಾನಪರಿಷತ್ ಚುನಾವಣೆ : ಕೊಪ್ಪಳ ಜಿಲ್ಲೆಯಲ್ಲಿ ಶೇ. 99. 93 ಮತದಾನ


ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ  ಭಾನುವಾರದಂದು ಕೊಪ್ಪಳ ಜಿಲ್ಲೆಯಾದ್ಯಂತ ಸುಗಮ ಮತದಾನವಾಗಿದ್ದು, ಶೇ. 99. 83 ರಷ್ಟು ಮತದಾನವಾಗಿದೆ.  ಅಲ್ಲದೆ ಯಾವುದೇ ಅಹಿತಕರ ಘಟನೆಗಳು ಜರುಗಿದ ಬಗ್ಗೆ ವರದಿಯಾಗಿಲ್ಲ.

     ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಸದಸ್ಯರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2987 ಮತದಾರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.

     ಗಂಗಾವತಿ ತಾಲೂಕಿನಲ್ಲಿ ಪುರುಷ-410, ಮಹಿಳೆ-454, ಒಟ್ಟು 864 ಮತದಾರರಿದ್ದು, ಈ ಪೈಕಿ ಎಲ್ಲ ಮತದಾರರು ಮತ ಚಲಾಯಿಸಿದ್ದು, ಇಲ್ಲಿ ಶೇ. 100 ರಷ್ಟು ಮತದಾನವಾಗಿದೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ-315, ಮಹಿಳೆ- 359, ಒಟ್ಟು 674 ಮತದಾರರಿದ್ದು, ಎಲ್ಲ ಮತದಾರರು ಮತದಾನ ಮಾಡಿದ್ದು, ಇಲ್ಲಿಯೂ ಸಹ ಶೇ. 100 ರಷ್ಟು ಮತದಾನವಾಗಿದೆ.  ಕೊಪ್ಪಳ ತಾಲೂಕಿನಲ್ಲಿ ಪುರುಷ- 394, ಮಹಿಳೆ-421, ಒಟ್ಟು 815 ಜನ ಮತದಾರರಿದ್ದು ಈ ಪೈಕಿ ಪುರುಷ-394, ಮಹಿಳೆ-420, ಒಟ್ಟು- 814 ಜನ ಮತದಾನ ಮಾಡಿದ್ದಾರೆ.  ಇಲ್ಲಿ ಶೇ. 99. 88 ರಷ್ಟು ಮತದಾನವಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಪುರುಷ-298, ಮಹಿಳೆ- 336, ಒಟ್ಟು 634 ಮತದಾರರ ಪೈಕಿ ಪುರುಷ-297, ಮಹಿಳೆ-336, ಒಟ್ಟು 633 ಜನರು ತಮ್ಮ ಮತ ಚಲಾಯಿಸಿದ್ದಾರೆ.  ಇಲ್ಲಿ ಶೇ. 99. 84 ರಷ್ಟು ಮತದಾನವಾಗಿದೆ.

     ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಸ್ಥಾಪಿಸಲಾಗಿದ್ದ ಒಟ್ಟು 161 ಮತಗಟ್ಟೆಗಳಲ್ಲೂ ಮತದಾನ ಸುಗಮ ಹಾಗೂ ಶಾಂತಿಯುತವಾಗಿ ಜರುಗಿದೆ.  ಬೆಳಿಗ್ಗೆಯಿಂದಲೇ ತುರುಸಿನಿಂದ ನಡೆದ ಮತದಾನದ ಕಾರಣ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಜಿಲ್ಲೆಯಲ್ಲಿ ಶೇ. 11. 45 ರಷ್ಟು ಮತದಾನವಾಯಿತು.  ಮಧ್ಯಾಹ್ನ 12 ಗಂಟೆಯ ವೇಳೆಗೆ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ತಮ್ಮ ಮತ ಚಲಾವಣೆಯ ಹಕ್ಕು ಚಲಾಯಿಸಲು ಮುಂದಾಗಿದ್ದರಿಂದ ಶೇ. 70. 27 ರಷ್ಟು ಮತದಾನವಾಯಿತು.  ಇದರಲ್ಲಿ ಗಂಗಾವತಿ ತಾಲೂಕು- ಶೇ. 71. 30, ಕುಷ್ಟಗಿ- ಶೇ. 72. 11, ಕೊಪ್ಪಳ-ಶೇ. 72. 75 ಮತ್ತು ಯಲಬುರ್ಗಾ ತಾಲೂಕಿನಲ್ಲಿ ಶೇ. 63. 72 ರಷ್ಟು ಮತದಾನವಾಯಿತು.   ಮಧ್ಯಾಹ್ನ 02 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 98. 86 ರಷ್ಟು ಮತದಾನವಾಯಿತು.  ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ಶೇ. 100 ರಷ್ಟು ಮತದಾನವಾಗಿತ್ತು.  ಇಲ್ಲಿನ 864 ಮತದಾರರ ಪೈಕಿ ಎಲ್ಲ ಮತದಾರರೂ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಮತ ಚಲಾಯಿಸಿದ್ದರು.  ಉಳಿದಂತೆ ಕುಷ್ಟಗಿ- ಶೇ. 97. 18, ಕೊಪ್ಪಳ- ಶೇ. 99. 26 ಮತ್ತು ಯಲಬುರ್ಗಾ ತಾಲೂಕಿನಲ್ಲಿ ಶೇ. 98. 58 ರಷ್ಟು ಮತದಾನವಾಯಿತು.  ಮಧ್ಯಾಹ್ನ 2 ಗಂಟೆಯ ಹೊತ್ತಿಗಾಗಲೆ ಕೊಪ್ಪಳ ತಾಲೂಕಿನ ಕೋಳೂರು, ಹಿರೇಸಿಂದೋಗಿ, ಬಿಸರಳ್ಳಿ, ಅಳವಂಡಿ, ಕವಲೂರು ಹಾಗೂ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮಗಳ ಗ್ರಾಮ ಪಂಚಾಯತಿಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದು ಕಂಡುಬಂದಿತು.  ಕೋಳೂರು ಗ್ರಾಮ ಪಂಚಾಯತಿಯ ಮತಗಟ್ಟೆಯಲ್ಲಿ ಗ್ರಾ.ಪಂ. ಸದಸ್ಯರೋರ್ವರು ಸಹಾಯಕರ ನೆರವಿನೊಂದಿಗೆ ಮತ ಚಲಾಯಿಸಿದ್ದು ಕಂಡುಬಂದಿತು.  ಮತದಾನಕ್ಕೆ ಸಂಜೆ 04 ಗಂಟೆಯವರೆಗೆ ಅವಕಾಶವಿದ್ದರೂ, ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗಾಗಲೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತ್ತು.  ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ. 30 ರಂದು ಮತ ಎಣಿಕೆ ಕಾರ್ಯ ರಾಯಚೂರಿನಲ್ಲಿ ನಡೆಯಲಿದೆ.

ಜ. 05 ರಿಂದ ಬೀದರ್‍ನಲ್ಲಿ ಸೇನಾ ಭರ್ತಿ ರ್ಯಾಲಿ

ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ಬೆಳಗಾವಿಯ ಸೇನಾ ನೇಮಕಾತಿ ವಲಯದಿಂದ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಭರ್ತಿಗಾಗಿ ಜ. 05 ರಿಂದ ಬೀದರ್‍ನ ನೆಹರೂ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ.
     ಸಿಪಾಯಿ ಕ್ಲಾರ್ಕ್, ಸಿಪಾಯಿ ಎಸ್‍ಕೆಟಿ, ಸಿಪಾಯಿ ಜನರಲ್ ಡ್ಯೂಟಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸ್‍ಮನ್ ಹಾಗೂ ಸಿಪಾಯಿ ನರ್ಸಿಂಗ್ ಸಹಾಯಕರ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದೆ.  ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.  ಈ ಸೇನಾ ಭರ್ತಿ ರ್ಯಾಲಿಗೆ ಕಳೆದ ನವೆಂಬರ್ 07 ರಿಂದ ಡಿಸೆಂಬರ್ 22 ರವರೆಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ಪಾಲ್ಗೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ, ದೂರವಾಣಿ ಸಂ; 08354-235434 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Saturday, 26 December 2015

ಮದ್ಯ, ಮಾದಕ ವ್ಯಸನಗಳಿಂದ ಕುಟುಂಬದ ಹಾಗೂ ಸಮಾಜದ ಸ್ವಾಸ್ಥತೆ ಹಾಳು : ಪರೀಕ್ಷಿತರಾಜ

ಕೊಪ್ಪಳ, ಡಿ.26, (ಕರ್ನಾಟಕ ವಾರ್ತೆ) : ಅನಾರೋಗ್ಯದ ಕೊಂಡಿಯಾಗಿರುವ ಮದ್ಯ, ಮಾದಕ ವಸ್ತುಗಳ ವ್ಯಸನಗಳಿಂದ ಕುಟುಂಬದ ಹಾಗೂ ಸಮಾಜದ ಸ್ವಾಸ್ಥತೆ ಹಾಳಾಗುತ್ತದೆ ಎಂದು ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯ ಪರೀಕ್ಷಿತರಾಜ ಹೇಳಿದರು. 

     ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಗರದ ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

     ಇಂದಿನ ಯುವಜನತೆ ಪ್ರಬುದ್ಧಾವಸ್ಥೆಯಲ್ಲಿಯೇ ವ್ಯಸನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಮಾನವನ ಸರ್ವತೋಮುಖ ಬೆಳವಣಿಗೆಗೆ ಕಂಟಕವಾಗಿರುವ ಈ ವ್ಯಸನಗಳಿಂದ ಆತ್ಮ ಸಂಯಮದ ಮೂಲಕ ಮುಕ್ತಿ ಹೊಂದಬಹುದಾಗಿದೆ.  ಈ ಹಿನ್ನೆಲೆಯಲ್ಲಿ ಇಂದಿನ ಯುವಜನಾಂಗ ತಮ್ಮ ತಂದೆ-ತಾಯಿಯರ ಭರವಸೆ ಉಳಿಸಿಕೊಳ್ಳುವ ಸಲುವಾಗಿ ವ್ಯಸನಗಳಿಂದ ದೂರವಿರಬೇಕು. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡಾ ದುಶ್ಚಟ ಮಾಡದಂತಹ ದೃಢ ನಿರ್ಧಾರ ಕೈಗೊಳ್ಳುವ ಮೂಲಕ ಮತ್ತೊಬ್ಬರಿಗೆ ಆದರ್ಶಪ್ರಾಯವಾಗಿರುವಂತೆ ಬೆಳೆಯಬೇಕು ಎಂದು ಕರೆ ನೀಡಿದ ಅವರು, ಸರ್ಕಾರ ಕೂಡಾ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಯುವಜನತೆಯನ್ನು ಗುರುಯಾಗಿಸಿಕೊಂಡು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳೆಲ್ಲರು ಸಹಕರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
     ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಪ್ಪಳದ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಸಜ್ಜನ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಇರುತ್ತದೆ. ಮಾದಕ ವ್ಯಸನಗಳು ಇಂತಹ ಸಾಮಥ್ರ್ಯವನ್ನು ಕಡಿಮೆಗೊಳಿಸುತ್ತವೆ ಎಂದರು.
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣಪ್ಪ ಸಿಂಗನಾಳ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವ್ಯಸನಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲಾಗುತ್ತಿದೆ.   ಮಾನವನ ದೇಹದಲ್ಲಿ ಅಷ್ಟೊಂದು ದೈಹಿಕ ಬದಲಾವಣೆ ತರುವ ಇಂತಹ ಮಾದಕ ವ್ಯಸನಗಳು ಕುತೂಹಲದಿಂದ ಆರಂಭವಾಗಿ, ಬರುಬರುತ್ತ ಜೀವನದಲ್ಲಿ ಬಿಟ್ಟಿರಲಾರದಷ್ಟು ಅವಲಂಬಿತವಾಗುತ್ತವೆ. ಅಲ್ಲದೆ, ಮಾನಸಿಕವಾಗಿ ಜರ್ಜರಿತಗೊಳಿಸಿ, ಆತ್ಮಹತ್ಯೆಯೆಡೆಗೆ ನೂಕುತ್ತವೆ ಎಂದರು.
     ಸಮಾರಂಭದಲ್ಲಿ ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ   ಎಂ.ಅವಿನಾಶ, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಂತಕುಮಾರ, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

ಮಾದಕ ವಸ್ತುಗಳಿಂದ ಮನುಷ್ಯನ ಸಾಮಥ್ರ್ಯ ಕ್ಷೀಣ : ಶ್ರೀಕಾಂತ ಸಜ್ಜನ


 ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ) : ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಶಕ್ತಿ, ಸಾಮಥ್ರ್ಯ ಕ್ಷೀಣಿಸುತ್ತದೆ. ಎಂದು ಕೊಪ್ಪಳದ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಸಜ್ಜನ ಹೇಳಿದರು. 

     ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ  ಸಂಸ್ಥೆ ಹಾಗೂ ಬಸಮ್ಮ ಕಾತರಕಿ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಗರದ ಬಸಮ್ಮ ಕಾತರಕಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಅವರು ಮಾತನಾಡಿದರು. 

     ಮಾದಕ ವಸ್ತುಗಳಿಂದ ಮಾನವನ ಜ್ಞಾಪಕ ಶಕ್ತಿ ಕುಂದುತ್ತದೆ, ಅಸಹಜ ವಯಸ್ಸಾಗುವಿಕೆ, ಏಕಾಗ್ರತೆ, ವಿಶ್ಲೇಷಣಾ ಶಕ್ತಿ, ಯೋಚನಾ ಶಕ್ತಿ, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತೊದಲುವಿಕೆ, ಅತಿಯಾದ ಉಸಿರಾಟ, ಅಧಿಕ ರಕ್ತದ ಒತ್ತಡ, ಸೋಮಾರಿತನ, ನಿಶ್ಯಕ್ತಿ, ನಿದ್ರಾಹೀನತೆ ಸೇರಿದಂತೆ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಅಲ್ಲದೇ ಸಾಂಸಾರಿಕವಾಗಿ ಕಲಹಗಳುಂಟಾಗುತ್ತವೆ. ಮಾನವನ ಜೀವಿತಾವಧಿಯಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುವ ಹೃದಯದ ಮೇಲೆ ಮದ್ಯ ಮಾದಕಗಳು ನೇರ ಪರಿಣಾಮವನ್ನುಂಟು ಮಾಡುತ್ತವೆ.  ಪ್ರಪಂಚದ ಎಲ್ಲ ಪ್ರಾಣಿಗಳು ಕೂಡಾ ಈ ಆಧುನಿಕ ಯುಗಕ್ಕೆ ಹೊಂದಿಕೊಂಡು ಚುರುಕುಗೊಳ್ಳುತ್ತಿವೆ ಆದರೆ, ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ ಮಾತ್ರ ಮದ್ಯ ಮತ್ತು ಮಾದಕ ವಸ್ತುಗಳ ಮೇಲೆ ಅವಲಂಬಿತನಾಗಿ ಮುರ್ಖನೆನಿಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.
     ಪ್ರಕೃತಿ ಸಹಜವಾಗಿರುವ ಸಂಸ್ಕøತಿಯನ್ನು ಕಡೆಗಣಿಸಿ ಮನುಷ್ಯ ವಿಕೃತ ಮನಸ್ಥಿತಿಯೆಡೆಗೆ ಬಂದು ನಿಂತಿದ್ದಾನೆ. ಇಂತಹ ಮನುಷ್ಯ ಜೀವಿಯ ವೈಭವೋಪೇತ ಜೀವನದ ಕೊಡುಗೆಗಳಾಗಿರುವ ಈ ಮದ್ಯ, ಮಾದಕಗಳಿಗೆ ಹೆಚ್ಚಾನುಹೆಚ್ಚಾಗಿ ದೇಶದ ಯುವಜನತೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ವಿಕೃತಿಗಳ ತಡೆಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಾರ್ತಾ ಮತ್ತು ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅಗತ್ಯ ಸಹಕಾರ ನೀಡಿ, ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡಯ್ಯಬೇಕಿದೆ ಎಂದು ಶ್ರೀಕಾಂತ ಸಜ್ಜನ್ ಅವರು ಹೇಳಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎನ್.ಪಿ.ಮಂಟೂರು ಮಾತನಾಡಿ, ಈ ಹಿಂದೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಆಗಿನ ಕಾಲದ ಸಾರ್ವಜನಿಕರಲ್ಲಿ ಸರಳತೆ ಹಾಗೂ ತಿಳುವಳಿಕೆ ಹಾಸುಹೊಕ್ಕಾಗಿತ್ತು. ಆದರೆ ಇಂದು ಕ್ರಮೇಣ ಹೆಚ್ಚಾಗುತ್ತಿರುವ ಮದ್ಯ ಮಾದಕ ವ್ಯಸನಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.  ಪಾಶ್ಚಿಮಾತ್ಯ ಸಂಸ್ಕøತಿಯ  ಜೀವನಕ್ರಮವನ್ನು ಅನುಸರಿಸುವ ಮೂಲಕ ಮಾನವ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾನೆ.  ಇದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಸಾಂಪ್ರದಾಯಿಕ ಜೀವನ ಶೈಲಿ ಆರಂಭಿಸುವ ಮೂಲಕ ಮದ್ಯ ಹಾಗೂ ಮಾದಕ ವ್ಯಸನಗಳಿಂದ ಮುಕ್ತಿ ಹೊಂದಬಹುದಾಗಿದೆ ಎಂದು ಅವರು ಸಲಹೆ ನೀಡಿದರು.    
     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯೋಜಕ ಶರಣಪ್ಪ ಸಿಂಗನಾಳ ಅವರು ಜಿಲ್ಲಾ ಮಕ್ಕಳ ಸಹಾಯವಾಣಿ 1098 ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ  ಎಂ.ಅವಿನಾಶ, ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ 1098) ಸಂಸ್ಥೆಯ ಶಾಂತಕುಮಾರ, ಕಾಲೇಜಿನ ಉಪನ್ಯಾಸಕರಾದ ಚಕ್ರಸಾಲಿ, ಸಿ.ಬಿ. ಚಿತ್ತರಗಿ ಉಪಸ್ಥಿತರಿದ್ದರು.

ವಿಧಾನಪರಿಷತ್ ಚುನಾವಣೆ : ಮತದಾರರಿಗೆ ಸೂಚನೆಗಳು

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. 27 ರಂದು ಮತದಾನ ನಡೆಯಲಿದ್ದು, ಮತ ಚಲಾವಣೆ ಸಂದರ್ಭದಲ್ಲಿ ಮತದಾರರು ಅನುಸರಿಸುವ ವಿಧಾನಗಳ ಬಗ್ಗೆ ಮತದಾರರಿಗೆ ಸೂಚನೆಗಳನ್ನು ನೀಡಲಾಗಿದೆ.
          ಮತ ಚಲಾಯಿಸುವ ಸಂದರ್ಭದಲ್ಲಿ ಮತದಾನ ಕೇಂದ್ರದಲ್ಲಿ ಮತಪತ್ರದೊಡನೆ ನೀಡಲಾಗುವ ನೇರಳೆ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಬೇಕು.  ಬೇರೆ ಯಾವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ ಅಥವಾ ಗುರುತು ಮಾಡುವ ಯಾವುದೇ ಇತರ ಸಾಧನವನ್ನು ಬಳಸಿ ಮತ ಚಲಾಯಿಸಿದಲ್ಲಿ, ಅಂತಹ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುವುದು.  ಮತದಾರರು ತಮ್ಮ ಮೊದಲನೆ ಪ್ರಾಶಸ್ತ್ಯವಾಗಿ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ಅಂತಹ ಅಭ್ಯರ್ಥಿಯ ಹೆಸರಿನ ಮುಂದೆ ಒದಗಿಸಲಾಗಿರುವ ``ಪ್ರಾಶಸ್ತ್ಯಕ್ರಮ'' ಎಂದು ಗುರುತು ಮಾಡಲಾಗಿರುವ ಅಂಕಣದಲ್ಲಿ ಅಂಕಿ ``1'' ಅನ್ನು ಗುರುತು ಹಾಕುವ ಮೂಲಕ ಮತ ನೀಡಬೇಕು. ಈ ಅಂಕಿ ``1'' ಅನ್ನು ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು.  ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳನ್ನು ಚುನಾಯಿಸಬೇಕಿದ್ದ ಪಕ್ಷದಲ್ಲಿ ಸಹ, ಅಂಕಿ ``1'' ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಮಾತ್ರ ಗುರುತು ಹಾಕಬೇಕು. ಉಳಿದ ಅಭ್ಯರ್ಥಿಗಳಿಗೆ ತಮ್ಮ ಮುಂದಿನ ಪ್ರಾಶಸ್ತ್ಯಗಳನ್ನು ಗುರುತು ಹಾಕುವುದಕ್ಕಾಗಿ, ಅಂತಹ ಅಭ್ಯರ್ಥಿಗಳ ಹೆಸರುಗಳ ಮುಂದೆ ಒದಗಿಸಲಾಗಿರುವ “ಪ್ರಾಶಸ್ತ್ಯಕ್ರಮ” ಎಂಬ ಅಂಕಣದಲ್ಲಿ ತರುವಾಯದ ಅಂಕಿಗಳಾದ 2, 3, 4 ಇತ್ಯಾದಿಗಳನ್ನು ಪ್ರಾಶಸ್ತ ಕ್ರಮದಲ್ಲಿ ಗುರುತು ಹಾಕುವ ಮೂಲಕ ತಮ್ಮ ಮತ ನೀಡಬೇಕು.  ಚುನಾಯಿಸಬೇಕಾಗಿರುವ ಅಭ್ಯರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆಯಷ್ಟೇ ಪ್ರಾಶಸ್ತ್ಯಗಳನ್ನು ಮತದಾರರು ಹೊಂದಿರುತ್ತಾರೆ.  ಉದಾಹರಣಗೆ: ಚುನಾಯಿಸಬೇಕಾಗಿರುವ ಸ್ಥಾನ ಒಂದು ಅಥವಾ ಎರಡು ಆಗಿದ್ದು, ಐದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಲ್ಲಿ, ಪ್ರಾಶಸ್ತ್ಯದ ಕ್ರಮದಲ್ಲಿ ಐದು ಪ್ರಾಶಸ್ತ್ಯಗಳನ್ನು ಗುರುತು ಹಾಕಬಹುದು.  ಮತದಾರರು ಮತ ಚಲಾಯಿಸುವಾಗ ಅಭ್ಯರ್ಥಿಯ ಹೆಸರಿನ ಮುಂದೆ ಕೇವಲ ಒಂದು ಅಂಕಿಯನ್ನು ಮಾತ್ರ ತಾವು ಗುರುತು ಹಾಕಿರುವುದನ್ನು ಖಚಿತಪಡಿಸಿಕೊಳ್ಳಬೇಕು.  ಮತ್ತು ಅದೇ ಅಂಕಿಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳ ಮುಂದೆ ಗುರುತು ಹಾಕಿರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಬೇಕು. 
           ಪ್ರಾಶಸ್ತ್ಯವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ, 1, 2, 3, ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು.  ಇದರ ಬದಲಾಗಿ ಒಂದು, ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು.  ಅಂಕಿಗಳನ್ನು 1, 2, 3 ಇತ್ಯಾದಿ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳಲ್ಲಿ ಅಥವಾ I, II, III ಇತ್ಯಾದಿ ರೋಮನ್ ಅಂಕಿಗಳ ರೂಪದಲ್ಲಿ ಅಥವಾ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಮಾನ್ಯ ಮಾಡಲಾಗಿರುವ ಭಾರತದ ಯಾವುದೇ ಭಾಷೆಯಲ್ಲಿ ಬಳಸಲಾಗುವ ಅಂಕಿಗಳ ರೂಪದಲ್ಲಿ ಗುರುತು ಹಾಕಬಹುದಾಗಿದೆ.  ಮತಪತ್ರದ ಮೇಲೆ ಮತದಾರರು ತಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಮತ್ತು ತಮ್ಮ ಸಹಿ ಅಥವಾ ಇನ್ಷಿಯಲ್‍ಗಳನ್ನು ಅಥವಾ  ತಮ್ಮ ಹೆಬ್ಬೆಟ್ಟಿನ ಗುರುತನ್ನೂ ಹಾಕಬಾರದು.  ಒಂದು ವೇಳೆ ಈ ರೀತಿ ಮಾಡಿದಲ್ಲಿ, ಅಂತಹ ಮತಪತ್ರ ಅಸಿಂಧುವಾಗುತ್ತದೆ. ತಮ್ಮ ಪ್ರಾಶಸ್ತ್ಯವನ್ನು ಸೂಚಿಸುವುದಕ್ಕಾಗಿ, ತಮ್ಮ ಆಯ್ಕೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ ಅಂಕಿಯನ್ನಲ್ಲದೇ ಇನ್ನಾವುದೇ ಚಿಹ್ನೆಅಥವಾ "ಘಿ" ಗುರುತನ್ನು ಹಾಕಬಾರದು.  ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು.  ಆದ್ದರಿಂದ, ತಮ್ಮ ಪ್ರಾಶಸ್ತ್ಯಗಳನ್ನು ಈ ಮೇಲೆ ವಿವರಿಸಿರುವಂತೆ 1, 2, 3 ಇತ್ಯಾದಿ ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು.  ಮತಪತ್ರವನ್ನು ಸಿಂಧು ಎಂದು ಪರಿಗಣಿಸುವುದಕ್ಕಾಗಿ ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಅಂಕಿ ``1'' ಅನ್ನು ಗುರುತು ಹಾಕುವ ಮೂಲಕ ಮತದಾರರು ತಮ್ಮ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕವಾಗಿರುತ್ತದೆ. ಮತದಾರರು ತಮ್ಮ ಎರಡನೆಯ ಅಥವಾ ತರುವಾಯದ ಪ್ರಾಶಸ್ತ್ಯಗಳನ್ನು ಸೂಚಿಸಬಹುದಾಗಿದೆ ಅಥವಾ ಸೂಚಿಸದೇಯೂ ಇರಬಹುದಾಗಿದೆ.
ಅಸಿಂಧುಗೊಳ್ಳುವ ಮತಪತ್ರಗಳು : ಮತಪತ್ರವು, ಈ ಮುಂದೆ ವಿವರಿಸಿರುವ ಯಾವುದೇ ಒಂದು ಕಾರಣದಿಂದ ಅಸಿಂಧುವಾಗುತ್ತದೆ. ಮೊದಲನೆಯ ಪ್ರಾಶಸ್ತ್ಯವನ್ನುಅಂಕಿಯಲ್ಲಿಅಂದರೆ, 1 ಅನ್ನು ಗುರುತು ಹಾಕದಿದ್ದರೆ.  ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ಅಂಕಿ 1 ಅನ್ನು ಗುರುತು ಹಾಕಿದರೆ.  ನಮೂದಿಸಿರುವ ಮೊದಲನೆ ಪ್ರಾಶಸ್ತ್ಯ ಯಾವ ಅಭ್ಯರ್ಥಿಗೆ ಅನ್ವಯವಾಗುತ್ತದೆ ಎಂಬುದನ್ನು ನಿರ್ಣಯಿಸುವುದು ಅನುಮಾನವಾದಾಗ. ಅಂಕಿ 1 ಅನ್ನು ಮತ್ತು 2, 3, ಇತ್ಯಾದಿ ಇತರ ಅಂಕಿಗಳನ್ನು ಸಹ ಒಬ್ಬನೇ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಹಾಕಿದರೆ. ಪ್ರಾಶಸ್ತ್ಯಗಳನ್ನು ಅಂಕಿಗಳ ಬದಲಾಗಿ ಅಕ್ಷರಗಳಲ್ಲಿ ಬರೆದಿದ್ದರೆ. ಮತದಾರನನ್ನು ಗುರುತಿಸಬಹುದಾದ ಯಾವುದೇ ಚಿಹ್ನೆ ಅಥವಾ ಬರಹವುಳ್ಳ ಮತಪತ್ರ. ಅಂಕಿಗಳನ್ನು ಗುರುತು ಹಾಕುವ ಉದ್ದೇಶಕ್ಕಾಗಿ ಚುನಾವಣಾಧಿಕಾರಿಯು ಒದಗಿಸಿದ ನೇರಳೆ ಬಣ್ಣದ ಸ್ಕೆಚ್ ಪೆನ್ನಿನ ಬದಲಾಗಿ, ಬೇರೆ ಯಾವುದೇ ಬಣ್ಣದ ಪೆನ್ನು ಅಥವಾ ಇತರ ಸಾಧನದಿಂದ ಅಂಕಿಯನ್ನು ಗುರುತು ಹಾಕಿದರೆ ಅಂತಹ ಮತ ಅಸಿಂಧುಗೊಳ್ಳುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ವಿಧಾನಪರಿಷತ್ ಚುನಾವಣೆ : 41 ಸೂಕ್ಷ್ಮ, 39 ಅತಿ ಸೂಕ್ಷ್ಮ ಮತಗಟ್ಟೆಗಳು

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. 27 ರಂದು ಮತದಾನ ನಡೆಯಲಿದ್ದು, ಸುಗಮ ಮತದಾನಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮತದಾನ ಕೇಂದ್ರಗಳ ವಿವರ : ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 161 ಮತಗಟ್ಟೆಗಳಿವೆ.  ಕೊಪ್ಪಳ ಜಿಲ್ಲೆಯ 152 ಗ್ರಾಮ ಪಂಚಾಯತಿ ಕಚೇರಿ, 04- ತಾಲೂಕಾ ಪಂಚಾಯತಿ ಕಚೇರಿ, 01-ಜಿ.ಪಂ. ಕಚೇರಿ ಹಾಗೂ 04-ನಗರಸಭೆ/ಪುರಸಭೆ/ಪ.ಪಂಚಾಯತಿ ಕಚೇರಿಗಳಲ್ಲಿ ಸೇರಿದಂತೆ ಒಟ್ಟು 161 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-38, ತಾಲೂಕಾ ಪಂಚಾಯತಿ-01, ಜಿಲ್ಲಾ ಪಂಚಾಯತಿ-01 ಮತ್ತು ಕೊಪ್ಪಳ ನಗರಸಭೆ-01 ಸೇರಿದಂತೆ ಒಟ್ಟು 41 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.  ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-42, ತಾಲೂಕಾ ಪಂಚಾಯತಿ-01, ನಗರಸಭೆ-01 ಕಚೇರಿ ಸೇರಿದಂತೆ ಒಟ್ಟು 44 ಮತದಾನ ಕೇಂದ್ರಗಳು. ಯಲಬುರ್ಗಾ ತಾಲೂಕಿನಲ್ಲಿ  ಗ್ರಾಮ ಪಂಚಾಯತಿ-36, ತಾಲೂಕಾ ಪಂಚಾಯತಿ-01, ಪಟ್ಟಣ ಪಂಚಾಯತಿ-01 ಕಚೇರಿಗಳು ಸೇರಿದಂತೆ ಒಟ್ಟು 38 ಮತದಾನ ಕೇಂದ್ರಗಳನ್ನು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ-36, ತಾಲೂಕಾ ಪಂಚಾಯತಿ-01, ಪುರಸಭೆ-01 ಕಚೇರಿ ಸೇರಿದಂತೆ ಒಟ್ಟು 38 ಮತದಾನ ಕೇಂದ್ರಗಳಿವೆ.
41 ಸೂಕ್ಷ್ಮ, 39 ಅತಿ ಸೂಕ್ಷ್ಮ : ಜಿಲ್ಲೆಯಲ್ಲಿನ 161 ಮತಗಟ್ಟೆಗಳ ಪೈಕಿ ಒಟ್ಟು 41 ಸೂಕ್ಷ್ಮ ಮತಗಟ್ಟೆಗಳು ಹಾಗೂ 39 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತುಸಲಾಗಿದೆ.  ಸೂಕ್ಷ್ಮ ಮತಗಟ್ಟೆಗಳ ಪೈಕಿ ಕೊಪ್ಪಳ-10, ಗಂಗಾವತಿ-11, ಯಲಬುರ್ಗಾ-10, ಕುಷ್ಟಗಿ-10.  ಅತಿಸೂಕ್ಷ್ಮ ಮತಗಟ್ಟೆಗಳ ಪೈಕಿ ಕೊಪ್ಪಳ-10, ಗಂಗಾವತಿ-11, ಯಲಬುರ್ಗಾ ಮತ್ತು ಕುಷ್ಟಗಿ ತಲಾ 09 ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಉಳಿದಂತೆ 81 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ. 
ಮತದಾರರ ವಿವರ : ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತಿ ಸದಸ್ಯರು, ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಸದಸ್ಯರು, ಸಂಸದರು, ಶಾಸಕರುಗಳು ಹಾಗೂ ವಿಧಾನಪರಿಷತ್ ಸದಸ್ಯರು ಮತದಾರರಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2987 ಮತದಾರರಿದ್ದಾರೆ.
     ಕೊಪ್ಪಳ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-729, ತಾಲೂಕಾ ಪಂಚಾಯತಿ-26, ಜಿಲ್ಲಾ ಪಂಚಾಯತಿ-27, ನಗರಸಭೆ-31, ಒಬ್ಬರು ಸಂಸದರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು 815 ಜನ ಮತದಾರರು ಮತ ಚಲಾಯಿಸಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-797, ತಾಲೂಕಾ ಪಂಚಾಯತಿ-31, ನಗರಸಭೆ-34, ಇಬ್ಬರು ಶಾಸಕರು ಸೇರಿದಂತೆ ಒಟ್ಟು 864 ಜನ ಮತದಾರರಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-595, ತಾಲೂಕಾ ಪಂಚಾಯತಿ-23, ಪಟ್ಟಣ ಪಂಚಾಯತಿ-14, ಒಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬರು ಶಾಸಕರು ಸೇರಿದಂತೆ ಒಟ್ಟು 634 ಜನ ಮತದಾರರಿದ್ದಾರೆ. ಕುಷ್ಟಗಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ-623, ತಾಲೂಕಾ ಪಂಚಾಯತಿ-22, ಪುರಸಭೆ-28, ಒಬ್ಬರು ಶಾಸಕರು ಸೇರಿದಂತೆ ಒಟ್ಟು 674 ಜನ ಮತದಾರರಿದ್ದಾರೆ.
483 ಸಿಬ್ಬಂದಿಗಳು : ಚುನಾವಣೆಯನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಒಟ್ಟು 483 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕರು ಸೇರಿದಂತೆ ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಕೊಪ್ಪಳ-123, ಗಂಗಾವತಿ-132, ಯಲಬುರ್ಗಾ-114, ಕುಷ್ಟಗಿ-114 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.  ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ಇದರ ಜೊತೆಗೆ ಜಿಲ್ಲೆಯಲ್ಲಿ ಒಟ್ಟು 30 ಸೆಕ್ಟರಲ್ ಮ್ಯಾಜಿಸ್ಟ್ರೇಟ್ಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮೈಕ್ರೋ ಅಬ್ಸರ್ವರ್ಸ್ ನೇಮಕ : ಜಿಲ್ಲೆಯಲ್ಲಿ ಪ್ರತಿ ಮತಗಟ್ಟೆಗೆ ಒಬ್ಬರು ಅಧಿಕಾರಿಗಳಂತೆ ಒಟ್ಟು 161 ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಿಸಲಾಗಿದ್ದು, ಕೊಪ್ಪಳ-41, ಗಂಗಾವತಿ-44, ಯಲಬುರ್ಗಾ-38, ಕುಷ್ಟಗಿ-38 ಮೈಕ್ರೋ ಅಬ್ಸರ್ವರ್ಸ್ ಕಾರ್ಯ ನಿರ್ವಹಿಸುವರು.  ನೀತಿ ಸಂಹಿತೆ ಕುರಿತು ನಿಗಾ ವಹಿಸಲು ಪ್ರತಿ ತಾಲೂಕಿಗೆ ಮೂರು ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ ತಲಾ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿ, ಅಬಕಾರಿ ಇನ್ಸ್‍ಪೆಕ್ಟರ್ ಹಾಗೂ ಒಬ್ಬರು ಪೊಲೀಸ್ ಕಾನ್ಸ್‍ಟೇಬಲ್ ಇರುತ್ತಾರೆ.  ಜಿಲ್ಲೆಗೆ ಒಟ್ಟು 12 ಎಂ.ಸಿ.ಸಿ. ತಂಡಗಳನ್ನು ನೇಮಿಸಲಾಗಿದೆ.
91 ವಾಹನಗಳು : ಚುನಾವಣಾ ಕಾರ್ಯಕ್ಕಾಗಿ ಒಟ್ಟು 91 ವಾಹನಗಳನ್ನು ಬಳಸಲಾಗುತ್ತಿದ್ದು, ಕೊಪ್ಪಳ-26, ಗಂಗಾವತಿ-32, ಯಲಬುರ್ಗಾ-13 ಮತ್ತು ಕುಷ್ಟಗಿ ತಾಲೂಕಿನಲ್ಲಿ 20 ವಾಹನಗಳನ್ನು ಬಳಸಲಾಗುತ್ತಿದೆ.
741 ಅನಕ್ಷರಸ್ಥ ಮತದಾರರು :  ಜಿಲ್ಲೆಯಲ್ಲಿ ಡಿ. 27 ರಂದು ಜರುಗುವ ವಿಧಾನಪರಿಷತ್ ಚುನಾವಣೆಯಲ್ಲಿ 741 ಅನಕ್ಷರಸ್ಥ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.   ಮತದಾರರು ಒಂದು ವೇಳೆ ಅನಕ್ಷರಸ್ಥ, ಕುರುಡ ಹಾಗೂ ದುರ್ಬಲನಾಗಿದ್ದರೆ ಚುನಾವಣೆ ನಿಯಮಗಳನ್ವಯ ಇಂತಹ ವ್ಯಕ್ತಿಗಳು ಸಹಾಯಕ್ಕಾಗಿ ಒಬ್ಬ ಸಂಗಡಿಗನನ್ನು ಮತಗಟ್ಟೆಗೆ ಕರೆದುಕೊಂಡು ಹೋಗಬಹುದಾಗಿದೆ. ಆದರೆ ಸಂಗಡಿಗನು 18 ವರ್ಷ ವಯಸ್ಸಿನ ಒಳಗಿನವನಾಗಿರಬಾರದು ಮತ್ತು ಆತನು ಓದಲು ಹಾಗೂ ಮತದಾರನ ಇಚ್ಛೆಯಂತೆ ಮತದಾರನ ಪರವಾಗಿ ಮತಪತ್ರದ ಮೇಲೆ ಮತ ದಾಖಲಿಸಲು ಶಕ್ತನಾಗಿರಬೇಕು.  ಒಬ್ಬ ಸಂಗಡಿಗನು ಒಬ್ಬ ಮತದಾರನಿಗಿಂತ ಹೆಚ್ಚಿನ ಮತದಾರರಿಗೆ ಸಂಗಡಿಗನಾಗಲು ಬರುವುದಿಲ್ಲ. ಅಲ್ಲದೆ, ಸಂಗಡಿಗನು ಮತದಾನದ ರಹಸ್ಯ ಗೌಪ್ಯತೆಯನ್ನು ಕಾಪಾಡುವುದಾಗಿ ಮತ್ತು ಇನ್ನೊಬ್ಬ ಮತದಾರನಿಗೆ ಸಂಗಡಿಗನಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮತದಾನ ಕೇಂದ್ರದ ಅಧಿಕಾರಿಯ ಮುಂದೆ ಘೋಷಣೆ ಮಾಡಿ, ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿಯ ಅನುಮತಿ ಪಡೆಯಬೇಕು. ಮತದಾನ ತಪ್ಪಾದಲ್ಲಿ ಎರಡನೇ ಮತಪತ್ರವನ್ನು ನೀಡುವ ಅವಕಾಶ ಚುನಾವಣೆಯಲ್ಲಿ ಇರುವುದಿಲ್ಲ.
     ಡಿ. 27 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಸುಗಮವಾಗಿ, ಶಾಂತಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿದ್ದಾರೆ.

ಈಜು ಶಿಕ್ಷಕರು ಹಾಗೂ ಜೀವರಕ್ಷಕರ ತರಬೇತಿ :ಅರ್ಜಿ ಆಹ್ವಾನ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣಗೊಂಡ ಈಜುಕೊಳಗಳಲ್ಲಿ ಈಜು ಶಿಕ್ಷಕರು/ ಜೀವರಕ್ಷಕರ ಸೇವೆಯ ತರಬೇತಿಗಾಗಿ   ಅರ್ಹ ಯುವ ಜನರಿಂದ ಅರ್ಜಿ ಆಹ್ವಾನಿಸಲಾಗಿದೆ.
      ತರಬೇತಿಗೆ 18 ರಿಂದ 28ರ ವಯೋಮಿತಿಯೊಳಗಿನ ಅರ್ಹ ಈಜು ಶಿಕ್ಷಕರು ಹಾಗೂ  ಜೀವರಕ್ಷಕರ ತರಬೇತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಇತರೆ ಸಾಮಾನ್ಯ ವರ್ಗದ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ.   ಆಯ್ಕೆಗೆ ಮಾನದಂಡಗಳು ಇಂತಿವೆ.    Swim (with Recognized technique) 25M Freestyle, 25M Backstroke, 25M each survival strokes.  Comfortably enter deeper water and scull or tread water for 3 minits.  Submerge to a depth of 1.5 m (minimum) and retrieve a submerged object.  Tow a partner (why may be using a buoyant aid for support) a distance of 15M.  Have some basic body orientation skills i.e. rotate from front to back (and reverse) float in a variety of body positions.

ಈ ಮಾನದಂಡಗಳಿಗೆ ಅನ್ವಯವಾಗುವಂತೆ ಅರ್ಹರು ಡಿ. 30 ರೊಳಗಾಗಿ ತಮ್ಮ ಸಂಪೂರ್ಣವಾದ ವಿವರದೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಕಛೇರಿ ದೂರವಾಣಿ ಸಂಖ್ಯೆ : 08539-201400 ಮತ್ತು ಮೊಬೈಲ್ ಸಂಖ್ಯೆ : 7899432227ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಲ್ಟಿಜಿಮ್ ನಿರ್ವಹಣೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಲ್ಟಿಜಿಮ್‍ಗಳ ನಿರ್ವಹಣೆಯ ಬಗ್ಗೆ ಯುವ ಜನರಿಗೆ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಇಲಾಖೆ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಮಲ್ಟಿಜಿಮ್‍ಗಳನ್ನು ಅಳವಡಿಸಲಾಗುತ್ತಿದ್ದು, ಇಂತಹ ಮಲ್ಟಿಜಿಮ್‍ಗಳ ನಿರ್ವಹಣೆ ಮಾಡಲು ಯುವಜನರ ಸೇವೆ ಅವಶ್ಯಕತೆ ಇರುತ್ತದೆ. ಈ ಹಿನ್ನಲೆಯಲ್ಲಿ ಯುವ ಜನರಿಗೆ ಮಲ್ಟಿಜಿಮ್ ನಿರ್ವಹಣೆ ಕುರಿತ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 18 ರಿಂದ 28ರ ವಯೋಮಿತಿಯೊಳಗಿರಬೇಕು. ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಲ್ಟಿಜಿಮ್ ಉಪಕರಣಗಳನ್ನು ಉಪಯೋಗಿಸಿ ಅನುಭವ ಹೊಂದಿರಬೇಕು.  ತರಬೇತಿಗೆ ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಇತರೆ ಸಾಮಾನ್ಯ ವರ್ಗದ ಯುವಜನರು ಅರ್ಜಿ ಸಲ್ಲಿಸಬಹುದಾಗಿದೆ.    ಆಸಕ್ತ ಅರ್ಹರು ಡಿ. 30 ರ ಒಳಗಾಗಿ ಕೊಪ್ಪಳದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಮ್ಮ ಸಂಪೂರ್ಣವಾದ ವಿವರದೊಂದಿಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಅಥವಾ ಕಛೇರಿ ದೂರವಾಣಿ ಸಂಖ್ಯೆ : 08539-201400 ಮತ್ತು ಮೊಬೈಲ್ ಸಂಖ್ಯೆ : 7899432227ಗೆ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುವೆಂಪು ಜನ್ಮ ದಿನ : ಡಿ. 29 ರಂದು ವಿಶ್ವ ಮಾನವ ದಿನ ಆಚರಣೆ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಬಾರಿಗೆ ಕುವೆಂಪು ಜನ್ಮ ದಿನಾಚರಣೆಯನ್ನು ‘ವಿಶ್ವ ಮಾನವ ದಿನ’ ವನ್ನಾಗಿ ಡಿ. 29 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ-ಕುಣಿಕೇರಿ ರಸ್ತೆಯಲ್ಲಿರುವ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
     ಕುವೆಂಪು ಜನ್ಮ ದಿನಾಚರಣೆಯನ್ನು ‘ವಿಶ್ವ ಮಾನವ ದಿನ’ ವನ್ನಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದರ ಅಂಗವಾಗಿ ಕೊಪ್ಪಳದ ಕುವೆಂಪು ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.  ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು.  ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅತಿಥಿಗಳಾಗಿ ಭಾಗವಹಿಸುವರು.  ಇದೇ ಸಂದರ್ಭದಲ್ಲಿ ಕುವೆಂಪು ಅವರ ಕುರಿತು ಕುವೆಂಪು ಪ್ರೌಢಶಾಲೆಯ ಇತಿಹಾಸ ಅಧ್ಯಾಪಕಿ ಸುಜಾತ ಚಿಮ್ಮನಪಲ್ಲಿ ವಿಚಾರ ಮಂಡಿಸಲಿದ್ದು, ಭಾಗ್ಯನಗರದ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ಕಲಾವಿದರು ಕುವೆಂಪು ವಿರಚಿತ ಗೀತಗಾಯನ ನಡೆಸಿಕೊಡುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.

Thursday, 24 December 2015

ನಗರ, ಪಟ್ಟಣಗಳಲ್ಲಿ ಡಿ. 31 ರೊಳಗೆ ಸೆಟ್‍ಟಾಪ್ ಬಾಕ್ಸ್ ಅಳವಡಿಕೆ ಕಡ್ಡಾಯ

ಕೊಪ್ಪಳ ಡಿ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್‍ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು 2015 ರ ಡಿಸೆಂಬರ್ 31 ರೊಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಕಡ್ಡಾಯವಾಗಿ ಡಿಜಿಟೈಜೇಶನ್‍ಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಕೇಬಲ್ ಆಪರೇಟರ್ಸ್‍ಗಳಿಗೆ ಸೂಚನೆ ನೀಡಿದ್ದಾರೆ.
     ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಆದೇಶದನ್ವಯ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್‍ಗೊಳಿಸಬೇಕು.  ಈಗಾಗಲೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ.  ಇದರ ಅನ್ವಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೇಬಲ್ ಟಿ.ವಿ. ವೀಕ್ಷಕರು ಸದ್ಯ ಅನಲಾಗ್ ಮೋಡ್‍ನಲ್ಲಿರುವ ಪ್ರಸಾರ ವ್ಯವಸ್ಥೆಯನ್ನು 2015 ರ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ಸ್ ಅಳವಡಿಸಿಕೊಳ್ಳುವ ಮೂಲಕ ಡಿಜಿಟೈಜೇಶನ್‍ಗೆ ಪರಿವರ್ತನೆ ಮಾಡಿಕೊಳ್ಳಬೇಕು.  ಅದೇ ರೀತಿ ಗ್ರಾಮೀಣ ಪ್ರದೇಶದ ಕೇಬಲ್ ಟಿ.ವಿ. ವೀಕ್ಷಕರು 2016 ರ ಡಿಸೆಂಬರ್ 31 ರ ಒಳಗಾಗಿ ಡಿಜಿಟೈಜೇಶನ್‍ಗೊಳಿಸಬೇಕು.  ಈ ವ್ಯವಸ್ಥೆಯನ್ನು ಸಂಬಂಧಪಟ್ಟ ಕೇಬಲ್ ಆಪರೇಟರ್ಸ್‍ಗಳು ಹಾಗೂ ಮಲ್ಟಿ ಸಿಸ್ಟಂ ಆಪರೇಟರ್ಸ್‍ಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಅಳವಡಿಸಿಕೊಳ್ಳಬೇಕು. ಕೇಬಲ್ ಗ್ರಾಹಕರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟು, ಅನುಷ್ಠಾನಗೊಳಿಸಲೇಬೇಕಿದೆ.  ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲು ಕಾಲಾವಕಾಶ ಕಡಿಮೆ ಇದೆ.  ಸೆಟ್‍ಟಾಪ್ ಬಾಕ್ಸ್ ಅಳವಡಿಕೆಯಿಂದ ಕೇಬಲ್ ಟಿ.ವಿ. ಗ್ರಾಹಕರಿಗೆ ಆಗುವ ಅನುಕೂಲಗಳ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು.  ಡಿಸೆಂಬರ್ 31 ರ ನಂತರ ಅನಲಾಗ್ ವ್ಯವಸ್ಥೆಯಲ್ಲಿ ಕೇಬಲ್ ಟಿ.ವಿ. ಪ್ರಸಾರ ಕೈಗೊಳ್ಳುವ ಕೇಬಲ್ ಸಂಸ್ಥೆಗಳ ಉಪಕರಣವನ್ನು ಜಪ್ತಿ ಮಾಡಲಾಗುವುದು.   ಇದಕ್ಕೆ ಅವಕಾಶ ನೀಡದಂತೆ, ಕೇಬಲ್ ಆಪರೇಟರ್ಸ್‍ಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಡಿಸೆಂಬರ್ 31 ರ ಒಳಗಾಗಿ ಸೆಟ್‍ಟಾಪ್ ಬಾಕ್ ಅಳವಡಿಸುವ ಮೂಲಕ ಕಡ್ಡಾಯವಾಗಿ ಡಿಜಿಟೈಜೇಶನ್ ಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ರೈತರಿಗೆ ಕರೆ

ಕೊಪ್ಪಳ ಡಿ. 25 (ಕರ್ನಾಟಕ ವಾರ್ತೆ): ಕೃಷಿಯಲ್ಲಿನ ಆಧುನಿಕ ಅವಿಷ್ಕಾರಗಳು ಹಾಗೂ ಹೊಸ ಪದ್ಧತಿಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡು, ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಕೆ. ಮೇಟಿ ಅವರು ರೈತರಿಗೆ ಕರೆ ನೀಡಿದರು.

     ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ ಮತ್ತು ಸರ್ವೋದಯ ಸಂಸ್ಥೆ, ಕೊಪ್ಪಳ ಇವರ ಸಹಯೋಗದಲ್ಲಿ ಕುಷ್ಟಗಿ ತಾಲೂಕು ಹನುಮನಾಳ ಗ್ರಾಮದಲ್ಲಿ ಏರ್ಪಡಿಸಲಾದ ರೈತ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 
      ರೈತರಿಗೆ ಸೇವೆ ಸಲ್ಲಿಸಲೆಂದೇ ಕೃಷಿ ವಿಶ್ವವಿದ್ಯಾಲಯದ ವಿವಿಧ ಕೇಂದ್ರಗಳು ಅಲ್ಲದೆ ಕೃಷಿ, ತೋಟಗಾರಿಕೆ ಇಲಾಖೆಗಳಿವೆ.  ಕೃಷಿಯಲ್ಲಿ ಆವಿಷ್ಕಾರಗೊಳ್ಳುವ ಆಧುನಿಕ ಯಂತ್ರೋಪಕರಣಗಳು, ನೂತನ ಕೃಷಿ ಪದ್ಧತಿಗಳ ಬಗ್ಗೆ ರೈತರು ತಾಂತ್ರಿಕ ಮಾಹಿತಿ ಪಡೆದುಕೊಂಡು, ಜಾಗತೀಕರಣಕ್ಕೆ ಅನುಗುಣವಾಗಿ ಪ್ರಗತಿಪರರಾಗಬೇಕು.  ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಯಶಸ್ಸು ಪಡೆದಿರುವ ಹಲವಾರು ಪ್ರಗತಿ ಪರ ರೈತರ ಬಗ್ಗೆ ನಿದರ್ಶನಗಳು ನಮ್ಮ ಕಣ್ಣೆದುರಿಗಿವೆ.  ಇಂತಹ ರೈತರಿಂದ ಪ್ರೇರಿತರಾಗಿ, ಕೃಷಿಯಲ್ಲಿ ಯಶಸ್ಸು ಪಡೆದುಕೊಳ್ಳಬೇಕು ಎಂದು ಡಾ. ಎಸ್.ಕೆ. ಮೇಟಿ ಅವರು ಹೇಳಿದರು.
      ಹನುಮನಾಳ ಗ್ರಾಮದ ಪ್ರಗತಿಪರ ರೈತ ಪಿ.ಎಸ್ ನಾಗರಾಳ ಅವರು ಮಾತನಾಡಿ, ಕೃಷಿ ಬೆಳೆಗಳ ಜೊತೆಗೆ, ಕೃಷಿ ಅರಣ್ಯ ಮತ್ತು ತೋಟಗಾರಿಕೆ ಬೆಳೆಗಳಾದ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದರೆ ಹೆಚ್ಚಿನ ಲಾಭ ಪಡೆಯಬಹುದೆಂದು ತಿಳಿಸಿದರು. ಇನ್ನೋರ್ವ ಪ್ರಗತಿಪರ ರೈತ ಜಯತೀರ್ಥ ದೇಸಾಯಿ ಅವರು ತಮ್ಮದೇ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಹೈನುಗಾರಿಕೆಯ ಮಹತ್ವ ತಿಳಿಸಿದರು. ಬಾಯರ್ ಸಂಸ್ಥೆಯ ಸಿ.ಎಸ್ ಮಾಥ್ಯು ಅವರು ಮಾತನಾಡಿ ರೈತರು ಕೃಷಿ ತರಬೇತಿಗಳಲ್ಲಿ ಹೆಚ್ಚು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು. 
     ಕೊಪ್ಪಳದ ಜಂಟಿ ಕೃಷಿ ನಿರ್ದೇಶಕ ರಾಮದಾಸ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕೊಪ್ಪಳ ವಿಸ್ತರಣಾ ಮುಂದಾಳು ಡಾ ಎಂ.ಬಿ ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರಗತಿಪರ ರೈತರಾದ ಮಹೇಶ ಕಟ್ಟಿಮನಿ, ಸರ್ವೋದಯ ಸಂಸ್ಥೆಯ ಅಧ್ಯಕ್ಷ ನಾಗರಾಜ ದೇಸಾಯಿ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಸರ್ವೋದಯ ಸಂಸ್ಥೆ ವತಿಯಿಂದ 6 ತಿಂಗಳುಗಳ ಕಾಲ ಸಮಗ್ರ ಕೃಷಿ ಪದ್ದತಿಯ ಬಗ್ಗೆ ತರಬೇತಿ ಪಡೆದ 25 ಶಿಬಿರಾರ್ಥಿಗಳಿಗೆ ಗಣ್ಯರ ಮೂಲಕ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.  ಇದೇ ಸಂದರ್ಭದಲ್ಲಿ ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಗುರುಪ್ರಸಾದ ಅವರು ರೈತರಿಗೆ ಜೈವಿಕ ಕೀಟ ನಿರ್ವಹಣೆಗಾಗಿ ಅಂಟು ಬಲೆಗಳನ್ನು ವಿತರಿಸಿದರು. ವಿಷಯ ತಜ್ಞ ಡಾ. ಜಿ.ಎನ್ ಮರಡ್ಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಕುಷ್ಟಗಿ ಸಹಾಯಕ ಕೃಷಿ ನಿರ್ದೇಶಕ ಸತ್ಯನಾರಾಯಣ  ಸ್ವಾಗತಿಸಿದರು.  ಸರ್ವೋದಯ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ ವಂದಿಸಿದರು.  ಕಾಂiÀರ್iಕ್ರಮದಲ್ಲಿ ಹನುಮನಾಳ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.

Wednesday, 23 December 2015

ಶೋಷಿತ ಗ್ರಾಹಕರು ಪರಿಹಾರ ಪಡೆಯಲು ಮುಂದಾಗಿ- ರವಿರಾಜ ಕುಲಕರ್ಣಿ


ಕೊಪ್ಪಳ ಡಿ. 23 (ಕ.ವಾ): ದಿನನಿತ್ಯದ ವ್ಯವಹಾರಗಳಲ್ಲಿ ವಂಚನೆಗೆ ಹಾಗೂ ಶೋಷಣೆಗೆ ಒಳಗಾಗುವ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿ, ಪರಿಹಾರ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ರವಿರಾಜ ಕುಲಕರ್ಣಿ ಅವರು ಕರೆ ನೀಡಿದರು.

     ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರುಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಗ್ರಾಹಕರ ಹಿತರಕ್ಷಣೆಗಾಗಿ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿ 30 ವರ್ಷಗಳೇ ಆಗಿದ್ದರೂ, ಕಾಯ್ದೆಯನ್ನು ಸಮರ್ಪಕವಾಗಿ ಬಳಕೆ ಮಾಡುವುದರಲ್ಲಿ ದೇಶದ ಗ್ರಾಹಕರು ಹಿಂದುಳಿದಿದ್ದಾರೆ.  ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ನಾನಾ ಮಾಧ್ಯಮಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರ ವೇದಿಕೆಗೆ ಶೋಷಿತ ಗ್ರಾಹಕರಿಂದ ದೂರುಗಳು ದಾಖಲಾಗುತ್ತಿಲ್ಲ. ಮೋಸ, ವಂಚನೆಗಳಿಗೆ ಒಳಗಾಗುತ್ತಿರುವ ಗ್ರಾಹಕರು ಹೊಂದಾಣಿಕೆಯ ಸ್ವಭಾವನ್ನು ಮೈಗೂಡಿಸಿಕೊಂಡಿರುವುದರಿಂದ, ಗ್ರಾಹಕರ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.  ಕೃಷಿ, ವೈದ್ಯಕೀಯ, ಸಾರಿಗೆ, ಬ್ಯಾಂಕಿಂಗ್ ಹೀಗೆ ದಿನನಿತ್ಯದ ಜನಸಾಮಾನ್ಯರ ಎಲ್ಲ ವ್ಯವಹಾರಗಳೂ ಕಾಯ್ದೆಯ ವ್ಯಾಪ್ತಿಯೊಳಗೆ ಬರುತ್ತವೆ.  ಹೀಗಿದ್ದರೂ, ಸಾರ್ವಜನಿಕರಿಂದ ಕಾಯ್ದೆಯ ಸದುಪಯೋಗ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು ವಿಷಾದದ ಸಂಗತಿಯಾಗಿದೆ.  ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಈಗಾಗಲೆ ತಿದ್ದುಪಡಿಯ ಕರಡು ಸಿದ್ಧವಾಗಿದೆ.  ಶೀಘ್ರದಲ್ಲೇ ಈ ಕಾಯ್ದೆಗೆ ತಿದ್ದುಪಡಿಯಾಗುವ ಎಲ್ಲ ಸಾಧ್ಯತೆಗಳಿವೆ.  ಹೊಸ ಕಾಯ್ದೆಯಲ್ಲಿ ಇನ್ನಷ್ಟು ವ್ಯವಹಾರಿಕ ಕ್ಷೇತ್ರಗಳು ಗ್ರಾಹಕ ರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಸೇರಲಿವೆ.  ಅನ್ಯಾಯಕ್ಕೆ ಒಳಗಾದವರು ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗಳಿಗೆ ಮನವಿಯನ್ನು ಸಲ್ಲಿಸಿ, ಸೇವಾ ನ್ಯೂನತೆಗೆ ಪರಿಹಾರ, ಖರೀದಿ ವಸ್ತುಗಳ ಬದಲಾವಣೆ, ನಷ್ಟ ಪರಿಹಾರ ಸೇರಿದಂತೆ ನ್ಯಾಯ ಪಡೆಯಲು ಸಾಧ್ಯವಿದೆ.  ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುವ ವಿಧಾನವನ್ನು ಅತ್ಯಂತ ಸರಳೀಕರಣ ಮಾಡಲಾಗಿದ್ದು, ಮೂರು ತಿಂಗಳೊಳಗಾಗಿ ನ್ಯಾಯ ದೊರಕಿಸಲಾಗುತ್ತಿದೆ.  ಇನ್ನಾದರೂ ಸಾರ್ವಜನಿಕರು ಶೋಷಣೆಗೆ ಪ್ರತಿರೋಧ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಗ್ರಾಹಕರ ವೇದಿಕೆ ಸದಸ್ಯ ರವಿರಾಜ ಕುಲಕರ್ಣಿ ನುಡಿದರು.
     ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಆಯುಕ್ತ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಮಾತನಾಡಿ, ದೈನಂದಿನ ಜೀವನದಲ್ಲಿ ಎಲ್ಲರೂ ಗ್ರಾಹಕರೇ ಆಗಿದ್ದು, ಆಹಾರ ಪದಾರ್ಥ, ನಿತ್ಯ ಬಳಕೆಯ ಸಾಮಗ್ರಿಗಳು ಸೇರಿದಂತೆ ಎಲ್ಲದರಲ್ಲೂ ಕಲಬೆರಕೆ, ನಕಲಿ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗಿದೆ.  ವಿದ್ಯಾರ್ಥಿಗಳು ಗ್ರಾಹಕರ ಹಿತರಕ್ಷಣೆಗಾಗಿ ಜಾರಿಯಲ್ಲಿರುವ ಕಾಯ್ದೆಯ ಬಗ್ಗೆ ಅರಿವು ಹೊಂದಿದಲ್ಲಿ, ಮಾರಾಟಗಾರರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
     ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ದರ ಪಡೆಯದೆ, ಮೋಸಕ್ಕೆ ಒಳಗಾಗುತ್ತಿದ್ದಾರೆ.  ಕಷ್ಟ ಪಡುವವನು ರೈತನಾದರೆ, ಮಧ್ಯವರ್ತಿಗಳು ಲಾಭ ಗಳಿಸುತ್ತಿದ್ದಾರೆ.  ಅನ್ನದಾತನಿಗೆ ನ್ಯಾಯ ದೊರಕಿಸುವಂತೆ ಕಾಯ್ದೆಗಳು ರೂಪುಗೊಳ್ಳಬೇಕು ಎಂದರು.

      ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದ ಅಂಗವಾಗಿ ರಾಘವೇಂದ್ರ ಕುಲಕರ್ಣಿ ಮತ್ತು ನ್ಯಾಯವಾದಿ ಸಾವಿತ್ರಿ ಮುಜುಂದಾರ್ ಅವರು ವಿಶೇಷ ಉಪನ್ಯಾಸ ನೀಡಿದರು. 
     ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ಸುಜಾತಾ ಅಕ್ಕಸಾಲಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚೌಹಾಣ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಶಿವಾನಂದ ಹೊದ್ಲೂರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಲಕ್ಷ್ಮಿ ಕೆಸರಹಟ್ಟಿ ನಿರೂಪಿಸಿದರು.

ವಿಧಾನಪರಿಷತ್ ಚುನಾವಣೆ : ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. 27 ರಂದು ಮತದಾನ ನಡೆಯಲಿದ್ದು, ಮತಗಟ್ಟೆ ಮತ್ತು ಮತದಾನ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
     ಮತದಾರರು ಮತಗಟ್ಟೆ ಪ್ರದೇಶ ಮತ್ತು ಮತದಾನ ನಡೆಯುವ ಕೋಣೆ ಒಳಗಡೆ ಮೊಬೈಲ್, ಕ್ಯಾಮೆರಾ ಅಥವಾ ಇನ್ಯಾವುದೇ ಬಗೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.  ಮತದಾನವನ್ನು ಮುಕ್ತ, ಶಾಂತ ಹಾಗೂ ನಿಸ್ಪಕ್ಷಪಾತವಾಗಿ ನಡೆಯುವುದರ ಬಗ್ಗೆ ನಿಗಾ ವಹಿಸಲು ಎಲ್ಲ ಮತಗಟ್ಟೆಗಳಿಗೆ ಜಿಲ್ಲಾ ಆಡಳಿತದ ವತಿಯಿಂದ ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗಿದೆ.  ಅಲ್ಲದೆ ಮತದಾನ ಕೇಂದ್ರದಲ್ಲಿ ನಿಗಾ ವಹಿಸಲು ಎಲ್ಲ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ.  ಒಂದು ವೇಳೆ ಯಾವುದೇ ವ್ಯಕ್ತಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಕಲಿ ಮತದಾನ ಮಾಡಲು ಪ್ರಯತ್ನಿಸಿದಲ್ಲಿ ಅಥವಾ ಪ್ರೇರೇಪಿಸಿದಲ್ಲಿ, ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಡಿ. 27 ರಂದು ಈಶಾನ್ಯದ ಐಸಿರಿ ಸರಣಿಯ 15 ನೇ ಸಂಚಿಕೆ ಪ್ರಸಾರ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 15 ನೇ ಸಂಚಿಕೆ ಡಿ. 27 ರಂದು ಬೆಳಿಗ್ಗೆ 09-54 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 15ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.    ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪರಿಚಯ. ನಿವೃತ್ತ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿರುವ ಎನ್.ಬಿ.ಪಾಟೀಲ ಅವರಿಂದ ವ್ಯಕ್ತಿತ್ವ ವಿಕಸನದ ಪಾಠ. ನಿವೃತ್ತ ನ್ಯಾಯಮೂರ್ತಿಗಳಾಗಿರುವ ಎಮ್.ಬಿ. ಬಿರಾದಾರ ಅವರಿಂದ ಸಂವಿಧಾನದ ಕುರಿತು ಮಾಹಿತಿ.  ಆಳಂದ ತಾ: ಗುಂಜ ಬಬಲಾದ ಗ್ರಾಮದ ರಮಾಬಾಯಿ ಮಹಿಳಾ ಸ್ವಸಹಾಯ ಸಂಘದ ಸದಸೆÀ್ಯಯರ ಸಾಧನೆಯ ಹಾದಿ.  ಕಲಬುರಗಿಯ ಪ್ರತಿಭಾವಂತ ಯುವ ರಂಗಕರ್ಮಿ ಅಬ್ದುಲ್ ಸಾಜಿದ ಶೇಖ್ ಅವರ ಅನುಭವ.  ಕಲಬುರಗಿಯ ಆಕಾಶವಾಣಿಯ ಕಲಾವಿದ ಗುರುಶಾಂತಯ್ಯಾ ಸ್ಥಾವರ ಮಠ ಅವರಿಂದ ಹಾಡು.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು , ನಗೆಹನಿ ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಡಿ. 25 ರ ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಿಮಿತ್ಯ ಡಿ. 27 ರಂದು ಮತದಾನ ನಡೆಯಲಿದ್ದು, ನಿಯಮದನ್ವಯ ಡಿ. 25 ರಂದು ಸಂಜೆ 4 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
     ಚುನಾವಣೆ ನಿಯಮದಂತೆ ಮತದಾನ ಮುಕ್ತಾಯದ ಅವಧಿಗಿಂತ ಪೂರ್ವದ 48 ಗಂಟೆಗಳ ಅವಧಿಯೊಳಗೆ ಚುನಾವಣಾ ಬಹಿರಂಗ ಪ್ರಚಾರವನ್ನು ನಿಷೇಧಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಡಿ. 25 ರಂದು ಸಂಜೆ 4 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.  ಎಲ್ಲ ರಾಜಕೀಯ ವ್ಯಕ್ತಿಗಳು, ಚುನಾವಣಾ ಅಭ್ಯರ್ಥಿಗಳು ಬಹಿರಂಗ ಪ್ರಚಾರವನ್ನು ಡಿ. 25 ರ ಸಂಜೆ 04 ಗಂಟೆಗೆ ಅಂತ್ಯಗೊಳಿಸಿ, ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಡಿ. 26 ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ

ಕೊಪ್ಪಳ, ಡಿ.23 (ಕರ್ನಾಟಕ ವಾರ್ತೆ) : ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಂಡು ಸರ್ವ ಶಿಕ್ಷಣ ಅಭಿಯಾನದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಕೊಪ್ಪಳ ಜಿಲ್ಲೆಯಲ್ಲಿ ಡಿ. 26 ರಿಂದ ಸಮೀಕ್ಷಾ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ತಿಳಿಸಿದ್ದಾರೆ.
     ಸರ್ವ ಶಿಕ್ಷಣ ಅಭಿಯಾನದ ಈ ವಾರ್ಷಿಕ ಕ್ರಿಯಾ ಯೋಜನೆಯನ್ನು 2016 ಜನೇವರಿ 12 ರೊಳಗೆ ಸಿದ್ಧಪಡಿಸಿ, ಅಂತಿಮಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಮೊದಲು ಸಮೀಕ್ಷಾ ಕಾರ್ಯವನ್ನು ಡಿ. 28 ರಿಂದ ಪ್ರಾರಂಭ ಮಾಡಲು ದಿನಾಂಕ ನಿಗದಿಡಿಸಲಾಗಿತ್ತು.  ಇದೀಗ ಇಲಾಖೆಯ ಸೂಚನೆ ಮೇರೆಗೆ ಡಿ. 26 ರಿಂದ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗುವುದು.  ಅಲ್ಲದೆ ಇದಕ್ಕೆ ಸಂಬಂಧಿಸಿದಂರತೆ ಡಿ.16 ರಂದು ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿನ ದಿನಾಂಕಗಳನ್ನು ಸಹ ಬದಲಾವಣೆ ಮಾಡಲಾಗಿದೆ.   ಅದರನ್ವಯ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಸಮೀಕ್ಷಾ ಕಾರ್ಯವನ್ನು ಡಿ.26 ರಿಂದ 2016ರ ಜನೇವರಿ 05 ರೊಳಗಾಗಿ ಕೈಗೊಳ್ಳಬೇಕು. ಜ.07 ರೊಳಗಾಗಿ ಕ್ಲಸ್ಟರ್ ಹಂತದಿಂದ ಬ್ಲಾಕ್‍ಗೆ ಮಾಹಿತಿ ಸಲ್ಲಿಸಬೇಕು. ಜ.08 ರೊಳಗಾಗಿ ಬ್ಲಾಕ್ ಹಂತದಿಂದ ಜಿಲ್ಲೆಗೆ ಖುದ್ದಾಗಿ ಮಾಹಿತಿ ಸಲ್ಲಿಸಬೇಕು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ-ಅಂಶ ಅಂತಿಮಗೊಳಿಸಬೇಕು. ಜ.09 ರೊಳಗಾಗಿ ಜಿಲ್ಲಾ ಹಂತದಲ್ಲಿ ಅಂತಿಮಗೊಂಡ ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ-ಅಂಶಗಳನ್ನು ಎನ್.ಜಿ.ಓ ಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಅಂತಿಮವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮತ್ತು ಅಂಕಿ-ಅಂಶಗಳ ನಮೂನೆಗಳನ್ನೊಳಗೊಂಡ ಪೂರ್ಣ ಪ್ರಸ್ತಾವನೆಯನ್ನು ಜ.11 ರೊಳಗಾಗಿ ರಾಜ್ಯ ಕಛೇರಿಗೆ ಸಲ್ಲಿಸಬೇಕು ಎಂಬುದಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‍ಸಿ, ಡಿವೈಪಿಸಿ ಅವರಿಗೆ ತಿಳಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೇಶ ಇಮಾಮ್ ಮತ್ತು ಮೌಜ್ಜನರ ಗೌರವಧನ : ಅರ್ಜಿ ಆಹ್ವಾನ

ಕೊಪ್ಪಳ, ಡಿ.23 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಮಸ್ಜೀದ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜ್ಜನರಿಗೆ ಗೌರವಧನ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರದಿಂದ ಗೌರವಧನವನ್ನು ಇದುವರೆಗೂ ಪಡೆಯದವರು, ಬೇರೆಯವರ ಹೆಸರಿನ ಖಾತೆಗೆ ಗೌರವಧನ ಜಮಾ ಆದವರು ಮತ್ತು ಹೊಸದಾಗಿ ಗೌರವಧನ ಪಡೆಯಲಿಚ್ಛಿಸುವವರು ಪರಿಷ್ಕøತ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ಬ್ಯಾಂಕ್ ಖಾತೆಯ ವಿವರ ಮತ್ತು ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಡಿ.28 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರೊಳಗಾಗಿ ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ, ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವಕ್ಫ್ ಅಧಿಕಾರಿ ಅತಾವುಲ್ಲಾ ಖಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Tuesday, 22 December 2015

ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ : ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕು- ಎಂ. ಕನಗವಲ್ಲಿ


ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ) : ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಲ್ಲಿ ನೋಂದಾವಣೆ ಆಗಿರುವ ಫಲಾನುಭವಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ವಿನಾಕಾರಣ ವಿಳಂಬ ಮಾಡದೆ, ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆಸ್ಪತ್ರೆಗಳು ಹಾಗೂ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
     ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ವ್ಯಾಪ್ತಿಗೆ ಜಿಲ್ಲೆಯ 08 ಖಾಸಗಿ ಆಸ್ಪತ್ರೆಗಳು ಹಾಗೂ ಆಯಾ ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ.  ಗಂಗಾವತಿಯಲ್ಲಿ ಖಾಸಗಿ 05 ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿ ಒಟ್ಟು 06 ಆಸ್ಪತ್ರೆಗಳು.  ಕೊಪ್ಪಳ ತಾಲೂಕಿನಲ್ಲಿ 02 ಖಾಸಗಿ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿ ಒಟ್ಟು 03 ಆಸ್ಪತ್ರೆಗಳು.  ಯಲಬುರ್ಗಾದ ತಾಲೂಕು ಆಸ್ಪತ್ರೆ.  ಮತ್ತು ಕುಷ್ಟಗಿಯಲ್ಲಿ ಖಾಸಗಿ ಮತ್ತು ಸರ್ಕಾರದ ತಲಾ ಒಂದು ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 12 ಆಸ್ಪತ್ರೆಗಳು ಯೋಜನೆಯ ವ್ಯಾಪ್ತಿಯಲ್ಲಿವೆ.  ಯೋಜನೆಯ ವ್ಯಾಪ್ತಿಗೆ ಅರ್ಹವಿರುವ ಖಾಸಗಿ ಆಸ್ಪತ್ರೆಗಳು ಸೇರ ಬಯಸಿದಲ್ಲಿ, ವಿಳಂಬ ಮಾಡದೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳ ದೂರು : ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಅವರಿಗೆ ವಹಿಸಲಾಗಿದೆ.  ಕೆಲವು ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಈ ಯೋಜನೆಯಡಿ ದರವನ್ನು ನಿಗದಿಪಡಿಸಿದ್ದರೂ, ಇನ್ಸೂರೆನ್ಸ್ ಕಂಪನಿಯವರು ನಿಗದಿತ ದರದಲ್ಲೂ ಮೊತ್ತವನ್ನು ಕಡಿತಗೊಳಿಸಿ, ಆಸ್ಪತ್ರೆಗಳಿಗೆ ಕಡಿಮೆ ಹಣ ಪಾವತಿಸುತ್ತಿದ್ದಾರೆ.  ಕಡಿತಗೊಳಿಸಿದ ಕಾರಣವನ್ನೂ ಸಹ ತಿಳಿಸುತ್ತಿಲ್ಲ.  ಫಲಾನುಭವಿ ರೋಗಿಗಳ ಚಿಕಿತ್ಸೆಗೆ ಅನುಮೋದನೆ ನೀಡಲೂ ಸಹ ಇನ್ಸೂರೆನ್ಸ್ ಕಂಪನಿಯವರು ವಿನಾಕಾರಣ ವಿಳಂಬ ಮಾಡುತ್ತಾರೆ.  ದೂರವಾಣಿ ಕರೆ ಮಾಡಿದಾಗಲೂ, ಒಬ್ಬರ ಮೇಲೊಬ್ಬರು ಹಾಕುತ್ತಾ ಅನಗತ್ಯ ಕಾಲಹರಣ ಮಾಡುತ್ತಿದ್ದು, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ.  ಇನ್ನು ಚಿಕಿತ್ಸೆ ನೀಡಿದ ಪ್ರಕರಣಗಳಿಗೂ ಸಹ ನಿಗದಿತ ಅವಧಿಯಲ್ಲಿ ಮೊತ್ತವನ್ನು ಪಾವತಿಸುತ್ತಿಲ್ಲ ಎಂದು ಕೆಲ ಆಸ್ಪತ್ರೆಯವರು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯವರ ಇಂತಹ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.  ಅನಗತ್ಯ ವಿಳಂಬ ಧೋರಣೆ ಅಥವಾ ಆಸ್ಪತ್ರೆಯವರ ದೂರವಾಣಿ ಕರೆಗಳಿಗೆ ಕಂಪನಿಯವರು ಸ್ಪಂದಿಸದಿರುವ ಪ್ರಕರಣಗಳು ಮರುಕಳಿಸಿದಲ್ಲಿ, ಅದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನಜಾಗೃತಿ ಮೂಡಿಸಿ : ಜಿಲ್ಲೆಯಲ್ಲಿ ಈ ಯೋಜನೆಗೆ 2. 92 ಲಕ್ಷ ಕುಟುಂಬಗಳ ನೋಂದಣಿ ಗುರಿಯ ಬದಲಿಗೆ ಕೇವಲ 1. 8 ಲಕ್ಷ ಕುಟುಂಬಗಳನ್ನು ಮಾತ್ರ ನೋಂದಾಯಿಸಲಾಗಿದೆ.  ನೋಂದಾಯಿತರ ಪೈಕಿ ಈವರೆಗೆ ಕೇವಲ 576 ಜನರಿಗೆ ಮಾತ್ರ ಯೋಜನೆಯಡಿ ಚಿಕಿತ್ಸೆ ದೊರೆತಿರುವುದನ್ನು ನೋಡಿದರೆ, ನಿಗದಿತ ಕಂಪನಿಯವರು, ಜನಜಾಗೃತಿ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳದಿರುವುದು ಕಂಡುಬರುತ್ತದೆ.  ನೀತಿ ಸಂಹಿತೆಯ ನಂತರದ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಯೋಜನೆಯ ಸವಿವರ ಮಾಹಿತಿಯುಳ್ಳ ಗೋಡೆ ಬರಹವನ್ನು ಬರೆಸಬೇಕು ಎಂದು ಜಿಲ್ಲಾಧಿಕಾರಿಗಳು ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಮಾರ್ಟ್ ಕಾರ್ಡ್ ವಿತರಿಸಿ : ಚಳ್ಳಾರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲದಿರುವುದರ ಬಗ್ಗೆ ದೂರು ಕೇಳಿ ಬಂದಿದ್ದು, ಕೂಡಲೆ ಇದನ್ನು ಪರಿಶೀಲಿಸಿ, 10 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್ ಸೇರಿದಂತೆ ಫ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಹಾಗೂ ವಿಡಾಲ್ ಟಿಪಿಎ ಪ್ರೈ.ಲಿ. ಕಂಪನಿಯ ಪ್ರತಿನಿಧಿಗಳು, ಜಿಲ್ಲೆಯ ವಿವಿಧ ಖಾಸತಿ ಆಸ್ಪತ್ರೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ : ದೂರು ಸ್ವೀಕೃತಿ ಕೇಂದ್ರ ಪ್ರಾರಂಭ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ) : ರಾಯಚೂರು-ಕೊಪ್ಪಳ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ದೂರು ಸ್ವೀಕೃತಿ ಕೇಂದ್ರವನ್ನು (08539-220854) ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ವಿಭಾಗದಲ್ಲಿ ಪ್ರಾರಂಭಿಸಲಾಗಿದೆ.
     ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ, ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರು ಸ್ವೀಕೃತಿ ಕೇಂದ್ರ ದೂರವಾಣಿ ಸಂ : 08539-220854 ಕ್ಕೆ ಕರೆ ಮಾಡಿ ದೂರನ್ನು ದಾಖಲಿಸಬಹುದಾಗಿದೆ.  ದೂರು ಸ್ವೀಕೃತಿ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಈಗಾಗಲೆ ಪಾಳಿಯಂತೆ ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ : ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳುವಂತಿಲ್ಲ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ) : ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳದಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
     ಪ್ರಸಕ್ತ ವಿಧಾನಪರಿಷತ್ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳು ನಡೆಯಲಿವೆ.  ಚುನಾವಣೆಗಳನ್ನು ಸುಗಮ ಮತ್ತು ಯಶಸ್ವಿಯಾಗಿ ಜರುಗಿಸಬೇಕಾಗಿರುವುದರಿಂದ, ಜಿಲ್ಲೆಯ ಯಾವುದೇ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳುವಂತಿಲ್ಲ. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಸಾರ್ವತ್ರಿಕ ರಜಾ ದಿನಗಳಲ್ಲಿ ಅಥವಾ ಇನ್ನಿತರ ಸಂದರ್ಭಗಳಲ್ಲಿ ಕೇಂದ್ರ ಸ್ಥಾನ ಬಿಡುವ ಪೂರ್ವದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಜಿಲ್ಲೆಯ ಎಲ್ಲ ತಹಸಿಲ್ದಾರರು ಹಾಗೂ ಸಂಬಂಧಪಟ್ಟ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಮಟ್ಟದ ದೊಣ್ಣೆವರಸೆ ಕ್ರೀಡಾಕೂಟ ಯಶಸ್ವಿ : ಡಿಡಿಪಿಯು ಅಭಿನಂದನೆ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ) : ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ದೊಣ್ಣೆ ವರಸೆ ಪಂದ್ಯಾವಳಿಯನ್ನು ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಯಶಸ್ವಿಯಾಗಿ ಆಯೋಜಿಸಲು ಕಾರಣರಾದ ಎಲ್ಲರಿಗೂ ಕೊಪ್ಪಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
     ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಿಲಂಬಮ್ (ದೊಣ್ಣೆ ವರಸೆ) ಪಂದ್ಯಾವಳಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಹನಮಸಾಗರದಲ್ಲಿ ಆಯೋಜಿಸಲಾಯಿತು.  ಪಂದ್ಯಾವಳಿಯಲ್ಲಿ ಕೊಪ್ಪಳ ಜಿಲ್ಲೆಯ 09 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಿಲಂಬಮ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಸಂತಸದಾಯಕವಾಗಿದೆ.  ಜಿಲ್ಲೆಯಲ್ಲಿ ಪಂದ್ಯಾವಳಿಯನ್ನು ಅಭೂತಪೂರ್ವವಾಗಿ ಸಂಘಟಿಸಿದ್ದಕ್ಕಾಗಿ ಹನಮಸಾಗರದ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ರಾಜೇಂದ್ರ ಪಂತ್, ಸಿಲಂಬಮ್ ಆಟದ ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಕಾರ್ಯದರ್ಶಿ ಚಂದ್ರಶೇಖರ ಹಂಚಿನಾಳ, ರಾಜ್ಯ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಕರೀಂ, ಅಲ್ಲದೆ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಿಡಿಓ ಸೇರಿದಂತೆ ಎಲ್ಲ ಕ್ರೀಡಾ ಪ್ರೇಮಿಗಳಿಗೆ ಕೊಪ್ಪಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಪಾಯ ರೈತರಲ್ಲಿ ವೈಜ್ಞಾನಿಕ ಮತ್ತು ಸಾವಯವ ನೈಪುಣ್ಯತೆ ಬರಬೇಕು- ಡಾ. ಎಂ.ಬಿ ಪಾಟೀಲ


ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಪಪಾಯ ಬೆಳೆಯುವ ರೈತರು ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು, ಸಮುದಾಯ ರೀತಿಯಲ್ಲಿ ಪಪಾಯ ಬೆಳೆಯುವ ನೈಪುಣ್ಯತೆ ಕಲಿಯಬೇಕಿದೆ ಎಂದು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ್ ಹೇಳಿದರು.
      ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ಪಪಾಯ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
      ರೈತರು ವೈಜ್ಞಾನಿಕತೆ ಅಳವಡಿಸಿಕೊಂಡು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಸಮುದಾಯ ರೀತಿಯಲ್ಲಿ ಪಪಾಯ ಬೆಳೆಯಲು ಮುಂದಾಗಬೇಕು.  ಸಸ್ಯ ಸಂರಕ್ಷಣೆ ಕ್ರಮಗಳ ಬಗ್ಗೆ ಅರಿಯಲು ಕೃಷಿ ಮತ್ತು ತೋಟಗಾರಿಕೆ ಇಲಾಖೆಯೊಂದಿಗೆ ರೈತರು ನಿರಂತರ ಸಂಪರ್ಕ ಹೊಂದಿರಬೇಕು.  ಎಂದು ಡಾ. ಎಂ.ಬಿ. ಪಾಟೀಲ್ ಅವರು ಹೇಳಿದರು. 
     ಹೊಳೆಆಲೂರು ಮಠದ ಗಂಗಾಧರಯ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಕುಷ್ಟಗಿ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ಗೋವಿಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ವಿಷಯತಜ್ಞ ರೋಹಿತ್ ಕೆ.ಎ ಅವರು ಪಪಾಯ ಬೆಳೆಯ ಕೀಟ ಮತ್ತು ರೋಗ ನಿರ್ವಹಣೆಯ ಬಗ್ಗೆ ತಿಳಿಸಿದರು. ತೋಟಗಾರಿಕೆ ವಿಷಯ ತಜ್ಞ ವಾಮನ ಮೂರ್ತಿ ಅವರು ಪಪಾಯ ತಳಿಗಳ ಆಯ್ಕೆ, ಬೇಸಾಯ ಕ್ರಮUಳು ಮತ್ತು ಲಘು ಪೋಷಕಾಂಶ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ವಿದ್ಯಾಸಾಗರ ಅವರು  ನಿರೂಪಿಸಿದರು ಮತ್ತು  ಶಿವರಾಜ ವಂದಿಸಿದರು. ಈ ಕಾರ್ಯಕ್ರಮದಲ್ಲಿ ತುಗ್ಗಲದೋಣಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.

ಡಿ.25 ರಂದು ಶ್ರೀ ಗುದ್ನೇಶ್ವರ ಸ್ವಾಮಿ ರಥೋತ್ಸವ

ಕೊಪ್ಪಳ, ಡಿ.22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರಿನ ಗುದ್ನೆಪ್ಪನ ಮಠದ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚಕಳಸ ಮಹಾರಥೋತ್ಸವ ಡಿ.25 ರಂದು ನಡೆಯಲಿದೆ.
     ರಥೋತ್ಸವವು ಅಂದು ಸಂಜೆ 04 ಗಂಟೆಗೆ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ನಂದಿಕೋಲು ಸೇವೆ ಹಾಗೂ ಕಕ್ಕಿಹಳ್ಳಿ ಗ್ರಾಮದ ಶ್ರೀ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವೆ ಸೇರಿದಂತೆ ಸಕಲ ವಾದ್ಯಮೇಳಗಳೊಂದಿಗೆ ವೈಭವೋಪೇತವಾಗಿ ಜರುಗಲಿದೆ. ರಥೋತ್ಸವದ ಅಂಗವಾಗಿ ಡಿ.26 ರಿಂದ ಡಿ.29 ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ 06 ಗಂಟೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಂಭಾಗದ ಗುದ್ನೆಪ್ಪನ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಡಿ.26 ರಂದು ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಡಿ.27 ರಂದು ಅಭಿನವ ಸಂಗೀತ ಸೇವಾ ಸಂಸ್ಥೆ, ಕೊಪ್ಪಳ ಇವರಿಂದ ಸಂಗೀತ ಸಂಪದ ಹಾಗೂ ಸಿದ್ದಪ್ಪ ಬೀಳಗಿ ಅವರಿಂದ ತತ್ವಪದ ಮತ್ತು ಹಾಸ್ಯ ಸಂಪದ ಕಾರ್ಯಕ್ರಮ, ಡಿ.28 ರಂದು ಶ್ರೀ ಬೂದೀಶ್ವರ ಮಹಾಸ್ವಾಮಿಗಳಿಂದ ಜ್ಞಾನ ದಾಸೋಹ, ಡಿ.29 ರಂದು ಖ್ಯಾತ ಕಲಾವಿದರುಗಳಾದ ಬಸವರಾಜ ಮಹಾಮನಿ, ನರಸಿಂಹ ಜೋಶಿ, ಜೀವನಸಾಬ ಬಿನ್ನಾಳ ಮತ್ತು ಜೆ.ಮರಿಯಪ್ಪ ಇವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯಲಬುರ್ಗಾ ತಹಶೀಲ್ದಾರ್ ಶಿವಲಿಂಗಪ್ಪ ಪಟ್ಟದಕಲ್ಲ ತಿಳಿಸಿದ್ದಾರೆ. 

Saturday, 19 December 2015

ಕಾನೂನು ಆಯೋಗದ ಅಧ್ಯಕ್ಷರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ, ಡಿ.19 (ಕರ್ನಾಟಕ ವಾರ್ತೆ) : ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿರುವ ನಾಡೋಜ, ನ್ಯಾಯಮೂರ್ತಿ ಡಾ. ಎಸ್.ಆರ್. ನಾಯಕ್ ಡಿ. 22 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಡಾ. ಎಸ್.ಆರ್. ನಾಯಕ್ ಅವರು ಅಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು.  ನಂತರ ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಕಾನೂನು ಸುಧಾರಣೆ ಹಾಗೂ ಇದಕ್ಕೆ ಸಂಬಂಧಿತ ವಿಚಾರಗಳ ಬಗ್ಗೆ ವಕೀಲರ ಸಂಘದ ಸದಸ್ಯರೊಂದಿಗೆ ವಿಚಾರ ವಿನಿಮಯ ನಡೆಸುವರು.  ಕಾನೂನು ಆಯೋಗದ ಅಧ್ಯಕ್ಷರು ಅದೇ ದಿನ 3-15 ಗಂಟೆಗೆ ವಿಜಯಪುರ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಕಾನೂನು ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ

ಅನಕ್ಷರಸ್ಥರು ಮತ ಚಲಾವಣೆಗೆ ಸಂಗಡಿಗರ ಸಹಕಾರ ಪಡೆಯಲು ಅವಕಾಶ

ಕೊಪ್ಪಳ, ಡಿ.19 (ಕರ್ನಾಟಕ ವಾರ್ತೆ) : ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ವಿಧಾನಪರಿಷತ್ ಚುನಾವಣೆಯಲಿ,್ಲ ಅನಕ್ಷರಸ್ಥ, ಕುರುಡ ಮತ್ತು ದುರ್ಬಲ ಮತದಾರರು ತಮ್ಮ ಮತ ದಾಖಲಿಸಲು ಸಂಗಡಿಗರೋರ್ವರ ಸಹಕಾರ ಪಡೆಯಲು ಅವಕಾಶವಿದೆ ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
     ರಾಯಚೂರು-ಕೊಪ್ಪಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆ ಅಂಗವಾಗಿ ಡಿ.27 ರಂದು ಮತದಾನ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನಮೂದಿಸಿರುವ ಮತದಾರರು ಒಂದು ವೇಳೆ ಅನಕ್ಷರಸ್ಥರು, ಕುರುಡ ಹಾಗೂ ದುರ್ಬಲನಾಗಿದ್ದರೆ ಚುನಾವಣೆ ನಡೆಸುವ ನಿಯಮಗಳು 1961 ರ ನಿಯಮ 40(ಎ) ಅನ್ವಯ ಇಂತಹ ವ್ಯಕ್ತಿಗಳು ಸಹಾಯಕ್ಕಾಗಿ ಒಬ್ಬ ಸಂಗಡಿಗನನ್ನು ಮತಗಟ್ಟೆಗೆ ಕರೆದುಕೊಂಡು ಹೋಗಬಹುದಾಗಿದೆ. ಆದರೆ ಸಂಗಡಿಗನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಆತನು ಓದಲು ಹಾಗೂ ಮತದಾರನ ಇಚ್ಛೆಯಂತೆ ಮತದಾರನ ಪರವಾಗಿ ಮತಪತ್ರದ ಮೇಲೆ ಮತ ದಾಖಲಿಸಲು ಶಕ್ತನಾಗಿರಬೇಕು.  ಒಬ್ಬ ಸಂಗಡಿಗನು ಒಬ್ಬ ಮತದಾರನಿಗಿಂತ ಹೆಚ್ಚಿನ ಮತದಾರರಿಗೆ ಸಂಗಡಿಗನಾಗಲು ಅವಕಾಶವಿಲ್ಲ. ಅಲ್ಲದೆ, ಸಂಗಡಿಗನು ಮತದಾನದ ರಹಸ್ಯ ಗೌಪ್ಯತೆಯನ್ನು ಕಾಪಾಡುವುದಾಗಿ ಮತ್ತು ಇನ್ನೊಬ್ಬ ಮತದಾರನಿಗೆ ಸಂಗಡಿಗನಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮತದಾನ ಕೇಂದ್ರದ ಅಧ್ಯಕ್ಷಾಧಿüಕಾರಿಯ ಮುಂದೆ ಘೋಷಣೆ ಮಾಡಿ, ಅವರಿಂದ ಅನುಮತಿ ಪಡೆಯಬೇಕು.
     ಚುನಾವಣೆಗಳು ಮುಕ್ತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಲು ಮತದಾರರು ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಕಾನೂನಿನಲ್ಲಿರುವ ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳಾ ವಿಶೇಷ ಚಿಕಿತ್ಸಾ ಘಟಕದಿಂದ ಜಾಗೃತಿ ಕಾರ್ಯಕ್ರಮ

ಕೊಪ್ಪಳ ಡಿ. 19 (ಕರ್ನಾಟಕ ವಾರ್ತೆ): ಕೊಪ್ಪಳದ ಮಹಿಳಾ ವಿಶೇಷ ಚಿಕಿತ್ಸಾ ಘಟಕ-181 (ನಿರ್ಭಯ ಕೇಂದ್ರ) ಕುರಿತ ಜಾಗೃತಿ ಕಾರ್ಯಕ್ರಮ ಇಲ್ಲಿನ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯ ಮತ್ತು ಅಲ್ಪಸಂಖ್ಯಾತರ ಮಹಿಳಾ ವಸತಿ ನಿಲಯದಲ್ಲಿ ಆಯೋಜಿಸಲಾಯಿತು.
      ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಸಿಬ್ಬಂದಿಗಳು ಮತ್ತು ವಸತಿ ನಿಲಯದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಉದ್ದೇಶ ಮತ್ತು ದೊರೆಯುವ ಉಚಿತ ಸೇವೆಗಳ ಬಗ್ಗೆ ಸಮಾಜ ಕಾರ್ಯಕರ್ತರಾದ ಹುಲಿಗೆಮ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.    ಸಮಾಲೋಚಕಿ ಶಿಲ್ಪಾ ಬಾರಕೇರ ಅವರು, ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಾಗೂ ಪೊಕ್ಸೋ ಕಾನೂನಿನ ತೀವ್ರತೆಯನ್ನು ಕುರಿತು ಜಾಗೃತಿ ಮೂಡಿಸಿದರು.

ಡಿ.23 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕೊಪ್ಪಳ, ಡಿ.19 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರುಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಡಿ.23 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ.
     ಈ ಬಾರಿಯ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯು“ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ವಿಧಾನ ; ಆಹಾರ ಕಲಬೆರಕೆ ವಿರುದ್ಧ ಕದನ” ಎಂಬ ಘೋಷ ವಾಕ್ಯದಡಿ ಜರುಗುತ್ತಿದ್ದು, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯರುಗಳಾದ ರವಿರಾಜ ಕುಲಕರ್ಣಿ, ಸುಜಾತಾ ಅಕ್ಕಸಾಲಿ, ನ್ಯಾಯವಾದಿ ಸಾವಿತ್ರಿ ಮುಜುಮದಾರ ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.  ಬಳಿಕ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಆಹಾರ ಸುರಕ್ಷಾ ಹಾಗೂ ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಉಮೇಶ ಅವರು ‘ಆಹಾರ ಕಲಬೆರಕೆ ಮತ್ತು ಸುರಕ್ಷಿತ ವಿಧಾನ’ ಕುರಿತು ಹಾಗೂ ರಾಘವೇಂದ್ರ ಕುಲಕರ್ಣಿ ಅವರು  ‘ಅಡುಗೆ ಅನಿಲ ಬಳಕೆಯ ಸುರಕ್ಷತೆ’ ಕುರಿತು ಉಪನ್ಯಾಸ ನೀಡುವರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ : ಜಿಲ್ಲೆಗೆ ಮೂರು ಬಹುಮಾನ

ಕೊಪ್ಪಳ, ಡಿ.19 (ಕರ್ನಾಟಕ ವಾರ್ತೆ) : ಉಡುಪಿ ಜಿಲ್ಲೆಯ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಆವರಣದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲೆಗೆ ಮೂರು ಬಹುಮಾನ ಲಭಿಸಿವೆ.
     ಕೊಪ್ಪಳ ಜಿಲ್ಲೆಯಿಂದ ಪ್ರೌಢಶಾಲಾ ವಿಭಾಗದ 50 ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅವುಗಳಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಆರ್.ಎಂ.ಎಸ್ ಪ್ರೌಢ ಶಾಲೆಯ ಸರೋಜಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ. ಕೊಪ್ಪಳದ ಎಸ್.ಎಫ್.ಎಸ್ ಶಾಲೆಯ ಸಂಕಲ್ಪ, ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ. ಹಾಗೂ ಕೊಪ್ಪಳ ತಾಲೂಕಿನ ಭಾಗ್ಯನಗರದ ನ್ಯಾಷನಲ್ ಪ್ರೌಢಶಾಲೆಯ ಸೌಮ್ಯ, ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು, ಇಲಾಖೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Friday, 18 December 2015

ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕೊಪ್ಪಳ, ಡಿ.18 (ಕರ್ನಾಟಕ ವಾರ್ತೆ) : ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರ ವತಿಯಿಂದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 2016-17 ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರವು ಗ್ರಾಮೀಣ ಪ್ರದೇಶದ ಪ.ಜಾತಿ, ಪ.ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ವ್ಯಾಸಾಂಗ ಮಾಡಲು ವಿದ್ಯಾರ್ಥಿಗಳಿಂದ ಈ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲಿಚ್ಛಿಸುವ ಪ.ಜಾತಿ ಮತ್ತು ಪ.ಪಂಗಡ ಹಾಗೂ ಪ್ರವರ್ಗ-1 ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ., ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯದ ಮಿತಿ 01.00 ಲಕ್ಷ ರೂ.ಗಳ ಒಳಗಿರಬೇಕು.
     ಅರ್ಜಿಗಳನ್ನು ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಗಳಲ್ಲಿ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಗಳಲ್ಲಿ ಡಿ.16 ರಿಂದ ಜ.01 ರವರೆಗೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ, 2016 ಜನೇವರಿ 20 ರ ಸಂಜೆ 5 ಗಂಟೆಯೊಳಗಾಗಿ ಆಯಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಬಹುದು. ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಜನೇವರಿ 25 ರಿಂದ ಜ.31 ರೊಳಗಾಗಿ ಪಡೆಯಬಹುದಾಗಿದ್ದು, ಪ್ರವೇಶ ಪರೀಕ್ಷೆಗಳು 2016 ರ ಮಾರ್ಚ್.06 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕುಗಳ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.
ತಾಲೂಕು ಪ್ರವೇಶ ಪರೀಕ್ಷಾಧಿಕಾರಿಗಳ ವಿವರ ಇಂತಿದೆ.  ಅಮೀನ್‍ಸಾಬ್, ಪ್ರಾಚಾರ್ಯರು, ಮೊರಾರ್ಜಿ ದೇಸಾಯಿ, ಪದವಿ ಪೂರ್ವ ವಿದ್ಯಾಲಯ, ಹಿರೇಸಿಂಧೋಗಿ- 9481660459. ವಿರುಪಾಕ್ಷಪ್ಪ ಹನುಮಶೆಟ್ಟಿ, ಪ್ರಾಚಾರ್ಯರು, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ತಾ.ಯಲಬುರ್ಗಾ-9986896240. ಸಂತೋಷಿರಾಣಿ, ಪ್ರಾಚಾರ್ಯರು, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ತಾ.ಗಂಗಾವತಿ-8147617929. ಹನುಮೇಶ, ಪ್ರಾಚಾರ್ಯರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಾ.ಕುಷ್ಟಗಿ-8722650322.
     ಅರ್ಜಿ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧಿಕೃತ ವೆಬ್‍ಸೈಟ್  www.kreis.kar.nic.in ನಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಈ ವರ್ಷದಿಂದ ಪ್ರಶ್ನೆ ಪತ್ರಿಕೆಯಲ್ಲಿ ಅಲ್ಪ ಬದಲಾವಣೆ ತರಲು ಉದ್ದೇಶಿಸಲಾಗಿದ್ದು, ಅಗತ್ಯ ಮಾಹಿತಿಗಾಗಿ ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಆಯಾ ತಾಲೂಕಿನ ಪ್ರವೇಶ ಪರೀಕ್ಷಾಧಿಕಾರಿಗಳನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 20 ರಂದು ಈಶಾನ್ಯದ ಐಸಿರಿ ಸರಣಿಯ 14 ನೇ ಸಂಚಿಕೆ ಪ್ರಸಾರ

ಕೊಪ್ಪಳ ಡಿ. 18 (ಕರ್ನಾಟಕ ವಾರ್ತೆ): ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕøತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸುವ “ಈಶಾನ್ಯದ ಐಸಿರಿ” ಸರಣಿಯ 14 ನೇ ಸಂಚಿಕೆ ಡಿ. 20 ರಂದು ಬೆಳಿಗ್ಗೆ 10 ಗಂಟೆಗೆ ಹೊಸಪೇಟೆ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
        ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದ್ದು, 14ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.  ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃಧ್ಧಿ ಮಂಡಳಿಯ ಸ್ಥಾಪನೆಯ, ಉದ್ದೇಶ ಹಾಗೂ ಪ್ರಗತಿಗಳ ಪರಿಚಯ. ನಿವೃತ್ತ ನ್ಯಾಯ ಮೂರ್ತಿಗಳಾಗಿರುವ ಎಂ.ಬಿ. ಬಿರಾದರ ಅವರಿಂದ ಆಸ್ತಿಯ ಹಕ್ಕಿನ ಬಗ್ಗೆ ಹೆಚ್ಚಿನ ಮಾಹಿತಿ.  ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾಗಿರುವ ಎನ್.ಬಿ. ಪಾಟೀಲ ಅವರಿಂದ ವ್ಯಕ್ತಿತ್ವ ವಿಕಸನ ಕುರಿತು ಸಲಹೆ ಸೂಚನೆಗಳು.  ಕಲಬುರಗಿ ತಾಲೂಕಿನ ಯಳವಂತಗಿ ಬಿ. ಗ್ರಾಮದ ಸವಿತಾ ಸ್ವ ಸಹಾಯ ಸಂಘವು ಕ್ರಮಿಸಿದ ಸ್ವಾವಲಂಬನೆಯ ಹಾದಿ.  ಕಲಬುರಗಿಯ ಸಿದ್ರಾಮಪ್ಪ ಪೋಲೀಸ ಪಾಟೀಲ ಹಾಗೂ ಸದಸ್ಯರಿಂದ ತತ್ವಪದಗಳು.  ಇವುಗಳ ಜೊತೆಗೆ. ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್, ನುಡಿಮುತ್ತು , ನಗೆಹನಿ ಮೂಡಿ ಬರಲಿವೆ.  ಸರಣಿಯ ನಿರೂಪಣಾ ಸಾಹಿತ್ಯ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಶ್ರೀs ಸೋಮಶೇಖರ ಎಸ್. ರುಳಿಯವರು ವಹಿಸಿಕೊಂಡಿದ್ದಾರೆ ಎಂದು ಕಲಬುರಗಿ ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ತಿಳಿಸಿದ್ದಾರೆ.

ಜ.05 ರಿಂದ ಬೀದರ್‍ನಲ್ಲಿ ಸೇನಾ ಭರ್ತಿ ರ್ಯಾಲಿ

ಕೊಪ್ಪಳ, ಡಿ.18 (ಕರ್ನಾಟಕ ವಾರ್ತೆ) : ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇನಾ ಭರ್ತಿ ರ್ಯಾಲಿಯು 2016 ರ ಜ.05 ರಿಂದ 15 ರವರೆಗೆ ಬೀದರ್‍ನಲ್ಲಿ ನಡೆಯಲಿದ್ದು, ಆಸಕ್ತ ಯುವಕರು ಈ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
     ಬೆಂಗಳೂರಿನ ನೇಮಕಾತಿ ವಲಯ ಹೆಡ್‍ಕ್ವಾರ್ಟರ್ಸ ಮತ್ತು ಬೆಳಗಾವಿಯ ಸೈನ್ಯ ನೇಮಕಾತಿ ಕಛೇರಿ ಇವರ ವತಿಯಿಂದ ನಡೆಯಲಿರುವ ಈ ಸೇನಾಭರ್ತಿ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಗುಲಬರ್ಗಾ, ಕೊಪ್ಪಳ, ರಾಯಚೂರು  ಮತ್ತು ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳನ್ನು ಸೇನೆಯ ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ತಾಂತ್ರಿಕ, ಸೈನಿಕ ಲಿಪಿಕ/ಉಗ್ರಾಣ ಪಾಲಕ, ಸೈನಿಕ ಟ್ರೇಡ್ಸ್‍ಮನ್ ಹಾಗೂ ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಅಲ್ಲದೇ ಮಾಜಿ ಸೈನಿಕರನ್ನು ಕೂಡ ಡಿ.ಎಸ್.ಸಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.  ಎಲ್ಲ ಹುದ್ದೆಗಳಿಗೆ 17 1/2 ವರ್ಷದಿಂದ 23 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು (05-ಜನೇವರಿ 93 ರಿಂದ 05 ಜುಲೈ 98 ರೊಳಗೆ ಜನಿಸಿದವರಾಗಿರಬೇಕು). 
     ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ  ಪ್ರತಿ ವಿಷಯದಲ್ಲಿ ಕನಿಷ್ಟ ಶೇ.33% ಹಾಗೂ ಒಟ್ಟಾರೆ ಕನಿಷ್ಟ ಶೇ.45% ಅಂಕಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಸೈನಿಕ ತಾಂತ್ರಿಕ ಹುದ್ದೆಗೆ 17 1/2 ವರ್ಷದಿಂದ 23 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು (05-ಜನೇವರಿ 93 ರಿಂದ 05 ಜುಲೈ 98 ರೊಳಗೆ ಜನಿಸಿದವರಾಗಿರಬೇಕು), ಪಿಯುಸಿ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಿಕ, ಗಣಿತ ಹಾಗೂ ಇಂಗ್ಲೀಷ್‍ನಲ್ಲಿ ಶೇ.45% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಎಸ್.ಎಸ್.ಎಲ್.ಸಿ ನಂತರದ ಎಂಜಿನಿಯರಿಂಗ್ ಇನ್ ಡಿಪ್ಲೋಮಾದಲ್ಲಿ ಶೇ.50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
      ಸೈನಿಕ ಲಿಪಿಕ/ಉಗ್ರಾಣ ಪಾಲಕ ಹುದ್ದೆಗಳಿಗೆ ಪಿಯುಸಿ/10+2/ಇಂಟರ್ ಮೀಡಿಯೇಟ್‍ನಲ್ಲಿ ಶೇ.50 ಸರಾಸರಿಯೊಂದಿಗೆ ಹಾಗೂ ಪ್ರತಿಯೊಂದು ವಿಷಯದಲ್ಲಿ ಕನಿಷ್ಟ ಶೇ.40% ನೊಂದಿಗೆ ಪಾಸಾಗಿರಬೇಕು. ಅಭ್ಯರ್ಥಿಯು ಕಡ್ಡಾಯವಾಗಿ ಇಂಗ್ಲೀಷ್, ಗಣಿತ, ಎಸ್‍ಎಸ್‍ಎಲ್‍ಸಿ ಅಥವಾ ಪಿಯುಸಿಯಲ್ಲಿ ಕಲಿತಿರಬೇಕು ಹಾಗೂ ಶೇ.40% ರಷ್ಟು ಅಂಕಗಳನ್ನು ಪ್ರತಿಯೊಂದು ವಿಷಯದಲ್ಲಿ ಪಡೆದಿರಬೇಕು. 
     ಸೈನಿಕ ಟ್ರೇಡ್ಸ್‍ಮನ್ ಹುದ್ದೆಗಳಿಗೆ ಎಸ್‍ಎಸ್‍ಎಲ್‍ಸಿ ಯನ್ನು ಕನಿಷ್ಠ ಶೇ.33 ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಸೈನಿಕ ಶುಶ್ರೂಷಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು 17 1/2 ವರ್ಷದಿಂದ 23 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು (05-ಜನೇವರಿ 93 ರಿಂದ 05 ಜುಲೈ 98 ರೊಳಗೆ ಜನಿಸಿದವರಾಗಿರಬೇಕು), ಪಿಯುಸಿ ಅಥವಾ ತತ್ಸಮಾನ ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಜೀವಶಾಸ್ತ್ರ ಹಾಗೂ ಇಂಗ್ಲೀಷ್‍ನೊಂದಿಗೆ ಸರಾಸರಿ ಶೇ.50% ಪ್ರತಿಯೊಂದು ವಿಷಯದಲ್ಲಿ ಶೇ.40% ಪಡೆದಿರಬೇಕು, ಅಥವಾ ಬಿ.ಎಸ್.ಸಿ (ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಜೈವಿಕಶಾಸ್ತ್ರ) ಪದವಿ ಹಾಗೂ ಇಂಗ್ಲೀಷ (ಪಾಸಾಗಿದ್ದರೆ ಸಾಕು) 10+2 ಮಟ್ಟದಲ್ಲಿನ ಅಂಕಗಳ ಷರತ್ತುಗಳು ಅನ್ವಯಿಸುವುದಿಲ್ಲ. ಆದರೆ ಮೇಲೆ ತಿಳಸಿದ ನಾಲ್ಕು ವಿಷಯಗಳನ್ನು 10+2/ಪಿಯುಸಿ ಮಟ್ಟದಲ್ಲಿ ಕಲಿತಿರಬೇಕು.
     ಆನ್‍ಲೈನ್ ಮೂಲಕ ಅರ್ಜಿಗಳನ್ನು ವೆಬ್‍ಸೈಟ್  www.joinindianarmy.nic.in ಮೂಲಕ ಸಲ್ಲಿಸಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ನೋಂದಣಿ ಮಾಡಿಕೊಳ್ಳುವಾಗ ಸಮಸ್ಯೆಗಳು ಕಂಡುಬಂದಲ್ಲಿ  www.joinindianarmy@gov.in  ಗೆ ಇ-ಮೇಲ್ ಮಾಡಿ ಪರಿಹರಿಸಿಕೊಳ್ಳಬಹುದಾಗಿದೆ.  ರ್ಯಾಲಿ ನಡೆಯುವ ಸ್ಥಳದಲ್ಲಿ ಯಾವುದೇ ತರಹದ ಮೊಬೈಲ್‍ನ್ನು ಅಭ್ಯರ್ಥಿಗಳು ತರಬಾರದು.  ದೈಹಿಕದಾಢ್ರ್ಯತೆ ಪರೀಕ್ಷೆಯನ್ನು ಅಭ್ಯರ್ಥಿಗಳು ತಮ್ಮ ಹೊಣೆಯ ಮೇಲೆ ನಿಭಾಯಿಸಿಕೊಳ್ಳಬೇಕು, ದೈಹಿಕ ಶಕ್ತಿಯನ್ನು ಹೆಚ್ಚಿಸುವಂತಹ ಉದ್ದೀಪನ ಮದ್ದುಗಳನ್ನು ಬಳಸುತ್ತಿಲ್ಲವೆಂದು ಖಚಿತ ಪಡಿಸಿಕೊಳ್ಳಲು ಭರ್ತಿ ಸಮಯದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. 
ಮಧ್ಯವರ್ತಿಗಳ ಬಗ್ಗೆ ಎಚ್ಚರ : ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಮಧ್ಯವರ್ತಿಗಳ ಹಾವಳಿ ಬಗ್ಗೆ ಎಚ್ಚರ ವಹಿಸಬೇಕು.  ವದಂತಿಗಳಿಗೆ ಕಿವಿಗೊಡಬಾರದು.   ದೈಹಿಕ, ಲಿಖಿತ ಅಥವಾ ವೈದ್ಯಕೀಯ ಪರೀಕ್ಷೆಗಳಲ್ಲಿ ನಿಮಗೆ ಯಾರು ಸಹಾಯ ಮಾಡಲಾರರು.   ಒಂದು ವೇಳೆ ಯಾವುದೇ ಮಧ್ಯವರ್ತಿಗಳು ಕೆಲಸ ಕೊಡಿಸುವುದಾಗಿ ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು.  ಅಭ್ಯರ್ಥಿಗಳ ಸ್ವಂತ ಅರ್ಹತೆ ಹಾಗೂ ಕ್ಷಮತೆಯೇ ಅವರನ್ನು ಆಯ್ಕೆ ಮಾಡಲು ಸಹಕಾರಿಯಾಗುವುದು.
     ಈ ಕುರಿತು ಹೆಚ್ಚಿನ ಮಾಹಿತಿಗಾಗಿ  ಸೈನಿಕ ನೇಮಕಾತಿ ಕಛೇರಿ, ಬೆಳಗಾವಿ ದೂರವಾಣಿ ಸಂಖ್ಯೆ: 0831-2465550 ಹಾಗೂ ಐವಿಆರ್‍ಎಸ್ ದೂರವಾಣಿ  ಸಂಖ್ಯೆ  080-25599290 ನ್ನು  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ಡಿ.18 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕೃಷ್ಣಗಿರಿ ಕಾಲೋನಿಯ  ಸೀಮಾ (19) ಗಂಡ ಉಮೇಶ ಚಿತ್ರಗಾರ ಎಂಬ ಮಹಿಳೆ ಕಳೆದ ಡಿ. 13 ರಿಂದ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣಾ ಪ್ರಭಾರಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಮಹಿಳೆಯು ಡಿ.13 ರ ಭಾನುವಾರದಂದು ಮುಂಜಾನೆ 6.00 ಗಂಟೆಗೆ ಕುಷ್ಟಗಿಯ ತನ್ನ ಗಂಡನ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತಂತೆ ಮಹಿಳೆಯ ತವರು ಮನೆ ತಳಕಲ್ ಸೇರಿದಂತೆ  ಸಂಬಂಧಿಕರ ಮನೆಗಳಲ್ಲೂ ಮಹಿಳೆಯ ಬಗ್ಗೆ ಸುಳಿವು ಸಿಕ್ಕಿಲ್ಲ.  
     ಕಾಣೆಯಾದ ಮಹಿಳೆಯ ವಿವರ ಇಂತಿದೆ ಹೆಸರು: ಸೀಮಾ, ಗಂಡ ಉಮೇಶ ಚಿತ್ರಗಾರ, ವಯಸ್ಸು: 19, ಸಾ|| ಕೃಷ್ಣಗಿರಿ ಕಾಲೋನಿ, ಕುಷ್ಟಗಿ.  ತಂದೆ: ರೇಣುಕಾರಾಜ,  ಜಾತಿ: ಸೋಮವಂಶ ಕ್ಷತ್ರೀಯ, ಎತ್ತರ: 5 ಫೀಟು, ವಿದ್ಯಾರ್ಹತೆ: 9ನೇ ತರಗತಿ, ಕನ್ನಡ ಭಾಷೆ ಮಾತನಾಡುತ್ತಾಳೆ, ಸಾಧಾರಣ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು ತಲೆಕೂದಲು, ದುಂಡನೆಯ ಮುಖ, ಹಣೆಯ ಮಧ್ಯದಲ್ಲಿ ಒಂದು ಸಣ್ಣ ಹಚ್ಚೆ ಹಾಕಿಸಲಾಗಿದೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಡಿಸೈನ್  ಸೀರೆ, ಕುಪ್ಪಸ ತೊಟ್ಟಿರುತ್ತಾಳೆ.
     ಈ  ಚಹರೆಯುಳ್ಳ ಮಹಿಳೆಯ ಬಗ್ಗೆ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಗೊತ್ತಾದಲ್ಲಿ, ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 08536-267033, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: 08539-230222 ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣಾ ಪ್ರಭಾರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.21 ರಿಂದ ಹನಮಸಾಗರದಲ್ಲಿ ರಾಜ್ಯಮಟ್ಟದ ದೊಣ್ಣೆವರಸೆ ಪಂದ್ಯಾವಳಿ

ಕೊಪ್ಪಳ, ಡಿ.18 (ಕರ್ನಾಟಕ ವಾರ್ತೆ) : ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಪ್ಪಳ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಹನಮಸಾಗರ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಪದವಿ ಪೂರ್ವ ಶಿಕ್ಷಣ  ವಿದ್ಯಾರ್ಥಿಗಳ ಸಿಲಂಬಮ್(ದೊಣ್ಣೆ ವರಸೆ) ಪಂದ್ಯಾವಳಿ ಡಿ.21 ಮತ್ತು 22 ರಂದು ಕುಷ್ಟಗಿ ತಾಲೂಕು ಹನಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೈದಾನದಲ್ಲಿ ಆಯೋಜಿಸಲಾಗಿದೆ.
     ಡಿ.21 ರಂದು ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ತ್ಯಾಗರಾಜನ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಹಾಯಕ ಆಯುಕ್ತ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಕ್ರೀಡಾ ಜ್ಯೋತಿ ಬೆಳಗಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಿ.ಎಸ್.ಸುರೇಶ್, ಕ್ರೀಡಾ ಸಹಾಯಕ ನಿರ್ದೇಶಕ ಡೀರೇಶಕುಮಾರ,  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ, ಕುಷ್ಟಗಿ ತಹಶೀಲ್ದಾರ ವೇದವ್ಯಾಸ ಮುತಾಲಿಕ್, ಹಿರಿಯ ಪ್ರಾಚಾರ್ಯ ಎಸ್.ಎನ್. ಕಡಪಟ್ಟಿ, ಸಿ.ಪಿ.ಐ ಗಿರೀಶ ಆರೋಡಕರ್, ಕರ್ನಾಟಕ ರಾಜ್ಯ ಸಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್.ಜುಮ್ಮಣ್ಣವರ್ ಸೇರಿದಂತೆ ರಾಜ್ಯ ಅಮೇಚೂರ್ ಸಿಲಂಬಮ್ ಸಂಸ್ಥೆಯ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

Thursday, 17 December 2015

ಮರಣದ ಸ್ಪಷ್ಟ ಕಾರಣಗಳು ಹೆಚ್ಚಿನ ಸಂಶೋಧನೆಗೆ ಸಹಕಾರಿ- ಡಿ.ಸಿ. ಕನಗವಲ್ಲಿ

ಕೊಪ್ಪಳ ಡಿ. 17 (ಕರ್ನಾಟಕ ವಾರ್ತೆ): ಯಾವುದೇ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವೈದ್ಯರು ಮರಣದ ಕಾರಣವನ್ನು ಸ್ಪಷ್ಟವಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು.  ಅಂಕಿ-ಅಂಶಗಳು  ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಸೇರಿದಂತೆ ಹಲವು ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.


     ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ‘ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ’ ಕುರಿತು ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಗುರುವಾರ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ವೈದ್ಯರು ಯಾವುದೇ ವ್ಯಕ್ತಿಯ ಮರಣದ ಪ್ರಮಾಣ ಪತ್ರದಲ್ಲಿ, ಆ ವ್ಯಕ್ತಿಯ ಮರಣದ ಕಾರಣವನ್ನು ಸ್ಪಷ್ಟವಾಗಿ ನಮೂದಿಸದಿರುವುದನ್ನು, ವೈದ್ಯರ ಕರ್ತವ್ಯ ನಿರ್ಲಕ್ಷ್ಯ ಎಂದೇ ಪರಿಗಣಿಸಲಾಗುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಂದ ಸಾವು ಪ್ರಕರಣಗಳು ಸಂಭವಿಸುತ್ತವೆ. ರಕ್ತಹೀನತೆ ಎಂಬ ಪದ ಸಾಮಾನ್ಯವಾಗಿದ್ದರೂ, ರಕ್ತ ಹೀನತೆಯ ಬಗ್ಗೆ ಅನೇಕ ವಿಶ್ಲೇಷಣೆಗಳಿವೆ.  ನಿಖರ ವರದಿಯಿಂದ ಮಾತ್ರ ರಕ್ತಹೀನತೆಯ ಪ್ರಮಾಣ ನಮ್ಮ ದೇಶದಲ್ಲಿ ಎಷ್ಟು ಇದೆ ಎಂಬುದನ್ನು ಅಂಕಿ-ಅಂಶಗಳು ನಿಖರವಾಗಿ ತಿಳಿಸುತ್ತವೆ.  ಸಾವಿನ ಕಾರಣವನ್ನು ಆಯಾ ಕರ್ತವ್ಯ ನಿರತ ವೈದ್ಯರು ಸ್ಪಷ್ಟವಾಗಿ ನಮೂದಿಸಿದಲ್ಲಿ, ಆಯಾ ಪ್ರದೇಶದಲ್ಲಿನ ಭೌಗೋಳಿಕ ಹವಾಮಾನದ ತೊಂದರೆಗಳು, ಪ್ರಮುಖ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ.  ಅಲ್ಲದೆ ಆ ಪ್ರದೇಶದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಗಳಿಗೂ ಅನುಕೂಲವಾಗಲಿದೆ.  ವೈದ್ಯರು ಮರಣದ ಪ್ರಮಾಣಪತ್ರದಲ್ಲಿ ಮರಣದ ನಿಖರ ಕಾರಣವನ್ನು ನಮೂದಿಸಿದಲ್ಲಿ, ಅದು ಮನುಷ್ಯರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಅವಶ್ಯಕತೆ ಇದೆ.  ಮರಣ ಕಾರಣದ ಸ್ಪಷ್ಟ ವರದಿಯ ಅಂಕಿ-ಅಂಶಗಳ ಆಧಾರದಲ್ಲಿ ಸರ್ಕಾರ ಆರೋಗ್ಯ ಯೋಜನೆಗಳಿಗೆ ಸಂಬಂಧಿತ ತನ್ನ ಕಾರ್ಯ ನೀತಿಯನ್ನು ರೂಪಿಸಲು ಸಹಕಾರಿಯಾಗಲಿದೆ.  ವೈದ್ಯರು ಇಂತಹ ಕಾರ್ಯಗಾರವನ್ನು ಗಂಭೀರವಾಗಿ ಪರಿಗಣಿಸಿ, ಮಾರ್ಗಸೂಚಿಗಳಂತೆ ಕ್ರಮ ವಹಿಸಬೇಕು.  ಈ ದಿಸೆಯಲ್ಲಿ ಎಲ್ಲ ವೈದ್ಯಾಧಿಕಾರಿಗಳು, ಆಸಕ್ತಿ ವಹಿಸಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವೈದ್ಯರಲ್ಲಿ ಮನವಿ ಮಾಡಿದರು.
      ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಭೀಮಶಾ ಸಿಂಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನನ ಮತ್ತು ಮರಣ ನೋಂದಣಿ ಅಧಿನಿಯಮದಡಿ ರೋಗಿಗೆ ಶುಶ್ರೂಷೆ ನೀಡಿದ ವೈದ್ಯರು ರೋಗಿಯ ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.  ಈ ರೀತಿ ವಾರ್ಷಿಕವಾಗಿ ಸಂಗ್ರಹಿಸಲಾಗುವ ಅಂಕಿ-ಅಂಶಗಳನ್ನು ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ವಸತಿ, ಆರೋಗ್ಯ, ಶಿಕ್ಷಣ ಮತ್ತಿತರ ಯೋಜನಾ ಕಾರ್ಯಕ್ರಮಗಳನ್ನು ನಿರೂಪಿಸಲು ಉಪಯುಕ್ತವಾಗಲಿದ್ದು, ಆರೋಗ್ಯ ಸಂಶೋಧನಾ ಕಾರ್ಯದಲ್ಲಿ ಇವು ಮಹತ್ವವನ್ನು ಪಡೆಯಲಿವೆ.  ಈ ಕಾರಣದಿಂದಾಗಿಯೇ ವೈದ್ಯಾಧಿಕಾರಿಗಳಿಗೆ ಅರಿವು ಮೂಡಿಸಲು ಮೂರು ವರ್ಷಕ್ಕೊಮ್ಮೆ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
       ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ ಡಾ. ದಾನರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕೊಪ್ಪಳ ಕಿಮ್ಸ್ ಉಪನ್ಯಾಸಕರುಗಳಾದ ಡಾ. ಅನಿರುದ್ ಕುಷ್ಟಗಿ, ಡಾ. ಅಜೇಯಕುಮಾರ್, ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಭಾಗವಹಿಸಿದ್ದರು.