Thursday, 27 November 2014

ಲಕ್ಷ ಲಕ್ಷ ಆದಾಯ : ಪಪ್ಪಾಯ ಜಪದಲ್ಲಿ ಕೊಪ್ಪಳ ರೈತರು


                 ಬರದ ನಾಡಾದರೂ ಭತ್ತದ ಕಣಜ ಎಂದೇ ಹೆಸರಾದ ಕೊಪ್ಪಳ ಜಿಲ್ಲೆ ಹೈದರಾಬಾದ ಕರ್ನಾಟಕ ಪ್ರಾಂತ್ಯದಲ್ಲಿ ಕೃಷಿಯಲ್ಲಿ ಮೇಲುಗೈ ಸಾಧಿಸಿದೆ.  ತೋಟಗಾರಿಕೆಯಲ್ಲಿಯೂ ಮುಂಚೂಣಿ ಸ್ಥಾನದಲ್ಲಿರುವ ಜಿಲ್ಲೆಯ ರೈತರು ದಾಳಿಂಬೆ ರಫ್ತು ಮಾಡುವ ಮೂಲಕ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಹೆಸರು ದಾಖಲಿಸಿದವರು.  ಇದೀಗ ಜಿಲ್ಲೆಯ ರೈತರು ಪಪ್ಪಾಯ ಬೆಳೆಯುವುದರ ಮೂಲಕ ಮತ್ತೊಮ್ಮೆ ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.

                2012 ನೇ ವರ್ಷವನ್ನು ತೋಟಗಾರಿಕೆ ವರ್ಷ ಎಂದು ಘೋಷಿಸಿದ ತೋಟಗಾರಿಕೆ ಇಲಾಖೆಯು ``ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ`` ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ರೈತರು ಬೆಳೆಯುವ ಬೆಳೆಗಳನ್ನೇ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೆಳೆಯುವಂತೆ ಯೋಜನೆ ರೂಪಿಸಿ ಸಣ್ಣ, ಅತೀ ಸಣ್ಣ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದೆ.  ಅಲ್ಲದೆ ತೋಟಗಾರಿಕೆಗೆ ಪ್ರಮುಖವಾಗಿರುವ ತಾಂತ್ರಿಕತೆಯನ್ನು ರೈತರಿಗೆ ವರ್ಗಾವಣೆ ಮಾಡಿ ಫಲಾನುಭವಿಗಳನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ಯುವ ಯತ್ನಕ್ಕೆ ಚಾಲನೆ ನೀಡಿದೆ.  ಇದರಿಂದಾಗಿ ರಾಜ್ಯದ ಅನೇಕ ಫಲಾನುಭವಿ ರೈತರು ತಮ್ಮ ಆದಾಯ ವೃದ್ಧಿಸಿಕೊಂಡು ಸಂತಸದ ಜೀವನ ನಡೆಸುವಂತಾಗಿದೆ.  ಇದರ ಹಿಂದೆ ತೋಟಗಾರಿಕೆ ಇಲಾಖೆಯ ಪರಿಶ್ರಮವೂ ಅಡಗಿದೆ.

              ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ರೈತ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿವಿಧ ಬೆಳೆಗಳಿಗೆ ಈ ಯೋಜನೆಯಡಿ ಸಹಾಯಧನ ನೀಡಲಾಗಿದೆ.  ಆದರೆ ಜಿಲ್ಲೆಯಲ್ಲಿ ಇತರೆ ಬೆಳೆ ಬೆಳೆದ ರೈತರಿಗಿಂತ, ಪಪ್ಪಾಯ ಬೆಳೆ ಬೆಳೆದ ರೈತರು ಹೆಚ್ಚಿನ ಲಾಭ ಗಳಿಸುತ್ತಿದ್ದಾರಲ್ಲದೆ, ಇತರರಿಗೂ ಮಾದರಿಯಾಗಿದ್ದಾರೆ.  ಹೀಗಾಗಿ ಈಗ ಕೊಪ್ಪಳ ಜಿಲ್ಲೆಯಾದ್ಯಂತ ರೈತರು ಪಪ್ಪಾಯ ಜಪ ಮಾಡುತ್ತಿದ್ದಾರೆ.  ಕೇವಲ 2 ವರ್ಷಗಳಲ್ಲೇ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಲ್ಲ ಪಪಾಯ ಕೆಲವೇ ವರ್ಷಗಳಲ್ಲಿ ಜನಪ್ರಿಯ ಅಲ್ಪಾವಧಿ ಬೆಳೆಯಾಗುವತ್ತ ದಾಪುಗಾಲು ಹಾಕಿದೆ.
    ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಿದ ಅನೇಕ ಪಪ್ಪಾಯ ಬೆಳೆಗಾರರು ಜಿಲ್ಲೆಯಾದ್ಯಂತ ತಮ್ಮ ಯಶೋಗಾಥೆಗಳನ್ನು ಇತರರಿಗೂ ಸಾರಿದ್ದಾರೆ. ಉದಾಹರಣೆಗೆ ಮಾರುತಿ ಕಂದಕೂರು 15 ಎಕರೆ, ಬೀರಲದಿನ್ನಿ ವೆಂಕನಗೌಡರು ಕನಕಗಿರಿ ಹೋಬಳಿ -  8 ಎಕರೆ. ರಾಮರಾವ್ ಗಿಣಿಗೇರಾ-8 ಎಕರೆ.  ವಾಸುಬಾಬು ಹಿಟ್ನಾಳ, 8 ಎಕರೆ.  ಪ್ರಹ್ಲಾದ ಜಾನ್- ಹಿರೇಬಗನಾಳ – 8 ಎಕರೆ ಹೀಗೆ ಜಿಲ್ಲೆಯಾದ್ಯಂತ ಪಪ್ಪಾಯ ಬೆಳೆದ ರೈತರು ಈಗಾಗಲೆ ಸುಮಾರು 20 ರಿಂದ 30 ಲಕ್ಷ ಆದಾಯ ಗಳಿಸಿದ್ದು, ಇನ್ನೂ  30 ರಿಂದ 60 ಲಕ್ಷ  ರೂ.ಗಳವರೆಗೆ ಆದಾಯ ಬರುವ ನಿರೀಕ್ಷೆ ಹೊಂದಿದ್ದಾರೆ.  ಇದು ಕೇವಲ ಕೊಪ್ಪಳ ತಾಲೂಕಿನ ರೈತರ ಕಥೆಯಲ್ಲ.  ಕುಷ್ಟಗಿ, ಯಲಬುರ್ಗಾ & ಗಂಗಾವತಿ ಹೀಗೆ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿಯೂ ಪಪ್ಪಾಯ ಬೆಳೆದ ರೈತರು ಉತ್ತಮ ಆದಾಯ ಗಳಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
    ಕನಕಗಿರಿಯ ಕನಕಪ್ಪ ಎಂಬ ರೈತ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮಾವಿನಲ್ಲಿ ಪಪ್ಪಾಯ ಮಿಶ್ರ ಬೆಳೆ ಬೆಳೆದು ಹೊಸ ಪ್ರಯೋಗ ಮಾಡಿ ಯಶಸ್ವಿಯೂ ಆಗಿದ್ದಾರೆ.  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಸಂತಪ್ಪನವರ ಮಾರ್ಗದರ್ಶನದಲ್ಲಿ ಪಪ್ಪಾಯ ಬೆಳೆದ ಕನಕಪ್ಪ, ತೋಟಗಾರಿಕೆ ಯೋಜನೆ ಸದ್ಬಳಕೆ ಮಾಡಿಕೊಂಡು ಪರಿಶ್ರಮ ವಹಿಸಿ ಪಪ್ಪಾಯ ಬೆಳೆದಿದ್ದಾರೆ.  ಒಟ್ಟು 3 ಎಕರೆಯಲ್ಲಿ ಪಪ್ಪಾಯ ಬೆಳೆದ ಇವರಿಗೆ ಸರಾಸರಿ ಪ್ರತಿ ಕೆ.ಜಿ.ಗೆ 10 ರೂ. ಬೆಲೆ ದೊರಕಿದ್ದು ಸುಮಾರು 200 ಟನ್‍ಗೂ ಹೆಚ್ಚು ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.  ಅದೇ ರೀತಿ ಕುಷ್ಟಗಿ ತಾಲೂಕಿನ ಮಲ್ಲಪ್ಪ ಗಿರಡ್ಡಿ  8 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದು 500 ಟನ್ನಿಗೂ ಮೀರಿ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.  ಕುಷ್ಟಗಿ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪಾಟೀಲರವರು ಹೇಳುವಂತೆ ಈ ಯೋಜನೆ ಅಡಿ ಆಯ್ಕೆಯಾದ ತಾಲೂಕಿನ ಫಲಾನುಭವಿಗಳ ಪೈಕಿ ಗಿರಡ್ಡಿ ರವರು ಹೆಚ್ಚಿನ ಇಳುವರಿ ಪಡೆದು ಇತರರಿಗಿಂತ ಭಿನ್ನವಾಗಿದ್ದಾರೆ.

                       ಹೀಗೆ ಜಿಲ್ಲೆಯಾದ್ಯಂತ ಪಪ್ಪಾಯ ಬೆಳೆಯಲ್ಲಿನ ಆರ್ಥಿಕ ಸವಿ ಕಂಡ ರೈತರ ಬಗ್ಗೆ ಮಾಹಿತಿ ಪಡೆಯುತ್ತಿರುವ ಅನೇಕ ರೈತರು ಪಪ್ಪಾಯ ಬೆಳೆ ಬೇಸಾಯ, ತಾಂತ್ರಿಕತೆ ಕುರಿತಂತೆ ಮಾಹಿತಿಗಾಗಿ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ಫೋನಾಯಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.  ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ರೈತರು ರಾಜ್ಯದ ವಿವಿಧ ಭಾಗಗಳಿಂದ ಫೋನಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಹಾರ್ಟಿ ಕ್ಲಿನಿಕ್‍ನ ವಿಷಯ ತಜ್ಞ ವಾಮನಮೂರ್ತಿ. ಪಪ್ಪಾಯ ಬೆಳೆ ಬೇಸಾಯ ಪದ್ಧತಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಾಮನಮೂರ್ತಿ- 9452672039 ಇವರನ್ನು ಸಂಪರ್ಕಿಸಬಹುದಾಗಿದೆ.
   

                                                                                                                         - ತುಕಾರಾಂರಾವ್ ಬಿ.ವಿ.
                                                                                                                     ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ
Post a Comment