Saturday, 29 November 2014

ಡಿ. 03 ರಂದು ಕೊಪ್ಪಳದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ


ಕೊಪ್ಪಳ,ನ.29(ಕರ್ನಾಟಕ ವಾರ್ತೆ): ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿಕಲಚೇತನರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಡಿ.03 ರಂದು ಕ್ರೀಡಾಕೂಟ ಹಾಗೂ ಸಮಾರಂಭವನ್ನು ಕೊಪ್ಪಳದಲ್ಲಿ ಏರ್ಪಡಿಸಲಾಗಿದೆ. 
ಡಿ.03 ರಂದು ಬೆಳಿಗ್ಗೆ 10 ಗಂಟೆಗೆ ಬಾಲಕೀಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ  ಕ್ರೀಡಾಕೂಟ ಹಾಗೂ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಸಮಸ್ತ ವಿಕಲಚೇತನರು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಹಿಳೆಯರಿಗೆ ಡ್ರೇಸ್ ಡಿಸೈನಿಂಗ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ,ನ.29(ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಮಹಿಳೆಯರಿಗೆ 21 ದಿನಗಳ ಉಚಿತ ಡ್ರೇಸ್‍ಡಿಸೈನಿಂಗ್  ತರಬೇತಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.09 ಕೊನೆಯ ದಿನವಾಗಿದ್ದು, ಡಿ.10 ರ ಬೆಳಿಗ್ಗೆ 10.30 ಕ್ಕೆ ಸಂದರ್ಶನ ಜರುಗಲಿದೆ. ತರಬೇತಿಯು ಡಿ.11 ರಿಂದ ಪ್ರಾರಂಭವಾಗಲಿದೆ. ಅರ್ಜಿದಾರರು 18 ರಿಂದ 40 ವರ್ಷದವರಾಗಿರಬೇಕು, 8ನೇ ತರಗತಿ ಉತ್ತೀರ್ಣರಾಗಿರಬೇಕು, ವಾರ್ಷಿಕ ಆದಾಯ 40,000 ರೂ. ಮೀರಿರಬಾರದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು, ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿಗಳನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ : 08539-231038 ಸಂಪರ್ಕಿಸಬಹುದು ಎಂದು ಎಸ್‍ಬಿಹೆಚ್ ಆರ್‍ಸೆಟಿಯ ನಿರ್ದೇಶಕರು ತಿಳಿಸಿದ್ದಾರೆ.

ಡಿ.01 ರಂದು ವಿಶ್ವ ಏಡ್ಸ್ ದಿನಾಚರಣೆ : ಜಾಗೃತಿ ಜಾಥಾ


ಕೊಪ್ಪಳ,ನ.29(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗಳೂರು, ರೆಡ್ ರಿಬ್ಬನ್ ಕ್ಲಬ್‍ಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಡಿ.01 ರಂದು ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಅಂದು ಬೆಳಿಗ್ಗೆ 8 ಗಂಟೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಾಥಾ ಕೊಪ್ಪಳ ನಗರದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಿಂದ ಹೊರಟು ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ, ಸಿಂಪಿ ಲಿಂಗಣ್ಣ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಮೂಲಕ ಹಳೆ ಜಿಲ್ಲಾ ಆಸ್ಪತ್ರೆಗೆ ಆಗಮಿಸಲಿದೆ.  ಜಾಥಾದಲ್ಲಿ ಕೋಲಾಟ ಹಾಗೂ ಗೀಗೀ ಪದ ಕಲಾ ತಂಡಗಳಿಂದ ಹೆಚ್.ಐ.ವಿ. ಕುರಿತು ಜಾಗೃತಿ ಮೂಡಿಸಲಾಗುವುದು.
ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಮಾರಂಭ ಅಂದು ಬೆಳಿಗ್ಗೆ 11 ಗಂಟೆಗೆ ಹಳೇ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜರುಗಲಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ|| ಎಸ್.ಬಿ. ದಾನರೆಡ್ಡಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀಕಾಂತ ಆರ್.ಬಾಸೂರು, ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾಸ್ಪತ್ರೆಯ ಎಆರ್‍ಟಿ ವೈದ್ಯಾಧಿಕಾರಿ ಡಾ|| ರೇಖಾ ಎಂ. ಅವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಡಿ.01 ರಿಂದ ಮಕ್ಕಳ ಸುರಕ್ಷಿತ ಸಪ್ತಾಹ ಆಚರಣೆ


ಕೊಪ್ಪಳ,ನ.29(ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿ.01 ರಿಂದ 6 ರವರೆಗೆ ಮಕ್ಕಳ ಸುರಕ್ಷಿತ ಸಪ್ತಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಡಿ.02 ರಂದು ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ಮೈದಾನದಲ್ಲಿ ಪ್ರಭಾತಪೇರಿಯೊಂದಿಗೆ ಜಾಥಾ ಪ್ರಾರಂಭಿಸಲಾಗುವುದು.  ನಂತರ ಬೆ. 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ವಿಚಾರಗೋಷ್ಠಿ ಏರ್ಪಡಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 28 November 2014

ಡಿ. 01 ರಂದು ವಿಶ್ವ ಏಡ್ಸ್ ದಿನ : ‘ಸೊನ್ನೆಗೆ ತನ್ನಿ’


ಕೊಪ್ಪಳ ನ.27 ಕರ್ನಾಟಕ ವಾರ್ತೆ: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಕೊಪ್ಪಳ ಇವರ ವತಿಯಿಂದ ಡಿ.1 ರಂದು “ವಿಶ್ವ ಏಡ್ಸ್ ದಿನ” ಆಚರಣೆ ಮಾಡಲಾಗುತ್ತಿದ್ದು. ಈ ಬಾರಿ “ಸೊನ್ನೆಗೆ ತನ್ನಿ” ಎನ್ನುವ ಮುಖ್ಯ ಘೋಷಣೆ ನಿಗದಿಪಡಿಸಲಾಗಿದೆ.
     ಹೆಚ್.ಐ.ವಿ/ಏಡ್ಸ್ ಇದು ವೈರಸ್‍ನಿಂದ ಬರುವ ಕಾಯಿಲೆ. ಹೆಚ್.ಐ.ವಿ. ವೈರಸ್ಸನ್ನು ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ಎಚ್.ಐ.ವಿ ವೈರಸ್ ಮನುಷ್ಯನ ದೇಹದಲ್ಲಿ ಮಾತ್ರ ಬದುಕಿ ಉಳಿಯಬಲ್ಲದು. ಎಚ್.ಐ.ವಿ ವೈರಸ್ ಮಾನವನ ದೇಹದಲ್ಲಿರುವ ಬಿಳಿರಕ್ತ ಕಣಗಳನ್ನು ನಾಶಮಾಡಿ ಮಾನವನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವುದು. ಏಡ್ಸ್ ರೋಗವು ಹಲವು ರೋಗ ಲಕ್ಷಣಗಳ ಒಕ್ಕೂಟವಾಗಿದ್ದು, ಹೆಚ್.ಐ.ವಿ.ಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.
ಹೆಚ್.ಐ.ವಿ ಹೇಗೆ ಹರಡುತ್ತದೆ :- ಹೆಚ್.ಐ.ವಿ ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತವಾಗಿ ಲೈಂಗಿಕ ಸಂಪರ್ಕ ಹೊಂದಿದಾಗ,  ಹೆಚ್.ಐ.ವಿ ಸೋಂಕಿತ ರಕ್ತವನ್ನು ಪಡೆದುಕೊಳ್ಳುವುದರಿಂದ, ಹೆಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ ಹರಡುವುದು,  ಸೋಂಕಿತ ವ್ಯಕ್ತಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವುದರಿಂದ ಹರಡುತ್ತದೆ.
ಹೆಚ್.ಐ.ವಿ ರೋಗ ಹೇಗೆ ಹರಡುವುದಿಲ್ಲ :- ಜೊತೆಯಲ್ಲಿ ಕಲಿಯುವುದರಿಂದ, ಆಡುವುದರಿಂದ, ಕೆಲಸ ಮಾಡುವುದರಿಂದ, ವಾಸ ಮಾಡುವುದರಿಂದ, ಊಟ ತಿಂಡಿ ಬಟ್ಟೆ ಹಂಚಿಕೊಳ್ಳುವುದರಿಂದ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ, ಕೈ ಕುಲುಕುವುದರಿಂದ, ಜೊತೆಯಲ್ಲಿ ಊಟ ಮಾಡುವುದರಿಂದ, ಸೊಳ್ಳೆ ಅಥವಾ ಕೀಟ ಕಚ್ಚುವುದರಿಂದ, ಸೊಂಕಿತರಿಗೆ ಆರೈಕೆ ಮಾಡುವುದರಿಂದ, ಒಂದೇ ಶೌಚಾಲಯ ಬಳಸುವುದರಿಂದ ಹೆಚ್.ಐ.ವಿ ಹರಡುವುದಿಲ್ಲ.
ಏಡ್ಸ್ ರೋಗದ ಲಕ್ಷಣಗಳು:- ಶೇ.10 ರಷ್ಟು ದೇಹದ ತೂಕ ಕಡಿಮೆ ಆಗುವುದು. ಕ್ಷಯರೋಗ ಕಾಣಿಸಿಕೊಳ್ಳುವುದು. ದೀರ್ಘ ಕಾಲದಿಂದ ಜ್ವರ ಬರುವುದು. ದೀರ್ಘ ಕಾಲದಿಂದ ಬೇಧಿ ಆಗುವುದು. ಕೆಲವು ಅವಕಾಶವಾದಿ ಲೈಂಗಿಕ ಸೋಂಕುಗಳು ಕಾಣಿಸಿಕೊಳ್ಳುವುದು ಇತ್ಯಾದಿ.
     ಕೊಪ್ಪಳ ಜಿಲ್ಲೆಯಲ್ಲಿ ಹೆಚ್‍ಐವಿ ಸೋಂಕಿತರಿಗೆ/ ಏಡ್ಸ್ ರೋಗಿಗಳಿಗೆ ಹಲವು ಸೇವೆಗಳು ಲಭ್ಯವಿದ್ದು, ಉಚಿತವಾಗಿ ಹೆಚ್.ಐ.ವಿ. ಪರೀಕ್ಷೆ ಮತ್ತು ಎ.ಆರ್.ಟಿ. ಚಿಕಿತ್ಸೆ ಒದಗಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 16 ಐಸಿಟಿಸಿ ಕೇಂದ್ರಗಳು, 46 ಎಫ್‍ಐಸಿಟಿಸಿ ಕೇಂದ್ರಗಳು, 2 ಎಆರ್‍ಟಿ ಕೇಂದ್ರಗಳು, 3 ಉಪ ಎ.ಆರ್‍ಟಿ ಪ್ಲಸ್ ಕೇಂದ್ರಗಳು, 7 ಉಪ ಎಆರ್‍ಟಿ ಕೇಂದ್ರಗಳು, 2 ಎಸ್‍ಟಿಡಿ ಕೇಂದ್ರಗಳು, 1 ಸರ್ಕಾರಿ ಹಾಗೂ 1 ಖಾಸಗಿ ರಕ್ತನಿಧಿ ಕೇಂದ್ರಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 2 ಮಹಿಳಾ ಲೈಂಗಿಕ ಕಾರ್ಯಕರ್ತರ ಟಿಐ ಯೋಜನೆ, 1 ಪುರುಷ ಸಲಿಂಗಕಾಮಿಗಳ ಟಿಐ ಯೋಜನೆ 1 ಟ್ರಕ್ಕರ್ಸ್ ಟಿಐ ಯೋಜನೆ, 1 ಮೈಗ್ರಂಟ್ಸ್ ಟಿಐ ಯೋಜನೆ, 1 ಸಂಪರ್ಕ ಕಾರ್ಯಕರ್ತರ ಯೋಜನೆ ಹಾಗೂ 1 ಸಮುದಾಯ ಆರೈಕೆ ಮತ್ತು ಬೆಂಬಲ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್.ಐ.ವಿ ಸೋಂಕಿತ ಗರ್ಭಿಣಿಯಿಂದ ಶಿಶುವಿಗೆ ಸೋಂಕು ಹರಡದಂತೆ ತಡೆಗಟ್ಟಲು ಪಿಪಿಟಿಸಿಟಿ ಕಾರ್ಯಕ್ರಮವಿದೆ. ಅರ್ಹ ಹೆಚ್.ಐ.ವಿ ಸೊಂಕಿತ ಜನರಿಗೆ ಸೊಂಕಿನ ಪ್ರಮಾಣ ಕಡಿಮೆ ಮಾಡಲು ಮತ್ತು ಸಾಮಾನ್ಯ ಜೀವನ ನಡೆಸಲು ಜಿಲ್ಲಾ ಆಸ್ಪತ್ರೆ ಕೊಪ್ಪಳ & ಉಪ ವಿಭಾಗ ಆಸ್ಪತ್ರೆ ಗಂಗಾವತಿಗಳಲ್ಲಿರುವ ಎ.ಆರ್.ಟಿ ಕೇಂದ್ರದಲ್ಲಿ ಎ.ಆರ್,ಟಿ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ.  ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಲೈಂಗಿಕ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡಲಾಗುವುದು. ಜಿಲ್ಲಾ ಆಸ್ಪತ್ರೆ ಕೊಪ್ಪಳ ಹಾಗೂ ಗಂಗಾವತಿ ತಾಲೂಕ ಆಸ್ಪತ್ರೆಯಲ್ಲಿ ಲೈಂಗಿಕ ಮಾರ್ಗದ ಸೋಂಕುಗಳು ಹಾಗೂ ಜನನಾಂಗ ಮಾರ್ಗದ ಸೋಂಕುಗಳಿಗೆ (ಎಸ್.ಟಿ.ಡಿ ಕೇಂದ್ರ) ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು.
     ಹೆಚ್ಚಿನ ಮಹಿತಿಗಾಗಿ, ಜಿಲ್ಲೆಯ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಕೊಪ್ಪಳ ಹಾಗೂ ಕೆ.ಎಸ್.ಎ.ಪಿ.ಎಸ್.ಹಲ್ ಲೈನ್-1800-425-8500 (ಉಚಿತ ಕರೆ) ಇವರಲ್ಲಿ ವಿಚಾರಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 03 ರಿಂದ ವಿಜಯಪುರದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ


ಕೊಪ್ಪಳ ನ. 28 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು 03 (ಹ್ಯಾಂಡಬಾಲ್, ಫುಟಬಾಲ್,) ಕ್ರೀಡೆಗಳನ್ನು ವಿಜಯಪುರದ ಡಾ|| ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ. 03 ರಿಂದ 05 ರ ವರೆಗೆ ನಡೆಯಲಿದೆ.
       ಕೊಪ್ಪಳ ಜಿಲ್ಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ  ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು  ಅಲ್ಲದೆ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

      ಕೊಪ್ಪಳ ಜಿಲ್ಲೆಯ ಅರ್ಹ ಕ್ರೀಡಾ ಪಟುಗಳು ಡಿ. 03 ರಂದು ಬೆಳಿಗ್ಗೆ  10 ಗಂಟೆಯೊಳಗಾಗಿ ವಿಜಯಪುರ ಡಾ||ಬಿ.ಆರ್.ಅಂಬೇಡ್ಕರ, ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು.  ಕ್ರೀಡಾ ಪಟುಗಳು ತಮ್ಮ ಜಿಲ್ಲಾ ತಂಡದ ಧ್ವಜದೊಂದಿಗೆ ಸಂಜೆ 3.00 ಘಂಟೆಗೆ ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿರುತ್ತದೆ. ಅಂತಹ ಕ್ರೀಡಾ ಪಟುಗಳು ನಿಗದಿತ ನಮೂನೆಯಲ್ಲಿ ತಮ್ಮ ಜನ್ಮ ದಿನಾಂಕ  ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾ ಪಟುಗಳಿಗೆ ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯ ವಸತಿ ವ್ಯವಸ್ಥೆ ಹಾಗೂ ಕ್ರೀಡಾಂಗಣದಲ್ಲಿ ಉಟೋಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.   ಕ್ರೀಡಾ ಪಟುಗಳು ತಮ್ಮ ಬ್ಯಾಂಕ ಖಾತೆಯ ನಂಬರ ಮತ್ತು ವಿಳಾಸದೊಂದಿಗೆ ಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಹೋಗಬೇಕು. ಜಿಲ್ಲೆಯಿಂದ ಭಾಗವಹಿಸುವ ಸ್ಪರ್ಧಿಗಳಿಗೆ ಕೊಪ್ಪಳ ದಿಂದ ವಿಜಯಪುರ ಜಿಲ್ಲೆಯವರೆಗೆ ಹೋಗಿ ಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಈ ವೆಚ್ಚವನ್ನು ಕ್ರೀಡಾಕೂಟ ಮುಕ್ತಾಯವಾದ ದಿನದಂದು ಜಿಲ್ಲೆಯ ಮೇಲ್ಚಿಚಾರಕರಿಂದ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08539-201400 ಕ್ಕೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.05 ರಂದು ಬಾಗಲಕೋಟೆಯಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ


ಕೊಪ್ಪಳ,ನ.28(ಕರ್ನಾಟಕ ವಾರ್ತೆ): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಡಿ.05 ರಂದು ಬೆಳಿಗ್ಗೆ 9.30 ಕ್ಕೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಮಾರಂಭ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಅವರು ಗೌರವ ನಮನ ಸಲ್ಲಿಸುವರು. ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಯ ಮಾಜಿ ಸೈನಿಕರು, ಅವರ ಅವಲಂಬಿತರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ : ನೋಂದಣಿ ಅವಧಿ ವಿಸ್ತರಣೆ


ಕೊಪ್ಪಳ,ನ.28(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೋಂದಣಿ ಅವಧಿಯನ್ನು ಡಿ.31 ರವರೆಗೆ ವಿಸ್ತರಿಸಲಾಗಿದೆ.
    ಯಾವುದೇ ವಿದ್ಯಾರ್ಥಿಗಳ ಅರ್ಜಿಗಳು ಉಳಿದಿದ್ದಲ್ಲಿ ಆನ್‍ಲೈನ್‍ನಲ್ಲಿ ಹಾಕಬಹುದಾಗಿದೆ. ಒಂದು ವೇಳೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಂಜೂರಾತಿಯಾಗದಿದ್ದ ಪಕ್ಷದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಗುರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೊಪ್ಪಳ ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.04 ರಂದು ಗಿಣಗೇರಿಯಲ್ಲಿ ರಾಸಾಯನಿಕ ದುರಂತ ನಿವಾರಣೆ ದಿನ


ಕೊಪ್ಪಳ,ನ.28(ಕರ್ನಾಟಕ ವಾರ್ತೆ): ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ವಿವಿಧ ಕೈಗಾರಿಕೆಗಳ ಸಹಯೋಗದೊಂದಿಗೆ ರಾಸಾಯನಿಕ ದುರಂತ ನಿವಾರಣೆ ದಿನವನ್ನು ಡಿ. 04 ರಂದು ಗಿಣಿಗೇರಾದ ಮೆ: ಕಲ್ಯಾಣಿ ಸ್ಟೀಲ್ಸ್ ಲಿ. ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದೆ.
     ಭೂಪಾಲ್ ದುರಂತದ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಕೈಗಾರಿಕಾ ಕ್ಷೇತ್ರದಲ್ಲಿ ಡಿ.04 ರಂದು ರಾಸಾಯನಿಕ ದುರಂತ ನಿವಾರಣಾ ದಿನ (ಕೆಮಿಕಲ್ ಡಿಸಾಸ್ಟರ್ ಪ್ರಿವೆನ್ಷನ್ ಡೇ) ಎಂದು ಆಚರಿಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಗಿಣಗೇರಿಯ ಕಲ್ಯಾಣಿ ಸ್ಟೀಲ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಸಭೆ ಹಾಗೂ ಆನ್-ಸೈಟ್ ಎಮರ್ಜನ್ಸಿ ಪ್ಲಾನ್ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿದೆ.  ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಟಿ.ಡಿ.ಪವಾರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು   ಬಳ್ಳಾರಿ ವಿಭಾಗದ ಕಾರ್ಖಾನೆಗಳ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಡಿ.03 ರಿಂದ ರಾಜ್ಯ ಮಟ್ಟದ ಯುವಜನೋತ್ಸವ


ಕೊಪ್ಪಳ,ನ.28(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ಡಿ.03 ರಿಂದ 5 ರವರೆಗೆ ಹಾವೇರಿ ಜಿಲ್ಲೆ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಕನಕ ಕಲಾಭವನದಲ್ಲಿ ಆಯೋಜಿಸಲಾಗಿದೆ.
 ಕಳೆದ ನ. 25 ರಂದು ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ದಾಳುಗಳು ಡಿ.03 ರಂದು ಬೆ.11.00 ಗಂಟೆಗೆ ಸಂಘಟಕರಲ್ಲಿ  ಹೆಸರನ್ನು ನೊಂದಾಯಿಸಿ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಸ್ಪರ್ಧಾಳುಗಳು ಕಡ್ಡಾಯವಾಗಿ ಭಾಗವಹಿಸಬೇಕು. ಭಾಗವಹಿಸುವ ಸ್ಪರ್ಧಾಳುಗಳಿಗೆ ಕೊಪ್ಪಳ ಜಿಲ್ಲೆ ಕೇಂದ್ರ ಸ್ಥಾನದಿಂದ ಹಾವೇರಿ ಜಿಲ್ಲೆ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದವರೆಗೆ ಸಾಮಾನ್ಯ ಬಸ್ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಛೇರಿ ದೂರವಾಣಿ ಸಂಖ್ಯೆ : 08539-201400 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟ


ಕೊಪ್ಪಳ,ನ.28(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚಿಗೆ ನಡೆಸಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಶಾಸ್ತ್ರೀಯ ಸಂಗೀತ : (ಹಿಂದೂಸ್ಥಾನಿ) ಪೂಜಾ ಕುಲಕರ್ಣಿ ಹನುಮಸಾಗರ (ಪ್ರಥಮ), ಅಕ್ಷತಾ ಎನ್. ಬಣ್ಣದಬಾವಿ ಕುಕನೂರು (ದ್ವಿತೀಯ). ಕೊಳಲು : ನಾಗರಾಜ್ ಶ್ಯಾವಿ (ಪ್ರಥಮ). ತಬಲಾ ಸೋಲೊ : ಜಲೀಲ್ ಪಾಷಾ ಮುದ್ದಾಬಳ್ಳಿ (ಪ್ರಥಮ), ಶಿವಲಿಂಗಪ್ಪ ಲಚ್ಚಪ್ಪ ಹಳೇಪೇಟಿ ಕಿನ್ನಾಳ (ದ್ವಿತೀಯ). ಭರತ ನಾಟ್ಯ : ಮಹೇಶ್ವರಿ ನೀರಜ್ ಕೊಪ್ಪಳ (ಪ್ರಥಮ), ಗುರುರಾಜ್ ಟಾಕಪ್ಪ ಕಾರಟಗಿ (ದ್ವಿತೀಯ). ಆಶು ಭಾಷಣ : ಮಂಜುನಾಥ ಜಿ. ಗೊಂಡಬಾಳ (ಪ್ರಥಮ). ಜನಪದ ಗೀತೆ : ಜ್ಯೋತಿ ಸಾಂಸ್ಕøತಿಕ ಸಂಘ ಕುಷ್ಟಗಿ (ಪ್ರಥಮ), ಸುಭಾಷ ಹೆಚ್ ಕಲಾಲ್ ಭಾಗ್ಯನಗರ (ದ್ವಿತೀಯ). ಜನಪದ ನೃತ್ಯ : ಶ್ರೀ ಗೌರಿ ಶಂಕರ ಯುವಕ ಮಂಡಳಿ ಭಾಗ್ಯನಗರ (ಪ್ರಥಮ). ಹಾರ್ಮೋನಿಯಂ : ವಿನೋದ ಪಾಟೀಲ್ (ಪ್ರಥಮ). ಕುಚುಪುಡಿ ನೃತ್ಯ : ಗುರುರಾಜ್ ಟಾಕಪ್ಪ ಕಾರಟಗಿ (ಪ್ರಥಮ).  
 ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಡಿ. 03 ರಿಂದ ಹಾವೇರಿಯಲ್ಲಿ ಜರುಗಲಿರುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳ ಜಿಲ್ಲೆಗೆ ಲಭಿಸಿದ್ದು.

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟದ ನಿರ್ಣಯಗಳು


ಶಿಕ್ಷಣ ಇಲಾಖೆ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

 2014-15ನೇ ಸಾಲಿನಿಂದ ಹೈದ್ರಾಬಾದ್-ಕರ್ನಾಟಕ ಭಾಗದ ಆಯ್ದ 250 ಗ್ರಾಮ ಪಂಚಾಯಿತಿಗಳಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ರೂ.50.00 ಕೋಟಿಯ ಅನುದಾನದಿಂದ ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿ ಜ್ಞಾನ ಕೇಂದ್ರಗಳನ್ನು ತೆರೆಯಲಾಗುವುದು.


ಸಮಾಜ ಕಲ್ಯಾಣ ಇಲಾಖೆ

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ರೂ. 9.23 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ನಿರ್ಮಿಸಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣವನ್ನು ರೂ. 9.17 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಕುದುರೆಮೋತಿ ಗ್ರಾಮದಲ್ಲಿ ನಿರ್ಮಿಸಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾ ತಾಲ್ಲೂಕಿನ ಬೆಳ್ಳೋಟಗಿ ಗ್ರಾಮದಲ್ಲಿ ರೂ. 9.98 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕಿರ್ಣವನ್ನು ನಿರ್ಮಾಣ ಮಾಡಲು ತಯಾರಿಸಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲ್ಲೂಕು, ಕವಲೂರು ಗ್ರಾಮದಲ್ಲಿ ರೂ. 8.70 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

 ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ವಡ್ಡರಹಟ್ಟಿ (ಮಲಕನಕರಡಿ) ಗ್ರಾಮದಲ್ಲಿ ರೂ. 8.74 ಕೋಟಿಗಳ ಅಂದಾಜು ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ಹೆಮ್ಮಿಗುಡ್ಡ ಗ್ರಾಮದಲ್ಲಿ ರೂ. 8.57 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
 
ಜಲಸಂಪನ್ಮೂಲ ಇಲಾಖೆ

 ಬಳ್ಳಾರಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 2,65,229 ಎಕರೆ (48,381 ಎಕರೆ ಪ್ರದೇಶಕ್ಕೆ ಹರಿ ನೀರಾವರಿ ಮತ್ತು 2,16,848 ಎಕರೆ ಪ್ರದೇಶದಕ್ಕೆ ಸೂಕ್ಷ್ಮ ನೀರಾವರಿ) ನೀರಾವರಿ ಸೌಲಭ್ಯವನ್ನು ಒದಗಿಸಲು ಯೋಜಿಸಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ರೂ.5768.04 ಕೋಟಿ ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ.

 ಹಾಸನ ಮತ್ತು ಹೊಸಪೇಟೆಯಲ್ಲಿ ಕ್ರಮವಾಗಿ ರೂ 29.37 ಕೋಟಿ ಮತ್ತು ರೂ 8.60 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಗವರ್ನಮೆಂಟ್ ಟೂಲ್ ರೂಂ ಟ್ರ್ನೈನಿಂಗ್ ಸೆಂಟರ್) ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೈದ್ರಾಬಾದ ಕರ್ನಾಟಕ ಭಾಗದ ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜಿ.ಟಿ.ಟಿ.ಸಿ. ಇಲ್ಲದೆ ಇರುವುದರಿಂದ ಅವುಗಳನ್ನೂ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.


http://karnatakavarthe.org/kalaburagi-cabinet-decisions/

Thursday, 27 November 2014

ಲಕ್ಷ ಲಕ್ಷ ಆದಾಯ : ಪಪ್ಪಾಯ ಜಪದಲ್ಲಿ ಕೊಪ್ಪಳ ರೈತರು


                 ಬರದ ನಾಡಾದರೂ ಭತ್ತದ ಕಣಜ ಎಂದೇ ಹೆಸರಾದ ಕೊಪ್ಪಳ ಜಿಲ್ಲೆ ಹೈದರಾಬಾದ ಕರ್ನಾಟಕ ಪ್ರಾಂತ್ಯದಲ್ಲಿ ಕೃಷಿಯಲ್ಲಿ ಮೇಲುಗೈ ಸಾಧಿಸಿದೆ.  ತೋಟಗಾರಿಕೆಯಲ್ಲಿಯೂ ಮುಂಚೂಣಿ ಸ್ಥಾನದಲ್ಲಿರುವ ಜಿಲ್ಲೆಯ ರೈತರು ದಾಳಿಂಬೆ ರಫ್ತು ಮಾಡುವ ಮೂಲಕ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಹೆಸರು ದಾಖಲಿಸಿದವರು.  ಇದೀಗ ಜಿಲ್ಲೆಯ ರೈತರು ಪಪ್ಪಾಯ ಬೆಳೆಯುವುದರ ಮೂಲಕ ಮತ್ತೊಮ್ಮೆ ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.

                2012 ನೇ ವರ್ಷವನ್ನು ತೋಟಗಾರಿಕೆ ವರ್ಷ ಎಂದು ಘೋಷಿಸಿದ ತೋಟಗಾರಿಕೆ ಇಲಾಖೆಯು ``ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ`` ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ರೈತರು ಬೆಳೆಯುವ ಬೆಳೆಗಳನ್ನೇ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೆಳೆಯುವಂತೆ ಯೋಜನೆ ರೂಪಿಸಿ ಸಣ್ಣ, ಅತೀ ಸಣ್ಣ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದೆ.  ಅಲ್ಲದೆ ತೋಟಗಾರಿಕೆಗೆ ಪ್ರಮುಖವಾಗಿರುವ ತಾಂತ್ರಿಕತೆಯನ್ನು ರೈತರಿಗೆ ವರ್ಗಾವಣೆ ಮಾಡಿ ಫಲಾನುಭವಿಗಳನ್ನು ಆರ್ಥಿಕ ಸದೃಢತೆಯತ್ತ ಕೊಂಡೊಯ್ಯುವ ಯತ್ನಕ್ಕೆ ಚಾಲನೆ ನೀಡಿದೆ.  ಇದರಿಂದಾಗಿ ರಾಜ್ಯದ ಅನೇಕ ಫಲಾನುಭವಿ ರೈತರು ತಮ್ಮ ಆದಾಯ ವೃದ್ಧಿಸಿಕೊಂಡು ಸಂತಸದ ಜೀವನ ನಡೆಸುವಂತಾಗಿದೆ.  ಇದರ ಹಿಂದೆ ತೋಟಗಾರಿಕೆ ಇಲಾಖೆಯ ಪರಿಶ್ರಮವೂ ಅಡಗಿದೆ.

              ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ರೈತ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿವಿಧ ಬೆಳೆಗಳಿಗೆ ಈ ಯೋಜನೆಯಡಿ ಸಹಾಯಧನ ನೀಡಲಾಗಿದೆ.  ಆದರೆ ಜಿಲ್ಲೆಯಲ್ಲಿ ಇತರೆ ಬೆಳೆ ಬೆಳೆದ ರೈತರಿಗಿಂತ, ಪಪ್ಪಾಯ ಬೆಳೆ ಬೆಳೆದ ರೈತರು ಹೆಚ್ಚಿನ ಲಾಭ ಗಳಿಸುತ್ತಿದ್ದಾರಲ್ಲದೆ, ಇತರರಿಗೂ ಮಾದರಿಯಾಗಿದ್ದಾರೆ.  ಹೀಗಾಗಿ ಈಗ ಕೊಪ್ಪಳ ಜಿಲ್ಲೆಯಾದ್ಯಂತ ರೈತರು ಪಪ್ಪಾಯ ಜಪ ಮಾಡುತ್ತಿದ್ದಾರೆ.  ಕೇವಲ 2 ವರ್ಷಗಳಲ್ಲೇ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬಲ್ಲ ಪಪಾಯ ಕೆಲವೇ ವರ್ಷಗಳಲ್ಲಿ ಜನಪ್ರಿಯ ಅಲ್ಪಾವಧಿ ಬೆಳೆಯಾಗುವತ್ತ ದಾಪುಗಾಲು ಹಾಕಿದೆ.
    ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಿದ ಅನೇಕ ಪಪ್ಪಾಯ ಬೆಳೆಗಾರರು ಜಿಲ್ಲೆಯಾದ್ಯಂತ ತಮ್ಮ ಯಶೋಗಾಥೆಗಳನ್ನು ಇತರರಿಗೂ ಸಾರಿದ್ದಾರೆ. ಉದಾಹರಣೆಗೆ ಮಾರುತಿ ಕಂದಕೂರು 15 ಎಕರೆ, ಬೀರಲದಿನ್ನಿ ವೆಂಕನಗೌಡರು ಕನಕಗಿರಿ ಹೋಬಳಿ -  8 ಎಕರೆ. ರಾಮರಾವ್ ಗಿಣಿಗೇರಾ-8 ಎಕರೆ.  ವಾಸುಬಾಬು ಹಿಟ್ನಾಳ, 8 ಎಕರೆ.  ಪ್ರಹ್ಲಾದ ಜಾನ್- ಹಿರೇಬಗನಾಳ – 8 ಎಕರೆ ಹೀಗೆ ಜಿಲ್ಲೆಯಾದ್ಯಂತ ಪಪ್ಪಾಯ ಬೆಳೆದ ರೈತರು ಈಗಾಗಲೆ ಸುಮಾರು 20 ರಿಂದ 30 ಲಕ್ಷ ಆದಾಯ ಗಳಿಸಿದ್ದು, ಇನ್ನೂ  30 ರಿಂದ 60 ಲಕ್ಷ  ರೂ.ಗಳವರೆಗೆ ಆದಾಯ ಬರುವ ನಿರೀಕ್ಷೆ ಹೊಂದಿದ್ದಾರೆ.  ಇದು ಕೇವಲ ಕೊಪ್ಪಳ ತಾಲೂಕಿನ ರೈತರ ಕಥೆಯಲ್ಲ.  ಕುಷ್ಟಗಿ, ಯಲಬುರ್ಗಾ & ಗಂಗಾವತಿ ಹೀಗೆ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿಯೂ ಪಪ್ಪಾಯ ಬೆಳೆದ ರೈತರು ಉತ್ತಮ ಆದಾಯ ಗಳಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
    ಕನಕಗಿರಿಯ ಕನಕಪ್ಪ ಎಂಬ ರೈತ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮಾವಿನಲ್ಲಿ ಪಪ್ಪಾಯ ಮಿಶ್ರ ಬೆಳೆ ಬೆಳೆದು ಹೊಸ ಪ್ರಯೋಗ ಮಾಡಿ ಯಶಸ್ವಿಯೂ ಆಗಿದ್ದಾರೆ.  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಸಂತಪ್ಪನವರ ಮಾರ್ಗದರ್ಶನದಲ್ಲಿ ಪಪ್ಪಾಯ ಬೆಳೆದ ಕನಕಪ್ಪ, ತೋಟಗಾರಿಕೆ ಯೋಜನೆ ಸದ್ಬಳಕೆ ಮಾಡಿಕೊಂಡು ಪರಿಶ್ರಮ ವಹಿಸಿ ಪಪ್ಪಾಯ ಬೆಳೆದಿದ್ದಾರೆ.  ಒಟ್ಟು 3 ಎಕರೆಯಲ್ಲಿ ಪಪ್ಪಾಯ ಬೆಳೆದ ಇವರಿಗೆ ಸರಾಸರಿ ಪ್ರತಿ ಕೆ.ಜಿ.ಗೆ 10 ರೂ. ಬೆಲೆ ದೊರಕಿದ್ದು ಸುಮಾರು 200 ಟನ್‍ಗೂ ಹೆಚ್ಚು ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.  ಅದೇ ರೀತಿ ಕುಷ್ಟಗಿ ತಾಲೂಕಿನ ಮಲ್ಲಪ್ಪ ಗಿರಡ್ಡಿ  8 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದು 500 ಟನ್ನಿಗೂ ಮೀರಿ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.  ಕುಷ್ಟಗಿ ತಾಲೂಕಿನ ಸಹಾಯಕ ತೋಟಗಾರಿಕೆ ನಿರ್ದೇಶಕ ಲಿಂಗನಗೌಡ ಪಾಟೀಲರವರು ಹೇಳುವಂತೆ ಈ ಯೋಜನೆ ಅಡಿ ಆಯ್ಕೆಯಾದ ತಾಲೂಕಿನ ಫಲಾನುಭವಿಗಳ ಪೈಕಿ ಗಿರಡ್ಡಿ ರವರು ಹೆಚ್ಚಿನ ಇಳುವರಿ ಪಡೆದು ಇತರರಿಗಿಂತ ಭಿನ್ನವಾಗಿದ್ದಾರೆ.

                       ಹೀಗೆ ಜಿಲ್ಲೆಯಾದ್ಯಂತ ಪಪ್ಪಾಯ ಬೆಳೆಯಲ್ಲಿನ ಆರ್ಥಿಕ ಸವಿ ಕಂಡ ರೈತರ ಬಗ್ಗೆ ಮಾಹಿತಿ ಪಡೆಯುತ್ತಿರುವ ಅನೇಕ ರೈತರು ಪಪ್ಪಾಯ ಬೆಳೆ ಬೇಸಾಯ, ತಾಂತ್ರಿಕತೆ ಕುರಿತಂತೆ ಮಾಹಿತಿಗಾಗಿ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರಕ್ಕೆ ಫೋನಾಯಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.  ಇದುವರೆಗೂ ಸುಮಾರು 500 ಕ್ಕೂ ಹೆಚ್ಚು ರೈತರು ರಾಜ್ಯದ ವಿವಿಧ ಭಾಗಗಳಿಂದ ಫೋನಾಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಹಾರ್ಟಿ ಕ್ಲಿನಿಕ್‍ನ ವಿಷಯ ತಜ್ಞ ವಾಮನಮೂರ್ತಿ. ಪಪ್ಪಾಯ ಬೆಳೆ ಬೇಸಾಯ ಪದ್ಧತಿ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವಾಮನಮೂರ್ತಿ- 9452672039 ಇವರನ್ನು ಸಂಪರ್ಕಿಸಬಹುದಾಗಿದೆ.
   

                                                                                                                         - ತುಕಾರಾಂರಾವ್ ಬಿ.ವಿ.
                                                                                                                     ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ

ಪ್ರತಿಭೆಗಳ ಪರಿಚಯಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಅಮರೇಶ್ ಕುಳಗಿ
ಕೊಪ್ಪಳ,ನ.27(ಕರ್ನಾಟಕ ವಾರ್ತೆ): ಪ್ರತಿಯೊಂದು ಮಕ್ಕಳಲ್ಲೂ ವಿಶೇಷ ಪ್ರತಿಭೆಗಳು ಇರುತ್ತವೆ.  ಶಿಕ್ಷಕರು ಸೂಕ್ತ ಸಮಯದಲ್ಲಿ ಪ್ರತಿಭೆಯನ್ನು ಗುರುತಿಸಿ, ಅಂತಹ ಮಕ್ಕಳಿಗೆ ಸಕಾಲದಲ್ಲಿ ತರಬೇತಿ ನೀಡಿದಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯವಾಗಲಿದೆ. ಇಂತಹ ಪ್ರತಿಭೆಗಳನ್ನು ಪರಿಚಯಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.

              ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

                ಮಕ್ಕಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಗುಣವನ್ನು ಬೆಳೆಸಬೇಕು. ಸೋಲು, ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದಾಗಿದೆ. ಜಿಲ್ಲೆ ಸಾಂಸ್ಕøತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿದೆ. ಬರುವ ಮಾರ್ಚ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ 5 ರಿಂದ 6ನೇ ಸ್ಥಾನ ಬರುವಂತಾಗಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ತಾವು ಕೂಡ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅನುಭವ ಹಂಚಿಕೊಂಡರು.  ಜಿ.ಪಂ. ವತಿಯಿಂದ ಶೌಚಾಲಯ ಹಾಗೂ ಸ್ವಚ್ಛತೆ ಕುರಿತಾಗಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ಮನವೊಲಿಸಿ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 01 ಲಕ್ಷ ಶೌಚಾಲಯ ಗುರಿಯನ್ನು ಹೊಂದಲಾಗಿದ್ದು, ಈಗಾಗಲೆ 75001 ನೇ ಶೌಚಾಲಯದ ಉದ್ಘಾಟನೆಯಾಗಿದೆ. ಬರುವ ದಿನಗಳಲ್ಲಿ 1 ಲಕ್ಷದ ಒಂದನೇ ಶೌಚಾಲಯವನ್ನು ಮುಖ್ಯಮಂತ್ರಿಗಳಿಂದಲೇ ಉದ್ಘಾಟನೆ ಮಾಡಿಸುವ ಆಶಾಭಾವನೆ ಹೊಂದಲಾಗಿದೆ. ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಮಾದರಿ ಮಾಡಲು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಹಕಾರ ಅಗತ್ಯವಾಗಿದೆ.  ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಹೆಚ್ಚಿನ ರೀತಿಯಲ್ಲಿ ತಮ್ಮ ಸಾಮಥ್ರ್ಯವನ್ನು ತೋರಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ಅವರು ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ  ಹೊನ್ನೂರಸಾಬ್ ಮಹ್ಮದಸಾಬ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ದಾನಪ್ಪ ಜಿ.ಕವಲೂರು, ಶ್ರೀನಿವಾಸ ಹ್ಯಾಟಿ, ಗ್ರಾ.ಪಂ. ಸದಸ್ಯರಾದ ಚಂದ್ರಪ್ಪ ಉಂಕಿ, ಸರಸ್ವತಿ ಇಟ್ಟಂಗಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಬಿ. ಕುರಿ, ಕಾಲೇಜಿನ ಪ್ರಾಚಾರ್ಯ ಮಂಡಸೊಪ್ಪಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವೀರಪ್ಪ ಬಿ, ಉಪಾಧ್ಯಕ್ಷೆ ಲಲಿತಾ ಆರ್. ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು,   ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಆರಂಭದಲ್ಲಿ ಶಾರದಾ ಹಾಗೂ ತ್ರಿವೇಣಿ ಸಂಗಡಿಗರು ಪ್ರಾರ್ಥಿಸಿದರು,  ಗುರುಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಎಂ.ಎಂ. ಮುಜುಗುಂಡ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Wednesday, 26 November 2014

ಕೊಪ್ಪಳ ಮಾಧ್ಯಮದವರ ವಿವರ


ಕೃಷಿ ಮಾಹಿತಿ ತರಬೇತಿ ಕಾರ್ಯಕ್ರಮ ಯಶಸ್ವಿ


ಕೊಪ್ಪಳ ನ.26(ಕರ್ನಾಟಕ ವಾರ್ತೆ): ಕೃಷಿ ಇಲಾಖೆಯ ಮಹತ್ತರ ಯೋಜನೆಯಾದ ಆತ್ಮ ಯೋಜನೆಯಡಿಯಲ್ಲಿ ಗೊಂಡಬಾಳ ಗ್ರಾಮದ ಕೊಪ್ಪಳ ಹೋಬಳಿ ಮಟ್ಟದ ಕೃಷಿ ಮಾಹಿತಿ ತರಬೇತಿ ಕಾರ್ಯಕ್ರಮವನ್ನು ಬುಧವಾರದಂದು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಬದರಿಪ್ರಸಾದ, ಕೊಪ್ಪಳ ತಾಲೂಕಿನ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ, ಶಿವಾನಂದಯ್ಯ ಬೀಳಗಿಮಠ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ವ್ಹಿ.ಹೆಚ್.ಹೂಗಾರ, ಅಂಬಣ್ಣ ಪೂಜಾರ, ಕೆ.ಜೆ.ನಾಗರಹಳ್ಳಿ, ಗ್ರಾ.ಪಂ.ಉಪಾಧ್ಯಕ್ಷ ಗೋವಿಂದ ರೆಡ್ಡಿ ಮಾದಿನೂರು, ತಾ.ಪಂ.ಮಾಜಿ ಸದಸ್ಯ ನಿಂಗಜ್ಜ ಜಹಗೀರದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಉಚಿತ ವೃತ್ತಿ ತರಬೇತಿ : ಅರ್ಜಿ ಅಹ್ವಾನ


ಕೊಪ್ಪಳ ನ.26(ಕರ್ನಾಟಕ ವಾರ್ತೆ): ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ ಸಮುದಾಯ ಅಭಿವೃದ್ಧಿ ಯೋಜನೆ ವತಿಯಿಂದ ನಗರದ ನಿರುದ್ಯೋಗ ಯುವಕ/ಯುವತಿಯರಿಗಾಗಿ ವಿವಿಧ ವೃತ್ತಿಗಳಲ್ಲಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳೆಯರಿಗೆ ಬೇಸಿಕ್ ಕಂಪ್ಯೂಟರ್, ಟ್ಯಾಲಿ, ಮೊಬ್ಯೆಲ್ ಸರ್ವೀಸಿಂಗ್, ಮೋಟರ್ ರಿವೈಂಡಿಂಗ್, ಟೈಲರಿಂಗ್ ಮತ್ತು ಫ್ಯಾಷನ್ ಡಿಜೈನಿಂಗ್ ತರಬೇತಿ ನೀಡಲಾಗುವುದು. ಆಸಕ್ತರು ಡಿ.06 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ದದೇಗಲ್ ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣದಲ್ಲಿರುವ ಖಾದಿ ಗ್ರಾಮೋದ್ಯೋಗ ಕಛೇರಿ, ಸಿಡಿಟಿಪಿ ತರಬೇತಿ ಕೇಂದ್ರದಲ್ಲಿ ಸಂಪರ್ಕಿಸಬಹುದು. ತರಬೇತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿ.08 ರ ಬೆಳಿಗ್ಗೆ 11:30 ಕ್ಕೆ ಕೊಪ್ಪಳ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ನಗರಸಭೆ ಎದುರಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಪ್ರಾಚಾರ್ಯ ಎ.ಆರ್ ಶಿವಕುಮಾರ್ ತಿಳಿಸಿದ್ದಾರೆ.

ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಕಾ ಘಟಕ ಸ್ಥಾಪನೆ : ಅರ್ಜಿ ಆಹ್ವಾನ


ಕೊಪ್ಪಳ ನ.26(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಸ್ತ್ರೀಶಕ್ತಿ ಗುಂಪು, ಒಕ್ಕೂಟಗಳ ಮೂಲಕ ಜಿಲ್ಲೆ, ತಾಲ್ಲೂಕುಗಳಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ತಯಾರಿಸುವ ಘಟಕಗಳನ್ನು ಸ್ಧಾಪಿಸಲು ಆಸಕ್ತ ಸ್ತ್ರೀಶಕ್ತಿ ಗುಂಪುಗಳು/ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಘಟಕ ಪ್ರಾರಂಭಿಸಲು ಬಯಸುವ ಸ್ತ್ರೀಶಕ್ತಿ ಗುಂಪುಗಳು/ಒಕ್ಕೂಟಗಳು ಯಂತ್ರೋಪಕರಣಗಳ ಖರೀದಿಗೆ ಅವಶ್ಯವಿರುವ ಅಂದಾಜು ರೂ.3.00 ದಿಂದ 3.50 ಲಕ್ಷ ಬಂಡವಾಳ ಹೂಡಲು ಶಕ್ತರಿರಬೇಕು. ಹಾಗೂ ಘಟಕ ಸ್ಥಾಪಿಸಲು ನೀರು, ವಿದ್ಯುತ್‍ಚ್ಛಕ್ತಿ ಸೌಲಭ್ಯದೊಂದಿಗೆ ಕನಿಷ್ಠ 3 ರಿಂದ 4 ಕೊಠಡಿಗಳುಳ್ಳ ಸ್ಥಳಾವಕಾಶ ಹೊಂದಿರಬೇಕು. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಗದಿತ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಥವಾ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಡಿ.18 ರೊಳಗೆ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ತಿಳಿಸಿದ್ದಾರೆ.

ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ


ಕೊಪ್ಪಳ,ನ.26(ಕರ್ನಾಟಕ ವಾರ್ತೆ): ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ಹೆಚ್.ಎಂ.ರೇಣುಕಸ್ವಾಮಿ ಅವರು ತಿಳಿಸಿದ್ದಾರೆ.
ಕಳಪೆ ಗುಣಮಟ್ಟ ಎಂದು ಕಂಡುಬಂದಿರುವ ಔಷಧಿಯ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರು ಇಂತಿದೆ. ಸೆರಬ್-ಡಿಎಸ್‍ಆರ್ ಕ್ಯಾಪ್ಸೂಲ್ಸ್ ಜೆ-31163, ಮೆ. ಏರಿಯನ್ ಹೇಲ್ತ್‍ಕೇರ್, ಜಿಎಮ್‍ಪಿ ಸರ್ಟಿಫೈಡ್, ಕಂಪನಿ, ವಿಲೇಜ್ ಕಿಶನಪುರ. ರ್ಯಾನಿಟೈಡೈನ್ ಹೈಡ್ರೋಕ್ಲೋರೈಡ್ ಇಂಜಕ್ಷನ್ ಐಪಿ (ರ್ಯಾನಿಹಾರ್), 3153, ಮೆ.ಹಾರ್ಸನ್ ಲ್ಯಾಬೋರೇಟರೀಸ್, ಬರೋಡ.  ಹೈಡ್ರೋಕೋರ್ಟಿಸೋನ್ ಸೋಡಿಯಂ ಸಕ್ಸಿನೇಟ್ ಇಂಜೆಕ್ಷನ್ ಐಪಿ 100, ಕೆಹೆಚ್‍ಬಿ-003, ಮೆ. ಎಸ್‍ಜಿಎಸ್ ಫಾರ್ಮಸೂಟಿಕಲ್ ಪ್ರೈ ರೂರ್ಕಿ.   ಡೈನಾಪರ್ ಎಕ್ಯೂ (ಡೈಕ್ಲೋಫಿನ್ಯಾಕ್ ಸೋಡಿಯಂ ಇಂಜೆಕ್ಷನ್ ಐ.ಪಿ.) ಡಿ-281815, ಮೆ.ಟ್ರೋಯಕಾ ಫಾರ್ಮಸೂಟಿಕಲ್ಸ್ ಲಿ.,  ಡೆಹರಾಡೂನ್. ಎಲ್ಮೋಕ್ಸ್ ಸಿವಿ 1000 (ಅಮೋಕ್ಸಿಸಿಲಿನ್ ಮತ್ತು ಪೋಟಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ) ಎಪಿ-3157, ಮೆ. ಆಫಿ ಪೇರೆಂಟರಲ್ಸ್.  ಹೈಡ್ರೋಕೋರ್ಟಿಸೋನ್ ಸೋಡಿಯಂ ಸಕ್ಸಿನೇಟ್ ಇಂಜೆಕ್ಷನ್ ಐಪಿ 100 ಎಮ್‍ಜಿ, ಕೆಹೆಚ್‍ಬಿ-001, ಮೆ. ಎಸ್‍ಜಿಎಸ್ ಫಾರ್ಮಸೂಟಿಕಲ್ ಪ್ರೈ.ಲಿ.   ರೂರ್ಕಿ. ರಾಬೇಸ್ಟಾಸ್ ರಬೇಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐಪಿ, ಡಿಪಿಟಿ-1077, ಡೆಕ್ಸ್‍ಬಯೋ ಫಾರ್ಮ ಪ್ರೈ.ಲಿ., ರೂರ್ಕಿ. ಲೋಪೆರಾಮೈಡ್ ಟ್ಯಾಬ್ಲೆಟ್ಸ್ ಐಪಿ 2ಎಮ್‍ಜಿ (ಲೋಮಿಡ್) ಎಲ್‍ಎಂ-05, ಮೆ.ಆಸ್ಕೋನ್ ಹೇಲ್ತ್‍ಕೇರ್,  ಉಜ್ಜೈನ್. ಹೈಡ್ರೋಕೋರ್ಟಿಸೋನ್ ಸೋಡಿಯಂ ಸಕ್ಸಿನೇಟ್ ಐಪಿ 100 ಎಮ್‍ಜಿ ಕೆಹೆಚ್‍ಬಿ-004, ಮೆ.ಎಸ್‍ಜಿಎಸ್ ಫಾರ್ಮಸೂಟಿಕಲ್ ಪ್ರೈ.ಲಿ., ರೂರ್ಕಿ. ಪ್ಯಾರಾರಿಫ್ (ಪ್ಯಾರಾಸಿಟಮೋಲ್ ಟ್ಯಾಬ್ಲೆಟ್ಸ್ ಐ.ಪಿ. 500 ಎಮ್.ಜಿ.) ಆರ್‍ಎಂಪಿ-0019, ಮೆ.ರಾಶಿ ಫಾರ್ಮಸೂಟಿಕಲ್ಸ್ ಬಂಗಾರಪೇಟೆ. ಅಸಿಕ್ಲೋಫಿನ್ಯಾಕ್ ಸಸ್ಟೇನ್ಡ್ ರೀಲಿಸ್ ಟ್ಯಾಬ್ಲೆಟ್ಸ್ (ಪ್ರೇಸ್-ಎಸ್‍ಆರ್200) ಯುಡಿಟಿ-3311ಎ, ಮೆ.ಅಲ್ಟ್ರಾ ಡ್ರಗ್ಸ್ ಪ್ರೈ.ಲಿ. ಸೋಲನ್. 
ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- 08539-221501 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ನ. 27 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಸಚಿವರು ಅಂದು ಕಾರಟಗಿಯಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಕುಂದುಕೊರತೆ ಅಹವಾಲುಗಳ ವಿಚಾರಣೆ ನಡೆಸುವರು.  ಸಂಜೆ 4-30 ಗಂಟೆಗೆ ಕಲಬುರಗಿಗೆ ತೆರಳುವ ಸಚಿವರು. ನ. 28 ರಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಆಯುಕ್ತರಿಂದ ನ. 30 ಮತದಾರರ ಪರಿಷ್ಕರಣೆ ಸಭೆ : ಸೂಚನೆ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯ ಕುರಿತಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ನ. 30 ರಂದು ಮಧ್ಯಾಹ್ನ 3 ಗಂಟೆಗೆ ಕುಷ್ಟಗಿಯ ಸರ್ಕಿಟ್ ಹೌಸ್‍ನಲ್ಲಿ ಸಭೆ ನಡೆಸುವರು.
     ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದ ವೀಕ್ಷಕರಾಗಿರುವ ಕಲಬುರಗಿ ಪ್ರಾದೇಶಿಕ ಆಯುಕ್ತರು, ಪರಿಶೀಲನಾ ಸಭೆ ನಡೆಸಲಿರುವುದರಿಂದ, ಕೊಪ್ಪಳ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ರಾಜಕೀಯ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲು ಅಥವಾ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೇಷಭೂಷಣ ಸ್ಪರ್ಧೆ : ಮನಸೆಳೆದ ಚಿಣ್ಣರು


ಕೊಪ್ಪಳ ನ. 26 : ಕೊಪ್ಪಳ ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಶಾಲಾ ಚಿಣ್ಣರು ವಿವಿಧ ವೇಷಗಳನ್ನು ಧರಿಸಿ, ಗಮನ ಸೆಳೆದರು.
     ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಬೌದ್ಧಿಕ ವಿಕಾಸದ ಜೊತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸುವ ಉದ್ದೇಶದಿಂದ ವಚನ ಗಾಯನ ಸ್ಪರ್ಧೆ, ಸಂಗೀತ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.  ಇದರ ಮುಂದುವರೆದ ಭಾಗವಾಗಿ ಇದೀಗ ಶಾಲೆಯಲ್ಲಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು.  ಮಕ್ಕಳು ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಛದ್ಮ ವೇಷಧಾರಿಗಳಾಗಿ ಸ್ಪರ್ಧೆಯಲ್ಲಿ ಗಮನ ಸೆಳೆದರು.  ಮಹರ್ಷಿ ವಾಲ್ಮೀಕಿ, ರಾಘವೇಂದ್ರ ಸ್ವಾಮೀಜಿ, ಸಾಯಿಬಾಬ, ಅಘೋರಿ, ತರಕಾರಿ ಮನುಷ್ಯ, ವೇಷ, ಶಕುಂತಲಾ, ಲಂಬಾಣಿ ವೇಷ, ಕೃಷ್ಣ ವೇಷ, ಒನಕೆ ಓಬವ್ವ ಸುಭಾಶ್ಚಂದ್ರ ಭೋಸ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ಮಹಾನ್ ನಾಯಕರು ಮುಂತಾದ ವೇಷಗಳನ್ನು ಧರಿಸಿದ್ದ ಚಿಣ್ಣರು ನೋಡುಗರ ಗಮನ ಸೆಳೆದರು.  ಶಾಲೆಯ ಎಲ್‍ಕೆಜಿ, ಯುಕೆಜಿ, ಸೇರಿದಂತೆ ಒಟ್ಟು 68 ವಿದ್ಯಾರ್ಥಿಗಳು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
     ಶಿವಶಾಂತವೀರ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ರೋಜ್‍ಮೇರಿ, ಶಾಲೆಯ ಆಡಳಿತಾಧಿಕಾರಿ ವಿಜಯಾ ಹಿರೇಮಠ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕರಾದ ಎಂ. ಸುಮಹಿತ್, ಡಾ. ಸತೀಶ್ ಅವರು ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದರು.  ಶಿಕ್ಷಕರಾದ ವಿದ್ಯಾವತಿ, ವಿಜಯ ಒಡೆಯರ್, ಮಹಾಲಕ್ಷ್ಮಿ ಉಪಸ್ಥಿತರಿದ್ದರು.

Tuesday, 25 November 2014

ತುಂಗಭದ್ರಾ : ಹಿಂಗಾರು ಹಂಗಾಮಿಗೆ ನೀರು ಬಿಡುಗಡೆ ಅವಧಿ ಪ್ರಕಟಕೊಪ್ಪಳ ನ. 25 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಬಿಡುಗಡೆಗೊಳಿಸುವ ಅವಧಿಯನ್ನು ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
  ಮುನಿರಾಬಾದಿನ ಕಾಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 100 ನೇ ಸಭೆಯ ಅಧ್ಯಕ್ಷತೆ ವಹಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಹಿಂಗಾರು ಹಂಗಾಮಿಗೆ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ಹಾಗೂ ಹಿಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯದೆ ಮಿ ಬೆಳೆ ಮಾಗತ್ರ ಬೆಳೆಯಲು ವಿವಿಧ ಕಾಲುವೆಗಳಡಿ ಹರಿಸಬಹುದಾದ ನೀರಿನ ಪ್ರಮಾಣವನ್ನು ನಿರ್ಧರಿಸಲಾಗಿದೆ ಎಂದು ತಿಳಿಸಿದ ಸಚಿವರು.  ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 01 ರಿಂದ 15 ರವರೆಗೆ 250 ಕ್ಯೂಸೆಕ್‍ನಂತೆ, ಡಿ. 16 ರಿಂದ ಡಿ. 31 ರವರೆಗೆ 400 ಕ್ಯೂಸೆಕ್‍ನಂತೆ, 2015 ರ ಜ. 01 ರಿಂದ ಮಾ. 31 ರವರೆಗೆ 575 ಕ್ಯೂಸೆಕ್‍ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಬಿಡುಗಡೆ ಮಾಡಲಾಗುವುದು.  ರಾಯ-ಬಸವಣ್ಣ ಕಾಲುವೆಗಳಿಗೆ ಡಿ. 10 ರಿಂದ 2015 ರ ಜ. 10 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಜ. 11 ರಿಂದ ಮೇ. 31 ರವರೆಗೆ 160 ಕ್ಯೂಸೆಕ್‍ನಂತೆ ಅಥವಾ ನೀರಿನ ಲಭ್ಯತೆ ಇರುವವರೆಗೆ ನೀರು ಬಿಡುಗಡೆ ಮಾಡಲಾಗುವುದು.  ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ. 01 ರಿಂದ ಡಿ. 25 ರವರೆಗೆ 2200 ಕ್ಯೂಸೆಕ್‍ನಂತೆ.  ಡಿ. 26 ರಿಂದ 31 ರವರೆಗೆ 3000 ಕ್ಯೂಸೆಕ್‍ನಂತೆ.  2015 ರ ಜ. 01 ರಿಂದ ಮಾ. 31 ರವರೆಗೆ 3100 ಕ್ಯೂಸೆಕ್‍ನಂತೆ.  ಎಡದಂಡೆ ವಿಜಯನಗರ ಕಾಲುವೆಗಳಿಗೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಏ. 01 ರಿಂದ ಮೇ. 10 ರವರೆಗೆ 100 ಕ್ಯೂಸೆಕ್‍ನಂತೆ ಮುಂದುವರೆಸಲಾಗುವುದು ಅಥವಾ ನೀರಿನ ಲಭ್ಯತೆ ಇರುವವರೆಗೆ ಮಾತ್ರ ಹರಿಸಲಾಗುವುದು.  ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 01 ರಿಂದ ಡಿ. 10 ರವರೆಗೆ ನೀರು ನಿಲುಗಡೆ ಮಾಡಲಾಗುವುದು.  ಡಿ. 11 ರಿಂದ 21` ರವರೆಗೆ 400 ಕ್ಯೂಸೆಕ್‍ನಂತೆ.  ಡಿ. 21 ರಿಂದ ಡಿ. 31 ರವರೆಗೆ ನೀರು ನಿಲುಗಡೆಗೊಳಿಸಲಾಗುವುದು.  2015 ರ ಜ. 01 ರಿಂದ ಜ. 10 ರವರೆಗೆ 400 ಕ್ಯೂಸೆಕ್‍ನಂತೆ ಹಾಗೂ ಬಳ್ಳಾರಿ ನಗರಕ್ಕೆ ಕುಡಿಯುವ ಸಲುವಾಗಿ ಮಾತ್ರ ನೀರು ಹರಿಸಲಾಗುವುದು.
  ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇರುವುದರಿಂದ ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ ಬೆಳೆದು ನಿಂತ ಬೆಳೆಗಳಿಗೆ ಹಾಗೂ ಹಿಂಗಾರು ಹಂಗಾಮಿನಲ್ಲಿ ಮಿತ ಬೆಳೆ ಮಾತ್ರ ಬೆಳೆಯಲು ಮತ್ತು ಅನಧಿಕೃತವಾಗಿ ಕಾಲುವೆಗಳಿಂದ ಪೈಪ್, ಸೈಫನ್, ಪಂಪ್‍ಸೆಟ್‍ಗಳ ಮೂಲಕ ನೀರು ಎತ್ತಿ ನೀರಾವರಿ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅವರು ಹೇಳಿದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ, ಶಾಸಕರುಗಳಾದ ಹಂಪನಗೌಡ ಬಾದರ್ಲಿ, ಎನ್.ಎಸ್. ಭೋಸರಾಜ್, ಕೆ. ರಾಘವೇಂದ್ರ ಹಿಟ್ನಾಳ್, ಹಂಪಯ್ಯ ನಾಯಕ್, ಇಕ್ಬಾಲ್ ಅನ್ಸಾರಿ, ಶಿವರಾಜ ಪಾಟೀಲ್, ಮೃತ್ಯುಂಜಯ್ಯ ಜಿನಗ ಮುಖ್ಯ ಇಂಜಿನಿಯರ್ ಮಲ್ಲಿಕಾರ್ಜುನ, ಅಧೀಕ್ಷಕ ಅಭಿಯಂತರ ಭೋಜನಾಯ್ಕ ಕಟ್ಟಿಮನಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Monday, 24 November 2014

ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ


ಕೊಪ್ಪಳ,ನ.25(ಕರ್ನಾಟಕ ವಾರ್ತೆ): ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಔಷಧ ನಿಯಂತ್ರಣಾಧಿಕಾರಿ ರಘುರಾಮ ಭಂಡಾರಿ ಅವರು ತಿಳಿಸಿದ್ದಾರೆ.
ಕಳಪೆ ಗುಣಮಟ್ಟ ಎಂದು ಕಂಡುಬಂದಿರುವ ಔಷಧಿಯ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರು ಇಂತಿದೆ. ಎಲ್ಡಾಪ್ರಿಲ್-5 (ರಾಮಿಪ್ರಿಲ್ ಟ್ಯಾಬ್ಲೆಟ್ಸ್ ಐಪಿ) ಎಆರ್‍ಕೆಬಿ-3019, ಮೆ. ಕಾನ್ಹಾ ಬಯೋಜೆನಿಟಿಕ್ ಲ್ಯಾಬೋರೇಟರೀಸ್. ಕಾರ್ಡೆಮ್-30 ಟ್ಯಾಬ್ಲೆಟ್ಸ್ (ಡಿಲ್ಟಿಯಾಜೆಮ್ ಟ್ಯಾಬ್ಲೆಟ್ಸ್ ಐ.ಪಿ) 02301ಪಿ, ಮೆ.ಎಎಫ್‍ಡಿ ಲ್ಯಾಬ್ ಪ್ರೈ.ಲಿ. ಬೆಂಗಳೂರು. ಮೋಫ್ಲೋಕ್ಸ್-200 (ಓಫ್ಲೋಕ್ಸಾಸಿನ್ ಟ್ಯಾಬ್ಲೆಟ್ಸ್ ಐ.ಪಿ. 200 ಎಮ್.ಜಿ.) 130680, ಮೆ. ಮೋದಿ ಲೈಫ್ ಕೇರ್ ಇಂಡಸ್ಟ್ರೀಸ್ ಲಿಮಿಟೆಡ್, ಅಹಮದಾಬಾದ್. ಪಾಜೆಮೋಲ್ (ಪ್ಯಾರಾಸಿಟಾಮೋಲ್ ಇಂಜೆಕ್ಷನ್) ವಿ-5926, ಮೆ.ಅಲ್ಪಾ ಲ್ಯಾಬೋರೇಟರೀಸ್ ಲಿ., ಪಿಗ್ದಂಬರ್. ವಿಗೋರ (ಮಲ್ಟಿ ಟೆಕ್ಸಚರ್ ಕಾಂಡೋಮ್ಸ್) ಎ-131211-ಎಂಟಿ, ಮೆ.ಅನೋನ್ದಿತಾ ಹೇಲ್ತ್‍ಕೇರ್, ನೋಯ್ಡಾ (ಯುಪಿ). ಎಂಟ್ರಿಕ್ ಕೋಟೆಡ್ ಆಸ್ಪಿರಿನ್ ಟ್ಯಾಬ್ಲೆಟ್ಸ್ ಬಿ.ಪಿ. (ಎಲಿಸ್ಪಿರಿನ್ 150) ಇಎಲ್‍ಪಿ-122, ಮೆ.ಲ್ಯಾಬೋರೇಟರೀಸ್ (ಪ್ರೈ) ಲೀ., ಬೆಂಗಳೂರು. 
ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- 08539-221501 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನ.27 ರಿಂದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ


ಕೊಪ್ಪಳ,ನ.25(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ನ.27 ರಿಂದ 28 ರವರೆಗೆ ಕೊಪ್ಪಳ ತಾಲೂಕಿನ ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ತಾಲೂಕ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನ.27 ರಂದು ಪ್ರಾಥಮಿಕ ವಿಭಾಗ ಹಾಗೂ ನ.28 ರಂದು ಪ್ರೌಢ ಶಾಲಾ ವಿಭಾಗಗಳಿಗೆ ಸಂಬಂಧಿಸಿದ ಸ್ಪರ್ಧೆಗಳು ಜರುಗಲಿವೆ. ಸಂಬಂಧಿಸಿದ ಸ್ಪರ್ಧಾಳುಗಳು ಆಯಾ ದಿನಾಂಕದಂದು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಸ್ಥಿರ ಛಾಯಾಗ್ರಹಣ ಕುರಿತ ಕಾರ್ಯಾಗಾರ : ಅರ್ಜಿ ಆಹ್ವಾನಕೊಪ್ಪಳ ನ. 24 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿ ಮತ್ತು ಪಂಗಡದ ಪದವೀಧರ ಯುವಕ-ಯುವತಿಯರಿಗೆ ಸ್ಥಿರ ಛಾಯಾಗ್ರಹಣ ಕಾರ್ಯಾಗಾರವನ್ನು  ಡಿಸೆಂಬರ್ 2014 ನೇ ಮಾಹೆಯಲ್ಲಿ ನಡೆಸಲು ಉದ್ದೇಶಿಸಿದೆ. ಈ ಸಂಬಂಧ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಅರ್ಹ  ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಿದೆ. 
    ತರಬೇತಿ ಅವಧಿ 3 ದಿನಗಳಾಗಿದ್ದು, ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಅಥವಾ ಸ್ನಾತಕೋತ್ತರ ಡಿಪ್ಲೊಮೊ ವ್ಯಾಸಂಗ ಮಾಡಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ,  ಅಭ್ಯರ್ಥಿಗಳ ವಯೋಮಿತಿ 21 ರಿಂದ 35  ವರ್ಷದೊಳಗಿರಬೇಕು.
    ತರಬೇತಿಗಾಗಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಇಲಾಖೆಯು  ಪರಿಶೀಲಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಿದೆ.
    ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ “  karnatakavarthe.org  “ ನಿಂದ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ತಮ್ಮ ಹೆಸರು, ವಯಸ್ಸು, ವಿಳಾಸ,  ವಿದ್ಯಾರ್ಹತೆ, ಜಾತಿ , ಶೇಕಡವಾರು ಅಂಕ ಇತ್ಯಾದಿ ಸ್ವ-ವಿವರಗಳನ್ನು ಬಿಳಿಹಾಳೆಯ ಮೇಲೆ ಬೆರಳಚ್ಚುಗೊಳಿಸಿ ಅಥವಾ ಕೈಯಿಂದ ಬರೆದು, ಭರ್ತಿ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಸ್ವಯಂ ದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಡಿ. 12 ರ ಸಂಜೆ 5.00 ಗಂಟೆಯೊಳಗೆ  “ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ,  ಬೆಂಗಳೂರು - 560001 ” ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ / ಕೊರಿಯರ್ ಮೂಲಕ “ ಸ್ಥಿರ ಛಾಯಾಗ್ರಹಣ ಕಾರ್ಯಾಗಾರಕ್ಕೆ ಅರ್ಜಿ “ ಎಂದು ಲಕೋಟೆ ಮೇಲೆ ನಮೂದಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ( ಚಲನಚಿತ್ರ ), ವಾರ್ತಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,  ಬೆಂಗಳೂರು ಇವರನ್ನು  ದೂರವಾಣಿ ಸಂಖ್ಯೆ 080- 22028052 / 56 ರ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕ : ಅರ್ಜಿ ಆಹ್ವಾನ


ಕೊಪ್ಪಳ ನ.24(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ನಿರ್ಭಯ ಕೇಂದ್ರ/ಮಹಿಳಾ ವಿಶೇಷ ಚಿಕಿತ್ಸಾ ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಹುದ್ದೆಗಳಾದ ಸಮಾಲೋಚಕರು (01) ಎಂ.ಎ. (ಮನೋವಿಜ್ಞಾನ) ಅಥವಾ ಎಂಎಸ್‍ಡಬ್ಲ್ಯೂ/ಎಲ್‍ಎಲ್‍ಬಿ ವಿದ್ಯಾರ್ಹತೆ ಹೊಂದಿ 05 ವರ್ಷ ಅನುಭವ ಇರಬೇಕು. ಮಾಸಿಕ ವೇತನ ರೂ.10,000/- ನೀಡಲಾಗುವುದು, ಸಮಾಜ ಕಾರ್ಯಕರ್ತ (03), ಎಂಎಸ್‍ಡಬ್ಲ್ಯೂ ವಿದ್ಯಾರ್ಹತೆ ಹೊಂದಿ 05 ವರ್ಷ ಅನುಭವ ಇರಬೇಕು.  ಮಾಸಿಕ ವೇತನ ರೂ.6,000/- ನೀಡಲಾಗುವುದು, ಸ್ವೀಫರ್/ಕ್ಲಿನರ್ (01), ಎಸ್‍ಎಸ್‍ಎಲ್‍ಸಿ/ಪಿಯುಸಿ ವಿದ್ಯಾರ್ಹತೆ ಹೊಂದಿ 03 ವರ್ಷ ಅನುಭವ ಇರಬೇಕು.  ಮಾಸಿಕ ವೇತನ ರೂ.4,000/- ನೀಡಲಾಗುವುದು. ಎಲ್ಲಾ ಹುದ್ದೆಗಳಿಗೆ 25 ರಿಂದ 35 ವರ್ಷ ವಯೋಮಿತಿಯವರಿಗೆ ಅವಕಾಶವಿರುತ್ತದೆ.
  ಸಮಾಲೋಚಕರ ಹುದ್ದೆಯು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರುತ್ತದೆ. ಗೌರವಧನ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಹುದ್ದೆಯು ಅರೆಕಾಲಿಕ ಹಾಗೂ ತಾತ್ಕಾಲಿಕ ಆಧಾರದ ಹುದ್ದೆಯಾಗಿದ್ದು ಯಾವುದೇ ಕಾರಣಕ್ಕೂ ಸಕ್ರಮಗೊಳಿಸುವುದಿಲ್ಲ. ನೇಮಕಗೊಂಡ ಸಿಬ್ಬಂದಿಗಳ ಸೇವೆಯು ಸರ್ಕಾರದ ಅನುದಾನದ ಲಭ್ಯತೆಯ ಆಧಾರದ ಮೇಲಿರುತ್ತದೆ. ಕನಿಷ್ಠ ಅರ್ಹತೆಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಗೆ ಆದ್ಯತೆ ಇರುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಎಲ್ಲಾ ದಾಖಲೆಗಳೊಂದಿಗೆ ಡಿ.05 ರೊಳಗಾಗಿ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜೀವ್ ರಿನ್ ಯೋಜನೆಯಡಿ ಗೃಹ ನಿರ್ಮಾಣಕ್ಕೆ : ಅರ್ಜಿ ಆಹ್ವಾನ


ಕೊಪ್ಪಳ ನ.24(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪ್ರಸಕ್ತ ಸಾಲಿಗಾಗಿ ರಾಜೀವ್ ರಿನ್ ಯೋಜನೆಯಡಿ ಗೃಹ ನಿರ್ಮಾಣಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರವು ನಗರದ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಗೃಹ ನಿರ್ಮಾಣಕ್ಕಾಗಿ ನೆರವು ಒದಗಿಸುವ ನಿಟ್ಟಿನಲ್ಲಿ ಬಡ್ಡಿ ದರದಲ್ಲಿ ಶೇ.5 ರಷ್ಟು ಸಹಾಯಧನ ನೀಡುವ ವಿನೂತನ ಯೋಜನೆಯಾಗಿ ರಾಜೀವ್ ರಿನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ವಿಕಲಚೇತನ ಫಲಾನುಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಯೋಜನೆಯಡಿ ಆರ್ಥಿಕ ದುರ್ಬಲ ವರ್ಗದವರು ಮತ್ತು ಕಡಿಮೆ ಆದಾಯದ ವರ್ಗದವರಿಗೆ ಹೊಸ ಮನೆಯನ್ನು ಖರೀದಿಸಲು/ಮನೆಕಟ್ಟಲು ಈಗಿರುವ ಮನೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಳ್ಳಲು ಆಸಕ್ತಿಯುಳ್ಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ಕುಟುಂಬದವರಿಗೆ ಒಂದು ಲಕ್ಷ ಆದಾಯ ನಿಗದಿಪಡಿಸಲಾಗಿದೆ. ಕಡಿಮೆ ಆದಾಯದ ಗುಂಪಿಗೆ ಸೇರಿದ ಕುಟುಂಬದವರಿಗೆ ವಾರ್ಷಿಕ ಆದಾಯ 1 ರಿಂದ 2 ಲಕ್ಷ ರೂ. ವರೆಗೆ ನಿಗದಿಪಡಿಸಲಾಗಿದೆ. ಆರ್ಥಿಕ ದುರ್ಬಲ ವರ್ಗದವರಿಗೆ ಕನಿಷ್ಟ 21 ಚದರ ಮೀಟರ್‍ನಲ್ಲಿ ಮನೆ ಕಟ್ಟಲು ಗರಿಷ್ಠ ರೂ.5.00 ಲಕ್ಷ ಸಾಲವನ್ನು ನೀಡಲಾಗುವುದು. ಕಡಿಮೆ ಆದಾಯದ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಗರಿಷ್ಠ ರೂ.8.00 ಲಕ್ಷದವರೆಗೆ ಸಾಲ ದೊರೆಯುತ್ತದೆ.  ಸಾಲದ ಬಡ್ಡಿ ದರದಲ್ಲಿ ಶೇ.5 ರಷ್ಟು ಸಹಾಯಧನ ಒದಗಿಸಲಾಗುತ್ತದೆ. 5.00 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಲ್ಲಿ ಸಹಾಯಧನ 5.00 ಲಕ್ಷಕ್ಕೆ ಮಾತ್ರ ಸಾಲ ಸಿಗಲಿದೆ. ಕೊಪ್ಪಳ ನಗರಸಭೆಗೆ 46 ಗುರಿ ನಿಗದಿಪಡಿಸಲಾಗಿದ್ದು, ಅರ್ಜಿಗಳನ್ನು ನಗರಸಭೆಯಲ್ಲಿ ಪಡೆದು ಸಂಬಂಧಪಟ್ಟ ದಾಖಲೆಗಳೊಂದಿಗೆ ನ.30 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕೊಪ್ಪಳ ದೂರವಾಣಿ ಸಂಖ್ಯೆ : 08539-230192 ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ.24(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನ.25 ಹಾಗೂ ನ.26 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
    ನ.25 ರಂದು ಮಧ್ಯಾಹ್ನ 1 ಗಂಟೆಗೆ ಕಾರಟಗಿಯ ಕನಕ ಬಸವ ಭವನದಲ್ಲಿ ಕನಕದಾಸ ಜಯಂತಿಯಲ್ಲಿ ಪಾಲ್ಗೊಳ್ಳುವರು. ಮ.3.00 ಕ್ಕೆ ಕಾರಟಗಿ ಮೂಲಕ ಮುನಿರಾಬಾದಗೆ ಆಗಮಿಸಿ ಕಾಡಾ ಕಛೇರಿ ಸಭಾಂಗಣದಲ್ಲಿ ತುಂಗಭದ್ರಾ ಯೋಜನೆಗಳ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ 100ನೇ ಸಭೆಯಲ್ಲಿ ಭಾಗವಹಿಸುವರು. ನಂತರ ರಾ.7 ಗಂಟೆಗೆ ಇಳಕಲ್‍ಗೆ ಪ್ರಯಾಣ ಬೆಳೆಸಿ ವಾಸ್ತವ್ಯ ಮಾಡುವರು. ಸಚಿವರು ನ.26 ರಂದು ಇಲಕಲ್‍ನಿಂದ ಹೊರಟು ಮಧ್ಯಾಹ್ನ 2-30 ಗಂಟೆಗೆ ಕಾರಟಗಿಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ ವಾಸ್ತವ್ಯ ಮಾಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ನ.25 ರಂದು ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ


ಕೊಪ್ಪಳ ನ.24(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ನ.25 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಕ್ರೀಡಾಂಗಣದ ಅಡಿಟೋರಿಯಂ ಹಾಲ್‍ನಲ್ಲಿ ಜರುಗಲಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ  ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ್, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮ ಹೇರೂರು, ಜಿ.ಪಂ.ಸಾಮಾಜಿಕ ಮತ್ತು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ತೋಟದ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ವಿದ್ಯಾಶ್ರೀ ಗಜೇಂದ್ರಗಡ, ನಗರಸಭೆ ಅಧ್ಯಕ್ಷೆ ಲತಾ ಸಂಡೂರ, ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಟಿ.ಡಿ.ಪವಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ಸೇರಿದಂತೆ ಜಿ.ಪಂ, ತಾ.ಪಂ. ಹಾಗೂ ನಗರಸಭೆ ಸರ್ವ ಸದಸ್ಯರು ಆಗಮಿಸುವರು ಎಂದು ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣಯ್ಯ   ಅವರು ತಿಳಿಸಿದ್ದಾರೆ.

Sunday, 23 November 2014

ತ್ಯಾಜ್ಯ ಮುಕ್ತ ಜಿಲ್ಲೆ ನಿರ್ಮಾಣ ಯೋಜನೆಗಳಿಗೆ ಕೊಪ್ಪಳ ಪ್ರಯೋಗ ಶಾಲೆಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶಗಳ ಬಹುಮುಖ್ಯ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿ ಸೇರಿದಂತೆ ತ್ಯಾಜ್ಯ, ವ್ಯಾಜ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆ ನಿರ್ಮಾಣ ಮಾಡುವಂತಹ ಯೋಜನೆಗಳಿಗೆ ಕೊಪ್ಪಳ ಜಿಲ್ಲೆ ಪ್ರಯೋಗಶಾಲೆಯಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಜೀವ್‍ಗಾಂಧಿ ಚೈತನ್ಯ ಯೋಜನೆ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಉದ್ಯೋಗಮೇಳ, ಹುಲಿಗಿಯ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಘನತ್ಯಾಜ್ಯ ವಿಲೇವಾರಿ ಕೇಂದ್ರ ಪ್ರಾರಂಭ, 75001 ನೇ ಶೌಚಾಲಯ ಉದ್ಘಾಟನೆ, 28 ಗ್ರಾಮಗಳ ಘನತ್ಯಾಜ್ಯದಿಂದ ಜೈವಿಕ ಗೊಬ್ಬರ ತಂತ್ರಜ್ಞಾನ ಬಳಕೆ ಹಾಗೂ 2013-14 ನೇ ಸಾಲಿನಲ್ಲಿ ಅತಿಹೆಚ್ಚು ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸಿದವರಿಗೆ ಸನ್ಮಾನ ಸಮಾರಂಭದ ಉದ್ಘಾಟನ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಗ್ರಾಮಗಳ ಪ್ರವೇಶವಾದರೆ, ನಮ್ಮನ್ನು ಸ್ವಾಗತಿಸುವುದು ಹಾಗೂ ಹಳ್ಳಿಗಳಲ್ಲಿ ಪರಿಹಾರ ಇಲ್ಲದ ಸಮಸ್ಯೆಗಳೆಂದರೆ ತಿಪ್ಪೆಗುಂಡಿಗಳು, ಇದು ಹೆಚ್ಚಿನ ಸ್ಥಳವನ್ನು ಆಕ್ರಮಿಸುವುದಲ್ಲದೆ ದುರ್ವಾಸನೆ, ರೋಗ ರುಜಿನ ಹಾಗೂ ವ್ಯಾಜ್ಯಗಳಿಗೂ ಕಾರಣವಾಗುತ್ತವೆ.  ಅದೇ ರೀತಿ ಗ್ರಾಮೀಣ ಪ್ರದೇಶದ ಮಹಿಳೆಯರು ಶೌಚಕ್ಕೆ ಹೋಗಲು ಸಂಜೆಯಾಗುವವರೆಗೂ ಕಾಯ್ದು, ನಂತರ ರಸ್ತೆಯ ಅಕ್ಕಪಕ್ಕದಲ್ಲೇ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ.  ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸುವುದು ಗ್ರಾಮೀಣಾಭಿವೃದ್ಧಿ ಪರಿಕಲ್ಪನೆಯ ಮೊದಲ ಆದ್ಯತೆಯಾಗಿದೆ.  ವ್ಯಾಜ್ಯ, ತ್ಯಾಜ್ಯ, ವ್ಯಸನ ಮತ್ತು ಬಯಲು ಮಲವಿಸರ್ಜನೆ ಮುಕ್ತ ಗ್ರಾಮಗಳು ನಿರ್ಮಾಣವಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ.  ಕಳೆದ ವರ್ಷ 1 ಲಕ್ಷ ಶೌಚಾಲಯ ನಿರ್ಮಾಣ ಮಾಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡು, ಈಗಾಗಲೆ 75001 ನೇ ಶೌಚಾಲಯವನ್ನು ಹುಲಿಗಿಯಲ್ಲಿಯೇ ಉದ್ಘಾಟನೆ ಮಾಡಲಾಗಿದೆ.  ಶೌಚಾಲಯ ನಿರ್ಮಾಣದಲ್ಲಿ ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ದೇಶಕ್ಕೆ ಕೊಪ್ಪಳ ಜಿಲ್ಲೆ ಮೊದಲ ಸ್ಥಾನದಲ್ಲಿದೆ.  1 ಲಕ್ಷದ 1 ನೇ ಶೌಚಾಲಯವನ್ನು ರಾಜ್ಯದ ಮುಖ್ಯಮಂತ್ರಿಗಳಿಂದಲೇ ಜಿಲ್ಲೆಯಲ್ಲಿ ಉದ್ಘಾಟಿಸಲಾಗುವುದು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ತಿಪ್ಪೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಮೂಲಕ ಅತ್ಯಲ್ಪ ಅವಧಿಯಲ್ಲಿ ಜೈವಿಕ ಗೊಬ್ಬರ ತಯಾರಿಸಿ, ತಿಪ್ಪೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ಪ್ರಯೋಗ ಮಾಡಲಾಗಿದೆ.  ಇದರಿಂದಾಗಿ ವ್ಯಾಜ್ಯ, ತ್ಯಾಜ್ಯ ಮತ್ತು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆ ನಿರ್ಮಾಣ ಮಾಡುವ ಯೋಜನೆಗಳಿಗೆ ಕೊಪ್ಪಳ ಜಿಲ್ಲೆ ಪ್ರಯೋಗಶಾಲೆಯಾಗಿದೆ.  ಜೈವಿಕ ಗೊಬ್ಬರದ ಯಶಸ್ಸನ್ನು ಆಧರಿಸಿ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಅಷ್ಟೇ ಅಲ್ಲ ರಾಜ್ಯದ ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ಯೋಜನೆ ರೂಪಿಸಲಾಗುವುದು.  ಅಲ್ಲದೆ ಇದನ್ನು ಹಿಟ್ನಾಳ್ ಮಾದರಿಯೆಂದೇ ಕರೆಯಲಾಗುವುದು.  ಗ್ರಾಮ ಪಂಚಾಯತಿ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಈ ವರ್ಷ ಕೊಪ್ಪಳ ಜಿಲ್ಲೆಯ 50 ಗ್ರಾ.ಪಂ. ಗಳಿಗೆ ಟ್ರ್ಯಾಕ್ಟರ್ ಮಂಜೂರು ಮಾಡಲಾಗುವುದು.  ಉಳಿದ ಗ್ರಾಮಗಳಿಗೆ ಹಂತ ಹಂತವಾಗಿ ಮಂಜೂರು ಮಾಡಲಾಗುವುದು.  ಹಳ್ಳಿಗಳಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿರುವ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.
1510 ಜನರಿಗೆ ಉದ್ಯೋಗ : ಗ್ರಾಮೀಣ ಯುವಕರು ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಅನುಕೂಲವಾಗುವಂತೆ ಜಾರಿಗೆ ತರಲಾಗಿರುವ ರಾಜೀವ್ ಗಾಂಧಿ ಚೈತನ್ಯ ಯೋಜನೆ ಯೋಜನೆಯಡಿ ಹುಲಿಗಿಯಲ್ಲಿ ಬೃಹತ್ ಉದ್ಯೋಗ ಮೇಳ ಈ ಬಾರಿ ಆಯೋಜಿಸಿದ್ದು, ಇದರಲ್ಲಿ ಜಿಲ್ಲೆಯ 2076 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಈ ಪೈಕಿ ಮೇಳದಲ್ಲಿ 1510 ಜನರಿಗೆ ವಿವಿಧ ಕಂಪನಿಗಳಿಂದ ಉದ್ಯೋಗ ಪತ್ರ ನೀಡಲಾಗುತ್ತಿದೆ.  ಕುಷ್ಟಗಿ ತಾಲೂಕಿನ 472, ಯಲಬುರ್ಗಾ- 398, ಕೊಪ್ಪಳ-356, ಗಂಗಾವತಿ-284 ಯುವಕ, ಯುವತಿಯರಿಗೆ ಉದ್ಯೋಗ ಪತ್ರ ನೀಡಲಾಗಿದೆ.  ಉದ್ಯೋಗಮೇಳದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗ ಪತ್ರ ನೀಡುತ್ತಿರುವುದು ರಾಜೀವ್‍ಗಾಂಧಿ ಚೈತನ್ಯ ಯೋಜನೆಯ ಹೆಗ್ಗಳಿಕೆಯಾಗಿದೆ.  ಗ್ರಾಮಗಳು ಕೇವಲ ರಸ್ತೆ, ಚರಂಡಿ ನಿಮಾಣ ಆದರೆ ಅಭಿವೃದ್ಧಿ ಆದಂತೆ ಅಲ್ಲ.  ಅಲ್ಲಿನ ಯುವಕರಿಗೆ ಉದ್ಯೋಗ ದೊರೆತು ಸ್ವಾವಲಂಬಿಗಳಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿ ಆದಂತೆ.  ಯೋಜನೆಯಡಿ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಯುವಕರನ್ನು ನೋಂದಣಿ ಮಾಡಿಸಲಾಗಿದ್ದು, ಎಲ್ಲರಿಗೂ ಉದ್ಯೋಗ ದೊರಕಿಸುವ ಗುರಿ ಹೊಂದಲಾಗಿದೆ ಎಂದರು.
3000 ಶುದ್ಧ ನೀರಿನ ಘಟಕ : ಈ ಮೊದಲು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯ ಬಗ್ಗೆ ಪರಿಕಲ್ಪನೆ ಇರಲಿಲ್ಲ.  ಕೇವಲ ಶ್ರೀಮಂತರು ಅಷ್ಟೇ ಶುದ್ಧ ಕುಡಿಯುವ ನೀರು ಬಳಸುವ ಸ್ಥಿತಿ ಇತ್ತು.  ನಮ್ಮ ದೇಶದಲ್ಲಿ ಅಶುದ್ಧ ನೀರಿನಿಂದ ಪ್ರತಿ 20 ಸೆಕೆಂಡಿಗೆ ಒಂದು ಮಗು ಮರಣ ಹೊಂದುತ್ತಿದೆ.  ಆದರೆ ನಮ್ಮ ಸರ್ಕಾರ ಅಶುದ್ಧ ನೀರು ಲಭ್ಯವಾಗುತ್ತಿರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಿ, ಬಡ ಜನರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ, ರಾಜ್ಯದಲ್ಲಿ ಈ ಬಾರಿ 3000 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿದೆ ಎಂದು ಸಚಿವರು ಹೇಳಿದರು.
ಸ್ನಾನಗೃಹ ಸಹಿತ ಶೌಚಾಲಯ : ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಮಹಿಳೆಯರು ಇಂದಿಗೂ ಸ್ನಾನಕ್ಕೆ ತೊಂದರೆ ಅನುಭವಿಸುವ ಸ್ಥಿತಿ ಇದೆ.  ಇದನ್ನು ಮನಗಂಡಿರುವ ಸರ್ಕಾರ ರಾಜ್ಯದಲ್ಲಿ ಈ ವರ್ಷ 1. 50 ಲಕ್ಷ ಸ್ನಾನಗೃಹ ಸಹಿತ ಶೌಚಾಲಯ ನಿರ್ಮಾಣದ ಯೋಜನೆ ರೂಪಿಸಿದ್ದು, ಪ್ರತಿ ಘಟಕಕ್ಕೆ 20 ಸಾವಿರ ರೂ. ವೆಚ್ಚವಾಗಲಿದೆ ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸ್ವಾಗತಿಸಿದರು.  ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿ.ಪಂ. ಸದಸ್ಯರುಗಳಾದ ಜನಾರ್ಧನ ಹುಲಿಗಿ, ಅಶೋಕ್ ತೋಟದ, ಈರಪ್ಪ ಕುಡಗುಂಟಿ, ಗಂಗಣ್ಣ ಸಮಗಂಡಿ, ರಮೇಶ್ ಹಿಟ್ನಾಳ್, ವಿಜಯಲಕ್ಷ್ಮಿ ರಾಮಕೃಷ್ಣ, ವನಿತಾ ಗಡಾದ, ಅರವಿಂದಗೌಡ ಪಾಟೀಲ, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ತಾ.ಪಂ. ಗಳ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.
  2013-14 ನೇ ಸಾಲಿನಲ್ಲಿ ಅತಿ ಹೆಚ್ಚು ಶೌಚಾಲಯ ನಿರ್ಮಿಸಲು ಪ್ರೋತ್ಸಾಹಿಸಿದ 29 ಜನ ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಗಳಿಗೆ ಸಚಿವರು ಸನ್ಮಾನಿಸಿದರು.  ಅಲ್ಲದೆ ಉದ್ಯೋಗ ಮೇಳದಲ್ಲಿ ಭಾಗವಹಿಸಿ ವಿವಿಧ ಕಂಪನಿಗಳಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವರು ಉದ್ಯೋಗ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಿದರು.  ಸಮಾರಂಭಕ್ಕೂ ಪೂರ್ವದಲ್ಲಿ ಹಿಟ್ನಾಳ್ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ತಿಪ್ಪೆ ಗೊಬ್ಬರಗಳನ್ನು ಮಾಧ್ಯಮ ಪುಡಿಯಿಂದ ಜೈವಿಕ ಗೊಬ್ಬರವನ್ನಾಗಿಸುವ ಕುರಿತು ಪ್ರಾತ್ಯಕ್ಷಿಕೆ ವೀಕ್ಷಿಸಿದರು.  ಅಲ್ಲದೆ ಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ಗ್ರಾಮೀಣ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆ ನೆರವೇರಿಸಿದರು.


Saturday, 22 November 2014

ಸಚಿವ ಹೆಚ್.ಕೆ. ಪಾಟೀಲ್ ರವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ) : ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ರವರು ನ. 23 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
  ಸಚಿವರು ಅಂದು ಕೊಪ್ಪಳಕ್ಕೆ ಆಗಮಿಸಿ ಬೆಳಿಗ್ಗೆ 10.30 ಕ್ಕೆ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.00 ಗಂಟೆಗೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳ, ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, ಘನತ್ಯಾಜ್ಯ ವಿಲೇವಾರಿ ಕೇಂದ್ರ ಪ್ರಾರಂಭ, ನೂತನ ಶೌಚಾಲಯಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಚಿವರು ಅದೇ ದಿನ ಸಂಜೆ 5.00 ಗಂಟೆಗೆ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿನ ಲೋಕಶಿಕ್ಷಣ ಕೇಂದ್ರಗಳು ಸಮರ್ಪಕ ಸೇವೆ ನೀಡಲಿ- ಸಂಸದ ಸಂಗಣ್ಣ ಕರಡಿ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ) : ಸಾಕ್ಷರತೆ ಪ್ರಮಾಣ ಹೆಚ್ಚಿಸಿ, ವಯಸ್ಕರನ್ನೂ ಸಾಕ್ಷರರನ್ನಾಗಿಸುವ ಉದ್ದೇಶದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೋಕಶಿಕ್ಷಣ ಕೇಂದ್ರಗಳು ಸಮರ್ಪಕ ಸೇವೆ ಒದಗಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಯಸ್ಕರ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಯೋಜನೆ ಮತ್ತು ಸರ್ವ ಶಿಕ್ಷಣ ಅಭಿಯಾನ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಾಕ್ಷರತೆ ಪ್ರಮಾಣ ವೃದ್ಧಿಸಲು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೇ ರೀತಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಲೋಕ ಶಿಕ್ಷಣ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.  ಆದರೆ ಹಲವಾರು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಇಂತಹ ಶಿಕ್ಷಣ ಕೇಂದ್ರಗಳು ಸಮರ್ಪಕವಾಗಿ ಸೇವೆ ನೀಡುತ್ತಿರುವ ನಿದರ್ಶನಗಳು ಕಂಡುಬಂದಿಲ್ಲ.  ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 11,71,145 ಒಟ್ಟು ಜನಸಂಖ್ಯೆ ಇದ್ದು, ಇದರಲ್ಲಿ 15 ವರ್ಷ ಮೇಲ್ಪಟ್ಟವರಲ್ಲಿ 1,53,598 ಪುರುಷ ಮತ್ತು 2,13,409 ಮಹಿಳೆಯರು ಸೇರಿದಂತೆ 3,67,007 ಜನ ಅನಕ್ಷರಸ್ಥರಿದ್ದಾರೆ.  ಅದರಲ್ಲೂ ಮಹಿಳಾ ಅನಕ್ಷರಸ್ಥರೇ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಗ್ರಾಮ ಮಟ್ಟದಲ್ಲಿನ ಕಲಿಕಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಪ್ರತಿ ಕೇಂದ್ರಕ್ಕೆ 2 ಜನ ಪ್ರೇರಕರು ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ಸಲ್ಲಿಸಿದ್ದು, ಇಂತಹ ಕಲಿಕಾ ಕೇಂದ್ರಗಳಲ್ಲಿ ಸಮರ್ಪಕ ಕಾರ್ಯ ನಡೆಯದೇ ಇರುವುದರಿಂದ, ಜಿಲ್ಲೆಯಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ.  ಲೋಕ ಶಿಕ್ಷಣ ಕೇಂದ್ರಗಳಿಗೆ ದಿನಪತ್ರಿಕೆ, ವಾರ, ಮಾಸ ಪತ್ರಿಕೆಗಳನ್ನು ಖರೀದಿಸಲು ವೆಚ್ಚವನ್ನು ಹಾಕುತ್ತಿದ್ದು, ಆದರೆ ಕೇಂದ್ರಗಳಲ್ಲಿ ಯಾವುದೇ ಬಗೆಯ ಪತ್ರಿಕೆಗಳು ನವ ಸಾಕ್ಷರರರಿಗೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬರುತ್ತಿವೆ.  ವಯಸ್ಕರ ಶಿಕ್ಷಣಕ್ಕಾಗಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ, ಅನಕ್ಷರತೆ ನಿವಾರಣೆಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ, ಅನುದಾನ ಬಳಕೆ ಕುರಿತ ಯಾವುದೇ ಮಾಹಿತಿಯನ್ನು ಸಭೆಗೆ ಸಲ್ಲಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು.  ವಯಸ್ಕರ ಶಿಕ್ಷಣ ಇಲಾಖೆಗೆ ಸರ್ಕಾರ ಒದಗಿಸುತ್ತಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಸಮರ್ಪಕ ಕಾರ್ಯ ನಿರ್ವಹಿಸಿದಲ್ಲಿ, ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತೆ ಜಿಲ್ಲೆಯನ್ನಾಗಿಸಬಹುದು.  ಆದರೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ, ಸರ್ಕಾರದ ಉತ್ತಮ ಯೋಜನೆಗಳು ವೈಫಲ್ಯವನ್ನು ಕಾಣುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಹಾರಧಾನ್ಯ ಗುಣಮಟ್ಟ ಕಾಯ್ದುಕೊಳ್ಳಿ : ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಉತ್ತಮಪಡಿಸಲು ಸರ್ಕಾರ ಜಾರಿಗೆ ತಂದಿರುವ ಅಕ್ಷರದಾಸೋಹ ಯೋಜನೆಯಲ್ಲಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.  ಆದರೆ ಹಲವೆಡೆ ಕಳಪೆ ಗುಣಮಟ್ಟದ ಹಾಗೂ ಸ್ವಚ್ಛ ಮಾಡದಿರುವ ಆಹಾರಧಾನ್ಯಗಳನ್ನು ಬಳಸಿ, ಅಡುಗೆ ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ.  ಅಲ್ಲದೆ ಶಿಕ್ಷಕರು, ಅಡುಗೆಯವರು ಆಹಾರ ಧಾನ್ಯಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.  ಆದರೆ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.  ಯಾವ ಶಿಕ್ಷಕರು ಅಥವಾ ಅಡುಗೆಯವರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ.  ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು.  ಬಿಸಿಯೂಟಕ್ಕೆ ಬಳಸುವ ಆಹಾರಧಾನ್ಯಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು.  ಆಹಾರಧಾನ್ಯಗಳನ್ನು ಸ್ವಚ್ಛಗೊಳಿಸಿದ ನಂತರವೇ ಅಡುಗೆಗೆ ಬಳಸುವಂತೆ ಸೂಚನೆಗಳನ್ನು ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಸಿಲಿಂಡರ್ ಸಮಸ್ಯೆ ಪರಿಹರಿಸಿ : ಅಕ್ಷರ ದಾಸೋಹ ಯೋಜನೆಗೆ ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆ ಸಮಸ್ಯೆ ಇದ್ದು, ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಕಂಪನಿಗಳು ಶಾಲೆಗಳಿಗೆ ಪೂರೈಸುತ್ತಿಲ್ಲ.  ಇದರಿಂದಾಗಿ ಅಡುಗೆ ತಯಾರಿಕೆಗೆ ತೀವ್ರ ಸಮಸ್ಯೆ ಆಗುತ್ತಿದ್ದು, ಹಲವೆಡೆ ಕಟ್ಟಿಗೆಯನ್ನು ಉಪಯೋಗಿಸಿ ಅಡುಗೆ ತಯಾರಿಸಲಾಗುತ್ತಿದೆ.  ಈ ವೆಚ್ಚವನ್ನು ಸಾದಿಲ್ವಾರು ಅನುದಾನದಲ್ಲಿ ಭರಿಸಲಾಗುತ್ತಿದೆ.  ಪ್ರತಿ ತಿಂಗಳು 4500 ಸಿಲಿಂಡರ್‍ಗಳ ಅಗತ್ಯವಿದ್ದು, 3300 ಸಿಲಿಂಡರ್‍ಗಳನ್ನು ಪೂರೈಕೆ ಮಾಡಲಾಗುತ್ತಿದೆ,  ಇನ್ನೂ 421 ಹೊಸ ಅನಿಲ ಸಂಪರ್ಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸಿಲಿಂಡರ್ ಸಮಸ್ಯೆ ಕುರಿತಂತೆ ಇದುವರೆಗೂ ತಮ್ಮ ಗಮನಕ್ಕೆ ತಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಿಲಿಂಡರ್ ಸಮಸ್ಯೆ ಉದ್ಭವವಾಗದಂತೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.
ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ : ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ 1 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಜಿಲ್ಲೆಯ 11120 ಹೆಣ್ಣು ಮಕ್ಕಳಿಗೆ ದಿನಕ್ಕೆ 2 ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.  ಇದುವರೆಗೂ 16, 01,280 ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಆದರೆ ಮಕ್ಕಳಿಗೆ ಸಮರ್ಪಕವಾಗಿ ಪ್ರೋತ್ಸಾಹ ಧನ ವಿತರಣೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು.  ಯಾವುದೇ ಹೆಣ್ಣು ಮಗು, ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು.  ಜಿಲ್ಲೆಯ ಅಳವಂಡಿ, ದಾಸನಾಳ, ಹನುಮಸಾಗರ ಮತ್ತು ತಳಕಲ್‍ನಲ್ಲಿ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಒಟ್ಟು 400 ಮಕ್ಕಳಿಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕಾಗಿದ್ದು, 176. 12 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.  ಆದರೆ 381 ಮಕ್ಕಳನ್ನು ದಾಖಲಿಸಲಾಗಿದ್ದು, ಕೇವಲ 38. 86 ಲಕ್ಷ ಅನುದಾನ ಮಾತ್ರ ಬಳಕೆಯಾಗಿದೆ.  ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಇಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯರುಗಳಾದ ಪಿಲ್ಲಿ ವೆಂಕಟರಾವ್, ಈರಪ್ಪ ಕುಡಗುಂಟಿ, ಅಶೋಕ್ ತೋಟದ, ರಾಮಣ್ಣ ಸಾಲಭಾವಿ, ವನಿತಾ ಗಡಾದ, ಉಮಾ ಮುತ್ತಾಳ, ಅರವಿಂದಗೌಡ ಪಾಟೀಲ್, ಜ್ಯೋತಿ ಬಿಲ್ಗಾರ್ ಸೇರಿದಂತೆ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹೈನುಗಾರಿಕೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ನ.22(ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕ/ಯುವತಿಯರಿಗೆ 06 ದಿನಗಳ ಉಚಿತ ಹೈನುಗಾರಿಕೆ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.05 ಕೊನೆಯ ದಿನವಾಗಿದ್ದು, ಡಿ.06 ರ ಬೆಳಿಗ್ಗೆ 10.30 ಕ್ಕೆ ಸಂದರ್ಶನ ಜರುಗಲಿದೆ. ತರಬೇತಿಯು ಡಿ.08 ರಿಂದ ಪ್ರಾರಂಭವಾಗಲಿದೆ. ಅರ್ಜಿದಾರರು 18 ರಿಂದ 35 ವರ್ಷದವರಾಗಿರಬೇಕು, 8ನೇ ತರಗತಿ ಉತ್ತೀರ್ಣರಾಗಿರಬೇಕು, ವಾರ್ಷಿಕ ಆದಾಯ 40,000 ಮೀರಿರಬಾರದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು, ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ : 08539-231038 ಸಂಪರ್ಕಿಸಬಹುದು ಎಂದು ಎಸ್‍ಬಿಹೆಚ್ ಆರ್‍ಸೆಟಿಯ ನಿರ್ದೇಶಕರು ತಿಳಿಸಿದ್ದಾರೆ.

ಮಲ್ಟಿ ಫೋನ್ ಸರ್ವಿಸಿಂಗ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ನ.22(ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕರಿಗೆ 30 ದಿನಗಳ ಉಚಿತ ಮಲ್ಟಿ ಫೋನ ಸರ್ವಿಸಿಂಗ್ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು, ಡಿ.01 ರ ಬೆಳಿಗ್ಗೆ 10.30 ಕ್ಕೆ ಸಂದರ್ಶನ ಜರುಗಲಿದೆ. ತರಬೇತಿಯು ಡಿ.02 ರಿಂದ ಪ್ರಾರಂಭವಾಗಲಿದೆ. ಅರ್ಜಿದಾರರು 18 ರಿಂದ 35 ವರ್ಷದವರಾಗಿರಬೇಕು, 8ನೇ ತರಗತಿ ಉತ್ತೀರ್ಣರಾಗಿರಬೇಕು, ವಾರ್ಷಿಕ ಆದಾಯ 40,000 ಮೀರಿರಬಾರದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು, ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ : 08539-231038 ಸಂಪರ್ಕಿಸಬಹುದು ಎಂದು ಎಸ್‍ಬಿಹೆಚ್ ಆರ್‍ಸೆಟಿಯ ನಿರ್ದೇಶಕರು ತಿಳಿಸಿದ್ದಾರೆ.

ಕುಕನೂರು : ಡಿ.06 ರಂದು ಶ್ರೀ ಗುದ್ನೇಶ್ವರ ದೇವರ ಜಾತ್ರೆ


ಕೊಪ್ಪಳ ನ.22(ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಗುದ್ನೆಪ್ಪನ ಮಠದ ಶ್ರೀ ಗುದ್ನೇಶ್ವರ ದೇವರ ಜಾತ್ರೆಯು ನ.27 ರಿಂದ ಡಿ.06 ರವರೆಗೆ ಜರುಗಲಿದೆ.
    ಡಿ.06 ರ ಸಂಜೆ 4 ಗಂಟೆಗೆ ಜಾತ್ರೆಯ ಪಂಚಕಳಸ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈ ಜಾತ್ರೆಗೆ ಜಿಲ್ಲೆಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು  ಶ್ರೀ ಗುದ್ನೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.06 ರಿಂದ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಫಲಪೂಜಾ ಮಹೋತ್ಸವ


ಕೊಪ್ಪಳ ನ.22(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿ ಕ್ಷೇತ್ರದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಫಲಪೂಜಾ ಮಹೋತ್ಸವ ಕಾರ್ಯಕ್ರಮವು ಡಿ.06 ರಿಂದ ಡಿ.08 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಡಿ.06 ರ ಶನಿವಾರ ರಾತ್ರಿ 8.30 ಗಂಟೆಗೆ ಮನ್ಮುಖ ತೀರ್ಥದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ. ಡಿ.08 ರ ಸೋಮವಾರ ರಾತ್ರಿ 10 ಗಂಟೆಗೆ ಶ್ರೀ ಚಕ್ರ ತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಜರುಗಲಿದೆ. ಡಿ.06 ರಿಂದ ಡಿ.08 ರವರೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯವರಿಗೆ ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯರು ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು. ಫಲಪೂಜಾ ನಂತರ  ಜಗದ್ಗುರುಗಳಿಂದ ಆಶೀರ್ವಚನ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಂ.ಹೆಚ್. ಪ್ರಕಾಶರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.23 ರಂದು ಹುಲಿಗಿಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಕೊಪ್ಪಳ ನ.22(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನ.23 ರಂದು ಮಧ್ಯಾಹ್ನ 3 ಗಂಟೆಗೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಆವರಣದಲ್ಲಿ ರಾಜೀವಗಾಂಧಿ ಚೈತನ್ಯ ಯೋಜನೆಯ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ, ಪ್ರಾಥಮಿಕ ಆರೋಗ್ಯ ಕೇಂದ್ರ, ಘನತ್ಯಾಜ್ಯ ವಿಲೇವಾರಿ ಕೇಂದ್ರ ಪ್ರಾರಂಭ, 75001ನೇ ಶೌಚಾಲಯ ಉದ್ಘಾಟನೆ, 28 ಗ್ರಾಮಗಳ ಘನತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಜೈವಿಕ ತಂತ್ರಜ್ಞಾನದ ಬಳಕೆಯ ಪ್ರಾರಂಭ ಹಾಗೂ 2013-14ನೇ ಸಾಲಿನಲ್ಲಿ ಅತಿಹೆಚ್ಚು ಶೌಚಾಲಯ ನಿರ್ಮಿಸಲು ಪ್ರೋತ್ಸಾಹಿಸಿದವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ನೆರವೇರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ, ಆರೋಗ್ಯ ಸಚಿವ ಯು.ಟಿ. ಖಾದರ, ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಶರಣಪ್ಪ ಮಟ್ಟೂರು, ಅಮರನಾಥ ಪಾಟೀಲ್, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ವಿನಯಕುಮಾರ ಎಂ.ಮೇಲಿನಮನಿ, ಕೊಪ್ಪಳ ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಗಂಗಾವತಿ ತಾ.ಪಂ. ಅಧ್ಯಕ್ಷೆ ಈರಮ್ಮ, ಯಲಬುರ್ಗಾ ತಾಲೂಕು ಪಂಚಾಯತಿ ಅಧ್ಯಕ್ಷೆ ಮಹಾದೇವಿ ಕಂಬಳಿ, ಕುಷ್ಟಗಿ ತಾಲೂಕು ಅಧ್ಯಕ್ಷೆ ಸುವರ್ಣ ತುರಾಯಿ, ಹುಲಿಗಿ ಗ್ರಾ.ಪಂ.ಅಧ್ಯಕ್ಷ ಪಾಲಾಕ್ಷಗೌಡ ಗುಂಗಾಡಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಶಿವಶೈಲಂ, ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ಟಿ.ಕೆ. ಅನಿಲ್‍ಕುಮಾರ, ಕೆಎಸ್‍ಆರ್‍ಎಲ್‍ಪಿಎಸ್‍ನ ಅಭಿಯಾನ ನಿರ್ದೇಶಕ ಡಿ.ವಿ. ಸ್ವಾಮಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಸೇರಿದಂತೆ ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳ ಸರ್ವ ಸದಸ್ಯರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಆಯುಕ್ತರಿಂದ ನ. 25 ಮತದಾರರ ಪರಿಷ್ಕರಣೆ ಸಭೆ : ಸೂಚನೆ


ಕೊಪ್ಪಳ ನ. 22 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯ ಕುರಿತಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ನ. 25 ರಂದು ಮಧ್ಯಾಹ್ನ 3 ಗಂಟೆಗೆ ಕುಷ್ಟಗಿಯ ತಹಸಿಲ್ದಾರರ ಕಚೇರಿಯಲ್ಲಿ ಸಭೆ ನಡೆಸುವರು.
     ಕೊಪ್ಪಳ ಜಿಲ್ಲೆಯ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದ ವೀಕ್ಷಕರಾಗಿರುವ ಕಲಬುರಗಿ ಪ್ರಾದೇಶಿಕ ಆಯುಕ್ತರು, ಪರಿಶೀಲನಾ ಸಭೆ ನಡೆಸಲಿರುವುದರಿಂದ, ಕೊಪ್ಪಳ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ರಾಜಕೀಯ ಪಕ್ಷಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 21 November 2014

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ಭರ್ತಿ ಮಾಡುವ ಹುದ್ದೆಗಳ ವಿವರ


ಕೊಪ್ಪಳ ನ. 21 (ಕರ್ನಾಟಕ ವಾರ್ತೆ) : ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಇದೇ ನ. 23 ರಂದು ಹುಲಿಗಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗಮೇಳದಲ್ಲಿ ಹಲವು ಕಂಪನಿಗಳು ಭಾಗವಹಿಸಲಿದ್ದು, ಅವುಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ನೀಡಲಾಗುವ ವೇತನದ ವಿವರಗಳನ್ನು ಒದಗಿಸಲಾಗಿದೆ.
     ಆಶಾ ಎಲೆಕ್ಟ್ರಾನಿಕ್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ 100 ಇದ್ದು, ಐಟಿಐ. ಎಲೆಕ್ಟ್ರಿಕಲ್ಸ್/ಫಿಟ್ಟರ್ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.7000 ನೀಡಲಾಗುತ್ತದೆ.  ಫಸ್ಟ್ ಸೋರ್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ 350 ಇದ್ದು, ಪಿಯುಸಿ. ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.7800 ನೀಡಲಾಗುತ್ತದೆ.  ಟ್ರಾಯರ್ ಸಲ್ಯೂಷನ್ಸ್, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ 150 ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.8200 ನೀಡಲಾಗುತ್ತದೆ.  ಕನೆಕ್ಟ್ ಕನ್ಸಲ್ಟನ್ಸ್:- ಖಾಲಿ ಹುದ್ದೆಗಳ ಸಂಖ್ಯೆ 50 ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.7200 ನೀಡಲಾಗುತ್ತದೆ.  ಗೋಲ್ಡನ್ ಕಂನ್ಸಲ್ಟೆನ್ಸಿ, ಹುಬ್ಬಳ್ಳಿ:- ಖಾಲಿ ಹುದ್ದೆಗಳ ಸಂಖ್ಯೆ 22 ಇದ್ದು, ಪಿಯುಸಿ/ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.7200 ನೀಡಲಾಗುತ್ತದೆ.  ಅರವಿಂದ ಮಿಲ್ಸ್:- ಖಾಲಿ ಹುದ್ದೆಗಳ ಸಂಖ್ಯೆ 200 ಇದ್ದು, 8ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.8000 ರಿಂದ 9000 ನೀಡಲಾಗುತ್ತದೆ.  ಹಾಗೂ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು.  ಸಾಯಿ ಎಕ್ಸ್‍ಪೋಟ್ರ್ಸ:- ಖಾಲಿ ಹುದ್ದೆಗಳ ಸಂಖ್ಯೆ 1000 ಇದ್ದು, 8ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.7500 ನೀಡಲಾಗುತ್ತದೆ.  ಹಾಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.   ಶೋಭಾ ಡೆವಲಪ್ಪರ್ಸ್:- ಖಾಲಿ ಹುದ್ದೆಗಳ ಸಂಖ್ಯೆ 1000 ಇದ್ದು, 10ನೇ ತರಗತಿ, ಪಿಯುಸಿ. ಐಟಿಐ.ಎಲೆಕ್ಟ್ರಿಕಲ್ ಹೊಂದಿದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  ಅವರಿಗೆ ಅಂದಾಜು ಮಾಸಿಕ ವೇತನ ರೂ.9000 ನೀಡಲಾಗುತ್ತದೆ.  ಹಾಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.  ಸಾಯಿ ಕನ್ಸಲ್ಟೆನ್ಸಿ:- ಖಾಲಿ ಹುದ್ದೆಗಳ ಸಂಖ್ಯೆ 1000 ಇದ್ದು, 8ನೇ ತರಗತಿ, ಪಿಯುಸಿ. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಎಲೆಕ್ಟ್ರಿಕಲ್, ವೆಲ್ಡಿಂಗ್, ಕಂಪ್ಯೂಟರ್, ಫಿಟ್ಟರ್, ವೈರಿಂಗ್, ಗಾರ್ಮೆಂಟ್ಸ್, ರಿಟೇಲ್ಸ್, ಸೆಕ್ಯೂರಿಟಿ ಕ್ಷೇತ್ರಗಳಲ್ಲಿ ಆಯ್ಕೆ ಮಾಡಿಕೊಳ್ಳುವವರಿದ್ದಾರೆ.  
     ಹೆಚ್ಚಿನ ಮಾಹಿತಿಗಾಗಿ ಬಿ.ಕಲ್ಲೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ – 9481099256, ಬಸವರಾಜ ಮೂಲಿಮನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ‘ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ – 9663662321, ಬಸವರಾಜ ಪಾಟೀಲ್, ಜಿಲ್ಲಾ ವ್ಯವಸ್ಥಾಪಕರು, ‘ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ 9480630377 ಇವರನ್ನು ಸಂಪರ್ಕಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ. 23 ರಂದು ಹುಲಿಗಿಯಲ್ಲಿ ಬೃಹತ್ ಉದ್ಯೋಗ ಮೇಳ : 50ಕ್ಕೂ ಹೆಚ್ಚು ಕಂಪನಿಗಳು ಭಾಗಿ


ಕೊಪ್ಪಳ ನ. 21 (ಕರ್ನಾಟಕ ವಾರ್ತೆ) : ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ನಿರುದ್ಯೋಗ ಯುವ ಅಭ್ಯರ್ಥಿಗಳಿಗೆ ಕೌಶಲ್ಯಾಧಾರಿತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ನ. 23 ರಂದು ರಂದು ತಾಲೂಕಿನ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
       ಜಿಲ್ಲೆಯಲ್ಲಿ ಈಗಾಗಲೆ ಯೋಜನೆಯಡಿ ಒಟ್ಟು 5118 ಅಭ್ಯರ್ಥಿಗಳು ಭಾಗವಹಿಸಿ, ಸ್ವಯಂ ಉದ್ಯೋಗ ಹಾಗೂ ವೃತ್ತಿ ಕೌಶಲ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.  ಉದ್ಯೋಗ ಮೇಳದಲ್ಲಿ ಸುಮಾರು 50 ವಿವಿಧ ಕಂಪನಿಗಳು ಭಾಗವಹಿಸಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಉದ್ಯೋಗ ಕಲ್ಪಿಸುವವರಿದ್ದಾರೆ.  ವಿವಿಧ ಕಂಪನಿಗಳ ವಿವರ ಕೆಳಗೆ ಕಾಣಿಸಲಾಗಿದೆ.  ಕೊಪ್ಪಳ ಜಿಲ್ಲೆಯ ಕಿರ್ಲೊಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್, ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ (ಕಲ್ಯಾಣಿ ಸ್ಟೀಲ್ಸ್ & ಮುಕುಂದ್ ಲಿಮಿಟೆಡ್), ಹಿಂದುಸ್ಥಾನ್ ಕೋಕಾಕೋಲಾ ಬೆವರೇಜಸ್ ಪ್ರೈವೆಟ್ ಲಿಮಿಟೆಡ್, ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್, ಶ್ರೀ ಇಂದ್ರ ಪವರ್ ಎನೆರ್ಜಿ ಲಿಮಿಟೆಡ್, ಕÉೂಪ್ಪಳ ಗ್ರೀನ್ ಪವರ್ ಲಿಮಿಟೆಡ್, ಮೇ/ ರವಿಕಿರಣ ಪವರ್ ಪ್ರೊಜೆಕ್ಟ್ ಲಿಮಿಟೆಡ್, ಧೃವ ದೇಶ ಮೆತಾಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಹೊಸಪೇಟೆ ಇಸ್ಪಾತ್ ಲಿಮಿಟೆಡ್, ವಿನಯಾ ಸ್ಟೀಲ್ಸ್ ಪ್ರೈವೇಟ್ ಲಿ. ಹರೇಕೃಷ್ಣ ಮೆಟಲಿಸ್ ಪ್ರೈವೆಟ್ ಲಿಮಿಟೆಡ್, ಪ್ರಾಕ್ಷಿಯಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಟೆಡ್, ಅಲ್ಟ್ರಾ ಟೆಕ್ ಸಿಮೆಂಟ್ಸ್ ಲಿಮಿಟೆಡ್, ಎಸ್.ಎನ್.ಸಿ. ಫುಡ್ಸ್, ತ್ರಿವಿಸ್ತಾ ಸ್ಟೀಲ್ & ಪವರ್ ಪ್ರೈವೆಟ್ ಲಿಮಿಟೆಡ್, ಕೆಎಂಎಂಐ.ಇಸ್ಪಾತ್ ಪ್ರೈವೆಟ್ ಲಿಮಿಟೆಡ್, ಸ್ಕ್ಯಾನ್ ಇಸ್ಪಾತ್ ಲಿಮಿಟೆಡ್, ಭದ್ರಾಶ್ರೀ ಸ್ಟೀಲ್ & ಪವರ್ ಲಿಮಿಟೆಡ್, ಎಕ್ಸ್-ಇಂಡಿಯಾ ಸ್ಟೀಲ್ ಲಿಮಿಟೆಡ್, ಎಂ.ಎಸ್.ಪಿ.ಎಲ್.ಲಿಮಿಟೆಡ್ ಪೆಲ್ಲೆಟ್ ಪ್ಲಾಂಟ್, ಅಶ್ರಾದ್ ಇಸ್ಪಾತ್, ಐಎಲ್‍ಸಿ ಐರನ್ & ಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಹೊಸಪೇಟೆಯ ಹÉಚ್‍ಆರ್‍ಜಿ. ಅಲೋಯ್ಸ್ & ಸ್ಟೀಲ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರಿನ ಸರವಣ ಅಲೋಯ್ಸ್ ಸ್ಟೀಲ್ಟ್ ಪ್ರೈವೆಟ್ ಲಿಮಿಟೆಡ್, ಹುಬ್ಬಳ್ಳಿಯ ಪಸ್ಟ್ ಸೋರ್ಸ್,  ಟ್ರೀಯಾ ಸೊಲೂಶನ್ಸ್, ಆಶಾ ಎಲೆಕ್ಟ್ರಾನಿಕ್ಸ್, ಗ್ಲೋಬಲ್ ಕನ್ಸಲ್ಟೆನ್ಸಿ, ಕನೆಕ್ಟ್ ಕನ್ಸಲ್ಟೆನ್ಸಿ. ಬೆಂಗಳೂರಿನ ಅರವಿಂದ ಮಿಲ್ಸ್, ಐ.ಕೀರ್ತಿ ಟೆಕ್ನಾಲಜಿ, ಯುವ ಜಾಬ್ & ಟ್ರೇನಿಸ್ ಕನ್ಸಲ್ಟೆನ್ಸಿ, ಅಕ್ವೆರಲ್ ಗಾರ್ಮೆಂಟ್ಸ್ ಇಂಟಿಗ್ರಾ ಗಾರ್ಮೆಂಟ್ಸ್, ಟೊಯೊಟೊ, ಟಾಟಾ ಮಾರ್ಕಪೋಲೋ, ಶೋಭಾ ಡೆವಲಪ್ಪರ್ಸ್, ಶಾಹಿ ಎಕ್ಸ್‍ಪೋರ್ಟ, ಶ್ರೀ ಸಾಯಿ ಗಾರ್ಮೆಂಟ್ಸ್, ಕೆ.ಮೋಹನ್ ಬಾಂಬೆ ಅಪೇರಲ್ಸ್, ಎ.ಆರ್.ಟಿ.ಜೆ.ಎಸ್., ಶ್ರೀ ರಾಮ್ ನ್ಯೂಹರಿಜನ್ಸ್, ಚೆನ್ನೈನ ಹಿಂದೂಜಾ ಗ್ಲೋಬಲ್ ಸಲ್ಯೂಶನ್ಸ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಮೇಳದಲ್ಲಿ ಉದ್ಯೋಗದಾತರಾಗಿ ಪಾಲ್ಗೊಳ್ಳಲಿದ್ದಾರೆ.  ವಿವಿಧ ಕಂಪನಿಗಳಲ್ಲಿ 4000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಉದ್ಯೋಗಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡು, ಉದ್ಯೋಗ ಪಡೆಯಲು ಉತ್ತಮ ಅವಕಾಶ ಒದಗಿಸಲಾಗಿದೆ.
         ಹೆಚ್ಚಿನ ಮಾಹಿತಿಗಾಗಿ ಬಿ.ಕಲ್ಲೇಶ್, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ – 9481099256, ಬಸವರಾಜ ಮೂಲಿಮನಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ‘ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ – 9663662321, ಬಸವರಾಜ ಪಾಟೀಲ್, ಜಿಲ್ಲಾ ವ್ಯವಸ್ಥಾಪಕರು, ‘ಸಂಜೀವಿನಿ’ ಎನ್.ಆರ್.ಎಲ್.ಎಂ. ಜಿಲ್ಲಾ ಪಂಚಾಯತ್, ಕೊಪ್ಪಳ 9480630377 ಇವರನ್ನು ಸಂಪರ್ಕಿಸಬಹುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಲಿಗೆ ಯಂತ್ರ ವಿತರಣೆ : ಅರ್ಜಿ ಆಹ್ವಾನ


ಕೊಪ್ಪಳ ನ.21(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ ಎಸ್.ಎಫ್.ಸಿ. ನಿಧಿ ಶೇ.7.25 ರ ಅನುದಾನದಲ್ಲಿ ಪಿಕೋಪಾಲ್ಸ್ ತರಬೇತಿ ಹೊಂದಿದವರಿಗೆ ಪಿಕೋಪಾಲ್ಸ್ ಹೊಲಿಗೆ ಯಂತ್ರ ವಿತರಣೆ ಮಾಡಲು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಸಣ್ಣ ಉದ್ದಿಮೆ ಪ್ರಾರಂಭಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 03 ಭಾವಚಿತ್ರಗಳು, ಪಿಕೋಪಾಲ್ಸ್ ಯಂತ್ರ ಪಡೆದುಕೊಳ್ಳಲು ತರಬೇತಿ ಹೊಂದಿದ ಬಗ್ಗೆ ಪ್ರಮಾಣ ಪತ್ರಗಳೊಂದಿಗೆ ಡಿ.05 ರೊಳಗಾಗಿ ಎಲ್ಲಾ ದಾಖಲೆಗಳೊಂದಿಗೆ ನಗರಸಭೆ ಕಾರ್ಯಾಲಯ ಕೊಪ್ಪಳ ಇವರಿಗೆ ಸಲ್ಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲರಿಗೆ ತ್ರಿಚಕ್ರ ಮೋಟಾರ್ ವಾಹನ ವಿತರಣೆ : ಅರ್ಜಿ ಆಹ್ವಾನ


ಕೊಪ್ಪಳ ನ.21(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿಗೆ ವಿಕಲಚೇತನ ಅಭ್ಯರ್ಥಿಗಳಿಗೆ ಎಸ್.ಎಫ್.ಸಿ. ನಿಧಿ ಶೇ.3% ರ ಅನುದಾನದಲ್ಲಿ ದೈಹಿಕ ಅಂಗವಿಕಲರಿಗೆ ತ್ರಿಚಕ್ರ ಮೋಟಾರ್ ವಾಹನ ಒದಗಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಅಂಗವಿಕಲರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ದೈಹಿಕ ಅಂಗವಿಕಲತೆ ಹೊಂದಿದ ಬಗ್ಗೆ ಚಾಲ್ತಿ ಸಾಲಿನ ದೃಢೀಕರಣ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 03 ಭಾವಚಿತ್ರಗಳು, ವಾಹನದ ಚಲಾಯಿಸುವ ಲೈಸನ್ಸ್ ದಾಖಲೆ ಲಗತ್ತಿಸಿ, ಅರ್ಹ ಅಭ್ಯರ್ಥಿಗಳು ಡಿ.05 ರೊಳಗಾಗಿ ನಗರಸಭೆ ಕಾರ್ಯಾಲಯ ಕೊಪ್ಪಳ ಇವರಿಗೆ ಸಲ್ಲಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಯೊಬ್ಬರು ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳಿ : ಸಂಗಣ್ಣ ಕರಡಿಕೊಪ್ಪಳ ನ.21(ಕರ್ನಾಟಕ ವಾರ್ತೆ): ಶೌಚಾಲಯ ಮನುಷ್ಯನ ಜೀವನದ ಒಂದು ಭಾಗವಾಗಿದ್ದು, ಉತ್ತಮ ಆರೋಗ್ಯ ಹಾಗೂ ನೈರ್ಮಲ್ಯಕ್ಕಾಗಿ ಪ್ರತಿಯೊಬ್ಬರೂ ಶೌಚಾಲಯ ಹೊಂದುವುದು ಅಗತ್ಯವಾಗಿದೆ. ಜಿಲ್ಲೆಯ ಪ್ರತಿಯೊಂದು  ಕುಟುಂಬ ತಪ್ಪದೆ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
     ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್, ಹಲಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಹಲಗೇರಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಶ್ವ ಶೌಚಾಲಯ ದಿನಾಚರಣೆ ಹಾಗೂ ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಬಂದಾಗ ಪರದಾಡುವುದಕ್ಕಿಂತ, ರೋಗ ಬಾರದಂತೆ ತಡೆಯುವುದು ಬಹುಮುಖ್ಯವಾಗಿದೆ.  ಆದ್ದರಿಂದ ಪ್ರತಿಯೊಬ್ಬರೂ, ಪ್ರತಿಯೊಂದು ಮನೆಯಲ್ಲಿ ಶೌಚಾಲಯ ನಿರ್ಮಿಸಿ ಬಳಸುವಂತಾಗಬೇಕು. ಅಂದಾಗ ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ.  ಮನೆ ಕಟ್ಟಿಸುವಾಗ ಮನೆಗೊಂದು ಶೌಚಾಲಯ ಇರಲೇಬೇಕು.  ಆ ರೀತಿ ವ್ಯವಸ್ಥೆ ಆದಾಗ ಸಂಪೂರ್ಣ ನೈರ್ಮಲ್ಯ ಕಾಯ್ದುಕೊಂಡು ಬರಲು ಸಾಧ್ಯ.   ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ರೂ.15,000/- ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ರೂ.12,000/- ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ.  ಈ ಯೋಜನೆಯ ಲಾಭವನ್ನು ಪಡೆದುಕೊಂಡು ಜಿಲ್ಲೆಯಾದ್ಯಂತ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಸ್ವಚ್ಚ ಭಾರತದ ಕನಸನ್ನು ನನಸಾಗಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಡಿ. ಉದಪುಡಿ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಮಾನ್ಯವಾಗಿ ಬಯಲಿನಲ್ಲಿ ಮಲವಿಸರ್ಜನೆ ರೂಢಿ ಬೆಳೆದುಬಂದಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಜನರನ್ನು ಕಾಡುತ್ತಿದೆ. ಇದನ್ನು ತಪ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 750 ಶೌಚಾಲಯ ಗುರಿ ಹೊಂದಲಾಗಿದ್ದು, ಈ ಪೈಕಿ 200 ಪೂರ್ಣಗೊಂಡಿವೆ.  ಇನ್ನೂ 550 ಶೌಚಾಲಯಗಳ ಗುರಿ ಸಾಧನೆಯಾಗಬೇಕಿದೆ.  ಜಿಲ್ಲೆಯಲ್ಲಿ ಕಳೆದ ವರ್ಷ ಸಾಧಿಸಿದ ಗುರಿಗಿಂತ ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಶೌಚಾಲಯಗಳನ್ನು ನಿರ್ಮಿಸುವ ದಿಸೆಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ.   ಮುಂದಿನ ವಿಶ್ವ ಶೌಚಾಲಯ ದಿನಾಚರಣೆ ಆಚರಿಸುವ ಮುನ್ನ ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯೆಂದು ಘೋಷಣೆ ಮಾಡುವಂತಾಗಬೇಕು.  ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.  ಜಿಲ್ಲೆಯಲ್ಲಿ ಗ್ರಾಮಗಳ  ಪ್ರಮುಖ ರಸ್ತೆಗಳ  ಇಕ್ಕೆಲಗಳಲ್ಲಿಯೇ  ಬಹುತೇಕವಾಗಿ ಸಗಣಿ ಮತ್ತು ಘನ ತ್ಯಾಜ್ಯದ ತಿಪ್ಪೆಗುಂಡಿಗಳು ಕಂಡುಬರುತ್ತಿದ್ದು, ಇದರಿಂದ ಪರಿಸರ ಮಲಿನವಾಗುವುದರ ಜೊತೆಗೆ ಜನರ  ಆರೋಗ್ಯದ ಮೇಲೆ  ದುಷ್ಪರಿಣಾಮ ಬೀರುತ್ತದೆ.  ರೈತೋಪಯೋಗಿ ಸೂಕ್ಷ್ನಾಣು ಮಿಶ್ರಿತ ಪುಡಿಯನ್ನು ನೀರಿನಲ್ಲಿ ಬೆರೆಸಿ, ಇಂತಹ ತಿಪ್ಪೆಗುಂಡಿಗಳ ಮೇಲೆ ಹಾಕಿ, ಅದನ್ನು ಕೆಲವೇ ದಿನಗಳ ಅವಧಿಯಲ್ಲಿ ಉತ್ತಮ ಫಲವತ್ತತೆಯ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವನ್ನು ರೈತರು ಅನುಸರಿಸಿ, ಗ್ರಾಮಗಳ ಸ್ವಚ್ಛತೆಗೆ ಜಿಲ್ಲಾ ಪಂಚಾಯತಿ ಯೋಜಿಸಿದ್ದು, ಗ್ರಾಮದ ರೈತರು ಇದರ ಬಳಕೆಗೆ ಮುಂದಾಗಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ ಕಾರ್ಯಕ್ರಮ ಕುರಿತು ಮಾತನಾಡಿದರು.  ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಮ್ಯಾಗಳಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯರಾದ ದೇವಪ್ಪ ಗುಡ್ಲಾನೂರು, ರಮೇಶ ಚೌಡ್ಕಿ,  ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ತಳವಾರ, ಸದಸ್ಯರಾದ ಭೀಮಣ್ಣ ಹುಲ್ಲಾನೂರು, ಶರಣಪ್ಪ ಚಿಂತಾಮಣಿ, ಯಮನೂರಪ್ಪ ಹಳ್ಳಿಕೇರಿ, ಜಗದೀಶ ಓಜನಹಳ್ಳಿ, ಗ್ರಾಮದ ಚಂದ್ರಶೇಖರಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಮಂಜುನಾಥ ನದಾಫ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಂಜುಳಾ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.  ಸಮಾರಂಭಕ್ಕೂ ಪೂರ್ವದಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಹಲಗೇರಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣ್ಯರು ಕಸಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ಹೊಂದಬೇಕೆಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ನ. 25 ರಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ


ಕೊಪ್ಪಳ ನ. 21 (ಕರ್ನಾಟಕ ವಾರ್ತೆ) : ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಹಿಂಗಾರು ಹಂಗಾಮಿನ 100ನೇ ಸಭೆ ನ. 25 ರಂದು ಮದ್ಯಾಹ್ನ 3.00 ಗಂಟೆಗೆ, ಮುನಿರಾಬಾದಿನ ಕಾಡಾ ಕಛೇರಿ ಸಭಾಂಗಣದಲ್ಲಿ ನಡೆಯಲಿದೆ. 
     ಸಭೆಯ ಅಧ್ಯಕ್ಷತೆಯನ್ನು  ಕಾರ್ಮಿಕ ಸಚಿವ  ಪಿ.ಟಿ. ಪರಮೇಶ್ವರ ನಾಯ್ಕ ಅವರು ವಹಿಸುವರು.  ಸಭೆಯಲ್ಲಿ 2014-15 ನೇ ಸಾಲಿನ ಹಿಂಗಾರು ಹಂಗಾಮಿಗೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ವಿವಿಧ ಕಾಲುವೆಗಳಿಗೆ ನೀರು ಒದಗಿಸುವ ಬಗ್ಗೆ ಮತ್ತು ಅಧಿಸೂಚನೆ ಹೊರಡಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಅವರು ತಿಳಿಸಿದ್ದಾರೆ.

ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿ ಕೌಶಲ್ಯ ಹಾಗೂ ನಿರೂಪಣಾ ಕೌಶಲ್ಯ ತರಬೇತಿ : ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ


ಕೊಪ್ಪಳ, ನವೆಂಬರ್ 21 (ಕರ್ನಾಟಕ ವಾರ್ತೆ)- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2014-15ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗಾಗಿ, ವೃತ್ತಿ ಕೌಶಲ್ಯ ಹಾಗೂ ನಿರೂಪಣಾ ಕೌಶಲ್ಯ ತರಬೇತಿ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯಕ್ರಮಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಾರದ ಕಾರಣ, ಅರ್ಜಿಗಳನ್ನು ಸಲ್ಲಿಸಲು ದಿನಾಂಕ 30-11-2014ರವರೆಗೆ ಅವಧಿ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ (ಹಾಗೂ ಕೆನೆಪದರ ವ್ಯಾಪ್ತಿಗೆ ಒಳಪಡದಂತಹ ಅಭ್ಯರ್ಥಿಗಳು) ಸೇರಿದ, 18 ರಿಂದ 35 ವರ್ಷಗಳೊಳಗಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ2.5ಲಕ್ಷ ಗಳನ್ನು ಮೀರದಿರುವ (ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಕುಟುಂಬದ ವಾರ್ಷಿಕ ಆದಾಯ ರೂ2.00 ಲಕ್ಷಗಳನ್ನು ಮೀರಿರಬಾರದು) ಪತ್ರಿಕೋದ್ಯಮ/ ವಿದ್ಯುನ್ಮಾನ ಮಾಧ್ಯಮ/ ಸಮೂಹ ಸಂವಹನ ವಿಷಯಗಳಲ್ಲಿ ಕನಿಷ್ಠ ಶೇ. 50ರಷ್ಟು ಅಂಕಗಳನ್ನು ಗಳಿಸಿರುವ ಪದವಿ/ ಸ್ನಾತಕೋತ್ತರ ಪದವೀಧರರು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಅಭ್ಯರ್ಥಿಗಳು ಪ್ರಸ್ತುತ ಸಾಲಿನಲ್ಲಿ ಇದೇ ಸ್ವರೂಪದ ತರಬೇತಿಯನ್ನು ಸರ್ಕಾರದ ಯಾವುದೇ ಇಲಾಖೆಯಿಂದ ಪಡೆದಿರಬಾರದು.     ಅರ್ಜಿಯ ನಿಗದಿತ ನಮೂನೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ವೆಬ್‍ಸೈಟ್  www.karnatakavarthe.orgನಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ 30-11-2014 ರೊಳಗಾಗಿ ಸಲ್ಲಿಸಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿ ಗೈರುಹಾಜರಾದಲ್ಲಿ ಮೆರಿಟ್ ಆಧಾರದ ಮೇಲೆ ಮುಂದಿನ ಅಭ್ಯರ್ಥಿಗೆ ಅವಕಾಶ ನೀಡಲಾಗುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ ‘ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು- 560001, ಅರ್ಜಿ ಹಾಗೂ  ದಾಖಲೆಗಳ ಸಾಫ್ಟ್ ಕಾಪಿಯನ್ನು  scpinformationdepartment@gmail.com  ಗೆ ಇ-ಮೇಲ್ ಮಾಡಬಹುದು.

ಮಾಧ್ಯಮಗಳ ವಿವರ


Thursday, 20 November 2014

ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ತಡೆಗೆ ಸರ್ಕಾರ ಬದ್ಧ - ಪಿ.ಟಿ. ಪರಮೇಶ್ವರ ನಾಯ್ಕಕೊಪ್ಪಳ ನ. 20 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
     ಮಕ್ಕಳ ಹಕ್ಕುಗಳ ಒಡಂಬಡಿಕೆಯ 25ನೇ ವರ್ಷಾಚರಣೆ ಅಂಗವಾಗಿ ಯುನಿಸೆಫ್, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಹಿ ಆಂದೋಲನ ಹಾಗೂ ಬಾಲಿಕಾ ಸಂಘಗಳ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 ರಾಜ್ಯದಲ್ಲಿ ಬೇರೂರಿರುವ ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹ ಪಿಡುಗನ್ನು ನಿರ್ಮೂಲನೆಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ನಿರ್ಮೂಲನೆಗೆ  ಸರ್ಕಾರ ಬದ್ದವಾಗಿದೆ.  ಎಲ್ಲ ಮಕ್ಕಳು ತಮಗೆ ಕಾನೂನಿನಡಿ ಲಭ್ಯವಿರುವ ಹಕ್ಕುಗಳನ್ನು ಅನುಭವಿಸುವಂತಾಗಬೇಕು. ಬಾಲ ಕಾರ್ಮಿಕ ಪದ್ದತಿಯ ತಡೆಗಾಗಿ ಸಹಾಯವಾಣಿ 1098 ಅನ್ನು ಈಗಾಗಲೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಬಾಲ ಕಾರ್ಮಿಕರ ಪುನರ್ವಸತಿಯನ್ನು ಜಿಲ್ಲಾ ಮಟ್ಟದಲ್ಲಿ ಬಾಲಕಾರ್ಮಿಕ ಪುನರ್ವಸತಿ ಯೋಜನೆಯ ಮೂಲಕ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಯಾಗಿ 25 ವರ್ಷ ಕಳೆದಿದೆ. ಮಕ್ಕಳ ಮೇಲಿನ ಲೈಂಗಿಕ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೆರವು ಪಡೆಯಬಹುದು. ಮಕ್ಕಳ ರಕ್ಷಣೆಗಾಗಿ ಎಲ್ಲರೂ ಸಂಘಟಿತರಾಗಬೇಕೆಂದು ಕರೆ ನೀಡಿದರು.
    ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, 18 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರಾಗಿ ನೇಮಿಸಿಕೊಳ್ಳಬಾರದು. ಬಾಲ್ಯ ವಿವಾಹವನ್ನು ಸಮಾಜದಿಂದ ಕಿತ್ತೊಗೆಯಲು ಎಲ್ಲರ ಸಹಕಾರ ಅಗತ್ಯ. ಜಿಲ್ಲಾಡಳಿತವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
    ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಉದಪುಡಿ ಮಾತನಾಡಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಸಮಾಜದ ಅಭಿವೃದ್ದಿಗೆ ಮಾರಕ. ಎಲ್ಲ ಮಕ್ಕಳು ಸಂತೋಷದಿಂದ ಬಾಲ್ಯವನ್ನು ಅನುಭವಿಸುವಂತಾಗಬೇಕು ಎಂದರು.
    ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅದ್ಯಕ್ಷ ಅಮರೇಶ ಕುಳಗಿ, ಜಿಲ್ಲಾ ಪಂಚಾಯತ್‍ನ ಸದಸ್ಯರು,  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ಪ್ರೋ. ಶೋಭಾದೇವಿ ಅವರು ಲಿಂಗತ್ವದ ಬಗ್ಗೆ,  ಶಿವರಾಮ್ - ಬಾಲಿಕಾ ಸಂಘದ ಬಗ್ಗೆ, ಸೋಮಶೇಖರ-ಮಕ್ಕಳ ಹಕ್ಕುಗಳು ಹಾಗೂ ಬಾಲನ್ಯಾಯ ಕಾಯ್ದೆಯ ಬಗ್ಗೆ, ಹರೀಶ್ ಜೋಗಿ- ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು.  ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮದ ಬಾಲಿಕ ಸಂಘದ ಸದಸ್ಯರು, ಭಾಂದವಿ ಮತ್ತು ಶಿಕ್ಷಣ ಕೇಂದ್ರದ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಚೈಲ್ಡ್‍ಲೈನ್ ಸಿಬ್ಬಂದಿ, ಡಿಸಿಪಿಓನ ಸಿಬ್ಬಂದಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಎಸ್‍ಜೆಪಿಯುನ ಸದಸ್ಯರು ಹಾಗೂ ಇತರೇ ಇಲಾಖೆಯ ಸಿಬ್ಬಂದಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಡಿ.08 ರಂದು ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಕಾರ್ತಿಕೋತ್ಸವ ಹಾಗೂ ಬೆಳ್ಳಿ ರಥೋತ್ಸವ


ಕೊಪ್ಪಳ ನ.20(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶ್ರೀಕ್ಷೇತ್ರ ಕೊಟ್ಟೂರಿನ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಕಾರ್ತಿಕೋತ್ಸವ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮವು ಡಿ.08 ರಂದು ಜರುಗಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅ.ಸುತಗುಂಡಿ ಅವರು ತಿಳಿಸಿದ್ದಾರೆ.
ದಿವ್ಯ ಸಾನಿಧ್ಯವನ್ನು ಶ್ರೀ ಮನ್ನಿರಂಜನ ಜಗದ್ಗುರು, ಶ್ರೀ ಶಂಕರ ಮಹಾಸ್ವಾಮಿಗಳು, ಕ್ರಿಯಾ ಮೂರ್ತಿಗಳು ಹಾಗೂ ಕೊಟ್ಟೂರು ಕಟ್ಟಿಮನಿ ದೈವದವರು ವಹಿಸುವರು. ರಾಜ್ಯದ ಸಕಲ ಸದ್ಬಕ್ತರು ಈ ಉತ್ಸವದಲ್ಲಿ ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನ ಸಮಿತಿಯ ದೂರವಾಣಿ ಸಂಖ್ಯೆ: 08391-226001 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸಲು ನ.24 ರಿಂದ ಕಾರ್ಯಾಗಾರ


ಕೊಪ್ಪಳ ನ.20(ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾರ್ಚ/ಏಪ್ರೀಲ್ 2015 ರಲ್ಲಿ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಹೊಸಪಠ್ಯಕ್ರಮಕ್ಕೆ ಅನುಗುಣವಾಗಿ ನಿರಂತರ ವ್ಯಾಪಕ ಮೌಲ್ಯಮಾಪನದ ಅನುಷ್ಠಾನ ಹಾಗೂ ವಿಷಯವಾರು ಬೋಧನಾ ಶಿಕ್ಷಕರುಗಳಿಗೆ 10ನೇ ತರಗತಿಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಮೊದಲ ಹಂತದಲ್ಲಿ ಕನ್ನಡ, ಇಂಗ್ಲೀಷ ಹಾಗೂ ಹಿಂದಿ ವಿಷಯಗಳನ್ನು ಬೋಧಿಸುತ್ತಿರುವ ಶಿಕ್ಷಕರಿಗೆ ಕಾರ್ಯಾಗಾರವನ್ನು ನ.24 ರಿಂದ 26 ರವರೆಗೆ ಬೆಳಿಗ್ಗೆ 9 ಗಂಟೆಗೆ ಶ್ರೀ ಗವಿಸಿದ್ದೇಶ್ವರ ಬಿ.ಇಡಿ. ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕಾರ್ಯಾಗಾರ ನಡೆಯುವ ಮೂರು ದಿನಗಳಂದು ಯಾವ ಶಿಕ್ಷಕರಿಗೂ ರಜೆ ನೀಡುವಂತಿಲ್ಲ. ಸಂಬಂಧಿಸಿದ ಶಿಕ್ಷಕರನ್ನು ಕಾರ್ಯಾಗಾರಕ್ಕೆ ಬಿಡುಗಡೆಗೊಳಿಸದೇ ಉದಾಸೀನತೆ ತೊರಿದಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರನ್ನೆ ನೇರ ಹೊಣೆಗಾರರನ್ನಾಗಿ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸೂಚನೆ


ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಕಾರ್ಖಾನೆಗಳಿದ್ದು, ಇಲ್ಲಿನ ಸ್ಥಳಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಬರುವ ಜನವರಿ ತಿಂಗಳಿನಲ್ಲಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಕೊಪ್ಪಳ ಜಿಲ್ಲೆಯೂ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.  ಇಂತಹ ಕಾರ್ಖಾನೆಗಳಲ್ಲಿ ಸ್ಥಳಿಕರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ.  ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ವಿವಿಧ ವಿಷಯಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ತರಬೇತಿ ಕೋರ್ಸ್‍ಗೆ ಅನುಗುಣವಾಗಿ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ.  ಕಾರ್ಮಿಕ ಇಲಾಖೆ ಅಧಿಕಾರಿಗಳು ಇಂತಹ ಕೈಗಾರಿಕೆ ಕಂಪನಿಗಳೊಂದಿಗೆ ಸಮಾಲೋಚಿಸಿ, ಬರುವ ಜನವರಿ ತಿಂಗಳಿನಲ್ಲಿ ಕೊಪ್ಪಳದಲ್ಲಿಯೇ ಬೃಹತ್ ಉದ್ಯೋಗ ಮೇಳ ಆಯೋಜಿಸಿ, ಸ್ಥಳಿಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಟ್ಟಡ ಕಾರ್ಮಿಕರ ನೋಂದಣಿ : ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಸಮರ್ಪಕವಾಗಿ ನಡೆಯುತ್ತಿಲ್ಲ.  ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಅಕ್ರಮವಾಗಿ ಪಡೆಯಲು ಕಾರ್ಮಿಕರಲ್ಲದವರೂ ಸಹ ನೋಂದಣಿ ಮಾಡಿಸುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ.  ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಮಿಕರ ನೋಂದಣಿ ಮಾಡುತ್ತಿರುವುದರಿಂದ ಇಂತಹ ಅಕ್ರಮ ನಡೆಸಲು ಸಾಧ್ಯವಾಗುತ್ತಿವೆ.  ಇದನ್ನು ತಡೆಗಟ್ಟಲು, ಅಧಿಕಾರಿಗಳು ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತೆರಳಿ, ಅರ್ಹ ಕಾರ್ಮಿಕರ ನೋಂದಣಿ ಮಾಡಿಕೊಳ್ಳಲು ಸ್ಥಳೀಯ ಜನಪ್ರತಿನಿಧಿಗಳನ್ನು ತೊಡಗಿಸಿಕೊಂಡು, ನೋಂದಣಿ ಮೇಳ ಆಯೋಜಿಸಬೇಕು.  ಅಲ್ಲದೆ ಅರ್ಹರಿಗೆ ಗುರುತಿನ ಚೀಟಿಯನ್ನು ಸಮರ್ಪಕವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಇದುವರೆಗೂ ಜಿಲ್ಲೆಯಲ್ಲಿ ಕೇವಲ 11594 ಕಾರ್ಮಿಕರ ನೋಂದಣಿ ಆಗಿದ್ದು, ನಿಗದಿತ ಗುರಿ ಸಾಧನೆ ಆಗಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ : ಜಿಲ್ಲೆಯಲ್ಲಿ 2. 5 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಇವರಿಗೆ ಸರ್ಕಾರದಿಂದ ಉಚಿತ ವೈದ್ಯಕೀಯ ಸೌಲಭ್ಯ ದೊರೆಯಲು ಅವಕಾಶವಿದೆ.  ಆದರೆ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರು, ಗೃಹಕೃತ್ಯ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರು ಇಲ್ಲ ಎಂಬುದಾಗಿ ಅಧಿಕಾರಿಗಳು ತಪ್ಪು ವರದಿ ನೀಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು.  ಸರ್ಕಾರ ಈ ವರ್ಷ 230 ಕೋಟಿ ಹೆಚ್ಚುವರಿ ಅನುದಾನ ನೀಡಿ, ಬಿಪಿಎಲ್ ಕುಟುಂಬಗಳೂ ಸೇರಿದಂತೆ ಇತರೆ ಕಾರ್ಮಿಕರನ್ನೂ ಸಹ ಯೋಜನೆಯ ವ್ಯಾಪ್ತಿಗೆ ಸೇರಿಸಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ.  ಬರುವ ಜನವರಿ ಅಂತ್ಯದೊಳಗೆ ಈ ಕುರಿತು ಸಮರ್ಪಕ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಸ್ ಮಿಲ್ ಕಾರ್ಮಿಕರಿಗೂ ಇಎಸ್‍ಐ ಸೌಲಭ್ಯ : ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್‍ಗಳಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಇದುವರೆಗೂ ಇಎಸ್‍ಐ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸದಿರುವುದರಿಂದ, ಕಾರ್ಮಿಕರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುವಂತಾಗಿದೆ.  ಕೂಡಲೆ ಈ ಭಾಗದ ಎಲ್ಲ ರೈಸ್ ಮಿಲ್‍ಗಳಲ್ಲಿನ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಿ, ಅರ್ಹರಿಗೆ ಇಎಸ್‍ಐ ಸೌಲಭ್ಯ ದೊರೆಕಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
         ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು 7500 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.  ಆದರೆ ಅವರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ, ಕಾರ್ಮಿಕ ಇಲಾಖೆಯವರು ಈ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿಸಿದರು.
         ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಉದ್ಯೋಗ ಮತ್ತು ತರಬೇತಿ ಇಲಾಖೆ ಅಪರ ನಿರ್ದೇಶಕ ಈಶ್ವರನಾಯ್ಕ್, ಗುಲಬರ್ಗಾ ಉಪ ಕಾರ್ಮಿಕ ಆಯುಕ್ತ ಚಿದಾನಂದ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಿವಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹುಲಿಗೆಮ್ಮ ದೇವಿ ದೇವಸ್ಥಾನ : ಭಕ್ತಾದಿಗಳಿಗೆ ಸೂಚನೆ


ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿ ಯಾವುದೇ ಭಕ್ತಾದಿಗಳು ಯಾರಿಗೂ ಹಣ ಅಥವಾ ಕಾಣಿಕೆಗಳನ್ನು ನೀಡದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಸೂಚನೆ ನೀಡಿದ್ದಾರೆ.
         ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ‘ಎ ‘ ವರ್ಗದ ಅಧಿಸೂಚಿತ ದೇವಸ್ಥಾನವಾಗಿದು,್ದ ಈ ದೇವಸ್ಥಾನದಲ್ಲಿ ಜರುಗಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಾದ ವಾóರ್ಷಿಕ ಜಾತ್ರೆ, ನವರಾತ್ರಿ ದಸರಾ, ಕಾರ್ತೀಕ ದೀಪೋತ್ಸವ, ಭಾರತ ಹುಣ್ಣಿಮೆ, ಮತ್ತು ದೈನಂದಿನ ಪೂಜೆಗಳ  ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದ ನಿರ್ವಹಿಸಲಾಗುತ್ತಿದೆ.  ಅಲ್ಲದೆ ಈ ಎಲ್ಲಾ ವೆಚ್ಚಗಳನ್ನು ದೇವಸ್ಥಾನದ ವತಿಯಿಂದ ಭರಿಸಲಾಗುತ್ತಿದೆ.  ದೇವಸ್ಥಾನದ ವತಿಯಿಂದ ಹಣ ಸಂಗ್ರಹಣೆಗೆ ಯಾವುದೇ ವ್ಯಕ್ತಿಗಳನ್ನಾಗಲಿ, ಸಂಫಸಂಸ್ಥೆಗಳನ್ನಾಗಲಿ ನಿಯೋಜಿಸಿರುವುದಿಲ್ಲ.  ಆದರೂ ನ. 25 ರಂದು ಜರುಗಲಿರುವ ಕಾರ್ತೀಕ ದೀಪೋತ್ಸವ ಸಂಬಂಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಣೆ ಮಾಡುತ್ತಿರುವುದಾಗಿ ಆರೋಪಗಳು ಕೇಳಿ ಬಂದಿರುತ್ತದೆ.  ಭಕ್ತಾಧಿಗಳು ಹಾಗೂ ಗ್ರಾಮಸ್ಥರು ಯಾರ ಕೈಯಲ್ಲಿಯು ಹಣವನ್ನಾಗಲಿ ಅಥವಾ ವಸ್ತು ರೂಪದಲ್ಲಿ ಕಾಣಿಕೆಗಳನ್ನಾಗಲಿ ಕೊಡದೆ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳ ಕóಛೇರಿಯಲ್ಲಿ ಕೊಟ್ಟು ಸೂಕ್ತ ರಸೀದಿ ಪಡೆಯಬೇಕು.  ದೇವಸ್ಥಾನದ ಹೆಸರಿನಲ್ಲಿ ಯಾವುದೇ ವ್ಯಕ್ತಿಗಳಾಗಲಿ ಅಥವಾ ಸಂಸ್ಥೆಗಳಿಂದಾಗಲಿ ದೇಣಿಗೆ ಸಂಗ್ರಹಿಸುತ್ತಿರುವುದು ಕಂಡುಬಂದಲ್ಲಿ   ದಾಖಲೆ ಸಹಿತ ಲಿಖಿತ ದೂರನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ 100 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ- ಪಿ.ಟಿ. ಪರಮೇಶ್ವರ ನಾಯ್ಕ


ಕೊಪ್ಪಳ,ನ.20(ಕರ್ನಾಟಕ ವಾರ್ತೆ): ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿನ ಯುವಕರು ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗುವಂತೆ ರಾಜ್ಯದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ 100 ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
     ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಇವರ ಸಹಯೋಗದಲ್ಲಿ ಕೊಪ್ಪಳ ತಾಲೂಕು ಟಣಕನಲ್ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕಾಮಗಾರಿ ಅಡಿಗಲ್ಲು ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಗ್ರಾಮೀಣ ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.  ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳಿದ್ದು, ಉದ್ಯೋಗಾವಕಾಶಗಳೂ ಸಹ ಹೆಚ್ಚಿವೆ.  ಇದರಿಂದಾಗಿ ಐಟಿಐ ಕೋರ್ಸ್ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕಾಗಿಯೇ ಜಿಲ್ಲೆಯಲ್ಲಿ ಹೊಸದಾಗಿ ಐಟಿಐ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದ್ದು, ಈ ವರ್ಷ ರಾಜ್ಯದಲ್ಲಿ 100 ಐಟಿಐ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ.  ಐಟಿಐ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸೂಕ್ತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ, ವೃತ್ತಿಪರತೆ ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ 100 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.  ಎಲ್ಲಾ ಸರ್ಕಾರಿ ಐಟಿಐ ಕಾಲೇಜುಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದ್ದು, 2013-14 ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ ಇದಕಾಗಿ 103 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು.  2014-15 ನೇ ಸಾಲಿನಲ್ಲಿ ಇದಕ್ಕಾಗಿ ಹೆಚ್ಚುವರಿಯಾಗಿ 65 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.  ಕೊಪ್ಪಳದ ಟಣಕನಲ್ ಬಳಿ ಸರ್ಕಾರಿ ಐಟಿಐ ಕಾಲೇಜಿನ ನೂತನ ಕಟ್ಟಡವನ್ನು 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಕರ್ನಾಟಕ ಗೃಹ ಮಂಡಳಿಗೆ ಕಾಮಗಾರಿಯ ಹೊಣೆ ನೀಡಲಾಗಿದೆ.  ಕಟ್ಟಡವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.  ಮುನಿರಾಬಾದ್‍ನಲ್ಲಿ ಹೊಸದಾಗಿ ಸರ್ಕಾರಿ ಐಟಿಐ ಕಾಲೇಜು ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು.  ವೃತ್ತಿ ಪರ ಐಟಿಐ ಕೋರ್ಸ್‍ನಲ್ಲಿ ಏಕಕಾಲಕ್ಕೆ ಬಹುವಿಷಯ ತರಬೇತಿ ಕೋರ್ಸ್ ಪಡೆಯುವಂತೆ ಮಲ್ಟಿ ಟ್ರೇಡ್ ತರಬೇತಿ ಪಡೆಯುವ ವ್ಯವಸ್ಥೆಯನ್ನು ಈ ವರ್ಷ ಜಾರಿಗೊಳಿಸಲಾಗಿದ್ದು, ಕುಕಿಂಗ್ ಕೋರ್ಸ್ ಜೊತೆಗೆ ಹಾಸ್ಪಿಟಾಲಿಟಿ ಕೋರ್ಸ್ ಅದೇ ರೀತಿ ಪ್ಲಂಬಿಂಗ್ ಕೋರ್ಸ್ ಜೊತೆಗೆ ಎಲೆಕ್ಟ್ರಿಷಿಯನ್ ತರಬೇತಿ ಕೋರ್ಸ್ ತರಬೇತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ.  ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಿಗೂ ಈ ಪದ್ಧತಿಯನ್ನು ವಿಸ್ತರಣೆ ಮಾಡಲಾಗುವುದು  ಎಂದು ಕಾರ್ಮಿಕ ಸಚಿವರು ಹೇಳಿದರು.
ಜಿಲ್ಲೆಗೊಂದು ಕಾರ್ಮಿಕ ಕಲ್ಯಾಣ ಭವನ : ಜಿಲ್ಲೆಯಲ್ಲಿ ಕಾರ್ಮಿಕರ ಸಮಾಜಮುಖಿ ಚಟುವಟಿಕೆಗಳಿಗಾಗಿ ಪ್ರತಿ ಜಿಲ್ಲೆಗೊಂದು ಕಾರ್ಮಿಕ ಕಲ್ಯಾಣ ಭವನವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.  ಪ್ರತಿ ಕಾರ್ಮಿಕ ಕಲ್ಯಾಣ ಭವನಕ್ಕೆ 5 ರಿಂದ 6 ಕೋಟಿ ರೂ. ಅನುದಾನ ಒದಗಿಸಲಾಗುವುದು.  ಈಗಾಗಲೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ ಗುರುತಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಹಿಳಾ ಕಾರ್ಮಿಕರ ಹಿತ : ರಾಜ್ಯದಲ್ಲಿ ಗಾರ್ಮೆಂಟ್ಸ್‍ಗಳಲ್ಲಿ ಸುಮಾರು 3 ಲಕ್ಷ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಈ ಪೈಕಿ 1 ಲಕ್ಷ ಮಹಿಳಾ ಕಾರ್ಮಿಕರ ವೈದ್ಯಕೀಯ ತಪಾಸಣೆ ಮಾಡಿಸಲಾಗಿದ್ದು, ಇದರಲ್ಲಿ ಶೇ. 62 ರಷ್ಟು ಮಹಿಳಾ ಕಾರ್ಮಿಕರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.  ಮಹಿಳಾ ಕಾರ್ಮಿಕರ ಹಿತ ಕಾಯುವ ಸಲುವಾಗಿ ಇವರಿಗೆ ಕಬ್ಬಿಣಾಂಶದ ಮಾತ್ರೆ ವಿತರಿಸಿ, ಆರೋಗ್ಯವಂತರನ್ನಾಗಿಸಲು ಉದ್ದೇಶಿಸಲಾಗಿದ್ದು, ಈ ವರ್ಷ 15 ಲಕ್ಷ ಕಬ್ಬಿಣಾಂಶ ಮಾತ್ರೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಮಹಾ ನಗರ ಪಾಲಿಕೆಗಳಲ್ಲಿ ಮಹಿಳಾ ಕಾರ್ಮಿಕರಿಗೆ ವಾಹನ ಸೌಲಭ್ಯ ಒದಗಿಸಲು ಸಹ ಯೋಜಿಸಲಾಗಿದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದಲ್ಲಿ ಹೆಚ್ಚು ಕಾರ್ಖಾನೆಗಳು ಇರುವುದರಿಂದ ಐಟಿಐ ಕೋರ್ಸ್‍ಗೆ ಬೇಡಿಕೆ ಇದೆ.  ರೈತರ ಭೂಮಿ ಪಡೆದು ಸ್ಥಳಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿ ಕಾರ್ಯಾರಂಭ ಮಾಡುವ ಕಾರ್ಖಾನೆಗಳು, ನಂತರದ ದಿನಗಳಲ್ಲಿ ಸ್ಥಳಿಕರಿಗೆ ಉದ್ಯೋಗ ನೀಡುವಲ್ಲಿ ತಾತ್ಸಾರ ಮನೋಭಾವ ತೋರುತ್ತಿವೆ.  ಈ ಕುರಿತಂತೆ ಕಾರ್ಮಿಕ ಇಲಾಖೆಯವರು, ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.  ಕೊಪ್ಪಳದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಸದಸ್ಯೆ ವನಿತಾ ಗಡಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್, ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಮುದಿಯಪ್ಪ ವಾಲ್ಮೀಕಿ, ತಾ.ಪಂ. ಸದಸ್ಯ ರಮೇಶ್ ಚೌಡ್ಕಿ, ಉದ್ಯೋಗ ಮತ್ತು ತರಬೇತಿ ಇಲಾಖೆ ಅಪರ ನಿರ್ದೇಶಕ ಈಶ್ವರನಾಯ್ಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ನರೇಗಲ್ ಗ್ರಾಮದ ಆಸರೆ ಫಲಾನುಭವಿಗಳಿಗೆ, ಮನೆಗಳ ಹಕ್ಕುಪತ್ರಗಳನ್ನು ಇದೇ ಸಂದರ್ಭದಲ್ಲಿ ಸಚಿವರು ವಿತರಿಸಿದರು ಅಲ್ಲದೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.Wednesday, 19 November 2014

ಲಾರಿ ವಶ ಪ್ರಕರಣ : ಆಕ್ಷೇಪಣೆಗಳಿಗೆ ಆಹ್ವಾನ


ಕೊಪ್ಪಳ ನ.19(ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ಕಳೆದ 2008 ರ ಫೆ. 13 ರಂದು ದಾಖಲಾಗಿದ್ದ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ಲಾರಿಯನ್ನು ಶ್ರೀರಾಮ ಟ್ರಾನ್ಸ್‍ಪೋರ್ಟ್ ಕಂಪನಿಯವರು ತಮ್ಮ ವಶಕ್ಕೆ ನೀಡುವಂತೆ ಯಲಬುರ್ಗಾದ ನ್ಯಾಯಾಲಯವನ್ನು ಕೋರಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
       ಕುಕನೂರು ಪೊಲೀಸ್ ಠಾಣೆಯಲ್ಲಿ ಕಳೆದ 2008 ರ ಫೆ. 13 ರಂದು ದಾಖಲಾಗಿದ್ದ ಪ್ರಕರಣವೊಂದರ ಆರೋಪಿಯಾಗಿದ್ದ ಲಾರಿ ಚಾಲಕ ರಾಯಚೂರಿನ ಎಲ್.ಬಿ.ಎಸ್. ನಗರದ ಬಾಬು ತಂದೆ ತಿಮ್ಮಣ್ಣ (23) ಮೃತಪಟ್ಟಿದ್ದು, ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತದೆ.  ಆದರೆ ಪ್ರಕರಣದ ತನಿಖೆಯ ಕಾಲಕ್ಕೆ ಜಪ್ತಿ ಮಾಡಿದ ಲಾರಿ ಹಾಗೆಯೇ ಉಳಿದಿದ್ದು, ಲಾರಿಯನ್ನು ಶ್ರೀರಾಮ ಟ್ರಾನ್ಸಪೋರ್ಟ್ ಕಂಪನಿಯವರು ತಮ್ಮ ವಶಕ್ಕೆ ಕೊಡಲು ಯಲಬುರ್ಗಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾರದ್ದಾದರೂ ತಕರಾರು ಇದ್ದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಯಲಬುರ್ಗಾ ಇವರಲ್ಲಿ ಸಲ್ಲಿಸಬಹುದಾಗಿದೆ. ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ದೂ.08539-230111, ಕೊಪ್ಪಳ ಡಿ.ಎಸ್.ಪಿ. ದೂ.08539-230432, ಯಲಬುರ್ಗಾ ಸಿಪಿಐ ದೂ.08534-220133, ಕುಕನೂರು ಪೊಲೀಸ್ ಠಾಣೆ ದೂ.08534-230438 ಮೊ.9480803750 ಇವರಿಗೆ ಸಂಪರ್ಕಿಸಿ ಮಾಹಿತಿ ಸಲ್ಲಿಸಬಹುದಾಗಿದೆ ಎಂದು ಕುಕನೂರು ಪೊಲೀಸ್ ಠಾಣೆಯ ಪಿ.ಎಸ್.ಐ. ವಿಶ್ವನಾಥ ಹಿರೇಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ,ನ.19(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಕಿತ್ತೂರುರಾಣಿ ಚನ್ನಮ್ಮ ಹಾಗೂ ವೀರ ಮಹಿಳೆಯ ಪ್ರಶಸ್ತಿಗಾಗಿ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ : ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳಾ ಅಭಿವೃದ್ದಿ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ಮಹಿಳಾ ಅಭಿವೃದ್ದಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರೆ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟ ಪರಿಗಣನೆಗೆ ಬರಲಿದೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುವ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.  ಪ್ರಶಸ್ತಿಗೆ ಬರುವ ಅರ್ಜಿಗಳ ಪರಿಶೀಲನೆ ಹಾಗೂ ಆಯ್ಕೆಗೆ ಸಂಬಂಧಿಸಿದಂತೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರಶಸ್ತಿ ಪ್ರದಾನವನ್ನು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಥವಾ ಸರಕಾರವು ನಿಗದಿಪಡಿಸುವ ದಿನಾಂಕ ಹಾಗೂ ಸ್ಥಳಗಳಲ್ಲಿ ಏರ್ಪಡಿಸಲಾಗುವುದು. ಪ್ರಶಸ್ತಿಯನ್ನು ಖುದ್ದಾಗಿ ಆಯ್ಕೆಯಾದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ಸಂಸ್ಥೆಯ ಪದಾಧಿಕಾರಿಗಳು ಸ್ವೀಕರಿಸಬಹುದು.
ವೀರ ಮಹಿಳೆ : ಮಹಿಳೆಯು ಅಪತ್ಕಾಲದಲ್ಲಿರುವ ಮತ್ತೊಬ್ಬ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು ಸಮಯ ಪ್ರಜ್ಞೆಯಿಂದ ದೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿದಲ್ಲಿ ಅಂತಹ ಮಹಿಳೆಯರನ್ನು ವೀರ ಮಹಿಳೆ ಎಂದು ಪರಿಗಣಿಸಲಾಗುವುದುದು.  ಅರ್ಜಿ ಸಲ್ಲಿಸಲು 18 ರಿಂದ 45 ವರ್ಷದೊಳಗಿರಬೇಕು.   ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆಯನ್ನು ಮಾಡಿರಬೇಕು. 2013 ರ ಜನವರಿ 01 ರಿಂದ ಡಿಸೆಂಬರ್ 31 ರವರೆಗಿನ ಸಾಧನೆಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಪ್ರಶಸ್ತಿಗಾಗಿ ಸಂಬಂಧಿಸಿದ ಮಹಿಳೆಯ ತಂದೆ, ತಾಯಿ, ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ.  ಪ್ರಶಸ್ತಿಯು 10 ಸಾವಿರ ರೂ. ನಗರದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.  ಅರ್ಜಿ ಸಲ್ಲಿಸಲು ನ.28 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನ.20 ರಂದು ಕೈಗಾರಿಕಾ ತರಬೇತಿ ಸಂಸ್ಥೆಯ ಅಡಿಗಲ್ಲು ಸಮಾರಂಭಕೊಪ್ಪಳ ನ.19(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಗೃಹ ಮಂಡಳಿ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಯೋಗದೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಡಿಗಲ್ಲು ಸಮಾರಂಭ ನ.20 ರಂದು ಬೆಳಿಗ್ಗೆ 10 ಗಂಟೆಗೆ ಟಣಕನಕಲ್ ಗ್ರಾಮದಲ್ಲಿ ಜರುಗಲಿದೆ.
    ಉದ್ಘಾಟನೆಯನ್ನು ಕಾರ್ಮಿಕ ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ ಅವರು ನೆರವೇರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್, ನಗರಸಭೆ ಅಧ್ಯಕ್ಷೆ ಲತಾ ಸಂಡೂರು, ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಓಜನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ ವಾಲ್ಮೀಕಿ ಅವರು ಭಾಗವಹಿಸುವರು ಎಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ತಿಳಿಸಿದ್ದಾರೆ.