Tuesday, 28 October 2014

ಪೊಲೀಸರಿಗೆ ಗುಣಮಟ್ಟದ ತರಬೇತಿಗೆ ಆದ್ಯತೆ- ಗೃಹ ಸಚಿವ ಕೆ.ಜೆ. ಜಾರ್ಜ್

ಕೊಪ್ಪಳ ಅ.28 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
     ಮುನಿರಾಬಾದಿನ ಇಂಡಿಯನ್ ರಿಸರ್ವ್ ಬಟಾಲಿಯನ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ನೂತನ ಆಡಳಿತ ಕಚೇರಿ, ತರಬೇತಿ ಸಂಕೀರ್ಣ, ವಸತಿ ಸಮುಚ್ಛಯ ಮತ್ತು ಭೋಜನಾಲಯ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ರಾಜ್ಯದಲ್ಲಿನ ಮೀಸಲು ಪಡೆಯ ಪೊಲೀಸರಿಗೆ  ಉತ್ತಮ ಗುಣಮಟ್ಟದ ತರಬೇತಿ ನೀಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ತರಬೇತಿ ವ್ಯವಸ್ಥೆ ಹೊಂದಿರುವ ಇತರೆ ರಾಜ್ಯಗಳಲ್ಲಿನ ಮಾದರಿಯ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಪಡೆದು, ಇನ್ನೂ ಸುಧಾರಿತ ಗುಣಮಟ್ಟದ ತರಬೇತಿ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು.  ಸದ್ಯ ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ನಿರ್ಮಿಸಲಾಗಿರುವ ತರಬೇತಿ ಶಾಲೆ ರಾಜ್ಯದಲ್ಲಿಯೇ ಉತ್ತಮ ವ್ಯವಸ್ಥೆ ಹೊಂದಿರುವ ತರಬೇತಿ ಶಾಲೆಯಾಗಿದೆ.  ರಾಜ್ಯ ಮೀಸಲು ಪಡೆಯ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ, ನಾಗರಿಕ ಪೊಲೀಸರಿಗೆ ಬೆನ್ನೆಲುಬಾಗಿ ನಿಂತು, ಪರಿಸ್ಥಿತಿಯನ್ನು ಹತೋಟಿಗೆ ತರುವಂತಹ ಉತ್ತಮ ಸೇವೆ ಸಲ್ಲಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ.  ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲದೆ ರಾಜ್ಯದಲ್ಲಿನ ಪ್ರತಿಕೂಲ ಸಂದರ್ಭಗಳಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಗಳ ಸೇವೆ ಶ್ಲಾಘನೀಯವಾಗಿದೆ.  ಛತ್ತೀಸ್‍ಗಡ ರಾಜ್ಯದಲ್ಲಿ ನಡೆದ ಚುನಾವಣೆಗೆ ನಕ್ಸಲರ ಭೀತಿ ಇದ್ದ ಸಂದರ್ಭದಲ್ಲಿ, ಅದನ್ನು ಸಮರ್ಥವಾಗಿ ಎದುರಿಸಿ, ಮುಕ್ತ ಹಾಗೂ ಕಾನೂನು ಸಮ್ಮತ ಚುನಾವಣೆ ನಡೆಸಲು ರಾಜ್ಯದ ಮೀಸಲು ಪೊಲೀಸ್ ಪಡೆ ಯಶಸ್ವಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.  ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿನ 13 ಸಾವಿರ ಸಿಬ್ಬಂದಿಗಳ ಸಂಖ್ಯಾ ಬಲದಲ್ಲಿ ಇನ್ನೂ 5 ಸಾವಿರ ಹುದ್ದೆಗಳು ಖಾಲಿ ಉಳಿದಿವೆ.  ಕಳೆದ ವರ್ಷ 1036 ಪೊಲೀಸ್ ಪೇದೆಗಳ ಹುದ್ದೆಯನ್ನು ಭರ್ತಿ ಮಾಡಲಾಗಿದ್ದು, ಇನ್ನೂ 1002 ಪೇದೆಗಳ ನೇಮಕಕ್ಕೆ ಈಗಾಗಲೆ ಸರ್ಕಾರ ಮಂಜೂರಾತಿ ನೀಡಿದೆ.  ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಪ್ರಾರಂಭವಾಗಲಿದೆ.  ಹಂತ, ಹಂತವಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.  ರಾಜ್ಯದಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಬಿಜಾಪುರ ಸೇರಿದಂತೆ ಹಲವೆಡೆ ಉತ್ತಮ ತರಬೇತಿ ಶಾಲೆಗಳ ಅಗತ್ಯವಿದ್ದು, ಈ ವರ್ಷ ಹೊಸದಾಗಿ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  ಸಶಸ್ತ್ರ ಮೀಸಲು ಪಡೆಗಳ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಅಗತ್ಯ ಅನುದಾನವನ್ನು ಒದಗಿಸುತ್ತಿದೆ.  ಪೊಲೀಸ್ ತರಬೇತಿ ಶಾಲೆಗಳಿಗೆ ಅಗತ್ಯ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ತರಬೇತಿ ವಿಭಾಗದ ಡಿಜಿಪಿ ಸುಶಾಂತ್ ಮಹಾಪಾತ್ರ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೊಲೀಸ್ ತರಬೇತಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.  ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಉತ್ತಮ ಬೆಂಬಲ ನೀಡುತ್ತಿದೆ.  ಅಲ್ಲದೆ ಶಿಸ್ತುಬದ್ಧ ತರಬೇತಿಗೆ ರಾಜ್ಯ ಖ್ಯಾತಿ ಹೊಂದಿದೆ.  ಈ ವರ್ಷ 13 ನೇ ಹಣಕಾಸು ಆಯೋಗದ ಮೂಲಕ ಪೊಲೀಸ್ ತರಬೇತಿ ಹಾಗೂ ಸಶಸ್ತ್ರ ಮೀಸಲು ಪಡೆ ಬಲವರ್ದನೆಗೆ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೆಂಗಳೂರು, ಚಿತ್ರದುರ್ಗ ಜಿಲ್ಲೆಯ ಐಮಂಗಲ, ಹಾಸನ ಮುಂತಾದ ಕಡೆಗಳಲ್ಲಿ ಈ ವರ್ಷ ಹೊಸದಾಗಿ ಪೊಲೀಸ್ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  ಭವಿಷ್ಯದಲ್ಲಿ ರಾಜ್ಯದ ಪೊಲೀಸ್ ವ್ಯವಸ್ಥೇ ಹೆಚ್ಚು ಸುಧಾರಣೆಯಾಗುವ ವಿಶ್ವಾಸವಿದೆ ಎಂದರು.
     ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ನಿರ್ಮಿಸಲಾಗಿರುವ ಮೀಸಲು ಪಡೆಯ ತರಬೇತಿ ಶಾಲೆಯ ಕಟ್ಟಡ ರಾಜ್ಯದಲ್ಲಿಯೇ ಮಾದರಿ ಕಟ್ಟಡವಾಗಿದೆ.  ತರಬೇತಿ ಶಾಲೆ ಹಾಗೂ ತರಬೇತಿ ಸಂಕೀರ್ಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ, ಮತ್ತಿತರೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
     ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಎಡಿಜಿಪಿ ರಾಘವೇಂದ್ರ ಔರಾದಕರ್ ಅವರು, ಮುನಿರಾಬಾದಿನ ತರಬೇತಿ ಶಾಲೆಯ ಸಮುಚ್ಛಯವನ್ನು 12. 52 ಕೋಟಿ ರೂ. ವೆಚ್ಚದಲ್ಲಿ 167 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಅಧಿಕಾರಿ, ಸಿಬ್ಬಂದಿಗಳ ಕೊಠಡಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ದಾಸ್ತಾನು ಕೊಠಡಿ, ಹಾಸ್ಟೆಲ್ ಬ್ಲಾಕ್ ಮುಂತಾದ ಅಗತ್ಯ ವಿಭಾಗಗಳನ್ನು ನಿರ್ಮಿಸಲಾಗಿದೆ.  ಒಟ್ಟು 440 ಪ್ರಶಿಕ್ಷಣಾರ್ಥಿಗಳಿಗೆ ವಸತಿ ಸಹಿತ ತರಬೇತಿಗೆ ಅವಕಾಶವಿದೆ.  ರಾಜ್ಯದಲ್ಲಿಯೇ ಅತ್ಯುತ್ತಮ ಸೌಲಭ್ಯ ಹೊಂದಿರುವ ತರಬೇತಿ ಶಾಲೆ ಇದಾಗಿದೆ ಎಂದರು.  
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅಮರಕುಮಾರ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಕೆಎಸ್‍ಆರ್‍ಪಿ ಐಜಿಪಿ ಮಾಲಿನಿ ಕೃಷ್ಣಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯ ರಮೇಶ್ ಇಟ್ನಾಳ್, ತರಬೇತಿ ಶಾಲೆ ಪ್ರಾಂಶುಪಾಲ ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು. 

Post a Comment