Monday, 27 October 2014

ಗ್ರಾಮ ವಾಸ್ತವ್ಯಕ್ಕೆ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಸೂಚನೆ


ಕೊಪ್ಪಳ ಅ. 27 (ಕ.ವಾ): ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗೆ `ಸಂಜೀವಿನಿ' ಯೋಜನೆ ಜಾರಿಗೆ ತಂದಿದ್ದು ಸ್ವ-ಸಹಾಯ ಸಂಘಗಳ ಬಲವರ್ಧನೆ ಹಾಗೂ ವಿವಿಧ ಕಾರ್ಯಚಟುವಟಿಕೆಗಳಿಗಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಗ್ರಾಮ ವಾಸ್ತವ್ಯ ನಡೆಸಲು ಸೂಚನೆ ನೀಡಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ಹೇಳಿದರು.
     ಸಂಜೀವಿನಿ ಯೋಜನೆ ಕುರಿತು ಸೋಮವಾರ ಕೊಪ್ಪಳದ ತಾಲೂಕಾ ಪಂಚಾಯತಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
      ಪ್ರಾಯೋಗಿಕವಾಗಿ ಇಂಟೆನ್ಸೀವ್ ಜಿಲ್ಲೆಗಳ 20 ತಾಲ್ಲೂಕಗಳಲ್ಲಿ ಅ. 27 ರಿಂದ 15 ದಿನಗಳ ಕಾಲ ಗ್ರಾಮ ವಾಸ್ತವ್ಯದ ಮೂಲಕ  ಗ್ರಾಮಗಳಲ್ಲಿ  ಗ್ರಾಮದ ಸಾಮಾನ್ಯ ಮಾಹಿತಿ ಮತ್ತು  ಸ್ವಸಹಾಯ ಸಂಘಗಳ ಮಾಹಿತಿ, ಮತ್ತು ಕುಟುಂಬ ಮಾಹಿತಿ ಸಂಗ್ರಹಿಸಿ, ವಾರ್ಡ್ ಅಥವಾ ಗ್ರಾಮ ಒಕ್ಕೂಟ ರಚನೆಗೆ  ಮುಂದಾಗಿದ್ದು ಜಿಲ್ಲೆಯ  ಕೊಪ್ಪಳ ತಾಲ್ಲೂಕಿನ ಅಳವಂಡಿ ಮತ್ತು ಕವಲೂರು ಗ್ರಾಮ ಪಂಚಾಯಿತಿಯ ಅದೇ ಗ್ರಾಮಗಳಲ್ಲಿ  ಯೋಜನೆ ರೂಪಿಸಿದೆ.  ಬಡತನ ನಿರ್ಮೂಲನೆಗಾಗಿ ಗ್ರಾಮದಲ್ಲಿರುವ ಬಡವರು ಮತ್ತು ಕಡುಬಡವರನ್ನು ಗುರುತಿಸಿ  ಅವರನ್ನು ಸಾಮಾಜಿಕ-ಆರ್ಥಿಕವಾಗಿ ಸೇರ್ಪಡೆಗೊಳಿಸಿ  ಗ್ರಾಮದಲ್ಲಿನ ಬಡಮಹಿಳೆಯರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದರ ಸಮರ್ಪಕ ಯಶಸ್ವಿಗೆ ಮುಖ್ಯವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಪ್ರಾಮಾಣಿಕವಾಗಿ ನಿಷ್ಟೆಯಿಂದ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ತಿಳಿಸಿದರು.
      ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಿ ಎಸ್  ಮಾತನಾಡಿ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸ್ವಸಹಾಯ ಸಂಘಗಳ ಸ್ಥಿತಿಗತಿ ಅದ್ಯಯನ ಮಾಡುವುದರಿಂದ ಸಂಘಗಳ ಪ್ರಸ್ತುತ ಮಾಹಿತಿ ತಿಳಿಯುವುದರೊಂದಿಗೆ ಸಂಘದ ಹೊರಗುಳಿದ ಬಡಕುಟುಂಬಗಳನ್ನು ಸಂಜಿವಿನಿ ವ್ಯಾಪ್ತಿಗೆ ತರುವಲ್ಲಿ ಸಹಾಯಕವಾಗುತ್ತದೆ.  ಆ ಮೂಲಕ ಸ್ವಸಹಾಯ ಸಂಘಗಳ ಸಾಮಥ್ರ್ಯ ಬಲವರ್ಧನೆಗೊಳಿಸಿ ಮತ್ತು ಪಂಚಸೂತ್ರಗಳನ್ನು ಅಳವಡಿಸುವಂತೆ ಮಾಡಲು ಹಾಗೂ ಮಹಿಳೆಯರ ಅಭಿವೃದ್ಧಿಗೆ ಈ ಯೋಜನೆ ಉತ್ತಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.
     ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿ ಶಮಿರಾ ಬಾನು ಮಾತನಾಡಿ ಸಂಜೀವಿನಿ ಯೋಜನೆ ಮೂಲಕ ಮೈರಾಡದ ಸಂಸ್ಥೆಯ ವತಿಯಿಂದ ಸ್ವ.ಸಹಾಯ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿ ಮತ್ತು ಗ್ರಾಮ ಒಕ್ಕೂಟಗಳ ಬಗ್ಗೆ ತರಬೇತಿ ಸಹ ನೀಡಲಾಗಿದ್ದು, ಗ್ರಾಮಗಳಲ್ಲಿ 15  ದಿನಗಳ ಕಾಲ ವಾಸ್ತವ್ಯ ಹೂಡುವುದರಿಂದ ಜನರೊಂದಿಗೆ ಸಹಭಾಗಿತ್ವದಿಂದ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
Post a Comment