Tuesday, 28 October 2014

ನ.22 ರಂದು ಸುನ್ನಿ ಮುಸ್ಲಿಂ ಶಾದಿಮಹಲ್ ಕಾರ್ಯಕಾರಿ ಮಂಡಳಿ ಚುನಾವಣೆ


ಕೊಪ್ಪಳ ಅ.28(ಕರ್ನಾಟಕ ವಾರ್ತೆ): ಕೊಪ್ಪಳ ನಗರದ ಸ್ಟೇಷನ್ ರಸ್ತೆಯಲ್ಲಿರುವ ಸುನ್ನಿ ಮುಸ್ಲಿಂ ಶಾದಿಮಹಲ್‍ನ ಕಾರ್ಯಕಾರಿ ಮಂಡಳಿಯ ಚುನಾವಣೆಯನ್ನು ನ.22 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತ ಎಣಿಕೆಯನ್ನು ಅದೇ ದಿನ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಲಾಯಖ್ ಅಲಿ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅ.30 ರಿಂದ ನ.06 ರವರೆಗೆ ಪ್ರತಿದಿನ ಬೆಳಿಗ್ಗೆ ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 04-00 ಗಂಟೆಯವರೆಗೆ ಸಲ್ಲಿಸಲು ಅವಕಾಶವಿದೆ. ನಾಮ ಪತ್ರದೊಂದಿಗೆ ರೂ.2000 ಹಾಗೂ ಚುನಾವಣೆ ವೆಚ್ಚ ರೂ: 200/- ಒಟ್ಟು ರೂ.2200/- ಪಾವತಿಸಬೇಕು. ನ.10 ರ ಬೆಳಿಗ್ಗೆ 11-00 ಗಂಟೆಯಿಂದ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ನಾಮ ಪತ್ರ ಹಿಂದೆ ಪಡೆಯಲು ನ.13 ರ ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 4-00 ಗಂಟೆಯವರೆಗೆ ಕಾಲಾವಕಾಶವಿರುತ್ತದೆ ಎಂದು ಸುನ್ನಿ ಮುಸ್ಲಿಂ ಶಾದಿಮಹಲ್‍ನ ಚುನಾವಣಾಧಿಕಾರಿ ಲಾಯಖ್ ಅಲಿ ಅವರು ತಿಳಿಸಿದ್ದಾರೆ.

ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಅ.28(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಅಳವಂಡಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್‍ಸಿವಿಟಿ ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅ.30 ಕೊನೆಯ ದಿನವಾಗಿದ್ದು, ಎಸ್‍ಸಿವಿಟಿ ಅಡಿಯಲ್ಲಿ ಫಿಟ್ಟರ್ ಹಾಗೂ ವಿದ್ಯುತ್ಕರ್ಮಿ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು. ವಾರ್ಷಿಕ ಬೋಧನಾ ಶುಲ್ಕ ಹಾಗೂ ಪರೀಕ್ಷಾ ಶುಲ್ಕ ರೂ.1700/- ಗಳನ್ನು ನಿಗದಿಮಾಡಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅ.31 ರ ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕೊಪ್ಪಳ ಇಲ್ಲಿ ಕೌನ್ಸಲಿಂಗ್‍ಗೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಳವಂಡಿ ಹಾಗೂ ಕೊಪ್ಪಳ ಮೊ.ಸಂಖ್ಯೆ : 9880426124 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ಮೇವು ಕತ್ತರಿಸುವ ಯಂತ್ರ ವಿತರಣೆ : ಅರ್ಜಿ ಆಹ್ವಾನ


ಕೊಪ್ಪಳ ಅ.28(ಕರ್ನಾಟಕ ವಾರ್ತೆ): ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಾನುವಾರುಗಳಿಗೆ 3 ಹೆಚ್‍ಪಿ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸುವ ಯೋಜನೆಗಾಗಿ ಹೈನುಗಾರಿಕೆ ಮಾಡುತ್ತಿರುವ ಸ್ವ-ಸಹಾಯ ಸಂಘಗಳ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗೆ ಪ್ರತಿ ತಾಲೂಕಿಗೆ 10 ರಂತೆ ಗುರಿ ನಿಗದಿಪಡಿಸಲಾಗಿದೆ. ಅರ್ಜಿಗಳನ್ನು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರುಗಳಿಂದ ಪಡೆದು ನ.10 ರೊಳಗಾಗಿ ಸಲ್ಲಿಸಬಹುದು.  ಯೋಜನೆಯಡಿ ವಿತರಿಸಲಾಗುವ 3 ಹೆಚ್‍ಪಿ ಸಾಮಥ್ರ್ಯದ ಮೇವು ಕತ್ತರಿಸುವ ಯಂತ್ರಗಳನ್ನು ಅಳವಡಿಸುವ ಸ್ಥಳ, ನಿರ್ವಹಣೆ ಮಾಡುವ ಬಗ್ಗೆ ಹಾಗೂ ಎಲ್ಲಾ ಸದಸ್ಯರ ಉಪಯೋಗಕ್ಕೆ ಬಳಸುವ ಬಗ್ಗೆ ಲಿಖಿತ ಮುಚ್ಚಳಿಕೆ ಸಲ್ಲಿಸಬೇಕು. ಸ್ವ-ಸಹಾಯ ಸಂಘಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಓ/ಕಾರ್ಯದರ್ಶಿಯವರಿಂದ ಪ್ರಮಾಣ ಪತ್ರ ಸಲ್ಲಿಸಬೇಕು. ಸ್ವ-ಸಹಾಯ ಸಂಘಗಳು ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ ಇವರ ದೂರವಾಣಿ ಸಂಖ್ಯೆ: 08539-221408 ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಪೊಲೀಸರಿಗೆ ಗುಣಮಟ್ಟದ ತರಬೇತಿಗೆ ಆದ್ಯತೆ- ಗೃಹ ಸಚಿವ ಕೆ.ಜೆ. ಜಾರ್ಜ್

ಕೊಪ್ಪಳ ಅ.28 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
     ಮುನಿರಾಬಾದಿನ ಇಂಡಿಯನ್ ರಿಸರ್ವ್ ಬಟಾಲಿಯನ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ನೂತನ ಆಡಳಿತ ಕಚೇರಿ, ತರಬೇತಿ ಸಂಕೀರ್ಣ, ವಸತಿ ಸಮುಚ್ಛಯ ಮತ್ತು ಭೋಜನಾಲಯ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ರಾಜ್ಯದಲ್ಲಿನ ಮೀಸಲು ಪಡೆಯ ಪೊಲೀಸರಿಗೆ  ಉತ್ತಮ ಗುಣಮಟ್ಟದ ತರಬೇತಿ ನೀಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ತರಬೇತಿ ವ್ಯವಸ್ಥೆ ಹೊಂದಿರುವ ಇತರೆ ರಾಜ್ಯಗಳಲ್ಲಿನ ಮಾದರಿಯ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ಪಡೆದು, ಇನ್ನೂ ಸುಧಾರಿತ ಗುಣಮಟ್ಟದ ತರಬೇತಿ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು.  ಸದ್ಯ ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ನಿರ್ಮಿಸಲಾಗಿರುವ ತರಬೇತಿ ಶಾಲೆ ರಾಜ್ಯದಲ್ಲಿಯೇ ಉತ್ತಮ ವ್ಯವಸ್ಥೆ ಹೊಂದಿರುವ ತರಬೇತಿ ಶಾಲೆಯಾಗಿದೆ.  ರಾಜ್ಯ ಮೀಸಲು ಪಡೆಯ ಪೊಲೀಸರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ, ನಾಗರಿಕ ಪೊಲೀಸರಿಗೆ ಬೆನ್ನೆಲುಬಾಗಿ ನಿಂತು, ಪರಿಸ್ಥಿತಿಯನ್ನು ಹತೋಟಿಗೆ ತರುವಂತಹ ಉತ್ತಮ ಸೇವೆ ಸಲ್ಲಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ.  ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲದೆ ರಾಜ್ಯದಲ್ಲಿನ ಪ್ರತಿಕೂಲ ಸಂದರ್ಭಗಳಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಗಳ ಸೇವೆ ಶ್ಲಾಘನೀಯವಾಗಿದೆ.  ಛತ್ತೀಸ್‍ಗಡ ರಾಜ್ಯದಲ್ಲಿ ನಡೆದ ಚುನಾವಣೆಗೆ ನಕ್ಸಲರ ಭೀತಿ ಇದ್ದ ಸಂದರ್ಭದಲ್ಲಿ, ಅದನ್ನು ಸಮರ್ಥವಾಗಿ ಎದುರಿಸಿ, ಮುಕ್ತ ಹಾಗೂ ಕಾನೂನು ಸಮ್ಮತ ಚುನಾವಣೆ ನಡೆಸಲು ರಾಜ್ಯದ ಮೀಸಲು ಪೊಲೀಸ್ ಪಡೆ ಯಶಸ್ವಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.  ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿನ 13 ಸಾವಿರ ಸಿಬ್ಬಂದಿಗಳ ಸಂಖ್ಯಾ ಬಲದಲ್ಲಿ ಇನ್ನೂ 5 ಸಾವಿರ ಹುದ್ದೆಗಳು ಖಾಲಿ ಉಳಿದಿವೆ.  ಕಳೆದ ವರ್ಷ 1036 ಪೊಲೀಸ್ ಪೇದೆಗಳ ಹುದ್ದೆಯನ್ನು ಭರ್ತಿ ಮಾಡಲಾಗಿದ್ದು, ಇನ್ನೂ 1002 ಪೇದೆಗಳ ನೇಮಕಕ್ಕೆ ಈಗಾಗಲೆ ಸರ್ಕಾರ ಮಂಜೂರಾತಿ ನೀಡಿದೆ.  ಶೀಘ್ರದಲ್ಲೇ ನೇಮಕ ಪ್ರಕ್ರಿಯೆ ಪ್ರಾರಂಭವಾಗಲಿದೆ.  ಹಂತ, ಹಂತವಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.  ರಾಜ್ಯದಲ್ಲಿ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಬಿಜಾಪುರ ಸೇರಿದಂತೆ ಹಲವೆಡೆ ಉತ್ತಮ ತರಬೇತಿ ಶಾಲೆಗಳ ಅಗತ್ಯವಿದ್ದು, ಈ ವರ್ಷ ಹೊಸದಾಗಿ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  ಸಶಸ್ತ್ರ ಮೀಸಲು ಪಡೆಗಳ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಅಗತ್ಯ ಅನುದಾನವನ್ನು ಒದಗಿಸುತ್ತಿದೆ.  ಪೊಲೀಸ್ ತರಬೇತಿ ಶಾಲೆಗಳಿಗೆ ಅಗತ್ಯ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ತರಬೇತಿ ವಿಭಾಗದ ಡಿಜಿಪಿ ಸುಶಾಂತ್ ಮಹಾಪಾತ್ರ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೊಲೀಸ್ ತರಬೇತಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ.  ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಉತ್ತಮ ಬೆಂಬಲ ನೀಡುತ್ತಿದೆ.  ಅಲ್ಲದೆ ಶಿಸ್ತುಬದ್ಧ ತರಬೇತಿಗೆ ರಾಜ್ಯ ಖ್ಯಾತಿ ಹೊಂದಿದೆ.  ಈ ವರ್ಷ 13 ನೇ ಹಣಕಾಸು ಆಯೋಗದ ಮೂಲಕ ಪೊಲೀಸ್ ತರಬೇತಿ ಹಾಗೂ ಸಶಸ್ತ್ರ ಮೀಸಲು ಪಡೆ ಬಲವರ್ದನೆಗೆ 150 ಕೋಟಿ ರೂ. ಅನುದಾನ ಒದಗಿಸಲಾಗಿದೆ.  ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೆಂಗಳೂರು, ಚಿತ್ರದುರ್ಗ ಜಿಲ್ಲೆಯ ಐಮಂಗಲ, ಹಾಸನ ಮುಂತಾದ ಕಡೆಗಳಲ್ಲಿ ಈ ವರ್ಷ ಹೊಸದಾಗಿ ಪೊಲೀಸ್ ತರಬೇತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.  ಭವಿಷ್ಯದಲ್ಲಿ ರಾಜ್ಯದ ಪೊಲೀಸ್ ವ್ಯವಸ್ಥೇ ಹೆಚ್ಚು ಸುಧಾರಣೆಯಾಗುವ ವಿಶ್ವಾಸವಿದೆ ಎಂದರು.
     ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ನಿರ್ಮಿಸಲಾಗಿರುವ ಮೀಸಲು ಪಡೆಯ ತರಬೇತಿ ಶಾಲೆಯ ಕಟ್ಟಡ ರಾಜ್ಯದಲ್ಲಿಯೇ ಮಾದರಿ ಕಟ್ಟಡವಾಗಿದೆ.  ತರಬೇತಿ ಶಾಲೆ ಹಾಗೂ ತರಬೇತಿ ಸಂಕೀರ್ಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ, ಮತ್ತಿತರೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
     ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಎಡಿಜಿಪಿ ರಾಘವೇಂದ್ರ ಔರಾದಕರ್ ಅವರು, ಮುನಿರಾಬಾದಿನ ತರಬೇತಿ ಶಾಲೆಯ ಸಮುಚ್ಛಯವನ್ನು 12. 52 ಕೋಟಿ ರೂ. ವೆಚ್ಚದಲ್ಲಿ 167 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಅಧಿಕಾರಿ, ಸಿಬ್ಬಂದಿಗಳ ಕೊಠಡಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ದಾಸ್ತಾನು ಕೊಠಡಿ, ಹಾಸ್ಟೆಲ್ ಬ್ಲಾಕ್ ಮುಂತಾದ ಅಗತ್ಯ ವಿಭಾಗಗಳನ್ನು ನಿರ್ಮಿಸಲಾಗಿದೆ.  ಒಟ್ಟು 440 ಪ್ರಶಿಕ್ಷಣಾರ್ಥಿಗಳಿಗೆ ವಸತಿ ಸಹಿತ ತರಬೇತಿಗೆ ಅವಕಾಶವಿದೆ.  ರಾಜ್ಯದಲ್ಲಿಯೇ ಅತ್ಯುತ್ತಮ ಸೌಲಭ್ಯ ಹೊಂದಿರುವ ತರಬೇತಿ ಶಾಲೆ ಇದಾಗಿದೆ ಎಂದರು.  
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅಮರಕುಮಾರ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಕೆಎಸ್‍ಆರ್‍ಪಿ ಐಜಿಪಿ ಮಾಲಿನಿ ಕೃಷ್ಣಮೂರ್ತಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯ ರಮೇಶ್ ಇಟ್ನಾಳ್, ತರಬೇತಿ ಶಾಲೆ ಪ್ರಾಂಶುಪಾಲ ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು. 

Monday, 27 October 2014

ಶಿಲ್ಪ ಮತ್ತು ಕುಂಭಕಲೆ ಉಚಿತ ತರಬೇತಿಗೆ ನೇರ ಸಂದರ್ಶನ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ): ಬೆಂಗಳೂರಿನ ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭಕಲೆ (ಟೆರ್ರಾಕೋಟಾ)ಯಲ್ಲಿ 6 ತಿಂಗಳಾವಧಿಯ ಉಚಿತ ತರಬೇತಿ ತರಗತಿಗಳನ್ನು ವ್ಯವಸ್ಥೆಗೊಳಿಸಿದೆ.
      ಅಭ್ಯರ್ಥಿಗಳು ಕನಿಷ್ಟ 7 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ಉಪಕರಣಗಳು/ ಕಚ್ಛಾ ಸಾಮಗ್ರಿ ಗಳನ್ನು ಒದಗಿಸಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು.  ತರಬೇತಿಗೆ ಸೇರಲಿಚ್ಛಿಸುವವರು ನೇರ ಸಂದರ್ಶನಕ್ಕೆ ನ. 10 ರಿಂದ 15 ರೊಳಗೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರ ಜಿಲ್ಲೆ) ಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಅದೇ ದಿನ ಸ್ಥಳದಲ್ಲೇ ತರಬೇತಿಗೆ ಹಾಜರಿಪಡಿಸಿಕೊಳ್ಳಲಾಗುವುದು.  ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ನಿರ್ದೇಶಕ ಎಂ ವೆಂಕಟೇಶ ಶೇಷಾದ್ರಿ (ಮೊಬೈಲ್ : 9900158885) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೊಹರಂ : ಗಿಡ-ಮರ ಕಡಿಯುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ


ಕೊಪ್ಪಳ ಅ. 27 (ಕ.ವಾ): ಮೊಹರಂ ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಬಗೆಯ ಗಿಡ-ಮರಗಳನ್ನು ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಎಚ್ಚರಿಕೆ ನೀಡಿದ್ದಾರೆ.
     ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಅರಣೀಕರಣ ಅಭಿಯಾನಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಲಾಗಿದೆ.  ಆದರೆ ಗ್ರಾಮೀಣ ಪ್ರದೇಶದ ಕೆಲವೆಡೆ ಸರ್ವಧರ್ಮೀಯರ ಧಾರ್ಮಿಕ ಹಬ್ಬ ಮೊಹರಂ ಹಬ್ಬ ಆಚರಣೆ ಸಂದರ್ಭದಲ್ಲಿ ವಿನಾ ಕಾರಣ ಗಿಡಗಳನ್ನು ಕಡಿದು ಬಳಸುವ ಸಾಧ್ಯತೆಗಳಿರುವ ಬಗ್ಗೆ ವರದಿಗಳು ಬಂದಿವೆ.  ಇದರಿಂದಾಗಿ ಪರಿಸರ ನಾಶವಾಗುವುದಲ್ಲದೆ, ಇದರ ದುಷ್ಪರಿಣಾಮವನ್ನು ರೈತರೇ ಎದುರಿಸಬೇಕಾಗುತ್ತದೆ.  ಗಿಡಗಳನ್ನು ಕಡಿಯುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಯಾರೂ ಗಿಡಗಳನ್ನು ಕಡಿಯದಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಸೂಚನೆ


ಕೊಪ್ಪಳ ಅ. 27 (ಕ.ವಾ): ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗೆ `ಸಂಜೀವಿನಿ' ಯೋಜನೆ ಜಾರಿಗೆ ತಂದಿದ್ದು ಸ್ವ-ಸಹಾಯ ಸಂಘಗಳ ಬಲವರ್ಧನೆ ಹಾಗೂ ವಿವಿಧ ಕಾರ್ಯಚಟುವಟಿಕೆಗಳಿಗಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಗ್ರಾಮ ವಾಸ್ತವ್ಯ ನಡೆಸಲು ಸೂಚನೆ ನೀಡಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ಹೇಳಿದರು.
     ಸಂಜೀವಿನಿ ಯೋಜನೆ ಕುರಿತು ಸೋಮವಾರ ಕೊಪ್ಪಳದ ತಾಲೂಕಾ ಪಂಚಾಯತಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
      ಪ್ರಾಯೋಗಿಕವಾಗಿ ಇಂಟೆನ್ಸೀವ್ ಜಿಲ್ಲೆಗಳ 20 ತಾಲ್ಲೂಕಗಳಲ್ಲಿ ಅ. 27 ರಿಂದ 15 ದಿನಗಳ ಕಾಲ ಗ್ರಾಮ ವಾಸ್ತವ್ಯದ ಮೂಲಕ  ಗ್ರಾಮಗಳಲ್ಲಿ  ಗ್ರಾಮದ ಸಾಮಾನ್ಯ ಮಾಹಿತಿ ಮತ್ತು  ಸ್ವಸಹಾಯ ಸಂಘಗಳ ಮಾಹಿತಿ, ಮತ್ತು ಕುಟುಂಬ ಮಾಹಿತಿ ಸಂಗ್ರಹಿಸಿ, ವಾರ್ಡ್ ಅಥವಾ ಗ್ರಾಮ ಒಕ್ಕೂಟ ರಚನೆಗೆ  ಮುಂದಾಗಿದ್ದು ಜಿಲ್ಲೆಯ  ಕೊಪ್ಪಳ ತಾಲ್ಲೂಕಿನ ಅಳವಂಡಿ ಮತ್ತು ಕವಲೂರು ಗ್ರಾಮ ಪಂಚಾಯಿತಿಯ ಅದೇ ಗ್ರಾಮಗಳಲ್ಲಿ  ಯೋಜನೆ ರೂಪಿಸಿದೆ.  ಬಡತನ ನಿರ್ಮೂಲನೆಗಾಗಿ ಗ್ರಾಮದಲ್ಲಿರುವ ಬಡವರು ಮತ್ತು ಕಡುಬಡವರನ್ನು ಗುರುತಿಸಿ  ಅವರನ್ನು ಸಾಮಾಜಿಕ-ಆರ್ಥಿಕವಾಗಿ ಸೇರ್ಪಡೆಗೊಳಿಸಿ  ಗ್ರಾಮದಲ್ಲಿನ ಬಡಮಹಿಳೆಯರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದರ ಸಮರ್ಪಕ ಯಶಸ್ವಿಗೆ ಮುಖ್ಯವಾಗಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಪ್ರಾಮಾಣಿಕವಾಗಿ ನಿಷ್ಟೆಯಿಂದ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ತಿಳಿಸಿದರು.
      ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಿ ಎಸ್  ಮಾತನಾಡಿ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಸ್ವಸಹಾಯ ಸಂಘಗಳ ಸ್ಥಿತಿಗತಿ ಅದ್ಯಯನ ಮಾಡುವುದರಿಂದ ಸಂಘಗಳ ಪ್ರಸ್ತುತ ಮಾಹಿತಿ ತಿಳಿಯುವುದರೊಂದಿಗೆ ಸಂಘದ ಹೊರಗುಳಿದ ಬಡಕುಟುಂಬಗಳನ್ನು ಸಂಜಿವಿನಿ ವ್ಯಾಪ್ತಿಗೆ ತರುವಲ್ಲಿ ಸಹಾಯಕವಾಗುತ್ತದೆ.  ಆ ಮೂಲಕ ಸ್ವಸಹಾಯ ಸಂಘಗಳ ಸಾಮಥ್ರ್ಯ ಬಲವರ್ಧನೆಗೊಳಿಸಿ ಮತ್ತು ಪಂಚಸೂತ್ರಗಳನ್ನು ಅಳವಡಿಸುವಂತೆ ಮಾಡಲು ಹಾಗೂ ಮಹಿಳೆಯರ ಅಭಿವೃದ್ಧಿಗೆ ಈ ಯೋಜನೆ ಉತ್ತಮ ಸಹಕಾರಿಯಾಗಲಿದೆ ಎಂದು ತಿಳಿಸಿದರು.
     ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿ ಶಮಿರಾ ಬಾನು ಮಾತನಾಡಿ ಸಂಜೀವಿನಿ ಯೋಜನೆ ಮೂಲಕ ಮೈರಾಡದ ಸಂಸ್ಥೆಯ ವತಿಯಿಂದ ಸ್ವ.ಸಹಾಯ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿ ಮತ್ತು ಗ್ರಾಮ ಒಕ್ಕೂಟಗಳ ಬಗ್ಗೆ ತರಬೇತಿ ಸಹ ನೀಡಲಾಗಿದ್ದು, ಗ್ರಾಮಗಳಲ್ಲಿ 15  ದಿನಗಳ ಕಾಲ ವಾಸ್ತವ್ಯ ಹೂಡುವುದರಿಂದ ಜನರೊಂದಿಗೆ ಸಹಭಾಗಿತ್ವದಿಂದ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

29 ರಂದು ಕೇಂದ್ರ ಅಧ್ಯಯನ ತಂಡ ಕೊಪ್ಪಳ ಜಿಲ್ಲೆಗೆ


ಕೊಪ್ಪಳ ಅ. 27 (ಕ.ವಾ) : ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಅಧ್ಯಯನ ತಂಡ ಅ. 29 ರಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗೆ ಭೇಟಿ ನೀಡಲಿದೆ.
     ಕೇಂದ್ರ ಜಲ ಆಯೋಗದ ನಿರ್ದೇಶಕ ಎನ್.ಎಂ. ಕೃಷ್ಣನುನಿ, ಬೆಂಗಳೂರು ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ  ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಜಗದೀಶ್ ಎಲಿಗಾರ್, ಬೆಂಗಳೂರು ಅವರು ಕೇಂದ್ರ ಅಧ್ಯಯನ ತಂಡದಲ್ಲಿರುವ ಅಧಿಕಾರಿಗಳು.  ಕೇಂದ್ರ ಅಧ್ಯಯನ ತಂಡವು ಅ. 29 ರಂದು ಗದಗ ದಿಂದ ಹೊರಟು ಬೆಳಿಗ್ಗೆ 8 ಗಂಟೆಗೆ ಕೊಪ್ಪಳಕ್ಕೆ ಆಗಮಿಸಲಿದೆ.  ನಂತರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.  ತಂಡವು 7-30 ಗಂಟೆಗೆ ರಾಯಚೂರಿನಿಂದ ರೈಲು ಮೂಲಕ  ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.  ಅ. 30 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದೆ.

ಅ. 29 ರಂದು ವಿಶ್ವ ಆಹಾರ ದಿನಾಚರಣೆ


ಕೊಪ್ಪಳ ಅ. 27 (ಕರ್ನಾಟಕ ವಾರ್ತೆ) : ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಬೀಜ, ರಸಗೊಬ್ಬರ ಮತ್ತು ಮಾರಾಟಗಾರರ ಸಂಘ ಹಾಗೂ ರೋಟರಿ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆಹಾರ ದಿನಾಚರಣೆ ಅ. 29 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ನಡೆಯಲಿದೆ.
     ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.  ಆಹಾರ ತಂತ್ರಜ್ಞ ಡಾ. ಕೆ.ಸಿ. ರಘು, ಮಂಗಳೂರಿನ ಪರಿಸರ ಕೃಷಿ ತಜ್ಞ ಡಾ. ನರೇಂದ್ರ ರೈ ಬೇರ್ಲಾ ಅವರು ವಿಶೇಷ ಉಪನ್ಯಾಸ ನೀಡುವರು.  ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಂಟಿಕೃಷಿ ನಿರ್ದೇಶಕ ಪದ್ಮಯ ನಾಯ್ಕ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅ. 28 ರಂದು ಮುನಿರಾಬಾದ್‍ನಲ್ಲಿ ಐಆರ್‍ಬಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕೊಪ್ಪಳ ಅ.27(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮೀಸಲು ಪೊಲೀಸ್‍ಗೆ ಸಂಬಂಧಿಸಿದ ಕೆಎಸ್‍ಆರ್‍ಪಿ ತರಬೇತಿ ಶಾಲೆ ನೂತನ ಆಡಳಿತ ಕಚೇರಿ, ತರಬೇತಿ ಸಂಕೀರ್ಣ, ವಸತಿ ಸಮುಚ್ಛಯ ಮತ್ತು ಭೋಜನಾಲಯ ಕಟ್ಟಡಗಳ ಉದ್ಘಾಟನಾ ಸಮಾರಂಭ ಅ. 28 ರಂದು ಮಧ್ಯಾಹ್ನ 3 ಗಂಟೆಗೆ ಮುನಿರಾಬಾದಿನಲ್ಲಿ ನಡೆಯಲಿದೆ.
     ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಕಟ್ಟಡದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಒಳಾಡಳಿತ ಇಲಾಖೆ ಕಾರ್ಯದರ್ಶಿ ಎಸ್.ಕೆ. ಪಟ್ಟನಾಯಕ್, ಡಿಜಿ ಮತ್ತು ಐಜಿಪಿ ಲಾಲ್ ರುಖುಮಾ ಪಚಾವೋ, ತರಬೇತಿ ಡಿಜಿಪಿ ಸುಶಾಂತ್ ಮಹಾಪಾತ್ರ ಅವರು ಪಾಲ್ಗೊಳ್ಳುವರು.  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟಿಲ್, ಶರಣಪ್ಪ ಮಟ್ಟೂರ, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಹೊಸಳ್ಳಿ ಗ್ರಾ.ಪಂ. ಅಧ್ಯಕ್ಷೆ ಖತಿಜಾಬಿ ಮಹಮ್ಮದ್ ಗೌಸ್, ಈಶಾನ್ಯ ವಲಯ ಐಜಿಪಿ ಸುರೇಶ್ ಮೊಹಮ್ಮದ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

Saturday, 25 October 2014

ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಅ.25(ಕರ್ನಾಟಕ ವಾರ್ತೆ): ರಾಜ್ಯ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಅ. 27 ಮತ್ತು 28 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
  ಸಚಿವರು ಅ. 27 ರಂದು ರಾಯಚೂರಿನಿಂದ ಹೊರಟು ರಾತ್ರಿ 7 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸುವರು.  ಸಚಿವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುವರು.  ಅ. 28 ರಂದು ಬೆಳಿಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರೊಂದಿಗೆ ಭೇಟಿ ನಡೆಸುವರು.  11 ಗಂಟೆಗೆ ಪಕ್ಷದ ಕಚೇರಿಗೆ ಭೇಟಿ ನೀಡುವರು.  ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಪರಾಮರ್ಶೆ ಸಭೆ ನಡೆಸುವರು.  ಮಧ್ಯಾಹ್ನ 3 ಗಂಟೆಗೆ ಮುನಿರಾಬಾದಿಗೆ ತೆರಳಿ ನೂತನವಾಗಿ ನಿರ್ಮಾಣಗೊಂಡಿರುವ ಐಆರ್‍ಬಿ ಕಟ್ಟಡದ ಉದ್ಘಾಟನೆ ನೆರವೇರಿಸುವರು.  ಮಧ್ಯಾಹ್ನ 3-45 ಗಂಟೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸುವರು.  ಸಚಿವರು ಅದೇ ದಿನ ರಾತ್ರಿ 8 ಗಂಟೆಗೆ ಹಂಪಿ ಎಕ್ಸ್‍ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಲೋಕಾಯುಕ್ತ ಡಿವೈಎಸ್‍ಪಿ ಪ್ರವಾಸ : ಸಾರ್ವಜನಿಕ ಕುಂದುಕೊರತೆ ದೂರು ಆಹ್ವಾನ


ಕೊಪ್ಪಳ ಅ.25(ಕರ್ನಾಟಕ ವಾರ್ತೆ): ಕೊಪ್ಪಳ ಲೋಕಾಯುಕ್ತ ಡಿವೈಎಸ್‍ಪಿ ಅವರು ಅ.30 ರಂದು ಗಂಗಾವತಿ ಹಾಗೂ ಅ.31 ರಂದು ಯಲಬುರ್ಗಾ ಹಾಗೂ ಕುಷ್ಟಗಿಯಲ್ಲಿ ಪ್ರವಾಸ ಕೈಕೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ.
       ಲೋಕಾಯುಕ್ತ ಡಿವೈಎಸ್‍ಪಿ ಅವರು ಅ.30 ರಂದು ಬೆಳಿಗ್ಗೆ 11-00 ರಿಂದ 1-30 ರವರೆಗೆ ಗಂಗಾವತಿಯ  ಪ್ರವಾಸಿ ಮಂದಿರದಲ್ಲಿ ಹಾಗೂ  ಅ.31 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 1-30 ರವರೆಗೆ ಕುಷ್ಟಗಿ ಪ್ರವಾಸಿ ಮಂದಿರದಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ 2-30 ರಿಂದ ಸಾ.5.30 ರವರೆಗೆ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ.
        ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ.  ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ1 ಮತ್ತು 2 ನಮೂನೆಯನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತ  ಡಿವೈಎಸ್‍ಪಿ ಕೊಪ್ಪಳ ದೂರವಾಣಿ ಸಂಖ್ಯೆ : 08539-220533 ಅಥವಾ 08539-220200 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಪ್ರಕಾಶಕರ ನೋಂದಣಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಅ.25(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿಯನ್ನು, ಓದುವ ಮನೋಭಾವವನ್ನು ಮೂಡಿಸುವ ಸಂಬಂಧವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಕ್ಕೆ ತರುತ್ತಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಎಲ್ಲಾ ಪ್ರಕಾಶಕರ ನೋಂದಣಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದಲ್ಲಿ ನೂರಾರು ಪ್ರಕಾಶಕರು ಇದ್ದು, ದಿನವಹಿ ಹತ್ತಾರು ಪುಸ್ತಕಗಳ ಪ್ರಕಟಣೆಯಾಗುತ್ತಿದೆ. ರಾಜ್ಯದಲ್ಲಿ ಪ್ರಕಟಿತ ಪುಸ್ತಕಗಳ ಹಾಗೂ ಪುಸ್ತಕ ಪ್ರಕಾಶಕರ ವಿವರಗಳು ಒಂದೆಡೆ ಲಭ್ಯವಾದಲ್ಲಿ  ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ದೃಷ್ಟಿಕೋನದಿಂದ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಾಶಕರ ನೋಂದಣಿ ಯೋಜನೆಯೊಂದನ್ನು ಆರಂಭಿಸುತ್ತಿದೆ. ಈ ದಿಸೆಯಲ್ಲಿ ರಾಜ್ಯದೆಲ್ಲೆಯಲ್ಲಿರುವ ಪ್ರಕಾಶಕರು ತಮ್ಮ ಹೆಸರು/ ವಿವರಗಳು ಮತ್ತು ತಮ್ಮಿಂದ ಈವರೆಗೆ ಪ್ರಕಟಿತವಾಗಿರುವ ಎಲ್ಲಾ ಪುಸ್ತಕಗಳ ಶೀರ್ಷಿಕೆ, ಪುಟ ಸಂಖ್ಯೆ, ಬೆಲೆ, ರಿಯಾಯಿತಿದರ ಇತ್ಯಾದಿಗಳ ವಿವರಗಳನ್ನು ತಮ್ಮ ಎರಡು ಇತ್ತೀಚಿನ ಸ್ಟಾಂಪ್ ಸೈಜ್ ಭಾವಚಿತ್ರದೊಂದಿಗೆ ಅರ್ಜಿಗಳನ್ನು ನ.21 ರೊಳಗಾಗಿ ಆಡಳಿತಾಧಿಕಾಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಸಹಾಯಕ  ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ  www.kannadapusthakapradhikara.com ನಿಂದ ಪಡೆಯಬಹುದಾಗಿದೆ. ವಿವರಗಳನ್ನು ಪ್ರಾಧಿಕಾರದ ಇ-ಮೇಲ್ ವಿಳಾಸ  kannadappradhikara@gmail.com     ಕಳುಹಿಸಿ, ನಂತರ ಭಾವಚಿತ್ರದೊಂದಿಗೆ ಅರ್ಜಿಯನ್ನು ಅಂಚೆ ಮೂಲಕ ರವಾನಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ : ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು_ದೂರವಾಣಿ ಸಂಖ್ಯೆ:080-22484516/22017704-ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಅ.28 ರಂದು ಮಕ್ಕಳ ರಕ್ಷಣೆ ವಿಷಯಗಳ ಕುರಿತು ವಿಚಾರ ಸಂಕಿರಣ


ಕೊಪ್ಪಳ,ಅ.25(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಕ್ಕಳ ರಕ್ಷಣೆ ವಿಷಯಗಳ ಬಗ್ಗೆ ವಿಭಾಗೀಯ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರ ಅ.28 ರಂದು ಬೆಳಿಗ್ಗೆ 10.30 ಕ್ಕೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ  ರ್ಪಡಿಸಲಾಗಿದೆ.
ಕಾರ್ಯಾಗಾರದಲ್ಲಿ ಬಳ್ಳಾರಿ, ಬಿಜಾಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಆರೋಗ್ಯ, ಶಿಕ್ಷಣ, ಪೊಲೀಸ್, ಕಾನೂನು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು, ಕೊಪ್ಪಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಪ್ರತಿನಿಧಿಗಳಿಗೆ ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತ ಪ್ರೇಮಾ ಅವರು ತಿಳಿಸಿದ್ದಾರೆ.

ಅ.27 ರಿಂದ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರಿಗೆ ತರಬೇತಿ


ಕೊಪ್ಪಳ,ಅ.25(ಕರ್ನಾಟಕ ವಾರ್ತೆ): ಜಿಲ್ಲಾ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರುಗಳಿಗೆ ಅ.27 ರಿಂದ ಅ.30 ರವರೆಗೆ ಜಿಲ್ಲಾ ತರಬೇತಿ ಸಂಸ್ಥೆಯ ಆವರಣದಲ್ಲಿ ನಾಲ್ಕು ದಿನಗಳ ತರಬೇತಿಯನ್ನು ಏರ್ಪಡಿಸಲಾಗಿದೆ.
ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ನೆರವೇರಿಸುವರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದ್ ಅವರು ಭಾಗವಹಿಸುವರು ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಮೊದಲ ಮುದ್ರಣವಾಗಿ ಪ್ರಕಟಿಸಿದ ಪುಸ್ತಕಗಳ ಲೇಖಕರಿಂದ ಅರ್ಜಿ ಆಹ್ವಾನ


ಕೊಪ್ಪಳ,ಅ.25(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡದ ಪುಸ್ತಕಗಳ ಸೂಚಿಯೊಂದನ್ನು ಸಿದ್ದಪಡಿಸುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಕನ್ನಡ ಪುಸ್ತಕಗಳ ಸೂಚಿಯೂ ಒಂದು. ಈ ಪುಸ್ತಕ ಸೂಚಿಯನ್ನು 2013 ರಿಂದ ಆರಂಭಿಸಲಾಗುತ್ತಿದೆ. ಅರ್ಜಿದಾರರು ತಾವು 2013ರಲ್ಲಿ ಮೊದಲ ಮುದ್ರಣವಾಗಿ  ಪ್ರಕಟಪಡಿಸಿದ ಪುಸ್ತಕಗಳ ತಲಾ ಒಂದು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಾಧಿಕಾರವು ನಿಯಮಿಸುವ ತಜ್ಞರು ಆಯ್ಕೆ ಮಾಡಿದ ಪುಸ್ತಕಗಳನ್ನು ಪಟ್ಟಿ ಮಾಡಿ ಸೂಕ್ತ ಸಂಕ್ಷಿಪ್ತ ಟಿಪ್ಪಣಿಯ ಪುಸ್ತಕದ ಮುಖಪುಟದೊಡನೆ ಪ್ರಾಧಿಕಾರದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು, ಇದೊಂದು ದಾಖಲಾತಿ ಮಾತ್ರವಾಗಿರದೆ ಹಲವು ಸಂಘ ಸಂಸ್ಥೆಗಳಿಗೆ ಪುಸ್ತಕಗಳ ಆಯ್ಕೆ, ಖರೀದಿ, ಪುರಸ್ಕಾರಗಳಿಗೆ ಶಿಫಾರಸ್ಸು ಮುಂತಾದವುಗಳಿಗೂ ಉಪಯೋಗವಾಗುವುದು, ಪುನರ್ ಮುದ್ರಣಗೊಂಡ ಪುಸ್ತಕಗಳನ್ನು ಪ್ರತ್ಯೇಕ ಪಟ್ಟಿಯಲ್ಲಿ ಸೇರಿಸುವ ಕಾರಣದಿಂದ ಈ ಪಟ್ಟಿಯಲ್ಲಿ ಅವಕಾಶವಿರುವುದಿಲ್ಲ.
ಲೇಖಕರು ಅಥವಾ ಪ್ರಕಾಶಕರು ಪುಸ್ತಕ ಮತ್ತು ಅರ್ಜಿಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇಲ್ಲಿಗೆ ಸಲ್ಲಿಸಬಹುದಾಗಿದೆ. ಒಂದೊಮ್ಮೆ ಪ್ರಕಾಶಕರು, ಲೇಖಕರು ತಪ್ಪು, ದೋಷಪೂರ್ಣ ಮಾಹಿತಿ ನೀಡಿ ಪುಸ್ತಕಗಳನ್ನು ಸಲ್ಲಿಸಿದ್ದು ಪ್ರಾಧಿಕಾರದ ಗಮನಕ್ಕೆ ಬಂದಲ್ಲಿ ಅಂಥ ಪುಸ್ತಕಗಳ ಪ್ರಕಾಶಕರನ್ನು ಮಾಲೀಕರನ್ನು ಕಪ್ಪು ಪಟ್ಟಿಗೆ ಸೇರಿಸಿ ಸರ್ಕಾರದ ಯಾವ ಸಂಸ್ಥೆಗಳಲ್ಲೂ ಪುಸ್ತಕ ಖರೀದಿಗೆ ಪರಿಗಣಿಸದಂತೆ ಪತ್ರ ಬರೆಯಲಾಗುವುದು.
ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್‍ಸೈಟ್  www.kannadapusthakapradhikara.com ನಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು, ನಂತರ ಬಂದ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಸಲ್ಲಿಸಲಾಗುವ ಪುಸ್ತಕಗಳನ್ನು ಪ್ರಾಧಿಕಾರವು ಹಿಂದಿರುಗಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

Thursday, 23 October 2014

ಅನುಮಾನಗಳ ಆಧಾರದಲ್ಲಿ ವಿಮಾ ಪಾಲಿಸಿ ಮೊತ್ತ ಪಾವತಿ ತಿರಸ್ಕರಿಸುವಂತಿಲ್ಲ- ಗ್ರಾಹಕರ ವೇದಿಕೆ ತೀರ್ಪು


ಕೊಪ್ಪಳ ಅ. 23 (ಕರ್ನಾಟಕ ವಾರ್ತೆ): ಕೇವಲ ಅನುಮಾನಗಳ ಆಧಾರದ ವರದಿಯನ್ನಾಧರಿಸಿ, ವಿಮಾ ಪಾಲಿಸಿ ಮೊತ್ತ ಪಾವತಿ ಕ್ಲೇಂ ಅರ್ಜಿಯನ್ನು ವಿಮಾ ಕಂಪನಿಗಳು ತಿರಸ್ಕರಿಸುವಂತಿಲ್ಲ ಎಂದು ಕೊಪ್ಪಳ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
     ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ಇಂಡಿಯಾ ಲಿಮಿಟೆಡ್ ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಗೋಡಿನಾಳ ಗ್ರಾಮದ ಶಂಕ್ರಮ್ಮ ಗಂಡ ರುದ್ರಪ್ಪ ಇವರ ನಡುವಿನ ಜೀವ ವಿಮಾ ಪಾಲಿಸಿ ಮೊತ್ತ ಪಾವತಿ ಪ್ರಕರಣದಲ್ಲಿ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಈ ತೀರ್ಪು ನೀಡಿದೆ.
ಪ್ರಕರಣ ವಿವರ : ಗಂಗಾವತಿ ತಾಲೂಕು ಗೋಡಿನಾಳ ಗ್ರಾಮದ ರುದ್ರಪ್ಪ ಅವರು ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂ. ಇಂಡಿಯಾ ಲಿ, ಗುರಗಾಂವ್ (ಹರಿಯಾಣ ರಾಜ್ಯ) ಇವರ ಬಳಿ 2012 ರ ಅಕ್ಟೋಬರ್ 22 ರಂದು 10 ಲಕ್ಷ ಮೊತ್ತದ ಪಾಲಿಸಿಯನ್ನು ಪಡೆದರು.  ಆದರೆ ರುದ್ರಪ್ಪ 2012 ರ ನವೆಂಬರ್ 04 ರಂದು ಆಕಸ್ಮಿಕವಾಗಿ ಹೃದಯಾಘಾತದಿಂದ ಮರಣ ಹೊಂದಿದರು.  ಪಾಲಿಸಿ ನಾಮಿನಿದಾರರಾಗಿದ್ದ ಆತನ ಪತ್ನಿ ಶಂಕ್ರಮ್ಮ, ಪಾಲಿಸಿ ಮೊತ್ತ ಪಾವತಿಸುವಂತೆ ವಿಮಾ ಕಂಪನಿಗೆ ದಾಖಲೆಗಳೊಂದಿಗೆ ಕ್ಲೇಂ ಅರ್ಜಿ ಸಲ್ಲಿಸಿದರು.  ವಿಮಾ ಶಾಖೆಯವರು ಒಂದು ತಿಂಗಳ ನಂತರ ಪಾಲಿಸಿ ಹಣ ಕಳುಹಿಸಿಕೊಡುವುದಾಗಿ ತಿಳಿಸಿದರು.  ಆದರೆ ಕಂಪನಿಯವರು 2013 ರ ಡಿಸೆಂಬರ್ 31 ರಂದು ಪತ್ರ ಬರೆದು, ತಮ್ಮ ಪತಿಯು ಪಾಲಿಸಿ ಪಡೆಯುವ ಮುನ್ನ ಹೆಚ್.ಐ.ವಿ. ಕಾಯಿಲೆ ಇರುವುದನ್ನು ಮರೆಮಾಚಿ, ಪಾಲಿಸಿ ಪಡೆದಿರುವುದರಿಂದ, ಪಾಲಿಸಿ ಮೊತ್ತ ಪಾವತಿಸಲು ಬರುವುದಿಲ್ಲ ಎಂಬುದಾಗಿ ತಿಳಿಸಿದರು.  ಈ ಕುರಿತು ರುದ್ರಪ್ಪನ ಪತ್ನಿ ಶಂಕ್ರಮ್ಮ, ತಮ್ಮ ಪತಿ ಪಾಲಿಸಿ ಪಡೆಯುವ ಮುನ್ನ ಆರೋಗ್ಯವಾಗಿದ್ದರು.  ಅಲ್ಲದೆ ಹೈಪರ್‍ಟೆನ್ಷನ್ ನಿಂದಾಗಿ ಹೃದಯಾಘಾತ ಸಂಭವಿಸಿ ಮರಣ ಹೊಂದಿರುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ.  ವಿಮಾ ಕಂಪನಿಯವರು ವಿನಾ ಕಾರಣ ಕ್ಲೇಮ್ ಅರ್ಜಿ ತಿರಸ್ಕರಿಸಿರುವುದು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ, ಪಾಲಿಸಿ ಮೊತ್ತ 10 ಲಕ್ಷ, ಹಾಗೂ ಸೇವಾ ನ್ಯೂನತೆಗೆ ಪರಿಹಾರ ಮತ್ತು ಪ್ರಕರಣದ ಖರ್ಚು ಪಾವತಿಸಲು ಕಂಪನಿಗೆ ಸೂಚಿಸುವಂತೆ ಕೊಪ್ಪಳದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಮನವಿ ಸಲ್ಲಿಸಿದರು.
     ಗ್ರಾಹಕರ ವೇದಿಕೆ ಪ್ರಕರಣ ದಾಖಲಿಸಿ, ವಿಮಾ ಕಂಪನಿಗೆ ಸಮನ್ಸ್ ಜಾರಿಗೊಳಿಸಿತು.  ಕಂಪನಿಯು ತಮ್ಮ ವಕೀಲರ ಮೂಲಕ ವೇದಿಕೆಯಲ್ಲಿ ಹಾಜರಾಗಿ ಹೇಳಿಕೆ ಸಲ್ಲಿಸಿದ್ದು, ಮೃತ ಪಾಲಿಸಿದಾರರು ಪಾಲಿಸಿ ಪಡೆಯುವ ಮುನ್ನವೇ ಕಾಯಿಲೆಯಿಂದ ಬಳಲುತ್ತಿದ್ದು, ಅದನ್ನು ಮರೆಮಾಚಿ, ಅವರು ಪಾಲಿಸಿ ಪಡೆದಿರುತ್ತಾರೆ.  ಈ ವಿಷಯವನ್ನು ವಿಮಾ ಕಂಪನಿಯು ಕೂಲಂಕಷವಾಗಿ ತಪಾಸಣೆ ನಡೆಸಿ, ವರದಿ ಪಡೆದ ನಂತರವೇ ಕ್ಲೇಂ ಅರ್ಜಿ ತಿರಸ್ಕರಿಸಿದ್ದು, ಯಾವುದೇ ಸೇವಾ ನ್ಯೂನತೆಯಾಗಿಲ್ಲ ಎಂಬುದಾಗಿ ವಾದಿಸಿತು.  ಪ್ರಕರಣ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯ ಆರ್. ಬಂಡಾಚಾರ್ ಅವರು,  ವಿಮಾ ಕಂಪನಿಯವರು ಪಾಲಿಸಿದಾರರ ಮರಣಕ್ಕೆ ಕಾರಣಗಳನ್ನು ನೀಡಿರುವುದು ಅನುಮಾನಾಸ್ಪದವಾಗಿದ್ದು, ಯಾವುದೇ ಪೂರಕ ದಾಖಲೆಗಳನ್ನು ಹಾಜರುಪಡಿಸಿಲ್ಲ.  ಕೇವಲ ಅನುಮಾನದ ಆಧಾರದಲ್ಲಿ ನೀಡಿದ ವರದಿ ಆಧರಿಸಿ ಕ್ಲೇಂ ಅರ್ಜಿ ತಿರಸ್ಕರಿಸಿರುವುದು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ, ಪಾಲಿಸಿದಾರರ ವಿಮಾ ಮೊತ್ತ 10 ಲಕ್ಷ ರೂ. ಗಳನ್ನು ಪ್ರಕರಣ ದಾಖಲಿಸಿದ ದಿನಾಂಕದಿಂದ ಪೂರ್ತಿ ಹಣ ಪಾವತಿಸುವವರೆಗೆ ಶೇ. 10 ರ ಮೊತ್ತವನ್ನು ಸೇವಾ ನ್ಯೂನತೆಗೆ ಪರಿಹಾರವನ್ನಾಗಿ ಹಾಗೂ 5000 ರೂ.ಗಳನ್ನು ಪ್ರಕರಣದ ವೆಚ್ಚವನ್ನಾಗಿ ಡಿ. 31 ರ ಒಳಗಾಗಿ ಪಾವತಿಸುವಂತೆ ಆದೇಶ ನೀಡಿದ್ದಾರೆ.

ಹೆಚ್‍ಎಎಲ್ ನಲ್ಲಿ ಅಪ್ರೆಂಟಿಸ್ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಅ. 23 (ಕರ್ನಾಟಕ ವಾರ್ತೆ): ಬೆಂಗಳೂರಿನ ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ಇವರು ಮಷಿನಿಸ್ಟ್ ವೃತ್ತಿಯಲ್ಲಿ 20 ಅಭ್ಯರ್ಥಿಗಳನ್ನು 3 ವರ್ಷದ ಅವಧಿಗಾಗಿ ಪೂರ್ಣಕಾಲಿಕ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದ್ದಾರೆ.
     ಅರ್ಜಿ ಸಲ್ಲಿಸಲು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಸಾಮಾನ್ಯ/ಓಬಿಸಿ ವರ್ಗದವರು ಶೇ. 60.  ಪ.ಜಾತಿ, ಪ.ವರ್ಗ ಮತ್ತು ವಿಕಲಚೇತನರು ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.  ವಯಸ್ಸು 15 ರಿಂದ 18 ವರ್ಷದೊಳಗಿರಬೇಕು.  ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಕಾರ್ಡ್ ಹೊಂದಿರಬೇಕು.  ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ, ಶಿಕ್ಷಣ ಹಾಗೂ ಶಿಷ್ಯವೇತನ ನೀಡಲಾಗುವುದು.  ಆಸಕ್ತ ಅರ್ಹ ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಕಾರ್ಡ್, ಪ.ಜಾತಿ, ಪ.ವರ್ಗ, ಓಬಿಸಿ/ವಿಕಲಚೇತನ ಕುರಿತ ಪ್ರಮಾಣಪತ್ರ, ಇತ್ತೀಚಿನ 2 ಭಾವಚಿತ್ರ ಲಗತ್ತಿಸಿ ಸಲ್ಲಿಸಬೇಕು.  ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ಕೊಪ್ಪಳ ಇವರಿಂದ ಪಡೆಯಬಹುದು.  ಭರ್ತಿ ಮಾಡಿದ ಅರ್ಜಿಯನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ನವೆಂಬರ್ 10 ರ ಒಳಗಾಗಿ ಸಲ್ಲಿಸುವಂತೆ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವ-ಉದ್ಯೋಗ ತರಬೇತಿಗಳಿಗೆ ಅರ್ಜಿ ಆಹ್ವಾನ


ಕೊಪ್ಪಳ,ಅ.23 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ (ರಿ), ಹಳಿಯಾಳ, ಇವರು ನವೆಂಬರ್ ತಿಂಗಳು 2014ಲ್ಲಿ ಪ್ರಾರಂಭವಾಗುವ ಉದ್ಯೋಗ/ಸ್ವಉದ್ಯೋಗ ಆಧಾರಿತ ಅಲ್ಪಾವಧಿಯ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ.
 ಕೋಳಿ ಸಾಕಾಣಿಕೆ ತರಬೇತಿ ದಿನಾಂಕ:10.11.2014 ರಿಂದ 15.11.2014 ರ ವರೆಗೆ, ಏರ್ ಕಂಡಿಷನ್ ಮತ್ತು ರೆಫ್ರಿಜರೇಟರ್ ರಿಪೇರಿ ತರಬೇತಿ ದಿನಾಂಕ:24.11.2014 ರಿಂದ 23.12.2014ರ ವರೆಗೆ, ಹಾಗೂ ವೆಲ್ಡಿಂಗ್ & ಫ್ಯಾಬ್ರಿಕೇಶನ್ ತರಬೇತಿಯು ದಿನಾಂಕ:25.11.2014 ರಿಂದ 24.12.2014ರ ವರೆಗೆ ಜರುಗಲಿವೆ. ಈ ಎಲ್ಲ ತರಬೇತಿಗಳಿಗೆ ಆಸಕ್ತ ನಿರುದ್ಯೋಗಿ ಯುವಜನತೆಯಿಂದ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ಯುವಜನತೆ ತರಬೇತಿಗಳಲ್ಲಿ ಭಾಗವಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯುವಕ/ಯುವತಿಯರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಪಡೆಯಲಿಚ್ಚಿಸುವ ತರಬೇತಿ, ವಿದ್ರ್ಯಾರ್ಹತೆ, ತರಬೇತಿಯ ವಿಷಯದಲ್ಲಿ ಪ್ರಾಥಮಿಕ ಜ್ಞಾನ ಮುಂತಾದ ವಿವರಗಳನ್ನೊಳಗೊಂಡ ಮಾಹಿತಿಯನ್ನು ಬಿಳಿ ಹಾಳೆಯಲ್ಲಿ ಬರೆದು ಕೂಡಲೇ ನಿದೇಶಕರು, ಕೆನರಾ ಬ್ಯಾಂಕ್  ದೇಶಪಾಂಡೆ ಆರ್‍ಸೆಟ್ ಸಂಸ್ಥೆ (ರಿ), ದಾಂಡೇಲಿ ರಸ್ತೆ, ಹಳಿಯಾಳ (ಉ.ಕ) ಇವರಿಗೆ ಶೀಘ್ರವಾಗಿ ಕಳುಹಿಸುವುದು. ಇಲ್ಲವೆ ಸಂಸ್ಥೆಗೆ ವೈಯಕ್ತಿಕವಾಗಿ ಬಂದು ಮಾಹಿತಿ ನೀಡಬಹುದು ಅಥವಾ ಫೋನ್ ಮೂಲಕ ವಿವರ ನೀಡಿ ತರಬೇತಿಗೆ ಆಯ್ಕಗೊಳ್ಳಬಹುದು. ಒಂದು ತರಬೇತಿ ಬ್ಯಾಚಿಗೆ 35 ಜನರು ಆಯ್ಕೆ ಆಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 08284-220807, 9483485489,  9482188780 ನ್ನು ಸಂಪರ್ಕಿಸಲು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ,ಅ.23 (ಕರ್ನಾಟಕ ವಾರ್ತೆ): ಯಲಬುರ್ಗ ತಾಲೂಕು ಮುಧೋಳ ಹಾಗೂ ಯಡ್ಡೋಣಿ ಯಲ್ಲಿ ಹೊಸದಾಗಿ ಪ್ರಾರಂಭವಾದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ ಐ.ಟಿ.ಐ ಪ್ರವೇಶಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯನ್ನು ಹೊಂದಿರುವವರು ಅ.30 ರೊಳಗಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮ) ಯಲಬುರ್ಗ ಇಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಒಂದು ಭಾವಚಿತ್ರದೊಂದಿಗೆ ಅರ್ಜಿಯನ್ನು ಕಾರ್ಯಾಲಯದಲ್ಲಿ ಪಡೆದು ಸಲ್ಲಿಸಲು ಸೂಚನೆ ನೀಡಲಾಗಿದೆ.   ಮುಧೋಳ ಇಲ್ಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರೀಷಿಯನ್ (ಎಸ್.ಸಿ.ವಿ.ಟಿ), ಫಿಟ್ಟರ್ (ಎಸ್.ಸಿ.ವಿ.ಟಿ). ಯಡ್ಡೋಣಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಎಲೆಕ್ಟ್ರೀಷಿಯನ್ (ಎಸ್.ಸಿ.ವಿ.ಟಿ), ಫಿಟ್ಟರ್ (ಎಸ್.ಸಿ.ವಿ.ಟಿ) ವೃತ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 08534-220470, 9164111338, 8095287843 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸುಗಮ ಸಂಚಾರಕ್ಕೆ ಗಂಗಾವತಿಯಲ್ಲಿ ಹೊಸ ವ್ಯವಸ್ಥೆ ಜಾರಿ


ಕೊಪ್ಪಳ,ಅ.23(ಕರ್ನಾಟಕ ವಾರ್ತೆ): ಗಂಗಾವತಿ ನಗರ ಹಾಗೂ ನಗರಸಭಾ ವ್ಯಾಪ್ತಿಯಲ್ಲಿ ಸುಗಮ ವಾಹನಗಳ ಸಂಚಾರ ಹಾಗೂ ಜನದಟ್ಟಣೆಯ ನಿಯಂತ್ರಣಕ್ಕಾಗಿ ವಾಹನಗಳ ಅನ್‍ಲೋಡಿಂಗ್, ಏಕಮುಖ ರಸ್ತೆ, ವಾಹನಗಳ ಪಾರ್ಕಿಂಗ್ ಸೇರಿದಂತೆ ಹಲವು ಕ್ರಮಗಳಿಗೆ ನೂತನ ವ್ಯವಸ್ಥೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
ಗಂಗಾವತಿ ನಗರದಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ಸುವ್ಯವ್ಯವಸ್ಥೆ ಕೈಗೊಳ್ಳಲು ಸಾರ್ವಜನಿಕ ಹಿತ ದೃಷ್ಟಿಯಿಂದ ವಾಹನ ನಿಲುಗಡೆ, ಏಕಮುಖ ರಸ್ತೆ, ಅನ್‍ಲೋಡ್, ಶಬ್ದ ಮಾಲಿನ್ಯ, ಆಟೋರಿಕ್ಷಾ ನಿಲ್ದಾಣ, ವೇಗದ ಮಿತಿ ಹಾಗೂ ವಾಹನ ಪಾರ್ಕಿಂಗ್ ಸಲುವಾಗಿ ಗಂಗಾವತಿ ನಗರದ ವಿವಿಧ ಪ್ರದೇಶಗಳಲ್ಲಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಅನ್‍ಲೋಡಿಂಗ್ : ಗಂಗಾವತಿ ನಗರದಲ್ಲಿ ಭಾರಿ ವಾಹನಗಳು ಪ್ರತಿದಿನ ಮುಂಜಾನೆ 8.30 ಗಂಟೆ ಒಳಗಡೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಹಾಗೂ ರಾತ್ರಿ 9 ಗಂಟೆ ನಂತರ ಸಿ.ಬಿ.ಎಸ್. ಸರ್ಕಲ್‍ನಿಂದ-ರಾಯಚೂರು ಸರ್ಕಲ್, ಪವನ್ ಬಾರ್, ಅಗ್ನಿಶಾಮಕ ಠಾಣೆವರೆಗೆ, ಗಾಂಧಿ ಸರ್ಕಲ್‍ದಿಂದ-ಕಂಪ್ಲಿ ಸರ್ಕಲ್, ರಾಜಭವನ ಕ್ರಾಸ್‍ದಿಂದ-ಬಸ್ ನಿಲ್ದಾಣ, ಬಸ್ ನಿಲ್ದಾಣದಿಂದ-ಆನೆಗುಂದಿ ರಸ್ತೆ ಡಾಲ್ಫಿಂನ್ ಕ್ರಾಸ್, ನೀಲಕಂಠೇಶ್ವರ ಸರ್ಕಲ್‍ದಿಂದ-ಕನಕದಾಸ ವೃತ್ತ, ಕನಕದಾಸ ವೃತ್ತದಿಂದ-ಕಂಪ್ಲಿ ಸರ್ಕಲ್, ಮಹಾವೀರ ಸರ್ಕಲ್‍ದಿಂದ-ಓ.ಎಸ್.ಬಿ. ರಸ್ತೆ ಮಾರ್ಗವಾಗಿ ಗಣೇಶ ಸರ್ಕಲ್, ಗಾಂಧಿ ಸರ್ಕಲ್‍ದಿಂದ-ಬಸ್ ನಿಲ್ದಾಣ, ಡೇಲಿ ಮಾರ್ಕೆಟ್ ರಸ್ತೆಯ ವೀರಭದ್ರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನದಿಂದ-ಮಹಾವೀರ ಸರ್ಕಲ್, ಬಂಬೂ ಬಜಾರ್‍ದಿಂದ-ಶಿವ ಟಾಕೀಸ್, ಶಿವ ಟಾಕೀಸ್‍ನಿಂದ-ಚರ್ಚ್, ರಾಯಚೂರು ಸರ್ಕಲ್‍ನಿಂದ-ಕಂಪ್ಲಿ ಸರ್ಕಲ್, ಕಂಪ್ಲಿ ಸರ್ಕಲ್‍ದಿಂದ-ಲಕ್ಷ್ಮೀ ರೈಸ್ ಮಿಲ್, ಸಿ.ಬಿ.ಎಸ್. ಸರ್ಕಲ್‍ನಿಂದ-ಗಾಂಧಿ ಸರ್ಕಲ್‍ವರೆಗೆ ವಾಹನಗಳಿಂದ ಅನ್‍ಲೋಡಿಂಗ್ ಮಾಡಿಕೊಳ್ಳಬೇಕು. ಉಳಿದ ಅವಧಿಯಲ್ಲಿ ಅನ್‍ಲೋಡಿಂಗ್ ನಿರ್ಬಂಧಿಸಲಾಗಿದೆ.
ಏಕಮುಖ ರಸ್ತೆ : ಗಾಂಧಿ ನಗರದ ಸಂಚಾರ ಸುಗಮಗೊಳಿಸುವ ಸಲುವಾಗಿ ಮಹಾವೀರ ಸರ್ಕಲ್‍ದಿಂದ ಓ.ಎಸ್.ಬಿ. ರಸ್ತೆ ಮುಖಾಂತರ ಗಣೇಶ ಸರ್ಕಲ್‍ಗೆ ಹೋಗಲು ಏಕಮುಖ ರಸ್ತೆ ಎಂದು ನಿಗದಿಪಡಿಸಿ ಆದೇಶ ಮಾಡಲಾಗಿದೆ.
ಪಾರ್ಕಿಂಗ್ : ದ್ವಿಚಕ್ರ ವಾಹನಗಳಿಗೆ ಗಂಗಾವತಿ ನಗರದ ಮಹಾಂತ್ಮಗಾಂಧಿ ಸಿ.ಬಿ.ಎಸ್.ವರೆಗೆ. ಸಿ.ಬಿ.ಎಸ್. ಸರ್ಕಲ್‍ನಿಂದ ಕನಕಗಿರಿ ರಸ್ತೆಯ ಶ್ರೀನಿವಾಸಗೌಡ ಆಸ್ಪತ್ರೆವರೆಗೆ ಪ್ರತಿದಿನ ಸಮ ದಿನಾಂಕದಂದು ಒಂದು ಕಡೆ ಮತ್ತು ಬೆಸ ದಿನಾಂಕದಂದು ಒಂದು ಕಡೆ ದ್ವಿಚಕ್ರವಾಹನ ಪಾರ್ಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ಮಹಾಂತ್ಮ ಗಾಂಧಿ ಸರ್ಕಲ್‍ನಲ್ಲಿ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಮಾಡಲು ಆದೇಶ ಮಾಡಲಾಗಿದೆ.
ಶಬ್ದ ಮಾಲಿನ್ಯ : ಗಂಗಾವತಿ ಸರ್ಕಾರಿ ಆಸ್ಪತ್ರೆ, ಆನಂದ ನರ್ಸಿಂಗ್ ಹೋಮ್, ಮಲ್ಲನಗೌಡ ಆಸ್ಪತ್ರೆ, ನೀಲಕಂಠೇಶ್ವರ ದೇವಸ್ಥಾನ ಹತ್ತಿರದ ಸರ್ಕಾರಿ ಬಾಲಕೀಯರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಾಪರ್ ಶಾಲೆ, ಸರ್ಕಾರಿ ಸಿ.ಪಿ.ಎಸ್.ಶಾಲೆ, ಚಿನಿವಾಲರ ಆಸ್ಪತ್ರೆ ಚರ್ಚ್ ಹತ್ತಿರ, ಹಳೆ ಮತ್ತು ಹೊಸ ತಹಶೀಲ್ದಾರ್ ಕಛೇರಿ ಮುಂದೆ, ನ್ಯಾಯಾಲಯದ ಮುಂದೆ ಈ ಸ್ಥಳಗಳಲ್ಲಿ ವಾಹನ ಚಾಲಕರು ಹಾರ್ನ್ ಹಾಕದಂತೆ ನಿರ್ಬಂಧ ವಿಧಿಸಲಾಗಿದೆ.
ವೇಗದ ಮಿತಿ : ಗಂಗಾವತಿ ನಗರದ ಒಳಗಡೆ 20 ಕಿ.ಮೀ. ವೇಗದೊಳಗೆ ಎಲ್ಲಾ ವಾಹನಗಳು ಚಲಿಸುವಂತೆ ಆದೇಶಿಸಲಾಗಿದೆ. ಗಂಗಾವತಿ ನಗರದ ಹೊರವಲಯದ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳು 40 ಕಿ.ಮೀ. ವೇಗದೊಳಗೆ ಚಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ. ಈ ವ್ಯವಸ್ಥೆ ಅಕ್ಟೋಬರ್ 16 ರಿಂದ ಜಾರಿಗೆ ತರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಮಕ್ಕಳ ಪ್ರತಿಭೆ ಹೊರಹೊಮ್ಮಲು ವ್ಯಕ್ತಿತ್ವ ವಿಕಸನ ಶಿಬಿರ ಸಹಕಾರಿ


ಕೊಪ್ಪಳ,ಅ.23(ಕರ್ನಾಟಕ ವಾರ್ತೆ): ಮಕ್ಕಳಿಗೆ ಬಾಲಮಂದಿರದಲ್ಲಿಯ ಸೌಲಭ್ಯಗಳ ಜೊತೆಗೆ ಅವರ ಪ್ರತಿಭೆಗಳನ್ನು ಹೊರಹಾಕಲು ರಜೆಯ ದಿನಗಳಲ್ಲಿ ಏರ್ಪಡಿಸಲಾಗಿರುವ ವ್ಯಕ್ತಿತ್ವ ವಿಕಸನ ಶಿಬಿರದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಅವರು ಹೇಳಿದರು.
ಸರಕಾರಿ ಬಾಲಕರ ಬಾಲಮಂದಿರದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಲಕರ/ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಏರ್ಪಡಿಸಲಾಗಿದ್ದ ಅಕ್ಟೋಬರ್ ತಿಂಗಳ ರಜೆಯ ದಿನಗಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಮಕ್ಕಳಿಗೆ ತಂದೆ, ತಾಯಿಗಳು ಇಲ್ಲವೆಂಬ ಮನೋಭಾವನೆ ಬಾರದಂತೆ ಇಂತಹ ಶಿಬಿರಗಳಲ್ಲಿ ಮಕ್ಕಳನ್ನು ಭಾಗವಹಿಸುವಿಕೆಯ ಮೂಲಕ ಮತ್ತು ಹಿಂಜರಿಕೆಯ ಮನೋಭಾವನೆಯುಳ್ಳ ಮಕ್ಕಳನ್ನು  ಪ್ರೋತ್ಸಾಹಿಸುವ ಮೂಲಕ ಮಕ್ಕಳನ್ನು ಸಂತೋಷಪಡಿಸಬೇಕು. ತಮ್ಮ ಇಲಾಖೆಯಿಂದ ಎಲ್ಲಾ ಸಹಕಾರ ನೀಡುವುದಾಗಿ ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ದಶರಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತ ಪ್ರೇಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ, ವೈದ್ಯರಾದ ಡಾ.ಶಫೀಉಲ್ಲಾ, ರೋಟರಿ ಕ್ಲಬ್‍ನ ಕಾರ್ಯದರ್ಶಿ ಶ್ರೀನಿವಾಸ ಹ್ಯಾಟಿ, ಹಿರಿಯ ರಂಗಭೂಮಿ ಕಲಾವಿದ ರಂಗನಾಥ ಕೆ., ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಂಗಮೇಶ್ವರಗೌಡ. ಎಂ. ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಾಲಕಿಯರಾದ ಜ್ಯೊತಿ, ಭಾರತಿ, ಮಲ್ಲಮ್ಮ ಮತ್ತು ದೀಪಾ ಪ್ರಾರ್ಥನೆ ಗೀತೆಯನ್ನು ಹಾಡಿದರು. ಶಿವಲೀಲಾ ಹೊನ್ನುರು ಕಾರ್ಯಕ್ರಮವನ್ನು ನಿರೂಪಿಸಿದರು. ರವಿ ಗುಡ್ಡದ ಮೇಗಳ ಸ್ವಾಗತಿಸಿದರು. ಬಾಲಕರ ಬಾಲಮಂದಿರದ ಅಧೀಕ್ಷಕ ಇಮಾಲಪ್ಪ ಕೊನೆಯಲ್ಲಿ ವಂದಿಸಿದರು. ಈ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಂದ ನಾಟಕ, ನೃತ್ಯ, ಹಾಡು ಮುಂತಾದ ಸಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು.

Tuesday, 21 October 2014

ಪೊಲೀಸ್ ಹುತಾತ್ಮರಿಗೆ ಅಧಿಕಾರಿ, ಗಣ್ಯರಿಂದ ಪುಷ್ಪನಮನ

ಕೊಪ್ಪಳ ಅ. 21 (ಕ.ವಾ): ಪೊಲೀಸ್ ಹುತಾತ್ಮರ ದಿನದ ಅಂಗವಾಗಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಅಧಿಕಾರಿ, ಗಣ್ಯರು, ಮಾಧ್ಯಮದವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್ ಅವರು, ಪೊಲೀಸರು ತಮ್ಮ ಜೀವದ ಹಂಗು ತೊರೆದು, ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಕಾನೂನು ಸುವ್ಯವಸ್ಥೆ ರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡುವ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ.  ಈ ವರ್ಷ ಕರ್ತವ್ಯ ನಿರ್ವಹಣೆ ವೇಳೆ ದೇಶದಲ್ಲಿ ಒಟ್ಟು 659 ಪೊಲೀಸರು ಹುತಾತ್ಮರಾಗಿದ್ದು, ಅವರೆಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.  ಈ ವರ್ಷ ಗುಲಬರ್ಗಾದಲ್ಲಿ ಮುನ್ನಾ ಎಂಬ ನಟೋರಿಯಸ್ ರೌಡಿಯ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಪಿಎಸ್‍ಐ ಮಲ್ಲಿಕಾರ್ಜುನ ಬಂಡಿ ಅವರನ್ನು ವಿಶೇಷವಾಗಿ ಸ್ಮರಿಸಬೇಕಾಗುತ್ತದೆ.  ತ್ಯಾಗ ಮನೋಭಾವದಿಂದ ಕಾರ್ಯ ನಿರ್ವಹಿಸುವ ಪೊಲೀಸರ ಕಲ್ಯಾಣಕ್ಕಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ವರ್ಷ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳು ಅಲ್ಲದೆ ಉಟೋಪಹಾರ ಸೌಲಭ್ಯ ದೊರೆಯುವಂತೆ ಮಾಡಲು ಎಲ್ಲ ಜಿಲ್ಲೆಗಳಲ್ಲೂ ಪೊಲೀಸ್ ಕ್ಯಾಂಟೀನ್ ಪ್ರಾರಂಭಿಸಲಾಗಿದೆ.  ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದ್ದು, ಯಶಸ್ವಿಯಾದ ಹಿನ್ನೆಲೆಯಲ್ಲಿ ಗುಲಬರ್ಗಾಕ್ಕೂ ಸಹ ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಮಂಜೂರಾತಿ ದೊರೆತಿದೆ.  ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪೊಲೀಸ್ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಹೈದ್ರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳ ಪೊಲೀಸರಿಗೆ ಉನ್ನತ ಚಿಕಿತ್ಸೆ ಪಡೆಯಲು ದೂರದ ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಹೈದ್ರಾಬಾದ್‍ನ 5 ಉತ್ತಮ ಆಸ್ಪತ್ರೆಗಳನ್ನು ಆರೋಗ್ಯಭಾಗ್ಯ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ.  ಅಲ್ಲದೆ ಪೊಲೀಸ್ ಸಿಬ್ಬಂದಿಗೆ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.  ನಿವೃತ್ತ ಪೊಲೀಸ್ ಸಿಬ್ಬಂದಿಗೂ ಆರೋಗ್ಯಭಾಗ್ಯ ಯೋಜನೆಯಡಿ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯಲು ಅನುಕೂಲವಾಗುವ ಹಾಗೆ ಕಾರ್ಯಕ್ರಮ ರೂಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
     ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ಪೊಲೀಸರು ನಿತ್ಯ ಕಾನೂನು ಸುವ್ಯವಸ್ಥೆ ಪಾಲನೆ, ನ್ಯಾಯಾಲಯ, ಆಸ್ಪತ್ರೆ ಪ್ರಕರಣಗಳು, ಸಾರ್ವಜನಿಕರ ಹಿತಾಸಕ್ತಿ ಸೇರಿದಂತೆ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದೆ.  ಅಲ್ಲದೆ ಕುಟುಂಬದ ಹಿತಾಸಕ್ತಿಯನ್ನೂ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಇರುತ್ತದೆ. ಆದರೂ ಪೊಲೀಸರು ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೆಗೆ ಅರ್ಹವಾಗಿದೆ.  ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದೇ, ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದಂತೆ ಎಂದರು.
     ಈ ವರ್ಷ ಹುತಾತ್ಮರಾದ ದೇಶದ 659 ಪೊಲೀಸರ ಹೆಸರುಗಳನ್ನು ಹೇಳುವ ಮೂಲಕ ಸ್ಮರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು,  ಭಾರತ-ಚೀನಾ ಗಡಿಭಾಗದಲ್ಲಿ 1959 ರ ಅಕ್ಟೋಬರ್ 21 ರಂದು ಚೀನಿ ಸೈನಿಕರಿಂದ ಗಡಿಭಾಗದ ಲೆಹ್ ಪ್ರದೇಶದಲ್ಲಿ ಅತಿಕ್ರಮಣ ನಡೆದಿತ್ತು.  ಆಗ ದೇಶದ ಹಾರ್ಟ್‍ಸ್ವಿಂಗ್‍ನ ಸಿಆರ್‍ಪಿಎಫ್ ತುಕಡಿಯ ಸೈನಿಕರು ಕೆಚ್ಚೆದೆಯಿಂದ ಹೋರಾಟ ನಡೆಸಿದ ಘಟನೆಯಲ್ಲಿ 10 ಸೈನಿಕರು ಹುತಾತ್ಮರಾದರು.  ಹುತಾತ್ಮರ ತ್ಯಾಗ ಬಲಿದಾನದ ಸ್ಮರಣೆಗಾಗಿ ಈಗಲೂ ಈ ಭಾಗದ 18000 ಅಡಿ ಎತ್ತರದ ಪ್ರದೇಶದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗಿದೆ.    ಈ ಹುತಾತ್ಮ ಮಹನೀಯರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಪಾಲನೆಯ ಪ್ರಾಮಾಣಿಕ ಕರ್ತವ್ಯಕ್ಕೆ ಇಂತಹ ಹುತಾತ್ಮ ಪೊಲೀಸರು ಪ್ರೇರಣೆಯಾಗಲಿ ಎಂದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಗಣ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಧ್ಯಮದವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.

ಒಳನಾಡು ಮೀನುಗಾರಿಕೆ ತರಬೇತಿ : ಪುರುಷರಿಂದ ಅರ್ಜಿ ಆಹ್ವಾನ


ಕೊಪ್ಪಳ,ಅ.21 (ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯು 40ನೇ ತಂಡದ ಒಳನಾಡು ಮೀನುಗಾರಿಕೆ ಕುರಿತು ಆಸಕ್ತ ಗ್ರಾಮೀಣ ಪುರುಷ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ತರಬೇತಿಯು ಶಿವಮೊಗ್ಗ ಜಿಲ್ಲೆ ಬಿ.ಆರ್. ಪ್ರಾಜೆಕ್ಟ್‍ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ನ.26 ರಿಂದ ಪ್ರಾರಂಭವಾಗಲಿದ್ದು, ತರಬೇತಿಯು 01 ತಿಂಗಳ ಅವಧಿಯದಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ, ಬಲೆಗಳನ್ನು ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನುಮರಿ ಉತ್ಪಾದನೆ, ಪಾಲನೆ ಇತ್ತೀಚಿನ ಬೆಳವಣಿಗೆಗಳು ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.  
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ. (ಪಾಸ್ ಅಥವಾ ಫೇಲ್) ಓದಿರಬೇಕು,  ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರರ ಸಹಕಾರ ಸಂಘದ ಸದಸ್ಯರು, ಇತ್ಯಾದಿ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಲಾಗುವುದು, ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ರೂ. 2000 ಗಳ ಶಿಷ್ಯವೇತನ ನೀಡಲಾಗುವುದು, ಅಲ್ಲದೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ನಿಗದಿತ ಅರ್ಜಿಯನ್ನು ಸ್ವವಿಳಾಸದ ಲಕೋಟೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ ಇವರಿಗೆ ಕಳುಹಿಸಿ ಪಡೆಯಬಹುದು.  ಭರ್ತಿ ಮಾಡಿದ ಅರ್ಜಿಯನ್ನು ನ.15 ರ ಒಳಗಾಗಿ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳನ್ನು ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Monday, 20 October 2014

ಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಜಮೀನು, ವಸತಿ ಸೌಲಭ್ಯ - ಸಚಿವ ಹೆಚ್. ಆಂಜನೇಯ
ಕೊಪ್ಪಳ ಅ. 20 (ಕರ್ನಾಟಕ ವಾರ್ತೆ): ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಹಿಂದುಳಿದಿರುವ ಗೋಂದಲಿ ಸೇರಿದಂತೆ ಇತರೆ ಅಲೆಮಾರಿ ಸಮುದಾಯಕ್ಕೆ ಜಮೀನು ಮತ್ತು ವಸತಿ ಸೌಲಭ್ಯವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ಹೇಳಿದರು.
     ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಗೋಂದಲಿ ಜನಾಂಗದ ರಾಜ್ಯ ಮಟ್ಟದ ವಿಚಾರಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಅಲೆಮಾರಿ ಜನಾಂಗವು ಬಹುವರ್ಷಗಳಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯವಾಗಿದ್ದು,  ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಹಿಂದುಳಿದಿದೆ.  ಇದೀಗ ಸರ್ಕಾರ ಇಂತಹ ಅನೇಕ ಶೋಷಿತ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳಿಗೆ ನ್ಯಾಯ ಒದಗಿಸಲು ತೀರ್ಮಾನಿಸಿದೆ.  ಜಾತೀವಾರು ಸಮೀಕ್ಷೆಗೆ ಈಗಾಗಲೆ ಸರ್ಕಾರ ಕೈಗೊಂಡಿದ್ದು, ಇದರಿಂದಾಗಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಜನಾಂಗಗಳ ಸ್ಥಿತಿಗತಿಗಳ ಮೇಲೆ ಸಮೀಕ್ಷಾ ವರದಿ ಬೆಳಕು ಚೆಲ್ಲಲಿದೆ.  ಈ ಸಮೀಕ್ಷಾ ವರದಿಯ ಆಧಾರದ ಮೇಲೆ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಅಂತಹ ಸಮುದಾಯಗಳನ್ನೂ ಮುಖ್ಯವಾಹಿನಿಗೆ ತರಲು ಕ್ರಮ ವಹಿಸಲಿದೆ.  ಅಲೆಮಾರಿ ಜನಾಂಗ, ತಮ್ಮ ಬದುಕಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವ ಪದ್ಧತಿಯನ್ನು ರೂಢಿಸಿಕೊಂಡಿದ್ದು, ಇದರಿಂದಾಗಿ ಆ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.  ಇಂತಹ ವಲಸೆ ಪದ್ಧತಿಯನ್ನು ಈ ಸಮುದಾಯ ಕೊನೆಗಾಣಿಸಿ, ಒಂದೆಡೆ ನೆಲೆಗೊಳ್ಳಲು ಅಗತ್ಯವಿರುವ ಜಮೀನು ಹಾಗೂ ಮನೆಗಳನ್ನು ಕಟ್ಟಿಕೊಡಲು ಸರ್ಕಾರ ಸಿದ್ಧವಿದೆ.  ಇದರಿಂದಾಗಿ ಅಂತಹ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲವಾಗಲಿದೆ.  ಅಲೆಮಾರಿ ಜನಾಂಗದವರು ತಮ್ಮ ಜೀವನ ಶೈಲಿ ಹಾಗೂ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು.  ಸಮುದಾಯ ಕುಡಿತದ ದುಶ್ಚಟದಿಂದ ಮುಕ್ತವಾಗಬೇಕು.  ಶೀಘ್ರದಲ್ಲೇ ಜಾತಿವಾರು ಸಮೀಕ್ಷೆ ಪ್ರಾರಂಭವಾಗಲಿದ್ದು, ಅಲೆಮಾರಿ ಜನಾಂಗದವರು, ಗಣತಿದಾರರಿಗೆ ಸೂಕ್ತ ಮಾಹಿತಿಯನ್ನು ನೀಡಿ, ಸಮೀಕ್ಷೆಗೆ ನೆರವಾಗಬೇಕು.  ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಈ ವರ್ಷ 50 ಕೋಟಿ ರೂ. ಅನುದಾನವನ್ನು ಸರ್ಕಾರ ಮೀಸಲಿರಿಸಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ, ಆರ್ಥಿಕ ಚಟುವಟಿಕೆಗಳಿಗಾಗಿ ಸಹಾಯಧನ ನೀಡುತ್ತಿದೆ.  ಅಲ್ಲದೆ ಇಂತಹ ಸಮುದಾಯದ ಮಕ್ಕಳಿಗಾಗಿ ಹಾಸ್ಟೆಲ್‍ಗಳಿಗೆ ನೇರ ದಾಖಲಾತಿಗೆ ಅವಕಾಶ ಕಲ್ಪಿಸಿದೆ.  ಇಂತಹ ಯೋಜನೆಯ ಸೌಲಭ್ಯ ಪಡೆದುಕೊಂಡು, ಸಮುದಾಯ ಅಭಿವೃದ್ಧಿಯತ್ತ ಮುಂದಾಗಬೇಕು ಎಂದು ಸಚಿವ ಹೆಚ್. ಆಂಜನೇಯ ಅವರು ಕರೆ ನೀಡಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅಲೆಮಾರಿ ಸಮುದಾಯದ ಸಮಸ್ಯೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ಇದುವರೆಗೂ ಆಗಿರಲಿಲ್ಲ.  ಇದೀಗ ಸರ್ಕಾರ ಸಮಾಜದ ಸಮಸ್ಯೆಗಳು ಹಾಗೂ ಆಗಬೇಕಿರುವ ಕ್ರಮಗಳ ಕುರಿತು ಚರ್ಚಿಸಲು ಸರ್ಕಾರ ಇಂತಹ ವೇದಿಕೆ ಒದಗಿಸಿಕೊಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ.  ಗೋಂದಲಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ.  ಸಮುದಾಯದ ಕುಲಕಸುಬು ಕೌಶಲ್ಯ ವೃದ್ಧಿಗೆ ಸರ್ಕಾರ ಹೆಚ್ಚಿನ ಸಹಾಯಧನ ನೀಡಲು ಸಿದ್ಧವಿದೆ.  ಗೋಂದಲಿ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಮಟ್ಟ ಸುಧಾರಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದರು.
     ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ. ಬಿ.ಕೆ. ರವಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.  ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಆರ್. ಅನುರಾಧ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಈಗಾಗಲೆ ಹೆಳವ, ಕಾಡುಗೊಲ್ಲ ಮುಂತಾದ ಸಮಾಜದ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಲು ಇಂತಹ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದು, ಇದೀಗ ಗೋಂದಲಿ ಸಮಾಜಕ್ಕೆ ನೈತಿಕ ಸ್ಥೈರ್ಯ, ಆರ್ಥಿಕ ಸ್ಥಿತಿ ಬಲಗೊಳಿಸುವ ನಿಟ್ಟಿನಲ್ಲಿ ಈ ವಿಚಾರಸಂಕಿರಣ ಏರ್ಪಡಿಸಲಾಗಿದೆ.  ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಸಮುದಾಯ ಮಾತ್ರ ಶೀಘ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.  ಕರ್ನಾಟಕ ರಾಜ್ಯ ಗೋಂದಲಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಚಂಗಿ ಅವರು ಗೋಂದಲಿ ಸಮಾಜ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯವಾಗಿ ಆಗಬೇಕಿರುವ ಕ್ರಮಗಳ ಬಗ್ಗೆ ಬೇಡಿಕೆಯನ್ನು ಸಲ್ಲಿಸಿದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯರುಗಳಾದ ವಿಜಯಲಕ್ಷ್ಮಿ ರಾಮಕೃಷ್ಣ, ಈರಪ್ಪ ಕುಡಗುಂಟಿ, ನಗರಸಭೆ ಸದಸ್ಯರುಗಳಾದ ಮುತ್ತು ಕುಷ್ಟಗಿ, ರಾಮಣ್ಣ ಹದ್ದಿನ, ಗಾಳೆಪ್ಪ ಪೂಜಾರ, ರೇಣುಕಾ ಪೂಜಾರ, ಜನಾಬಾಯಿ ಜಕ್ಕಲಿ, ಬಿಸಿಎಂ ಜಿಲ್ಲಾ ಅಧಿಕಾರಿ ಕಲ್ಲೇಶ್ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.  ದೇವರಾಜ ಅರಸು ಸಂಶೋಧನಾ ಸಂಸ್ಥೆ ಸಹಾಯಕ ನಿರ್ದೇಶಕ ಅಶೋಕ್ ಸ್ವಾಗತಿಸಿ, ವಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ


ಕೊಪ್ಪಳ,ಅ.20(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಅ.21 ರಂದು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಚಿವರು ಅ.21 ರಂದು ಬೆಳಿಗ್ಗೆ 10.30 ಕ್ಕೆ ಮುನಿರಾಬಾದ್‍ಗೆ ಆಗಮಿಸಿ ಮುನಿರಾಬಾದಿನಿಂದ ಕುಷ್ಟಗಿವರೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 50 ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ದೂರುಗಳ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿವೀಕ್ಷಣೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಕುಷ್ಟಗಿ ಪ್ರವಾಸಿ ಮಂದರಿದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 4 ಗಂಟೆಗೆ 2014-15ನೇ ಸಾಲಿನ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅನುದಾನದ ಕ್ರಿಯಾ ಯೋಜನೆ ಅನುಮೋದಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಚಿವರು ಅದೇ ದಿನ ಸಂಜೆ 5 ಗಂಟೆಗೆ ಇಳಕಲ್‍ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಉಚಿತ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಅ. 20 (ಕ.ವಾ): ಕೊಪ್ಪಳದ ಸ್ಟೇಟ ಬ್ಯಾಂಕ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ, ಕೊಪ್ಪಳ ಜಿಲ್ಲೆಯ ಯುವಕ, ಯುವತಿಯರಿಗೆ 30 ದಿನಗಳÀ ಉಚಿತ ಕಂಪ್ಯೂಟರ್ ಡಾಟಾ ಎಂಟಿ ್ರ ಆಪರೇಷನ ಹಾಗೂ ಪ್ಯಾಷನ್ ಡಿಸೈನಿಂಗ ತರಬೇತಿಗಾಗಿ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನುಉಚಿತವಾಗಿ ನೀಡಲಾಗುವುದು.  ಅರ್ಜಿ ಸಲ್ಲಿಸಲು 18 ರಿಂದ 35 ವರ್ಷದೊಳಗಿರಬೇಕು,  ಕನಿಷ್ಟ ಎಂಟನೆ ತರಬೇತಿ ಉತ್ತೀರ್ಣರಾಗಿರಬೇಕು.  ವಾರ್ಷಿಕ ಆದಾಯ 40 ಸಾವಿರ ರೂ. ಮೀರಿರಬಾರದು.  ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.  ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.  ನಿಗದಿತ ಅರ್ಜಿಯನ್ನು ಸಂಸ್ಥೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ವೃತ್ತ ಹತ್ತಿರ, ಕೊಪ್ಪಳ, ದೂರವಾಣಿ ಸಂ: 08539-231038 ಕ್ಕೆ . 30 ರ ಒಳಗಾಗಿ ಸಲ್ಲಿಸಬೇಕು.  ಅರ್ಜಿ ಸಲ್ಲಿಸಿದವರಿಗೆ ಅ. 31 ರಂದು ಸಂಸ್ಥೆಯಲ್ಲಿ ಸಂದರ್ಶನ ನಡೆಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಕ್ತಿ-ಭಾವದಿಂದ ಕನಕದಾಸರ ಜಯಂತಿ ಆಚರಣೆ- ಆರ್.ಆರ್. ಜನ್ನು


ಕೊಪ್ಪಳ ಅ. 20(ಕರ್ನಾಟಕ ವಾರ್ತೆ) : ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ನ. 08 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಭಕ್ತಿ-ಭಾವದಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು. 
       ಕನಕದಾಸರ ಜಯಂತಿ ಆಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
     ದಾಸ ಸಾಹಿತ್ಯಕ್ಕೆ  ಅಪಾರ ಕೊಡುಗೆ ನೀಡಿರುವ ಭಕ್ತ ಕನಕದಾಸರ ಜಯಂತಿ ಉತ್ಸವವನ್ನು  ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ನ. 08 ರಂದು ಕನಕದಾಸರ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಉದ್ದೆಶಿಸಲಾಗಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಯು ನಗರದ ಸಿರಸಪ್ಪಯ್ಯನ ಮಠದಿಂದ ಹೊರಟು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ಸರ್ಕಲ್ ಮೂಲಕ ಮಧ್ಯಾಹ್ನ 1 ಗಂಟೆಗೆ ಸಾಹಿತ್ಯ ಭವನ ತಲುಪಲಿದೆ. ತಾಷರಂಡೋಲು, ಡೊಳ್ಳು ಕುಣಿತ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಭಾಗವಹಿಸಿ, ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮಧ್ಯಾಹ್ನ 1 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಕನಕದಾಸರ ಜಯಂತಿಯ ಸಮಾರಂಭ ಜರುಗಲಿದೆ.  ಕನಕದಾಸರ ಜಯಂತಿ ಆಚರಣೆ ಅಂಗವಾಗಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಲು ಬಳ್ಳಾರಿ ಜಿಲ್ಲೆಯ ಪ್ರೊ. ಲಿಂಗದಹಳ್ಳಿ ಹಾಲಪ್ಪ ಅವರನ್ನು ಆಹ್ವಾನಿಸಲಾಗುವುದು.  ಕನಕದಾಸರ ಜಯಂತಿ ಆಚರಣೆಯಲ್ಲಿ ಎಲ್ಲ ಸಾರ್ವಜನಿಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
     ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕನಕದಾಸರ ಜಯಂತಿ ಆಚರಣೆಯ ಅಂಗವಾಗಿ ಕೊಪ್ಪಳ ನಗರದ ಎಲ್ಲ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ, ಮೆರವಣಿಗೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.  ಅಲ್ಲದೆ ಮೆರವಣಿಗೆ ಹಾಗೂ ಸಮಾರಂಭದಲ್ಲಿ ಭಾಗವಹಿಸುವವರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ವ್ಯವಸ್ಥೆಗೊಳಿಸಬೇಕು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಸಾಧನೆಗೈದ ಗಣ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಅಲ್ಲದೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
        ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಈರಪ್ಪ ಕುಡಗುಂಟಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್,  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಡಿವೈಎಸ್‍ಪಿ ಎಂ. ರಾಜೀವ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರಾದ  ಶಿವಾನಂದ ಹೊದ್ಲೂರು, ಡಾ. ಜ್ಞಾನಸುಂದರ್, ಮಂಜುನಾಥ ಗೊಂಡಬಾಳ, ಸಮಾಜದ ಅನೇಕ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆ ನೀಡಿದರು.

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ ಅ. 20 (ಕರ್ನಾಟಕ ವಾರ್ತೆ): ಹೈದರಾಬಾದ್-ಕರ್ನಾಟಕ ಭಾಗದ ರೈತರ ಒಡನಾಡಿ ಎನಿಸಿಕೊಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು ನ. 14 ರಿಂದ 16 ರವರೆಗೆ “ಕೃಷಿ ಮೇóಳ-2014” ವನ್ನು ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದು,  ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸುವ ಸಲುವಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
  ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಅತ್ಯತ್ತಮ ಸಾಧನೆಗೈದ ಕೊಪ್ಪಳ ಜಿಲ್ಲೆಯ ಕೃಷಿಕ ಹಾಗೂ ಕೃಷಿ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ರೈತ, ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆ-1 ಅನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇಲ್ಲಿಂದ ಪಡೆದು ಅ. 27 ರೊಳಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಅಥವಾ ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ, ಶ್ರೀ ವಿ.ಆರ್.ಜೋಷಿ- 9480696319 ಅಥವಾ ಡಾ. ಕಾಂತರಾಜು.ವಿ.-9480696316 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Saturday, 18 October 2014

ಮಹಾವೀರ್ ಪ್ರಶಸ್ತಿ : ಅರ್ಜಿ ಆಹ್ವಾನ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಟ್ರಸ್ಟಿ ಭಗವಾನ ಮಹಾವೀರ್ ಫೌಂಡೇಷನ್ ಚೆನ್ನೈ ಇವರು ಕೊಡಮಾಡುವ ಮಹಾವೀರ್ ಪ್ರಶಸ್ತಿಗಾಗಿ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಂದ  ಅರ್ಜಿ ಆಹ್ವಾನಿಸಿದೆ.
    ಅಹಿಂಸೆ ಮತ್ತು ಶಾಖಾಹಾರದ ಬಗ್ಗೆ ಪ್ರಚಾರ ಕ್ಷೇತ್ರ, ಶಿಕ್ಷಣ, ಸಮುದಾಯ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರಬೇಕು. ಅರ್ಜಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಪಡೆದು ಅ.25 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ : 08539-225030 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಈ ವರ್ಷ 100 ಐಟಿಐ ಕಾಲೇಜು ಮಂಜೂರು- ಪಿ.ಟಿ. ಪರಮೇಶ್ವರ ನಾಯ್ಕಕೊಪ್ಪಳ ಅ. 18 (ಕ.ವಾ): ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಈ ವರ್ಷ 100 ಹೊಸ ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು    ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಹೇಳಿದರು.
     ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿಯಲ್ಲಿ ಶನಿವಾರ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಅಡಿ  1.51 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
      ಐಟಿಐ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತಿವೆ.  ರಾಜ್ಯದಲ್ಲಿ ಯುವಕರಿಗೆ ಸ್ವಯಂ ಉದ್ಯೋಗಕಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ವರ್ಷ 100 ಹೊಸ ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಎರಡು ಐಟಿಐ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.  ಐಟಿಐ ಕೋರ್ಸ್‍ನಲ್ಲಿ ಪ್ರಸಕ್ತ ವರ್ಷದಿಂದ ಬಹುವೃತ್ತಿ ತರಬೇತಿ, ಅಂದರೆ ಏಕ ಕಾಲಕ್ಕೆ ಎರಡು ವಿಭಾಗಗಳ ತರಬೇತಿ ಪಡೆಯಲು ವಿದಾರ್ಥಿಗೆ ಅವಕಾಶ ನೀಡಲಾಗುವುದು.  ಪ್ರಾಯೋಗಿಕವಾಗಿ ಬೆಂಗಳೂರು, ಮೈಸೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಈ ತರಬೇತಿಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಒಂದು ಕೋರ್ಸ್‍ಗೆ ಸೇರಿದ ವಿದ್ಯಾರ್ಥಿ ಅದೇ ಕೋರ್ಸ್‍ಗೆ ಪೂರಕವಾಗುವ ಎರಡು ವಿಷಯಗಳನ್ನು ಕಲಿಯಲು ಸಾಧ್ಯವಾಗಲಿದೆ.  ಇದರಿಂದಾಗಿ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಸಹಕಾರಿಯಾಗಲಿದೆ.  ಈ ಮಾದರಿ ಯಶಸ್ವಿಯಾದಲ್ಲಿ, ಇತರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಹೇಳಿದರು.
     ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಸಂವಿಧಾನದ ಕಲಂ 371(ಜೆ) ತಿದ್ದುಪಡಿಯಾದ ಬಳಿಕ ಸಾಕಷ್ಟು ಅನುದಾನ ಹರಿದುಬಂದಿದೆ. ಜಿಲ್ಲೆಗೆ 150 ಕೋಟಿ ಅನುದಾನ ಬಂದಿದೆ.  ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಮೀನು ನೀಡಿದರೆ ಕಟ್ಟಡ ನಿರ್ಮಿಸಬಹುದು. ಯಾವುದೇ ಕಾಮಗಾರಿ ಗುಣಮಟ್ಟ ಕಳಪೆಯಾದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
     ತಾ.ಪಂ. ಅಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ, ಉಪಾಧ್ಯಕ್ಷ ಶೇಖರಪ್ಪ ಸಿದ್ದಪ್ಪ ವಾರದ, ತಾ.ಪಂ. ಸದಸ್ಯ ಶರಣಪ್ಪ ಗವಿಯಪ್ಪ ಗುರಿಕಾರ, ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಾ ಬಸನಗೌಡ ಮರೇಗೌಡ್ರ, ಉಪಾಧ್ಯಕ್ಷ ಶಂಕ್ರಪ್ಪ ಸಂ.ಹೊಸಮನಿ, ಜಿ.ಪಂ. ಸದಸ್ಯರುಗಳಾದ ಅಶೋಕ ತೋಟದ, ರಾಮಣ್ಣ ಸಾಲಭಾವಿ, ಅಲ್ಲದೆ ಭಾಗೀರಥಿ ಜೋಗಿನ್, ಜಯಶ್ರೀ ಅರಕೇರಿ ಮತ್ತಿತರರು ಇದ್ದರು.

ಕನಕದಾಸರ ಜಯಂತಿ ಸಭೆ : ಅ. 20 ಕ್ಕೆ ಮುಂದೂಡಿಕೆ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಭಕ್ತ ಕನಕದಾಸರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯನ್ನು ಅ. 20 ಕ್ಕೆ ಮುಂದೂಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ತಿಳಿಸಿದ್ದಾರೆ.
     ಕನಕದಾಸರ ಜಯಂತಿ ಆಚರಣೆ ಸಂಬಂಧ ಸಿದ್ಧತೆಗಳನ್ನು ಕೈಗೊಳ್ಳಲು ಅ. 18 ರಂದು ಪೂರ್ವಭಾವಿ ಸಭೆ ನಡೆಸಲು ಉದ್ದೇಶಿಸಲಾಗಿತ್ತು.  ಆದರೆ ಕಾರಣಾಂತರಗಳಿಂದ ಸಭೆಯನ್ನು ಅ. 20 ರಂದು ಸಂಜೆ 04 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಲು ನಿಗದಿಪಡಿಸಲಾಗಿದ್ದು, ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ತಿಳಿಸಿದ್ದಾರೆ.

ಪೋಷಕರ ಪತ್ತೆಗೆ ಸಹಕರಿಸಲು ಸೂಚನೆ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಕೊಪ್ಪಳದ ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ಹಾಗೂ ಪೋಷಣೆ ಪಡೆಯುತ್ತಿರುವ ಬಾಲಕಿ ಲಕ್ಷ್ಮೀ ಅಲಿಯಾಸ್ ರಾಜಿ (08) ಎಂಬ ಬಾಲಕಿಯ ಪೋಷಕರು ನಾಪತ್ತೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
    ಬಾಲಕಿಯನ್ನು ಬಳ್ಳಾರಿಯಿಂದ ಕೊಪ್ಪಳದ ಬಾಲಕಿಯರ ಬಾಲಮಂದಿರದ ವಶಕ್ಕೆ ನೀಡಲಾಗಿದ್ದು, ಈ ಬಾಲಕಿಯ ಪೋಷಕರ ಪತ್ತೆಗಾಗಿ ಗೃಹ ಇಲಾಖೆ ಸೂಚಿಸಿದೆ. ಆದರೆ ಈ ಬಾಲಕಿಯ ಜೊತೆಗೆ ಸಂಸ್ಥೆಯ ಸಿಬ್ಬಂದಿಗಳನ್ನು ಆಕೆಯ ಮನೆ ಭೇಟಿಗೆ ಕಳುಹಿಸಿದಾಗ, ಮನೆಯಲ್ಲಿ ಬಾಲಕಿಯ ತಂದೆ ರಾಜಾಸಾಬ ಹಾಗೂ ತಾಯಿ ಸಿದ್ದವ್ವ ಸೇರಿದಂತೆ ಕುಟುಂಬ ನಾಪತ್ತೆಯಾಗಿರುವುದು ತಿಳಿದುಬಂದಿದ್ದು, ಬಾಲಕಿಯ ಭವಿಷ್ಯದ ಹಿತದೃಷ್ಠಿಯಿಂದ ಪೋಷಕರ ಪತ್ತೆಗಾಗಿ ಮನವಿ ಮಾಡಲಾಗಿದೆ.
    ಬಾಲಕಿಯ ಗುರುತು ಸಹಾಯದಿಂದ ಪೋಷಕರ ಪತ್ತೆಗಾಗಿ, ಬಾಲಕಿಯ ಚಹರೆ ವಿವರವನ್ನು ಇಲ್ಲಿ ನೀಡಲಾಗಿದೆ.  ಬಾಲಕಿ ಕೆಂಪು ಮೈಬಣ್ಣ ಹೊಂದಿದ್ದು, ಮೂಗಿನ ಮೇಲೆ ಕಲೆಯ ಗುರುತಿದೆ, ಎತ್ತರ-112 ಸೆಂ.ಮೀ, ತೂಕ-18 ಜಾತಿ-ಮುಸ್ಲಿಂ, ಸರಕಾರಿ ಬಾಲಕಿಯರ ಬಾಲಮಂದಿರದಲ್ಲಿ ವಾಸ. ಬಾಲಕಿಯ ಪೋಷಕರು ಯಾರಿಗಾದರೂ ಪತ್ತೆಯಾದಲ್ಲಿ ಅಥವಾ ಮಾಹಿತಿ ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಪ್ಪಳ, ಜಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಸರಕಾರಿ ಬಾಲಕಿಯರ ಬಾಲಮಂದಿರ ಧನ್ವಂತರಿ ಕಾಲೋನಿ ಭಾಗ್ಯನಗರ ದೂರವಾಣಿ ಸಂಖ್ಯೆ : 08539-201275, ಮೊ.9880261804, 9632447589, 9448169227, 08539-225030 ಈ ದೂರವಾಣಿಗಳಿಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಥಿಯರಿ ಪರೀಕ್ಷೆ ಮುಂದೂಡಿಕೆ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಇವರಿಂದ ನ. 02 ರಂದು ನಡೆಸಲು ಉದ್ದೇಶಿಸಲಾಗಿದ್ದ ಪ್ರಸಕ್ತ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಥಿಯರಿ ಪರೀಕ್ಷೆಯನ್ನು ನ. 09 ಕ್ಕೆ ಮುಂದೂಡಲಾಗಿದೆ.
     ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದಿಂದ ಎನ್.ಟಿ.ಎಸ್.ಇ ಪರೀಕ್ಷೆಯು ನ. 02 ರಂದು ರಾಜ್ಯಾದ್ಯಂತ ನಡೆಯಲಿದ್ದು, ಹಲವು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ.  ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಥಿಯರಿ ಪರೀಕ್ಷೆಯನ್ನು ನ. 09 ಕ್ಕೆ ಮುಂದೂಡಲಾಗಿದೆ ಎಂದು ಕೊಪ್ಪಳ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ತಿಳಿಸಿದ್ದಾರೆ.

ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಅರ್ಜಿ ಆಹ್ವಾನ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ (ತೆಂಕು, ಬಡಗು ಮತ್ತು ಘಟ್ಟದಕೋರೆ), ಮೂಡಲಪಾಯ ಯಕ್ಷಗಾನ, ಗೊಂಬೆಯಾಟ (ಸೂತ್ರದ ಮತ್ತು ತೊಗಲುಗೊಂಬೆ), ಶ್ರೀಕೃಷ್ಣಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದ 2013ರಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಆಯ್ಕೆಯಾದ ಪುಸ್ತಕಕ್ಕೆ ರೂ.5,000/-ಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ), ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನಾ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಅ.30 ರೊಳಗೆ ಅರ್ಜಿಯೊಂಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಬಹುದು.  ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ,ಅ.18(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ನಿರ್ದೆಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಇವರ ವತಿಯಿಂದ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲ ಸರ್ಕಾರಿ ನೌಕರರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸುತ್ತಿವೆ. ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲ ನಗರಸಭೆ, ಕವಿ.ಪ್ರ.ನಿ.ನಿ., ಕೆ.ಎಸ್.ಆರ್.ಟಿ.ಸಿ., ವಿಶ್ವವಿದ್ಯಾಲಂiÀiಗಳು, ಶಾಲಾ ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಇಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೊಂದಾಯಿಸಿಕೊಳ್ಳಬಹುದು. ನೋದಣಿತರು ಶುಲ್ಕವನ್ನು ಕೊಡಬೇಕಾಗಿಲ್ಲ. ಕರ್ನಾಟಕದ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗಿನ ಅವರ ಕಚೇರಿ ಗೈರುಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆ ಪತ್ರದಲ್ಲಿ ತಿಳಿಸಿರುವಂತೆ ವಿನಾಯಿತಿ ಇದೆ.
ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದ್ದು, ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ವಯೋಮಿತಿ 18 ರಿಂದ 50 ವಯಸ್ಸಿನ ಒಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ ರೂ.250 ಗಳ ಡಿಡಿ ಕಳುಹಿಸಿ ಕೊಡಬೇಕು. ನೋಂದಣಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು. ತರಬೇತಿಯು ನವೆಂಬರ್ ತಿಂಗಳಿಂದ ಆರಂಭವಾಗಲಿದೆ.
ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು 570006 ಇವರಿಗೆ ಐದು ರೂಪಾಯಿಯ ಅಂಚೆ ಚೀಟಿಯನ್ನು ಹಚ್ಚಿದ ಸ್ವವಿಳಾಸಿತ ಲಕೋಟಿಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪ್ರಬಾರಿ ಅಧಿಕಾರಿಯವರಿಗೆ ಅ.31 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ : ಡಾ. ಸುರೇಶ್ ಇಟ್ನಾಳ್
ಕೊಪ್ಪಳ ಅ. 18 (ಕರ್ನಾಟಕ ವಾರ್ತೆ): ಪ್ರತಿ ವರ್ಷದಂತೆ ಈ ವರ್ಷ ಕೂಡ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
     ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು.  ರಾಜ್ಯೋತ್ಸವದ ಅಂಗವಾಗಿ ನವೆಂಬರ್ 01 ರಂದು ಬೆಳಿಗ್ಗೆ 7 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ತಹಸಿಲ್ದಾರರ ಕಚೇರಿಯಿಂದ ಹೊರಡಲಿದೆ.  ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಎಲ್ಲ ಇಲಾಖಾ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಇದೇ ಸಂದರ್ಭದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿ, ಅಭಿವೃದ್ಧಿ ಬಿಂಬಿಸುವ ಸ್ಥಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
     ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ವಿಧ್ಯುಕ್ತವಾಗಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.  ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಧ್ವಜಾರೋಹಣ ನೆರವೇರಿಸುವರು.  ಕಾರ್ಯಕ್ರಮದಲ್ಲಿ ನಾಡು ನುಡಿಗಾಗಿ ಶ್ರಮಿಸಿದ ಕಲಾವಿದರು, ಸಾಹಿತಿಗಳು, ಕವಿಗಳನ್ನು ಸನ್ಮಾನಿಸಲಾಗುವುದು.  ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.  ಅದೇ ದಿನ ಸಂಜೆ 6 ಗಂಟೆಗೆ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲು ವ್ಯವಸ್ಥೆ ಮಾಡಲಾಗಿದೆ.  ರಾಜ್ಯೋತ್ಸವ ಆಚರಣೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ವಾರ ಕಾಲ ಕನ್ನಡ ಚಲನಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಆದೇಶ ಹೊರಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ವಿವರಿಸಿದರು.
     ರಾಜ್ಯೋತ್ಸವದ ಹಿಂದಿನ ದಿನ ನಗರದ ಪ್ರಮುಖ ರಸ್ತೆ, ಚರಂಡಿ ಮತ್ತು ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.  ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವೇದಿಕೆ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರ ಅಧ್ಯಕ್ಷತೆಯಲ್ಲಿ ಸ್ತಬ್ಧಚಿತ್ರಗಳ ಸಮಿತಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಿತಿಯನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಡಿವೈಎಸ್‍ಪಿ ರಾಜೀವ್,  ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ, ಜಂಟಿಕೃಷಿ ನಿರ್ದೇಶಕ ಪದ್ಮಯ್ಯನಾಯಕ್ ಪಾಲ್ಗೊಂಡಿದ್ದರು. ಮಂಜುನಾಥ ಗೊಂಡಬಾಳ,  ಶಿವಾನಂದ ಹೊದ್ಲೂರ, ಡಾ. ಜ್ಞಾನಸುಂದರ್, ಬಸವರಾಜ ಶೀಲವಂತರ್ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

Friday, 17 October 2014

ಮಹಿಳಾ ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಸಿಇಓ ಕೃಷ್ಣ ಉದಪುಡಿ ಕರೆ


ಕೊಪ್ಪಳ ಅ. 17 (ಕರ್ನಾಟಕ ವಾರ್ತೆ) : ಗ್ರಾಮೀಣ ಬಡ ಮಹಿಳೆಯರ ಬಾಳಿಗೆ ಬೆಳಕಾಗಿ ‘ಸಂಜೀವಿನಿ’ ಮಹತ್ವಾಕಾಂಕ್ಷಿ ಯೋಜನೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿರಾಜ್ ಇಲಾಖೆಯಡಿ ಜಾರಿಗೆ ತಂದಿದ್ದು ಸ್ವ-ಸಹಾಯ ಸಂಘಗಳ ಬಲವರ್ಧನೆಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ ಉದಪುಡಿ ರವರು ಕರೆ ನೀಡಿದರು.
          ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ  ‘ಸಂಜೀವಿನಿ’  ಯೋಜನೆಯಡಿ ಜಿಲ್ಲಾ ಪಂಚಾಯಿತಿ ಜೆ ಎಚ್ ಪಟೇಲ್ ಸಭಾಂಗಣದಲ್ಲಿ  ಆಯೋಜಿಸಿದ್ದ ಮುಖ್ಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ಸಂಜೀವಿನ ಯೋಜನೆಗಾಗಿ ಈಗಾಗಲೆ ಕುಷ್ಟಗಿ ತಾಲೂಕಿನಲ್ಲಿ ಸಂಪನ್ಮೂಲ ಸಂಸ್ಥೆಯ ನೇಮಕವಾಗಿದೆ.  ಇದೀಗ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ಆಯ್ದ ಗ್ರಾಮಪಂಚಾಯತಿಗಳಲ್ಲಿ ತಲಾ 5 ಜನ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ.  ಸಂಪನ್ಮೂಲ ವ್ಯಕ್ತಿಗಳು 15 ದಿನಗಳ ಕಾಲ ಸಂಬಂಧಪಟ್ಟ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಬಡವರನ್ನು ಗುರುತಿಸಿ ಕಡು ಬಡವರನ್ನು ಸಂಜೀವಿನಿ ವ್ಯಾಪ್ತಿಗೆ ತರುವ ಮೂಲಕ ಇಡೀ ಗ್ರಾಮವನ್ನು ಉತ್ತಮ ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.  ಪ್ರತಿನಿತ್ಯ ಎಲ್ಲಾ ಸಿಬ್ಬಂದಿಗಳು ಒಂದು ಗಂಟೆ ಶ್ರಮದಾನ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೂ ಪ್ರೇರೇಪಣೆ ನೀಡಬೇಕು ಎಂದರು. 
       ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಬಿ.ಕಲ್ಲೇಶ ಮಾತನಾಡಿ  “ಮಹಿಳೆಯರು  ಸ್ವಸಹಾಯ ಸಂWಗಳ ಸಂಘಟನೆಯೊಂದಿಗೆ ಸಾಮಾಜಿಕ ,ಆರ್ಥಿಕ,ಮತ್ತು ರಾಜಕೀಯವಾಗಿ ಮುಂದುವರೆಯಬೇಕು ಅಲ್ಲದೆ ಇತರೆ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಅರಿವು ಮೂಡಿಸುವುದರೊಂದಿಗೆ ಅವರ ಬಾವನೆಗಳಿಗೆ ಬೆಲೆಕೊಟ್ಟು ವಿವಿಧ ಚಟುವಟಿಕೆಗಳು, ಆಟಗಳು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ  ಮುಖೇನ ಸ್ವಚ್ಚತೆಯ ಜಾಗೃತಿ ಮೂಡಿಸಿ ಅವರನ್ನು ಮಾದರಿ ಪ್ರಜೆಗಳಾಗಿ ರೂಪಿಸಬೇಕೆಂದು    ತಿಳಿಸಿದರು.
         ರಾಜ್ಯ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಕೆ. ಆಲಿ ಅವರು ‘ಸಂಜೀವಿನಿ’ ಯೋಜನೆ ಕುರಿತಾಗಿ ಪ್ರಾಸ್ತಾವಿಕ ಮಾತನಾಡಿ, ಯೋಜನೆಯ ವತಿಯಿಂದ ಕೊಪ್ಪಳ ಜಿಲ್ಲೆಯ 4 ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಹೂಡುವ ಮೂಲಕ ಮಹಿಳಾ ಸ್ವಸಹಾಯ ಸಂಘಗಳನ್ನು ಒಕ್ಕೂಟ ರಚನೆ ಮಾಡುವುದರೊಂದಿಗೆ ಮಹಿಳಾ ಸಬಲೀಕರಣ- ಅಭಿವೃದ್ದಿ ಮಾಡಲು ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು.    
     ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ  ಬಸವರಾಜ ಮೂಲಿಮನಿ, ಪಿ.ಎಸ್ ಮಲ್ಲಿಕಾರ್ಜುನ ಕೊಪ್ಪಳ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ ಸೇರಿದಂತೆ ಸಿಡಿಪಿಓಗಳು, ಪಿಡಿಓಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಸಚಿವರ ಜಿಲ್ಲಾ ಪ್ರವಾಸ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಆಂಜನೇಯ ಅವರು ಅ.20 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
    ಸಚಿವರು ಅಂದು ಬೆಳಿಗ್ಗೆ 10.30 ಕ್ಕೆ ಪಕ್ಷದ ಕಛೇರಿಗೆ ಭೇಟಿ ನೀಡುವರು. ಬೆ.11 ಗಂಟೆಗೆ ಸಾಹಿತ್ಯ ಭವನದಲ್ಲಿ ಜರುಗಲಿರುವ ಗೋಂದಲಿ ಜನಾಂಗದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12 ಕ್ಕೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸುವರು. ಮಧ್ಯಾಹ್ನ 1.15 ಕ್ಕೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮಕ್ಕೆ ಭೇಟಿ ನೀಡುವರು. ಸಚಿವರು ಅದೇ ದಿನ ಮ.2.15 ಕ್ಕೆ  ಹೊಸಪೇಟೆ ಮಾರ್ಗವಾಗಿ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಸಂಗೀತ ಉಪಕರಣ ನೀಡುವ ಯೋಜನೆ : ಅರ್ಜಿ ಆಹ್ವಾನ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯಿಂದ 2013-14ನೇ ಸಾಲಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ-13 ಹಾಗೂ ಪರಿಶಿಷ್ಟ ಪಂಗಡ-10 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸಂಗೀತ ಉಪಕರಣಗಳನ್ನು ನೀಡುವ ಯೋಜನೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು, ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ಒಂದು ವೇಳೆ ಅಭ್ಯರ್ಥಿಯು ಬೇರೆ ಜಿಲ್ಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಸ್ವಂತ ಜಿಲ್ಲೆಯಿಂದ ಉಪ-ನಿರ್ದೇಶಕರು/ಸಹಾಯಕ ನಿರ್ದೇಶಕರಿಂದ ನಿರಾಕ್ಷೇಪಣೆ ಪತ್ರವನ್ನು ಪಡೆದು ಸಲ್ಲಿಸಬೇಕು.    ಸಂಗೀತ ಮತ್ತು ನೃತ್ಯ ಕಲೆಯಲ್ಲಿ ತೊಡಗಿಸಿಕೊಂಡವರಿಗೆ, ವಿಕಲಚೇತನ ಅಭ್ಯರ್ಥಿಗಳಿಗೆ, ಸಂಗೀತ, ನೃತ್ಯ ಮತ್ತು ಲಲಿತಕಲೆಗಳನ್ನು ಪ್ರತ್ಯೇಕವಾಗಿ ಕಲಿಯುತ್ತಿದ್ದಲ್ಲಿ, ಶಾಲಾ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದು, ಪೂರಕವಾಗಿ ಸಂಗೀತ, ನೃತ್ಯ ಮತ್ತು ಲಲಿತಕಲೆಗಳಲ್ಲಿ ಕಲಿಯುತ್ತಿದ್ದವರಿಗೆ ಆದ್ಯತೆ ನೀಡಲಾಗುವುದು.  ಯಾವುದೇ ರೀತಿಯ ಸಂಗೀತ ಉಪಕರಣಗಳ ಬೆಲೆಯ ರೂ.40,000/- ಗಳ ಒಳಗೆ ಇರುವಂತಹ ಉಪಕರಣಗಳಿಗೆ ಮಾತ್ರ ನೀಡಲಾಗುವುದು,  ಒಂದು ವೇಳೆ ಯಾವುದೇ ಉಪಕರಣದ ಮೊತ್ತವು ರೂ.40,000/- ಗಳಿಗೆ ಮೀರಿದಲ್ಲಿ ಅಂತಹ ಹೆಚ್ಚಿನ ಮೊತ್ತವನ್ನು ಅಭ್ಯರ್ಥಿಗಳೆ ಭರಿಸಬೇಕು. ನೃತ್ಯ ಸಂಘ, ಕಲಾ ಸಂಘ, ಜಾನಪದ ಸಂಘಟನೆಗಳಾಗಿದ್ದಲ್ಲಿ ಆ ಸಂಘದಿಂದ ದೃಢೀಕರಣ ಪತ್ರವನ್ನು ಪೆಡೆದು ನೇರವಾಗಿ ಸಂಘಕ್ಕೆ ನೀಡಲು ಅವಕಾಶವಿದೆ. ಆದರೆ ಸಂಘದಲ್ಲಿ ಕನಿಷ್ಠ 5 ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಘದಲ್ಲಿರಬೇಕು. ಇಂತಹ ಸಂಘಗಳಿಗೆ ಸಂಗೀತ ಉಪಕರಣಗಳನ್ನು ಖರೀದಿಸಲು ರೂ.2.00 ಲಕ್ಷಗಳಿಗೆ ಮಿತಿಗೊಳಿಸಿ ನೀಡಲಾಗುವುದು.  ಅಭ್ಯರ್ಥಿಗಳು ಈಗಾಗಲೇ ಅಭ್ಯಾಸಗಳನ್ನು ವಿದ್ವಾಂಸರು, ಮತ್ತು ಸಂಗೀತ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಲ್ಲಿ ಅವರಿಂದ ದೃಢೀಕರಣ ಪತ್ರವನ್ನು ಪಡೆದು ಪರಿಶೀಲಿಸಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಕೊಳಲು, ಹಾರ್ಮೊನಿಯಂ, ಕೀ ಭೋರ್ಡ್, ತಬಲ, ಪಿಟೀಲು, ಮೃದಂಗ, ತಮಟೆ, ಡೋಲು, ಸ್ಯಾಕ್ಛೋನ್, ಡ್ರಮ್ಸ್ ನಗಾರಿ, ವೀಣಿ, ಸೀತಾರ, ಸಾರಂಗಿ, ಇಂತಹ ಉಪಕರಣಗಳನ್ನು ನೀಡಲಾಗುವುದು.
ಅಭ್ಯರ್ಥಿಗಳು  ನಿಗದಿಪಡಿಸಿದ ಅರ್ಜಿ ನಮೂನೆಯನ್ನು ನ.01 ರೊಳಗಾಗಿ ಪ್ರವಾಸಿ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ ರವರ ಕಛೇರಿಯಿಂದ ಅರ್ಜಿ ಶುಲ್ಕ ರೂಪಾಯಿ 50=00 ಗಳನ್ನು ಪಾವತಿಸಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 083539-250359 ಸಂಪರ್ಕಿಸಬಹುದು.

ಡೆಂಗ್ಯು ಜ್ವರ ನಿಯಂತ್ರಣ : ಕೊಪ್ಪಳ ನಗರಸಭೆಯಿಂದ ಮುಂಜಾಗ್ರತಾ ಕ್ರಮಗಳು


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಡೆಂಗ್ಯು ಜ್ವರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆಯಿಂದ ಸಾರ್ವಜನಿಕರಿಗೆ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಲಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಡೆಂಗ್ಯು ಜ್ವರ ಎಂದರೇನು : ಡೆಂಗ್ಯು ಜ್ವರ ವೈರಸ್‍ನಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಸ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ.
ಈ ರೋಗದ ಮುಖ್ಯ ಲಕ್ಷಣಗಳಾವವು : ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ಈ ರೋಗದ ಪ್ರಮುಖ ಲಕ್ಷಣಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.
ಈ ರೋಗಕ್ಕೆ ಚಿಕಿತ್ಸೆ ಏನು : ಡೆಂಗ್ಯು ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
ಈ ರೋಗದ ನಿಯಂತ್ರಣ ಹೇಗೆ : ಸೊಳ್ಳೆಗಳ ನಿಯಂತ್ರಣ ಡೆಂಗ್ಯು ರೋಗದ ಹತೋಟಿಗೆ ಮುಖ್ಯ ವಿಧಾನ ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲುಚಪ್ಪಡ್ಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸುವ ಒರಳುಕಲಲು, ಬಿಸಾಡಿದ ತೆಂಗಿನ ಚಿಪ್ಪುಗಳು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವದರಿಂದ ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಮುಂಜಾಗ್ರತಾ ಕ್ರಮಗಳು : ಎಲ್ಲಾ ನೀರಿನ ತಟ್ಟಿ, ಡ್ರಮ್ಮು, ಬ್ಯಾರೆಲ್, ಏರ್‍ಕೂಲರ್ ಇತ್ಯಾದಿಗಳನ್ನು 3 ಅಥವಾ 4 ದಿನಗಳಿಗೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು, ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚವುದು, ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು, ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು, ರಾತ್ರಿ ಹೊತ್ತಿನಲ್ಲಿ ಸೊಳ್ಳೆ ಬತ್ತಿಗಳನ್ನು ಹಚ್ಚುವುದು. ಕಿಟಕಿಗಳಿಗೆ ಜಾಲರಿಗಳನ್ನು ಹೊಡೆಸುವುದು, ಸಂಜೆ ಹೊತ್ತು ಬೇವಿನ ಸೊಪ್ಪಿನ ಹಾಗೂ ಹಾಕುವುದು ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು.

ಸ್ವಚ್ಛ ಭಾರತ ಮಿಷನ್ : ಸಾಕಾರಗೊಳಿಸಲು ಕೊಪ್ಪಳ ನಗರಸಭೆ ಮನವಿ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ):  ಭಾರತ ಸರಕಾರ ಮತ್ತು ರಾಜ್ಯ ಸರಕಾರ  ಅ. 31 ರವರೆಗೆ “ಸ್ವಚ್ಛ ಭಾರತ ಮಿಷನ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿದ್ದು, ಇದಕ್ಕಾಗಿ ಎಲ್ಲಾ ಸಮುದಾಯ, ವಿವಿಧ ಸರ್ಕಾರಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರೆ ಭಾಗಿದಾರರು, ಸ್ವಚ್ಛ ಭಾರತ್ ಮಿಷನ್‍ನ ಉದ್ದೇಶ ಮತ್ತು ಇದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಸ್ವ- ಇಚ್ಛೆಯಿಂದ ಭಾಗವಹಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಸಾಕಾರಗೊಳಿಸಲು ಎಲ್ಲರ ಸಹಕಾರ ಅವಶ್ಯಕವಾಗಿದ್ದು, ಈ ಯೋಜನೆಯನ್ನು ಸಾಕಾರಗೊಳಿಸಲು ಕೊಪ್ಪಳ ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
ಈಗಾಗಲೇ ಆಚರಣೆ ಸಂಬಂಧವಾಗಿ ವಿಷಯಾಧಾರಿತ ನೈರ್ಮಲ್ಯ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ತಮ್ಮ ಮನೆಗಳ ಮತ್ತು ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಬೇಕು, ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಬಂಧಿತ ಸಮುದಾಯ ಪಾತ್ರ ಸಹ ಬಹುಮುಖ್ಯವಾಗಿದ್ದು, ಈ ಕಾರ್ಯಕ್ರಮ ಅಭಿಯಾನದಲ್ಲಿ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲು ತಿಳಿಸಿದೆ, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗೆ ಸಹಕರಿಸಬೇಕು, ಬಸ್ ನಿಲ್ದಾಣ/ರಸ್ತೆ/ಬೀದಿ/ಮಾರುಕಟ್ಟೆ/ಸಾರ್ವಜನಿಕ ಸ್ಥಳಗಳು/ಪಾದಚಾರಿ ರಸ್ತೆ/ ರೈಲು ನಿಲ್ದಾಣದ ಸುತ್ತ ಮುತ್ತಲಿನ ಪ್ರದೇಶಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು, ಸರ್ಕಾರಿ ಕಛೇರಿ/ಆಸ್ಪತ್ರೆ/ಶಾಲೆ/ಕಾಲೇಜುಗಳಲ್ಲಿಯ ಶೌಚಾಲಯಗಳ ಸ್ವಚ್ಛತೆಗೆ ಸಂಬಂಧಪಟ್ಟ ಇಲಾಖೆಯವರು ಮುತವರ್ಜಿವಹಿಸಿ ನಿರ್ವಹಣೆ ಕ್ರಮಕೈಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಉಗುಳುವುದು ಸರಿಯಾದ ಕ್ರಮವಲ್ಲ “ಸ್ವಚ್ಛ ಭಾರತ ಮಿಷನ್” ಸಕಾರಗೊಳಿಸಲು ಸಹಕರಿಸಬೇಕೆಂದು ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಸದೃಢ ಸಮಾಜ ನಿರ್ಮಾಣಕ್ಕೆ ಮಕ್ಕಳ ಹಕ್ಕುಗಳ ರಕ್ಷಣೆ ಅವಶ್ಯ – ಕೃಷ್ಣ ಉದಪುಡಿಕೊಪ್ಪಳ ಅ. 17 (ಕ.ವಾ) : ಸದೃಢ ದೇಶ ಅಥವಾ ಸಮಾಜ ನಿರ್ಮಾಣ ಮಾಡಲು ಮಕ್ಕಳ ಹಕ್ಕುಗಳ ರಕ್ಷಣೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
     ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಅಧ್ಯಕ್ಷರುಗಳಿಗೆ ಮಕ್ಕಳ ಹಕ್ಕುಗಳ ಗ್ರಾಮಸಭೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
     ಮಕ್ಕಳ ಹಕ್ಕುಗಳ ಬಗ್ಗೆ ಇನ್ನೂ ಜನರಲ್ಲಿ ಅರಿವಿನ ಕೊರತೆ ಇದೆ.  ಮಕ್ಕಳ ಬದುಕು, ಆರೋಗ್ಯ, ವಿಕಾಸ ಹಾಗೂ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಯಲ್ಲಿದೆ.  ಮಕ್ಕಳ ಸ್ವಚ್ಛಂದ ಬದುಕಿಗೆ ತೊಂದರೆಯಾಗದಂತೆ, ಹಾಗೂ ಅವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕೆಂಬುದು ಕಾಯ್ದೆಯ ಆಶಯವಾಗಿದೆ.  ಆದರೆ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ಕುರಿತು ಜಾಗೃತಿ ಇಲ್ಲದಿರುವುದರಿಂದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿವೆ.  ಮಕ್ಕಳ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿಯೇ ಇದೀಗ ಗ್ರಾಮ ಸಭೆಗಳನ್ನು ಆಯೋಜಿಸಲು ಸರ್ಕಾರ ಸೂಚನೆ ನೀಡಿದ್ದು, ಇಂತಹ ಗ್ರಾಮಸಭೆಗಳಲ್ಲಿ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ದೊರೆಯಬೇಕು.  ಮಕ್ಕಳ ಸಾಮಾನ್ಯ ಬದುಕಿಗೆ ತೊಂದರೆ ಕಂಡುಬಂದಲ್ಲಿ, ಸೂಕ್ತ ನಿರ್ಧಾರಗಳನ್ನು ಇದೇ ಸಭೆಗಳಲ್ಲಿ ಕೈಗೊಳ್ಳಬೇಕು.  ಮಕ್ಕಳ ಶಿಕ್ಷಣ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದ ಪಾಕಿಸ್ತಾನದ ಮಲಾಲ ಇದಕ್ಕಾಗಿ ಇತ್ತೀಚೆಗೆ ನೋಬೆಲ್ ಪ್ರಶಸ್ತಿ ಪಡೆದು ಖ್ಯಾತರಾದಂತೆ, ಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಲು ಪ್ರತಿಯೊಂದು ಗ್ರಾಮಗಳಲ್ಲೂ ಮಲಾಲ ನಂತಹ ಬಾಲೆಯರು ಹುಟ್ಟಿ ಬರಬೇಕು.  ಪ್ರತ ನಂತಹ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಸ್ಥಳೀಯ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
     ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಮಕ್ಕಳ ಗ್ರಾಮಸಭೆಗಳು ಸೂಕ್ತ ವೇದಿಕೆಯಾಗಿದೆ.  ಇತ್ತೀಚೆಗೆ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಕಾಯ್ದೆಯ ಜೊತೆಗೆ ಸಮುದಾಯದ ಪಾತ್ರವೂ ಪ್ರಮುಖವಾಗಿದೆ ಎಂದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ,  ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಕಾರ್ಯಾಗಾರ ಕುರಿತು ಮಾತನಾಡಿದರು.  ಯುನಿಸೆಫ್‍ನ ಹರೀಶ್ ಜೋಗಿ ಅವರು ಪ್ರಾರಂಭದಲ್ಲಿ ಸ್ವಾಗತಿಸಿದರು.  ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ನವಜಾತ ಹೆಣ್ಣು ಶಿಶು ಪತ್ತೆ : ಸೂಚನೆ


ಕೊಪ್ಪಳ ಅ. 17 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಇಸ್ಲಾಂಪುರ ನಗರದ 11 ನೇ ವಾರ್ಡನಲ್ಲಿ 5 ದಿನದ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು. ಸಂಬಂಧಪಟ್ಟ ಪೋಷಕರು 60 ದಿನಗಳ ಒಳಗಾಗಿ ಬಂದು ಶಿಶುವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
     ಪತ್ತೆಯಾದ ನವಜಾತ ಶಿಶುವನ್ನು  ನಗರ ಪೊಲಿಸ್ ಠಾಣೆ ಗಂಗಾವತಿಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಶಿಶುವಿನ ಪೋಷಕರ ಪತ್ತೆಯಾಗದ ಕಾರಣ ಶಿಶುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ, ಬಿಜಾಪುರದ ಶ್ರೀ ಸಿದ್ದೇಶ್ವರ ವಾತ್ಸಲ್ಯ ಸ್ವದೇಶಿ ದತ್ತು ಸ್ವಿಕಾರ ಕೇಂದ್ರಕ್ಕೆ ತಾತ್ಕಾಲಿಕ ರಕ್ಷಣೆ ಪೋಷಣೆಗಾಗಿ ಹಸ್ತಾಂತರ ಮಾಡಲಾಗಿದೆ. ಶಿಶುವಿಗೆ ಸಂಭಂದಪಟ್ಟ ಪೋಷಕರು ಇದ್ದರೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ. ಸರಕಾರಿ ಬಾಲಕರ ಬಾಲಮಂದಿರ, ರೋಟರಿ ಕ್ಲಬ್ ಬಿಲ್ಡಿಂಗ ಭಾಗ್ಯನಗರ ರಸ್ತೆ ಕೊಪ್ಪಳ. ದೂ: 08539-200755, 9632447589, 9448169227, 08539-225030 ವಿಳಾಸಕ್ಕೆ 60 ದಿನಗಳ ಒಳಗಾಗಿ ಬಂದು ಶಿಶುವನ್ನು ಪಡೆಯಬಹುದು.  ಪೋಷಕರು ಪತ್ತೆಯಾಗದಿದಲ್ಲಿ ಶಿಶುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅ.18 ರಂದು ಬಿಸಿಎಂ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ಉದ್ಘಾಟನೆ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಲಬುರ್ಗಾದ ಆಶ್ರಯ ಕಾಲೋನಿ ಮುಧೋಳ ರಸ್ತೆಯಲ್ಲಿರುವ ಬಿಸಿಎಂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಅ.18 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಬಸವರಾಜ ರಾಯರೆಡ್ಡಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಇಕ್ಬಾಲ್ ಅನ್ಸಾರಿ, ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ.ಸಾಮಾಜಿಕ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ತೋಟದ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಭಾಗೀರಥಿ ಮ.ಜೋಗಿನ, ಉಪಾಧ್ಯಕ್ಷೆ ಜಯಶ್ರೀ ಶ.ಅರಕೇರಿ, ತಾ.ಪಂ.ಅಧ್ಯಕ್ಷೆ ಮಹಾದೇವಿ ಕ.ಕಂಬಳಿ, ಉಪಾಧ್ಯಕ್ಷ ಶೇಖರಪ್ಪ ವಾರದ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಅನಿಲ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಎಸ್.ಜಿಯಾಉಲ್ಲಾ, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ ಸೇರಿದಂತೆ ಜಿ.ಪಂ., ಪಟ್ಟಣ ಪಂಚಾಯತಿ ಹಾಗೂ ತಾಲೂಕ ಪಂಚಾಯತಿ ಸರ್ವ ಸದಸ್ಯರು ಪಾಲ್ಗೊಳ್ಳುವರು ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ಅವರು ತಿಳಿಸಿದ್ದಾರೆ.

ಅ.20 ರಿಂದ ಗೋಂದಲಿ ಜನಾಂಗದ ರಾಜ್ಯ ಮಟ್ಟದ ವಿಚಾರ ಸಂಕಿರಣ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಗೋಂದಲಿ ಜನಾಂಗದ ರಾಜ್ಯ ಮಟ್ಟದ ವಿಚಾರ ಸಂಕೀರಣ ಕಾರ್ಯಕ್ರಮ ಅ. 20 ಮತ್ತು 21 ರಂದು ಎರಡು ದಿನಗಳ ಕಾಲ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ.
ವಿಚಾರ ಸಂಕೀರಣದ ಉದ್ಘಾಟನೆಯನ್ನು ಅ.20 ರಂದು ಬೆಳಿಗ್ಗೆ 10 ಗಂಟೆಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ನೆರವೇರಿಸಲಿದ್ದಾರೆ. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಬಿ.ಕೆ. ರವಿ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತವಾರಿ ಸಚಿವ ಶಿವರಾಜ ಎಸ್.ತಂಗಡಗಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಗೋಂದಲಿ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಪಾಚಂಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಪಾಲ್ಗೊಳ್ಳಲಿದ್ದಾರೆ.
ಅ. 20 ರಂದು ವಿವಿಧ ವಿಚಾರ ಗೋಷ್ಠಿಯಲ್ಲಿ ಡಾ.ಬಿ.ಆರ್.ಕುಮಾರ್, ಶಿವಾನಂದ ಪಾಚಂಗಿ, ಮಧುಕರ್ ಬೋಸ್ಲೆ, ಡಾ.ಜಕ್ಕ ಪಾರ್ಥಸಾರಥಿ.  ಅ. 21 ರಂದು ಗೋಪಾಲ ಪುಂಡಲೀಕ್ ಗೋಂದಲಿ, ಡಾ.ಬಿ.ಎಂ.ಜಯಶೀಲ, ನವೀನ ಮಂಡಗದ್ದೆ, ಎ.ಎಂ.ಮದರಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅ.21 ರ ಮಧ್ಯಾಹ್ನ 2.30 ಕ್ಕೆ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ರಂಗರಾಜು ವನದುರ್ಗ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ್, ಉಪಾಧ್ಯಕ್ಷೆ ಮುದ್ದವ್ವ ರಂಗಪ್ಪ ಕರಡಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಎಸ್.ಜೀಯಾಉಲ್ಲಾ, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದುಪುಡಿ, ಬಿಸಿಎಂ ಅಧಿಕಾರಿ ಬಿ.ಕಲ್ಲೇಶ್ ಪಾಲ್ಗೊಳ್ಳುವರು. ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಆರ್.ಅನುರಾಧಾ ಪಟೇಲ್ ಅಧ್ಯಕ್ಷತೆ ವಹಿಸುವರು.

ಅ.30 ರಂದು ತಾ.ಪಂ. ಸಾಮಾನ್ಯ ಸಭೆ


ಕೊಪ್ಪಳ,ಅ.17(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತಿಯ ಸಾಮಾನ್ಯ ಸಭೆ ಅ.30 ರಂದು ಬೆಳಿಗ್ಗೆ 11 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷರು ವಹಿಸಲಿದ್ದಾರೆ. ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. 

Tuesday, 14 October 2014

ಮೀಟರ್ ಅಳವಡಿಸುವ ರೈತರಿಗೆ ನಿರಂತರ ಜ್ಯೋತಿಯಡಿ 24 ತಾಸು ವಿದ್ಯುತ್- ಡಿ.ಕೆ. ಶಿವಕುಮಾರ್


ಕೊಪ್ಪಳ ಅ. 14 (ಕ.ವಾ) : ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸುವ ರೈತರಿಗೆ ನಿರಂತರ ಜ್ಯೋತಿಯಡಿ 24 ತಾಸು ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
     ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರೈಸ್ ಟೆಕ್ನಾಲಜಿ ಪಾರ್ಕ್ ಶಂಕುಸ್ಥಾಪನೆ, ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆಯೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಿಕೊಳ್ಳಲು ರೈತರಿಗೆ ಸೂಚನೆ ನೀಡಲಾಗಿದೆ.  ಸರ್ಕಾರ ಪ್ರತಿ ಯುನಿಟ್ ವಿದ್ಯುತ್‍ಗೆ 4. 35 ರೂ. ವೆಚ್ಚ ಮಾಡುತ್ತಿದ್ದು, ಮೀಟರ್ ಅಳವಡಿಸಿಕೊಳ್ಳುವ ರೈತರಿಗೆ ನಿರಂತರ ಜ್ಯೋತಿ ಯೋಜನೆಯಡಿ ಸಮರ್ಪಕ ವಿದ್ಯುತ್ ಪೂರೈಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸುತ್ತಿದ್ದು, ಈಗಾಗಲೆ ಮೊದಲ ಹಂತದ ಯೋಜನೆ ಜಾರಿಯಲ್ಲಿದೆ.  ಎರಡನೆ ಹಂತದಲ್ಲಿ ಇಡೀ ರಾಜ್ಯದ ಎಲ್ಲ ಪ್ರದೇಶಗಳಿಗೆ ನಿರಂತರ ಜ್ಯೋತಿ ಯೋಜನೆ ಜಾರಿಗೆ ಬರಲಿದೆ.  ಜಮೀನಿನಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದನೆ ಮಾಡಲು ಆಸಕ್ತಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿತ್ತು.  900 ರಿಂದ 1000 ಅರ್ಜಿಗಳು ಮಾತ್ರ ಬರುವ ನಿರೀಕ್ಷೆಯನ್ನಿಟ್ಟುಕೊಂಡು ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿತ್ತು.  ಆದರೆ ಇದೀಗ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, 20 ಸಾವಿರ ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದನೆಯಾಗುವಷ್ಟು ಅರ್ಜಿ ಸಲ್ಲಿಕೆಯಾಗಿವೆ.  ಆದರೆ ಸರ್ಕಾರ ಮೊದಲು ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಅರ್ಜಿಗಳನ್ನು ಪರಿಗಣಿಸಲು ನಿರ್ಧರಿಸಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
     ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿದರು.  ಕಾರ್ಮಿಕ ಸಚಿವ ಪರಮೇಶ್ವರ ನಾಯಕ್, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

5800 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಹರಿವು ಕಾಲುವೆಗೆ ಚಿಂತನೆ- ಸಿ.ಎಂ. ಸಿದ್ದರಾಮಯ್ಯ
ಕೊಪ್ಪಳ ಅ. 14 (ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ಸಮಸ್ಯೆ ಪರಿಹರಿಸಲು 5800 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಹರಿವು ಕಾಲುವೆ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಕನಕಗಿರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರೈಸ್ ಟೆಕ್ನಾಲಜಿ ಪಾರ್ಕ್ ಶಂಕುಸ್ಥಾಪನೆ, ಕೆರೆಗಳಿಗೆ ತುಂಗಭದ್ರಾ ನೀರು ತುಂಬಿಸುವ ಯೋಜನೆಯೂ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ತುಂಬುತ್ತಿರುವುದರಿಂದ, 150 ಟಿ.ಎಂ.ಸಿ. ಸಾಮಥ್ರ್ಯದ ನೀರಿನ ಸಂಗ್ರಹ ಮಟ್ಟ 100 ಟಿ.ಎಂ.ಸಿ.ಗೆ ಕುಸಿದಿದೆ. ನೀರಿನ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.   ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರವಾಹ ಹರಿವು ಕಾಲುವೆ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ.  ಯೋಜನೆಗೆ ಅಂದಾಜು 5800 ಕೋಟಿ ರೂ. ವೆಚ್ಚವಾಗಲಿದ್ದು, ಈ ಕುರಿತಂತೆ ಸರ್ಕಾರ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ.  ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು 5 ವರ್ಷಗಳಲ್ಲಿ ನೀರಾವರಿಗಾಗಿ 50 ರಿಂದ 60 ಸಾವಿರ ಕೋಟಿ ರೂ. ಗಳನ್ನು ವೆಚ್ಚಗೊಳಿಸಿ, ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು.  2013-14 ನೇ ಸಾಲಿನಲ್ಲಿ 10. 8 ಸಾವಿರ ಕೋಟಿ ರೂ. ಗಳನ್ನು ಸರ್ಕಾರ ನೀರಾವರಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದು, 2014-15 ರಲ್ಲಿ 11. 13 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡುವ ಗುರಿ ಹೊಂದಲಾಗಿದೆ.  ಸಿಂಗಟಾಲೂರು ಏತ ನೀರಾವರಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ವಿಳಂಬವಾಗಿದ್ದು, ಈ ಮೊದಲು ಯೋಜನೆಯಡಿ 1. 70 ಲಕ್ಷ ಎಕರೆ ಮಾತ್ರ ನೀರಾವರಿಗೊಳಿಸುವ ಯೋಜನೆ ರೂಪಿಸಲಾಗಿತ್ತು.  ಆದರೆ ಇದೀಗ ಸೂಕ್ಷ್ಮ ನೀರಾವರಿ ಯೋಜನೆಯನ್ನಾಗಿ ಪರಿವರ್ತಿಸಲಾಗಿದ್ದು, ಇದರಿಂದ 2. 65 ಲಕ್ಷ ಎಕರೆ ನೀರಾವರಿಗೆ ಒಳಪಡಲಿದೆ.  ಒಟ್ಟು 95 ಸಾವಿರ ಎಕರೆ ಹೆಚ್ಚುವರಿಯಾಗಿ ಅಚ್ಚುಕಟ್ಟು ವ್ಯಾಪ್ತಿಗೆ ಬರಲಿದೆ.  ಆದಷ್ಟು ತ್ವರಿತವಾಗಿ ಈ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.    ಜಿಲ್ಲೆಯ ಗಂಗಾವತಿ, ಯಲಬುರ್ಗಾ ಮತ್ತು ಕುಷ್ಟಗಿ ತಾಲುಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು, ದೇವಲಾಪುರ ಸೇರಿದಂತೆ ಒಟ್ಟು 08 ಕೆರೆಗಳನ್ನು ತುಂಗಭದ್ರಾ ನದಿಯಿಂದ 0. 281 ಟಿ.ಎಂ.ಸಿ. ನೀರು ಬಳಸಿ ಭರ್ತಿ ಮಾಡುವ 141 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದ್ದು, ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈರುಳ್ಳಿ, ಮೆಕ್ಕೆಜೋಳಕ್ಕೆ ಶೀಘ್ರ ಬೆಂಬಲ ಬೆಲೆ : ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆ ದರ ಕುಸಿತದಿಂದ ರೈತರು ಆತಂಕಕ್ಕೆ ಸಿಲುಕಿದ ಬಗ್ಗೆ ವರದಿಗಳು ಬಂದಿದ್ದು, ಈಗಾಗಲೆ ಈ ಕುರಿತು ಸರ್ಕಾರ ಕ್ರಮ ಕೈಗೊಂಡಿದೆ.  ಶೀಘ್ರದಲ್ಲೇ ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಮಾಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.  ಕಳೆದ ವರ್ಷ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 13 ಲಕ್ಷ ಟನ್ ಮೆಕ್ಕೆಜೋಳವನ್ನು ಸರ್ಕಾರ ಖರೀದಿಸಿತ್ತು. ಯಾವುದೇ ಕಾರಣಕ್ಕೂ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ರೈಸ್ ಟೆಕ್ನಾಲಜಿ ಪಾರ್ಕ್ : ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಹೆಚ್ಚಾಗಿ ಭತ್ತವನ್ನು ಬೆಳೆಯುತ್ತಿದ್ದು ಈ ಭಾಗ ಅನ್ನದ ಬಟ್ಟಲು ಎನಿಸಿಕೊಂಡಿದೆ.  ಭತ್ತ ಬೆಳೆಯುವ ರೈತರನ್ನು ಇನ್ನಷ್ಟು ಆರ್ಥಿಕವಾಗಿ ಸದೃಢಗೊಳಿಸಲು ರೈಸ್ ಟೆಕ್ನಾಲಜಿ ಪಾರ್ಕ್ ನೆರವಾಗಲಿದೆ.  ಭತ್ತದ ಉಪ ಉತ್ಪನ್ನಗಳ ತಯಾರಿಕೆಯಿಂದ ಭತ್ತಕ್ಕೆ ಮೌಲ್ಯವರ್ಧಿತ ಬೆಲೆ ದೊರೆತು, ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ಮಾರುಕಟ್ಟೆ ವ್ಯವಸ್ಥೆ ವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿದರು.  ಕಾರ್ಮಿಕ ಸಚಿವ ಪರಮೇಶ್ವರ ನಾಯಕ್, ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.  ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸ್ವಾಗತಿಸಿದರು.

Monday, 13 October 2014

ಅಭಿವೃದ್ಧಿ ಯೋಜನೆಗಳು : ಮುಖ್ಯಮಂತ್ರಿಗಳ ಸ್ವಾಗತಕ್ಕೆ ಕನಕಗಿರಿ ಸಜ್ಜು

ಕೊಪ್ಪಳ ಅ. 13 (ಕರ್ನಾಟಕ ವಾರ್ತೆ): ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ. 14 ರಂದು ಕನಕಗಿರಿಗೆ ಆಗಮಿಸಲಿದ್ದು, ಅವರ ಸ್ವಾಗತಕ್ಕೆ ಕನಕಗಿರಿಯಲ್ಲಿ ಸಕಲ ಸಿದ್ಧತೆಗಳನ್ನು ಜಿಲ್ಲಾ ಆಡಳಿತ ಕೈಗೊಂಡಿದೆ.
     ಭತ್ತದ ನಾಡು ಎನಿಸಿರುವ ಕೊಪ್ಪಳ ಜಿಲ್ಲೆಯಲ್ಲಿ, ಅದರಲ್ಲೂ ವಿಶೇಷವಾಗಿ ಕಾರಟಗಿಯಲ್ಲಿ ಈ ಭಾಗದ ಬಹುದಿನಗಳಿಂದ ಜಾರಿಯಾಗಲು ಕಾಯುತ್ತಿದ್ದ ರೈಸ್ ಟೆಕ್ನಾಲಜಿ ಪಾರ್ಕ್ ಯೋಜನೆಗೆ ಅ. 14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೀಡುವ ಮೂಲಕ ಅಧಿಕೃತವಾಗಿ ಚಾಲನೆ ದೊರೆಯಲಿದೆ.  ಜಿಲ್ಲೆಯಲ್ಲಿ ತುಂಗಭದ್ರೆ ಹರಿಯುತ್ತಿದ್ದರೂ, ಗಂಗಾವತಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸಲಾಗುತ್ತಿದೆ.  ಶುದ್ಧ ಕುಡಿಯುವ ನೀರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದರೂ, ನೀರಿನ ಕೊರತೆಯಿಂದ ಸಮಸ್ಯೆ ಹಾಗೆಯೇ ಉಳಿದಿದೆ.  ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತುಂಗಭದ್ರಾ ನದಿಯಿಂದ ತಾಲೂಕಿನ ದೇವಲಾಪುರ ಸೇರಿದಂತೆ ಒಟ್ಟು 08 ಕೆರೆಗಳನ್ನು ತುಂಬಿಸಿ, ಕುಡಿಯುವ ನೀರು ಒದಗಿಸುವಂತಹ ಮಹತ್ವಪೂರ್ಣ ಯೋಜನೆಗೂ ಸಹ ಮುಖ್ಯಮಂತ್ರಿಗಳು ಅ. 14 ರಂದು ಚಾಲನೆ ನೀಡಲಿದ್ದಾರೆ.  ಇದಲ್ಲದೆ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳು, ರಸ್ತೆಗಳ ಅಭಿವೃದ್ಧಿ, ಸೇತುವೆ ನಿರ್ಮಾಣ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುವರು.  ಕನಕಗಿರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವೆನಿಸಿರುವ ಹಲವಾರು ಮಹತ್ವಪೂರ್ಣ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಇಡೀ ಕನಕಗಿರಿ ಸಜ್ಜಾಗಿದ್ದು, ಗ್ರಾಮದ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.  ಅಲ್ಲದೆ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರುವ ಹಲವಾರು ಕಟೌಟ್‍ಗಳು ಗ್ರಾಮದಲ್ಲಿ ರಾರಾಜಿಸುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಿಗೆ ವಿಶೇಷ ಸ್ವಾಗತ ಕಮಾನುಗಳನ್ನು ಜೋಡಿಸಲಾಗಿದೆ.  ಸಂಪರ್ಕ ರಸ್ತೆಗಳನ್ನು ದುರಸ್ತಿಗೊಳಿಸುವ ಕಾರ್ಯವೂ ಭರದಿಂದ ಸಾಗಿದ್ದು, ಕನಕಗಿರಿಯ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.  ಪೆಂಡಾಲ್ ನಲ್ಲಿ ಕಾರ್ಯಕ್ರಮದ ವೇದಿಕೆ ಅಲಂಕಾರಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ವೇದಿಕೆಯ ಎರಡೂ ಬದಿಗಳಲ್ಲಿ ಬೃಹತ್ ಎಲ್‍ಸಿಡಿ ಪರದೆಯನ್ನು ಅಳವಡಿಸಲಾಗುತ್ತಿದೆ.  ಕಾರ್ಯಕ್ರಮದ ಸಿದ್ಧತೆ ಕುರಿತಂತೆ ವಿವರಗಳನ್ನು ನೀಡಿದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು, ಹತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು ಸಿದ್ಧತೆ ಕುರಿತು ತೃಪ್ತಿ ವ್ಯಕ್ತಪಡಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಕನಕಗಿರಿಯ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆಯ ಕಾರ್ಯದಲ್ಲಿ ತೊಡಗಿದ್ದರು.  ಮುಖ್ಯಮಂತ್ರಿಗಳ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ 3-ಡಿವೈಎಸ್‍ಪಿ, 10- ಸಿಪಿಐ, 33-ಪಿಎಸ್‍ಐ, 55-ಎಎಸ್‍ಐ, 110- ಹೆಡ್‍ಕಾನ್ಸ್‍ಟೆಬಲ್ಸ್, 235- ಪೊಲೀಸ್ ಪೇದೆಗಳು, 35- ಮಹಿಳಾ ಪೊಲೀಸ್ ಪೇದೆಗಳು, 210- ಗೃಹರಕ್ಷಕದಳ ಸಿಬ್ಬಂದಿ, 6- ಜಿಲ್ಲಾ ಮೀಸಲು ಪಡೆ, 02- ರಾಜ್ಯ ಮೀಸಲು ಪಡೆ ಹಾಗೂ 02- ಕ್ಷಿಪ್ರ ಪ್ರಹಾರ ದಳ ತಂಡವನ್ನು ರಚಿಸಲಾಗಿದೆ ಎಂಬುದಾಗಿ ವಿವರಿಸಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮುರಳಿಧರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತುಂಗಭದ್ರಾ ನದಿ ಪಾತ್ರದ ಜನರಿಗೆ ಎಚ್ಚರಿಕೆ


ಕೊಪ್ಪಳ ಅ. 13 (ಕ.ವಾ) : ತುಂಗಭದ್ರಾ ನದಿ ಪಾತ್ರದ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಕ್ರಸ್ಟ್ ಗೇಟ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುವ ಸಂಭವ ಇರುತ್ತದೆ.  ನದಿಯ ಕೆಳ ಭಾಗದಲ್ಲಿ ಹಾಗೂ ನದಿಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
     ತುಂಗಭದ್ರಾ ಜಲಾಶಯ ಸದ್ಯ ಗರಿಷ್ಠ ಮಟ್ಟ 1633 ಅಡಿ ತಲುಪಿದೆ.  ಸದ್ಯ 12023 ಕ್ಯೂಸೆಕ್ ಒಳ ಹರಿವು ಇದ್ದು, 11603 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ.  ತುಂಗಭದ್ರಾ ನದಿ ಪಾತ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ, ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಜಲಾಶಯದ ಕ್ರಸ್ಟ್ ಗೇಟ್ ಮೂಲಕ ಹೆಚ್ಚಿನ ನೀರು ಹೊರ ಬಿಡುವ ಸಂಭವ ಇರುತ್ತದೆ.  ಸಾರ್ವಜನಿಕರು ಸೂಕ್ತ ಮುಂಜಾಗ್ರತೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಅ. 13 (ಕ.ವಾ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅ. 14 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಹೊರಟು 10 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ (ಎಂ.ಎಸ್.ಪಿ.ಎಲ್. ವಿಮಾನ ನಿಲ್ದಾಣ) ಆಗಮಿಸುವರು.  ನಂತರ ರಸ್ತೆ ಮೂಲಕ 11-30 ಗಂಟೆಗೆ ಗಂಗಾವತಿ ತಾಲೂಕು ನವಲಿ ಗ್ರಾಮಕ್ಕೆ ಆಗಮಿಸಿ, ರೈಸ್ ಟೆಕ್ನಾಲಜಿ ಪಾರ್ಕ್‍ನ ಭೂಮಿ ಪೂಜೆ ನೆರವೇರಿಸುವರು.  ತರುವಾಯ ಮಧ್ಯಾಹ್ನ 12 ಗಂಟೆಗೆ ಕನಕಗಿರಿಗೆ ಆಗಮಿಸಿ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡುವರು.  12-15 ಗಂಟೆಗೆ ಕನಕಗಿರಿಯ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸುವರು.  12-30 ಗಂಟೆಗೆ ಇದೇ ಆವರಣದಲ್ಲಿ ಏರ್ಪಡಿಸಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮ ಅಲ್ಲದೆ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮುಖ್ಯಮಂತ್ರಿಗಳು ಅದೇ ದಿನ ಸಂಜೆ 4 ಗಂಟೆಗೆ ಗಿಣಿಗೇರಾ ಏರ್‍ಸ್ಟ್ರಿಪ್‍ಗೆ ಆಗಮಿಸಿ, ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಅ. 13 (ಕ.ವಾ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಅ. 14 ಮತ್ತು 15 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಅ. 14 ರಂದು ಬೆಳಿಗ್ಗೆ 11-30 ಗಂಟೆಗೆ ನವಲಿ ಹಾಗೂ 12 ಗಂಟೆಗೆ ಕನಕಗಿರಿಯಲ್ಲಿ ಮುಖ್ಯಮಂತ್ರಿಯವರ ಜೊತೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಸಚಿವರು ಅಂದು ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು.  ಅ. 15 ರಂದು ಬೆಳಿಗ್ಗೆ 11 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸಿ, ಇಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಪರಿವೀಕ್ಷಣೆ ನಡೆಸುವರು.  ಸಚಿವರು ಅದೇ ದಿನ ಸಂಜೆ 4 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಅ.14 ರಂದು ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ

 ಕೊಪ್ಪಳ ಅ.13(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಕಾರಟಗಿ ಹಾಗೂ ಇತರೆ 27 ಗ್ರಾಮಗಳು, ನವಲಿ ಹಾಗೂ 22 ಗ್ರಾಮಗಳ ಮತ್ತು ಕನಕಗಿರಿ ಹಾಗೂ 9 ಗ್ರಾಮಗಳ ಲೋಕಾರ್ಪಣೆ, 4 ಸುವರ್ಣ ಗ್ರಾಮೋದಯ ಕಾಮಗಾರಿಗಳ ಶಂಕುಸ್ಥಾಪನೆ, ಮರ್ಲಾನಹಳ್ಳಿ, ಸಿಂಗನಾಳ, ಯರಡೋಣ, ಚಿಕ್ಕಜಂತಕಲ್ ಗ್ರಾಮಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಸಮಾರಂಭ ಅ.14 ರಂದು ಮಧ್ಯಾಹ್ನ 12.00 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜರುಗಲಿದೆ.
    ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ.ಪಾಟೀಲ್, ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಇಂಧನ ಸಚಿವ ಡಿ.ಕೆ. ಶಿವಕುಮಾರ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ.ಸದಸ್ಯರಾದ ಸಮಗಂಡಿ ಗಂಗಣ್ಣ, ವೀರೇಶ್ ಸಾಲೋಣಿ, ಹೇಮಾವತಿ ಲಂಕೇಶ, ಜ್ಯೋತಿ ಎನ್.ಬಿಲ್ಗಾರ್, ವಿಜಯಲಕ್ಷ್ಮೀ ರಾಮಕೃಷ್ಣ, ಗಂಗಾವತಿ ತಾ.ಪಂ.ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಉಪಾಧ್ಯಕ್ಷ ಶರಣಪ್ಪ ಸಾಹುಕಾರ, ತಾ.ಪಂ.ಸದಸ್ಯ ಹೊನ್ನೂರುಸಾಬ್ ಬುಡನಸಾಬ್ ಬೆನ್ನೂರು, ಸರ್ವಮಂಗಳ ಬಿ.ಮೃತ್ಯುಂಜಯ, ಹಿರೇಬಸಪ್ಪ ಪರಮೇಶ್ವರಪ್ಪ ಸಜ್ಜನ್, ಗಂಗಮ್ಮ ಶಿವಯ್ಯಸ್ವಾಮಿ, ಜೂಲಿಯಪ್ಪ ಚಂದಪ್ಪ, ತಿಪ್ಪಣ್ಣ ಮುದುಕಪ್ಪ ಜೋಗಲದಿನ್ನಿ, ಹಂಪಮ್ಮ ಬಿ.ನಾರಾಯಣಪ್ಪ, ಶಾರದಾ ಹನುಮನಗೌಡ, ವೈ.ವಿಜಯಲಕ್ಷ್ಮೀ ನಾಗೇಶ್ವರಾವ್, ಕನಕಗಿರಿ ಗ್ರಾ.ಪಂ.ಅಧ್ಯಕ್ಷರಾದ ರಂಗಮ್ಮ ನಾಯಕ, ಉಪಾಧ್ಯಕ್ಷ ಪ್ರಕಾಶ ಹಾದಿಮನಿ, ಕಾರಟಗಿ ಗ್ರಾ.ಪಂ.ಅಧ್ಯಕ್ಷ ಬಿ.ಶರಣಯ್ಯಸ್ವಾಮಿ, ಉಪಾಧ್ಯಕ್ಷೆ ಹುಲಿಗೆಮ್ಮ ಛತ್ರಪ್ಪ, ನವಲಿ ಗ್ರಾ.ಪಂ.ಅಧ್ಯಕ್ಷ ಮರಿರಾಜು ಬಜಂತ್ರಿ, ಉಪಾಧ್ಯಕ್ಷೆ ಅಂಬಮ್ಮ ವೆಂಕಪ್ಪ ನರಾರಿ, ಮರ್ಲಾನಹಳ್ಳಿ ಗ್ರಾ.ಪಂ. ಅಧ್ಯಕ್ಷೆ  ಜ್ಯೋತಿ ರಾಘವೇಂದ್ರ, ಉಪಾಧ್ಯಕ್ಷ ಶ್ರೀಹರಿ, ಚಿಕ್ಕಜಂತಕಲ್ ಗ್ರಾ.ಪಂ.ಅಧ್ಯಕ್ಷೆ ದುರಗಮ್ಮ ಪರಶುರಾಮ,  ಉಪಾಧ್ಯಕ್ಷೆ ಸರಸ್ವತಿ ಮಂಜುನಾಥಸ್ವಾಮಿ, ಗುಂಡೂರು ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ ಯಮನಪ್ಪ, ಉಪಾಧ್ಯಕ್ಷ ಹನುಮಂತಪ್ಪ ಶಿವನಪ್ಪ, ಯರಡೋಣ ಗ್ರಾ.ಪಂ.ಅದ್ಯಕ್ಷ ಆದೆಪ್ಪ ಉಪ್ಪಾರ್, ಉಪಾಧ್ಯಕ್ಷೆ ಅಯ್ಯಮ್ಮ ಸಣ್ಣಕನಕಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಅ.14 ರಂದು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ

ಕೊಪ್ಪಳ ಅ.13(ಕರ್ನಾಟಕ ವಾರ್ತೆ): ಜಲಸಂಪನ್ಮೂಲ ಇಲಾಖೆಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದ ದೇವಲಾಪುರ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಅ.14 ರಂದು ಮಧ್ಯಾಹ್ನ 12 ಗಂಟೆಗೆ ಕನಕಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ.ಪಾಟೀಲ್, ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಇಂಧನ ಸಚಿವ ಡಿ.ಕೆ. ಶಿವಕುಮಾರ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಜಿ.ಪಂ.ಅಧ್ಯಕ್ಷರಾದ ಅಮರೇಶ ಕುಳಗಿ, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ಕೆ.ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ, ಜಿ.ಪಂ.ಉಪಾಧ್ಯಕ್ಷರಾದ ವಿನಯಕುಮಾರ ಮೇಲಿನಮನಿ, ಗಂಗಾವತಿ ತಾ.ಪಂ.ಅಧ್ಯಕ್ಷರಾದ ಈರಮ್ಮ ಮುದಿಯಪ್ಪ, ಕಾರಟಗಿ ಎಪಿಎಂಸಿ ಅಧ್ಯಕ್ಷರಾದ ಶಿವರಡ್ಡಿ ನಾಯಕ, ಕನಕಗಿರಿ ಗ್ರಾ.ಪಂ.ಅಧ್ಯಕ್ಷರಾದ ರಂಗಮ್ಮ ನಾಯಕ, ನಗರಾಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.