Tuesday, 30 September 2014

ಗಾಂಧಿ ಜಯಂತಿ : ಅ. 02 ರಂದು ಮದ್ಯ, ಮಾಂಸ ನಿಷೇಧ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿಜೀಯವರ ಜನ್ಮದಿನಾಚರಣೆಯನ್ನು ಅ.02 ರಂದು ಆಚರಿಸುವ ಹಿನ್ನೆಲೆಯಲ್ಲಿ ಅವರ ತತ್ವಗಳನ್ನು ಪಾಲಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಪ್ರಾಣಿಬಲಿ ಹಾಗೂ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆಯನ್ವಯ ಅ.02 ರ ಬೆಳಿಗ್ಗೆ 6 ಗಂಟೆಯಿಂದ ಅ.03 ರ ಬೆಳಿಗ್ಗೆ 6 ರವರೆಗೆ ಜಿಲ್ಲೆಯ ಎಲ್ಲಾ ವಧಾಗಾರಗಳಲ್ಲಿ (ಕಸಾಯಿಖಾನೆ) ಮತ್ತು ಮಾಂಸ ಮಾರಾಟ ಸ್ಥಳಗಳಲ್ಲಿ ಕರ್ನಾಟಕ ಪ್ರಿವೆನ್ಷೆನ್ ಆಪ್ ಆನಿಮಲ್ ಆ್ಯಂಡ್ ಬರ್ಡ್ ಸ್ಯಾಕ್ರಿಫೈಸ್ ಆ್ಯಕ್ಟ್ ಪ್ರಕಾರ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ.  ಅಲ್ಲದೆ  ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 ರ ಪ್ರಕಾರ ಜಿಲ್ಲೆಯ ಎಲ್ಲಾ ವೈನ್‍ಶಾಪ್, ಬಾರ್‍ಗಳು ಹಾಗೂ ಸಗಟು ಮದ್ಯಮಾರಾಟ ಹಾಗೂ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿದೆ.
ಈ ಸಂಬಂಧವಾಗಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಾಗೂ ಅಬಕಾರಿ ಉಪ ಆಯುಕ್ತರಿಗೆ ಆದೇಶಿಸಲಾಗಿದ್ದು, ಆದೇಶವನ್ನು ಜಾರಿಗೆ ತರುವಲ್ಲಿ ವಿಫಲರಾದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಗಾಂಧೀಜಿ ಜಯಂತಿ : ಅಳವಂಡಿಯಲ್ಲಿ ವಿಚಾರಸಂಕಿರಣ


ಕೊಪ್ಪಳ ಸೆ. 30 (ಕ.ವಾ) : ಮಹಾತ್ಮಾಗಾಂಧೀಜಿಯವರ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅ. 02 ರಂದು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿಚಾರಸಂಕಿರಣ, ಶ್ರಮದಾನ, ಸ್ವಚ್ಛತಾ ಜಾಗೃತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
     ಅಂದು ಬೆಳಿಗ್ಗೆ 8-30 ಗಂಟೆಗೆ ತಾಲೂಕಿನ ಅಳವಂಡಿಯಲ್ಲಿ ಗಾಂಧೀಜಿ ಜಯಂತಿ ಹಾಗೂ ರಾಷ್ಟ್ರೀಯ ಸ್ವಚ್ಚತಾ ಜಾಗೃತಿ ಸಪ್ತಾಹದ ಅಂಗವಾಗಿ ಶ್ರೀ ಸಿದ್ದೇಶ್ವರ ಸಂಯುಕ್ತ ಪ.ಪೂ. ಕಾಲೇಜು ಹಾಗೂ ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಶ್ರಮದಾನ ಕಾರ್ಯಕ್ರಮ ಹಾಗೂ ಸ್ವಚ್ಛತಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 10 ಗಂಟೆಗೆ ಕಾಲೇಜು ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳು ವಿಷಯ ಕುರಿತಂತೆ ವಿಚಾರಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಹಾತ್ಮಾಗಾಂಧೀಜಿಯವರ ವಿಚಾರಧಾರೆಗಳ ಕುರಿತು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುವರು.   ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ಕರಡಿ, ತಾ.ಪಂ. ಉಪಾಧ್ಯಕ್ಷೆ ಮುದ್ದಮ್ಮ ರಂಗಪ್ಪ ಕರಡಿ, ಜಿ.ಪಂ. ಸದಸ್ಯ ನಾಗನಗೌಡ ಪಾಟೀಲ್, ರೇವಣಸಿದ್ದೇಶ್ವರ ಸ್ವಾಮಿಗಳು ಕಟ್ಟಿಮನಿ ಹಿರೇಮಠ, ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಅಧ್ಯಕ್ಷ ಭುಜಂಗಸ್ವಾಮಿಗಳು ಇನಾಂದಾರ್, ಗ್ರಾ.ಪಂ. ಉಪಾಧ್ಯಕ್ಷೆ ಹನುಮವ್ವ ವಡ್ಡರ್ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು, ಗಣ್ಯರು ಪಾಲ್ಗೊಳ್ಳುವರು.  ಮಹಾತ್ಮಾಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಇದೇ ಸಂದರ್ಭದಲ್ಲಿ ವಿಡಿಯೋ ಚಿತ್ರ ಪ್ರದರ್ಶಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.   

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚನೆ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧೀಜಿಯವರ ಜಯಂತಿ ಕಾರ್ಯಕ್ರಮವನ್ನು ಅ. 02 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ಅ.01 ರಂದು ಕೊಪ್ಪಳ ತಾಲೂಕ ಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ ಉದ್ಘಾಟನೆ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ದೈಹಿಕ ಶಿಕ್ಷಕರ ಸಂಘದ ಇವರ ಸಂಯುಕ್ತ ಆಶ್ರಯದಲ್ಲಿ ಅ.01 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಕೊಪ್ಪಳ ತಾಲೂಕು ಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ.
ಕ್ರೀಡಾಕೂಟಗಳ ಉದ್ಘಾಟನೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೆರವೇರಿಸುವರು. ಸಂಸದ ಸಂಗಣ್ಣ ಕರಡಿ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ಕೊಪ್ಪಳ ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ವಿ.ಮಾಲಿ ಪಾಟೀಲ್ ಅವರು  ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಜಿ.ಪಂ.ಸದಸ್ಯರಾದ ಟಿ.ಜನಾರ್ಧನ ಹುಲಿಗಿ, ಡಾ|| ಸೀತಾ ಗೂಳಪ್ಪ ಹಲಿಗೇರಿ, ನಾಗನಗೌಡ ಮಾಲಿ ಪಾಟೀಲ್, ಕಸ್ತೂರೆಮ್ಮ ಬಿ.ಪಾಟೀಲ್, ಭಾಗೀರಥಿ ಶಂಕರಗೌಡ ಪಾಟೀಲ್, ವನಿತಾ ಗಡಾದ್, ಕೆ.ರಮೇಶ ಹಿಟ್ನಾಳ, ನಗರಸಭೆ ಉಪಾಧ್ಯಕ್ಷ ಅಮ್ಜದ ಪಟೇಲ್, ತಾ.ಪಂ.ಉಪಾಧ್ಯಕ್ಷೆ ಮುದ್ದವ್ವ ರಂಗಪ್ಪ ಕರಡಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರಾದ ವೈ.ಸುದರ್ಶನ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಎನ್.ಎಸ್.ಪಾಟೀಲ್ ಅವರು ತಿಳಿಸಿದ್ದಾರೆ.

ಗಾಂಧಿ ಜಯಂತಿ : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಮಹಾತ್ಮಾಗಾಂಧೀಜಿಯವರ ಜಯಂತಿ ಆಚರಣೆ ಅಂಗವಾಗಿ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ತಾಲೂಕಿನ ಅಳವಂಡಿಯ ಶ್ರೀ ಸಿದ್ದೇಶ್ವರ ಸಂಯುಕ್ತ ಪ.ಪೂ. ಕಾಲೇಜಿನ ಸಹಯೋಗದೊಂದಿಗೆ  ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು.
     ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳಾದ ದೇವಪ್ಪ ಹರಿಜನ (ಪ್ರಥಮ),  ಮುತ್ತಪ್ಪ ಪುರ್ತಗೇರಿ (ದ್ವಿತೀಯ) ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿ ನಾಗರಾಜ ತೃತಿಯ ಸ್ಥಾನ ಪಡೆದಿದ್ದಾರೆ.  ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಅನಿಲ್ ಡಾವು (ಪ್ರಥಮ), ಕೆ.ರವಿಕುಮಾರ (ದ್ವಿತಿಯ), ಮಲ್ಲಯ್ಯ ಮೇಗಳಮಠ (ತೃತಿಯ) ಸ್ಥಾನ ಪಡೆದಿದ್ದಾರೆ.  ಕಾಲೇಜಿನ ಉಪನ್ಯಾಸಕರುಗಳಾದ ಎಂ.ಎಸ್. ಹೊಟ್ಟಿನ್, ಪ್ರಾಚಾರ್ಯ ವಿ.ಸಿ. ಬೆನ್ನಳ್ಳಿ, ಹೆಚ್. ಮಹಾನಂದಿ, ಜಿ. ಕುರಡಗಿ, ಕೊಟ್ರೇಶ್ ಅವರು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಅ.02 ರಂದು ಗಾಂಧೀಜಿ ಜಯಂತಿ ಅಂಗವಾಗಿ ಅಳವಂಡಿಯಲ್ಲಿ ನಡೆಸಲಾಗುವ  ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.

ಅ.01 ರಂದು ಹಿರಿಯ ನಾಗರಿಕರ ದಿನಾಚರಣೆ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಜಿಲ್ಲಾ ಪೊಲೀಸ್ ಕಾರ್ಯಾಲಯ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವಾ ನಿರತ, ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಅ.01 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ತೋಟದ್, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ವಿದ್ಯಾಶ್ರೀ ಗಜೇಂದ್ರಗಡ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ಹೆರೂರು, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಮಾಲಿಪಾಟೀಲ, ನಗರಸಭೆ ಅಧ್ಯಕ್ಷೆ ಲತಾ ಸಂಡೂರು, ತಾ.ಪಂ. ಉಪಾಧ್ಯಕ್ಷೆ ಮುತ್ತವ್ವ ಕರಡಿ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಪಾಲ್ಗೊಳ್ಳುವರು.  ಹಿರಿಯ ನ್ಯಾಯವಾದಿ ಕಾಳಮ್ಮ ಐ.ಪತ್ತಾರ ಅವರು ವಿಶೇಷ ಉಪನ್ಯಾಸ ನೀಡುವರು ಎಂದು ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಡಿ.ಎನ್.ಮೂಲಿಮನಿ ಅವರು ತಿಳಿಸಿದ್ದಾರೆ.

ಒಳನಾಡು ಮೀನುಗಾರಿಕೆ ತರಬೇತಿ : ಮಹಿಳೆಯರಿಂದ ಅರ್ಜಿ ಆಹ್ವಾನ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯು ಒಳನಾಡು ಮೀನುಗಾರಿಕೆ ಕುರಿತು ಆಸಕ್ತ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿಯು ಶಿವಮೊಗ್ಗ ಜಿಲ್ಲೆ ಬಿ.ಆರ್. ಪ್ರಾಜೆಕ್ಟ್‍ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಅ.27 ರಿಂದ  ಪ್ರಾರಂಭವಾಗಲಿದ್ದು, ತರಬೇತಿಯು 01 ತಿಂಗಳ ಅವಧಿಯಾಗಿರುತ್ತದೆ.  ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ, ಬಲೆಗಳನ್ನು ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನುಮರಿ ಉತ್ಪಾದನೆ, ಪಾಲನೆ ಇತ್ತೀಚಿನ ಬೆಳವಣಿಗೆಗಳು ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. 
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ. (ಪಾಸ್ ಅಥವಾ ಫೇಲ್) ಓದಿರಬೇಕು,  ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರರ ಸಹಕಾರ ಸಂಘದ ಸದಸ್ಯರು, ಇತ್ಯಾದಿ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಲಾಗುವುದು,  ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ರೂ. 2000 ಗಳ ಶಿಷ್ಯವೇತನ ನೀಡಲಾಗುವುದು, ಅಲ್ಲದೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ನಿಗದಿತ ಅರ್ಜಿಯನ್ನು ಸ್ವವಿಳಾಸದ ಲಕೋಟೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ ಇವರಿಗೆ ಕಳುಹಿಸಿ ಪಡೆಯಬಹುದು.  ಭರ್ತಿ ಮಾಡಿದ ಅರ್ಜಿಯನ್ನು ಅ.22 ರ ಒಳಗಾಗಿ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ವಿವರಗಳನ್ನು ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗಿಣಗೇರಾ : ರಾಷ್ಟ್ರೀಯ ಸ್ವಚ್ಚತಾ ಜಾಗೃತಿ ಸಪ್ತಾಹ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಿರ್ಮಲ ಭಾರತ ಅಭಿಯಾನ ಹಾಗೂ ಗ್ರಾಮ ಪಂಚಾಯತ ಗಿಣಿಗೇರ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಗಿಣಿಗೇರಾದಲ್ಲಿ ಆಯೋಜಿಸಲಾಯಿತು.
   ಗ್ರಾಮ ಪಂಚಾಯತ ಸದಸ್ಯ ಮಾರುತೆಪ್ಪ ಹಲಗೇರಿಯವರು ಮಾತನಾಡಿ, ಗ್ರಾಮ ನೈರ್ಮಲ್ಯವಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಸ್ವಚ್ಛವಾಗಿಟ್ಟುಕೊಳ್ಳಬೇಕು, ಪ್ರತಿಯೊಂದು ಕುಟುಂಬ ಮನೆ ಸ್ವಚ್ಛವಾಗಿದ್ದರೆ ಗ್ರಾಮ ಸ್ವಚ್ಛವಾಗಿರುತ್ತದೆ. ಪ್ರತಿಯೊಂದು ಗ್ರಾಮ ಸ್ವಚ್ಛವಾಗಿದ್ದರೆ ಆಗ ದೇಶವೇ ಸ್ವಚ್ಛವಾಗುತ್ತದೆ. ಅಂದಾಗ ಮಾತ್ರ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ಇನ್ನೋರ್ವ  ಸದಸ್ಯ ಲಕ್ಷ್ಮಣ ಡೊಳ್ಳಿನ್ ಮಾತನಾಡಿ, ಪ್ರತೀ ಗ್ರಾಮದ ಸದಸ್ಯರು ಆಯಾ ವಾರ್ಡಿನ ಜವಾಬ್ದಾರಿ ಹೊತ್ತು ಆಯಾ ವಾರ್ಡಿನ ಕುಟುಂಬದ ಸ್ವಚ್ಛತೆ ಕಾಳಜಿ ವಹಿಸಿದಲ್ಲಿ ಗ್ರಾಮ ನೈರ್ಮಲ್ಯ ಹೊಂದಲು ಸಾಧ್ಯ ಎಂದು ಹೇಳಿದರು. ಸದಸ್ಯರಾದ ಶ್ರೀನೂರಸಾಬ, ಯಮನೂರಪ್ಪ ಕಟಗಿ, ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ವೆಂಕಟೇಶ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗೌಸುಸಾಬ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಯಂಕಪ್ಪ ಇಂದ್ರಿಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸರ್ವ ಸದಸ್ಯರು, ಸಿಬ್ಬಂಧಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂಧಿಗಳು, ಊರಿನ ಗುರು ಹಿರಿಯರು ಭಾಗವಹಿಸಿದ್ದರು. ನಾಗರಾಜ ಹಲಗೇರಿ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ : ಸೂಚನೆ


ಕೊಪ್ಪಳ ಸೆ.30(ಕರ್ನಾಟಕ ವಾರ್ತೆ): ಶಾಂತಿ ಸಂದೇಶ ಮಕ್ಕಳ ಹಕ್ಕುಗಳ ಸಂಪನ್ಮೂಲ ಮತ್ತು ಅಭಿವೃದ್ಧಿ ಕೇಂದ್ರವು ಭಾರತದಲ್ಲಿ ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ  CHILD RIGHTS FOCUS 2014 ಎಂಬ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ವೃತ್ತಿಪರ ಛಾಯಾಗ್ರಹಕರು ಮತ್ತು ವಿದ್ಯಾರ್ಥಿ ಬಳಗದವರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಭಾಗಿಯಾಗಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
  ಸ್ಪರ್ಧೆಗೆ ಕಳುಹಿಸುವ ಫೋಟೊಗಳು ಭಾರತದಲ್ಲಿ ಮಕ್ಕಳ ಹಕ್ಕುಗಳ ಅನುಷ್ಠಾನದ ಧನಾತ್ಮಕ ಅಥವಾ ಋಣಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು, ಸ್ಪರ್ಧಿಗಳನ್ನು ವೃತ್ತಿಪರ ಛಾಯಾಗ್ರಹಕರು ಮತ್ತು ಸಾಮಾನ್ಯರು ಎಂಬ ಎರಡು ಭಾಗಗಳಾಗಿ ಗುರುತಿಸಿದ್ದು ಸಾಮಾನ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಇತರೆ ಆಸಕ್ತರು ಭಾಗವಹಿಸಬಹುದು. ವೃತ್ತಿಪರ ಛಾಯಾಗ್ರಾಹಕರು ವೃತ್ತಿಪರ ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದು. ಕಳುಹಿಸುವ ಫೋಟೊಗಳು  ಕನಿಷ್ಟ 10/12 ಅಳತೆಯದ್ದಾಗಿರಬೇಕು ಅಥವಾ ಕನಿಷ್ಟ  640 pixels ಹತ್ತಿರದಿಂದ ಮತ್ತು ದೂರದಿಂದ 2000  pixels ಮೀರಿರಬಾರದು. ಫೋಟೊಗಳು  JPEG format  ನಲ್ಲಿ ಇರಬೇಕು, ಒಬ್ಬ ಸ್ಪರ್ಧಿ ಗರಿಷ್ಠ 2 ಫೋಟೊಗಳನ್ನು ಅ.30 ರೊಳಗೆ  shanthidhamcsp@gmail.com ಗೆ ಕಳುಹಿಸಬೇಕು. ಕಳುಹಿಸುವ ಪ್ರತಿ ಫೋಟೊಗೆ ಒಂದು ಅರ್ಥಪೂರ್ಣ ಶಿರ್ಷಿಕೆ/ವಿವರಣೆ ನೀಡಬೇಕು. ತಮ್ಮ ಸ್ವ ವಿವರ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿವರವನ್ನು ಫೋಟೊದೊಂದಿಗೆ ಲಗತ್ತಿಸಬೇಕು.  ಸ್ಪರ್ಧಿಸುವ ವಿಭಾಗವನ್ನು ನಮೂದಿಸಬೇಕು, ಫೋಟೊಗಳ ಮೇಲೆ ಯಾವುದೇ ರೀತಿಯ ಲಾಂಛನ, ಹಕ್ಕುಗಳನ್ನು ಕಾಯ್ದಿರಿಸಿರುವುದು, ಬಾರ್ಡರ್, ಅಥವಾ ಯಾವುದೇ ರೆಫರೆನ್ಸ ಇರಬಾರದು, ಚಿತ್ರದ ಸ್ವಾಭಾವಿಕತೆ, ಮೂಲ ಮತ್ತು ನೈಜತೆಗೆ ದಕ್ಕೆ ಆಗದಂತೆ Basic editing, including colour enhancement, use of filters and cropping  ಬಳಸಬಹುದು, ಫೋಟೊಗಳು ಸ್ವಾಭಾವಿಕ ಮತ್ತು ನಿಜ ಜೀವನದಿಂದ ಸ್ಪರ್ಧಿಯೇ ಚಿತ್ರಿಸಿದಂತಹವು ಆಗಿದ್ದು ಭಾರತೀಯವಾಗಿರಬೇಕು. ಯಾವುದೇ ರೀತಿಯ ಹಕ್ಕು ಕಾಯ್ದಿರಿಸಿದ ಅಂಶಗಳು ಬಳಕೆಯಾಗಿದ್ದಲ್ಲಿ ಅಂಥಹ ಚಿತ್ರಗಳನ್ನು ತಿರಸ್ಕರಿಸಲಾಗುವುದು.
  ಸ್ಪರ್ಧೆಗೆ ಬಂದಂತಹ ಎಲ್ಲಾ ಫೋಟೊಗಳನ್ನು ಮೌಲ್ಯಮಾಪನ ಸಮಿತಿಯು ನವಂಬರ 5ರಂದು ವಿಶ್ಲೇಷಿಸಲಿದೆ. ಪ್ರದರ್ಶನ ಯೋಗ್ಯ ಫೋಟೊಗಳನ್ನು ನವಂಬರ 15 ರಂದು ನಡೆಯುವ ಮಕ್ಕಳ ಹಕ್ಕುಗಳ 25 ಸಂವತ್ಸರಗಳು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಗುವುದು. ಪ್ರತಿ ವಿಭಾಗದಲ್ಲಿನ ಅತ್ಯುತ್ತಮ ಎರಡು ಫೋಟೊಗಳಿಗೆ  Child Rights Focus – Photography State Award 2014 ಮತ್ತು  ನಗದು ಬಹುಮಾನ ವೃತ್ತಿಪರ ವಿಭಾಗ ಪ್ರಥಮ ರೂ. 15,000/-, ವೃತ್ತಿಪರ ವಿಭಾಗ ದ್ವಿತಿಯ ರೂ. 10,000/-, ಸಾಮಾನ್ಯ ವಿಭಾಗ ಪ್ರಥಮ ರೂ 10,000/-, ಸಾಮಾನ್ಯ ವಿಭಾಗ  ದ್ವಿತಿಯ ರೂ 7,000/- ಬಹುಮಾನಗಳನ್ನು ನವಂಬರ 15 ರಂದು ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಛಾಯಚಿತ್ರವನ್ನು  (soft copy) shanthidhamcsp@gmail.com ಗೆ ಕಳುಹಿಸಿ ವಿಳಾಸ:  Shanthi Sandesha Trust, Resource and Development Centre, Behind Rosario Cathedral, Bolar, Mangalore – 575001, In case of doubts please contact 0824/2420111 or 9449606258,  7829449740 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Monday, 29 September 2014

ತಾಯಿ-ಮಗು ಕಾಣೆ : ಪತ್ತೆಗೆ ಸಹಕರಿಸಲು ಸೂಚನೆಕೊಪ್ಪಳ ಸೆ.29(ಕರ್ನಾಟಕ ವಾರ್ತೆ): ಕೊಪ್ಪಳದ ಸಿಡ್ ಉಜ್ವಲ ಸಂಸ್ಥೆ ಇಲ್ಲಿ ದಾಖಲಾಗಿದ್ದ ಕುಷ್ಟಗಿ ತಾಲೂಕಿನ ಬೋದೂರತಾಂಡಾದ ಮಹಿಳೆ ಲಕ್ಷ್ಮಿ ತನ್ನ ಗಂಡು ಮಗುವಿನ ಜೊತೆ ಸೆ. 28 ರಂದು ಬೆಳಿಗ್ಗೆ 11 ಗಂಟೆಯಿಂದ ನಾಪತ್ತೆಯಾಗಿದ್ದು, ಮಹಿಳೆ ಮತ್ತು ಮಗುವಿನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿಕೊಂಡಿದ್ದಾರೆ.
     ಬೋದೂರತಾಂಡಾದ 24 ವರ್ಷ ವಯಸ್ಸಿನ ಲಕ್ಷ್ಮಿ ತಂದೆ ಶಂಕರಪ್ಪ ರಾಠೋಡ್ ಎಂಬ ಮಹಿಳೆಯನ್ನು ಕಳೆದ ಕೆಲ ದಿನಗಳ ಹಿಂದೆ ಕೊಪ್ಪಳದ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸಲಾಗಿತ್ತು.  ನಂತರ ಮಹಿಳೆಯನ್ನು ಕೊಪ್ಪಳದ ಸ್ವಯಂ ಸೇವಾ ಸಂಸ್ಥೆಯಾದ ಸಿಡ್ ಉಜ್ವಲ ಸಂಸ್ಥೆಗೆ ಸೆ. 27 ರಂದು ದಾಖಲಿಸಲಾಯಿತು.  ಆದರೆ ಆಕೆ ತನ್ನ 01 ವರ್ಷ ವಯಸ್ಸಿನ ಗಂಡುಮಗು ಹನುಮಂತ @ ಖಾಜಾಹುಸೇನ್ ಜೊತೆ ಸೆ. 28 ರಂದು ಬೆಳಿಗ್ಗೆ 11 ಗಂಟೆಗೆ ಸಿಡ್ ಉಜ್ವಲ ಸಂಸ್ಥೆಯಿಂದ ನಾಪತ್ತೆಯಾಗಿರುತ್ತಾಳೆ ಎಂಬುದಾಗಿ ಕೊಪ್ಪಳ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾಣೆಯಾದ ಮಹಿಳೆ ಹೆಸರು ಹಾಗೂ ಚಹರೆ ಇಂತಿದೆ.  ಲಕ್ಷ್ಮಿ ತಂದೆ ಶಂಕರಪ್ಪ ರಾಠೋಡ್, ವಯಸ್ಸು 24, ಲಂಬಾಣಿ ಜಾತಿ, ಊರು, ಕುಷ್ಟಗಿ ತಾಲೂಕಿನ ಬೋದೂರತಾಂಡ.  ಸುಮಾರು 4 ಅಡಿ 6 ಇಂಚು ಎತ್ತರ, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ನಾಪತ್ತೆಯಾದಾಗ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು, ಕನ್ನಡ ಹಾಗೂ ಲಂಬಾಣಿ ಭಾಷೆ ಮಾತನಾಡುತ್ತಾಳೆ.  ಕಾಣೆಯಾದ ಮಗುವಿನ ಚಹರೆ ಇಂತಿದೆ.  ಎತ್ತರ 1 ಅಡಿ, ದಪ್ಪನೆಯ ಮೈಕಟ್ಟು, ದುಂಡು ಮುಖ, ಕಪ್ಪು ಮೈಬಣ್ಣ, ಬಿಳಿ ಮತ್ತು ಚಾಕಲೇಟ್ ಬಣ್ಣದ ಕಸಿ ಶರ್ಟ್ ಧರಿಸಲಾಗಿದೆ.  ಈ ಚಹರೆಯುಳ್ಳ ಮಹಿಳೆ ಮತ್ತು ಗಂಡು ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳದ ಕಂಟ್ರೋಲ್ ರೂಂ 08539-230100, 230222, ನಗರ ಪೊಲೀಸ್ ಠಾಣೆ- 220333 ಅಥವಾ 9480803745 ಕ್ಕೆ ಸಂಪರ್ಕಿಸಿ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.


ಇರಕಲ್‍ಗಡ : ಸ್ವಚ್ಚತೆಯ ಅರಿವು ಮೂಡಿಸಲು ಗವಿಶ್ರೀಗಳ ಪಾದಯಾತ್ರೆ

ಕೊಪ್ಪಳ ಸೆ.29(ಕರ್ನಾಟಕ ವಾರ್ತೆ): ರಾಷ್ಟ್ರೀಯ ಸ್ವಚ್ಚತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಲ್ಲಿ ಸ್ವಚ್ಚತೆಯ ಅರಿವು ಮೂಡಿಸಲು ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮ ತಾಲೂಕಿನ ಇರಕಲ್ಲಗಡಾ ಗ್ರಾಮದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ.ಡಿ.ಉದಪುಡಿ  ಅವರು, ಪ್ರತಿಯೊಬ್ಬರು ಸ್ವಚ್ಚತೆಯನ್ನು ಕೈಗೊಂಡು ಮನೆ ಮತ್ತು ಮನಸ್ಸನ್ನು ಎರಡನ್ನು ಸ್ವಚ್ಚಗೊಳಿಸಬೇಕು. ಪ್ರತಿಯೊಬ್ಬರು ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪಣ ತೋಡಬೇಕೆಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಕರೆ ನೀಡಿದರು. ಪ್ರಸಕ್ತದಲ್ಲಿ ಮಹಿಳೆಯರಿಗೆ ಮತ್ತು ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ಅಗತ್ಯವಿದೆ. ಶೌಚಾಲಯ ನಿರ್ಮಿಸಿಕೊಳ್ಳುವುದರಿಂದ ಅನೇಕ ಮಾರಕ ರೋಗಗಳನ್ನು ತಡೆಯಬಹುದು. ಸಂಘದ ಸದಸ್ಯರು ತಮ್ಮ ಮನೆಯ ಹತ್ತಿರದವರಿಗೆ ಶೌಚಾಲಯ ಬಗ್ಗೆ ಅರಿವು ಮೂಡಿಸಿ ಅವರಿಗೂ ಸಹ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಣೆ ಮಾಡುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಮ್ಮ ಶೇಖರಪ್ಪ ಲಮಾಣಿ, ಉದ್ಯೋಗಖಾತ್ರಿ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ವಿಷಯ ನಿರ್ವಾಹಕ ಸಂಗಪ್ಪ ಕೊಪ್ಪದ, ರೂಪಸೇನ ಚವ್ಹಾಣ್, ಜಿಲ್ಲಾ ಸಂಯೋಜಕ ರಾಮಣ್ಣ ಬಂಡಿಹಾಳ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಲಲಿತಾ, ಮುಂತಾದವರು ಪಾಲ್ಗೊಂಡಿದ್ದರು.

ರಾಜೂರ : ಸ್ವಚ್ಚತಾ ಜಾಗೃತಿಗೆ ಪಂಜಿನ ಮೆರವಣಿಗೆ


ಕೊಪ್ಪಳ ಸೆ. 29 (ಕ.ವಾ): ರಾಷ್ಟ್ರೀಯ ಸ್ವಚ್ಚತಾ ಜಾಗೃತಿ ಸಪ್ತಾಹದ ಅಂಗವಾಗಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಯಲಬುರ್ಗಾ ತಾಲೂಕಿನ ರಾಜೂರ ಗ್ರಾಮದಲ್ಲಿ, ಪಂಜಿನ ಮೆರವಣಿಗೆ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
     ಗ್ರಾಮದ ವಿವಿಧ ಮಹಿಳಾ ಸಂಘಟನೆಗಳ ಮೂಲಕ ಊರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮನೆಗೊಂದು ಶೌಚಾಲಯ-ನೆಮ್ಮದಿಯ ಆಲಯ, ಮೂಗುತಿ ಇದ್ದ ಮೂಗು ಚೆಂದ-ಮನೆಗೆ ಶೌಚಾಲಯ ಚೆಂದ, ಎಂಬ ಸಂದೇಶಗಳನ್ನು ಕೂಗುತ್ತಾ ಶೌಚಾಲಯದ ಮಹತ್ವವನ್ನು ಗ್ರಾಮಸ್ಥರಿಗೆ ತಿಳಿಸಲಾಯಿತು. ಗ್ರಾಮದ ಹೆಮರಡ್ಡಿ ಮಲ್ಲಮ್ಮ, ಸರಸ್ವತಿ, ಮಹಾಲಕ್ಷ್ಮೀ, ಧನಲಕ್ಷ್ಮೀ, ಭುವನೇಶ್ವರಿ ಸ್ತ್ರೀ-ಸ್ವಶಕ್ತಿ ಸಂಘಗಳು. ಬಿ, ಬಿ, ಪಾತೀಮಾ, ಭೀಮಾಂಬಿಕಾ, ನೇತ್ರಾವತಿ ಸ್ವಸಹಾಯ ಸಂಘಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು, ಮತ್ತು ಪಂಚಾಯತಿ ಪ್ರೇರಣಾದಾರ ಪ್ರಕಾಶ ಬಿ. ನಾಯಕ ಹಾಗೂ ತಾಲೂಕಾ ಐ.ಇ.ಸಿ. ಸಂಯೋಜಕರು ಲಕ್ಷ್ಮಣ ಕೆರಳ್ಳಿ ಹಾಗೂ ಸಂಪನ್ಮೂಲ ವ್ಯಕ್ತಿ ನಿಂಗಪ್ಪ ತಟ್ಟಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತುಂಗಭದ್ರಾ ನದಿ ಪಾತ್ರದ ಜನರಿಗೆ ಎಚ್ಚರಿಕೆ


ಕೊಪ್ಪಳ ಸೆ. 29 (ಕ.ವಾ) : ತುಂಗಭದ್ರಾ ನದಿ ಪಾತ್ರದ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಕ್ರಸ್ಟ್ ಗೇಟ್ ಮೂಲಕ 50 ಸಾವಿರ ಕ್ಯೂಸೆಕ್‍ವರೆಗೂ ನೀರು ಹೊರಬಿಡುವ ಸಂಭವ ಇರುತ್ತದೆ.  ನದಿಯ ಕೆಳ ಭಾಗದಲ್ಲಿ ಹಾಗೂ ನದಿಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
     ತುಂಗಭದ್ರಾ ಜಲಾಶಯ ಸದ್ಯ ಗರಿಷ್ಠ ಮಟ್ಟ 1633 ಅಡಿ ತಲುಪಿದ್ದು, ಸದ್ಯ 11566 ಕ್ಯೂಸೆಕ್ ಒಳ ಹರಿವು ಇದೆ.   ತುಂಗಭದ್ರಾ ನದಿ ಪಾತ್ರದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ, ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಜಲಾಶಯದ ಕ್ರಸ್ಟ್ ಗೇಟ್ ಮೂಲಕ 50 ಸಾವಿರ ಕ್ಯೂಸೆಕ್ ವರೆಗೂ ನೀರು ಹೊರ ಬಿಡುವ ಸಂಭವ ಇರುತ್ತದೆ.  ಸಾರ್ವಜನಿಕರು ಸೂಕ್ತ ಮುಂಜಾಗ್ರತೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿವೃಷ್ಠಿ ಬಾಧಿತರಿಗೆ ಸಮರ್ಪಕ ಪರಿಹಾರ ಒದಗಿಸಿ- ಸಂಗಣ್ಣ ಕರಡಿ


ಕೊಪ್ಪಳ ಸೆ.29 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಮತ್ತು ಬೆಳೆ ಹಾನಿ ಅನುಭವಿಸಿದವರಿಗೆ ಸಮರ್ಪಕ ಪರಿಹಾರ ಒದಗಿಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಬೆಳೆ ಮತ್ತು ಮನೆ ಹಾನಿ ಅನುಭವಿಸಿದವರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು.   ಕಚ್ಚಾ ಮತ್ತು ಪಕ್ಕಾ ಮನೆಗಳನ್ನು ಗುರುತಿಸುವ ಸಂಬಂಧ ಸರ್ಕಾರ ಇತ್ತೀಚೆಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಆದರೆ ಪರಿಹಾರವನ್ನು ಮಾತ್ರ ಹಳೆಯ ಮಾರ್ಗಸೂಚಿಯಂತೆ ವಿತರಿಸಲಾಗುತ್ತಿರುವುದಾಗಿ ತಿಳಿದುಬಂದಿದೆ.  ಅಲ್ಲದೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಬೀಳು ಬಿದ್ದ ಹೊಲಗಳಿಗೂ ಪರಿಹಾರ ಪಡೆದಿರುವ ಬಗ್ಗೆ ದೂರುಗಳು ಬಂದಿವೆ.  ಅಧಿಕಾರಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿ ಪರಿಹಾರ ಪಡೆಯಲು ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಬೇಕು.  ಬೆಳೆ ಹಾನಿ ಕುರಿತಂತೆ ಸಮರ್ಪಕವಾಗಿ ಸಮೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು, ಜಿಲ್ಲೆಯಲ್ಲಿ ಸದ್ಯ 2453 ಮನೆಗಳು ಅತಿವೃಷ್ಠಿಯಿಂದ ಹಾನಿಗೊಳಗಾಗಿದ್ದು, ಇದುವರೆಗೂ 61. 19 ಲಕ್ಷ ರೂ. ಗಳ ಪರಿಹಾರ ವಿತರಣೆ ಮಾಡಲಾಗಿದೆ. ಕಚ್ಚಾ ಮತ್ತು ಪಕ್ಕಾ ಮನೆ ವಿಂಗಡಣೆಯ ನೀತಿ ಪರಿಷ್ಕರಣೆ ಕುರಿತಂತೆ ಸರ್ಕಾರದ ಆದೇಶ ಇದುವರೆಗೂ ಬಂದಿಲ್ಲ.  ಸದ್ಯ ಹಿಂದಿನ ಮಾರ್ಗಸೂಚಿಯಂತೆ ಪರಿಹಾರವನ್ನು ವಿತರಣೆ ಮಾಡಲಾಗುತ್ತಿದ್ದು, ಹೊಸ ಆದೇಶ ಬಂದ ನಂತರ, ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ನೀಡಬೇಕಾದ ಬಾಕಿ ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.  ಮನೆ ಅಥವಾ ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆದಲ್ಲಿ ಅಥವಾ ಪಡೆಯಲು ಯತ್ನಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
‘ಶುಚಿ’ ಅನುಷ್ಠಾನಕ್ಕೆ ಹಿಂದೇಟು : ಜಿಲ್ಲೆಯಲ್ಲಿ 6 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಕಿಶೋರಿಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‍ಕಿನ್ ಪ್ಯಾಡ್ ವಿತರಣೆ ಮಾಡುವ ‘ಶುಚಿ’ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಈಗಾಗಲೆ ಎಲ್ಲ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡರೂ, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಯೋಜನೆ ಅನುಷ್ಠಾನಗೊಂಡಿಲ್ಲ, ಹೆಣ್ಣುಮಕ್ಕಳಿಗೆ ವಿತರಣೆಗಾಗಿ ಪೂರೈಕೆ ಮಾಡಲಾಗಿರುವ ಪ್ಯಾಡ್‍ಗಳು ಇಲಿ, ಹೆಗ್ಗಣಗಳ ಪಾಲಾಗುತ್ತಿದೆ ಎಂಬುದಾಗಿ ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಅಕ್ಕಮಹಾದೇವಿ ಕಂಬಳಿ ಅವರು ಸಭೆಯ ಗಮನಕ್ಕೆ ತಂದರು.  ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ರಮೇಶ್ ಮೂಲಿಮನಿ ಅವರು ಮಾತನಾಡಿ, ಈ ಯೋಜನೆ ಕಳೆದ ಜುಲೈ ತಿಂಗಳಿನಲ್ಲೇ ಪ್ರಾರಂಭವಾಗಿದ್ದು, ಪ್ರತಿ ತಿಂಗಳ ಮೊದಲ ವಾರದಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಪ್ಯಾಡ್‍ಗಳನ್ನು ವಿತರಣೆ ಮಾಡಬೇಕು.  ಈ ಕುರಿತಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆಗೆ ನೀಡಿದೆ.  ಡಿಸೆಂಬರ್ ತಿಂಗಳವರೆಗೆ ಸಾಕಾಗುವಷ್ಟು ದಾಸ್ತಾನು ಈಗಾಗಲೆ ಪೂರೈಕೆ ಮಾಡಿದ್ದರೂ, ಇದುವರೆಗೂ ವಿತರಣೆಯಾಗಿರುವ ಬಗ್ಗೆ ಶಿಕ್ಷಣ ಇಲಾಖೆಗಳು ವರದಿ ನೀಡುತ್ತಿಲ್ಲ.  ಇದರಿಂದಾಗಿ ಇಡೀ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯಿಂದ ಮಾತ್ರ ಸರ್ಕಾರಕ್ಕೆ ಪ್ರಗತಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸಂಗಣ್ಣ ಕರಡಿ ಅವರು, ಹೆಣ್ಣು ಮಕ್ಕಳ ಸ್ವಚ್ಛತೆಗೆ ಬಹು ಉಪಯುಕ್ತವಾಗಿರುವ ಇಂತಹ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ.  ಇದಕ್ಕೆ ಕಾರಣರಾದ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೈರು ಹಾಗೂ ಅಸಮರ್ಪಕ ವರದಿಗೆ ಅಸಮಾಧಾನ : ಸಂಸದರಾಗಿ ಅಧಿಕಾರ ವಹಿಸಿಕೊಂಡ ನಂತರ, ಇದೇ ಮೊದಲ ಬಾರಿಗೆ ಏರ್ಪಡಿಸಿದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ಬಹಳಷ್ಟು ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ಧೋರಣೆ ತಳೆದಲ್ಲಿ, ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆಯನ್ನು ಯಾರೊಂದಿಗೆ ನಡೆಸಬೇಕು.  ಇನ್ನು ಕೆಲವು ಅಧಿಕಾರಿಗಳು ಸಭೆಯಲ್ಲಿ ವರದಿ ಸಲ್ಲಿಸುವುದು ಒಂದಾದರೆ, ವರದಿಯ ಪುಸ್ತಕದಲ್ಲಿ ಬೇರೆಯದೇ ವರದಿ ಇರುತ್ತದೆ.  ಈ ರೀತಿ ಆದಲ್ಲಿ ಪ್ರಗತಿ ಪರಿಶೀಲನಾ ಸಭೆಗೆ ಯಾವುದೇ ಅರ್ಥ ಇರುವುದಿಲ್ಲ.  ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳ ನಿಗದಿತ ಭೌತಿಕ ಮತ್ತು ಆರ್ಥಿಕ ಗುರಿ ಸಾಧನೆ ಅತ್ಯಗತ್ಯವಾಗಿದ್ದು, ಕೊಪ್ಪಳದಂತಹ ಹಿಂದುಳಿದ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಬೇಕಾದರೆ, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು.  ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂಬುದಾಗಿ ಸಂಸದ ಸಂಗಣ್ಣ ಕರಡಿ ಅವರು ಎಚ್ಚರಿಕೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಶಿವನಗೌಡ, ಸತ್ಯನಾರಾಯಣರಾವ್ ದೇಶಪಾಂಡೆ, ಮನೋಹರ್, ಶೋಭಾ ನಗರಿ, ವಿಜಯಕುಮಾರ ಡೊಂಬರೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Saturday, 27 September 2014

ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹ ಆಚರಣೆಗೆ ಡಿಸಿ ಆರ್.ಆರ್. ಜನ್ನು ಸೂಚನೆ


ಕೊಪ್ಪಳ ಸೆ. 27 (ಕ.ವಾ): ಸರ್ಕಾರದ ಸೂಚನೆಯ ಮೇರೆಗೆ ಕಂದಾಯ ಇಲಾಖೆಯಲ್ಲಿ ಅ. 06 ರಿಂದ 11 ರವರೆಗೆ (ಅ. 8 ಮತ್ತು 11 ರ ರಜಾ ದಿನಗಳೂ ಸೇರಿದಂತೆ) ವಿಶೇಷ ಕಡತ ವಿಲೇವಾರಿ ಸಪ್ತಾಹ ಆಚರಿಸಿ, ದೀರ್ಘಾವಧಿಯಿಂದ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದ್ದಾರೆ.
     ವಿಶೇಷ ಕಡತ ವಿಲೇವಾರಿ ಸಪ್ತಾಹ ಆಚರಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಬಿ. ಬಸವರಾಜು ಅವರು ಸುತ್ತೋಲೆ ಹೊರಡಿಸಿದ್ದು, ಅದರನ್ವಯ ಕಂದಾಯ ಇಲಾಖೆಯಲ್ಲಿ ಅ. 06 ರಿಂದ 11 ರವರೆಗೆ (ಅ. 8 ಮತ್ತು 11 ರ ರಜಾ ದಿನಗಳೂ ಸೇರಿದಂತೆ) ವಿಶೇಷ ಕಡತ ವಿಲೇವಾರಿ ಸಪ್ತಾಹ ಆಚರಿಸಿ, ದೀರ್ಘಾವಧಿಯಿಂದ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಬೇಕು.  ಈ ಸಪ್ತಾಹದ ಅವಧಿಯಲ್ಲಿ ಯಾವುದೇ ಅಧಿಕಾರಿ, ಸಿಬ್ಬಂದಿಗಳು ರಜೆ ಮೇಲೆ ತೆರಳುವಂತಿಲ್ಲ ಅಲ್ಲದೆ ಅಧಿಕಾರಿಗಳು ತಮ್ಮ ಪ್ರವಾಸ, ಸಭೆ, ಸ್ಥಳ ತನಿಖೆ ಕಾರ್ಯಕ್ರಮವನ್ನು ಮುಂದೂಡಿ, ಸಪ್ತಾಹ ಅವಧಿಯಲ್ಲಿ ಕಚೇರಿಯಲ್ಲಿ ಹಾಜರಿದ್ದು, ಕಡತ ಇತ್ಯರ್ಥಪಡಿಸಲು ವಿಶೇಷ ಗಮನ ನೀಡಬೇಕು.  ಕಚೇರಿಗಳಲ್ಲಿರುವ ಕಡತಗಳ ಜೊತೆಗೆ 2 ವರ್ಷದೊಳಗಿನ ಹಾಗೂ 03 ವರ್ಷ ಮೇಲ್ಪಟ್ಟ ಅವಧಿಯ ಬಾಕಿ ಕಡತಗಳ ಪಟ್ಟಿ ಸಿದ್ಧಪಡಿಸಿ, ಅಂತಹ ಕಡತಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡಬೇಕು.  ಒಂದು ವರ್ಷಕ್ಕೂ ಮೇಲ್ಪಟ್ಟು ಬಾಕಿ ಇರುವ ಅಪೀಲು ಪ್ರಕರಣ ಮತ್ತು ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು.  ಬಾಕಿ ಕಡತಗಳ ವಿಲೇವಾರಿಗೆ ಸಂಬಂಧಿತ ಪ್ರಗತಿ ವರದಿಯನ್ನು ಅ. 11 ರಂದು ಬೆಳಿಗ್ಗೆ 11 ಗಂಟೆಯೊಳಗೆ ಇ-ಮೇಲ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.  ಈ ವಿಶೇಷ ಕಡತ ವಿಲೇವಾರಿ ಸಪ್ತಾಹ ಆಚರಣೆ ನಂತರವೂ ಯಾವುದೇ ಕಚೇರಿಯಲ್ಲಿ ಸಕಾರಣವಿಲ್ಲದೆ ಒಂದು ವರ್ಷಕ್ಕೂ ಮೇಲ್ಪಟ್ಟ ಅವಧಿಯ ಯಾವುದೇ ಒಂದು ಕಡತ ಬಾಕಿ ಇದ್ದರೂ ಸಂಬಂಧಪಟ್ಟ ವಿಷಯ ನಿರ್ವಾಹಕರಿಂದ ಕಚೇರಿ ಮುಖ್ಯಸ್ಥರವರೆಗಿನ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ವಿಪುಲ ಅವಕಾಶ- ಡಾ. ವಿ.ಬಿ. ರಡ್ಡೇರ್ಕೊಪ್ಪಳ ಸೆ. 27 (ಕ.ವಾ): ಐತಿಹಾಸಿಕ ಮಹತ್ವದ ಹಿನ್ನೆಲೆಯನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಮತ್ತು ಸಮುದಾಯದ ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿವೆ ಎಂದು ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು ಹೇಳಿದರು.
     ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಆಡಳಿತ, ಬಿ.ಎನ್.ಆರ್.ಕೆ. ಕಾಲೇಜು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಎನ್.ಆರ್.ಕೆ. ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
     ಪ್ರವಾಸೋದ್ಯಮ ಇಲಾಖೆಯು ಈ ಬಾರಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ‘ಪ್ರವಾಸೋದ್ಯಮ ಮತ್ತು ಸಮುದಾಯ ಅಭಿವೃದ್ಧಿ’ ಎಂಬ ಘೋಷವಾಕ್ಯ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ.  ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸಮುದಾಯ ಅಷ್ಟೇ ಅಲ್ಲದೆ ಆರ್ಥಿಕ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಬಹುದಾಗಿದೆ.  ಐತಿಹಾಸಿಕ ಹಾಗೂ ಪ್ರಾಚೀನ ಸ್ಮಾರಕಗಳು, ಅದ್ಭುತ ಶಿಲ್ಪಕಲೆ ಹೊಂದಿರುವ ದೇವಾಲಯಗಳು ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿದ್ದು, ವಿದೇಶಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಭೇಟಿ ನೀಡುವುದನ್ನು ಕಾಣಬಹುದಾಗಿದೆ.  ವಿದೇಶಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ, ಅವರನ್ನು ಬಹಳಷ್ಟು ಗೌರವಪೂರ್ವಕವಾಗಿ ವರ್ತಿಸುವುದು ಬಹಳಷ್ಟು ಮುಖ್ಯವಾಗಿದ್ದು, ಅದು ನಮ್ಮ ಸಂಸ್ಕøತಿಯನ್ನು ಬಿಂಬಿಸುತ್ತದೆ.  ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಿಲ್ಲಾ ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಡಾ. ವಿ.ಬಿ. ರಡ್ಡೇರ್ ಅವರು ಹೇಳಿದರು.
     ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಐತಿಹಾಸಿಕ ಹಾಗೂ ಪ್ರಾಚೀನ ಸ್ಮಾರಕಗಳ ರಕ್ಷಣೆಗಾಗಿ ವಿದ್ಯಾರ್ಥಿ ಸಮುದಾಯ ವಿಶೇಷ ಆದ್ಯತೆ ನೀಡಬೇಕು ಎಂದರು.
     ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಅಧಿಕಾರಿ ಪ್ರಭುಲಿಂಗ ಎಸ್ ತಳಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಬಿ.ಎನ್.ಆರ್.ಕೆ. ಕಾಲೇಜಿನ ಪ್ರಾಚಾರ್ಯ ಎಂ.ಪಿ. ಮಂಟೆನವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಗೌತಮ ತಾಳಕೇರಿ ಸ್ವಾಗತಿಸಿದರು, ಪ್ರವಾಸೋದ್ಯಮ ಸಲಹೆಗಾರ ಸಿದ್ದೇಶ ಕಂಬಳಿಮಠ ವಂದಿಸಿದರು.  ಮಹೇಶ ಎಸ್ ಸುನಗ ಕಾರ್ಯಕ್ರಮ ನಿರೂಪಿಸಿದರು.  ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ವಿವಿಧ ಕಾಯ್ದೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ


ಕೊಪ್ಪಳ ಸೆ.27(ಕರ್ನಾಟಕ ವಾರ್ತೆ): ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಸಾಕ್ಷಿದಾರ ಮೊಗಸಾಲೆ ಕಟ್ಟಡ ಆವರಣದಲ್ಲಿ ಶುಕ್ರವಾರದಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ನ್ಯಾಯಾವಾದಿಗಳ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ ಎರಡು ದಿನದ  ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ದಾ. ಬಬಲಾದಿ ಅವರು ನೆರವೇರಿಸಿ ಮಾತನಾಡಿ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ 14  ವರ್ಷದ ಹಿಂದೆ ಜಾರಿಯಾಗಿದ್ದು, ಬಾಲ ನ್ಯಾಯ ಕಾಯ್ದೆಯ ಸಾಧಕ-ಬಾಧಕಗಳ  ಬಗ್ಗೆ  ಇನ್ನಾದರೂ ಮುಕ್ತವಾಗಿ ಚರ್ಚಿಸಿಬೇಕಾಗಿದೆ. ಬಾಲ ನ್ಯಾಯ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಮಕ್ಕಳ ಉಳಿವಿಗಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ವಸಂತಪ್ರೇಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಶಿವಲೀಲಾ ವನ್ನೂರು ನಿರೂಪಿಸಿದರು. ಸುಮಲತಾ ಆಕಳವಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ಹಿರಿಯ ಮಕ್ಕಳ  ಕಲ್ಯಾಣಾಧಿಕಾರಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದರು.

ರಾಜ್ಯಮಟ್ಟಕ್ಕೆ ಆಯ್ಕೆ


ಕೊಪ್ಪಳ ಸೆ. 27 (ಕ.ವಾ): ಕೊಪ್ಪಳ ತಾಲೂಕು ಅಳವಂಡಿಯ ಶ್ರೀ ಸಿದ್ದೇಶ್ವರ ಸಂಯುಕ್ತ ಪ.ಪೂ. ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಅಣ್ಣಪ್ಪ ಫಕೀರಪ್ಪ ಪುರದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
     ಕುಕನೂರು ವಿದ್ಯಾನಂದ ಗುರುಕುಲ ಪ.ಪೂ. ಕಾಲೇಜು ಆವರಣದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟದಲ್ಲಿ 3000 ಮತ್ತು 5000 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.  ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ಮತ್ತು ವಿದ್ಯಾರ್ಥಿ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.

ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಪುನರ್ ರಚನೆ


ಕೊಪ್ಪಳ ಸೆ.27(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪುನರ್ ರಚಿಸಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.
    ಸಮಿತಿಗೆ ಸಂಸದ ಕರಡಿ ಸಂಗಣ್ಣ ಅವರು ಅಧ್ಯಕ್ಷರಾಗಿರುತ್ತಾರೆ. ಕೃಷ್ಣ ಡಿ.ಉದಪುಡಿ ಅವರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ, ಶಾಸಕರುಗಳಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ರಾಜ್ಯ ಸರ್ಕಾರದಿಂದ ಪ್ರತಿನಿಧಿಸುವ ಒಬ್ಬ ಅಧಿಕಾರಿಗಳು, ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕುಗಳ ತಾ.ಪಂ. ಅಧ್ಯಕ್ಷರು, ಜಿ.ಪಂ. ಡಿ.ಆರ್.ಡಿ.ಎ ಯೋಜನಾ ನಿರ್ದೇಶಕರು, ಯಲಬುರ್ಗಾದ ಶಿವನಗೌಡ ಬನ್ನಪ್ಪಗೌಡ್ರ, ಗಂಗಾವತಿ ತಾಲೂಕು ಶ್ರೀರಾಮನಗರದ ಸತ್ಯನಾರಾಯಣರಾವ್ ದೇಶಪಾಂಡೆ, ಕುಷ್ಟಗಿಯ ಮನೋಹರ ಗದ್ದಿಗೇರಿ, ಕೊಪ್ಪಳದ ಶೋಭಾ ನಗರಿ, ಗಂಗಾವತಿ ತಾಲೂಕು ಬಸಾಪಟ್ಟಣದ ವಿಜಯಕುಮಾರ ಡೊಂಬರೆ, ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕರು, ಹಾಗೂ ಅಂಚೆ ಇಲಾಖೆಯ ಮುಖ್ಯ ಅಧೀಕ್ಷಕರು ಸದಸ್ಯರುಗಳಾಗಿರುತ್ತಾರೆ ಎಂದು ಜಿ.ಪಂ. ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ


ಕೊಪ್ಪಳ ಸೆ.27(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಸೆ.28 ಹಾಗೂ 29 ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಸೆ.28 ರಂದು ಮಧ್ಯಾಹ್ನ 12.30 ಕ್ಕೆ ಕಾರಟಗಿ ಮೂಲಕ ಆಗಮಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಮಾಡುವರು. ಸೆ.29 ರಂದು ಬೆಳಿಗ್ಗೆ 9 ಕ್ಕೆ ಕಾರಟಗಿಯ ಶ್ರೀ ಸಿದ್ದರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ದಿ ಸಂಘ ಇವರ ವತಿಯಿಂದ ಜರುಗಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅದೇ ದಿನ ಬೆಳಿಗ್ಗೆ 11 ಕ್ಕೆ ಕಾರಟಗಿ ಮೂಲಕ ಬಳ್ಳಾರಿಗೆ ಪ್ರಯಾಣ ಬೆಳೆಸಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅದೇ ದಿನ ಸಂಜೆ 6 ಗಂಟೆಗೆ ಬಳ್ಳಾರಿ ಮೂಲಕ ಕಾರಟಗಿಗೆ ಆಗಮಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ಮಾಡುವರು. ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕೊಪ್ಪಳ ತಾಲೂಕಾ ಮಟ್ಟದ ಪೈಕಾ (ಗ್ರಾಮೀಣ) ಕ್ರೀಡಾಕೂಟ


ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ತಾಲೂಕಾ ಮಟ್ಟದ ಪೈಕಾ (ಗ್ರಾಮೀಣ) ಕ್ರೀಡಾಕೂಟ ಅ. 01 ರಂದು ಬೆಳಿಗ್ಗೆ 9.00 ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.
       ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅರ್ಹರಿರುತ್ತಾರೆ. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಶಾಲಾ ಮುಖ್ಯೋಪಧ್ಯಾಯರಿಂದ ಜನ್ಮ ದಿನಾಂಕದ ದೃಢೀಕರಣದ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. 31-12-2014ಕ್ಕೆ 16ವರ್ಷ ಮೀರಿರಬಾರದು. 16 ವರ್ಷದ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಹಾಗೂ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದ ವಾಸಸ್ಥಳ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.  ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ  ನಗದು ಬಹುಮಾನವನ್ನು ವಿತರಿಸಲಾಗುವುದು. ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ರೀಡಾಕೂಟದಲ್ಲಿ ನಡೆಯುವ ಸ್ಪರ್ಧೆಗಳ ವಿವರ ಇಂತಿದೆ.  ಬಾಲಕರಿಗೆ: ಅಥ್ಲೆಟಿಕ್ಸ್ (100, ಮೀ, 400, 800, 1500, 3000 ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (5ಕೆಜಿ), ಚಕ್ರ ಎಸೆತ 1.5 ಕೆಜಿ, 4*100 ರಿಲೆ, 4*400 ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ, ಹ್ಯಾಂಡಬಾಲ್.  ಬಾಲಕೀಯರಿಗೆ:- ಅಥ್ಲೆಟಿಕ್ಸ್ (100, ಮೀ, 400, 800, 1500, 3000 ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (4ಕೆಜಿ), ಚಕ್ರ ಎಸೆತ 1 ಕೆಜಿ, 4*100 ರಿಲೆ, 4*400 ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ,ಹ್ಯಾಂಡಬಾಲ್. ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
     ಕ್ರೀಡಾ ಕೂಟದಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾ ಪಟುಗಳು ಸೆ. 30 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಎನ್.ಎಸ್.ಪಾಟೀಲ್, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು,ಕೊಪ್ಪಳ-9980852735 ಮತ್ತು ಎ.ಎನ್.ಯತಿರಾಜ್-9448633146 ಸಿ.ಎ. ಪಾಟೀಲ್ ಸಾಯಿ- 9342387935 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Friday, 26 September 2014

ಬಿಡಾಡಿ ದನಗಳ ಹಾವಳಿ : ಮಾಲೀಕರಿಗೆ 07 ದಿನಗಳ ಗಡುವು


ಕೊಪ್ಪಳ ಸೆ.26(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅಂತಹ ಬಿಡಾಡಿ ದನಗಳ ಮಾಲೀಕರು ಕೂಡಲೇ ಅವುಗಳನ್ನು ಕಟ್ಟಿ ಹಾಕಿಕೊಳ್ಳುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ಸಂಬಂಧಿಸಿದ ಮಾಲೀಕರಿಗೆ 07 ದಿನಗಳ ಗಡುವನ್ನು ನೀಡಿದ್ದಾರೆ.
    ಸಾರ್ವಜನಿಕ ಬೀದಿ ಅಥವಾ ಸ್ಥಳದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಅಥವಾ ಅಪಾಯ ಆಗುವ ಹಾಗೆ ಜಾನುವಾರುಗಳನ್ನು ಬೀದಿಗೆ ಬಿಟ್ಟಿದ್ದು, ಸಾರ್ವಜನಿಕರಿಗೆ ಮತ್ತು ರಸ್ತೆ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ.  ಇದಕ್ಕೆ ಅವಕಾಶ ಕೊಡುವವರು ಯಾರೇ ಆಗಲಿ ನಗರಸಭೆಯ ಕಾನೂನು ಪ್ರಕಾರ ದಂಡನೆಗೆ ಅರ್ಹನಾಗುತ್ತಾರೆ.  ಈಗಾಗಲೇ ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ಬಹಳಷ್ಟು ಅಡ್ಡಿಯಾಗಿದ್ದು, ಕೂಡಲೇ ಸಂಬಂಧಿತರು ಅವುಗಳನ್ನು ರಸ್ತೆಗಳಿಗೆ ಬಿಡುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದ್ದು, 07 ದಿನಗಳ ಒಳಗಾಗಿ ಬಿಡಾಡಿ ದನಗಳ ಮೇಲೆ ಹಕ್ಕುಳ್ಳವರು ಅವುಗಳನ್ನು ಪಡೆದು  ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು . ತಪ್ಪಿದಲ್ಲಿ ಅವುಗಳ ಮೇಲೆ ಯಾರದ್ದೂ ಹಕ್ಕಿಲ್ಲವೆಂದು ಭಾವಿಸಿ ನಗರಸಭೆ ಕಾನೂನುಗಳ ಪ್ರಕಾರ ಅವುಗಳನ್ನು ಸಾಗಣೆಗೆ ಕ್ರಮ ವಹಿಸಲಾಗುವುದು. ಇದಕ್ಕಾಗಿ ಯಾರು ನಷ್ಟ ಪರಿಹಾರಕ್ಕೆ ಅರ್ಹರಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡುವಂತಹ ಬಿಡಾಡಿ ದನಗಳನ್ನು ಕೂಡಲೇ ಹಿಂಪಡೆದು ಸಾರ್ವಜನಿಕ ಉಪದ್ರವವನ್ನು ತಡೆಗಟ್ಟಲು ನಗರಸಭೆಯೊಡನೆ ಸಹಕರಿಸಬೇಕೆಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ


ಕೊಪ್ಪಳ ಸೆ.26(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ ಪೂರ್ವ ವಿದ್ಯಾರ್ಥಿ ವೇತನದ ನವೀನ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಅಕ್ಟೋಬರ್-20 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
 ಕೊಪ್ಪಳ ತಾಲೂಕಿನಲ್ಲಿ ಒಟ್ಟು 358 ಶಾಲೆಗಳ ಪೈಕೆ ಇದುವರೆಗೂ ಕೇವಲ 30 ಶಾಲೆಗಳ ಮುಖ್ಯೋಪಾಧ್ಯಾಯರು ಮಾತ್ರ ಮಾಹಿತಿ ನೀಡಿದ್ದು, ಉಳಿದ 328 ಶಾಲೆಗಳಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ. ಸೆ.30 ರೊಳಗಾಗಿ ಮಾಹಿತಿಯನ್ನು ಸಲ್ಲಿಸಲು ಮುಖ್ಯೋಪಾಧ್ಯಾಯರಿಗೆ ಇನ್ನೊಮ್ಮೆ ಸೂಚನೆ ನೀಡಲಾಗಿದ್ದು, ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೊಪ್ಪಳ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ರೈಲುಗಳ ನಿಲುಗಡೆ : ಅವಧಿ ವಿಸ್ತರಣೆ


ಕೊಪ್ಪಳ ಸೆ.26(ಕರ್ನಾಟಕ ವಾರ್ತೆ): ಹೌರಾ, ಅಜಮೀರ, ಜೋದಪುರ ಎಕ್ಸ್‍ಪ್ರೆಸ್ ರೈಲುಗಳ ಕೊಪ್ಪಳ ನಗರದಲ್ಲಿನ ನಿಲುಗಡೆಯನ್ನು ಮುಂದಿನ ಆದೇಶದವರೆಗೂ ವಿಸ್ತರಿಸಲಾಗಿದೆ.
     ಈ ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆ ಸೆ. 30 ಕ್ಕೆ ಕೊನೆಗೊಳ್ಳುವ ಬಗ್ಗೆ ಈ ಹಿಂದೆ ರೈಲ್ವೆ ಇಲಾಖೆ ಆದೇಶ ಹೊರಡಿಸಿತ್ತು.  ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಯನ್ನು ಮುಂದುವರೆಸುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿಯವರು ರೈಲ್ವೆ ಇಲಾಖೆಗೆ ಸಲ್ಲಿಸಿದ ಮನವಿಯ ಮೇರೆಗೆ ಮುಂದಿನ ಆದೇಶ ಬರುವವರೆಗೂ ರೈಲು ನಿಲುಗಡೆ ಅವಧಿ ವಿಸ್ತರಿಸಲಾಗಿದೆ
ಹಂಪಿ ಎಕ್ಸ್‍ಪ್ರೆಸ್ ರೈಲನ್ನು ಭಾನಾಪೂರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗಾಗಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಸೌಲಭ್ಯದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಎಕ್ಸ್‍ಪ್ರೆಸ್ ರೈಲುಗಳ ನಿಲುಗಡೆಯನ್ನು ಮುಂದುವರೆಸಲು ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಸಂಸದರಾದ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಸರ್ಕಾರ ನೀಡಿರುವ ಸವಲತ್ತುಗಳ ಸದುಪಯೋಗಪಡಿಸಿಕೊಳ್ಳಲು ಕರೆಕೊಪ್ಪಳ ಸೆ. 26 (ಕ.ವಾ) : ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಕರೆ ನೀಡಿದರು.
     ಜಿಲ್ಲಾ ಆಡಳಿತ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೂತನವಾಗಿ ಪ್ರಾರಂಭಿಸಿರುವ ಮೌಲಾನಾ ಅಜಾದ್ ಅಲ್ಪಸಂಖ್ಯಾತರ ಭವನ್ (ಮಾಹಿತಿ ಕೇಂದ್ರ) ಕೇಂದ್ರದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
     ಅಲ್ಪಸಂಖ್ಯಾತರ ಅಭಿವೃದ್ಧಿಯ ಉದ್ದೇಶದಿಂದ, ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.  ಇದರಲ್ಲಿ ಶೈಕ್ಷಣಿಕ ಅಭಿವೃದ್ಧಿ, ವಿವಿಧ ವೃತ್ತಿಪರ ತರಬೇತಿಗಳು, ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.  ಯೋಜನೆಗಳ ಬಗ್ಗೆ ಅರಿವು ಪಡೆದಲ್ಲಿ, ಮಾತ್ರ ಅರ್ಹ ಫಲಾನುಭವಿಗಳು ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಮಾತನಾಡಿದರು.  ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಅವರು ಅಲ್ಪಸಂಖ್ಯಾತರರಿಗೆ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಮಾಹಿತಿ ಒದಗಿಸಿದರು.  ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಉಪಸ್ಥಿತರಿದ್ದರು.

ಅ.02 ರಂದು ತಳಕಲ್‍ನಲ್ಲಿ ‘ಪಾಂಡು ವಿಜಯ’- ಬಯಲಾಟ ಪ್ರದರ್ಶನ


ಕೊಪ್ಪಳ ಸೆ.26(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನಕದಾಸ ಕುರುಬರ (ಹಾಲುಮತ) ಸಂಘ ತಳಕಲ್ ಇವರ ಸಹಯೋಗದಲ್ಲಿ ಅ.02 ರಂದು ರಾ.8.30 ಕ್ಕೆ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಪಾಂಡು ವಿಜಯ ಅರ್ಥಾತ್ ಕೌರವರ ವಧೆ ಎಂಬ ಬಯಲಾಟ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ.
    ದಿವ್ಯ ಸಾನಿದ್ಯವನ್ನು ಮಂಗಳೂರಿನ ಶ್ರೀ ಸಿದ್ದಲಿಂಗಶಿವಾಚಾರ್ಯರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಬಸವರಾಜ ರಾಯರೆಡ್ಡಿ ಅವರು ನೆರವೇರಿಸುವರು. ತಳಕಲ್ ಗ್ರಾ.ಪಂ. ಅಧ್ಯಕ್ಷ ಸಿರಾಜುದ್ದೀನ್ ಕೊಪ್ಪಳ ಅಧ್ಯಕ್ಷತೆ ವಹಿಸುವರು.
    ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹುಲಿಗೆಮ್ಮ ದೇವಿ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆಕೊಪ್ಪಳ,ಸೆ.26(ಕರ್ನಾಟಕ ವಾರ್ತೆ): ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ಜಿಲ್ಲೆ ಹುಲಿಗಿಯಲ್ಲಿ ಗುರುವಾರ ಘಟಸ್ಥಾಪನೆ ನೆರವೇರಿಸುವ ಮೂಲಕ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. 
     ಕೊಪ್ಪಳದ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್, ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ, ಹುಲಿಗಿ ಗ್ರಾ.ಪಂ.ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ ಅವರ ಸಮ್ಮುಖದಲ್ಲಿ ಘಟಸ್ಥಾಪನೆ ನೆರವೇರಿಸಲಾಯಿತು.  
     ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು, ಈ ಬಾರಿಯ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದ್ದು, ನೆರೆಹೊರೆಯ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ದಸರಾ ಮಹೋತ್ಸವದ ಸಂದರ್ಭದಲ್ಲಿ ಹುಲಿಗಿ ಕ್ಷೇತ್ರಕ್ಕೆ ಆಗಮಿಸಿ, ದೇವಿಯ ದರ್ಶನ ಪಡೆಯಲಿದ್ದಾರೆ.  ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಸೂಕ್ತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.  ದಸರಾ ಮಹೋತ್ಸವದ ಅಂಗವಾಗಿ ಅ. 03 ರವರೆಗೂ ಸಂಜೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ರಾಜ್ಯದ ಹೆಸರಾಂತ ಕಲಾವಿದರು, ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.  ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು, ದೇವಸ್ಥಾನದ ಹೊರಭಾಗದಲ್ಲಿನ ವಿಶಾಲ ಪ್ರದೇಶದಲ್ಲಿ ಉತ್ತಮ ವೇದಿಕೆ ವ್ಯವಸ್ಥೆಗೊಳಿಸಲಾಗಿದೆ.  ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮ ದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾನೈವೇದ್ಯಗಳು ಜರುಗಲಿವೆ, ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು, ನಾಗಭೂಷಣಂ ಹೊಸಪೇಟೆ ಇವರಿಂದ ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಕಾರ್ಯಕ್ರಮ ಜರುಗಲಿದ್ದು, ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಈ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸರ್ವ ಭಕ್ತಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡರು.
 ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಗುರುವಾರ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿ, ಈ ಬಾರಿ ಹುಲಿಗಿ ಕ್ಷೇತ್ರದಲ್ಲಿ ದಸರಾ ಮಹೋತ್ಸವಕ್ಕೆ ಹಬ್ಬದ ಸಡಗರ ಕಾಣುತ್ತಿದ್ದು, ದೇವಸ್ಥಾನವನ್ನು ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.  ಈ ಬಾರಿಯ ದಸರಾ ಮಹೋತ್ಸವ ವೈಭವದಿಂದ ಜರುಗಿಸಲು ಜಿಲ್ಲಾಡಳಿತ ಸಕಲ ನೆರವು ನೀಡಲಿದೆ ಎಂದರು.
     ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ದೇವಸ್ಥಾನದ ಹಿರಿಯ ಅರ್ಚಕರುಗಳಾದ ಶ್ರೀನಿವಾಸ ಭಟ್, ಗುಂಡಪ್ಪ ಸೇರಿದಂತೆ ಗ್ರಾಮದ ಪ್ರಮುಖ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ

ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರಸಭೆಯ ವಿವಿಧ ಸದಸ್ಯರುಗಳಿಂದ ನಗರದ ಗಡಿಯಾರ ಕಂಭ, ಜವಾಹರ ರಸ್ತೆ, ಅಶೋಕ ವೃತ್ತ ಮುಂತಾದೆಡೆ ಕಸಗುಡಿಸುವ ಮೂಲಕ ಶ್ರಮದಾನ ಕಾರ್ಯಕ್ರಮ ನೆರವೇರಿತು.

ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹಕ್ಕೆ ಚಾಲನೆ : ಸ್ವಚ್ಛತೆಯೇ ದೇವರು- ಗವಿಶ್ರೀ ಬಣ್ಣನೆ
ಕೊಪ್ಪಳ ಸೆ.26 (ಕರ್ನಾಟಕ ವಾರ್ತೆ): ಸ್ವಚ್ಛತೆಯೇ ದೇವರು, ಸ್ವಚ್ಛತೆ, ನೈರ್ಮಲ್ಯ ಎಲ್ಲಿರುತ್ತದೆಯೋ, ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬುದಾಗಿ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಣ್ಣಿಸಿದರು.
     ಜಿಲ್ಲಾ ಪಂಚಾಯತಿಯು ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ   ನೈರ್ಮಲ್ಯ ಕಾಪಾಡಿಕೊಳ್ಳಲು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ಸೆ. 26 ರಿಂದ ಅ. 02 ರವರೆಗೆ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ನಗರದ ಗವಿಮಠ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
     ಸ್ವಚ್ಛತೆ ಹಾಗೂ ಉತ್ತಮ ನೈರ್ಮಲ್ಯ ಎಲ್ಲಿ ಇರುತ್ತದೆಯೋ, ದೇವರು ಅಲ್ಲಿ ನೆಲೆಸಿರುತ್ತಾನೆ.  ನಮ್ಮ ಸುತ್ತಮುತ್ತಲು ಇರುವ ಕಸವನ್ನು ತೆಗೆದುಹಾಕಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಂದರೆ ಕೇವಲ ಅನುಪಯುಕ್ತ ವಸ್ತು, ತ್ಯಾಜ್ಯವನ್ನು ತೆಗೆದುಹಾಕುವುದಲ್ಲ, ನಮ್ಮ ಮನಸ್ಸಿನೊಳಗಿನ ಕಲ್ಮಶವನ್ನು ಅಂದರೆ ಕೆಟ್ಟ ಮನಸ್ಸಿನ ಭಾವನೆಗಳನ್ನು ಸಹ ತೆಗೆದು ಹಾಕುವುದು ಎಂಬುದಾಗಿದೆ.  ಇಂತಹ ಭೌತಿಕ ಹಾಗೂ ಮಾನಸಿಕ ಸ್ವಚ್ಛತೆ ಎಲ್ಲಿ ಲಭ್ಯವೋ, ಅಂತಹ ಉತ್ತಮ ಪರಿಸರದಲ್ಲಿ ಮಾತ್ರ ದೇವರು ನೆಲೆಸಲು ಸಾಧ್ಯ.  ಶೌಚಾಲಯವನ್ನು ನಿರ್ಮಿಸಿಕೊಂಡು, ದೇಹ ಹಾಗೂ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ಭಕ್ತಿಯ ಕಾಕ ಮಾಡಿದಂತೆ.  ಪ್ರತಿಯೊಂದು ಕುಟುಂಬವೂ ವಯಕ್ತಿಕ ಶೌಚಾಲಯವನ್ನು ಹೊಂದಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಿದಲ್ಲಿ, ದೇವರನ್ನು ಆರಾಧಿಸಿದಂತಾಗುತ್ತದೆ.  ಸ್ವಚ್ಛತೆಯ ಕಾರ್ಯವನ್ನು ಎಲ್ಲರೂ ತಮ್ಮ ಮನೆಗಳಿಂದಲೇ ಪ್ರಾರಂಭಗೊಳಿಸಿ, ನಂತರ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು.  ಬಯಲು ಮಲವಿಸರ್ಜನೆಯನ್ನು ತೊಡೆದುಹಾಕಿ, ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.  ಈ ಮಹತ್ವದ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ಕುರಿತಂತೆ ಪಾಲಕರು, ಪೋಷಕರು ಹಾಗೂ ನೆರೆಹೊರೆಯವರಿಗೆ ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿಗಳು ಸ್ವಚ್ಛತೆಯ ಕ್ರಾಂತಿ ಮಾಡಲು ಸಾಧ್ಯವಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
     ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಅನೈರ್ಮಲ್ಯದ ಅಭ್ಯಾಸಗಳನ್ನು ತೊಡೆದು ಹಾಕಲು ಹಳ್ಳಿಗಳಲ್ಲಿ ಸ್ವಚ್ಛ ಪರಿಸರವನ್ನು ನಿರ್ಮಿಸಲು ನಿರ್ಮಲ ಭಾರತ ಅಭಿಯಾನವನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ.  ಆದರೂ ಗ್ರಾಮೀಣ ನೈರ್ಮಲ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ.  ಗ್ರಾಮೀಣರ ನೂರಾರು ವರ್ಷಗಳ ಅನಿಷ್ಠ ರೂಢಿ, ಅಭ್ಯಾಸಗಳನ್ನು ತೊಡೆದುಹಾಕುವಂತಹ ಮನಸ್ಥಿತಿ ಅವರಲ್ಲಿ ನಿರ್ಮಾಣ ಮಾಡಬೇಕಿದೆ.  ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಸಪ್ತಾಹ ದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬಯಲು ಮಲವಿಸರ್ಜನೆ ಮುಕ್ತ ಹಾಗೂ ಉತ್ತಮ ಪರಿಸರದ ಜಿಲ್ಲೆಯನ್ನಾಗಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ.  ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹವನ್ನು ಜಿಲ್ಲೆಯಾದ್ಯಂತ ಸೆ. 26 ರಿಂದ ಅ. 02 ರವರೆಗೆ ಆಚರಿಸಲಾಗುತ್ತಿದ್ದು, ಈ ಅವಧಿಯಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಪರಿಸರ ಸ್ವಚ್ಛತೆ ಕುರಿತಂತೆ  ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದರು.
     ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಿ.ಪಂ. ಯೋಜನಾಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ನಗರಸಭೆ ಪೌರಾಯುಕ್ತ ರಮೇಶ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ನಗರಸಭೆ ಸದಸ್ಯರುಗಳು, ರೋಟರಿ ಕ್ಲಬ್‍ನ ಡಾ. ಕೆ.ಜಿ. ಕುಲಕರ್ಣಿ, ವೀರಣ್ಣ ಕಮತರ್, ಡಾ. ಶ್ರೀನಿವಾಸ ಹ್ಯಾಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
     ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನೂರಾರು ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸುವ ಫಲಕಗಳೊಂದಿಗೆ ಗವಿಮಠದಿಂದ ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯಭವನದವರೆಗೂ ಜಾಥಾ ನಡೆಸಿದರು.  ಜಿಲ್ಲಾ ಪಂಚಾಯತಿ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ವಯಕ್ತಿಕ ಶೌಚಾಲಯದ ಮಹತ್ವ ಬಿಂಬಿಸುವ ಫಲಕವುಳ್ಳ ವಿಶೇಷ ವಾಹನಗಳಿಗೂ ಸಹ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.  ವಿವಿಧ ಸಾಂಸ್ಕøತಿಕ ಕಲಾತಂಡಗಳು ಪಾಲ್ಗೊಂಡು ಜಾಥಾ ಬಗ್ಗೆ ಸಾರ್ವಜನಿಕರ ಗಮನಸೆಳೆಯಲು ಸಹಕಾರಿಯಾದವು.  

Thursday, 25 September 2014

ಸೆ.26 ರಿಂದ ಅಂತರ ಕಾಲೇಜು ಕ್ರೀಡಾಕೂಟ : 34 ಕಾಲೇಜುಗಳು ಭಾಗಿ


ಕೊಪ್ಪಳ ಸೆ.25 (ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೊಸಬಂಡಿಹರ್ಲಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಸೆ.26 ರಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಒಟ್ಟು 34 ಕಾಲೇಜುಗಳು ಭಾಗವಹಿಸಲಿವೆ.
ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲೆಯ 12 ಕಾಲೇಜುಗಳಿಂದ 107 ಪುರುಷ ಮತ್ತು 38 ಮಹಿಳೆ ಸೇರಿ 145 ವಿದ್ಯಾರ್ಥಿಗಳು ಸ್ಪರ್ಧೆಗೆ ಇಳಿಯಲಿದ್ದಾರೆ.  ಬಳ್ಳಾರಿ ಜಿಲ್ಲೆಯ 22 ಕಾಲೇಜುಗಳ 224 ಪುರುಷ ಮತ್ತು  85 ಮಹಿಳೆ ಸೇರಿದಂತೆ 309 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಒಟ್ಟಾರೆ ಅಂತರ ಕಾಲೇಜು ಕ್ರೀಡಾಕೂಟದಲ್ಲಿ 454 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ಜರುಗಲಿವೆ ಎಂದು ಹೊಸಬಂಡಿಹರ್ಲಾಪುರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ. ಕೃಷ್ಣಪ್ಪ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ


ಕೊಪ್ಪಳ ಸೆ.25(ಕರ್ನಾಟಕ ವಾರ್ತೆ): ಕರ್ನಾಟಕ ರೂರಲ್ ಇನ್‍ಪ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ನಿಯಮಿತದ ಗುಲಬರ್ಗಾ ವಲಯದ ಅಧೀಕ್ಷಕ ಅಭಿಯಂತರರಾಗಿ ಬಿ.ಎಸ್.ಹಿರೇಗೌಡರ ಅವರು ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ್ದಾರೆ.
    ಈ ವಲಯದ ವ್ಯಾಪ್ತಿಗೆ ಗುಲ್ಬರ್ಗಾ, ಬೀದರ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಕಾಮಗಾರಿಗಳು ನಿರ್ವಹಣೆಗೆ ಒಳಪಡುತ್ತವೆ. ಅಧೀಕ್ಷಕ ಅಭೀಯಂತರರು, ಕೆ.ಆರ್.ಐ.ಡಿ.ಎಲ್. ಗುಲ್ಬರ್ಗಾ ವಲಯ, ಗುಲ್ಬರ್ಗಾ ಇವರಿಗೆ ಉದ್ದೇಶಿಸಲ್ಪಟ್ಟ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ರಹಸ್ಯ ಪತ್ರ ಹಾಗೂ ಖಾಸಗಿ ಪತ್ರಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಬಿ.ಎಸ್.ಹಿರೇಗೌಡರ್ ಬಿ.ಇ. (ಸಿವಿಲ್), ಅಧೀಕ್ಷಕರ ಅಭಿಯಂತರರು, ಕರ್ನಾಟಕ ರೂರಲ್ ಇನ್‍ಪ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ನಿಯಮಿತ, ಗುಲ್ಬರ್ಗಾ-585105, ದೂರವಾಣಿ ಸಂಖ್ಯೆ : 08472-249341, ಮೊ.9480828255 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕುರಿ, ಆಡು ಸಾಕಾಣಿಕೆ ತರಬೇತಿ ಶಿಬಿರ

ಕೊಪ್ಪಳ ಸೆ.25(ಕರ್ನಾಟಕ ವಾರ್ತೆ): ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟ ಇವರ ವತಿಯಿಂದ ಎರಡು ದಿನಗಳ ಉಚಿತ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಶಿಬಿರವನ್ನು ಅಕ್ಟೋಬರ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು.  ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಸೆ.30 ರೊಳಗಾಗಿ ನೊಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ವಿಳಾಸ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ,  ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103. ದೂರವಾಣಿ ಸಂಖ್ಯೆ : 08354-244028/244048, ಮೊಬೈಲ್ : 9482630790 ಸಂಪರ್ಕಿಸಬಹುದು ಎಂದು ಎಂದು ಪ್ರಕಟಣೆ ತಿಳಿಸಿದೆ.

ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ : ಆರೋಪಿಗೆ 4 ವರ್ಷ ಜೈಲು ಶಿಕ್ಷೆಕೊಪ್ಪಳ ಸೆ. 25 (ಕ.ವಾ): ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಆರೋಪಿಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 04 ವರ್ಷ ಜೈಲು ಶಿಕ್ಷೆ ವಿಧಿಸಿದೆ.
        ಕುಷ್ಟಗಿ ತಾಲೂಕು ಕಡೆಕೊಪ್ಪದ ಶಿವಕುಮಾರ ಚೌವಾಣ ಎಂಬಾತನೆ ಶಿಕ್ಷೆಗೆ ಒಳಗಾದ ಆರೋಪಿ.  ಕಳೆದ 2013 ರ ಅಕ್ಟೋಬರ್ 01 ರಂದು ದೋಟಿಹಾಳ ಗ್ರಾಮದ ಬಳಿ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಶಿವಕುಮಾರ ಚೌವಾಣ ಯತ್ನಿಸಿದ್ದ.  ನಂತರ ಈ ಕುರಿತು ತನಿಖೆ ನಡೆಸಿದ ಕುಷ್ಟಗಿ ಪಿಎಸ್‍ಐ ರಾಮಚಂದ್ರ ಹೆಚ್ ಬಳ್ಳಾರಿ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಅವರು, ಆರೋಪಿಗೆ ಕಲಂ 8, ಪೋಕ್ಸೋ ಅಪರಾಧಕ್ಕಾಗಿ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ 354(ಎ) ಅಪರಾಧಕ್ಕಾಗಿ 01 ವರ್ಷ ಶಿಕ್ಷೆಯನ್ನು ವಿಧಿಸಿ ಸೆ. 22 ರಂದು ತೀರ್ಪು ನೀಡಿದ್ದಾರೆ.  ಸಾರ್ವಜನಿಕ ಅಭಿಯೋಜಕ ಎಂ.ಎ. ಪಾಟೀಲ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು.

ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಕೊಪ್ಪಳ ಸೆ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಅ. 09 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
        ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ವಹಿಸುವರು.  ಸಭೆಯಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರು ಯೋಜನೆಗಳು, ರಾಜೀವ್‍ಗಾಂಧಿ ಸಬ್‍ಮಿಷನ್, ಸಮಾಜ ಕಲ್ಯಾಣ ಮತ್ತು ಆರೋಗ್ಯ ಇಲಾಖೆಗಳ ವಿವಿಧ ಯೋಜನೆಗಳ ಅನುಷ್ಠಾನ, ವಯಕ್ತಿಕ ಶೌಚಾಲಯ ಪ್ರಗತಿ, ಕಸ ವಿಲೇವಾರಿ ಜಾರಿ ಯೋಜನೆ, ಉದ್ಯೋಗಖಾತ್ರಿ ಯೋಜನೆ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.

ಸೆ. 29 ರಂದು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಕೊಪ್ಪಳ ಸೆ. 25 (ಕ.ವಾ): ಕೊಪ್ಪಳ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಸೆ. 29 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.
        ಸಭೆಯ ಅಧ್ಯಕ್ಷತೆಯನ್ನು ಸಂಸದ ಸಂಗಣ್ಣ ಕರಡಿ ಅವರು ವಹಿಸುವರು.  ಸಭೆಯಲ್ಲಿ ಕೇಂದ್ರ ಹಾಗೂ ಕೇಂದ್ರ ಪುರಸ್ಕøತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ತಿಳಿಸಿದ್ದಾರೆ.

ಬೀದಿನಾಟಕ ತಂಡಗಳಿಗೆ ಆಹ್ವಾನಕೊಪ್ಪಳ ಸೆ. 25 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ದೇವದಾಸಿ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಬೀದಿನಾಟಕಗಳ ಮೂಲಕ ಜನಜಾಗೃತಿ ಮೂಡಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಬೀದಿನಾಟಕ ತಂಡಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
        ಹೆಚ್ಚಿನ ವಿವರಗಳನ್ನು ಯೋಜನಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ, ಗವಿಶ್ರೀ ನಗರ, ಎಪಿಎಂಸಿ ಎದುರು, ಗವಿಮಠ ರಸ್ತೆ, ಕೊಪ್ಪಳ ಇವರನ್ನು ಅಕ್ಟೋಬರ್ 10 ರ ಒಳಗಾಗಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


ಅಧಿಕಾರಿಗಳಿಗೆ ಐಪಿಪಿಇ ತಾಲೂಕ ಮಟ್ಟದ ತರಬೇತಿಕೊಪ್ಪಳ ಸೆ.25(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತಿ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಐಪಿಪಿಇ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತಾಲೂಕ ಮಟ್ಟದ ತರಬೇತಿಯನ್ನು ಏರ್ಪಡಿಸಲಾಯಿತು.
          ಜಿಲ್ಲಾ ಪಂಚಾಯತಿಯ ಜಿಲ್ಲಾ ಯೋಜನಾ ಅಂದಾಜು ಹಾಗೂ ಮೌಲ್ಯಮಾಪನ ಅಧಿಕಾರಿ ಪ್ರಭು ಸಿ.ಮಾನೆ ಅವರು ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕಂದಾಯ ಗ್ರಾಮಗಳವಾರು ಐಪಿಪಿಇ ನಡೆಸಿ ಸಮಗ್ರ ಗ್ರಾಮೀಣ ಅಭಿವೃದ್ದಿ ಯೋಜನೆಯನ್ನು ತಯಾರಿಸಿ ಅದನ್ನು ಅ.01 ರಿಂದ ಸೆ.15 ರೊಳಗಾಗಿ ನಡೆಯುವ ಗ್ರಾಮಸಭೆಗಳಲ್ಲಿ ಯೋಜನೆಯನ್ನು ಅನುಮೋದನೆ ಪಡೆಯಬೇಕಾಗಿರುತ್ತದೆ ಎಂದು ತರಬೇತಿಯಲ್ಲಿ ವಿವರಿಸಿದರು. ನಂತರ ಗ್ರಾಮ ಪಂಚಾಯತಿ ಮಟ್ಟದಲ್ಲಿ ಐಪಿಪಿಇ ಜರುಗಿಸುವ ಕುರಿತು ವಿವಿಧ ರೀತಿಯ ಕಿರುಚಿತ್ರಗಳನ್ನು ಪ್ರೋಜೆಕ್ಟರ್ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕರಾದ ವಿಷ್ಣುತೀರ್ಥ, ಜಿಲ್ಲಾ ಸಹಾಯಕ ಸಮನ್ವಯ ಅಧಿಕಾರಿ ಮಹಾಂತಸ್ವಾಮಿ, ಜಿಲ್ಲಾ ಎಂಐಎಸ್ ಸಂಯೋಜಕರಾದ ಮೈನುದ್ದೀನ್, ಜಿಲ್ಲಾ ಐಇಸಿ ಸಂಯೋಜಕರಾದ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕರಾದ ದೇವರಾಜ ಪತ್ತಾರ, ತಾಲೂಕ ಎಂಐಎಸ್ ಸಂಯೋಜಕರಾದ ಮಂಜುನಾಥ ಜವಳಿ, ತಾಲೂಕ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ವಿವಿಧ ಇಲಾಖೆಯ 35 ಗ್ರಾಮ ಪಂಚಾಯತಿಗಳ ಗಣಕಯಂತ್ರ ನಿರ್ವಾಹಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಬಿ.ಇಡಿ ಕೋರ್ಸ್ : ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಕೊಪ್ಪಳ ಸೆ.25(ಕರ್ನಾಟಕ ವಾರ್ತೆ): ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪ್ರಸಕ್ತ ಸಾಲಿನ ಬಿ.ಇಡಿ ಕೋರ್ಸಿನ ದಾಖಲಾತಿಗಾಗಿ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನರಹಿತ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
        ಅರ್ಜಿ ಸಲ್ಲಿಸಲು ಅ.18 ಕೊನೆಯ ದಿನವಾಗಿದ್ದು, ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮೀಸಲಾತಿ ವಿವರಗಳು ಹಾಗೂ ಇತರೆ ಸೂಚನೆಗಳನ್ನು ವೆಬ್‍ಸೈಟ್ ವಿಳಾಸ :  www.schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ. ವೆಬ್‍ಸೈಟ್‍ನಲ್ಲಿ ಮಾಹಿತಿಗಳನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿಗಳನ್ನು ಕ್ರಮವಾಗಿ ಭರ್ತಿ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಕೇಂದ್ರಿಕೃತ ದಾಖಲಾತಿ ಘಟಕ, ಬೆಂಗಳುರು ಇವರ ದೂರವಾಣಿ ಸಂಖ್ಯೆ : 080-22483140, 22483145 ಇವರನ್ನು ಸಂಪರ್ಕಿಸಬಹುದು ಎಂದು ಮುನಿರಾಬಾದ್ ಡಯಟ್ ಪ್ರಾಚಾರ್ಯರು ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆ : ಅರ್ಜಿ ಸಲ್ಲಿಸಲು ಅ. 15 ಕೊನೆಯ ದಿನಕೊಪ್ಪಳ ಸೆ. 25 (ಕ.ವಾ): ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿ,  ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿರುತ್ತದೆ.
         ಮಳೆಯಾಶ್ರಿತ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ.  ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳ ಸುಮಾರು 2. 5 ಲಕ್ಷ ಹೆಕ್ಟೇರ್ ಒಣಭೂಮಿ ವಿಸ್ತೀರ್ಣದಲ್ಲಿ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು.  ಈ ಯೋಜನೆಯಡಿ ಮಳೆನೀರಿನ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶುಸಂಗೋಪನಾ ಚಟುವಟಿಕೆಗಳು, ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದ್ದು, ಯೋಜನೆಯನ್ನು ಜಿಲ್ಲೆಯಲ್ಲಿ ಎಲ್ಲ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಅಭಿಯಾನದ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.  ಈ ಯೋಜನೆಯ ಲಾಭವನ್ನು ಎಲ್ಲ ವರ್ಗದ ರೈತರು ಪಡೆಯಲು ಅವಕಾಶವಿದೆ. 
        ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಿತ ನೀರಾವರಿಗೆ ವಿಶೇಷ ಪ್ಯಾಕೇಜ್ ವ್ಯವಸ್ಥೆಯಿದ್ದು, ಇದರಲ್ಲಿ ಸ್ಥಳದಲ್ಲಿಯೇ ಮಣ್ಣಿನ ತೇವಾಂಶ ರಕ್ಷಣೆ ಕ್ರಮಗಳು, ನೀರು ಸಂಗ್ರಹಣಾ ರಚನೆಗಳು ಅಂದರೆ ಕೃಷಿ ಹೊಂಡ (ಪಾಲಿಥೀನ್/ಟಾರ್ಪಲಿನ್ ಸಹಿತ), ನೀರು ಎತ್ತಲು ಡೀಸಲ್ ಅಥವಾ ಸೋಲಾರ್ ಪಂಪ್‍ಸೆಟ್, ನೀರು ಹಾಯಿಸಲು ಲಘು ನೀರಾವರಿ ಘಟಕ, ಪರಿವರ್ತಿತ ಬಳೆ ಪದ್ಧತಿಯ ಪ್ರಾತ್ಯಕ್ಷತೆ ಅಂದರೆ ಪಾಲಿಹೌಸ್ ಒಳಗೊಂಡ ತೋಟಗಾರಿಕೆ ಬೆಳೆ ಪದ್ಧತಿ ಅಥವಾ ಪಾಲಿಹೌಸ್ ರಹಿತ ಕೃಷಿ/ತೋಟಗಾರಿಕೆ ಬೆಳೆ ಪದ್ಧತಿ, ಪಶು ಸಂಗೋಪನಾ ಚಟುವಟಿಕೆಗಳು (ಐಚ್ಛಿಕ) ಈ ಯೋಜನೆಯ ಪ್ಯಾಕೇಜ್‍ನಲ್ಲಿ ಇವೆ.  ಈ ಪ್ಯಾಕೇಜ್‍ನ ಎಲ್ಲ ಘಟಕಗಳ ಪೈಕಿ ಪಶುಸಂಗೋಪನಾ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದವು ಕಡ್ಡಾಯವಾಗಿದೆ.  ರೈತರಿಗೆ ವಿವಿಧ ಕೃಷಿ/ತೋಟಗಾರಿಕೆ ಬೆಳೆ ಪದ್ಧತಿಗಳನ್ನು ಮತ್ತು ನೀರು ಸಂಗ್ರಹಣಾ ರಚನೆಗಳನ್ನು (ಕೃಷಿ ಹೊಂಡ) ತಮ್ಮ ಕ್ಷೇತ್ರದ ಅನುಕೂಲತೆಗೆ ಅನುಗುಣವಾಗಿ ಆಯ್ಕೆ ಮಾಡಲು ಅವಕಾಶವಿದೆ.  ಈ ಪ್ಯಾಕೇಜ್ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 80 ರಷ್ಟು ಸಹಾಯಾನುದಾನ ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಾನುದಾನ ನೀಡಲಾಗುವುದು.  ಪಾಲಿಹೌಸ್ ಒಳಗೊಂಡ ತೋಟಗಾರಿಕೆ ಬೆಳೆ ಪದ್ಧತಿಗೆ ಶೇ. 50 ರಷ್ಟು ಸಹಾಯಾನುದಾನ ನೀಡಲಾಗುವುದು.  ಪಾಲಿಹೌಸ್ ಸಹಿತ ಪ್ಯಾಕೇಜ್‍ಗೆ ಪ್ರತಿ ತಾಲೂಕಿಗೆ 10 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ.  ಮತ್ತು ಪಾಲಿಹೌಸ್ ರಹಿತ ಪ್ಯಾಕೇಜ್‍ಗೆ ಪ್ರತಿ ತಾಲೂಕಿಗೆ 200 ಫಲಾನುಭವಿಗಳ ಗುರಿ ಇದೆ. 
        ರೈತರು ನಿಗದಿತ ಅರ್ಜಿ ನಮೂನೆಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಕ್ಟೋಬರ್ 15 ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ವೆಬ್‍ಸೈಟ್   www.raitamitra.kar.nic.in ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1800-425-3553 ಅಥವಾ 1800-180-1551 ರಿಂದ ಪಡೆಯಬಹುದಾಗಿದೆ.  ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 26 ರಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ : ಯಶಸ್ವಿಗೆ ಕೃಷ್ಣ ಉದಪುಡಿ ಕರೆ
ಕೊಪ್ಪಳ ಸೆ. 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪಂಚಾಯತಿಯ ವತಿಯಿಂದ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹದ ಅಂಗವಾಗಿ ಸೆ. 26 ರಿಂದ ಅ. 02 ರವರೆಗೆ ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಾರ್ವಜನಿಕರು, ಅಧಿಕಾರಿಗಳು ಸಪ್ತಾಹದ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಮನವಿ ಮಾಡಿದರು.
        ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
        ಜಾಗತಿಕ ಮಟ್ಟದಲ್ಲಿ ಸ್ವಚ್ಛತೆ ಹಾಗೂ ಶೌಚಾಲಯಗಳು ತುರ್ತು ಹಾಗೂ ಆದ್ಯತೆಯ ವಿಷಯಗಳಾಗಿವೆ.  ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಅನೈರ್ಮಲ್ಯದ ಅಭ್ಯಾಸಗಳನ್ನು ತೊಡೆದು ಹಾಕಲು ಹಳ್ಳಿಗಳಲ್ಲಿ ಸ್ವಚ್ಛ ಪರಿಸರವನ್ನು ನಿರ್ಮಿಸಲು ನಿರ್ಮಲ ಭಾರತ ಅಭಿಯಾನವನ್ನು ದೇಶಾದ್ಯಂತ ಅನುಷ್ಠಾನಗೊಳಿಸಲಾಗುತ್ತಿದೆ.  ಆದರೂ ಗ್ರಾಮೀಣ ನೈರ್ಮಲ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ.  ಗ್ರಾಮೀಣರ ನೂರಾರು ವರ್ಷಗಳ ಅನಿಷ್ಠ ರೂಢಿ, ಅಭ್ಯಾಸಗಳನ್ನು ತೊಡೆದುಹಾಕುವಂತಹ ಮನಸ್ಥಿತಿ ಅವರಲ್ಲಿ ನಿರ್ಮಾಣ ಮಾಡಬೇಕಿದೆ.  ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಸಪ್ತಾಹ ದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬಯಲು ಮಲವಿಸರ್ಜನೆ ಮುಕ್ತ ಹಾಗೂ ಉತ್ತಮ ಪರಿಸರದ ಜಿಲ್ಲೆಯನ್ನಾಗಿಸಲು ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ.
        ನಿರ್ಮಲ ಭಾರತ ಅಭಿಯಾನದಡಿ ರಾಷ್ಟ್ರೀಯ ಸ್ವಚ್ಛತಾ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಸೆ. 26 ರಿಂದ ಅ. 02 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ವಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಗ್ರಾಮಗಳ ನೈರ್ಮಲ್ಯ ಕಾಪಾಡಿಕೊಳ್ಳಲು ಜನಜಾಗೃತಿ ಮೂಡಿಸಲಾಗುತ್ತದೆ.  ಸೆ. 26 ರಿಂದ ಈ ಸಪ್ತಾಹ ಕಾರ್ಯಕ್ರಮಕ್ಕೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಚಾಲನೆ ನೀಡಲಾಗುವುದು.  ಅಂದು ಜಿಲ್ಲಾ ಮಟ್ಟದಲ್ಲಿ ಕೊಪ್ಪಳದ ಗವಿಮಠದಿಂದ ಸಾಹಿತ್ಯ ಭವನದವರೆಗೆ ಎನ್.ಎಸ್‍ಎಸ್ ಘಟಕ, ವಸತಿ ನಿಲಯಗಳ ವಿದ್ಯಾರ್ಥಿಗಳು, ಧರ್ಮಸ್ಥಳ ಸ್ವ-ಸಹಾಯ ಸಂಘ ಮುಂತಾದವರ ಸಹಯೋಗದೊಂದಿಗೆ ಸ್ವಚ್ಛತಾ ರಥದ ಸಹಿತ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಾಥಾ ದಲ್ಲಿ ಜನಜಾಗೃತಿ ಮೂಡಿಸುವ ಸ್ವಚ್ಛತಾ ರಥ ಸಂಚರಿಸಲಿದೆ ಅಲ್ಲದೆ ಜಾಥಾದಲ್ಲಿ ಸಾಂಸ್ಕøತಿಕ ತಂಡಗಳೂ ಸಹ ಭಾಗವಹಿಸಲಿವೆ.  ಗ್ರಾಮ ಮಟ್ಟದಲ್ಲಿಯೂ ಸಹ ಗ್ರಾಮ ಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಪ್ರೇರಣೆದಾರರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾ, ಸ್ವ-ಸಹಾಯ ಸಂಘಗಳ ಕಾರ್ಯಕರ್ತೆಯರು, ಸದಸ್ಯರುಗಳು ಪಾಲ್ಗೊಳ್ಳುವರು.  ಸೆ. 27 ರಂದು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ನೌಕರರು, ಜನಪ್ರತಿನಿಧಿಗಳು, ಪಂಚಾಯತಿ ಸಿಬ್ಬಂದಿಗಳು, ವಿವಿಧ ಇಲಾಖೆಗಳ ವಸತಿ ನಿಲಯಗಳ ವಿದ್ಯಾರ್ಥಿಗಳಿಂದ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಲಾಗುವುದು.  ಸೆ. 28 ರಂದು ಜಿಲ್ಲಾ ಮಟ್ಟದಲ್ಲಿ ಕೊಪ್ಪಳದ ಗವಿಮಠದ ಮಹಾಸ್ವಾಮೀಜಿಗಳಿಂದ ಕಿನ್ನಾಳ, ಮಂಗಳೂರು, ಮಂಗಳೂರು, ಬೇವೂರು, ನೆಲಜೇರಿ ಹಾಗೂ ಇರಕಲ್ಲಗಡ ಗ್ರಾಮಗಳ ಜನರಿಗೆ ಸ್ವಚ್ಛತೆ ಮತ್ತು ಜಾಗೃತಿ ಮೂಡಿಸುವ ಪಾದಯಾತ್ರೆ ಅದೇ ರೀತಿ ಪ್ರತಿ ಗ್ರಾಮ ಪಂಚಾಯತಿ ಮತ್ತು ಗ್ರಾಮ ಮಟ್ಟದಲ್ಲಿ ಸರ್ವಧರ್ಮ ಗುರುಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಯಲಿದೆ.  ಸೆ. 29 ರಂದು ಜಿಲ್ಲ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಂಚಾಯತಿಯ ಸಿಬ್ಬಂದಿಗಳ ನೇತೃತ್ವದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗುವುದು.  ಅಲ್ಲದೆ ಅಧಿಕಾರಿಗಳು ತಮ್ಮ ಕಚೇರಿ ಹಾಗೂ ಸುತ್ತಮುತ್ತಲ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗುವುದು.  ಸೆ. 30 ರಂದು ಪ್ರತಿ ಗ್ರಾಮ ಮಟ್ಟದಲ್ಲಿ ಪ್ರತಿ ಗ್ರಾಮದ ಕನಿಷ್ಟ 10 ರಿಂದ 20 ಯುವಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ಆಯೋಜಿಸುವ ಮೂಲಕ ಸ್ವಚ್ಛತೆ ಮತ್ತು ಶೌಚಾಲಯದ ಅಗತ್ಯ ಕುರಿತಂತೆ ಜಾಗೃತಿ ಮೂಡಿಸಲಿದ್ದಾರೆ.  ಅ. 01 ರಂದು ಬೆಳಿಗ್ಗೆ 5 ಗಂಟೆಗೆ ಪ್ರತಿ ಗ್ರಾಮ ಮತ್ತು ಪಂಚಾಯತಿ ಮಟ್ಟದಲ್ಲಿ ಬಯಲು ಮಲವಿಸರ್ಜನೆಯನ್ನು ವಿರೋಧಿಸುವ ನಿಟ್ಟಿನಲ್ಲಿ ವಿಸಿಲ್ ಕಾರ್ಯಕ್ರಮ, 10 ಗಂಟೆಗೆ ಶೌಚಾಲಯ ಹೊಂದದೇ ಇರುವವರ ಮನೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಮತ್ತು ಶೌಚಾಲಯ ಹೊಂದುವಂತೆ ಮನವೊಲಿಸುವ ಕಾರ್ಯಕ್ರಮ.  ಸಂಜೆ 5 ಗಂಟೆಗೆ ವೈದ್ಯರು, ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಸ್ವಚ್ಛತೆ ಹಾಗೂ ಶೌಚಾಲಯದ ಅಗತ್ಯತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಅ. 02 ರಂದು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಡಳಿತ ಭವನದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವುದರೊಂದಿಗೆ ಗಾಂಧಿ ಜಯಂತಿ ಆಚರಣೆ ಮಾಡುವುದು ಅಲ್ಲದೆ ಪ್ರತಿ ಗ್ರಾಮ ಮಟ್ಟದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಕುರಿತು ಭಾಷಣ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗುವುದು.  ಈ ವಿಶೇಷ ಸಪ್ತಾಹ ಕಾರ್ಯಕ್ರಮದ ಅನುಷ್ಠಾನದ ಹೊಣೆಗಾರಿಕೆಯನ್ನು ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಹಿಸಲಾಗಿದ್ದು, ಇದರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೂ ಸೇರಿದಂತೆ ಪಂಚಾಯತಿಯ ಸಿಬ್ಬಂದಿಗಳ ಪಾತ್ರವೂ ಮಹತ್ವದ್ದಾಗಿದೆ.  ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ.  ಎಲ್ಲರೂ ಒಗ್ಗೂಡಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಮನವಿ ಮಾಡಿದರು.
        ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಜಿ.ಪಂ. ಯೋಜನಾಧಿಕಾರಿ ಬಿ. ಕಲ್ಲೇಶ್ ಸೇರಿದಂತೆ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಪಿಡಿಓಗಳು ಸಭೆಯಲ್ಲಿ ಭಾಗವಹಿಸಿದ್ದರು.

Tuesday, 23 September 2014

ತೋಟಗಾರಿಕೆಗೆ ಸಹಾಯಧನ : ರೈತರಿಂದ ಅರ್ಜಿ ಆಹ್ವಾನಕೊಪ್ಪಳ ಸೆ.22(ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಸೌಲಭ್ಯ ಜಾರಿಗೊಳಿಸಲಾಗಿದ್ದು, ಆಸಕ್ತ ರೈತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
      ತೋಟಗಾರಿಕೆ ಇಲಾಖೆಯು ರೈತರಿಗೆ ಮಾವು, ದ್ರಾಕ್ಷಿ, ಸಪೋಟಾ, ಲಿಂಬೆ, ಪೇರಲ, ಬಾಳೆ, ಪಪ್ಪಾಯ, ಹೈಬ್ರಿಡ್ ತರಕಾರಿ ಬೆಳೆ, ಕಟ್ ಪ್ಲವರ್, ಬಲ್ಬಸ್ ಹಾಗೂ ಬಿಡಿ ಹೂವಿನ ತೋಟಕ್ಕೆ ಸಹಾಯಧನ ಸೌಲಭ್ಯ ಕಲ್ಪಿಸಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
      ಪ್ರಸ್ತಾವನೆ ಆಧಾರಿತ ಕಾರ್ಯಕ್ರಮಗಳಾದ ಪಕ್ಷಿ/ಕೀಟ ನಿರೋಧಕ ಬಲೆ, ಪ್ಲಾಸ್ಟಿಕ್ ಮಲ್ಚಿಂಗ್, ಪ್ಯಾಕ್ ಹೌಸ್, ವೈಯಕ್ತಿಕ/ಸಮುದಾಯ ನೀರು ಸಂಗ್ರಹಣಾ ಘಟಕ, ಯಾಂತ್ರಿಕರಣ, ಸಣ್ಣ ನರ್ಸರಿ ಸ್ಥಾಪನೆ, ಹಸಿರು ಮನೆ, ನೇರಳು ಪರದೆ, ಜೀವಸಾರ ಘಟಕ ಮತ್ತು ಎರೆಹುಳು ಗೊಬ್ಬರ ಘಟಕಗಳಿಗೆ ಸಹಾಯಧನ. ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಸೌಲಭ್ಯ ಅಳವಡಿಸಲು ಮೊದಲ 2.00 ಹೆಕ್ಟರ್ ಪ್ರದೇಶಕ್ಕೆ ಶೇ.90 ರಷ್ಟು ನಂತರದ 3.00 ಹೇಕ್ಟರ್‍ಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಜಿಲ್ಲಾ ಮಟ್ಟ ಮತ್ತು ಅಯಾ ತಾಲ್ಲೂಕಿಗೆ ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿಗಳನ್ವಯ ವಿತರಿಸಲಾಗುವುದು.
       ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಕೊಪ್ಪಳ : 08539-231304, ಗಂಗಾವತಿ: 08533-230358, ಕುಷ್ಟಗಿ : 08536-267498 ಹಾಗೂ ಯಲಬುರ್ಗಾ: 08534-220429 ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಗ್ರಾಮ ಪಂಚಾಯತಿಗಳಲ್ಲಿ ರೋಜಗಾರ ದಿನಾಚರಣೆ
ಕೊಪ್ಪಳ ಸೆ. 22 (ಕ.ವಾ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕುರಿತು ಗ್ರಾಮೀಣ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಯಲಬುರ್ಗಾ ತಾಲೂಕಿನ ರಾಜೂರು, ಹಿರೇಬಿಡನಾಳ ಮತ್ತು ಮುರಡಿ ಗ್ರಾಮ ಪಂಚಾಯತಿಗಳಲ್ಲಿ ರೋಜಗಾರ್ ದಿನಾಚರಣೆ ಆಚರಿಸಲಾಯಿತು.
        ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಯೂ ವರ್ಷಕ್ಕೆ ಕನಿಷ್ಟ 100 ದಿನ ಕೂಲಿ ಕೆಲಸ ಪಡೆಯಬೇಕೆಂಬ ಸದುದ್ದೇಶದಿಂದ ಭಾರತ ಸರ್ಕಾರ ಪ್ರತಿ ಗುರುವಾರ ರೋಜಗಾರ ದಿನ ಆಚರಿಸಲು ಆದೇಶಿಸಿದೆ. ಅದರಂತೆ  ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಕಾಯಕ ಸಂಘಗಳನ್ನು ರಚಿಸಲಾಗಿದ್ದು ಅದರಲ್ಲಿ ಕಾಯಕ ಬಂಧುಗಳನ್ನು ಆಯ್ಕೆ ಮಾಡಲಾಗಿದೆ ಕಾಯಕ ಬಂಧುಗಳ ಸಹಯೋಗದೊಂದಿಗೆ ಪ್ರತಿ ಗುರುವಾರ ನಮೂನೆ-6 ತೆಗೆದುಕೊಳ್ಳುವುದರ ಜೊತೆಗೆ ನಮೂನೆ-9 ಅನ್ನು ರೋಜಗಾರಿಗಳಗೆ ಪುನಃ ದಿನಾಂಕ ಸಹಿತ ವಿತರಣೆ ಮಾಡಲು ಆದೇಶಿಸಿದೆ.   ವೈಯಕ್ತಿಕ ಫಲಾನುಭವಿಗಳ ಸಸಿನೆಡುವ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು ಆ ಎಲ್ಲಾ ಫಲಾನುಭವಿಗಳನ್ನು ಸಸಿ ನೆಡುವಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿಯ ಸದಸ್ಯರು, ಹಾಗೂ ಕಾಯಕ ಬಂಧುಗಳ ಮುಖಾಂತರ ಪ್ರೇರೇಪಣೆ ಮಾಡಲಾಗುತ್ತಿದ್ದು ವೈಯಕ್ತಿಯ ಶೌಚಾಲಯ ನಿರ್ಮಾಣ ಮಾಡುವ ರೋಜಗಾರಿಗಳಿಗೆ ಯಾವುದೇ ತೊಂದರೆ ಇಲ್ಲದೆ ಕೂಲಿ ಹಣ ಸಂದಾಯ ಮಾಡುವಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಎಲ್ಲಾ ಗ್ರಾಮ ಪಂಚಾಯತಿಗಳಿಗೂ ಆದೇಶ ನೀಡಲಾಗಿದೆ ಇಂಥ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮುಖಾಂತರ ಜನಸಾಮಾನ್ಯರಿಗೆ ಮಾಹಿತಿ ನೀಡುವಲ್ಲಿ ಗ್ರಾಮ ಪಂಚಾಯತಿ ಮಹತ್ವದ ಪಾತ್ರ ವಹಿಸಬೇಕು ಎಂಧು ಗ್ರಾಮ ಪಂಚಾಯತಿಯ ಹಿರೇಬಿಡನಾಳ ಗ್ರಾ.ಪಂ. ಪಿ.ಡಿ.ಓ ಯಮನೂರಪ್ಪ ಗ್ರಾ.ಪಂ ಹಿರೇಬೀಡನಾಳ,  ರಾಜೂರು ಪಿಡಿಓ ಗವಿಸಿದ್ದಯ್ಯ ಗಂಧದ, ಮುರಡಿ ಗ್ರಾ.ಪಂ. ಪಿಡಿಓ ನಾಗರತ್ನ ಬಿ ಹಾಗೂ ತಾಲೂಕ ಐ.ಇ.ಸಿ ಸಂಯೋಜಕರು ರೋಜಗಾರ್ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಜೀವ ವಿಮಾ ಪಾಲಿಸಿ ಮೊತ್ತ ಪಾವತಿಸಲು ಗ್ರಾಹಕರ ವೇದಿಕೆ ಆದೇಶಕೊಪ್ಪಳ,ಸೆ.22 (ಕರ್ನಾಟಕ ವಾರ್ತೆ): ಜೀವ ವಿಮಾ ಪಾಲಿಸಿಗಳು ಚಾಲ್ತಿಯಲ್ಲಿ ಇರದ ಬಗ್ಗೆ ಪಾಲಿಸಿದಾರರಿಗೆ ಯಾವುದೇ ಮಾಹಿತಿ ನೀಡದೇ ಇರುವುದರಿಂದ, ಭಾರತೀಯ ಜೀವ ವಿಮಾ ನಿಗಮವು ಪಾಲಿಸಿದಾರರಿಗೆ ಪಾಲಿಸಿಯ ಮೊತ್ತ ಪಾವತಿಸಬೇಕು ಎಂದು ಕೊಪ್ಪಳದ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
        ಕೊಪ್ಪಳದ ಜೆಸ್ಕಾಂ ಕಚೇರಿಯಲ್ಲಿ ನೌಕರರಾಗಿದ್ದ ಲಾಲ್ ಹುಸೇನ್ ಎಂಬುವವರು ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‍ಐಸಿ) ಒಟ್ಟು 08 ಜೀವ ವಿಮಾ ಪಾಲಿಸಿಗಳನ್ನು ವೇತನ ಉಳಿತಾಯ ಯೋಜನೆಯಡಿ ಪಡೆದು, ಪ್ರತಿ ತಿಂಗಳ ವೇತನದಿಂದ ಪಾಲಿಸಿಗಳ ಪ್ರೀಮಿಯಂ ಭರಿಸುತ್ತಿದ್ದರು.  ಆದರೆ ಇವರು ಸೇವೆಯಲ್ಲಿರುವಾಗಲೆ 1998 ರ ನವೆಂಬರ್ 21 ರಂದು ಅಪಘಾತದಿಂದ ಮರಣ ಹೊಂದಿದರು.  ಮೃತ ನೌಕರರ ಪತ್ನಿ ತಾಹಿರಾಬೇಗಂ ಅವರಿಗೆ ಈ ಜೀವ ವಿಮಾ ಪಾಲಿಸಿಗಳ ಬಗ್ಗೆ ತಿಳಿದಿರಲಿಲ್ಲ.  ಆದರೆ ಸುಮಾರು ವರ್ಷಗಳ ನಂತರ ಮನೆಯಲ್ಲಿ ಪಾಲಿಸಿಯ ಬಾಂಡ್‍ಗಳು ದೊರಕಿದ ನಂತರ, ಎಲ್‍ಐಸಿ ಕಚೇರಿಗೆ ಭೇಟಿಯಾಗಿ ಪಾಲಿಸಿಗಳ ಮೊತ್ತ ನೀಡುವಂತೆ 2013 ರ ಫೆಬ್ರವರಿ 04 ರಂದು ಕ್ಲೇಮ್-ಫಾರಂಗಳನ್ನು ಸಲ್ಲಿಸಿದರು.  ಆದರೆ ಎಲ್‍ಐಸಿ ಅವರು 08 ಪಾಲಿಸಿಗಳ ಪೈಕಿ 04 ಕ್ಕೆ ಮಾತ್ರ ಮೊತ್ತ ಪಾವತಿಸಲು ಸಮ್ಮತಿಸಿದ್ದು, ಉಳಿದ 04 ಪಾಲಿಸಿಗಳು ಚಾಲ್ತಿಯಲ್ಲಿ ಇಲ್ಲದಿರುವುದರಿಂದ, ಮೊತ್ತ ಪಾವತಿಸಲು ನಿರಾಕರಿಸಿದರು.  ಈ ಕುರಿತು ಮೃತ ನೌಕರರ ಪತ್ನಿ ತಾಹಿರಾಬೇಗಂ ಅವರು ಗ್ರಾಹಕರ ಮೊರೆ ಹೋಗಿದ್ದು, ತನ್ನ ಪತಿ ಪಡೆದ 8 ಪಾಲಿಸಿಗಳು ಸಹ ಅಪಘಾತದ ಲಾಭವನ್ನು ಹೊಂದಿದ್ದು, ಪಾಲಿಸಿಯ ಕಂತನ್ನು ಸಂಬಳದಲ್ಲಿಯೇ ಕಡಿತಗೊಳಿಸಿ ಪಾವತಿಸುವ ವ್ಯವಸ್ಥೆ ಇರುವುದರಿಂದ, 8 ಪಾಲಿಸಿಗಳೂ ಸಹ ಚಾಲ್ತಿಯಲ್ಲಿರುತ್ತವೆ.  ಹೀಗಾಗಿ 8 ಪಾಲಿಸಿಗಳ ಅಪಘಾತದ ಮೊತ್ತ ಸೇರಿ 8. 70 ಲಕ್ಷ ರೂ., ಮಾನಸಿಕ ಮತ್ತು ದೈಹಿಕ ಹಿಂಸೆಗೆ 50 ಸಾವಿರ, ಸೇವಾ ನ್ಯೂನತೆಗೆ 50 ಸಾವಿರ, ಪ್ರಕರಣದ ಖರ್ಚು ರೂ. 10 ಸಾವಿರ ಸೇರಿದಂತೆ ಒಟ್ಟು 9. 80 ಲಕ್ಷ ರೂ. ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದ್ದರು.
        ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು, ಎಲ್‍ಐಸಿ ಅವರು 8 ಪಾಲಿಸಿಗಳ ಪೈಕಿ 4 ಪಾಲಿಸಿಗಳಿಗೆ ಸಂಬಂಧಿಸಿದ ಮೊತ್ತ ಹಾಗೂ ಬೋನಸ್ ಸೇರಿ 1. 84 ಲಕ್ಷ ರೂ. ಗಳನ್ನು 2014 ರ ಏಪ್ರಿಲ್ 22 ರಂದು ವೇದಿಕೆಯ ಮುಖಾಂತರ ಪಾವತಿಸಿದ್ದಾರೆ.  ಉಳಿದ 04 ಪಾಲಿಸಿಗಳಿಗೆ ಸಂಬಂಧಿಸಿದಂತೆ, ಪ್ರೀಮಿಯಂ ಪಾವತಿಯನ್ನು ನೌಕರರ ಪ್ರತಿ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಪಾವತಿಸುವ ವ್ಯವಸ್ಥೆ ಇದ್ದುದರಿಂದ, ಪ್ರೀಮಿಯಂ ಪಾವತಿ ಕುರಿತಂತೆ ಪಾಲಿಸಿದಾರರಿಗೆ ಜೆಸ್ಕಾಂ ನವರು ಅಥವಾ ಎಲ್‍ಐಸಿ ಯವರು ಯಾವುದೇ ರಸೀದಿಯಾಗಲಿ, ದಾಖಲೆಯಾಗಲಿ ನೀಡಿರುವುದಿಲ್ಲ.  ಹೀಗಾಗಿ ಪಾಲಿಸಿ ಚಾಲ್ತಿಯಲ್ಲಿಲ್ಲದ ಕುರಿತು ನಿಗಮದವರು ತಿಳಿಸಿರುವುದಿಲ್ಲವಾದ್ದರಿಂದ, ಪಾಲಿಸಿಯ ಕ್ಲೇಮ್‍ದಾರರು, ಪಾಲಿಸಿಯ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ.  ಇದುವರೆಗೂ ಪಾವತಿಸದೇ ಇರುವ 04 ಪಾಲಿಸಿಗಳ ಮೊತ್ತ 2. 85 ಲಕ್ಷ ರೂ. ಗಳನ್ನು ವಾರ್ಷಿಕ ಶೇ. 10 ಬಡ್ಡಿಯೊಂದಿಗೆ ಪಾವತಿಸಬೇಕು.  ಸೇವಾ ನ್ಯೂನತೆಗೆ 10 ಸಾವಿರ ರೂ. ಪರಿಹಾರ, ಪ್ರಕರಣದ ಖರ್ಚು 5 ಸಾವಿರ ರೂ.ಗಳನ್ನು ಮೂರು ತಿಂಗಳ ಒಳಗಾಗಿ ಪಾವತಿಸುವಂತೆ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

Monday, 22 September 2014

ಭಕ್ತಿ-ಭಾವದಿಂದ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ
ಕೊಪ್ಪಳ ಸೆ. 22 (ಕರ್ನಾಟಕ ವಾರ್ತೆ) : ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಅ. 08 ರಂದು ಜಿಲ್ಲಾ ಕೇಂದ್ರದಲ್ಲಿ ಭಕ್ತಿ ಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
        ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಅಕ್ಟೋಬರ್ 08 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತವು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುವುದು.  ಈ ಬಾರಿ ಜಿಲ್ಲಾ ಮಟ್ಟದಲ್ಲಿ ನಡೆಸುವ ಕಾರ್ಯಕ್ರಮಕ್ಕೆ ಸರ್ಕಾರ ಅನುದಾನವನ್ನು 25 ರಿಂದ 50 ಸಾವಿರ ರೂ. ಗಳಿಗೆ ಹೆಚ್ಚಿಸಿ, ಬಿಡುಗಡೆ ಮಾಡಿದೆ.  ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ 10 ಸಾವಿರ ರೂ. ಅನುದಾನ ಒದಗಿಸಿದೆ.  ವಾಲ್ಮೀಕಿ ಜಯಂತಿಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗುವುದು.  ಮೆರವಣಿಗೆಯಲ್ಲಿ ವಿವಿಧ ಸಾಂಸ್ಕøತಿಕ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ.  ಮೆರವಣಿಗೆಯಲ್ಲಿ ಎಲ್ಲಾ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಬೇಕು.  ಮೆರವಣಿಗೆಯ ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗಿದ್ದು, ಸಮಾರಂಭದಲ್ಲಿ ಗಣ್ಯಾತಿಗಣ್ಯರೆಲ್ಲರು ಭಾಗವಹಿಸಲಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಕುರಿತು ಹಾಗೂ ಜಯಂತಿ ಕಾರ್ಯಕ್ರಮದ ಮಹತ್ವ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು.   ಸಾರ್ವಜನಿಕರು, ಸಂಘಟನೆಗಳ ಪದಾಧಿಕಾರಿಗಳು ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಬೇಕು ಎಂದು  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮನವಿ ಮಾಡಿದರು.  ವಾಲ್ಮೀಕಿ ಜಯಂತಿ ದಿನದಂದು ಹಾಗೂ ಮುನ್ನಾ ದಿನದಂದು, ನಗರದ ಜವಾಹರ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಲು ಅಲ್ಲದೆ ಮೆರವಣಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
        ವಾಲ್ಮೀಕಿ ಜಯಂತಿ ಅಂಗವಾಗಿ ಅಂದು ಸಾಹಿತ್ಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಹೊಸಪೇಟೆಯ ಡಾ. ಪನ್ನಂಗದವರ್ ಅಥವಾ ತೇಜಸ್ವಿ ಕಟ್ಟಿಮನಿ ಅವರನ್ನು ವಿಶೇಷ ಉಪನ್ಯಾಸ ಕಾರ್ಯಕ್ರಮ ನೀಡುವಂತೆ ಆಹ್ವಾನಿಸಲು ತೀರ್ಮಾನಿಸಲಾಯಿತು.  ಅಲ್ಲದೆ ಸಭೆಯಲ್ಲಿ ಉಪಸ್ಥಿತರಿದ್ದ ಹೊಸಪೇಟೆ ಆಕಾಶವಾಣಿ ಕೇಂದ್ರದ ಮಂಜುನಾಥ್ ಡೊಳ್ಳಿನ ಅವರ ಸಲಹೆ ಮೇರೆಗೆ ಪರಿಶಿಷ್ಟ ವರ್ಗದವರಿಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ದೊರೆಯುವ ವಿವಿಧ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಡಿಕೆ ಪತ್ರವನ್ನು ತಯಾರಿಸಿ, ಕಾರ್ಯಕ್ರಮದ ದಿನದಂದು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು.  
        ಸಭೆಯಲ್ಲಿ ಡಿವೈಎಸ್‍ಪಿ ರಾಜೀವ್, ಸಮಾಜದ ಮುಖಂಡರಾದ ಮಂಜುನಾಥ ಗೊಂಡಬಾಳ, ಎಂ.ಹೆಚ್. ವಾಲ್ಮೀಕಿ, ಹನುಮೇಶ್ ನಾಯಕ್, ರತ್ನಾಕರ್ ಟಿ., ಶರಣಪ್ಪ ನಾಯಕ್, ರಾಮಣ್ಣ ಕಲ್ಲನ್ನವರ್, ಪ್ರಭುಗೌಡ ಪಾಟೀಲ್, ರಾಜಕುಮಾರ ನಾಯಕ್ ಸೇರಿದಂತೆ, ಗಣ್ಯರಾದ ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರ್ ಮತ್ತಿತರ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.