Saturday, 30 August 2014

ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನಕೊಪ್ಪಳ ಆ.30(ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ ಹಳಿಯಾಳ ಇವರು ಸೆಪ್ಟಂಬರ್ ತಿಂಗಳಿನಲ್ಲಿ ದಿ.8 ರಿಂದ 15 ದಿನಗಳ ಉಚಿತ ಬೇಕರಿ, ಉತ್ಪನ್ನಗಳ ಮತ್ತು ಕ್ಯಾಂಡಲ್, ಸೋಪ್, ಫಿನಾಯಿಲ್ ಇತ್ಯಾದಿ ವಸ್ತುಗಳ ತಯಾರಿಕೆ ಸ್ವ-ಉದ್ಯೋಗ ತರಬೇತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, 18 ರಿಂದ 45 ವರ್ಷದೊಳಗಿನ ರಾಜ್ಯದ ಯಾವುದೇ ಭಾಗದ ಆಸಕ್ತ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು. ಸ್ವ-ಸಹಾಯ ಸಂಘದ ಸದಸ್ಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲಿಚ್ಚಿಸುವವರು ತಮ್ಮ ಸ್ವವಿವರವುಳ್ಳ ಮಾಹಿತಿಯನ್ನು ಜೊತೆ ಪಡೆಯಲಿಚ್ಚಿಸುವ ತರಬೇತಿಯ ಹೆಸರನ್ನು ಬಿಳಿ ಹಾಳೆಯಲ್ಲಿ ಬರೆದು ನಿರ್ದೇಶಕರು, ದೇಶಪಾಂಡೆ ರುಡ್‍ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾನಗರ, ಹಳಿಯಾಳ-581329 ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08284-220807, 9482188780, 9483485489 ನ್ನು ಸಂಪರ್ಕಿಸಬಹುದಾಗಿದೆ ಅಥವಾ ಸಂಸ್ಥೆಯ ವೆಬ್‍ಸೈಟ್  www.rsetihaliyal.org ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗೌರಿ-ಗಣೇಶ ಹಬ್ಬ : ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಾಜ್ಞೆ ಜಾರಿಕೊಪ್ಪಳ ಆ.30(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಆಚರಿಸಲಾಗುವ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗೆ ಅನುಕೂಲವಾಗುವಂತೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಜಾರಿಗೊಳಿಸಿದ್ದಾರೆ.
        ನಿಷೇಧಾಜ್ಞೆಯನ್ವಯ ಕೊಪ್ಪಳ ಜಿಲ್ಲೆಯಲ್ಲಿರುವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆ.29 ರಿಂದ ಸೆ.13 ರವರೆಗೆ  ಮಧ್ಯಪಾನ, ಮದ್ಯ ಮಾರಾಟ ನಿಷೇಧಿಸಲಾಗಿದೆ.  ಆ.31 ರಿಂದ ಸೆ.01 ರವರೆಗೆ ಕೊಪ್ಪಳ ಗ್ರಾಮೀಣ, ಮುನಿರಾಬಾದ್, ಬೇವೂರು, ಗಂಗಾವತಿ ನಗರ, ಕಾರಟಗಿ ಮತ್ತು ಕುಷ್ಟಗಿ. ಸೆ.02 ರಿಂದ ಸೆ.03 ರವರೆಗೆ ಕೊಪ್ಪಳ ನಗರ, ಕೊಪ್ಪಳ ಗ್ರಾಮೀಣ, ಅಳವಂಡಿ, ಮುನಿರಾಬಾದ್, ಯಲಬುರ್ಗಾ, ಕುಕನೂರು, ಬೇವೂರು, ಗಂಗಾವತಿ ನಗರ, ಕಾರಟಗಿ ಮತ್ತು ಕುಷ್ಟಗಿ. ಸೆ.04 ರಿಂದ ಸೆ.05 ರವರೆಗೆ ಕೊಪ್ಪಳ ಗ್ರಾಮೀಣ, ಅಳವಂಡಿ, ಮುನಿರಾಬಾದ್, ಗಂಗಾವತಿ ನಗರ.  ಸೆ. 06 ರಿಂದ 07 ರವರೆಗೆ ಅಳವಂಡಿ, ಮುನಿರಾಬಾದ್, ಗಂಗಾವತಿ ನಗರ.  ಸೆ.08 ರಿಂದ ಸೆ.09 ರವರೆಗೆ ಕೊಪ್ಪಳ ಗ್ರಾಮೀಣ, ಮುನಿರಾಬಾದ್ ಹಾಗೂ ಗಂಗಾವತಿ ನಗರ. ಸೆ.10 ರಿಂದ ಸೆ.11 ರವರೆಗೆ ಹಾಗೂ ಸೆ.12 ರಿಂದ ಸೆ.13 ರವರೆಗೆ ಗಂಗಾವತಿ ನಗರದಲ್ಲಿ ನಿಗದಿತ ದಿನದಂದು ಬೆಳಿಗ್ಗೆ 6 ಗಂಟೆಯಿಂದ ಮರು ದಿನದ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಪಾನ, ಮದ್ಯ ಮಾರಾಟ ನಿಷೇಧಿಸಲಾಗಿದೆ.
        ಈ ಸಂಬಂಧ ಅಬಕಾರಿ ಉಪ ಆಯುಕ್ತರ ಮುಖಂಡತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು, ಕಾರ್ಯನಿರ್ವಹಿಸಲು ಆದೇಶಿಸಿದೆ. ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು  ಆದೇಶದಲ್ಲಿ ತಿಳಿಸಿದ್ದಾರೆ.

ಆ.31 ರಂದು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರ ಪ್ರವಾಸಕೊಪ್ಪಳ ಆ.30(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಡಾ.ಮೊಹ್ಮದ ಯೂಸೂಫ್ ಅವರು ಆ.31 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
        ಅಧ್ಯಕ್ಷರು ಅಂದು ಮಧ್ಯಾಹ್ನ 3 ಗಂಟೆಗೆ ಕೊಪ್ಪಳ ನಗರದ ವಕ್ಫ್ ಸಂಸ್ಥೆಗಳಾದ ದರ್ಗಾ ಹಜರತ ರಾಜಾಬಾಗ ಸವಾರ ಜವಾಹರ ರಸ್ತೆ, ಮಸ್ಜೀದ-ಎ-ಯೂಸೂಫಿಯಾ ಜವಾಹರ ರಸ್ತೆ, ಮಸ್ಜೀದ-ಎ-ಪೀರ ಪಾಷಾ ಖಾದ್ರಿ ಪಲ್ಟನ್, ದರ್ಗಾ ಹಜರತ ಪೀರ ಪಾಷಾ ಖಾದ್ರಿ ಪಂಜಮ್ ಪಲ್ಟನ್, ದರ್ಗಾ ಹಜರತ್ ಮರ್ದಾನೆ ಗೈಬ್ ಹುಲಿಕೇರಿ ರಸ್ತೆ, ಮುಸ್ಲಿಂ ಖಬರಸ್ತಾನ 473, ಮುಸ್ಲಿಂ ಖಬರಸ್ತಾನ ಕಿನ್ನಾಳ ರಸ್ತೆ, ದರ್ಗಾ ಮುನೀರ್ ಷಾವಲಿ ಜಿಲ್ಲಾ ಕ್ರೀಡಾಂಗಣದ ಹತ್ತಿರ ಗದಗ ರಸ್ತೆ ಕೊಪ್ಪಳ ಇವುಗಳ ಪ್ರಗತಿ ಯೋಜನೆಯ ಪರಿಶೀಲನೆಗಾಗಿ ಜಿಲ್ಲೆಗೆ ಆಗಮಿಸುವರು. ಸಂಬಂಧಿಸಿದ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುತ್ತವಲ್ಲಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಬೇಕು ಎಂದು ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷಾ ಅವರು ತಿಳಿಸಿದ್ದಾರೆ.

ತರಬೇತಿ ಶಿಬಿರ : ಹಿರಿಯ ಕಲಾವಿದರಿಂದ ಅರ್ಜಿ ಆಹ್ವಾನಕೊಪ್ಪಳ ಆ.30(ಕರ್ನಾಟಕ ವಾರ್ತೆ): ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ ಕಲಾವಿದರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ಯಕ್ಷಗಾನ ಮತ್ತು ಬಯಲಾಟ ತರಬೇತಿ ಶಿಬಿರಗಳನ್ನು ನಡೆಸಲು ಉದ್ದೇಶಿಸಿದ್ದು, ಯಕ್ಷಗಾನ ಮತ್ತು ಬಯಲಾಟ ಕಲಾಪ್ರಕಾರಗಳಲ್ಲಿ (ತೆಂಕುತಿಟ್ಟು/ಬಡಗುತಿಟ್ಟು ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ತೊಗಲುಗೊಂಬೆಯಾಟ, ಸೂತ್ರದಗೊಂಬೆಯಾಟ, ಸಲಾಕೆಗೊಂಬೆಯಾಟ) ತರಬೇತಿ ನೀಡಬಯಸುವ  ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ಹಿರಿಯ ಕಲಾವಿದರುಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಅಕಾಡೆಮಿ ಕಚೇರಿಗೆ ಕಳುಹಿಸಬಹುದಾಗಿದೆ. ತರಬೇತಿ ನೀಡಬಯಸುವ ಆಸಕ್ತ ಕಲಾವಿದರುಗಳು ಅರ್ಜಿಯನ್ನು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು 560002 ಇಲ್ಲಿಗೆ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ: 080-22113146 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಸೆ.06 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾದರ್ಶನಕೊಪ್ಪಳ ಆ.30(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಸೆ.06 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
        ಈ ಜನತಾದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಬೇಕು ಅಪರ ಜಿಲ್ಲಾಧಿಕಾರಿ ಡಾ|| ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ಕೊಪ್ಪಳ : ಬನಾಯೆಂಗೆ ಮಂದಿರ್ ಹಾಡು ನಿಷೇಧಕೊಪ್ಪಳ ಆ.30(ಕರ್ನಾಟಕ ವಾರ್ತೆ): ಗೌರಿ-ಗಣೇಶ ಹಬ್ಬದ ಆಚರಣೆ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಕೊಪ್ಪಳ ನಗರದಲ್ಲಿ  ಬನಾಯೆಂಗೆ ಮಂದಿರ್ ಎಂಬ ಹಾಡನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಆದೇಶ ಹೊರಡಿಸಿದ್ದಾರೆ.
        ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 (1) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೊಪ್ಪಳ ನಗರದಾದ್ಯಂತ ಆ.29 ರಿಂದ ಸೆ.02 ರವರೆಗೆ ಬನಾಯೆಂಗೆ ಮಂದಿರ್ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಪ್ರವಾಸಿ ಟ್ಯಾಕ್ಸಿ ಯೋಜನೆ : ಅರ್ಜಿ ಆಹ್ವಾನಕೊಪ್ಪಳ ಆ.30(ಕರ್ನಾಟಕ ವಾರ್ತೆ): ಪ್ರವಾಸೋದ್ಯಮ ಇಲಾಖೆಯಿಂದ 2013-14ನೇ ಸಾಲಿಗೆ ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ ನೀಡುವ ಯೋಜನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳಿಗೆ ತಲಾ ರೂ.2.00 ಲಕ್ಷಗಳನ್ನು ಸಹಾಯಧನದ ರೂಪದಲ್ಲಿ ನೀಡಲಾಗುವುದು. ವಾಹನ ಬೆಲೆಯ ಶೇ.5 ರಷ್ಟು ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳು ಭರಿಸಬೇಕು. ಉಳಿದ ಮೊತ್ತವನ್ನು ರಾಷ್ಟ್ರೀಕೃತ/ವಾಣಿಜ್ಯ ಬ್ಯಾಂಕ್ ಮೂಲಕ ಸಾಲವನ್ನು ಫಲಾನುಭವಿಯೇ ಪಡೆದುಕೊಳ್ಳಬೇಕು. ಜನಸಂಖ್ಯೆ ಹಾಗೂ ಪ್ರವಾಸಿ ತಾಣಗಳ ಸಂಖ್ಯೆಯನ್ನು ಮಾನದಂಡವನ್ನಾಗಿಟ್ಟುಕೊಂಡು, ಕೊಪ್ಪಳ ಜಿಲ್ಲೆಗೆ 48 ಪ್ರವಾಸಿ ಟ್ಯಾಕ್ಸಿಗಳ ವಿತರಣೆ ಗುರಿ ಹಂಚಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು, ಲಘು ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಹೊಂದಿರಬೇಕು, ವಯೋಮಿತಿ 20 ರಿಂದ 45 ವರ್ಷದೊಳಗಿರಬೇಕು. ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು. ವಾರ್ಷಿಕ ಆದಾಯ ರೂ.4.50 ಲಕ್ಷ ಮೀರಿರಬಾರದು. ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳು ತಹಶೀಲ್ದಾರರಿಂದ ಪಡೆದ ನಿಗದಿತ ಪ್ರಮಾಣ ಪತ್ರ ಸಲ್ಲಿಸಬೇಕು. ಅಭ್ಯರ್ಥಿಗಳು ಲಘು ವಾಹನ ಚಾಲನೆ ಪರವಾನಿಗೆ ಪಡೆದು ಕನಿಷ್ಟ ಒಂದು ವರ್ಷವಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮೂರು ತಿಂಗಳಲ್ಲಿ ವಾಹನ ಚಾಲನಾ ಪರವಾನಿಗೆ ಬ್ಯಾಡ್ಜ್ ಅನ್ನು ಪಡೆಯತಕ್ಕದ್ದು. ಅರ್ಜಿದಾರರು ಕಡ್ಡಾಯವಾಗಿ ಕೊಪ್ಪಳ ಜಿಲ್ಲೆಯವರಾಗಿರಬೇಕು, ಅರ್ಜಿದಾರರ ಮತ್ತು ಅವರ ಕುಟುಂಬದಲ್ಲಿ ಯಾರೂ ಖಾಯಂ ಸರ್ಕಾರಿ ಅರೆ ಸರ್ಕಾರಿ, ನಿಗಮ ಮಂಡಳಿಗಳಲ್ಲಿ ಉದ್ಯೋಗದಲ್ಲಿರಬಾರದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಖಾಯಂ ಲಘು ವಾಹನ ಚಾಲನಾ ಪರವಾನಗಿ ಪತ್ರ ಹಾಗೂ ಆರ್.ಟಿ.ಓ. ರವರಿಂದ ಪಡೆದಿರುವ ಡಿ.ಎಲ್. ಎಕ್ಸ್‍ಟ್ರ್ಯಾಕ್ಟ್ ಪ್ರತಿಗಳು, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಪ್ರತಿ, ಆಧಾರ ಗುರುತಿನ ಚೀಟಿ, ಜಾತಿ, ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ, ಅರ್ಜಿದಾರರು ರಾಜ್ಯ/ಕೇಂದ್ರ ಸರಕಾರಗಳ ಇಲಾಖೆಗಳಲ್ಲಿ ಖಾಯಂ ಉದ್ಯೋಗ ಹೊಂದಿರದ ಬಗ್ಗೆ ಹಾಗೂ ಯಾವುದೇ ರೀತಿಯ ಸೌಲಭ್ಯ ಪಡೆಯದಿರುವ ಬಗ್ಗೆ ಸಂಬಂಧಪಟ್ಟ ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಯಿಂದ ಪಡೆದಿರುವ ಪ್ರಸಕ್ತ ಸಾಲಿನ ಧೃಢೀಕರಣ ಪತ್ರದ ಪ್ರತಿ, ಅಭ್ಯರ್ಥಿಯ ದೂರವಾಣಿ ಸಂಖ್ಯೆ, ಅಭ್ಯರ್ಥಿಗಳು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದೇ ಬಗ್ಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಪೊಲೀಸ್ ನಿರಾಪೇಕ್ಷಣೆ ಪತ್ರ ಪಡೆದು ಸಲ್ಲಿಸುವುದು ಸೇರಿದಂತೆ ಮುಂತಾದ ಅಗತ್ಯ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ, ಕೊಪ್ಪಳ  ಇವರಿಗೆ ಸೆ.20 ರ ಒಳಗಾಗಿ ಸಲ್ಲಿಸಬೇಕು.  ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಶುಲ್ಕ ರೂ. 50 ಪಾವತಿಸಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಲಬುರ್ಗಾ : ವಿವಿಧ ತರಬೇತಿಗೆ ಅರ್ಜಿ ಆಹ್ವಾನಕೊಪ್ಪಳ ಆ.30(ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿ ವ್ಯಾಪ್ತಿಯ ನಿರುದ್ಯೋಗಿಗಳಿಗೆ ಪ್ರಸಕ್ತ ಸಾಲಿಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜ್ಯ ಯೋಜನೆಯಡಿ (ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ದಿ ಮತ್ತು ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಕ್ಕಾಗಿ) ವಿವಿಧ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
        ಈಗಾಗಲೇ ಇಲಾಖೆಯಿಂದ ರಚಿಸಿರುವ ಗುಂಪುಗಳಿಗೆ ಮಾತ್ರ ಗುಂಪು ಸಾಲಕ್ಕಾಗಿ ಮತ್ತು ಸ್ವಯಂ ಉದ್ಯೋಗದ ಸಾಲಕ್ಕಾಗಿ ಹಾಗೂ ಹೊಸದಾಗಿ ಗುಂಪುಗಳನ್ನು ರಚಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಶೇ.7ಕ್ಕೆ ಮೇಲ್ಪಟ್ಟು ಬಡ್ಡಿದರಕ್ಕೆ ಸಂಬಂಧಿಸಿದಂತೆ ಬಡ್ಡಿ ಸಹಾಯಧನ ಲಭ್ಯವಿರುತ್ತದೆ. ಹಾಗೂ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ಎಲ್ಲಾ ಸ್ವ-ಸಹಾಯ ಗುಂಪುಗಳಿಗೆ ಹೆಚ್ಚುವರಿಯಾಗಿ ಶೇ.3% ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದ್ದು, ಆಸಕ್ತಿಯುಳ್ಳವರು ಕಾರ್ಯಾಲಯದ ವಿಷಯ ನಿರ್ವಾಹಕರ ಹತ್ತಿರ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ.
        ಅರ್ಜಿಯೊಂದಿಗೆ ಜಾತಿ, ಆದಾಯ, ವಿದ್ಯಾರ್ಹತೆ ಪ್ರಮಾಣ ಪತ್ರ, ಮತದಾರರ ಭಾವಚಿತ್ರ ಇರುವ ಕಾರ್ಡ್ ಅಥವಾ ಆಧಾರ ಕಾರ್ಡ್, ಬಿ.ಪಿ.ಎಲ್. ರೇಶನ್ ಕಾರ್ಡ ಹಾಗೂ 02 ಭಾವಚಿತ್ರಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸಕೊಪ್ಪಳ ಆ.30(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ  ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಆ.31 ರಂದು ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
        ಸಚಿವರು ಆ.31 ರಂದು ಬೆಳಿಗ್ಗೆ 11 ಗಂಟೆಗೆ ಕಾರಟಗಿಯಿಂದ ಹೊರಟು ಕನಕಗಿರಿಗೆ ಆಗಮಿಸುವರು.  ಇಲ್ಲಿನ್ಲ ಮೊರಾರ್ಜಿ ದೇಸಾಯಿ ಶಾಲೆ ಪ್ರಾರಂಭೋತ್ಸವ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಡಿಗಲ್ಲು ಸಮಾರಂಭ. ಮಧ್ಯಾಹ್ನ 12.30 ಕ್ಕೆ ಕನಕಗಿರಿ - ಬೈಲಕ್ಕಂಪುರ ರಸ್ತೆ ಕಾಮಗಾರಿಗೆ ಅಡಿಗಲ್ಲು. ಮಧ್ಯಾಹ್ನ 1 ಗಂಟೆಗೆ ಗೌರಿಪುರದ ಭೋವಿ ಕಾಲೋನಿ ಸಿ.ಸಿ. ರಸ್ತೆಯ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಚಿವರು ಮಧ್ಯಾಹ್ನ 3 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ ವಾಸ್ತವ್ಯ ನಡೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ರೈತರು ಸ್ವಯಂ ಪ್ರೇರಣೆಯಿಂದ ಸಾಲ ಮರುಪಾವತಿ ಮಾಡಬೇಕು- ಸಿ.ಆರ್. ಬೆನಕನಹಳ್ಳಿಕೊಪ್ಪಳ ಆ. 30 (ಕರ್ನಾಟಕ ವಾರ್ತೆ): ರೈತರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರುಪಾವತಿಗೆ ಮುಂದಾಗಬೇಕು ಎಂದು ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಸಿ.ಆರ್. ಬೆನಕನಹಳ್ಳಿ ಅವರು ಹೇಳಿದರು.
         ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಸಾಲ ವಸೂಲಾತಿ ನ್ಯಾಯಾಧೀಕರಣ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
        ರೈತರು ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ಹಕ್ಕು ಎಂಬುದಾಗಿ ಪ್ರತಿಪಾದಿಸಬೇಕು ಎಂದರೆ, ಪಡೆದ ಸಾಲವನ್ನು ಸ್ವಯಂ ಪ್ರೇರಣೆಯಿಂದಲೇ ಮರು ಪಾವತಿ ಮಾಡಲು ಮುಂದಾಗಬೇಕು.  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ಗಳಿಂದ ಸಾಲ ಪಡೆದಂತಹ ರೈತರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡುವುದರ ಮೂಲಕ ರೈತರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ಬ್ಯಾಂಕ್ ಮುಂದಾಗಿದ್ದು, ಇದರ ಸದುಪಯೋಗ ಪಡೆದುಕೊಂಡಲ್ಲಿ, ಪುನಃ ಹೊಸ ಸಾಲ ಪಡೆಯಲು ಅನುಕೂಲವಾಗಲಿದೆ.  ಸಂವಿಧಾನದಲ್ಲಿ ಕರ್ತವ್ಯ ಮತ್ತು ಹಕ್ಕುಗಳು ಪ್ರಮುಖ ಸ್ಥಾನ ಪಡೆದಿದ್ದು, ಕರ್ತವ್ಯ ಮತ್ತು ಹಕ್ಕುಗಳ ಪ್ರತಿಪಾದನೆ, ಒಂದಕ್ಕೊಂದು ಪೂರಕವಾದಾಗ ಮಾತ್ರ ದೇಶದ ಆರ್ಥಿಕತೆ ಸುಧಾರಣೆಯಾಗಲು ಸಾಧ್ಯ.  ಕೃಷಿಕರ ಬೆಂಬಲಕ್ಕೆ ಬ್ಯಾಂಕುಗಳು ಸದಾ ಬೆನ್ನೆಲುಬಾಗಿ ನಿಂತಿದ್ದು, ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ, ಸರ್ಕಾರಗಳು ಆರ್ಥಿಕ ನೀತಿಯನ್ನು ರೂಪಿಸುತ್ತವೆ.  ಬ್ಯಾಂಕ್‍ಗಳಿಂದ ಪಡೆದಂತಹ ಸಾಲವನ್ನು ರೈತರು ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಬೇಕೆ ಹೊರತು, ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಾರದು.  ಇಲ್ಲದಿದ್ದಲ್ಲಿ, ಹಣದ ಸದ್ಬಳಕೆ ಹಾಗೂ ಸ್ವಾಭಿಮಾನದ ಬದುಕಿನ ಕಲ್ಪನೆ ರೈತರಲ್ಲಿ ಮೂಡುವುದು ಕಷ್ಟ ಸಾಧ್ಯ.  ಬ್ಯಾಂಕುಗಳಲ್ಲಿ ರೈತರ ಕೊಡು, ಕೊಳ್ಳುವಿಕೆ ಸಮರ್ಪಕವಾಗಿ ನಡೆದರೆ ಮಾತ್ರ ಬ್ಯಾಂಕುಗಳು ಸಹ ಮುನ್ನಡೆಯಲು ಸಾಧ್ಯ.  ಬ್ಯಾಂಕುಗಳು ರೈತರ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು.  ಸಾಲ ಪಡೆದು, ಬ್ಯಾಂಕುಗಳಿಂದ ವಿಮುಖರಾಗದೆ, ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕು ಎಂದರು.
        ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಗತಿ ಕೃಷ್ಣಾ ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಭಟ್ ಅವರು ಮಾತನಾಡಿ, ಕೇವಲ 05 ಕೋಟಿ ರೂ. ಬಂಡವಾಳದೊಂದಿಗೆ 1976 ರಲ್ಲಿ ಪ್ರಾರಂಭವಾದ ತುಂಗಭದ್ರಾ ಗ್ರಾಮೀಣ ಬ್ಯಾಂಕ್, ಇದೀಗ ಪ್ರಗತಿ ಕೃಷ್ಣಾ ಬ್ಯಾಂಕ್ ಆಗಿ, 17 ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ.  ಕೋಲಾರ ಜಿಲ್ಲೆಯಿಂದ ಬೀದರ್ ಜಿಲ್ಲೆಯವರೆಗೆ ಸುಮಾರು 11 ಜಿಲ್ಲೆಗಳಲ್ಲಿ 625 ಶಾಖೆಗಳನ್ನು ಹೊಂದಿದ್ದು, ಈ ಪೈಕಿ 500 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಬ್ಯಾಂಕ್‍ಗಳ ಮೂಲಕ 8000 ಕೋಟಿ ರೂ. ಸಾಲ ನೀಡಿದ್ದು, ಈ ಪೈಕಿ ಸುಮಾರು 7000 ಕೋಟಿ ರೂ.ಗಳ ಸಾಲವನ್ನು ಕೃಷಿ ಕ್ಷೇತ್ರಕ್ಕೆ ನೀಡಲಾಗಿದೆ.  ಬ್ಯಾಂಕ್‍ಗಳಲ್ಲಿ 3 ಸಾವಿರ ಸಿಬ್ಬಂದಿಗಳಿದ್ದು, 11 ಲಕ್ಷ ಗ್ರಾಹಕರ ಬ್ಯಾಂಕುಗಳಲ್ಲಿ ಸೇವೆಯನ್ನು ಪಡೆಯುತ್ತಿದ್ದಾರೆ.  ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ರೈತರೇ ದೇಶದ ಜೀವನಾಡಿಗಳು, ರೈತರ ಬದುಕನ್ನು ಹಸನಾಗಿಸುವಲ್ಲಿ ಗ್ರಾಮೀಣ ಬ್ಯಾಂಕುಗಳು ಶ್ರಮಿಸುತ್ತಿವೆ.  ರೈತರು ಆರ್ಥಿಕವಾಗಿ ಸದೃಢರಾಗಲು ಬ್ಯಾಂಕ್‍ಗಳ ಸಹಕಾರ ಅಗತ್ಯ.  ಹೀಗೆ ರೈತರ ಏಳಿಗೆಗೆ ಸಹಕಾರ ನೀಡುವಲ್ಲಿ ಬ್ಯಾಂಕುಗಳು ಮುಂದಾಗಿದ್ದು, ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡಲು ಸಿದ್ಧವಾಗಿದೆ.  ಆದರೆ ಅಸಲು ಮೊತ್ತದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ.  ಬ್ಯಾಂಕ್‍ಗಳ ಮೂಲಕ ಸುಮಾರು 20 ಸಾವಿರ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ 310 ಕೋಟಿ ರೂ. ಸಾಲ ನೀಡಲಾಗಿದ್ದು, ಇಂತಹ ಗುಂಪುಗಳ ಸಾಲ ಯಾವುದೇ ಶ್ರಮವಿಲ್ಲದೆ, ಸುಗಮವಾಗಿ ಮರುಪಾವತಿಯಾಗುತ್ತಿದ್ದು, ಸಾಲ ಪಡೆದ ರೈತರಿಗೆ ಇವರು ಮಾದರಿಯಾಗಿದ್ದಾರೆ ಎಂದರು.
        ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ದಾ ಬಬಲಾದಿ ಸಮಾರಂಭದ ಉದ್ಘಾಟನೆ ನೆರವೇರಿಸಿದರು.  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯ ವಕೀಲರ ಪರಿಷತ್ ಮತ್ತು ಲಾ ಅಕಾಡೆಮಿ ಸದಸ್ಯೆ ಸಂಧ್ಯಾ ಬಿ. ಮಾದಿನೂರ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಹಿರಿಯ ಸಿವಿಲ್ ನ್ಯಾಯಾಧೀಶ ದಶರಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ವಕೀಲ ಹನುಮಂತರಾವ್ ನಿರೂಪಿಸಿದರು.  ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಮುಖ್ಯ ಪ್ರಬಂಧಕ ಬಿ.ಜೆ. ಕುಲಕರ್ಣಿ ವಂದಿಸಿದರು. 

Thursday, 28 August 2014

ಆ.30 ರಂದು ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್


ಕೊಪ್ಪಳ ಆ.28(ಕರ್ನಾಟಕ ವಾರ್ತೆ): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಸಾರಿಗೆ ಕಛೇರಿ ಕೊಪ್ಪಳ ಮತ್ತು ಸಾಲ ವಸೂಲಾತಿ ನ್ಯಾಯಾಧೀಕರಣ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳ ಬೃಹತ್ ಲೋಕ ಅದಾಲತ್ ಉದ್ಘಾಟನೆ ಸಮಾರಂಭ ಆ.30 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
     ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಅಶೋಕ ಬಿ.ಹಿಂಚಿಗೇರಿ ಅವರು ಅಧ್ಯಕ್ಷತೆ ವಹಿಸುವರು.
    ಮುಖ್ಯ ಅತಿಥಿಗಳಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ ಜಿ.ನಿಜಗಣ್ಣವರ್, ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣದ ಅಧ್ಯಕ್ಷ ಸಿ.ಆರ್. ಬೆನಕನಹಳ್ಳಿ, ಬಳ್ಳಾರಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಧಾನ ಕಛೇರಿ ಅಧ್ಯಕ್ಷ ಎಂ.ಜಿ. ಭಟ್,  ನಿರ್ದೇಶಕರಾದ ರಾಘವೇಂದ್ರ, ರಾಜ್ಯ ವಕೀಲರ ಪರಿಷತ್‍ನ ಸದಸ್ಯೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ಜಿಲ್ಲಾಧಿಕಾರಿ ಆರ್.ಆರ್.ಜನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಡಿ. ಪವಾರ್, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಭಾಗವಹಿಸುವರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ ಅವರು ತಿಳಿಸಿದ್ದಾರೆ.

ಕೋಳಿ ಸಾಕಾಣಿಕೆ ತರಬೇತಿ ಶಿಬಿರ


ಕೊಪ್ಪಳ ಆ.28(ಕರ್ನಾಟಕ ವಾರ್ತೆ): ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟ ಇವರು ಕೋಳಿ ಸಾಕಾಣಿಕೆ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರವನ್ನು ಬರುವ ಸೆಪ್ಟಂಬರ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಈ ಕೋಳಿ ಸಾಕಾಣಿಕೆಯಲ್ಲಿ ಅಧಿಕ ಉತ್ಪಾದನೆಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಸಂಸ್ಕರಣಾ ಕ್ರಮಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಆ.30 ರೊಳಗಾಗಿ ನೊಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ವಿಳಾಸ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ,  ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-587103. ದೂರವಾಣಿ ಸಂಖ್ಯೆ : 08354-244028/244048, ಮೊಬೈಲ್ : 9482630790 ಸಂಪರ್ಕಿಸಬಹುದಾಗಿದೆ ಎಂದು ಎಂದು ಪ್ರಕಟಣೆ ತಿಳಿಸಿದೆ.

ಪ್ರಸಾಧನ ಹಾಗೂ ಬೆಳಕು ವಿನ್ಯಾಸ ವಿಷಯದಡಿ ಒಂದು ದಿನದ ಶಿಬಿರ


ಕೊಪ್ಪಳ ಆ.28(ಕರ್ನಾಟಕ ವಾರ್ತೆ): ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿಗೆ ಬರುವ ಸೆಪ್ಟೆಂಬರ್ 16 ರಂದು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಎಂಬ ವಿಷಯದಲ್ಲಿ ಒಂದು ದಿನದ ಶಿಬಿರವನ್ನು ಬೆಂಗಳೂರಿನ ಕನ್ನಡ ಭವನದ ಎರಡನೇ ಮಹಡಿಯ ವರ್ಣ ಆರ್ಟ್ ಗ್ಯಾಲರಿ (ಕರ್ನಾಟಕ ಲಲಿತಕಲಾ ಅಕಾಡೆಮಿ) ಯಲ್ಲಿ ಆಯೋಜಿಸಿದೆ.
      ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು ಗರಿಷ್ಠ 30 ಮಂದಿ. ಶಿಬಿರಾರ್ಥಿಗಳಿಗೆ ಅವಕಾಶವಿದೆ. ಆದ್ಯತೆಮೇರೆಗೆ ಶಿಬಿರಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಗುವುದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ರಂಗಭೂಮಿಯ ಖ್ಯಾತ ಬೆಳಕು ಮತ್ತು ಪ್ರಸಾಧನ ತಜ್ಞ ಚಂದ್ರಕುಮಾರಸಿಂಗ್ ಅವರು ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತಿಯುಳ್ಳ ಕಲಾವಿದರು ಸೆ.10 ರ ಒಳಗಾಗಿ ಒಂದು ಬಿಳಿಹಾಳೆಯಲ್ಲಿ ಸ್ವವಿವರ (ಹೆಸರು, ವಿಳಾಸ, ಮೊಬೈಲ್ ಸಂಖೈ, ಪ್ರಕಾರ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳನ್ನು ಪಾಸ್‍ಪೋರ್ಟ್ ಭಾವಚಿತ್ರದೊಂದಿಗೆ) ಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-2 (ದೂರವಾಣಿ ನಂ: 080-22215072) ಇಲ್ಲಿಗೆ ಕಳುಹಿಸಿಕೊಡಬಹುದಾಗಿದೆ. ಬೇರೆ ಊರುಗಳಿಂದ ಬರುವ ಶಿಬಿರಾರ್ಥಿಗಳಿಗೆ ವಸತಿ ಸೌಕರ್ಯ ಹಾಗೂ ವಾಸ್ತವ ಪ್ರಯಾಣ ವೆಚ್ಚೆವನ್ನು ನೀಡಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಸಾಲಗಾರರ ಹಿತರಕ್ಷಣೆಗೆ ಬೃಹತ್ ಲೋಕ್ ಅದಾಲತ್


ಕೊಪ್ಪಳ ಆ.28(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಆ.30 ರಿಂದ ಸೆ.05 ರವರೆಗೆ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕೊಪ್ಪಳದಲ್ಲಿ ಬೆಳಿಗ್ಗೆ 10 ಗಂಟೆಗೆ ಬೃಹತ್ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಆದ ಬೆಳೆ ಹಾನಿ, ಬರ, ಬೆಳೆದ ಅಲ್ಪ ಬೆಳೆಗೆ ಸೂಕ್ತ ಬೆಲೆ ಇಲ್ಲದಿರುವುದು ಹಾಗೂ ಇತರ ಕಾರಣಗಳಿಂದ ಬಹುತೇಕ ಗ್ರಾಹಕರು, ಸಾಲಗಾರರು ಸಾಲ ಮರುಪಾವತಿಯಲ್ಲಿ ಹಿನ್ನಡೆಯಲ್ಲಿದ್ದಾರೆ. ನಿಗದಿತ ಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡದೆ ಹೋಗುವುದು, ತಮ್ಮ ಆರ್ಥಿಕ ಅಭಿವೃದ್ಧಿಗೆ ಮಾರಕವೆಂಬುದನ್ನು ಗ್ರಾಹಕರು ಸದಾ ಮನಗೊಂಡಿರಬೇಕು. ಆದಾಗ್ಯೂ ಬ್ಯಾಂಕ್ ತನ್ನ ಗ್ರಾಹಕರ ಮೇಲೆ ಸಾಲ ವಸೂಲಾತಿಗಳಿಗೆ ಹೆಚ್ಚಿನ ಒತ್ತಡ, ಕಾನೂನಿನ ಕ್ರಮಗಳಿಗೆ ಮುಂದಾಗದೆ, ಅವರ ಘನತೆ ಗೌರವಗಳಿಗೆ ಕುಂದು ಬಾರದ ವಸೂಲಾತಿ ಕ್ರಮಗಳನ್ನು ಜರುಗಿಸುತ್ತಿದೆ.
    ಬೃಹತ್ ಅದಾಲತ್ (ಜನತಾ ನ್ಯಾಯಾಲಯ) ಯೋಜನೆಯು  ಬಹುತೇಕ ರೈತರಿಗೆ, ಸಣ್ಣ ಉದ್ದಿಮೆದಾರರಿಗೆ ಹಾಗೂ ಇತರೆ ಗ್ರಾಹಕರಿಗೆ ತಮ್ಮ ಸಾಲದ ಋಣಭಾರದಿಂದ ಮುಕ್ತಗೊಳ್ಳುವ ಸುವರ್ಣಾವಕಾಶವನ್ನು ಒದಗಿಸಿದೆ. ಗ್ರಾಹಕ ಬಂಧುಗಳು, ಈ ಲೋಕ್ ಅದಾಲತ್ ಯೋಜನೆಯ ಲಾಭವನ್ನು ಪಡೆದು ಸುಸ್ತಿ ಬಡ್ಡಿ ಮತ್ತು ಬಡ್ಡಿಯಲ್ಲಿ ರಿಯಾಯತಿಯೊಂದಿಗೆ ತಮ್ಮ ಸಾಲದ ಋಣದಿಂದ ಮುಕ್ತರಾಗಲು (ಬ್ಯಾಂಕಿನ ನಿಯಮಾವಳಿಗೊಳಪಟ್ಟು) ಅವಕಾಶವಿದೆ. ಈ ಮುಖಾಂತರ ಸಾಲಗಾರರು ತಗಾದೆಯಿಂದ  ತಗಲುವ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುಬಹುದು. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು.
     ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸುಸ್ತಿ ಸಾಲಗಾರರು ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಸಾಲದ ಕಂತೆಯ ಹೊರೆಯಿಂದ ವಿಮುಕ್ತರಾಗಲು ಸುವರ್ಣಾವಕಾಶವಾಗಿದೆ. ಈ ಯೋಜನೆಯಿಂದ ನ್ಯಾಯಾಲಯದ ಖರ್ಚು, ಅಮೂಲ್ಯವಾದ ತಮ್ಮ ಸಮಯ ಉಳಿಯುವುದು ಮತ್ತು ಆರ್ಥಿಕ ಹೊರೆ ಕಡಿಮೆಯಾಗುವುದು. ಅಲ್ಲದೇ ಬಡ್ಡಿಯಲ್ಲಿ ವಿಶೇಷ ರಿಯಾಯತಿಯನ್ನು ಪಡೆಯಬಹುದು. ಈ ಬೃಹತ್ ಲೋಕ್ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ದೂರವಾಣಿ ಸಂಖ್ಯೆ: 08539-221900, ಸದಸ್ಯ ಕಾರ್ಯದರ್ಶಿಗಳು, ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ದೂ.ಸಂಖ್ಯೆ: 08539-221658, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಛೇರಿಯ ದೂ.ಸಂಖ್ಯೆ: 08539-221318, 221376, 220318, ಮೊ.9480280980, 9448648654, 9886297946 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜನ-ಧನ ಯೋಜನೆ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ- ಸಂಗಣ್ಣ ಕರಡಿಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ ಹಾಗೂ ವಿಮಾ ಸೌಲಭ್ಯ ಒದಗಿಸುವಂತಹ ಪ್ರಧಾನಮಂತ್ರಿ ಜನ-ಧನ ಯೋಜನೆ ಪ್ರತಿಯೊಬ್ಬರ ಸ್ವಾಭಿಮಾನದ ಬದುಕಿನ ಸಂಕೇತವಾಗಲಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಬಣ್ಣಿಸಿದರು.
     ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪ್ರಧಾನಮಂತ್ರಿ ಜನ-ಧನ ಯೋಜನೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಇದುವರೆಗೂ ಬ್ಯಾಂಕಿಂಗ್ ಕ್ಷೇತ್ರದ ಸೌಲಭ್ಯಗಳಿಂದ ವಂಚಿತರಾಗಿರುವ ಹಿಂದುಳಿದ, ಆರ್ಥಿಕವಾಗಿ ಸಬಲರಲ್ಲದ ಕೆಳಸ್ಥರದ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಭಾರತದ ಬಡಜನರ ಶ್ರೇಯೋಭಿವೃದ್ಧಿಯ ಆಶಯದೊಂದಿಗೆ ಸರಳ, ಹೊಸತನದಿಂದ ಕೂಡಿದ ಪ್ರಧಾನಮಂತ್ರಿ ಜನ-ಧನ ಯೋಜನೆ ದೇಶಾದ್ಯಂತ ಏಕಕಾಲದಲ್ಲಿ ಇಂದಿನಿಂದ ಜಾರಿಯಾಗಲಿದ್ದು, ಬ್ಯಾಂಕಿಂಗ್ ಕ್ಷೇತ್ರ ಪ್ರತಿಯೊಬ್ಬರ ಮನೆ ಬಾಗಿಲಿಗೇ ಬರಲಿದೆ.  ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ ಕೇವಲ 13 ದಿನಗಳಲ್ಲಿಯೇ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ಕೇಂದ್ರ ಸರ್ಕಾರದ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ.  ಸದ್ಯ ದೇಶದಲ್ಲಿರುವ ಕುಟುಂಬಗಳ ಸಂಖ್ಯೆಗೂ, ವಿವಿಧ ಬ್ಯಾಂಕ್‍ಗಳಲ್ಲಿ ಇರುವ ಒಟ್ಟು ಖಾತೆಗಳ ಸಂಖ್ಯೆಗೂ ಅಜ-ಗಜಾಂತರ ವ್ಯತ್ಯಾಸವಿದೆ.  ಈ ವ್ಯತ್ಯಾಸವನ್ನು ಹೋಗಲಾಡಿಸಿ, ಪ್ರತಿಯೊಂದು ಕುಟುಂಬವೂ ಬ್ಯಾಂಕ್ ಖಾತೆಯನ್ನು ಹೊಂದಬೇಕು ಎನ್ನುವ ಆಶಯ ಜನ-ಧನ ಯೋಜನೆಯಲ್ಲಿದೆ.  ಬ್ಯಾಂಕ್ ಖಾತೆ ಅಂತಹ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲಿದೆ.  ಅಲ್ಲದೆ ಎಲ್ಲ ಕುಟುಂಬಗಳೂ ವಿಮಾ ಸೌಲಭ್ಯದ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿವೆ.  ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದ್ದು, ಇದರಿಂದ ಅವರಿಗೆ ಹೆಚ್ಚಿನ ಬಡ್ಡಿದರದ ಹೊರೆ ತಗ್ಗಲಿದೆ.  ತುತ್ತಿನ ಚೀಲ ತುಂಬಿಸಲು ಶ್ರಮಪಡುವ ಸಣ್ಣ-ಪುಟ್ಟ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳೂ ಸಹ ಈ ಯೋಜನೆ ಸೌಲಭ್ಯ ಪಡೆಯಬಹುದಾಗಿದ್ದು, ಬ್ಯಾಂಕಿಂಗ್ ಸೌಲಭ್ಯದ ಜೊತೆಗೆ 5000 ರೂ. ಗಳವರೆಗಿನ ಖಾತೆ ಕೊರತೆ (ಓವರ್ ಡ್ರಾಫ್ಟ್) ಮಿತಿ ಸೌಲಭ್ಯ ದೊರೆಯಲಿದ್ದು, ಆರ್ಥಿಕ ಸಬಲತೆಯ ಜೊತೆಗೆ, ಅವರಲ್ಲಿ ಹಣದ ಸದ್ಬಳಕೆಯ ಭಾವನೆಯೂ ಬೆಳೆಯಲಿದೆ.  ವಿವಿಧ ಸಬ್ಸಿಡಿ ನೇರ ನಗದು ಪಾವತಿ, ಸಾಮಾಜಿಕ ಪಿಂಚಣಿ ಪಾವತಿ ಮುಂತಾದ ಸೌಲಭ್ಯಗಳಿಗೆ ಈ ಯೋಜನೆ ವರವಾಗಲಿದ್ದು, ಇಂತಹ ಮಹತ್ವಪೂರ್ಣ ಯೋಜನೆಯನ್ನು ಬ್ಯಾಂಕ್ ಅಧಿಕಾರಿಗಳು ಜನಸಾಮಾನ್ಯರಿಗೆ ತ್ವರಿತವಾಗಿ ತಲುಪಿಸಲು ಶ್ರಮಿಸುವಂತೆ ಸಂಸದ ಸಂಗಣ್ಣ ಕರಡಿ ಕರೆ ನೀಡಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೀಡ್ ಬ್ಯಾಂಕ್ ಮ್ಯಾನೇಜರ್ ಡಿ. ರವೀಂದ್ರ ಅವರು ಮಾತನಾಡಿ, ಆಗಸ್ಟ್ 15 ರಿಂದ ಈವರೆಗೆ ಈಗಾಗಲೆ 15 ಸಾವಿರ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಎಲ್ಲ ಬ್ಯಾಂಕ್‍ಗಳು ಯೋಜನೆಗೆ ಉತ್ತಮವಾಗಿ ಸ್ಪಂದಿಸುತ್ತಿವೆ.  ಜನ-ಧನ ಯೋಜನೆಯಡಿ ಪ್ರತಿಯೊಂದು ಕುಟುಂಬದ ಪುರುಷ ಮತ್ತು ಮಹಿಳೆಯರು ಯಾವುದೇ ಕನಿಷ್ಟ ಮೊತ್ತದ ಷರತ್ತು ಇಲ್ಲದೆ ಮೂಲ ಉಳಿತಾಯ ಠೇವಣಿ ಖಾತೆ ತೆರೆಯಬಹುದು ಅಲ್ಲದೆ ಉಚಿತ ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯ, ತಿಂಗಳಿಗೆ 4 ಬಾರಿ ಉಚಿತ ನಗದು ಹಿಂಪಡೆಯುವ ಸೌಲಭ್ಯವಿದೆ.  ಖಾತೆಯಲ್ಲಿ ಇಂತಿಷ್ಟು ಕನಿಷ್ಟ ಮೊತ್ತ ಇರಬೇಕೆಂಬ ಷರತ್ತು ಇಲ್ಲ.  ಬ್ಯಾಂಕಿಂಗ್ ಕಾರ್ಯನಿರ್ವಾಹಕರ ಮೂಲಕ ನೇರ ಮನೆಯ ಬಾಗಿಲಿಗೆ ಸೌಲಭ್ಯ.  ಹೊಸ ಖಾತೆ ತೆರೆಯುವ ಸಂದರ್ಭದಲ್ಲಿ 01 ಲಕ್ಷ ರೂ. ವರೆಗಿನ ವಿಮೆ ಸೌಲಭ್ಯ ದೊರೆಯಲಿದೆ ಎಂದರು.
     ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಎಸ್‍ಬಿಹೆಚ್ ಬಳ್ಳಾರಿ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕ ವೆಂಕಟೇಶ್ವರರಾವ್, ಜನರಲ್ ಮ್ಯಾನೇಜರ್ ಸುರೇಂದ್ರ ಉಪಸ್ಥಿತರಿದ್ದರು.  ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  ಜನ-ಧನ ಯೋಜನೆಯಡಿ ವಿವಿಧ ಕುಟುಂಬಗಳಿಗೆ ಬ್ಯಾಂಕ್ ಖಾತೆ ತೆರೆದು, ಪಾಸ್ ಬುಕ್, ಎಟಿಎಂ, ಡೆಬಿಟ್ ಕಾರ್ಡ್‍ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Wednesday, 27 August 2014

ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ
ಕೊಪ್ಪಳ ಆ. 27 (ಕರ್ನಾಟಕ ವಾರ್ತೆ) :  ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಯುವಜನರಿಗೆ ಕರೆ ನೀಡಿದರು.
        ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ‘ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಕುರಿತ ವಿಚಾರ ಸಂಕಿರಣ ಹಾಗೂ ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
        ದುಶ್ಚಟಗಳು ಸಮಾಜದ ಶಾಂತಿಭಂಗ, ಅನಾರೋಗ್ಯಕ್ಕೆ ಕಾರಣವಾಗುವುದರಿಂದ, ಯುವಜನತೆ ಮಾದಕ ಲೋಕದಿಂದ ದೂರವಾಗಿ, ಸತ್ಸಂಗ ಕಾರ್ಯಗಳಲ್ಲಿ ಸಕ್ರಿಯರಾಗಬೇಕು. ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆ, ಆಧುನಿಕತೆಯಿಂದ ಯುವಜನತೆ ತಮ್ಮ ಭವ್ಯ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದೆ.  ಮಾಧ್ಯಮಗಳು ಯುವಜನತೆ ಪಾಶ್ಚಿಮಾತ್ಯ ಜೀವನ ಶೈಲಿ ಅನುಕರಣೆಗೆ ಪರೋಕ್ಷವಾಗಿ ಕಾರಣವಾಗುತ್ತಿವೆ.  ನಮ್ಮ ದೇಶ ಸುಸಂಸ್ಕøತ ಸನ್ನಡತೆಯ ಭವ್ಯ ಪರಂಪರೆಯನ್ನು ಹೊಂದಿದ್ದರೂ, ಯುವಜನತೆ ಮಾದಕ ಲೋಕದ ಸೆಳವಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ದುಶ್ಚಟಗಳು ವಯಕ್ತಿಕ ಜೀವನವನ್ನು ಹಾಳು ಮಾಡುವುದಲ್ಲದೆ, ಸುತ್ತಮುತ್ತಲ ಪರಿಸರ, ಸಾಮಾಜಿಕ ಶಾಂತಿಭಂಗಕ್ಕೆ ಕಾರಣವಾಗುತ್ತಿದೆ.  ಸಾಮಾನ್ಯವಾಗಿ ಅಪರಾಧ ಲೋಕದಲ್ಲಿ ಒಂದಲ್ಲ ಒಂದು ಬಗೆಯ ದುಶ್ಚಟಗಳಿಗೆ ಬಲಿಯಾದವರೇ ಇದ್ದಾರೆ.  ಮನುಷ್ಯ ಸಂಘಜೀವಿಯಾಗಿದ್ದು, ಏಕಾಂಗಿತನ ದುಶ್ಚಟಗಳಿಗೆ ಪ್ರಚೋದನೆ ನೀಡುವುದಲ್ಲದೆ, ಅನಾರೋಗ್ಯ ಸಮಾಜ ನಿರ್ಮಾಣಕ್ಕೆ ಕಾರಣೀಭೂತವಾಗಲಿದೆ.  ದುಶ್ಚಟಗಳಿಂದ ದೂರವಿರಬೇಕು ಎಂದರೆ, ಕ್ರೀಡೆಗಳಂತಹ ಉತ್ತಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.  ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲಿ ಮನುಷ್ಯನಿಗೆ ಶಾರೀರಕ ಶ್ರಮ ಕಡಿಮೆಯಾಗಿದ್ದು, ಆರೋಗ್ಯ ಪೂರ್ಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.  ಶಾರೀರಕ ಸದೃಢತೆಯಿಂದ ಮಾನಸಿಕ ಸದೃಢತೆ ಸಾಧ್ಯ.  ಯುವಜನತೆ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.  ಮದ್ಯ-ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ ಪ್ರತಿಯೊಂದು ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
        ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಮಾತನಾಡಿ,   ಹವ್ಯಾಸಗಳನ್ನು ನಾವು ನಿಯಂತ್ರಿಸಬೇಕೆ ಹೊರತು ಅವು ನಮ್ಮನ್ನು ನಿಯಂತ್ರಿಸುವ ಸ್ಥಿತಿಯನ್ನು ನಾವು ನಿರ್ಮಿಸಿಕೊಳ್ಳಬಾರದು.  ಶಾರೀರಕ ಸದೃಢತೆಯಿಂದ ಮಾನಸಿಕ ಸದೃಢತೆ ಸಾಧ್ಯ.  ವಿದ್ಯಾರ್ಥಿಗಳು ಇಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ತಮ್ಮ ಕುಟುಂಬದ ಯಾರೇ ಸದಸ್ಯರು ದುಶ್ಚಟಗಳಿಗೆ ಒಳಗಾಗಿದ್ದಲ್ಲಿ, ಅಂತಹವರಿಗೆ ದುಷ್ಪರಿಣಾಮಗಳನ್ನು ತಿಳಿಸುವುದರ ಮೂಲಕ ಪರಿವರ್ತನೆಗೆ ಮುಂದಾಗಬೇಕು.  ಉತ್ತಮ ಸನ್ನಡತೆಯವರೊಂದಿಗೆ ಸಹವಾಸವನ್ನು ಬೆಳೆಸಿಕೊಳ್ಳಬೇಕು.  ಆಟ-ಪಾಠಗಳ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.       
        ಮಾದಕ ಚಟುವಟಿಕೆಗಳಿಂದ ಉಂಟಾಗುವ ದುಷ್ಟಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಅವರು ಮಾತನಾಡಿ, ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ. ಸಮಾಜದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಜೀವನ ಶೈಲಿ ಮಾನಸಿಕ ಒತ್ತಡ, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ.  ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ರೋಗಗಳಿಗೆ ಒಳಗಾಗುತ್ತಿದ್ದಾರೆ ಎಂದರು.
        ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯರಾದ ಎಸ್.ಬಿ. ರಾಜೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಡಿ.ಇಡಿ. ಕಾಲೇಜಿನ ಪ್ರಾಚಾರ್ಯ ವಸಂತಯ್ಯ ಹಿರೇಮಠ, ವ್ಯಂಗ್ಯ ಚಿತ್ರಕಾರ ಬದರಿಪುರೋಹಿತ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು.  ಉಪನ್ಯಾಸಕ ಮಲ್ಲಪ್ಪ ಸ್ವಾಗತಿಸಿದರು.  ಹೆಚ್.ಎಸ್. ಬಾರಕೇರ ನಿರೂಪಿಸಿದರು.  ಇದಕ್ಕೂ ಪೂರ್ವದಲ್ಲಿ ಮದ್ಯ-ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಸಿದರು.  ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಆರೋಗ್ಯಪೂರ್ಣ ಸಮಾಜಕ್ಕೆ ಜನಜಾಗೃತಿ ಅವಶ್ಯ- ಎಸ್.ಬಿ. ರಾಜೂರ
ಕೊಪ್ಪಳ ಆ. 27 (ಕ.ವಾ): ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲು, ಜನರಲ್ಲಿ ಸ್ಚಚ್ಛತೆ, ನೈರ್ಮಲ್ಯ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ  ಎಂದು ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಎಸ್.ಬಿ. ರಾಜೂರ ಅವರು ಹೇಳಿದರು.
        ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ  ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
        ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಚ್ಛತೆ, ಉತ್ತಮ ಪರಿಸರಕ್ಕೆ ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡಬೇಕು.  ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಎಂದರೆ ನಮ್ಮ ಸುತ್ತಮುತ್ತಲ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು.  ಜನರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆರೋಗ್ಯ ಇಲಾಖೆಯ ಜೊತೆಗೂಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಹಕಾರ ನೀಡುತ್ತಿದೆ.  ಈ ಜಾಗೃತಿ ಕಾರ್ಯಕ್ರಮಗಳು ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
        ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಆವರಣದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ, ಆಜಾದ್ ಸರ್ಕಲ್, ಹಸನ್ ರಸ್ತೆ, ಹೊಸಪೇಟೆ ರಸ್ತೆ ಮೂಲಕ  ತೆರಳಿದ ಜನಜಾಗೃತಿ ಜಾಥಾದಲ್ಲಿ ಕಾಲೇಜಿನ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿ  ಭಾಗವಹಿಸಿದ್ದರು. 

ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ
ಕೊಪ್ಪಳ ಆ. 27 (ಕ.ವಾ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದಲ್ಲಿ ನಗರದ ಬಾಲಕರ ಪ.ಪೂ. ಕಾಲೇಜಿನಲ್ಲಿ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ವ್ಯಂಗ್ಯಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
        ಈ ಭಾಗದ ಖ್ಯಾತ ವ್ಯಂಗ್ಯಚಿತ್ರಕಾರ ಕೊಪ್ಪಳದ ಬದರಿಪುರೋಹಿತ್ ಅವರ ಕುಂಚದಲ್ಲಿ ಅರಳಿದ ವ್ಯಂಗ್ಯಚಿತ್ರಗಳು, ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತಿದ್ದವು.  ಮದ್ಯ ಮತ್ತು ಮಾದಕ ವಸ್ತುಗಳ ದುಶ್ಚಟದ ಸೆಳೆವಿಗೆ ಸಿಲುಕಿ, ಅಧೋಗತಿಗೆ ತಳ್ಳಲ್ಪಡುವುದನ್ನು ವ್ಯಂಗ್ಯಚಿತ್ರಗಳು ಬಿಂಬಿಸಿದವು.  ಅಲ್ಲದೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ವ್ಯಂಗ್ಯಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ, ಪ್ರಾಚಾರ್ಯ ಆರ್.ಬಿ. ರಾಜೂರ್, ವ್ಯಂಗ್ಯಚಿತ್ರಕಾರ ಬದರಿಪುರೋಹಿತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆ.28 ರಂದು ಪ್ರಧಾನಮಂತ್ರಿ ಜನ-ಧನ ಯೋಜನೆ ಉದ್ಘಾಟನೆಕೊಪ್ಪಳ,ಆ.27(ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನ-ಧನ ಯೋಜನೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ಆ.28 ರಂದು ಮಧ್ಯಾಹ್ನ 3.30 ಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಲಿದೆ.
        ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸಲಿದ್ದಾರೆ. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಧ್ಯಕ್ಷತೆ ವಹಿಸುವರು. ಉಳಿತಾಯ ಖಾತೆ ಕಿಟ್ ವಿತರಣೆಯನ್ನು ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಎಸ್.ಬಿ.ಹೆಚ್.ನ ಬಳ್ಳಾರಿ ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾಪ್ರಭಂದಕ ಕೆ.ಎಸ್.ಎಸ್.ಟಿ. ವೆಂಕಟೇಶ್ವರರಾವ್ ಅವರು ವಿತರಿಸಲಿದ್ದಾರೆ.
        ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ ಕುಳಗಿ, ಶಾಸಕರಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ತಾಲೂಕ ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ವಿಜಯಕುಮಾರ ಮಾಲೀ ಪಾಟೀಲ್ ಅವರು ಪಾಲ್ಗೊಳ್ಳುವರು ಎಂದು ಎಸ್.ಬಿ.ಹೆಚ್.ನ ಜಿಲ್ಲಾ ಅಗ್ರಣೀಯ ಕಾರ್ಯಾಲಯದ ವ್ಯವಸ್ಥಾಪಕರಾದ ರವೀಂದ್ರ ಢಾಣಕಶಿರೂರ ಅವರು ತಿಳಿಸಿದ್ದಾರೆ.

ವಾಲ್ಮೀಕಿ ಪ್ರಶಸ್ತಿ : ಪ್ರಸ್ತಾವನೆ ಆಹ್ವಾನಕೊಪ್ಪಳ,ಆ.27(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಮಟ್ಟದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ಅರ್ಹರಿಗೆ ವಾಲ್ಮೀಕಿ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದ್ದು, ಪರಿಶಿಷ್ಟ ವರ್ಗದ ಸಮುದಾಯಕ್ಕೆ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
        ಅಕ್ಟೋಬರ್ 08 ರಂದು ನಡೆಯಲಿರುವ ವಾಲ್ಮೀಕಿ ಜಯಂತಿಯ ದಿನದಂದು ಅರ್ಹರಿಗೆ ವಾಲ್ಮೀಕಿ ಪ್ರಶಸ್ತಿ ನೀಡಲು ಇಬ್ಬರು ಅರ್ಹರನ್ನು ಜಿಲ್ಲೆಯಿಂದ ಆಯ್ಕೆ ಮಾಡಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಇವರಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ.
ಪ್ರಸ್ತಾವನೆ ಸಲ್ಲಿಸಬಯಸುವವರು, ಕನಿಷ್ಠ 35 ವರ್ಷಗಳಾಗಿರಬೇಕು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಾರದು. ಆಯ್ಕೆ ಮಾಡುವ ವ್ಯಕ್ತಿಯು ಸಾಮಾಜಿಕ ಕ್ಷೇತ್ರದಲ್ಲಿ ಮುಖ್ಯವಾಗಿ ಪರಿಶಿಷ್ಟ ವರ್ಗದ ಜನರಿಗೆ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದು, ಜನಸಾಮಾನ್ಯರಲ್ಲಿ ಸ್ವಯಂಸೇವಕರಾಗಿ ಮಾನ್ಯತೆ, ಕೀರ್ತಿ, ಪ್ರಖ್ಯಾತಿ ಹೊಂದಿರಬೇಕು. ಅವರು ಸಾಧನೆ ಮಾಡಿರುವ ಸಾಧನೆಗಳ ಬಗ್ಗೆ ದಾಖಲಾತಿ ಹೊಂದಿರಬೇಕು. ಪ್ರಮುಖವಾಗಿ ಪರಿಶಿಷ್ಟ ವರ್ಗದವರ ಶೈಕ್ಷಣಿಕ ಪ್ರಗತಿ ಹಾಗೂ ಆರ್ಥಿಕವಾಗಿ ಸಧೃಡಗೊಳಿಸಲು ಸ್ವಯಂ ಪ್ರೇರಣೆಯಿಂದ ದುಡಿಯುವ ವ್ಯಕ್ತಿಯಾಗಿರಬೇಕು. ಪರಿಶಿಷ್ಟ ಪಂಗಡಗಳ ಮೇಲೆ ನಡೆಯುವ ದೌರ್ಜನ್ಯ ಇವುಗಳ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಾಮರಸ್ಯ ವಾತಾವರಣ ಮೂಡಿಸುವುದು ಅಥವಾ ದೌರ್ಜನ್ಯ ನಿಯಂತ್ರಿಸಲು ಸಹಕಾರಿಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶ್ರಮಿಸುವ ವ್ಯಕ್ತಿಯಾಗಿರಬೇಕು. ಮಹರ್ಷಿ ವಾಲ್ಮೀಕಿಯವರ ತತ್ವ ಹಾಗೂ ಆದರ್ಶಗಳನ್ನು ಸಾಕಾರಗೊಳಿಸುವಂತಹ ಯಾವುದೇ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪರಿಶಿಷ್ಟ ವರ್ಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿರುವ ವ್ಯಕ್ತಿಯಾಗಿರಬೇಕು.
ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ/ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಆ.30 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 25 August 2014

ಮಹಿಳೆಯರಿಗೆ ಕಂಪ್ಯೂಟರ ತರಬೇತಿ : ಅರ್ಜಿ ಆಹ್ವಾನಕೊಪ್ಪಳ ಆ.25(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಹಾಗೂ ಕಿಯೋನಿಕ್ಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಜಿಲ್ಲೆಯ ಪ್ರತಿ ತಾಲೂಕಿಗೆ 20 ಗುರಿಗಳಿದ್ದು, 3 ತಿಂಗಳ ವಿವಿಧ ಕಂಪ್ಯೂಟರ್ ತರಬೇತಿಗಳಿಗಾಗಿ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
        ಕಂಪ್ಯೂಟರ್ ತರಬೇತಿಗಳಾದ ಅಕೌಂಟಿಂಗ್ ಮತ್ತು ಕಂಪ್ಯೂಟರ್ಸ್, ಡೆಸ್ಕ್‍ಟಾಪ್ ಪಬ್ಲಿಶಿಂಗ್ ಹಾಗೂ ಕನ್ನಡ ನುಡಿ, ವೆಬ್ ಡಿಜೈನಿಂಗ್ ತರಬೇತಿ ನೀಡಲಾಗಲಿದ್ದು, ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಯಾವುದೇ ಶಿಷ್ಯವೇತನವಾಗಲಿ, ಪ್ರಯಾಣ ಭತ್ಯೆಯಾಗಲಿ ನೀಡಲಾಗುವುದಿಲ್ಲ. 18 ರಿಂದ 35 ವರ್ಷದವರಾಗಿರಬೇಕು, ಪಿಯುಸಿ ನಂತರದ 3 ವರ್ಷದ ಡಿಪ್ಲೋಮಾಗಳ ಮತ್ತು ಅದಕ್ಕೂ ಮೇಲ್ಪಟ್ಟು ಉತ್ತೀರ್ಣ/ಅನುತ್ತೀರ್ಣರಾದವರಾಗಿರಬೇಕು, ವಾರ್ಷಿಕ ಆದಾಯ ರೂ.40,000/- ಮೀರಿರಬಾರದು. ಅರ್ಜಿ ಸಲ್ಲಿಸಲು ಸೆ.12 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉದ್ಯೋಗಿನಿ ಯೋಜನೆ : ಅರ್ಜಿ ಆಹ್ವಾನಕೊಪ್ಪಳ ಆ.25(ಕರ್ನಾಟಕ ವಾರ್ತೆ): ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಉದ್ಯೋಗಿನಿ ಯೋಜನೆಯಡಿ ಜಿಲ್ಲೆಗೆ ಗುರಿ ನಿಗದಿಪಡಿಸಿದ್ದು, ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
        ಅರ್ಜಿ ಸಲ್ಲಿಸುವವರು 18 ರಿಂದ 45 ವರ್ಷದವರಾಗಿರಬೇಕು, ಖಾಯಂ ಕರ್ನಾಟಕದ ನಿವಾಸಿಯಾಗಿರಬೇಕು, ಮಹಿಳಾ ಫಲಾನುಭವಿಗಳ ವಾರ್ಷಿಕ ಆದಾಯ ರೂ.40,000/- ಮೀರಿರಬಾರದು. ಯೋಜನೆಯಡಿ ಯಾವುದೇ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಮಹಿಳಾ ಫಲಾನುಭವಿಗಳು ಅರ್ಜಿಯನ್ನು ಉಚಿತವಾಗಿ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಪಡೆಯಬಹುದಾಗಿದೆ. ಅರ್ಜಿಯೊಂದಿಗೆ ಇತ್ತೀಚಿನ ಮೂರು ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಪಡಿತರ ಚಈಟಿ, ಯೋಜನಾ ವರದಿಗಳನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಸೆ.12 ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಆ.28 ರಂದು ಕೊಪ್ಪಳದಲ್ಲಿ ರಫ್ತು ಜಾಗೃತಿ ಕಾರ್ಯಕ್ರಮಕೊಪ್ಪಳ,ಆ.25(ಕರ್ನಾಟಕ ವಾರ್ತೆ): ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರವು ಜಿಲ್ಲಾ ಕೈಗಾರಿಕಾ ಕೇಂದ್ರ, ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಫೆಡರೇಷನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಫ್ತು ಜಾಗೃತಿ ಕಾರ್ಯಕ್ರಮವನ್ನು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಆ.28 ರಂದು ಮಧ್ಯಾಹ್ನ 3.30 ಕ್ಕೆ ಏರ್ಪಡಿಸಲಾಗಿದೆ.
        ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು, ವ್ಯವಹಾರಸ್ಥರು, ಕೃಷಿಕರು ಹಾಗೂ ತೋಟಗಾರಿಕೆ ಬೆಳೆಗಾರರು ಭಾಗವಹಿಸಿ ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ತರಬೇತಿಯ ಕಾಲಕ್ಕೆ ರಫ್ತು ವ್ಯವಹಾರ ಏಕೆ?, ಹೇಗೆ ? ಎಲ್ಲಿಗೆ? ಹಾಗೂ ನಮ್ಮ ಜಿಲ್ಲೆಯಿಂದ ಯಾವ ಯಾವ ಸಾಮಗ್ರಿಗಳನ್ನು ರಫ್ತು ಮಾಡಬಹುದು ಎಂಬ ಇತ್ಯಾದಿ ವಿವರಗಳಲ್ಲದೇ, ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ಏರ್ಪಡಿಸಲಾಗಿದೆ.
        ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರ ದೂರವಾಣಿ ಸಂಖ್ಯೆ: 08539-231110 ಅಥವಾ ವಿಟಿಪಿಸಿ, ಧಾರವಾಡ ಕಛೇರಿ ದೂ.0836-2222600, ವಿಶ್ವನಾಥ ಸೂಸಿಮಠ ವಿಟಿಪಿಸಿ ಮೊ.9742709229 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ನಗರಸಭೆಯಿಂದ ಸಾಲ ಸೌಲಭ್ಯ : ಅರ್ಜಿ ಆಹ್ವಾನಕೊಪ್ಪಳ,ಆ.25(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿಗೆ ಕೇಂದ್ರ ಪುರಸ್ಕøತ ಯೋಜನೆಯಾದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ರಾಜೀವ ರಿನ್ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸ್ವಂತ ಮನೆ ಹೊಂದಲು ಅನುಕೂಲವಾಗುವಂತೆ ಬ್ಯಾಂಕಿನ ಮೂಲಕ ಬಡ್ಡಿ ಸಬ್ಸಿಡಿ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಮನೆ ಸ್ವಂತ ನಿವೇಶನ ಹೊಂದಿದ್ದಲ್ಲಿ ಹೊಸ ಮನೆ ನಿರ್ಮಾಣ ಹಾಗೂ ಇರುವ ಮನೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಶೇ.5% ರಷ್ಟು ಬಡ್ಡಿ ಸಬ್ಸಿಡಿಯೊಂದಿಗೆ ಸಾಲ ಪಡೆಯಲು ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರುವ ಆರ್ಥಿಕ ದುರ್ಬಲ ವರ್ಗದವರಿಗೆ ಹಾಗೂ 1 ರಿಂದ 2 ಲಕ್ಷ ಕಡಿಮೆ ಆದಾಯವುಳ್ಳ ಕುಟುಂಬಗಳು ಸಾಲ ಪಡೆಯಬಹುದಾಗಿದೆ. ಸಾಲದ ಮೊತ್ತ ರೂ.5.00 ಲಕ್ಷಗಳಾಗಿದ್ದು, ಬಡ್ಡಿ ಸಹಾಯಧನ ಶೇ.5% ರಷ್ಟು ಇರುತ್ತದೆ. ಹಾಗೂ ಎಲ್.ಐ.ಜಿ. ಕುಟುಂಬಗಳಿಗೆ ರೂ.8.00 ಲಕ್ಷದವರೆಗೆ ಸಾಲದ ಮೊತ್ತವಾಗಿರುತ್ತದೆ. ರೂ.5.00 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದಲ್ಲಿ ಶೇ.5% ರಷ್ಟು ಸಹಾಯಧನ ಇರುವುದಿಲ್ಲ.
        ಅರ್ಜಿಯೊಂದಿಗೆ ನಿವೇಶನ ಮಾಲೀಕತ್ವ ದಾಖಲೆ, ಚಾಲ್ತಿ ವರ್ಷದ ಜಾತಿ ಮತ್ತು ಆದಾಯ, ನಿವೇಶನ ತೆರಿಗೆ ಪಾವತಿಸಿದ ದಾಖಲಾತಿಗಳು, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ಅಂಗವಿಕಲ ಪ್ರಮಾಣ ಪತ್ರ ಅವಶ್ಯವಿದ್ದಲ್ಲಿ ಅರ್ಜಿ ಸಲ್ಲಿಸಲು ಸೆ.15 ರವರೆಗೆ ಅರ್ಜಿಗಳನ್ನು ನಗರಸಭೆ ಕಾರ್ಯಾಲಯ ಕೊಪ್ಪಳ ಇವರ ಈ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯದ ಸಿ.ಎ.ಓ. ಮಂಗಳ ಜಿ.ಕುಲಕರ್ಣಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಣೆ : ದಾಖಲಾತಿ ಸಲ್ಲಿಸಲು ಸೂಚನೆಕೊಪ್ಪಳ,ಆ.25(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ನಗರದ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸುವ ಯೋಜನೆಗಾಗಿ ಅರ್ಹರಿಂದ ದಾಖಲಾತಿಗಳನ್ನು ಆಹ್ವಾನಿಸಲಾಗಿದೆ.
        ಪ್ರಸಕ್ತ ಸಾಲಿಗೆ ಕೇಂದ್ರ ಪುರಸ್ಕøತ ಯೋಜನೆಯಾದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಬೀದಿ ಬದಿ ವ್ಯಾಪಾರಸ್ಥರು ತಮ್ಮ ಯಾದಿಯನ್ನು ಹಾಗೂ ಕುಟುಂಬ ಸದಸ್ಯರನ್ನೊಳಗೊಂಡ ಭಾವಚಿತ್ರವನ್ನು ನಗರಸಭೆಗೆ ಆ.31 ರೊಳಗೆ ಸಲ್ಲಿಸಿ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು.
        ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಂಚಾರಿ ಹಾಗೂ ಸ್ಥಿರ ಬೀದಿ ವ್ಯಾಪಾರಸ್ಥರ ಸಮೀಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಈ ವ್ಯಾಪಾರಸ್ಥರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕಾಗಿದ್ದು, ಆ.31 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೌರಿ ಗಣೇಶ ಹಬ್ಬ : ಬನಾಯೇಂಗೆ ಮಂದಿರ್ ಹಾಡು ನಿಷೇಧಕೊಪ್ಪಳ ಆ. 25 (ಕ.ವಾ): ಗೌರಿ-ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಯ ಸಲುವಾಗಿ ಗಂಗಾವತಿ ನಗರದಲ್ಲಿ ಆ. 29 ರಿಂದ ಸೆ. 13 ರವರೆಗೆ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಆದೇಶ ಹೊರಡಿಸಿದ್ದಾರೆ.
        ಗೌರಿ-ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ಗಂಗಾವತಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಠಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 35 (1)(ಇ) ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗಂಗಾವತಿ ನಗರದಾದ್ಯಂತ ಆ. 29 ರಿಂದ ಸೆ. 13 ರವರೆಗೆ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ- ಡಿ.ಸಿ. ಆರ್.ಆರ್. ಜನ್ನುಕೊಪ್ಪಳ ಆ. 25 (ಕ.ವಾ): ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.
        ಇದೇ ಆ. 29 ರಿಂದ ಸೆ. 13 ರವರೆಗೆ ಗೌರಿ-ಗಣೇಶ ಹಬ್ಬದ ಆಚರಣೆ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
        ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು.  ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.  ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು,  ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಯೋಜನೆಯಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿಯೇ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.  ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಮೈಕ್ ಬಳಸುವುದನ್ನು ನಿಷೇಧಿಸಲಾಗಿದೆ.  ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.   ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ.   ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.
        ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಮಾತನಾಡಿ,  ಭಕ್ತಿ-ಭಾವದಿಂದ ಹಾಗೂ ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಬೇಕಾಗಿದ್ದು, ಆದರೆ, ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ  ಸಾರ್ವಜನಿಕರು ಸಭ್ಯತೆಯ ಎಲ್ಲೆಯನ್ನು ಮೀರಬಾರದು, ಇಂತಹ ವರ್ತನೆ ಭಕ್ತಿ-ಭಾವದ ಕಾರ್ಯಕ್ರಮಕ್ಕೆ ಶೋಭೆ ತರುವುದಿಲ್ಲ.  ಆಸ್ಪತ್ರೆಗಳು ಹಾಗೂ ಧಾರ್ಮಿಕ ಕೇಂದ್ರಗಳ ಎದುರುಗಡೆ ಪಟಾಕಿ ಹಚ್ಚುವುದನ್ನು ಅಲ್ಲದೆ ಭಾರಿ ಶಬ್ದ ಬರುವ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ. ಪೆಂಡಾಲ್ ಹಾಗೂ ಗಣೇಶ ಮೂರ್ತಿಗಳ ರಕ್ಷಣೆಗಾಗಿ ಆಯಾ ಸಂಘಟಕರು ಸ್ವಯಂ-ಸೇವಕರನ್ನು ನೇಮಿಸಿಕೊಳ್ಳಬೇಕು.  ಮನರಂಜನಾ ಕಾರ್ಯಕ್ರಮಗಳು ನಡೆಯುವ ಅವಧಿ ಹಾಗೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಯ ಮಾರ್ಗವನ್ನು ಸಾಕಷ್ಟು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ಒದಗಿಸಬೇಕು.  ಪೆಂಡಾಲ್ ನಿರ್ಮಿಸುವಾಗ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ಅಗ್ನಿ ಅವಘಡಗಳನ್ನು ತಪ್ಪಿಸಲು ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಅಗತ್ಯ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು.  ಅಸುರಕ್ಷಿತ ವಿದ್ಯುತ್ ಸಂಪರ್ಕ ಪಡೆದಲ್ಲಿ, ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ, ಜೆಸ್ಕಾಂನವರ ಅನುಮತಿ ಪಡೆದು, ಸುರಕ್ಷಿತ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು.  ಸಾರ್ವಜನಿಕ ತೊಂದರೆ ಹಾಗೂ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಪಟಾಕಿ ಬಳಕೆ ಮಾಡಲು, ಸಂಘಟಕರು ಮೆರವಣಿಗೆ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಿಗೆ ವಹಿಸಬೇಕು. ಕೋಮು ಪ್ರಚೋದನೆ ಮಾಡುವವರು, ಅನಗತ್ಯ ಗಲಾಟೆ ಮಾಡುವವರು, ಗೂಂಡಾ ಪಟ್ಟಿಯಲ್ಲಿರುವವರ ಬಗ್ಗೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
        ಸಭೆಯಲ್ಲಿ ಭಾಗವಹಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರುದ್ರೇಶ್ ಅವರು ಮಾತನಾಡಿ, ಸಾರ್ವಜನಿಕರು ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸಬೇಕು, ಪರಿಸರ ಮತ್ತು ಜಲ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸುವಂತೆ ಕರೆ ನೀಡಿದರು.
        ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿವೈಎಸ್‍ಪಿ ರಾಜೀವ್ ಎಂ., ಸೇರಿದಂತೆ ವಿವಿಧ ತಾಲೂಕುಗಳ ಪೊಲೀಸ್ ಇಲಾಖೆಯ ಅಧಿಕಾರಿಗಳು, ತಾಲೂಕು ತಹಸಿಲ್ದಾರರು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿವಾನಂದ ಹೊದ್ಲೂರು, ಸಿದ್ದಪ್ಪ ಹಂಚಿನಾಳ, ಮಾನ್ವಿ ಪಾಷಾ, ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Saturday, 23 August 2014

ಕೊಪ್ಪಳ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ನಿರ್ಮಲ ಜಿಲ್ಲೆಯಾಗಲಿ- ಕೃಷ್ಣ ಉದಪುಡಿಕೊಪ್ಪಳ ಆ.22(ಕರ್ನಾಟಕ ವಾರ್ತೆ): ಶೌಚಾಲಯ ನಿರ್ಮಾಣ ಕಾರ್ಯದಡಿ ಗ್ರಾಮೀಣ ಭಾಗದ ಬಹಳಷ್ಟು ಕುಟುಂಬಗಳು ಶೌಚಾಲಯ ನಿರ್ಮಾಣ ಮಾಡಿಕೊಂಡು ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸುವಂತೆ ಜನತೆ ಸಹಕಾರ ನೀಡಿದ್ದು, ಅದೇ ರೀತಿ ಇಡೀ ಜಿಲ್ಲೆ ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸಿ ರಾಷ್ಟ್ರ ಮಟ್ಟದಲ್ಲಿಯೇ ನಿರ್ಮಲ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಸಾರ್ವಜನಿಕರಲ್ಲಿ ಕರೆ ನೀಡಿದ್ದಾರೆ.   
        ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಬಾರಿ 54000 ಕುಟುಂಬಗಳು ಶೌಚಾಲಯ ನಿರ್ಮಿಸುವ ಮೂಲಕ ನಿರ್ಮಲ ಭಾರತ ಅಭಿಯಾನ ಯೋಜನೆಗೆ ಅಭೂತಪೂರ್ವ ಯಶಸ್ಸು ತಂದು ಕೊಟ್ಟಿದ್ದಾರೆ.  ಗ್ರಾಮೀಣ ಪ್ರದೇಶದ ಆರ್ಥಿಕತೆಯೇ ದೇಶದ ಆರ್ಥಿಕತೆಯಾಗಿದೆ. ಗ್ರಾಮ ಸದೃಢವಾಗಬೇಕಾದರೆ ಸಾರ್ವಜನಿಕರು ಆರೋಗ್ಯದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಳಸುವುದು ಹಾಗೂ ಬಯಲು ಮಲ ವಿಸರ್ಜನ ಮುಕ್ತ ಗ್ರಾಮವನ್ನಾಗಿ ಮಾಡಿ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆದು ಸುತ್ತಮುತ್ತಲಿನ ನೈರ್ಮಲ್ಯ ಕಾಪಾಡಿಕೊಂಡು ಉತ್ತಮ ಪರಿಸರ ನಿರ್ಮಿಸಲು ಎಲ್ಲರು ಸಹಕಾರ ನೀಡಬೇಕಿದೆ.  ಕೆಲವೆಡೆ ಶೌಚಾಲಯಗಳನ್ನು ಕಟ್ಟಿಕೊಂಡ ಕುಟುಂಬಗಳಿಗೆ ಹಣ ಪಾವತಿ ವಿಳಂಬವಾಗಿದ್ದು, ಈಗಾಗಲೇ ಹಣ ಪಾವತಿಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಹಣ ಬಿಡುಗಡೆಯಾಗಿದೆ.  ಅಲ್ಲದೆ ಇನ್ನು, ಯಾವುದೇ ರೀತಿಯ ವಿಳಂಬಕ್ಕೆ ಕಾರಣವಾಗದಂತೆ ಎಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೇನಾದರೂ ಹಣ ಪಾವತಿಯಲ್ಲಿ ವಿಳಂಬವಾದರೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಮೊಬೈಲ್ ಸಂಖ್ಯೆ: 9480871000 ಗೆ ತಕ್ಷಣ ಸಂಪರ್ಕಿಸಿ ಮಾಹಿತಿ ಒದಗಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅರಣ್ಯೀಕರಣ ಅಭಿಯಾನ : ಕೊಪ್ಪಳ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 25 ಲಕ್ಷ ಗಿಡಗಳನ್ನು ನೆಟ್ಟು ಜಿಲ್ಲೆಯನ್ನು ಅರಣ್ಯೀಕರಣಗೊಳಿಸಿ ಹಸಿರಾಗಿಸಲು ಜಿಲ್ಲಾ ಪಂಚಾಯತಿ ಸಂಕಲ್ಪ ಮಾಡಿ ಕಾರ್ಯೋನ್ಮುಖವಾಗಿದೆ.  ಲಭ್ಯವಿರುವ ಗಿಡಗಳನ್ನು ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.  ಕೊಪ್ಪಳ ಜಿಲ್ಲೆ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದ್ದು, ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯನ್ನು ಅರಣ್ಯೀಕರಣಗೊಳಿಸಿ ಹಸಿರಾಗಿಸಲು ಸಾರ್ವಜನಿಕರ ಸಹಕಾರ ಅತ್ಯಮೂಲ್ಯವಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದ ಅರ್ಹ ರೈತರು ಆಯಾ ಗ್ರಾಮ ಪಂಚಾಯತಿಯಲ್ಲಿ ಅರ್ಜಿಯನ್ನು ಸಲ್ಲಿಸಿ ತಮ್ಮ ಜಮೀನಿನಲ್ಲಿ ಲಾಭಾಂಶವನ್ನು ತರುವ ಹಣ್ಣಿನ ಮತ್ತು ಕಾಡು ಜಾತಿಯ ವಿವಿಧ ಗಿಡಗಳನ್ನು ನೆಡಲು ಅವಕಾಶವಿದೆ. ಇದರ ಸೌಲಭ್ಯವನ್ನು ಪಡೆಯಲು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯವಾಗಬಹುದಾಗಿದೆ.  ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಜಮೀನು, ಶಾಲಾ, ಕಾಲೇಜು ಆವರಣ ಹಾಗೂ ಇನ್ನಿತರ ಸರ್ಕಾರಿ ಸ್ಥಳದಲ್ಲಿ ವಿವಿಧ ಗಿಡಗಳನ್ನು ನೆಟ್ಟು ಹಸೀರುಕರಣ ಅಭಿಯಾನಕ್ಕೆ ಸಾರ್ವಜನಿಕರು ಹಾಗೂ ರೈತರು ಕೈಜೋಡಿಸಿದಲ್ಲಿ, ಬಿಸಿಲು ನಾಡು ಎನಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಹಸಿರಿನಿಂದ ಕಂಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.  ಜಾಬ್ ಕಾರ್ಡ್ ಹೊಂದಿದವರು, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ, ಅರಣ್ಯೀಕರಣಕ್ಕಾಗಿ ಬೇಡಿಕೆ ಸಲ್ಲಿಸಿ, ಗಿಡಗಳನ್ನು ನೆಡಲು ಮುಂದಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಗ್ರಾಮೀಣ ಪ್ರದೇಶದ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮಕೊಪ್ಪಳ ಆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಆ. 24 ಮತ್ತು 25 ರಂದು ಎರಡು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
        ಸಚಿವರು ಆ. 24 ರಂದು ಮಧ್ಯಾಹ್ನ ಕಾರಟಗಿಯಿಂದ ಹೊರಟು 2-30 ಗಂಟೆಗೆ ಕೊಪ್ಪಳಕ್ಕೆ ಆಗಮಿಸುವರು,  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸರ್ವ ಶಿಕ್ಷಣ ಅಭಿಯಾನ/ ಆರ್.ಎಂ.ಎಸ್.ಎ. ಕಾರ್ಯಕ್ರಮದಡಿ ನಡೆಯುವ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸುವರು.  ಸಂಜೆ 4 ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು, ವಾಸ್ತವ್ಯ ಮಾಡುವರು.  ಆ. 25 ರಂದು ಮಧ್ಯಾಹ್ನ 12 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ ಜಿಲ್ಲೆಯ ಕಲ್ಲು ಗಣಿಗಾರಿಕೆಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಗ್ರಾನೈಟ್ ಅಸೋಸಿಯೇಷನ್ ಅವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸುವರು.  ಸಚಿವರು ಅದೇ ದಿನ ಮಧ್ಯಾಹ್ನ 3-30 ಗಂಟೆಗೆ ಇಳಕಲ್‍ಗೆ ಪ್ರಯಾಣ ಬೆಳೆಸುವರು.

ಸೇನಾ ನೇಮಕಾತಿ ರ್ಯಾಲಿ : 9000 ಅಭ್ಯರ್ಥಿಗಳು ಭಾಗಿಕೊಪ್ಪಳ ಆ. 23 (ಕ.ವಾ): ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಅ. 19 ರಿಂದ 22 ರವರೆಗೆ ಜರುಗಿದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯಲ್ಲಿ ಸುಮಾರು 9000 ಅಭ್ಯರ್ಥಿಗಳು ಭಾಗಿಯಾಗಿದ್ದು, ಸೇನಾ ನೇಮಕಾತಿ ರ್ಯಾಲಿ ಯಶಸ್ವಿಯಾಗಿದೆ ಎಂದು ಬೆಳಗಾವಿ ಸೇನಾ ನೇಮಕಾತಿ ಕಚೇರಿಯ ಕರ್ನಲ್ ದುಷ್ಯಂತ್‍ಸಿಂಗ್ ಅವರು ಹೇಳಿದರು.
        ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತಂತೆ ಶನಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
        ಭಾರತೀಯ ಸೇನೆಯಲ್ಲಿನ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೇನಾ ಭರ್ತಿ ರ್ಯಾಲಿ ಆ. 19 ರಿಂದ 23 ರವರೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.  ಕೊಪ್ಪಳ, ಬೀದರ್, ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳಿಗೆ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು.  ಆ. 22 ರಂದು ಮಾತ್ರ ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿತ್ತು.  ಸುಮಾರು 9000 ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದರು.  ಇದರಲ್ಲಿ ನಿಗದಿಗಿಂತ ಕಡಿಮೆ ಎತ್ತರ ಅಂದರೆ 162 ಸೆಂ.ಮೀ. ಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ.  ಒಟ್ಟು 350 ಅಭ್ಯರ್ಥಿಗಳು ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಪೈಕಿ 60 ಅಭ್ಯರ್ಥಿಗಳು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಸಂಪೂರ್ಣ ಫಿಟ್ ಎಂದು ಗುರುತಿಸಲಾಗಿದ್ದು, ಈ ಅಭ್ಯರ್ಥಿಗಳು ಆಗಸ್ಟ್ 31 ರಂದು ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಲ್ಲಿ ನಡೆಯಲಿರುವ ಲಿಖಿತ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.  ಉಳಿದ 290 ಅಭ್ಯರ್ಥಿಗಳಿಗೆ ಕೆಲವು ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿ, 42 ದಿನಗಳ ಒಳಗಾಗಿ ವರದಿ ಪಡೆಯುವಂತೆ ತಿಳಿಸಲಾಗಿದ್ದು, ತಜ್ಞ ವೈದ್ಯರು ನೀಡುವ ವರದಿಯ ಆಧಾರದ ಮೇಲೆ, ಅರ್ಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗಾವಿಯಲ್ಲಿ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಗುವುದು.  ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲಾಗಿದೆ.  ರಾಜ್ಯದ ವಿವಿಧ ಜಿಲ್ಲೆಗಳನ್ನು ಹೋಲಿಸಿದಾಗ ಉತ್ತರ ಕರ್ನಾಟಕದ ಜಿಲ್ಲೆಗಳ ಅಭ್ಯರ್ಥಿಗಳೇ ಸೇನೆಗೆ ಸೇರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.  ಯುವಕರು ತಮ್ಮ ಆರೋಗ್ಯ ಮತ್ತು ದೈಹಿಕ ಸಾಮಥ್ರ್ಯವನ್ನು ಉತ್ತಮವಾಗಿಟ್ಟುಕೊಂಡು, ಹೆಚ್ಚು, ಹೆಚ್ಚು ಜನ ಸೇನೆಗೆ ಸೇರಲು ಮುಂದಾಗಬೇಕು.  ಸೇನೆಯಲ್ಲಿ ಯುವಕರಿಗೆ ವೇತನ, ವಸತಿ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ಈ ಕುರಿತಂತೆ ಯುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸೇನಾ ಅಧಿಕಾರಿಗಳು ಸಿದ್ಧರಾಗಿದ್ದು, ಕೊಪ್ಪಳ ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ, ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.  ಸೇನಾ ನೇಮಕಾತಿ ರ್ಯಾಲಿಯನ್ನು ವ್ಯವಸ್ಥಿತವಾಗಿ ಜರುಗಿಸಲು ಕೊಪ್ಪಳ ಜಿಲ್ಲಾಡಳಿತ ಉತ್ತಮ ಸೌಕರ್ಯವನ್ನು ಕಲ್ಪಿಸಿದ್ದು, ಇದಕ್ಕಾಗಿ ಜಿಲ್ಲಾ ಆಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಕರ್ನಲ್ ದುಷ್ಯಂತ್‍ಸಿಂಗ್ ಅವರು ಹೇಳಿದರು.
        ಸುದ್ದಿಗೋಷ್ಠಿಯಲ್ಲಿ ಮಂಗಳೂರು, ಬೆಂಗಳೂರು, ಕ್ಯಾಲಿಕಟ್ ವಿಭಾಗದ ಸೇನಾ ನೇಮಕಾತಿ ಕಚೇರಿಯ ನಿರ್ದೇಶಕರುಗಳಾದ ವಿಶ್ವನಾಥ್, ಆರ್.ಎಸ್. ಚೌಹಾಣ್, ಅನಿಲ್ ಠಾಕೂರ್, ಕೊಪ್ಪಳದ ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬಿರನಾಯ್ಕರ್ ಉಪಸ್ಥಿತರಿದ್ದರು.