Monday, 30 June 2014

ಹೆಸರು ಬೆಳೆಯಲ್ಲಿ ಹಳದಿ ನಂಜಾಣು ರೋಗ ನಿರ್ವಹಣೆ : ರೈತರಿಗೆ ಸಲಹೆಗಳು

ಕೊಪ್ಪಳ ಜೂ. 30 (ಕ.ವಾ): ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಗೆ ತೇವಾಂಶ ಕೊರತೆ ಮತ್ತು ಎಲೆಗಳು ಹಳದಿಯಾಗಿ ನಂಜಾಣು ರೋಗದ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
          ಕೊಪ್ಪಳ ಜಿಲ್ಲೆಯಲ್ಲಿ ಹೆಸರು ಬೆಳೆ, ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲೊಂದು. ಇದನ್ನು ಮೇ ತಿಂಗಳ ಕೊನೆಯ ವಾರದಿಂದ ಜೂನ 15 ರವರೆಗೆ ವ್ಯಾಪಕವಾಗಿ ಬಿತ್ತನೆ ಮಾಡಲಾಗಿದೆ. ಹೆಸರು ಬಿತ್ತನೆಯಾದಾಗಿನಿಂದ ಮುಂಗಾರು ಮಳೆಯು ಕ್ಷೀಣಿಸತೊಡಗಿದ್ದು ಹಲವಾರು ಪ್ರದೇಶಗಳಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಬಳಲುತ್ತಿದೆ. ಇದರೊಂದಿಗೆ ಹೆಸರು ಬೆಳೆಯಲ್ಲಿ ಎಲೆಗಳು ಹಳದಿಯಾಗಿ ನಂಜಾಣು ರೋಗದ ಬಾಧೆ ಹೆಚ್ಚಾಗಿ ಕಂಡುಬರುತ್ತಿದ್ದು ಸೂಕ್ತವಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವದು ಅವಶ್ಯಕವಾಗಿದೆ.
          ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿಗಳಾದ ವಿ. ಆರ್. ಜೋಶಿ, ಡಾ: ಮಲ್ಲಿಕಾರ್ಜುನ ಕೆಂಗನಾಳ, ಯೂಸುಫ ಅಲಿ ನಿಂಬರಗಿ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಅಧಿಕಾರಿಗಳ ತಂಡ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ ಹೆಸರು ಬೆಳೆಯ ವಿವಿಧ ಕ್ಷೇತ್ರಗಳಿಗೆ ಭೇಟ್ಟಿ ಕೈಗೊಂಡಿದ್ದು ಹೆಸರು ಬೆಳೆಯಲ್ಲಿ ನಂಜಾಣು ರೋಗಧ ಬಾಧೆ ಅಲ್ಲಲ್ಲಿ ಕಂಡುಬರುತ್ತಿದ್ದು ರೈತರಿಗೆ ರೋಗ ನಿರ್ವಹಣೆಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಸಲಹೆಗಳನ್ನು ನೀಡಿದೆ.
ರೋಗ ಲಕ್ಷಣಗಳು: ರೋಗದ ಪ್ರಾರಂಭಿಕ ಹಂತದಲ್ಲಿ ಹಳದಿ ಮಿಶ್ರಿತ ಹಸಿರು ಬಣ್ಣದ ಮಚ್ಚೆಗಳು ಎಳೆಯ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಗಿಡದ ತುದಿಯಲ್ಲಿ ಬೆಳೆಯುತ್ತಿರುವ ತ್ರಿದಳ ಎಲೆಗಳಲ್ಲಿ ಅನಿರ್ದಿಷ್ಟವಾದ ಹಳದಿ ಮೊಸೈಕ ಮಚ್ಚೆಗಳು ಪ್ರಮುಖವಾಗಿ ಎದ್ದು ಕಾಣುತ್ತವೆ. ಇವುಗಳು ಕ್ರಮೇಣ ದೊಡ್ಡದಾಗಿ ಮಚ್ಚೆಗಳು ಒಂದಕ್ಕೊಂದು ಕೂಡಿಕೊಂಡು ಸಮಪೂರ್ಣ ಎಲೆಗಳು ಹಳದಿಯಾಗುವದನ್ನು ಕಾಣುತ್ತೆವೆ. ಪತ್ರಹರಿತ್ತಿನ ಪ್ರಮಾಣ ಕಡಿಮೆಯಾಗಿ ಗಿಡಗಳಲ್ಲಿ ದ್ವಿತಿಸಂಶ್ಲೇಷಣೆ ಕ್ರಿಯೆಯು ಕುಂಟಿತಗೊಂಡು, ಬಾಧಿತ ಎಲಗಳು ಮುಟುರುವದು ಮತ್ತು ಒಣಗುದು ಸಹ ಕಂಡುಬರುತ್ತದೆ. ರೋಗ ತೀವೃವಾದಲ್ಲಿ ಗಿಡಗಳು ಕುಬ್ಜವಾಗಿ ಬೆಳೆದು, ತಡವಾಗಿ ಕೆಲವೇ ಹೂಗಳು ಕಾಣಿಸಿಕೊಂಡು ಕಾಯಿಗಳು ಸಂಖ್ಯೆಯಲ್ಲಿ ಕಡಿಮೆಯಾಗಿರುತ್ತವೆ. ಇಂತಹ ಗಿಡಗಳಲ್ಲಿ ಕಾಳುಗಳೂ ಸಹ ಸಣ್ಣದಾಗಿದ್ದು ವಿಕಾರವಾಗಿರುತ್ತವೆ. ಗಿಡವು ಹುವು ಬಿಡುವ ಮುಂಚೆ ಸಂಪೂರ್ಣ ಹಳದಿಯಾದರೆ ಹೂವುಗಳು ಕಾಣಿಸಿಕೊಳ್ಳುವದಿಲ್ಲ. ಬಿತ್ತನೆ ನಂತರವೇ ಬಾಧೆ ಉಂಟಾದಲ್ಲಿ ಕಾಳುಗಳು ಕಟ್ಟುವುದಿಲ್ಲ. ಒಟ್ಟಾರೆ ಇಳುವರಿಯಲ್ಲಿ ಗಣನೀಯವಾದ ಕಡಿತ ಉಂಟಾಗುತ್ತದೆ.
ರೋಗಕಾರಕ: ಈ ಹಳದಿ ಮೊಸೈಕ ರೋಗವು ಬೆಗಮೊ ನಂಜಾಣುವಿನಿಂದ ಉಂಟಾಗುತ್ತದೆ. ಬಿಳಿನೊಣಗಳು ನಂಜಾಣುವನ್ನು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಡುತ್ತವೆ. ಹಲವಾರು ಕಳೆ ಬೆಳೆಗಳಲ್ಲಿ ನಂಜಾಣು ಆಶ್ರಯ ಪಡೆದುಕೊಂಡು ಹೆಸರು ಬೆಳೆದಾಗ ಬಿಳಿ ನೊಣಗಳು ರೋಗವನ್ನು ಪ್ರಸಾರಣ ಮಾಡುತ್ತವೆ.
ನಿರ್ವಹಣೆ: ಸಾಮಾನ್ಯವಾಗಿ ಬಿತ್ತನೆಯ ಮುಂಚೆ ಹೆಸರು ಬೀಜಗಳನ್ನು ಇಮಿಡಾಕ್ಲೊಪ್ರಿಡ್ 70 ಡಬ್ಲೂ ಎಸ್. ಕೀಟನಾಶಕದಿಂದ 5ಮೀ.ಲೀ/ಕಿ.ಗ್ರಾಂ ಬೀಜಕ್ಕೆ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಹೊಲದಲ್ಲಿ ರೋಗಬಾಧಿತ ಗಿಡಗಳು ಕಂಡುಬಂದರೆ ತೆಗೆದು ನಾಶಪಡಿಸಬೇಕು. ಹೊಲಗಳು ಕಳೆಮುಕ್ತವಾದಷ್ಟು ಒಳ್ಳೆಯದು. ಬೆಳೆಯಲ್ಲಿ ಬಿಳಿ ನೊಣದ ಬಾಧೆ ಕಂಡುಬಂದಲ್ಲಿ ಇಮಿಡಾಕ್ಲೊಪ್ರಿಡ್ 17.8 ಎಸ್. ಎಲ್. 0.5ಮಿ.ಲೀ./ಲೀ ನಿರಿಗೆ ಬೆರಸಿ ಸಿಂಪರಣೆ ಮಾಡಬೇಕು. 10 ದಿನಗಳ ನಂತರ ಬೇವಿನ ಎಣ್ಣೆಯನ್ನು 5 ಮಿ.ಲೀ./ಲೀ ನಿರಿಗೆ ಬೆರಸಿ ಸಿಂಪರಣೆ ಮಾಡುವದರಿಂದ ರೋಗ ಹರಡುವ ಕೀಟಗಳು ಕಡಿಮೆಯಾಗಿ ರೋಗವು ಹತೋಟಿಯಲ್ಲಿರುವದು. ಸಾದ್ಯವಾದರೆ ಮುಂಬರುವ ಬೂದು ರೋಗಕ್ಕೆ ಮುಂಜಾಗೃತ ಕ್ರಮವಾಗಿ ಗಂಧಕದ ಪುಡಿಯನ್ನು 3ಗ್ರಾಂ/ಲೀ ನೀರಿಗೆ ಕೀಟನಾಶಕದೊಂದಿಗೆ ಬೆರಸಿ ಸಿಂಪರಣೆ ಮಾಡಬಹುದು. ಬೆಳೆಗೆ 18:18:18 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಎಕರೆಗೆ ಒಂದು ಕೆಜಿಯಂತೆ ಸಿಂಪರಣೆ ಮಾಡುವದರಿಂದ ಬೆಳೆ ಹಳದಿಯಾಗುವುದನ್ನು ಕಡಿಮೆಗೊಳಿಸಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಡಾ. ಮಲ್ಲಿಕಾರ್ಜುನ ಕೆಂಗನಾಳ- 9845364708 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಜಾನಪದ ವಿಶ್ವವಿದ್ಯಾಲಯ: ಪ್ರವೇಶಕ್ಕೆ ಅರ್ಜಿ ಆಹ್ವಾನಕೊಪ್ಪಳ,ಜೂ.30(ಕರ್ನಾಟಕ ವಾರ್ತೆ): ಬೀದರ್‍ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದದಲ್ಲಿ ಪ್ರಸಕ್ತ ಸಾಲಿಗೆ ಹತ್ತು ತಿಂಗಳ ಅವಧಿಯ ವಿವಿಧ ಕೋರ್ಸುಗಳಾದ ಜನಪದ ಗೀತ ಸಂಪ್ರದಾಯ, ಜನಪದ ವೈದ್ಯ, ಜನಪದ ನೃತ್ಯ, ಜನಪದ ಕಸೂತಿ ಮತ್ತು ಬಿದರಿ ಕಲೆ ಇವುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು ಅಥವಾ ಪಾರಂಪರಿಕ ಅನುಭವವುಳ್ಳವರು ಪ್ರವೇಶ ಪಡೆದುಕೊಳ್ಳಬಹುದು. ಅದೇ ರೀತಿ ಪಾರಂಪರಿಕ ಹೈನುಗಾರಿಕೆ ಪಿ.ಜಿ. ಡಿಪ್ಲೊಮ ಕೋರ್ಸಗೆ ಸೇರಬಯಸುವವರು ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಪ್ರತಿ ಕೋರ್ಸಿಗೆ ಕೇವಲ 20 ಸೀಟುಗಳು ಲಭ್ಯವಿರುತ್ತದೆ. ಪ್ರವೇಶಾತಿಗಾಗಿ ಜುಲೈ-25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ: 08482-226344 ಈ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ಡಾ.ಜಗನ್ನಾಥ ಹೆಬ್ಬಾಳ ಅವರು ತಿಳಿಸಿದ್ದಾರೆ.

ಯುವ ಸಂಘ/ಯುವ ಗುಂಪಿಗೆ ಪ್ರೋತ್ಸಾಹಧನ : ಪ್ರಸ್ತಾವನೆಗಳಿಗೆ ಆಹ್ವಾನಕೊಪ್ಪಳ,ಜೂ.30(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಮ್ಮೂರ ಶಾಲೆ ನಮ್ಮ ಯುವಜನರು ಯೋಜನೆ ಅಡಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮತ್ತು ಅಲ್ಲಿನ ಯುವಜನರಲ್ಲಿ ಸಬಲೀಕರಣಗೊಳಿಸುವ ಗಮನಾರ್ಹ ಸಾಧನೆಯನ್ನು ಮಾಡುವ ಯುವ ಸಂಘ/ಯುವ ಗುಂಪಿಗೆ ಪ್ರೋತ್ಸಾಹಧನವಾಗಿ 1 ಲಕ್ಷ ರೂ. ನೀಡಲಾಗುವುದು ಆಸಕ್ತ ಯುವಕ ಸಂಘಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಜೂನ್-2013 ರಿಂದ ಜುಲೈ-2014 ರ ಅವಧಿಯಲ್ಲಿ ಶಾಲಾ ಸರ್ವಾಂಗೀಣ ಅಭಿವೃದ್ದಿ, ಶಾಲಾ ಮಕ್ಕಳ ಕಲಿಕಾ ಸಾಮಥ್ರ್ಯ, ಶಾಲಾ ಆವರಣ ಶುಚ್ಚಿತ್ವ, ಅಗತ್ಯ ಸೌಲಭ್ಯಗಳ ಪೂರೈಕೆ ಮತ್ತು ಶಾಲೆ ಸುತ್ತಲಿನ ಪರಿಸರ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಯುವಕ ಸಂಘಗಳು ಕಾರ್ಯಕ್ರಮಗಳ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಮ್ಮೂರ ಶಾಲೆ ನಮ್ಮ ಯುವಜನರು ಕಾರ್ಯಕ್ರಮಗಳ ಅಡಿಯಲ್ಲಿ ಕೈಗೊಳ್ಳಬಹುದಾದ ವಿಭಾಗ-01 ಮತ್ತು ವಿಭಾಗ-02 ರಲ್ಲಿ ನಿಗದಿಪಡಿಸಿರುವ ಯೋಜನೆಗಳಲ್ಲಿ ಪ್ರತಿಯೊಂದು ವಿಭಾಗದಿಂದ ಕನಿಷ್ಟ ಎರಡು ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ ಎರಡು ವಿಭಾಗದಿಂದ ನಾಲ್ಕು ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ ಸಲ್ಲಿಸಬಹುದಾಗಿರುತ್ತದೆ. ಈ ಸಂಬಂಧವಾಗಿ ಮಾದರಿ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಅಥವಾ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ದೂರವಾಣಿ ಸಂಖ್ಯೆ: 08539-201400 ಇವರನ್ನು ಸಂಪರ್ಕಿಸಬಹುದಾಗಿದೆ. ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ತಾಲ್ಲೂಕಿಗೆ ಒಂದರಂತೆ ಉತ್ತಮವಾದ ಸಂಘವನ್ನು ಆಯ್ಕೆ ಮಾಡಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಅರ್ಜಿ ಸಲ್ಲಿಸಲು ಜುಲೈ-15 ಕೊನೆಯ ದಿನವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯ ಅನುಸೂಚಿತ ಜಾತಿಗಳು-ಬುಡಕಟ್ಟುಗಳ ಆಯೋಗದ ಜಿಲ್ಲಾ ಪ್ರವಾಸಕೊಪ್ಪಳ,ಜೂ.30(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಜುಲೈ-07 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸವನ್ನು ಹಮ್ಮಿಕೊಂಡಿದೆ.
  ಇ.ಅಶ್ವಥ್ ನಾರಾಯಣ ಆಯೋಗದ ಅಧ್ಯಕ್ಷರಾಗಿದ್ದು, ಸದಸ್ಯರಾದ ಸತ್ಯೇಂದ್ರಕುಮಾರ್ ಹಾಗೂ ಕಾರ್ಯದರ್ಶಿ ಎಂ.ಎನ್. ಪದ್ಮ ಅವರು ಆಯೋಗದ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ.  ಅಂದು ಬೆಳಿಗ್ಗೆ 10.30 ರಿಂದ 1.30 ರವರೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕುಂದು ಕೊರತೆ ಬಗ್ಗೆ ಸಭೆ ನಡೆಸಲಾಗುವುದು. ಮಧ್ಯಾಹ್ನ 2.30 ರಿಂದ ಸಂಜೆ 5.30 ರವರೆಗೆ ಜಿಲ್ಲಾಧಿಕಾರಿಗಳು, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅಭಿವೃದ್ದಿ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಕಾರ್ಯಕ್ಷಮತೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು.
  ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ದಿ ಇಲಾಖೆ ವತಿಯಿಂದ ಕೈಗೊಂಡಿರುವ ಎಲ್ಲಾ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಅಭಿವೃದ್ದಿಯ ಪ್ರಗತಿ ಪರಿಶೀಲನೆ, ಅಸ್ಪøಶ್ಯತೆ, ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ದೊರಕಿಸಿರುವ ಬಗ್ಗೆ ಪರಿಶೀಲನೆ.  ಜಿ.ಪಂ., ತಾ.ಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಶೇ.22.75 ಹಾಗೂ ಶೇ.18 ರ ಮೀಸಲಾತಿ ಅನುದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸುವರು ಅಲ್ಲದೆ ಆಯ್ದ ತಾಲೂಕುಗಳಿಗೆ ಭೇಟಿ ನೀಡುವರು. ಸ್ಥಳೀಯ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸುವರು. ನಂತರ ಆಯೋಗವು ಹೊಸಪೇಟೆಗೆ ಪ್ರಯಾಣ ಬೆಳೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಶುಕ್ರವಾರ ಬದಲಿಗೆ ಬುಧವಾರ ಕೂಕನಪಳ್ಳಿಯಲ್ಲಿ ಕುರಿ ಮತ್ತು ದನದ ಸಂತೆ : ಡಿ.ಸಿ ಆದೇಶಕೊಪ್ಪಳ,ಜೂ.30(ಕರ್ನಾಟಕ ವಾರ್ತೆ): ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ ಕುರಿ ಮತ್ತು ದನದ ಸಂತೆಯನ್ನು ಪ್ರತಿ ಬುಧವಾರ ನಡೆಸಲು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಆದೇಶ ಹೊರಡಿಸಿದ್ದಾರೆ. 
          ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್‍ನಲ್ಲಿ ಪ್ರತಿ ಶುಕ್ರವಾರ ಕುರಿ ಮತ್ತು ದನದ ಸಂತೆಯನ್ನು ನಡೆಸಲು ಇತ್ತೀಚೆಗಷ್ಟೆ ಆದೇಶ ಹೊರಡಿಸಲಾಗಿತ್ತು.  ಆದರೆ ಎರಡೂ ಕಡೆ ಒಂದೇ ದಿನ ಸಂತೆ ನಡೆಯುವುದರಿಂದ ವ್ಯಾಪಾರಸ್ಥರಿಗೆ ಮತ್ತು ಗ್ರಾಮಸ್ಥರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ.  ಆದ್ದರಿಂದ ಕೂಕನಪಳ್ಳಿ ಗ್ರಾಮದ ಸಾರ್ವಜನಿಕರ ಹಿತದೃಷ್ಟಿ ಹಾಗೂ ವ್ಯವಹಾರದ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೂಕನಪಳ್ಳಿಯಲ್ಲಿ ಪ್ರತಿ ಶುಕ್ರವಾರದ ಬದಲಿಗೆ ಪ್ರತಿ ಬುಧವಾರ ಸಂತೆ ನಡೆಸಲು ಆದೇಶ ಮಾಡಬೇಕೆಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಮನವಿಯನ್ನು ಸಲ್ಲಿಸಿದ್ದರು.   ಅಲ್ಲದೆ ಎಪಿಎಂಸಿ ಕಾರ್ಯದರ್ಶಿ ಹಾಗೂ ಕಲ್‍ತಾವರಗೇರಾ ಪಿಡಿಓ ಅವರೂ ಸಹ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರದ ಬದಲಿಗೆ ಪ್ರತಿ ಬುಧವಾರ ಸಂತೆ ನಡೆಸುವುದು ಸೂಕ್ತವಾಗಿದೆ ಎಂದು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಆದೇಶವನ್ನು ಮಾರ್ಪಡಿಸಿ, ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರದ ಬದಲಾಗಿ ಪ್ರತಿ ಬುಧವಾರದಂದು ಸಂತೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಹೊರಡಿಸಿದ್ದಾರೆ.

ಜು. 03 ರಿಂದ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳಕೊಪ್ಪಳ ಜೂ. 30 (ಕರ್ನಾಟಕ ವಾರ್ತೆ) : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಬರಲಿರುವ ವರಮಹಾಲಕ್ಷ್ಮಿ ಹಬ್ಬ ಹಾಗೂ ರಂಜಾನ್ ಹಬ್ಬ ನಿಮಿತ್ಯ, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಜು. 03 ರಿಂದ 05 ರವರೆಗೆ ಮೂರು ದಿನಗಳ ಕಾಲ ಗಂಗಾವತಿ ಸಿಬಿಎಸ್ ವೃತ್ತ ಬಳಿಯ ಹೋಟೆಲ್ ಅಶೋಕ ದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದೆ.
          ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಜು. 03 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳು ನೆರವೇರಿಸುವರು.  
          ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಮೂರನೆ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು,  ಗಂಗಾವತಿ ಸಿಬಿಎಸ್ ವೃತ್ತ ಬಳಿಯ ಹೋಟೆಲ್ ಅಶೋಕ ದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಮಾರಾಟ ಮೇಳ ನಡೆಯಲಿದೆ.  ವಿಶೇಷವಾಗಿ ಈ ಬಾರಿ ನಿಗಮವು ಎಲ್ಲಾ ಉತ್ಪನ್ನಗಳ ಮೇಲೆ ಶೇ. 30 ರ ರಿಯಾಯಿತಿ ನೀಡಲಿದೆ.  ವರಮಹಾಲಕ್ಷ್ಮಿ ಪೂಜೆ ಹಬ್ಬದ ಹಾಗೂ ರಂಜಾನ್ ಹಬ್ಬದ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ನೌಕರರಿಗೆ ಮೊತ್ತವನ್ನು 10 ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.  ಅರ್ಹ ಸರ್ಕಾರಿ ನೌಕರರು ತಿಂಗಳ ವೇತನದಲ್ಲಿ ಕಂತು ಕಡಿತಗೊಳಿಸುವ ಅಥವಾ ಮುಂದಿನ ದಿನಾಂಕಗಳನ್ನು ನಮೂದಿಸಿದ 10 ಚೆಕ್‍ಗಳನ್ನು ನೀಡುವ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.  
           ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ “ಮೈಸೂರ್ ಸಿಲ್ಕ್” ಹೇಗೆ ವಿಭಿನ್ನವಾಗಿದೆ? ಎಂದರೆ! ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ.  ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡಿದೆ. ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಮೈಸೂರ್ ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೆ ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ. 
            ಮೈಸೂರ್ ಸಿಲ್ಕ್‍ಗೆ ಉಪಯೋಗಿಸಲ್ಪಡುವ ಜರಿಯು ಪರಿಶುದ್ಧ ಚಿನ್ನದ್ದಾಗಿದ್ದು, ಶೇಕಡ 0.65 ಚಿನ್ನ ಮತ್ತು ಶೇಕಡ 65 ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನೀಕತೆಯಿಂದ ಕೂಡಿವೆ.  ಕೆ.ಎಸ್.ಐ.ಸಿ.ಯು ಇತ್ತೀಚೆಗೆ ಇ-ಜಕಾರ್ಡ್ ಮಗ್ಗಗಳನ್ನು ಅಳವಡಿಸಿದ್ದು 15 ರಿಂದ 20 ನವನವೀನ ವಿನ್ಯಾಸಗಳ ಸೀರೆಗಳನ್ನು ಗ್ರಾಹಕರುಗಳಿಗೆ ಪರಿಚಯಿಸಿದೆ.  ಕಂಪನಿಯು ಮೈಸೂರ್ ಸಿಲ್ಕ್ ಭೌಗೋಳಿಕ ಗುರುತಿನ ನೋಂದಣಿಯನ್ನು ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999 ರಲ್ಲಿ ಲೋಕ ಸಭೆಯಲ್ಲಿ ಅನುಮೋದನೆಗೊಂಡಿದೆ. ಈ ನೋಂದಣಿಯ ಪ್ರಕಾರ ಕೆ.ಎಸ್.ಐ.ಸಿ.ಯು “ಮೈಸೂರ್ ಸಿಲ್ಕ್”ನ ಏಕೈಕ ಮಾಲೀಕತ್ವ ಹೊಂದಿದೆ. ಇದಲ್ಲದೆ ಕಂಪನಿಯು  ISO 9001-2008,  EMS 14001-2004 ಹಾಗೂ   OHSAS 18001-1999 ರ ದೃಢೀಕರಣ ಪತ್ರವನ್ನು ಹೊಂದಿದೆ.  ಕೆ.ಎಸ್.ಐ.ಸಿ ನಿಗಮಕ್ಕೆ 2010-11ನೇ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ “ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ” ಲಭಿಸಿದೆ ಹಾಗೂ ಕೆ.ಎಸ್.ಐ.ಸಿ.ಯು (ಮೈಸೂರು ಸಿಲ್ಕ್ ವೀವಿಂಗ್ ಫ್ಯಾಕ್ಟರಿ) 2012 ಕ್ಕೆ ಶತಮಾನೋತ್ಸವವನ್ನು ಪೂರೈಸಿದ ಕರ್ನಾಟಕ ಸರಕಾರದ ಮೊದಲ ಸರ್ಕಾರಿ ಉದ್ಯಮವಾಗಿರುತ್ತದೆ.
           ಇದೀಗ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆಯಲಿದ್ದು, ಜು. 03 ರಿಂದ 05 ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.  ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಕಟಣೆ ತಿಳಿಸಿದೆ.

Saturday, 28 June 2014

ಕೃಷಿ ವಿಮೆ : ಪ್ರೀಮಿಯಂ ಪಾವತಿ ಅವಧಿ ಜು. 31 ರವರೆಗೆ ವಿಸ್ತರಣೆಕೊಪ್ಪಳ ಜೂ. 28 (ಕ.ವಾ): ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ವಿಮಾ ಕಂತು ತುಂಬಲು ಕೊನೆಯ ದಿನಾಂಕವನ್ನು ಜು. 31 ರವರೆಗೆ ವಿಸ್ತರಿಸಲಾಗಿದೆ.
          ಪ್ರಸಕ್ತ ಸಾಲಿನ ಮುಂಗಾರು ವಿಳಂಬವಾಗಿರುವುದರಿಂದ, ಬಿತ್ತನೆ ಚಟುವಟಿಕೆ ಅವಧಿ ಮುಂದೂಡಲ್ಪಟ್ಟಿದೆ.  ಈ ಹಿನ್ನೆಲೆಯಲ್ಲಿ ಕೃಷಿ ವಿಮೆಯಲ್ಲಿ ರೈತರು ಭಾಗವಹಿಸುವಂತೆ, ವಿಮಾ ಕಂತು ತುಂಬಲು ಕೊನೆಯ ದಿನಾಂಕವನ್ನು ಜು.ಲ 31 ರವರೆಗೆ ವಿಸ್ತರಿಸಲಾಗಿದ್ದು, ರೈತಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರೌಢಶಾಲಾ ಶಿಕ್ಷಕರಿಗೆ ಕೋರಿಕೆಯ ವರ್ಗಾವಣೆ : ಜು. 01 ರಿಂದ ಕೌನ್ಸಿಲಿಂಗ್ಕೊಪ್ಪಳ ಜೂ. 28 (ಕ.ವಾ): ಪ್ರಸಕ್ತ ಸಾಲಿನ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆಗಾಗಿ ಜು. 01 ರಿಂದ 04 ರವರೆಗೆ ಕೌನ್ಸಿಲಿಂಗ್ ಗುಲಬರ್ಗಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.
          ಸಹ ಶಿಕ್ಷಕರ ವರ್ಗಾವಣೆಯ ಅಂತಿಮ ತಾತ್ಕಾಲಿಕ ಪಟ್ಟಿ ಈಗಾಗಲೆ ವೆಬ್‍ಸೈಟ್ www.cpigulbarga.kar.nic.in ರಲ್ಲಿ ಪ್ರಕಟಿಸಲಾಗಿದೆ.  ಒಟ್ಟು 1588 ಅರ್ಜಿಗಳು ಅರ್ಹಗೊಂಡಿದ್ದು, ಇದರಲ್ಲಿ ದೈಹಿಕ ಶಿಕ್ಷಕರ ವೃಂದದಲ್ಲಿ ಒಟ್ಟು 204, ವಿಶೇಷ ಶಿಕ್ಷಕರ ವೃಂದದಲ್ಲಿ 85 ಅರ್ಜಿಗಳು ಅರ್ಹಗೊಂಡಿವೆ.  ವರ್ಗಾವಣೆ ಪ್ರಕ್ರಿಯೆ ಅಂತರ್ಜಾಲದ ಮೂಲಕ ನಡೆಸಲಾಗುತ್ತಿದ್ದು, ಸಹ ಶಿಕ್ಷಕರ ವೃಂದದವರಿಗೆ ಜು. 01 ರಂದು ಆದ್ಯತಾ ಕ್ರಮಸಂಖ್ಯೆ 01 ರಿಂದ 250 ರವರೆಗೆ, ಜು. 02 ರಂದು ಆದ್ಯತಾ ಕ್ರಮ ಸಂಖ್ಯೆ 251 ರಿಂದ 800.  ಜು. 03 ರಂದು 801 ರಿಂದ 1350.  ಜು. 04 ರಂದು 1351 ರಿಂದ 1588 ಆದ್ಯತಾ ಕ್ರಮ ಸಂಖ್ಯೆಯವರೆಗೆ ಕೌನ್ಸಿಲಿಂಗ್ ನಡೆಯಲಿದೆ.  ದೈಹಿಕ ಶಿಕ್ಷಕರ ವೃಂದದವರಿಗೆ ಜು. 04 ರಂದು 01 ರಿಂದ 204 ವರೆಗೆ.  ವಿಶೇಷ ಶಿಕ್ಷಕರ ವೃಂದದವರಿಗೆ ಜು. 04 ರಂದು ಆದ್ಯತಾ ಕ್ರಮ ಸಂಖ್ಯೆ 01 ರಿಂದ 85 ರವರೆಗೆ ಗುಲಬರ್ಗಾದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಯಲಿದೆ.  ನಿಗದಿತ ವೇಳಾಪಟ್ಟಿಯಂತೆ ಬೆಳಿಗ್ಗೆ 09 ಗಂಟೆಗೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುಲಬರ್ಗಾದ ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಳಕಲ್ ಐಟಿಐ : ಐಎಂಸಿ ಕೋಟಾದಡಿ ಸೀಟು ಭರ್ತಿಗೆ ಅರ್ಜಿ ಆಹ್ವಾನಕೊಪ್ಪಳ, ಜೂ.28(ಕರ್ನಾಟಕ ವಾರ್ತೆ): ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ದೆ ತಳಕಲ್ ಗ್ರಾಮದಲ್ಲಿ ಜೋಡಣೆಗಾರ, ವಿದ್ಯುತ್ ಶಿಲ್ಪಿ ಹಾಗೂ ವಿದ್ಯುನ್ಮಾನ ದುರಸ್ತಿಗಾರ ವಿಭಾಗಗಳ ತಲಾ 5 ಸೀಟು (ಒಟ್ಟು 15 ಸೀಟು) ಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
           ಸೀಟುಗಳನ್ನು ಐ.ಎಂ.ಸಿ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುವುದು. ಇಚ್ಚೆಯುಳ್ಳ ಅಭ್ಯರ್ಥಿಗಳು ರೂ.100 ಗಳನ್ನು ಪಾವತಿಸಿ ಸಂಸ್ಧೆಯಿಂದ ಅರ್ಜಿಗಳನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 09 ರಂದು ಸಂಜೆ 5 ಗಂಟೆಗೆ ಪ್ರಾಚಾರ್ಯರ ಕಾರ್ಯಾಲಯ ತಳಕಲ್ ಇವರಿಗೆ ಸಲ್ಲಿಸಬೇಕು.  ಪ್ರವೇಶ ಸಂದರ್ಶನವನ್ನು ಜುಲೈ 10 ರಂದು ಬೆಳಗ್ಗೆ 10 ಗಂಟೆಗೆ ನಡೆಸಲಾಗುವುದು ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಐ.ಎಂ.ಸಿ ಕಮೀಟಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು/ಕಾರ್ಯದರ್ಶಿ  ದೂರವಾಣಿ ಸಂಖ್ಯೆ 08534-239216 ರಲ್ಲಿ ಅಥವಾ ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ವ-ಸಹಾಯ ಮಹಿಳಾ ಗುಂಪುಗಳಿಗೆ ಸುತ್ತುನಿಧಿ : ಅರ್ಜಿ ಆಹ್ವಾನಕೊಪ್ಪಳ,ಜೂ.28(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿ ವತಿಯಿಂದ ‘ಸಂಜೀವಿನಿ’ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ 2014-15ನೇ ಸಾಲಿನಲ್ಲಿ ಸ್ವಸಹಾಯ ಮಹಿಳಾ ಗುಂಪುಗಳಿಗೆ ರೂ.15,000 ಗಳ ಸುತ್ತುನಿಧಿ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಸ್ವ-ಸಹಾಯ ಮಹಿಳಾ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
           ‘ಸಂಜೀವಿನಿ’ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ,ಕುಷ್ಟಗಿ ತಾಲೂಕುಗಳಿಗೆ ಪ್ರತಿ ತಾಲೂಕಿಗೆ 150 ಗುಂಪುಗಳಂತೆ ಹಾಗೂ ಗಂಗಾವತಿ ತಾಲೂಕಿಗೆ 35 ಗುಂಪುಗಳಂತೆ ಒಟ್ಟು 485 ಗುಂಪುಗಳಿಗೆ ಸುತ್ತುನಿಧಿಯನ್ನು ನೀಡಲು ಉದ್ದೇಶಿಸಲಾಗಿದೆ.  ಶೇ.70 ಕ್ಕೂ ಅಧಿಕ ಸಂಖ್ಯೆಯಲ್ಲಿ ಬಡವ/ಕಡುಬಡವ(ಬಿಪಿಎಲ್) ಸದಸ್ಯರನ್ನು ಹೊಂದಿರುವ ಸ್ವಸಹಾಯ ಗುಂಪುಗಳು ಅರ್ಜಿ ಸಲ್ಲಿಸಲು ಅರ್ಹರು.  ಸುತ್ತುನಿಧಿ ನೀಡಲು ಗುಂಪುಗಳಲ್ಲಿ ಶೇ.15 ರಷ್ಟು ಅಲ್ಟಸಂಖ್ಯಾತರು ಶೇ.3 ರಷ್ಟು ವಿಕಲಚೇತನರು ಹಾಗೂ ಶೇ.35 ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ.15 ರಷ್ಟು ಪರಿಶಿಷ್ಟ ಪಂಗಡದ ಅನುಪಾತತದಲ್ಲಿ ಗುಂಪುಗಳಿರಬೇಕು. ಗ್ರೇಡ್ ಎ ಮತ್ತು ಬಿ ಶ್ರೇಯಾಂಕ ಹೊಂದಿದ ಸ್ವಸಹಾಯ ಗುಂಪುಗಳಾಗಿರಬೇಕು. ಕಡ್ಡಾಯವಾಗಿ ಪಂಚಸೂತ್ರ ತಂತ್ರಾಂಶದಲ್ಲಿ ಸ್ವಸಹಾಯ ಸಂಘವು ಅಳವಡಿಕೆಯಾಗಿರಬೇಕು. ಈ ಹಿಂದೆ ಯಾವುದೇ ಸರ್ಕಾರಿ ಯೋಜನೆಯಿಂದ ಹಾಗೂ ಎಸ್‍ಜಿಎಸ್‍ವೈ.ಯೋಜನೆಯಿಂದ ಸುತ್ತುನಿಧಿಯನ್ನು ಪಡೆದಿರಬಾರದು. ಈಗಾಗಲೇ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಸಾಲ ಹೊಂದಿರಬಾರದು. ಆಸಕ್ತ ಸ್ವಸಹಾಯ ಗುಂಪುಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂದಿಸಿದ ತಾಲೂಕು ಪಂಚಾಯತಿಗೆ ಜೂನ್ 30 ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ : ಅರ್ಜಿ ಆಹ್ವಾನಕೊಪ್ಪಳ,ಜೂ.28(ಕರ್ನಾಟಕ ವಾರ್ತೆ): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು ಹೊರತುಪಡಿಸಿ) ಶಿಷ್ಯ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದೆ.
           ಒಂದನೆ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ವರೆಗೆ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಧೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಲಿ ಮಿಲಿಟರಿ ಪಿಂಚಣಿದಾರರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನವನ್ನು ಅಲ್ಲದೆ ಮಿಲಿಟರಿ ಪಿಂಚಣಿ ಇಲ್ಲದ ಕರ್ನಾಟಕದ ಮಾಜಿ ಸೈನಿಕರ ಮತ್ತು ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೆ ಒಂದನೆ ತರಗತಿಯಿಂದ ದ್ವಿತೀಯ ಪಿ.ಯು.ಸಿ   ವರ್ಷದವರೆಗೆ ಓದುವ ಮಕ್ಕಳಿಗೆ ಪುಸ್ತಕ ಅನುದಾನವನ್ನು ಹಾಗೂ ಡಿಗ್ರಿ, ಡಿಪ್ಲೋಮಾ ಜೆ.ಓ.ಸಿ/ಪ್ರೋಫೆಷನ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಶಿಷ್ಯ ವೇತನವನ್ನು ನೀಡಲು ಅರ್ಜಿ ಅಹ್ವಾನಿಸಲಾಗಿದೆ.
           ಮಾಜಿ ಸೈನಿಕರು ತಮಗೆ ನೀಡಲಾದ ಗುರುತಿನ ಚೀಟಿಗಳನ್ನು ತೋರಿಸಿ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನವನಗರ, ಬಾಗಲಕೋಟೆ ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟಂಬರ್ 30 ರ ಒಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿಕೊಪ್ಪಳ ಜೂ.28(ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜು.03 ರಿಂದ 12 ರವರೆಗೆ ಹತ್ತು ದಿನಗಳ ಕಾಲ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಪ್ರಸಕ್ತ ಸಾಲಿನ ದ್ವೀತಿಯ ಪೂರಕ ಪರೀಕ್ಷೆಯು ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ 200 ಮೀಟರ್ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. 1973 ಕಲಂ 144ನೇ ಕಲಂ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ನಿಷೇಧಾಜ್ಞೆ ಅನ್ವಯ ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ನಿಷೇಧಿಸಲಾಗಿದೆ.  ಪರೀಕ್ಷಾ ಕೇಂದ್ರದ ಸುತ್ತಲು ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇದಿಸಲಾಗಿದೆ. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ನಿಷೇಧಾಜ್ಞೆಯಲ್ಲಿ ತಿಳಿಸಿದೆ.

ಶಿಸ್ತುಬದ್ಧ ಪಿಯುಸಿ ಪೂರಕ ಪರೀಕ್ಷೆಗೆ ಸಿಇಓ ಕೃಷ್ಣ ಡಿ.ಉದಪುಡಿ ಸೂಚನೆಕೊಪ್ಪಳ,ಜೂ.28(ಕರ್ನಾಟಕ ವಾರ್ತೆ): ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜುಲೈ-03 ರಿಂದ 12 ರವರೆಗೆ ಜರುಗಲಿದ್ದು ಪರೀಕ್ಷೆಗೆ 4611 ಪರೀಕ್ಷಾರ್ಥಿಗಳು ಭಾಗವಹಿಸಲಿದ್ದಾರೆ. ಪರೀಕ್ಷೆ ಸುಗಮವಾಗಿ ಹಾಗೂ ಶಿಸ್ತು ಬದ್ಧವಾಗಿ ಜರುಗಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದ್ವೀತಿಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಜಿಲ್ಲೆಯ 06 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4611 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಈ ಪೈಕಿ 2940-ವಿದ್ಯಾರ್ಥಿ, 1671-ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವದು, ಪರೀಕ್ಷೆಗಳಂದು ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ವಿಚಕ್ಷಣದಳಗಳನ್ನು ನೇಮಿಸುವುದು, ಪ್ರತಿ ಕೇಂದ್ರಕ್ಕೆ ಪೆÇಲೀಸ್ ಸಿಬ್ಬಂದಿಯ ಸೇವೆ ಹಾಗೂ ಜಿಲ್ಲಾ ಜಾಗೃತ ದಳದ ಬೆಂಗಾವಲಿಗೆ ಪೆÇಲೀಸ್ ಸಿಬ್ಬಂದಿಯವರನ್ನು ನೇಮಿಸಲು ಪೊಲೀಸ್ ಇಲಾಖೆ ನೆರವು ಪಡೆಯುವಂತೆ ಸೂಚನೆ ನೀಡಿದರು.
  ಮುಂಜಾಗ್ರತಾ ಕ್ರಮವಾಗಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು. ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರರು ಮೊಬೈಲ್ ಬಳಸದಂತೆ ಎಚ್ಚರಿಕೆ ವಹಿಸಬೇಕು.  ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಮಾಡುವಂತೆ ತಿಳಿಸಿದ ಅವರು, ಪ್ರಶ್ನೆ ಪತ್ರಿಕೆಗಳನ್ನು ಖಜಾನೆಗಳಲ್ಲಿ ಠೇವಣಿ ಮಾಡಿ ಸರಿಯಾದ ಸಮಯಕ್ಕೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವಿತರಿಸಬೇಕು.  ಒಟ್ಟಾರೆ ಪರೀಕ್ಷೆ ಕಟ್ಟುನಿಟ್ಟಾಗಿ, ಶಿಸ್ತುಬದ್ಧವಾಗಿ, ಯಾವುದೇ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಜರುಗಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಪ್ರಶ್ನೆ ಪತ್ರಿಕೆಗಳನ್ನು ಸರಿಯಾದ ಸಮಯದಲ್ಲಿ ಖಜಾನೆಗಳಿಂದ ಪಡೆಯಲು ಹಾಗೂ ನಂತರ ಡಿಪಾಜಿಟ್ ಮಾಡಲು ಶಿಕ್ಷಣ ಇಲಾಖೆಯಿಂದ ಮಾನ್ಯತೆ ಹೊಂದಿದವರನ್ನು ಮಾತ್ರ ಖಜಾನೆಗೆ ಕಳುಹಿಸಿ ಕೊಡಬೇಕು ಪ್ರಭಾರಿ ಜಿಲ್ಲಾ ಖಜಾನಾಧಿಕಾರಿ ಮಹಾದೇವಪ್ಪ ಕಳ್ಳೇರ್ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ರಂಗಸ್ವಾಮಿ ಮಾತನಾಡಿ, ಕೊಪ್ಪಳದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಗಂಗಾವತಿಯ ಎಸ್‍ಎಂಎನ್‍ಎಂ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು.  ಕುಷ್ಟಗಿಯ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಮತ್ತು ಯಲಬುರ್ಗಾದ ಸರ್ಕಾರಿ ಪದವಿ ಕಾಲೇಜು ಇಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. 
          ಸಭೆಯಲ್ಲಿ ವಿವಿಧ ಕಾಲೇಜುಗಳ ಪ್ರಾಚಾರ್ಯರು, ತಾಲೂಕುಗಳ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Friday, 27 June 2014

ಖಾಯಂ ಪಡಿತರ ಚೀಟಿಗಳ ನವೀಕರಣಕ್ಕೆ ಅವಕಾಶಕೊಪ್ಪಳ,ಜೂ.27(ಕರ್ನಾಟಕ ವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 2010 ಕ್ಕಿಂತ ಮೊದಲು ಪಡೆದಿರುವ ಖಾಯಂ ಪಡಿತರ ಚೀಟಿಗಳನ್ನು ನವೀಕರಿಸಲು ಮತ್ತೆ ಅವಕಾಶ ಕಲ್ಪಿಸಲಾಗಿದ್ದು, ಕೂಡಲೆ ಸಂಬಂಧಪಟ್ಟ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಜಯಪ್ಪ ಅವರು ಸೂಚನೆ ನೀಡಿದ್ದಾರೆ.
          2010 ಕ್ಕಿಂತ ಮೊದಲು ಪಡೆದ ಖಾಯಂ ಚೀಟಿಗಳನ್ನು  ನವೀಕರಿಸಿಕೊಳ್ಳಲು ಹಲವಾರು ಬಾರಿ ಕಾಲಾವಕಾಶ ನೀಡಲಾಗಿತ್ತು. ಇನ್ನು ಹಲವಾರು ಕಾರ್ಡುದಾರರು ತಮ್ಮ ಕಾರ್ಡ್‍ಗಳನ್ನು ನವೀಕರಿಸಿಕೊಳ್ಳದೆ ಇರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಮತ್ತೊಮ್ಮೆ ಜುಲೈ-15 ರವರೆಗೆ ಕಾಲಾವಕಾಶ ನೀಡಲಾಗಿದೆ.  ಕಾರ್ಡುಗಳನ್ನು ನವೀಕರಿಸಿಕೊಳ್ಳದೆ ಇದ್ದಲ್ಲಿ ಅವುಗಳನ್ನು ಅಮಾನತ್ತಿನಲ್ಲಿರಿಸಲಾಗುವುದು.
ಎಲ್ಲಾ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಮತದಾರರ ಗುರುತಿನ ಚೀಟಿ (ಇಪಿಐಸಿ) ಸಂಖ್ಯೆ ಮತ್ತು ಆಧಾರ್ ಕಾರ್ಡ್ (ಯುಐಡಿ) ಸಂಖ್ಯೆಗಳನ್ನು ನೀಡಬೇಕು. ( ಇಪಿಐಸಿ ಸಂಖ್ಯೆಗಳನ್ನು 21 ವರ್ಷ ಮೇಲ್ಪಟ್ಟ ಸದಸ್ಯರಿಗೆ ಮಾತ್ರ ಅನ್ವಯವಾಗುತ್ತದೆ.) ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗಳನ್ನು ನವೀಕರಿಸಿಕೊಳ್ಳಲು ಅಥವಾ ಇಪಿಐಸಿ ಮತ್ತು ಯುಐಡಿ ಸಂಖ್ಯೆಗಳನ್ನು ನೀಡಲು ಗ್ರಾಮಾಂತರ ಪ್ರದೇಶದಲ್ಲಿ ಸಂಬಂಧ ಪಟ್ಟ ಗ್ರಾಮ ಪಂಚಾಯತಿ ಹಾಗೂ ನಗರ ಪ್ರದೇಶದಲ್ಲಿ ಅಟಲ್-ಜಿ-ಜನಸ್ನೇಹಿ ಕೇಂದ್ರ, ಸೇವಾ ಕೇಂದ್ರ ಅಥವಾ ಎಸ್.ಎಂ.ಎಸ್. ಮೂಲಕ ಮಾಹಿತಿ ಕಳುಹಿಸಬಹುದಾಗಿರುತ್ತದೆ. ಇಪಿಐಸಿ ಮತ್ತು ಯುಐಡಿ ಸಂಖ್ಯೆಗಳನ್ನು ನೀಡುವ ಬಗ್ಗೆ ಈಗಾಗಲೇ ಸಾರ್ವಜನಿಕರ ಗಮನಕ್ಕೆ ತರಲಾಗಿದ್ದು, ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆ ಭರ್ತಿ : ಅರ್ಜಿ ಆಹ್ವಾನಕೊಪ್ಪಳ,ಜೂ.27(ಕರ್ನಾಟಕ ವಾರ್ತೆ): ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಕೊಪ್ಪಳದಲ್ಲಿ ಖಾಲಿ ಇರುವ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ 01 ಹುದ್ದೆ ಹಾಗೂ 07 ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಭರ್ತಿ ಮಾಡಲು ಆಸಕ್ತ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
           ತಾಲೂಕ ಪಂಚಾಯತಿ ಕಾರ್ಯನಿರ್ವಾಹಕರು ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಮೂಲಕ ಗೌರವಧನ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸ್ವ ವಿವರವುಳ್ಳ ಮಾಹಿತಿಯನ್ನು ಜುಲೈ-10 ರೊಳಗಾಗಿ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಗೆ ಸಲ್ಲಿಸಬಹುದಾಗಿದೆ. 
            ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ, ಕೊಪ್ಪಳ-01 ಹುದ್ದೆ ಖಾಲಿ ಇದೆ.  ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಕವಲೂರು, ಕಾತರಕಿ-ಗುಡ್ಲಾನೂರು, ಕೋಳೂರು, ಹಿರೇಬಗನಾಳ, ಚಿಕ್ಕಬೊಮ್ಮನಾಳ, ಕುಣಿಕೇರಿ, ಮತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುತ್ತವೆ.
          ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಪದವಿ ಉತ್ತೀರ್ಣ/ಅನುತ್ತೀರ್ಣರಾಗಿರಬೇಕು, ತಾಲೂಕು ಕೇಂದ್ರದಲ್ಲಿ ವಾಸಸ್ಥಳ ಹೊಂದಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ/ಅನುತ್ತೀರ್ಣರಾಗಿರಬೇಕು, ಆಯಾ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಗ್ರಾಮದಲ್ಲಿ ವಾಸಸ್ಥಳ ಹೊಂದಿರಬೇಕು.   ಅಂಗವಿಕಲತೆ ಶೇ.40% ಇರಬೇಕು. 18 ರಿಂದ 45 ವರ್ಷ ವಯೋಮಿತಿ ಹೊಂದಿರಬೇಕು. ಅರ್ಜಿಯ ಜೊತೆ ವಿದ್ಯಾರ್ಹತೆಯ ಪ್ರಮಾಣ ಪತ್ರ, ಅಂಗವಿಕಲರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಬೇಕು. ಸಕ್ಷಮ ಪ್ರಾಧಿಕಾರದಿಂದ ರಹವಾಸಿ ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಕಮಾನು ತೆರವು : ಆಕ್ಷೇಪಣೆಗಳಿಗೆ ಆಹ್ವಾನಕೊಪ್ಪಳ,ಜೂ.27(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯ ಗವಿಮಠ ರಸ್ತೆಯಲ್ಲಿರುವ ಕಮಾನು ಹಾಗೂ ಕಾತರಕಿ ರಸ್ತೆಯಲ್ಲಿರುವ ಕಮಾನು ಸಾರ್ವಜನಿಕರಿಂದ ಹಿತದೃಷ್ಠಿಯಿಂದ ತೆರವುಗೊಳಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಕಮಾನುಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.  
          ನಗರದಲ್ಲಿ 4 ಪುರಾತನ ಕಮಾನಗಳಿದ್ದು, ಈ ಕಮಾನುಗಳ ಪೈಕಿ ಗವಿಮಠ ರಸ್ತೆಯಲ್ಲಿರುವ ಕಮಾನು ಬಿರುಕು ಬಿಟ್ಟಿರುವುದರಿಂದ ಕೆಲ ನಾಗರಿಕರು ಈ ಕಮಾನುಗಳನ್ನು ತೆರವುಗೊಳಿಸಲು ಕೋರಿದ್ದು, ಈ ವಿಷಯದ ಸಂಬಂಧ ಪುರಾತತ್ವ ಇಲಾಖೆಯಿಂದ ಮಾಹಿತಿ ಪಡೆಯಲಾಗಿದ್ದು, ಈ ಕಮಾನುಗಳು ನಮ್ಮ ಇಲಾಖೆಗೆ ಬರುವುದಿಲ್ಲವೆಂದು ಹಾಗೂ ಸಂರಕ್ಷಿತ ಐತಿಹಾಸಿಕ ಪಟ್ಟಿಯಲ್ಲಿ ಇರುವುದಿಲ್ಲವೆಂದು ಪುರಾತತ್ವ ಇಲಾಖೆ ತಿಳಿಸಿದೆ.  ಸಾರ್ವಜನಿಕರ ಹಿತದೃಷ್ಟಿಯಿಂದ ಕಮಾನುಗಳನ್ನು ತೆರವುಗೊಳಿಸುವ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು 07 ದಿನಗಳ ಒಳಗಾಗಿ ನಗರಸಭೆಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಸೌಲಭ್ಯಕ್ಕಾಗಿ ಸಂಸದ ಸಂಗಣ್ಣ ಕರಡಿ ಮನವಿಕೊಪ್ಪಳ,ಜೂ.27(ಕರ್ನಾಟಕ ವಾರ್ತೆ): ಕೊಪ್ಪಳ ರೈಲ್ವೇ ನಿಲ್ದಾಣ ಮತ್ತು ಹೊಸ ರೈಲುಗಳ ಓಡಾಟಕ್ಕೆ ಸಂಬಂಧಿಸಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಂಸದ ಕರಡಿ ಸಂಗಣ್ಣ ಅವರು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
          ಈ ಭಾಗದ ರೈಲ್ವೆ ಸೌಕರ್ಯಗಳ ಬಗ್ಗೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಸಂಸದ ಸಂಗಣ್ಣ ಕರಡಿ ಅವರು ಸುದೀರ್ಘ ಮಾತುಕಡೆ ನಡೆಸಿದರು.  ರೈಲು ನಿಲ್ದಾಣದ ಸಿಬ್ಬಂದಿ ಕೊರತೆ, ವಿವಿಧ ಮೂಲಭೂತ ಸೌಲಭ್ಯಗಳಾದ ನೀರಿನ ವ್ಯವಸ್ಥೆ, ಶೌಚಾಲಯ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಸೂಕ್ತ ಆಸನದ ವ್ಯವಸ್ಥೆ  ಒದಗಿಸಬೇಕು.  ಕೊಪ್ಪಳ ಮಾರ್ಗವಾಗಿ ಹುಬ್ಬಳ್ಳಿ-ಚೆನೈ, ಹುಬ್ಬಳ್ಳಿ-ಗುಲ್ಬರ್ಗಾ ಮತ್ತು ಗುಂತಕಲ್-ಬಿಜಾಪುರ ಹೊಸ ರೈಲು ಓಡಾಟಕ್ಕೆ ಬೇಡಿಕೆ ಇಟ್ಟು ಪ್ರಸಕ್ತ ರೈಲ್ವೆ ಬಜೆಟ್‍ನಲ್ಲಿ ಸೇರಿಸುವಂತೆ ಕ್ರಮ ಕೈಗೊಳ್ಳಬೇಕು. ರೈಲ್ವೇಗೇಟ್ ಸಂಖ್ಯೆ: 62, 64 ಸೇತುವೆ ಕಾಮಗಾರಿ ಶೀಘ್ರವಾಗಿ ಪ್ರಾರಂಭಿಸಬೇಕು. ಅಲ್ಲದೇ ಭಾನಾಪುರ-56, ಗಿಣಗೇರಾ-75, ಹಿಟ್ನಾಳ ಕ್ರಾಸ್-77, ಹುಲಗಿ-79 ಈ ರೈಲ್ವೇ ಗೇಟುಗಳಿಗೆ ಸೇತುವೆ ನಿರ್ಮಿಸಲು ಹೊಸ ಪ್ರಸ್ತಾವನೆ ತಯಾರಿಸಬೇಕು.  ನಿಧಾನಗತಿಯಲ್ಲಿ ನಡೆದಿರುವ ಮುನಿರಾಬಾದ್-ಮೆಹಬೂಬ್ ನಗರ, ಗದಗ-ವಾಡಿ, ಕೊಪ್ಪಳ-ಆಲಮಟ್ಟಿ, ಬಳ್ಳಾರಿ-ಲಿಂಗಸೂರು ರೈಲ್ವೆ ಕಾಮಗಾರಿಗಳನ್ನು ತೀವ್ರಗೊಳಿಸಬೇಕು. ಗಿಣಗೇರಾ-ಹುಲಿಗಿ ರೈಲ್ವೆ ನಿಲ್ದಾಣದಲ್ಲಿ ಹಂಪಿ, ಹರಿಪ್ರಿಯಾ, ಕೊಲ್ಲಾಪುರ-ಹೈದ್ರಾಬಾದ್, ವಿಜಯವಾಡ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ರೈಲುಗಳನ್ನು ನಿಲುಗಡೆಗೆ ಕ್ರಮ ಜರುಗಿಸಬೇಕು.  ಸಿರಗುಪ್ಪಾದಲ್ಲಿ ರೈಲ್ವೆ ಟಿಕೇಟ್ ಕೌಂಟರ್ (ಪಿಆರ್‍ಎಸ್) ಪ್ರಾರಂಭಿಸಲು ಈಗಾಗಲೆ ರೈಲ್ವೆ ಇಲಾಖೆಯ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಈ ನಿಟ್ಟಿನಲ್ಲಿ ತ್ವರಿತ ಕ್ರಮವಾಗಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.  ಈ ಸಂದರ್ಭದಲ್ಲಿ ಬಾಬುಲಾಲ್ ಜೈನ್ ಹೊಸಪೇಟ, ವಿರುಪಾಕ್ಷಪ್ಪ ಅಗಡಿ ಮುಂತಾದವರು ಹಾಜರಿದ್ದರು ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಯೋಜನೆ : ಅರ್ಜಿ ಆಹ್ವಾನಕೊಪ್ಪಳ,ಜೂ.27(ಕರ್ನಾಟಕ ವಾರ್ತೆ): ದೇವದಾಸಿ ಪುನರ್ವಸತಿ ಯೋಜನೆಯಡಿ 1993-94 ನೇ ಹಾಗೂ 2007-08 ರ ಮರು ಸಮೀಕ್ಷೆಯಲ್ಲಿ  ಸೇರ್ಪಡೆಯಾಗಿರುವ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ನೀಡುವ ಅವಕಾಶವಿದ್ದು, ಅರ್ಹ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು 1993-94 ಹಾಗೂ 2007-08 ರಲ್ಲಿ ಸಮೀಕ್ಷಾ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಲ್ಪಟ್ಟಿರಬೇಕು. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿಯೊಂದಿಗೆ ವಾಸಸ್ಥಳದ ಪುರಾವೆಗಾಗಿ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಲಗತ್ತಿಸಬೇಕು, ವಯೋಮಿತಿ ದೃಢೀಕರಣಕ್ಕೆ ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ವಯಸ್ಸಿನ ಪ್ರಮಾಣ ಪತ್ರ, ಇತ್ತೀಚಿನ 05 ಭಾವಚಿತ್ರ, ನಿವೇಶನಕ್ಕೆ ಸಂಬಂಧಿಸಿದಂತೆ ಖಾತ ಉತಾರ್ ಹಾಗೂ ಖಾಲಿ ನಿವೇಶನ ಕುರಿತು ಗ್ರಾಮ ಪಂಚಾಯಿತಿಯಿಂದ ಪಡೆದ ಚಕ್ಕು ಬಂದಿ ಇತರ ಯಾವುದೇ ವಸತಿ ಯೋಜನೆಗಳಡಿ ಮನೆ ಮಂಜೂರಾಗಿಲ್ಲವೆಂದು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿಗಳಿಂದ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಜುಲೈ-24 ರೊಳಗಾಗಿ ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ಕಛೇರಿ, ಗವಿಶ್ರೀ ನಗರ, ಎಪಿಎಂಸಿ ಎದುರು ಗವಿಮಠ ರಸ್ತೆ ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ನಾಲ್ಕು ತಾಲೂಕಿನ ಯೋಜನಾ ಅನುಷ್ಠಾಧಿಕಾರಿಗಳು ಕೊಪ್ಪಳ-ದಾದೇಸಾಬ ಹಿರೇಮನಿ-9538628359, ಗಂಗಾವತಿ-ಭೀಮಣ್ಣ- 9880518498, ಕುಷ್ಟಗಿ-ಎಮ್.ಮರಿಯಪ್ಪ-9686148933, ಯಲಬುರ್ಗಾ-ರೇಣುಕಾ ಎಮ್.-9686072296 ಹಾಗೂ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 08539-220144 ಈ ದೂರವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಲ್ಲಿ ಸವಳು-ಕರ್ಲ ಮಣ್ಣಿನ ನಿರ್ವಹಣೆ : ರೈತರಿಗೆ ಸಲಹೆಕೊಪ್ಪಳ ಜೂ. 27 (ಕ.ವಾ): ಪ್ರಸಕ್ತ ಸಾಲಿನ ಮಳೆಯ ಪ್ರಮಾಣವು ವಾಡಿಕೆಗಿಂತ ಕಡಿಮೆಯಾಗಿರುವುದರಿಂದ, ಬರದ ಪರಿಸ್ಥಿತಿಯಲ್ಲಿ ಮಣ್ಣು ಹಾಗೂ ಬೆಳೆಯ ನಿರ್ವಹಣೆ ಕುರಿತು  ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಸಂಯೋಜಿತ ಸವಳು ಮಣ್ಣಿನ ನಿರ್ವಹಣೆ ಸಂಶೋಧನಾ ಯೋಜನೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
          ಸದ್ಯ ಮಳೆ ಪ್ರಮಾಣವು ವಾಡಿಕೆಗಿಂತ ಕಡಿಮೆಯಾಗಿ, ಬರದ ಪರಿಸ್ಥಿತಿ ಉದ್ಭವ ಆಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡುತ್ತಾ ಬಂದಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನೀರಿನ ಅಭಾವದಿಂದ ಸವಳು-ಕರ್ಲಯುಕ್ತ ಮಣ್ಣಿನ ಋಣಾತ್ಮಕ ತೀವ್ರತೆಯು ಬೆಳೆಗಳ ಬೆಳವಣಿಗೆ ಮೇಲೆ ಹೆಚ್ಚಾಗಿ, ಇಳುವರಿಯು ಗಣನೀಯವಾಗಿ ಕುಂಠಿತವಾಗಬಹುದು. ಆದ್ದರಿಂದ, ಬರದ ಪರಿಸ್ಥಿತಿಯಲ್ಲೂ ಸವಳು-ಕರ್ಲ ಮಣ್ಣಿನ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಕಡಿಮೆ ನೀರಿನ ಬಸಿಯುವಿಕೆ ಸಾಮಥ್ರ್ಯವುಳ್ಳ, ಅಸಮರ್ಪಕ ಬಸಿಗಾಲುವೆ/ನಾಲಾಗಳುಳ್ಳ ಮತ್ತು ಸಮತಟ್ಟು ಇರದ ಕಪ್ಪು ಮಣ್ಣು ಪ್ರದೇಶಗಳಲ್ಲಿ ಸವಳು ಮಣ್ಣು ಹೆಚ್ಚಾಗಿ ಕಂಡು ಬರುತ್ತದೆ. ಹಾಗೆಯೇ, ಸವಳು/ಕರ್ಲಯುಕ್ತ ಕೊಳವೆಬಾವಿಯ ನೀರನ್ನು ನೀರಾವರಿಗೆ ಉಪಯೋಗಿಸುವದರಿಂದಲೂ ಮಣ್ಣು ಸವಳು/ಕರ್ಲನಿಂದ ಬಾಧಿತ ವಾಗಿರಬಹುದು. ಈ ದಿಸೆಯಲ್ಲಿ ರೈತರು ಮಣ್ಣು, ನೀರು ಮತ್ತು ಬೆಳೆಗಳ ನಿರ್ವಹಣೆಯಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕವಾಗಿದೆ.
          ಮಣ್ಣು ನಿರ್ವಹಣೆಗಾಗಿ ಸವಳು/ಕರ್ಲ ಭೂಮಿಯಲ್ಲಿ ಈಗಾಗಲೆ ಮಾಗಿ ಉಳುಮೆ ಮಾಡದೇ ಇರುವ ರೈತರು ಇಳಿಜಾರಿಗೆ ಅಡ್ಡಲಾಗಿ ಆಳವಾದ ಉಳುಮೆ ಮಾಡುವದರಿಂದ ಅಕಾಲಿಕ ಮಳೆ ಬಿದ್ದ ಪಕ್ಷದಲ್ಲಿ ಭೂಮಿಯಲ್ಲಿ ನೀರು ಇಂಗುವಿಕೆ ಹೆಚ್ಚಾಗಿ ಸವಳು ಬಸಿಯಲು ಸಹಾಯವಾಗುವುದು.  ಭೂಮಿಯ ಸಮತಟ್ಟು ಮಾಡಿದ ನಂತರ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳಾದ ಸಣ್ಣ-ಸಣ್ಣ ಚೌಕು ಮಡಿಗಳು ಅಥವಾ ಅಡೆತಡೆಗಳುಳ್ಳ ದಿಂಡುಸಾಲುಗಳು ಅಥವಾ ಇಳಿಜಾರಿಗೆ ಅಡ್ಡಲಾಗಿ ದೋಣಿಸಾಲು ಮಾಡುವದರಿಂದ ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿಸಿ ಬೆಳಗಳ ಮೇಲಿನ  ಸವಳಿನ ತೀವ್ರತೆಯನ್ನು ಕಡಿಮೆಮಾಡಬಹುದು.  ಸಾದ್ಯವಾದಷ್ಟು ಲಭ್ಯವಿರುವ ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸುವದರಿಂದ ಬಿದ್ದಂತಹ ಮಳೆನೀರಿನ ಇಂಗುವಿಕೆ ಹೆಚ್ಚಾಗಿ ಬೆಳೆಗಳ ಮೇಲಿನ ಸವಳಿನ ತೀವ್ರತೆಯನ್ನು ಕಡಿಮೆಮಾಡಬಹುದು. ಹಾಗೆಯೇ ಬೆಳೆ ಪಳೆಯುಳಿಕೆಗಳನ್ನು ಮಣ್ಣಿನ ಮೇಲೆ ಹೊದಿಕೆಯಾಗಿ ಉಪಯೋಗಿಸಬೇಕು. ಬೆಳೆ ಬಿತ್ತನೆಯ ಕನಿಷ್ಟ ಒಂದು ತಿಂಗಳ ಮುಂಚೆ ಕರ್ಲ ಮಣ್ಣಿಗೆ ಶಿಫಾರಸ್ಸು ಮಾಡಿದ ಜಿಪ್ಸಂನ್ನು ಸೇರಿಸಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನೀರು ಹರಿಸುವ ಪೂರ್ವದಲ್ಲಿ ಜಮೀನುಗಳ ತಗ್ಗುಪ್ರದೇಶಗಳಲ್ಲಿ ತೆರೆದ ಬಸಿಗಾಲುವೆಗಳ ಪುನ:ಶ್ಚೇತನಗೊಳಿಸಬೇಕು.
          ನೀರು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಚ್ಚಕಟ್ಟು ಪ್ರದೇೀಶದಲ್ಲಿ ಕಾಲುವೆ ನೀರಿನ ಕೊರತೆಯಿದ್ದಲ್ಲಿ ಲಭ್ಯವಿರುವ ಕೊಳವೆಬಾವಿ ಸವಳು ನೀರನ್ನು ಹತ್ತಿ ಬೆಳೆಗೆ ಬೆಳವಣಿಗೆ ಹಂತದಲ್ಲಿ ಒಂದು ಸಲ ಪೂರೈಸುವದರಿಂದ ಇಳುವರಿಯಲ್ಲಿ ವ್ಯತ್ಯಾಸ ಆಗಲಾರದು ಮತ್ತು ಭೂಮಿ ಕೆಡಲಾರದು.  ಕರ್ಲಯುಕ್ತ ಕೊಳವೆಬಾವಿ ನೀರನ್ನು ಉಪಯೋಗಿಸುವ ಪೂರ್ವದಲ್ಲಿ ಮಣ್ಣು ಮತ್ತು ನೀರು ವಿಶ್ಲೇಷಣೆ ಆಧಾರದ ಮೇಲೆ ಜಿಪ್ಸ್‍ಂನಿಂದ ಉಪಚರಿಸಬೇಕು. ಸವಳು/ಕರ್ಲ ಅಂಶವಿರುವ ಕೊಳವೆಬಾವಿ ನೀರು ಹೊಂದಿರುವ ರೈತರು ಹನಿನೀರಾವರಿ ಪದ್ದತಿ ಅಳವಡಿಸುವುದು ಸೂಕ್ತವಾಗಿದೆ.
          ಬೆಳೆ ನಿರ್ವಹಣೆಗಾಗಿ ಸವಳು ಸಹಿಷ್ಣುತೆ ಬೆಳೆಗಳಾದ ಹತ್ತಿ (ತಳಿ: ಆರ್.ಎ.ಹೆಚ್.ಎಸ್.14) ಸೂರ್ಯಪಾನ (ಕೆ.ಬಿ.ಎಸ್.ಹೆಚ್.- 1, 41 ಅಥವಾ 44), ಸಜ್ಜೆ, ನವಣೆ, ಹಿಂಗಾರಿ ಜೋಳ (ಎಮ್.35-1), ಗೋಧಿ (ಡಿ.ಡಬ್ಲ್ಯು.ಆರ್.-162), ಕುಸಬೆ (ಎ-1, ಎ-2), ಸಾಸುವೆ ಬೆಳೆಗಳನ್ನು ಬೆಳೆಯುವುದು ಸೂಕ್ತ.  ಶೇಕಡಾ 2ರ ಸುಣ್ಣದಕ್ಲೋರೈಡ್ ದ್ರಾವಣದಲ್ಲಿ ಬಿತ್ತನೆ ಬೀಜವನ್ನು 3-4 ತಾಸು ನೆನಸಿ, ನೆರಳಿನಲ್ಲಿ ಒಣಗಿಸಿ ಬಿತ್ತುವುದು ಸೂಕ್ತ.  ಸವಳು ಮಣ್ಣಿನಲ್ಲಿ ಶಿಫಾರಸ್ಸಿಗಿಂತ 15-20% ಅಧಿಕ ಬಿತ್ತನೆ ಬೀಜ ಉಪಯೋಗಿಸುವುದು ಸೂಕ್ತ ಹಾಗೂ ಸಾಲುಗಳ ಇಳುಕಲುಗಳ ಮದ್ಯದಲ್ಲಿ ಬೀಜ ಊರಬೇಕು.  ಬೆಳೆಗಳ ಬೆಳವಣಿಗೆ ಹಂತದಲ್ಲಿ ಎಡೆಕುಂಟೆ ಹೊಡೆಯುವುದು ಸೂಕ್ತ.  ಬೆಳೆಗಳ ಬೆಳವಣಿಗೆ ಹಂತದಲ್ಲಿ ಶೇ. 2 ರ ಯೂರಿಯ ಸಿಂಪರಣೆ ಮಾಡಬೇಕು.  ಸವಳು ಸಹಿಷ್ಣುತೆಹೊಂದಿದ ಪ್ಯಾರಾ, ರೋಡ್ಸ್, ಗ್ರೇಜಿಂಗ್ ಗಿನಿಯಾಗಳನ್ನು ಬಹುವಾರ್ಷಿಕ ಹುಲ್ಲಿನ ಬೆಳೆಗಳಾಗಿ ಬೆಳೆಯಬಹುದು ಎಂದು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಅಖಿಲ ಭಾರತ ಸಂಯೋಜಿತ ಸವಳು ಮಣ್ಣಿನ ನಿರ್ವಹಣೆ ಸಂಶೋಧನಾ ಯೋಜನೆಯ ಮುಖ್ಯ ವಿಜ್ಞಾನಿಗಳು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

Thursday, 26 June 2014

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಜೂ.28 ರಂದು ಪೂರ್ವಭಾವಿ ಸಭೆ

ಕೊಪ್ಪಳ,ಜೂ.26(ಕರ್ನಾಟಕ ವಾರ್ತೆ): ಬರುವ ಜುಲೈ-03 ರಿಂದ 12 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜೂ.28 ರಂದು ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಜರುಗಲಿದೆ.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ವಹಿಸಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಜನಾಂಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಕೊಪ್ಪಳ,ಜೂ.26(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಜಿಲ್ಲೆಯ ವಿವಿಧ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತ ಜನಾಂಗದವರಾದ ಕ್ರಿಶ್ಚಿಯನ್ ಇವರಿಗೆ ಪ್ರಸಕ್ತ ಸಾಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿ ಪಿ.ಯು.ಸಿ ಓದುತ್ತಿರುವವರಿಗೆ 3000/-, ಪಿ.ಯು.ಸಿ. ಪಾಸಾಗಿ ಡಿಗ್ರಿ ಓದುತ್ತಿರುವವರಿಗೆ ರೂ.4,000/- ಮತ್ತು ಡಿಗ್ರಿ ಪಾಸಾಗಿ ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ 5000/- ರಂತೆ ಪ್ರೋತ್ಸಾಹಧನವನ್ನು ಮೆರಿಟ್ ಆಧರಿಸಿ ಮಂಜೂರು ಮಾಡಲಾಗುವುದು.  ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ, ಜಿಲ್ಲಾಡಳಿತ ಭವನ ಕೊಪ್ಪಳ ಅಥವಾ ಸಂಬಂಧಪಟ್ಟ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜಿಗಳನ್ನು ಆ.16 ರೊಳಗಾಗಿ ಹಾಗೂ ಪದವಿಯಲ್ಲಿ/ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಅರ್ಜಿಗಳನ್ನು ಆ.31 ರೊಳಗಾಗಿ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳ ಪ್ರಾಂಶುಪಾಲರ ಮೂಲಕ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಭವನ ಕೊಪ್ಪಳ ಇವರಿಗೆ ಸಲ್ಲಿಸಬಹುದು.
ಅಭ್ಯರ್ಥಿಗಳ ವಾರ್ಷಿಕ ಆದಾಯ 2.00 ಲಕ್ಷ ಮೀತಿ ಇರುತ್ತದೆ, ಜಿಲ್ಲೆಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ನೇರವಾಗಿ ಜಿಲ್ಲಾ ಕಛೇರಿಗೆ ಅರ್ಜಿ ಸಲ್ಲಿಸಕೂಡದು ಸಂಬಂಧಿಸಿದ ಶಾಲೆಗಳ ಪ್ರಾಂಶುಪಾಲರುಗಳು ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿ ಶಿಫಾರಸ್ಸಿನೊಂದಿಗೆ ಕವರಿಂಗ್ ಲೆಟರ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನೇರವಾಗಿ ಜಿಲ್ಲಾ ಕಛೇರಿಗೆ ಅಂಚೆ ಮೂಲಕ/ಮುದ್ದಾಂ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಅರ್ಜಿ ನಮೂನೆಯೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರ ಪಾಸಾದ ಅಂಕ ಪಟ್ಟಿಗಳನ್ನು ಲಗತ್ತಿಸಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ಅವರು ಪ್ರಕಟಣೆಗೆ ತಿಳಿಸಿದ್ದಾರೆ.

ಜೂ.28 ರಿಂದ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪ್ರಾರಂಭ

ಕೊಪ್ಪಳ,ಜೂ.26(ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯ ಕೌನ್ಸಲಿಂಗ್ ನಡೆಸುವ ಕುರಿತು ಜೂನ್ 28 ರಿಂದ ಜುಲೈ-01 ರವರೆಗೆ ವರ್ಗಾವಣೆ ಕೌನ್ಸಲಿಂಗ್ ಪ್ರಾರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ತಿಳಿಸಿದ್ದಾರೆ.
ಜೂ.28 ರಂದು ಸರಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಆದ್ಯತಾ ಪಟ್ಟಿಯ ಕ್ರಮ ಸಂಖ್ಯೆ 01 ರಿಂದ 250, ಜೂ.30 ರಂದು 251 ರಿಂದ 500 ರವರೆಗೆ ಹಾಗೂ ಜುಲೈ-01 ರಂದು 501 ರಿಂದ 627 ರವರೆಗೆ, ಜುಲೈ-1 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಕ್ರ.ಸಂ. 01 ರಿಂದ 24 ರವರೆಗೆ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಕ್ರ.ಸಂ. 01 ರಿಂದ 03 ರವರೆಗೆ ಹಾಗೂ ಸರಕಾರಿ ಪ್ರಾಥಮಿಕ ಶಾಲಾ ವಿಶೇಷ ಶಿಕ್ಷಕರ ಕ್ರ.ಸಂ. 01 ರಿಂದ 28 ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಕೌನ್ಸಲಿಂಗ್ ನಡೆಯಲಿದೆ.
ಸಂಬಂಧಿಸಿದ ಶಿಕ್ಷಕರು ಆಯಾ ದಿನಾಂಕದಂದು ಜೇಷ್ಠತೆಯ ಕ್ರಮ ಸಂಖ್ಯೆವಾರು ಕೌನ್ಸಲಿಂಗ್‍ಗೆ ಹಾಜರಾಗುವ ಶಿಕ್ಷಕರು ವಿವಿಧ ದಾಖಲೆಗಳನ್ನು ತರುವುದು. ಮತ್ತು ಅಂತಿಮ ಆಧ್ಯತಾ ಪಟ್ಟಿಯನ್ನು ಕಛೇರಿಯ ಹಾಗೂ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಯ ಅರ್ಜಿಯ ಪ್ರತಿ, ಬಿ.ಇ.ಓ ರವರ ಅನುಮೊದಿತ ಅರ್ಜಿಯ ಪ್ರತಿ, ಆದ್ಯತೆಗೆ ಸಂಬಂಧಿಸಿದ ಪ್ರಮಾಣ ಪತ್ರದ ಮೂಲಕ ಪ್ರತಿ ಹಾಗೂ ಸೇವಾ ಪ್ರಮಾಣ ಪತ್ರದೊಂದಿಗೆ ಶಿಕ್ಷಕರು ಹಾಜರಾಗುವಂತೆ ಜಿ.ಹೆಚ್.ವೀರಣ್ಣ ಅವರು ತಿಳಿಸಿದ್ದಾರೆ.

Tuesday, 24 June 2014

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನಕೊಪ್ಪಳ,ಜೂ.24(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಜಿಲ್ಲೆಯ ವಿವಿಧ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತ ಜನಾಂಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ಧ, ಶಿಖ್ ಹಾಗೂ ಪಾರ್ಸಿ ಇವರಿಗೆ ಪ್ರಸಕ್ತ ಸಾಲಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹಧನ ಮಂಜೂರು ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
          ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಾಸಾಗಿ ಪಿ.ಯು.ಸಿ ಓದುತ್ತಿರುವವರಿಗೆ 3000/-, ಪಿ.ಯು.ಸಿ. ಪಾಸಾಗಿ ಡಿಗ್ರಿ ಓದುತ್ತಿರುವವರಿಗೆ ರೂ.4,000/- ಮತ್ತು ಡಿಗ್ರಿ ಪಾಸಾಗಿ ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ 5000/- ರಂತೆ ಪ್ರೋತ್ಸಾಹಧನವನ್ನು ಮೆರಿಟ್ ಆಧರಿಸಿ ಮಂಜೂರು ಮಾಡಲಾಗುವುದು.  ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಕಛೇರಿ, ಜಿಲ್ಲಾಡಳಿತ ಭವನ ಕೊಪ್ಪಳ ಅಥವಾ ಸಂಬಂಧಪಟ್ಟ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜಿಗಳನ್ನು ಆ.16 ರೊಳಗಾಗಿ ಹಾಗೂ ಪದವಿಯಲ್ಲಿ/ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಅರ್ಜಿಗಳನ್ನು ಆ.31 ರೊಳಗಾಗಿ ವ್ಯಾಸಂಗ ಮಾಡುತ್ತಿರುವ ಕಾಲೇಜುಗಳ ಪ್ರಾಂಶುಪಾಲರ ಮೂಲಕ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಡಳಿತ ಭವನ ಕೊಪ್ಪಳ ಇವರಿಗೆ ಸಲ್ಲಿಸಬಹುದು.
ಅಭ್ಯರ್ಥಿಗಳ ವಾರ್ಷಿಕ ಆದಾಯ 2.00 ಲಕ್ಷ ಮೀತಿ ಇರುತ್ತದೆ, ಜಿಲ್ಲೆಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ನೇರವಾಗಿ ಜಿಲ್ಲಾ ಕಛೇರಿಗೆ ಅರ್ಜಿ ಸಲ್ಲಿಸಕೂಡದು ಸಂಬಂಧಿಸಿದ ಶಾಲೆಗಳ ಪ್ರಾಂಶುಪಾಲರುಗಳು ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿ ಶಿಫಾರಸ್ಸಿನೊಂದಿಗೆ ಕವರಿಂಗ್ ಲೆಟರ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನೇರವಾಗಿ ಜಿಲ್ಲಾ ಕಛೇರಿಗೆ ಅಂಚೆ ಮೂಲಕ/ಮುದ್ದಾಂ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಅರ್ಜಿ ನಮೂನೆಯೊಂದಿಗೆ ಜಾತಿ ಆದಾಯ ಪ್ರಮಾಣ ಪತ್ರ ಪಾಸಾದ ಅಂಕ ಪಟ್ಟಿಗಳನ್ನು ಲಗತ್ತಿಸಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ಪ್ರಶಸ್ತಿ : ಅರ್ಜಿ ಆಹ್ವಾನಕೊಪ್ಪಳ,ಜೂ.24(ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗೆ ಯುವಜನ ಸೇವೆ, ರಾಷ್ಟ್ರೀಯ ಅಭಿವೃದ್ದಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವಜನರಿಗೆ ಹಾಗೂ ಯುವಕ/ಯುವತಿ ಸಂಘಗಳಿಗೆ ರಾಷ್ಟ್ರೀಯ ಒಂದು ವೈಯಕ್ತಿಕ ಮತ್ತು ಒಂದು ಸಾಂಘೀಕ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಿನಾಂಕ: 01-04-2013 ರಿಂದ ದಿನಾಂಕ: 31-03-2014 ರವರೆಗೆ ಯುವಕ/ಯುವತಿ ಮಂಡಳಿ ಹಾಗೂ ಯುವಕ/ಯುವತಿಯರು ತಾವು ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು. ಅರ್ಜಿದಾರರು ಯುವಕ/ಯುವತಿಯರು 15 ರಿಂದ 35 ವಯೋಮಿತಿಯವರಾಗಿರಬೇಕು. ದಿನಾಂಕ: 31-03-2014 ಕ್ಕೆ 35 ವರ್ಷ ಮೀರಬಾರದು. ವಯೋಮಿತಿ ಬಗ್ಗೆ ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸತಕ್ಕದ್ದು. ಹಾಗೂ ಯಾವುದೇ ಕ್ರಿಮಿನಲ್ ಮೊಖದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ದಿನಾಂಕ: 01-04-2013 ರಿಂದ ದಿನಾಂಕ: 31-03-2014 ರವರೆಗೆ  ನಡುವಿನ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಅನುಸಾರ ಪತ್ರಿಕಾ ವರದಿ ಛಾಯಾಚಿತ್ರ ಬ್ಯಾನರ್‍ಗಳು ಸ್ಪಷ್ಟವಾಗಿ ಕಾಣುವಂತೆ ಒದಗಿಸುವುದು. ಈ ಎಲ್ಲಾ ಸ್ಪಷ್ಟವಾದ ವಿವರದೊಂದಿಗೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಈ ಕಛೇರಿಯಲ್ಲಿ ನಿಗದಿತ ನಮೂನೆಯನ್ನು ಪಡೆದು ಭರ್ತಿ ಮಾಡಿ ಸಾಧನೆಗಳ ದಾಖಲೆಗಳೊಂದಿಗೆ ಜುಲೈ-10 ರೊಳಗಾಗಿ ಮೂರು ಪ್ರತಿಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ : 08539-201400 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Monday, 23 June 2014

ಶಿಕ್ಷಕರ ಪರಸ್ಪರ ವರ್ಗಾವಣೆ : ಜೂ.24 ರಂದು ಕೌನ್ಸಲಿಂಗ್ಕೊಪ್ಪಳ ಜೂ.23(ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಘಟಕದೊಳಗಿನ ಪರಸ್ಪರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಲಿಂಗ್ ಮೂಲಕ ನಡೆಲು ಉದ್ದೇಶಿಸಲಾಗಿದ್ದು, ಜೂ.24 ರಂದು ಮಧ್ಯಾಹ್ನ 3.00 ಗಂಟೆಗೆ ಡಿಡಿಪಿಐ ಕಚೇರಿ ಆವರಣದಲ್ಲಿ ಕೌನ್ಸಲಿಂಗ್‍ನ್ನು ಏರ್ಪಡಿಸಲಾಗಿದೆ.
          ಘಟಕದೊಳಗೆ ಪರಸ್ಪರ ವರ್ಗಾವಣೆ ಬಯಸಿ ಈಗಾಗಲೆ ಅರ್ಜಿ ಸಲ್ಲಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಘಟಕದೊಳಗಿನ ಪರಸ್ಪರ ವರ್ಗಾವಣಾ ಕೌನ್ಸಲಿಂಗ್‍ಗೆ ತಮ್ಮ ಸೇವಾ ವಿವರದ ಮಾಹಿತಿಯನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ತಿಳಿಸಿದ್ದಾರೆ.

ವಿವಿಧ ದತ್ತಿನಿಧಿ ಪ್ರಶಸ್ತಿ : ಅರ್ಜಿ ಆಹ್ವಾನಕೊಪ್ಪಳ ಜೂ.23(ಕರ್ನಾಟಕ ವಾರ್ತೆ): ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
 ದೇವೇದ್ರಕೀರ್ತಿ ಪ್ರಶಸ್ತಿ ದತ್ತಿ : ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಪ್ರಶಸ್ತಿ ದತ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ ಜೈನಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಗ್ರಂಥವೊಂದಕ್ಕೆ 2013ನೇ ಸಾಲಿಗೆ ರೂ.6,000/- ಗಳ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2013 ಜನವರಿಯಿಂದ ಡಿಸೆಂಬರ್‍ವರೆಗೂ ಪ್ರಕಟವಾದ ಜೈನಧರ್ಮದ ಇತಿಹಾಸ, ಸಾಹಿತ್ಯ ಸಂಸ್ಕøತಿ ಹಾಗೂ ಕಲೆ, ಸಂಶೋಧನಾ ಗ್ರಂಥ, ಗ್ರಂಥ ಸಂಪಾದನೆ, ಪ್ರಾಚೀನ ಗ್ರಂಥಗಳು ಹಾಗೂ ಅನುವಾದಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕ.
ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ : ಕೊಡಗಿನ ಎಸ್.ಎನ್.ವಿಜಯಶಂಕರ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾರತೀಸುತ ಸ್ಮಾರಕ ದತ್ತಿಯನ್ನು ಸ್ಥಾಪಿಸಿದ್ದು ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ 2012 ಮತ್ತು 2013ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಕಾದಂಬರಿ ಕೃತಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ : ಬೀದರ್‍ನಲ್ಲಿ ನಡೆದ ಅಖಿಲ ಭಾರತ 72ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಶಾಂತರಸ ಹೆಂಬೇರಾಳು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಧರ್ಮಪತ್ನಿ ದಿ|| ಲಕ್ಷ್ಮೀದೇವಿ ಅವರ ಹೆಸರಿನಲ್ಲಿ 1,15,000/- ರೂ. ದತ್ತಿನಿಧಿಯನ್ನು ಸ್ಥಾಪಿಸಿರುತ್ತಾರೆ. ಇದರಿಂದ ಬರುವ ಬಡ್ಡಿಯಿಂದ ಪ್ರತಿವರ್ಷ ಕನ್ನಡ ಮಹಿಳಾ ಬರಹಗಾರರ ವಿವಿಧ ಪ್ರಕಾರಗಳ ಪುಸ್ತಕಗಳಿಗೆ ಪ್ರಶಸ್ತಿ ನೀಡಲಾಗುವುದು. ಮಹಿಳಾ ಸಾಹಿತಿಗಳಿಗೆ ಮಾತ್ರ ಮೀಸಲಾಗಿರುವ 2013ನೇ ಸಾಲಿನ ಪ್ರಶಸ್ತಿಯನ್ನು ಆರು ವರ್ಷಗಳ ಅವಧಿಯಲ್ಲಿ (2009 ನೇ ಜನವರಿ ತಿಂಗಳಿಂದ 2013ನೇ ಡಿಸೆಂಬರ್ ತಿಂಗಳವರೆಗೆ) ಪ್ರಥಮ ಮುದ್ರಣವಾಗಿ ಪ್ರಕಟವಾದ ಕಥೆ ಕೃತಿಯಾಗಿರಬೇಕು. ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಕನ್ನಡ ಸಾಹಿತ್ಯ ಪರಿಷತ್ತು ಬೀಳಗಿ ಘಟಕ ದತ್ತಿ ಪ್ರಶಸ್ತಿ : ಬೀಳಗಿಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಬೀಳಗಿ ತಾಲೂಕು ಘಟಕದವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಬಾಗಲಕೋಟೆ ಜಿಲ್ಲೆಯ ಲೇಖಕರು 2013 ರಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟಿಸಲಾದ ಕಥೆ, ಕಾವ್ಯ, ನಾಟಕ, ಜಾನಪದ ಹಾಗೂ ಪತ್ರಿಕಾ ರಂಗ ಹೀಗೆ ಐದು ಪ್ರಕಾರಗಳಲ್ಲಿ ರಚಿಸಿದ ಪುಸ್ತಕಗಳಿಗೆ ತಲಾ ರೂ.2,000/- ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಬಾಗಲಕೋಟೆ ಜಿಲ್ಲೆಯ ಬರಗಾರರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ : ಪ್ರಕಾಶಕ ಆರ್.ಎನ್.ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಲಕ್ಷದ ಒಂದು ರೂಪಾಯಿ ಮೌಲ್ಯದ ದತ್ತಿಯನ್ನು ಸ್ಥಾಪಿಸಿದ್ದು ಇದರಿಂದ ಸಂಗ್ರಹವಾಗುವ ಬಡ್ಡಿಯಿಂದ 2012-13ನೇ ಸಾಲಿಗೆ 2012 ರಲ್ಲಿ ಪ್ರಕಟವಾದ ಕಾವ್ಯ ಪ್ರಕಾರಕ್ಕೆ ಹಾಗೂ 2013-14ನೇ ಸಾಲಿಗೆ 2013 ರಲ್ಲಿ ಪ್ರಕಟವಾದ ಕಥೆ ಪ್ರಕಾರದ ಪುಸ್ತಕ ಪ್ರಕಟಣೆ ಮಾಡಿದ ಪ್ರಕಾಶನ ಸಂಸ್ಥೆಗೆ ರೂ.5,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್.ಬಸವರಾಜು ದತ್ತಿ) : ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಎಲ್.ಬಸವರಾಜು ಅವರು ಒಂದು ಲಕ್ಷ ರೂ.ಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಮೃತಮಹೋತ್ಸವ ಸವಿ ನೆನಪು ದತ್ತಿಯನ್ನು ಸ್ಥಾಪಿಸಿರುತ್ತಾರೆ. ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ 2013ನೇ ಸಾಲಿನ ಯಾವುದೇ ಪ್ರಕಾರದ ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ.5,000/- ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ : ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯ ಪ್ರಧಾನದ ಸಲುವಾಗಿ ಒಂದು ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ ಪ್ರತಿವರ್ಷ ಕನ್ನಡದಲ್ಲಿ ಪ್ರಕಟಣೆಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಗೆ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2013ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ಶ್ರೇಷ್ಠ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ.
ವಿ.ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ : ಎಂ.ಜಿ.ನಾಗರಾಜ್, ಎಂ.ಜಿ.ಪದ್ಮ ವಿರೂಪಾಕ್ಷಯ್ಯ ಹಾಗೂ ಎಂ.ಜಿ.ಚಂದ್ರಕಾಂತ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿ.ಗೌರಮ್ಮ ಗಂಗಾಧರಯ್ಯ ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿಯ ಪ್ರದಾನದ ಸಲುವಾಗಿ 2 ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ 2013ನೇ ಸಾಲಿನ ಪ್ರಕಟವಾದ ಶಾಸನ ಇತಿಹಾಸ, ಜಾನಪದ ಸಂಶೋಧನಾ ವಿಷಯ ಕುರಿತು ಸಂಬಂಧಿಸಿದ ಕೃತಿಗಳಿಗೆ ರೂ.10 ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ : ಜಿ.ಎಸ್.ಎಸ್.ಮೂರ್ತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ ಪ್ರಧಾನದ ಸಲುವಾಗಿ 1 ಲಕ್ಷ ರೂ.ಗಳ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಈ ದತ್ತಿಯಿಂದ ಸಂಗ್ರಹವಾಗುವ ಬಡ್ಡಿ ಹಣದಿಂದ 2013 ರಲ್ಲಿ ಪ್ರಕಟವಾದ ಶ್ರೇಷ್ಠ ಕಾದಂಬರಿ ರೂ.5,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಡಾ.ಹಾ.ಮಾ.ನಾಯಕ ದತ್ತಿ ಪ್ರಶಸ್ತಿ : ಜೆ.ಆರ್.ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ.ಹಾ.ಮಾ. ನಾಯಕ ದತ್ತಿ ಪ್ರಶಸ್ತಿ ಪ್ರಧಾನದ ಸಲುವಾಗಿ ದತ್ತಿಯನ್ನು ಸ್ಥಾಪಿಸಿರುತ್ತಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶ್ರೇಷ್ಠ ವಿಚಾರ ಸಾಹಿತ್ಯ/ಅಂಕಣ ಕೃತಿಯೊಂದಕ್ಕೆ ರೂ.5,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 2009, 2010, 2011ನೇ ಸಾಲಿನ ಕೃತಿಗಳನ್ನು ಪರಿಗಣಿಸಲಾಗುವುದು.
ಪ್ರತಿ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು ಕಳುಹಿಸಬೇಕು, ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ, ಬಹುಮಾನದ ಬಗ್ಗೆ ಪರಿಷತ್ತ ನೇಮಿಸುವ ತೀರ್ಪುಗಾರರ ಶಿಫಾರಸ್ಸನ್ನು ಅಂತಿಮವಾಗಿರುತ್ತದೆ, ಒಂದಕ್ಕಿಂತ ಹೆಚ್ಚು ಪುಸ್ತಕಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿ ವಿತರಿಸುವ ಹಕ್ಕು ಪರಿಷತ್ತಿಗೆ ಇರುತ್ತದೆ, ಯಾವುದೇ ವರ್ಷ ಪ್ರಶಸ್ತಿಗೆ ಅರ್ಹ ಗ್ರಂಥಗಳು ಬಾರದಿದ್ದಾಗ ಆ ವರ್ಷ ಪ್ರಶಸ್ತಿಯನ್ನು ನೀಡದಿರುವ ಹಕ್ಕು ಪರಿಷತ್ತಿಗೆ ಇರುತ್ತದೆ, ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಜುಲೈ-31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಹಾಗೂ ದೂರವಾಣಿ ಸಂಖ್ಯೆ: 080-26623584 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.