Wednesday, 31 December 2014

ಜ.03 ರಿಂದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ

ಕೊಪ್ಪಳ ಡಿ.31(ಕರ್ನಾಟಕವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಕೊಪ್ಪಳ ಜಿಲ್ಲಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟ ಜ.03 ರಿಂದ 4 ರವರೆಗೆ ಎರಡು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
           ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಅಮರೇಶ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಶರಣಪ್ಪ ಮಟ್ಟೂರು, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ತಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ವಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅನಿಲ್‍ಕುಮಾರ ಟಿ.ಕೆ., ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಟಿ.ಡಿ.ಪವಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ  ಪಾಲ್ಗೊಳ್ಳುವರು.
           ಸಮಾರೋಪ ಸಮಾರಂಭವು ಜ.04 ರಂದು ಸಂಜೆ 6 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ವಹಿಸುವರು. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಡಾ: ಸುರೇಶ ಬಿ.ಇಟ್ನಾಳ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ, ಜಿ.ಪಂ.ಉಪಕಾರ್ಯದರ್ಶಿ ಎನ್.ಕೆ.ತೊರವಿ, ಜಿ.ಪಂ. ಮುಖ್ಯಲೆಕ್ಕಾಧಿಕಾರಿ ಟಿ.ಆರ್.ಶಿವಪ್ರಸಾದ, ಪೌರಾಯುಕ್ತ ರಮೇಶ ಪಟ್ಟೇದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಾಯ್.ಎಚ್.ಲಂಬು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶ್ರೀಕಾಂತ ಬಾಸೂರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಚೊರನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಸಂತ ಪ್ರೇಮಾ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪಿ.ಶುಭ, ಬಿಸಿಎಂ ಅಧಿಕಾರಿ ಬಿ.ಕಲ್ಲೇಶ ಸೇರಿದಂತೆ ಅನೇಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ಅವರು ತಿಳಿಸಿದ್ದಾರೆ.

ಜನವರಿ ತಿಂಗಳ ಪಡಿತರ ಧಾನ್ಯ ಬಿಡುಗಡೆ

ಕೊಪ್ಪಳ,ಡಿ.31(ಕರ್ನಾಟಕವಾರ್ತೆ): ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಪಡಿತರದಾರರಿಗೆ ಜನವರಿ ತಿಂಗಳಿಗಾಗಿ ಆಹಾರಧಾನ್ಯ, ಸೀಮೆಎಣ್ಣೆ ಮತ್ತು ಸಕ್ಕರೆ ಬಿಡುಗಡೆ ಮಾಡಿದೆ.
            ಕೊಪ್ಪಳ ಜಿಲ್ಲೆಯ ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಕೆ.ಜಿ.ಗೆ ರೂ. 1 ರಂತೆ 29 ಕೆ.ಜಿ ಅಕ್ಕಿ ಮತ್ತು ರೂ. 1 ರಂತೆ 6 ಕೆ.ಜಿ ಗೋಧಿ ಹಾಗೂ ರೂ.13.50 ರಂತೆ 1 ಕೆ.ಜಿ ಸಕ್ಕರೆ ಬಿಡುಗಡೆ ಮಾಡಲಾಗಿದೆ.  ಬಿಪಿಎಲ್ ಪಡಿತರದಾರರಿಗೆ ಏಕ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ರೂ. 1 ರಂತೆ 6 ಕೆ.ಜಿ ಅಕ್ಕಿ, 4 ಕೆ.ಜಿ. ಗೋಧಿ, ಕೆ.ಜಿ.ಗೆ ರೂ. 13-50 ರಂತೆ 01 ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ. ದ್ವಿ ಸದಸ್ಯರಿಗೆ 14 ಕೆ.ಜಿ ಅಕ್ಕಿ, 6 ಕೆ.ಜಿ. ಗೋಧಿ, 1 ಕೆ.ಜಿ. ಸಕ್ಕರೆ.  ತ್ರಿ ಸದಸ್ಯ ಮತ್ತು ಮೇಲ್ಪಟ್ಟವರಿಗೆ 20 ಕೆ.ಜಿ ಅಕ್ಕಿ, 10 ಕೆ.ಜಿ. ಗೋಧಿ ಹಾಗೂ 1 ಕೆ.ಜಿ ಸಕ್ಕರೆ ಬಿಡುಗಡೆ ಮಾಡಲಾಗಿದೆ.
            ಪಡಿತರ ಚೀಟಿದಾರರಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಸದಸ್ಯರಿಗೆ 3 ಲೀ. ಸೀಮೆ ಎಣ್ಣೆ, 3 ಮತ್ತು ಅದಕ್ಕಿಂತ ಮೇಲ್ಪಟ್ಟ ಸದಸ್ಯರಿದ್ದಲ್ಲಿ ಅಂತಹವರಿಗೆ 5 ಲೀಟರ್. ಬಿಪಿಎಲ್ ಅನಿಲ ರಹಿತ ಕುಟುಂಬಗಳಿಗೆ (ಪಟ್ಟಣ/ಗ್ರಾಮಾಂತರ ಪ್ರದೇಶದವರಿಗೆ)  1 ಮತ್ತು 2 ಜನ ಸದಸ್ಯರಿದ್ದಲ್ಲಿ 3 ಲೀಟರ್ ಹಾಗೂ 3 ಮತ್ತು ಮೇಲ್ಪಟ್ಟ ಸದಸ್ಯರಿದ್ದಲ್ಲಿ 05 ಲೀ. ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.  ಎಪಿಎಲ್ ಅನಿಲ ರಹಿತ ಗ್ರಾಮಾಂತರ ಕುಟುಂಬಗಳಿಗೆ 2 ಲೀಟರ್ ಹಂಚಿಕೆ ಮಾಡಲಾಗಿದೆ. ಸೀಮೆಎಣ್ಣೆ ದರ ಪ್ರತಿ ಲೀಟರ್‍ಗೆ ರೂ.18  ನಿಗದಿಪಡಿಸಲಾಗಿದೆ.
            ಗಂಗಾವತಿ ತಾಲೂಕಿನಲ್ಲಿ-113 ಸೀರೆ ದಾಸ್ತಾನು ಇದ್ದು, ಕೊಪ್ಪಳ-60, ಗಂಗಾವತಿ-262 ಪಂಚೆಗಳ ದಾಸ್ತಾನು ಇರುತ್ತದೆ, ಪಡಿತರ ಚೀಟಿದಾರರು ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಬಟ್ಟೆಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಗ್ರಾಹಕರ ದಿನಾಚರಣೆ : ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳು

ಕೊಪ್ಪಳ ಡಿ. 31 (ಕ.ವಾ): ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಈ ಬಾರಿ ‘ ಗ್ರಾಹಕರ ಸಬಲೀಕರಣ-ಗ್ರಾಹಕರ ಹಕ್ಕುಗಳ ಸಾರ್ವತ್ರೀಕರಣ, ಇ-ವಾಣಿಜ್ಯ ವ್ಯವಹಾರದಲ್ಲಿರುವ ಗ್ರಾಹಕರಿಗೆ ಅರಿವು’ ಎಂಬ ಘೋಷವಾಕ್ಯದೊಂದಿಗೆ ದಿನಾಚರಣೆ ಆಚರಿಸಲಾಗುತ್ತಿದ್ದು, ಗ್ರಾಹಕರ ಜವಾಬ್ದಾರಿಗಳು ಮತ್ತು ಹಕ್ಕುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡುವುದು ಅಗತ್ಯವಾಗಿದೆ.
     ಸಾರ್ವಜನಿಕರು ತಮ್ಮ ದೈನಂದಿನ ಜೀವನದಲ್ಲಿ ಗ್ರಾಹಕರಾಗಿ ಸಮಾಜದಲ್ಲಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತಿದ್ದು, ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿರಬೇಕು, ಗ್ರಾಹಕರ ಜವಾಬ್ದಾರಿಗಳೆಂದರೆ, ಖರೀದಿಯ ಪೂರ್ವ ಯೋಜನೆಯನ್ನು ತಯಾರಿಸಿಕೊಳ್ಳುವುದು, ಖರೀದಿಸುವ ವಸ್ತುವಿನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳುವುದು, ಇಷ್ಟಪಡುವ ವಸ್ತುವನ್ನು ಆಯ್ಕೆ ಮಾಡಲು ಹಿಂಜರಿಯಬಾರದು, ಆಯ್ಕೆಯ ನಿರ್ಧಾರ ಗ್ರಾಹಕರದೇ ಅಂತಿಮ, ವಸ್ತುಗಳನ್ನು ಕಂಡ ಕೂಡಲೇ ಖರೀದಿಸಬಾರದು, ಆ ವಸ್ತುಗಳ ಗುಣಮಟ್ಟ, ಗುಣಮಾನಕ ಅಂದರೆ ಐಎಸ್‍ಐ / ಆಗ್ಮಾರ್ಕ್ ಹೊಂದಿರುವುದನ್ನು ಖಾತ್ರಿ ಪಡಿಸಿಕೊಂಡು ಖರೀದಿಸುವುದು, ಕಳ್ಳಸಂತೆಯಲ್ಲಿ ವಸ್ತುಗಳನ್ನು ಖರೀದಿಸಬಾರದು, ಜಾಹೀರಾತುಗಳ ಭರವಸೆಗಳಿಗೆ ಮರಳಾಗಬಾರದು, ಪರಿಸರವನ್ನು ಮಲಿನಗೊಳಿಸದಂತೆ, ಸಂಪನ್ಮೂಲ ಉಳಿಸುವುದು, ವಸ್ತುಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಭದ್ರವಾಗಿಟ್ಟುಕೊಳ್ಳುವುದು, ವಂಚನೆ ಕಂಡುಬಂದಾಗ ದೂರು ಕೊಡಲು ಹಿಂಜರಿಯಬಾರದು, ನಕಲಿ ವಸ್ತುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಆ ಕುರಿತು ತಯಾರಕರಿಗೆ ಮಾಹಿತಿ ನೀಡುವುದು ಗ್ರಾಹಕರ ಜವಾಬ್ದಾರಿಗಳಾಗಿವೆ.  ಇನ್ನು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ಅತ್ಯವಶ್ಯಕ ಪದಾರ್ಥಗಳು, ವಸ್ತುಗಳು ಮತ್ತು ಸೇವೆಗಳ ಹಕ್ಕು ಗ್ರಾಹಕರು ಹೊಂದಿರುತ್ತಾರೆ.  ಅದೇ ರೀತಿ ಯಾವುದೇ ಪದಾರ್ಥ, ಸೇವೆಗಳಿಂದ ಜೀವಕ್ಕೆ ಇಲ್ಲವೆ ಆಸ್ತಿಪಾಸ್ತಿಗೆ ಹಾನಿ ಆಗದಂತೆ ಸುರಕ್ಷತೆಯನ್ನು ಹೊಂದುವುದು, ತಾವು ಖರೀದಿಸುವ ವಸ್ತು, ಪದಾರ್ಥ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು, ಸಾಧ್ಯವಾಉವ ಸಂದರ್ಭದಲ್ಲಿ/ ಕಡೆಗಳಲ್ಲಿ ತಮಗೆ ಬೇಕೆನಿಸುವ ವಸ್ತು, ಪದಾರ್ಥ ಇಲ್ಲವೆ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವುದು, ಬಳಕೆದಾರರಿಗೆ ಸಂಬಂಧಪಟ್ಟ ವಿಷಯಗಳಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಲು ಪ್ರಾತಿನಿಧ್ಯದ ಹಕ್ಕು, ದೋಷಯುಕ್ತ ವಸ್ತು, ಪದಾರ್ಥ ಅಥವಾ ಸೇವೆಯಿಂದ ಉಂಟಾಗುವ ನಷ್ಟಕ್ಕೆ ಅಥವಾ ಹಾನಿಗೆ ಪರಿಹಾರ ಪಡೆಯುವ ಹಕ್ಕು, ಮಾರುಕಟ್ಟೆಯಲ್ಲಿ ಬುದ್ದಿವಂತಿಕೆಯಿಂದ ವ್ಯವಹಾರ ನಡೆಸಲು ಬೇಕಾದ ಗ್ರಾಹಕ ಶಿಕ್ಷಣ ಹಕ್ಕು ಹಾಗೂ ಮಾಲಿನ್ಯಗೊಳ್ಳದ ಪರಿಸರದ ಹಕ್ಕನ್ನು ಪ್ರತಿಯೊಬ್ಬ ಗ್ರಾಹಕರು ನ್ಯಾಯಯುತವಾಗಿ ಹೊಂದಿದ್ದಾರೆ.
     ಗ್ರಾಹಕರ ಜವಾಬ್ದಾರಿಗಳು ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಎಲ್ಲ ಸಾರ್ವಜನಿಕರು ಅರಿವು ಹೊಂದಿದಲ್ಲಿ, ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುತ್ತಾರೆ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಅವರು.

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು, ಹೊಸ ವರುಷ, ಸಕಲರಿಗೂ ಹೊಸ ಹರುಷ ಹಾಗೂ ನೆಮ್ಮದಿಯನ್ನು ತರಲೆಂಬ ಆಶಯ ನಮ್ಮದಾಗಿದೆ.

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು, ಹೊಸ ವರುಷ, ಸಕಲರಿಗೂ ಹೊಸ ಹರುಷ ಹಾಗೂ ನೆಮ್ಮದಿಯನ್ನು ತರಲೆಂಬ ಆಶಯ ನಮ್ಮದಾಗಿದೆ.

ಬರದ ನಾಡಿಗೆ ತುಂಗಭದ್ರೆ- ಕೆರೆ ತುಂಬಿಸುವ ಯೋಜನೆ : ಕುರಿತ ನಮ್ಮ ಲೇಖನ ಜನಪದ ಮಾಸಪತ್ರಿಕೆಯ ಜನವರಿ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.

ಬರದ ನಾಡಿಗೆ ತುಂಗಭದ್ರೆ- ಕೆರೆ ತುಂಬಿಸುವ ಯೋಜನೆ : ಕುರಿತ ನಮ್ಮ ಲೇಖನ ಜನಪದ ಮಾಸಪತ್ರಿಕೆಯ ಜನವರಿ ತಿಂಗಳ ಸಂಚಿಕೆಯಲ್ಲಿ ಪ್ರಕಟಗೊಂಡಿದೆ.

Tuesday, 30 December 2014

ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು- ಡಾ. ಸುರೇಶ್ ಇಟ್ನಾಳ್


ಕೊಪ್ಪಳ ಡಿ. 30 (ಕ.ವಾ): ಯಾವುದೇ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
     ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗವಿಸಿದ್ದೇಶ್ವರ ಪ.ಪೂ. ಕಾಲೇಜು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗವಿಸಿದ್ದೇಶ್ವರ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಗ್ರಾಹಕರು ಯಾವುದೇ ಉತ್ಪನ್ನ ಕೊಳ್ಳುವ ಮೊದಲು ಅದರ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.  ಅಗ್ಗದ ದರದಲ್ಲಿ ದೊರೆಯುವ ನಕಲಿ ಉತ್ಪನ್ನಗಳನ್ನು ಖರೀದಿಸಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.  ಗ್ರಾಹಕರು ಉತ್ಪನ್ನಗಳ ಬಗ್ಗೆ ಮಾರಾಟಗಾರರಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.  ಯಾವುದೇ ಉತ್ಪನ್ನಗಳ ಗುಣಮಟ್ಟವನ್ನು ಖಾತ್ರಿ ಪಡಿಸಲು ಐಎಸ್‍ಐ ಅಥವಾ ಅಗ್‍ಮಾರ್ಕ್ ಗುರುತು ಇಂತಹ ಪ್ರಮಾಣೀಕೃತ ಚಿಹ್ನೆ ಇರುವುದನ್ನು ನೋಡಿಕೊಂಡು, ಗ್ರಾಹಕರು ಉತ್ಪನ್ನಗಳನ್ನು ಖರೀದಿಸಬೇಕು.  ಐಎಸ್‍ಐ, ಆಗ್‍ಮಾರ್ಕ್ ಇವುಗಳು ಉತ್ತಮ ಗುಣಮಟ್ಟವನ್ನು ಪ್ರಮಾಣೀಕರಿಸಲು ಸರ್ಕಾರ ನಿಗದಿಪಡಿಸಿರುವ ಸಂಸ್ಥೆಗಳಾಗಿದ್ದು, ವಿದ್ಯುತ್ ಉಪಕರಣಗಳು ಸೇರಿದಂತೆ ಕೆಲವು ಉತ್ಪನ್ನಗಳು ಐಎಸ್‍ಐ ಪ್ರಮಾಣೀಕರಣ ಹೊಂದುವುದು ಕಡ್ಡಾಯವಾಗಿದೆ.  ಆಹಾರ, ಔಷಧಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪಾಕೆಟ್‍ಗಳ ಮೂಲಕ ಮಾರಾಟ ಮಾಡುವವರು ಅದರಲ್ಲಿ ಗರಿಷ್ಠ ಮಾರಾಟ ದರ, ತಯಾರಿಕಾ ದಿನಾಂಕ, ಅವಧಿ ಮೀರುವ ದಿನಾಂಕ, ಉತ್ಪನ್ನದಲ್ಲಿರುವ ಅಂಶಗಳ ಬಗ್ಗೆ ನಮೂದಿಸುವುದು ಕಡ್ಡಾಯವಾಗಿರುತ್ತದೆ.  ಗ್ರಾಹಕರು ಯಾವುದೇ ಉತ್ಪನ್ನಗಳನ್ನು ಕೊಳ್ಳುವಾಗ, ಇವೆಲ್ಲವನ್ನು ಪರಿಶೀಲಿಸಿಯೇ ಖರೀದಿಸಬೇಕು.  ಅನ್ಯಾಯಕ್ಕೆ ಅಥವಾ ವಂಚನೆಗೆ ಒಳಗಾದವರು, ಮಾರಾಟಗಾರರಿಂದ ನ್ಯಾಯ ದೊರೆಯದಿದ್ದಲ್ಲಿ, ಗ್ರಾಹಕರ ವೇದಿಕೆಯ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ.  ಗ್ರಾಹಕರ ಹಿತಕಾಯುವ ಸಲುವಾಗಿ 1986 ರ ಡಿಸೆಂಬರ್ 24 ರಂದು ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರಿಂದ, ಡಿ. 24 ಅನ್ನು ರಾಷ್ಟ್ರೀಯ ಗ್ರಾಹಕರ   ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
     ಗ್ರಾಹಕರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ವಕೀಲ ವಿ.ಎಂ. ಭೂಸನೂರ ಮಠ ಅವರು ಮಾತನಾಡಿ, ಸಾರ್ವಜನಿಕರಿಗೆ ದೈನಂದಿನ ಬದುಕಿನಲ್ಲಿ ಕಾನೂನು ವಿಷಯ ಹಾಸು ಹೊಕ್ಕಾಗಿದೆ.  ವಿದ್ಯಾರ್ಥಿಗಳು ಗ್ರಾಹಕರ ಹಿತರಕ್ಷಣೆಗಾಗಿ ಜಾರಿಯಲ್ಲಿರುವ ಕಾಯ್ದೆಯ ಬಗ್ಗೆ ಅರಿವು ಹೊಂದಿದಲ್ಲಿ, ಮಾರಾಟಗಾರರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.  ರೈತರು ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಚಟುವಟಿಕೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದಾಗ, ಅದಕ್ಕೆ ಸಂಬಂಧಿಸಿದ ಬಿಲ್ ಅಥವಾ ರಸೀದಿಯನ್ನು ಕಡ್ಡಾಯವಾಗಿ ಪಡೆದು, ಸಂರಕ್ಷಿಸಿ ಇಟ್ಟುಕೊಳ್ಳಬೇಕು.  ಒಂದು ವೇಳೆ ಖರೀದಿಸಿದ ಸಾಮಗ್ರಿಗಳು ಕಳಪೆ ಗುಣಮಟ್ಟ ಇದ್ದಲ್ಲಿ, ಪರಿಹಾರಕ್ಕಾಗಿ ಗ್ರಾಹಕರ ವೇದಿಕೆಗೆ ಮೊರೆ ಹೋಗಲು ಅವಕಾಶವಿದೆ.  2 ಲಕ್ಷ ರೂ.ಗಳ ವರೆಗಿನ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ವಂಚನೆಗೆ ಒಳಗಾದವರು ವಕೀಲರ ನೆರವಿಲ್ಲದೆ, ನೇರವಾಗಿ  ತಾವೇ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ.  ವೈದ್ಯಕೀಯ ಸೇವೆ, ಶಿಕ್ಷಣ, ಜೀವ ವಿಮೆ ಅಲ್ಲದೆ ವಕೀಲರ ಸೇವೆಯೂ ಸಹ ಗ್ರಾಹಕರ ಹಿತರಕ್ಷಣಾ ಕಾಯ್ದೆ ವ್ಯಾಪ್ತಿಗೆ ಸೇರುತ್ತದೆ.  ಅನ್ಯಾಯಕ್ಕೆ ಒಳಗಾದವರು ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗಳಿಗೆ ಮನವಿಯನ್ನು ಸಲ್ಲಿಸಿ, ಸೇವಾ ನ್ಯೂನತೆಗೆ ಪರಿಹಾರ, ಖರೀದಿ ವಸ್ತುಗಳ ಬದಲಾವಣೆ, ನಷ್ಟ ಪರಿಹಾರ ಸೇರಿದಂತೆ ನ್ಯಾಯ ಪಡೆಯಲು ಸಾಧ್ಯವಿದೆ.  ಇತ್ತೀಚೆಗೆ ಆನ್‍ಲೈನ್ ಮೂಲಕವೂ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
     ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಜಯಕುಮಾರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಕುಮಾರ್, ಗವಿಸಿದ್ದೇಶ್ವರ ಪ.ಪೂ. ಕಾಲೇಜು ಪ್ರಾಚಾರ್ಯ ಪರೀಕ್ಷಿತರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿದರು, ಸಾವಿತ್ರಿ ಮುಜುಂದಾರ್ ನಿರೂಪಿಸಿದರು.

ಜ. 30 ಕ್ಕೆ ಲಕ್ಷ ಶೌಚಾಲಯ ಗುರಿ ಸಾಧನೆಗೆ ಸಹಕರಿಸಲು ಜಿ.ಪಂ. ಸಿಇಓ ಕೃಷ್ಣ ಉದಪುಡಿ ಮನವಿ

ಕೊಪ್ಪಳ,ಡಿ.30(ಕರ್ನಾಟಕವಾರ್ತೆ): ್ಲ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದಡಿ 2015 ನೂತನ ವರ್ಷದಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಿ ಜ. 30 ರ ಒಳಗಾಗಿ 01 ಲಕ್ಷದ ಒಂದನೇ ಶೌಚಾಲಯ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯನ್ನು ಸಾಕಾರಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.
       ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಕೊಪ್ಪಳ ಜಿಲ್ಲೆಯ ಜನ ಆಸಕ್ತಿಯಿಂದ ಮುನ್ನುಗ್ಗಿ ಕಳೆದ ವರ್ಷ 54000 ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ನೈರ್ಮಲ್ಯ ವಿಷಯದಲ್ಲಿ ಇಡೀ ರಾಜ್ಯದಲ್ಲೇ ಕ್ರಾಂತಿಕಾರಕ ಬದಲಾವಣೆ ತರಲು ಉತ್ಸಾಹದಿಂದ ಪಾಲ್ಗೊಂಡ ನೆನಪು ಇನ್ನೂ ಹಸಿರಾಗೇ ಇದೆ. ಈ ವರ್ಷ ಸ್ವಚ್ಛ ಭಾರತ ಅಭಿಯಾನದಲ್ಲಿ ಇನ್ನೊಂದು ದೊಡ್ಡ ದಾಪುಗಾಲು ಇಟ್ಟು 100001 ಶೌಚಾಲಯ ನಿರ್ಮಿಸಿ ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯನ್ನು ಜನೇವರಿ 30 ರಂದು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಜನತೆ ಒಗ್ಗೂಡಿ ಸಫಲಗೊಳಿಸಬೇಕಾಗಿದೆ.  ಈ ಹಿಂದೆ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 5,400/- ರೂ. ಹಾಗೂ ನಿರ್ಮಲ ಭಾರತ ಅಭಿಯಾನದಲ್ಲಿ ರೂ.4,700/- ಈ ರೀತಿಯಾಗಿ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿತ್ತು.  ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಧನ ರೂ.5000/- ಸೇರಿಸಿ ಒಟ್ಟು ರೂ.15000/- ಗಳನ್ನು ನೀಡುವ ಪದ್ಧತಿ ರೂಡಿಯಲ್ಲಿತ್ತು.  ಆದರೆ ಕಳೆದ ಅಕ್ಟೋಬರ್ ತಿಂಗಳಿನಿಂದ ನಿರ್ಮಲ ಭರತ ಅಭಿಯಾನದ ಬದಲಿಗೆ ಸ್ವಚ್ಛ ಭಾರತ ಮಿಷನ್ ಜಾರಿಗೆ ಬಂದಿದ್ದು,  ಉದ್ಯೋಗಖಾತ್ರಿ ಯೋಜನೆಯಲ್ಲಿ ನೀಡುತ್ತಿದ್ದ ರೂ.5400 ಗಳನ್ನು ಕೈಬಿಟ್ಟು, ಈಗ ಪೂರ್ತಿಯಾಗಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವೈಯಕ್ತಿಕ ಫಲಾನುಭವಿಗೆ ಒಟ್ಟು ರೂ.12,000 ಗಳ ಪ್ರೋತ್ಸಾಹಧನವನ್ನು ನೀಡುವ ವ್ಯವಸ್ಥೆ ಜಾರಿಯಾಗಿದೆ. ಈ ಹಿಂದಿನಂತೆ ಎನ್.ಆರ್.ಇ.ಜಿ. ಅಡಿಯಲ್ಲಿ ಎನ್.ಎಂ.ಆರ್. ಹಾಕುವ ಪದ್ಧತಿಯನ್ನು ತೆಗೆದು ಹಾಕಿದ ಕಾರಣ ವೈಯಕ್ತಿಕ ಫಲಾನುಭವಿಗಳಿಗೆ ಇನ್ನು ಸರಳೀಕರಣಗೊಳಿಸಿ ರೂ.12,000 ಗಳನ್ನು ಒಟ್ಟಾರೆಯಾಗಿ ಪಾವತಿಸುವ ಪದ್ಧತಿ ಚಾಲನೆಗೆ ಬಂದಿದೆ. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.15000/- ಗಳ ಪ್ರೋತ್ಸಾಹಧನವೂ ದೊರೆಯುತ್ತದೆ. ಇದರಿಂದ ವೈಯಕ್ತಿಕ ಫಲಾನುಭವಿಗಳ 20 ದಿವಸ ಮಾನವ ದಿನಗಳ ಉಳಿತಾಯ ಆಗುವುದಲ್ಲದೇ ಶೌಚಾಲಯ ನಿರ್ಮಿಸಿಕೊಂಡವರಿಗೆ ತಕ್ಷಣ ರೂ.12000 ಸಹಾಯಧನ ಸಿಗುವ ನೀತಿಯನ್ನು ರೂಪಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಪ್ರತಿಯೊಬ್ಬರಿಗೂ ಅನುದಾನದ ಪಾವತಿಯನ್ನು ತಕ್ಷಣವೇ ಪಾವತಿ ಮಾಡಲಾಗುವುದರಿಂದ, ಶೌಚಾಲಯ ಇಲ್ಲದೇ ಇರುವ ಎಲ್ಲ ಕುಟುಂಬಗಳು ಕೂಡಲೆ ಶೌಚಾಲಯ ಕಟ್ಟಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ನೀರಿನ ಟ್ಯಾಂಕ್‍ಗಳ ಸುರಕ್ಷತೆ : ಜಿ.ಪಂ. ಸಿಇಓ ಕೃಷ್ಣ ಉದಪುಡಿ ಸೂಚನೆ

ಕೊಪ್ಪಳ,ಡಿ.30(ಕರ್ನಾಟಕವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ನೀರಿನ ಟ್ಯಾಂಕ್‍ಗಳ ಸುರಕ್ಷತೆ ಕುರಿತಂತೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
      ಕೊಪ್ಪಳ ನಗರದ ಎನ್.ಜಿ.ಓ. ಕಾಲೋನಿಯಲ್ಲಿ ಇತ್ತೀಚಿಗೆ, ಮುಕ್ತಾಯ ಹಂತದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ ಕುಸಿದು ಅನಾಹುತ ಸಂಭವಿಸಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಇಂತಹ ನೂರಾರು ಕುಡಿಯುವ ನೀರಿನ ಟ್ಯಾಂಕರ್‍ಗಳನ್ನು ನಿರ್ಮಿಸಲಾಗಿದೆ.  ಅಲ್ಲದೆ ಅಗತ್ಯತೆಗೆ ಅನುಸಾರವಾಗಿ ಇನ್ನೂ ನಿರ್ಮಿಸಲಾಗುತ್ತಿದೆ.  ಜಿಲ್ಲೆಯಲ್ಲಿ ಸದ್ಯ ಇರುವ ಹಾಗೂ ನಿರ್ಮಾಣ ಹಂತದಲ್ಲಿರುವ ಎಲ್ಲ ನೀರಿನ ಟ್ಯಾಂಕ್‍ಗಳ ಸ್ಥಿತಿ-ಗತಿ ಹಾಗೂ ಗುಣಮಟ್ಟದ ಬಗ್ಗೆ ಜಿಲ್ಲೆಯ ನಾಲ್ಕು ತಾಲೂಕಿನ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ, ಎರಡು ದಿನಗಳ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸಬೇಕು.  ಈಗಾಗಲೇ ನಿರ್ಮಿಸಿ ಹಳೆಯದಾಗಿರುವ, ಅಥವಾ ಬೀಳುವ ಸ್ಥಿತಿಯಲ್ಲಿ ಇರುವಂತಹ ಟ್ಯಾಂಕ್‍ಗಳನ್ನು ತಕ್ಷಣ ಗುರುತಿಸಿ, ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕರು ಮಾಹಿತಿ ನೀಡಿ :  ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಇಂತಹ ಯಾವುದಾದರೂ ನೀರಿನ ಘಟಕ ಕಂಡು ಬಂದಿದ್ದೇ ಆದರೆ ತಕ್ಷಣ ಮಾಹಿತಿಯನ್ನು ಆಯಾ ಗ್ರಾ.ಪಂ. ಪಿಡಿಓ ಅಥವಾ ತಾ.ಪಂ. ಇಓ ಅವರಿಗೆ ನೀಡಬೇಕು.  ಸಾರ್ವಜನಿಕರು ನೀಡುವ ಮಾಹಿತಿಯನ್ನು ಆಧರಿಸಿ ತಜ್ಞರಿಂದ ಪರಿಶೀಲನೆ ನಡೆಸಲಾಗುವುದು.  ಅಲ್ಲದೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು.  ಸಾರ್ವಜನಿಕರು ಇದಕ್ಕೆ ಸಹಕರಿಸಿ ಅನಾಹುತ ಆಗುವುದನ್ನು ತಪ್ಪಿಸಬಹುದಾಗಿದೆ ಎಂದು  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಪ್ಲೆಕ್ಸ್ ಅಳವಡಿಕೆಗೆ ನಗರಸಭೆಯಿಂದ ಪರವಾನಿಗೆ ಕಡ್ಡಾಯ

ಕೊಪ್ಪಳ,ಡಿ.30(ಕರ್ನಾಟಕವಾರ್ತೆ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ನಗರಸಭೆಯ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ, ಅಂತಹ ಫ್ಲೆಕ್ಸ್‍ಗಳನ್ನು ತೆರವುಗೊಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
         ಸಾರ್ವಜನಿಕರು, ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಧಾರ್ಮಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಂಘಟಕರು, ಕಾರ್ಯಕರ್ತರು ಹಾಗೂ ಇನ್ನಿತರೇ ವ್ಯವಹಾರ ನಡೆಸುತ್ತಿರುವ ಉದ್ದಿಮೆ/ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳ ಬಗ್ಗೆ ಸ್ವಾಗತ ಕೋರುವ ಬ್ಯಾನರ್ ಅಥವಾ ಪ್ಲೆಕ್ಸ್ ಅಳವಡಿಕೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆಯ ಪರವಾನಿಗೆ ಕಡ್ಡಾಯವಾಗಿದೆ.  ಕಳೆದ ಅ.01 ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ಫ್ಲೆಕ್ಸ್/ಬ್ಯಾನರ್ ಅಳವಡಿಕೆಗೆ ದರ ನಿಗದಿಪಡಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಫ್ಲೆಕ್ಸ್ ಅಥವಾ ಬ್ಯಾನರ್ ಅಳವಡಿಸಬೇಕಾದಲ್ಲಿ ವಿವಿಧ ಷರತ್ತಿಗೊಳಪಟ್ಟು ನಗರಸಭೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆದು ಅಳವಡಿಸಿಕೊಳ್ಳಬಹುದು.  ಅಳವಡಿಸುವ ಬ್ಯಾನರ್/ಪ್ಲೆಕ್ಸ್ ಕೆಳಗಡೆ ರಶೀದಿ ಸಂಖ್ಯೆ, ಪರವಾನಿಗೆ ಪಡೆದ ಫ್ಲೆಕ್ಸ್‍ಗಳ ಸಂಖ್ಯೆ ಮತ್ತು ಮೊಬೈಲ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು, ಪರವಾನಿಗೆ ಪಡೆದ ದಿನಗಳಿಗೆ ಮಾತ್ರ ಬ್ಯಾನರ್/ಪ್ಲೆಕ್ಸ್‍ಗಳನ್ನು ಅಳವಡಿಸಬೇಕು, 2*3 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.100/-, 5*6 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.200/-, 8*10 ಅಡಿ ಅಳತೆಗೆ ಪ್ರತಿ ವಾರಕ್ಕೆ ರೂ.300/-, ಅದಕ್ಕಿಂತಲೂ ಮೇಲ್ಪಟ್ಟ ಅಳತೆಗೆ ಪ್ರತಿ ವಾರಕ್ಕೆ ರೂ.500 ಪಾವತಿಸಬೇಕು. ಪರವಾನಿಗೆ ಪಡೆಯದೇ ಅಳವಡಿಸಲಾದ ಬ್ಯಾನರ್/ಪ್ಲೆಕ್ಸ್‍ಗಳನ್ನು ನಗರಸಭೆಯಿಂದ ತೆರವುಗೊಳಿಸಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Monday, 29 December 2014

ಗ್ಯಾಸ್ ಸಬ್ಸಿಡಿ ನೇರ ನಗದು ವರ್ಗಾವಣೆ ಜ. 01 ರಿಂದ ಜಾರಿ : ದಾಖಲೆ ಸಲ್ಲಿಸಲು ಸೂಚನೆ

ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ): ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವ ಕೊಪ್ಪಳ ಜಿಲ್ಲೆಯ ಗ್ರಾಹಕರಿಗೆ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ವ್ಯವಸ್ಥೆ ಜ. 01 ರಿಂದ ಜಾರಿಗೆ ಬರಲಿದ್ದು, ಸಂಬಂಧಪಟ್ಟ ಗ್ರಾಹಕರು ಬ್ಯಾಂಕ್ ಹಾಗೂ ಗ್ಯಾಸ್ ಏಜೆನ್ಸಿಯವರಿಗೆ ಅಗತ್ಯ ದಾಖಲೆಗಳನ್ನು ಕೂಡಲೆ ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನ್ಯಾಚೂರಲ್ ಗ್ಯಾಸ್ ಮಂತ್ರಾಲಯವು ಎಲ್‍ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಸೌಲಭ್ಯ ವರ್ಗಾವಣೆ ಮಾಡುವ ಯೋಜನೆ (ಡಿಬಿಟಿಎಲ್) ಯನ್ನು ಜ. 01 ರಿಂದ ಕೊಪ್ಪಳ ಜಿಲ್ಲೆಗೆ ಜಾರಿಗೊಳಿಸಿದೆ. ಇದರನ್ವಯ ಪ್ರತಿ ಎಲ್‍ಪಿಜಿ (ಗ್ಯಾಸ್) ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್‍ಬುಕ್ ಹಾಗೂ ಗ್ರಾಹಕರ ಸಂಖ್ಯೆಯ ಬಗ್ಗೆ ಗ್ಯಾಸ್ ಕಾರ್ಡ್ ಇವಿಷ್ಟು ದಾಖಲೆಗಳ ಪ್ರತಿಯನ್ನು ಗ್ಯಾಸ್ ಏಜೆನ್ಸಿ ಅವರಲ್ಲಿ ಲಭ್ಯವಿರುವ ನಮೂನೆ 1, 2 ಮತ್ತು 04 ಅನ್ನು ಭರ್ತಿ ಮಾಡಿ, ಆಯಾ ಗ್ಯಾಸ್ ಏಜೆನ್ಸಿ ಅವರಿಗೆ ಕೂಡಲೆ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಈ ಯೋಜನೆಯನ್ವಯ ಜನವರಿ 01 ರಿಂದ ಎಲ್‍ಪಿಜಿ ಸಹಾಯಧನ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ. ಒಂದು ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಅನ್ನು ಮುಕ್ತ ಮಾರುಕಟ್ಟೆಯ ಸಬ್ಸಿಡಿ ರಹಿತ ದರವನ್ನು ನೀಡಿ ಪಡೆಯಬೇಕಾಗುತ್ತದೆ. ಗ್ರಾಹಕರಲ್ಲಿ ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಬ್ಯಾಂಕ್ ಖಾತೆಯ ಪಾಸ್‍ಬುಕ್ ಪ್ರತಿ ಹಾಗೂ ಗ್ಯಾಸ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಗ್ಯಾಸ್ ಮಳಿಗೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ಗ್ಯಾಸ್ ಏಜೆನ್ಸಿ ಅವರನ್ನು ಸಂಪರ್ಕಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಳಪೆ ಔಷಧಿ : ಸಾರ್ವಜನಿಕರಿಗೆ ಸೂಚನೆ

ಕೊಪ್ಪಳ,ಡಿ.29(ಕರ್ನಾಟಕವಾರ್ತೆ): ಕೆಲವು ಕಂಪನಿಗಳು ತಯಾರಿಸಿರುವ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬುದಾಗಿ ಔಷಧ ನಿಯಂತ್ರಣ ಇಲಾಖೆಯ ಔಷಧಿ ವಿಶ್ಲೇಷಕರು ಘೋಷಿಸಿರುವುದರಿಂದ, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ಇಂತಹ ಔಷಧಿಯನ್ನು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಹಾಗೂ ಔಷಧದ ಹೆಸರು, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ಹೆಸರಿನ ಯಾವುದೇ ಔಷಧಿಗಳನ್ನು ವಿತರಿಸಬಾರದು ಎಂದು ಕೊಪ್ಪಳದ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.
         ಡಿಸ್ಪಿ-ಎಸ್ (ಡೈಕ್ಲೋಫಿನ್ಯಾಕ್ ಪೋಟಾಷಿಯಂ ಮತ್ತು ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್ಸ್), ಎಂಟಿ134272, ಮೆ.ಮಾಸ್ಕೋಟ್ ಹೇಲ್ತ್ ಸೀರೀಸ್ ಪ್ರೈ.ಲಿ. ಹರಿದ್ವಾರ. ಪೇಬ್ಲೋ-ಡಿ (ಪ್ಯಾಂಟೋಪ್ರಜೋಲ್ ಹಾಗೂ ಡಾಮಪೆರಿಡೋನ್ ಟ್ಯಾಬ್ಲೆಟ್ಸ್), ಡಿ3093, ಮೆ.ಡಿ.ಎಮ್.ಫಾರ್ಮಾ, ಸೋಲನ್(ಹೆಚ್.ಪಿ). ರೋವೇಟ್ (ರಬೇಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐಪಿ), ಡಿ3893, ಮೆ.ಡಿ.ಎಮ್.ಫಾರ್ಮಾ, ಸೋಲನ್ (ಹೆಚ್.ಪಿ.). ಸಿಪ್ರೋಮ್-500(ಸಿಪ್ರೋಫ್ಲೋಕ್ಸಾಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ.), ಎನ್‍ಡಿಟಿ-220, ಮೆ. ಪಾರ್ಕಿನ್ ಲ್ಯಾಬೋರೇಟರೀಸ್, ರೂರ್ಕಿ. ಸಲ್ಛಾಡಿಮೈಡಿನ್ ಟ್ಯಾಬ್ಲೆಟ್ಸ್ ಬಿಪಿ ವೆಟ್ 0.5 ಗ್ರಾಂ, ಎಸ್‍ಡಿಎಮ್044, ಮೆ.ಫ್ಲೌರಿಷ್ ಫಾರ್ಮಾ, ದಮನ್. ರಾಕ್ಸಿಸನ್ (ರಾಕ್ಸಿಥ್ರೋಮೈಸಿನ್ ಟ್ಯಾಬ್ಲೆಟ್ಸ್ ಐ.ಪಿ., ಎಸ್.ಟಿ.-12834, ಮೆ.ಸನ್‍ಲೈಫ್ ಸೈನ್ಸಸ್,  ರೂರ್ಕಿ. ಬಿಕೈನ್-ಎ ಇಂಜೆಕ್ಷನ್ (ಲೊಗ್ನೋಕೈನ್ ಹೈಡ್ರೋಕ್ಲೋರೈಡ್ ಮತ್ತು ಆಡ್ರಿನಲೈನ್ ಬೈಟಾರ್ಟರೇಟ್ ಇಂಜೆಕ್ಷನ್ ಐ.ಪಿ.), ಎಂವಿ3ಕೆ28, ಮೆ.ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್‍ಸ್, ಸೋಲನ್. ಸಿಲಿಡಾನ್ (ಪ್ರೋಪಿಫೆನಜೋನ್, ಪ್ಯಾರಾಸಿಟಮೋಲ್ ಮತ್ತು ಕೆಫಿನ್ ಟ್ಯಾಬ್ಲೆಟ್ಸ್), ಬಿಟಿ-13115, ಮೆ.ಪ್ಯಾಂಥರ್ ಹೇಲ್ತ್ ಕೇರ್ ಪ್ರೈ.ಲಿ. ರೂರ್ಕಿ. ಫೆರ್ರೌಸ್ ಸಲ್ಫೇಟ್ ಮತ್ತು ಫೋಲಿಕ್ ಆ್ಯಸಿಡ್ ಟ್ಯಾಬ್ಲೆಟ್ಸ್, ಐಎಫ್‍ಎಲ್-13-423, ಮೆ.ಹೆಚ್.ಎಲ್.ಎಲ್.ಲೈಫ್ ಕೇರ್ ಲಿ. ಕಣಗಲಾ. ಕಾರ್ಡೆಮ್-30 ಟ್ಯಾಬ್ಲೆಟ್ಸ್ (ಡಿಲ್ಟಿಯಾಜೆಮ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್), 03402ಪಿ, ಮೆ.ಎಎಫ್‍ಡಿ ಲ್ಯಾಬ್ ಪ್ರೈ.ಲಿ., ಬೆಂಗಳೂರು. ರಿವಾಜ್ (ರಬೆಪ್ರಜೋಲ್ ಟ್ಯಾಬ್ಲೆಟ್ಸ್ ಐಪಿ), ಡಿ3900, ಮೆ.ಡಿ.ಎಮ್.ಫಾರ್ಮಾ, ಸೋಲನ್.
        ಈ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಈ ಮೂಲಕ ಎಚ್ಚರಿಸಲಾಗಿದೆ. ಹಾಗೂ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ, ಅಥವಾ ವಿತರಣೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರು- 08539-221501 ಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿ.30 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಕೊಪ್ಪಳ,ಡಿ.29(ಕರ್ನಾಟಕವಾರ್ತೆ): ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ, ಕಾನೂನು ಮಾಪನಶಾಸ್ತ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ನಿ) ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಡಿ.30 ರಂದು ಬೆಳಿಗ್ಗೆ 10.30 ಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಅಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
          ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ: ಸುರೇಶ ಬಿ.ಇಟ್ನಾಳ, ಪ್ರಾಚಾರ್ಯ ಪರೀಕ್ಷಿತರಾಜ, ವಕೀಲರಾದ ಸಾವಿತ್ರಿ ಮುಜುಮ್‍ದಾರ ಅವರು ಪಾಲ್ಗೊಳ್ಳುವರು. ವಕೀಲರಾದ ವ್ಹಿ.ಎಂ. ಭೂಸನೂರಮಠ ಅವರು ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುವರು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬೂ ಅವರು ತಿಳಿಸಿದ್ದಾರೆ.

ಉಚಿತ ಹೈನುಗಾರಿಕೆ ತರಬೇತಿ ಶಿಬಿರ

ಕೊಪ್ಪಳ,ಡಿ.29(ಕರ್ನಾಟಕವಾರ್ತೆ): ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟ ಇವರ ವತಿಯಿಂದ ಉಚಿತ ಹೈನುಗಾರಿಕೆ ತರಬೇತಿ ಶಿಬಿರವನ್ನು ಜನೇವರಿ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
          ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಡಿ.31 ರೊಳಗಾಗಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್‍ಮಿಲ್ ಆವರಣ, ಗದ್ದನಕೇರಿ ರೋಡ, ಬಾಗಲಕೋಟ-587103 ದೂರವಾಣಿ ಸಂಖ್ಯೆ: 08354-244028-244048, ಮೊ.9482630790 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ವಿವಿಧ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ,ಡಿ.29(ಕರ್ನಾಟಕವಾರ್ತೆ): ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕ/ಯುವತಿಯರಿಗೆ ವಿವಿಧ ತರಬೇತಿಗಳಾದ ಮೊಬೈಲ್ ಫೋನ್ ಸರ್ವಿಸಿಂಗ್ (30 ದಿನಗಳು) ಹಾಗೂ ಹೈನುಗಾರಿಕೆ (6 ದಿನಗಳು) ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
         ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಜ.08 ಕೊನೆಯ ದಿನವಾಗಿದ್ದು, ಜ.09 ರ ಬೆಳಿಗ್ಗೆ 10.30 ಕ್ಕೆ ಸಂದರ್ಶನ ಜರುಗಲಿದೆ. ತರಬೇತಿಯು ಜ.12 ರಿಂದ ಪ್ರಾರಂಭವಾಗಲಿದೆ. ಅರ್ಜಿದಾರರು 18 ರಿಂದ 40 ವರ್ಷದವರಾಗಿರಬೇಕು, 8ನೇ ತರಗತಿ ಉತ್ತೀರ್ಣರಾಗಿರಬೇಕು, ವಾರ್ಷಿಕ ಆದಾಯ 40,000 ಮೀರಿರಬಾರದು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು, ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು.
         ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ : 08539-231038 ಸಂಪರ್ಕಿಸಬಹುದು ಎಂದು ಎಸ್‍ಬಿಹೆಚ್ ಆರ್‍ಸೆಟಿಯ ನಿರ್ದೇಶಕರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ವಸತಿ ಯೋಜನೆ ಫಲಾನುಭವಿಗಳ ಪಟ್ಟಿ ಪ್ರಕಟ : ಆಕ್ಷೇಪಣೆ ಆಹ್ವಾನ

ಕೊಪ್ಪಳ,ಡಿ.29(ಕರ್ನಾಟಕವಾರ್ತೆ): ಕೇಂದ್ರ ಪುರಸ್ಕøತ ಯೋಜನೆಯಾದ ರಾಜೀವ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ಕೊಪ್ಪಳದಲ್ಲಿ 337 ಗೃಹ ನಿರ್ಮಾಣಕ್ಕಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಕುರಿತು ಕೊಪ್ಪಳ ನಗರಸಭೆಯು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
       ರಾಜೀವ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ವಸತಿ ಯೋಜನೆ ಅನುಷ್ಠಾನಗೊಳಿಸಲು ಕೊಪ್ಪಳದ ಹಮಾಲರ ಕಾಲೋನಿಯಲ್ಲಿ 223 ಹಾಗೂ ಶ್ರೀಶೈಲ ನಗರದಲ್ಲಿ 114 ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ಸಂಬಂಧಿಸಿದ ವಾರ್ಡ್‍ಗಳ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ನಗರಸಭೆಯ ಸೂಚನಾ ಫಲಕದಲ್ಲಿ ಪ್ರಕಟಿಸಿದೆ, ಇವುಗಳಿಗೆ ಸಂಬಂಧಪಟ್ಟಂತೆ ಯಾರಾದರೂ ಆಕ್ಷೇಪಣೆ ಸಲ್ಲಿಸಲು ಇಚ್ಛಿಸಿದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಜ.10 ರೊಳಗಾಗಿ ಪೌರಾಯುಕ್ತರು, ನಗರಸಭೆ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜ.02 ರಂದು ವಣಬಳ್ಳಾರಿಯಲ್ಲಿ ತೊಗಲು ಗೊಂಬೆಯಾಟ

ಕೊಪ್ಪಳ ಡಿ.29(ಕರ್ನಾಟಕವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ದುರ್ಗಾದೇವಿ ತೊಗಲುಗೊಂಬೆ ಆಟಗಾರರ ಸಾಂಸ್ಕøತಿಕ ಕಲಾ ಸಂಘ ಹೊಸೂರು ಇವರ ಸಂಯುಕ್ತ ಆಶ್ರಯದಲ್ಲಿ ರಾವಣನ ಸಂಹಾರ-ತೊಗಲು ಗೊಂಬೆ ಆಟ ಕಾರ್ಯಕ್ರಮ ಜ.02 ರಂದು ರಾತ್ರಿ. 9.30 ಕ್ಕೆ ವಣಬಳ್ಳಾರಿ ಗ್ರಾಮದಲ್ಲಿ ಜರುಗಲಿದೆ.
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಸದಸ್ಯೆ ಗಂಗಮ್ಮ ಗೋಸಲದಡ್ಡಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಗಣ್ಯರಾದ ಚಂದನಗೌಡ ಪೊಲೀಸ್ ಪಾಟೀಲ್, ಯಂಕಪ್ಪ ನವಲಿ, ಮುದುಕಪ್ಪ ಗೌಡ್ರು, ಉಮೇಶ ಹುಣಸನಹಟ್ಟಿ, ಫಕೀರಪ್ಪ ಹರಿಜನ, ಬಸಣ್ಣ ಪಟ್ಟೆದ್, ಮಲ್ಲಪ್ಪ ಇಟ್ಲಾಪುರ, ಕನಕಪ್ಪ ಕುರಿ, ವಾಸುದೇವ ಮುಂಡರಗಿ, ಮುದುಕಪ್ಪ ಪೊಲೀಸ್ ಪಾಟೀಲ್, ಬಗವಂತಪ್ಪ ಮ್ಯಾಗೇರಿ ಭಾಗವಹಿಸುವರು. ಗಂಗವ್ವ ಸಿಳಿಕ್ಯಾತಸ್ ಹೊಸೂರು ಇವರ ತಂಡದಿಂದ ರಾಮಾಯಣದಲ್ಲಿ ರಾವಣನ ಸನ್ನಿವೇಶದಲ್ಲಿ ರಾವಣನ ಸಂಹಾರ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Saturday, 27 December 2014

ಒತ್ತಡದ ಬದುಕು ನಿವಾರಣೆಗೆ ಕ್ರೀಡೆಗಳು ಸಹಕಾರಿ : ಡಿಸಿ ಆರ್.ಆರ್. ಜನ್ನು


ಕೊಪ್ಪಳ ಡಿ. 27 (ಕ.ವಾ): ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸುವವರಿಗೆ ಕ್ರೀಡಾ ಕೂಟಗಳು ಕರ್ತವ್ಯ ದಕ್ಷತೆಯನ್ನು ಪುನಶ್ಚೇತನಗೊಳಿಸಿ, ಆತ್ಮಸ್ಥೈರ್ಯ ವೃದ್ಧಿಸಲು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು.
     ಕೊಪ್ಪಳ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
      ಪೊಲೀಸರು  ಸದಾ ಒತ್ತಡದ ನಡುವೆ ಕಾರ್ಯ ನಿರ್ವಹಿಸಬೇಕಾಗುತ್ತದೆ,  ಅಲ್ಲದೆ ದಿನದ 24 ಗಂಟೆಗಳೂ ಸಹ ಅವರು ಸಾರ್ವಜನಿಕರ ಸೇವೆಗೆ ಸನ್ನದ್ಧರಾಗಿರಬೇಕಾಗುತ್ತದೆ.  ಈ ರೀತಿಯ ಮಾನಸಿಕ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವವರಿಗೆ ಇಂತಹ ಕ್ರೀಡಾಕೂಟಗಳು ಮನಸ್ಸನ್ನು ಉಲ್ಲಸಿತಗೊಳಿಸುವುದರ ಜೊತೆಗೆ, ಅವರಲ್ಲಿ ಆತ್ಮ ಸ್ಥೈರ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.   ಪೊಲೀಸರು, ಮಾನಸಿಕ ಆರೋಗ್ಯದ ಜೊತೆ ಜೊತೆಗೆ ದೈಹಿಕ ಸದೃಢತೆಯನ್ನು ಕಾಯ್ದುಕೊಂಡು ಬರಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಕ್ರೀಡೆಗಳು ದೇಹಕ್ಕೆ ಶಕ್ತಿ ಹಾಗೂ ಸ್ಪೂರ್ತಿ ನೀಡುತ್ತವೆ.  ಕೊಪ್ಪಳದಲ್ಲಿ ಡಿ. 25 ರಂದು ಸಂಭವಿಸಿದ ನೀರಿನ ಬೃಹತ್ ಟ್ಯಾಂಕ್ ಕುಸಿತ ಸಂದರ್ಭದಲ್ಲಿ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕಾರ್ಮಿಕರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿದ ಪರಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದು, ಈ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಪ್ರಾರಂಭದಲ್ಲಿ ಸ್ವಾಗತ ಭಾಷಣ ನೆರವೇರಿಸಿದರು. ಕೊಪ್ಪಳ ಡಿವೈಎಸ್‍ಪಿ ರಾಜೀವ್  ಅವರು ವಂದಿಸಿದರು.  ಜಿಲ್ಲೆಯ ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಗ್ಯಾಸ್ ಸಬ್ಸಿಡಿ ನೇರ ನಗದು ವರ್ಗಾವಣೆ ಜ. 01 ರಿಂದ ಜಾರಿ : ದಾಖಲೆ ಸಲ್ಲಿಸಲು ಸೂಚನೆ

ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವ ಕೊಪ್ಪಳ ಜಿಲ್ಲೆಯ ಗ್ರಾಹಕರಿಗೆ ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ವ್ಯವಸ್ಥೆ ಜ. 01 ರಿಂದ ಜಾರಿಗೆ ಬರಲಿದ್ದು, ಸಂಬಂಧಪಟ್ಟ ಗ್ರಾಹಕರು ಬ್ಯಾಂಕ್ ಹಾಗೂ ಗ್ಯಾಸ್ ಏಜೆನ್ಸಿಯವರಿಗೆ ಅಗತ್ಯ ದಾಖಲೆಗಳನ್ನು ಕೂಡಲೆ ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
     ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನ್ಯಾಚೂರಲ್ ಗ್ಯಾಸ್ ಮಂತ್ರಾಲಯವು ಎಲ್‍ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಸೌಲಭ್ಯ ವರ್ಗಾವಣೆ ಮಾಡುವ ಯೋಜನೆ (ಡಿಬಿಟಿಎಲ್) ಯನ್ನು ಜ. 01 ರಿಂದ ಕೊಪ್ಪಳ ಜಿಲ್ಲೆಗೆ ಜಾರಿಗೊಳಿಸಿದೆ.  ಇದರನ್ವಯ ಪ್ರತಿ ಎಲ್‍ಪಿಜಿ (ಗ್ಯಾಸ್) ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್‍ಬುಕ್ ಹಾಗೂ ಗ್ರಾಹಕರ ಸಂಖ್ಯೆಯ ಬಗ್ಗೆ ಗ್ಯಾಸ್ ಕಾರ್ಡ್ ಇವಿಷ್ಟು ದಾಖಲೆಗಳ ಪ್ರತಿಯನ್ನು ಗ್ಯಾಸ್ ಏಜೆನ್ಸಿ ಅವರಲ್ಲಿ ಲಭ್ಯವಿರುವ ನಮೂನೆ 1, 2 ಮತ್ತು 04 ಅನ್ನು ಭರ್ತಿ ಮಾಡಿ, ಆಯಾ ಗ್ಯಾಸ್ ಏಜೆನ್ಸಿ ಅವರಿಗೆ ಕೂಡಲೆ ಸಲ್ಲಿಸಬೇಕು.  ಕೇಂದ್ರ ಸರ್ಕಾರದ ಈ ಯೋಜನೆಯನ್ವಯ ಜನವರಿ 01 ರಿಂದ ಎಲ್‍ಪಿಜಿ ಸಹಾಯಧನ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.  ಒಂದು ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ಅನ್ನು ಮುಕ್ತ ಮಾರುಕಟ್ಟೆಯ ಸಬ್ಸಿಡಿ ರಹಿತ ದರವನ್ನು ನೀಡಿ ಪಡೆಯಬೇಕಾಗುತ್ತದೆ.  ಗ್ರಾಹಕರಲ್ಲಿ ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಬ್ಯಾಂಕ್ ಖಾತೆಯ ಪಾಸ್‍ಬುಕ್ ಪ್ರತಿ ಹಾಗೂ ಗ್ಯಾಸ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಗ್ಯಾಸ್ ಮಳಿಗೆಯಲ್ಲಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಆಯಾ ಗ್ಯಾಸ್ ಏಜೆನ್ಸಿ ಅವರನ್ನು ಸಂಪರ್ಕಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 29 ರಂದು ಅಳವಂಡಿಯಲ್ಲಿ ಸಾಂಸ್ಕøತಿಕ ವಚನ ಸಂಗೀತ

ಕೊಪ್ಪಳ ಡಿ. 27 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಾರುತೇಶ್ವರ ಟ್ರಸ್ಟ್ ಅಳವಂಡಿ ಇವರ ಸಂಯುಕ್ತಾಶ್ರಯದಲ್ಲಿ ಸಾಂಸ್ಕøತಿಕ ವಚನ ಸಂಗೀತ ಕಾರ್ಯಕ್ರಮ ಡಿ. 29 ರಂದು ಸಂಜೆ 5 ಗಂಟೆಗೆ ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿ ನಡೆಯಲಿದೆ.
     ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು.  ವಕೀಲ ಗುರುರಾಜ ಹಳ್ಳಿಕೇರಿ ಉದ್ಘಾಟನೆ ನೆರವೇರಿಸುವರು.  ಈಶಣ್ಣ ಗುರುಬಸಪ್ಪ ಹಕ್ಕಂಡಿ ಜ್ಯೋತಿ ಬೆಳಗಿಸುವರು.  ಗ್ರಾ.ಪಂ. ಅಧ್ಯಕ್ಷ ರಮೇಶ್ ಕರಡಿ ಅಧ್ಯಕ್ಷತೆ ವಹಿಸಲಿದ್ದು, ಮಂಜುನಾಥ ಶಾಂತಪ್ಪ ನಾಗರಳ್ಳಿ, ಹನುಮರಡ್ಡಿ ನಾಗರಹಳ್ಳಿ, ಈಶಪ್ಪ ದೊಡ್ಡ ಈರಪ್ಪ ಜೋಳದ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಈ ಸಂದರ್ಭದಲ್ಲಿ ದಾನಯ್ಯ ರುದ್ರಯ್ಯ ಗವಿಮಠ ಅವರು ಸಂಗೀತ ಕಾರ್ಯಕ್ರಮ ನಡೆಸಲಿದ್ದು, ದೇವಪ್ಪ ಕಮ್ಮಾರ ಹಾರ್ಮೋನಿಯಂ ಹಾಗೂ ಎಂ.ಎಚ್. ಬೆಟಗೇರಿ ತಬಲಾ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

Friday, 26 December 2014

ಮಾಹಿತಿ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಿ- ಡಾ. ಶೇಖರ್ ಸಜ್ಜನರ್

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕಾಯ್ದೆಯನ್ನು ಎಲ್ಲ ಇಲಾಖಾ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ ಇಲಾಖಾ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಮಾಹಿತಿ ಹಕ್ಕು ಕಾಯ್ದೆ ಸಂಬಂಧಿತ ಅರ್ಜಿಗಳೆಂದರೆ ಸಾಕು, ಗೊಂದಲಕ್ಕೆ ಒಳಗಾಗುವ ಅಧಿಕಾರಿಗಳು, ಅರ್ಜಿಗಳ ವಿಲೇವಾರಿಯಲ್ಲಿ ಸಾಕಷ್ಟು ತೊಂದರೆ ಅನುಭವಿಸುವುದಲ್ಲದೆ, ವಿನಾಕಾರಣ ವಿಳಂಬ ಮಾಡುತ್ತಾರೆ.  ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇವಲ 6 ಅಧ್ಯಾಯ ಹಾಗೂ 32 ಸೆಕ್ಷನ್‍ಗಳಿವೆ.  ಇದನ್ನು ಸರಿಯಾಗಿ ಅರ್ಥೈಸಿಕೊಂಡು, ಕಾರ್ಯ ನಿರ್ವಹಿಸಿದರೆ, ಮಾಹಿತಿ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ಅಡ್ಡಿ ಎದುರಾಗುವುದಿಲ್ಲ.  ಮಾಹಿತಿ ಹಕ್ಕು ಕಾಯ್ದೆಯಲ್ಲಿ, ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವುದೇ ಆಗಿದ್ದು, ಅರ್ಜಿ ವಿಲೇವಾರಿಗಾಗಿಯೇ ಮಾಹಿತಿಯನ್ನು ಸೃಷ್ಟಿಸಿ ಕೊಡುವ ಅಗತ್ಯವಿಲ್ಲ.  ಇದನ್ನು ಸರಿಯಾಗಿ ಅರಿಯದ ಅಧಿಕಾರಿಗಳು, ಅರ್ಜಿದಾರರು ಕೇಳುವ ಅಸಂಬದ್ಧ ಮಾಹಿತಿಗೂ, ದಾಖಲೆ ಸೃಷ್ಟಿಗೆ ಮುಂದಾಗುತ್ತಾರೆ.  ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗಳಲ್ಲಿ ಕಾರಣ ಕೇಳುವುದು, ಯಾವಾಗ, ಹೇಗೆ, ಏಕೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ, ಅಲ್ಲದೆ ಅಗಾಧ ಪ್ರಮಾಣದ ಮಾಹಿತಿ ಕೋರಿ ಸಲ್ಲಿಸುವ ಅರ್ಜಿದಾರರಿಗೆ, ಕಚೇರಿಗೆ ಆಗಮಿಸಿ ಕಡತ ಪರಿಶೀಲಿಸಿಕೊಂಡು, ಅಗತ್ಯವಿರುವ ಮಾಹಿತಿ ಪಡೆಯುವಂತೆ ಸೂಚನೆ ನೀಡಬಹುದಾಗಿದೆ. ಬಿಪಿಎಲ್ ಕುಟುಂಬದ ಅರ್ಜಿದಾರರಿಗೆ 100 ಪುಟಗಳಷ್ಟು ಮಾಹಿತಿಯನ್ನು ಉಚಿತವಾಗಿ ಕೊಡಬೇಕು ಎನ್ನುವ ನಿಯಮವಿದ್ದರೂ, ಬಿಪಿಎಲ್ ಅರ್ಜಿದಾರರು ಅರ್ಜಿಯೊಂದಿಗೆ ಚಾಲ್ತಿ ವರ್ಷದ ಆದಾಯ ಪ್ರಮಾಣಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು.  ಈ ನಿಯಮ ಎಲ್ಲ ಜಾತಿಯವರಿಗೂ ಅನ್ವಯಿಸುತ್ತದೆ.  ಮಾಹಿತಿ ಹಕ್ಕು ಕಾಯ್ದೆಯಡಿ ಒಂದು ಅರ್ಜಿಯಲ್ಲಿ ಒಂದು ವಿಷಯದ ಬಗ್ಗೆ ಮಾತ್ರ ಮಾಹಿತಿ ಕೋರಬಹುದಾಗಿದ್ದು, ಹಲವು ವಿಷಯಗಳನ್ನು ಕೋರಿ ಅರ್ಜಿ ಬಂದಲ್ಲಿ, ಒಂದು ವಿಷಯಕ್ಕೆ ಮಾತ್ರ ಮಾಹಿತಿ ನೀಡಿ, ಉಳಿದ ವಿಷಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಹಿಂಬರಹ ನೀಡಬೇಕಾಗುತ್ತದೆ.  ಕಾಯ್ದೆಯಲ್ಲಿ ಯಾವುದೇ ನೌಕರರ ವಯಕ್ತಿಕ ವಿವರದ ಮಾಹಿತಿಯನ್ನು ಪಡೆಯಲು ಅವಕಾಶವಿಲ್ಲ.  ಮಾಹಿತಿ ಹಕ್ಕು ಆಯೋಗವು ಸಾರ್ವಜನಿಕ ಹಿತಾಸಕ್ತಿಯ ಸ್ನೇಹಿಯಾಗಿದ್ದು, ಮಾಹಿತಿ ನೀಡಲು ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳಿಗೆ ದಂಡ ವಿಧಿಸುತ್ತದೆ.  ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಅರಿವು ಮೂಡಿಸಲು ಎಲ್ಲ ಜಿಲ್ಲೆಗಳಲ್ಲೂ ನಿಯಮಿತವಾಗಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್ ಅವರು ಹೇಳಿದರು.
     ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಲಾಯಖ್ ಅಲಿ,  ಉಪಸ್ಥಿತರಿದ್ದರು.  ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ನೀರಿನ ಟ್ಯಾಂಕ್ ಕುಸಿತ ಪ್ರಕರಣ : ಇಬ್ಬರ ಅಮಾನತು, ತನಿಖೆಗೆ ಸಮಿತಿ ರಚನೆ

ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ) : ಕೊಪ್ಪಳ ನಗರದ ಎನ್‍ಜಿಓ ಕಾಲೋನಿ ಬಳಿ 15 ಲಕ್ಷ ಲೀ. ಸಾಮಥ್ರ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಇಂಜಿನಿಯರ್‍ಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಲಬುರಗಿ ವಲಯದ ಮುಖ್ಯ ಅಭಿಯಂತರ ಕೆ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
     ಕೊಪ್ಪಳ ನಗರಕ್ಕೆ ತುಂಗಭದ್ರಾ ಜಲಾಶಯದ ಮೂಲದಿಂದ ಸುಧಾರಿತ ನೀರು ಸರಬರಾಜು ಯೋಜನೆಯಡಿ 54. 07 ಕೋಟಿ ರೂ. ವೆಚ್ಚದ ಯೋಜನೆಗೆ 2010 ರಲ್ಲಿ ಮಂಜೂರಾತಿ ದೊರೆತಿದ್ದು, ಎರಡು ಪ್ಯಾಕೇಜ್‍ಗಳ ಈ ಟೆಂಡರ್‍ನಲ್ಲಿ ಬೆಂಗಳೂರಿನ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫಾಸ್ಟ್ರಕ್ಚರ್ಸ್ ಕಂಪನಿ ಕಾಮಗಾರಿಯ ಆದೇಶವನ್ನು ಮಾರ್ಚ್ 2012 ರಲ್ಲಿ ಪಡೆದುಕೊಂಡಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ.  ಟೆಂಡರ್ ಕರಾರಿನಂತೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿ, ಹೈಡ್ರಾಲಿಕ್ ಪರೀಕ್ಷೆಗೊಳಪಡಿಸಿ, ಒಂದು ವರ್ಷದ ಪರೀಕ್ಷಾ ಅವಧಿ ನಂತರ ಮಂಡಳಿಗೆ ಹಸ್ತಾಂತರಿಸಬೇಕಾಗಿರುತ್ತದೆ.  ಅದರನ್ವಯ ನೀರಿನ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡ ನಂತರ, ಗುತ್ತಿಗೆದಾರರು ಕಳೆದ ನ. 20 ರಿಂದ ಹೈಡ್ರಾಲಿಕ್ ಪರೀಕ್ಷೆ ನಡೆಸುತ್ತಿದ್ದರು.  ಡಿ. 25 ರಂದು ಮಧ್ಯಾಹ್ನ ಸುಮಾರು 3-30 ರ ಹೊತ್ತಿಗೆ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ನೀರಿನ ಟ್ಯಾಂಕ್ ಕುಸಿದು ಬಿದ್ದಿದ್ದು, ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿಯಬೇಕಿದೆ.  ಅದಕ್ಕಾಗಿ ಮಂಡಳಿಯಿಂದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರರಾವ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, ನವದೆಹಲಿಯ ಸಿಪಿಹೆಚ್‍ಇಇಓ ನಿವೃತ್ತ ಸಲಹೆಗಾರ ಸೇತುರಾಮ್, ಸಿವಿಲ್ ಏಡ್ ಮುಖ್ಯಸ್ಥ ಡಾ. ಜಯಸಿಂಹ ಅವರು ತನಿಖೆಯ ಇತರ ಸದಸ್ಯರಾಗಿರುತ್ತಾರೆ.  ಸಮಿತಿಗೆ ವರದಿ ಸಲ್ಲಿಸಲು ಒಂದು ತಿಂಗಳ ಕಾಲಮಿತಿ ನೀಡಲಾಗಿದೆ.  ನೀರಿನ ಟ್ಯಾಂಕ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ಮೇಲುಸ್ತುವಾರಿ ಜವಾಬ್ದಾರಿ ಹೊಂದಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹೆಚ್.ಎ. ಪ್ರಭಣ್ಣವರ್ ಹಾಗೂ ಕಿರಿಯ ಅಭಿಯಂತರ ಯಲ್ಲಪ್ಪ ಅಡವಿಹಳ್ಳಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.  ಅಲ್ಲದೆ ಗುತ್ತಿಗೆದಾರರಾದ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫಾಸ್ಟ್ರಕ್ಚರ್ಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದ್ದು, ತನಿಖಾ ಸಮಿತಿಯಿಂದ ವರದಿ ಬಂದ ನಂತರ ಕಾನೂನು ರಿತ್ಯಾ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಲಬುರಗಿ ವಲಯದ ಮುಖ್ಯ ಅಭಿಯಂತರ ಕೆ. ಕೃಷ್ಣಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ.02 ರಂದು ತಾಲೂಕ ಮಟ್ಟದ ಯುವಜನ ಮೇಳ : ವಿವಿಧ ಸ್ಪರ್ಧೆ

ಕೊಪ್ಪಳ,ಡಿ.26(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಳಕು ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿಗೆ ಕೊಪ್ಪಳ ತಾಲ್ಲೂಕ ಮಟ್ಟದ ಯುವಜನ ಮೇಳ ಕಾರ್ಯಕ್ರಮ ಜ.02 ಹೊರತಟ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ.
          ಭಾಗವಹಿಸುವ ಸ್ಪರ್ದಾಳುಗಳು ತಮ್ಮ ವೇಷ ಭೂಷಣ,ವಾದ್ಯಮೇಳಗಳೊಂದಿಂಗೆ, ಜ.02 ರಂದು ಬೆಳಿಗ್ಗೆ 9.00 ಗಂಟೆಗೆ ಸಂಘಟಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. 15 ರಿಂದ 35 ವರ್ಷ ವಯೋಮಿತಿಯೊಳಗಿನವರು ಮಾತ್ರ ಭಾಗವಹಿಸಬಹುದಾಗಿದೆ.  ಸ್ಪರ್ಧೆಗಳ ವಿವರ ಇಂತಿದೆ.  ಭಾವಗೀತೆ, ಜಾನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗೀಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನ ಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೋಳ್ಳುಕುಣಿತ, ದೋಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ. ಸೇರಿದಂತೆ ಒಟ್ಟು 17  ಸ್ಪರ್ಧೆಗಳನ್ನು ನಡೆಸಲಾಗುವುದು.
         ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಎನ್.ಎಸ್.ಪಾಟೀಲ್ ಮೊ.ನಂ :9980852735 ಮತ್ತು ಸಂಘಟಕರಾದ ಗಣೇಶ ಹೊರತಟ್ನಾಳ ಮೊ.ನಂ: 9844329277  ಸಂಪರ್ಕಿಸಬಹುದು ಎಂದು ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ : ಅರ್ಜಿ ಆಹ್ವಾನ

ಕೊಪ್ಪಳ,ಡಿ.26(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರದಿಂದ 2013ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಪ್ರಕಾಶಕರಿಗೆ 2013ನೇ ಸಾಲಿನ ಕನ್ನಡ ಪುಸ್ತಕ ಸೊಗಸು-2013 ಬಹುಮಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
           ಆಸಕ್ತರು ಪುಸ್ತಕದ ಹೆಸರು, ಲೇಖಕರ ಹೆಸರು, ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು ಹಾಗೂ ಪೂರ್ಣ ವಿಳಾಸದ ಸ್ವಯಂ ಮನವಯೊಂದಿಗೆ ಪುಸ್ತಕದ ಎರಡು ಪ್ರತಿಗಳನ್ನು ಸಲ್ಲಿಸಬಹುದು. ಅರ್ಜಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜ.07 ಕೊನೆಯ ದಿನವಾಗಿರುತ್ತದೆ.
           ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22484516/22107704 ಅಥವಾ ವೆಬ್‍ಸೈಟ್ ವಿಳಾಸ www.kannadapustakapradhikar.com  ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Wednesday, 24 December 2014

ಹೈ-ಕ ಜಿಲ್ಲೆಗಳ ಅಭಿವೃದ್ಧಿಗೆ ಈ ವರ್ಷ 1000 ಕೋಟಿ ರೂ. ಅನುದಾನ- ಸಿಎಂ ಸಿದ್ದರಾಮಯ್ಯ


ಕೊಪ್ಪಳ ಡಿ. 24 (ಕರ್ನಾಟಕ ವಾರ್ತೆ): ಹಲವು ಕ್ಷೇತ್ರಗಳಲ್ಲಿ ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ವರ್ಷ 1000 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ 371 (ಜೆ) ಕಲಂ ತಿದ್ದುಪಡಿ ಸೌಲಭ್ಯವನ್ನು ರಾಜ್ಯ ಸರ್ಕಾರ ಶೀಘ್ರ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಇದರಿಂದಾಗಿ ಈ ಭಾಗದ ಜಿಲ್ಲೆಯವರಿಗೆ ವಿಶೇಷ ಅನುದಾನ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿದೆ. ಈ ಭಾಗದ ಬಹಳಷ್ಟು ಯುವಕರಿಗೆ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ದೊರಕಲಿದೆ. ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ 600 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಇನ್ನೂ 400 ಕೋಟಿ ರೂ. ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು 1000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ವರ್ಷ ಇನ್ನೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ. ಈ ಅನುದಾನವನ್ನು ಹೊರತುಪಡಿಸಿ, ಡಾ. ನಂಜುಂಡಪ್ಪ ಅವರ ವರದಿಯನ್ವಯ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ನೀಡಿದ ವರದಿಯನ್ವಯ ಪ್ರತ್ಯೇಕ ಅನುದಾನವನ್ನು ಈ ಭಾಗದ ಜಿಲ್ಲೆಗಳಿಗೆ ಒದಗಿಸಲಾಗುವುದು. ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಗೆ ಉತ್ಪಾದನೆಯ ಕೊರತೆ ಕಾರಣವಾಗಿದೆ. ಒಂದು ವೇಳೆ ಹೆಚ್ಚಿನ ವಿದ್ಯುತ್ ಉತ್ಪಾದನೆಯಾದಲ್ಲಿ, ಅದಕ್ಕೆ ಪೂರಕವಾಗಿ ಕಾರಿಡಾರ್ ವ್ಯವಸ್ಥೆ ಇಲ್ಲ. ಇನ್ನು ಎರಡು ವರ್ಷದೊಳಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಂಡು ವಿದ್ಯುತ್ ಸಮಸ್ಯೆ ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕುಡಿಯುವ ನೀರಿನ ಯೋಜನೆಗೆ 750 ಕೋಟಿ : ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ನೂರಾರು ಗ್ರಾಮಗಳು ಶುದ್ಧ ಕುಡಿಯುವ ನೀರು ಸರಬರಾಜಿನ ತೊಂದರೆಯನ್ನು ಎದುರಿಸುತ್ತಿವೆ. ಇದನ್ನು ನಿವಾರಿಸಲು ಈ ಭಾಗದ 329 ಗ್ರಾಮಗಳಿಗೆ ನಾರಾಯಣಪುರ ಜಲಾಶಯದ ಕೃಷ್ಣಾ ಹಿನ್ನೀರಿನಿಂದ ಶುದ್ಧ ಕುಡಿಯುವ ನೀರು ಒದಗಿಸುವ 750 ಕೋಟಿ ರೂ. ಗಳ ವೆಚ್ಚದ ಬೃಹತ್ ಯೋಜನೆಗೆ ಶೀಘ್ರದಲ್ಲೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಈ ಯೋಜನೆಯ ಜಾರಿಯಿಂದ 329 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದರು.
ಕುಷ್ಟಗಿಗೆ 24*7 ಕುಡಿಯುವ ನೀರು : ಕುಷ್ಟಗಿ ಪಟ್ಟಣಕ್ಕೆ 24*7 ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲು ಈಗಾಗಲೆ 24 ಕೋಟಿ ರೂ.ಗಳ ಮೊತ್ತಕ್ಕೆ ಟೆಂಡರ್ ಪ್ರಕ್ರಿಯೆ ಆಗಿದ್ದು, ನೀರು ವಿತರಣಾ ಪೈಪ್‍ಲೈನ್ ಇತ್ಯಾದಿ ಕಾಮಗಾರಿಗೆ 25 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗುವುದು. ಅಲ್ಲದೆ ಕುಷ್ಟಗಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಹಾಗೂ ರಸ್ತೆ ಸುಧಾರಣಾ ಕಾಮಗಾರಿಗೆ 55 ಕೋಟಿ ರೂ. ಅನುದಾನ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಕನಕ-ವಾಲ್ಮೀಕಿ ಭವನಕ್ಕೆ ಹೆಚ್ಚುವರಿ ಅನುದಾನ : ಕುಷ್ಟಗಿ ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಈಗಾಗಲೆ 01 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ ಶೀಘ್ರದಲ್ಲೇ ಕನಕ ಭವನ ನಿರ್ಮಾಣಕ್ಕೂ 01 ಕೋಟಿ ರೂ. ಅನುದಾನ ಒದಗಿಸಲಾಗುವುದು. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ, ಬಡಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದ್ದು, ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕುಷ್ಟಗಿ ತಾಲೂಕಿಗೆ ಈಗಾಗಲೆ 20 ಕೋಟಿ ರೂ. ಅನುದಾನ ಒದಗಿಸಿದೆ. ಕೃಷ್ಣಾ-ಬಿ ಸ್ಕೀಂ ಮೂಲಕ ಈ ಭಾಗಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸುವ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದೆ, ಇಲ್ಲಿನ ರೈತರು ಮಳೆ ಮತ್ತು ಬೋರ್‍ವೆಲ್ ನೀರಾವರಿ ಆಶ್ರಯಿಸಿದ್ದು, ಈ ಭಾಗದ ಕೆರೆಗಳನ್ನು ತುಂಬಿಸುವಂತಹ ಯೋಜನೆಗಳಿಗೆ ಮಂಜೂರಾತಿ ನೀಡುವಂತೆ ಮುಖ್ಯಮಂತ್ರಿಗಳಿಎ ಮನವಿ ಮಾಡಿದರು.
ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಕೃಷ್ಣಾ- ಬಿ ಸ್ಕೀಂ ಯೋಜನೆಯಲ್ಲಿ ಈ ಭಾಗಕ್ಕೆ ಹೆಚ್ಚುವರಿಯಾಗಿ 5 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಬೇಕು. ಗದಗ-ವಾಡಿ ರೈಲ್ವೆ ಯೋಜನೆಗೆ ಭೂಸ್ವಾಧೀನ ಕಾರ್ಯ ರಾಜ್ಯ ಸರ್ಕಾರದ ಹೊಣೆಯಾಗಿದ್ದು, ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ಹಾಲಪ್ಪ ಆಚಾರ್, ಸುರೇಶ್ ಭೈರತಿ, ಹುನಗುಂದ ಶಾಸಕ ಕಾಶಪ್ಪನವರ್, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಶ್ರೀಶೈಲ ದಳವಾಯಿ, ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದಶಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಮಾಜಿ ಶಾಸಕರುಗಳಾದ ಅಮರೇಗೌಡ ಬಯ್ಯಾಪುರ, ಬಸವರಾಜ ಹಿಟ್ನಾಳ್, ಶರಣಪ್ಪ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸ್ವಾಗತಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ವಂದಿಸಿದರು. ಕುಷ್ಟಗಿ ವಿಧಾನಸಭಾ ಕ್ಷೇತ್ರದ ಹತ್ತು ಹಲವು ಯೋಜನೆಗಳಿಗೆ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊಪ್ಪಳ ಭೇಟಿ

ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಕೊಪ್ಪಳ ನಗರಕ್ಕೆ ಭೇಟಿ ನೀಡಿ ಮೆಡಿಕಲ್ ಕಾಲೇಜು ನೂತನ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು, ನಂತರ ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಮುಖ್ಯಮಂತ್ರಿಗಳಿಂದ ಕುಷ್ಟಗಿಯಲ್ಲಿ ಜನತಾದರ್ಶನಕೊಪ್ಪಳ ಡಿ. 24 (ಕರ್ನಾಟಕ ವಾರ್ತೆ) : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕುಷ್ಟಗಿಯಲ್ಲಿ ಬುಧವಾರದಂದು ಜನತಾದರ್ಶನ ನಡೆಸಿ, ಸಾರ್ವಜನಿಕರ ಕುಂದುಕೊರತೆ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದರು.
      ಸಾರ್ವಜನಿಕರ ಕುಂದುಕೊರತೆ ಅಹವಾಲು ಅರ್ಜಿಗಳನ್ನು ಸ್ವೀಕರಿಸುವ ಸಲುವಾಗಿ ಮುಖ್ಯಮಂತ್ರಿಗಳ ಜನತಾದರ್ಶನವನ್ನು ನಡೆಸಲು ಕುಷ್ಟಗಿಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವ ಸಮಾರಂಭದ ವೇದಿಕೆಯ ಪಕ್ಕದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.  ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಕುಷ್ಟಗಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾದರ್ಶನದಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳ ಅರ್ಜಿಗಳನ್ನು ಸ್ವೀಕರಿಸಿದರು.   ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ, ಶಾಸಕರುಗಳಾದ ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ,ಡಿ.24(ಕರ್ನಾಟಕ ವಾರ್ತೆ): ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಡಿ.25 ರಿಂದ 27 ರವರೆಗೆ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
     ಸಚಿವರು ಡಿ. 25 ಹಾಗೂ 26 ರಂದು ಕಾರಟಗಿಯಲ್ಲಿದ್ದು ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ನಡೆಸಿ ವಾಸ್ತವ್ಯ ನಡೆಸುವರು. ಡಿ.27 ರಂದು ಕನಕಗಿರಿ ಕ್ಷೇತ್ರದ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ನಡೆಸಿ ಸಂಜೆ 4 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Tuesday, 23 December 2014

ಅಭಿವೃದ್ಧಿ ಯೋಜನೆಗಳು : ಸಿಎಂ ಸ್ವಾಗತಕ್ಕೆ ಕೊಪ್ಪಳ ಮತ್ತು ಕುಷ್ಟಗಿ ಸಜ್ಜುಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ): ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಅಲ್ಲದೆ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 24 ರಂದು ಕೊಪ್ಪಳ ಮತ್ತು ಕುಷ್ಟಗಿ ಪಟ್ಟಣಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಹಲವು ಸಚಿವರು ಸಹ ಕೊಪ್ಪಳ ಜಿಲ್ಲೆಗೆ  ಆಗಮಿಸಲಿದ್ದಾರೆ.  ಇವರೆಲ್ಲರ ಸ್ವಾಗತಕ್ಕೆ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.
     ಭತ್ತದ ನಾಡು ಎನಿಸಿರುವ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಗೆ ಪೂರಕವೆನಿಸಿರುವ ಹಲವಾರು ಮಹತ್ವಪೂರ್ಣ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸುವುದರ ಜೊತೆಗೆ, ಜಿಲ್ಲೆಯ ಪ್ರಗತಿಯ ಬಗ್ಗೆ ಖುದ್ದಾಗಿ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಕೊಪ್ಪಳ ನಗರ ಮತ್ತು ಕುಷ್ಟಗಿ ಪಟ್ಟಣ ಸಜ್ಜಾಗಿದ್ದು, ಕೊಪ್ಪಳ ಮತ್ತು ಕುಷ್ಟಗಿಯ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಭರದಿಂದ ಸಾಗಿದೆ.  ಅಲ್ಲದೆ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರುವ ಹಲವಾರು ಕಟೌಟ್‍ಗಳು  ಎಲ್ಲೆಡೆ ರಾರಾಜಿಸುತ್ತಿವೆ.  ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯ ರಸ್ತೆ ನಿರ್ಮಾಣ ಕಾರ್ಯಕ್ಕೆ ವೇಗ ದೊರೆತಿದ್ದು, ನಗರದಲ್ಲಿ ವಿಶೇಷ ಸ್ವಾಗತ ಕಮಾನುಗಳನ್ನು ಜೋಡಿಸಲಾಗಿದೆ.  ಕೊಪ್ಪಳ-ಕುಷ್ಟಗಿ   ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ.
     ಮುಖ್ಯಮಂತ್ರಿಗಳು ಕೊಪ್ಪಳ ನಗರಕ್ಕೆ ಆಗಮಿಸುವುದಕ್ಕೂ ಮುನ್ನ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಲಿದ್ದು, ಅಧಿಕಾರಿಗಳು ಇದಕ್ಕಾಗಿ ಕಟ್ಟಡ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಿದ್ಧತೆ ಕೈಗೊಂಡಿದ್ದಾರೆ.  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದು, ಸಭಾಂಗಣದ ವ್ಯವಸ್ಥೆ ಹಾಗೂ ಭದ್ರತೆ ವ್ಯವಸ್ಥೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಹಲವು ಪ್ರಮುಖರು ಸಿಎಂ ಅವರ ಕಾರ್ಯಕ್ರಮ ಕುರಿತಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ.
      ಕಾರ್ಯಕ್ರಮದ ಸಿದ್ಧತೆ ಕುರಿತಂತೆ ವಿವರಗಳನ್ನು ನೀಡಿದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು, ಕುಷ್ಟಗಿಯ ಕೊಪ್ಪಳ ರಸ್ತೆ ಪಕ್ಕದಲ್ಲಿ ಸಮಾರಂಭಕ್ಕಾಗಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.  ಪೆಂಡಾಲ್ ನಲ್ಲಿ ಕಾರ್ಯಕ್ರಮದ ವೇದಿಕೆ ಅಲಂಕಾರಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ವೇದಿಕೆಯ ಎರಡೂ ಬದಿಗಳಲ್ಲಿ ಬೃಹತ್ ಎಲ್‍ಸಿಡಿ ಪರದೆಯನ್ನು ಅಳವಡಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಕುಷ್ಟಗಿಯಲ್ಲಿ ಕನಕ ಭವನ ಹಾಗೂ ವಾಲ್ಮೀಕಿ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.  ತಾವರಗೇರಾ ಗ್ರಾಮದ ಬಾಲಕರ ಸ.ಪ.ಪೂ. ಕಾಲೇಜು ಕಟ್ಟಡದ ಉದ್ಘಾಟನೆ, ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ಸರ್ಕಾರಿ ನೌಕರರ ವಸತಿ ಗೃಹಗಳ ಉದ್ಘಾಟನೆ, ಕುಷ್ಟಗಿ-ಪಟ್ಟದಕಲ್ ರಸ್ತೆ ಮರು ಡಾಂಬೀಕರಣ ಕಾಮಗಾರಿಗೆ ಶಿಲಾನ್ಯಾಸ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಸತಿನಿಲಯ ಕಟ್ಟಡದ ಶಂಕುಸ್ಥಾಪನೆ, ಕೊರಕೇರಾ ಗ್ರಾಮದಲ್ಲಿ ವಾಲ್ಮೀಕಿ ಭವನ ಶಂಕುಸ್ಥಾಪನೆ, ಕುಷ್ಟಗಿಯಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ, ತಾವರಗೇರಾ ಗ್ರಾಮದ ಬಸ್‍ನಿಲ್ದಾಣ ಕಟ್ಟಡ ಉದ್ಘಾಟನೆ, ಕುಷ್ಟಗಿ ತಾಲೂಕಿನ ಮೂಲಭೂತ ಸೌಕರ್ಯ ಅಭಿವೃದ್ಧಿ ವಲಯದ 12. 40 ಕೋಟಿ ರೂ. ವೆಚ್ಚದಲ್ಲಿ 32 ಕಾಮಗಾರಿಗಳಿಗೆ ಶಂಕುಸ್ಥಾಪನೆ, ಬಾದಿಮನಾಳ ಸಮಗ್ರ ಕೆರೆ ಅಭಿವೃದ್ಧಿ, ನಿಡಶೇಸಿ ಕೆರೆ ಹಿನ್ನೀರಿನಲ್ಲಿ ಜಾಲಿಹಳ್ಳದಿಂದ ಶಾಖಾಪುರ ರಸ್ತೆಗೆ 95 ಲಕ್ಷ ರೂ. ವೆಚ್ಚದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ರೀತಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು ಸಿದ್ಧತೆ ಕುರಿತು ತೃಪ್ತಿ ವ್ಯಕ್ತಪಡಿಸಿದರು.
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ 1- ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 9-ಡಿವೈಎಸ್‍ಪಿ, 38- ಸಿಪಿಐ, 93-ಪಿಎಸ್‍ಐ, 122-ಎಎಸ್‍ಐ, 316- ಹೆಡ್‍ಕಾನ್ಸ್‍ಟೆಬಲ್ಸ್, 784- ಪೊಲೀಸ್ ಪೇದೆಗಳು, 38- ಮಹಿಳಾ ಪೊಲೀಸ್ ಪೇದೆಗಳು, 12- ಜಿಲ್ಲಾ ಮೀಸಲು ಪಡೆ, 03- ರಾಜ್ಯ ಮೀಸಲು ಪಡೆ ಹಾಗೂ 05- ಕ್ಷಿಪ್ರ ಪ್ರಹಾರ ದಳ ತಂಡವನ್ನು ರಚಿಸಲಾಗಿದೆ.  ಈಗಾಗಲೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನೆರೆಹೊರೆಯ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜಿಲ್ಲೆಗೆ ಆಗಮಿಸಿದ್ದಾರೆ ಎಂದು ತಿಳಿಸಿದರು.

ಡಿ.27 ರಂದು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ಕೊಪ್ಪಳ,ಡಿ.23(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಡಿ.27 ರಂದು ಬೆಳಿಗ್ಗೆ 9 ಗಂಟೆಗೆ ಪೊಲೀಸ್ ಕವಾಯತ್ ಮೈದಾನದಲ್ಲಿ ನಡೆಯಲಿದೆ.
     ಕ್ರೀಡಾಕೂಟದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ನೆರವೇರಿಸುವರು. ಅದೇ ದಿನ ಸಂಜೆ 4 ಗಂಟೆಗೆ ಮುಕ್ತಾಯ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಡಾ.ಸುರೇಶ ಕೆ.ಮೊಹಮ್ಮದ್ ಅವರು ಪಾಲ್ಗೊಳ್ಳುವರು.  ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಟಿ.ಡಿ. ಪವಾರ್ ಅವರು ತಿಳಿಸಿದ್ದಾರೆ.

ಲೋಕೋಪಯೋಗಿ ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ,ಡಿ.23(ಕರ್ನಾಟಕ ವಾರ್ತೆ): ರಾಜ್ಯದ ಲೋಕೋಪಯೋಗಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಡಿ.24 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
     ಸಚಿವರು ಡಿ.24 ರಂದು ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಕೊಪ್ಪಳಕ್ಕೆ ಆಗಮಿಸುವರು.  ನಂತರ ಬೆ.11.15 ಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗುವ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ಸಚಿವರು ಮಧ್ಯಾಹ್ನ 2.15 ಕ್ಕೆ ಕುಷ್ಟಗಿಗೆ ತೆರಳಿ, ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಚಿವರು ಅದೇ ದಿನ ಸಂಜೆ 5.30 ಕ್ಕೆ ಕೊಪ್ಪಳಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಂದ ಕುಷ್ಟಗಿಯಲ್ಲಿ ಜನತಾದರ್ಶನ

ಕೊಪ್ಪಳ ಡಿ. 23 (ಕರ್ನಾಟಕ ವಾರ್ತೆ) : ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಡಿ. 24 ರಂದು ಮಧ್ಯಾಹ್ನ 3 ಗಂಟೆಗೆ ಕುಷ್ಟಗಿಯಲ್ಲಿ ಜನತಾದರ್ಶನ ನಡೆಸಿ, ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಆಲಿಸುವರು.
     ಕುಷ್ಟಗಿ-ಕೊಪ್ಪಳ ರಸ್ತೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಮಾರಂಭದ ವೇದಿಕೆಯ ಪಕ್ಕದಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಅರ್ಜಿ ಸ್ವೀಕಾರ ಕೇಂದ್ರ ಅಂದು ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಲಿದೆ.  ಸಾರ್ವಜನಿಕರು ತಮ್ಮ ಕುಂದುಕೊರತೆ ಅರ್ಜಿಗಳನ್ನು ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಸಲ್ಲಿಸಿ, ಸ್ವೀಕೃತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.

Monday, 22 December 2014

ಡಿ. 24 ರಂದು ಕುಷ್ಟಗಿಯಲ್ಲಿ ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕುಷ್ಟಗಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಡಿ. 24 ರಂದು ಮಧ್ಯಾಹ್ನ 3 ಗಂಟೆಗೆ ಕುಷ್ಟಗಿಯ ಸಕ್ರ್ಯೂಟ್ ಹೌಸ್ ಬಳಿ ನಡೆಯಲಿದೆ.

          ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.  ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು.  ಶಾಸಕ ದೊಡ್ಡನಗೌಡ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಪೌರಾಡಳಿತ, ಸಾರ್ವಜನಿಕ ಉದ್ದಿಮೆ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರು ಹಾಗೂ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಖಮರುಲ್ ಇಸ್ಲಾಂ, ಯೋಜನೆ, ಸಾಂಖ್ಯಿಕ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅಬಕಾರಿ ಸಚಿವ ಸತೀಶ್ ಜಾರಿಕಿಹೊಳಿ, ಸಮಾಜಕಲ್ಯಾಣ ಸಚಿವ ಹೆಚ್. ಆಂಜನೇಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿವರು.  ಶಾಸಕರುಗಳಾದ ಹೆಚ್.ಎಮ್. ರೇವಣ್ಣ, ರಘುನಾಥ ಮಲ್ಕಾಪುರೆ, ಸುರೇಶ ಭೈರತಿ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಕರ್ನಾಟಕ ಮೂಲಭೂತ ಸೌಕಯಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೀಶೈಲ ದಳವಾಯಿ, ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಕುಷ್ಟಗಿ ಪುರಸಭೆ ಅಧ್ಯಕ್ಷೆ ಮಂಜುಳಾ ನಾಗರಾಳ, ತಾ.ಪಂ. ಅಧ್ಯಕ್ಷೆ ಸುವಣಾ ಮಹಾಂತೇಶ ತುರಾಯಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸಮಾರಂಭದಲ್ಲಿ ಭಾಗವಹಿಸುವರು. 
ಅಭಿವೃದ್ಧಿ ಕಾರ್ಯಕ್ರಮಗಳು : ಮುಖ್ಯಮಂತ್ರಿಗಳು ಡಿ. 24 ರಂದು ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ಕುಷ್ಟಗಿಯಲ್ಲಿ ಕನಕ ಭವನ ಹಾಗೂ ವಾಲ್ಮೀಕಿ ಭವನಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.  ತಾವರಗೇರಾ ಗ್ರಾಮದ ಬಾಲಕರ ಸ.ಪ.ಪೂ. ಕಾಲೇಜು ಕಟ್ಟಡದ ಉದ್ಘಾಟನೆ, ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ಸರ್ಕಾರಿ ನೌಕರರ ವಸತಿ ಗೃಹಗಳ ಉದ್ಘಾಟನೆ, ಕುಷ್ಟಗಿ-ಪಟ್ಟದಕಲ್ ರಸ್ತೆ ಮರು ಡಾಂಬೀಕರಣ ಕಾಮಗಾರಿಗೆ ಶಿಲಾನ್ಯಾಸ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಸತಿನಿಲಯ ಕಟ್ಟಡದ ಶಂಕುಸ್ಥಾಪನೆ, ಕೊರಕೇರಾ ಗ್ರಾಮದಲ್ಲಿ ವಾಲ್ಮೀಕಿ ಭವನ ಶಂಕುಸ್ಥಾಪನೆ, ಕುಷ್ಟಗಿಯಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ, ತಾವರಗೇರಾ ಗ್ರಾಮದ ಬಸ್‍ನಿಲ್ದಾಣ ಕಟ್ಟಡ ಉದ್ಘಾಟನೆ, ಕುಷ್ಟಗಿ ತಾಲೂಕಿನ ಮೂಲಭೂತ ಸೌಕರ್ಯ ಅಭಿವೃದ್ಧಿ ವಲಯದ 12. 40 ಕೋಟಿ ರೂ. ವೆಚ್ಚದಲ್ಲಿ 32 ಕಾಮಗಾರಿಗಳಿಗೆ ಶಂಕುಸ್ಥಾಪನೆ, ಬಾದಿಮನಾಳ ಸಮಗ್ರ ಕೆರೆ ಅಭಿವೃದ್ಧಿ, ನಿಡಶೇಸಿ ಕೆರೆ ಹಿನ್ನೀರಿನಲ್ಲಿ ಜಾಲಿಹಳ್ಳದಿಂದ ಶಾಖಾಪುರ ರಸ್ತೆಗೆ 95 ಲಕ್ಷ ರೂ. ವೆಚ್ಚದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.

ಡಿ. 24 ರಂದು ಸಿಎಂ ಕಾರ್ಯಕ್ರಮ : ಶಿಸ್ತುಬದ್ಧತೆ ಪ್ರದರ್ಶಿಸಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಇದೇ ಡಿ. 24 ರಂದು ಮುಖ್ಯಮಂತ್ರಿಗಳಾ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಗೆ ಆಗಮಿಸಿ ಪ್ರಗತಿ ಪರಿಶೀಲನಾ ಸಭೆ ಮತ್ತು ಕುಷ್ಟಗಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.  ಜಿಲ್ಲೆಯ ಎಲ್ಲ ಅಧಿಕಾರಿಗಳು ಆಯಾ ಇಲಾಖೆಯ ಸಮಗ್ರ ಮಾಹಿತಿಯೊಂದಿಗೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಸೂಚನೆ ನೀಡಿದರು.

     ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


     ಮುಖ್ಯಮಂತ್ರಿಗಳು ಡಿ. 24 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳಕ್ಕೆ ಆಗಮಿಸಿ, ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸುವರು.  ನಂತರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸುವರು.  ಎಲ್ಲ ಅಧಿಕಾರಿಗಳು ಸಭೆಗೆ ಆಯಾ ಇಲಾಖೆಗೆ ಸಂಬಂಧಿತ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು.  ಈಗಾಗಲೆ ಮುಖ್ಯಮಂತ್ರಿಗಳ ಸಭೆಗೆ ಬಜೆಟ್ ಅಂಶಗಳು ಅನುಷ್ಠಾನ ಕುರಿತು ವರದಿಯನ್ನು ಪಡೆಯಲಾಗಿದ್ದು, ಇದರ ಜೊತೆಗೆ ಆಯಾ ಇಲಾಖೆಯ ಇತರೆ ಯೋಜನೆಗಳು, ಅನುದಾನ ಬಿಡುಗಡೆ, ಖರ್ಚು ಇತ್ಯಾದಿ ವಿವರಗಳೊಂದಿಗೆ ಹಾಜರಾಗಬೇಕು.  ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಕುಡಿಯುವ ನೀರು ಯೋಜನೆ ಕಾಮಗಾರಿಗಳು, ನೀರಾವರಿ ಯೋಜನೆಗಳ ಪ್ರಗತಿ, ರಸ್ತೆ ಹಾಗೂ ಸೇತುವೆಗಳ ನಿರ್ಮಾಣ, ಪ್ರಕೃತಿ ವಿಕೋಪದ ಹಾನಿ ಹಾಗೂ ಪರಿಹಾರ ವಿತರಣೆ, ಕೃಷಿ ಹಾಗೂ ತೋಟಗಾರಿಕೆ ಯೋಜನೆಗಳ ಸ್ಥಿತಿ-ಗತಿಗಳ ಸಮಗ್ರ ವಿವರಗಳ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮುಖ್ಯಮಂತ್ರಿಗಳಿಗೆ ಮಾಹಿತಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
     ಕೊಪ್ಪಳ ಜಿಲ್ಲೆಗೆ ಅಗತ್ಯವಿರುವ ಇತರೆ ಯೋಜನೆಗಳ ಕುರಿತು ಬೇಡಿಕೆಯ ಪಟ್ಟಿಯನ್ನು ಸಿದ್ಧಪಡಿಸುವಂತೆ ಸಚಿವರು ಸೂಚನೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು.  ಜಿಲ್ಲೆಗೆ ಅಗತ್ಯವಿರುವ ಹೊಸ ಯೋಜನೆಗಳ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗಿದ್ದು, ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದು, ಮೆಕ್ಕೆಜೋಳವನ್ನು ಸಂಸ್ಕರಿಸಿ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಲು ಉತ್ತಮ ಅವಕಾಶವಿದ್ದು, ಇದಕ್ಕಾಗಿ ಈ ಭಾಗದಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.  ಖಾಸಗಿ ಕಂಪನಿಗಳು ಇದಕ್ಕೆ ಮುಂದೆ ಬಂದಲ್ಲಿ, ಸರ್ಕಾರದಿಂದ ಭೂಮಿ ನೀಡಿಕೆ ಸೇರಿದಂತೆ ಅಗತ್ಯ ಸವಲತ್ತು ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ.  ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು.  ಉಳಿದಂತೆ ಕಂಪ್ಲಿ ಸೇತುವೆ, ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಅನುದಾನ, ಗಂಗಾವತಿಯಲ್ಲಿ ಕೃಷಿ ಕಾಲೇಜು ಶೀಘ್ರ ಪ್ರಾರಂಭಕ್ಕೆ ಅಗತ್ಯ ಅನುದಾನ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ, ನಗರದ ಸಾಹಿತ್ಯ ಭವನ ನವೀಕರಣ, ಗಂಗಾವತಿಯಲ್ಲಿ ನಗರಸಾರಿಗೆ ಪ್ರಾರಂಭ ಕುರಿತಂತೆ ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದರು.  ಇದರ ಜೊತೆಗೆ ಜಿಲ್ಲೆಯಲ್ಲಿ ಹೋಬಳಿಗೊಂದು ವಸತಿ ಶಾಲೆ, ಅಗತ್ಯವಿರುವ ಪ್ರೌಢಶಾಲೆಗಳು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳು,  ಪಾಲಿಟೆಕ್ನಿಕ್‍ಗಳು ಅಲ್ಲದೆ ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಣೆಗೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅಗತ್ಯ ಮಂಜೂರಾತಿಗೆ ಬೇಡಿಕೆ ಸಲ್ಲಿಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಹುಲಿಗಿಯಲ್ಲಿ ನವಜಾತ ಶಿಶು ಪತ್ತೆ : ಪಾಲಕರ ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿ ನವಜಾತ ಹೆಣ್ಣು ಶಿಶುವೊಂದನ್ನು ಯಾರೋ ಬಿಟ್ಟುಹೋಗಿದ್ದು, ಮಗುವಿನ ಪಾಲಕರ ಪತ್ತೆಗೆ ಸಹಕರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
     ಹುಲಿಗಿ ಗ್ರಾಮದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿ ನವಜಾತ ಹೆಣ್ಣು ಶಿಶುವನ್ನು ಯಾರೋ ಅಪರಿಚಿತರು ಬಿಟ್ಟು ಹೋಗಿರುತ್ತಾರೆ.  ಈ ಕುರಿತಂತೆ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ ಅವರು ನೀಡಿದ ಮಾಹಿತಿ ಮೇರೆಗೆ, ಮಗುವನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಯ ಅಗತ್ಯವಿದ್ದ ಕಾರಣ ಮಗುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ವಿಭಾಗಕ್ಕೆ ದಾಖಲಿಸಲಾಗಿದೆ.  ನವಜಾತ ಶಿಶುವನ್ನು ಈ ರೀತಿ ಅಮಾನುಷವಾಗಿ ಬಿಟ್ಟು ಹೋಗಿರುವ ಪಾಲಕರು ಅಥವಾ ಪೋಷಕರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ.  ಸಾರ್ವಜನಿಕರು ಈ ಮಗುವಿನ ಪಾಲಕರು ಅಥವಾ ಪೋಷಕರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಒದಗಿಸಿ ಪಾಲಕರ ಪತ್ತೆಗೆ ಸಹಕರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Sunday, 21 December 2014

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ


ಕೊಪ್ಪಳ ಡಿ. 22 (ಕ.ವಾ): ಬೆಂಬಲ ಬೆಲೆ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮೆಕ್ಕೆಜೋಳ ಖರೀದಿಸುವ ಕಾರ್ಯಕ್ರಮಕ್ಕೆ ನಗರದ ಎಪಿಎಂಸಿ ಆವರಣದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸೋಮವಾರ ಚಾಲನೆ ನೀಡಿದರು.
          ಮೆಕ್ಕೆಜೋಳ ದರ ಕುಸಿತದ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗದಂತೆ, ಪ್ರತಿ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳಕ್ಕೆ 1100 ರೂ. ದರದಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು. ಖರೀದಿ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಲಾಗುವುದು.  ಒಂದು ವೇಳೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಡಿ ಸಹಾಯಧನವನ್ನು ನೀಡಿದಲ್ಲಿ, ಅದರ ವ್ಯತ್ಯಾಸದ ಮೊತ್ತ ಪ್ರತಿ ಕ್ವಿಂಟಾಲ್‍ಗೆ ರೂ. 210 ಗಳನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಈಗಾಗಲೆ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಕೊಪ್ಪಳ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ರೈತರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
         ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಆರ್. ಲಂಬೂ ಅವರು ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ರೈತರು ಖರೀದಿ ಕೇಂದ್ರಕ್ಕೆ ಬರುವ ಸಂದರ್ಭದಲ್ಲಿ ಬೆಳೆ ದೃಢೀಕರಣ ಪತ್ರ, ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್, ಪಹಣಿ ಪತ್ರಿಕೆ, ಬ್ಯಾಂಕ್ ಖಾತೆಯ ಪ್ರಿಂಟೆಡ್ ಪುಸ್ತಕದ ಜೆರಾಕ್ಸ್ ಪ್ರತಿ ಇವಿಷ್ಟು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲಾಗುವ ಮೆಕ್ಕೆಜೋಳ ಚೆನ್ನಾಗಿ ಒಣಗಿರಬೇಕು, ಗಾತ್ರ, ಬಣ್ಣ ಹಾಗೂ ಆಕಾರ ಹೊಂದಿದ್ದು, ಗಟ್ಟಿ ಮತ್ತು ಸ್ವಚ್ಛವಾಗಿರಬೇಕು.  ಇತರೆ ಕಲ್ಮಶಗಳಿಂದ ಮುಕ್ತವಾಗಿರಬೇಕು ಎಂದರು.
         ಕೊಪ್ಪಳ ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್, ಸದಸ್ಯ ಹನುಮರಡ್ಡಿ ಹಂಗನಕಟ್ಟಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಅನಿಕೇತ ಅಂಗಡಿ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಲೋಕಾಯುಕ್ತ ಡಿವೈಎಸ್‍ಪಿ ಅವರಿಂದ ಸಾರ್ವಜನಿಕ ಕುಂದುಕೊರತೆ ದೂರು ಆಹ್ವಾನ

ಕೊಪ್ಪಳ,ಡಿ.22(ಕರ್ನಾಟಕ ವಾರ್ತೆ): ಕೊಪ್ಪಳ ಲೋಕಾಯುಕ್ತ ಡಿವೈಎಸ್‍ಪಿ ಅವರು ಡಿ.27 ರಂದು ಗಂಗಾವತಿ ಹಾಗೂ ಡಿ.30 ರಂದು ಕುಷ್ಟಗಿ ಮತ್ತು ಯಲಬುರ್ಗಾ ಪ್ರವಾಸ ಕೈಕೊಂಡು ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ.
     ಲೋಕಾಯುಕ್ತ ಡಿವೈಎಸ್‍ಪಿ ಅವರು ಡಿ.27 ರಂದು ಬೆಳಿಗ್ಗೆ 11-00 ರಿಂದ ಗಂಗಾವತಿಯ ಪ್ರವಾಸಿ ಮಂದಿರದಲ್ಲಿ ಹಾಗೂ ಡಿ.30 ರಂದು ಬೆಳಿಗ್ಗೆ 11-00 ರಿಂದ ಕುಷ್ಟಗಿ ಮತ್ತು ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಿದ್ದಾರೆ.
     ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ.  ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಪ್ರಪತ್ರ ಸಂಖ್ಯೆ1 ಮತ್ತು 2 ನಮೂನೆಯನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತ ಡಿವೈಎಸ್‍ಪಿ ಕೊಪ್ಪಳ ದೂರವಾಣಿ ಸಂಖ್ಯೆ : 08539 220533 ಅಥವಾ 08539-220200 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ವಚ್ಛ ಭಾರತ ಮಿಷನ್ : ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮ ಪ್ರಸಾರ

ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಸ್ವಚ್ಛ ಭಾರತ್ ಮಿಷನ್, ರಾಜೀವಗಾಂಧಿ ಚೈತನ್ಯ ಯೋಜನೆ, ಸಂಜೀವಿನಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮೊದಲಾದ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಗ್ರಾಮೀಣಾ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಹೊಸಪೇಟೆ ಆಕಾಶವಾಣಿ ಕೇಂದ್ರವು ಪ್ರತಿ ಗುರುವಾರ ಬೆಳಿಗ್ಗೆ 8.35 ರಿಂದ 9.05ರ ನಿಮಿಷದವರೆಗೆ “ನಿರ್ಮಲವಾಗಲಿ ನಮ್ಮೂರು” ಸರಣಿ ಕಾರ್ಯಕ್ರಮ ಬಿತ್ತರಿಸಲಿದೆ.
     ಈಗಾಗಲೆ ಸರಣಿ ಕಾರ್ಯಕ್ರಮ ಪ್ರಾರಂಭವಾಗಿದ್ದು, ನಿರಂತರವಾಗಿ ಒಂದು ವರ್ಷಗಳ ಕಾಲ ಅಂದರೆ 2015 ರ ಡಿಸೆಂಬರ್ 10 ವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯತಿಯು ಪ್ರಾಯೋಜಿಸಿದೆ.  ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಸಂವಾದ, ಫಲಾನುಭವಿಗಳ ವಿಚಾರ ವಿನಿಮಯ, ಯಶೋಗಾಥೆಗಳು ಈ ಸರಣಿಯಲ್ಲಿ ಪ್ರಸಾರವಾಗಲಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಗಿರೀಶ್ ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Saturday, 20 December 2014

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಡಿ. 21 ರಂದು ಪೂರ್ವ ಭಾವಿ ಸಭೆ

ಕೊಪ್ಪಳ ಡಿ. 20 : ಕೊಪ್ಪಳ ಜಿಲ್ಲೆಯ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2015 ರ  ಜನವರಿ 17 ಹಾಗೂ 18 ರಂದು ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆಸುವ ಕುರಿತಂತೆ  ಡಿ. 21 ರಂದು ಬೆಳಿಗ್ಗೆ 10-30 ಗಂಟೆಗೆ ಪೂರ್ವ ಭಾವಿ ಸಭೆಯನ್ನು ಪರಿಷತ್ತಿನ ಕಾರ್ಯಾಲಯದಲ್ಲಿ ( ಸಾಹಿತ್ಯ ಭವನದ ಕೆಳ ಮಳಿಗೆ ಕಿನ್ನಾಳ ರಸ್ತೆ) ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ವಹಿಸುವರು.  ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು  ಇದೇ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಭೆಗೆ ಪರಿಷತ್ತಿನ ಆಜೀವ ಸದಸ್ಯರು, ರೈತ ಸಂಘದ ಮುಖಂಡರು, ಕನ್ನಡ ಪರ ಹೋರಾಟಗಾರರು, ಜಿಲ್ಲೆಯ ಜನಪ್ರತಿನಿಧಿಗಳು, ಮಹಿಳಾ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳು, ಸಾಹಿತಿಗಳು ಹಾಗೂ ಸರಕಾರಿ ನೌಕರರು ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಲಹೆ ಸೂಚನೆಗಳನ್ನು ನೀಡುವಂತೆ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಸಿ ಕಾಲಿಮಿರ್ಚಿ, ಶಿವಾನಂದ ಮೇಟಿ, ಕೋಶಾಧ್ಯಕ್ಷ ಆರ್ ಎಸ್ ಸರಗಣಾಚಾರ್ಯ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಶಿ ಕಾ ಬಡಿಗೇರ ಪ್ರಕಟಣೆ ಮೂಲಕ ಕೋರಿದ್ದಾರೆ.

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ : ಸಹಾಯವಾಣಿ ಪ್ರಾರಂಭಕ್ಕೆ ಕ್ರಮ

ಕೊಪ್ಪಳ ಡಿ.20 (ಕ.ವಾ) : ಮೆಕ್ಕೆಜೋಳವನ್ನು ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‍ಗೆ ರೂ. 1110 ರಂತೆ ಖರೀದಿಸಲು ಡಿ. 22 ರಿಂದ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಕುಕನೂರು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.  ಖರೀದಿ ಕುರಿತಂತೆ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ತಿಳಿಸಿದ್ದಾರೆ.
     ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅವರು ಖರೀದಿ ಏಜೆನ್ಸಿಯಾಗಿ ನೇಮಕಗೊಂಡಿದ್ದು, ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೀರದಂತೆ ಮೆಕ್ಕೆಜೋಳ ಖರೀದಿಸಲಾಗುವುದು.  ಖರೀದಿ ಕೇಂದ್ರಕ್ಕೆ ಬರುವಾಗ ರೈತರು ತಮ್ಮ ಮತದಾರರ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಇವುಗಳನ್ನು ಯಾವುದಾದರೂ ಒಂದು ಹಾಗೂ ಪಹಣಿ ಪತ್ರಿಕೆ, ಬೆಳೆ ದೃಢೀಕರಣ ಪತ್ರ ಸಲ್ಲಿಸಬೇಕು.  ಖರೀದಿ ಕೇಂದ್ರಕ್ಕೆ ತರುವಾಗ ಮೆಕ್ಕೆಜೋಳವನ್ನು ಚೆನ್ನಾಗಿ ಒಣಗಿಸಿ, ಗಾತ್ರ, ಬಣ್ಣ, ಆಕಾರ ಹೊಂದಿ ಗಟ್ಟಿ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.  ಯಾವುದೇ ಕ್ರಿಮಿ ಕೀಟಗಳು ಅಥವಾ ದುರ್ವಾಸನೆ ಇರಬಾರದು.  ಎಫ್.ಎ.ಕ್ಯೂ ಗುಣಮಟ್ಟದ ಮೆಕ್ಕೆಜೋಳವನ್ನು ಖರೀದಿಸಲಾಗುವುದು.   ಮೆಕ್ಕೆಜೋಳವನ್ನು 50 ಕೆ.ಜಿ. ತೂಕದ ಗೋಣಿ ಚೀಲದಲ್ಲಿ ತರಬೇಕು.  ರೈತರಿಗೆ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಆರ್.ಟಿ.ಜೆ.ಎಸ್. ಮೂಲಕ ಸಂದಾಯ ಮಾಡುವುದರಿಂದ, ರೈತರು ತಮ್ಮ ಹೆಸರಿನಲ್ಲಿರುವ ಬ್ಯಾಂಕಿನ ಗಣಕೀಕೃತ ಖಾತೆ ನಕಲು, ಐಎಫ್‍ಎಸ್ ಕೋಡ್ ಸಂಖ್ಯೆಯೊಂದಿಗೆ ಸಲ್ಲಿಸಬೇಕು.  ರೈತರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಲಾಗುತ್ತಿದ್ದು, ಕೊಪ್ಪಳ- 08539-220235.  ಕುಷ್ಟಗಿ- 08536-267039 ಹಾಗೂ ಕುಕನೂರು- 08534-230427 ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದು.  ಮೆಕ್ಕೆಜೋಳವನ್ನು ಮೊದಲು ಬಂದ ರೈತರಿಗೆ ಮೊದಲು ಆದ್ಯತೆ ಮೇರೆಗೆ ಸರದಿ ಪ್ರಕಾರ ಖರೀದಿಸಲಾಗುವುದು.  ರೈತರು ಬೆಂಬಲ ಬೆಲೆ ಯೋಜನೆಯಡಿ ತಮಗೆ ಹತ್ತಿರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ, ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಜನಹಿತ ವೇದಿಕೆ ಆರೋಪ : ಆರ್.ಟಿ.ಓ ಸ್ಪಷ್ಟನೆ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ವಾಹನ ಚಾಲಕರು ಅಥವಾ ಮಾಲೀಕರುಗಳಿಗೆ ವಿನಾಕಾರಣ ತೊಂದರೆ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಕರ್ನಾಟಕ ಜನಹಿತ ವೇದಿಕೆಯ ಪದಾಧಿಕಾರಿಗಳು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದ್ದು, ಇದು ನಿರಾಧಾರ ಆರೋಪವಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ. ಪಾಂಡುರಂಗಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
     ಕರ್ನಾಟಕ ಜನಹಿತ ವೇದಿಕೆ ರಾಜ್ಯಾಧ್ಯಕ್ಷ ಹೆಚ್.ಎಸ್. ಸೋಂಪೂರ ಇವರು ತಮ್ಮ ಅನುಯಾಯಿಗಳೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಆಗಮಿಸಿ, ಪ್ರತಿಭಟನೆ ನಡೆಸಿದ್ದರು.  ಈ ವರ್ಷದ ಏಪ್ರಿಲ್ ನಿಂದ ಈವರೆಗೆ ಸಾರಿಗೆ ಇಲಾಖೆಯ ಕಚೇರಿಯಿಂದ ಅಧಿಕ ಭಾರ ಸಾಗಣೆಯ ಒಟ್ಟು 25495 ವಾಹನಗಳನ್ನು ತನಿಖೆ ಮಾಡಿ 457 ಪ್ರಕರಣಗಳನ್ನು ದಾಖಲು ಮಾಡಿ, ಇದಕ್ಕೆ ಸಂಬಂಧಿಸಿದಂತೆ ಒಟ್ಟು 57,71,000 ರೂ. ಗಳ ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗಿದೆ.  ಎಲ್ಲಾ ಅಧಿಕ ಭಾರತ ಸರಕು ಸಾಗಾಣಿಕೆ ಪ್ರಕರಣಗಳಲ್ಲಿ ಹೆಚ್ಚುವರಿ ಸರಕನ್ನು ಕೆಳಗಿಳಿಸಿ ಕ್ರಮ ಜರುಗಿಸಲಾಗಿದೆ.  ಅದೇ ರೀತಿ ಡಿ. 15 ರಂದು ಸಹ ವಾಹನ ಸಂ: ಕೆಎ 26 ಎ 2921 ಲಾರಿ ವಾಹನವನ್ನು ತನಿಖಾಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಅದರಲ್ಲಿ ನಿಗಧಿಗಿಂತ 8775 ಕೆ.ಜಿ. ಅಧಿಕ ಭಾರದ ಸರಕು ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿರುತ್ತಾರೆ.  ಮೋಟಾರು ವಾಹನ ಕಾಯ್ದೆಯಡಿ ಈ ಪ್ರಕರಣಕ್ಕೆ 11 ಸಾವಿರ ರೂ. ರಾಜಿದಂಡ ವಿಧಿಸಿದ್ದು, ಇದರನ್ವಯ ವಾಹನದಲ್ಲಿರುವ ಹೆಚ್ಚಿನ ಸರಕನ್ನು ಕೆಳಗಿಸಬೇಕಾಗಿರುತ್ತದೆ.  ವಾಹನ ಚಾಲಕರಿಗೆ ಹೆಚ್ಚುವರಿ ಸರಕನ್ನು ಕೆಳಗಿಳಿಸಲು ಸೂಚಿಸಿದ್ದಕ್ಕೆ, ಹೆಚ್ಚುವರಿ ಸರಕನ್ನು ತೆರವುಗೊಳಿಸದೆ, ವಾಹನವನ್ನು ಬಿಡುಗಡೆ ಮಾಡುವಂತೆ ಚಾಲಕ ಒತ್ತಾಯಿಸಿರುತ್ತಾರೆ.  ಇದಕ್ಕೆ ಇಲಾಖೆಯ ಅಧಿಕಾರಿಗಳು ನಿರಾಕರಿಸಿದರಿಂದ, ಕಚೇರಿಗೆ ಬಂದು, ಸಾರಿಗೆ ಇಲಾಖೆ ಅಧಿಕಾರಿಗಳು, ವಾಹನ ಚಾಲಕರು ಅಥವಾ ಮಾಲೀಕರುಗಳಿಗೆ ವಿನಾಕಾರಣ ತೊಂದರೆ ನೀಡಿ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಇಲ್ಲ ಸಲ್ಲದ ಮತ್ತು ನಿರಾಧಾರ ಆರೋಪ ಮಾಡಿರುತ್ತಾರೆ.  ಈ ಆರೋಪವು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ. ಪಾಂಡುರಂಗಶೆಟ್ಟಿ ಅವರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಪ್ರತಿನಿಧಿ ಶುಲ್ಕ ಪಾವತಿಗೆ ಸೂಚನೆ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ 2015 ರ ಫೆ. 1 ರಿಂದ 3 ರವರೆಗೆ ಜರುಗಲಿರುವ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಇಚ್ಛಿಸುವವರು 300 ರೂ. ಪ್ರತಿನಿಧಿ ಶುಲ್ಕವನ್ನು ಪಾವತಿಸುವಂತೆ  ಕಸಾಪ ಕೊಪ್ಪಳ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ತಿಳಿಸಿದ್ದಾರೆ.
     ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿತ್ವ ಶುಲ್ಕ 300 ರೂ. ಗಳನ್ನು ಜಿಲ್ಲೆಯ ಆಯಾ ತಾಲೂಕು ಕಸಾಪ ಅಧ್ಯಕ್ಷರಲ್ಲಿ ಅಥವಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಲ್ಲಿ ಜ. 10 ರ ಒಳಗಾಗಿ ಪಾವತಿಸಿ, ಸಂಬಂಧಪಟ್ಟ ರಸೀದಿಯನ್ನು ಪಡೆದುಕೊಳ್ಳಬೇಕು.  ಹೆಚ್ಚಿನ ಮಾಹಿತಿಗೆ ಕಸಾಪ ಕೊಪ್ಪಳ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ- 9008585482 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನಿರಾಬಾದ್-ಮೆಹಬೂಬ್‍ನಗರ ರೈಲ್ವೆ : ಭೂಸ್ವಾಧೀನಕ್ಕೆ 2. 07 ಕೋಟಿ ರೂ.ಗಳಿಗೆ ಅನುಮೋದನೆ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಮುನಿರಾಬಾದ್-ಮೆಹಬೂಬನಗರ ರೈಲ್ವೆ ಲೈನ್ ನಿರ್ಮಾಣ ಯೋಜನೆಗಾಗಿ ಕೊಪ್ಪಳ ತಾಲೂಕಿನ ದನಗಲದೊಡ್ಡಿ ಗ್ರಾಮದ ಹೆಚ್ಚುವರಿ ಮತ್ತು ಅಧಿಕ ಕ್ಷೇತ್ರಗಳ ಜಮೀನು ಭೂಸ್ವಾಧೀನ ಪ್ರಕ್ರಿಯೆಗೆ ಹೊಸ ಭೂಸ್ವಾಧೀನ ಕಾಯ್ದೆಯಡಿ ರಚಿಸಿದ ಐತೀರ್ಪಿನ ಒಟ್ಟು 2. 07 ಕೋಟಿ ರೂ. ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
     ತಾಲೂಕಿನ ದನಗಲದೊಡ್ಡಿ ಗ್ರಾಮದ ಸರ್ವೆ ನಂ. 69/2 ಅಕಬ ಹಾಗೂ ಇತರೆಗಳಲ್ಲಿ ಕಲಂ 6(1) ರ ಅಧಿಸೂಚನೆಯಲ್ಲಿರುವಂತೆ ಒಟ್ಟು 23 ಎಕರೆ 30 ಗುಂಟೆ ಜಮೀನಿಗೆ ಕೇಂದ್ರ ಸರ್ಕಾರದಭೂಸ್ವಾಧೀನ ಕಾಯ್ದೆ ಮತ್ತು ಕಾನೂನು ಇಲಾಖೆಯ ಅಭಿಪ್ರಾಯದಂತೆ ರಚಿಸಿದ ಐತೀರ್ಪಿನ ಒಟ್ಟು ಮೊತ್ತ 2,07,04,863 ರೂ. ಗಳಿಗೆ ಭೋಕಾರಿಕಾ ಸಂಸ್ಥೆಯಿಂದ ಭರಿಸಿಕೊಳ್ಳುವ ಹಾಗೂ ಲೆಕ್ಕಾಚಾರದಲ್ಲಿ ಏನಾದರೂ ಲೋಪದೋಷ ಕಂಡುಬಂದಲ್ಲಿ ವಿಶೇಷ ರೈಲ್ವೆ ಯೋಜನೆಯ ಭೂಸ್ವಾಧೀನಾಧಿಕಾರಿ, ಸಿಂಧನೂರ ಅವರನ್ನೆ ಹೊಣೆಗಾರರನ್ನಾಗಿಸುವ ಷರತ್ತುಗೊಳಪಡಿಸಿ ಸರ್ಕಾರ ಅನುಮೋದನೆ ನೀಡಿದೆ.  ಈ ಐತೀರ್ಪಿನಲ್ಲಿ ಶೇ. 100 ರಷ್ಟು ಶಾಸನ ಬದ್ಧ ಭತ್ಯೆ, ಶೇ. 12 ರಂತೆ ಹೆಚ್ಚುವರಿ ಮಾರುಕಟ್ಟೆ ದರ ಸೇರಿರುತ್ತದೆ.  ಈ ಐತೀರ್ಪಿನ ಮೊತ್ತವನ್ನು ನಿಯಮಾನುಸಾರ 30 ದಿನಗಳ ಒಳಗಾಗಿ ಜಮೀನು ಅಥವಾ ಕಟ್ಟಡ ಮಾಲೀಕರಿಗೆ ಪಾವತಿ ಮಾಡಿ, ದಸ್ತಾವೇಜು ಖಚಿತಪಡಿಸಿಕೊಂಡು, ನಿಜವಾದ ಮಾಲೀಕರಿಗೆ ಪರಿಹಾರಧನ ನೀಡಬೇಕು.  ಖರಾಬು ಅಥವಾ ಸರ್ಕಾರಿ ಜಮೀನಿಗೆ ನಿಗದಿಪಡಿಸಿದ ಪರಿಹಾರವನ್ನು ಸರ್ಕಾರಕ್ಕೆ ಜಮಾ ಮಾಡಬೇಕು.  ಭೂ ಪರಿಹಾರ ವಿತರಣೆಯಲ್ಲಿ ಯಾವುದೇ ನ್ಯೂನತೆ ಕಂಡುಬಂದಲ್ಲಿ ಅದಕ್ಕೆ ರೈಲ್ವೆ ಲೈನ್ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂಬುದಾಗಿ ಕೊಪ್ಪಳ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ

ಕೊಪ್ಪಳ ಡಿ. 20 (ಕ.ವಾ): ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಡಿ. 21 ಮತ್ತು 22 ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ಡಿ. 21 ರಂದು ಬೆಳಿಗ್ಗೆ ಇಳಕಲ್‍ನಿಂದ ಹೊರಟು 11 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸುವರು.  ನಂತರ ಮುಖ್ಯಮಂತ್ರಿಗಳ ಕಾರ್ಯಕ್ರಮ ಕುರಿತು ಪೂರ್ವಸಿದ್ಧತೆ ವೀಕ್ಷಿಸಿ, ಸಕ್ರ್ಯೂಟ್ ಹೌಸ್‍ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಂಜೆ 4-30 ಗಂಟೆಗೆ ಕನಕಗಿರಿಗೆ ಆಗಮಿಸಿ, ಸಾರ್ವಜನಿಕರ ಕುಂದುಕೊರತೆ ವಿಚಾರಣೆ ನಡೆಸುವರು. ಸಚಿವರು ಅಂದು ಕಾರಟಗಿಯಲ್ಲಿ ವಾಸ್ತವ್ಯ ಮಾಡುವರು.  ಡಿ. 22 ರಂದು ಬೆಳಿಗ್ಗೆ 11-30 ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಡಿ. 24 ರಂದು ಮುಖ್ಯಮಂತ್ರಿಗಳು ಕುಷ್ಟಗಿಗೆ ಆಗಮಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು.  ಸಚಿವರು ಅದೇ ದಿನ ಸಂಜೆ 4 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ : ಶಾಲೆಗಳ ಪಟ್ಟಿ ಪ್ರಕಟ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್ ಹಾಗೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ರಿಂದ ಜಾರಿಗೆ ಬಂದಿದ್ದು, ಇದರನ್ವಯ 2015-16 ನೇ ಸಾಲಿನ ನೆರೆಹೊರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಜನವಸತಿ ಪ್ರದೇಶವಾರು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್  www.koppal.nic.in ರಲ್ಲಿ ಹಾಗೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.  ಈ ಪಟ್ಟಿಗೆ ಸಾರ್ವಜನಿಕರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಂಬಂಧಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಡಿ. 23 ರ ಒಳಗಾಗಿ ಸಲ್ಲಿಸಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾರಿ ವಶ ಪ್ರಕರಣ : ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ ಡಿ. 20 (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ಕಳೆದ 2008 ರ ಫೆ. 13 ರಂದು ದಾಖಲಾಗಿದ್ದ ಪ್ರಕರಣವೊಂದರಲ್ಲಿ ವಶಪಡಿಸಿಕೊಳ್ಳಲಾದ ಲಾರಿಯನ್ನು ಶ್ರೀರಾಮ ಟ್ರಾನ್ಸ್‍ಪೋರ್ಟ್ ಕಂಪನಿಯವರು ತಮ್ಮ ವಶಕ್ಕೆ ನೀಡುವಂತೆ ಯಲಬುರ್ಗಾದ ನ್ಯಾಯಾಲಯವನ್ನು ಕೋರಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
       ಕುಕನೂರು ಪೊಲೀಸ್ ಠಾಣೆಯಲ್ಲಿ ಕಳೆದ 2008 ರ ಫೆ. 13 ರಂದು ದಾಖಲಾಗಿದ್ದ ಪ್ರಕರಣವೊಂದರ ಆರೋಪಿಯಾಗಿದ್ದ ಲಾರಿ ಚಾಲಕ ರಾಯಚೂರಿನ ಎಲ್.ಬಿ.ಎಸ್. ನಗರದ ಬಾಬು ತಂದೆ ತಿಮ್ಮಣ್ಣ (23) ಮೃತಪಟ್ಟಿದ್ದು, ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತದೆ.  ಆದರೆ ಪ್ರಕರಣದ ತನಿಖೆಯ ಕಾಲಕ್ಕೆ ಜಪ್ತಿ ಮಾಡಿದ ಲಾರಿ ಹಾಗೆಯೇ ಉಳಿದಿದ್ದು, ಲಾರಿಯನ್ನು ಶ್ರೀರಾಮ ಟ್ರಾನ್ಸಪೋರ್ಟ್ ಕಂಪನಿಯವರು ತಮ್ಮ ವಶಕ್ಕೆ ಕೊಡಲು ಯಲಬುರ್ಗಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಯಾರದ್ದಾದರೂ ತಕರಾರು ಇದ್ದಲ್ಲಿ 2015 ರ ಜ. 07 ರ ಒಳಗಾಗಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಯಲಬುರ್ಗಾ ಇವರಲ್ಲಿ ಸಲ್ಲಿಸಬಹುದಾಗಿದೆ. ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ದೂ.08539-230111, ಕೊಪ್ಪಳ ಡಿ.ಎಸ್.ಪಿ. ದೂ.08539-230432, ಯಲಬುರ್ಗಾ ಸಿಪಿಐ ದೂ.08534-220133, ಕುಕನೂರು ಪೊಲೀಸ್ ಠಾಣೆ ದೂ.08534-230438 ಮೊ.9480803750 ಇವರಿಗೆ ಸಂಪರ್ಕಿಸಿ ಮಾಹಿತಿ ಸಲ್ಲಿಸಬಹುದಾಗಿದೆ ಎಂದು ಕುಕನೂರು ಪೊಲೀಸ್ ಠಾಣೆಯ ಪಿ.ಎಸ್.ಐ. ವಿಶ್ವನಾಥ ಹಿರೇಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ್‍ನಿಂದ ಪ್ರಾಯೋಜಿತ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ದೇಶಪಾಂಡೆ ರುಡ್‍ಸೆಟ್ ಸಂಸ್ಥೆ ಇವರಿಂದ ಡಿ.29 ರಿಂದ ಜ.27 ರವರೆಗೆ ಟಾಟಾ ಹಿಟಾಚಿ ಎಕ್ಸಾವೇಟರ್ ಮತ್ತು ಬ್ಯಾಕ್ ಹೋ ಲೋಡರ್ ಆಪರೇಟರ್ ತರಬೇತಿಗಳಿಗೆ ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, 18 ರಿಂದ 45 ವರ್ಷದೊಳಗಿನ ರಾಜ್ಯದ ಯಾವುದೇ ಭಾಗದ ಆಸಕ್ತ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲಿಚ್ಚಿಸುವವರು ತಮ್ಮ ಸ್ವವಿವರವುಳ್ಳ ಮಾಹಿತಿಯನ್ನು ಜೊತೆ ಪಡೆಯಲಿಚ್ಚಿಸುವ ತರಬೇತಿಯ ಹೆಸರನ್ನು ಬಿಳಿ ಹಾಳೆಯಲ್ಲಿ ಬರೆದು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಹಳಿಯಾಳ (ಉ.ಕ.) ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08284-220807, 9482188780, 9483485489 ನ್ನು ಅಥವಾ ವೆಬ್‍ಸೈಟ್  www.rsetihaliyal.org  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೊಪ್ಪಳ : ನೀರಿನ ಸಂಗ್ರಹಕ ಪೂರೈಕೆ ಯೋಜನೆಗೆ ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಶೇ.24.10 ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ವೈಯಕ್ತಿಕ ನೀರಿನ ಸಂಗ್ರಹಕಗಳನ್ನು (ಸಿಂಟ್ಯಾಕ್ಸ್) ಒದಗಿಸುವ ಯೋಜನೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ನಗರಸಭೆ ವ್ಯಾಪ್ತಿಯವರಾಗಿದ್ದು, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 02 ಭಾವಚಿತ್ರ, ಆಸ್ತಿಕರ ಪಾವತಿಸಿದ ರಶೀದಿ ಹಾಗೂ ಫಾರಂ ನಂ.03, ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲೆಗಳು ಗೆಜೆಟೆಡ್ ಅಧಿಕಾರಿಗಳಿಗೆ ದೃಢೀಕರಿಸಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ: 08539-230192 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಲ್ಯಾಪಟಾಪ್/ಡೆಸ್ಕಟಾಪ್‍ಗೆ ಸಹಾಯಧನ : ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಶೇ.24.10 ರ ಅನುದಾನದಲ್ಲಿ ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದ ಎಂ.ಬಿ.ಬಿ.ಎಸ್., ಬಿ.ಇ, ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವೃತ್ತಿನಿರತ ಪತ್ರಕರ್ತರಿಗೆ ಲ್ಯಾಪಟಾಪ್/ಡೆಸ್ಕಟಾಪ್ ಪಡೆದುಕೊಳ್ಳಲು ಸಹಾಯಧನ ಒದಗಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ನಗರಸಭೆ ವ್ಯಾಪ್ತಿಯವರಾಗಿದ್ದು, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 02 ಭಾವಚಿತ್ರ, ಪ.ಜಾತಿ ವರ್ಗದ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್./ಬಿ.ಇ. ವ್ಯಾಸಂಗ ಮಾಡುತ್ತಿರುವ ಸಂಬಂಧಪಟ್ಟ ವಿದ್ಯಾ ಸಂಸ್ಥೆಗಳಿಂದ ಚಾಲ್ತಿ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಪ.ಜಾತಿ. ಹಾಗೂ ಪ.ಪಂಗಡದ ವೃತ್ತಿನಿರತ ಅರ್ಹ ಪತ್ರಕರ್ತರು ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲೆಗಳು ಗೆಜೆಟೆಡ್ ಅಧಿಕಾರಿಗಳಿಗೆ ದೃಢೀಕರಿಸಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ: 08539-230192 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಸಣ್ಣ ಉದ್ದಿಮೆ ಪ್ರಾರಂಭಕ್ಕೆ ಸಹಾಯಧನ : ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಶೇ.24.10 ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಉದ್ದಿಮೆದಾರರಿಗೆ ಸಣ್ಣ ಉದ್ದಿಮೆ ಪ್ರಾರಂಭಿಸಲು ಸಹಾಯಧನ ಒದಗಿಸಲಾಗುತ್ತಿದ್ದು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ನಗರಸಭೆ ವ್ಯಾಪ್ತಿಯವರಾಗಿದ್ದು, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 02 ಭಾವಚಿತ್ರ, ಸಣ್ಣ ಉದ್ದಿಮೆಯನ್ನು ನಡೆಸಲು ಸಹಾಯಧನ ಪಡೆಯಲಿಚ್ಚಿಸುವವರು ಬ್ಯಾಂಕಿನಿಂದ ತಾವು ನಡೆಸುತ್ತಿರುವ ಉದ್ದಿಮೆಗಾಗಿ ಸಾಲವನ್ನು ಮಂಜೂರು ಮಾಡಿಸಿಕೊಂಡಂತಹ ಫಲಾನುಭವಿಗಳಿಗೆ ಮಾತ್ರ ಬ್ಯಾಕ್ ಆಂಡ್ ಸಬ್‍ಸಿಡಿ ರೂಪದಲ್ಲಿ ಸಾಲ ನೀಡಿದ ಬ್ಯಾಂಕುಗಳಿಗೆ ಸಹಾಯಧನವನ್ನು ಪಾವತಿ ಮಾಡಲಾಗುವುದು, ಸಣ್ಣ ಉದ್ದಿಮೆಯನ್ನು ನಡೆಸಲು ಬ್ಯಾಂಕಿನಿಂದ ಸಾಲ ಪಡೆದುಕೊಂಡಂತಹ ದಾಖಲಾತಿಗಳನ್ನು ಲಗತ್ತಿಸಬೇಕು, ಚಾಲ್ತಿ ಸಾಲಿನ ಆಸ್ತಿಕರ ಪಾವತಿಸಿದ ರಶೀದಿ ಹಾಗೂ ನಮೂನೆ-3 ಲಗತ್ತಿಸಿ ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲೆಗಳು ಗೆಜೆಟೆಡ್ ಅಧಿಕಾರಿಗಳಿಗೆ ದೃಢೀಕರಿಸಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ: 08539-230192 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ವೈಯಕ್ತಿಕ ನಳ ಜೋಡನೆ : ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ ಪ್ರಸಕ್ತ ಸಾಲಿನ ಶೇ.24.10 ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ವೈಯಕ್ತಿಕ ನಳ ಜೋಡನೆಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸುವವರು ನಗರಸಭೆ ವ್ಯಾಪ್ತಿಯವರಾಗಿದ್ದು, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ, ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, 02 ಭಾವಚಿತ್ರ, ಚಾಲ್ತಿ ಸಾಲಿನ ಆಸ್ತಿಕರ ಪಾವತಿಸಿದ ರಶೀದಿ ಹಾಗೂ ನಮೂನೆ-3, ರೂ.20.00 ಛಾಪಾ ಕಾಗದದ ಮೇಲೆ ಕರಾರು ಪತ್ರ ಹಾಗೂ ಮೂರು ನೀಲಿ ನಕಾಶೆಗಳನ್ನು ಲಗತ್ತಿಸಿ  ಅರ್ಜಿಯೊಂದಿಗೆ ಲಗತ್ತಿಸುವ ಎಲ್ಲಾ ದಾಖಲೆಗಳು ಗೆಜೆಟೆಡ್ ಅಧಿಕಾರಿಗಳಿಗೆ ದೃಢೀಕರಿಸಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ: 08539-230192 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ನಗರಸಭೆಯಿಂದ ವಿವಿಧ ತರಬೇತಿಗಳಿಗೆ : ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಪ್ರಸಕ್ತ ಸಾಲಿಗಾಗಿ ವಿವಿಧ ತರಬೇತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ನಗರ ಪ್ರದೇಶಗಳಲ್ಲಿರುವ 18 ರ ಮೇಲ್ಪಟ್ಟ ವಯೋಮಿತಿಯ ಬಡತನ ರೇಖೆಗಿಂತ ಕೆಳಗಿರುವ ರೂ.23124 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಉಳ್ಳ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಸಂಸ್ಥೆ (40 ಫಲಾನುಭವಿಗಳು), ಕೆ.ಎಸ್.ಆರ್.ಟಿ.ಸಿ. (10 ಫಲಾನುಭವಿಗಳು) ಹಾಗೂ ಎಲ್.ಎಂ.ವ್ಹಿ.ಕ್ಯಾಬ್ (87 ಫಲಾನುಭವಿಗಳು) (ಆರ್.ಟಿ.ಓ. ನೋಂದಾಯಿತ) ಸಂಸ್ಥೆಗಳ ಮುಖಾಂತರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 
     ಇಚ್ಚೆಯುಳ್ಳ ಬಿಪಿಎಲ್ ಅಭ್ಯರ್ಥಿಗಳು ನಿಗದಿತ ಅರ್ಜಿ ಹಾಗೂ ದಾಖಲೆಗಳೊಂದಿಗೆ ಡಿ.31 ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ದ್ವೀಪ್ರತಿ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ, ವಿದ್ಯಾರ್ಹತೆ ಬಗ್ಗೆ ದಾಖಲಾತಿಗಳು, ಉದ್ದೇಶಿಸಿರುವ ಚಟುವಟಿಕೆಯ ಬಗ್ಗೆ ಅನುಭವ ಹೊಂದಿದ್ದರೆ/ತರಬೇತಿ ಪಡೆದಿದ್ದರ ಪ್ರಮಾಣ ಪತ್ರ, 3 ವರ್ಷಗಳ ಕಾಲ ನಿವಾಸಿಯಾಗಿರುವುದಕ್ಕೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಅಥವಾ ಸರ್ಟಿಫಿಕೇಟ್ ಲಗತ್ತಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರಸಭೆ ಕಾರ್ಯಾಲಯ ದೂರವಾಣಿ ಸಂಖ್ಯೆ: 08539-230192 ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಗಂಗಾವತಿಯಲ್ಲಿ ಸಮುದಾಯ ಭವನಗಳಿಗೆ ನಿವೇಶನ ಹಂಚಿಕೆ- ಆಕ್ಷೇಪಣೆಗಳಿಗೆ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ವಾಲ್ಮೀಕಿ ಭವನ, ಕನಕಭವನ, ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ಹಾಗೂ ಜೈನ ಸಮುದಾಯ ಭವನ ಇವುಗಳನ್ನು ನಿರ್ಮಾಣ ಮಾಡಲು ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕರ ಉದ್ದೇಶಕ್ಕಾಗಿ ಕಾಯ್ದಿರಿಸಿದ ಜಾಗೆಗಳನ್ನು ಮಂಜೂರು ಮಾಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಈ ವಿಷಯದ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆ/ಸಲಹೆಗಳನ್ನು 30 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
     ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ವೆ ನಂ.293/1 ರಿಂದ 11, ಅಳತೆ 150 ಅಡಿ * 200 ಅಡಿ, ಜೈನ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ವೆ ನಂ.255/ಬಿ ಹಾಗೂ 276/ಎ, ಅಳತೆ 55 ಅಡಿ * 118 ಅಡಿ, ಕನಕಭವನ ನಿರ್ಮಾಣಕ್ಕಾಗಿ ಸರ್ವೆ ನಂ.280 ಹಾಗೂ 281, ಅಳತೆ 70 ಅಡಿ * 164 ಅಡಿ, ಹಡಪದ ಅಪ್ಪಣ್ಣ ಭವನ ನಿರ್ಮಾಣಕ್ಕಾಗಿ ಸರ್ವೆ ನಂ.286/2, 286/2/3, 286/2/4/, 286/2/5 ಹಾಗೂ 286/2/6, ಅಳತೆ 52 ಅಡಿ * 67 ಅಡಿ ಇರುತ್ತದೆ.   ಸಾರ್ವಜನಿಕರು ತಮ್ಮ ಆಕ್ಷೇಪಣೆ/ಸಲಹೆಗಳಿದ್ದಲ್ಲಿ 30 ದಿನಗಳೊಳಗಾಗಿ ಗಂಗಾವತಿ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಕುರಿ ಸಾಕಾಣಿಕೆ/ಕಂಬಳಿ ನೇಕಾರರಿಗೆ ಸಹಾಯಧನ : ಅರ್ಜಿ ಆಹ್ವಾನ

ಕೊಪ್ಪಳ,ಡಿ.20(ಕರ್ನಾಟಕ ವಾರ್ತೆ): ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿಗೆ ಕುರಿ ಸಾಕಾಣಿಕೆ ಹಾಗೂ ಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಮಂಜೂರಾತಿಗಾಗಿ ಆಸಕ್ತ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಈ ಯೋಜನೆಯಲ್ಲಿ 23 ಕುರಿಗಳು ಮತ್ತು 2 ಟಗರು ಕೊಳ್ಳಲು ಆರ್ಥಿಕ ಸಹಾಯ ಒದಗಿಸಲಾಗುವುದು, ಯೋಜನೆಯ ಘಟಕ ವೆಚ್ಚ ರೂ.1.00 ಲಕ್ಷಗಳು ಆಗಿರುತ್ತದೆ. ಈ ಮೊತ್ತದಲ್ಲಿ ಗರಿಷ್ಠ ರೂ.10,000/- ಗಳ ಸಹಾಯಧನ ಹಾಗೂ ರೂ.90,000/- ಗಳ ಸಾಲ ಒಳಗೊಂಡಿದೆ. ಸಾಲಕ್ಕೆ ವಾರ್ಷಿಕ ಶೇ.4 ರ ಬಡ್ಡಿ ವಿಧಿಸಲಾಗುವುದು.   ಅಭ್ಯರ್ಥಿಗಳು ಪ್ರವರ್ಗ-1 ಮತ್ತು 2ಎ ಗೆ ಸೇರಿರಬೇಕು, ವಾರ್ಷಿಕ ಆದಾಯ ಗ್ರಾಮೀಣರಿಗೆ ರೂ.40,000/- ಹಾಗೂ ನಗರ ಪ್ರದೇಶದವರಿಗೆ ರೂ.55,000/- ಮಿತಿಯೊಳಗಿರಬೇಕು. ಕುರಿ ಸಾಕುವುದರಲ್ಲಿ/ಕಂಬಳಿ ನೇಕಾರಿಕೆ ಮಾಡುವುದರ ಬಗ್ಗೆ ಅನುಭವ ಹೊಂದಿರಬೇಕು, ಕಂಬಳಿ ನೇಕಾರ ಅರ್ಜಿದಾರರು ಉಣ್ಣೆ ಮಾರಾಟ ಮಾಡಲು ಹತ್ತಿರದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿರಬೇಕು, ಅರ್ಜಿದಾರರು 18 ರಿಂದ 55 ವರ್ಷದವರಾಗಿರಬೇಕು, ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ನಿಗಮದ ಯಾವುದೇ ಯೋಜನೆಗಳಲ್ಲಿ ಈ ಹಿಂದೆ ಸಾಲ ಪಡೆದಿರಬಾರದು. ಸಾಲದ ಭದ್ರತೆಗೆ ಸಾಲದ ಮೊತ್ತದಷ್ಟು ಮೌಲ್ಯವಿರುವ ಅರ್ಜಿದಾರರು/ಜಮೀನುದಾರರ ಸ್ಥಿರಾಸ್ಥಿಯನ್ನು ನಿಗಮದ ಹೆಸರಿಗೆ ಆಧಾರ ಮಾಡಿ ಕೊಡಬೇಕು. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಬೇಕು.
     ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಜಿಲ್ಲಾಡಳಿತ ಭವನ ಕೊಪ್ಪಳ ಇಲ್ಲಿ ಪಡೆದು ಡಿ.26 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 08539-221847 ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 19 December 2014

ವಿದ್ಯಾರ್ಥಿಗಳಿಗೆ ಎರಡನೆ ಸಮವಸ್ತ್ರ ಶೀಘ್ರ ವಿತರಿಸಿ- ಅಮರೇಶ್ ಕುಳಗಿ

ಕೊಪ್ಪಳ ಡಿ.19 (ಕ.ವಾ) : ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಎರಡನೆ ಸಮವಸ್ತ್ರವನ್ನು ಇದುವರೆಗೂ ಸಮರ್ಪಕವಾಗಿ ವಿತರಿಸಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಸಮವಸ್ತ್ರ ವಿತರಣೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಮೊದಲನೆ ಸಮವಸ್ತ್ರವನ್ನು ವಿತರಿಸಲಾಗಿದ್ದು, ಇದೀಗ ಎರಡನೆಯ ಸಮವಸ್ತ್ರವನ್ನು ವಿತರಿಸಬೇಕಾಗಿದೆ.  ಆದರೆ ಹಲವು ಶಾಲೆಗಳಲ್ಲಿ ಇದುವರೆಗೂ ಸಮವಸ್ತ್ರವನ್ನು ವಿತರಿಸದೆ, ಮಕ್ಕಳನ್ನು ಸೌಲಭ್ಯದಿಂದ ವಂಚಿತರನ್ನಾಗಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಕುರಿತು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷರು, ಕೂಡಲೆ ಎರಡನೆ ಸಮವಸ್ತ್ರ ವಿತರಣೆ ಕಾರ್ಯವನ್ನು ಜಿಲ್ಲೆಯಾದ್ಯಂತ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಡಿಡಿಪಿಐ ಶ್ಯಾಮಸುಂದರ್ ಅವರು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 1 ರಿಂದ 8 ನೇ ತರಗತಿವರೆಗಿನ 1. 33 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಎರಡನೆ ಸಮವಸ್ತ್ರವನ್ನು ವಿತರಿಸಬೇಕಾಗಿದೆ.  ಇದಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಿನಲ್ಲೇ ಒಟ್ಟು 2. 66 ಕೋಟಿ ರೂ. ಅನುದಾನವನ್ನು ಆಯಾ ಶಾಲೆಗಳ ಎಸ್‍ಡಿಎಂಸಿ ಅವರಿಗೆ ಜಮಾ ಮಾಡಲಾಗಿದೆ.  ಕೆಲವು ಶಾಲೆಗಳಲ್ಲಿ ಈಗಾಗಲೆ ಸಮವಸ್ತ್ರ ವಿತರಿಸಲಾಗಿದ್ದು, ಇದುವರೆಗೂ ಸಮವಸ್ತ್ರ ವಿತರಣೆ ಮಾಡದ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆಯಾಗದಂತೆ ಮೇಲ್ವಿಚಾರಣೆ ನಡೆಸಬೇಕು.  ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆಯಾದ ಬಗ್ಗೆ ದೂರುಗಳು ಬಂದಲ್ಲಿ, ಡಿಡಿಪಿಐ ಅವರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೀಮೆಎಣ್ಣೆ ಸಮರ್ಪಕ ವಿತರಣೆ ಮಾಡಿ : ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ಸೀಮೆ ಎಣ್ಣೆ ವಿತರಣೆ ಮಾಡಲಾಗುತ್ತಿದ್ದು, ವಿತರಣಾ ಏಜೆನ್ಸಿ ಮತ್ತು ಫಲಾನುಭವಿಗಳಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಸೀಮೆ ಎಣ್ಣೆ ಪೂರೈಕೆ ಮಾಡಲಾಗುತ್ತಿದೆ ಎಂಬುದಾಗಿ ದೂರುಗಳು ಬಂದಿದ್ದು, ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ಸೀಮೆಎಣ್ಣೆ ವಿತರಣೆ ಬಗ್ಗೆ ಸ್ಪಷ್ಟನೆ ನೀಡುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.  ಅಲ್ಲದೆ ಇನ್ನು ಮುಂದೆ ಇಂತಹ ದೂರುಗಳು ಬಂದಲ್ಲಿ, ತಮ್ಮನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.  ಈ ಕುರಿತು ಸ್ಪಷ್ಟನೆ ನೀಡಿದ ಆಹಾರ ಇಲಾಖೆ ಉಪನಿರ್ದೇಶಕ ಆರ್. ಲಂಬೂ ಅವರು, ಸೀಮೆ ಎಣ್ಣೆ ಹಂಚಿಕೆ ಪ್ರಕ್ರಿಯೆ ಇಲಾಖೆಯ ಕೇಂದ್ರ ಕಚೇರಿಯಿಂದಲೇ ನಡೆಯುವ ಪ್ರಕ್ರಿಯೆಯಾಗಿದ್ದು, ಇದು ಸಂಪೂರ್ಣವಾಗಿ ಗಣಕೀಕರಣ ವ್ಯವಸ್ಥೆಯಲ್ಲಿ ನಡೆಯುತ್ತದೆ.  ಇದರಲ್ಲಿ ಜಿಲ್ಲಾ ಕಚೇರಿಯಿಂದ ಯಾವುದೇ ಹಸ್ತಕ್ಷೇಪ ಮಾಡಲು ಬರುವುದಿಲ್ಲ.  ಆಯಾ ಏಜೆನ್ಸಿ ಅವರಿಗೆ ಹಂಚಿಕೆ ಮಾಡಲಾಗಿರುವ ಫಲಾನುಭವಿಗಳ ಸಂಖ್ಯೆಗಳಿಗೆ ಹಾಗೂ ವಿತರಣೆಯ ಪ್ರಮಾಣಕ್ಕೆ ಅನುಗುಣವಾಗಿ ಸೀಮೆ ಎಣ್ಣೆ ಹಂಚಿಕೆ ಮಾಡಲಾಗುತ್ತದೆ ಎಂದರು.
ಗಿಣಿಗೇರಾ-ಬೂದಗುಂಪಾ ರಸ್ತೆ : ಜಿಲ್ಲೆಯ ಗಿಣಿಗೇರಾ-ಬೂದಗುಂಪಾ ರಸ್ತೆ ಕೇವಲ 10 ನಿಮಿಷಗಳ ದಾರಿಯಾಗಿದ್ದರೂ, ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ 50 ನಿಮಿಷಗಳ ದಾರಿಯಾಗುತ್ತಿದೆ.  ಇದರಿಂದಾಗಿ ಪ್ರಯಾಣಿಕರು, ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.  ರಸ್ತೆ ದುರಸ್ತಿ ಕಾರ್ಯ ಕೂಡಲೆ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.  ಇದಕ್ಕೆ ಉತ್ತಿರಿಸಿದ ಕೆ.ಆರ್.ಡಿ.ಸಿ.ಎಲ್ ಇಲಾಖೆಯ ಅಧಿಕಾರಿಗಳು, ಈಗಾಗಲೆ ಗಿಣಿಗೇರಾ-ಸಿಂಧನೂರು ಮಾರ್ಗದ ರಸ್ತೆಯನ್ನು 240 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸುಧಾರಣೆ ಕೈಗೊಳ್ಳುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲೆ ನವೀಕರಣಕ್ಕೂ ಹಣ : ಗಂಗಾವತಿ ತಾಲೂಕಿನ ಶಾಲೆಗಳ ನವೀಕರಣಕ್ಕೆ ಹಾಗೂ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಅನುಮತಿ ಹಾಗೂ ಮಂಜೂರಾತಿಗೆ ಅಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಶಾಲೆಗಳಿಂದ ದೂರುಗಳು ಬರುತ್ತಿವೆ.  ಈ ಕುರಿತು ಇಲಾಖಾ ವಿಚಾರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಶ್ಯಾಮಸುಂದರ್ ಅವರು, ಶಾಲೆಗಳ ನವೀಕರಣ ಅಥವಾ ಪ್ರವಾಸಕ್ಕೆ ಅನುಮತಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳವರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಇದುವರೆಗೂ ಶಿಕ್ಷಣ ಇಲಾಖೆ ಕಚೇರಿಗಾಗಲಿ ತಮಗೆ ಆಗಲಿ ಯಾವುದೇ ಯಾವುದೇ ದೂರುಗಳು ಬಂದಿಲ್ಲ.  ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವಿಚಾರಣೆ ನಡೆಸಿ, ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
     ಯುವಜನರಿಗೆ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತಹ ಸಂಜೀವಿನಿ ಯೋಜನೆಯಲ್ಲಿ ರಾಜ್ಯ ಮಟ್ಟದಲ್ಲಿ ಕೊಪ್ಪಳ ಜಿಲ್ಲೆ ಮೊದಲನೆ ಸ್ಥಾನದಲ್ಲಿದೆ.  ಇದಕ್ಕಾಗಿ ಶ್ರಮಿಸಿದ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ ಅವರು ಮಾತನಾಡಿ, ಸಣ್ಣ ನೀರಾವರಿ ಇಲಾಖೆಯ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಸೌರಶಕ್ತಿ ಪಂಪ್‍ಸೆಟ್ ಅಳವಡಿಸುವ ಯೋಜನೆ ಜಿಲ್ಲೆಯಲ್ಲಿ ಕೇವಲ ಗಂಗಾವತಿ ತಾಲೂಕಿನಲ್ಲಿ ಮಾತ್ರ ತ್ವರಿತವಾಗಿ ಅನುಷ್ಠಾನಗೊಳ್ಳುತ್ತಿದ್ದು, ಉಳಿದ ತಾಲೂಕುಗಳಲ್ಲಿ ಆಗುತ್ತಿಲ್ಲ.  ಇಲಾಖೆಯ ಅಧಿಕಾರಿಗಳು ಉಳಿದ ತಾಲೂಕುಗಳಲ್ಲಿಯೂ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸಣ್ಣ ನೀರಾವರಿ ಇಲಾಖೆ ಎಇಇ ಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ಸಭೆಯಲ್ಲಿ ಜಿ.ಪಂ. ವ್ಯಾಪ್ತಿಯ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಇದೇ ಸಂದರ್ಭದಲ್ಲಿ ನಡೆಸಲಾಯಿತು.

ಡಿ.24 ರಂದು ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸ

ಕೊಪ್ಪಳ,ಡಿ.19(ಕರ್ನಾಟಕ ವಾರ್ತೆ): ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಡಿ.24 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
     ಮುಖ್ಯಮಂತ್ರಿಗಳು ಡಿ.24 ರಂದು ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು, ಗಿಣಗೇರಾ ಏರ್‍ಸ್ಟ್ರಿಪ್‍ಗೆ (ಎಂ.ಎಸ್.ಪಿ.ಎಲ್. ವಿಮಾನ ನಿಲ್ದಾಣ) ಬೆಳಿಗ್ಗೆ 11 ಗಂಟೆಗೆ ಆಗಮಿಸುವರು. ನಂತರ ಕೊಪ್ಪಳ ನಗರಕ್ಕೆ ಆಗಮಿಸಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 1.30 ಕ್ಕೆ ಕೊಪ್ಪಳದಿಂದ ರಸ್ತೆ ಮೂಲಕ ಕುಷ್ಟಗಿಗೆ ಪ್ರಯಾಣ ಬೆಳೆಸುವರು.   ಕುಷ್ಟಗಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಜರುಗುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮುಖ್ಯಮಂತ್ರಿಗಳು ಅದೇ ದಿನ ಸಂಜೆ 4.30 ಕ್ಕೆ ಕುಷ್ಟಗಿಯಿಂದ ಕೊಪ್ಪಳ ರಸ್ತೆ ಮೂಲಕ ಗಿಣಗೇರಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ ನಂತರ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಯುವಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

ಕೊಪ್ಪಳ,ಡಿ.18(ಕರ್ನಾಟಕ ವಾರ್ತೆ): ಕೊಪ್ಪಳದ ಆಯುವೇದಿಕ್ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿಯಾಗಿರುವ ಉತ್ತರ ಪ್ರದೇಶ ರಾಜ್ಯದ ಯೋಗೇಂದ್ರ ವರ್ಮಾ (22) ಎಂಬ ಯುವಕ ಡಿ. 17 ರಿಂದ ಕಾಣೆಯಾಗಿದ್ದು, ಈತನ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
     ಯುವಕ ಯೋಗೇಂದ್ರವರ್ಮಾ ನಗರದ ಶಾರದಾ ಟಾಕೀಜ ಹತ್ತಿರದ ಸಂಜೀವರಾವ್ ಇವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ಉತ್ತರ ಪ್ರದೇಶ ರಾಜ್ಯದ ಲಕೀಮಪುರ ಜಿಲ್ಲೆಯ ಮೊಹಲ್ಲಾ ಗ್ರಾಮದ ಯೋಗೇಂದ್ರ ವರ್ಮ ತಂದೆ ಸಂಜೀವಕುಮಾರ ವರ್ಮಾ (22) ಎಂಬ ಯುವಕ ಡಿ. 17 ರಂದು ‘ಎಲ್ಲರು ಚೆನ್ನಾಗಿ ಇರಿ, ನಾನು ಹೋಗುತ್ತೇನೆ’ ಎಂಬುದಾಗಿ ಚೀಟಿಯಲ್ಲಿ ಬರೆದಿಟ್ಟು, ಮೊಬೈಲ್ ಸಹ ರೂಮಿನಲ್ಲಿಯೇ ಬಿಟ್ಟು  ಕಾಣೆಯಾಗಿರುತ್ತಾನೆ.  
     ಯುವಕನ ಚಹರೆ ಇಂತಿದೆ :   ಜಾತಿ: ಕುರ್ಮಿ, ಎತ್ತರ : 5” 2”, ದಪ್ಪನೆಯ ಮೈಕಟ್ಟು, ದುಂಡು ಮುಖ, ಕೆಂಪು ಮೈಬಣ್ಣ ಹೊಂದಿರುತ್ತಾನೆ. ಹಿಂದಿ, ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಮೈಮೇಲೆ ಬೂದು ಬಣ್ಣದ ಜಾಕೇಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದ.  ಈ ಚಹರೆಯುಳ್ಳ ಯುವಕನ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ, ಕೂಡಲೇ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕಂಟ್ರೋಲ್ ರೂಂ ನಂ.08539-230100-230222, ನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮೊ.9480803745, ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539-220333 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಒಳನಾಡು ಮೀನುಗಾರಿಕೆ ತರಬೇತಿ : ಪುರುಷರಿಂದ ಅರ್ಜಿ ಆಹ್ವಾನ


ಕೊಪ್ಪಳ,ಡಿ.19(ಕರ್ನಾಟಕ ವಾರ್ತೆ): ಮೀನುಗಾರಿಕೆ ಇಲಾಖೆಯು ಒಳನಾಡು ಮೀನುಗಾರಿಕೆ ಕುರಿತು ಆಸಕ್ತ ಗ್ರಾಮೀಣ ಪುರುಷ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
     ತರಬೇತಿಯು ಶಿವಮೊಗ್ಗ ಜಿಲ್ಲೆ ಬಿ.ಆರ್. ಪ್ರಾಜೆಕ್ಟ್‍ನಲ್ಲಿರುವ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಜ.19 ರಿಂದ ಪ್ರಾರಂಭವಾಗಲಿದ್ದು, ತರಬೇತಿಯು 01 ತಿಂಗಳ ಅವಧಿಯದಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನುಮರಿ ಉತ್ಪಾದನೆ, ಪಾಲನೆ, ಹಂಚಿಕೆ, ಮೀನು ಸಾಕಾಣಿಕೆ, ಬಲೆಗಳನ್ನು ಹೆಣೆಯುವುದು, ದುರಸ್ತಿ ಮಾಡುವುದು, ಹರಿಗೋಲು ನಡೆಸುವುದು, ಮೀನು ಹಿಡಿಯುವುದು, ಅಲಂಕಾರಿಕ ಮೀನುಮರಿ ಉತ್ಪಾದನೆ, ಪಾಲನೆ ಇತ್ತೀಚಿನ ಬೆಳವಣಿಗೆಗಳು ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.
     ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ. (ಪಾಸ್ ಅಥವಾ ಫೇಲ್) ಓದಿರಬೇಕು,  ಮೀನುಗಾರಿಕೆ ವೃತ್ತಿ ನಡೆಸುತ್ತಿರುವವರು, ಮೀನುಗಾರರ ಸಹಕಾರ ಸಂಘದ ಸದಸ್ಯರು, ಇತ್ಯಾದಿ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಲಾಗುವುದು, ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ರೂ. 2000 ಗಳ ಶಿಷ್ಯವೇತನ ನೀಡಲಾಗುವುದು, ಅಲ್ಲದೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ನಿಗದಿತ ಅರ್ಜಿಯನ್ನು ಸ್ವವಿಳಾಸದ ಲಕೋಟೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ತಾ|| ಭದ್ರಾವತಿ ಶಿವಮೊಗ್ಗ ಜಿಲ್ಲೆ ಇವರಿಗೆ ಕಳುಹಿಸಬಹುದು.  ಭರ್ತಿ ಮಾಡಿದ ಅರ್ಜಿಯನ್ನು ಜ.14  ರ ಒಳಗಾಗಿ ಕಳುಹಿಸಬೇಕು. ಹೆಚ್ಚಿನ ವಿವರಗಳನ್ನು ಜಿಲ್ಲಾ ಮಟ್ಟದ ಅಥವಾ ತಾಲೂಕು ಮಟ್ಟದ ಮೀನುಗಾರಿಕೆ ಕಚೇರಿಯಿಂದ ಪಡೆಯಬಹುದು ಅಥವಾ ದೂರವಾಣಿ ಸಂಖ್ಯೆ: 08282-256252 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಧಿಕಾರಿಗಳ ಕಾರ್ಯಾಚರಣೆ : ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿ


ಕೊಪ್ಪಳ ಡಿ. 19 (ಕರ್ನಾಟಕ ವಾರ್ತೆ): ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಗುರುವಾರದಂದು ಜರುಗಬೇಕಾಗಿದ್ದ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಜಂತಕಲ್‍ನ ಹದಿನೈದೂವರೆ ವರ್ಷದ ಬಾಲಕಿಯ ವಿವಾಹವನ್ನು ತಡೆಯುವಲ್ಲಿ ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಯ ಯುನಿಸೆಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
     ಗಂಗಾವತಿ ತಾಲೂಕು ಹಿರೇಜಂತಕಲ್‍ನ ನಾರಾಯಣಪ್ಪ ಅವರ ಹದಿನೈದೂವರೆ ವರ್ಷದ ಪುತ್ರಿಯ ವಿವಾಹವನ್ನು ದಾವಣಗೆರೆ ಜಿಲ್ಲೆ ಹರಿಯರದ ದಿ. ರಂಗಪ್ಪ ಅಳವಂಡಿ ಇವರ ಪುತ್ರನೊಂದಿಗೆ ವಿವಾಹ ಡಿ. 18 ರಂದು ಗುರುವಾರ ಹರಿಹರದ ಎಸ್‍ಎಸ್‍ಕೆ ಕಲ್ಯಾಣ ಮಂಟಪದಲ್ಲಿ ನಡೆಸಲು ಸಿದ್ಧತೆಗಳು ನಡೆದಿದ್ದವು.  ಈ ಕುರಿತು ಸಾರ್ವಜನಿಕರ ಮಾಹಿತಿಯನ್ವಯ, ಕೊಪ್ಪಳದ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು, ಹರಿಹರದ ಸಿಡಿಪಿಓ ಹಾಗೂ ಸ್ಥಳೀಯ ನಗರ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ಅವರ ನೆರವಿನೊಂದಿಗೆ, ಬಾಲ್ಯ ವಿವಾಹವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲಾಗಿದ್ದು, ಬಾಲಕಿಯನ್ನು ದಾವಣಗೆರೆಯ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಬಾಲಕಿಯ ಮುಂದಿನ ಶೈಕ್ಷಣಿಕ ಪುನರ್ವಸತಿ ಕಲ್ಪಿಸುವುದಾಗಿ ಯುನಿಸೆಫ್‍ನ ಸಂಯೋಜಕ ಹರೀಶ್ ಜೋಗಿ ಅವರು ತಿಳಿಸಿದ್ದಾರೆ.

Thursday, 18 December 2014

ಗಿಣಿಗೇರಿ : ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮ

ಕೊಪ್ಪಳ,ಡಿ.18(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಗಿಣಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
     ಮುಖ್ಯ ಅತಿಥಿಗಳಾಗಿ ಮಕ್ಕಳ ವಿಶೇಷ ಪೋಲಿಸ ಘಟಕದ ಜಗದೀಶ್ವರಯ್ಯ ಹಿರೇಮಠ ಮಾತನಾಡಿ, ಭಾರತವೂ ಸಹ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ್ದು ದೇಶದ ಎಲ್ಲಾ ಮಕ್ಕಳಿಗೂ ಅವರ ಹಕ್ಕುಗಳನ್ನು  ಒದಗಿಸಲು ಬದ್ದವಾಗಿದೆ. ಅಲ್ಲದೇ ಮಕ್ಕಳಿಗೆ ಬದಕುವ ಹಕ್ಕು, ಅಭಿವೃದ್ಧಿ ಮತ್ತು ವಿಕಾಸಹೊಂದುವ ಹಕ್ಕು, ಶೋಷಣೆಯ ವಿರುದ್ಧ ಸಂರಕ್ಷಣೆ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳನ್ನು ನೀಡಿರುವುದಷ್ಟೇ ಅಲ್ಲದೇ ಈ ಹಕ್ಕುಗಳನ್ನು ಅವರಿಗೆ ತಲುಪಿಸಲು ಹಲವಾರು ಕಾನೂನುಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಹೇಳಿದರು. ಬಾಲ ನ್ಯಾಯ (ಆರೈಕೆ ಮತ್ತು ಪೋಷಣೆ) ಕಾಯ್ದೆ-2000ರನ್ವಯ ಜಿಲ್ಲೆಯಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕವನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳ ಕಛೇರಿಯಲ್ಲಿ  ಸ್ಥಾಪಿಸಲಾಗಿದೆ. ಅಲ್ಲದೇ ಪೊಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಮಕ್ಕಳ ಕಲ್ಯಾಣಾಧಿಕಾರಿಗಳೆಂದು ನೇಮಿಸಿದ್ದು, ಆರೈಕೆ ಮತ್ತು ಪೋಷಣೆ ಅವಶ್ಯಕತೆಯಿರುವ ಯಾವುದೇ ಮಗುವನ್ನು ಯಾರೇ ವ್ಯಕ್ತಿಗಳು ಆರೈಕೆ ಮತ್ತು ಪೋಷಣೆಗಾಗಿ ಮಕ್ಕಳನ್ನು ಹಾಜರಪಡಿಸಬಹುದಾಗಿದೆ. ನಂತರ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಸೂಕ್ತ ಪುರ್ನವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
     ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರ ಮಾತನಾಡಿ, ತಾಯಿ ಮತ್ತು ನವಜಾತ ಶಿಶು ಮರಣ ಪ್ರಮಾಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಸಮಸ್ಯೆಗೆ ಎಳ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹ ಮಾಡುವುದು ಒಂದು ಪ್ರಮುಖ ಕಾರಣವಾಗಿದೆ, ಈ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, 18 ವರ್ಷದೊಳಗಿನ ಹೆಣ್ನು ಮಕ್ಕಳಿಗೆ ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡುವುದು ಅಪರಾಧ.ಚಿಕ್ಕ ಪ್ರಾಯದ ಮಗುವನ್ನು ಮದುವೆಯಾದ ಪುರುಷನಿಗೆ, ಬಾಲ್ಯ ವಿವಾಹ ಮಾಡಿದವರಿಗೆ, ಪ್ರೊತ್ಸಾಹಿಸಿದವರಿಗೆ ಹಾಗೂ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರೆಲ್ಲರೆಗೂ ಈ ಕಾಯ್ದೆಯಡಿಯಲ್ಲಿ 2 ವರ್ಷ ಜೈಲು ಮತ್ತು ರೂ 1 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಮಕ್ಕಳ ಹಕ್ಕುಗಳನ್ನು ನೀವು ಗೌರವಿಸಿದಲ್ಲಿ, ಕಾನೂನು ನಿಮ್ಮನ್ನು ಗೌರವಿಸುತ್ತದೆ ಎಂದು ಎಂದರು.
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ವಹಿಸಿದ್ದರು. ಮಕ್ಕಳ ಸಹಾಯವಾಣಿಯ ಶರಣಪ್ಪ ಹಿರೆತೆಮಿನಾಳ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿ ಬಡಿಗೇರ,  ಶಾಲೆಯ ಸಹಶಿಕ್ಷಕ ಶಾಂತಕುಮಾರ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಮನಮ್ಮ ನಿರೂಪಿಸಿದರು. ಕೊನೆಯಲ್ಲಿ ಸಮುದಾಯ ಸಂಘಟಕ ದೇವರಾಜ ವಂದಿಸಿದರು.

ಇಸ್ಲಾಮಿಕ್ ಹಬ್ಬಗಳ ನೂತನ ಚಂದ್ರಮಾನ ಹೀಲಾಲ್ ಸಮಿತಿ ರಚನೆ

ಕೊಪ್ಪಳ,ಡಿ.18(ಕರ್ನಾಟಕ ವಾರ್ತೆ): ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯದಲ್ಲಿ ಗುರುವಾರದಂದು ನಡೆದ ಸಭೆಯಲ್ಲಿ ಜಿಲ್ಲೆಯ ಇಸ್ಲಾಮಿಕ್ ಹಬ್ಬಗಳ ನೂತನ ಚಂದ್ರಮಾನ ಹೀಲಾಲ್ ಸಮಿತಿ ರಚಿಸಲಾಗಿದೆ. 
       ಸಮಿತಿಯ ಗೌರವ ಅಧ್ಯಕ್ಷರಾಗಿ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷ, ಅಧ್ಯಕ್ಷರಾಗಿ ಖಾಜಿ ಅಬ್ಬಾಸ್ ಅಲಿ, ಉಪಾಧ್ಯಕ್ಷರಾಗಿ ಮೀರ್ ಇಬ್ರಾಹಿಂ ಅಲಿ, ಕಾರ್ಯದರ್ಶಿಯಾಗಿ ಮುಫ್ತಿ ನಜೀರ ಅಹ್ಮದ್, ಸದಸ್ಯರುಗಳಾಗಿ ಮುಫ್ತಿ ಸೈಯದ್ ಅತೀಖ್, ಹಾಫೀಜ್ ಮೊಹ್ಮದ್ ಅಸದುಲ್ಲಾ ಖಾದ್ರಿ, ಅಬ್ದುಲ್ ಶುಕೂರ್ ಸಾಹೇಬ್, ಮೌಲಾನ ಆರೀಫ್, ಎಜಾಜ್ ಅಹೆಮದ್, ಹಾಫೀಜ್ ಫಯಾಜ್ ಅಹಮದ್, ಹಾಫೀಜ್ ನಾಸೀರ್, ಸೈಯ್ಯದ್ ಷಾ ಖಲೀಲುಲ್ಲಾ ಖಾದ್ರಿ, ಮುಫ್ತಿ ಅಫಜಲ್ ಹುಸೇನ, ಅಬ್ದುಲ್ ಮುನಾಫ್ ಅವರು ಆಯ್ಕೆಯಾಗಿದ್ದಾರೆ ಎಂದು  ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಷ ತಿಳಿಸಿದ್ದಾರೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೊಪ್ಪಳ,ಡಿ.18(ಕರ್ನಾಟಕ ವಾರ್ತೆ): ಜೆಎಸ್‍ಡಬ್ಲ್ಯೂ ಸ್ಟೀಲ್ ಕಂಪನಿ ವತಿಯಿಂದ ಡಿ. 23 ರಂದು ಕೂಕನಪಳ್ಳಿ ಹಾಗೂ ಡಿ. 27 ರಂದು ಬೂದಗುಂಪಾ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
     ಜೆಎಸ್‍ಡಬ್ಲ್ಯೂ ಸ್ಟೀಲ್ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಜೆಎಸ್ ಡಬ್ಲ್ಯೂ ಫೌಂಡೇಷನ್ ಮುಖಾಂತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃಧ್ಧಿ ಚಟುವಟಿಕೆಗಳನ್ನು ಕಳೆದ ಹಲವು ವರ್ಷಗಳಿಂದ ಹಮ್ಮಿಕೊಂಡಿದೆ. ಅಭಿವೃದ್ಧಿ ಚಟುವಟಿಕೆಗಳ ಭಾಗವಾಗಿ, ಸಮುದಾಯ ಆರೋಗ್ಯ ಚಟುವಟಿಕೆಗಳಲ್ಲಿ ತನ್ನನು ತೊಡಗಿಸಿಕೊಂಡಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ಸಹ ಹಮ್ಮಿಕೊಂಡು ಮುಖ್ಯವಾಗಿ ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣ ಶಿಬಿರಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿರುತ್ತದೆ.   ಇದೀಗ ಕಂಪನಿ ವತಿಯಿಂದ ಡಿ. 23 ರಂದು ಕೂಕನಪಳ್ಳಿ ಹಾಗೂ ಡಿ. 27 ರಂದು ಬೂದಗುಂಪಾ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ನುರಿತ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ನಡೆಸುವರು.  ಗ್ರಾಮಗಳ ಸುತ್ತಮುತ್ತಲಿನ ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಂಪನಿಯ ಸಿಎಸ್‍ಆರ್ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ ಪಲ್ಲೆದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಿಂಡಿಯಾ ಕಂಪನಿ ಸಹಯೋಗದಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಕೊಪ್ಪಳ ಡಿ.18(ಕರ್ನಾಟಕ ವಾರ್ತೆ): ಸಾರ್ವಜನಿಕ ಶಿಕ್ಷಣ ಇಲಾಖೆಯು ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಮತ್ತು ಇಂಡಿಯಾ ಏಜ್ಯುಕೇಟ್ ಟ್ರಸ್ಟ್ ಕೊಪ್ಪಳ ಇವರ ಸಹಯೋಗದಲ್ಲಿ 10ನೇ ತರಗತಿಯ ಫಲಿತಾಂಶವನ್ನು ಉತ್ತಮಪಡಿಸುವ ದಿಸೆಯಲ್ಲಿ ಶಿಕ್ಷಕರುಗಳಿಗೆ ಡಿ.19 ರಿಂದ 21 ರವರೆಗೆ ಶ್ರೀ ಗವಿಸಿದ್ದೇಶ್ವರ ಬಿ.ಈಡಿ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
     ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲಾಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೋದಿಸುತ್ತಿರುವ ಶಿಕ್ಷಕರನ್ನು ಡಿ.19 ರಿಂದ ನಡೆಯಲಿರುವ ಕಾರ್ಯಾಗಾರದಲ್ಲಿ ಹಾಜರಿದ್ದು, ತಿಳಿಸುವ ವಿಷಯಗಳನ್ನು ದಾಖಲಿಸಿಕೊಳ್ಳಲು ತಮ್ಮೊಂದಿಗೆ ಡೈರಿ ಹಾಗೂ ಬೋಧನಾ ವಿಷಯದ ಪಠ್ಯ ಪುಸ್ತಕಗಳೊಂದಿಗೆ ಹಾಜರಾಗಲು ಸೂಚಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಬೇಸಿಗೆ ಹಂಗಾಮಿಗೆ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಜಾರಿ

ಕೊಪ್ಪಳ ಡಿ.18(ಕ.ವಾ) : ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ 2014-15ನೇ ಸಾಲಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಬೇಸಿಗೆ ಹಂಗಾಮಿಗೆ 2015 ರ ಫೆ. 28 ಅಥವಾ ಬೆಳೆ ಬಿತ್ತಿದ 30 ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.
     ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ವಿಮಾ ಸಂಸ್ಥೆಗೆ ಕೊಪ್ಪಳ ಜಿಲ್ಲೆಯನ್ನು ಹಂಚಿಕೆ ಮಾಡಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಬೇಸಿಗೆ ಹಂಗಾಮು ತಾಲೂಕು ಮಟ್ಟದಲ್ಲಿ ಹೋಬಳಿವಾರು ಬೆಳಗಳನ್ನು ಅನುಸೂಚಿಸಲಾಗಿದೆ.
ಬೇಸಿಗೆ ಹಂಗಾಮು : ಗಂಗಾವತಿ ತಾಲೂಕಿನ ಗಂಗಾವತಿ-ಭತ್ತ ನೀರಾವರಿ, ಶೇಂಗಾ ನೀರಾವರಿ, ಹುಲಿಹೈದರ್- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕನಕಗಿರಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕಾರಟಗಿ- ಭತ್ತ ನೀರಾವರಿ, ಮರಳಿ- ಭತ್ತ ನೀರಾವರಿ, ನವಲಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಸಿದ್ದಾಪೂರ- ಭತ್ತ ನೀರಾವರಿ, ವೆಂಕಟಗಿರಿ- ಭತ್ತ ನೀರಾವರಿ, ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ.
ಕೊಪ್ಪಳ ತಾಲೂಕಿನ ಅಳವಂಡಿ- ಸೂರ್ಯಕಾಂತಿ ನೀರಾವರಿ, ಹಿಟ್ನಾಳ- ಭತ್ತ ನೀರಾವರಿ,   ಸೂರ್ಯಕಾಂತಿ ನೀರಾವರಿ, ಇರಕಲ್‍ಗಡಾ - ಸೂರ್ಯಕಾಂತಿ ನೀರಾವರಿ, ಕೊಪ್ಪಳ-ಭತ್ತ ನೀರಾವರಿ, ಸೂರ್ಯಕಾಂತಿ ನೀರಾವರಿ.
ಕುಷ್ಟಗಿ ತಾಲೂಕಿನ ಹನಮನಾಳ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಹನುಮಸಾಗರ - ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕುಷ್ಡಗಿ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ತಾವರಗೇರಾ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಕುಕನೂರು- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಮಂಗಳೂರು -ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ, ಯಲಬುರ್ಗಾ- ಶೇಂಗಾ ನೀರಾವರಿ, ಸೂರ್ಯಕಾಂತಿ ನೀರಾವರಿ ಈ ಬೆಳೆಗಳನ್ನು ನಿಗದಿಪಡಿಸಲಾಗಿದೆ.
    ಬೆಳೆ ಸಾಲ ಪಡೆಯದ ರೈತರು ಬೆಳೆ ಬಿತ್ತಿದ/ನಾಡಿ ಮಾಡಿದ ನಂತರ 30 ದಿವಸಗಳೊಳಗಾಗಿ ಅಥವಾ ಬೇಸಿಗೆ ಹಂಗಾಮಿಗೆ ಫೆ.28 ರೊಳಗಾಗಿ ಯಾವುದು ಮೊದಲೇ ಅದರೊಳಗೆ ಬ್ಯಾಂಕಿಗೆ ಘೋಷಣೆಯನ್ನು ಸಲ್ಲಿಸಬೇಕು.    ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ/ಕಂದಾಯ ಇಲಾಖೆ/ಸಹಕಾರ ಇಲಾಖೆ/ಸ್ಥಳೀಯ ವಾಣಿಜ್ಯ/ಗ್ರಾಮೀಣ/ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ) ಗಳ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.