Friday, 17 August 2018

ನಗರ ಸ್ಥಳೀಯ ಸಂಸ್ಥೆ ಚುನಾವಣೆ : ನಾಮಪತ್ರ ಸಲ್ಲಿಸಲು ಆ. 18 ಕೊನೆಯ ದಿನ


ಕೊಪ್ಪಳ ಆ. 17 (ಕರ್ನಾಟಕ ವಾರ್ತೆ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಕಾರಣದಿಂದಾಗಿ ರಾಜ್ಯ ಸರ್ಕಾರವು ಆ. 17 ರಂದು ಸಾರ್ವತ್ರಿಕ ರಜೆ ಎಂದು ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿದ್ದುಪಡಿ ಅಧಿಸೂಚನೆ ಹೊರಡಿಸಿದ್ದಾರೆ.
     ಕೊಪ್ಪಳ ಮತ್ತು ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗೆ ಜರುಗಲಿರುವ ಚುನಾವಣೆಯ ಪರಿಷ್ಕøತ ವೇಳಾಪಟ್ಟಿಯನ್ವಯ ನಾಮಪತ್ರ ಸಲ್ಲಿಸಲು ಆ. 18 ಕೊನೆಯ ದಿನವಾಗಿರುತ್ತದೆ.  ನಾಮಪತ್ರಗಳ ಪರಿಶೀಲನೆ ಆ. 20 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಆ. 23 ಕೊನೆಯ ದಿನವಾಗಿದ್ದು, ಆ. 31 ರಂದು ಮತದಾನ ಜರುಗಲಿದೆ.   ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ.  ಸೆ. 03 ರ ಒಳಗಾಗಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿದ್ದುಪಡಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Thursday, 16 August 2018

ಮೆಕ್ಕೆಜೋಳಕ್ಕೆ ಸೈನಿಕ ಹುಳು : ನಿಯಂತ್ರಣಕ್ಕೆ ರೈತರಿಗೆ ಸಲಹೆ


ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಮೆಕ್ಕೆಜೋಳ ಸೇರಿದಂತೆ ವಿವಿಧ ಏಕದಳ ಧಾನ್ಯಗಳಿಗೆ ಕಂಠಕವಾಗಬಹುದಾದ ಹೊಸ ಕೀಟಪೀಡೆ ಹುಸಿ ಸೈನಿಕ ಹುಳು (ಸ್ಪೋಡಾಪ್ಟೆರಾ ಫ್ರುಗಿಫರ್ಡಾ) ಆಗಿದ್ದು, ಇದರ ನಿಯಂತ್ರಣಕ್ಕೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ. 
    ರಾಜ್ಯದಲ್ಲಿ ಮೆಕ್ಕೆಜೋಳದ ಮೇಲೆ ಇತ್ತೀಚೆಗೆ ಹೊಸಕೀಟವೊಂದು ಕಾಣಿಸಿಕೊಂಡಿದ್ದು, ಏಕದಳ ಧಾನ್ಯ ಬೆಳೆಗಳ ಮೇಲೆ ಕಂಠಕಪ್ರಾಯವಾಗುವ ಸಾಧ್ಯತೆ ಇರುತ್ತದೆ.  ಈ ಕೀಟವನ್ನು ವಿಜ್ಞಾನಿಗಳು ‘ಫಾಲ್ ಆರ್ಮಿವಾರ್ಮ್’ ಎಂತಲೂ ವೈಜ್ಞಾನಿಕವಾಗಿ “ಸ್ಪೋಡಾಪ್ಟೆರಾ ಫ್ರುಗಿಫರ್ಡಾ” ಎಂದು ಹೆಸರಿಸಿದ್ದಾರೆ.  ಈ ಕೀಟವು ಕಂದು ಬಣ್ಣದ ಪತಂಗವಾಗಿದ್ದು, ರೆಕ್ಕೆಯ ಅಂಚಿನಲ್ಲಿ ಬಿಳಿಯ ಪಟ್ಟಿಗಳನ್ನು ಹೊಂದಿದೆ.  ಕೀಟದ ಜೀವನ ಚಕ್ರವು 30 ರಿಂದ 40 ದಿನಗಳನ್ನು ಹೊಂದಿದ್ದು, ಸಾಧಾರಣವಾಗಿ ಸುಮಾರು ಸಾವಿರ ತತ್ತಿಗಳನ್ನು ಇಡುವ ಶಕ್ತಿಯನ್ನು ಹೊಂದಿದೆ.  ಇದರಿಂದಾಗಿ ಕೀಟವು ಅಲ್ಪಾವಧಿಯಲ್ಲಿಯೇ ಬೃಹದಾಕಾರವಾಗಿ ಅಭಿವೃದ್ದಿಹೊಂದುವ ಸಾಮಥ್ರ್ಯ ಪಡೆದಿದೆ.  ಅಲ್ಲದೇ, ಸುಮಾರು 500 ರಿಂದ 100 ಕಿ.ಮೀ ವರಗೆ ವಲಸೆ ಹೋಗುವ ಶಕ್ತಿಯನ್ನು ಹೊಂದಿರುತ್ತದೆ.  ಈ ಕೀಟವು ತರಕಾರಿ ಬೆಳೆಗಳು, ಭತ್ತ, ಕಬ್ಬು, ಹತ್ತಿ ಹಾಗೂ ಜೋಳ ಬೆಳೆಗಳ ಮೇಲೂ ದಾಳಿಮಾಡುವ ಸಾಧ್ಯತೆ ಇದೆ.  ಇದರಿಂದಾಗಿದೆ ಶೇ.40 ರಿಂದ 70 ರಷ್ಟು ಬೆಳೆ ಹಾನಿ ಸಾಧ್ಯತೆ ಇರುತ್ತದೆ.  ಇದರ ನಿಯಂತ್ರಣಕ್ಕೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ನಿಯಂತ್ರಣ ಕ್ರಮಗಳು : ಪ್ರೌಢ ಪತಂಗವು ಮೊಟ್ಟೆಗಳನ್ನು ಗುಂಪಾಗಿ ಇಡುವುದರಿಂದ ಮೊಟ್ಟೆ ಹಾಗು ಮರಿ ಹುಳುಗಳನ್ನು ಆರಿಸಿ ತೆಗೆಯಬೇಕು.  ಮರಿಹುಳು ಕಂಡ ತಕ್ಷಣ ಶೇ.5 ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು.  ನ್ಯುಮೋರಿಯಾ ರಿಲೇ ಜೈವಿಕ ಕೀಟನಾಶಕವನ್ನು 2 ಗ್ರಾಂ. ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಇಮಾಮೆಕ್ಟಿನ್ ಬೆಂಜೋಯೇಟ್ 5% ಎಸ್.ಜಿ. @ 0.4ಗ್ರಾಂ. ಅಥವಾ ಸ್ಪೈನೋಸೈಡ್ 45 ಎಸ್.ಸಿ. @ 0.3 ಮಿ.ಲೀ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು.  ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಶಾಣದ ಬಳಕೆ ಮಾಡಬೇಕು.  10 ಕೆ.ಜಿ. ತೌಡು, 5 ಕೆ.ಜಿ. ಬೆಲ್ಲ, 4-5 ಲೀ. ನೀರು ಕಲಸಿ ಇಟ್ಟು, ಮಾರನೆ ದಿನ 100 ಗ್ರಾಂ. ಥಯೋಡಿಕಾರ್ಬ್ (ಪ್ರತಿ ಕೇಜಿ ಭತ್ತದ ತೌಡಿಗೆ 10ಗ್ರಾಂ. ನಂತೆ) ಕೀಟನಾಶಕ ಮಿಶ್ರಣಮಾಡಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಹಾಕಬೇಕು.  ವಿಶೇಷ ಸೂಚನೆ ಎಂದರೆ ಕೀಟನಾಶಕ ಮತ್ತು ವಿಷಪಾಶಾಣವನ್ನು ಸುಳಿಯಲ್ಲಿ ನೀಡಬೇಕು.  ವಿಷಪಾಶಾಣ ನೀಡಿದ ಮೆಕ್ಕೆಜೋಳದ ತಾಕಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು.
ರೈತರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಮೊ.ಸಂ. 9900145705 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯ ತಜ್ಞರಾದ (ಕೀಟಶಾಸ್ತ್ರ) ಬದರಿಪ್ರಸಾದ ಪಿ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನಿರಾಬಾದ : ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‍ರಿಂದ ಚಾಲನೆ


ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತಿ ಹಾಗೂ ಮುನಿರಾಬಾದ ಗ್ರಾ.ಪಂ ವತಿಯಿಂದ ಆಯೋಜಿಸಲಾದ ಉದ್ಯೋಗ ಮಾಹಿತಿಯುಳ್ಳ ಗುಳೆ ತಡೆ ಅಭಿಯಾನ ರಥಕ್ಕೆ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಅವರು ಹಸಿರು ನೀಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಐಇಸಿ ಕಾರ್ಯಕ್ರಮದಡಿ ಮುನಿರಾಬಾದ ಗ್ರಾ.ಪಂ. ಆವರಣದಲ್ಲಿ ಮಂಗಳವಾರದಂದು ಗುಳೆ ತಡೆ ಅಭಿಯಾನ ಜರುಗಿತು. 
    ಅಭಿಯಾನಕ್ಕೆ ಚಾಲನೆ ನೀಡಿದ ಕೊಪ್ಪಳ ತಾ.ಪಂ ಅಧ್ಯಕ್ಷ ಬಾಲಚಂದ್ರನ್ ಅವರು ಮಾತನಾಡಿ, ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿಯಲ್ಲಿ "ನಮ್ಮ ಗ್ರಾಮ ಪಂಚಾಯತಿ" ವೈಯಕ್ತಿಕ ಅಥವಾ ಸಮುದಾಯಿಕ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸಬಹುದಾಗಿದ್ದು, ಹತ್ತಿರದ ಗ್ರಾ.ಪಂಗೆ ಸಂಪರ್ಕಿಸಿ ನಮೂನೆ-6 ರಲ್ಲಿ ಕೂಡಲೇ ಅರ್ಜಿ ಸಲ್ಲಿಸಬಹುದು.  ಪ್ರಸ್ತುತ ಬರಗಾಲ ಇರುವುದರಿಂದ ಎಲ್ಲರೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಯಸಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿ ಕೂಲಿ ಉದ್ಯೋಗ ಪಡೆದುಕೊಳ್ಳಿ.  ಪ್ರತಿ ದಿನಕ್ಕೆ ಕೂಲಿ ರೂ.249/-ನ್ನು ನಿಗದಿಪಡಿಸಿದ್ದು ಮತ್ತು ಉಪಕರಣಗಳ ಬಳಕೆಗಾಗಿ ಗುದ್ದಲಿ, ಸಲಿಕೆ ಹರಿತಕ್ಕೆ ರೂ.10/-ನ್ನು ಹೆಚ್ಚುವರಿಯಾಗಿ ಪಾವತಿಸಲು ಅವಕಾಶವಿದೆ.  ಯಾವುದೇ ಕಾರಣಕ್ಕೂ ಕೂಲಿಕಾರರು ಗುಳೆ ಹೋಗದೇ ಸ್ಥಳೀಯವಾಗಿ ಗ್ರಾ.ಪಂಗೆ ಸಂಪರ್ಕಿಸಿ ಸಮುದಾಯಿಕ ಕಾಮಗಾರಿಗಳಾದ ಕೆರೆ ಅಭಿವೃದ್ಧಿ, ಆಟದ ಮೈದಾನ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ರಸ್ತೆ, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಮುಂತಾದ ಕಾಮಗಾರಿಗಳಲ್ಲಿ ಕೂಲಿಕಾರರು ಭಾಗವಹಿಸಿ ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆದು ಕೂಲಿ ಉದ್ಯೋಗದ ಆರ್ಥಿಕ ನೆರವನ್ನು ಪಡೆದು ಸದೃಢರಾಗಬಹುದು.  ಕೆಲಸಕ್ಕೆ ತಕ್ಕ ಕೂಲಿ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದಲ್ಲಿ, ಪ್ರತಿ ತಿಂಗಳ 2ನೇ ಗುರುವಾರದಂದು ನಡೆಯುವ ರೋಜಗಾರ್ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಇತ್ಯಾರ್ಥಪಡಿಸಿಕೊಳ್ಳಿ.  ರೈತರ ಜಮೀನು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದೊಡ್ಡಿ, ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಕೂಲಿ ಕಾರರಿಗೆ ಹಾಗೂ ರೈತರಿಗೆ ಕರೆ ನೀಡಿದರು.   
      ಮುನಿರಾಬಾದ ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಖುರ್ಷಿದಾಬೇಗಂ, ಸದಸ್ಯರಾದ ವೆಂಕೋಬ ದಾಸರ, ಭಾರತಿ, ಪಿಡಿಓ ದುರ್ಗಾಪ್ರಸಾದ, ಕರವಸೂಲಿಗಾರ ರಾಜು, ಗಣಕಯಂತ್ರ ನಿರ್ವಾಹಕ ದೊಡ್ಡಬಸಪ್ಪ ಹಾಗೂ ಸಿಬ್ಬಂದಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊಪ್ಪಳ : ಸ್ಥಿರಾಸ್ತಿಗಳ ಪರಿಷ್ಕøತ ಮಾರ್ಗಸೂಚಿ ಮಾರುಕಟ್ಟೆ ಬೆಲೆ ಕರಡು ಪ್ರಕಟ


ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹಿರಿಯ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು 2018-19 ನೇ ಸಾಲಿಗೆ ಪರಿಷ್ಕರಿಸಲಾಗಿದ್ದು, ಪರಿಷ್ಕøತ ಬೆಲೆ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
     ಕೊಪ್ಪಳ ತಾಲೂಕು ಹಿರಿಯ ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳನ್ನು 2018-19 ನೇ ಸಾಲಿಗೆ ಪರಿಷ್ಕರಿಸಲು ಉದ್ದೇಶಿಸಿ, ಕಳೆದ ಆ. 07 ರಂದು ನಡೆದ ತಾಲೂಕು ಉಪ ಸಮಿತಿ ಸಭೆಯು ಸರ್ವಾನುಮತದಿಂದ ನಿರ್ಧರಿಸಿದ್ದು, ಪರಿಷ್ಕøತ ಮಾರ್ಗಸೂಚಿ ಮಾರುಕಟ್ಟೆ ಬೆಲೆಗಳ ಕರಡು ಪ್ರತಿಯನ್ನು ಕೊಪ್ಪಳ ಹಿರಿಯ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ.  ಈ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಲಿಖಿತ ರೂಪದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿನಗಳೊಳಗಾಗಿ ಹಿರಿಯ ಉಪನೋಂದಣಾಧಿಕಾರಿಗಳು ಹಾಗೂ ಕಾರ್ಯದರ್ಶಿ, ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪ ಸಮಿತಿ, ಕೊಪ್ಪಳ ಇವರಿಗೆ 15 ದಿನಗಳ ಒಳಗಾಗಿ ಸಲ್ಲಿಸಬೇಕು.  ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.  ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ, ಕರಡು ಪಟ್ಟಿಯನ್ನೇ ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಕೊಪ್ಪಳ ಉಪನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಡ್ಡರಹಟ್ಟಿಯಲ್ಲಿ ಉದ್ಯೋಗ ಮಾಹಿತಿ ರಥಕ್ಕೆ ಚಾಲನೆ


ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾದ ಉದ್ಯೋಗ ಮಾಹಿತಿ ರಥಕ್ಕೆ ವಡ್ಡರಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಸುನೀತಾ ನಿತ್ಯಾನಂದ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
    ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಮಾಹಿತಿ ರಥ ಕಾರ್ಯಕ್ರಮ ಆಚರಣೆ ಗುರುವಾರದಂದು ಮಾಡಲಾಯಿತು.  ಗಂಗಾವತಿ ತಾಲೂಕಾ ಪಂಚಾಯತ ಐ.ಇ.ಸಿ. ಸಂಯೋಜಕರಾದ ಕೃಷ್ಣನಾಯಕ ಅವರು  ಉದ್ಯೋಗ ಮಾಹಿತಿ ರಥ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.  
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಅಂಗಡಿ ಮಾತನಾಡಿ, ವೈಯಕ್ತಿಕ ಅಥವಾ ಸಮುದಾಯ ಕಾಮಗಾರಿಗಳನ್ನು ನಿರ್ಮಿಸಿಕೊಂಡು ಉದ್ಯೋಗ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.  ಯೋಜನೆಯ ಮಾಹಿತಿಯನ್ನು ಎಲ್ಲರಿಗೂ ತಿಳಿಸಲು "ಉದ್ಯೋಗ ಮಾಹಿತಿ ರಥ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ವಿಶೇಷವಾಗಿ ಎಸ್.ಸಿ. ಎಸ್.ಟಿ ಸಮುದಾಯದವರಿಗೆ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿದರು.  ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿಗಳು, ಹಾಗೂ ಕಾಯಕ ಬಂದುಗಳು, ಕೂಲಿಕಾರರು ಉಪಸ್ಥಿತರಿದ್ದರು.

ಪಶುಪಾಲನಾ ಇಲಾಖೆ ವಿವಿಧ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ


ಕೊಪ್ಪಳ ಆ. 16 (ಕರ್ನಾಟಕ ವಾರ್ತೆ): ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವ ವಿವಿಧ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳಾದ ಪಶುಭಾಗ್ಯ ಯೋಜನೆ, ಅಮೃತ ಯೋಜನೆ (ಮಹಿಳೆಯರಿಗೆ ಮಾತ್ರ), ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಗಳಡಿಯಲ್ಲಿ ಹೈನುಗಾರಿಕೆ ಘಟಕ, ಕುರಿ ಅಥವಾ ಮೇಕೆ ಘಟಕ, ಕೋಳಿ ಘಟಕ ಹಾಗೂ ಕರುಗಳ ಸಾಕಾಣಿಕೆ ಘಟಕಗಳನ್ನು ಸರ್ಕಾರ ನಿಗಧಿಪಡಿಸಿದ ಸಹಾಯಧನ ಸೌಲಭ್ಯದೊಂದಿಗೆ ಸ್ಥಾಪಿಸಲು ಪಲಾನುಭವಿಗಳ ಆಯ್ಕೆಗಾಗಿ ಭೂರಹಿತ ಕೃಷಿ ಕಾರ್ಮಿಕರು, ಅತಿ ಸಣ್ಣ ರೈತರು, ಸಣ್ಣ ರೈತರಿಂದ ಮತ್ತು ಅಮೃತ ಯೋಜನೆಗಾಗಿ ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೊಳಗಾದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.  
    ಸರ್ಕಾರದ ಮಾರ್ಗಸೂಚಿಗಳನ್ವಯ ನಿಗದಿಪಡಿಸಲಾಗುವ ಗುರಿಗಳಿಗೆ ಅನುಗುಣವಾಗಿ ತಾಲೂಕು ಆಯ್ಕೆ ಸಮಿತಿಯ ಮುಖಾಂತರ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಫಲಾನುಭವಿಯ ಸೇವಾ ವ್ಯಾಪ್ತಿಯ ಬ್ಯಾಂಕುಗಳ ಸಾಲ ಸೌಲಭ್ಯದೊಂದಿಗೆ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.  ಆಸಕ್ತ ಅರ್ಹ ಫಲಾನುಭವಿಗಳು ಅರ್ಜಿಯನ್ನು ಆಯಾ ತಾಲೂಕುಗಳ ಪಶು ಆಸ್ಪತ್ರೆಗಳಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಸೆಪ್ಟೆಂಬರ್. 14 ರೊಳಗಾಗಿ ಸಲ್ಲಿಸಬೇಕು.  ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-221408 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಬಸಯ್ಯ ಸಾಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, 15 August 2018

ಕರ್ನಾಟಕ ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಆಂದೋಲನ- ಆರ್. ಶಂಕರ್

ಕೊಪ್ಪಳ ಆ. 14 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಎಂಬ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಆಯೋಜಿಸಿದ್ದು, ಈ ಬೃಹತ್ ಆಂದೋಲನದಲ್ಲಿ ಎಲ್ಲರೂ ಭಾಗವಹಿಸಿ, ಗಿಡಗಳನ್ನು ನೆಟ್ಟು ಪೋಷಿಸುವಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಮನವಿ ಮಾಡಿದರು.

     ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

     ಕರ್ನಾಟಕ ರಾಜ್ಯಕ್ಕೆ ಹಸಿರು ಹೊದಿಕೆ ಹೊದಿಸಲು ಹಸಿರು ಕರ್ನಾಟಕ ಎನ್ನುವ ಮಹತ್ವಕಾಂಕ್ಷಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಿದೆ.  ಆ. 15 ರಿಂದ 17 ರವರೆಗೆ ಮೂರು ದಿನಗಳ ಕಾಲ ಗಿಡ ನೆಡುವ ಬೃಹತ್ ಆಂದೋಲನ ಇದಾಗಿದ್ದು, ಎಲ್ಲ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಅಧಿಕಾರಿ, ಸಿಬ್ಬಂದಿಗಳು, ಜನಪ್ರತಿನಿಧಿಗಳು ಈ ಆಂದೋಲನದಲ್ಲಿ ಪಾಲ್ಗೊಂಡು, ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಮೂಲಕ, ರಾಜ್ಯವನ್ನು ಹಸಿರು ಕರ್ನಾಟಕವಾಗಿಸುವಂತೆ ಸಚಿವ ಎಸ್. ಶಂಕರ್ ಅವರು ಮನವಿ ಮಾಡಿಕೊಂಡರು.

     ಆಗಸ್ಟ್ 15, 1947 ಈ ದಿನ, ಪ್ರತಿಯೊಬ್ಬ ಭಾರತೀಯನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮಹತ್ವದ ದಿನ.  ಬ್ರಿಟೀಷರ ಆಳ್ವಿಕೆಯಿಂದ ವಿಮುಕ್ತಿಗೊಂಡು ಸ್ವಾತಂತ್ರ್ಯ ಪಡೆದ ದಿನ.  ದಾಸ್ಯದ ಸಂಕೋಲೆಯಿಂದ ಭಾರತಾಂಬೆ ಬಿಡುಗಡೆಗೊಂಡ ದಿನ.  ಜಾತಿ, ಮತ, ಬಡವ, ಬಲ್ಲಿದನೆಂಬ ಭೇದವಿಲ್ಲದೆ ಅಗಣಿತ ದೇಶಭಕ್ತರು, ಸ್ವಹಿತವನ್ನು ತ್ಯಜಿಸಿ, ದೇಶಕ್ಕಾಗಿ ತ್ಯಾಗ ಬಲಿದಾನಗೈದ ಪರಿಣಾಮವಾಗಿ, ಶತಮಾನಗಳ ಕಾಲ ದಾಸ್ಯದಲ್ಲಿ ಸಿಲುಕಿದ್ದ ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಯಿತು.  ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು.  ದೇಶದ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ, ಇಂದಿನ ವಿದ್ಯಾರ್ಥಿಗಳಲ್ಲಿ     ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾಗಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ     ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ.  ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ     ಲಕ್ಷ್ಮೀಬಾಯಿ, ಮಹಾತ್ಮಾ ಗಾಂಧೀಜಿರವರು, ಬಾಲಗಂಗಾಧರ ತಿಲಕ್,  ಗೋಪಾಲಕೃಷ್ಣ ಗೋಖಲೆ, ಜವಾಹರಲಾಲ್ ನೆಹರು, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸುಭಾಷ್‍ಚಂದ್ರ ಭೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್‍ರವರು, ಲಾಲಬಹದ್ದೂರ್ ಶಾಸ್ತ್ರಿಯವರು ಹೀಗೆ ನಮ್ಮ ಅನೇಕ ರಾಷ್ಟ್ರೀಯ     ಮಹಾಪುರುಷರು, ದೇಶ ಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ.  ಕೊಪ್ಪಳ ಜಿಲ್ಲೆಯು ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿದೆ.  ಸ್ವಾತಂತ್ರ್ಯ ಯೋಧರ, ಧೀಮಂತರುಗಳ ಸೇವೆಯನ್ನು ಇಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ರಾಷ್ಟ್ರೀಯ ಮಹಾಪುರುಷರುಗಳ ಹೋರಾಟ, ತ್ಯಾಗ, ಬಲಿದಾನ ಹಾಗೂ ರಾಷ್ಟ್ರಪ್ರೇಮ ಚಿರಸ್ಮರಣೀಯ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡು ಅವರಿಗೆ ನಮ್ಮ ನಿಮ್ಮೆಲ್ಲರ ಗೌರವಪೂರ್ವಕ ನಮನ ಹಾಗೂ ಕೃತಜ್ಞತೆಗಳನ್ನು ಈ ಶುಭ ಸಂದರ್ಭದಲ್ಲಿ ಅರ್ಪಿಸೋಣ.
     ವರುಣ ದೇವನ ಕೃಪೆಯಿಂದ ಈ ಬಾರಿ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗಿರುವುದು ಸಂತಸ ತಂದಿದೆ.  ಈಗಾಗಲೇ ಕಾಲುವೆಗಳಿಗೆ ನೀರು ಹರಿಸಲಾಗಿದ್ದು ತುಂಗಭದ್ರೆಯನ್ನು ಅವಲಂಬಿಸಿಕೊಂಡಿದ್ದ ರೈತರು ಈ ಬಾರಿ ನೆಮ್ಮದಿ ಕಾಣುವಂತಾಗಿದೆ.  ಆದರೆ ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಮಳೆ ಆರಂಭದಲ್ಲಿ ಉತ್ತಮ ನಿರೀಕ್ಷೆ ಮೂಡಿಸಿತ್ತಾದರೂ, ನಂತರದ ದಿನದಲ್ಲಿ ಜಿಲ್ಲೆ ಮಳೆಯ ಕೊರತೆ ಎದುರಿಸುತ್ತಿದೆ.  ಬರುವ ದಿನಗಳಲ್ಲಿಯಾದರೂ, ಉತ್ತಮ ಮಳೆಯಾಗುವ ಆಶಾಭಾವನೆ ಹೊಂದಿದ್ದೇವೆ.  ಜಿಲ್ಲೆಯ ಎಲ್ಲಾ ಇಲಾಖೆಗಳು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸ್ವತಂತ್ರ ಭಾರತದ ಆಶೋತ್ತರಗಳನ್ನು ಈಡೇರಿಸುವಂತೆ ಕೋರುತ್ತೇನೆ.  ದೇಶ ಕಟ್ಟುವ ಕೆಲಸದಲ್ಲಿ ಮಹಾತ್ಮ ಗಾಂಧೀಜಿರವರು, ಜವಹಾರ್ ಲಾಲ್ ನೆಹರೂರವರು, ವಲ್ಲಭಬಾಯಿ ಪಟೇಲರಂತೆ ಅಪರಿಮಿತ     ಸ್ವಾತಂತ್ರ್ಯ ಹೋರಾಟಗಾರರು ಬೆವರು ಮತ್ತು ರಕ್ತಗಳೆರಡನ್ನೂ ಹರಿಸಿದ್ದಾರೆ.  ಈ     ಕಾರ್ಯದಲ್ಲಿ ಕೊಪ್ಪಳ ಜಿಲ್ಲೆಯ ಪಾಲೂ ಇದೆ. ಅವರ ತ್ಯಾಗ, ಬಲಿದಾನಗಳ ಅರಿವು ಇಂದು ನಮ್ಮ ಮುನ್ನಡೆಗೆ     ದಾರಿದೀಪವಾಗಬೇಕಾಗಿದೆ.  ಈ ದೇಶದ ಸರ್ವತೋಮುಖ ಪ್ರಗತಿಗೆ ನಾವು ನೀವೆಲ್ಲಾ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು  ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆರ್. ಶಂಕರ್ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
     ಸಮಾರಂಭದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟ್ ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಐಎಎಸ್ ಪ್ರೊಬೆಷನರಿ ಅಧಿಕಾರಿ ಅಕ್ಷಯ್ ಶ್ರೀಧರ್, ಡಿಎಫ್‍ಒ ಯಶಪಾಲ್ ಕ್ಷೀರಸಾರ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
     ಹಸಿರು ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಯೋಧರಿಗೆ ಹಾಗೂ ಸನ್ಮಾನಿತರಿಗೆ ಗಿಡಗಳನ್ನು ನೆಡುವ ಮೂಲಕ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದ್ದು, ಈ ಬಾರಿಯ ವಿಶೇಷವಾಗಿತ್ತು.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಮಕ್ಕಳು, ಪೊಲೀಸ್, ಎನ್.ಸಿ.ಸಿ. ಸೇವಾದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಗೃಹರಕ್ಷಕದ ದಳದಿಂದ ಆಕರ್ಷಕ ಪಥಸಂಚಲನ ಜರುಗಿತು, ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರವ ರಕ್ಷೆ ಸ್ವೀಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ, ಸ್ವಾತಂತ್ರ್ಯ ಯೋಧರಿಗೆ ಸನ್ಮಾನ ಜರುಗಿತು.  ಜ್ಯೂ. ಎಸ್. ಜಾನಕಿ ಎಂದೇ ಮಾಧ್ಯಮಗಳಲ್ಲಿ ಇತ್ತೀಚೆಗೆ ಖ್ಯಾತಿ ಪಡೆದ ಕೊಪ್ಪಳದ ಗಾಯಕಿ ಗಂಗಮ್ಮ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.  ಹಲವು ಶಾಲಾ ಮಕ್ಕಳಿಂದ ದೇಶಪ್ರೇಮ ಸಾರುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.  ವಿವಿಧ ಆಕರ್ಷಕ ಸ್ತಬ್ಧ ಚಿತ್ರಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.